ಏನೇ ಆದರೂ ಇದು ತುಂಬ ಅಸಹಜ ಅಂತನ್ನಿಸಿತ್ತು. ತನ್ನ ವಯಸ್ಸಿನ ಸ್ನೇಹಿತರೇ ಇಲ್ಲದ, ಹೆಚ್ಚು ಹೆಚ್ಚು ಮಾನವೀಯಗೊಳಿಸುವ ಕಲೆಗಳ ಪರಿಚಯವಿಲ್ಲದ, ವಯಸ್ಸಿಗೆ ತಕ್ಕ ಜೀವನೋತ್ಸಾಹ ಇಲ್ಲದ, ಮುದುಕಿಯರ ಜೊತೆ ತೀರ್ಥಯಾತ್ರೆಗೆ ಹೋಗುವ, ಉಳಿದಂತೆ ಜನಸಂಪರ್ಕ ತೀರಾ ಕಮ್ಮಿಯಿರುವ ಬದುಕಿನ ಶೈಲಿಯ ಪರಿಣಾಮವೇ? ಮುಗುಳ್ನಗೆ ಇಲ್ಲದ ಮುಖ, ಒಮ್ಮೆಯೂ ನಿರ್ಭಿಡೆಯಿಂದ ನಗಲು ಸಾಧ್ಯವಾಗದ ಮನಸ್ಸು ಯಾವ ಬಗೆಯದ್ದಿರಬಹುದು
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂರನೆಯ ಬರಹ
ಆಶ್ರಮವೂ ಸಮಾಜದ ಒಂದು ಮುಖ ತಾನೇ? ನನ್ನ ಪಾಠ ಕೇಳಲು ಬಂದವರೆಲ್ಲ ನಿಜವಾದ ಅರ್ಥದಲ್ಲಿ ವಿದ್ಯಾರ್ಥಿಗಳಾಗಿರಲಿಲ್ಲ. ಆಶ್ರಮಕ್ಕೆ ಬರುವವರೆಲ್ಲ ಭಕ್ತರಲ್ಲ ಎಂದು ಈ ನಾಲ್ಕು ವರ್ಷಗಳಲ್ಲಿ ಅರ್ಥವಾಗಿದೆ.
ಇರಲಿ, ಅದಕ್ಕೆ ಏನೋ, ಕಣ್ಣು ತೆರೆದಿದ್ದ ಗಳಿಗೆಗಳಲ್ಲಿ ಮಾನವಶಾಸ್ತ್ರೀಯ ಆಸಕ್ತಿಗೆ ಸುತ್ತಲಿನ ಮಂದಿಯನ್ನು ಗಮನಿಸುತ್ತಿರುತ್ತೇನೆ. ಅದು ಬೇರೆಯವರ ಬಗ್ಗೆ ಷರಾ ಬರೆಯುವ ಉದ್ಧಟತನವಲ್ಲ. ನಾನು ಸಾಹಿತ್ಯದ ವಿದ್ಯಾರ್ಥಿಯಾದ್ದರಿಂದ ಅದು ನನಗಿತ್ತ ಬದುಕಿನ ಬಗೆಗಿನ ಆಸಕ್ತಿ ಅಷ್ಟೆ.
ನನ್ನ ಕುಟುಂಬದ ಮುಂದಿನ ಪೀಳಿಗೆಯ ಹೆಚ್ಚು ಕಮ್ಮಿ ಎಲ್ಲರೂ ಸೈಬರ್ ಕೂಲಿಗಳು. ಕ್ಯಾಂಪಸ್ ಇಂಟರ್ವ್ಯೂ, ವರ್ಕ್ ಫ್ರಮ್ ಹೋಮ್ ಇತ್ಯಾದಿ ಬೇಡದಿದ್ದರೂ ಕೇಳಿ ಬರುವ ಸರಕು.
ನನ್ನ ತಂಗಿಯ ಮಗಳು ಬುದ್ಧಿವಂತೆ. ಒಳ್ಳೆಯ ಪಾಠಗಾತಿ (ನನಗೆ ಶಿಕ್ಷಕಿ ಎಂಬ ಪದವೇ ಇಷ್ಟವಿಲ್ಲ. ಶಿಕ್ಷಿಸಿಯೇ ಪಾಠ ಕಲಿಸಬೇಕೆ?). ಅವಳು ತನ್ನ ಬಿ ಕಾಂ ಮುಗಿಸಿದ ಮೇಲೆ ‘ಗಂಗೋತ್ರಿಯಲ್ಲಿ ಎಂ ಕಾಮ್ ಮಾಡು. ಅಧ್ಯಾಪಕ ಹುದ್ದೆಗಳು ತುಂಬ ಖಾಲಿ ಇವೆ. ಎಲ್ಲ ಕಾಲೇಜುಗಳೂ ಈಗ ಕಾಮರ್ಸ್ ಕಾಲೇಜುಗಳಾಗಿ ಬದಲಾಗುತ್ತಿರುವ ದುಸ್ಥಿತಿಯಲ್ಲಿ ನಾವಿದ್ದೇವೆ. ಅಲ್ಲಿ ಕಲೆ ವಿಜ್ಞಾನಗಳು ಮಾಯವೇ ಆಗುತ್ತಿವೆ,ʼ ಎಂದು ಹೇಳಿದ್ದೆ.
‘ನಾನು MCA ಮಾಡಿ ಮಲ್ಟಿನ್ಯಾಷನಲ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರುತ್ತೇನೆ,’ ಎಂದು ಠೇಂಕರಿಸಿ ಯಾವುದೋ ಖಾಸಗಿ ವಿಶ್ವವಿದ್ಯಾಲಯದಲ್ಲಿ ಲಕ್ಷಗಟ್ಟಲೆ ಫೀಸ್ ತೆತ್ತು ಸಾಲದಲ್ಲಿ ಸಿಕ್ಕಿಬಿದ್ದಿದ್ದಳು.
ನಮ್ಮದು ಮೂಲದಲ್ಲಿ ದಾಸ್ಯ ಬುದ್ಧಿಯೇ. ಅದಕ್ಕೆ ಅಷ್ಟೊಂದು ಮಂದಿ ಹೊರಗಿನಿಂದ ಬಂದು ನಮ್ಮನ್ನು ಆಳಿದರು ಎಂಬ ಮಾತು ಆಗಾಗ ನೆನಪಿಗೆ ಬರುತ್ತದೆ. ಸ್ವಾಮಿ ವಿವೇಕಾನಂದ ಗುಡುಗಿದ್ದು ಈ ಮನೋಭಾವದ ವಿರುದ್ಧವೇ.
ಈ ರಾಷ್ಟ್ರವನ್ನು ಸ್ವರಾಜ್ಯವಾಗಿಸಲು ಜೀವವನ್ನೇ ತೆತ್ತವರ ಶ್ರಮ ನಿಮಗೆ ಗೊತ್ತಿಲ್ಲ. ಇತಿಹಾಸವನ್ನು ಓದಿಕೊಂಡರೆ ತಾನೇ? ಈಗ ಸ್ವಾತಂತ್ರ್ಯಕ್ಕೆ, ಸ್ವರಾಜ್ಯಕ್ಕೆ ಯಾವತ್ತೂ ಶ್ರಮಿಸದ ಕೋಮುವಾದಿಗಳು ಅಧಿಕಾರದ ಗದ್ದಿಗೆ ಹಿಡಿಯಲೆಂದೇ ವಾಟ್ಸಾಪಿನಲ್ಲಿ ನಿರಂತರ ಹರಿಯಬಿಡುವ ದ್ವೇಷವನ್ನೇ ಇತಿಹಾಸ ಅಂತಂದುಕೊಂಡಿದೀರಾ! – ಎಂದು ಎಚ್ಚರಿಸುತ್ತಲೇ ಇದ್ದೆ.
ನನ್ನ ವಿದ್ಯಾರ್ಥಿಗಳಲ್ಲಿ ಕೆಲವರಾದರೂ ಯೋಚಿಸುವ ಶಕ್ತಿಯತ್ತ ಹೊರಳಿಕೊಂಡಿರಬಹುದು. ಮನೆಯವರು ನನ್ನ ವಿದ್ಯಾರ್ಥಿಗಳಲ್ಲವಲ್ಲ! ಆದರೂ ನನ್ನ ಜೊತೆ ಕೆಲವು ವರ್ಷಗಳಾದರೂ ಇದ್ದು ನನ್ನ ವಿದ್ಯಾರ್ಥಿಯೂ ಆಗಿದ್ದ ಹರಿಣಿಯಕ್ಕನ ಮಗಳು ಮಾತ್ರ ತಕ್ಕ ಮಟ್ಟಿಗೆ ಯೋಚಿಸುವ ಶಕ್ತಿಯನ್ನು ಪಡೆದು ಭಿನ್ನವಾಗಿರುವುದು ನನಗೆ ಮಹಾ ತೃಪ್ತಿ ಕೊಟ್ಟ ಸಂಗತಿ.
ಇಲ್ಲೇ ಇದ್ದು ಸೈಬರ್ ಕೂಲಿಗಳಾಗಬೇಡಿ. ಕೆಲವು ಡಾಲರುಗಳನ್ನು ನಿಮ್ಮತ್ತ ಚೆಲ್ಲಿ ಅವರು ದುಡ್ಡು ಉಳಿಸಿ ದೊಡ್ಡವರಾಗುತ್ತಾರೆ. ನೀವು ಅದನ್ನು ರೂಪಾಯಿಗೆ ಪರಿವರ್ತಿಸಿಕೊಂಡು ಮೂಳೆ ಸಿಕ್ಕ ನಾಯಂತೆ ಖುಷಿಪಡುತ್ತೀರಾ – ಎಂದು ಟೆಕ್ಕಿ ಬಂಧುಗಳಿಗೆ ಮುಲಾಜಿಲ್ಲದೆ ಹೇಳಿದ್ದೆ.
ಸಾಧ್ಯವಾದರೆ ಅಲ್ಲಿಗೇ ಹೋಗಿಬಿಡಿ, ನಿಮ್ಮ ಶಕ್ತಿಗೆ ತಕ್ಕ ಡಾಲರುಗಳನ್ನು ಅವರು ಕಕ್ಕುವಂತೆ ಮಾಡಿ. ಅಧಿಕಾರದ ಸ್ಥಾನಗಳನ್ನು ಏರಿ ನಿಮ್ಮ ಸಂಸ್ಕೃತಿಯನ್ನು ಅವರಿಗೆ ಅರ್ಥ ಮಾಡಿಸಿ. ಹಾವಾಡಿಗರ ದೇಶ, ಎಸೆದ ಮೂಳೆಯನ್ನು ಹೆಕ್ಕಿಕೊಳ್ಳುವ ಗುಲಾಮ ಮಂದಿ ಅಂತೆಲ್ಲ ಇರುವ ಪೂರ್ವಗ್ರಹಗಳನ್ನು ಧಿಕ್ಕರಿಸಿ ಬದುಕಿ – ಎಂದಿದ್ದೆ.
ಇಲ್ಲಾ, ಇಲ್ಲಿದ್ದುಕೊಂಡು ಮಾನವಾಗಿ ಸ್ವಾಭಿಮಾನದಿಂದ ಬದುಕಿ ನಿಜವಾದ ಅರ್ಥದಲ್ಲಿ (ದ್ವೇಷವನ್ನೇ ಬಿತ್ತುವ ಆರೆಸ್ಸೆಸ್ ಚಡ್ಡಿಗಳಂತೆ ಅಲ್ಲ) ಒಳ್ಳೆಯ ಸಮಾಜವನ್ನು ಕಟ್ಟಿ ಎಂದೂ ಹೇಳಿದ್ದೆ.
ದಶಕಗಳ ನಂತರ ಹತಾಶೆಯಿಂದ ಕೈಚೆಲ್ಲಿದ್ದೆ.
ಅರ್ಥಶಾಸ್ತ್ರ, ಭಾಷೆ, ಇತಿಹಾಸ, ಸಾಹಿತ್ಯ, ಸಂಗೀತ, ಕಲೆ, ಏನರ ಬಗ್ಗೆಯೂ ಆಸಕ್ತಿ ಇರದ ಈ ಪೀಳಿಗೆಯ ಹೆಚ್ಚಿನ ಮಂದಿಯ ಜೊತೆ ನನಗೆ ಸಂವಾದವೇ ಸಾಧ್ಯವಾಗುವುದಿಲ್ಲ.
ಅಂಥವರನ್ನು ರಾಕ್ಷಸರಾಗಿಸುವುದು ಸುಲಭ ಅಂತಲೇ ಜೀವವಿರೋಧಿ ದೇಶವಿರೋಧಿ ಶಕ್ತಿಗಳು ಅವರನ್ನು ಬಳಸಿಕೊಳ್ಳುತ್ತವೆ.
ಮಾಡಿದರೆ ಮಲ್ಟಿನ್ಯಾಷನಲ್ ಕೂಲಿಯೇ ಎಂದಿದ್ದ ನನ್ನ ನೀಸ್ ಈಗ ಎಂ ಕಾಮ್ ಮಾಡುತ್ತಿದ್ದಾಳೆ. ಅವಳು ಪಾಠಗಾತಿ ಆದಾಗಲೇ ಈ ಬದಲಾವಣೆ ಅನಿವಾರ್ಯ ಅಂತ ನನಗೆ ಹೊಳೆದಿತ್ತು. MCA ಗೆ ಜಾಸ್ತಿ ಅವಕಾಶಗಳಿಲ್ಲ, ಅದಕ್ಕೆ… ಅಂತ ಈಗ ರಾಗ ಹಾಡುತ್ತಿದ್ದಾಳೆ. ಅದು ಅರ್ಥವಾಗಲು ಇಪ್ಪತ್ತು ವರ್ಷಗಳು ಬೇಕಿತ್ತಾ ಎಂದು ಕೊಂಕಿದೆ.
ಈ ಸೈಬರ್ ಕೂಲಿಗಳು ನನ್ನ ಕಣ್ಣಿಗೆ ಕಿತ್ತು ಹೋದ ಪೋಸ್ಟರಿನ ತರಹ ಕಾಣಿಸುತ್ತಾರೆ. ಅಲ್ಲಿ ಜೀವನೋತ್ಸಾಹವೇ ಇಲ್ಲ. ಹೊರಗೆ ಮಳೆ ಬರುತ್ತಿರುವುದೂ ಸಹ ಅರಿವಾಗದ ಹಾಗೆ ಕಂಪ್ಯೂಟರಿನಲ್ಲಿ ಕಣ್ಣು, ಮುಖಗಳನ್ನು ಕೀಲಿಸಿಕೊಂಡು ಬದುಕುವ ಕೃತಕ ಮಂದಿ ಕ್ರಮೇಣ ರಾಕ್ಷಸರಾಗುತ್ತಾರೆ ಎಂದು ಹೊಳೆಯಲು ಮನಃಶಾಸ್ತ್ರವೇ ಬೇಕಿಲ್ಲ.
ಜೊತೆಗೆ ವರ್ಕ್ ಫ್ರಮ್ ಹೋಮ್. ಅದು ನಡುನಡುವೆ ತೆಗೆದುಕೊಳ್ಳುವ ಸವಲತ್ತಾಗಿರಲಿ ಎಂದು ಇನ್ನೊಬ್ಬ ನೀಸ್ ಗೆ ಹೇಳಿದ್ದೆ. ಆ ಬೆಂಗಳೂರಿನ ಟ್ರಾಫಿಕ್ ತಪ್ಪಿಸಿಕೊಳ್ಳಲು ಅದೊಂದು ವರವೆನೋ ನಿಜ. ಆದರೆ ಜನರ ಸಂಪರ್ಕವಿಲ್ಲದೆ, ಬದುಕಿನ ಜೊತೆ ನೇರವಾದ ಸಂಧಾನ ಇಲ್ಲದೆ ಬದುಕುತ್ತಾ ಇದ್ದರೆ ಖಿನ್ನತೆ ಆವರಿಸಿಕೊಳ್ಳುವ ರೀತಿಯೂ ಅವರಿಗೆ ಗೊತ್ತಾಗಲಾರದು.
ಮೊನ್ನೆ ನನ್ನ ತಂಗಿಯ ಮೊಮ್ಮಗುವಿನ ಮೂರು ವರ್ಷದ ಹುಟ್ಟುಹಬ್ಬವನ್ನು ಒಂದು ರೆಸಾರ್ಟಿನಲ್ಲಿ ಆಚರಿಸಲಾಯಿತು. ಕರೆಯಲೇಬೇಡ ಎಂದೆ. ಈ ರೆಸಾರ್ಟ್ ಕಲ್ಚರ್, ಲಾಂಗ್ ಡ್ರೈವ್, ಪರದೇಶದಲ್ಲಿ ಹಾಲಿಡೇ ಇವೆಲ್ಲ ನನ್ನ ಮಟ್ಟಿಗೆ ಕಾಯಿಲೆಯಂತೆ ಕಾಣಿಸುತ್ತವೆ. ಅದ್ಭುತ ವೈವಿಧ್ಯತೆ ಇರುವ ಇದೇ ದೇಶವನ್ನು ಎಷ್ಟರ ಮಟ್ಟಿಗೆ ನಾವು ನೋಡಿದೀವಿ?
ಹಾಗಂದ ತಕ್ಷಣ ನೀವ್ಯಾಕೆ ಮತ್ತೆ ಪರದೇಶಕ್ಕೆ ಹೋದಿರಿ ಅಂತ ಕೊಂಕಿಸುತ್ತಾರೆ. ನಾನು ಹರಿ ಅಮೆರಿಕಾವನ್ನು ಧಿಕ್ಕರಿಸಿ ಯಾವುದೊ ಮೂಲೆಯಲ್ಲಿದ್ದ ನ್ಯೂಜಿಲ್ಯಾಂಡನ್ನು ಆರಿಸಿಕೊಂಡಿದ್ದೆವು. ಅದಕ್ಕೂ ಮುಂಚೆ ಆ ದೇಶದ ಇತಿಹಾಸ, ಸಂಸ್ಕೃತಿ, ಬದುಕಿನ ಶೈಲಿ, ಎಲ್ಲವನ್ನೂ ಓದಿಯಾದರೂ ತಿಳಿದುಕೊಂಡಿದ್ದೆವು. ಅಲ್ಲಿಯ ಆದಿವಾಸಿ ಭಾಷೆಯಾದ ಮಾವೋರಿಯನ್ನೂ ಸಹ ಕಲಿಯಲು ಪ್ರಯತ್ನಪಟ್ಟಿದ್ದೆವು. ಪಬ್ಲಿಕ್ ಹಿಯರಿಂಗ್ ಇದ್ದಾಗೆಲ್ಲ ಅಲ್ಲಿ ಹಾಜರಿದ್ದು (ನಾವಿಬ್ಬರೇ ಅಲ್ಲಿರುತ್ತಿದ್ದ ಭಾರತೀಯರು ಎನ್ನುವುದು ಹೆಮ್ಮೆಯ ವಿಚಾರವೇನೂ ಅಲ್ಲ) ಕಾರ್ಯನೀತಿಯ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ಮುಲಾಜಿಲ್ಲದೆ ವ್ಯಕ್ತಪಡಿಸುತ್ತಿದ್ದೆವು.
ಹರಿಯಂತೂ ಬೆಂಗಳೂರಿನ IIM ನಲ್ಲಿದ್ದ ಪ್ರತಿಭಾವಂತ ವಿದ್ಯಾರ್ಥಿ. ಎಂಜಿನಿಯರಿಂಗ್ ಓದಿದ್ದರೂ ತಮಿಳು ಮತ್ತು ಇಂಗ್ಲಿಷ್ ಸಾಹಿತ್ಯವನ್ನು ನನಗಿಂತ ಹೆಚ್ಚು ಬಲ್ಲವ. (ನಾನು ರಟ್ಗರ್ಸ್ ವಿಶ್ವವಿದ್ಯಾಲಯದಲ್ಲಿ ಇದ್ದಾಗ ಓದಬೇಕಿದ್ದನ್ನು ಅವನೇ ಹೆಚ್ಚು ಆಳವಾಗಿ ಓದಿಕೊಳ್ಳುತ್ತಿದ್ದ). ಕನ್ನಡವನ್ನೂ ಅದೆಷ್ಟು ಬೇಗ ಕಲಿತಿದ್ದ ಎಂದು ನಾನೇ ಅಚ್ಚರಿಪಟ್ಟಿದ್ದೆ.
‘ಯೋ, ಎಷ್ಟು ವರ್ಷ ಬಾಡಿಗೆ ಮನೆ? ಸ್ವಂತ ಮನೆ ಬೇಡವಾ?ʼ ಎಂದಾಗ ‘ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು’ ಅಂತ ಕುವೆಂಪು ಹೇಳಿದಾರಲ್ಲ?’ ಎಂದು ನಗುತ್ತಾ ಹೇಳಿ ನನ್ನನ್ನು ಬೆಚ್ಚಿ ಬೀಳಿಸಿದ್ದ. ಹಾಗೆ ಹೇಳಿದ ಕುವೆಂಪುಗೆ ಸಹ ಒಂದು ಸ್ವಂತ ಮನೆಯಿತ್ತು. ಅದರ ಹೆಸರು ಉದಯರವಿ ಅಂತ ಯಾಕೆ ನಿಂಗೆ ಗೊತ್ತಿಲ್ಲ – ಎಂದು ದಬಾಯಿಸಿದ್ದೆ.
ಹರಿಯ ಅರ್ಥಶಾಸ್ತ್ರದ ಜ್ಞಾನಕ್ಕೆ ಕಿವಿ ಕಲೀಗ್ಸ್ ಮರುಳಾಗುತ್ತಾರೆ. ಕಾರ್ಯನೀತಿ ರೂಪಿಸುವಾಗ ಸ್ವತಃ ಪ್ರಧಾನಮಂತ್ರಿಯೇ ಆಹ್ವಾನಿಸುತ್ತಾರೆ. ಯುರೋಪ್ ಪ್ರವಾಸದಲ್ಲಿ ಅವನೇ ನನ್ನ ಗೈಡ್. ಯಾವ ವೃತ್ತಿಪರ ಗೈಡಿಗೂ ಕಮ್ಮಿಯಿಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದ. ಅದರ ಹಿಂದೆ ಎರಡು ತಿಂಗಳು ಗಾಢವಾಗಿ ಅಧ್ಯಯನ ಮಾಡಿದ್ದ.
ನೀವ್ಯಾಕೆ ಪರದೇಶಿಯಾಗಿದ್ದೀರಿ ಮತ್ತೆ ಎಂದು ಕೊಂಕಿಸಿದವರಿಗೆ ಮರ ಆಕಾಶದಲ್ಲಿ ಹರಡಿಕೊಂಡರೆ ಬೇರುಗಳ ಬಲದ ಮೇಲೆಯೇ ತಾನೇ? – ಎಂದು ಉತ್ತರ ಕೊಡುತ್ತೇನೆ.

ಇಷ್ಟೆಲ್ಲಾ ಪುರಾಣ ಆಶ್ರಮದ ಆರತಿ ಅನುಭವಕ್ಕೆ ಹಿನ್ನೆಲೆಯಾಗಿ ಅಷ್ಟೇ.
ಕಳೆದ ವಾರ ಇನ್ನೂ ಎರಡು ಮೂರು ನಿಮಿಷಗಳ ಆರತಿ ಎಂಬ ವಿಧಿಯೇ ಮುಗಿದಿರಲಿಲ್ಲ. ಅಷ್ಟೊತ್ತಿಗೆ ಪರಮಭಕ್ತೆ ಎದ್ದು ಬಂದು ಆರತಿ ತಟ್ಟೆಯನ್ನು ತೆಗೆದುಕೊಳ್ಳಲು ಬಾಗಿಲ ಹತ್ತಿರ ನಿಂತಿದ್ದು ದಿನನಿತ್ಯ ಆರತಿ ಕೊಡುವ ಗಂಡಸು-ಹೆಂಗಸೂ ಸೇರಿದಂತೆ ಮಂದಿಯ ಹುಬ್ಬೇರಿಸಿದ್ದನ್ನು ಗಮನಿಸಿದೆ.
ಸರಿ, ನನ್ನ ಪಾಡಿಗೆ ಹುಂಡಿಯಲ್ಲಿ ಕಾಣಿಕೆಯನ್ನು ಅರ್ಪಿಸಿ ಪಕ್ಕದ ಬಾಗಿಲಿಂದ ಹೊರಬಂದು ಬಳ್ಳಿಮಂಟಪದಲ್ಲಿ ನಿಂತು ಗುರುವನ್ನು ಕಣ್ತುಂಬ ತುಂಬಿಕೊಂಡು ಮನೆಗೆ ಹೊರಟೆ.
ಆದರೆ ಯಾಕೋ ಅವತ್ತಿನ ನಾಟಕದ ಬಗ್ಗೆ ಯೋಚಿಸುವುದನ್ನು ಮಾತ್ರ ತಪ್ಪಿಸಲಾಗಲಿಲ್ಲ. ಏನನ್ನೂ ಹಿನ್ನೆಲೆಯ ಚೌಕಟ್ಟಿನ ಬಲದಿಂದಲೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ನನಗೆ ವಿದ್ಯಾಭ್ಯಾಸ ನೀಡಿರುವ ಒಂದು ಶಿಸ್ತು.
ಯಾಕೆ ಇದೆಲ್ಲ?
‘ಯಾಕೆ ನೀವು ನನಗೆ ಆರತಿ ಕೊಡಲಿಲ್ಲ?’ ಎಂದು ಆ ಪರಮಭಕ್ತೆಯನ್ನು ಒಮ್ಮೆ ನಾನು ನೇರವಾಗಿ ಕೇಳಿದಾಗಲೂ ‘sorry’ ಎಂಬ ಪದ ಸೌಜನ್ಯಕ್ಕಾದರೂ ಹೊರಬಿದ್ದಿರಲಿಲ್ಲ. ಕೊಡದೆ ಹೋದದ್ದು ಅಕಸ್ಮಾತ್ತಲ್ಲ ಎಂದು ನನಗೆ ಅರ್ಥವಾಗಿದ್ದು ಆಗಲೇ.
ಸ್ವಾಮೀಜಿಗಳೂ ಸಹ ‘ಕ್ಷಮೆಯಿರಲಿ’ ಎಂದು ಹೇಳಿದ್ದನ್ನು ಕೇಳಿದ್ದೇನಲ್ಲ! ಈಕೆ ಎಲ್ಲರಿಗಿಂತ ದೊಡ್ಡವಳೇ?
ನನ್ನ ಗ್ರಹಿಕೆ ಚುರುಕು ಎಂದು ಮಂದಿ ಹೇಳುವುದನ್ನು ಕೇಳಿದ್ದೇನೆ. ಅದು ನನ್ನ ಓದಿನಿಂದ ಬಂದಿರಬಹುದು. ಈ ನಡುವೆ ಹೆಚ್ಚು ಹೆಚ್ಚು ಧ್ಯಾನದತ್ತ ಹೊರಳಿಕೊಳ್ಳುತ್ತಿರುವುದರಿಂದ ಸುತ್ತಮುತ್ತಲ ಚೈತನ್ಯಕ್ಕೆ ಇನ್ನಷ್ಟು ಸೂಕ್ಷ್ಮಳಾಗುತ್ತಿರುವುದು ಅರಿವಿಗೆ ಬರುತ್ತಿದೆ.
ಗುರುವಿನ ಸಂಧ್ಯಾರತಿಗೆಂದೇ ಬಂದ ಒಬ್ಬಳು ಆರತಿ ತೆಗೆದುಕೊಳ್ಳದೆ ಹೋಗುವಂತೆ ಮಾಡಿದೆನೆ ಎಂಬ ವಿಷಾದದ ಬದಲಿಗೆ ‘ನಿನ್ನನ್ನು ನಾನು ಹೊರಹೋಗುವಂತೆ ಮಾಡಬಲ್ಲೆ!’ ಎಂಬ ಠೇಂಕಾರವೇ ಯಾಕೆ ಪ್ರಧಾನವಾಗಿ ಅಲ್ಲಿ ಹೊಳೆದಿತ್ತು?
ಅದು ಕೇವಲ ನನ್ನ ಗ್ರಹಿಕೆಯೇ?
ಏನೇ ಆದರೂ ಇದು ತುಂಬ ಅಸಹಜ ಅಂತನ್ನಿಸಿತ್ತು. ತನ್ನ ವಯಸ್ಸಿನ ಸ್ನೇಹಿತರೇ ಇಲ್ಲದ, ಹೆಚ್ಚು ಹೆಚ್ಚು ಮಾನವೀಯಗೊಳಿಸುವ ಕಲೆಗಳ ಪರಿಚಯವಿಲ್ಲದ, ವಯಸ್ಸಿಗೆ ತಕ್ಕ ಜೀವನೋತ್ಸಾಹ ಇಲ್ಲದ, ಮುದುಕಿಯರ ಜೊತೆ ತೀರ್ಥಯಾತ್ರೆಗೆ ಹೋಗುವ, ಉಳಿದಂತೆ ಜನಸಂಪರ್ಕ ತೀರಾ ಕಮ್ಮಿಯಿರುವ ಬದುಕಿನ ಶೈಲಿಯ ಪರಿಣಾಮವೇ? ಮುಗುಳ್ನಗೆ ಇಲ್ಲದ ಮುಖ, ಒಮ್ಮೆಯೂ ನಿರ್ಭಿಡೆಯಿಂದ ನಗಲು ಸಾಧ್ಯವಾಗದ ಮನಸ್ಸು ಯಾವ ಬಗೆಯದ್ದಿರಬಹುದು?
ಆಶ್ರಮಕ್ಕೆ ಬರುವ ಒಬ್ಬ ಸರಕಾರಿ ಡಾಕ್ಟರ್ (ESI Chief) ನಾನು ಮನೆಗೆ ಹೋಗುವ ಹಾದಿಯಲ್ಲೇ ಇರುವವರು ಎಂದು ಕೇಳಿದ ಮೇಲೆ ನನ್ನ ಜೊತೆ ಬನ್ನಿ ಎಂದು ಆಹ್ವಾನಿಸಿದೆ. ಆಕೆ ಪೇಷೆಂಟುಗಳ ಲೋಕದಲ್ಲಿ ತನ್ಮಯವಾಗಿರುವ ಜೀವ. ಎಲ್ಲಿಗೂ ಹೋಗುವುದಿಲ್ಲ, ಪ್ರಯಾಣ ಮಾಡುವುದಿಲ್ಲ, ಆಚೀಚೆ ಏನಾಗುತ್ತಿದೆ ಎಂದು ಗಮನಿಸಲು ಬಿಡುವಿಲ್ಲವೋ ಅಥವಾ ಬೇಡ ಅಂತಲೊ ಗೊತ್ತಿಲ್ಲ.
ಆಕೆ ಮೊನ್ನೆ ‘ಒಬ್ಬರು ಸನ್ಯಾಸಿ ನಗುತ್ತಾ ಮಾತಾಡುತ್ತಿದ್ದದ್ದು ಇವತ್ತು ಕಂಡೆ. ಸನ್ಯಾಸಿಗಳು ನಗುತ್ತಾರಾ?’ –ಎಂದು ಕೇಳಿದಾಗ ಅದು ಪೆದ್ದುತನವೋ ಮುಗ್ಧತನವೋ ಎಂದು ತಿಳಿಯದೆ ಹಹಹಾ ಎಂದು ನಕ್ಕಿದ್ದೆ.
ಮನ ಬಿಚ್ಚಿ ನಕ್ಕರೆ ಕಾಯಿಲೆ ಹತ್ತಿರ ಬರುವುದಿಲ್ಲ, ನಿಮಗೆ ಪೇಷೆಂಟುಗಳು ಸಿಗುವುದಿಲ್ಲ ಅಂತಲಾ — ಎಂದು ರೇಗಿಸಿದೆ. ಈ ಮೇಡಮ್ಮು ಕ್ಲಾಸಿನಲ್ಲಿ ವಿದ್ಯಾರ್ಥಿಗಳಿಗಿಂತ ಹೆಚ್ಚು ನಗುತ್ತಾರೆ, ಚಾವಟಿ ಬೀಸಿದರೆ ಮಾತ್ರ ಎದುರಿಗೆ ಯಾರೂ ನಿಲ್ಲಲು ಆಗುವುದಿಲ್ಲ ಎಂದು ನನ್ನನ್ನು ಟೀಕಿಸಲಾಗಿತ್ತು. ಅಭಿನಂದನೆಯಂತೆ ಸ್ವೀಕರಿಸಿದ್ದೆ.
ನಗು ಬದುಕಿನ ಸಂಭ್ರಮದ ಸೂಚನೆ ಎಂದು ಬಲವಾಗಿ ನಂಬಿದವಳು ನಾನು.
ದಶಕಗಳ ಮಟ್ಟಿಗೆ ಟೀಚರಿನಿಯಾಗಿ ಈ ಪರಮಭಕ್ತೆಯ ತರಹದ ತುಂಬ ಮಂದಿ ವಿದ್ಯಾರ್ಥಿಗಳನ್ನು ನೋಡಿದ್ದೇನೆ. ಆಕೆಯ ಬಗ್ಗೆ ನನಗೆ ಪ್ರೀತಿಯೂ ಇಲ್ಲ, ಕೋಪವೂ ಇಲ್ಲ. ಆದರೆ ಕಣ್ಣೆದುರು ಇರುವ ಸಹ-ಮಾನವರ ಬಗ್ಗೆ ಇರುವ ಕಾಳಜಿಯಷ್ಟೇ ಇದೆ.

ಆಕೆಗೆ ಮನಶಾಸ್ತ್ರೀಯ ಸಹಾಯ ಬೇಕಿದೆ, ಭಕ್ತಿ-ಆಶ್ರಮಗಳು ಅವನ್ನು ಮಾಡಲಾಗಿಲ್ಲ, ಬದಲಿಗೆ ಅವಳ spiritual ego ವನ್ನು ಬಲಪಡಿಸಿವೆ ಅಂತ ನನ್ನ ಮನಸ್ಸಿಗೆ ಆಳವಾಗಿ ಅನ್ನಿಸಿದೆ.
ನನ್ನ ಗ್ರಹಿಕೆ ತಪ್ಪಿದ್ದರೆ ಕ್ಷಮೆಯಿರಲಿ!

ಲೇಖಕಿ, ಅನುವಾದಕಿ ಮತ್ತು ಇಂಗ್ಲೀಷ್ ಪ್ರಾಧ್ಯಾಪಕಿ. ‘ಹೇಳುತೇನೆ ಕೇಳು: ಹೆಣ್ಣಿನ ಆತ್ಮಕಥನಗಳು’ ಇವರ ಮುಖ್ಯ ಕೃತಿ. ‘An Afternoon with Shakuntala’ ವೈದೇಹಿ ಅವರ ಕಥೆಗಳ ಇಂಗ್ಲೀಷ್ ಅನುವಾದ. ಕೊಡಗು ಜಿಲ್ಲೆಯ ಕನಾರಳ್ಳಿಯವರು. ನ್ಯೂಜಿಲ್ಯಾಂಡಿನಲ್ಲಿ ವಾಸವಾಗಿದ್ದಾರೆ.
