ಅಂಗೆ ನೋಡಿದ್ರೆ ನಮ್ಮ ನಾಗೂ ಅತ್ತೆಗೆ ಅಕ್ಷರಾನೇ ತಲೆಗೆ ಹತ್ತಲಿಲ್ಲ. ಕೊನೆಗೆ ಅವರಿಗೆ ಸಂಗೀತ ಕಲಿಸಲು ಹಾರ್ಮೋನಿಯಂ ಮೇಷ್ಟ್ರನ್ನ ಕರೆಸಿದ್ರು. ಆ ಮೇಷ್ಟ್ರು ಮೊದಲು ಕಾಗುಣಿತ ತಿದ್ದಿಸಿ ಆಮೇಲೆ ಸಂಗೀತ ಹೇಳಿಕೊಟ್ಟಿದ್ದರು. ನಮ್ಮತ್ತೆಯ ಅಲ್ಪಪ್ರಾಣ ಮಹಾಪ್ರಾಣಗಳಿಗೆ ಜೀವ ತುಂಬಿದರು ಮೇಷ್ಟ್ರು. ಮೊದಲೇ ಕಲ್ಪನಾ ಚತುರೆ ಅತ್ತೆ. ಅಕ್ಷರಾನೂ ಬಂದ ಮೇಲೆ ಕತೆ ಬರೇಯೋಕೆ ಶುರು ಮಾಡಿದ್ರು. ಇಷ್ಟೇ ಅಲ್ಲ, ಅಕ್ಕಂದಿರ ಮಕ್ಕಳನ್ನು ಬಳಿ ಕೂರಿಸಿಕೊಂಡು ಸ್ವಾರಸ್ಯಕರವಾಗಿ ಕತೆ ಕಟ್ಟಿ ಹೇಳುವ ಕಲೆ ಇವರಲ್ಲಿ ಸೊಗಸಾಗಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ಮನೆಯಲ್ಲಿಯ ಓದಿನ ವಾತಾವರಣದ ಕುರಿತು ಬರೆದಿದ್ದಾರೆ
ನಮ್ಮ ವಂಶದಲ್ಲಿ ಕತೆ ಹೇಳೋದು, ಕತೆ ಕೇಳೋದೂ ಅಂದ್ರೇನೆ ಹುಚ್ಚು. ಇದು ಮೂರು ತಲೆಮಾರಿನ ಕತೆ. ನಮ್ಮ ಅಜ್ಜಿ ತಾತನ ಕಾಲದಿಂದ ನನ್ನವರೆಗೆ ಸುತ್ತಾ ಇರುವ ದೊಡ್ಡಜ್ಜಿ, ದೊಡ್ಡತಾತ, ದೊಡ್ಡತ್ತೆ, ಚಿಕ್ಕತ್ತೆ, ಅಕ್ಕಂದ್ರು, ಅಣ್ಣಂದ್ರು ಎಲ್ಲಾರ್ಗೂ ಓದೋ ಹುಚ್ಚು, ಬರೆಯೋ ಹುಚ್ಚು.
ತಾತನ ಕತೆ ಪುಸ್ತಕದ ಕತೆ
ನಮ್ಮ ತಾತ- ಅಜ್ಜಿ ಇಬ್ರೂ ಕತೆ ಪುಸ್ತಕ ಓದ್ತಿದ್ರು. ನಮ್ ತಾತ ಬೆಳಗ್ಗೆ ತಿಂಡಿ ತಿಂದು, ಹೆಗಲ ಮೇಲೆ ಟವೆಲ್ ಹಾಕ್ಕೊಂಡು ಕಂಕುಳಲ್ಲಿ ಪುಸ್ತಕ ಸಿಗಿಸಿಕೊಂಡು ಹೊಲದತ್ತಿರ ಹೋಗ್ತಿದ್ರು. ಅಲ್ಲಿ ಹೊಲಾ ಎಲ್ಲಾ ಒಂದು ರೌಂಡು ಅಡ್ಡಾಡಿಕೊಂಡು ಬಂದು ಕರೆಂಟ್ ರೂಮಿನಲ್ಲಿ (ಬೋರ್ವೆಲ್ ಮೋಟರ್ ಇರಿಸಿದ ಜಾಗದಲ್ಲಿ, ಅದರ ಸ್ವಿಚ್ ಬೋರ್ಡ್‌ನೂ ಇಡಿಸಿದ್ರು. ಅದ್ರ ಸುರಕ್ಷತೆಗೆ ಮಳೆ-ಗಾಳಿಯಿಂದ ನೋಡ್ಕೊಳ್ಳೋಕೆ, ಅಪ್ಪ ಒಂದು ಪುಟ್ಟ ರೂಮ್ ಕಟ್ಟಿಸಿದ್ರು) ಕೂತರೆ ಲೋಕವನ್ನೇ ಮರೀತಿದ್ರಂತೆ. ಅದಕ್ಕೂ ಮುಂಚೆ ಅರಳೀಮರದ ನೆರಳಿನಲ್ಲಿ ಟವೆಲ್ ಹಾಸ್ಕೊಂಡು ಕೂತ್ರೆ ಮುಗೀತು. ಆ ಪುಸ್ತಕ ಓದಿ ಮುಗಿಸೋವರೆಗೂ ಊಟಕ್ಕೆ ಮನೆಗೆ ಬರುತ್ತಿರಲಿಲ್ಲ. ಎಷ್ಟೋ ಸತಿ ನಮ್ಮಜ್ಜಿ ಹೇಳಿ ಕಳಿಸ್ತಿದ್ದರಂತೆ. ಆಗ ಮನೆಗೆ ಬರ್ತಿದ್ರಂತೆ. ಅಪ್ಪ ಮಧುಗಿರಿಯಿಂದ ಬರುವಾಗ ಪ್ರಜಾಮತ, ಸುಧಾ ಕೈಯಲ್ಲಿ ಹಿಡಕೊಂಡೆ ಬರ್ತಿದ್ರು. ಪ್ರಜಾವಾಣಿ ಪತ್ರಿಕೆ ತರಸ್ತಿದ್ರು. ಜೊತೆಗೆ ಲೈಬ್ರರಿಯಿಂದ ಕತೆ ಪುಸ್ತಕಗಳನ್ನು ತರುತ್ತಿದ್ದರು. ಅ ನ ಕೃ ಅವರ ಸಾಮಾಜಿಕ ಕಾದಂಬರಿಗಳು ಮತ್ತೆ ನರಸಿಂಹಯ್ಯನ ಪತ್ತೇದಾರಿ ಕಾದಂಬರಿಗಳು, ತ ರಾ ಸು ಅವರ ಐತಿಹಾಸಿಕ ಕಾದಂಬರಿಗಳು, ಅವತ್ತಿನ ಕಾಲಕ್ಕೆ ಫೇಮಸ್ ಆದವರ ಸಾಂಸಾರಿಕ ಕಾದಂಬರಿಗಳನ್ನು ತಂದುಕೊಡ್ತಿದ್ರು. ತಂದ ಪುಸ್ತಕ ಎಲ್ಲಾ ಖಾಲಿಯಾದ್ರೆ ಪತ್ರಿಕೇನಾದ್ರೂ ಕಂಕುಳಲ್ಲಿ ಇಟ್ಕಂಡು ತೋಟಕ್ಕೆ ಹೋಗೋದು ತಾತನ ಅಭ್ಯಾಸ. ಮಾತು ಕಮ್ಮಿ. ಬಹಳ ಮೆದು ಸ್ವಭಾವ ತಾತಂದು.
ಹಾಡು ಬರೀತಿದ್ದ ಅಜ್ಜಿ
ನಮ್ಮಜ್ಜೀನೂ ಓದೋದ್ರಲ್ಲಿ ಕಮ್ಮಿ ಇರಲಿಲ್ಲ. ಅವ್ರೂ ಪುಸ್ತಕ ಓದ್ತಿದ್ರು. ತಾತನ ತರ ಓದಿ ಎದೇಲೇ ಮುಚ್ಚಿಟ್ಟುಕೊಳ್ದೆ, ಅದ್ನ ರಸಭರಿತವಾಗಿ ಮಕ್ಕಳಿಗೆ ಕತೆ ಹೇಳ್ತಿದ್ರು. ನಮ್ಮಜ್ಜಿ ಹಾಡೂ ಕಟ್ಟುತಿದ್ರು. ಸಾಂಪ್ರದಾಯಿಕ ಹಾಡುಗಳ ದೊಡ್ಡ ಭಂಡಾರವೇ ಇತ್ತು. ಮಜ್ಜಿಗೇ ಕಡಿಯೋಕೂ ಹಾಡು, ತುಳಸೀ ಪೂಜೇಗೂ ಹಾಡು. ರಾಗಿ ಬೀಸೋಕೂ ಹಾಡು, ಮಕ್ಳಿಗೆ ತೊಟ್ಟಿಲು ತೂಗೋಕೂ ಹಾಡು. ನಮ್ಮನೇನಲ್ಲಿ ತೊಟ್ಟಿಲು ಸದಾ ತೂಗುತಾನೇ ಇರ್ತಿತ್ತು. ಅಜ್ಜಿಗೇ ಎಂಟು ಹೆಣ್ಣು ಮಕ್ಕಳು. ಅಪ್ಪ ಒಬ್ರೇ ಮಗ. ನಮ್ಮತ್ತೇದೀರೂ ಬಾಣಂತನಕ್ಕೆ ಸದಾ ಅಮ್ಮನ ಮನೇನಲ್ಲಿ ಇರ್ತಿದ್ರು. ಅಜ್ಜಿಗೂ ಮಕ್ಳು. ಇನ್ನು ಕೇಳಬೇಕೇ? ಮಕ್ಳ ಸೈನ್ಯವೇ ಇರುತ್ತಿತ್ತು. ಸೋಬಾನೆ ಹಾಡು, ಮದುವೆ, ಪ್ರಸ್ತ, ಸೀಮಂತ, ನಾಮಕರಣ, ಮಡಿಲಕ್ಕಿ, ಆರತಿ, ಎಲ್ಲಾದಕ್ಕೂ ದಂಡಿ ದಂಡಿ ಹಾಡುಗಳ ಬಾಣಗಳು. ಪೈಪೋಟಿ ಮೇಲೆ ಹಾಡುಗಳನ್ನು ಎಸೀತಿದ್ರು. ಅಜ್ಜಿ ತಾವು ಕಟ್ಟಿರೋ ಹಾಡು ಬರೆದಿಟ್ಟು ಎಲ್ಲಾರ್ಗೂ ಕಲಿಸ್ತಿದ್ರು. ಹಿಂಗಾಗಿ ಸಾಹಿತ್ಯದ ಓದು, ಬರಹದ ನಂಟು ನಮ್ಮ ವಂಶಕ್ಕೆ ಅಂಟಿತ್ತು.
ಇಂಥಾ ನಮ್ಮಜ್ಜಿ ಕೊನೆಗಾಲದಲ್ಲಿ ಲಕ್ವಾ ಹೊಡ್ದು, ನೆಲ ಕಚ್ಚಿದ್ರು. ಒಂದು ಕೈ – ಕಾಲು ಪೂರ್ತಿ ಸ್ವಾಧೀನ ತಪ್ಪಿತ್ತು. ಬಾಯಿ ಬಿದ್ದೋಗಿತ್ತು. ಅಂಥಾ ಕಾಲದಲ್ಲೂ ಅವರಿಗೆ ಓದೋ ಹುಚ್ಚು. ಯಾರಾದ್ರೂ ಒಬ್ರು ಪಕ್ಕ ಕೂತು ಓದಿ ಹೇಳ್ತಿದ್ರಂತೆ. ಅದು ಕತೆ ಪುಸ್ತಕಾನೋ, ಪುರಾಣ ಪುಣ್ಯಕತೇನೋ ಯಾವ್ದೋ ಒಂದು. ನಮ್ಮಪ್ಪ ಕೆಲಸದ ಮೇಲೆ ಯಾವುದೇ ಊರಿಗೇ ಹೋದ್ರೂ ರಾತ್ರೆ ವಾಪಸ್ಸಾದಮೇಲೆ ಅಜ್ಜಿ ಪಕ್ಕ ಕೂತು ಒಂದು ಪುಟಾ ಆದ್ರೂ ಓದೀನೆ ಮಲಗ್ತಿದ್ರಂತೆ. ಅಜ್ಜಿ ಮಲಗಿದ್ರೂ ಅಪ್ಪ ಓದಿ ಹೇಳಿಯೇ ತೀರ್ತಿದ್ರಂತೆ. ಇಂತಾ ಮನೆತನ ನಮ್ದು.
ಮನೆತನದ ನಾಯಕರು
ನಮ್ಮ ದೊಡ್ಡ ತಾತ ಒಬ್ರು ಸ್ವಾತಂತ್ರ್ಯ ಹೋರಾಟಗಾರರಾಗಿದ್ರು. ಅವರನ್ನು ಹಿಡಿಯೋಕೆ ಬ್ರಿಟಿಷ್ ಅಧಿಕಾರಿಗಳು ಬಂದಾಗ ದಾರೀಲಿ ರಾಗಿ ಚೆಲ್ಲಿ, ತಪ್ಪುಸ್ಕೊಂಡು ಹೋದ ಸಂಗ್ತೀನ ನಮ್ಮ ಸೋದರತ್ತೇದೀರು ಬಹಳ ಸ್ವಾರಸ್ಯಕರವಾಗಿ ವರ್ಣಿಸಿ ಹೇಳ್ತಿದ್ದಿದ್ದು ಇವತ್ತಿಗೂ ನಮಗೆಲ್ಲಾ ಮನಸಲ್ಲಿ ಕೂತಿದೆ. ಅವರ ತಾತನ ಕಾಲ್ದಲ್ಲಿ ಊರಲ್ಲಿ ಬರಗಾಲ ಬಂದಾಗ, ಜನ್ರು ಉಪವಾಸ, ವನವಾಸ ಮಾಡ್ತಿದ್ದಾಗ ಕಣಜದಲ್ಲಿದ್ದ ದವಸಾನ ತೆಗ್ದು, ಅಂಬಲಿ ಕಾಸಿ ಜನಕ್ಕೆ ಕೊಡ್ತಿದ್ರು ಅಂತ ಅತ್ತೆಯಂದ್ರು ಕಣ್ಣಿಗೆ ಕಟ್ಟುವಂತೆ ಹೇಳ್ತಿದ್ರೆ ನಾವೇ ಪಾತ್ರಧಾರಿಗಳಾಗಿ ಕೇಳುತ್ತಿದ್ವಿ.
ಈ ಓದೋ ಹುಚ್ಚು ಎಲ್ಲಾರ್ಗೂ ಪ್ರಪಂಚ ಜ್ಞಾನ ಕೊಟ್ಟಿತ್ತು. ಹೊಸತನ್ನು ತಗೋಳೋ ಮನ್ಸು ಆಗ್ಲೇ ಅವ್ರಿಗಿತ್ತು. ಸುಧಾ ವಾರಪತ್ರಿಕೆ ಬಂದ ಹೊಸತು. ಆಗ ಹುಟ್ಟಿದ ನಮ್ಮತ್ತೇ ಮಗಳಿಗೆ ಎಲ್ರೂ ಸೇರಿ ಸುಧಾ ಅಂತ್ಲೇ ಹೆಸರಿಟ್ಟು ಖುಷಿ ಪಟ್ಟಿದ್ರು. ಆ ಸುಧಾನೂ ಬರೆಯುವ ಅಭ್ಯಾಸ ರೂಢಿಸಿಕೊಂಡಿರುವುದು ಅವರ ನಿರ್ಧಾರಕ್ಕೆ ಸಮರ್ಥನೆ. ಒಂದು ಸಲ ನಮ್ಮ ತಾತ ಸುಧಾ ಕೊಡಮ್ಮ ಅಂತ ಕೇಳಿದ್ರೆ, ತುಂಟು ಸ್ವಭಾವದ ನಮ್ಮ ಸೋದರತ್ತೆ ಮಕ್ಕಳು(ನಮ್ಮ ಮನೆ ತುಂಬ ನಮಗೆ ಅತ್ತೆ ಮಕ್ಕಳೆ ಸಾಥ್. ಅಪ್ಪ ಒಬ್ರೇ ಮಗ ಆದ್ದರಿಂದ, ನಮ್ಮ ಆಟೋಟ ಎಲ್ಲಾ ಇವ್ರ ಜೊತೇಲೆ) ಎಳೆ ಮಗೂ ಆಗಿದ್ದ ಸುಧಾ ಅಕ್ಕನ್ನ ಎತ್ತಿಕೊಂಡು ಅವರ ಮಡಿಲಲ್ಲಿ ಹಾಕಿದ್ರಂತೆ.
ಪುಸ್ತಕ ಓದಿಕೊಂಡೇ ನ್ಯಾಯಪಂಚಾಯ್ತಿ
ನಮ್ಮ ಅಪ್ಪನ ಸೋದರ ಮಾವಂದಿರು, ಅಂದ್ರೆ ನಮ್ಮಜ್ಜಿ ಅಣ್ಣ ತಮ್ದೀರೂ ಸಹ ಬಲೆ ಪುಸ್ತಕದ ಪ್ರೀತಿ ಇರೋರು. ಯರಗುಂಟೆ ಅಂತ ಅವ್ರ ಊರು. ನಮ್ಮ ಚಿಕ್ಮಾಲೂರಿಗೆ ಆರು ಕಿಲೋಮೀಟರ್ ಅಷ್ಟೆ. ನಡಕೊಂಡೇ ಓಡಾಡ್ತಿದ್ರು. ಇವ್ರಿಗೆ ನಮ್ಮಜ್ಜಿ ಅಂದ್ರೆ ತುಂಬಾ ಪ್ರೀತಿ. ಹದಿನೈದು ದಿನಕ್ಕೊಂದು ಸರ್ತೀನಾದ್ರೂ ಬಂದು ಮಾತಾಡ್ಕೊಂಡೇ ಹೋಗ್ತಿದ್ರು. ದೊಡ್ಡವರು ನಾರಾಯಣ ಮಾಮ. ಇವ್ರು ಖಡಕ್ ನ್ಯಾಯ ತೀರ್ಮಾನಕ್ಕೆ ಹೆಸರಾಗಿದ್ರು. ಸುತ್ತಾ ಎಂಟು ಹಳ್ಳೀ ಜನ ಪಂಚಾಯ್ತೀ ಮಾಡೋಕೆ ಅವ್ರ ಹತ್ತಿರಾನೇ ಬರ್ತಿದ್ರು. ಎರಡನೆಯವರು ಕಿಟ್ಟಿ(ಕೃಷ್ಣಮೂರ್ತಿ) ಮಾಮ. ಇವ್ರೂ ನ್ಯಾಯ ತೀರ್ಮಾನ ಮಾಡ್ತಿದ್ರು. ಕೊನೇವ್ರು ರಾಮ (ರಾಮಸ್ವಾಮಿ)ಮಾಮ.
ಪಂಚಾಯ್ತಿ ಕಟ್ಟೆ ಮೇಲೆ ಕುಂತೇ ಇವ್ರು ಪುಸ್ತಕ ಓದುತ್ತಿದ್ದರಂತೆ. ನ್ಯಾಯ ಕೇಳೋಕೆ ಬಂದೋರ್ಗೆ ಅನುಮಾನ. ಇವ್ರು ನಮ್ಮ ಮಾತು ಕೇಳ್ತಿದ್ದಾರಾ? ಇಲ್ಲಾ ಓದುತ್ತಾ ಇದ್ದಾರಾ. ‘ಯಾಸೆಟ್ಗೆ ನಮ್ ಮಾತೆಲ್ಲಾ ಆಡೇ ಬಿಡಾವಾ, ನೋಡಾಣಿ ಏನ್ ಯೋಳ್ತಾರೋ, ಅದೇನ್ ನ್ಯಾಯಾ ಕಿಸ್ದಾರೋ’ ಅಂದುಕೊಂಡು ಅವ್ರು ಕತೇನೆಲ್ಲ ಹೇಳಿ ಮುಗಿಸಿ, ‘ಈಟಾಯ್ತು ಸೋಮಿ, ಈಗ ನೀವೇ ನ್ಯಾಯ ಯೋಳೀ’ ಅಂತ ಇವ್ರ ಮುಖ ನೋಡಿದ್ರೆ, ಎಷ್ಟು ಕರೆಕ್ಟಾಗಿ ನ್ಯಾಯ ಹೇಳ್ತಿದ್ರಂತೆ ಅಂದ್ರೆ ಅವ್ರು ಬಿಟ್ಟ ಬಾಯಿ ಮುಚ್ಚುತ್ತಲೇ ಇರಲಿಲ್ಲವಂತೆ. ಇಂಗೇ ನಮ್ಮ ಸೋದರತ್ತೆ ಹೇಳಿದ ಕತೇನ ಅವ್ರ ಮಗಳು ಹೆಮ್ಮೆಯಿಂದ ನಮಗೆ ಹೇಳುತ್ತಿದ್ದರೆ, ಕಾಣದ ಆ ತಾತನ ಬಗ್ಗೆ ನಂಗೂ ಅಭಿಮಾನ ಉಕ್ಕಿ ಬಂತು.
ಇಷ್ಟೇ ಅಲ್ಲಾ ಇವ್ರ ಕತೆ. ಬರೇ ಪುಸ್ತಕ ಓದೋದು ಏನು ಮಹಾ? ಈ ಕೊನೇ ಇಬ್ಬರು ಅಣ್ಣ ತಮ್ದ್ರೀರು ಹಾಡೂ ಕಟ್ಟಿ ಹಾಡ್ತಿದ್ರು. ಅದ್ರಲ್ಲೂ ಮದುವೆ ಮುಂಜೀಗ್ಳಲ್ಲಿ ತಮಾಷೆ ಹಾಡು ಕಟ್ಟಿ ಕಾಲೆಳೆಯೋದ್ರಲ್ಲಿ ಫೇಮಸ್ಸಾಗಿದ್ರು. ಯಾವುದೇ ಮದುವೆ ಅಂದ್ರೆ ಇವ್ರು ಇರಲೇ ಬೇಕು. ಗಾದೆಗ್ಳು, ಒಗಟು, ಪ್ರಶ್ನೆ ಹಾಕ್ಕೊಂಡು ಅಲ್ಲಿರೋರಿಗೆ ಖುಷಿ ಕೊಡ್ತಿದ್ರು. ಕಿಟ್ಟಿ ಮಾಮ ಚೆಂದವಾಗಿ ಕತೇನೂ ಹೇಳುತ್ತಿದ್ದರು.
ಈ ಮೂರೂ ಸಹೋದರರ ಜೊತೆ ನಮ್ಮಜ್ಜಿ ಸೇರಿ ಮೂರು ಹೆಣ್ಣುಮಕ್ಕಳು. ನಮ್ಮಜ್ಜೀಗಿಂತ ಅವರ ಅಕ್ಕ (ಕೋಡಗದಾಲ ಅಜ್ಜಿ ಅಂತಾನೇ ಅವ್ರನ್ನ ಕರೀತಿದ್ದಿದ್ದು) ಚುರುಕು. ಕತೆ ಹೇಳೋದ್ರಲ್ಲೂ ಸೈ, ಒಗಟು ಹಾಕೋದ್ರಲ್ಲಿನೂ ಜೈ.
ಕತೆ ಹೆಣಿಯುತ್ತಿದ್ದ ಸೋದರತ್ತೆಯಂದಿರು
ಇವಿಷ್ಟು ಅಜ್ಜಿ ತಾತಂದಿರ ಕತೇ ಆದ್ರೆ, ನನ್ನ ಸೋದರತ್ತೇದೀರೂ ಕಮ್ಮಿ ಇರಲಿಲ್ಲ. ನಮ್ಮ ದೊಡ್ಡತ್ತೇನೂ ಕತೆ ಕಟ್ಟೋದ್ರಲ್ಲಿ ಎತ್ತಿದ ಕೈ. ಕಣ್ಣು ಮುಂದೆ ನಡೆದಂಗೇ ಸುದ್ದಿ ವರ್ಣಿಸೋದ್ರಲ್ಲಿ ತಂಗೀರಿಗೆ ಗುರು ಆಗಿದ್ರು. ಇನ್ನ ನಮ್ಮ ಮ್ಯಾಳ್ಯ ಅತ್ತೆಗೆ ಅದೆಂಗೋ ಇಂಗ್ಲಿಷ್ ಜ್ಞಾನ ಕೂಡ ಇತ್ತು. ಅವರು ಮಾಮಂಗೆ ಬರೋ ಪತ್ರಗಳನ್ನ ಓದಿ ಹೇಳುತ್ತಿದ್ದರು. ತಂಗೀರಿಗೆ ಕತೆ ಕಟ್ಟಿ ಹೇಳೋವಾಗ ಇವರ ಕತಾ ನಾಯಕರು ಸಿಗರೇಟ್ ಸೇದುತ್ತಿದ್ದವರು. ಅದ್ರಲ್ಲೂ ಬಹಳ ಹೈಫೈ ಬ್ರಾಂಡುಗಳ ಹೆಸರೆಲ್ಲಾ ಹೇಳುತ್ತಿದ್ದರೆ ತಂಗಿಯರಿಗೆ ಬೆರಗು. ಅಬ್ಬಾ ನಮ್ಮಕ್ಕಂಗೆ ಎಷ್ಟೊಂದು ವಿಷಯ ಗೊತ್ತಿದೆ ಅಂತ. ತಮಗೆ ಏನಾದ್ರೂ ವಿವರ ಬೇಕಿದ್ರೆ ಆ ಅಕ್ಕನ್ನೇ ಕೇಳಿ ಬರೀತಿದ್ರು.
ನಮ್ಮ ನಾಗೂ ಅತ್ತೆ(ನಾಗರತ್ನ)ಗೆ ಕಲ್ಪನಾ ಶಕ್ತಿ ಬಲು ಜೋರಿತ್ತು. ಕತೆ ಕಟ್ಟಿ ಹೇಳೋದ್ರಲ್ಲಿ ಅವರಿಗೆ ಅವರೇ ಸಾಟಿ. ಅವರು ಮತ್ತೆ ಕೊನೇ ಅತ್ತೆ ವಿಜಿ(ವಿಜಯಲಕ್ಷ್ಮಿ) ಇಬ್ಬರೂ ಕತೆ ಬರೀತಿದ್ರು. ನಮ್ಮಪ್ಪ ತಂಗೀರಿಗೆ ಪೇಪರ್ ಪೆನ್ನು ಧಾರಾಳವಾಗಿ ತಂದುಕೊಟ್ಟು ಪ್ರೋತ್ಸಾಹ ಕೊಡುತ್ತಿದ್ದರು.
ಅಂಗೆ ನೋಡಿದ್ರೆ ನಮ್ಮ ನಾಗೂ ಅತ್ತೆಗೆ ಅಕ್ಷರಾನೇ ತಲೆಗೆ ಹತ್ತಲಿಲ್ಲ. ಕೊನೆಗೆ ಅವರಿಗೆ ಸಂಗೀತ ಕಲಿಸಲು ಹಾರ್ಮೋನಿಯಂ ಮೇಷ್ಟ್ರನ್ನ ಕರೆಸಿದ್ರು. ಆ ಮೇಷ್ಟ್ರು ಮೊದಲು ಕಾಗುಣಿತ ತಿದ್ದಿಸಿ ಆಮೇಲೆ ಸಂಗೀತ ಹೇಳಿಕೊಟ್ಟಿದ್ದರು. ನಮ್ಮತ್ತೆಯ ಅಲ್ಪಪ್ರಾಣ ಮಹಾಪ್ರಾಣಗಳಿಗೆ ಜೀವ ತುಂಬಿದರು ಮೇಷ್ಟ್ರು. ಮೊದಲೇ ಕಲ್ಪನಾ ಚತುರೆ ಅತ್ತೆ. ಅಕ್ಷರಾನೂ ಬಂದ ಮೇಲೆ ಕತೆ ಬರೇಯೋಕೆ ಶುರು ಮಾಡಿದ್ರು. ಇಷ್ಟೇ ಅಲ್ಲ, ಅಕ್ಕಂದಿರ ಮಕ್ಕಳನ್ನು ಬಳಿ ಕೂರಿಸಿಕೊಂಡು ಸ್ವಾರಸ್ಯಕರವಾಗಿ ಕತೆ ಕಟ್ಟಿ ಹೇಳುವ ಕಲೆ ಇವರಲ್ಲಿ ಸೊಗಸಾಗಿತ್ತು. ಆದ್ರೆ ಅದನ್ನು ಕತೆ ಅಂತಾ ಹೇಳದೆ ನಿಜದ ಘಟನೆ ಅಂತಾ ನಿಜದ ತಲೆ ಮೇಲೆ ಹೊಡೆದಂಗೆ ಹೇಳುತ್ತಿದ್ದರು. ಎಲ್ರಿಗೂ ಮಂಕುಬೂದಿ ಎರಚಿ ಮನದಲ್ಲೇ ಮುಸಿಮುಸಿ ನಗುತ್ತಿದ್ದರು.
ನನ್ನ ಕತೆ
ಇವು ನಮ್ಮ ಸೋದರತ್ತೆಯಂದಿರ ಕಥಾ ಪ್ರೀತಿಯ ಕತೆಗಳು. ಅವರ ಮಕ್ಕಳೂ ಕೆಲವರು ಬರೆಯುತ್ತಾರೆ. ಓದುವ ಹವ್ಯಾಸ ಅಂತೂ ನಮ್ಮ ದೊಡ್ಡ ಕುಟುಂಬದ ಪೂರ್ತಿ ಹರಡಿದೆ.
ಇಷ್ಟೆಲ್ಲಾ ಪರಂಪರೆಯ ಹಿನ್ನೆಲೆ ಇದ್ರೂ ನಾನು ಇದುವರೆಗೆ ಒಂದೂ ಕತೆ ಬರೆದಿಲ್ಲ. ಕವಿತೆ, ನಾಟಕ, ಲೇಖನ, ವಿಮರ್ಶೆ, ಆಧುನಿಕ ವಚನ, ಪ್ರಬಂಧ ಏನೆಲ್ಲಾ ಬರೆದರೂ ಕತೆ ಬರೀಲಿಕ್ಕೆ ಆಗಿಲ್ಲ. ಒಂದನೇ ಕ್ಲಾಸಿನಿಂದಲೇ ಓದು ನನ್ನ ಜೊತೆಗಾತಿ. ಗೆಳತಿಯರು ಅವನು ಬಸವ, ಅವಳು ಕಮಲ ಅನ್ನುತ್ತಿದ್ದರೆ ನಾನು ಒಂದೊಂದೇ ಅಕ್ಷರ ಕೂಡಿಸಿ ದಿನಪತ್ರಿಕೆ ಓದುತ್ತಿದ್ದೆ. ಚಂದಮಾಮ, ಬೊಂಬೆಮನೆ, ಬಾಲಮಿತ್ರಗಳು ನನ್ನ ಮಿತ್ರರು.
ನಾನಾಗ ನಾಕೋ ಐದನೆಯ ಕ್ಲಾಸಿನಲ್ಲಿದ್ದೆ. ಮನೆಯಲ್ಲಿ ಭಗತ್ ಸಿಂಗ್ ಬದುಕನ್ನು ಹೇಳುವ ದೊಡ್ಡದೊಂದು ಕೆಂಪುರಟ್ಟಿನ ಪುಸ್ತಕ ಇತ್ತು. ಸುಮಾರು ನಾನೂರು ಐನೂರು ಪುಟದ ಮೇಲಿರಬಹುದು. ಸರಿಯಾಗಿ ನೆನಪಿಲ್ಲ. ಒಂದು ದಿನ ಅದನ್ನು ಓದುತ್ತಾ ಕೂತಿದ್ದೆ. ನಮ್ಮ ಮನೆ ಮಗ್ಗುಲಿನ ಈಶ್ವರಮ್ಮನ ಮಗ ಗೋಪಿ ಅಣ್ಣ ಬಂದ. ಇವನೂ ಮಧುಗಿರಿಯಿಂದ ನಮ್ಮ ಅತ್ತೆಯಂದಿರಿಗೆ ಕಾದಂಬರಿ ತಂದು ಕೊಡುತ್ತಿದ್ದ. ನನ್ನ ನೋಡಿ, ಏನಮ್ಮಿ ಪುಸ್ತಕ ತಿರುವಾಕ್ತಾ ಇದ್ದೀಯಾ. ದೊಡ್ಡೋಳಾದ ಮೇಲೆ ಓದು ಆಯ್ತಾ. ಈಗ ಚಂದಮಾಮ ಓದು ನಡಿ ಅಂತ ಹೇಳ್ದ. ನಾನು, ಆ ಪುಸ್ತಕ ಆಗಲೇ ಮುಕ್ಕಾಲು ಓದಿ ಮುಗಿಸಿದ್ದೇನೆ ಅಂದ್ರೆ ನಂಬ್ತಾನೇ ಇಲ್ಲ. ಕೊನೆಗೆ ಪುಸ್ತಕ ತಗೊಂಡು ಅಲ್ಲಲ್ಲಿ ಪ್ರಶ್ನೆ ಮಾಡ್ದ. ನಾನು ಉತ್ತರ ಕೊಟ್ಟ ಮೇಲೆಯೇ ನಂಬಿದ್ದು. ಬೇಷ್ ಅಂತ ಅಪ್ಪ ಅಮ್ಮನ್ನ ಕರ್ದು ಹೊಗಳಿದ್ದೇ ಹೊಗಳಿದ್ದು.
ಓದುವ ಹುಚ್ಚು ಯಾಪಾಟಿ ಇತ್ತಂದ್ರೆ ಕತೆ ಪುಸ್ತಕ ಮುಗಿದ ಮೇಲೆ ಏನಾದ್ರೂ ಸಿಕ್ಕೀತಾ ಅಂತ ಮನೆ ಅಟ್ಟ ಪಟ್ಟ ಎಲ್ಲಾ ಜಾಲಾಡುತ್ತಿದ್ದೆ. ಮನೇಲಿದ್ದ ಕಾರ್ತೀಕ ಪುರಾಣ, ಮಾಘ ಪುರಾಣ ಅವೂ ಇವೂ ತಿರುವಿ ಹಾಕ್ತಿದ್ದೆ. ಯಾವುದ್ನೂ ಬಿಡುತ್ತಿರಲಿಲ್ಲ. ಅದರಲ್ಲೂ ಕತೆಗ್ಳಲ್ಲಿ ಪಾಪ, ಪುಣ್ಯದ ಕಲ್ಪನೆಗ್ಳು, ನಂಬಿಕೆಗ್ಳು ಇರುತಿದ್ವು. ಯಮ ಕೊಡೋ ಶಿಕ್ಷೆ, ಚಿತ್ರಗುಪ್ತನ ಲೆಕ್ಕ ಎಲ್ಲಾ ಪಕ್ಕಾ ಮನಸಲ್ಲಿ ಕೂತಿತ್ತು. ಅಂಗೇ ಆರನೆಯ ಕ್ಲಾಸಿನಲ್ಲಿದ್ದಾಗ ಕನ್ನಡ ಪಾಠ ಮಾಡುವಾಗ ಕಾಲನರಮನೆ ಅನ್ನುವ ಪದ ಬಂತು. ಅದರ ಅರ್ಥವನ್ನ ಕೇಳಿದ್ರು. ಆಗ ನಾನು ಯಮನ ಅರಮನೆ ಅಂದಾಗ ಜೆ.ಸಿ. ಮೇಷ್ಟ್ರಿಗೆ ಸಿಕ್ಕಾಪಟ್ಟೆ ಆಶ್ಚರ್ಯ. ನಿಂಗೆ ಹೇಗೆ ಗೊತ್ತು ಅಂದ್ರು. ನಾನು ಈ ಪುರಾಣಗಳ ಕತೆ ಹೇಳ್ದೆ. ಅವ್ರು, ಅಬ್ಬಾ ನೀನು ಅದನ್ನೆಲ್ಲಾ ಓದ್ತೀಯಾ? ಅರ್ಥ ಆಗುತ್ತಾ ಅಂದ್ರು. ಹೂ ಅಂದಿದ್ದೆ. ಅಪ್ಪ ಸಿಕ್ಕಾಗ ಅದ್ನ ಹೇಳಿ ಖುಷಿ ಪಟ್ಟಿದ್ರು ಮೇಷ್ಟ್ರು.
ಇಂಗೇ ಮನೇ ಮಂದೀ ಎಲ್ಲಾ ಪುಸ್ತಕದ ಹುಚ್ಚು ಹಿಡಿಸಿಕೊಂಡವರೆ. ಸಿಕ್ಕಾಪಟ್ಟೆ ಕಾಸು ಇಲ್ಲದಿದ್ದರೂ, ಪುಸ್ತಕ ಮಾತ್ರ ದಂಡಿಯಾಗೇ ಕೊಳ್ಳುತ್ತಿದ್ವಿ. ಮನೇನಲ್ಲಿ ರಾಶಿ ಪುಸ್ತಕ ಇದ್ವು. ಬಂದೋರೆಲ್ಲಾ ತಗೊಂಡು ಹೋಗ್ತಿದ್ರು. ಅದೇ ನಮಗೆ ದೊಡ್ಡ ಸಂಪತ್ತಾಗಿತ್ತು.
ಪುಸ್ತಕ ಅನ್ನೋದು ಮಸ್ತಕದಲ್ಲಿ ಭದ್ರವಾಗಿತ್ತು. ಅಂಗಾಗಿ ಇವತ್ತಿನ ಬರವಣಿಗೆಗೆ ಬೀಜ ಅಲ್ಲೇ ಬಿತ್ತಿದ್ದು. ಹಿರೀಕರ ಅಭ್ಯಾಸ ನಮಗೆ ಹವ್ಯಾಸ ಆಯ್ತು.

ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.