ಅಲ್ಲಿನ ಪರಿಸ್ಥಿಯನ್ನು ಅವಲೋಕಿಸಿ ನಾನು ಹಾವು ಹಿಡಿಯುವಾಗ ಮನೆಯೊಳಕ್ಕೆ ಯಾರೂ ಬರಬಾರದೆಂದೂ ಬಾಗಿಲು ಹಾಕಿಕೊಂಡಿದ್ದಾನೆ. ಅದಾದ ಅರ್ಧ ಗಂಟೆಗೆ ಕೈಯಲ್ಲಿ ಮಾರುದ್ದದ ನಾಗರ ಹಾವನ್ನು ಹಿಡಿದು ಹೊರ ಬಂದು ನೆರೆದಿದ್ದ ಜನರಿಗೆಲ್ಲಾ ಹಾವನ್ನು ತೋರಿಸಿ ಶಬ್ಬಾಶ್‌ಗಿರಿಯನ್ನು ಪಡೆದು ಐನೂರು ರೂಪಾಯಿಯನ್ನೂ ನಾಲ್ಕೈದು ಸೇರು ರಾಗಿಯನ್ನೂ ಇಸುಕಂಡು ಬಂದಿದ್ದಾನೆ. ನಿಟ್ಟುಸಿರುಬಿಟ್ಟ ಮನೆಯವರು ಬಾಣದ ದೇವರ ಹಟ್ಟಿಯ ಜುಂಜಪ್ಪ ದೇವರಿಗೆ ಹರಕೆ ಕಟ್ಟಿಕೊಂಡು ಮನೆಯೊಳಕ್ಕೆ ಹೋಗಿದ್ದಾರೆ. ನೋಡಿದರೆ ಅದೇ ಹಾವು ಅಡಿಗೆಮನೆಯ ಕೋಡೊಲೆಗಳ ಮೇಲೆ ಉದ್ದಕ್ಕೆ ಮಲಗಿದೆ! ಹಂಗಾಗಿ ಮನೆಯ ಯಜಮಾನ ತಕ್ಷಣ ಅವನನ್ನು ಹುಡುಕಿಕೊಂಡು ಬಂದಿದ್ದಾನೆ.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಆರನೆಯ ಕಂತು
ನನಗೆ ಹಾವುಗಳನ್ನು ಕಂಡರೆ ಭಯಂಕರ ಭಯ. ಅದು ಚಿಕ್ಕಂದಿನಲ್ಲೂ ಇತ್ತು. ಈಗಲೂ ಇದೆ. ಈ ಕಾರಣಕ್ಕೇ ನನ್ನೂರಿಗೆ ಆಗಾಗ ಬರುತ್ತಿದ್ದ ಹಾವಾಡಿಗರ ಆಟವನ್ನು ಎಂದೂ ಹತ್ತಿರಕ್ಕೆ ಹೋಗಿ ನೋಡುತ್ತಿರಲಿಲ್ಲ. ನಮ್ಮದು ಹೇಳಿಕೇಳಿ ತೋಟದ ಮನೆ. ಮನೆಯಿಂದ ಆಚೆ ಕಾಲಿಟ್ಟರೆ ತೋಟ. ಮನೆಯೂ ಸೇರಿದಂತೆ ತೋಟದ ಸುತ್ತಲೂ ಆಳೆತ್ತರಕ್ಕೆ ಬೆಳೆದಿರುತ್ತಿದ್ದ ಬೇಲಿ. ಅಂಥ ಬೇಲಿ ನಮ್ಮ ಮೆಚ್ಚಿನ ಸಖ ಕೂಡಾ ಆಗಿತ್ತು. ಏಕೆಂದರೆ ಆ ಬೇಲಿಯೊಳಗೆ ಖಾಯಂಮ್ಮಾಗಿ ಜೇನು ಗೂಡು ಕಟ್ಟುತ್ತಿತ್ತು. ಬೇಕೆಂದಾಗಲೆಲ್ಲಾ ಜೇನು ತುಪ್ಪ ಸಿಕ್ಕುತ್ತಿತ್ತು. ಸಾಲದ್ದಕ್ಕೆ ಹೂವಿನ ಕಾಲದಲ್ಲಿ ಬೇಲಿಯೇ ಹೂದೋಟವಾಗಿರುತ್ತಿತ್ತು. ಆಗದರ ಮೇಲೆ ಥರಾವರಿ ಹೂಗಳ ಜಾತ್ರೆ ನಡೆಯುತ್ತಿತ್ತು. ಹಂಗೇನೇ ಈಚಲು ಹಾಗೂ ಎರದೆ ಹಣ್ಣಿನ ಗಿಡಗಳೂ ಇರುತ್ತಿದ್ದವು. ಅವುಗಳ ಹಣ್ಣಿನ ಕಾಲದಲ್ಲಿ ಹಣ್ಣುಗಳು ಸಿಗುತ್ತಿದ್ದವು. ಹಿಂಗೆ ಜೇನು ಬಿಚ್ಚಲು ಹೋದಾಗ, ಹಣ್ಣುಗಳನ್ನು ಆಯಲು ಹೋದಾಗ ಇಲ್ಲವೇ ಹೂ ಕುಯ್ಯಲು ಹೋದಾಗ ನಮಗೆ ಈ ಹಾವುಗಳು ನಮ್ಮನ್ನೂ ನೋಡಿ ಅನ್ನುತ್ತಿದ್ದವು. ಹಾವು ಕಣ್ಣಿಗೆ ಬಿದ್ದರೆ ಸಾಕು ತಿಂಗಳುಗಟ್ಟಲೆ ನಾನು ಅತ್ತ ತಲೆ ಹಾಕುತ್ತಿರಲಿಲ್ಲ. ಜತೆಗೆ ಚಿಕ್ಕವರಿದ್ದಾಗ ಈ ಬಾಂಬೆ ಮಿಠಾಯಿ, ಬತ್ತಾಸು, ಕಲ್ಲು ಸಕ್ಕರೆ ಮುಂತಾದ ತಿನಿಸುಗಳನ್ನು ಮಾರುವವರು ಆಗಾಗ ನಮ್ಮ ಹಳ್ಳಿಗೆ ಬರುತ್ತಿದ್ದರು. ದೊಡ್ಡವರನ್ನು ಕೇಳಿದರೆ ಅವಕ್ಕೆಲ್ಲಾ ಕಾಸು ಕೊಡುವುದಕ್ಕಿಂತ ಲಾತಾ ಕೊಡುವುದೇ ಜಾಸ್ತಿ ಇತ್ತು. ಈ ಕಾರಣಕ್ಕೇ ನಮ್ಮ ಕಾಸನ್ನು ಕೂಡಾಕಿಕೊಳ್ಳುವ ಮೂಲವನ್ನು ಹುಡುಕಿಕೊಂಡಿದ್ದೆವು. ಅವುಗಳೆಂದರೆ ತೆಂಗಿನ ಸೋಗೆಗಳಿಂದ ಕಡ್ಡಿ ಸಿಗಿಯುವುದು, ಬೇಸಿಗೆಯಲ್ಲಿ ಹಳ್ಳಗಳ ಸಾಲಿನಲ್ಲಿ ಹೊಂಗೆ, ಹಿಪ್ಪೆ ಮುಂತಾದ ಬೀಜಗಳನ್ನು ಆಯ್ದು ತಂದು ಅವುಗಳನೆನಲ್ಲಾ ಚಚ್ಚಿ ಒಂದೆಡೆ ಇಟ್ಟುಕೊಂಡು ಬೇಕಾದಾಗ ಮಾರಿ ಅ ತಿನಿಸುಗಳನ್ನು ಕೊಳ್ಳುತ್ತಿದ್ದೆವು. ಸಿಗಿಯಲು ತೆಂಗಿನ ಗರಿಗಳೇನೋ ಸಿಗುತ್ತಿದ್ದವು. ಇನ್ನು ಹೊಂಗೆ, ಹಿಪ್ಪೆ ಬೀಜಗಳು ಬೇಕೆಂದರೆ ಹಳ್ಳ ಸಾಲಿಗಿಳಿಯುತ್ತಿದ್ದೆವು. ಆ ಹೊತ್ತಿಗೆಲ್ಲಾ ಆ ಮರಗಳ ಎಲೆಗಳು ಉದುರಿ ದಪ್ಪನೆಯ ತರಗು ಬಿದ್ದಿರುತ್ತಿತ್ತು. ಬಿದ್ದ ಬೀಜಗಳು ಆ ತರಗಿನೊಳಕ್ಕೆ ಸೇರಿಕೊಂಡು ಮರೆಯಾಗಿರುತ್ತಿದ್ದವು. ನಾವು ಆ ತರಗನ್ನೆಲ್ಲಾ ಕೆದಕಿ ಕೆದಕಿ ಬೀಜಗಳನ್ನ ಹುಡುಕಿಕೊಳ್ಳುತ್ತಿದ್ದೆವು. ಅಲ್ಲಿಗೆ ಒಬ್ಬೊಬ್ಬರೇ ಯಾವತ್ತೂ ಹೋಗುತ್ತಿರಲಿಲ್ಲ. ಹಳ್ಳದೊಳಕ್ಕೆ ಇಳಿಯುತ್ತಲೇ ನಮ್ಮ ಸದ್ದಿಗೆ ಕೆಲವೊಮ್ಮೆ ಹಾವುಗಳು ಬರ‍್ರಂತ ಹೋಗಿಬಿಡುತ್ತಿದ್ದವು. ಹಾವುಗಳು ಹರಿದು ಹೋಗುವ ಸದ್ದು ನಮಗೆ ಪರಿಚಿತವಾಗಿತ್ತು. ಹಾವುರಾಣಿ, ಓತಿಕ್ಯಾತಗಳು ಸರಪರ ಅಂತ ಪುಸುಕ್ಕನೆ ಸದ್ದು ಮಾಡಿದರೆ, ಆ ತರಗಿನೊಳಗೆ ಹಾವುಗಳು ಮಾಡುತ್ತಿದ್ದ ತರಗನ್ನು ಪುರುಗುಟ್ಟಿಸಿಕೊಂಡು ಸರಸರಾಂತ ಹೋಗುತ್ತಿದ್ದವು. ಒಮ್ಮೆ ಹಿಂಗೆ ನಾವು ನಾಲ್ವರು ಗೆಳೆಯರು ನಮ್ಮ ತೋಟದ ಪಕ್ಕದ ಹಳ್ಳದ ಸಾಲಿಗಿಳಿದಿದ್ದೆವು. ಒಂದಷ್ಟು ಸಿಕ್ಕಿದ ಮೇಲೆ ನಮ್ಮ ನಮ್ಮ ಕೈ ಚೀಲಗಳನ್ನು ಹಳ್ಳದಲ್ಲಿಯೇ ಒಂದೆಡೆ ಇಟ್ಟು ಹಳ್ಳದ ಆಚೆ ಬದಿಯಲ್ಲಿ ಶೆಟ್ಟರ ತೋಟದಲ್ಲಿದ್ದ ಬಾವಿಗೆ ಈಜಾಡಲು ಹೋಗಿದ್ದೆವು. ಅಲ್ಲಿ ಒಂದಷ್ಟು ಹೊತ್ತು ಈಜಾಡಿದ ಮೇಲೆ ಮತ್ತೆ ಹಳ್ಳಕ್ಕೆ ಬಂದು ನಂನಮ್ಮ ಬ್ಯಾಗುಗಳನ್ನಿಡಿದು ಮನೆಯತ್ತ ಹೊರಟೆವು. ಒಂದಷ್ಟು ದೂರ ಹೋದ ಮೇಲೆ ಜೊತೆಗಿದ್ದ ತಪಲ ಅನ್ನುವ ಗೆಳೆಯ ಅಯ್ಯಯ್ಯಪ್ಪಾ ಅನ್ನುತ್ತ ತನ್ನ ಹೆಗಲ ಮೇಲಿಂದ ಬೆನ್ನಿಗೆ ಎಸಕಂಡಿದ್ದ ಬ್ಯಾಗನ್ನು ಒಮ್ಮೆಗೇ ತೂಗಿ ಬಿಸಾಕಿದ. ನಾವೆಲ್ಲಾ ಗಾಬರಿಯಾಗಿ ಅತ್ತ ನೋಡಿದರೆ ಆ ಬ್ಯಾಗಿನೊಳಗಿಂದ ಪುಟ್ಟ ನಾಗರ ಹಾವೊಂದು ಎಡೆ ಎತ್ತಿ ನಿಂತುಬಿಟ್ಟಿತ್ತು. ಒಂದಷ್ಟು ದಿನ ನಾವ್ಯಾರೂ ಹಳ್ಳದತ್ತ ಮುಖ ಮಾಡಿರಲಿಲ್ಲ.
ಅದು ಹೊಲಗುಯ್ಲಿನ ಕಾಲ. ಹೊಲಗುಯ್ಲು ಮುಗಿದಿತ್ತು. ಒಣಗಲೆಂದು ಅರಿಯನ್ನು ಮುಂಬಿನಲ್ಲಿ ಬಿಟ್ಟಿದ್ದೆವು. ಒಣಗಿದ ಅರಿಯನ್ನು ಸಾಮಾನ್ಯವಾಗಿ ಇರುಳಿನಲ್ಲಿ ಅದೂ ಚಂದ್ರನ ಬೆಳಕಿರುವ ಇರುಳಿನಲ್ಲಿ ಕಂತೆ ಕಟ್ಟುತ್ತಿದ್ದೆವು. ಬಿಸಿಲಿನಲ್ಲಿ ತೆನೆಗಳಿಂದ ಕಳುಗಳು ಕೆಳಗುದುರದಿರಲೆಂದು, ಬಿಸಿಲಿನ ಝಳ ಮತ್ತು ಹಗಲಿನ ಇತರೆ ಕೆಲಸಗಳಿಗೆ ಅಡ್ಡಿಯಾಗದಿರಲು ಇರುಳೇ ತಕ್ಕದ್ದಾಗಿತ್ತು. ಆಗಿನ್ನೂ ಹೊಲಗೆಲಸಕ್ಕೆ ಮುಯ್ಯಾಳುಗಳ ಲೆಕ್ಕದಲ್ಲಿ ಕೆಲಸ ನಡೆಯುತ್ತಿತ್ತು. ಹಂಗೆ ಬಂದವರಿಗೆ ಕಂತೆ ಕಟ್ಟುವ ಹೊತ್ತಲ್ಲಿ ಬೋಂಡ ಮತ್ತು ಪುರಿಹುಸ್ಲಿ ಸೇವೆ ಕಡ್ಡಾಯವಾಗಿತ್ತು. ಈ ಕೆಲಸ ಸರೊತ್ತಿನವರೆಗೂ ನಡೆಯುತ್ತಿತ್ತು. ಜಾಸ್ತಿ ಇದ್ದರೆ ಬೆಳಗಿನ ಜಾವದವರೆಗೂ ಸಾಗುತ್ತಿತ್ತು. ಅವತ್ತು ನಮ್ಮ ಹೊಲದಲ್ಲಿ ಈ ಕಂತ ಕಟ್ಟುವ ಕೆಲಸವಿತ್ತು. ಬಂದಿದ್ದವರೆಲ್ಲಾ ಬಲು ಹುರುಪಿನಿಂದ ಅದೂ ಇದೂ ಮಾತಾಡುತ್ತಾ ನಗಾಡುತ್ತಾ ಕೆಲಸ ಮಾಡುತ್ತಿದ್ದರು. ಮುಂದೆ ಕೆಲವರು ಕಂತೆಗಳನ್ನು ಕಟ್ಟಿಕೊಂಡು ಹೋಗುತ್ತಿದ್ದರು. ಹಿಂದಿನಿಂದ ಕೆಲವರು ಆ ಕಟ್ಟದ್ದ ಕಂತೆಗಳನ್ನು ಎತ್ತಿ ಅಲ್ಲಲ್ಲೇ ಈಡು ಹಾಕುತ್ತಿದ್ದರು. ನನಗಾಗ ಕಂತೆ ಕಟ್ಟಲು ಅಷ್ಟಾಗಿ ಬರುತ್ತಿರಲಿಲ್ಲ. ನಾನು ಕಂತೆಗಳನ್ನು ಎತ್ತಿಕೊಂಡು ಬಂದು ಈಡಾಕುತ್ತಿದ್ದವರಿಗೆ ಕೊಡುತ್ತಿದ್ದೆ. ಈಡು ಹಾಕಿಕೊಳ್ಳುತ್ತಿದ್ದ ನಿಂಗಯ್ಯ ` ಲೋ ನಿನ್ ಮನೆಕಾಯ್ವಾಗ ಕಂತೆ ಒಳ್ಗಡೇಲಿ ಹಾವ್ನೂ ಹೊತ್ಕಂಡು ಬಂದಿದೀಯಲ್ಲೋ’ ಅಂತ ಕೂಗುತ್ತಾ ಆ ಕಂತೆನ್ನು ದೂರಕ್ಕೆ ಬಿಸಾಡಿದರು. ಅದನ್ನು ತಂದುಕೊಟ್ಟಿದ್ದ ಮದೇವಪ್ಪ `ಅಯೋ ಅದ್ರ ನೆಗುದ್ ಬಿದ್ದೋಗ ಅದ್ಯಾತವ ಇತ್ತಲ ಅಪ್ಪಣ್ಣಿ ಕಣ್ಲೇ ಇಲ್ಲ’ ಅಂತ ನಿಂತಲ್ಲೇ ಕೂಗಿದ. ಅದಾದ ಮೇಲೆ ನಾನು ಒಂದು ಕಂತೆಯನ್ನೂ ಮುಟ್ಟುವ ಗೋಜಿಗೆ ಹೋಗಲಿಲ್ಲ. ಆ ಕಾಲದಲ್ಲಿ ಬಿಸಲಿಲಿನ ತಾಪಕ್ಕೋ ಇಲ್ಲಾ ರಕ್ಷಣೆಗೋಸ್ಕರವೋ ಹಾವುಗಳು ಸಾಮಾನ್ಯವಾಗಿ ಅರಿಗಳ ಕೆಳಗೆ ಮಲಗಿಬಿಡುತ್ತಿದ್ದವು. ಅವುಗಳು ನಾಗರಹಾವು ಅಥವಾ ಕೇರೆ ಹಾವು ಆಗಿರದೆ ಬಹುತೇಕ ಎಂಥಾದಾರಾ ಕೆಟ್ಟ ಹಾವುಗಳು ಆಗಿರುತ್ತಿದ್ದವು. ಇಂಥ ಹಾವುಗಳನ್ನು ನಮ್ಮೂರಲ್ಲಿ ಕೆಲವರು ಒಂಚೂರೂ ಹೆದರದೆ ಚಚ್ಚಿ ಬಿಸಾಕುತ್ತಿದ್ದರು. ಬಸವಣ್ಣಜ್ಜ ಅಂತ ಒಬ್ಬರು ಇದ್ದರು. ನಾನು ಚಿಕ್ಕವನಾಗಿದ್ದಾಗಲೇ ಅವರು ಅರವತ್ತನ್ನು ದಾಟಿದ್ದರು. ಅವರು ಒಂದು ದಿನ ಅವರು ಹೊಲದಿಂದ ಮನೆಗೆ ಬರುವಾಗ ನಾಗರಹಾವೊಂದು ಅವರಿಗೆ ದಾರಿಯಲ್ಲಿ ಸಿಕ್ಕಿಬಿಟ್ಟಿತ್ತು. ಅವರನ್ನು ಕಾಣುತ್ತಲೇ ಅದು ತಪ್ಪಿಸಿಕೊಳ್ಳುವ ಸಲುವಾಗಿ ಅಲ್ಲೇ ಹೊಲದಲ್ಲಿ ಇದ್ದ ಮೂಗುತ್ತವೊಂದಕ್ಕೆ ಸೇರಿಕೊಳ್ಳಲು ಓಡಿದೆ. ಆದರೆ ಅದಕ್ಕೆ ಅದರೊಳಕ್ಕೆ ಪೂರಾ ಅವಿತುಕೊಳ್ಳಲಾಗದೆ ಒಂದು ಅಡಿಯಷ್ಟು ಬಾಲವನ್ನು ಆಚೆ ಹೊರಡಿಸಿಕೊಂಡಿದೆ. ಬಸವಜ್ಜನಿಗೆ ಹಾಗೇ ಬರಲು ಮನಸ್ಸಾಗಿಲ್ಲ. ಅದನ್ನು ಹೊಡೆಯಲು ಬೇಕಾದ ಯಾವ ಹತಾರವೂ ಅವರ ಕೈಯ್ಯಲ್ಲಿ ಇರಲಿಲ್ಲ. ಆದರೂ ಹಾವು ಹೊಕ್ಕ ಮೂಗುತ್ತದ ಹತ್ತಿರ ಹೋಗಿ ಆಚೆ ಕಾಣುತ್ತಿದ್ದ ಅದರ ಬಾಲವನ್ನು ಬಲಗೈ ಮುಷ್ಟಿಗೆ ಸುತ್ತಾಕಿಕೊಂಡು ಹಾವನ್ನು ಸೀದಾ ಆಚೆ ಬರುವಂತೆ ಒಮ್ಮೆಗೇ ಗುಂಗಿಸಿ ಎಳೆದು ಅದು ಬೋರಾಡುತ್ತಾ ಆಚೆ ಬಂದಾಗ ಅದಕ್ಕೆ ತನ್ನತ್ತ ತಿರುಗಿಕೊಳ್ಳಲು ಅವಕಾಶವನ್ನೇ ಕೊಡದೆ ಸುತ್ತ ಗರಗರನೆ ತಿರುಗಿಸಿ ದಪದಪನೆ ನೆಲಕ್ಕೆ ರಪ್ಪಳಿಸಿ ಕೊಂದುಬಿಟ್ಟಿದ್ದರು. ಸ್ಕೂಲಿಗೆ ರಜಾ ಇದ್ದ ಕಾರಣಕ್ಕೆ ಅಜ್ಜ ನನ್ನನ್ನು ಹಲಸಿನ ಕಾಯಿ ಕಿತ್ತು ತರಲು ಹೊಲಕ್ಕೆ ಕರೆದುಕೊಂಡು ಹೋಗಿತ್ತು. ದೂರದಿಂದ ನಮಗದು ಕಾಣುತ್ತಿತ್ತು. ಆದರೆ ಅದು ಏನೆಂದು ನನಗೆ ತಿಳಿಯಲಿಲ್ಲ. ಅಜ್ಜ ಅದೇನೆಂದು ನನಗೆ ಹೇಳಿ `ಲೇ ಬಸ್ವಣ್ಣ ಬಾರೋ ಇಲ್ಲಿ ಒಂದು ಹಲ್ಸಿನ ಕಾಯಿ ಹಿಡ್ಕಂಡು ಹೋಗೀವಂತೆ’ ಅಂತ ಕೂಗಿದರು. ಬಸವಜ್ಜ ನಮ್ಮತ್ತ ಬಂದರು. ಹಾವನ್ನು ಹಿಡಿದು ಹೊಡೆದ ಬಸವಣ್ಣಜ್ಜನ ಬಗ್ಗೆ ಒಂದೆಡೆ ಅಭಿಮಾನವಾದರೆ ಮತ್ತೊಂದೆಡೆ ವಿಪರೀತ ಭಯ ನನ್ನೊಳಗಾಡುತ್ತಿತ್ತು. ಹಲಸಿನ ಕಾಯಿಗಳನ್ನು ತುಂಬಿಕೊಂಡು ಮನೆಗೆ ಹೋಗುವಾಗ `ಅವ್ನ ಕೈಲಿ ಗರುಡ ರೇಖೆ ಐತೆ. ಹಂಗಾಗಿ ಎಂಥಾ ಹಾವಾದ್ರೂ ಹೆಡೆ ಬಿಚ್ಚಲ್ಲ. ಹಂಗೇ ರಾವಿಕಂಡು ಬಿಡುತ್ತೆ’ ಅಂತ ಹೇಳಿತು ಅಜ್ಜ. ಅದು ನಿಜವೋ ಸುಳ್ಳೋ ಗೊತ್ತಿಲ್ಲ.
ಹಾವುಗಳ ಬಗ್ಗೆ ಈನಾಡಿ ಭಯವಿದ್ದ ನಾನು ಒಮ್ಮೆ ಖುದ್ದು ಹಾವಿನ ಕೈಗೆ ಸಿಗಾಕಿಕೊಂಡಿದ್ದೆ. ಬಾಲ್ಯದಲ್ಲಿ ಗೆಳೆಯರೊಡಗೂಡಿ ಬೇಲಿಯಲ್ಲಿ ಇಡುತ್ತಿದ್ದ ಚಿಟ್ಟುಜೇನನ್ನು ಹುಡುಕಿಕೊಂಡು ಅಡ್ಡಾಡುವುದು ನನ್ನ ಪರಮ ಇಷ್ಟದ ಹವ್ಯಾಸಗಳಲ್ಲಿ ಒಂದಾಗಿತ್ತು. ಅಕಸ್ಮಾತ್ ಜೇನು ಸಿಕ್ಕಿದರೆ ಅದನ್ನು ಬಿಚ್ಚಿಕೊಂಡು ಅದಕ್ಕೆ ತೆಂಗಿನಕಾಯಿ ತುರಿ, ಜೊತೆಗೆ ಬೆಲ್ಲವನ್ನು ಹಾಕಿಕೊಂಡು ತಿನ್ನುತ್ತಿದ್ದೆವು. ನನ್ನ ಈ ಸಾಹಸದಲ್ಲಿ ಗೆಳೆಯ ತೇಲ ಸದಾ ನನ್ನೊಂದಿಗಿರುತ್ತಿದ್ದ. ರಜಾ ಸಿಕ್ಕರೆ ಸಾಕು ನಮ್ಮ ಈ ಸಾಹಸ ಎಗ್ಗಿಲ್ಲದೇ ಸಾಗುತ್ತಿತ್ತು. ಸಿಕ್ಕ ಸಿಕ್ಕ ಬೇಲಿಗಳನ್ನೆಲ್ಲಾ ಸಿದುಕುತ್ತಿದ್ದೆವು. ಈ ಜೇನನ್ನು ಪತ್ತೆ ಹಚ್ಚುವುದು ಮತ್ತು ಅದನ್ನು ಬಿಚ್ಚುವುದು ಹೇಗೆಂದು ಅಲೆಮಾರಿ ಗೆಳೆಯ ಮುನಿವೆಂಕಟನಿಂದ ಕಲಿತಿದ್ದೆವು. ಆದರೂ ತೇಲ ಜೇನಿನ ಸುಳಿವನ್ನು ಹಿಡಿಯುವುದರಲ್ಲಿ, ಯಾವ ಬೇಲಿಯಲ್ಲಿ ಹೆಚ್ಚು ಜೇನು ಇಟ್ಟಿರುತ್ತೆ, ಯವ ಹುಟ್ಟಿಯಲ್ಲಿ ತುಪ್ಪ ಕಟ್ಟಿರುತ್ತೆ ಅನ್ನುವುದನ್ನು ಬಲು ಬೇಗ ಪತ್ತೆ ಹಚ್ಚುತ್ತಿದ್ದ. ಅದನ್ನು ಬಿಚ್ಚುವುದರಲ್ಲಿ ನನಗಿಂತಲೂ ನುರಿತಿದ್ದ. ಬೇಲಿಯಲ್ಲಿ ಜೇನು ಇರುವ ಕಡ್ಡಿಯನ್ನು ಕಂಡುಕೊಂಡು ಮುಖದ ತುಂಬಾ ವಲ್ಲಿಯನ್ನು ಕವುಚಿಕೊಂಡು ಆ ಕಡ್ಡಿಯನ್ನು ಲಟಕ್ಕನೆ ಮುರಿದು ಅದರಲ್ಲಿರುವ ಜೇನು ಹುಳುಗಳೆಲ್ಲಾ ಹಾರಿ ಹೋಗುವವರೆಗೂ ಹುಟ್ಟಿಯನ್ನು ಹಿಡಿದು ಓಡುತ್ತಿದ್ದೆವು. ಹೀಗೆ ಕೆಲವೊಮ್ಮೆ ಫರ್ಲಾಂಗುಗಟ್ಟಲೇ ಓಡಬೇಕಾಗುತ್ತಿತ್ತು. ಹಂಗಾದರೂ ಮಂಡಬಿದ್ದು ಅಲ್ಲೇ ಹುಟ್ಟಿಯಲ್ಲೇ ಉಳಿದಿರುತ್ತಿದ್ದ ಜೇನು ಹುಳುಗಳು ಮುಖದ ಮೇಲಿನ ವಲ್ಲಿಯನ್ನು ತೆಗೆಯುತ್ತಲೇ ಲಬುಕ್ಕಂತ ಕಚ್ಚಿಬಿಡುತ್ತಿದ್ದವು. ಕಣ್ಮುಚ್ಚಿ ಕಣ್ಣು ಬಿಡುವುದರೊಳಗೆ ನಮ್ಮ ಮುಖ ಹನುಮಂತನ ಮುಖ ಆಗಿಬಿಡುತ್ತಿತ್ತು. ಇದು ಸಂಜೆಯವರೆಗೂ ಹಂಗೇ ಇರುತ್ತಿದ್ದರಿಂದ ಮನೆಯವರಿಗೆ ಗೊತ್ತಾಗಿ ಕೆಲವೊಮ್ಮೆ ಬೈಗುಳಗಳು, ಕೆಲವೊಮ್ಮೆ ಗೂಸಾ ಬೀಳುತ್ತಿದ್ದೆವು.

ಅವತ್ತೊಂದು ದಿನ. ಮಾರ್ನಿಂಗ್ ಕ್ಲಾಸನ್ನು ಮುಗಿಸಿಕೊಂಡು ಬಂದ ನಾನು ಮತ್ತು ತೇಲ ಜೇನಿನ ಬೇಟೆಗೆ ಹೊರಟೆವು. ಸಿಕ್ಕ ಸಿಕ್ಕ ಬೇಲಿಗಳಲ್ಲೆಲ್ಲಾ ತಡಕಿದೆವು. ಒಂದೂ ಕಣ್ಣಿಗೆ ಬೀಳಲಿಲ್ಲ. ಒಂದೇ ಒಂದು ಜೇನು ಹುಳುವೂ ನಮ್ಮೆದುರು ರುಂಯ್‌ಗುಡಲಿಲ್ಲ. ಆಗಲೇ ಇಳಿ ಹೊತ್ತಾಗುತ್ತಿತ್ತು. ಮತ್ತೆ ಹುಡುಕಿಯೇ ಹುಡುಕಿದೆವು. ಎಲ್ಲೂ ಸಿಕ್ಕಲಿಲ್ಲ. ನಮ್ಮ ಜೇಬುಗಳಲ್ಲಿ ಇದ್ದ ಬೆಲ್ಲ ಮತ್ತು ಕಾಯಿ ತುರಿಗಳು ನಮ್ಮ ಜೇನಿನ ಆಸೆಯನ್ನು ಕೆಣಕುತ್ತಿದ್ದವು. ಆದರೂ ಯಪೆ ಮಾರೆಯಲ್ಲಿ ಮನೆಯತ್ತ ಹೊರಟೆವು. ಆಗ ತಪಲನಿಗೆ ನಮ್ಮ ತೋಟದ ತೆಂಗಿನ ಮರವೊಂದರ ಪೊಟರೆಯಲ್ಲಿ ಇಟ್ಟಿದ್ದ ಪೋಟು ಜೇನಿನ ನೆನಪಾಗಿಬಿಡ್ತು. ಕಡೇ ಪಕ್ಷ ಅದನ್ನಾದರೂ ಬಿಚ್ಚಿ ಒಂಚೂರು ತುಪ್ಪ ನೆಕ್ಕುವ ಅಂದ. ನನಗೂ ಹಂಗೇ ಅನಿಸಿತು. ಸೀದಾ ಜೇನಿದ್ದ ಆ ಮರದ ಹತ್ತಿರ ಹೋದೆವು.
ಅದೊಂದು ರೀತಿಯ ಪೀಚಲು ಮರ. ಸಾಲದ್ದಕ್ಕೆ ಪಕ್ಕದಲ್ಲೇ ಇರುವ ಕಲ್ಲು ಬಾವಿತ್ತ ವಾಲಿಕೊಂಡಿತ್ತು. ಈಗಲೂ ಹಂಗೇ ಇದೆ. ಎಷ್ಟೋ ವರ್ಷಗಳ ಹಿಂದೆ ಮರಕುಟುಕ ಹಕ್ಕಿಯೋ ಅಥವಾ ಇನ್ನಾವುದೋ ಹಕ್ಕಿಯೋ ಆ ಮರದಲ್ಲಿ ಒಂದರ ಕೆಳಗೊಂದು ಮೂರು ತೂತುಗಳನ್ನು ಹಾಕಿತ್ತು. ಅವು ಪುಟ್ಟದೊಂದು ಮುಂಗೈ ಹಿಡಿಸುವಂತಿದ್ದವು. ಒಂದಷ್ಟು ದಿನ ಅದು ಗಿಳಿಗಳ ಗೂಡಾಗಿತ್ತು. ಅವುಗಳು ಅದನ್ನು ತ್ಯಜಿಸಿದ ಮೇಲೆ ಜೇನು ಕಟ್ಟಿತ್ತು. ವರ್ಷವೆಲ್ಲಾ ಅಲ್ಲೇ ಕೂತಿರುತ್ತಿತ್ತು. ತೂತುಗಳ ತುಂಬಾ ಜೇನು ಹುಳುಗಳು ಸದಾ ಪುಳುಗುಡುತ್ತಿದ್ದವು. ಆದರೆ ಯಾರೂ ಎಂದೂ ಅದನ್ನು ಬಿಚ್ಚಿದ್ದನ್ನು ನಾನು ಕಂಡಿರಲಿಲ್ಲ. ತೂತುಗಳು ಈಗಲೂ ಇವೆ. ಆದರೆ ಜೇನು ಕಟ್ಟುತ್ತಿಲ್ಲ.
ಸರಿ. ಮರದ ಹತ್ತಿರ ಹೋಗುತ್ತಲೇ ತೇಲ ಕುರ್ತೇಟು ತುಪ್ಪ ಐತೆ ಅಂದ. ಅದನ್ನು ಬಿಚ್ಚಿಯೇ ತೀರಬೇಕೆಂಬ ತೀರ್ಮಾನಕ್ಕೆ ಬಂದೆವು. ಆದರೆ ಅದು ಅಷ್ಟು ಸುಲಭದ ಮಾತಾಗಿರಲಿಲ್ಲ. ಜೇನು ಕಟ್ಟಿದ್ದ ಆ ಮೂರು ತೂತುಗಳು ಏನಿಲ್ಲ ಅಂದರೂ ಮೂರು ಮಾರುಗಳಷ್ಟು ಎತ್ತರದಲ್ಲಿದ್ದವು. ಬಿಚ್ಚಬೇಕು ಅಂದರೆ ಹತ್ತಲೇಬೇಕಿತ್ತು. ಇನ್ನು ಮನೆಯಿಂದ ಏಣಿಯನ್ನು ತರಲು ಹೋದರೆ ಅದು ಮನೆಯವರಿಗೆ ಗೊತ್ತಾಗಿಬಿಟ್ಟು ನಮ್ಮ ಸಾಹಸ ಬರ್ಕಾಸ್ತಾಗಿಬಿಡುತ್ತಿತ್ತು.
ಇದರ ಜತೆಗೆ ಇಲ್ಲಿ ಇನ್ನೊಂದು ಸಮಸ್ಯೆಯಿತ್ತು. ಅದೇನಂದರೆ ಜೇನು ಬಿಚ್ಚುವುದರಲ್ಲಿ ನಿಸ್ಸೀಮನಾಗಿದ್ದ ತೇಲನಿಗೆ ಮರ ಹತ್ತಲು ಬರುತ್ತಿರಲಿಲ್ಲ. ಮರ ಹತ್ತಲು ಗೊತ್ತಿದ್ದ ನನಗೆ ನೆಟ್ಟಗೆ ಜೇನು ಬಿಚ್ಚಲು ಗೊತ್ತಿರಲಿಲ್ಲ. ಆದರೂ ತೇಲ ಹುಳುಗಳನ್ನು ಹೇಗೆ ಮೆಲ್ಲಗೆ ಅಂಗೈಯ್ಯಿಂದ ಹೆಂಗೆ ಗೋರಬೇಕು, ಹೆಂಗೆ ಜೇನುತುಪ್ಪ ಅಲಾಕಾಗದಂತೆ ಹುಟ್ಟಿಯನ್ನು ಹೊರಕ್ಕೆ ಎಳೆಯಬೇಕು ಅಂತೆಲ್ಲಾ ಹೇಳಿ ನನ್ನನ್ನು ಮರಕ್ಕೆ ಹತ್ತಿಸಿದ. ನಮ್ಮ ಸುತ್ತಲೂ ನಾನು ಹತ್ತತೊಡಗಿದೆ. ಹತ್ತಿರವಾದಂತೆಲ್ಲಾ ಜೇನು ಹುಳುಗಳ ಹಾರಾಟದ ಸದ್ದು ನನ್ನೊಳಗೆ ಒಂಥರಾ ಭಯವನ್ನೂ ಒಂಥರಾ ಖುಷಿಯನ್ನೂ ಆಡಿಸುತ್ತಿದ್ದರೆ ಕೆಳಗೆ ನಿಂತಿದ್ದ ತೇಲ ಬೇಗ ಬೇಗ ಹತ್ತಿ ಬಿಡಿಸುವಂತೆ ಪುಸಲಾಯಿಸುತ್ತಿದ್ದ.
ಜೇನು ಕಟ್ಟಿದ್ದ ಆ ತೂತುಗಳ ಹತ್ತಿರಕ್ಕೆ ಹೋಗುವ ಹೊತ್ತಿಗೆ ನನಗೆ ಕೈ ಕಾಲುಗಳು ಸೋಲು ಬಂದವು. ಇಡೀ ಮರವನ್ನು ಅವುಚಲು ಕೈಗಳು ನೆಟಕುತ್ತಿರಲಿಲ್ಲ. ಹತ್ತಿರ ಹೋದವನೇ ಕೆಳಗಿನ ತೂತಿಗೆ ಮುಖವಿಟ್ಟು ನೋಡಿದೆ. ಹುಳುಗಳು ತಮ್ಮ ಪಾಡಿಗೆ ತಾವು ಮುಲುಗುಡುತ್ತಿದ್ದವು. ಸಂಜೆಯಾಗತೊಡಗಿತ್ತು. ನನಗೆ ಒಮ್ಮೆಗೇ ಆ ತೂತಿನೊಳಕ್ಕೆ ಕೈ ಹಾಕಲು ಹೆದರಿಕೆಯಾಗಿ ಒಮ್ಮೆ ಆ ಹುಳುಗಳನ್ನು ಮೆಲ್ಲಗೆ ಮುಟ್ಟುವುದು ಮತ್ತೊಮ್ಮೆ ಅವುಗಳನ್ನೇ ದಿಟ್ಟಿಸುವುದು ಹಿಂಗೇ ಮಾಡಿ ಕಡೆಗೊಮ್ಮೆ ಧೈರ್ಯ ಮಾಡಿ ತೂತಿನೊಳಕ್ಕೆ ಕೈ ತುರುಕಿಸಿಬಿಟ್ಟೆ. ಹುಳುಗಳು ಬಗ್ಗನೆ ಎದ್ದವು. ಗಾಬರಿಗೊಂಡು ಸುತ್ತಾಕತೊಡಗಿದವು. ಬೇಗ ಬೇಗ ಕಚ್ಚಿ ಬಿಡ್ತಾವೆ ಅನ್ನುತ್ತಿದ್ದ ತೇಲ. ಅಷ್ಟರಲ್ಲಾಗಲೇ ಕೆಲವು ಹುಳುಗಳು ತಮ್ಮ ಕರಾಮತ್ತು ತೋರಿಸಿದ್ದವು. ಕೆನ್ನೆ ಮತ್ತು ಮುಂಗೈಗೆ ಮುತ್ತಿಕ್ಕಿದ್ದವು. ಒಳಗಿಟ್ಟಿದ್ದ ಕೈಯ್ಯನ್ನು ಮತ್ತೂ ಮುಂದಕ್ಕೆ ತಳ್ಳಿದಂತೆ ಮೆದುವಾದದ್ದು ಅಷ್ಟೇ ನುಣುಪಾದದ್ದು ಏನೋ ಒಂದು ನನ್ನ ಕೈಗೆ ಸಿಕ್ಕಿತು. ಅಲ್ಲದೆ ಅದು ಮೆಲ್ಲಗೆ ಮೇಗಡೆಗೆ ಜಾರುತ್ತಲೂ ಇತ್ತು. ಬಹುಶಃ ಅದು ಹುಟ್ಟಿಯೇ ಇರಬೇಕೆಂದು ಅಂದುಕೊಂಡು ಅದನ್ನು ಕೊಂಚ ಗಟ್ಟಿಯಾಗಿ ಹಿಡಿದೆ. ನಾನು ಹಿಡಿದಂತೆಲ್ಲಾ ಅದು ನುಣುಚಿಕೊಂಡು ಮೇಲಕ್ಕೆ ಸರಿಯುತ್ತಿತ್ತು. ಎಲಾ ಇದರಾ ಅಂದುಕೊಂಡು ಮತ್ತೂ ಜೋರಾಗಿ ಹಿಡಿದೆ. ಆಗದು ಪೂರಾ ನನ್ನ ಕೈಯ್ಯಿಂದಲೇ ನುಣುಚಿಕೊಂಡು ಮುಂದೆ ಹೋಯಿತು. ಕೆಳಗಿದ್ದ ತೇಲ ಇವತ್ತಿಗೇ ಒಂದೇ ಒಂದು ಹುಟ್ಟಿ ಸಾಕು ಬಾ ಅಂತ ಕರೆಯುತ್ತಿದ್ದ. ಹುಟ್ಟಿ ಜಾರ‍್ತಾ ಐತೆ ಅಂದೆ. ನಿನ್ನ ತಲೆ ಹುಟ್ಟಿ ಎಲ್ಲಿಗೆ ಜಾರುತ್ತೆ ಅಂತ ಬೈದ.
ಅವನು ಹೀಗೆ ಬೈಯ್ಯುವುದಕ್ಕೂ ಒಳಗೆ ನನ್ನ ಕೈಯ್ಯಿಂದ ನುಣುಚಿಕೊಂಡು ಹೋಗಿದ್ದ ಹಾವೊಂದು ನನ್ನ ತಲೆಯ ಮೇಲಿದ್ದ ಮೂರನೆಯ ತೂತಿನೊಳಗಿಂದ ಹೆಡೆಯನ್ನಷ್ಟೇ ಆಚೆ ತೆಗೆದು ಬುಸುಗುಡುತ್ತಾ ತನ್ನ ಇದ್ದಬದ್ದ ಬಿರುವನ್ನೆಲ್ಲಾ ಬಿಟ್ಟು ಒಮ್ಮೆಗೇ ಚಿಮ್ಮಿ ಮರದಿಂದ ಒಂದೆರಡು ಮಾರು ದೂರ ದೊಪ್ಪನೆ ನೆಲಕ್ಕೆ ಬಿದ್ದು ಅದೇ ವೇಗದಲ್ಲಿ ಹರಿದು ಮಾಯವಾಗಿಬಿಡ್ತು. ಅದು ನಾಗರ ಹಾವಾಗಿತ್ತು; ಹಾವು ಹಂಗೆ ಚಿಮ್ಮಿದ್ದೊಂದೇ ಗೊತ್ತು. ಮರದ ಮೇಲಿಂದ ಹೆಂಗೆ ಕೆಳಗೆ ಬಂದೆ ಅನ್ನುವುದು ತಿಳಿಯುವ ಹೊತ್ತಿಗೆ ತೆಂಗಿನ ಮರದ ಬುಡದಲ್ಲಿ ಕುಸಿದು ಕೂತಿದ್ದೆ. ಮರಕ್ಕೆ ತಾಕಿಕೊಂಡಿದ್ದ ಎರಡೂ ತೊಡೆಗಳಲ್ಲಿ ಚೆಡ್ಡಿ ಹರಿದೋಗಿತ್ತು. ಆ ಹರಿದ ಜಾಗದಿಂದ ತೊಡೆಯ ಚರ್ಮ ಕಿತ್ತು ಬಂದಿತ್ತು. ರಕ್ತ ವಸರುತ್ತಿತ್ತು. ಭಯದ ಜತೆಗೆ ಅಸಾಧ್ಯ ಉರಿ. ಆಟೊತ್ತಿಗಾಗಲೇ ಬಲಗೈನ ಮುಂಗೈ ಮತ್ತು ಕೆನ್ನೆಗಳು ಕಪ್ಪೆ ಹೊಟ್ಟೆಯಂತೆ ಊದಿಕೊಂಡಿದ್ದವು. ಆ ಹಾವಿಗೇನಾದರೂ ಆ ತೂತಿನೊಳಗೇ ತಿರುಗಿಕೊಳ್ಳಲು ಜಾಗವಿದ್ದರೆ ಅದಕ್ಕೆ ಬಂದಿದ್ದ ರೋಷದಲ್ಲಿ ನನ್ನನ್ನು ಒಂದು ಕೈ ನೋಡಿಕೊಳ್ಳದೇ ಬಿಡುತ್ತಿರಲಿಲ್ಲ.
ಆ ಘಟನೆಯಾದ ಮೇಲೆ ನನ್ನ ಅಣ್ಣ ಆ ಹಾವು ಅಲ್ಲಿಗೆ ರೂಢಿಯಾಗಿದೆ ಅದನ್ನ ಹೇಂಗಾದರೂ ಮಾಡಿ ಹಾವು ಹಿಡಿಯುವವನನ್ನು ಕರೆದು ಹಿಡಿಸಬೇಕು ಅಂತ ಅಯ್ಯನ ಹತ್ತಿರ ದೊಡ್ಡ ಉಪಾಯದಂತೆ ಹೇಳಿದ. ಅಯ್ಯ ನಕ್ಕು ಸುಮ್ಮನಾಗಿತ್ತು. ಆದರೆ ಮುಂದೆ ನಾನು ಕೆಲಸಕ್ಕೆ ಸೇರಿಕೊಂಡ ಮೇಲೆ ಇಂಥ ಹಾವು ಹಿಡಿಯುವವನೊಬ್ಬ ಮಾಡಿದ್ದ ಪಜೀತಿಯಿಂದ ಅಣ್ಣನ ಮಾತುಗಳು ನೆನಪಾಗುತ್ತಿವೆ.
ಆ ಸಲದ ಬೇಸಿಗೆ ರಜೆ ಮುಗಿಸಿ ನಾನು ಕೆಲಸ ಮಾಡುತ್ತಿದ್ದ ಕಾಲೇಜಿಗೆ ಹೋದಾಗ ಅಚ್ಚರಿಯೊಂದು ಕಾದಿತ್ತು. ಬಸ್ಸು ಇಳಿಯುತ್ತಿದ್ದಂತೆ ಕಾಣುತ್ತಿದ್ದ `ಓಂ ಶಕ್ತಿ ಕ್ಲಿನಿಕ್’ ಅನ್ನುವ ಬೋರ್ಡು ಕಾಣೆಯಾಗಿತ್ತು. ಯಾಕೆಂದು ತಿಳಿದುಕೊಳ್ಳುವ ಸಲುವಾಗಿ ಕ್ಲಿನಿಕ್ ಇದ್ದ ಓಣಿಯತ್ತ ಹೋಗಿದ್ದೆ. ಕ್ಲಿನಿಕ್ ಆಗಿದ್ದ ಮುರುಕಲು ಮನೆಗೆ ಬೀಗ ಜಡಿಯಲಾಗಿತ್ತು. ಕೇಳೋಣ ಅಂದರೆ ಪಕ್ಕದ ಮನೆಯ ಬಾಗಿಲಿಗೂ ಬೀಗ ಬಿದ್ದಿತ್ತು. ಮತ್ತೆ ಬಂದರಾಯಿತು ಅಂತ ಕಾಲೇಜಿಗೆ ಹೋಗಿದ್ದೆ.
ಎರಡು ವರ್ಷಗಳ ಹಿಂದೆ ಆ ಪುಟ್ಟ ಹಳ್ಳಿಗೆ ಶಕ್ತಿ ಕ್ಲಿನಿಕ್ ಬಂದಾಗ ಆಗಲೇ ಒಂದೆರಡು ಇಂಥ ಕ್ವಾಕ್ ಡಾಕ್ಟರುಗಳ ಕ್ಲಿನಿಕ್ಕುಗಳು ಅಲ್ಲಿದ್ದವು. ಜತೆಗೆ ಆ ಹಳ್ಳಿಯಲ್ಲಿ ಒಂದು ಸರ್ಕಾರಿ ಆಸ್ಪತ್ರೆಯಿತ್ತು. ಮತ್ತೊಬ್ಬರು ಎಂ.ಬಿ.ಬಿ.ಎಸ್. ಓದಿದ ಖಾಸಗಿ ಡಾಕ್ಟರ್ ಇದ್ದರು.
ಬಂದ ಹೊಸತರಲ್ಲಿ ಈ ಶಕ್ತಿ ಕ್ಲಿನಿಕ್ಕಿನ ಡಾಕ್ಟರಮ್ಮನತ್ತ ಮುಖ ಮಾಡಲು ಜನರಿಗೆ ಸುಮಾರು ತಿಂಗಳುಗಳೇ ಬೇಕಾಗಿದ್ದವು. ಸದಾ ಕೆದರಿದ ತಲೆ, ಒಪ್ಪ ಮಾಡಿರದ ಡ್ರೆಸ್ಸು, ಒರಟು ಮಾತು, ಕೀಚು ಹಲ್ಲುಗಳು, ಸಣಕಲು ಕಡ್ಡಿಯ ಹಾಗೆ ಇದ್ದ ಈ ಡಾಕ್ಟರಮ್ಮನನ್ನು ನೋಡಿದರೆ ಯಾರಿಗೇ ಆಗಲಿ ಈಕೆ ಡಾಕ್ಟರ್ ಅಂತ ಅನಿಸಲು ಸಾಧ್ಯವೇ ಇರಲಿಲ್ಲ. ಈ ಶಕ್ತಿ ಕ್ಲಿನಿಕ್ಕಿನ ಬೋರ್ಡನ್ನು ಮೊದಲು ನೋಡಿದಾಗ ನನ್ನೊಳಗೆ ಕುತೂಹಲ ಹುಟ್ಟಿತ್ತು. ಶಕ್ತಿ ಕ್ಲಿನಿಕ್ ಹೆಸರಿನ ಕೆಳಗೆ ಸಣ್ಣ ಅಕ್ಷರಗಳಲ್ಲಿ ಇಲ್ಲಿ ಹಾವುಗಳನ್ನು ಹಿಡಿಯುವವರು ಸಿಗುತ್ತಾರೆ ಅಂತಲೂ ಬರೆಯಲಾಗಿತ್ತು. ಇದೇ ಕುತೂಹಲದೊಂದಿಗೆ ಶುರುವಾದ ಹೊಸತರಲ್ಲಿ ಈ ಕ್ಲಿನಿಕ್ಕಿಗೆ ಸುಮ್ಮನೇ ಹೋಗಿದ್ದೆ. ಪುಟ್ಟ ರೂಮು ಕ್ಲಿನಿಕ್ಕು ಮತ್ತು ವಾಸದ ಮನೆ ಎರಡೂ ಆಗಿತ್ತು. ಆ ರೂಮಿನ ಅರ್ಧಕ್ಕೆ ಪರದೆಯೊಂದನ್ನು ಬಿಡಲಾಗಿತ್ತು. ಮಾಸಲು ಗೋಡೆಯಲ್ಲಿ ಒಂದೆರಡು ಕ್ಯಾಲೆಂಡರುಗಳು ನೇತಾಡುತ್ತಿದ್ದವು. ಈಕೆ ಯಾವ ಕಾರಣಕ್ಕೆ ಮತ್ತು ಅದ್ಯಾವ ಧೈರ್ಯದಿಂದ ಈ ವೃತ್ತಿಯನ್ನು ಆರಿಸಿಕೊಂಡಿದ್ದಳೋ ಗೊತ್ತಿಲ್ಲ. ಅವತ್ತು ಗಂಡ ಕೂಡಾ ಅಲ್ಲಿಯೇ ಇದ್ದ. `ಇಲ್ಲಿ ಯಾರೋ ಹಾವು ಹಿಡಿಯೋರು ಇದಾರಂತೆ ಯಾರದು?’ ಅಂತ ಕೇಳಿದ್ದೆ. ಪರದೆಯ ಹಿಂದಿನಿಂದ `ಅದು ನಾನೇ ಸಾರ್’ ಅನ್ನುತ್ತಾ ವ್ಯಕ್ತಿಯೊಬ್ಬ ಆಚೆ ಬಂದ. ಅವನು ನಿಜಕ್ಕೂ ಹಾವು ಹಿಡಿಯುವವನಂತೆಯೇ ಇದ್ದ. ಪಟಾ ಪಟಿ ಲುಂಗಿ, ಗಿರಿಜಾ ಮೀಸೆ, ಚೂಪು ಕಂಗಳ ಅವನನ್ನು ಕಂಡು ಅವನ ವೃತ್ತಿಯ ಬಗ್ಗೆ ಯಾವ ಅನುಮಾನವೂ ಮೂಡಲಿಲ್ಲ. ನನಗೆ ಆಗ ಬಂದ ಅನುಮಾನವೆಂದರೆ ಅಸಲಿಗೆ ಅವರು ಗಂಡ ಹೆಂಡಿರೇ ಅನ್ನುವುದು.
ಒಂದು ದಿನ ಮಧ್ಯಾಹ್ನದ ಹೊತ್ತು ಕ್ಲಾಸು ಮುಗಿಸಿ ಕೂತಿದ್ದ ನನಗೆ ಇದ್ದಕ್ಕಿದ್ದಂತೆ ಈ ಶಕ್ತಿ ಕ್ಲಿನಿಕ್ಕಿನ ಕಡೆಯಿಂದ ದೊಡ್ಡ ಗಲಾಟೆ ಕೇಳತೊಡಗಿತು. ಹೋಗುವಷ್ಟರಲ್ಲಿ ದೊಡ್ಡದೊಂದು ಜನರ ಗುಂಪೇ ಅಲ್ಲಿ ನೆರೆದಿತ್ತು. ಆ ಗುಂಪಿನೊಳಗೊಬ್ಬ ಹಾವು ಹಿಡಿಯುವವನ ಕೊರಳ ಪಟ್ಟಿಯನ್ನು ಹಿಡಿದುಕೊಂಡು ಏರಿದ ದನಿಯಲ್ಲಿ ಕೊಳಕು ಮಾತುಗಳಲ್ಲಿ ಬೈಯ್ಯುತ್ತಿದ್ದ. ಹತ್ತಿರ ಹೋಗಿ ನೋಡಿದರೆ ಹಾಗೆ ಬೈಯ್ಯುತ್ತಿದ್ದವನು ನನಗೆ ಪರಿಚಯದವನಾಗಿದ್ದ. ಅವನು ನನ್ನನ್ನು ಕಂಡಕೂಡಲೆ ನನ್ನತ್ತ ತಿರುಗಿ ನ್ಯಾಯ ಒಪ್ಪಿಸತೊಡಗಿದ. ಅವನು ಅಲ್ಲಿಂದ ಒಂದೆರಡು ಮೈಲಿ ದೂರದಲ್ಲಿದ್ದ ಹಳ್ಳಿಯವನು.
ಆ ಜಗಳಕ್ಕೆ ಕಾರಣ ತುಂಬಾ ಕುತೂಹಲವಾಗಿತ್ತು. ನಾಲ್ಕೈದು ದಿನಗಳ ಹಿಂದೆ ಆ ಹಳ್ಳಿಯವನ ಮನೆಗೆ ನಾಗರ ಹಾವೊಂದು ನುಗ್ಗಿಬಿಟ್ಟಿತ್ತು. ಹಳ್ಳಿಯ ಕೆಲವರು ಮನೆಯೊಳಕ್ಕೆ ಹೋಗಿ ಮೂಲೆ ಮುಡುಕುಗಳಲ್ಲಿ ಹುಡುಕಿದ್ದಾರೆ. ಸಿಕ್ಕಿಲ್ಲ. ಆಗ ಯಾರೋ ಒಬ್ಬರು ಈ ಹಾವು ಹಿಡಿಯುವವನ ಬಗ್ಗೆ ಹೇಳಿದ್ದಾರೆ. ಹಂಗಾಗಿ ಅವನು ಈ ಹಾವು ಹಿಡಿಯುವವನ ಬಳಿಗೆ ಬಂದಿದ್ದಾನೆ. ಇವನು ಚೌಕಾಸಿ ಮಾಡಿ ಐನೂರು ರೂಪಾಯಿ ಕೊಟ್ಟರೆ ಹಿಡಿದು ಕೊಡುವುದಾಗಿ ಹೇಳಿದ್ದಾನೆ. ಅವನು ವಿಧಿಯಿಲ್ಲದೆ ಒಪ್ಪಿದ್ದಾನೆ. ನೀನೀಗ ಹೋಗು ನಾನು ಹಿಂದೆಯೇ ಬರ್ತೀನಿ ಅಂತ ಹಳ್ಳಿಯವನನ್ನು ಕಳಿಸಿದ್ದಾನೆ. ಸ್ವಲ್ಪ ಹೊತ್ತು ಬಿಟ್ಟುಕೊಂಡು ಅಲ್ಲಗೆ ಹೋಗಿದ್ದಾನೆ. ಅಲ್ಲಿನ ಪರಿಸ್ಥಿಯನ್ನು ಅವಲೋಕಿಸಿ ನಾನು ಹಾವು ಹಿಡಿಯುವಾಗ ಮನೆಯೊಳಕ್ಕೆ ಯಾರೂ ಬರಬಾರದೆಂದೂ ಬಾಗಿಲು ಹಾಕಿಕೊಂಡಿದ್ದಾನೆ. ಅದಾದ ಅರ್ಧ ಗಂಟೆಗೆ ಕೈಯಲ್ಲಿ ಮಾರುದ್ದದ ನಾಗರ ಹಾವನ್ನು ಹಿಡಿದು ಹೊರ ಬಂದು ನೆರೆದಿದ್ದ ಜನರಿಗೆಲ್ಲಾ ಹಾವನ್ನು ತೋರಿಸಿ ಶಬ್ಬಾಶ್‌ಗಿರಿಯನ್ನು ಪಡೆದು ಐನೂರು ರೂಪಾಯಿಯನ್ನೂ ನಾಲ್ಕೈದು ಸೇರು ರಾಗಿಯನ್ನೂ ಇಸುಕಂಡು ಬಂದಿದ್ದಾನೆ. ನಿಟ್ಟುಸಿರುಬಿಟ್ಟ ಮನೆಯವರು ಬಾಣದ ದೇವರ ಹಟ್ಟಿಯ ಜುಂಜಪ್ಪ ದೇವರಿಗೆ ಹರಕೆ ಕಟ್ಟಿಕೊಂಡು ಮನೆಯೊಳಕ್ಕೆ ಹೋಗಿದ್ದಾರೆ. ನೋಡಿದರೆ ಅದೇ ಹಾವು ಅಡಿಗೆಮನೆಯ ಕೋಡೊಲೆಗಳ ಮೇಲೆ ಉದ್ದಕ್ಕೆ ಮಲಗಿದೆ! ಹಂಗಾಗಿ ಮನೆಯ ಯಜಮಾನ ತಕ್ಷಣ ಅವನನ್ನು ಹುಡುಕಿಕೊಂಡು ಬಂದಿದ್ದಾನೆ.
ಆ ಹಳ್ಳಿಯವನ ಪ್ರಕಾರ ಅವತ್ತು ಹಾವು ಹಿಡಿಯುತ್ತೇನೆಂದು ಹೋಗಿದ್ದ ಈ ಆಸಾಮಿ ಅಸಲಿಗೆ ಮನೆಯೊಳಗಿನ ಹಾವನ್ನೇ ಹಿಡಿದಿರಲಿಲ್ಲ. ಬದಲಿಗೆ ತಾನೇ ಒಂದು ಹಾವನ್ನು ಕೈ ಚೀಲದಲ್ಲಿ ಅಡಗಿಸಿಕೊಂಡು ಹೋಗಿದ್ದ. ಮನೆಯೊಳಗೆ ಸ್ವಲ್ಪ ಹೊತ್ತು ಹಿಡಿಯುವ ನಾಟಕ ಮಾಡಿದ್ದಾನೆ. ಕಡೆಗೆ ತಾನು ತಂದಿದ್ದ ಹಾವನ್ನೇ ಹಿಡಿದು ಆಚೆ ಬಂದು ಎಲ್ಲರಿಗೂ ತೋರಿಸಿದ್ದಾನೆ. ಅವನು ಹೇಳುವ ಮಾತು ನನಗೂ ನಿಜ ಅನಿಸಿತು. ಯಾಕೆಂದರೆ ಅವತ್ತು ಶಕ್ತಿ ಕ್ಲಿನಿಕ್ಕಿಗೆ ಹೋಗಿದ್ದಾಗ ಅವನು ಎರಡು ಮೂರು ಹಾವುಗಳನ್ನು ಎಲ್ಲಿಂದಲೋ ಹಿಡಿದುಕೊಂಡು ತಂದು ಬುಟ್ಟಿಯಲ್ಲಿ ಕೂಡಾಕಿದ್ದ.

ಮತ್ತೊಂದು ದಿನ. ಆ ಬೋರ್ಡ್ ಕಾಣೆಯಾದದ್ದರ ಬಗ್ಗೆ ವಿಚಾರಿಸಲು ಮತ್ತೆ ಆ ಕ್ಲಿನಿಕ್ ಇದ್ದ ಮನೆಯತ್ತ ಹೋಗಿದ್ದೆ. ಪಕ್ಕದ ಮನೆಯ ಅಜ್ಜಿ ಕಳೆದ ಬೇಸಿಗೆ ರಜೆಯಲ್ಲಿ ನಡೆದ ಕಥೆಯನ್ನು ಹೇಳಿತು. ತಿಂಗಳ ಕೆಳಗೆ ಆ ಡಾಕ್ಟರಮ್ಮ ಇದ್ದಕ್ಕಿದ್ದಂತೆ ತೀರಿಹೋಗಿದ್ದಳು. ಹಾಗೆ ತೀರಿ ಹೋಗುವ ಹಿಂದಿನ ರಾತ್ರಿ ಗಂಡ ಹೆಂಡಿರ ನಡುವೆ ಜೋರು ಜಗಳ ನಡೆದಿತ್ತು. ಅವಳು ಸತ್ತ ಮಾರನೆಯ ದಿನವೇ ಅವನೂ ಓಡಿ ಹೋದ. `ಅವನ ಮನೆ ಹಾಳಾಗ ಓಡಿ ಹೋಗುವಾಗ ಮನೇಲಿ ಇಕ್ಕೆಂಡಿದ್ದ ಹಾವುಗಳನ್ನೆಲ್ಲಾ ಓಣಿಗೆ ಬಿಟ್ಟು ಹೋಗಿದ್ದ’ ಅಂತು ಅಜ್ಜಿ. ಯಾಕೋ ಅಜ್ಜಿಯ ಕೊನೆಯ ಮಾತುಗಳಲ್ಲಿ ನನಗೆ ನಂಬಿಕೆ ಬಂದಿರಲಿಲ್ಲ.
****
ಕೆಲವು ಪದಗಳ ಅರ್ಥ:
ಅರಿ- ಹೊಲ ಗದ್ದೆಗಳಲ್ಲಿ ಕುಯ್ದ ತೆನೆ ಹುಲ್ಲಿನ ಗುಪ್ಪೆ.
ಸರಿ ಹಾಕು- ಒಟ್ಟುವುದು.
ಈಡು- ಮೆದೆ ಹಾಕುವುದಕ್ಕೆ ಮುನ್ನ ತಾತ್ಕಾಲಿಕವಾಗಿ ಒಂದೆಡೆ ಒಟ್ಟುವುದು.
ಮುಂಬು-ಅಕ್ಕಡಿ ಸಾಲುಗಳ ನಡುವಿನ ಪೈರಿನ ಸಾಲುಗಳು.
(ಹಿಂದಿನ ಕಂತು: ಕೆಮ್ಮಣ್ಣು ಜೀರಿಂಬೆ ಮತ್ತು ಚಿಕ್ಕವ್ವನೆಂಬ ಎಮ್ಮೆ)

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್‌ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್‌ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್‌ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ – 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ – 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

