Advertisement
ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಶಿವಪುರದ ಅನಿಲ ದುರಂತ”

ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಶಿವಪುರದ ಅನಿಲ ದುರಂತ”

ಸಿದ್ದಪ್ಪ ಮಾಸ್ತರರ ಮನೆಯ ದೃಶ್ಯ ಮಾತ್ರ ಸಂಪೂರ್ಣ ಬೇರೆಯಾಗಿತ್ತು.ಅಲ್ಲಿ ಯಾವುದೇ ಗಡಿಬಿಡಿಯಿರಲಿಲ್ಲ, ಹೊಗೆಯಿರಲಿಲ್ಲ, ಕೆಮ್ಮಿನ ಸದ್ದಿರಲಿಲ್ಲ. ಮಾಸ್ತರು ಬೆಳಿಗ್ಗೆ ಐದು ಗಂಟೆಗೆ ಎದ್ದು ತಣ್ಣೀರಿನ ಸ್ನಾನ ಮುಗಿಸಿ, ಶುಭ್ರವಾದ ಬಟ್ಟೆ ಧರಿಸಿ ಅಡುಗೆಮನೆಗೆ ಬರುತ್ತಿದ್ದರು. ಹಳೆಯ ಸ್ಟವ್‌ನ ನಾಬ್ ಅನ್ನು ಮೃದುವಾಗಿ ತಿರುಗಿಸುತ್ತಿದ್ದರು. ‘ಚಿಕ್’ ಎಂಬ ಸದ್ದಿನೊಂದಿಗೆ, ಅಲ್ಲಿ ನೀಲಿ ಜ್ವಾಲೆ ಮೃದುವಾಗಿ, ತಾಳಬದ್ಧವಾಗಿ ಉರಿಯಲು ಶುರುವಾಗುತ್ತಿತ್ತು. ಅವರ ಪತ್ನಿ ಶಾಂತಮ್ಮ, ಆ ನೀಲಿ ಜ್ವಾಲೆಯ ಮೇಲೆ ಹಬೆಯಾಡುವ ಮೃದುವಾದ ಇಡ್ಲಿ ಮತ್ತು ಪರಿಮಳ ಬೀರುವ ಸಾಂಬಾರ್ ಮಾಡುತ್ತಿದ್ದರು. ಕಾಫಿ ಕಪ್ ಹಿಡಿದು ಕಿಟಕಿ ಬಳಿ ನಿಂತ ಮಾಸ್ತರಿಗೆ ಇಡೀ ಹಳ್ಳಿ ಹೊಗೆಯಲ್ಲಿ ಮುಳುಗಿರುವುದು ಕಾಣುತ್ತಿತ್ತು.
ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಶಿವಪುರದ ಅನಿಲ ದುರಂತ” ನಿಮ್ಮ ಓದಿಗೆ

ಶಿವಪುರದ ಬೆಳಗು ಶುರುವಾಗುವುದೇ ಆಂಜನೇಯ ದೇವಸ್ಥಾನದ ಜಾಗಟೆ ಸದ್ದಿನೊಂದಿಗೆ. ಆ ದೇವಸ್ಥಾನದ ಮುಂದಿರುವ ಅಶ್ವತ್ಥಕಟ್ಟೆ ಕೇವಲ ಕಲ್ಲುಕಟ್ಟೆ, ಇಡೀ ಹಳ್ಳಿಯ ಆಗುಹೋಗುಗಳನ್ನು ಅಳೆದು ತೂಗುವ ನ್ಯಾಯಾಲಯ, ಹಾಗೆಯೇ ಹಸಿ ಬಿಸಿ ಸುದ್ದಿಗಳ ಚರ್ಚಾ ಕೇಂದ್ರ. ಅಲ್ಲಿ ಕೂತವರಿಗೆ ಮಾತನಾಡಲು ವಿಷಯಗಳ ಕೊರತೆ ಎಂದಿಗೂ ಇರುತ್ತಿರಲಿಲ್ಲ. ಮಳೆಯ ಬಗ್ಗೆ, ಬೆಳೆಯ ಬಗ್ಗೆ, ಪಕ್ಕದೂರಿನ ಜಾತ್ರೆಯ ಬಗ್ಗೆ ಶುರುವಾಗುವ ಮಾತು, ಸೂರ್ಯ ನೆತ್ತಿಗೇರುವ ಹೊತ್ತಿಗೆ ಸಿದ್ದಪ್ಪ ಮಾಸ್ತರರ ಮನೆಯ ಗೇಟಿನ ಬಳಿಯೇ ಬಂದು ನಿಂತು ಬಿಡುತ್ತಿತ್ತು.

ಸಿದ್ದಪ್ಪ ಮಾಸ್ತರು ಊರಿನ ಸರ್ಕಾರಿ ಶಾಲೆಯಲ್ಲಿ ಮೂರು ದಶಕಗಳ ಕಾಲ ಗಣಿತ ಮತ್ತು ವಿಜ್ಞಾನ ಪಾಠ ಮಾಡಿ ನಿವೃತ್ತರಾಗಿದ್ದವರು. ನಿವೃತ್ತಿಯಾದ ಮೇಲೆ ಮನುಷ್ಯ ಮನೆಯಲ್ಲಿ ಹಾಯಾಗಿ ಪತ್ರಿಕೆ ಓದಿಕೊಂಡು, ಮೊಮ್ಮಕ್ಕಳೊಂದಿಗೆ ಆಟವಾಡಿಕೊಂಡು ಇದ್ದಾರು ಎಂದು ಹಳ್ಳಿಯವರು ಅಂದುಕೊಂಡಿದ್ದರೆ, ಅದಕ್ಕೆ ತದ್ವಿರುದ್ಧವಾಗಿ ಮಾಸ್ತರರರು ನಿವೃತ್ತಿಯಾದ ಮಾರನೇ ತಿಂಗಳಿಗೆ ತಮ್ಮ ಮನೆಯ ಮುಂಭಾಗದ ಗೇಟಿಗೆ ಹೊಂದಿಕೊಂಡಂತೆ ಭೂಮಿಯನ್ನು ಅಗೆಯಲು ಶುರು ಮಾಡಿದ್ದರು. ಏನೋ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದ್ದರೂ, ಕಾಂಕ್ರೀಟ್‌ನ ದೊಡ್ಡ ಗುಮ್ಮಟದಂತಹ ರಚನೆ ಮೇಲೇಳುತ್ತಿದ್ದಂತೆ ಊರಿನವರ ಕುತೂಹಲ ತಾರಕಕ್ಕೇರಿತು. ಅವರು ದಿನಾ ಅದಕ್ಕೆ ಸೆಗಣಿ ಸುರಿಯುವ ವಿಷಯ ತಿಳಿದಾಗಲಂತೂ, ಕುತೂಹಲ ಅಸಹ್ಯಕ್ಕೆ ತಿರುಗಿ “ಮಾಸ್ತರಿಗೆ ವಯಸ್ಸಾದಂತೆ ಬುದ್ಧಿ ಮಂಕಾಗಿದೆ, ಮನೆಯ ಮುಂದೆ ಯಾರಾದರೂ ಸೆಗಣಿ ಗುಂಡಿ ತೋಡಿಸುತ್ತಾರಾ?” ಎಂದು ನಾಲಗೆ ಹರಿಬಿಡಲು ಶುರುವಿತ್ತರು.

***

ಒಂದು ಬೆಳಿಗ್ಗೆ, ಹಳ್ಳಿಯ ಚಳಿ ಇನ್ನೂ ಪೂರ್ತಿಯಾಗಿ ಬಿಟ್ಟಿರಲಿಲ್ಲ. ಪಂಚಾಯಿತಿ ಸದಸ್ಯ ಬಸಣ್ಣ ತನ್ನ ಹಳೆಯ ಬಜಾಜ್ ಸ್ಕೂಟರ್ ಅನ್ನು ಮಾಸ್ತರರ ಮನೆಯ ಗೇಟಿನ ಬಳಿ ತಂದು ನಿಲ್ಲಿಸಿದ. ಮಾಸ್ತರು ಮೈಗೆ ಹಳೆಯ, ಬಣ್ಣ ಮಾಸಿದ ಶರ್ಟ್ ಹಾಕಿಕೊಂಡು, ಮೊಣಕಾಲಿನವರೆಗೆ ಪಂಚೆ ಎತ್ತಿಕಟ್ಟಿ ನಿಂತಿದ್ದರು. ಅವರ ಕೈಯಲ್ಲಿ ಉದ್ದನೆಯ ಬಿದಿರಿನ ಕೋಲಿತ್ತು. ಕಾಂಕ್ರೀಟ್ ಗುಮ್ಮಟದ ರಂಧ್ರದ ಮೂಲಕ ಹಸಿ ಸೆಗಣಿ ಮತ್ತು ನೀರನ್ನು ಬೆರೆಸಿ ಒಳಗೆ ನೂಕುತ್ತಿದ್ದರು.  ಒಂದು ರೀತಿಯ ವೈಜ್ಞಾನಿಕ ಶ್ರದ್ಧೆಯಿತ್ತು ಅವರ ಮುಖದಲ್ಲಿ.

“ಏನ್ ಮಾಸ್ತರೆ, ಬೆಳಗ್ಗೆನೇ ಸಗಣಿ ಜೊತೆ ಆಟ ಆಡ್ತಿದ್ದೀರಾ? ಮೂವತ್ತು ವರ್ಷ ಗಣಿತ ಪಾಠ ಮಾಡಿದ ಕೈಗೆ, ಸೀಮೆಸುಣ್ಣ ಹಿಡಿದ ಕೈಗೆ ಈ ಗಬ್ಬು ಕೆಲಸ ಶೋಭೆ ತರುತ್ತಾ?” ಬಸಣ್ಣ ಹಂಗಿಸಿದ.

ಮಾಸ್ತರು ತಾಳ್ಮೆಯಿಂದಲೇ ತಲೆ ಎತ್ತಿ ನೋಡಿದರು. ಅವರ ದಪ್ಪನೆಯ ಕನ್ನಡಕದ ಗಾಜಿನ ಮೇಲೆ ಸಗಣಿಯ ಸಣ್ಣ ಸಣ್ಣ ಬಿಂದುಗಳು ತಿಲಕದಂತೆ ಬಿದ್ದಿತ್ತು. ಅವರು ಕೋಲನ್ನು ಪಕ್ಕಕ್ಕಿಟ್ಟು, ಕೈಯಲ್ಲಿದ್ದ ಹಳೆಯ ಬಟ್ಟೆಯಿಂದ ಕನ್ನಡಕ ಒರೆಸಿಕೊಂಡರು.

“ಬಸಣ್ಣ, ಇದು ಸಗಣಿಯಲ್ಲಪ್ಪ… ಇದು ಶಕ್ತಿ ಗೊತ್ತಾ?” ಎಂದರು ಅವರು ನಿಧಾನವಾಗಿ. ಅವರ ಧ್ವನಿಯಲ್ಲಿ ತರಗತಿಯಲ್ಲಿ ಪಾಠ ಮಾಡುವಷ್ಟೇ ಗಾಂಭೀರ್ಯವಿತ್ತು.

“ನಮ್ಮ ಹಸುಗಳು ಕೊಟ್ಟದ್ದನ್ನು ನಾವೇ ಗ್ಯಾಸ್ ಆಗಿ ಮಾಡಿಕೊಂಡು ಬಳಸೋ ವಿಧಾನ ಇದು. ನಮ್ಮ ಕಸ ನಮಗೆ ಇಂಧನವಾಗಬೇಕು. ಇದನ್ನ ಇಂಗ್ಲಿಷ್‌ನಲ್ಲಿ ಸಸ್ಟೈನಬಲ್ ಲಿವಿಂಗ್ ಅಂತಾರೆ. ನಮ್ಮ ಹಳ್ಳಿಗಳು ಹೀಗೆ ಸ್ವಾವಲಂಬಿ ಆಗಬೇಕು ಅನ್ನೋದು ನನ್ನ ಆಸೆ.”

ಬಸಣ್ಣ ಮುಖ ಸಿಂಡರಿಸಿಕೊಂಡು ಮೂಗು ಮುಚ್ಚಿಕೊಂಡ.

“ಸಸ್ಟೈನಬಲ್ಲೋ, ಗುಂಡ್ ಕಲ್ಲೋ… ಅದು ನಮಗೆ ಗೊತ್ತಾಗಲ್ಲ. ಆದ್ರೆ ಈ ದಾರಿಯಲ್ಲಿ ಹೋಗೋರು ಮೂಗು ಮುಚ್ಚಿಕೊಂಡು ಹೋಗ್ಬೇಕಾಗಿದೆ. ಊರಿನ ಮರ್ಯಾದೆ ಹೋಗ್ತಾ ಇದೆ.”

ಮಾಸ್ತರು ಸ್ವಲ್ಪ ನಕ್ಕರು. ಆ ನಗುವಿನಲ್ಲಿ ಬಸಣ್ಣನ ಅಜ್ಞಾನದ ಮೇಲಿನ ಕನಿಕರವಿತ್ತು.

“ನನ್ನ ಮನೆ, ನನ್ನ ಗೇಟು, ನನ್ನ ಜಾಗ. ಇಲ್ಲಿ ವಾಸನೆ ಬಂದರೆ ಮೊದಲು ತೊಂದರೆ ಆಗೋದು ಈ ಮನೆಯಲ್ಲಿರೋ ನನಗೆ ಮತ್ತು ನನ್ನ ಹೆಂಡತಿಗೆ. ನನಗೇ ಇಲ್ಲದ ತೊಂದರೆ ನಿಮಗ್ಯಾಕೆ ಬಸಣ್ಣ?”

ಈ ಮಾತು ನೇರವಾಗಿ ಬಸಣ್ಣನ   ಅಹಂಕಾರಕ್ಕೆ ಚುಚ್ಚಿತು.

ಇದು ಅವರಿಬ್ಬರ ನಡುವಿನ ಮೊದಲ ಮುಖಾಮುಖಿಯಾಗಿರಲಿಲ್ಲ. ಮೂರು ವರ್ಷಗಳ ಹಿಂದೆ ಪಂಚಾಯಿತಿಯ ಗ್ರಾಮ ಸಭೆಯಲ್ಲಿ, ಬಸಣ್ಣ ತಂದಿದ್ದ ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣದ ಯೋಜನೆಯನ್ನು ಮಾಸ್ತರು ಎಳೆಎಳೆಯಾಗಿ ಬಿಡಿಸಿಟ್ಟಿದ್ದರು. “ಇದರಲ್ಲಿ ವಿಜ್ಞಾನವೂ ಇಲ್ಲ, ಪ್ರಾಮಾಣಿಕತೆಯೂ ಇಲ್ಲ. ಕೇವಲ ಭ್ರಷ್ಟಾಚಾರದ ವಾಸನೆ ಇದೆ” ಎಂದು ಇಡೀ ಊರಿನ ಮುಂದೆ ಆ ಯೋಜನೆಯನ್ನು ತಿರಸ್ಕರಿಸಿದ್ದರು. ಅಂದು ನೆರೆದಿದ್ದವರೆಲ್ಲಾ ಮಾಸ್ತರರ ಮಾತಿಗೆ ತಲೆದೂಗಿದ್ದರು. ದುಡ್ಡು ಮಾಡಬೇಕೆಂದಿದ್ದ ಬಸಣ್ಣನಿಗೆ ಅಂದು ಆದ ಅವಮಾನದ ಗಾಯ ಇನ್ನೂ ಹಸಿಯಾಗಿಯೇ ಇತ್ತು. ಮಾಸ್ತರರ ಈ ‘ಸೆಗಣಿ ಗುಂಡಿ’ ಈಗ ಅವನಿಗೆ ಸೇಡು ತೀರಿಸಿಕೊಳ್ಳುವ ಅಸ್ತ್ರವಾಗಿ ಕಾಣತೊಡಗಿತು.

***

ಮಾಸ್ತರು ನಿವೃತ್ತರಾಗಿದ್ದರೂ, ತಾವು ಕೆಲಸ ಮಾಡಿದ ಶಾಲೆಯ ಮೇಲಿನ ಪ್ರೀತಿ, ಆ ಮಕ್ಕಳ ಮೇಲಿನ ಕಾಳಜಿ ಇನ್ನೂ ಕಡಿಮೆಯಾಗಿರಲಿಲ್ಲ. ತರಗತಿಯ ನಾಲ್ಕು ಗೋಡೆಗಳ ನಡುವೆ ಹೇಳಿಕೊಡುವ ಪಾಠಕ್ಕಿಂತ, ಕಣ್ಣೆದುರು ನಡೆಯುವ ಪ್ರಾಯೋಗಿಕ ವಿಜ್ಞಾನ ಮಕ್ಕಳ ತಲೆಯಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂಬುದು ಅವರ ದೃಢವಾದ ನಂಬಿಕೆ. ಹೀಗಾಗಿಯೇ ಒಂದು ದಿನ ಶಾಲೆಯ ವಿಜ್ಞಾನ ಶಿಕ್ಷಕ ರಂಗನಾಥ್‌ಗೆ ಹೇಳಿ, ಏಳನೇ ತರಗತಿಯ ಮಕ್ಕಳನ್ನು ತಮ್ಮ ಮನೆಗೆ ಕರೆಸಿಕೊಂಡರು. ಹತ್ತು-ಹನ್ನೆರಡು ವರ್ಷದ ಮುಗ್ಧ ಮಕ್ಕಳು ಸಾಲಾಗಿ ನಿಂತು ಆ ಕಪ್ಪು ಬಣ್ಣದ ದೊಡ್ಡ ಕಾಂಕ್ರೀಟ್ ಟ್ಯಾಂಕ್ ಅನ್ನು ಕುತೂಹಲದಿಂದ ನೋಡುತ್ತಿದ್ದರು.

“ವಿಜ್ಞಾನ ಅಂದ್ರೆ ಬರಿ ಪುಸ್ತಕದಲ್ಲಿರೋ ಚಿತ್ರಗಳಲ್ಲ ಮಕ್ಕಳೇ” ಎಂದು ಅವರು ಉತ್ಸಾಹದಿಂದ ವಿವರಿಸಲು ಶುರು ಮಾಡಿದರು. “ಅದು ನಮ್ಮ ಕಣ್ಣ ಮುಂದೆ ನಡೆಯೋ ಪ್ರಕ್ರಿಯೆ. ಅದನ್ನು ನಾವು ಅನುಭವಿಸಬೇಕು.”

ಮಕ್ಕಳು ತಲೆಯಾಡಿಸಿದರು.

“ಈ ದೊಡ್ಡ ಟ್ಯಾಂಕ್ ಒಳಗೆ ಗಾಳಿ ಇರೋದಿಲ್ಲ. ಇಲ್ಲಿ ಆಕ್ಸಿಜನ್ ಇಲ್ಲದ ವಾತಾವರಣದಲ್ಲಿ ಕೆಲಸ ಮಾಡುವ ಸೂಕ್ಷ್ಮಜೀವಿಗಳಿರುತ್ತವೆ. ಅವು ನಾವು ಹಾಕುವ ಸೆಗಣಿ, ತರಕಾರಿ ಸಿಪ್ಪೆಗಳನ್ನು ತಿನ್ನುತ್ತವೆ. ಆ ಪ್ರಕ್ರಿಯೆಯಲ್ಲಿ ಒಂದು ಗ್ಯಾಸ್ ಹೊರಹೊಮ್ಮುತ್ತದೆ. ಅದನ್ನೇ ಮೀಥೇನ್ ಅನ್ನುತ್ತಾರೆ. ಅದೇ ಗ್ಯಾಸ್ ಅಡುಗೆಗೆ ಉಪಯೋಗವಾಗುತ್ತದೆ.”ಮಾಸ್ತರು ಮಕ್ಕಳಿಗೆ ಪ್ರಾಯೋಗಿಕವಾಗಿ ತೋರಿಸಲು, ಹೊಸದಾಗಿ ಕಲೆಸಿದ ಸ್ಲರಿಯನ್ನು ಪೈಪಿನ ಮೂಲಕ ಒಳಗೆ ತಳ್ಳಲು ಹೋದರು. ಅದೇ ಸಮಯಕ್ಕೆ ಸರಿಯಾಗಿ, ಟ್ಯಾಂಕಿನ ಒಳಗಿನ ಒತ್ತಡ ಹೆಚ್ಚಾಗಿ, ಹಳೆಯ ಅನಿಲದ ಒಂದು ದೊಡ್ಡ ಗುಳ್ಳೆ ಹೊರಬಂದು ಬಡ್ ಎಂದು ಒಡೆಯಿತು. ಅದರಲ್ಲಿ ಹೈಡ್ರೋಜನ್ ಸಲ್ಫೈಡ್‌ನ ಅಂಶ ಹೆಚ್ಚಾಗಿತ್ತು. ಕೊಳೆತ ಮೊಟ್ಟೆಯಂತಹ ಭಾರೀ ದುರ್ವಾಸನೆ ಕ್ಷಣಾರ್ಧದಲ್ಲಿ ಗಾಳಿಯಲ್ಲಿ ಹರಡಿತು.

ಹಬ್ಬಿದ್ದೇ ಮಕ್ಕಳ ಮುಖಭಾವ ಬದಲಾಗಿ

“ಛೀ… ಗಬ್ಬು!” ಎಂಬಿತ್ಯಾದಿ ಮಾತುಗಳು ಹೊರಬಿದ್ದು, ಮಕ್ಕಳು ಮೂಗು ಮುಚ್ಚಿಕೊಂಡು ಕಿರುಚುತ್ತಾ ಹಿಂದಕ್ಕೆ ಓಡಿದರು.

ಅವರಲ್ಲೊಬ್ಬ ತುಂಟ ಹುಡುಗ ದೂರ ನಿಂತು “ಮಾಸ್ತರೆ, ಇದನ್ನ ತೋರಿಸೋ ಬದಲು ನಮ್ಮನ್ನ ಊರ ಹೊರಗಿನ ಚರಂಡಿ ಹತ್ರ ಕರ್ಕೊಂಡು ಹೋಗ್ಬೇಕಿತ್ತು! ಅಲ್ಲಿ ಇದಕ್ಕಿಂತ ಕಮ್ಮಿ ವಾಸನೆ ಇರುತ್ತೆ!” ಎಂದು ಕೂಗಿದ.

ರಂಗನಾಥ್ ಮೇಷ್ಟ್ರು ಮುಜುಗರದಿಂದ ಮಾಸ್ತರರ ಮುಖ ನೋಡಿದರು. ಮಾಸ್ತರು ಮೌನವಾಗಿ ನಿಂತಿದ್ದರು. ವಿಜ್ಞಾನದ ಹಿಂದಿನ ಪರಿಶ್ರಮವನ್ನು ಅರ್ಥಮಾಡಿಕೊಳ್ಳುವ ವಯಸ್ಸು ಆ ಮಕ್ಕಳದ್ದಲ್ಲ ಎಂಬುದು ಅವರಿಗೆ ತಿಳಿದಿತ್ತು. ಆದರೆ ವಿಷಯ ಅಲ್ಲಿಗೇ ನಿಲ್ಲಲಿಲ್ಲ.

ಅಂದು ಸಂಜೆ ಶಿವಪುರದ ಪ್ರತಿ ಮನೆಯಲ್ಲೂ, ಹೋಟೆಲ್ ಕಟ್ಟೆಗಳ ಮೇಲೂ ಮಾಸ್ತರರದ್ದೇ ಚರ್ಚೆ.

“ಗೊತ್ತೇನ್ರಿ, ಆ ರಿಟೈರ್ಡ್ ಮಾಸ್ತರಿಗೆ ತಲೆ ಕೆಟ್ಟಿದೆ. ನಮ್ಮ ಮಕ್ಕಳನ್ನ ಪಾಠ ಮಾಡ್ತೀನಿ ಅಂತ ಆ ಸಗಣಿ ಗುಂಡಿ ಹತ್ರ ಕರ್ಕೊಂಡು ಹೋಗಿದ್ರಂತೆ! ನಾಳೆಯಿಂದ ಆ ಮನೆ ಕಡೆ ಮಕ್ಕಳನ್ನ ಕಳಿಸಬೇಡಿ” ಎಂದು ಪೋಷಕರು ಬಗೆ ಬಗೆಯಾಗಿ ಮಾತನಾಡಿದರು.

ಅಂದಿನಿಂದ ಸಿದ್ದಪ್ಪ ಮಾಸ್ತರು ಆ ಊರಿನವರ ಪಾಲಿಗೆ ಕೇವಲ ಒಬ್ಬ ‘ವಿಚಿತ್ರ ಮನುಷ್ಯ’ನಾಗಿ, ಒಂದು ರೀತಿಯ ಅಸ್ಪೃಶ್ಯನಾಗಿ ಬದಲಾದರು.

***

ಶಿವಪುರದ ಜನರ ದೈನಂದಿನ ಬದುಕು ಹೀಗೇ ಸಾಗುತ್ತಿದ್ದಾಗ, ಜಗತ್ತಿನ ರಾಜಕೀಯ ನಕ್ಷೆಯಲ್ಲಿ ದೊಡ್ಡ ಪಲ್ಲಟವಾಯಿತು. ದೂರದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಭೀಕರ ಯುದ್ಧ ಶುರುವಾಯಿತು. ತೈಲ ಬಾವಿಗಳಿಗೆ ಬೆಂಕಿ ಬಿದ್ದ ಸುದ್ದಿ ಟೀವಿ ರೇಡಿಯೋಗಳಲ್ಲಿ ದಿನವಿಡೀ ಮೊಳಗುತ್ತಿತ್ತು. ಅದರ ನೇರ ಪರಿಣಾಮವಾಗಿ ಭಾರತಕ್ಕೆ ಬರುತ್ತಿದ್ದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಿತು.

ಗ್ಯಾಸ್ ಏಜೆನ್ಸಿಗಳ ಮುಂದೆ ದಿನಗಟ್ಟಲೆ ಕ್ಯೂ ನಿಂತರೂ ಸಿಲಿಂಡರ್ ಸಿಗುತ್ತಿರಲಿಲ್ಲ. ಒಂದು ತಿಂಗಳ ಕಳೆಯುವಷ್ಟರಲ್ಲಿ ಶಿವಪುರದ ಯಾವ ಮನೆಯಲ್ಲೂ ಗ್ಯಾಸ್ ಒಲೆ ಉರಿಯಲಿಲ್ಲ. ಅನಿವಾರ್ಯವಾಗಿ ಇಡೀ ಹಳ್ಳಿ ದಶಕಗಳ ಹಿಂದಿನ ಜೀವನಕ್ಕೆ ಮರಳಬೇಕಾಯಿತು. ಬೆಳಿಗ್ಗೆ ಐದು ಗಂಟೆಗೇ ಇಡೀ ಹಳ್ಳಿಯ ಮೇಲೆ ದಟ್ಟವಾದ, ಕಟುವಾಸನೆಯ ಹೊಗೆ ಆವರಿಸಿಕೊಳ್ಳುತ್ತಿತ್ತು. ಮಳೆಗಾಲ ಹತ್ತಿರವಾಗಿದ್ದರಿಂದ ಒಣ ಸೌದೆ ಸಿಗುತ್ತಿರಲಿಲ್ಲ. ಹಸಿ ಸೌದೆಯನ್ನು, ಕಸಕಡ್ಡಿಗಳನ್ನು ಒಲೆಗೆ ತುರುಕಿ ಬೆಂಕಿ ಹಚ್ಚಲು ಹೆಣ್ಣುಮಕ್ಕಳು ಪಡುತ್ತಿದ್ದ ಪಾಡು ಅಷ್ಟಿಷ್ಟಲ್ಲ. ಹೊಗೆಯಲ್ಲಿ ಕಣ್ಣೀರು ಸುರಿಸುತ್ತಾ, ಕೆಮ್ಮುತ್ತಾ, ಕಣ್ಣುಗಳು ಕೆಂಪಾಗಿ ಉರಿಯುತ್ತಿದ್ದರೂ ಹೊಟ್ಟೆ ತಣ್ಣಗಾಗಿಸಲು ಅಡುಗೆ ಮಾಡುವುದು ಅನಿವಾರ್ಯವಾಗಿತ್ತು.

ಆದರೆ ಸಿದ್ದಪ್ಪ ಮಾಸ್ತರರ ಮನೆಯ ದೃಶ್ಯ ಮಾತ್ರ ಸಂಪೂರ್ಣ ಬೇರೆಯಾಗಿತ್ತು.ಅಲ್ಲಿ ಯಾವುದೇ ಗಡಿಬಿಡಿಯಿರಲಿಲ್ಲ, ಹೊಗೆಯಿರಲಿಲ್ಲ, ಕೆಮ್ಮಿನ ಸದ್ದಿರಲಿಲ್ಲ. ಮಾಸ್ತರು ಬೆಳಿಗ್ಗೆ ಐದು ಗಂಟೆಗೆ ಎದ್ದು ತಣ್ಣೀರಿನ ಸ್ನಾನ ಮುಗಿಸಿ, ಶುಭ್ರವಾದ ಬಟ್ಟೆ ಧರಿಸಿ ಅಡುಗೆಮನೆಗೆ ಬರುತ್ತಿದ್ದರು. ಹಳೆಯ ಸ್ಟವ್‌ನ ನಾಬ್ ಅನ್ನು ಮೃದುವಾಗಿ ತಿರುಗಿಸುತ್ತಿದ್ದರು. ‘ಚಿಕ್’ ಎಂಬ ಸದ್ದಿನೊಂದಿಗೆ, ಅಲ್ಲಿ ನೀಲಿ ಜ್ವಾಲೆ ಮೃದುವಾಗಿ, ತಾಳಬದ್ಧವಾಗಿ ಉರಿಯಲು ಶುರುವಾಗುತ್ತಿತ್ತು. ಅವರ ಪತ್ನಿ ಶಾಂತಮ್ಮ, ಆ ನೀಲಿ ಜ್ವಾಲೆಯ ಮೇಲೆ ಹಬೆಯಾಡುವ ಮೃದುವಾದ ಇಡ್ಲಿ ಮತ್ತು ಪರಿಮಳ ಬೀರುವ ಸಾಂಬಾರ್ ಮಾಡುತ್ತಿದ್ದರು. ಕಾಫಿ ಕಪ್ ಹಿಡಿದು ಕಿಟಕಿ ಬಳಿ ನಿಂತ ಮಾಸ್ತರಿಗೆ ಇಡೀ ಹಳ್ಳಿ ಹೊಗೆಯಲ್ಲಿ ಮುಳುಗಿರುವುದು ಕಾಣುತ್ತಿತ್ತು. ಆ ಕ್ಷಣದಲ್ಲಿ ಮಾಸ್ತರಿಗೆ ವರ್ಷಗಳ ಹಿಂದೆ ತಾವೇ ನಿಂತು ತೋಡಿಸಿದ ಆ ಕಾಂಕ್ರೀಟ್ ಗುಂಡಿಯ ನೆನಪು ಬಂದಿತು. ಅದನ್ನು ಕಟ್ಟುವಾಗ ಊರಿನ ಜನ ಎಷ್ಟು ಹೀಯಾಳಿಸಿದ್ದರು, ಆ ವಾಸನೆಗೆ ಎಷ್ಟು ಜನ ಮುಖ ಸಿಂಡರಿಸಿದ್ದರು ಎಂಬುದು ನೆನಪಾಯಿತು.

“ವಿಜ್ಞಾನ ಮತ್ತು ಪ್ರಕೃತಿಯನ್ನು ಗೌರವಿಸಿದರೆ, ಆಪತ್ಕಾಲದಲ್ಲಿ ಅದು ನಮ್ಮ ಕೈ ಹಿಡಿಯುತ್ತದೆ. ಒಂದು ದಿನ ಇದರ ನಿಜವಾದ ಅರ್ಥ ನಮ್ಮ ಊರವರಿಗೆ ಗೊತ್ತಾಗುತ್ತೆ” ಎಂದು ಅವರು ಅಂದುಕೊಂಡಿದ್ದರು.

ಆ ದಿನ ಈಗ ಬಂದಿತ್ತು. ಮಾಸ್ತರು ಮಾತ್ರ ಯಾವುದೇ ಆತಂಕವಿಲ್ಲದೆ ಸ್ವಾವಲಂಬಿಯಾಗಿ ಬದುಕುತ್ತಿದ್ದರು.

ಆದರೆ, ಮನುಷ್ಯನ ಮನಸ್ಸು ಬಹಳ ವಿಚಿತ್ರವಾದದ್ದು. ತನ್ನ ಕಷ್ಟಕ್ಕೆ ಪರಿಹಾರ ಹುಡುಕುವುದಕ್ಕಿಂತ, ಪಕ್ಕದ ಮನೆಯವನು ಸುಖವಾಗಿದ್ದಾನೆ ಎಂಬುದೇ ಅವನಿಗೆ ದೊಡ್ಡ ಸಂಕಟವಾಗುತ್ತದೆ. 

ಗ್ಯಾಸ್ ಅಭಾವ ತೀವ್ರವಾದಾಗ, ಸರ್ಕಾರದ ಆದೇಶದ ಮೇರೆಗೆ ಗ್ರಾಮ ಪಂಚಾಯಿತಿಯಿಂದಲೇ ಟ್ರ್ಯಾಕ್ಟರ್‌ಗಳಲ್ಲಿ ಸೌದೆ ತಂದು ಮನೆ ಮನೆಗೆ ಹಂಚುವ ವ್ಯವಸ್ಥೆಯಾಯಿತು. ಆದರೆ ಆ ಸೌದೆ ಇಡೀ ಊರಿಗೆ ಸಾಕಾಗುತ್ತಿರಲಿಲ್ಲ. ಒಂದು ಹೊರೆ ಸೌದೆಗಾಗಿ ನೆರೆಹೊರೆಯವರ ನಡುವೆ, ಅಕ್ಕತಂಗಿಯರ ನಡುವೆ ಬೀದಿ ಜಗಳ, ಕಿತ್ತಾಟಗಳು ಶುರುವಾದವು. ಹಳ್ಳಿಯ ನೆಮ್ಮದಿ ಸಂಪೂರ್ಣವಾಗಿ ಹಾಳಾಗಿತ್ತು.

ಸರಿಯಾಗಿ ಅದೇ ಸಮಯದಲ್ಲಿ ಪಂಚಾಯಿತಿ ಆವರಣದಲ್ಲಿ ಬಸಣ್ಣ ಒಂದು ಅನೌಪಚಾರಿಕ ಸಭೆ ಕರೆದ. ಸೌದೆ ಸಿಗದೆ ಹೈರಾಣಾಗಿದ್ದ ಊರಿನ ಜನ ಅಲ್ಲಿ ಸೇರಿದ್ದರು. ಎಲ್ಲರ ಕಣ್ಣುಗಳೂ ಹೊಗೆಯಿಂದ ಕೆಂಪಾಗಿದ್ದವು. ಬಸಣ್ಣ ಕಟ್ಟೆಯ ಮೇಲೆ ನಿಂತು ಗಂಟಲು ಸರಿಪಡಿಸಿಕೊಂಡ.

“ನೋಡಿ, ನಾವೆಲ್ಲಾ ಇಲ್ಲಿ ಸೌದೆಗಾಗಿ, ಹೊಗೆಯಲ್ಲಿ ಉಸಿರು ಕಟ್ಟಿಕೊಂಡು ಸಾಯ್ತಾ ಇದ್ದೀವಿ. ಆದರೆ ಆ ಸಿದ್ದಪ್ಪ ಮಾಸ್ತರು ಮಾತ್ರ ತಮ್ಮ ಮನೆಯಲ್ಲಿ ರಾಜರ ಹಾಗೆ ಅಡುಗೆ ಮಾಡಿಕೊಂಡು ತಿಂತಾ ಇದ್ದಾರೆ” ಎಂದು ಮಾತಿಗೆ ಕಿಚ್ಚು ಹಚ್ಚಿದ.

ಜನರ ಗುಸುಗುಸು ಶುರುವಾಯಿತು.

“ಅಷ್ಟು ಮಾತ್ರವಲ್ಲ” ಬಸಣ್ಣ ಧ್ವನಿ ಏರಿಸಿದ. “ನಿಮಗೆಲ್ಲರಿಗೂ ಈಗ ಕೆಮ್ಮು, ಕಫ ಬರ್ತಾ ಇದೆ ಅಲ್ವಾ? ಅದು ಕೇವಲ ಸೌದೆ ಹೊಗೆಯಿಂದ ಅಲ್ಲ. ಮಾಸ್ತರರ ಮನೆಯ ಆ ಗಬ್ಬು ಗ್ಯಾಸ್ ಪ್ಲಾಂಟ್‌ನಿಂದ ಊರಿಗೆಲ್ಲಾ ರೋಗ ಹರಡ್ತಾ ಇದೆ. ಆ ಗುಂಡಿಯಲ್ಲಿರೋ ಕೆಟ್ಟ ಬ್ಯಾಕ್ಟೀರಿಯಾಗಳು ಗಾಳಿಯಲ್ಲಿ ಸೇರಿಕೊಂಡು ನಮಗೆಲ್ಲಾ ಉಸಿರಾಟದ ತೊಂದರೆ ಮಾಡ್ತಿವೆ. ಅದನ್ನ ಮುಚ್ಚಿಸದೇ ಹೋದರೆ ನಮ್ಮ ಊರಿಗೆ ಉಳಿಗಾಲವಿಲ್ಲ.”

ಆಪತ್ಕಾಲದಲ್ಲಿ ಕಷ್ಟದಲ್ಲಿರುವ ಜನರು ತಾರ್ಕಿಕವಾಗಿ ಯೋಚಿಸುವ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ. ಅವರಿಗೆ ತಮ್ಮ ಸಂಕಟಕ್ಕೆ ಕಾರಣವಾದ ಒಂದು ‘ಶತ್ರು’ ಬೇಕಿತ್ತು. ಬಸಣ್ಣ ಆ ಶತ್ರುವನ್ನು ಸೃಷ್ಟಿಸಿದ್ದ.

ಅವರಿಗೆ ವಾಸ್ತವದಲ್ಲಿ ಆ ಘಟಕದಿಂದ ಯಾವುದೇ ರೋಗ ಬಂದಿಲ್ಲ ಎಂಬುದು ಗೊತ್ತಿದ್ದರೂ, ಮಾಸ್ತರರ ನಿರಾಳವಾದ ಸುಖವನ್ನು ಕಂಡು ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ತಾವೆಲ್ಲಾ ಹೊಗೆಯಲ್ಲಿ ಬೆಂದು ಕಣ್ಣೀರು ಹಾಕುವಾಗ, ಆ ಮುದುಕ ಮಾತ್ರ ಅಷ್ಟು ಹಾಯಾಗಿರುವುದು ಅವರಲ್ಲಿನ ಒಂದು ಬಗೆಯ ಮೃಗೀಯ ಅಸೂಯೆಯನ್ನು ಬಡಿದೆಬ್ಬಿಸಿತ್ತು.

“ಹೌದು, ಬಸಣ್ಣ ಹೇಳೋದು ಸರಿ. ಆ ಗುಂಡಿ ವಾಸನೆಗೆ ಊರಿನ ಗಾಳಿಯೆಲ್ಲಾ ವಿಷವಾಗಿದೆ. ಅವರು ಮಾತ್ರ ಮಜಾ ಮಾಡ್ತಿದ್ದಾರೆ, ನಾವು ಸಾಯ್ತಾ ಇದೀವಿ!” ಎಂದು ಗುಂಪಿನಲ್ಲಿದ್ದವರು ಕಿರುಚಿದರು. ಜನರ ಅಸೂಯೆ ಈಗ ಒಂದು ಅಪಾಯಕಾರಿ ಆಕ್ರೋಶವಾಗಿ ಬದಲಾಗಿತ್ತು.

***

ಅದು ಅಮಾವಾಸ್ಯೆಯ ಕಗ್ಗತ್ತಲ ರಾತ್ರಿ. ಆಕಾಶದಲ್ಲಿ ಒಂದು ಚುಕ್ಕಿಯೂ ಇರಲಿಲ್ಲ. ಇಡೀ ಶಿವಪುರ ಗಾಢ ನಿದ್ರೆಗೆ ಜಾರುತ್ತಿರುವಾಗ, ಕತ್ತಲನ್ನು ಸೀಳಿಕೊಂಡು ಗುಂಪೊಂದು ಹೆಜ್ಜೆ ಹಾಕಲಾರಂಭಿಸಿತು. ಬಸಣ್ಣನ ನೇತೃತ್ವದಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನ ಮಾಸ್ತರರ ಮನೆಯ ಗೇಟಿನ ಮುಂದೆ ಸೇರಿದರು. ಅವರ ಕೈಗಳಲ್ಲಿ ಪಿಕಾಸಿ, ಸಲಿಕೆ, ಮತ್ತು ದೊಣ್ಣೆಗಳಿದ್ದವು. ಯಾರಿಗೂ ಮಾತನಾಡುವ ಇರಾದೆ ಅಥವಾ ತಾಳ್ಮೆ ಇರಲಿಲ್ಲ. ಅವರ ಮೌನವೇ ಅವರ ದುರುದ್ದೇಶದ ತೀವ್ರತೆಯನ್ನು ಸಾರುತ್ತಿತ್ತು. ಗುದ್ದಲಿಯ ಬಲವಾದ ಮೊದಲ ಏಟು ಕಾಂಕ್ರೀಟ್ ಗುಮ್ಮಟಕ್ಕೆ ಬಿತ್ತು.ಠಕ್… ಠಕ್… ಆ ನಿಶ್ಯಬ್ದ ರಾತ್ರಿಯಲ್ಲಿ ಆ ಸದ್ದು ಸಿಡಿಲಿನಂತೆ ಕೇಳಿಸಿತು. ಮಾಸ್ತರು ಗಾಬರಿಯಿಂದ ಹಾಸಿಗೆಯಿಂದೆದ್ದು, ಕಣ್ಣುಜ್ಜಿಕೊಳ್ಳುತ್ತಾ ಹೊರಬಂದರು.

“ಯಾರದು? ಏನಿದು ಅನ್ಯಾಯ? ಮಧ್ಯರಾತ್ರಿಯಲ್ಲಿ ನನ್ನ ಜಾಗಕ್ಕೆ ಯಾಕೆ ನುಗ್ಗಿದ್ದೀರಾ?” ಎಂದು ನಡುಗುವ ಧ್ವನಿಯಲ್ಲಿ ಕೂಗಿದರು.

ಬಸಣ್ಣ ಗುಂಪಿನಿಂದ ಮುಂದೆ ಬಂದ. ಕತ್ತಲಲ್ಲೂ ಅವನ ಕಣ್ಣುಗಳು ದ್ವೇಷವನ್ನು ಕಾರುತ್ತಿತ್ತು.

“ನಿಮ್ಮ ಈ ಗಬ್ಬು ಗ್ಯಾಸ್‌ನಿಂದ ಊರಿಗೆ ತೊಂದರೆ ಆಗ್ತಿದೆ ಮಾಸ್ತರೆ. ಇಡೀ ಊರು ಕೆಮ್ಮಿ ಕೆಮ್ಮಿ ಸಾಯ್ತಾ ಇದೆ. ಇದನ್ನ ಇವತ್ತೇ ಮುಚ್ಚಬೇಕು, ಅಷ್ಟೇ.”

ಮಾಸ್ತರು ಆ ಕಾಂಕ್ರೀಟ್ ಗುಮ್ಮಟಕ್ಕೆ ಅಡ್ಡಲಾಗಿ ನಿಂತು ಬೇಡಿಕೊಂಡರು.

“ಬಸಣ್ಣ, ಇದು ನನ್ನ ಸ್ವತ್ತು. ಇದರಲ್ಲಿ ಯಾವ ರೋಗವೂ ಇಲ್ಲಪ್ಪಾ… ನಂಬಿ. ಬೇಕಾದರೆ ನಾಳೆಯಿಂದ ಇದೇ ಗ್ಯಾಸ್ ಲೈನ್ ಅನ್ನು ನಿಮ್ಮ ಮನೆಗಳಿಗೂ ಕೊಡುತ್ತೇನೆ. ಇದು ಇಡೀ ಊರಿಗೆ ಉಪಯೋಗ ಆಗಬಹುದು… ದಯವಿಟ್ಟು ಒಡೆಯಬೇಡಿ.”

ಮಾಸ್ತರರ ಧ್ವನಿಯಲ್ಲಿ ಜೀವಮಾನದ ಸಾಧನೆಯನ್ನು ಉಳಿಸಿಕೊಳ್ಳುವ ತವಕವಿತ್ತು. ಆದರೆ ಅಲ್ಲಿ ಸೇರಿದವರ ಕಿವಿಗಳು ಅಸೂಯೆಯಿಂದ ಕಿವುಡಾಗಿದ್ದವು. ಗುಂಪಿನಲ್ಲಿದ್ದ ಯುವಕನೊಬ್ಬ ಮಾಸ್ತರನ್ನು ಪಕ್ಕಕ್ಕೆ ತಳ್ಳಿದ. ಮತ್ತೊಬ್ಬ ತನ್ನ ಕೈಲಿದ್ದ ಭಾರವಾದ ಪಿಕಾಸಿಯಿಂದ ಗುಮ್ಮಟದ ಮೇಲ್ಭಾಗಕ್ಕೆ ಬಲವಾಗಿ ಏಟು ಹಾಕಿದ.

ಸಿಮೆಂಟ್ ಪದರ ಬಿರುಕು ಬಿಟ್ಟಿತು. ಇನ್ನೊಂದು ಏಟು… ಮಗದೊಂದು ಏಟು…

ಹಿಸ್ಸ್ಸ್… ಒಂದು ದೀರ್ಘವಾದ, ಯಾತನಾಮಯವಾದ ಶಬ್ದ.

ಬಹಳ ವರ್ಷಗಳಿಂದ ಆ ಕತ್ತಲ ಗುಂಡಿಯಲ್ಲಿ ಶೇಖರಣೆಯಾಗಿದ್ದ, ಉರಿಯಲು ಕಾಯುತ್ತಿದ್ದ ಅನಿಲ ಒಮ್ಮೆಗೆ ಹೊರಬಂತು. ಅದು ಕೇವಲ ಮೀಥೇನ್ ಅನಿಲವಾಗಿರಲಿಲ್ಲ. ಅದು ಒಬ್ಬ ಪ್ರಾಮಾಣಿಕ ಮನುಷ್ಯನ, ಒಬ್ಬ ವಿಜ್ಞಾನ ಶಿಕ್ಷಕನ ಪ್ರಗತಿಪರ ಚಿಂತನೆಯ ಕೊನೆಯ ಉಸಿರಾಗಿತ್ತು. ಕಟುವಾದ ವಾಸನೆ ಗಾಳಿಯಲ್ಲಿ ಹರಡುತ್ತಿದ್ದಂತೆ ಜನರು ಮೂಗು ಮುಚ್ಚಿಕೊಂಡು, ಕೆಮ್ಮುತ್ತಾ, ತಮ್ಮ ಕೆಲಸವಾಯಿತೆಂದು ಅಲ್ಲಿಂದ ಓಡಿ ಹೋದರು.

ಮಾಸ್ತರು ಒಡೆದ ಆ ಗುಮ್ಮಟದ ಬಳಿ ಮಂಡಿಯೂರಿ ಕುಳಿತರು. ಪೈಪಿನಿಂದ ಹೊರಬರುತ್ತಿದ್ದ ಸಣ್ಣ ‘ಹಿಸ್’ ಸದ್ದು ಮಾತ್ರ ಅವರ ಕಿವಿಗೆ ಕೇಳುತ್ತಿತ್ತು.

***

ಮರುದಿನ ಬೆಳಿಗ್ಗೆ. ಶಿವಪುರದಲ್ಲಿ ಎಂದಿನಂತೆ ದಟ್ಟವಾದ ಹೊಗೆಯ ವಾತಾವರಣ. ಆದರೆ ನಿನ್ನೆಗಿಂತ ಇಂದು ಆ ಹೊಗೆಯಲ್ಲಿ ಒಂದು ವಿಕೃತವಾದ ತೃಪ್ತಿ ಇತ್ತು. ಬೆಳಗ್ಗೆ ಎಂಟು ಗಂಟೆಗೆ ಸರಿಯಾಗಿ ಪಂಚಾಯಿತಿಯ ಸೌದೆ ತುಂಬಿದ ಟ್ರ್ಯಾಕ್ಟರ್ ಮಾಸ್ತರರ ಮನೆಯ ಮುಂದೆ ಬಂದು ನಿಂತಿತು.

ಟ್ರ್ಯಾಕ್ಟರ್ ಮೇಲಿದ್ದ ನೌಕರ, “ಮಾಸ್ತರೆ, ಇನ್ನು ಮುಂದೆ ನಿಮಗೂ ಇದು ಅನಿವಾರ್ಯ ನೋಡಿ” ಎಂದು ಹೇಳುತ್ತಾ ಎರಡು ಹೊರೆ ಹಸಿ ಸೌದೆಯ ಕಟ್ಟನ್ನು ಮೇಲಿನಿಂದ ಗೇಟಿನ ಬಳಿಗೆ ಎಸೆದ. ಮಾಸ್ತರು ಮನೆಯಿಂದ ನಿಧಾನವಾಗಿ ಹೊರಬಂದರು. ಅವರ ಮುಖದಲ್ಲಿ ಯಾವುದೇ ಭಾವನೆಗಳಿರಲಿಲ್ಲ. ಕಣ್ಣುಗಳು ಅತ್ತು ಅತ್ತು ಕೆಂಪಾಗಿದ್ದವು. ಮೌನವಾಗಿ ಗೇಟ್ ತೆಗೆದು, ಆ ಒದ್ದೆಯಾದ ಸೌದೆಯನ್ನು ಎತ್ತಿಕೊಳ್ಳಲು ಕೆಳಕ್ಕೆ ಬಗ್ಗಿದರು. ಅರವತ್ತರ ಹರೆಯದ ಆ ಬೆನ್ನು ನಿನ್ನೆಗಿಂತ ಇಂದು ಇನ್ನಷ್ಟು ಬಾಗಿದಂತೆ ಕಾಣುತ್ತಿತ್ತು. ರಸ್ತೆಯ ಆಚೆ ಬದಿಯ ಟೀ ಅಂಗಡಿಯ ಬಳಿ ಬಸಣ್ಣ ಮತ್ತು ಇತರರು ನಿಂತಿದ್ದರು. ಮಾಸ್ತರು ಸೌದೆ ಎತ್ತಿಕೊಳ್ಳಲು ಬಗ್ಗಿದ್ದನ್ನು ನೋಡಿ, ಅವರ ಗುಂಪಿನಿಂದ ಕಿಸಕ್ಕನೆ ನಗುವೊಂದು ತೇಲಿಬಂತು. ಆ ನಗುವಿನಲ್ಲಿ ಜಯವಿರಲಿಲ್ಲ. ತಮಗಿಂತ ಬುದ್ಧಿವಂತನೊಬ್ಬನನ್ನು ಎಳೆದು ತಂದು ತಮ್ಮದೇ ಅಜ್ಞಾನದ ಗುಂಡಿಗೆ ಹಾಕಿದೆವು ಎನ್ನುವ ವಿಕೃತ ಖುಷಿಯಿತ್ತು. ಬರಿ ಅಸೂಯೆಯ ಕಟು ಸತ್ಯ ಆ ನಗುವಿನಲ್ಲಿ ಅಡಗಿತ್ತು. ಮಾಸ್ತರು ತಲೆ ಎತ್ತಿ ಯಾರನ್ನೂ ನೋಡಲಿಲ್ಲ. ಸೌದೆಯ ಹೊರೆಯನ್ನು ಎಳೆದುಕೊಂಡು ಮನೆಯೊಳಗೆ ನಡೆದರು.

ಆ ದಿನ ಸಂಜೆ, ಮೊದಲ ಬಾರಿಗೆ ಸಿದ್ದಪ್ಪ ಮಾಸ್ತರರ ಮನೆಯ ಹಿಂಬದಿಯ ಚಿಮಣಿಯಿಂದಲೂ ದಟ್ಟವಾದ, ಕಪ್ಪು ಹೊಗೆ ಹೊರಬರಲು ಶುರುವಾಯಿತು. ಅದು ಗಾಳಿಯಲ್ಲಿ ಸೇರಿ ಇಡೀ ಹಳ್ಳಿಯ ಹೊಗೆಯೊಂದಿಗೆ ಒಂದಾಯಿತು.

ಶಿವಪುರದ ಆ ಹಳ್ಳಿ, ಅಲ್ಲಿನ ಅಜ್ಞಾನ ಆ ದಿನ ಗೆದ್ದಿತ್ತು. ಆದರೆ ಅದರೊಂದಿಗೆ, ನಾಳೆಯನ್ನು ಬೆಳಗಬಲ್ಲ ಒಂದು ಅತ್ಯುತ್ತಮ ಯೋಚನೆಯೂ ಉಸಿರುಗಟ್ಟಿ ಸತ್ತಿತ್ತು.

About The Author

ಕಾರ್ತಿಕ್ ಕೃಷ್ಣ

ಕಾರ್ತಿಕ್ ಕೃಷ್ಣ, ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್. ಹವ್ಯಾಸಿ ಬರಹಗಾರ. ದಿನಪತ್ರಿಕೆಗಳಲ್ಲಿ ಇವರ ಹಲವು ಲಲಿತ ಪ್ರಬಂಧಗಳು ಹಾಗೂ ವಿಜ್ಞಾನ ಬರಹಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ