Advertisement
ಆರಿಸಬಹುದು ಕಿಚ್ಚು; ಆರಿಸುವುದ್ಹೇಗೆ ಇದ್ದರೆ ಹೊಟ್ಟೆಕಿಚ್ಚು?!: ಬಸವನಗೌಡ ಹೆಬ್ಬಳಗೆರೆ ಸರಣಿ

ಆರಿಸಬಹುದು ಕಿಚ್ಚು; ಆರಿಸುವುದ್ಹೇಗೆ ಇದ್ದರೆ ಹೊಟ್ಟೆಕಿಚ್ಚು?!: ಬಸವನಗೌಡ ಹೆಬ್ಬಳಗೆರೆ ಸರಣಿ

ರೈತ ‘ನಾನು ಬಿತ್ತುವ ಬೀಜಗಳನ್ನೇ ನನ್ನ ನೆರೆಹೊರೆಯ ಹೊಲದ ರೈತರಿಗೂ ನೀಡುತ್ತೇನೆ’ ಎಂದು ಹೇಳಿದನಂತೆ! ಆಗ ಅವರಿಗೆ ಇನ್ನೂ ಅಚ್ಚರಿಯಾಗಿ ‘ನೀವು ನಿಮ್ಮ ಸ್ಪರ್ಧಾಳುಗಳಿಗೆ ಕೊಟ್ಟರೆ ನೀವೇ ನಿಮ್ಮ ಸ್ಪರ್ಧಿಯನ್ನು ಬೆಳೆಸಿದಂತಾಗುವುದಿಲ್ಲವೇ?’ ಎಂದಾಗ ಆ ರೈತ ‘ನಾನು ಬಿತ್ತುವ ಬೀಜಗಳನ್ನೇ ಅಕ್ಕಪಕ್ಕದವರಿಗೂ ಕೊಟ್ಟರೆ ಫಲ ಬಿಡುವ ಸಮಯದಲ್ಲಿ ಪರಾಗಸ್ಪರ್ಶದಿಂದಾಗಿ ನನ್ನ ಹೊಲದ ಫಲವು ಉತ್ತಮವಾಗುತ್ತದೆ. ಒಂದೊಮ್ಮೆ ಅಕ್ಕಪಕ್ಕದ ಹೊಲದವರು ಕಮ್ಮಿ ಗುಣಮಟ್ಟವಿರುವ ಬೀಜಗಳನ್ನು ಬಿತ್ತಿದರೆ ಫಲ ಬಿಡುವ ಸಮಯದಲ್ಲಿ ಆ ಹೊಲದ ಪರಾಗರೇಣುಗಳಿಂದ ನನ್ನ ಹೊಲದ ಫಲವೂ ಕಮ್ಮಿಯಾಗುತ್ತದೆ! ಅದಕ್ಕೆ ನಾನು ನನ್ನ ಹೊಲದಲ್ಲಿ ಬಿತ್ತುವ ಬೀಜಗಳನ್ನೇ ಅವರಿಗೂ ಕೊಡುತ್ತೇನೆ ಎಂದನಂತೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತೆರಡನೆಯ ಕಂತು ನಿಮ್ಮ ಓದಿಗೆ

ತೀರಾ ಇತ್ತೀಚೆಗಂತೂ ಎಸ್.ಎಸ್.ಎಲ್.ಸಿ ಫಲಿತಾಂಶದ ಯಶಸ್ಸೇ ‘ಶಿಕ್ಷಣದ ಯಶಸ್ಸು’ ಎಂಬಂತೆ ಪೋಷಕರಿಂದ ಹಿಡಿದು ಬಹುತೇಕರು ವರ್ತಿಸುತ್ತಾರೆ. ಅಸಲಿಗೆ ನಾವು ಓದಬೇಕಾದ್ರೆ ನಮ್ಮ ಮೇಷ್ಟ್ರುಗಳು ಇದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ತಾ ಇರಲಿಲ್ಲ. ನಮ್ಮ ಮೇಷ್ಟ್ರುಗಳು ಫೆಬ್ರವರಿಗೆ ಸಿಲಬಸ್ ಮುಗಿಸಿದರೆ ಮುಗೀತು ಮತ್ತೆ ಪುನರಾವರ್ತನೆ ಅಂತಾ ಮಾಡ್ತಾ ಇರಲಿಲ್ಲ. ರಾಜ್ಯಮಟ್ಟದಲ್ಲಿ ಒಂದೇ ಒಂದು ಪ್ರಿಪರೇಟರಿ ಪರೀಕ್ಷೆ ಮಾಡಲಾಗ್ತಿತ್ತು ಅಷ್ಟೇ. ಅದು ಮುಗಿದ್ರೆ ಮುಗೀತು. ಶಾಲೆಗಳಲ್ಲಿ 10 ನೇ ತರಗತಿಯ ಮಕ್ಕಳಿಗೆ ಒಂಥರಾ ಅಘೋಷಿತ ರಜೆಯಂತಾಗುತ್ತಿತ್ತು. ಅನೇಕರು ಅಂದಿನಿಂದ ಶಾಲೆಗೆ ಹೋಗೋದನ್ನೇ ನಿಲ್ಸಿಬಿಡ್ತಾ ಇದ್ರು. ನಮ್ಮ ಹಾಸ್ಟೆಲ್‌ನಲ್ಲಿ ಮಾತ್ರ ಪರೀಕ್ಷೆ ಮುಗಿಯೋವರೆಗೂ ಊರಿಗೆ ಹೋಗುವಂತೆ ಇರಲಿಲ್ಲವಾದ್ದರಿಂದ ನಾವು ಹಾಸ್ಟೆಲ್‌ನಲ್ಲಿ ಕೂತು ಓದ್ತಾ ಇದ್ದೆವು. ಮೇಷ್ಟ್ರುಗಳು ನಮಗೆ ಓದಲು ತೀರಾ ಒತ್ತಡ ಹಾಕ್ತಾ ಇರಲಿಲ್ಲ. ಆದರೆ ನಮ್ಮಷ್ಟಕ್ಕೆ ನಾವೇ ಓದಿಕೊಳ್ತಾ ಇದ್ವಿ. ಫಲಿತಾಂಶ ಬಂದಾಗ ಈಗಿನಂತೆ ಆಗ ಪೋಷಕರು ವರ್ತಿಸುತ್ತಿರಲಿಲ್ಲ. ಈಗಿನಂತೆ ಆಗ ಅಂತರ್ಜಾಲದ ಸೌಲಭ್ಯ ಆಗ ಇರಲಿಲ್ಲವಾದ್ದರಿಂದ ಶಾಲೆಗೆ ಹೋಗಿಯೇ ನಾವು ಫಲಿತಾಂಶ ನೋಡಬೇಕಾಗಿತ್ತು. ನನಗಂತೂ ಫಲಿತಾಂಶದ ದಿನದ ಹಿಂದಿನ ರಾತ್ರಿ ನಿದ್ದೆಯೇ ಬರ್ತಾ ಇರಲಿಲ್ಲ. ಮೂರ್ನಾಲ್ಕು ಬಾರಿಯಂತೂ ಎದ್ದು ಸಮಯ ನೋಡ್ತಿದ್ದೆ!!

ಇನ್ನು ಪರೀಕ್ಷೆಗೆ ಓದಬೇಕಾದ್ರೆ ಕೆಲವರು ಬೇರೆ ಬೇರೆ ಪುಸ್ತಕಗಳನ್ನು ಇಟ್ಕೊಂಡು ಓದ್ತಾ ಇದ್ರು. ನನಗೆ ಆ ರೀತಿಯ ಯಾವುದೇ ಸೋರ್ಸ್ ಕೊಡುವಂಥವರು ಇರದೇ ಇದ್ದುದರಿಂದ ಶಾಲೆಯಲ್ಲಿ ಮೇಷ್ಟ್ರು ಬರೆಸಿದ ನೋಟ್ಸ್ ಹಾಗೂ ಪಠ್ಯಪುಸ್ತಕಗಳೇ ನನ್ನ ಕಲಿಕೆಗೆ ಆಧಾರವಾಗಿದ್ದವು. ನಮ್ಮ ರೂಮಿನಲ್ಲಿರುವವರೇ ಕೆಲವರು ಅವರ ಬಳಿ ಇದ್ದ ಸೋರ್ಸ್‌ಗಳನ್ನು ಹಂಚಿಕೊಳ್ಳದೇ ಬಚ್ಚಿಟ್ಟುಕೊಂಡು ಓದ್ತಾ ಇದ್ರು!! ಇನ್ನೂ ಕೆಲವರು ನಾವು ಓದುವುದು ಗೊತ್ತಾಗಬಾರದೆಂದು, ಕನಕದಾಸರ ಗುರು ವ್ಯಾಸರಾಯರು ತಮ್ಮ ಶಿಷ್ಯಂದಿರಿಗೆ ಬಾಳೆಹಣ್ಣು ಕೊಟ್ಟು ‘ಯಾರಿಗೂ ಗೊತ್ತಾಗದಂತೆ ತಿಂದು ಬನ್ನಿ’ ಎಂದಾಗ ಕೆಲವರು ಬಚ್ಚಿಟ್ಟುಕೊಂಡು ತಿಂದಂತೆ, ಸೋರ್ಸ್‌ಗಳನ್ನು ಬಚ್ಚಿಟ್ಟುಕೊಂಡು ನಮ್ಮ ಶಾಲಾ ಆಶ್ರಮದಲ್ಲಿದ್ದ ವನಗಳಲ್ಲಿ ಮರದ ಬುಡಗಳಲ್ಲಿ ಕೂತು ಓದುತ್ತಿದ್ದರು. ಅಪ್ಪಿ ತಪ್ಪಿ ಯಾರಾದರೂ ಅಲ್ಲಿಗೆ ಹೋದರೆ ಅವನ್ನು ಬಚ್ಚಿಟ್ಟುಕೊಂಡು ಬಿಡುತ್ತಿದ್ದರು!! ಇದಕ್ಕೆ ಕಾರಣ ಮನದಲ್ಲಿದ್ದ ಸ್ವಾರ್ಥ! ಯಾರಿಗಾದರೂ ಹಂಚಿಕೊಂಡರೆ ಅಥವಾ ಹೇಳಿಕೊಟ್ಟರೆ ಎಲ್ಲಿ ತಮಗಿಂತಲೂ ಹೆಚ್ಚು ಅಂಕ ತೆಗೆದುಬಿಡುತ್ತಾರೆಂಬ ಅವ್ಯಕ್ತ ಭಯ ಇದ್ದಿರಲೂಬಹುದು. ನನ್ನ ಬಗ್ಗೆಯಂತೂ ಅನೇಕರು ಈ ರೀತಿ ವರ್ತಿಸುತ್ತಿದ್ದರು. ಇದಕ್ಕೆ ಕಾರಣ ನಾನು ತೆಗೆಯುತ್ತಿದ್ದ ಉತ್ತಮ ಅಂಕಗಳು!!! ಈ ಮನೋಭಾವ ಬರೀ ಮಕ್ಕಳಲ್ಲಿ ಇರುತ್ತದೆಯೆಂದುಕೊಂಡಿದ್ದೆ. ಆದರೆ ದೊಡ್ಡವರಲ್ಲೂ ಇದು ಮಕ್ಕಳಿಗಿಂತ ದುಪ್ಪಟ್ಟಾಗಿರುತ್ತದೆ ಎಂಬುದನ್ನು ದಿನನಿತ್ಯದಲ್ಲಿ ಕಾಣುತ್ತಿದ್ದೇನೆ.

ಇದಕ್ಕೆ ಕಾರಣ ನಮ್ಮಲ್ಲಿರುವ ಹೊಟ್ಟೆಕಿಚ್ಚಿನ ಮನೋಭಾವ. ಇದರ ಬಗ್ಗೆ ಡಿವಿಜಿಯವರು ತಮ್ಮ ಕಗ್ಗದಲ್ಲಿ ಈ ರೀತಿ ಹೇಳಿದ್ದಾರೆ.

ಹೊಟ್ಟೆಯೊಂದರ ರಗಳೆ ಸಾಲದಿಂದೇನೋ ವಿಧಿ
ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್
ಹೊಟ್ಟೆ ತುಂಬಿದ ತೋಳ ಮಲಗೀತು
ನೀಂ ಪರರ ದಿಟ್ಟಿಸುತ ಕರುಬುವೆಯೋ ಮಂಕುತಿಮ್ಮ|

ಈ ಮನೋಭಾವವು ನಮ್ಮನ್ನೇ ನಾಶ ಮಾಡುತ್ತೆಯೆಂದು ಅನೇಕರಿಗೆ ಗೊತ್ತಿರುವುದಿಲ್ಲ.

ಶಿಕ್ಷಣವು ನಮ್ಮಲ್ಲಿ ವಿಶಾಲ ಮನೋಭಾವ ಬೆಳೆಸಬೇಕಿತ್ತು. ಆದರೆ ಸಂಕುಚಿತ ಮನಸ್ಸನ್ನು ಬೆಳೆಸುತ್ತಿರುವುದು ಬೇಸರದ ಸಂಗತಿಯಾಗಿದೆ. ಇದಕ್ಕೆ ಕಾರಣ ನಮ್ಮ ಶಾಲೆಯಲ್ಲಿರುವ ವಿಪರೀತ ಸ್ಪರ್ಧಾತ್ಮಕ ಮನೋಭಾವ. ಶಿಕ್ಷಣವು ಸಹಕಾರ ಮನೋಭಾವವನ್ನು ಬೆಳೆಸಬೇಕಿತ್ತು. ಇಂದು ಸ್ಪರ್ಧಾತ್ಮಕತೆಯಿಂದಾಗಿ ನಮ್ಮಲ್ಲಿ ಸಹಕಾರ ಮನೋಭಾವನೆಯು ಕಡಿಮೆಯಾಗುತ್ತಿದೆ. ಇದು ಹೋಗಬೇಕು. ನಾವು ಮತ್ತೊಬ್ಬರಿಗೆ ಹೇಳಿಕೊಟ್ಟರೆ ನಮ್ಮ ಜ್ಞಾನವೇ ವೃದ್ಧಿಯಾಗುತ್ತದೆ ಎಂಬುದನ್ನು ಕಲಿಸಬೇಕು. ‘ನೀ ನನಗಾದರೆ ನಾ ನಿನಗೆ’ ಎಂಬ ಸಹಕಾರದ ತತ್ವವನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಇದರ ಬಗ್ಗೆ ಒಂದು ಕಥೆ ಹೇಳುವುದಾದರೆ:

ಒಮ್ಮೆ ಒಂದೂರಿನಲ್ಲಿ ‘ಆದರ್ಶ ರೈತ ಪ್ರಶಸ್ತಿ’ ಕೊಡುವ ಪರಿಪಾಠ ಇಟ್ಟುಕೊಂಡಿದ್ದರಂತೆ. ಇದರಲ್ಲಿ ಒಬ್ಬ ರೈತ ಮಾತ್ರ ಪ್ರತೀ ವರ್ಷವೂ ಆದರ್ಶ ರೈತ ಪ್ರಶಸ್ತಿಯನ್ನು ತಾನೇ ಪಡೆಯುತ್ತಿದ್ದನಂತೆ. ಆಗ ಸಂಘಟಕರೊಬ್ಬರಿಗೆ ಆಶ್ಚರ್ಯವಾಗಿ ‘ಪ್ರತಿವರ್ಷವೂ ನೀವೇ ಪ್ರಶಸ್ತಿ ಪಡೆಯುವ ಹಿಂದಿನ ರಹಸ್ಯವೇನು?’ ಎಂದು ಕೇಳಿದಾಗ ರೈತ ‘ನಾನು ಬಿತ್ತುವ ಬೀಜಗಳನ್ನೇ ನನ್ನ ನೆರೆಹೊರೆಯ ಹೊಲದ ರೈತರಿಗೂ ನೀಡುತ್ತೇನೆ’ ಎಂದು ಹೇಳಿದನಂತೆ! ಆಗ ಅವರಿಗೆ ಇನ್ನೂ ಅಚ್ಚರಿಯಾಗಿ ‘ನೀವು ನಿಮ್ಮ ಸ್ಪರ್ಧಾಳುಗಳಿಗೆ ಕೊಟ್ಟರೆ ನೀವೇ ನಿಮ್ಮ ಸ್ಪರ್ಧಿಯನ್ನು ಬೆಳೆಸಿದಂತಾಗುವುದಿಲ್ಲವೇ?’ ಎಂದಾಗ ಆ ರೈತ ‘ನಾನು ಬಿತ್ತುವ ಬೀಜಗಳನ್ನೇ ಅಕ್ಕಪಕ್ಕದವರಿಗೂ ಕೊಟ್ಟರೆ ಫಲ ಬಿಡುವ ಸಮಯದಲ್ಲಿ ಪರಾಗಸ್ಪರ್ಶದಿಂದಾಗಿ ನನ್ನ ಹೊಲದ ಫಲವು ಉತ್ತಮವಾಗುತ್ತದೆ. ಒಂದೊಮ್ಮೆ ಅಕ್ಕಪಕ್ಕದ ಹೊಲದವರು ಕಮ್ಮಿ ಗುಣಮಟ್ಟವಿರುವ ಬೀಜಗಳನ್ನು ಬಿತ್ತಿದರೆ ಫಲ ಬಿಡುವ ಸಮಯದಲ್ಲಿ ಆ ಹೊಲದ ಪರಾಗರೇಣುಗಳಿಂದ ನನ್ನ ಹೊಲದ ಫಲವೂ ಕಮ್ಮಿಯಾಗುತ್ತದೆ! ಅದಕ್ಕೆ ನಾನು ನನ್ನ ಹೊಲದಲ್ಲಿ ಬಿತ್ತುವ ಬೀಜಗಳನ್ನೇ ಅವರಿಗೂ ಕೊಡುತ್ತೇನೆ ಎಂದರಂತೆ!! ಇಲ್ಲಿ ಸಹಕಾರ ಗುಣದಿಂದಾಗಿ ಅವನು ಗೆಲ್ಲುತ್ತಿದ್ದಾನೆ ಎಂಬ ಅಂಶವನ್ನು ತಿಳಿದುಕೊಳ್ಳಬೇಕು.

ನಾವು ಮತ್ತೊಬ್ಬರಿಗೆ ಸಹಕಾರ ಕೊಡಲಿಲ್ಲದಿದ್ದರೂ ಚಿಂತೆಯಿಲ್ಲ. ಆದರೆ ಹಾಳು ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬಾರದು. ಇದರಿಂದ ಇಬ್ಬರಿಗೂ ನಷ್ಟ. ಇದರ ಬಗ್ಗೆ ಒಂದು ಕಥೆಯನ್ನು ತಿಳಿಯುವುದಾದರೆ

ಒಮ್ಮೆ ಇಬ್ಬರು ವ್ಯಕ್ತಿಗಳು ಒಬ್ಬರನ್ನು ಕಂಡರೆ ಒಬ್ಬರು ಆಗದಂತೆ ವರ್ತಿಸುತ್ತಿದ್ದರು. ಒಬ್ಬನಿಗೆ ಏನಾದರೂ ಮಾಡಿ ನಾನು ಅವನಿಗಿಂತ ಜೀವನದಲ್ಲಿ ಬೆಳೆಯಬೇಕು ಎಂದು, ಮತ್ತೊಬ್ಬನಿಗೂ ನಾನು ಅವನಿಗಿಂತಲೂ ಹೆಚ್ಚು ಬೆಳೆಯಬೇಕು ಎಂಬ ಭಾವನೆಯು ಹೆಚ್ಚಾಗಿ ಹೊಟ್ಟೆಕಿಚ್ಚಿನ ಸ್ವಭಾವ ಬೆಳೆಸಿಕೊಂಡಿದ್ರಂತೆ. ಒಬ್ಬನು ದೇವರನ್ನು ಕುರಿತು ತಪಸ್ಸಿಗೆ ಹೊರಟನಂತೆ. ಇದನ್ನು ನೋಡಿದ ಮತ್ತೊಬ್ಬ ದೇವರ ಬಳಿ ನಾನೂ ವರ ಪಡೆಯಬೇಕೆಂದು ಬೇರೊಂದು ಬದಿ ತಪಸ್ಸಿಗೆ ಕುಳಿತನಂತೆ. ಆಗ ದೇವರು ಒಬ್ಬನ ಬಳಿ ಪ್ರತ್ಯಕ್ಷನಾಗಿ ‘ನಿನಗೇನು ವರ ಬೇಕು ಕೇಳು’ ಎಂದನಂತೆ. ಆಗ ಅವನು ‘ಇನ್ನೊಂದು ಬದಿಯಲ್ಲಿ ಮತ್ತೊಬ್ಬ ತಪಸ್ಸು ಮಾಡುತ್ತಿದ್ದಾನೆ. ಅವನು ಯಾವ ವರವನ್ನು ಕೇಳುತ್ತಾನೋ, ಅದರ ಎರಡು ಪಟ್ಟು ನನಗೆ ಕೊಡು’ ಎಂದನಂತೆ. ಆಗ ದೇವರು ‘ತಥಾಸ್ತು’ ಎಂದು ಮಾಯವಾಗಿ ಬೇರೊಬ್ಬನ ಬಳಿ ಪ್ರತ್ಯಕ್ಷವಾದನಂತೆ. ಅವನ ಬಳಿ ಹೋಗಿ ‘ನಿನಗ್ಯಾವ ವರ ಬೇಕು?’ ಎಂದಾಗ ಅವನು ತನಗೆ ವರ ಕೇಳೋದನ್ನು ಬಿಟ್ಟು ‘ಮತ್ತೊಬ್ಬ ಯಾವ ವರ ಕೇಳಿದ?’ ಎಂಬ ಪ್ರಶ್ನೆಯನ್ನು ದೇವರ ಮುಂದಿಟ್ಟ. ಆಗ ದೇವರು ನಡೆದ ವೃತ್ತಾಂತ ತಿಳಿಸಿದಾಗ ಮತ್ತೊಬ್ಬನು ಮನಸ್ಸಿನಲ್ಲಿಯೇ ನಾನು ಒಂದು ಬೈಕು, ಕಾರು, ಮನೆ ಕೇಳಿದ್ರೆ ಅವನಿಗೆ ಎರಡು ಬೈಕು, ಎರಡು ಕಾರು, ಎರಡು ಮನೆ ಸಿಕ್ಕ ಮತ್ತೂ ಅವನು ನನಗಿಂತಲೂ ಮುಂದಾಗುತ್ತಾನೆ. ಈ ರೀತಿ ಕೇಳಬಾರದು ಎಂದು ಲೆಕ್ಕಿಸಿ ‘ದೇವರೇ ನನ್ನ ಒಂದು ಕೈ, ಒಂದು ಕಾಲು, ಒಂದು ಕಣ್ಣು ಹೋಗುವಂತಹ ವರವನ್ನು ಕೊಡು’ ಎಂದು ಕೇಳಿದನಂತೆ. ಆಗ ದೇವರಿಗೆ ಅಚ್ಚರಿಯಾಗಿ ‘ಇದು ಎಂತಹ ವರ? ಹೀಗ್ಯಾಕೆ ಕೇಳುತ್ತೀಯಾ?’ ಎಂದಾಗ ಅವನು ‘ನನ್ನ ಒಂದು ಕೈ, ಒಂದು ಕಾಲು, ಒಂದು ಕಣ್ಣು ಹೋದರೂ ಚಿಂತೆಯಿಲ್ಲ. ಮತ್ತೊಬ್ಬನದು ಎರಡೂ ಕಣ್ಣು, ಎರಡೂ ಕಾಲು, ಎರಡೂ ಕೈ ಹೋಗುತ್ತಲ್ಲ ಅಷ್ಟೇ ಸಾಕು!!” ಎಂದನಂತೆ. ಆಗ ದೇವರಿಗೆ ಅಚ್ಚರಿಯಾಗಿ ಆ ವರ ಕೊಡದೇ ‘ನಿಮ್ಮ ನಿಮ್ಮ ಹೊಟ್ಟೆಕಿಚ್ಚು ನಿಮ್ಮನ್ನೇ ಸುಡುತ್ತೆ’ ಎಂದು ಹೇಳಿ ಅದೃಶ್ಯವಾದನಂತೆ.

ನನಗೂ ಈ ರೀತಿಯ ಹೊಟ್ಟೆಕಿಚ್ಚಿನ ಮನೋಭಾವ ಆಗಾಗ್ಗೆ ಬರುತ್ತದೆ, ಆಗ ನಾನು ಬಸವಣ್ಣನವರ ‘ಮನದೊಳಗಣ ಕಿಚ್ಚು ಮನೆಯ ಸುಟ್ಟಲ್ಲದೇ ನೆರೆಮನೆಯ ಸುಡದು’ ಎಂಬ ವಾಕ್ಯ ನೆನೆದು ನಾನೇ ಸಂತೈಸಿಕೊಳ್ಳುತ್ತೇನೆ.

*****

ನಮ್ಮ ಕಾಲೇಜಿನಲ್ಲಿ ಸ್ವಯಂ ಸರ್ಕಾರದಡಿಯಲ್ಲಿ ಟಿಸಿಹೆಚ್‌ನಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಅದರಲ್ಲೂ ವಿಷಯಕ್ಕನುಗುಣವಾಗಿ ಕ್ವಿಝ್, ನಾಟಕ, ಭಾಷಣ ಸ್ಪರ್ಧೆ, ಹಾಡುಗಾರಿಕೆ ಇತ್ಯಾದಿ. ಆಗ ನಮ್ಮ ಕಾಲೇಜಿನಲ್ಲಿ ಸ್ಪರ್ಧಿಗಳು ತುಸು ಹೆಚ್ಚೇ ಇರುತ್ತಿದ್ದರು. ಆದರೆ ವಿಶೇಷವೆಂದರೆ ‘ಯಾರು ಈ ಸ್ಪರ್ಧೆಯಲ್ಲಿ ಗೆಲ್ಲುತ್ತಾರೆ ‘ ಎಂಬುದನ್ನು ನಾನು ಅಲ್ಲಿ ಕುಳಿತಿರುವ ತೀರ್ಪುಗಾರರ ಆಧಾರದ ಮೇಲೆ ಮೊದಲೇ ಹೇಳುತ್ತಿದ್ದೆ!! ನನಗಂತೂ ಬಹುಮಾನ ಸಿಗಲೇ ಇಲ್ಲ. ಇದಕ್ಕೆ ಕಾರಣ ನನ್ನ ನೇರನುಡಿ!! ಶಿಕ್ಷಕನಾಗಿರುವ ಈ ಸಮಯದಲ್ಲಿ ನಾನು ಈ ರೀತಿ ಪಾರ್ಷಿಯಾಲಿಟಿ ಗುಣವನ್ನು ತೋರೋದಿಲ್ಲ. ಆದರೆ ಕೆಲವರು ಈ ರೀತಿ ಮಾಡುತ್ತಿದ್ದರು, ಮಾಡುತ್ತಾರೆ ಎಂಬ ಹೇಳಲು ಬೇಸರವೆನಿಸುತ್ತದೆ. ಆದರೆ ಕ್ವಿಝ್ ಸ್ಪರ್ಧೆಯಲ್ಲಿ ನನಗಂತೂ ಬಹುಮಾನ ಬಂದೇ ಬರುತ್ತಿತ್ತು. ಅದರಲ್ಲೂ ಗಣಿತದಲ್ಲಿ ಮಿಸ್ ಆಗುವ ಚಾನ್ಸೇ ಇರಲಿಲ್ಲ!!

ಇನ್ನು ಶಿವರಾತ್ರಿ ಹಬ್ಬದ ಸಮಯದಲ್ಲಿ ನಮ್ಮ ಕಾಲೇಜಿನ ಆಶ್ರಮದಲ್ಲಿ ವಿಧ ವಿಧದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಈ ಸಮಾರಂಭಕ್ಕೆ ಬೆಳಗೆರೆ ಕೃಷ್ಣಶಾಸ್ತ್ರಿಗಳು, ‘ಚುಚ್ಚುಮದ್ದು’ ಎಂಬ ಹೆಸರಿನಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ವ್ಯಂಗ್ಯ ಚಿತ್ರಗಳನ್ನು ಬರೆಯುತ್ತಿದ್ದ ಹೆಚ್.ಬಿ. ಮಂಜುನಾಥ್ ಸರ್ ಬಂದಿದ್ದ ನೆನಪು. ಇವರುಗಳ ಭಾಷಣ ಮುಗಿದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆದ ಮೇಲೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲಾಗುತ್ತಿತ್ತು. ಆಗ ಈಗಿನಂತೆ ನಮ್ಮಲ್ಲಿ ಬರೀ ಕ್ಯಾಸೆಟ್ ಹಾಕಿ ನೃತ್ಯ ಮಾಡುವಂತಹ ಕಾರ್ಯಕ್ರಮಗಳು ಇರದೇ ನಾಟಕ, ನೃತ್ಯ, ಏಕಪಾತ್ರಾಭಿನಯ ಮೊದಲಾದ ಕಲೆಗಳಿಗೆ ಮಾತ್ರ ಅವಕಾಶ ಒದಗಿಸಲಾಗುತ್ತಿತ್ತು. ಆಗ ನಮ್ಮ ಕ್ಲಾಸ್ ಮೇಟ್‌ಗಳು ಆಡಿದ ‘ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ?’ ಎಂಬ ಪ್ರಹಸನ ನಮ್ಮನ್ನು ನಗೆಗಡಲಲ್ಲಿ ತೇಲಿಸಿತ್ತು. ನನ್ನ ಕ್ಲಾಸ್ ಮೇಟ್ ಹಾಗೂ ಅನೇಕ ಸಲ ಮನೆಗೆ ಕರೆದುಕೊಂಡು ಹೋಗಿ ನನ್ನನ್ನು ತಮ್ಮ ಫ್ಯಾಮಿಲಿ ಫ್ರೆಂಡ್ ಆಗಿ ಮಾಡಿಕೊಂಡಿದ್ದ ಪರಮೇಶ್ ನಿರ್ದೇಶನ ಮಾಡಿದ ಕನಕದಾಸ ನಾಟಕವು ತುಂಬಾ ಚೆನ್ನಾಗಿ ಮೂಡಿಬಂದು ಪ್ರೇಕ್ಷಕರಲ್ಲಿ ಭಕ್ತಿ ಭಾವವನ್ನು ಸ್ಫುರಿಸುವಲ್ಲಿ ಸಾಧ್ಯವಾಗಿಸಿತ್ತು. ಇದರ ಕಂಪ್ಲೀಟ್ ಕ್ರೆಡಿಟ್ ಪರಮೇಶ್‌ಗೆ ಸಿಗಬೇಕಿತ್ತು. ಅವನು ಇದಕ್ಕಾಗಿ 15 ದಿನ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡು ಸ್ವಂತ ದುಡ್ಡಿನಲ್ಲಿ ನಾಟಕಕ್ಕೆ ಬೇಕಾದ ಪರಿಕರಗಳನ್ನು ಜೋಡಿಸಿದ್ದ. ನಾಟಕದ ಕೊನೆಯಲ್ಲಿ ಡ್ರಾಯಿಂಗ್ ಶೀಟಿನಲ್ಲಿ ಗೋಡೆಯನ್ನು ಮಾಡಿದ್ದ. ಕನಕದಾಸ ಬೇಡಿಕೊಂಡಾಗ ಗೋಡೆ ಬೀಳುವುದು ನಂತರ ಕೃಷ್ಣನ ಮೂರ್ತಿ ತಿರುಗುವ ಸನ್ನಿವೇಶವನ್ನು ನೈಜವಾಗಿ ಶ್ರೀಕೃಷ್ಣನೇ ತಿರುಗಿದನೋ ಎಂಬಂತೆ ಮಾಡಿದ್ದ. ಕೊನೇ ದೃಶ್ಯದಲ್ಲಿ ಪರಮೇಶ್‌ನ ಸೃಜನಶಿಲತೆ ಎದ್ದು ತೋರುತ್ತಿತ್ತು. ಆದರೆ ಈ ನಾಟಕದ ಕಂಪ್ಲೀಟ್ ಕ್ರೆಡಿಟ್ ಪರಮೇಶನಿಗೆ ಸಿಗದೇ ರಂಗನಾಥನಿಗೆ ಸಿಕ್ಕಿದ್ದು ಮಾತ್ರ ಸೋಜಿಗವೆನಿಸಿತು. ಅವನೂ ನನ್ನ ಗೆಳೆಯನೇ ಆಗಿದ್ದರೂ ನನ್ನ ಸ್ವಭಾವವೇ ಅಂಥದ್ದು. ನಿಜವಾದ ಟ್ಯಾಲೆಂಟ್ ಇರೋರಿಗೆ ಹಾಗೂ ಶ್ರಮಪಟ್ಟವನಿಗೆ ಅದರ ಫಲ ಸಿಗಬೇಕು ಎಂದು ನಾನು ಬಯಸುವವನು. ಅಲ್ಲದೇ ಶಿಕ್ಷಕರಾದವರು ಎಲ್ಲ ವಿದ್ಯಾರ್ಥಿಗಳನ್ನು, ತನ್ನ ಜೊತೆಗಿರುವ ಶಿಕ್ಷಕರನ್ನು ಸಮನಾಗಿ ಕಾಣಬೇಕು ಎಂಬ ವಿಚಾರದಲ್ಲಿ ನಂಬಿಕೆಯಿರುವವನು. ಮುಂದೆ ಇದೇ ವಿಚಾರದಲ್ಲಿ ನಮ್ಮ ಕಾಲೇಜಿನ ಲೆಕ್ಚರ್‌ಗಳು ಹಾಗೂ ನನ್ನ ಮಧ್ಯೆ ಸ್ವಲ್ಪ ವಾದ ವಿವಾದಗಳು ನಡೆದವು. ಆ ವಿಚಾರಗಳನ್ನು ಮುಂದೆ ತಿಳಿಸುತ್ತೇನೆ.

ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಾವು ಏನನ್ನು ಕೊಡುತ್ತೇವೆಯೋ ಅದೇ ನಮಗೆ ಮರಳಿ ಬರುತ್ತದೆ. ನ್ಯೂಟನ್ನಿನ ಮೂರನೇ ನಿಯಮವು ನಮ್ಮ ಕರ್ಮ ಫಲಗಳಿಗೂ ಸಹ ಅನ್ವಯ ಆಗುತ್ತೆ ಎಂದು ಹೇಳುತ್ತಾ ನನ್ನ ಇಂದಿನ ಬರಹವನ್ನು ಮುಗಿಸ್ತಾ ಇದೇನೆ. ನಮಸ್ಕಾರ.

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ