ಯಶೋದಳಿಗೆ ಮುಂದೆ ಮಾತನಾಡಲು ಆಗಲಿಲ್ಲ. ಅವಳು ಬಿಕ್ಕಿದಳು. ಅವಳ ಕಣ್ಣಿನಿಂದ ಒಂದೇಸಮನೆ ನೀರು ಇಳಿಯುತ್ತಿತ್ತು. ಅಷ್ಟರಲ್ಲಿ ಮಗುವನ್ನು ಕರೆದುಕೊಂಡು ಮಾದೇವಿ ಬಂದಳು. ಮಗುವನ್ನು ಎತ್ತಿಕೊಂಡ ಯಶೋದ ಮಗುವನ್ನು ಹೆಗಲಿಗೆ ಹಾಕಿಕೊಂಡು ಎದ್ದು ನಿಂತಳು. ಅವಳನ್ನು ಒಳಗೆ ಕರೆದುಕೊಂಡು ಹೋಗುವಂತೆ ಪ್ರಕಾಶ ಮಾದೇವಿಗೆ ಸೂಚಿಸಿದ. ಕೀಕೊಟ್ಟ ಬೊಂಬೆಯಂತೆ ಯಶೋದ ಮಾದೇವಿಯನ್ನು ಅನುಸರಿಸಿದಳು. ಅವಳಿಗೆ ಯಾವುದೋ ಆಘಾತವಾಗಿರಬೇಕು ಎಂದು ಪ್ರಕಾಶ ತರ್ಕಿಸಿದ. ನಿಧಾನವಾಗಿ ಅದನ್ನು ಹೊರತೆಗೆಯಬೇಕು. ಒಂದೆರಡು ದಿನದವರೆಗ ಕಾಯಬೇಕು. ಅವಸರ ಬೇಡ ಎಂದು ತನ್ನಷ್ಟಕ್ಕೇ ಹೇಳಿಕೊಂಡು ಎಂದಿನ ಕೆಲಸದಲ್ಲಿ ತೊಡಗಿದ.
ಚಂದ್ರಮತಿ ಸೋಂದಾ ಬರೆದ ಕತೆ “ಸಾಂಗತ್ಯ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ʻಯಾಕಿವತ್ತು ಯಾರೂ ಊಟಕ್ಕೆ ಬರದೆ ಸುಮ್ಮನೆ ಕೂತಿದ್ದೀರಿ? ನಡೀರಿ, ಗಂಟೆ ಎರಡಾಗಿದೆʼ
ಪ್ರಕಾಶನ ಮಾತಿಗೆ ಯಾರೂ ಪ್ರತಿಕ್ರಿಯಿಸಲಿಲ್ಲ. ಊಟಕ್ಕೆ ಹೊರಡಲೂ ಇಲ್ಲ. ಒಬ್ಬರು ಮತ್ತೊಬ್ಬರ ಮುಖ ನೋಡಿ ಸುಮ್ಮನಾದರು. ಅಷ್ಟೊತ್ತಿಗೆ ಅಲ್ಲಿಗೆ ಬಂದ ಮಾದೇವಿ
ʻಅಯ್ಯ ಹುಟ್ಟು ಸಾವು ಅನ್ನದು ಇರದೆಯ. ಬ್ಯಾಸರ ಮಾಡ್ಕಂಡು ಕೂತ್ಗಂಡ್ರೆ ಸತ್ತೋರು ಬಂದಾರ. ಎಲ್ಲ ಮ್ಯಾಕೇಳಿ. ಪಾಪ! ಆ ವಪ್ಪನ ಆಯುಸ್ಸು ಮುಗೀತು ಒಂಟೋದ. ನಾವೂ ಒಂದಿನ ಓಗೋರೆʼ
ಮಾದೇವಿಯ ಮಾತು ಮುಗಿಯುತ್ತಲೇ ಎಲ್ಲರೂ ಊಟದ ಮನೆಯ ಕಡೆ ಹೊರಟರು. ತನ್ನ ಮಾತಿಗೆ ಪ್ರತಿಕ್ರಿಯಿಸದ ಇವರೆಲ್ಲ ಮಾದೇವಿಯ ಮಾತಿಗೆ ಕೀಲಿಕೊಟ್ಟ ಗೊಂಬೆಯಂತೆ ಹೊರಟುದನ್ನು ಕಂಡು ಪ್ರಕಾಶ ಬೆರಗಾದ.
ಅದೊಂದು ವಾತ್ಸಲ್ಯ ಮಂದಿರ. ಮೂವತ್ತು ಹಿರಿಯ ಜೀವಗಳಿಗೆ ಆಶ್ರಯತಾಣ. ಅರವತ್ತರಿಂದ ಎಂಬತ್ತರ ವಯೋಮಾನದವರು ಅವರೆಲ್ಲ. ಹನ್ನೆರಡು ಮಹಿಳೆಯರು ಉಳಿದವರು ಪುರುಷರು. ಆಶ್ರಮ ಪ್ರಾರಂಭವಾಗಿ ಆರು ವರ್ಷ ಕಳೆದಿದೆ. ಹತ್ತು ಜನರಿಂದ ಪ್ರಾರಂಭವಾದ ಆಶ್ರಮ ಈಗ ಮೂವತ್ತು ಹಿರಿಯರಿಗೆ ಆಶ್ರಯವಿತ್ತಿದೆ. ಅದರ ಉಸ್ತುವಾರಿ ನಡೆಸುತ್ತಿರುವ ಪ್ರಕಾಶ ಅದರ ಅಧ್ಯಕ್ಷನೂ ಹೌದು. ಅವನ ತಂದೆಯ ನೆನಪಿನಲ್ಲಿ ಆಶ್ರಮ ಪ್ರಾರಂಭವಾಗಿದೆ. ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ಅವನನ್ನು ತಂದೆಯೇ ಬೆಳೆಸಿದ್ದರು. ತಾನು ಮತ್ತೆ ಮದುವೆಯಾದರೆ ಮಗ ಮಲತಾಯಿಯ ತಿರಸ್ಕಾರಕ್ಕೆ ಒಳಗಾಗಬಾರದೆಂದು ಪ್ರಕಾಶನ ತಂದೆ ರಂಗಣ್ಣ ಮತ್ತೆ ಮದುವೆಯಾಗಿರಲಿಲ್ಲ. ಮಗನನ್ನು ಚೆನ್ನಾಗಿ ಓದಿಸಿದ ಅವರು ಅವನನ್ನು ಹೊರದೇಶಕ್ಕೂ ಕಳಿಸಿದ್ದರು. ಅವನು ಅಲ್ಲಿ ಉನ್ನತ ಶಿಕ್ಷಣ ಮುಗಿಸಿ ತಾಯ್ನಾಡಿಗೆ ಮರಳುವ ಸಂಭ್ರಮದಲ್ಲಿದ್ದ. ಇನ್ನೇನು ಎಂಟು ದಿನಗಳಲ್ಲಿ ಕೊನೆಯ ಪರೀಕ್ಷೆ ಮುಗಿಯಲಿತ್ತು. ಅದನ್ನು ಮುಗಿಸಿ ನಾಲ್ಕು ದಿನಗಳ ನಂತರ ಹೊರಡಲು ಟಿಕೆಟ್ ಕಾಯ್ದಿರಿಸಿದ್ದ. ಊರಿಗೆ ಬಂದವನು ಕೆಲದಿನ ತಂದೆಯ ಜೊತೆಯಲ್ಲಿದ್ದು ಆನಂತರ ಉದ್ಯೋಗ ಹಿಡಿದು ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಕನಸು ಕಂಡಿದ್ದ. ಆದರೆ ಅವನು ಬಯಸಿದ್ದೊಂದಾದರೆ ನಡೆದುದೇ ಬೇರೆ.
ಪರೀಕ್ಷೆ ಐದು ದಿನವಿರುವಾಗ ತಂದೆಗೆ ಸ್ವಲ್ಪ ಹುಷಾರಿಲ್ಲವೆಂದು ಅವನ ಸೋದರಮಾವ ಫೋನ್ ಮಾಡಿ ಪರೀಕ್ಷೆ ಮುಗಿಯುತ್ತಲೇ ಬರಲು ತಿಳಿಸಿದ್ದರು. ಅದನ್ನು ಕೇಳಿ ಪ್ರಕಾಶ ಬಹಳ ಗಾಬರಿಯಾಗಿದ್ದ. ʻನೀನೇನು ಯೋಚಿಸಬೇಡ. ಪರೀಕ್ಷೆ ಚೆನ್ನಾಗಿ ಮಾಡು. ನಾನು ಎಲ್ಲವನ್ನು ನಿಭಾಯಿಸ್ತೇನೆʼ ಎನ್ನುವುದಾಗಿ ಸಮಾಧಾನದ ಮಾತುಗಳನ್ನು ಹೇಳಿದ್ದರು ಅವನ ಮಾವ. ಅವನು ಹೊರದೇಶದಿಂದ ಬರುವಷ್ಟರಲ್ಲಿ ಅವನ ತಂದೆ ರಂಗಣ್ಣೋರು ಮರಣಹೊಂದಿ ಆರು ದಿನಗಳು ಕಳೆದಿದ್ದವು. ಕೊನೇಗಳಿಗೆಯಲ್ಲಿ ಮಗನನ್ನು ನೋಡಲು ಆಶಿಸಿದ್ದರು ಎನ್ನುವುದನ್ನು ತಿಳಿದು ಪ್ರಕಾಶನಿಗೆ ತುಂಬ ಬೇಸರವಾಗಿತ್ತು. ಮಗನಾಗಿ ತಂದೆಯ ದಿನಕಾರ್ಯಗಳನ್ನು ಮಾಡಿ ಮುಗಿಸಿದ್ದ. ಅವನ ಅಜ್ಜನಿಗೆ ಅವನ ತಂದೆ ಒಬ್ಬನೇ ಮಗ. ಹಳ್ಳಿಯಲ್ಲಿ ಸಾಕಷ್ಟು ಜಮೀನಿತ್ತು. ಅಜ್ಜನ ನಂತರದಲ್ಲಿ ಅವನ ತಂದೆ ಅದನ್ನು ಚೆನ್ನಾಗಿ ರೂಢಿಸಿದ್ದರು. ತಂದೆಯನ್ನು ಕಳೆದುಕೊಂಡ ಪ್ರಕಾಶನಿಗೆ ಆ ಹಳ್ಳಿಯನ್ನು ಬಿಟ್ಟು ಬೇರೆಕಡೆ ಹೋಗಲು ಮನಸ್ಸಾಗಲಿಲ್ಲ. ತಾನು ಹುಟ್ಟಿಬೆಳೆದಿರುವ ಹಳ್ಳಿಯಲ್ಲಿಯೇ ಬದುಕಬೇಕು ಎಂದು ಬಯಸಿದ ಅವನು ತನಗೆ ಅನುಭವವಿಲ್ಲದ ಕೃಷಿಯ ಬಗೆಗೆ ಹಿರಿಯರಿಂದ ಮಾಹಿತಿಗಳನ್ನು ಪಡೆದು ಕೃಷಿಯಲ್ಲಿಯೇ ಮುಂದುವರಿದ. ಜೊತೆಗೆ ಊರಿನ ಅಭಿವೃದ್ಧಿಯ ಕಡೆಗೂ ಗಮನಹರಿಸಿದ.
ಅರೆಮಲೆನಾಡಿನ ಆ ಹಳ್ಳಿಯ ಸಮೀಪದಲ್ಲಿ ಯಾವುದೇ ಆಸ್ಪತ್ರೆಯಾಗಲಿ, ವೈದ್ಯಕೀಯ ಸೌಲಭ್ಯಗಳಾಗಲಿ ಇರಲಿಲ್ಲ. ಅದರಿಂದ ಹಳ್ಳಿಯಲ್ಲಿ ಯಾರಿಗಾದರೂ ಅನಾರೋಗ್ಯವಾದರೆ ಇಪ್ಪತ್ತು ಮೈಲು ದೂರದ ತಾಲೂಕು ಕೇಂದ್ರಕ್ಕೆ ಅವರನ್ನು ಕರೆದೊಯ್ಯಬೇಕಿತ್ತು. ಒಂದಿಷ್ಟು ಓಡಾಟ ಮಾಡಿ ಒಂದು ಪ್ರಾಥಮಿಕ ಆರೋಗ್ಯಕೇಂದ್ರ ಬರುವಂತೆ ಮಾಡುವಲ್ಲಿ ಯಶಸ್ವಿಯಾದ. ತನ್ನ ತಂದೆಯಂತೆ ಹಳ್ಳಿಯಲ್ಲಿರುವ ಹಿರಿಯರಿಗೆ ಆರೈಕೆಯ ಕೊರತೆ ಆಗಬಾರದೆಂದು ಯೋಚಿಸಿದ ಪ್ರಕಾಶ ಊರಿನ ಹೊರವಲಯದಲ್ಲಿದ್ದ ತಮ್ಮ ಕೃಷಿಭೂಮಿಯ ಹತ್ತಿರವೇ ಒಂದು ವಾತ್ಸಲ್ಯಧಾಮವನ್ನು ಪ್ರಾರಂಭಿಸಿದ. ಅದಕ್ಕಾಗಿ ಆರು ಎಕರೆ ಜಾಗವನ್ನು ಮೀಸಲಿಟ್ಟು ಒಂದು ಟ್ರಸ್ಟ್ ಸ್ಥಾಪಿಸಿದ. ಅದರ ಅಧ್ಯಕ್ಷನಾಗಿ ಅವನಿದ್ದರೂ ಊರಿನ ಕೆಲವು ಹಿರಿಯರನ್ನು ಟ್ರಸ್ಟಿಗಳಾಗಿ ಮಾಡಿದ. ಹಲವು ದಾನಿಗಳಿಂದ ಧನಸಹಾಯ ಪಡೆದು ಪ್ರಾರಂಭಿಸಿದ ವಾತ್ಸಲ್ಯಧಾಮವು ಆಧುನಿಕ ಸೌಲಭ್ಯವುಳ್ಳ ಅಡಿಗೆ ಮನೆ, ವಿಶಾಲವಾದ ಊಟದಮನೆ, ಸುಮಾರು ಅರವತ್ತು ಕೊಠಡಿಗಳನ್ನು ಹೊಂದಿದ್ದು, ವಾಚನಾಲಯವೂ ಸೇರಿದಂತೆ ಐವತ್ತು ಜನರಿಗೆ ಸಾಕಾಗುವಷ್ಟು ಸವಲತ್ತುಗಳನ್ನು ಹೊಂದಿದೆ. ಆಶ್ರಮದ ಹೊರವಲಯದಲ್ಲಿ ದಿನನಿತ್ಯದ ಅಗತ್ಯಗಳಿಗೆ ಅನುಕೂಲವಾಗುವಂತೆ ಹಣ್ಣು ತರಕಾರಿ ಮತ್ತು ಹೂವಿನ ಗಿಡಗಳನ್ನು ಬೆಳೆಸಲಾಗುತ್ತಿದೆ. ಸಂಜೆಯ ಹೊತ್ತಿನಲ್ಲಿ ಹಿರಿಯರು ಕೂರಲು ಅನುಕೂಲವಾಗುವಂತೆ ಕೆಲವು ಆಸನಗಳ ಸೌಲಭ್ಯವನ್ನು ಕೈತೋಟದ ಪಕ್ಕದಲ್ಲಿಯೇ ಕಲ್ಪಿಸಲಾಗಿದೆ.
*****
ಪ್ರತಿದಿನದಂತೆ ಆ ದಿನವೂ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಒಮ್ಮೆ ವಾತ್ಸಲ್ಯಧಾಮವನ್ನು ಸುತ್ತುಹಾಕಿ ಬರಬೇಕೆಂದು ಹೊರಟ ಪ್ರಕಾಶನಿಗೆ ದೂರದಲ್ಲಿ ಎಲ್ಲೋ ಮಗುವೊಂದು ಅಳುತ್ತಿರುವ ಸದ್ದು ಕೇಳಿಸಿತು. ಹೊರಗಿನ ಅಂಗಳಕ್ಕೆ ಬರುತ್ತಲೇ ಆ ಸದ್ದು ಹತ್ತಿರದಿಂದ ಬರುವುದು ಗಮನಕ್ಕೆ ಬಂದಿತು. ʻಅಳಬೇಡ ಸುಮ್ಮನಿರುʼ ಎನ್ನುವ ಹೆಣ್ಣಿನ ದನಿಯೂ ಕೇಳಿಸಿತು. ಪ್ರಾಯಶಃ ಮಗುವಿನ ತಾಯಿ ಇರಬಹುದು ಎಂದು ಯೋಚಿಸುತ್ತ ಅವನು ಅಂಗಳದ ತುದಿಯಲ್ಲಿರುವ ಸರಗೋಲನ್ನು ಸಮೀಪಿಸುತ್ತಲೇ ಯಾರೋ ಅಲ್ಲಿ ನಿಂತಿರುವುದು ಕಾಣಿಸಿತು.
ʻಯಾರು? ಈ ರಾತ್ರಿಯಲ್ಲಿ ಯಾಕೆ ಅಲ್ಲಿ ನಿಂತಿದ್ದೀರಿ?ʼ
ʻನಾನು ಯಶೋದ, ಅಂದರೆ ಮೊನ್ನೆ ತೀರಿಹೋದರಲ್ಲ ನರಸಿಂಹಯ್ಯ ಅವರ ಮೊಮ್ಮಗಳುʼ
ʻಓ ಬನ್ನಿ ಒಳಗೆʼ ಎನ್ನುತ್ತ ಪ್ರಕಾಶ ಕೈಯಲ್ಲಿರುವ ಮೊಬೈಲಿನ ಬೆಳಕಿನಲ್ಲಿ ಬರುವ ದಾರಿಯನ್ನು ತೋರಿಸಿದ. ಇವರ ಮಾತುಗಳನ್ನು ಕೇಳುತ್ತಲೇ ಅವಳ ಹೆಗಲಿನಲ್ಲಿದ್ದ ಮಗು ಸುಮ್ಮನಾಗಿತ್ತು. ಒಳಗೆ ಬಂದ ಆ ಹೆಣ್ಣುಮಗಳು ಸುಮಾರು ಮೂವತ್ತು ವರ್ಷ ಪ್ರಾಯದವಳಂತೆ ಕಂಡಳು ಮತ್ತು ಅವಳ ಮುಖವನ್ನು ನೋಡುತ್ತಿದ್ದಂತೆಯೇ ಪ್ರಕಾಶನಿಗೆ ಅವಳು ನರಸಿಂಹಯ್ಯನ ಪ್ರತಿರೂಪ ಎನಿಸಿತು.
ಆಶ್ರಮದ ಜಗಲಿಗೆ ಬರುತ್ತಲೇ ʻನಿಮಗೆ ಊಟವಾಗಿದೆಯೇ?ʼ ಎಂದು ಕೇಳಿದ ಪ್ರಕಾಶ.
ʻಇಲ್ಲ ಬರುವ ದಾರಿಯಲ್ಲಿ ಮಗುವಿಗೆ ಹಣ್ಣನ್ನು ತೆಗೆದುಕೊಂಡೆ. ಅಲ್ಲಿಯೇ ಇಡ್ಲಿಯನ್ನು ಕಟ್ಟಿಸಿ ತಂದಿದ್ದೆ. ಮಗುವಿಗೆ ತಿನ್ನಿಸಿ ನಾನೂ ತಿಂದೆ. ಈಗ ಹಸಿವಿಲ್ಲʼ
ʻಮಾದೇವಿʼ ಎಂದು ಒಳಬಾಗಲಿಗೆ ಮುಖಮಾಡಿ ಪ್ರಕಾಶ ಕರೆಯುತ್ತಿದ್ದಂತೆ ಹೊರಗೆ ಬಂದ ಮಾದೇವಿ ʻಹೇಳಿ ಅಣ್ಣʼ
ʻಇವರಿಗೆ ಊಟಕ್ಕೆ ಬಡಿಸು. ಮಗುವಿಗೆ ಹಾಲು ಬಿಸಿಮಾಡಿ ಕೊಡು. ಹಾಗೆಯೇ ಅತಿಥಿಗಳ ಕೊಠಡಿಯಲ್ಲಿ ಮಲಗುವ ವ್ಯವಸ್ಥೆಯನ್ನೂ ಮಾಡುʼ
ʻಆಗಲಿ ಅಣ್ಣʼ
ʻಈ ರಾತ್ರಿಹೊತ್ತಿನಲ್ಲಿ ಬಂದು ನಿಮಗೆ ತೊಂದರೆ ಕೊಟ್ಟುದಕ್ಕೆ ಕ್ಷಮಿಸಿ ಸರ್ʼ
ʻತೊಂದರೆಯೇನಿಲ್ಲ. ನರಸಿಂಹಯ್ಯನವರ ಮೊಮ್ಮಗಳು ಎಂದಮೇಲೆ ಅಷ್ಟನ್ನಾದರೂ ಮಾಡಬೇಡವೇ?ʼ
ಮಾರನೆಯ ದಿನ ಬೆಳಗಿನ ಕೆಲಸಗಳನ್ನು ಮುಗಿಸಿ ಪ್ರಕಾಶ ಆಫೀಸಿಗೆ ಬರುವಷ್ಟರಲ್ಲಿ ಯಶೋದ ಅವನನ್ನು ನಿರೀಕ್ಷಿಸುತ್ತ ಅಲ್ಲಿ ಬಂದು ಕುಳಿತಿದ್ದಳು. ತಂದೆತಾಯಿಯರ ಫೋಟೋಕ್ಕೆ ನಮಿಸಿ, ತನ್ನ ಆಸನದಲ್ಲಿ ಕುಳಿತ ಪ್ರಕಾಶ ಅವಳನ್ನು ಮಾತನಾಡಿಸಿದ.
ʻರಾತ್ರಿ ನಿದ್ದೆ ಬಂತೆ? ಹೊಸಜಾಗ. ಮಗು ಆರಾಮವಾಗಿದೆಯೇ? ಈಗ ಹೇಳಿʼ
ʻಮಗು ಇನ್ನೂ ಎದ್ದಿಲ್ಲ. ರಾತ್ರಿ ನಾವಿಬ್ಬರೂ ಚೆನ್ನಾಗಿಯೇ ನಿದ್ದೆ ಮಾಡಿದೆವು. ಎರಡು ವಾರಗಳಿಂದ ನನಗೆ ಸರಿಯಾಗಿ ನಿದ್ದೆ ಮಾಡಲು ಆಗಿರಲಿಲ್ಲ. ನಾನು ನರಸಿಂಹಯ್ಯನವರ ಮೊಮ್ಮಗಳು. ನನ್ನ ತಂದೆ ಒಬ್ಬರೇ ಅವರ ಸಂತಾನ. ನನ್ನ ಹೆತ್ತವರಿಬ್ಬರೂ ಒಂದು ಅಪಘಾತದಲ್ಲಿ ತೀರಿಹೋದರಂತೆ. ನಾನಾಗ ಇನ್ನೂ ಮೂರರ ಬಾಲೆ. ಸಾಕಿ, ಸಲಹಿ ಓದಿಸಿ ಉದ್ಯೋಗ ಹಿಡಿಯಲು ಕಾರಣರಾದವರು ನನ್ನ ಅಜ್ಜ-ಅಜ್ಜಿಯರು. ಅಂದರೆ ನರಸಿಂಹಯ್ಯ ದಂಪತಿಗಳುʼ
ʻಓಹೋ! ಇದ್ಯಾವುದೂ ನಮಗೆ ತಿಳಿದಿರಲಿಲ್ಲ. ತನಗೆ ಯಾರೂ ಇಲ್ಲವೆಂದು ಅವರಾಗಿಯೇ ಇಲ್ಲಿಗೆ ಬಂದು ಸೇರಿಕೊಂಡವರು. ಅಷ್ಟೇ ಅಲ್ಲ, ವಾರ್ಷಿಕ ಇಷ್ಟು ಎಂದು ತಮ್ಮ ಖರ್ಚಿನ ಬಾಬತ್ತು ಹಣವನ್ನು ನೀಡುವ ಉದಾರ ದಾನಿಗಳೂ ಆಗಿದ್ದರು. ತಮ್ಮ ಬಂಧುಗಳ ಬಗ್ಗೆ ಅವರು ಏನನ್ನೂ ಹೇಳಲು ಇಷ್ಟಪಡುತ್ತಿರಲಿಲ್ಲ. ನಾವೂ ಅವರನ್ನು ಕೆದಕಿ ಕೇಳಲಿಲ್ಲʼ
ʻನಾನು ಉದ್ಯೋಗ ಹಿಡಿದ ಮೇಲೆ ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಸುರೇಶ ಎನ್ನುವರನ್ನು ಇಷ್ಟಪಟ್ಟೆ. ಅವರನ್ನೇ ಮದುವೆಯಾಗುವುದಾಗಿ ಅಜ್ಜನಿಗೆ ತಿಳಿಸಿದೆ. ಸುರೇಶನ ಅಜ್ಜ ಒಂದುಕಾಲಕ್ಕೆ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಆಳಿನ ಮೊಮ್ಮಗನೊಂದಿಗೆ ತಮ್ಮ ಮೊಮ್ಮಗಳು ಮದುವೆಯಾಗುವುದಕ್ಕೆ ಅವರು ಸುತರಾಂ ಒಪ್ಪಲಿಲ್ಲ. ಅಷ್ಟೆ ಎಂದು ನನಗೆ ಅನ್ನಿಸಲಿಲ್ಲ. ಸುರೇಶ ಸಾಮಾಜಿಕವಾಗಿ ನಮಗಿಂತ ಕೆಳಗಿನ ಜಾತಿಗೆ ಸೇರಿದವನು. ಪ್ರಾಯಶಃ ಅದೂ ಕಾರಣವಿರಬಹುದು. ನಾನು ಅವರ ಮಾತನ್ನು ಮೀರಿ ಸುರೇಶನೊಂದಿಗೆ ಮದುವೆಯಾಗಿ ಜರ್ಮನಿಗೆ ತೆರಳಿದೆ. ಇಲ್ಲಿಯೇ ಇದ್ದು ಅವರನ್ನು ನಾನು ಓಲೈಸಿದ್ದರೆ ಸರಿಹೋಗುತ್ತಿದ್ದರೇನೋ. ನಾನು ತಪ್ಪುಮಾಡಿದೆ ಎಂದು ಈಗ ಅನಿಸುತ್ತಿದೆ. ನಾನು ಅಲ್ಲಿಗೆ ಹೋದಮೇಲೆ ಕಾಗದ ಬರೆದರೂ ಅವರು ಉತ್ತರ ಬರೆಯಲಿಲ್ಲ. ಈಗ ಎರಡು ವರ್ಷದ ಹಿಂದೆ ಅಜ್ಜಿ ಸತ್ತಿರುವ ವಿಷಯ ಯಾರಿಂದಲೋ ತಿಳಿಯಿತು. ನಾನಾಗ ಎಂಟುತಿಂಗಳ ಗರ್ಭಿಣಿ. ಬರಲಾಗಲಿಲ್ಲʼ
ʻಈಗ ಬಂದಿರುವುದು?ʼ
ʻಸುರೇಶನ ತಂದೆ ಕಾಲವಾದರೆಂದು ಊರಿಗೆ ಬಂದೆವು. ಅವರ ಕೊನೆಯ ಕಾರ್ಯಗಳನ್ನು ಮುಗಿಸಿ ಹೊರಡಬೇಕೆಂದಿದ್ದೆವು. ಆದರೆ…ʼ
ಯಶೋದಳಿಗೆ ಮುಂದೆ ಮಾತನಾಡಲು ಆಗಲಿಲ್ಲ. ಅವಳು ಬಿಕ್ಕಿದಳು. ಅವಳ ಕಣ್ಣಿನಿಂದ ಒಂದೇಸಮನೆ ನೀರು ಇಳಿಯುತ್ತಿತ್ತು. ಅಷ್ಟರಲ್ಲಿ ಮಗುವನ್ನು ಕರೆದುಕೊಂಡು ಮಾದೇವಿ ಬಂದಳು. ಮಗುವನ್ನು ಎತ್ತಿಕೊಂಡ ಯಶೋದ ಮಗುವನ್ನು ಹೆಗಲಿಗೆ ಹಾಕಿಕೊಂಡು ಎದ್ದು ನಿಂತಳು. ಅವಳನ್ನು ಒಳಗೆ ಕರೆದುಕೊಂಡು ಹೋಗುವಂತೆ ಪ್ರಕಾಶ ಮಾದೇವಿಗೆ ಸೂಚಿಸಿದ. ಕೀಕೊಟ್ಟ ಬೊಂಬೆಯಂತೆ ಯಶೋದ ಮಾದೇವಿಯನ್ನು ಅನುಸರಿಸಿದಳು. ಅವಳಿಗೆ ಯಾವುದೋ ಆಘಾತವಾಗಿರಬೇಕು ಎಂದು ಪ್ರಕಾಶ ತರ್ಕಿಸಿದ. ನಿಧಾನವಾಗಿ ಅದನ್ನು ಹೊರತೆಗೆಯಬೇಕು. ಒಂದೆರಡು ದಿನದವರೆಗ ಕಾಯಬೇಕು. ಅವಸರ ಬೇಡ ಎಂದು ತನ್ನಷ್ಟಕ್ಕೇ ಹೇಳಿಕೊಂಡು ಎಂದಿನ ಕೆಲಸದಲ್ಲಿ ತೊಡಗಿದ.

ಪುಟ್ಟಪುಟ್ಟ ಹೆಜ್ಜೆ ಇಟ್ಟು ಬಣ್ಣದ ಲಂಗ ತೊಟ್ಟ ತಂಗಿ
ಗಿಡ್ಡು ಪುಟಾಣಿ ಮಕ್ಕಳ ರಾಣಿ ಬರ್ತಾಳೆ ಓ ಬಂಗಾರ ತಂಗಿ ಬರ್ತಾಳೆ
ಸಾವಿತ್ರಕ್ಕ ಚಪ್ಪಾಳೆ ತಟ್ಟಿ ಹಾಡುತ್ತಿದ್ದರೆ ಗೌರಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಕುಣಿಯುತ್ತಿದ್ದಳು. ಯಶೋದಳ ಮಗಳು ಗೌರಿ ಈಗ ಆಶ್ರಮದ ಎಲ್ಲರ ಕಣ್ಮಣಿ. ಅದರಲ್ಲಿಯೂ ಸಾವಿತ್ರಕ್ಕನಿಗಂತೂ ಸ್ವಂತ ಮೊಮ್ಮಗಳೇ. ಯಾರೋ ದೂರದ ಸಂಬಂಧಿ ಎಂದು ಹೇಳಿ ಎಂಟು ತಿಂಗಳ ಹಿಂದೆ ಅವಳನ್ನು ಆಶ್ರಮಕ್ಕೆ ಸೇರಿಸಿ ಹೋಗಿದ್ದರು. ಸಾವಿತ್ರಕ್ಕ ಕಳೆದ ಎಂಟುತಿಂಗಳಲ್ಲಿ ನಕ್ಕಿರುವುದನ್ನು ಯಾರೂ ಕಂಡೇ ಇರಲಿಲ್ಲ. ತಲೆಮೇಲೆ ಆಕಾಶ ಕಳಚಿಬಿದ್ದಂತೆ ಇರುತ್ತಿದ್ದ ಅವಳು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಬಂದಾಗ ದಿನವಿಡೀ ತನ್ನಷ್ಟಕ್ಕೆ ಮಾತನಾಡುತ್ತಿದ್ದ ಅವಳನ್ನು ಸುಮ್ಮನಿರುವಂತೆ ಮಾಡುವುದರಲ್ಲಿ ಪ್ರಕಾಶನ ಜಾಣ್ಮೆ ಮತ್ತು ತಾಳ್ಮೆ ಎರಡೂ ಖರ್ಚಾಗಿದ್ದವು.
ಮಗಳೊಂದಿಗೆ ಆಶ್ರಮದಲ್ಲಿಯೇ ಇರುವ ಯಶೋದ ಈಗ ಆಫೀಸಿನ ಎಲ್ಲ ಕೆಲಸಗಳನ್ನೂ ನಿಭಾಯಿಸುತ್ತಿದ್ದಳು. ತಂದೆಯ ಸಾವಿಗೆ ಬಂದ ಸುರೇಶ ಹಾರ್ಟ್ ಅರೆಸ್ಟ್ ಆಗಿ ತೀರಿಹೋದುದರಿಂದ ಯಶೋದ ತಾಯ್ನಾಡಿನಲ್ಲಿಯೇ ನೆಲೆಸಲು ನಿರ್ಧರಿಸಿದ್ದಳು. ಅಜ್ಜನ ಸಾವಿನ ವಿಷಯ ಅವಳಿಗೆ ತಡವಾಗಿ ತಿಳಿದಿತ್ತು. ಅದನ್ನು ವಿಚಾರಿಸಲು ಬಂದ ಯಶೋದಳಿಗೆ ಪ್ರಕಾಶನ ಕೆಲಸ ಬಹಳವಾಗಿ ಹಿಡಿಸಿದುದರಿಂದ ತಾನೂ ಅವನ ಕೆಲಸದಲ್ಲಿ ಪಾಲುದಾರಳಾಗಲು ಬಯಸಿ ಪ್ರಾಕಾಶನನ್ನು ಕೇಳಿದಾಗ ಅವನು ಸಮ್ಮತಿಸಿದ್ದ. ಅವಳು ಮಗಳೊಂದಿಗೆ ಅಲ್ಲಿಯೇ ಇದ್ದ ಒಂದು ಕೋಣೆಯಲ್ಲಿ ವಾಸಿಸುತ್ತಿದ್ದಳು. ಅವಳ ಅಜ್ಜ ತನ್ನ ಆಸ್ತಿಯ ಹಕ್ಕುದಾರಳು ಯಶೋದ ಎಂದು ವಿಲ್ ಮಾಡಿಸಿದ್ದರು.
ʻಇದೇನ್ ಸಾವಿತ್ರಕ್ಕ ಇಷ್ಟೊಂದು ಖುಶಿಯಾಗಿದ್ದೀರಿ? ಏನ್ಸಮಾಚಾರ?ʼ
ʻಹೌದು ಕಣಪ್ಪ, ಇವತ್ತು ನಮ್ ಗೌರಿ ಹುಟ್ಟಿದ ದಿನʼ
ʻಹೌದಾ ಯಾರು ಗೌರಿ?ʼ
ʻನಾನು ಹೇಳ್ತೇನೆ ಶೇಖರʼ ಎಂದು ಹೇಳುತ್ತ ಒಳಗೆ ಬಂದ ಪ್ರಕಾಶ ಗೌರಿಯ ಪ್ರವರವನ್ನು ಒಪ್ಪಿಸಿದ. ಪ್ರತಿವಾರವೂ ಇಲ್ಲಿಗೆ ಬಂದು ಎಲ್ಲ ಹಿರಿಯರ ಆರೋಗ್ಯ ತಪಾಸಣೆ ಮಾಡುತ್ತಿದ್ದ ಶೇಖರ ಅದೇ ಊರಿನ ಮುರುಗೇಂದ್ರಪ್ಪ ಅವರ ಮಗ. ಪ್ರಕಾಶ ಮತ್ತು ಶೇಖರ ಪ್ರಾಥಮಿಕ ಶಾಲೆಯಿಂದ ಹೈಸ್ಕೂಲು ಮುಗಿಯುವವರೆಗೆ ಒಟ್ಟಿಗೆ ಓದಿದವರು. ಗೆಳೆಯನ ಸಾಹಸದಲ್ಲಿ ತಾನೂ ತನ್ನ ಅಳಿಲುಸೇವೆ ಸಲ್ಲಿಸಲು ಬಯಸಿ ಹತ್ತಿರದ ನಗರದಿಂದ ವಾರಕ್ಕೊಮ್ಮೆ ಬರುವ ಶೇಖರ ಎಲ್ಲರಿಗೂ ಅಚ್ಚುಮೆಚ್ಚು. ಆದರೂ ಸಾವಿತ್ರಕ್ಕ ಅವನ ಮಾತನ್ನು ಕೇಳುವುದಿರಲಿ, ತಪಾಸಣೆ ಮಾಡಿಸಿಕೊಳ್ಳುವುದಕ್ಕೂ ತಗಾದೆ ಮಾಡುತ್ತಿದ್ದವಳು ಈ ದಿನ ತಾನಾಗೇ ಬಂದು ಕುಳಿತಿದ್ದು ಶೇಖರನ ವಿಸ್ಮಯಕ್ಕೆ ಕಾರಣ. ಆ ದಿನ ಅವನಿಗೆ ತಪಾಸಣೆ ಮಾಡಿದ ಎಲ್ಲರ ಆರೋಗ್ಯದಲ್ಲಿಯೂ ತುಸು ಚೇತರಿಕೆ ಕಂಡು ಆಶ್ಚರ್ಯಪಟ್ಟ. ಎಲ್ಲರ ಬಾಯಲ್ಲೂ ಪುಟಾಣಿ ಗೌರಿಯ ಮಾತು. ಕೆಲಸ ಮುಗಿಸಿದ ಅವನು ಗೌರಿ ಮತ್ತು ಯಶೋದಳನ್ನು ಭೇಟಿಯಾದ.
ʻಮೇಡಂ ನಾನು ಕಳೆದ ಐದು ವರ್ಷದಿಂದ ಇಲ್ಲಿಗೆ ಬರುತ್ತಿದ್ದೇನೆ. ಯಾವತ್ತೂ ಕಾಣದ ಲವಲವಿಕೆಯನ್ನು ಇವತ್ತು ಹಿರಿಯರ ಮುಖದಲ್ಲಿ ಕಂಡೆ. ನಿಮ್ಮ ಮಗಳೀಗ ನನ್ನ ಕೆಲಸವನ್ನು ಹಗುರಗೊಳಿಸಿದ್ದಾಳೆʼ ಎಂದು ಪ್ರಶಂಸಿಸಿದ.
ʻಅವಳು ಬಹಳ ತುಂಟಿ. ಇಲ್ಲಿನ ಅಜ್ಜ, ಅಜ್ಜಿಯರನ್ನು ಗೋಳುಹೊಯ್ಯುತ್ತಾಳೆ. ಆದರೂ ಅವರೆಲ್ಲ ಅವಳನ್ನು ಪ್ರೀತಿಯಿಂದ ಕಾಣುತ್ತಾರೆʼ
ʻಪ್ರಾಯಶಃ ಮನೆಯಿಂದ ದೂರವಿರುವ ಹಿರಿಯ ಜೀವಗಳಿಗೆ ಅವಳ ಒಡನಾಟ ಸುಖವನ್ನು ನೀಡಿರಬಹುದುʼ
ಹಾಡು, ಕತೆ, ಆಟ ಎಲ್ಲವೂ ಗೌರಿಗೆ ಅಜ್ಜ ಅಜ್ಜಿಯರ ಸಾಂಗತ್ಯದಲ್ಲಿ ಸಿಗುತ್ತಿದ್ದುದರಿಂದ ಯಶೋದಳಿಗೆ ಕೆಲಸ ಮಾಡಲು ಕಷ್ಟವಾಗಲಿಲ್ಲ. ಎರಡು ವರ್ಷ ಕಳೆದುದೇ ಅವಳ ಅರಿವಿಗೆ ಬರಲಿಲ್ಲ. ಈಗ ಗೌರಿಗೆ ನಾಲ್ಕು ವರ್ಷ ಆಗುವುದರಲ್ಲಿದೆ. ಅವಳನ್ನು ಸ್ಕೂಲಿಗೆ ಸೇರಿಸಬೇಕಿದೆ ಎನ್ನುವ ಯೋಚನೆ ಅವಳದು. ಹೇಗೆ? ಎಲ್ಲಿ ಎಂದು ಚಿಂತಿಸುತ್ತಿದ್ದಳು.
ತಲೆಬಗ್ಗಿಸಿ ಬರೆಯುವುದರಲ್ಲಿ ತಲ್ಲೀನಳಾಗಿದ್ದ ಯಶೋದ ತಲೆಯೆತ್ತಿ ನೋಡಿದಾಗ ತನ್ನೆದುರಿಗೆ ಯಾರೋ ಹೆಂಗಸೊಬ್ಬಳು ನಿಂತಿರುವುದು ಗಮನಕ್ಕೆ ಬಂತು. ಮುಸ್ಸಂಜೆಯ ಇಳಿಬೆಳಕಿನಲ್ಲಿ ಮುಖ ಸ್ಪಷ್ಟವಾಗಲಿಲ್ಲ. ಅಷ್ಟರಲ್ಲಿ ಅಲ್ಲಿಗೆ ಬಂದ ಪ್ರಕಾಶ ಸ್ವಿಚ್ ಹಾಕಿದ.
ʻಓಹ್ ಸುಮತಿ ನೀನು ಇಲ್ಲಿ?ʼ
ʻಅರೆ ಯಶು ನೀನಿಲ್ಲಿ? ನೀನ್ ಜರ್ಮನಿಗೆ ಹೋಗಿದ್ದೆ ಅಲ್ವಾ?ʼ
ʻಅದೆಲ್ಲ ದೊಡ್ಡಕತೆ. ಬಾ ಕೂತ್ಕೋ. ಎಷ್ಟೋ ವರ್ಷಗಳ ನಂತ್ರ ಒಬ್ಬರನ್ನೊಬ್ಬರು ಭೇಟಿಯಾಗಿದೇವೆ. ಹೇಳು ಯಾಕೆ ಬಂದಿದ್ದು ಅಂತʼ
ʻನಾನು ಓದು ಮುಗಿಸಿದ ಮೇಲೆ ಇಲ್ಲೇ ಸಮೀಪದ ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಉಪನ್ಯಾಸಕಿ. ನನ್ನ ಗಂಡ ಸಾಫ್ಟ್‌ವೇರ್ ಇಂಜಿನಿಯರ್. ನಮಗೆ ಮೂರು ವರ್ಷದ ಮಗಳಿದಾಳೆ. ಮೂರು ತಿಂಗಳ ಹಿಂದೆ ನನ್ ಗಂಡನ ಕಂಪನಿ ಎರಡು ವರ್ಷದ ಅವಧಿಗೆ ಅಂತ ಅವನನ್ನು ಹೊರದೇಶಕ್ಕೆ ಕಳಿಸಿದೆ. ಈಗ ನನಗೆ ಎರಡು ವರ್ಷದ ಫೋರ್ಡ್ ಫೌಂಡೇಶನ್ ಫೆಲೋಶಿಪ್ ದೊರೆತಿದೆ. ಮೂರು ವರ್ಷದ ಮಗಳು ಮತ್ತು ತಾಯಿಯನ್ನು ನೋಡಿಕೊಳ್ಳೊ ಜವಾಬ್ದಾರಿ ನನ್ಮೇಲಿದೆʼ
ʻಸರಿ. ಈಗ ಏನ್ಮಾಡ್ತೀಯೆ? ನನ್ನಿಂದ ನಿಂಗೆ ಸಹಾಯ ಮಾಡಲಿಕ್ಕೆ ಆದ್ರೆ ಮಾಡ್ತೇನೆʼ
ʻಯಶು ನನಗೆ ಈ ಅವಕಾಶ ಬಿಡಲಿಕ್ಕೆ ಇಷ್ಟವಿಲ್ಲ. ಆದರೆ ಇವರ ಜವಾಬ್ದಾರಿನೂ ಇದೆ. ಅಪ್ಪ ಹೋಗಿ ಆರುವರ್ಷ ಆಗಿದೆ. ತಮ್ಮ ಕೆನೆಡಾದ ಪ್ರಜೆ. ನನಗೆ ಏನು ಮಾಡದು ಅಂತ ತೋಚ್ತಿಲ್ಲ. ಯಾರೋ ಹೇಳಿದರು ಮಗುವನ್ನು ಇಲ್ಲಿ ನೋಡಿಕೊಳ್ಳುವ ವ್ಯವಸ್ಥೆ ಇದೆಯಾ ಅಂತ ವಿಚಾರಿಸಲಿಕ್ಕೆ. ಅಮ್ಮ ಹೇಗಂತ ನಿನಗೇ ಗೊತ್ತಿದೆ. ಅವರನ್ನು ಇಲ್ಲಿ ಬಿಡಬಹುದುʼ
ʻನಿಂಗೆ ತೊಂದರೆ ಇಲ್ಲ ಅಂತಾದ್ರೆ ನಾನು ಮಗಳ ಜವಾಬ್ದಾರಿ ತೆಗೆದುಕೊಳ್ಳಬಲ್ಲೆ ಗೆಳತಿಯಾಗಿ. ಆದರೆ ಪ್ರಕಾಶ ಅವರ ಅನುಮತಿಯನ್ನು ನೀನೇ ಪಡೆಯಬೇಕುʼ
ʻಆಗಲಿ. ಕೇಳಿನೋಡ್ತೇನೆʼ
ಸುಮತಿ ಯಶೋದ ಹೈಸ್ಕೂಲು ಗೆಳತಿಯರು. ಬೇರೆ ಬೇರೆ ವಿಷಯ ತೆಗೆದುಕೊಂಡಿದ್ದರಿಂದ ಕಾಲೇಜು ದಿನಗಳಲ್ಲಿ ಒಟ್ಟಿಗೆ ಇರಲು ಸಾಧ್ಯವಾಗಿರಲಿಲ್ಲ. ಕೆಲಸಕ್ಕೆ ಸೇರಿದ ಮೇಲೆ ಪತ್ರವ್ಯವಹಾರ ಮಾತ್ರ ಉಳಿದಿತ್ತು. ಬದುಕಿನ ಬಂಡಿಗೆ ಹೆಗಲುಕೊಟ್ಟ ಗೆಳತಿಯರಿಗೆ ಮುಂದೆ ಸಂಪರ್ಕವೇ ಕಡಿದುಹೋಗಿತ್ತು.
ಯಶೋದಳ ಸ್ನೇಹಿತೆಯಾದ್ದರಿಂದ ಅವಳೇ ಎಲ್ಲವನ್ನೂ ನಿಭಾಯಿಸುವುದಾಗಿ ತಿಳಿಸಿದ್ದರಿಂದ ಪ್ರಕಾಶ ಅರೆಮನಸ್ಸಿನಿಂದಲೇ ಸಮ್ಮತಿ ನೀಡಿದ. ಸುಮತಿ ಒಂದು ವಾರ ಅಲ್ಲಿಯೇ ಇದ್ದು ಮಗಳು ವಿನಂತಿ ಯಶೋದಳಿಗೆ ಹೊಂದಿಕೊಳ್ಳುವಂತೆ ಮಾಡಿ ಮಿಶಿಗನ್‌ಗೆ ತೆರಳಿದಳು. ಗೌರಿಗೀಗ ಗೆಳತಿ ದೊರೆತುದರಿಂದ ಎಲ್ಲ ಕಡೆ ಅವರಿಬ್ಬರದೇ ಕಾರುಬಾರು. ಗೌರಿಯೊಂದಿಗೆ ವಿನಂತಿಯೂ ಸೇರಿದ್ದರಿಂದ ಹಿರಿಯರೆಲ್ಲ ಮಕ್ಕಳಿಗೆ ಹಾಡು, ಕತೆಗಳೊಂದಿಗೆ ಅಕ್ಷರಗಳನ್ನೂ ಕಲಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ಆಶ್ರಮಕ್ಕೆ ಬಂದಿದ್ದ ವಾಸುದೇವ ನಿವೃತ್ತ ಅಧ್ಯಾಪಕರು. ಕನ್ನಡ ಮತ್ತು ಇಂಗ್ಲಿಷ್ ಅಕ್ಷರಗಳನ್ನು, ಮಗ್ಗಿ ಪ್ರಾಣಿಗಳ ಪರಿಚಯ ಎಲ್ಲವನ್ನೂ ಅವರು ಚಿತ್ರ, ಹಾಡುಗಳ ಮೂಲಕ ಕಲಿಸುತ್ತಿದ್ದರು.
ʻಸರ್ ನನಗೆ ಅನುಮಾನವಿತ್ತು ವಿನಂತಿ ಹೊಂದಿಕೊಳ್ಳುವ ಬಗ್ಗೆ. ಆದರೆ ಅವಳು ಚೆನ್ನಾಗಿ ಹೊಂದಿಕೊಂಡಿದ್ದಾಳೆ. ಹಿರಿಯರಿಗೂ ಅವಳ ಇರುವಿಕೆ ಸಂತೋಷಕೊಟ್ಟಿದೆʼ
ʻಹೌದು ಮೇಡಂ. ಮಕ್ಕಳು ಅಂದ್ರೆ ಎಲ್ಲರಿಗೂ ಒಂದು ಆಪ್ತಭಾವʼ
ʻನನಗೊಂದು ಆಲೋಚನೆ ಬರ್ತಾ ಇದೆ. ಒಂದು ಶಿಶುಪಾಲನಾ ಕೇಂದ್ರವನ್ನು ಪ್ರಾರಂಭಿಸಿದರೆ ಹೇಗೆ? ಎಂದುʼ
ʻಹೂಂ ಒಳ್ಳೇ ಯೋಚನೆ. ಮಾಡಬಹುದೇನೋ! ಆಗಲಿ ನೀವು ಒಂದು ಯೋಜನೆ ಸಿದ್ಧಪಡಿಸಿ. ನಮಗೆ ಸ್ಥಳದ ಅಭಾವವಂತೂ ಇಲ್ಲʼ
ʻಊರಿನಲ್ಲಿ ಒಂದು ಅಂಗನವಾಡಿ ಇದೆ. ಅದು ಸರಕಾರದ ವತಿಯಿಂದ ನಡಿತಿದೆ. ಸುತ್ತಮುತ್ತ ಹತ್ತಿರದಲ್ಲಿ ಮತ್ಯಾವ ಶಿಶುಪಾಲನಾ ಕೇಂದ್ರವೂ ಇಲ್ಲ. ನೀವು ಹೇಳಿದಂತೆ ಒಂದು ವಾರದಲ್ಲಿ ವಿಸ್ತೃತ ಯೋಜನೆಯನ್ನ ಸಿದ್ಧಪಡಿಸ್ತೇನೆʼ
ಆ ದಿನ ಟ್ರಸ್ಟಿಗಳ ಮುಂದೆ ಯೋಜನೆಯ ರೂಪುರೇಷೆಗಳನ್ನು ಪ್ರಕಾಶ ಮುಂದಿಟ್ಟಾಗ ಅದಕ್ಕೆ ಶೇಖರ ಇನ್ನೊಂದ ಅಂಶವನ್ನೂ ಸೇರಿಸಿದ. ಕೆಲವೊಮ್ಮೆ ಕಾರ್ಯಾರ್ತವಾಗಿ ಮಕ್ಕಳಿಗೆ ಹೊರದೇಶಗಳಿಗೆ ಹೋಗುವ ಅವಕಾಶ ಅಥವಾ ಅನಿವಾರ್ಯತೆ ಉಂಟಾದರೆ ಈ ಕಾಲಕ್ಕೆ ಯಾರೂ ಹಿರಿಯರನ್ನು ತಾತ್ಕಾಲಿಕವಾಗಿ ನೋಡಿಕೊಳ್ಳಲು ಸಿದ್ಧರಿರುವುದಿಲ್ಲ. ಹಾಗಾಗಿ ಅದಕ್ಕೂ ವ್ಯವಸ್ಥೆ ಕಲ್ಪಿಸಬಹುದು. ಹಾಗೆಯೇ ಮಕ್ಕಳಿಗಾಗಿಯೂ ತಾತ್ಕಾಲಿಕ ತಂಗುದಾಣವನ್ನೂ ಮಾಡಬಹುದೇ ಎಂದು ಯೋಚಿಸಬೇಕು ಎಂದು.
ʻಶೇಖರ ನೀನು ಪ್ರಸ್ತಾಪಿಸಿದ ವಿಷಯ ವಿಚಾರಯೋಗ್ಯವೇ. ಆದರೆ ಅದಕ್ಕೆ ಒಂದಿಷ್ಟು ಅಧ್ಯಯನದ ಅಗತ್ಯವಿದೆʼ
ʻಹೌದು ಪ್ರಕಾಶ. ನಿನ್ನೆ ನಾನು ಒಂದು ಲೇಖನ ಓದ್ದೆ. ಹೊರದೇಶದ ವಿಶ್ವವಿದ್ಯಾಲಯವೊಂದು ಈ ಕುರಿತು ಒಂದು ಅಧ್ಯಯನ ನಡೆಸಿದೆಯಂತೆ. ವೃದ್ಧಾಶ್ರಮಕ್ಕೆ ಹೊಂದಿದಂತೆ ಶಿಶುಪಾಲನಾ ಕೇಂದ್ರಗಳಿದ್ರೆ ಅಲ್ಲಿನ ಹಿರಿಯರು ಬೇರೆ ಕಡೆಗಿಂತ ಹೆಚ್ಚು ಲವಲವಿಕೆಯಿಂದ ಇರುತ್ತಾರೆ ಅಂತ ವರದಿ ಹೇಳುತ್ತಿದೆಯಂತೆ. ಜೊತೆಗೆ, ಮಕ್ಕಳಿಗೂ ಅಜ್ಜ ಅಜ್ಜಿಯರ ಒಡನಾಟ ಸಿಗೋದ್ರಿಂದ ಮಕ್ಕಳೂ ಆಸಕ್ತಿಯಿಂದ ಕಲಿತಾರೆ ಅನ್ನೋದು ಅಧ್ಯಯನದ ವರದಿʼ
ʻಓಹೋ! ಆದರೆ ಇದೊಂದು ದೊಡ್ಡ ಪ್ರಾಜಕ್ಟ್. ನಮ್ಮ ಕೈಗೆಟಕುತ್ತೋ ಇಲ್ವೋ ಅನ್ನೋದನ್ನು ಯೋಜಿಸುವ ಮೊದಲು ಯೋಚಿಸಬೇಕು. ಯಾಕೆಂದ್ರೆ ನಾವು ಸರಕಾರದ ಅನುದಾನಕ್ಕೆ ಕಾಯೋರಲ್ಲʼ
ʻನೀನೇನು ಯೋಚಿಸಬೇಡ. ಅಜೀಂ ಪ್ರೇಮಜಿಯಂಥ ದಾನಿಗಳನ್ನು ಸಂಪರ್ಕಿಸಿದ್ರೆ ಒಂದಿಷ್ಟು ಸಹಾಯ ಸಿಗಬಹುದು. ಅವರ ಪರಿಚಿತರೊಬ್ಬರ ಪರಿಚಯ ನನಗಿದೆ. ಪ್ರಯತ್ನಿಸಿದ್ರೆ ಆಯ್ತು ನೋಡೋಣʼ
ʻಹೌದು ಸರ್. ಶೇಖರ್ ಹೇಳಿದ್ಹಾಗೆ ಒಂದಿಷ್ಟು ದಾನಿಗಳ್ನ ಹಿಡಿಯೋಣ. ನನ್ ಅಳಿಯ ಲಂಡನ್ನಲ್ಲಿ ಇದಾನೆ. ಅವ್ನಿಗೂ ಹೇಳ್ತೇನೆ. ಹೊರದೇಶದಲ್ಲಿರೋ ನಮ್ಮೂರಿನವ್ರೂ ಕೈಗೂಡಿಸಿದ್ರೆ ಕಷ್ಟ ಆಗಲಿಕ್ಕಿಲ್ಲʼ
ʻಆಗಲಿ, ನೀವೆಲ್ಲ ಟ್ರಸ್ಟಿಗಳು ಉತ್ಸಾಹ ತೋರುಸ್ತಿದೀರಿ. ಊರಿಗೆ ಒಳ್ಳೇದಾಗೋದಾದ್ರೆ ಮಾಡೋಣಂತೆʼ ಎಂದು ಪ್ರಕಾಶ ಸಲಹೆಯನ್ನು ಒಪ್ಪಿದ.
*****
ʻಯಶೋದ. ನನ್ನ ಮಗಳು ಹೀಗೆ ನಿಂಗೆ ಅದಕ್ಕಿಂತ ಹೆಚ್ಚಾಗಿ ಇಲ್ಲಿ ಪರಿಸರಕ್ಕೆ ಇಷ್ಟು ಚೆನ್ನಾಗಿ ಹೊಂದಿಕೊಳ್ತಾಳೆ ಅಂದುಕೊಂಡಿರ್ಲಿಲ್ಲ. ಬಹಳ ಥ್ಯಾಂಕ್ಸ್ ಕಣೆʼ
ತನ್ನ ನಿರೀಕ್ಷೆಯನ್ನೂ ಮೀರಿ ವಿನಂತಿ ಯಶೋದಳಿಗೆ ಮತ್ತು ಆಶ್ರಮದ ಪರಿಸರಕ್ಕೆ ಹೊಂದಿಕೊಂಡುದನ್ನು ಕಂಡು ಸುಮತಿಗೆ ಬಹಳ ಸಂತೋಷವಾಯಿತು.
ʻಗೆಳತೀರ ಮಧ್ಯೆ ಇವೆಲ್ಲ ಯಾಕೆ? ಎರಡು ದಿನ ಇದ್ದು ಸುಧಾರಿಸ್ಕೋ. ಆಮೇಲೆ ಮಗ್ಳನ್ನು ಕರ್ಕಂಡು ಹೋಗ್ಬಹುದುʼ
ʻಅಮ್ಮಾ ನಾವಿಲ್ಲೇ ಇರೋಣ ಎಲ್ಲಿಗೂ ಹೋಗೋದು ಬ್ಯಾಡʼ
ʻಮುಂದಿನ ವಾರ ಅಪ್ಪ ಬರ್ತಾರೆ ಪುಟ್ಟಾ. ಮನೆಗೆ ಹೋಗ್ಬೇಕು. ಅಲ್ಲೇ ಸ್ಕೂಲಿಗೆ ಹೋಗ್ವಂತೆʼ
ʻಊಂಹೂಂ ನಾನಿಲ್ಲೆ ಇರ್ತೀನಿ. ಗೌರಿ ಇದಾಳೆ. ಯಶೋದ ದೊಡ್ಡಮ್ಮ ಎಷ್ಟೊಂದು ಅಜ್ಜ, ಅಜ್ಜಿ ಎಲ್ಲ ಇದಾರೆ. ನಾನು ಎಲ್ಲಿಗೂ ಬರಲ್ಲʼ
ʻಏನೇ ಯಶೋದ ನನ್ ಮಗಳಿಗೆ ಏನ್ ಮೋಡಿ ಮಾಡಿದೀಯೆ?ʼ
ʻಎರಡ್ಮೂರು ದಿನ ಹೋಗ್ಲಿ. ಸಧ್ಯಕ್ಕೆ ಸುಮ್ಮನಿರುʼ
ಸುಮತಿ ಬರುವಷ್ಟರಲ್ಲಿ ಅಲ್ಲೊಂದು ಶಿಶುಪಾಲನಾ ಕೇಂದ್ರ ಪ್ರಾರಂಭವಾಗಿತ್ತು. ಎರಡು ತಿಂಗಳ ಮೊದಲು ದಾನಿಯೊಬ್ಬರಿಂದ ಅದರ ಉದ್ಘಾಟನೆಯಾಗಿ ಈಗ ಅಲ್ಲಿ ಹತ್ತು ಮಕ್ಕಳಿದ್ದರು. ವಿನಂತಿಗೆ ಅವರೆಲ್ಲರ ಒಡನಾಟ ದೊರೆತಿತ್ತು. ಊರಿನ ಇಬ್ಬರು ಯುವತಿಯರು ಅವರಿಗೆಲ್ಲ ಆಟ ಪಾಠ ಅಕ್ಷರ ಕಲಿಸುತ್ತಿದ್ದರು. ನಾಡಿನ ಪತ್ರಿಕೆಗಳು ಪ್ರಕಾಶ, ಯಶೋದ ಮತ್ತು ಶೇಖರ ಮೂವರ ಯೋಜನೆ ಮತ್ತು ಶ್ರಮವನ್ನು ಹೊಗಳಿ ಅಗ್ರಲೇಖನಗಳನ್ನು ಬರೆದಿದ್ದವು. ವೃದ್ಧಾಶ್ರಮಕ್ಕೆ ಸೇರಲು ಇಪ್ಪತ್ತು ಅರ್ಜಿಗಳು ಬಂದಿದ್ದವು.

ʻಸಾವಿತ್ರಕ್ಕ ಅದೇನು ಇವತ್ತು ಆಫೀಸ್ ಕಡೆ ಬಂದಿದ್ದು?ʼ
ʻಹೌದು ಪ್ರಕಾಶಪ್ಪ.
ವಿನಂತಿ ಅಮ್ಮ ಬಂದಿದ್ದು ನೋಡ್ದೆ. ಅವಳನ್ನು ಕರ್ಕೊಂಡು ಹೋಗಬೇಡ. ಅವ್ಳು ಇಲ್ಲೆ ಇರ್ಲಿ ಅಂತ ಹೇಳಕ್ಕೆ ಬಂದೆʼ
ಸಾವಿತ್ರಕ್ಕನ ಮಾತಿಗೆ ಪ್ರಕಾಶನ ಮುಗುಳ್ನಗುವೇ ಉತ್ತರವಾಯಿತು.

ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.
