Advertisement
ಕನ್ನಡಕ್ಕೆ ಪ್ಯಾಪಿಲಾನ್ ತಂದಿರುವ ಒಂದು ಅಪೂರ್ವ ಫ್ರೆಂಚ್ ಹಾಡು

ಕನ್ನಡಕ್ಕೆ ಪ್ಯಾಪಿಲಾನ್ ತಂದಿರುವ ಒಂದು ಅಪೂರ್ವ ಫ್ರೆಂಚ್ ಹಾಡು

ಸಂಗೀತದ ಅನೇಕ  genreಗಳಲ್ಲಿ  Chanson Francaise  (ಫ್ರೆಂಚ್ ಹಾಡು) ಕೂಡ ಒಂದು. ಈ ಪ್ರಕಾರದ ಇತಿಹಾಸವು 1800 ರ ಆಸುಪಾಸಿನಿಂದ ಆರಂಭವಾಗಿ, ಬಳಿಕ ಅನೇಕ ಅದ್ಭುತ ತಿರುವುಗಳಿಗೆ ಸಾಕ್ಷಿಯಾಗಿ ಬೆಳೆಯಿತು. ಇದರ ಇತಿಹಾಸ, ಮನೋಹರವೂ-ಅನನ್ಯವೂ ಆದ ಹಾಡುಗಳು, ಹಾಡುಗಾರರ ಕುರಿತು ಬರೆಯಲು ತುಂಬ ಇರುವುದರಿಂದ, ಅದನ್ನು ಇನ್ನೊಮ್ಮೆ ಬರೆಯುತ್ತೇನೆ.

ಈಗ, ಈ ಹಾಡುಗಾರರಲ್ಲಿ, ನನ್ನ ಅತ್ಯಂತ ಮೆಚ್ಚಿನ ಹಾಡುಗಾರ ಝಾಕ್ ಬ್ರೆಲ್ (Jaques Brel) ಸಾವಿರದ ಒಂಬೈನೂರ ಐವತ್ತೊಂಬತ್ತರಲ್ಲಿ ಬರೆದು ಹಾಡಿದ ಒಂದು ಅಪೂರ್ವ anti-romantic rendering ಅನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದೇನೆ. 1929ರಲ್ಲಿ ಬೆಲ್ಜಿಯಂನಲ್ಲಿ ಹುಟ್ಟಿದ ಫ್ರೆಂಚ್ ಅನ್ನು ತನ್ನ ಮಾಧ್ಯಮವಾಗಿ ಬಳಸಿಕೊಂಡ ಈ ಗಾಯಕ ಸಂಗೀತಗಾರ, ಕಮೆಡಿಯನ್ ನ ಹಾಡುಗಳಲ್ಲಿ `ne me quitte pas’ (ಬಿಟ್ಟು ಹೋಗದಿರು ನನ್ನ)ಕ್ಕೆ ಎತ್ತರದ ಸ್ಥಾನವಿದೆ. ಶತಮಾನದ ಪ್ರೇಮಗೀತೆ ಎಂದು ಕರೆಸಿಕೊಳ್ಳುವ ಇದನ್ನು ಆತ ಇನ್ನೊಬ್ಬ `ಫ್ರೆಂಚ್ ಗೀತೆ’ಗಳ ಅನನ್ಯ ಹಾಡುಗಾರ್ತಿ ಜ್ಯೂಲಿಯೆಟ್ ಗ್ರೆಕೋ(Juliette Gréco)ಳಿಗಾಗಿ ಬರೆದ ಎಂದೂ ಹೇಳುತ್ತಾರೆ.

ಫ್ರೆಂಚ್ ನಲ್ಲೂ ಪ್ಲೆಮಿಶ್ ನಲ್ಲೂ ಬ್ರೆಲ್ ನೇ ಹಾಡಿದ ಈ ಹಾಡನ್ನು ನಾನಿಲ್ಲಿ ಭಾವಾನುವಾದ ಮಾಡಿಲ್ಲ. ವ್ಯಾಕರಣದ ತೊಡಕುಗಳಿಂದ ಶಬ್ದಶಃ ಅಥವಾ ಸಾಲುಶಃ ಅನುವಾದಿಸಲಾಗದಿದ್ದರಿಂದ; ಮತ್ತು ಇದನ್ನು ಗೆಳೆಯನೊಬ್ಬನ ಹುಟ್ಟಿದ ದಿನದ ಕೊಡುಗೆಯಾಗಿ ಅವನಿಗೆ ಕೇಳಿಸಲೂ ಅನುವಾದಿಸಿದ್ದರಿಂದ- ಪ್ಯಾರಗಳಂತೆ ಅನುವಾದಿಸಿದ್ದೇನೆ. ಒಂದು ಸಾಲನ್ನು ಮಾತ್ರ (`lombre de ta main’  -ನಿನ್ನ ಕಯ್ಯ ನೆರಳು) ಅನ್ನು ಪ್ರಾಸದ ಕಾರಣಕ್ಕಾಗಿ, `ನಿನ್ನ ಬೆರಳುಗಳ ನೆರಳು’ ಎಂದು ಅನುವಾದಿಸಿದ್ದೇನೆ.

ಬಿಟ್ಟು ಹೋಗದಿರು ನನ್ನ

ಮರೆಯುವುದನಿವಾರ್ಯ
ಎಲ್ಲವನ್ನೂ- ಮರೆಯಬಹುದು
ಇನ್ನಿಲ್ಲದೆಲ್ಲವನ್ನೂ.
ಮರೆ ಎಲ್ಲ ಅಪಾರ್ಥಗಳ ಕಾಲವನ್ನೂ
ಮತ್ತು ಕಳೆದುಹೋದ ಕ್ಷಣಗಳನ್ನೂ.
ಅರಿ, ಹೇಗೆ
ಕೊಡಹಬೇಕೆಂದು ನಿನ್ನನ್ನಾಗಾಗ
ಕೊಲ್ಲುವ ನಿಮಿಷಗಳನ್ನು.
ಮಾಡು ಇದೆಲ್ಲವನ್ನೂ-
ಏಕೆಂಬ ಪ್ರಶ್ನೆ ಏಳುವ ಮೊದಲೇ
ನೆನಪಿಸಿಕೊಂಡು ಆ ಸುಂದರ
ಘಳಿಗೆಗಳನ್ನು.

ಬಿಟ್ಟು ಹೋಗದಿರು ನನ್ನ
ಬಿಟ್ಟು ಹೋಗದಿರು ನನ್ನ
ಬಿಟ್ಟು ಹೋಗದಿರು ನನ್ನ
ಬಿಟ್ಟು ಹೋಗದಿರು ನನ್ನ

ನೀಡುವೆ ನಾ-ನಿನಗೆ
ವರ್ಷಧಾರೆಯಿರದ ನೆಲದ
ಮಳೆಹನಿಯ ಮುತ್ತುಗಳನ್ನು.
ನಾನಿನ್ನಿಲ್ಲದ ಮೇಲೂ
ಕಾಪಿಡುವೆ ನೆಲವನ್ನು
ಹೂಳಲು- ಬಂಗಾರದ, ಬೆಳಕಿನ
ನಿನ್ನ ತನುವನ್ನು.
ಸೃಷ್ಟಿಸುವೆ ನಾನೊಂದು ಸ್ವರ್ಗ-
ಎಲ್ಲಿ ಪ್ರೀತಿಯೇ ಎಲ್ಲ
ಪ್ರೀತಿಯೇ ರಾಜ
ಪ್ರೀತಿಯೇ ನೀತಿ.
ಪ್ರೀತಿಯಿಲ್ಲದೇನಿಲ್ಲ.
ನೀನಲ್ಲಿ ರಾಣಿ.

 

 

 

 

ಬಿಟ್ಟು ಹೋಗದಿರು ನನ್ನ
ಬಿಟ್ಟು ಹೋಗದಿರು ನನ್ನ
ಬಿಟ್ಟು ಹೋಗದಿರು ನನ್ನ
ಬಿಟ್ಟು ಹೋಗದಿರು ನನ್ನ

ಹುಡುಕುವೆ ನಿನಗಾಗಿ
ಹುಚ್ಚು ಪದಗಳನ್ನು
ಅರ್ಥೈಸಿಕೊಳ್ಳಬಲ್ಲೆ ಅವುಗಳನ್ನು ನೀನು.
ಮಾತಾಡುವೆ ನಾನಲ್ಲಿ:
ಜಗತ್ತೆರಡು ಬಾರಿ ನೋಡಿದ
ಪ್ರೇಮಿಗಳ ಕುರಿತು
ನಿನ್ನ ಸೌಂದರ್ಯವ ನೋಡದೇ
ಸತ್ತ ರಾಜನ ಕತೆ ಹೇಳುವೆ ನಿನಗೆ.

ಬಿಟ್ಟು ಹೋಗದಿರು ನನ್ನ
ಬಿಟ್ಟು ಹೋಗದಿರು ನನ್ನ
ಬಿಟ್ಟು ಹೋಗದಿರು ನನ್ನ
ಬಿಟ್ಟು ಹೋಗದಿರು ನನ್ನ

ಅನೇಕರು ಆಗಾಗ ನೋಡಿದ
ಪುರಾತನ ವಾಲ್ಕೆನೊವಿನ
ಚಾಚಿದ ಬೆಂಕಿ ನಾಲಿಗೆಗಳು-
ನೆಲವನ್ನು ನೆಕ್ಕಿ
ಒಂದೊಳ್ಳೆಯ ವೈಶಾಖದಲ್ಲಿ
ತುಂಬ ಗೋಧಿ ಕೊಟ್ಟಾವು.
ಆಗ ಹೊಳೆದೀತು ಆಕಾಶ
ಕಪ್ಪು-ಕೆಂಪುಗಳ ತನ್ನ
ಸೌಂದರ್ಯದಲ್ಲಿ.
ಮರುಳಾಗಿ-ಮದುವೆಯಾಗಿಬಿಡದಿರುದಿರು
ನೀನವುಗಳನ್ನು.

ಬಿಟ್ಟು ಹೋಗದಿರು ನನ್ನ
ಬಿಟ್ಟು ಹೋಗದಿರು ನನ್ನ
ಬಿಟ್ಟು ಹೋಗದಿರು ನನ್ನ
ಬಿಟ್ಟು ಹೋಗದಿರು ನನ್ನ
ಬಿಟ್ಟು ಹೋಗದಿರು ನನ್ನ

ಅಳಲಾರೆ ನಾನಿನ್ನು;
ಆಡಲಾರೆ ಮಾತು.
ಇರಲಿಷ್ಟ ನನಗೆ, ಅಡಗಿ ಕೂತು-
ನಿನ್ನ ನೋಡುತ್ತ
ನಿನ್ನರ್ತನ, ನಗುವ ಕಣ್ತುಂಬಿಕೊಳ್ಳುತ್ತ;
ನಿನಗೆ ಕಿವಿಯಾಗುತ್ತ-
ಮತ್ತೆ ಮತ್ತೆ ನಿನ್ನ
ಹಾಡಿಗೆ, ನಗುವಿಗೆ.
ಆಗಲು ಬಿಡು ನನ್ನ-
ನಿನ್ನ ಹೆಸರಿನ ನೆಳಲು
ನಿನ್ನ ಬೆರಳುಗಳ ನೆರಳು
ನಿನ್ನ ನಾಯಿಯ ನೆರಳು.

ಬಿಟ್ಟು ಹೋಗದಿರು ನನ್ನ
ಬಿಟ್ಟು ಹೋಗದಿರು ನನ್ನ
ಬಿಟ್ಟು ಹೋಗದಿರು ನನ್ನ
ಬಿಟ್ಟು ಹೋಗದಿರು ನನ್ನ

 

(ಕಲೆ: ರೂಪಶ್ರೀ ಕಲ್ಲಿಗನೂರ್)

About The Author

ಪ್ಯಾಪಿಲಾನ್

`ಪ್ಯಾಪಿಲಾನ್' ಎನ್ನುವುದು ಆಫ್ರಿಕಾ ಖಂಡದ ಆಗ್ನೇಯ ಕರಾವಳಿ ಮಡಗಾಸ್ಕರ್ ನಲ್ಲಿ ರುವ ತರುಣ ಕನ್ನಡಿಗರೊಬ್ಬರ ಕಾವ್ಯನಾಮ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ