ನಿರಂತರ

ಅಂಗಳದಿ ಹೊಳೆಯುತಿಹ ಪೂರ್ಣಚಂದ್ರ
ಎಲ್ಲೆಲ್ಲೂ ಪಸರಿಸಿಹ ನಗೆಯ ಬಿಂಬ
ಕಣ್ಣ ಕೊಳದಲಿ ಚಲಿಪ ಕರಿಯ ಮುತ್ತು
ಸುತ್ತಿ ಸುಳಿದಾಡುತಿಹ ಬಿಳಿಯ ಮುತ್ತು

ಕುಣಿವ ಹೆಜ್ಜೆಯ ತುಂಬ ಗೆಜ್ಜೆನಾದ
ಉಲಿಯೊಳಗೆ ತುಂಬಿಹುದು ಮನಕೆ ಮೋದ
ಇವಳು ನಲಿದಾಡುತಿರೆ ತುಂಗಭದ್ರೆಯ ನೆನಪು ಮನೆಯೊಳಗೆ ಮನದೊಳಗೆ ದೀವಿಗೆಯ ಹೊಳಪು

ಸಂಜೆಯಲಿ ಏರುವಳು ತಂದೆ ಹೆಗಲು
ಮುಂಜಾನೆ ನಲಿಯಲು ತಾಯ ಮಡಿಲು
ರಾಕ್ಷಸನ ಆರ್ಭಟಕ್ಕೆ ಅಜ್ಜನೆಡೆ ಸರಿತ
ರಾಜಕುವರಿಯ ವ್ಯಥೆಗೆ ಕಣ್ಣೀರ ಸುರಿತ

ಹೂವ ಗಿಡದೆಡೆಯಲ್ಲಿ ಒನಪು ವಯ್ಯಾರ
ಮನೆಯ ಒಳಗೂ ಹೊರಗೂ ನಗೆಯ ಚಿತ್ತಾರ ತಂಗಾಳಿ ಬೀಸುತಿರೆ ಬಿರಿದ ಮೊಗ್ಗು
ಎದೆಯ ಗೂಡಲಿ ಹರಿವ ಹೊನಲ ಹಿಗ್ಗು

ಕಾಲಚಕ್ರದ ಉರುಳು ಬದುಕ ಹೊರಳು
ಚಂದಿರನ ಕಾಣುವ ಮಲ್ಲಿಗೆಯ ಅರಳು
ಬದಲಾದ ಋತುಚಕ್ರ ತಾಯಬಿಂಬ
ಮತ್ತದೇ ಚಂದಿರನು ಮಡಿಲ ತುಂಬ

(ಕಲಾಕೃತಿ: ವಾಲಿ ಮೋಸ್ (Wally Moes)