Advertisement
ಅವ್ವಕ್ಕನೆಂಬ ಅಚ್ಚರಿ…: ಜ.ನಾ. ತೇಜಶ್ರೀ ಹೊಸ ಕಾದಂಬರಿಯ ಪುಟಗಳು

ಅವ್ವಕ್ಕನೆಂಬ ಅಚ್ಚರಿ…: ಜ.ನಾ. ತೇಜಶ್ರೀ ಹೊಸ ಕಾದಂಬರಿಯ ಪುಟಗಳು

ಈಗ ಅವಳ ದೇಹ ಮೊದಲಿಗಿಂತ ಗಟ್ಟಿಯಾಗಿತ್ತು, ಸಲಾಕೆಯಂತೆ. ಮೇಲಿನ ಕೆಲಸಕ್ಕೆ ಕೆಲಸದವರಿದ್ದರೂ ಅವಳು ಮಾಮೂಲಿನಂತೆ ಎಲ್ಲ ಕೆಲಸ ಮಾಡುತ್ತಿದ್ದಳು. ಕೆಲಸ ಮಾಡಿದಷ್ಟೂ ಅವಳಲ್ಲಿ ಕಸುವು, ತಾಳಿಕೊಂಡಷ್ಟೂ ಸುಂದರವಾಗಿ ಕಾಣುವುದನ್ನು ದೊಡ್ಡಯ್ಯ ವಿಸ್ಮಯದಲ್ಲಿ ನೋಡುತ್ತಿದ್ದ. ಮಂಜುನಾಥ ಮೂರು ತಿಂಗಳಿಗೆ ಮಗುಚಿದ, ಆಮೇಲೆ ಅಂಬೆಗಾಲಿಟ್ಟ. ಷಣ್ಮುಖ ಬೆಳೆದಿದ್ದನ್ನು ಹತ್ತಿರದಿಂದ ಗಮನಿಸದ ದೊಡ್ಡಯ್ಯನಿಗೆ ಮಂಜುನಾಥನನ್ನು ನೋಡುವಾಗ ಎಲ್ಲ ಹೊಸದೆನಿಸುತ್ತಿತ್ತು. ತಾನೂ ಮಗುವಾಗಿದ್ದಾಗ ಹೀಗೇ ಮಾಡಿದೆನ ಅಂತ ಯೋಚಿಸುತ್ತಿದ್ದ.
ಜ.ನಾ. ತೇಜಶ್ರೀ ಹೊಸ ಕಾದಂಬರಿ “ಜೀವರತಿ” ಕೃತಿಯ ಪುಟಗಳು ನಿಮ್ಮ ಓದಿಗೆ

ಮದುವೆಯಾಗಿ ಮೂರು ತಿಂಗಳಿಗೆ ಅವ್ವಕ್ಕನ ಮುಟ್ಟು ನಿಂತಿತು. ಹಿಂದಿನ ದಿನಗಳ ನೆನೆದು, ಮನೆಯಲ್ಲಿ ಇದು ಭಯ, ಖುಷಿ ಎರಡೂ ಬೆರೆತ ವಿಷಯವಾದರೂ, ಅವ್ವಕ್ಕ ಮಾತ್ರ ಒಂದರೆಗಳಿಗೆ ಕೂರಲಿಲ್ಲ, ಯಾವುದಕ್ಕೂ ಹೆದರಲಿಲ್ಲ. ಸದಾ ಒಂದಲ್ಲ ಇನ್ನೊಂದು ಕೆಲಸ ಮಾಡುತ್ತಲೇ ಇರುತ್ತಿದ್ದಳು. ಅವಳು ಮಾತು ಆಡುತ್ತಿದ್ದುದು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಆದರೆ ಅವಳ ಇರುವಿಕೆಯೇ ಮನೆಯ ಮೂಲೆಮೂಲೆಗಳನ್ನೂ ಮುಟ್ಟಿ ಬರುವಂತಿತ್ತು. ಎಲ್ಲಿ ಏನು ನಡೆದರೂ ಅವಳಿಗೆ ತಕ್ಷಣ ಗೊತ್ತಾಗುತ್ತಿತ್ತು. ಅಲ್ಲೆಲ್ಲೋ ಕೊಟ್ಟಿಗೆಯಲ್ಲಿ ಕೋಳಿ ಕೂಗಿದರೆ ಅವಳು ಮನೆಯೊಳಗೆ ಕುಳಿತೇ ಯಾವ ಬಣ್ಣದ ಕೋಳಿ, ಎಲ್ಲಿ ಮೊಟ್ಟೆ ಇಟ್ಟಿದೆ ಎಂದು ಹೇಳುತ್ತಿದ್ದಳು. ಹಸುವಿನ ಉಸಿರಿಂದಲೇ ಇದು ಇದೇ ಹಸು ಅಂತ ನೋಡದೇ ತಿಳಿಯಬಲ್ಲವಳಾಗಿದ್ದಳು ಅವ್ವಕ್ಕ.

(ಜ.ನಾ. ತೇಜಶ್ರೀ)

ಅವ್ವಕ್ಕನ ಬಹುಪಾಲು ಸಮಯ ಮತ್ತು ಮಾತು ಕಳೆಯುತ್ತಿದ್ದುದು ಷಣ್ಮುಖನ ಜೊತೆ. ಅವನೂ ಅಷ್ಟೆ, ಅವ್ವಕ್ಕನನ್ನು ಆತುಕೊಂಡಿದ್ದ. ಆವತ್ತೊಂದು ದಿನ ದೊಡ್ಡಯ್ಯನಿಗೆ ಎಲ್ಲೂ ಹೊರಗೆ ಹೋಗುವ ಮನಸ್ಸಿಲ್ಲದೆ ಮನೆಯಲ್ಲೇ ಉಳಿದ. ಆಳುಕಾಳುಗಳು ಬೆಳಗಿನ ನಾಷ್ಟ ಮುಗಿಸಿ ಗದ್ದೆ, ತೋಟ ಅಂತ ಹೋಗಿ ಆಗಿತ್ತು. ಮನೆಯಲ್ಲಿ ಅವ್ವಕ್ಕ ಮತ್ತು ಷಣ್ಮುಖ ಇಬ್ಬರೇ ಇದ್ದವರು. ರೊಟ್ಟಿ ತಿಂದು ಆದ ಮೇಲೆ ದೊಡ್ಡಯ್ಯ ಪಡಸಾಲೆಯಲ್ಲಿ ಸುಮ್ಮನೆ ಮಲಗಿದ್ದ. ಅಷ್ಟರಲ್ಲಿ ಒಂದು ಕೋಳಿ ಕೊಟರ್ ಕೊಟರ್ ಎಂದು ತನ್ನ ರಾಗ ಶುರು ಮಾಡಿ ಕುಕ್‌ಕುಕ್ ಕೂಗತೊಡಗಿತು. ಹಿತ್ತಲಿನಲ್ಲಿ ಹಲಸಿನ ಹಿಟ್ಟು ಮಾಡಲು ಹಿಟ್ಟುಹಲಸಿನ ಹಣ್ಣಿನ ರಸವನ್ನು ಉಜ್ಜಿ ತೆಗೆಯುತ್ತಿದ್ದ ಅವ್ವಕ್ಕ ಷಣ್ಮುಖನಿಗೆ ‘ಮಗಾ ಷಣ್ಣು… ನೋಡಲ್ಲಿ ಕಪ್ಪು ಹ್ಯಾಟೆ ಕೊಟ್ಟಿಗೇಲಿ ಮೊಟ್ಟೆ ಇಟ್ಟದೆ… ಬಾ ಹೋಗಿ ತರನ…’ ಷಣ್ಮುಖನಿಗೆ ಇದು ಎಂದಿನ ವ್ರತ. ಆಗಷ್ಟೆ ದೃಢ ಹೆಜ್ಜೆ ಇಡಲು ಕಲಿತಿದ್ದ ಅವನು ಪುಟುಪುಟನೆ ಓಡುತ್ತ ಹೋಗಿ ಬೆನ್ನು ಕಡೆಯಿಂದ ಅವಳ ಕುತ್ತಿಗೆಗೆ ಜೋತು ಬಿದ್ದ. ‘ಅದಾ… ನನ್ನ ರಾಜ ಮಗ… ಏಮಾಡ್ತಿತ್ತು?’ ಕೇಳುತ್ತ ಅವಳು ಮಗುವನ್ನು ತೊಡೆತೊಟ್ಟಿಲಿಗೆ ಎಳೆದುಕೊಂಡಳು. ನೋಡುತ್ತಾಳೆ! ಅವನ ಕೆನ್ನೆ, ಕೈ, ಕಾಲೆಲ್ಲ ಎಣ್ಣೆಮಯ! ಇವನು ಮಾಡಿರಬಹುದಾದ ಲೀಲೆ ಅವ್ವಕ್ಕನಿಗೆ ಗೊತ್ತಾಗಿ ಹೋಯಿತು. ಅವಳು ಸಿಟ್ಟು ನಟಿಸಿದಳು. ಅವನು ಅವಳನ್ನು ಅನುನಯಿಸುವಂತೆ ಕೆನ್ನೆ ಸವರಿದ. ತನ್ನ ಕೈಗೆ ಮೆತ್ತಿದ್ದ ಎಣ್ಣೆಯನ್ನು ಅವಳ ಗಲ್ಲಕ್ಕೆ ಬಳಿದ. ನಕ್ಕ. ಅವ್ವಕ್ಕ ಸಿಟ್ಟಿನ ನಟನೆಯ ಬಿಗುವನ್ನು ಇನ್ನೂ ಬಿಟ್ಟಿರಲಿಲ್ಲ. ಷಣ್ಮುಖ ಮತ್ತೆ ನಕ್ಕ. ಜೊಲ್ಲು ಜೊಂಯ್ಯನೆ ಅವ್ವಕ್ಕನ ಕೈಮೇಲೆ ಸೋರಿತು. ಷಣ್ಮುಖನೇ ಅದನ್ನು ‘ಇಸ್…’ ಎನ್ನುತ್ತ ಒರೆಸತೊಡಗಿದ. ಅವ್ವಕ್ಕ ಅವನ ಕುತ್ತಿಗೆಯನ್ನು ಹಿಂದಕ್ಕೆ ಬಾಗಿಸಿ ಕುತ್ತಿಗೆಗೆ ಬಾಯಿಟ್ಟು ‘ಪರ‍್ರ…’ ಎಂದು ಕಚಗುಳಿಯಿಟ್ಟಳು. ಷಣ್ಮುಖ ಜೋರಾಗಿ ನಗತೊಡಗಿದ. ಅವ್ವಕ್ಕ ಮತ್ತೆ ಹಾಗೇ ಮಾಡಿದಳು, ಅವನು ಮತ್ತೆ ಮತ್ತೆ ನಕ್ಕ, ಉಸಿರು ಕಟ್ಟಿ.

ಹೊರಗಿನ ಲೋಕದ ಪರಿವೆಯೇ ಇಲ್ಲದಂತಿತ್ತು ಅವರಿಬ್ಬರ ಆ ಆಟ. ದೊಡ್ಡಯ್ಯನಿಗೆ ಮಲಗಿದಲ್ಲಿಂದ ನೇರವಾಗಿ ಇದೆಲ್ಲ ಕಾಣುತ್ತಿತ್ತು. ಅವಳ ಜೊತೆಗಿನ ಆಟದಲ್ಲಿ ಷಣ್ಮುಖನ ಕಣ್ಣು ಕುಗ್ಗಿಹಿಗ್ಗಿ ಹೊಳೆಯುತ್ತಿತ್ತು. ಆಟ ನಿಜವಾಗಿ ನಡೆಯುತ್ತಿರುವುದು ಕಣ್ಣಲ್ಲೇ ಅನ್ನುವಂತೆ ಅದರ ಬಗೆಯಾಗಿತ್ತು. ಅಸಾಧಾರಣ ಶಕ್ತಿಯು ಕಣ್ಣ ನಗುವಿನಲ್ಲಿ ಸಂಚಯಿಸಿ, ಹೊರಚೆಲ್ಲಿ, ಮತ್ತೆ ಅಲ್ಲಿಗೇ ಅದು ತುಂಬಿಕೊಳ್ಳುವುದನ್ನು ನೋಡುವುದೇ ಒಂದು ಚಂದವಾಗಿ, ದೊಡ್ಡಯ್ಯನನ್ನು ಆ ನಗುವು ವಿಚಿತ್ರ ರೀತಿಯಲ್ಲಿ ಒಳಗೊಳ್ಳತೊಡಗಿತು. ದೊಡ್ಡಯ್ಯನ ಕುತ್ತಿಗೆ ಹಿಂದಕ್ಕೆ ಪೂರಾ ಬಾಗಿ ಮೇರುದಂಡವನ್ನೊತ್ತಿದಾಗ ಭುಜ, ಎದೆ, ಪಕ್ಕೆಲುಬುಗಳೊಂದೊಂದೂ ಹಿಗ್ಗಿ, ಪಲ್ಲದ ಚೀಲಕ್ಕೆ ಒತ್ತಿಒತ್ತಿ ಭತ್ತ ತುಂಬುವಂತೆ ಗಾಳಿಯು ಅವನ ಜೀವದೊಳಗೆ ಸೇರಿಕೊಂಡಿತು. ದೇಹದೊಳಗೆ ಪ್ರಾಣವಾಯು ಓಡಾಡಿದಲ್ಲೆಲ್ಲ ಷಣ್ಮುಖನ ಮುಗುಳ್ನಗೆಯ ಹಿತ ದೊಡ್ಡಯ್ಯನಿಗೆ.
ಆ ದಿನದ ನಂತರ ದೊಡ್ಡಯ್ಯನಿಗೆ ಮನೆ ಬಿಟ್ಟು ಎಲ್ಲಿಗೂ ಹೋಗಬೇಕೆನಿಸುತ್ತಿರಲಿಲ್ಲ. ಅವನು ಸಾರಾಯಿ ಕುಡಿಯುವುದನ್ನೂ ಆದಷ್ಟು ಕಡಿಮೆ ಮಾಡಿದ. ಅನಿವಾರ್ಯ ತೋಟ, ಗದ್ದೆ, ಪೇಟೆ ಕೆಲಸ ಬಿಟ್ಟರೆ ಮನಸ್ಸು ಮನೆ ಕಡೆಗೆ ಎಳೆಯುತ್ತಿತ್ತು. ಕಾಲೆಳೆಯುತ್ತ ಅವ್ವಕ್ಕನ ಹಿಂದೆ ತಿರುಗುವ ಷಣ್ಮುಖ, ಬಸುರಿ ಅವ್ವಕ್ಕನನ್ನು ನೋಡುತ್ತ ದೊಡ್ಡಯ್ಯ ನಡುಮನೆಯ ಜೀಕು ತೊಟ್ಟಿಲಲ್ಲಿ ಕೂತುಬಿಡುತ್ತಿದ್ದ. ಮಗುವಿನ ಸಾನಿಧ್ಯದಲ್ಲಿ ತಾನು ಬೆಳೆಯುತ್ತಿರುವ ಅನುಭವ ಅವನಿಗೆ ಮತ್ತು ಇವೆಲ್ಲ ವಿಚಿತ್ರ ಅನುಭವಗಳು ಆಗುತ್ತಿರುವುದೇ ಬದುಕು ಎತ್ತಗೋ ಹೊರಳುತ್ತಿರುವುದರ ಸೂಚನೆ ಅಂತಲೂ ಅನ್ನಿಸುತ್ತಿತ್ತು.

ಹಣೆಯ ಅಗಲ ಕುಂಕುಮ, ಮೂಗಿನ ಬೇಸರಿ, ತುರುಬಿನಲ್ಲೊಂದು ಪುಟ್ಟ ಹೂವು, ಅವ್ವಕ್ಕನ ಮುಖದಲ್ಲಿ ಮುತ್ತೈದೆ ಕಳೆ. ಬಸುರಿಯಾದಾಗಲೂ ಕೂರಲಿಲ್ಲ, ಷಣ್ಮುಖನ ಒಂದೊಂದು ಕೆಲಸವನ್ನೂ ತಾನೇ ಮಾಡಿದಳು. ‘ನಿನಗೆಂತ ದಣಿವಾಗಕಿಲ್ವ? ದೆಯ್ಯ ದುಡಿದಂಗೆ ದುಡಿತಿಯ’ ಅಂತ ದೊಡ್ಡಯ್ಯ ಅಂದರೂ ಅವ್ವಕ್ಕನಿಗೆ ಏನೂ ಅನ್ನಿಸುತ್ತಿರಲಿಲ್ಲ. ಮುಗುಳ್ನಕ್ಕು ಸುಮ್ಮನಾಗಿಬಿಡುತ್ತಿದ್ದಳು. ಹೆರಿಗೆಗೆ ತಾಯಿ ಮನೆಗೆ ಹೋದರೆ ಈ ಕೂಸನ್ನು ನೋಡುವವರ‍್ಯಾರೆಂದು ತನ್ನ ಅವ್ವನನ್ನೇ ಇಲ್ಲಿಗೆ ಬರ ಹೇಳಿದಳು.

ಎಲ್ಲೂ ಏನೂ ತೊಂದರೆಯಾಗದೆ ಅವ್ವಕ್ಕನ ಹೆರಿಗೆ ಸುಸೂತ್ರವಾಗಿ ನಡೆದು ಅವಳು ಗಂಡುಮಗು ಹೆತ್ತಳು. ಮಗು-ತಾಯಿ ಆರೋಗ್ಯವಾಗಿದ್ದರು. ಆ ಮಗುವಿಗೆ ದೊಡ್ಡಯ್ಯನದೇ ಮುಖ ಲಕ್ಷಣ- ಉದ್ದ ಮೂಗು, ತೆಳ್ಳಗೆ ತುಟಿ, ಚೂಪು ಗದ್ದ. ಬಣ್ಣ ಮಾತ್ರ ಅವ್ವಕ್ಕನಂತೆ ಬೆಳ್ಳಗೆ. ಹೇಗಾದರೂ ಹನ್ನೊಂದು ದಿನ ಕಳೆದುಬಿಡಲಪ್ಪಾ ಅನ್ನುವ ಆತಂಕ ಮನೆಯಲ್ಲಿ ಎಲ್ಲರಿಗೂ. ಆತಂಕದಲ್ಲಿದ್ದ ದೊಡ್ಡಯ್ಯನಿಗೆ ಅವನ ಅಕ್ಕ ಜಾನಕಿ ಧರ್ಮಸ್ಥಳದ ಮಂಜುನಾಥಸ್ವಾಮಿಗೆ ಹರಕೆ ಕಟ್ಟಿಕೋ ಅಂತ ಹೇಳಲಾಗಿ ಅವನು ಹಾಗೇ ಮಾಡಿದ. ಆತಂಕದ ಹನ್ನೊಂದು ದಿನಗಳೂ ಕಳೆದವು. ಮಗುವನ್ನು ‘ಮಂಜುನಾಥ’ ಎಂದರು. ಸುಮಾರು ಮೂರು ತಿಂಗಳು ಅವ್ವಕ್ಕ ಹೆರಿಗೆ ಕೋಣೆ ಬಿಟ್ಟು ಈಚೆ ಬರಲಿಲ್ಲ. ಮೂರು ತಿಂಗಳು ಬಿಟ್ಟು ಮೊದಲ ಬಾರಿ ಅವಳು ಕೋಣೆಯಿಂದ ಹೊರಬಂದಾಗ ಅವಳು ಹೊಸ ಅವ್ವಕ್ಕನಾಗಿದ್ದಳು.

ಈಗ ಅವಳ ದೇಹ ಮೊದಲಿಗಿಂತ ಗಟ್ಟಿಯಾಗಿತ್ತು, ಸಲಾಕೆಯಂತೆ. ಮೇಲಿನ ಕೆಲಸಕ್ಕೆ ಕೆಲಸದವರಿದ್ದರೂ ಅವಳು ಮಾಮೂಲಿನಂತೆ ಎಲ್ಲ ಕೆಲಸ ಮಾಡುತ್ತಿದ್ದಳು. ಕೆಲಸ ಮಾಡಿದಷ್ಟೂ ಅವಳಲ್ಲಿ ಕಸುವು, ತಾಳಿಕೊಂಡಷ್ಟೂ ಸುಂದರವಾಗಿ ಕಾಣುವುದನ್ನು ದೊಡ್ಡಯ್ಯ ವಿಸ್ಮಯದಲ್ಲಿ ನೋಡುತ್ತಿದ್ದ. ಮಂಜುನಾಥ ಮೂರು ತಿಂಗಳಿಗೆ ಮಗುಚಿದ, ಆಮೇಲೆ ಅಂಬೆಗಾಲಿಟ್ಟ. ಷಣ್ಮುಖ ಬೆಳೆದಿದ್ದನ್ನು ಹತ್ತಿರದಿಂದ ಗಮನಿಸದ ದೊಡ್ಡಯ್ಯನಿಗೆ ಮಂಜುನಾಥನನ್ನು ನೋಡುವಾಗ ಎಲ್ಲ ಹೊಸದೆನಿಸುತ್ತಿತ್ತು. ತಾನೂ ಮಗುವಾಗಿದ್ದಾಗ ಹೀಗೇ ಮಾಡಿದೆನ ಅಂತ ಯೋಚಿಸುತ್ತಿದ್ದ. ಮಗು ತೆವೆಯುವಾಗ, ತಪ್ಪು ಹೆಜ್ಜೆ ಇಡುವಾಗ ಏನೋ ಖುಷಿ, ಜೊತೆಗೆ ಭಯವೂ ಅನ್ನಿಸುತ್ತಿತ್ತು. ಏನೇನೆಲ್ಲ ಇದೆ ಈ ಸೃಷ್ಟಿಯಲ್ಲಿ ಅಂತ ಆಶ್ಚರ್ಯವಾಗುತ್ತಿತ್ತು. ಹೀಗೆ ದಿನ ಕಳೆದು, ಮಗುವಿಗೆ ಒಂದು ವರ್ಷ ತುಂಬಿ ಪಿಡಿಚೆ ಅನ್ನ ತಿನ್ನುವಾಗ ಮತ್ತದೇ ಮುಗ್ಧ ನಗು! ಎಲ್ಲ ಮಕ್ಕಳ ನಗುವೂ ಒಂದೇ ಥರವೇನೋ, ಅಥವಾ ಮುಗ್ಧತೆ ಬೆರೆತ ನಗುವೇ ಹಾಗೇನೋ ಅನ್ನಿಸುತ್ತಿದ್ದ ಅದು ದೊಡ್ಡಯ್ಯನನ್ನು ತನ್ನ ತೆಕ್ಕೆಯಲಿ ತಬ್ಬಿತು. ಇನ್ನೆರಡು ತಿಂಗಳಾಗುವಾಗ ಅವ್ವಕ್ಕ ಮತ್ತೆ ಬಸುರಿ.

ಹುಟ್ಟಿದ ಹೆಣ್ಣುಮಗು ಒಂದೆರಡು ಗಂಟೆಯಲ್ಲಿ ತೀರಿಕೊಂಡಿತು. ಯಾಕೆ, ಹೇಗೆ ಯಾರಿಗೂ ಗೊತ್ತಾಗಲಿಲ್ಲ. ‘ಒಂದೊಂದ್ಸಾರಿ ಹಿಂಗಾಯ್ತದೆ, ತಾಳಕಬೇಕು ಕನವ್ವ’ ಅಂತ ಸತ್ಯವ್ವ ಕಣ್ಣೀರಾಗಿ, ಜೋರಾಗಿ ಅಳಲೂ ಹಿಂಜರಿಯುತ್ತಿದ್ದ ಮಗಳನ್ನು ಬಾಚಿ ತಬ್ಬಿ ಸಂತೈಸಿದಳು. ಅವ್ವಕ್ಕ ಕಣ್ಣೀರಿಟ್ಟಿದ್ದನ್ನು ದೊಡ್ಡಯ್ಯ ನೋಡಿದ್ದು ಅಂದೇ. ಅವನೊಳಗೆ ಭಯ, ಅಸಹಾಯಕತೆ. ದಿನಕಳೆದು ಮತ್ತೆ ಎಲ್ಲ ಸರಿ ಹೋಯಿತು ಅನ್ನುವಾಗ ಹುಟ್ಟಿದ ಇನ್ನೊಂದು ಹೆಣ್ಣುಮಗುವೂ ಅದೇ ಸುಡುಗಾಡು ದಾರಿ ಹಿಡಿದುಬಿಟ್ಟಿತು. ಮನೆಯ ಸಂತೋಷವೆಲ್ಲ ನಿಟ್ಟುಸಿರು, ಕಣ್ಣೀರಲ್ಲಿ ಇಂಗಿ ಹೋದ ಹಾಗಾಗಿ ದೊಡ್ಡಯ್ಯ ಮತ್ತೆ ಸಾರಾಯಿ ಕುಡಿಯಲು ತೊಡಗಿದ್ದ. ಮತ್ತದೇ ಹಳೆಯ ಹೆಂಗಸರ ಚಟ ಅವನ ಮೈಯನ್ನು ಕುಣಿಸತೊಡಗಿತು. ದೊಡ್ಡಯ್ಯನಿಗೆ ಕಲ್ಯಾಣಮ್ಮನ ಪರಿಚಯವಾದದ್ದು ಈ ಹೊತ್ತಲ್ಲೆ.

*****

(ಕೃತಿ: ಜೀವರತಿ (ಕಾದಂಬರಿ), ಲೇಖಕರು: ಜ. ನಾ. ತೇಜಶ್ರೀ, ಪ್ರಕಾಶಕರು: ಅಮೂಲ್ಯ ಪುಸ್ತಕ, ಮೊದಲ ಮುದ್ರಣ: 2025, ಪುಟಗಳು: 396, ಬೆಲೆ: 450.00/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ