ಎರಡು ದಿನದ ವಸ್ತಿಯ ನಂತರ ಮನೆಗೆ ತಲುಪುವವರೆಗೂ ಮನಸ್ಸು ನಿಯಂತ್ರಣದಲ್ಲಿರಲಿಲ್ಲ. ಯಾವ ಗಿಡಗಳು ಹೋದವು? ಆಕೆಯಂತೂ ಎಲ್ಲವೂ ಅಂದಳು, ಕೆಲವಾದರೂ ಉಳಿಯಬಾರದೇ ಎಂದು ಮನಸ್ಸು ಪ್ರಾರ್ಥಿಸುತ್ತಿತ್ತು. ಅಂದು ಮನೆಯ ತಲುಪುವ ಹಾದಿಗುಂಟ ಬರುವಾಗ ನೋಡಿದರೆ ಎಲ್ಲವೂ ಬಟಾ ಬಯಲು, ಎರಡೂ ಕಡೆ ಎಲ್ಲ ಗಿಡಗಳನ್ನು ಕಿತ್ತಿದ್ದಾರೆ. ಇನ್ನು ನಮ್ಮದೇನು ಎನ್ನುತ್ತಾ ನಮ್ಮ ಮನೆಯ ಮುಂದೆ ಬಂದಾಗ ಎಲ್ಲ ಗಿಡಗಳು ಹೋಗಿ ಕೇವಲ ಎರಡು ಗಿಡ ಉಳಿದಿದ್ದವು.
ಮಾಲಾ ಮ. ಅಕ್ಕಿಶೆಟ್ಟಿ ಬರಹ ನಿಮ್ಮ ಓದಿಗೆ

ಆ ದಿನ ಪ್ರಯಾಣ ಮಾಡುವುದು ನಿಶ್ಚಯವಾಗಿತ್ತು. ಈ ಮೊದಲು ಇದೇ ಪ್ರಯಾಣಕ್ಕೆ ಹೋಗಲು ನಿಶ್ಚಯಿಸಿ ಮೂರು ಬಾರಿ ಹಲವು ಕಾರಣಗಳಿಂದ ತಪ್ಪಿದ ಬಳಿಕ ಇದು ಕೊನೆಯ ನಿಶ್ಚಯ ಎನ್ನುವಂತೆ ಹೋಗುವುದು ನಿರ್ಧರಿಸಲಾಗಿತ್ತು. ಯಾವುದೇ ಕಾರಣಕ್ಕೂ ಮುಂದೂಡಲು ಬಾರದ ಪರಿಸ್ಥಿತಿ ಅದು. ಮನೆ ಎದುರು ರಸ್ತೆಯಲ್ಲಿ ಹಲವು ಗಿಡಗಳನ್ನು ಸರಕಾರಿ ಜಾಗದಲ್ಲೇ ಹಚ್ಚಿದ್ದೆವು. ಮೇಲಿನ ಅಂತಸ್ತಿನ ಮನೆಯನ್ನು ಕಟ್ಟಿದ ನಂತರ ಸಿಮೆಂಟ್ ಬಿದ್ದಿದ್ದರಿಂದಲೋ ಏನೋ ಗಿಡಗಳು ಮನೆಯ ಅಂಗಳದಲ್ಲಿ ಅಷ್ಟೊಂದು ಹತ್ತುತ್ತಿರಲಿಲ್ಲ ಮತ್ತು ತೆಂಗಿನ ಗಿಡದ ನೆರಳು ಸಣ್ಣ ಗಿಡಗಳ ಮೇಲೆ ಬಿದ್ದು ಅವುಗಳ ಬೆಳವಣಿಗೆ ಆಗುತ್ತಿರಲಿಲ್ಲ. ಹೀಗಾಗಿ ದೊಡ್ಡ ಮತ್ತು ಕೆಲವು ಚಿಕ್ಕ ಹೂವಿನ ಗಿಡಗಳನ್ನು ಮನೆಯ ಹೊರಗೆ ರಸ್ತೆಯಲ್ಲಿಯೇ ಹಚ್ಚಿ ಆನಂದಿಸಿದ್ದೆವು.

ಕಾರ್ಪೊರೇಷನ್ ಇಂಥ ಗಿಡಗಳನ್ನೆಲ್ಲ ತೆಗೆದು ನೆಲವನ್ನು ಅಗೆದು, ಚಿಕ್ಕ ಕಲ್ಲು ಹಾಕಿ ಅದರ ಮೇಲೆ ಸಿಮೆಂಟ್ ಟೈಲ್ಸ್ ಹಾಕುವ ಕೆಲಸದಲ್ಲಿತ್ತು. ಈ ಕಾರ್ಯ ಈಗಾಗಲೇ ಇತರ ರಸ್ತೆಗಳಲ್ಲಿ ಮಾಡಲಾಗಿತ್ತು. ನಮ್ಮ ಮನೆಯ ರಸ್ತೆಗೂ ವಿಸ್ತರಿಸುವುದು ಎಂದು ಗೊತ್ತಿತ್ತು. ಪ್ರಯಾಣಕ್ಕೆ ಹೋಗುವ ಹಿಂದಿನ ದಿನ ಜೆಸಿಬಿ ಗಾಡಿಯವರಿಗೆ ಮತ್ತು ರಸ್ತೆಯ ಕಾಮಗಾರಿಯ ಉಸ್ತುವಾರಿ ತೆಗೆದುಕೊಂಡ ವ್ಯಕ್ತಿಗೆ ಕರೆದು ಈ ಮೂರು ಗಿಡಗಳು ಗಿಡಗಳನ್ನು ತೆಗೆಯುವುದಾದರೆ ತೆಗೆಯಿರಿ ಆದರೆ ಈ ಮೂರನ್ನು ಮುಟ್ಟಬೇಡಿ. ಬಹಳ ಕಷ್ಟಪಟ್ಟು ಈ ಗಿಡಗಳನ್ನು ಹಚ್ಚಿದ್ದೇನೆ ಎಂದು ಅವರಿಗೆ ಹೇಳಿದೆವು. ಅವರು ಆಯ್ತು ಎಂದು ಗೋಣು ಹಾಕಿದ್ದರು. ಇದರ ಜೊತೆಗೆ ಬಾಜು ಮನೆಯವರಿಗೆ, ಎದುರಿನ ಮನೆಯವರಿಗೂ ತೆಗೆಯದ ಹಾಗೆ ಸ್ವಲ್ಪ ನಿಗಾವಹಿಸಿ ಎಂದು ಗೋಗರೆದಿದ್ದೆವು. “ಆಯ್ತು” ಎಂದು ಗೋಣಲ್ಲಾಡಿಸಿದ್ದರು. ಒಬ್ಬರಂತೂ “ಅಲ್ಲ ನಾಳೆ ಯಾಕೆ ಪ್ರಯಾಣ ಹೋಗಬೇಕು? ಒಂದು ದಿನ ಮುಂದೂಡಿ, ನಾಡಿದ್ದು ಹೋಗಿ” ಎಂದರು. ಅವರಿಗೆ ನಮ್ಮ ಪ್ರಯಾಣದ ಕಷ್ಟವನ್ನು ಹೇಳಲು ಅಥವಾ ಅರ್ಥೈಸಲು ಆಗಲಿಲ್ಲ. ಅವರಿಗೇನು ಗೊತ್ತು? ನಾವು ಎಷ್ಟು ಬಾರಿ ಈ ಪ್ರಯಾಣವನ್ನು ಮುಂದೂಡಿದ್ದೆವೆಂದು!! ಮೇಲಾಗಿ ರಸ್ತೆಯ ಕಾಮಗಾರಿಯವರು ಒಂದು ದಿನ ಬಿಟ್ಟು ಒಂದು ದಿನ ಬರುವುದು. ಇಲ್ಲಾ ವಾರಗಟ್ಟಲೆ ಕೆಲಸವನ್ನು ಮಾಡುತ್ತಿರಲಿಲ್ಲ. ಹೀಗಾಗಿ ನಾವು ಪ್ರಯಾಣ ಮುಗಿಸಿ ಬಂದರೂ ಇವರು ಬರಲಿಕ್ಕಿಲ್ಲ ಎಂಬ ಯಾವುದೋ ಮೂಲೆಯ ಆತ್ಮವಿಶ್ವಾಸವೆಂದು ನಮಗೆ ಬಲ ಕೊಟ್ಟಿತ್ತು.

ಈ ಮೊದಲು ನಮ್ಮ ರಸ್ತೆಯ ಕಡೆಗೆನೇ ಇವರು ಕೆಲಸ ಪ್ರಾರಂಭಿಸುತ್ತಾರೆಂದು ಅನುಮಾನಿಸಿ ಒಂದು ಸಲ ಪ್ರಯಾಣ ಮುಂದೂಡಿದ್ದೆವು. ಆಗ ಅವರು ಬರಲೇ ಇಲ್ಲ. ಅದಕ್ಕೆ ಇವರು ಬರಲಿಕ್ಕಿಲ್ಲವೆಂದು ತಿಳಿದು ನಿರ್ಧರಿಸಿದ್ದೆವು. ಮೇಲಾಗಿ ಮನೆಯಲ್ಲಿ ಅವ್ವ ಮತ್ತು ಅತ್ತಿಗೆಯನ್ನು ಬಿಟ್ಟು ಎಲ್ಲರೂ ಕೆಲಸಕ್ಕೆ ಹೋಗುವವರೇ. ಎಲ್ಲರೂ ತಮ್ಮ ಆಫೀಸ್‌ಗಳಲ್ಲಿ ಹೇಳಿ ಲೀವ್ ಸ್ಯಾಂಕ್ಷನ್ ಮಾಡಿಕೊಂಡಿದ್ದರು. ಇದು ಕೂಡ ಹಲವು ಬಾರಿಯಾಗಿತ್ತು… ಲಿವ್ ಸ್ಯಾಂಕ್ಷನ್ ಆದ ನಂತರ ಪ್ರಯಾಣ ಮುಂದೂಡುವಿಕೆಯಿಂದ ಮತ್ತೆ ಆಫೀಸಿಗೆ ಹಾಜರಾಗಿ ಆಶ್ಚರ್ಯವನ್ನುಂಟು ಮಾಡಿದ್ದೆವು. ಒಂದು ರೀತಿ ತೋಳಬಂತು ತೋಳ ಪರಿಸ್ಥಿತಿ ನಮ್ಮದು. ಈಗ ತಪ್ಪಿಸುವ ಮಾತೇ ಇರಲಿಲ್ಲ. ಇವನ್ನೆಲ್ಲ ನೆರೆಮನೆಯವರಿಗೆ ಹೇಗೆ ಹೇಳುವುದು. ಹಾಗೆ ಸುಮ್ಮನಾಗಿದೆವು.

ಹುಃ…. ಹೀಗೆ ಎಲ್ಲಾ ಅಡಚಣೆಗಳ ಮಧ್ಯೆ ಮತ್ತು ತಲೆನೋವುಗಳ ಮಧ್ಯೆ ಪ್ರಯಾಣ ಬೆಳೆಯಿತು. ಹೋದ ಸ್ಥಳ ಕಾಡು, ಮೇಡು, ನದಿ, ಬೆಟ್ಟ, ಆಟಗಳ ಮಿಶ್ರಣ. ಸುಖದ ಪ್ರವಾಸ ಅದು. ಎಲ್ಲವನ್ನು ತೊರೆದು, ಮರೆತು ಅನುಭವಿಸುವಂಥ ತಾಣ. ಆದರೆ ನಾವೆಲ್ಲ ಆನಂದಿಸುವ ಮಧ್ಯಮಧ್ಯದಲ್ಲಿಯೇ ಹಲವು ಸಲ ಅಯ್ಯೋ ನಮ್ಮ ಗಿಡಗಳು ಏನಾದವು ಎನ್ನುವ ಚಿಂತೆ. ಅದೇ ರಾತ್ರಿ ಒಬ್ಬ ನೆರೆ ಮನೆಯವರಿಗೆ ಫೋನ್ ಮಾಡಿದಾಗ “ಹೌದು ಇವತ್ತು ಕೆಲಸಗಾರರು ಬಂದಿದ್ದರು. ಎಲ್ಲಾ ಗಿಡಗಳು ಹೋದವು” ಅಂದರು. ಎದೆ ಒಮ್ಮೆಗೇ ಧಸಕ್ ಅಂತು. ಎಷ್ಟು ಪ್ರಯತ್ನ ಪಟ್ಟರೂ ಗಿಡಗಳು ಉಳಿಯಲಿಲ್ಲವೆಂದು ಮನಸ್ಸು ಭಾರವಾಯಿತು. ಇನ್ನೊಂದು ದಿನವನ್ನು ಹೇಗೋ ಕಳೆದು ಪ್ರಯಾಣಿಸುವಾಗ ಮನಸ್ಸೆಲ್ಲ ಗಿಡಗಳ ಮೇಲೆ ಇತ್ತು. ಕೆಲವು ಗಿಡಗಳನ್ನು ಬೇರೆಯವರಿಂದ ಕೇಳಿ ಬೇಡಿ ತೆಗೆದುಕೊಂಡು ಬಂದು ಹಚ್ಚಿದ್ದೆವು. ಅವುಗಳನ್ನು ಬೆಳೆಸುವವರೆಗೂ ತುಂಬಾ ನಿಗಾವಹಿಸಿದ್ದೆವು. ಹೂಗಳ ಗಿಡಗಳು ತುಂಬಾ ಚೆಂದವೇ ಇದ್ದು, ಜನ ದೇವರ ಪೂಜೆಗೆ ಅದರ ಹೂಗಳನ್ನು ಒಯ್ಯುತ್ತಿದ್ದರು. ಒಮ್ಮೆಯೂ ಯಾರಿಗೂ ಕೀಳಬೇಡಿ  ಎನ್ನಲಿಲ್ಲ. ಗಿಡ ಹಚ್ಚಿದ್ದೇ ರಸ್ತೆಯ ಜಾಗದಲ್ಲಿ ಎಂದಾಗ ಜನ ಕೀಳುವವರೇ!! ಕಿತ್ತು ದೇವರಿಗೆ ಏರಿಸಲು ಒಯ್ಯುತ್ತಾರಲ್ಲ, ಕೀಳಲಿ, ಏರಿಸಲಿ. ಗಿಡ ಹಚ್ಚಿ, ಹೂ ಕೊಟ್ಟ ಪುಣ್ಯವಾದರೂ ಧಕ್ಕೇ ಧಕ್ಕುತ್ತದೆಂದು ಮನೆಯಲ್ಲಿಯ ಯಾರೂ ಯಾವುದೇ ವ್ಯಕ್ತಿಗೆ ಹೂ ಕೀಳಬೇಡಿ ಎನ್ನುತ್ತಿರಲಿಲ್ಲ. ಪರಿಚಿತ ಅಪರಿಚಿತರ ಎಲ್ಲರೂ ಹೂ ಒಯ್ಯವವರೇ !!!

ಎರಡು ದಿನದ ವಸ್ತಿಯ ನಂತರ ಮನೆಗೆ ತಲುಪುವವರೆಗೂ ಮನಸ್ಸು ನಿಯಂತ್ರಣದಲ್ಲಿರಲಿಲ್ಲ. ಯಾವ ಗಿಡಗಳು ಹೋದವು? ಆಕೆಯಂತೂ ಎಲ್ಲವೂ ಅಂದಳು, ಕೆಲವಾದರೂ ಉಳಿಯಬಾರದೇ ಎಂದು ಮನಸ್ಸು ಪ್ರಾರ್ಥಿಸುತ್ತಿತ್ತು. ಅಂದು ಮನೆಯ ತಲುಪುವ ಹಾದಿಗುಂಟ ಬರುವಾಗ ನೋಡಿದರೆ ಎಲ್ಲವೂ ಬಟಾ ಬಯಲು, ಎರಡೂ ಕಡೆ ಎಲ್ಲ ಗಿಡಗಳನ್ನು ಕಿತ್ತಿದ್ದಾರೆ. ಇನ್ನು ನಮ್ಮದೇನು ಎನ್ನುತ್ತಾ ನಮ್ಮ ಮನೆಯ ಮುಂದೆ ಬಂದಾಗ ಎಲ್ಲ ಗಿಡಗಳು ಹೋಗಿ ಕೇವಲ ಎರಡು ಗಿಡ ಉಳಿದಿದ್ದವು. ಒಂದು ಮೆಹಂದಿ ಗಿಡ ಮತ್ತೊಂದು ಕಣಗಿಲೆ ಗಿಡ. ಮೆಹಂದಿ ಗಿಡವನ್ನು ಅಕ್ಕ ತನ್ನ ಶಾಲೆಯ ಹತ್ತಿರವಿದ್ದ ಮನೆಯವರಿಂದ ತಂದಿದ್ದರೆ, ಕಣಗಿಲೆ ಗಿಡವನ್ನು ನಾನು ಅಯ್ಯಪ್ಪ ಗುಡಿಯ ಸ್ವಾಮಿಯಿಂದ ಕೇಳಿ ಪಡೆದು ತಂದಿದ್ದೆ. ಇವಾದರೂ ಉಳಿದವಲ್ಲ ಅಂತ ಖುಷಿಯಾಯಿತು. ಮತ್ತೊಂದು ಐದು ಪಕಳಿಯ ಬಿಳಿ ಹೂವಿನ ಗಿಡ ಹೋದದ್ದು ತುಂಬಾ ನೋವಾಗಿತ್ತು. ಎರಡು ದೊಡ್ಡ ಹಳದಿ ಹೂವಿನ ಗಿಡಗಳು ಹೋಗಿದ್ದವು. ಸ್ಟ್ರೀಟ್ ಲೈಟ್‌ನ ಕಂಬ ನಮ್ಮ ಮನೆಯ ಮುಂದೆಯೇ ಬಂದಿದ್ದರಿಂದ ಮತ್ತು ಈ ಎರಡೂ ಗಿಡಗಳು ಅದಕ್ಕೆ ಹೊಂದಿಕೊಂಡೇ ಇದ್ದುದರಿಂದ ಬಚಾವಾಗಿದ್ದವು. ಇಲ್ಲಾದರೆ ಇವೂ ಹೋಗುತ್ತಿದ್ದವು. ಆ ಕಂಬದ ಸುತ್ತ ದೊಡ್ಡದಾದ ಸಿಮೆಂಟ್ ಚೌಕವಿದ್ದು ಅದನ್ನು ಡಿಸ್ಟರ್ಬ್ ಮಾಡಿ ಗಿಡವನ್ನು ಕೀಳುವುದು ಜೆಸಿಬಿಯಿಂದ ಅಸಾಧ್ಯವಾಗಿತ್ತು. ಏನೋ ದೊಡ್ಡ ಹಕ್ಕೆಂಬಂತೆ ನೆರೆಮನೆಯವರನ್ನು ದಬಾಯಿಸಿ ಯಾಕೆ ನೀವು ಕೀಳಬೇಡಿ ಎಂದು ಹೇಳಲಿಲ್ಲ? ಎಂದೆವು. ಅವರು “ಹೇಳಿದರೂ ಕೇಳಲಿಲ್ಲ. ಎಲ್ಲ ಗಿಡಗಳನ್ನು ಹೀಗೆ ಬಿಡಬೇಕಾಗುತ್ತದೆ ಎಷ್ಟೊಂದು ಬಿಡುವುದು” ಎಂದರಂತೆ.

ಮನಸ್ಸು ಮಾತ್ರ ತುಂಬಾ ಭಾರವಾಗಿತ್ತು. ಅವುಗಳು ಇದ್ದ ನೆಲವನ್ನೇ ತುಂಬಾ ಹೊತ್ತು ನೋಡ್ತಾನೆ ಇದ್ದೆವು. ಒಂದು ದಿನ ಮುಂದೂಡಿದ್ದರೆ ಆಗುತ್ತಿತ್ತೆಂಬ ಭಾವ ಜೊತೆಗೆ ಇದ್ದರೂ ಅವರು ನಮ್ಮ ಮಾತು ಕೇಳುತ್ತಿದ್ದರೆ ಎನ್ನುವ ಅನುಮಾನ. ಮನುಷ್ಯ, ಪ್ರಾಣಿ, ಪಕ್ಷಿ, ಕೀಟ, ಗಿಡ, ಮರ ಏನೇ ಇದ್ದರೂ ಒಮ್ಮೆ ಅವುಗಳನ್ನು ಹಚ್ಚಿಕೊಂಡರೆ ಯಾವುದರಲ್ಲಿಯೂ ವ್ಯತ್ಯಾಸವಿಲ್ಲ ಅನಿಸುತ್ತದೆ. ಮನುಷ್ಯನಷ್ಟೇ ಬಾಂಧವ್ಯ ಗಿಡಮರಗಳ ಜೊತೆಗೂ ಆಗುತ್ತದೆ. ಎಷ್ಟೋ ಸಲ ಆ ಗಿಡಗಳು ಇದ್ದ ಜಾಗದಲ್ಲೇ ಸಿಮೆಂಟ್ ಟೈಲ್ಸ್ ಕಿತ್ತು ಮತ್ತೆ ಗಿಡ ಹಚ್ಚಬೇಕೆನಿಸುತ್ತದೆ.  ಸಮಯ ಕೂಡಿ ಬಂದರೆ ಮತ್ತೆ ಹಚ್ಚುವುದೇ.