ಇದು ನಂಗೆ ಬುದ್ಧಿ ಬಂದ ಮ್ಯಾಗ್ಳ ಕತೆ. ಅದ್ಕೂ ಮುಂಚೆ, ಐದಾರು ವರ್ಷ ಆದ್ರೂ ಎಳೆ ಕೂಸಿಗೆ ಕಾಲು ಮೇಲೆ ಅಡ್ಡಾಕ್ಕಂಡು ನೀರು ಹುಯ್ಯಲ್ವೇ ಅಂಗೇ ಮಾಡೋಳು. ನಮ್ಮಮ್ಮ ಅಯ್ಯೋ ಅದೇನು ಸಣ್ಣ ಮಗೀನೆ ಬಿಡು ಅಂದ್ರೂ ಬಿಡವಲ್ಲಳು. ಮಗೀಗೆ ಮೈನೋವು ಅಂತ ಕಾಲಿನ ಮ್ಯಾಗಾಕ್ಕಂಡು ಕೈಕಾಲು ಹಿಸುಕಿ ಹಿಸುಕಿ, ಅಮ್ಮುಂಗೆ ನೀರು ಹುಯ್ಯೋಕೆ ಏಳೋಳು. ನಮ್ಮಮ್ಮ ನನ್ ಗೋಳೇ ಹುಯ್ಕಂತೀಯಾ, ಸಾಕು ಬಿಡೂ ಅಂದ್ರೂ ಬುಟ್ಟಾಳೇ? ಹೂಹೂ..
ಸುಮಾ ಸತೀಶ್ “ರಂಗಿನ ರಾಟೆ” ಸರಣಿ ಬರಹ
ನಾಗಮ್ಮ – ಕಮಲಮ್ಮ ಅಂಬೋದು ಇದೊಂತರುಕ್ಕೆ ನಮ್ಗೆ ಚಿಕ್ಕೋರಿದ್ದಾಗ ಜೋಡಿ ಪದದ ತರುಕ್ಕೇ ಇತ್ತು. ಇಬ್ರೂ ಅತ್ತೆ ಸೊಸೆ. ಅಂಗಂತ ಸೊಂತ ಅಲ್ಲ. ನಾಗಮ್ಮನ ಗಂಡ ತಿಮ್ಮಪ್ಪ ಇದ್ನಲ್ಲ, ಆವಪ್ಪನ ಅಣ್ಣನ ಮಗ ರೊಡ್ಡ ತಿಮ್ಮಪ್ಪ. ಈವಪ್ಪ ಕಮಲಮ್ಮನ ಗಂಡ. ಅಂಗಾಗಿ ಅತ್ತೆ ಸೊಸೆ. ನಮ್ಮ ಚಿಗತ್ತೆ(ಚಿಕ್ಕತ್ತೆ) ಅಂಬೋಳು ಪಕ್ಕಪಕ್ಕದಲ್ಲೇ ಇದ್ರು. ಒಂದು ಸಣ್ಣ ಮನ್ಯಾಗೆ ಮಧ್ಯುಕ್ಕೆ ಗ್ವಾಡೆ ಎಬ್ಸಿ ತಿಮ್ಮಪ್ನೂ ಅವನ ಅಣ್ಣನೂ ಇದ್ರು.
ಯಾವ ಜನ್ಮುದಾಗೆ ಮಾಡಿದ್ ಋಣವೋ ಕಾಣೆ
ನಾಗಮ್ಮ ಕಮಲಮ್ಮ ಇಬ್ರೂ ನಮ್ಮನೀಗೆ ಕೆಲ್ಸ ಬೊಗ್ಸೆ ಮಾಡಾಕೆ ಬಂದ್ರೂ ಸುತ, ನಾಗಮ್ಮ ನನ್ನ ಸೊಂತ ಮಗೀಗಿಂತ ಸ್ಯಾನೆ ಸಾಕೌಳೆ. ಹೆತ್ತಿಲ್ಲ ಅನ್ನೋದೊಂದು ಬುಟ್ರೆ ಯಾವಾಲೂ ಸೊಂಟದಾಗೇ ಸಿಕ್ಕಿಸ್ಕಂಡು ವಡ್ಡಾಡುತಿದ್ಲು.(ಅಡ್ಡಾಡುತ್ತಿದ್ಲು) ನಾನೂ ವಸಿ ಉದ್ದಕಿದ್ದೆ. ಆವಮ್ನೂ ಉದ್ದ ಇದ್ರೂ ದೆಕ್ಲು ತೆಂಗಿನಮರದ ಕಾಲು ನನ್ನವು. ಎತ್ತಿಕೊಂಡ್ರೆ ನೆಲ ಸಾರುಸ್ತಿದ್ವು. ಆದ್ರೂ ಬಿಡ್ದೇ ಎತ್ತಿಕೊಂಡೇ ಇರ್ತಿದ್ಲು. ಇನ್ನೂ ಸೊಲ್ಪ ದೊಡ್ಡೋಳಾದ್ ಮ್ಯಾಗೆ ಎತ್ತಿಕಣಾದೂ ಬುಟ್ರೂ ಸತ ತೊಡೆ ಮ್ಯಾಗೇ ಕುಂಡ್ರಿಸಿಕೊಳ್ಳೋಳು. ಮನೀಗೆ ಬಂದೇಟ್ಗೆ ರಾಮ್ಮಯ್ಯಾ(ಬಾರಮ್ಮ) ಅಂತ ಎಳ್ಕೊಣೋಳು. ಸುಮ್ನೆ ಕುಂತ್ಕಳಾ ಜಾಯಮಾನ ಅಲ್ವೇ ಅಲ್ಲ. ಪಾಪ್ಮು, ಬಿಡ್ಡಕಿ ಕಾಲ್‌ನೊಪ್ಪುಲು. ಪದ್ಬಡಿನಿಂಕ ಪದ್ಮುಳುಗೇವರ್ಕೂ ಇಸ್ಕೂಲ್ಕಿ ಪೈ ವಚ್ಚಿಂದಿ. ಸೆದ್ವೀ ಸೆದ್ವೀ ಸನ್ನಗೈಪೈಯ್ಯಿಂದಿ ಬಿಡ್ಡ.(ಪಾಪ, ಮಗೀಗೆ ಕಾಲು ನೋವಾಗೈತೆ. ಬೆಳಗಿಂದ ಬೈಗಿನ್ ತನಾ ಇಸ್ಕೂಲ್ನಾಗೆ ಕುಂತು ಬಂದೈತೆ. ಓದೀ ಓದೀ ಸಣ್ಣ ಆಗೈತೆ ಮಗಿ). ಅಂಬ್ತ ಬಲು ಸಂಕಟ ಪಡೋಳು. ಕಾಲು ಒತ್ತೋಕೆ ಸುರು ಆಗ್ತಿತ್ತು. ಇಲ್ಲಾಂದ್ರೆ, ತಲೆಗೆ ಎಣ್ಣೆ ಅಚ್ಚೋದು, ಬಾಚೋದು. ಸಿಕ್ಕಟಿಗೆ ತಕಂಡು ಸಿಕ್ಕು ಬಿಡ್ಸೋದು. ಹೇನು ನೋಡೋದು. ತಲೇನಾಗೆ ಒಂದೇ ಒಂದು ಸೀರೇನಾದ್ರೂ ಸೇರ್ಕಂಡಿದ್ರೆ, ಸೀರಣಿಗೆ ತಕಂಡು ಸೀರಿ, ಲಟುಕ್ ಅನ್ಸೋಳು. ಕೈಯಾಗೂ ಕುಕ್ಕಿ ಕುಕ್ಕಿ ತೋರ್ಸೋಳು.
ಒಂದೇ ಎಲ್ಡೇ ಆವಮ್ಮನ ಇಚಾರಗೋಳು. ನನ್ನ, ಲಿಂಗೀಗಿಂತ್ಲೂವೇ (ಲಿಂಗಮ್ಮ, ನಾಗಮ್ಮನ ಮಗಳು)ಒಂದು ಕೈ ಸ್ಯಾನೇ ಪಿರೂತಿ ಮಾಡ್ತಿದ್ಲು.
ಪಕ್ಕದಾಗೇ ಮನೆ
ನಮ್ಮನೆ ಹಿಂದುಕ್ಕೇ ನಾಯಕರ ಹಟ್ಟಿ ಸುರು. ಆ ಬೀದೀನಾಗೆ ಮದುಲ್ನೇ ಮನೆ ನಾಗಮ್ಮುಂದೇಯಾ. ಅಂಗಾಗಿ ಎಡ್ವಿ ಬಿದ್ದೇಟ್ಗೆ ಅವ್ರು ಮನೆ. ಮೂರೊತ್ತೂ ಅಲ್ಲೇ ಅಡ್ಡಾಡಕಂಡು ಇರೀವಿ.
ಎಣ್ಣೆ ಸ್ನಾನದ ಗಲಾಟೆ
ಭಾನುವಾರ ಬಂದೇಟ್ಗೆ ಬೆಳಗೇನೆ ಮನ್ ತಾವ್ ಹೋಗಿ ಗಲಾಟೆ ಸುರು ಮಾಡ್ತಿದ್ದೆ. ಬಾ ಬೇಗ, ತಲೆಗೆ ಅಳ್ಳೆಣ್ಣೆ ಹಾಕು. ತಲೆ ತಿಕ್ಕು ಅಂತ. ಏನ್ ಅಮ್ಮಣ್ಣಿ. ನಾನ್ ಹಿಟ್ಟು ಕೆದಕಾಕೂ ಬುಡವಲ್ಲೆ ಅಂತ ಬೈಕಂಡೇ, ಬಂದು ತಲೆತುಂಬಾ ಎಣ್ಣೆ ತಿಕ್ಕೋಳು. ಮಕ, ಕೈ ಕಾಲೂ ಎಲ್ಲಾದ್ಕೂ ಧಾರಾಳವಾಗಿ ಸುರಿಯೋಳು. ನಾನು ಗೋಳಾಡಿದ್ರೂ ಬುಡ್ತಿರಲಿಲ್ಲ. ಸುಮ್ಕಿರಮ್ಮಿ, ನೋಡು ಎಣ್ಣೆ ಇಕ್ತಿದ್ರೆ, ನೆತ್ತಿ ಮ್ಯಾಗೆ ಬುರ ಬುರ ಅಂತ ನೊರೆ ಬತ್ತಾ ಐತೆ. ನೋಡಿತ್ಲಾಗಿ ಅಂತ ನೊರೆ ಬಳ್ದು ತೋರ್ಸೋಳು. ಅಂಗೇ ನೆತ್ತಿ ಸುಡ್ತಾ ಐತೆ. ಉಸ್ಣ ಆಗೈತೆ. ತಂಪು ಆಗಾದು ಬ್ಯಾಡ್ವೇ? ಕಣ್ಣಾಗೆ ಪಿಸ್ರು ಬಂದೈತೆ ನೋಡು. ನಿಂಗ್ಯಾಕಮ್ಣಿ, ಮೆಲ್ಲುಕೆ ತಲೆ ತಿಕ್ತೀನಿ ಅಂಬ್ತ ಸಮಾಧಾನ್ಸೋಳು. ನಾನೂ ಅಂಗೇ ಕುಂತು ಕುಂತು ನಾಗಮ್ಮ ಹದವಾಗಿ ನೆತ್ತಿ ತಟ್ತಿದ್ರೆ, ಬೆಳ್ಳಾಕಿ ಕೂರ್ಲು ಬುಡ್ದಾಗೆ ಎಣ್ಣೆ ಒತ್ತುತಿದ್ರೆ, ಅಂಗೇ ಕಣ್ಣು ಎಳ್ಕಾಬಂದು ತೂಕಡಿಸೀವೆ. ವಸಿ ನೆತ್ತಿ ತಂಪಾಗ್ಲಿ, ಇಂಗ್ ಮನೀ ತಾವ ಓಗಿ, ಅಂಗ್ ಬತ್ತೀನಿ ಅಂತ ದುಡು ದುಡು ಓಗೋಳು. ನಾನು ಹತ್ತು ನಿಮಿಸ ತೂಕಡಿಸಿ, ಗ್ಯಪ್ತಿ ಬಂದೇಟ್ಗೆ ಅಂಗೇ ನಾನೂ ಓಡಿ, ಬೇಗ ಬಾ ಅಂತ ಪ್ರಾಣ ತಿನ್ನೀವಿ. ತಿಮ್ಮಪ್ಪ, ಅಮ್ಮೋ ಇವತ್ತು ಹೊಟ್ಗೆ ಹಿಟ್ಟಿಲ್ಲದಂಗೆ ಮಾಡ್ತೀಯಾ ಅಂಬ್ತ ಗೊಣಗೋನು. ನಾಗಮ್ಮ, ಅಯ್ ಮಗೀ ಮ್ಯಾಗೆ ಅಂಗ್ ಯಾಕೆ ರೇಗೀಯಾ, ಸುಮ್ಕೆ ಕುಂತ್ಕ, ಹಿಟ್ಟು ಬೇಯಿಸಾಕ್ತಿಲ್ವೇ? ಅಂತ ಜೋರು ಮಾಡೋಳು. ತಿಮ್ಮಪ್ಪ ದೂಸ್ರಾ ಮಾತಾಡ್ದೆ ಯಾತುರ್ದಾನಾ ಕೆಲ್ಸ ಮಾಡ್ಕಂಡು ಅಂದ್ರೆ ಕುಡುಗೋಲು ಚೂಪಾ ಮಾಡ್ಕಂಡೋ, ಕಿತ್ತೋಗಿರಾ ಮಂಕರಿ ಸರ್ ಮಾಡ್ಕಂಡೋ, ಸಡ್ಲ ಆಗಿರಾ ಉಳ್ಳಾರಿ (ಕಳೆ ಕೀಳೋಕೆ ಬಳಸ್ತಿದ್ರು) ಹಿಡ್ಕಂಡೋ, ಮೂಲೇಗೆ ಕುಂತ್ಕಂತಿದ್ದ.
ಇದು ನಂಗೆ ಬುದ್ಧಿ ಬಂದ ಮ್ಯಾಗ್ಳ ಕತೆ. ಅದ್ಕೂ ಮುಂಚೆ, ಐದಾರು ವರ್ಷ ಆದ್ರೂ ಎಳೆ ಕೂಸಿಗೆ ಕಾಲು ಮೇಲೆ ಅಡ್ಡಾಕ್ಕಂಡು ನೀರು ಹುಯ್ಯಲ್ವೇ ಅಂಗೇ ಮಾಡೋಳು. ನಮ್ಮಮ್ಮ ಅಯ್ಯೋ ಅದೇನು ಸಣ್ಣ ಮಗೀನೆ ಬಿಡು ಅಂದ್ರೂ ಬಿಡವಲ್ಲಳು. ಮಗೀಗೆ ಮೈನೋವು ಅಂತ ಕಾಲಿನ ಮ್ಯಾಗಾಕ್ಕಂಡು ಕೈಕಾಲು ಹಿಸುಕಿ ಹಿಸುಕಿ, ಅಮ್ಮುಂಗೆ ನೀರು ಹುಯ್ಯೋಕೆ ಏಳೋಳು. ನಮ್ಮಮ್ಮ ನನ್ ಗೋಳೇ ಹುಯ್ಕಂತೀಯಾ, ಸಾಕು ಬಿಡೂ ಅಂದ್ರೂ ಬುಟ್ಟಾಳೇ? ಹೂಹೂ.. ಹಂಡೇ ನೀರು ಖಾಲಿ ಆಗಾಗಂಟ ಸುತರಾಂ ಇಲ್ಲ. ನಮ್ಮಮ್ಮ ನನ್ ಕೈ ಸೇದೋಯ್ತು ಅಂತ ಗೊಣಿಕ್ಕಂಡು ನೀರು ಖಾಲಿ ಆಯ್ತು ಅಂದ್ ಮ್ಯಾಗೇ ಬುಡಾ ಆಟ. ಆಮೇಲಾಮೇಲೆ ನಾಗಮ್ಮನ ಕಾಲು ನನ್ನ ಹಿಡಿದಿಡಾಕೆ ಸಾಲ್ತಿರಲಿಲ್ಲ. ಅದ್ಕೇ ಸುಮ್ಕಾದ್ಲು. ಬುದ್ಧಿ ಬಂದ ಮ್ಯಾಗೆ ತಲೆಸ್ನಾನ ಅಂದ್ರೆ ವಾರಕ್ಕೊಂದೇ ದಪ. ಬಾನ್ವಾರ್ವೇ ಬೇಕಿತ್ತು. ಇಸ್ಕೂಲ್ ರಜಾ ಇತ್ತಲ್ಲ ಅದ್ಕೆ.
ನಂಗೂ ಆಗ ಒಂದ್ರಾಶಿ ಕೂರ್ಲು ಇತ್ತು. ಸಿಕ್ಕು ಬಿಡ್ಸಾವಾಗ ನಾಕು ಕೂರ್ಲು ಉದ್ರಿದ್ರೂ ತಕ್ಷಣ ಕೂರ್ಲಿಗೂ ದುಷ್ಟಿ ತೆಗೆಯೋಳು. ಹಾದಿ ಕಣ್ಣು ಬೀದಿಕಣ್ಣು ನಾಯಿಕಣ್ಣು ನರಿಕಣ್ಣು ನನ್ ಕಣ್ಣೂ ನಿನ್ ಕಣ್ಣೂ ಅಪೂಟ್ ಹೋಗ್ಲಿ ಥೂ ಥೂ ಥೂ ಅಂತ ಉಗ್ಯೋಳು.
ಎಣ್ಣೆ ತಿಕ್ಕೋದು ಒಂದ್ ಸತಿ ಆದ್ರೆ, ತಿರ್ಗಾ ಬಂದು, ಸೀಗೇಪುಡಿ, ಚಿಗುರುಪುಡಿ, ಅಂಟುವಾಳದ ಪುಡಿ ಎಲ್ಲಾ ಬೆರ್ಸಿ ತಲೆ ಉಜ್ಜೋದು ಇನ್ನೊಂದು ಸತಿ. ಕೈಯಿ ಕಾಲೂ ಉಜ್ಜಾಕೆ ಮನ್ಯಾಗೇ ಆಡ್ಸಿದ ಘನವಾದ ಕಡ್ಲೆ ಹಿಟ್ಟು. ಗಮ ಗಮಾಂತ ಅಂತಿತ್ತು. ನೆತ್ತಿ ಕೈಕಾಲು ಎಲ್ಲಾ ತಿಕ್ಕಿದ್ ಮ್ಯಾಗೆ ನೀರು ಸುರುವೋಳು. ದೊಡ್ಡ ಹಂಡೆ ನಮ್ದು. ಒಂದು ಹದಿನೈದು ಬಿಂದಿಗೆ ನೀರು ಸುರುವುದ್ರೂ ಹಿಡೀತಿತ್ತು. ಬಿಸೀ ಬಿಸೀ ನೀರು ಸುರ್ದು, ಹಂಡೇ ಪೂರ್ತಿ ಕಾಲಿ ಮಾಡಾಕೋಳು. ಅದೂ ಸುಡೋ ನೀರು. ಬಾಯಿ ಬಡಕೊಂಡ್ರೆ, ಬಲು ಸೂಕ್ಸ್ಮ ಅಂತ ಗದರ್ತಾಲೇ ಮಗ್ಗುಲಾಗಿರಾ ತೊಟ್ಟೀಗ್ಳಿಂದ ತಣ್ಣೀರು ಬೆರ್ಸೋಳು. ಬಚ್ಚಲಿಗೆ ಇಳಿಯಾ ಮುಂದ್ಲೇ ರಾಮಪ್ಪುಂಗೆ ಆಲ್ಡ್ರು(ಆರ್ಡರ್) ಮಾಡೋಳು. ಮಗೀಗೆ ತಲೆಗೆ ನೀರು ಸ್ಯಾನೆ ಬೇಕು. ಇನ್ನೊಸಿ ಪುಳ್ಳೆ ಹಾಕಿ ರೆಡಿ ಇಕ್ಕು ಅಂಬ್ತಾ. ರಾಮಪ್ನೂ ಈವಮ್ಮುಂದು ಆಲ್ಡ್ರು ಸ್ಯಾನೆ ಆಯ್ತು ಅಂತ ಗೊಣಿಕ್ಕಂಡೇ ಉರಿ ಹೆಚ್ಸೋನು. ನೆತ್ತಿ ಸುಡೋ ನೀರು, ಹಂಡೆ ಖಾಲಿ ಆಗೋ ಹೊತ್ಗೆ, ನಾನು ಸಿಪ್ಪೆ ಸುಲ್ದಿರೋ ಈರುಳ್ಳೀಯಾ ಬಿಸಿಲ್ಗಾಕ್ದಂಗೆ ಸುಸ್ತಾಗಿ ಸುಣ್ಣ ಆಗ್ತಿದ್ದೆ. ಆಚಿಕ್ ಕರ್ಕಾ ಬಂದು, ಮಗೀಗೆ ಹೊಟ್ಗಾಕಮ್ಮೋ ಅಂಬ್ತ ಅಮ್ಮುಂಗೆ ಯೋಳಿ ತಲೆ ಒರ್ಸ್ತಿದ್ಲು. ಆಟೊತ್ಗೆ ತಿಮ್ಮಪ್ಪ ಹುಡೀಕ್ಕಂಡು ಬತ್ತಿದ್ದ. ಅಮ್ಣೇ ಹಿಟ್ಟು ಮಾಡು ಆಲೇ ಏಳು ಮದ್ಯಾನ್ನ ಆಗೈತೆ. ನಂಗೂ ಹೊಲಕಡಿಕ್ಕೆ ಹೋಗಾಕೆ ಟೇಮಾತು ಅಂಬ್ತ. ಪಾಪ ತಿರ್ಗಾ ಓಡೋಗೋಳು. ಸೊಪ್ಪುನ್ ಸಾರು ಅಂತ್ಲೋ, ಮಳಕೆ ಉಳ್ಳೀಕಾಳಿನ್ ಸಾರು ಅಂತ್ಲೋ, ಉಪ್ಸಾರು ಅಂತ್ಲೋ ಯೋಳೋಗಾಳಾ? ಅಮ್ಮ ಕೊಡೋ ನಾಷ್ಟಾ ನಾಲ್ಗೇಗೆ ರುಚಿ ಆಗ್ದೆ, ಅವುರ್ ಮನ್ ತಾವ್ಕೆ ಓಡೊಗೀವೆ.
ಮುದ್ದೆ ತಿರುವೋದು
ಆಟೊತ್ಗೆ ಹಿಟ್ಟು ಬೇಯಿಸಿದ್ ಮಡಕೇಯಾ ಕೆಳುಕ್ಕಿಕ್ಕಿ, ಕೋಲು (ಮುಂದೆ ಯೂ ಆಕಾರದಾಗೆ ಇರ್ತೈತೆ. ಹಿಂದೆ ಉದ್ದುಕೆ ಇರ್ತೈತೆ.) ತಕಂತಿದ್ಲು. ಅದುಕ್ಕೆ ಕವಕಟ್ಟಿ ಅಂತಿದ್ಲು. (ತೆಲುಗಿನಾಗೆ- ಕನ್ನಡದಾಗೆ ಕವಕೋಲು) ಅದ್ನ ತಕಂಡು ಮಡಕೆ ಕುತ್ತಿಗೀಗೆ ಯೂ ಆಕಾರ್‌ವ ಸಿಕ್ಸಿ, ಉದ್ದುಕಿರಾ ಕಟ್ಟಿಗೇ ಮ್ಯಾಗೆ ಕಾಲು ಮೆಟ್ಕಂಡು ಇನ್ನೊಂದು ಕೋಲ್ನಾಗೆ ಗಸಗಸಾಂತ ಮುದ್ದೆ ತೊಳಸೋಳು. ಸ್ಯಾನೇ ಮುದ್ದೆ ಕಟ್ಬೇಕಾದ್ರೆ ಅಲ್ಲೇ ಒಲೆ ಮಗ್ಗುಲಾಗೇ ಒಂದು ದೊಡ್ಡ ಚೌಕದ ಕಲ್ಲು ಮಡಗಿದ್ಲು. ಅದ್ರ ಮ್ಯಾಗಾಕಿ ಮುದ್ದೆ ಕಟ್ಟೋಳು. ವಸೀನೆ ಆದ್ರೆ ಹಳೇದು ಒಂದು ಇಂಡಾಲಿಯಂ ಪ್ಲೇಟಿತ್ತು. ಅದ್ರಾಗಾಕಿ ಉಳ್ಳಾಡ್ಸೋಳು. ಮುದ್ದೆ ಗುಂಡುಕೆ ತಿರುಗೋದು. ಆ ಕಲ್ಲಿನ್ ಮ್ಯಾಗೇ ಕಾರಾನೂ ಅರೀತಿದ್ಲು. ಕಲ್ಲಿನ್ ನಡುಮದ್ಯೆ ಸಣ್ಣ ಹಳ್ಳ ಇತ್ತು. ಅಲ್ಲೇ ಹಸಿಮೆಣಸು, ಜೀರಿಗೆ, ಮೆಣಸು, ಕೊತ್ತುಂಬ್ರಿ ಹಾಕಿ ಚೆಂದಾಗಿ ನೂರಿ ನೂರಿ(ಕುಟ್ಟಿ) ನಂಗೆ ಮುದ್ದೇಗೆ ಮೆದ್ದಿ ಕೊಡೋಳು. ಮದ್ಲು ಒಂದು ದೋಡ್ಡ ಮುದ್ದೆ ಕಟ್ಟಿ ತಟ್ಟೆನಾಗೆ ಸಾರು ಸುರುವಿ, ತಿಮ್ಮಪ್ಪನ ಮುಂದೆ ನೂಕೋಳೂ. ಹಸೇ ಈರುಳ್ಳಿ ಕತ್ತರಿಸ್ಕಂಡು, ರೆಡಿ ಇಕ್ಕಂಡು ಕುಂತ್ಕಂಡಿರ್ತಿದ್ದ. ಆವಪ್ಪ ಉಣ್ಣೊದ್ನ ನೋಡಾದೆ ಬಲು ಸೋಜಿಗ. ದೋಡ್ಡ ಮುದ್ದೆ ಮದ್ಯದಾಗೆ ಹಳ್ಳ ಮಾಡ್ಕಂಡು ಅದ್ರಾಗೊಸಿ ಸಾರು, ತಟ್ಟೆನಾಗೊಸಿ ಸಾರು, ಚೆಲ್ದಂಗೆ ತಟ್ಟೆ ಅಡೀಕ್ಕೆ ಒಂದು ಬೋಕಿ ಪಿಂಚು ಮಡಗೋನು. ಒಂದು ದೊಡ್ಡ ಪಿಡಚೆ ಮುದ್ದೆ ಮುರಿಯೋದು, ಸಾರ್ನಾಗೆ ಉಳ್ಳಾಡ್ಸಿ ಉಳ್ಳಾಡ್ಸಿ, ಅದ್ರಾಗರ್ಧ ಬಾಯೊಳುಕ್ಕೆ, ಇನ್ನರ್ಧ ಅಂಗೇ ವಾಪ್ಸು. ತಿರ್ಗಾ ಅದ್ರ ಜೊತೀಗೆ ಇನ್ನೊಸಿ ಮುದ್ದೆ ತಕಂಡು ಪಿಡಚೆ ಮಾಡ್ಕಂಡು ಅದೇ ತರುಕ್ಕೆ ಉಣ್ಣೋದು. ಮದ್ಯದಾಗೆ ಹಸೆ ಈರುಳ್ಳಿ ಒಂದ್ ಕಿತ ಕಡಿಯೋದು, ಹಸೆ ಮೆಣಸು ಒಂದ್ ಕಿತ ಕಡಿಯೋದು, ಉಸ್ ಉಸ್ ಅನ್ ಕಂತಾ ಮುದ್ದೆ ಗುಳುಂ ಗುಳುಂ ಅನ್ಸೋನು. ನಾನೂ ಕಣ್ಣೂ ಬಾಯಿ ಬಿಟ್ಕಂಡೂ ನೋಡೋದು. ಆಟು ದಪ್ಪ ಮುದ್ದೆ ಏಟು ಸಲೀಸಾಗಿ ನುಂಗ್ತಾನಲ್ಲಪ್ಪ ಅಂತ. ಅಮ್ಣೆ ನಂಗೆ ದಿಷ್ಟಿ ಆಗ್ತೈತೆ ಅಂಬ್ತ ಗುರಾಯ್ಸೋನು. ಅಯ್ ಸುಮ್ಕೆ ಕುಂತ್ಕ, ಮಗೀ ಕಣ್ಣು ದುಷ್ಟೀ ಆಗಾಕಿಲ್ಲ. ವಸಿ ಮೆಲ್ಲುಕೆ ಉಣ್ಣು. ಯಾರಾನಾ ಮುದ್ದೆ ಕಂಡಿಲ್ಲ ಅನ್ ಕಂಡಾರು ಅಂತ ಗದರ್ಕಂಡು, ನಂಗೆ ಸಣ್ಣ ಉಂಡೆ ಕಟ್ಟಿ, ಅದ್ರಾಗೆ ತಿರ್ಗಾ ಗೋಲಿ ಗಾತ್ರದ ಉಂಡೆಗ್ಳ ಗುಂಡುಕೆ ಮಾಡಾಕೋಳು. ಕಾರ ಮೆದ್ದಿರ್ತಿದ್ಲು. ವಸಿ ಇರು ಅಂತ, ನಮ್ಮನೀಗೆ ಓಡೋಗಿ, ಅಮ್ಮನ ತಾವ ತುಪ್ವೋ, ಬೆಣ್ಯೋ ಈಸ್ಕಂಡಿ ಬಂದು, ನಂಗೆ ಹಾಕೋಳು. ನಾನು ಬಲವಂತ ಮಾಡಿ ತಿಮ್ಮಪ್ಪುಂಗೂ ವಸಿ ಹಾಕುಸ್ತಿದ್ದೆ. ನೀನೂ ತಿನ್ನು ಅಂತ ನಾನು ಸೊಲ್ಪಾನೇ ಹಾಕುಸ್ಕಂತಿದ್ದೆ.
ಸಂಜೆ ಕಡೀಕ್ಕೆ ಮನ್ ತಾವೋದ್ರೆ ಮಡಿಕೆ ತಳದಾಗೆ ಅಂಟಿರಾ ಸೀಕು ಎಬ್ಬಿ ಕೊಡೋಳು. ಕಳ್ಳೆಕಾಯಿ ಕಾಲ್ದಾಗೆ ಬುಡ್ಡೇ ಸುಟ್ಟು ಕೊಡೋಳು. ಹೊಲ್ತಾವ ಹೋದ್ರೆ ಕಾಶಿ ಹಣ್ಣು, ನೇರಳೆ ಹಣ್ಣು ಎಲ್ಲಾನಾ ಕಂಡ್ರೆ ಕಿತ್ಕಂಡು ಸೆರಗ್ನಾಗೆ ಗಂಟು ಹಾಕ್ಕಂಡು ಬರೋಳು. ಮನ್ಯಾಗಿರಾ ಹುಡುಗ್ರಿಗೆ ಕಾಣ್ದಂಗೆ ಬಚ್ಚಿಕ್ಕಿ, ನಾನ್ ಬಂದೇಟ್ಗೆ ತಕಳಮ್ಣಿ ಅಂತ ಸೆರಗಿನ ಗಂಟು ಬಿಚ್ಚಿ ಕೊಡೋಳು.
ನಾಗಮ್ಮ ಬೆಳುಗ್ಗೆ ಹಿಟ್ಟು ಉಂಡ್ರೆ ತಿರ್ಗಾ ಸಂಜೀಕೇ. ಎಲ್ಡೇ ಹೊತ್ತು. ನಡುಮದ್ಯದಾಗೆ, ಕಡ್ಡಿಪುಡಿ, ಎಲಡಿಕೆ ಜಗೀತಾ ಇರೋದು. ಸೊಂಟದಾಗೆ ಒಂದು ಹಳೆ ಅಡಿಕೆಲೆ ಸಂಚಿ ನೇತಾಡ್ತಿತ್ತು. ಬಾಯಾಗ್ಳ ಹಲ್ಲು ಅಸ್ಲೀ ಬಣ್ಣವೇ ಗೊತ್ತಾಗ್ದಂಗೆ ಕೆಂಪುಕೆ, ಕರ್ರುಗೆ ಹೊಳೀತಿದ್ವು. ನಾನೂ ಆಡ್ಕಂಬೀವೆ. ನೋಡು ನನ್ನ ಹಲ್ಲು ಏಟು ಬೆಳ್ಕವೆ. ನಂಜನಗೂಡು ಹಲ್ಲು ಪುಡಿ ಕೊಡ್ತೀನಿ, ತಿಕ್ಕು. ಇದ್ದಿಲಾಕುದ್ರೆ ಕರ್ರಗೆ ಆಗ್ತವೆ ಅನ್ನೀವೆ. ಸುಮ್ಕೆ ನಗಾಡೋಳು. ಅಮ್ಣೇ ನಿನ್ ಹಲ್ಲಿನ್ ಪುಡಿ ನನ್ ಹಲ್ಲ ಬೆಳ್ಳುಕೆ ಮಾಡವಲ್ದು ಅಂತಿದ್ಲು.
ಸನ್ಯಾಸಿ
ಯಾತುರ್ದೂ ಆಸೆ ಮಾಡ್ತಿರಲಿಲ್ಲ. ನಾನೂ ನಮ್ಮಕ್ಕ ಸನ್ಯಾಸಿ ಅಂತ ಆಡ್ಕಂಬೀವಿ. ತಿಂಬಾಕೆ ಪುರಿನೋ, ಬಿಸ್ಕತ್ತೋ, ಬನ್ನೋ ಏನ್ ಕೊಟ್ರೂ ಖಾಯಿಷ್ (ಆಸೆ) ಇರಲಿಲ್ಲ. ಅಯ್ಯಾ ನಂಗ್ಯಾಕಮ್ಣಿ, ಮಗೀಗೆ ಕೊಡು ಚೆಂದಾಗಿ ತಿನ್ಲಿ ಅಮ್ತ ಅಮ್ಮುಂಗೆ ಯೋಳೋಳು. ಖಾಯಿಷ್ ಬೀಳ್ತಿದ್ದುದ್ದು ಅಂದ್ರೆ ಎಲಡಿಕೆ, ಕಡ್ಡಿಪುಡಿಗೆ ಅಷ್ಟೇಯಾ. ಸಾರು ಕೊಟ್ರೆ ಬಲ್ ಕುಸೀಲಿ ತಗಂಡೋಗೋಳು. ಯಾವಾಗಾನಾ ಮಜ್ಜಿಗೆ ಕೇಳ್ಕಂಡು ಬತ್ತಿದ್ಲು. ಉಪ್ಪುಂಕಾಯಿ ಅಂದ್ರೆ ಕುಸಿ. ಅಷ್ಟು ಬುಟ್ರೆ, ಕಣ್ಮುಂದ್ಲೇ ಪಂಚ ಪರಮಾನ್ನ ತಂದಿಕ್ಕುದ್ರೂ ಮೂಸುತಿರಲಿಲ್ಲ.
ಮನ್ ತುಂಬಾ ಮಡಕೆ ಕುಡಿಕೆ
ಮನ್ಯಾಗೆ ಒಂದು ಮೂಲೇಲಿ ಒಂದು ಸಣ್ಣ ಜಾಗದಾಗೆ ಮಡಕೆಗಳು ಒಂದ್ರ ಮೇಲೊಂದು ಜೋಡಿಸಿದ್ಲು. ದೊಡ್ಡದು ಅಡೀಕ್ಕೆ ಸಣ್ಣವು ಮ್ಯಾಕೆ. ಒಂದ್ರ ಮ್ಯಾಗೊಂದು ಆಳೆತ್ರ ಜೋಡಿಸಿರ್ತಿದ್ಲು. ಅದ್ರಾಗೇ ಮನ್ಯಾಗ್ಳ ಎಲ್ಲಾ ಸಾಮಾನೂ ಸರಂಜಾಮೂ. ದಪ್ಪನ್ನ ಮಡಿಕೆ. ಎಷ್ಟು ಜ್ವಾಪಾನ್ವಾಗಿ ಮಡಿಕ್ಕಂಡಿದ್ಲು. ಈಗ ಮನ್ಯಾಗೆ ಗಾಜಿನ ಡಬ್ಬ ಮೇನ್ಟೇನ್ ಮಾಡಾಕಾಗ್ದೆ ಒದ್ದಾಡ್ತೀವಿ. ಅಂತಾದ್ರಾಗೆ ಯಾಪಾಟಿ ಮಡಕೆಗ್ಳು, ಅದೂ ಮ್ಯಾಲಿನ್ವರ್ಕೂ ಜೋಡಿಸಿದ್ಲು. ತಳ್ದಾಗೆ ವಸಿ ಹೆಚ್ಚೂಕಮ್ಮಿ ಆದ್ರೂ ಎಲ್ಲಾ ನೆಲುದ್ ಮ್ಯಾಲೇಯಾ. ಒಂದ್ ಕಿತಾನೂ ಒಂದ್ ಮಡಕೇನೂ ಒಡ್ದಿದ್ನ ನಾ ಕಾಣಲಿಲ್ಲ.

ಹರಟೆ ಕಟ್ಟೆ
ನಮ್ಮನ್ಯಾಗೆ ನಾಗಮ್ಮ, ಕಮಲಮ್ಮ, ರಾಮಪ್ಪ, ಗೋವಿಂದಪ್ಪ, ಅಗಸರ ಪುಟ್ಟಲಿಂಗಪ್ಪ ಎಲ್ರೂ ಸೇರ್ಕಣೋರು. ಸಂಜೀ ಆದ್ರೆ ಪಡಸಾಲೇನಾಗೆ ಇವ್ರ ಹರಟೆ ಸುರು. ನಮ್ಮಮ್ಮನೂ ಸೇರ್ಕಂತಿತ್ತು. ಅಪ್ಪ ಇದ್ರೆ ಅಪ್ನೂ ಕೂಡ್ಕಂತಿತ್ತು. ಊರಾಗ್ಳ ಸುದ್ದಿ ಮಾತಾಡ್ತಾ ಹುವ್ವ ಕಟ್ಟೋದು. ಗಂಡಸ್ರು ಹೊಗೆಸೊಪ್ಪು, ಹೆಂಗುಸ್ರು ಕಡ್ಡಿಪುಡಿ ಹಾಕ್ಕಂತಾ ಮಾತುಕತೆ ಸುರು ಆಗ್ತಿತ್ತು. ಪಾತ್ರೆ ಇದ್ರೆ ಮನೆ ಮುಂದೆ ರಸ್ತೆನಾಗೆ ಇಟ್ಕಂಡು, ಬೀದಿಗ್ಳಾಗಿನ್ ಮಣ್ಣು ತಕಂಡು ಅಂಗೇ ಗಸಗಸಾಂತ ಉಜ್ಜಿ ಬೆಳಗಿ(ತೋಳೆದು) ತಂದಿಕ್ಕೋರು. ಮನೆ ಸಾರುಸ್ತಿದ್ದಿದ್ದೂ ನಾಗಮ್ಮ ಕಮಲಮ್ಮದೀರೇಯಾ. ನಾಗಮ್ಮ ವಸಿ ಹಿರೇಳು ಅಮ್ತ ಅಪ್ಪನೂ ಬಲು ಗೌರವ ಕೊಡ್ತಿದ್ರು. ಊರಾಗೆ ರಾಜಕೀಯ ಜಾಸ್ತಿ. ಗಲಾಟೆ ಹೊಡ್ದಾಟ ಬಡ್ದಾಟ ಮಾಮೂಲಿ ಇತ್ತು. ಒಂದು ಕಿತ ಜೋರು ಗಲಾಟೆ. ಅಪ್ಪನ್ನ ಹೊಡ್ಯೋಕೇಂತ್ಲೇ ಎದ್ರು ಪಾಲ್ಟಿನೋರು ಹುಡುಗ್ರನ್ನ ಕರ್ಕಾ ಬಂದೌರೆ. ಕೈಕೈ ಮಿಲಾಯ್ಸಿಕಂಡು ಎಲ್ಡೂ ಕಡೆ ಹುಡುಗ್ರು ಗಲಾಟೆ ಮಾಡ್ತೌರೆ. ನಮ್ಮಪ್ನೂ ತೋಳೇರ್ಸಿಕಂಡು ಹೊಂಟವ್ರೆ. ನಮ್ಮಮ್ಮ ಎದ್ರಿ ಎಳ್ಳೀಕಾಯಿ ಆಗವ್ರೆ. ಅದೆಲ್ಲಿದ್ಲೋ ನಾಗಮ್ಮ ಬಂದೋಳೆ ನಮ್ಮಪ್ಪನ ರಟ್ಟೆ ಹಿಡ್ಕಂಡು ಸುಮ್ಕೆ ಬಾರಪ್ಪ ನೀನು, ಮನ್ ತಾವ್ ನಡೀ ಅಂತ ಎಳ್ಕಂಡೇ ಬಂದ್ಲು. ಊರಿನ್ ಕಷ್ಟ ಸುಕುಕ್ಕೆ ಆಗೋನು ನೀನು. ನಿಂಗೇನಾರಾ ಆದ್ರೆ ನಮ್ ಗತಿ ಏನೂಂತ ಕೇಳ್ಕಂಡು, ಅಂಗೇ ಆ ಹುಡುಗ್ರಿಗೆ ನಿಮ್ಗೆ ಗ್ಯಾನ ಐತೇನ್ರೋ ಆವಪ್ಪನ್ನ ನಡುಮದ್ಯಾ ಬುಟ್ಟಿ ತಮಾಸಿ ನೋಡ್ತಿದ್ರಾ ಅಂತ ಬೈದಾಡಿದ್ಲು. ಅವ್ರೂ ಅಮ್ಮೋ ನಾವ್ ಅಣ್ಣ ಬಂದದ್ದು ನೋಡ್ಲಿಲ್ಲ ಅಂದ್ರೂ ಬುಡವಲ್ಲಳು. ಅಮ್ಮುಂಗಂತೂ ಹೋದ್ ಜೀವ ಬಂದಂಗಾತು. ನಾಗಮ್ಮ ದೇವ್ರು ಬಂದಂಗೆ ಬಂದೆ. ನನ್ ಮಾತು ಕೇಳ್ದೇ ಹೊಂಟೋದ್ರು. ಇವತ್ತು ನನ್ನ ಉಳ್ಸಿಬುಟ್ಟೆ ಅಂತ ಕಣ್ಣಾಗ್ ನೀರು ಹಾಕಿದ್ಲು.
ನಮ್ಮಜ್ಜೀ ಸೇವೆ
ಲಕ್ವಾ ಹೊಡ್ದು ಬಲಭಾಗ ಪೂರ್ತಿ ಬಿದ್ದೋಗಿ ನಾಕೈದು ವರ್ಷ ನಮ್ಮಜ್ಜಿ ಹಾಸ್ಗೆ ಹಿಡ್ಕಂಡಿತ್ತು. ಆಗ ನಾಗಮ್ಮ ಕಮಲಮ್ಮ ಮುದ್ದಮ್ಮದೀರು ಬಂದು ನೋಡ್ಕಂತಿದ್ರು. ಗೋಣೀಚೀಲದ ಮ್ಯಾಗೆ ಅಜ್ಜಿಯಾ ಕುಂಡ್ರಿಸಿ ಮೂರು ಜನ ಹಿಡ್ಕಂಡು ಬಚ್ಚಲುಮನಿಗೆ ಎತ್ಕಂಡು ಹೋಗ್ತಿದ್ರು. ಅಲ್ಲಿ ಕುರ್ಚಿ ಹಾಕಿ ಅಜ್ಜಿಗೆ ಸ್ನಾನ ಮಾಡ್ಸಿ, ಸೀರೆ ಉಡ್ಸಿ ಕರ್ಕಂಡು ಬಂದು ಹಾಸಿಗೇ ಮ್ಯಾಲೆ ಮನುಗುಸ್ತಿದ್ರು. ವಾರಕ್ಕೊಂದು ಸತಿ ತಲೆಗೆ ಎಣ್ಣೆ ನೀರು ಹಾಕ್ಬೇಕಿತ್ತು. ಅಜ್ಜಿ ಸೈಗು( ಸನ್ನೆ) ಮಾಡಿ ತೋರ್ಸೋರು. ಮೈ ನೋವು, ತಲೆಗೆ ಸ್ನಾನ ಮಾಡ್ಸಿ ಅನ್ನೋರು. ಒಂದು ಹಂಡೆ ನೀರು ಬೇಕೂಂತ ತೋರ್ಸೋರು. ನಾಗಮ್ಮ ಕಮಲಮ್ಮ ಬಲ್ ಚೆಂದಾಗಿ ನೋಡ್ಕಂಡೌರೆ. ಅಜ್ಜಿ ಒಂದಾ ಮಾಡ್ಬೇಕೂಂತ ಸೈಗೆ ಮಾಡಿದ್ರೆ ಗೋಣೀಚೀಲ ಹಾಕೋರು. ಆಮ್ಯಾಕೆ ಅದ್ನ ಒಗೆಯೋಕೆ ಹಾಕೋರು. ಅಗಸರ ಪುಟ್ಟಲಿಂಗಪ್ಪ ಬಟ್ಟೆ ಸೆಣಕಂಡು(ಒಗೆದು) ಬರೋನು. ಅಜ್ಜಿ ಸೀರೆ, ಬಟ್ಟೆನಾ ಚೌಳು ಮಣ್ಣು ಹಾಕಿ ಎತ್ತಿ ಕುಕ್ಕಿ ಕುಕ್ಕಿ ಮಡಿ ಮಾಡ್ಕಂಡು ಬತ್ತಿದ್ದ.
ನಾಗಮ್ಮನ ಕತೆ
ನಾಗಮ್ಮ ಊರಿನ ನಾಯಕರಾಗೆ ಹಿರೀತಲೇಂತ ಎಲ್ರೂ ಮರ್ವಾದೆ ಕೊಡೋರು. ಕಷ್ಟ ಸುಕುಕ್ಕೆ ಮುಂದ್ ನಿಲ್ತಿದ್ಲು. ಆಚಾರ ಇಚಾರ ಅಂದ್ರೆ ಬಲ್ ಕಂಡೀಸನ್ನು. ಇಂಗಿಂಗೇಯಾ ಅಂತ ಯೋಳ್ಕಂತಾ ಎಲ್ಲಾರ್ಗೂ ಮುಂದೆ ನಿಲ್ಲೋಳು. ಯಾರಾನಾ ಯೋನಾರಾ ಕೇಳ್ಬೇಕೂಂದ್ರೆ ನಾಗಮ್ಮನ್ನೇಯಾ. ಊರಾಗೆ ಕದರಿ ಪೋರ್ಣೋಮಿನಾಗೆ ಬರಾ ಕದಿರಪ್ಪನ ಪರಿಸೆ ಮುಂದ್ಲು ಚಂದ್ರಮ್ಮುನ್ನ ಹುಯ್ಯೋ ಆಚಾರ ಇತ್ತು. ಅದ್ಕೇ ನಾಯುಕ್ರ ಹಟ್ಟೀನಾಗೆ ನಾಗಮ್ಮುಂದೇ ದರ್ಬಾರು. ರಂಗೋಲಿ ಹುಯ್ಯೋದ್ರಾಗೆ, ಪದಗಳ್ನ ಯೋಳೋದ್ರಾಗೆ ಅವುಳ್ ಕೈಯೇ ಮ್ಯಾಗೆ. ಚಿಕ್ಕೋರ್ಗೆಲ್ಲಾ ನಾಗಮ್ಮತ್ತೆ, ನಾಗಮ್ಮ ದೊಡ್ಡಮ್ಮಾ. ಪದ ಕಲಿಯಾಕೆ ಎಲ್ಲಾ ಹೆಣ್ಣೈಕ್ಳೂ ಬಂದು ಅವುರ್ ಮನೆ ಮುಂದೆ ಕೂಡೋರು. ಯಾರ್ದಾನಾ ಮನೆ ಮದ್ವೆ, ಸೋಬನ ಅಂದ್ರೆ ಮುಂದೆ ಇರ್ತಿದ್ಲು.
ಸಿವರಾತ್ರಿ ಉಪಾಸ, ಕಾಟುಮರಾಯನ ಜಾತ್ರೇನಾಗೆ ಇಡೀ ಹಟ್ಟೀಗೇ ಹಿರೇ ತಲೆಯಾಗಿ ಮುಂದ್ಲೇ ಇರೋಳು. ಈ ಸಿವರಾತ್ರಿ ಅಂದೇಟ್ಗೆ ನಂಗೆ ತಟುಕ್ಕಂತ ಗ್ಯಾಪ್ನ ಬರೋದು ತಂಬಿಟ್ಟುಂಡೆ. ನಂಗೇಂತ್ಲೇ ನಾಕು ಉಂಡೆ ಮಾಡಿ(ಒಂದೊಂದೂ ಎಲ್ಡು ದೊಡ್ಡ ಹಿಡೀ ಗಾತ್ರ) ಮಡಿಕೇ ತಳದಾಗೆ ಬಚ್ಚಿಕ್ಕಿ ಒಂದು ತಿಂಗ್ಳ ಗಂಟ ನಾನ್ ಕೇಳ್ ಕೇಳ್ದಾಗೆಲ್ಲಾ ಮುಚ್ಚಿಕ್ಕಂಡು ಕೊಡೋಳು.
ಒಬ್ಳೇ ಮಗ್ಳು ಲಿಂಗಮ್ಮ
ಪಾಪ ಒಬ್ಳೇ ಮಗ್ಳು ಲಿಂಗಮ್ಮುಂಗೆ ಅರ್ಧ ಮಳ್ಳು. ಅದೇ ಬ್ಯಾನೇ ನಾಗಮ್ಮುನ್ ಜೀವ ತಿಂತಿತ್ತು. ಮದ್ವೇ ಕಾಲುಕ್ಕೆ ಮದಿವ್ಯಾಗಲಿಲ್ಲ. ಇತ್ಲಾಗೆ ಆವಮ್ಮನ ತಮ್ಮುಂಗೆ ವಾರಗಿತ್ತಿ(ಭಾವನ) ಮಗ್ಳು ಬೋಡಕ್ಕನ್ನ(ಅಡ್ಡೆಸ್ರು. ಹೆಸ್ರು ಗ್ಯಪ್ತಿ ಇಲ್ಲ.) ಕೊಟ್ಟಿದ್ರು. ಅವುಳ್ಗೂ ಮಕ್ಕಳಾಗಲಿಲ್ಲ. ಲಿಂಗಮ್ಮುನ್ನ ಅವುಂಗೇ ಎರಡ್ನೇ ಮದಿವೆ ಮಾಡುದ್ಲು. ಕಾವಲ್ಲಿ (ಕಾವಲ್ಲಪ್ಪ) ಹುಟ್ದ. ಪಾಪ ಅವ್ನೂ ಅರ್ಧ ಮಳ್ಳ. ಕೊನೆಗೆ ನಾಗಮ್ಮುನ ಮೈದ ಕೂಮಪ್ಪನ ಮಗುಳ್ನೂ ತಂದು ಅವುಂಗೆ ಮೂರನೇ ಮದಿವೆ ಮಾಡುದ್ಲು. ಅವುಳ್ಗೆ ಚೆಂದಕಿರೋ ಎಲ್ಡು ಮಕ್ಕಳಾದ್ವು. ಇತ್ಲಾಗೆ ಲಿಂಗಮ್ಮ ಮಗುನ್ ಜತ್ಯಾಗೆ ಅಮ್ಮನ ಮನ್ಯಾಗೇ ಸೇರ್ಕಂಡ್ಲು. ಮಗ್ಳು ಮೊಮ್ಮಗುನ್ನ ಅಂಗೈಯಾಗಿಟ್ಟು ಸಾಕ್ದಿದ್ಲು. ಪಾಪ ಕಾವಲ್ಲಿ ಒಂದು ದಿನ ಆಟಾಡಾವಾಗ ಬಾವಿಗೆ ಬಿದ್ದು ಸತ್ತೋದ. ಅವ್ನೇ ಬಿದ್ನೋ, ಯಾರಾನಾ ತಳ್ಳುದ್ರೋ ಅಂಬೋ ಅನುಮಾನ ಅಂಗೆ ಉಳ್ಕಂತು. ನಾಗಮ್ಮ ಮೊಮ್ಮಗೀ ಮ್ಯಾಗೆ ಜೀವಾನೇ ಮಡಿಕ್ಕಂಡಿದ್ಲು. ಎದೆ ಒಡ್ಕಂಡು ಅತ್ಲು. ಅತ್ಲಾಗಿಂದ ಸ್ಯಾನೆ ನವುಕೊಂಡು ಹೋದ್ಲು.
ಅದಾಗಿ ನಾಕೈದು ವರ್ಸುಕ್ಕೆ ತಿಮ್ಮಪ್ನೂ ತೀರೋದ. ಅತ್ಲಾಗಿ ನಾಕೈದೊರ್ಸುಕ್ಕೆ ನಾಗಮ್ಮನೂ ಸಿವನ ಪಾದ ಸೇರ್ಕಂಡ್ಲು. ಊರ್ನಾಗಿರಾ ಹಿರೇ ತಲೆ ಇಂಗೆ ಕಳಚ್ಕಂತು. ಅಡುಗೆ ಮಾಡಾಕೂ ಬರ್ದಿರಾ ಮಳ್ಳು ಲಿಂಗಮ್ಮ ಕಮಲಮ್ಮುನ್ ಮನೇ ತಾವ್ಲೇ ಕತೆ ಕಳ್ಕಂಡು ಎಲ್ಡೊರ್ಸುಕ್ಕೇ ಅಮ್ಮುನ್ ಹಿಂದ್ಲೇ ಹೋದ್ಲು.
ಜಮೀನು ಅಂದ್ರೆ ಪ್ರಾಣ
ಅಂಗೈ ಅಗಲ ಜಮೀನು ಇತ್ತು. ಗಂಡ ಹೆಂಡ್ರು ಅದ್ನೇ ಗೇಯ್ಕಂಡು ಉಣ್ಣುತ್ತಿದ್ರು. ನಮ್ಮಪ್ನೂ ಏಸೊಂದು ಕಿತ ಯೋಳ್ತಿತ್ತು, ವಯಸ್ಸಾದ್ ಕಾಲುಕ್ಕೆ ಯಾತಕಷ್ಟು ಕಷ್ಟ ಪಟ್ಟೀರಿ. ಅತ್ಲಾಗೆ ಜಮೀನು ಮಾರಿ, ಬ್ಯಾಂಕ್ನಾಗೆ ದುಡ್ಡು ಮಡಗಿ, ಅದ್ರ ಬಡ್ಡೀನಾಗೆ ಜೀವ್ನಾ ಸಾಗ್ಸಿ ಅಂದ್ರೂ ತಿಮ್ಮಪ್ಪ ಕೇಳ್ತಿರಲಿಲ್ಲ. ಅವುನ್ ಹೋದ ಮ್ಯಾಕೆ ನಾಗಮ್ಮನೂ ಕೇಳ್ತಿರಲಿಲ್ಲ. ಜೀವ್ನಾ ಸಾಗ್ಸಾದೆ ಕಷ್ಟುಕ್ಕೆ ಬಂದು ತಿಮ್ಮಪ್ಪುನ್ ಕೈಯಾಗೆ ಹಳೇ ಕಾಲುದ್ ಒಂದು ಬೆಳ್ಳಿ ಕಡಗ ಇತ್ತು. ಅದ್ನೂ ಮಾರಿದ್ಲು. ಆದ್ರೂ ಜಮೀನು ಮಾತ್ರಾ ಮಾರಕ್ಕೇ ಬುಡಲಿಲ್ಲ. ಅವ್ಳೂ ಹೋದ್ಲು. ಈಗ ಆ ಜಮೀನು ಕಮಲಮ್ಮನ ಮಕ್ಕಳ ಪಾಲಾಯ್ತು.
ಲೇಪಾಕ್ಷಿ ಟೂರು
ನಮ್ಗೆ ಸ್ಕೂಲ್ನಿಂದ ಒಂದು ಸತಿ ಒಂದು ದಿನದ ಟೂರು ಕರ್ಕೋ ಹೋಗಿದ್ರು. ಹಿಂದೂಪುರದ ಹತ್ರ ಲೇಪಾಕ್ಷಿಗೆ. ಬೆಳಗ್ಗೆ ಹೋಗಿ ಸಂಜೆ ಬಂದ್ವು. ಒಳ್ಳೆ ಬಿಸಿಲುಗಾಲ. ಆ ಸೀಮೇನಾಗೆ ಧಗೆ ಇನ್ನೂ ಜಾಸ್ತೀನೇಯಾ. ಆಟೊತ್ಗೆ ನಾಕೈದು ಕಿತ ಅವುರ್ ಮನೆಯಿಂದ ನಮ್ ಮನ್‌ತಾವ್ಕೆ ಅಡ್ಡಾಡೌಳೆ. ಮಗೀನ್ ಯಾಕ್ ಕಳುಸ್ದೆ, ಬಿಸಿಲಾಗೆ? ಅಂತ ಅಮ್ಮನ್ ಮ್ಯಾಗೆ ಎಗರಾಡೌಳೆ. ನಾನ್ ಬಂದು ಮನ್ಯಾಗೆ ಕಾಲುಚಾಚ್ಕಂಡು ಕುಂತು ಟೂರಿನ್ ವಿಷ್ಯಾ ಹೇಳ್ತಿದ್ದೆ. ನಮ್ಮ ಚಿಗತ್ತೆ ಮತ್ತು ಅವುರ್ ಮಗಳು ಪುಟ್ಟಲಕ್ಷ್ಮಿ ಮನ್ಯಾಗಿದ್ರು. ಅವುರ ಊರೂ ಲೇಪಾಕ್ಷಿ ಮಗ್ಗುಲಾಗಿರೋ ನಗರಗೆರೆ. ಅವುಳ್ಗೇ ನಾನ್ ಅವುಳ್ನ ಬುಟ್ಟು ಟೂರು ಹೋಗಿದ್ಕೆ ಕ್ವಾಪ ಬಂದಿತ್ತು.
ನಾಗಮ್ಮ ಬಂದೋಳೇ ಅಯ್ಯೋ ಮಗೀ ಕಾಲು ನೋವಾಗೈತೆ ಪಾಪ. ಕಾಲು ಚಾಚ್ಕಂಡು ಕುಂತೈತೆ ಅಂತ ಕಾಲು ಹಿಸುಕೋಕೆ ಸುರು ಮಾಡುದ್ಲಾ, ಈ ಪುಟ್ಟಲಕ್ಷ್ಮೀಗೆ ಹೊಟ್ಟೆ ಉರೀ ಹೆಚ್ಕಂಡು ಅದೆಲ್ಲಿತ್ತೋ ಕ್ವಾಪ, ಪಟುಕ್ ಅಂತ ನಂಗೆ ಏಟು ಕೊಟ್ಲು. ನಾಗಮ್ಮ ಬುಟ್ಟಾಳೇ ಅವುಳ್ನೂ ಉಗ್ದು ಉಪ್ಪಿಂಕಾಯಿ ಹಾಕಿದ್ಲು.
ಕೋಳಿಪಿಳ್ಳೆ – ಮೊಟ್ಟೆ
ಒಂದೆರ್ಡು ಕೋಳಿ ಸಾಕಿದ್ಲು. ಅವು ಮಟ್ಟೆ( ಮೊಟ್ಟೆ) ಇಕ್ಕಾವಾಗ, ಕಾವು ಕೊಡಾವಾಗ ಮಂಕರಿ ಬಾದಲಿಸಿ (ಗುಬರಾಕು)ತ್ತಿದ್ಲು. ನಾನೂ ನಮ್ಮಕ್ಕ ಇಂಗೋಗಿ ಅಂಗೆ ಬತ್ತಾ ಮಂಕರಿ ಎತ್ತಿ ನೋಡೀವಿ. ಸುಮ್ಕಿರ್ರಿ ಅಂತ ಬೈದ್ರೂ, ನಮ್ಗೆ ಪಿಳ್ಳೆಗ್ಳು ಆಚಿಕ್ ಬಂದ್ವಾ ಅಂತ ನೋಡಾ ಆಸೆ. ಆ ಪಿಳ್ಳೆಗ್ಳು ಮ್ಯಾಗೂ ಮಂಕರಿ ಗುಬರಾಕ್ತಿದ್ಲಾ. ಅವು ಮೆತ್ತಮೆತ್ತಗೆ ಇರ್ತಿದ್ವಾ. ಮುಟ್ಟೊ ಆಸೆ. ಅವೋ ಪುಟಪುಟಾಂತ ತಪ್ಪುಸ್ಕೊಣೋವು. ನಾನು ಮಂಕರಿ ಎತ್ತಿ ಅದ್ನ ಹಿಡ್ಯಾಕೆ ಹೋಗ್ತಿದ್ದೆ. ಅವು ಬುಡಬುಡಾಂತ ಓಡೋಗ್ತಿದ್ವು. ಓಡಿ ಬಂದು ಮಂಕರಿ ದಬ್ಬಾಕೋಳು.
ನಮ್ಮಕ್ಕುಂಗೆ ಒಂದು ಕಿತ ಕೈಮುರ್ದಿತ್ತು. (ಮಣಕೈ) ಆಗ ಮೊಟ್ಟೆ ತಿನ್ಸಾಕೇಂತ ಡಾಕುಟ್ರು ಯೋಳಿದ್ರಾ, ಮನೇಗೆ ಕರ್ಕೋ ಹೋಗಿ ಮೊಟ್ಟೆ ಬೇಯ್ಸಿ ತಿನ್ಸೋಳು.

ನಾಗಮ್ಮುನ್ ವಿಷ್ಯ ಬರೀತಿದ್ರೆ ಊರ್ತಾಲೇ(ಒಸರುತ್ತಲೇ) ಐತೆ. ಈ ಕಾಲುಕ್ಕೆ ಮುಗೀವಲ್ದು. ಇಂಗೇ ನಾಗಮ್ಮ ಅಂಬೋ ಜೀವ ನಂಗೋಸ್ಕರಾನೇ ಇತ್ತೇನೋ. ಕೃಷ್ಣಂಗೆ ಯಶೋದಮ್ಮ ಇದ್ದಂಗೆ ಇದ್ಲು. ಊರು ಬುಟ್ಟ ಮೇಲೆ ಅಪ್ಪ ಅಮ್ಮ ಹೋದ್ರೆ ಸಾಕು ಸುಮಕ್ಕ ಎಂಗೌಳೆ ಅಂತ ಓಡಿ ಬರೋಳು. ಶಿವರಾತ್ರಿ ತಂಬಿಟ್ಟು ಎತ್ತಿಮಡಗಿ ಯಾರಾನಾ ತುಮಕೂರಿಗೆ ಬರ್ತಾರೆ ಅಂದ್ರೆ ಕೊಟ್ಟು ಕಳಿಸೋಳು. ಯಾವ ಜನ್ಮುದಾಗೆ ಏಸು ಋಣ ಇತ್ತೋ ಇಬ್ಬರ ಮದ್ಯೆ. ಈ ಜನ್ಮದಾಗಂತೂ ನಂಗೆ ಅವ್ಳ ಋಣ ತೀರ್ಸಾಕೆ ಆಗಲಿಲ್ಲ ಅಂಬೋದು ಎದೆ ಕೊರೀತಿರಾ ಸತ್ಯ.

ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.
