Advertisement
ಕಮಲಾಕರ ಕಡವೆ ಅನುವಾದಿಸಿದ ಮೇಘರಾಜ ಮೇಶ್ರಮ್ ಅವರ ಮರಾಠಿ ಕವಿತೆ

ಕಮಲಾಕರ ಕಡವೆ ಅನುವಾದಿಸಿದ ಮೇಘರಾಜ ಮೇಶ್ರಮ್ ಅವರ ಮರಾಠಿ ಕವಿತೆ

ಇಷ್ಟು ನೊಂದಿರಲಿಲ್ಲ ನಾನೆಂದೆಂದೂ

ಹುತ್ತದಿಂದ ಹೊರಬಿದ್ದ ಹಾವುಗಳ ಹಿಂಡು ಬಿದ್ದಿವೆ ಬಾಗಿಲಲ್ಲಿ
ಹರಡಬಹುದು ವಿಷ ನರನರಗಳಲ್ಲಿ ಇನ್ನು ಯಾವುದೇ ಕ್ಷಣದಲ್ಲೂ
ನಾನು ನಿಟ್ಟಿಸಿ ನೋಡುತ್ತಿದ್ದೇನೆ ಜೊಲ್ಲು ಚೆಲ್ಲುತ್ತಿರುವ ಬಾಯಿಗಳತ್ತ
ಓಡಿಹೋಗಿ ಮೂಲೆಯಲ್ಲಿಟ್ಟಿದ್ದ ಕೋಲ ಕೈಯಲ್ಲಿ ಹಿಡಿಯಬೇಕು
ಮತ್ತು ಎದೆಯುಬ್ಬಿಸಿ ನಿಲ್ಲಬೇಕು – ಹೀಗೆ ಅನಿಸುವುದೇ ಇಲ್ಲ ಕೊಂಚವೂ
ಇಷ್ಟು ಹೆಪ್ಪುಗಟ್ಟಿರಲಿಲ್ಲ ನಾನೆಂದೆಂದೂ
ಇಷ್ಟು ನೊಂದಿರಲಿಲ್ಲ ನಾನೆಂದೆಂದೂ

ನಸುನಗುವ ಸುಂದರ ಮುಖವೊಂದು ಗರಗರ ಸುತ್ತುತ್ತಿದೆ ನನ್ನ ಸುತ್ತಮುತ್ತ
ನನ್ನ ದೃಷ್ಟಿ ನೆಟ್ಟಿದೆ ಕಿಟಕಿಯಾಚೆ ಬೆಳಕು ಕ್ಷೀಣಿಸಿದ ರಸ್ತೆಯ ಮೇಲೆ
ಅಂಗಳದಲ್ಲಿ ಬಿರಿದ ಹೂವಿನ ಸುವಾಸನೆಯನ್ನು ಭಾವಿಸುತ್ತಿಲ್ಲ ಮನ
ಎದುರು ತಿರುವಲ್ಲಿ ಹೂದುಂಬಿರುವ ಗುಲಮೋಹರ ಸೆಳೆಯುತ್ತಿಲ್ಲ ನನ್ನ
ನಿಸ್ತೇಜ ದೇಹವನ್ನು ಮುದುಡಿ ಎಸೆಯುತ್ತೇನೆ ಕುರ್ಚಿಯ ಮೇಲೆ
ಇಷ್ಟು ನಿರ್ಜೀವವಾಗಿರಲಿಲ್ಲ ನಾನೆಂದೆಂದೂ
ಇಷ್ಟು ನೊಂದಿರಲಿಲ್ಲ ನಾನೆಂದೆಂದೂ

ಮುಖಗಳೇ ಇರದ ಈ ಮನುಷ್ಯರು ಕಾಲು ಕಿತ್ತಿ ಪಲಾಯನ ಮಾಡುತ್ತಿದ್ದಾರೆ
ಗೊತ್ತಿಲ್ಲವೇ ಅವರಿಗೆ – ಅಲ್ಲಿಯೂ ಮಾರಣಹೋಮ ನಡೆಯುತ್ತಿದೆಯೆಂದು
ಹೊಟ್ಟೆಯ ಸುತ್ತಿಕೊಂಡಿರುವ ಮಹಾಮಾರಿಯ ಹೊತ್ತು ನಾನಿಲ್ಲಿ ಬಂದಿದ್ದೇನೆ
ಉಸಿರು ಕಟ್ಟುತ್ತಲಿದೆಯೀಗ, ಓಡಿ ಹೋಗುವುದಾದರೂ ಎಲ್ಲಿಗೆ?
ಮನೆಗೂ ಇಲ್ಲ, ಮಸಣಕೂ ಇಲ್ಲದ ಸ್ಥಿತಿ, ಮರೆಯಬೇಕೇನು ಬಾಳ್ವೆಯ ಮತ್ತಿನ್ನು?
ಇಷ್ಟು ತಿವಿತಕ್ಕೊಳಗಾಗಿರಲಿಲ್ಲ ನಾನೆಂದೆಂದೂ
ಇಷ್ಟು ನೊಂದಿರಲಿಲ್ಲ ನಾನೆಂದೆಂದೂ

**

ಮೇಘರಾಜ್ ಮೇಶ್ರಮ್ ಮಹಾರಾಷ್ಟ್ರದ ಗೊಂಡಿಯಾದ ಧೀವಾರಿ ಊರವರು. ಪ್ರಸಕ್ತ ನಾಗಪುರದಲ್ಲಿ ಮರಾಠಿ ದೈನಿಕ “ಸಕಾಳ್” ನಲ್ಲಿ ಉದ್ಯೋಗ. ಉದಯೋನ್ಮುಖ ಲೇಖಕರಾದ ಶ್ರೀ ಮೇಶ್ರಮ್ ಅವರ ಅನೇಕ ಕವಿತೆಗಳು ಹಿಂದಿ, ಇಂಗ್ಲೀಷ್ ಮತ್ತು ಉರ್ದು ಭಾಷೆಗಳಿಗೆ ಅನುವಾದವಾಗಿವೆ. ಅನಕ್ಷರಸ್ಥ ಬಡ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಈ ಕವಿ ತಮ್ಮ ಬರಹಗಳಲ್ಲಿ ದೀನದಲಿತರ ವೇದನೆ, ಸಿಟ್ಟು, ಅವರೆದುರಿಸುವ ದೌರ್ಜನ್ಯಗಳ ಕುರಿತು ಬರೆಯುತ್ತಾರೆ.

ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯುವ ಕಮಲಾಕರ ಕಡವೆ ಅನುವಾದಕರೂ ಹೌದು.
ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ), ಮುಗಿಯದ ಮಧ್ಯಾಹ್ನ (ಅಕ್ಷರ, 2010). ಮತ್ತು, “ಜಗದ ಜತೆ ಮಾತುಕತೆ” (ಅಕ್ಷರ, 2017) ಇವರ ಪ್ರಕಟಿತ ಕವನ ಸಂಕಲನಗಳು.
ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ “ನಾಮದೇವ್ ಧಸಾಲ್ ವಾಚಿಕೆ” ಪ್ರಕಟಿಸಿದ್ದಾರೆ

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ