Advertisement
ಚುನಾವಣಾ ಕಣಕ್ಕೆ ಪ್ರವೇಶ: ಡಾ. ವಿನತೆ ಶರ್ಮ ಅಂಕಣ

ಚುನಾವಣಾ ಕಣಕ್ಕೆ ಪ್ರವೇಶ: ಡಾ. ವಿನತೆ ಶರ್ಮ ಅಂಕಣ

ಈ ಬಾರಿ ಈ ಡಟ್ಟನ್ ಮಹಾಶಯ ವಲಸಿಗರ ಮನ ಓಲೈಸುವ ಪ್ರಯತ್ನಕ್ಕೆ ಇಳಿದಿದ್ದಾರೆ. ಪ್ರತಿದಿನವೂ ಆಸ್ಟ್ರೇಲಿಯನ್ ನಗರಗಳ ಹೊರವಲಯಗಳಲ್ಲಿ ವಾಸಿಸುತ್ತಿರುವ ವಲಸಿಗ ಸಮುದಾಯಗಳಿಗೆ ಭೇಟಿಕೊಟ್ಟು, ಭರವಸೆಗಳನ್ನು ಕೊಡುತ್ತಿದ್ದಾರೆ. ತಾವು ವಲಸಿಗರ ‘ಆಸ್ಟ್ರೇಲಿಯನ್ ಕನಸು’ ಎಂಬುದಕ್ಕೆ ಬೆಂಬಲ ಕೊಟ್ಟು, ವಲಸಿಗರ ಜೀವನವನ್ನು ಹಸನು ಮಾಡುವ ಮಾತನ್ನು ಆಡುತ್ತಿದ್ದಾರೆ. ವಲಸಿಗರೂ ಅಷ್ಟೇ, ಬಹಳ ಆಸಕ್ತಿಯಿಂದ ಚುನಾವಣಾ ವಿಷಯಗಳಲ್ಲಿ ಭಾಗವಹಿಸುತ್ತಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಪ್ರಿಯ ಓದುಗರೆ,

ಕಳೆದ ಅಂಕಣ ಬರಹದಲ್ಲಿ ಆಸ್ಟ್ರೇಲಿಯನ್ ಚುನಾವಣೆಗೆ ಆಟ ಕಟ್ಟಲು ಸಿದ್ಧತೆ ನಡೆದಿದೆ ಎಂದು ಬರೆದಿದ್ದೆ. ಅದಾದ ಮೇಲೆ ಆಸ್ಟ್ರೇಲಿಯನ್ ಪ್ರಧಾನಮಂತ್ರಿ ಆಂಟೊನಿ ಆಲ್ಬಾನೀಸಿ ಅವರು ಮಾರ್ಚ್ ೨೮ರಂದು ಬೆಳ್ಳಂಬೆಳಗ್ಗೆ ಗವರ್ನರ್ ಜನರಲ್ ಸ್ಯಾಮ್ ಮೊಸ್ಟೈನ್ (ಮಹಿಳೆ) ನಿವಾಸಕ್ಕೆ ಹೋಗಿ ಚುನಾವಣಾ ದಿನಾಂಕವನ್ನು ಘೋಷಿಸಲು ಅನುಮತಿ ಪಡೆದರು.

ಬರಲಿರುವ ಮೇ ತಿಂಗಳ ೩ ನೇ ತಾರೀಕು ‘Australia Votes’ – ಹೊಸ ಕೇಂದ್ರ ಸರಕಾರದ ಆಯ್ಕೆಗೆ ಚುನಾವಣೆ ನಡೆಯಲಿದೆ.

ಪ್ರಧಾನಮಂತ್ರಿಗಳು ಚುನಾವಣಾ ಪ್ರಚಾರವನ್ನು ಆರಂಭಿಸಿದ್ದು ಬೇರೆಲ್ಲೂ ಅಲ್ಲ, ನಾನು ವಾಸವಿರುವ constituency ಇಂದ. ಇದು ವಿರೋಧಪಕ್ಷದ ಮುಖಂಡರಾದ ಪೀಟರ್ ಡಟ್ಟನ್ ಅವರ ರಾಜಕೀಯ ಕ್ಷೇತ್ರ. ಅದೇ ಕಾರಣಕ್ಕೆಂದು ಪ್ರಧಾನಮಂತ್ರಿಗಳು ಈ ಕ್ಷೇತ್ರದಿಂದಲೆ ತಮ್ಮ ಪ್ರಚಾರಕ್ಕಿಳಿದಿದ್ದು.

ಹೋದ ಶನಿವಾರ ಜಿಟಿಜಿಟಿ ಮಳೆ. ಎಲ್ಲೆಲ್ಲೂ ನೀರು ನೀರು, ಮಳೆ ಮಳೆ. ಸೈಕ್ಲೋನ್ ಆಲ್ಫ್ರೆಡ್ ಮಾಡಿದ್ದ ಚೇಷ್ಟೆಗಳಿಂದ ನಾವೆಲ್ಲಾ ಸುಧಾರಿಸಿಕೊಳ್ಳುತ್ತಾ ಇದ್ವಿ. ಆಗ ಬಂತು ಈ ಸುದ್ದಿ – ಪ್ರಧಾನಮಂತ್ರಿ ಆಂಟೊನಿ ಆಲ್ಬಾನೀಸಿ ಅವರು ಬ್ರಿಸ್ಬೇನ್‌ಗೆ ಬಂದಿದ್ದಾರೆ, ಅದರಲ್ಲೂ ನಮ್ಮ ಕ್ಷೇತ್ರಕ್ಕೇ ಬಂದಿದ್ದಾರೆ, ತಮ್ಮ ಅಧಿಕೃತ ಪ್ರಚಾರಕ್ಕೆ ಕೀ ಕೊಟ್ಟಿದ್ದಾರೆ. ಇದು ತಿಳಿಯುವಷ್ಟರಲ್ಲಿ ಬೆಳಗ್ಗೆ ೧೦ ಗಂಟೆಯಾಗಿತ್ತು. ಅವರ ಪ್ರಚಾರವನ್ನು ಕೇಳೋಣ, ನೋಡೋಣ ಎಂದು ಬೇಗಬೇಗ ತಯ್ಯಾರಾಗಿ ಅಲ್ಲಿಂದ ಇಲ್ಲಿ ಅಂತ ಹುಡುಕಿಕೊಂಡು ಹೋಗುವಷ್ಟರಲ್ಲಿ ಅವರು ಮುಂದೆ ಮುಂದೆ ಮತ್ತೊಂದು ನಿಗದಿತ ಸ್ಥಳಕ್ಕೆ ಹೋಗಿದ್ದರು.

ನಿರಾಸೆಯಾಗಿತ್ತು. ಅಷ್ಟೇ ಅಲ್ಲ, ಸ್ವಲ್ಪ ಆಶ್ಚರ್ಯವೂ ಆಯ್ತು. ಅಲ್ಲಾ ಏನಿದು, ತಾವು ಬರುತ್ತಿರುವ ವಿಷಯವನ್ನು ಸ್ವಲ್ಪ ಜಾಸ್ತಿಯಾಗೆ ಹೇಳಬಹುದಿತ್ತಲ್ವಾ. ಅಲ್ಲಿ ನಮ್ಮ ಭಾರತದಲ್ಲಿ ನೋಡಿ, ಪುಡಿ ನಾಯಕರು, ಪುಢಾರಿಗಳು ಕೂಡ ಅದೇನು ಅಬ್ಬರದಿಂದ ಬರ್ತಾರೆ, ಅವರ ಹಿಂಬಾಲಕರಿಗಂತೂ ಆ ದಿನವೆಲ್ಲಾ ಹಬ್ಬ!

ಇಲ್ಲಿ ನಮ್ಮ ಆಸ್ಟ್ರೇಲಿಯಾದಲ್ಲಿ ಏನೇನೂ ಶಬ್ದ ಮಾಡದೆ ಪ್ರಧಾನಮಂತ್ರಿಗಳೆ ಸ್ವತಃ ತಣ್ಣನೆ ಸಾವಧಾನದಿಂದ ಬಂದು, ಸಾರ್ವಜನಿಕರೊಂದಿಗೆ ಬೆರೆತು, ಜೊತೆ ಕೂತು ತಿಂಡಿ ತಿಂದು, ಒಂದಷ್ಟು ನಕ್ಕು ಹೋದರು. ಮಧ್ಯೆ ತಮ್ಮ ಸರಕಾರ ಮಾಡಿರುವ, ಮಾಡುತ್ತಿರುವ ಜನಪರ-ಜನಹಿತ ಕೆಲಸಗಳ ಬಗ್ಗೆ ಮಾತನಾಡಿ, ಅವನ್ನು ಮುಂದುವರೆಸಲು ಸ್ವಲ್ಪ ಕಾಲಾವಕಾಶ ಕೊಡಿ, ತಮ್ಮ ಪಕ್ಷಕ್ಕೆ ನಿಮ್ಮ ಮತ ಕೊಡಿ, ಎಂದು ಕೇಳಿಕೊಂಡರು.

ವಿರೋಧಪಕ್ಷದ ನಾಯಕ ಪೀಟರ್ ಡಟ್ಟನ್ ಅವರ ಚುನಾವಣಾ ಪ್ರಣಾಳಿಕೆ ಮಂತ್ರವೇನೆಂದರೆ ‘put Australia back on track’. ಇದರಲ್ಲಿ ಅಮೆರಿಕೆಯ ಟ್ರಂಪ್ ಚುನಾವಣಾ ಪ್ರಚಾರದ ಪ್ರಭಾವವಿದೆ ಎಂದು ಎಲ್ಲರೂ ಹೇಳಿದ್ದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಆಲ್ಬಾನೀಸಿ ಹೇಳುತ್ತಿರುವುದು, ‘ನೋಡಿ, ನಾವು ಈ ಮೇಕ್ ಗ್ರೇಟ್, ಬ್ಯಾಕ್ ಆನ್ ಟ್ರ್ಯಾಕ್ ಅನ್ನೊ ಕೊಂಕುಮಾತುಗಳನ್ನು ಆಡುತ್ತಿಲ್ಲ. ಪ್ರಾಮಾಣಿಕವಾಗಿ ಮಾತನಾಡುತ್ತೀವಿ’ ಎಂದು.

ಮೂರು ವರ್ಷಗಳ ಹಿಂದೆ ಅವರ ಸರಕಾರದ ರಚನೆಯಾದಾಗ ಆಗೊಂದು ಸ್ಪಷ್ಟ ಉದ್ದೇಶವಿತ್ತು, ಬಲಪಕ್ಷಗಳ ಹಿಡಿತದಿಂದ ಸಮಾಜವು ಹೊರಬಂದು ಆಸ್ಟ್ರೇಲಿಯಾಕ್ಕೆ ಒಂದು ಬದಲಾವಣೆ ಬರಬೇಕಿತ್ತು. ಆ ನಿಟ್ಟಿನಲ್ಲಿ ತಾವು ಶುರುಮಾಡಿದ ಕೆಲಸಗಳು ಮುಂದುವರೆಯಬೇಕು. ಅದರಲ್ಲೂ ಎಲ್ಲರನ್ನೂ ತುಂಬಾ ಭಾದಿಸುತ್ತಿರುವ cost of living ಸಮಸ್ಯೆಯನ್ನು ಕಡಿಮೆಮಾಡಲು, ಹೆಚ್ಚಿನ ಜನರಿಗೆ ಆರೋಗ್ಯ ರಿಯಾಯ್ತಿ ಲಭಿಸಿದೆ, ಇನ್ನೂ ಹೆಚ್ಚಿನವರಿಗೆ ಅದು ತಲುಪಲು ನಾವು ಕೆಲಸ ಮಾಡುತ್ತಿದ್ದೀವಿ, ಹೀಗೆ ತಮ್ಮ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಇವು ಮುಂದುವರೆಯಬೇಕು, ಇದು ಮತ್ತು ಇತರ ಹಲವಾರು ಜನಪರ ಕ್ರಮಗಳನ್ನು ಮುಂದುವರೆಸಲು ಜನರು ತಮ್ಮ ಲೇಬರ್ ಪಕ್ಷಕ್ಕೆ ಅವಕಾಶ ಕೊಡಬೇಕು, ಎಂದು ಕೇಳುತ್ತಿದ್ದಾರೆ.

ಒಂದು ವಾರದಲ್ಲಿ ಪ್ರಧಾನಮಂತ್ರಿ ಆಲ್ಬಾನೀಸಿ ಅವರು ದೇಶದ ಎಲ್ಲಾ ರಾಜ್ಯಗಳಿಗೆ ಭೇಟಿ ಕೊಟ್ಟಿದ್ದಾರೆ ಎಂದು ಸುದ್ದಿಮಾಧ್ಯಮಗಳು ಹೇಳಿವೆ. ಖಂಡ-ದೇಶವಾದ ವಿಶಾಲ ಆಸ್ಟ್ರೇಲಿಯಾದಲ್ಲಿ ರಾಜ್ಯಗಳನ್ನು ಸುತ್ತುವುದೆಂದರೆ ಸುಲಭದ ಕೆಲಸವಲ್ಲ.

ಇನ್ನು ವಿರೋಧಪಕ್ಷದ ನಾಯಕರಾದ ಪೀಟರ್ ಡಟ್ಟನ್ ಅವರಿಗೆ, ಅವರ ಲಿಬರಲ್ ಪಕ್ಷಕ್ಕೆ ಬಲಪಂಥೀಯರ ಒಲವಿದೆ. ಕಟ್ಟಾ ಬಿಳಿ ಆಸ್ಟ್ರೇಲಿಯನ್ನರು, ತಮ್ಮ ಬಿಳಿತನದಲ್ಲಿ, ಅದರ ಪ್ರಾಬಲ್ಯದಲ್ಲಿ ಅಚಲ ನಂಬಿಕೆಯಿರುವ ಬಿಳಿಯರು ಡಟ್ಟನ್ ಅವರ ಆರಾಧಕರು. ಇದರ ಅರಿವಿಲ್ಲದೆ, ಇವರುಗಳು ವಾಸಿಸುವ ಕ್ಷೇತ್ರದಲ್ಲಿ ಮನೆಮಾಡಿ ನಾನು ಅನುಭವಿಸಿರುವ ರೇಸಿಸಮ್ ಪ್ರಕರಣಗಳಿಗೆ ಕೊನೆಮೊದಲಿಲ್ಲ.

ಆದರೆ ಈ ಬಾರಿ ಈ ಡಟ್ಟನ್ ಮಹಾಶಯ ವಲಸಿಗರ ಮನ ಓಲೈಸುವ ಪ್ರಯತ್ನಕ್ಕೆ ಇಳಿದಿದ್ದಾರೆ. ಪ್ರತಿದಿನವೂ ಆಸ್ಟ್ರೇಲಿಯನ್ ನಗರಗಳ ಹೊರವಲಯಗಳಲ್ಲಿ ವಾಸಿಸುತ್ತಿರುವ ವಲಸಿಗ ಸಮುದಾಯಗಳಿಗೆ ಭೇಟಿಕೊಟ್ಟು, ಭರವಸೆಗಳನ್ನು ಕೊಡುತ್ತಿದ್ದಾರೆ. ತಾವು ವಲಸಿಗರ ‘ಆಸ್ಟ್ರೇಲಿಯನ್ ಕನಸು’ ಎಂಬುದಕ್ಕೆ ಬೆಂಬಲ ಕೊಟ್ಟು, ವಲಸಿಗರ ಜೀವನವನ್ನು ಹಸನು ಮಾಡುವ ಮಾತನ್ನು ಆಡುತ್ತಿದ್ದಾರೆ. ವಲಸಿಗರೂ ಅಷ್ಟೇ, ಬಹಳ ಆಸಕ್ತಿಯಿಂದ ಚುನಾವಣಾ ವಿಷಯಗಳಲ್ಲಿ ಭಾಗವಹಿಸುತ್ತಿದ್ದಾರೆ.

ಕಳೆದ ಬಾರಿಯ ಚುನಾವಣೆಯಲ್ಲಿ ಗೆದ್ದಾಗ ಡಟ್ಟನ್ ಅವರಿಗೆ ಹೇಳಿಕೊಳ್ಳುವ ಬಹುಮತ ಸಿಕ್ಕಿರಲಿಲ್ಲ. ಕೂದಲೆಳೆಯಲ್ಲಿ ಪಾರಾಗಿದ್ದರು, ಆದ್ದರಿಂದ ಈ ಬಾರಿ ಜಾಗ್ರತೆ ವಹಿಸಿ, ತಮ್ಮ ‘ಬಿಳಿತನ’ ವನ್ನು ಸ್ವಲ್ಪ ಪಕ್ಕಕ್ಕಿಟ್ಟು ವಲಸಿಗರಲ್ಲಿ ಮತ ಯಾಚನೆ ಮಾಡುತ್ತಿದ್ದಾರೆ ಎನ್ನುವ ವಿಶ್ಲೇಷಣೆಯಿದೆ. ಅದರಲ್ಲೂ ಆರ್ಥಿಕವಾಗಿ ಬಲಹೀನರು ಎಂದು ಗುರುತಿಸಲ್ಪಟ್ಟ ಸಮುದಾಯಗಳ ಕಡೆ ಅವರ ಕಣ್ಣಿದೆ.

ಆಸ್ಟ್ರೇಲಿಯಾವನ್ನು ಮತ್ತೆ ವಿಜೃಂಭಿಸುವಂತೆ ಮಾಡುತ್ತೀವಿ ಎನ್ನುತ್ತಿರುವ ಡಟ್ಟನ್ ಅವರ ಚುನಾವಣಾ ಪ್ರಚಾರದಲ್ಲಿ ಅಮೆರಿಕೆಯ ಟ್ರಂಪ್ ಚುನಾವಣಾ ಛಾಯೆ ದಟ್ಟವಾಗಿ ಕಾಣುತ್ತಿದೆ, ಎಂದು ಎಲ್ಲರೂ ಹೇಳುತ್ತಿದ್ದಾರೆ. ‘ಮತ್ತೆ ವಿಜೃಂಭಿಸುವ’ ಮಾತ್ಯಾಕೆ ಬಿಡಿ, ಯಾವಾಗಲಾದರೂ ಈ ಬಿಳಿಜನರ ಆಡಳಿತದಲ್ಲಿ ಆಸ್ಟ್ರೇಲಿಯಾ ವಿಜೃಂಭಿಸಿತ್ತಾ? ‘ಬ್ಯಾಕ್ ಆನ್ ಟ್ರ್ಯಾಕ್’ ಅನ್ನುವಾಗ ಆ ಟ್ರ್ಯಾಕ್ ಯಾವುದು, ಎಲ್ಲಿದೆ, ಯಾರಿಗೆ ಸೇರಿದೆ, ಹೇಗಾಯ್ತು ಆ ಟ್ರ್ಯಾಕ್ ಅನ್ನೋದನ್ನ ಸ್ವಲ್ಪ ವಿವರಿಸಿ ಹೇಳಿ, ಎಂದು ಆಸ್ಟ್ರೇಲಿಯನ್ ಮೂಲಜನರು ಕಿಚಾಯಿಸುತ್ತಿದ್ದಾರೆ.

ಲೇಬರ್, ಲಿಬರಲ್ ಎರಡು ಮುಖ್ಯ ರಾಜಕೀಯ ಪಕ್ಷಗಳ ಜೊತೆ ಚುನಾವಣಾ ಕಣದಲ್ಲಿ ಇರುವುದು ಗ್ರೀನ್ಸ್ ಪಕ್ಷ, ಇಂಡಿಪೆಂಡೆಂಟ್ ಅಭ್ಯರ್ಥಿಗಳು, ಟೀಲ್ ಅಭ್ಯರ್ಥಿಗಳು, ಇನ್ನಿತರ ಸ್ವಲ್ಪ ಹೆಸರು ಗಳಿಸಿರುವ ಪಕ್ಷಗಳು. ದೇಶದ ಜನಸಂಖ್ಯೆ ಕೇವಲ ಇಪ್ಪತ್ತಾರು ಮಿಲಿಯನ್ ಆದರೂ ಚುನಾವಣೆಗಳಲ್ಲಿ ಜನರ ಆಸಕ್ತಿ ಹೆಚ್ಚುತ್ತಿದೆ. ಇದರಲ್ಲಿ ವಲಸಿಗರ ಪಾತ್ರ ದೊಡ್ಡದು ಎನ್ನುವ ಮಾತಿದೆ.

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ