Advertisement
ನಮ್ಮ ಕಾಲದ ಕೃಷಿ….: ರೂಪಾ ರವೀಂದ್ರ ಜೋಶಿ ಸರಣಿ

ನಮ್ಮ ಕಾಲದ ಕೃಷಿ….: ರೂಪಾ ರವೀಂದ್ರ ಜೋಶಿ ಸರಣಿ

ಈ ಗದ್ದೆ ಕೆಲಸ ನಡೆಯುವಾಗ ನಾನಂತೂ ಮಧ್ಯಾಹ್ನ ಶಾಲೆ ಬಿಟ್ಟೊಡನೆ ಗದ್ದೆಗೆ ಓಡುತ್ತಿದ್ದೆ. ಅವೆಲ್ಲವನ್ನೂ ಕಣ್ಣು ತುಂಬಿಕೊಳ್ಳುತ್ತ, ಅವರ ಮಾತು, ಗಲಗಲ ನಗೆಗೆ ನಾನೂ ಹಲ್ಲು ಕಿಸಿಯುತ್ತ ಮೈ ಮರೆತು ನಿಂತು ಬಿಡುತ್ತಿದ್ದೆ. ತಿರುಗಾ ಆಯಿ ಜೋರಾಗಿ ಕರೆದು, “ಯೇ ಬಾರೇ. ಊಟ ಮಾಡಿ ಶಾಲೆಗೆ ಹೊರಡು” ಎಂದು ಗದರಿದಾಗ, “ಥೋ… ಇದೊಂದು ಮಳ್ಳು ಶಾಲೆ” ಎಂದು ನನ್ನೊಳಗೇ ಗೊಣಗುತ್ತ, ಅಲ್ಲಿಂದ ಕಾಲು ಕೀಳುತ್ತಿದ್ದೆ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಮೂರನೆಯ ಕಂತು

ಅದೊಂದು ಕಾಲವಿತ್ತು; ಮಲೆನಾಡ ಕೃಷಿಯೆಂದರೆ, ಅಷ್ಟು ಸಾಂಪ್ರದಾಯಕವಾಗಿತ್ತು. ಯಾವ ಯಂತ್ರವಿಲ್ಲ, ರಸಗೊಬ್ಬರವಿಲ್ಲ, ಹೈ ಬ್ರಿಡ್ ತಳಿಯ ಬೀಜ, ಗಿಡಗಳಿಲ್ಲ. ತುಂಬ ನೈಸರ್ಗಿಕವಾಗಿ ಕೃಷಿ ನಡೆಯುತ್ತಿತ್ತು. ಆಗೆಲ್ಲ ಭತ್ತದ ಕೃಷಿ ಮಲೆನಾಡಿನಲ್ಲಿ ಸರ್ವೇ ಸಾಮಾನ್ಯವಾಗಿತ್ತು. ಅದೇ ಮುಖ್ಯ ಬೆಳೆಯಾಗಿತ್ತು ಕೂಡಾ. ಅಂದು ಅಡಿಕೆ ತೋಟ ತೀರ ವಿರಳವಾಗಿತ್ತು. ಅದು ಶ್ರೀಮಂತರ ಸೊತ್ತಾಗಿತ್ತು. ಅಲ್ಲದೇ ಅಡಿಕೆಗೆ ಅಷ್ಟೊಂದು ಬೆಲೆಯಾದರೂ ಎಲ್ಲಿತ್ತು? ಮಳೆಗಾಲ ಶುರುವಾಯಿತೆಂದರೆ ಸಾಕು, ಎಲ್ಲರ ಮನೆಯಲ್ಲಿಯೂ ಕೃಷಿಯದ್ದೇ ಸುದ್ದಿ. ಒಂದೆಡೆ ಕೂಡಿಟ್ಟಿದ್ದ ಕೃಷಿ ಉಪಕರಣಗಳನ್ನು ಹೊರತೆಗೆದು ಪರಿಶೀಲಿಸಬೇಕು. ಗದ್ದೆ ಹೂಡುವ ನೇಗಿಲು, ಎತ್ತುಗಳ ಭುಜದ ಮೇಲೆ ಹೊರಿಸುವ ನೊಗ, ಕಟ್ಟುವ ಹಗ್ಗಗಳು, ಕೆಸರು ಗದ್ದೆಯನ್ನು ಸಮತಟ್ಟು ಮಾಡುವ ಕೊರಡು ಎಲ್ಲವೂ ಹೊರಬರುತ್ತಿದ್ದವು. ನೇಗಿಲ ಕುಳ ಗದ್ದೆಯ ಮಣ್ಣಿನ ಆಳಕ್ಕಿಳಿದು ಮಣ್ಣನ್ನು ಕೀಳುವಷ್ಟು ಚೂಪಾಗಿಸಲು, ಆಚಾರಿ ಸಾಲೆಯಲ್ಲಿ ಅದನ್ನು ಹಣೆಸಿಕೊಂಡು ಬರಬೇಕು. ಕೊಟ್ಟಿಗೆಯಲ್ಲಿ ಹೂಟೆಯ ಎತ್ತುಗಳಿದ್ದವರಿಗೆ ಚಿಂತೆಯಿಲ್ಲ. ಇಲ್ಲದವರು ಖರೀದಿಗಾಗಿ, ಅಲ್ಲಿ ಇಲ್ಲಿ ಚೌಕಾಸಿ ಶುರು. ಈ ಉತ್ತಮ ಎತ್ತನ್ನು ಆರಿಸುವುದೂ ಒಂದು ಪರಣಿತಿಯೇ. ಎತ್ತಿನ ಖರೀದಿ ಮಾಡುವವರು ಅದರ ದವಡೆಯ ಹಲ್ಲು ನೋಡಿಯೇ ಅದರ ಪ್ರಾಯ ಅರಿಯುತ್ತಿದ್ದುದು ನನಗೆ ಈಗಲೂ ವಿಸ್ಮಯ. ಎರಡು ಹಲ್ಲು, ಮೂರು ಹಲ್ಲು (ಅಂದರೆ ಹಾಲು ಹಲ್ಲು ಉದುರಿ, ಹುಟ್ಟುವ ಹೊಸ ಹಲ್ಲಿನ ಲೆಕ್ಕ) ಅಂದರೆ ಎಳೆಯವು. ‘ಬಾಯಿಗೂಡಿದೆ’ ಎಂದರೆ, ಅದು ಒಳ್ಳೆ ಪ್ರಾಯದ್ದು ಅಂತೇನೋ ಲೆಕ್ಕಹಾಕುತ್ತಿದ್ದರು. ಕೊಟ್ಟಿಗೆಯಲ್ಲಿ ಪ್ರಾಯದ ಹೋರಿಗಳಿದ್ದರೆ, ಅವುಗಳಿಗೆ ಮೂಗುದಾಣ ತೊಡಿಸಿ, ಅದನ್ನು ತಿದ್ದಿ, ಹೂಟೆಗೆ ತಯಾರು ಮಾಡುವ ಕೆಲಸ ಕೂಡಾ ನಡೆಯಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ, ಬೀಜದ ಭತ್ತಕ್ಕಾಗಿ ಅವರಿವರ ಜೊತೆ ಚೌಕಾಸಿ ಶುರುವಾಗುತ್ತಿತ್ತು. ಆಗೆಲ್ಲ ಈ ಬೀಜಗಳನ್ನು ಯಾವ ಅಂಗಡಿಗಳಿಂದಲೂ ತರುತ್ತಿರಲಿಲ್ಲ. ಸ್ವತಃ ಅನುಭವಸ್ಥ ಕೃಷಿಕರೇ ಅದನ್ನು ಸಿದ್ಧಪಡಿಸಿ ಕೊಳ್ಳುತ್ತಿದ್ದರು.

ನಮ್ಮ ತಂದೆಯವರು ಈ ಬೀಜದ ಭತ್ತವನ್ನು ಸಂಗ್ರಹಿಸುತ್ತಿದ್ದ ರೀತಿಯನ್ನು ನಾನಿಲ್ಲಿ ಹೇಳಲೇ ಬೇಕು. ಮೇಲ್ನೋಟಕ್ಕೆ ಚೆನ್ನಾಗಿ ಬೆಳೆದು ನಿಂತ ಒಂದು ಗದ್ದೆಯ ಪೈರನ್ನು ಬೀಜದ ಭತ್ತಕ್ಕಾಗಿಯೇ ಮೀಸಲಿಟ್ಟು, ಅದರ ಕಾಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಖಡಕ್ ಬಿಸಿಲಿನಲ್ಲಿ ಒಣಗಿಸುತ್ತಿದ್ದರು. ಆಮೇಲೆ ಅದನ್ನು ನೆಲದ ಮೇಲೆ ಹರಡಿ, ಜೊಳ್ಳು, ಪೊಳ್ಳು, ಹಾಳು ಕಾಳುಗಳನ್ನು ಒಂದೊಂದಾಗಿ ಆರಿಸಿ ತೆಗೆದುಬಿಡುತ್ತಿದ್ದರು. ಹಾಗೆ ಸಂಗ್ರಹಿಸಿದ ಬೀಜವನ್ನು ಒಲೆಯ ಬೂದಿಯ ಜೊತೆ ಕಲಸಿ, ಕೆಡದಂತೆ ಜೋಪಾನ ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ತರಕಾರಿ ಬೀಜಗಳನ್ನೂ ಅದೇ ರೀತಿ ಸಂಗ್ರಹಿಸಿ ಇಡಲಾಗುತ್ತಿತ್ತು. ಅಂಥ ಬೀಜದ ಭತ್ತಕ್ಕೆ ಬಹಳ ಬೇಡಿಕೆಯಿತ್ತು. ಮಳೆ ಶುರುವಾಗುವ ಮುನ್ನವೇ ಕೃಷಿಕರು ಎಲ್ಲೆಲ್ಲೋ ಓಡಾಡಿ, ತಮಗೆ ಬೇಕಾದ ಜಾತಿಯ ಭತ್ತದ ಬೀಜವನ್ನು ಕೇಳಿ ಪಡೆಯುತ್ತಿದ್ದರು. ಅದಕ್ಕೆ ದುಡ್ಡಿನ ಬದಲು, ಭತ್ತವನ್ನೋ, ಅಕ್ಕಿಯನ್ನೋ ಕೊಡುತ್ತಿದ್ದರು. ಅಥವಾ ಅವರಲ್ಲಿರುವ ಬೇರೆ ಜಾತಿಯ ಭತ್ತದ ಬೀಜವನ್ನೂ ಪಡೆಯುವುದಿತ್ತು. ಆಗೆಲ್ಲ ರೈತರು ಪರಸ್ಪರ ಭೇಟಿಯಾದಾಗ, ಅದೆಷ್ಟು ರಸವತ್ತಾಗಿ ತರಹೇ ವಾರಿ ಜಾತಿಯ ಭತ್ತದ ಕುರಿತು ಚರ್ಚೆ ನಡೆಯುತ್ತಿತ್ತು!! “ಆ ಜಾತಿಯ ಭತ್ತದ ತೆನೆಯಲ್ಲಿ ಒಳ್ಳೆ ಹಿಡುಪು (ಒತ್ತಾಗಿ ಸಾಕಷ್ಟು ಕಾಳುಗಳು) ಈ ಜಾತಿಯ ಕೆವಿ (ಭತ್ತದ ಸಸಿ) ವಿಪರೀತ ಎತ್ತರ ಬೆಳೆದು, ಕಾಳುಗಟ್ಟುವ ಹೊತ್ತಿಗೆ ಪೂರಾ ಬಿದ್ದು ಬಿಡ್ತದೆ ಮಾರಾಯಾ. ಮತ್ತೆ ನಾವು ಕಳೆದ ವರ್ಷ ಬೆಳೆದದ್ದು ಭತ್ತ ಅಡ್ಡಿಲ್ಲಾ. ಆದರೆ, ಹುಲ್ಲು ಕಡಿಮೆ” ಹೀಗೇ ಎಲ್ಲ ಜಾತಿಯ ಭತ್ತದ ಕುರಿತು ಮಾತಲ್ಲೇ ಸರ್ವೆ ನಡೆಯುತ್ತಿತ್ತು. ಹೊರಗಡೆ ಅಪ್ಪಯ್ಯನ ಜೊತೆಗೆ ಯಾರಾದರೂ ಈ ರೀತಿ ಚರ್ಚಿಸುತ್ತಿದ್ದರೆ, ನಾವೆಲ್ಲ ಒಳಗಿನಿಂದಲೇ ಎಲ್ಲ ಕೇಳಿಸಿಕೊಳ್ಳುತ್ತ ಕುಳಿತಿರುತ್ತಿದ್ದೆವು. ಅದು ಬಿಟ್ಟರೆ, ನಮಗೆ ಬೇರೆ ಮನರಂಜನೆಯಾದರೂ ಏನಿತ್ತು?

ಆಗೆಲ್ಲ ಚಾಲ್ತಿಯಲ್ಲಿದ್ದ ಕೆಲವು ಭತ್ತದ ತಳಿಗಳ ಹೆಸರು ನನಗಿನ್ನೂ ನೆನಪಿದೆ. ರತ್ನಚೂಡ, ರಾಜಕಮಲ, ಗುಡ್ಡೇ ನೆಲ್ಲು, ಆಲೂರ ಸಣ್ಣ, ರಾಜಮುಡಿ, ಬಂಗಾರ ಕಡ್ಡಿ, ಸಣ್ಣ ಭತ್ತ ಇತ್ಯಾದಿ… ಇತ್ಯಾದಿ.. ಈಗೆಲ್ಲ ಈ ತಳಿಗಳ ಅಸ್ತಿತ್ವ ಇದೆಯೋ ಇಲ್ಲವೋ ಗೊತ್ತಿಲ್ಲ. ನಮ್ಮನೆ ಮುಂದಿರುವ ಗದ್ದೆ ಒಣ ಭೂಮಿಯಾಗಿತ್ತು. ಮಳೆ ನೀರಿನದ್ದೇ ಅದಕ್ಕೆ ಆಸರೆ. ಅಲ್ಲಿ “ಗುಡ್ಡೆ ನೆಲ್ಲು” ಬೆಳೆಯುತ್ತಿದ್ದ ನೆನಪು. ಅದಕ್ಕೆ ಹೆಚ್ಚು ನೀರಿನ ಅಗತ್ಯವಿರಲಿಲ್ಲವಂತೆ. ಬರೇ ಮೂರು ತಿಂಗಳಿಗೇ (ಅಂದರೆ, ಮಳೆ ಮುಗಿಯುವ ಹೊತ್ತಿಗಾಗಲೇ ಕೊಯಿಲಿಗೆ ಬಂದು ಬಿಡುತ್ತಿತ್ತು. ಆದರೆ, ಮನೆಯ ಹಿಂದಿನದು ನೀರಾವರಿ. ಆ ಗದ್ದೆಯಲ್ಲಿ ರತ್ನಚೂಡ ಬೆಳೆಯುತ್ತಿದ್ದರು. ಅದು ಪೂರಾ ಕೆಂಪಕ್ಕಿ. ಅದರ ಅನ್ನವೂ ಕೆಂಪು, ಕೆಂಪು. (ಕುಂಕುಮದ ನೀರಲ್ಲಿ ಬೇಯಿಸಿದಂತೆ) ಬಹುಶಃ ಅದು ಇಳುವರಿ ಜಾಸ್ತಿ ಕೊಡುತ್ತದೆ ಅಂತ ಬೆಳೆಯುತ್ತಿದ್ದರು. ಈ ಭತ್ತದ ಆಯ್ಕೆಗೆ ಎರಡು ಮಾನದಂಡಗಳಿದ್ದವು. ಅದು ಜಾಸ್ತಿ ಇಳುವರಿ ಜೊತೆಗೆ ಹೆಚ್ಚು ಹಿಳ್ಳು ಮರಿ ಒಡೆದು (ಹೆಚ್ಚು ಗರಿಯೊಡೆದು) ಹೆಚ್ಚು ಹುಲ್ಲು ಕೂಡಾ ಬರುತ್ತಿರಬೇಕು. ವರ್ಷವಿಡೀ ಕೊಟ್ಟಿಗೆಯ ಜಾನುವಾರುಗಳಿಗೆ ಬೇಕಲ್ಲವೇ. ಆಗೆಲ್ಲ ಈ ಕೆಂಪು ಅಕ್ಕಿ ಅನ್ನ ಉಣ್ಣುವವರನ್ನು ಬಡವರು ಅಂತಲೇ ಪರಿಗಣಿಸಲಾಗುತ್ತಿತ್ತು. ಯಾರದ್ದಾದರೂ ಮನೆಯ ಸಿರಿವಂತಿಕೆಯನ್ನು ಆಡುಮಾತಲ್ಲಿ ಹೇಳುವಾಗ, “ಅವರ ಮನೆಯ ಅನ್ನ ಅಂದ್ರೆ ಹ್ಯಾಗಿರ್ತದೆ ಅಂದಿ.. ಒಳ್ಳೆ ಮಲ್ಲಿಗೆ ಹೂವು ಮಾರಾಯಾ” ಅಲ್ಲಿಗೆ ಗೊತ್ತಾಗಿ ಬಿಡಬೇಕು ಅವರೆಷ್ಟು ಸ್ಥಿತಿವಂತರೆಂದು.. ಆದರೆ… ಈಗ ಎಂಥ ವಿಪರ್ಯಾಸ ನೋಡಿ. ಪೇಟೆಯಲ್ಲಿ ನಡೆವ “ಕೆಂಪಕ್ಕಿ ಸಂತೆ” ಗೆ ಹೋಗಿ, ಕಿಲೋಗೆ ನೂರೋ, ಇನ್ನೂರೋ ಕೊಟ್ಟು ಹೆಮ್ಮೆಯಿಂದ ಹೊತ್ತು ತರುತ್ತಾರೆ ಅದೇ ಸಿರಿವಂತರು!!

ಮಳೆಗಾಲ ಹಿಡಿದು ತಿಂಗಳಿಗೆ ಮಣ್ಣು ಮೆತ್ತಗಾಯಿತೆಂದರೆ, ಗದ್ದೆ ಹೂಡಲು ಶುರು ಮಾಡಬೇಕು. ಅದಕ್ಕೂ ಮೊದಲು, ಬೇಸಿಗೆಯಲ್ಲಿ ಗದ್ದೆಯಲ್ಲಿ ಅಲ್ಲಲ್ಲಿ ಪುಟ್ಟ ಪುಟ್ಟ ರಾಶಿ ಹಾಕಿದ ಕೊಟ್ಟಿಗೆ ಗೊಬ್ಬರ ಹರಡುವ ಕೆಲಸ ನಡೆಯುತ್ತಿತ್ತು. ಈ ಕೆಲಸ ನಡೆವಾಗ, ಗದ್ದೆಯಲ್ಲಿ ಒಂದು ಗಮ್ಮತ್ತಿನ ದೃಶ್ಯ ಕಾಣಸಿಗುತ್ತಿತ್ತು. ಆಳುಗಳು ಗೊಬ್ಬರ ಹರಡುತ್ತಿದ್ದಂತೆಯೇ ಅದರೊಳಗೆ ಅಡಗಿದ್ದ ಬಿಳಿ ದಪ್ಪ ಗೊಬ್ಬರದ ಹುಳುಗಳು ಸರಕ್ಕನೆ ಬೆಳಕಿಗೆ ಬಿದ್ದು ಮಿಡುಕತೊಡಗುತ್ತಿದ್ದವು. ಅದರ ಬೇಟೆಗೆಂದೇ ಉದ್ದ ಕಾಲಿನ ಬೆಳ್ಳಕ್ಕಿ (ಕೊಕ್ಕರೆ) ಗಳು ಗದ್ದೆ ತುಂಬ ಹೊಂಚಿ ಕುಳಿತಿರುತ್ತಿದ್ದವು. ಆ ಹುಳುಗಳು ಕೈಕಾಲು ಬಡಿಯುತ್ತ ನೆಟ್ಟಗೆ ಕಾಲೂರಿ, ಇನ್ನೇನು ಹರಿದಾಡಬೇಕು ಎನ್ನುವುದರೊಳಗೆ ಬೆಳ್ಳಕ್ಕಿಗಳ ಉದ್ದ ಕೊಕ್ಕಿನೊಳಗೆ ಬಂಧಿಯಾಗಿ ಬಿಡುತ್ತಿದ್ದವು. ಅವು ಉದ್ದುದ್ದ ಕಾಲು ಹಾಕುತ್ತ, ಬಗ್ಗಿ, ಬಗ್ಗಿ ಗಬಕ್ಕನೆ ಹುಳು ಹಿಡಿದು ಸ್ವಾಹಾ ಮಾಡುವುದನ್ನು ನೋಡಲೆಂದೇ ನಾನು ಗದ್ದೆಗೆ ಓಡುತ್ತಿದ್ದೆ.

ನಂತರ ತಿಂಗಳ ಗಟ್ಟಲೆ ಗದ್ದೆ ಹೂಟೆ ನಡೆಯುತ್ತಿತ್ತು. ಸುರಿವ ಮಳೆಯಲ್ಲಿ ಕಂಬಳಿ ಕೊಪ್ಪೆ ಹಾಕಿಕೊಂಡು, ಗದ್ದೆ ಊಳುವ ದೃಶ್ಯ ಆ ವೇಳೆಯಲ್ಲಿ ಎಲ್ಲೆಡೆಯೂ ಕಂಡುಬರುತ್ತಿತ್ತು. ಎತ್ತುಗಳನ್ನು ಗದರಲೆಂದು ಹೂಟೆಯವ ಗಂಟಲಿನಿಂದ ಹೊರಡಿಸುವ ದನಿ, ಆ ಜೊರ ಜೊರ ಮಳೆಯ ದನಿಯ ಹಿಮ್ಮೇಳದ ಜೊತೆ ಬೆರೆತು ಒಂದು ಅದ್ಭುತ ರಾಗದಂತೆ ಮುದನೀಡುತ್ತಿತ್ತು. ಅದೆಷ್ಟೋ ಸಾರಿ ಎದುರಿನ ಗುಡ್ಡಕ್ಕೆ ಬಡಿದು ಪ್ರತಿಧ್ವನಿಸುತ್ತಿತ್ತು. ಅದು ನೆನಪಾದರೆ, ಈಗಲೂ ಮನ ಮುದಗೊಳ್ಳುತ್ತದೆ.

ಎಲ್ಲಕ್ಕಿಂತ ಮೊದಲು ಒಂದೆರಡು ಗದ್ದೆ ಹೂಡಿ ಹದಮಾಡಿಕೊಂಡು, ಬೀಜದ ಭತ್ತ ಹಾಕಿ, ಭತ್ತದ ಸಸಿ ಬೆಳೆಸಿಕೊಳ್ಳುತ್ತಿದ್ದರು. ಅವು ನಾಟಿಗೆ ಸಿದ್ಧವಾಗುವುದರೊಳಗೆ ಉಳಿದ ಗದ್ದೆಗಳನ್ನು ಎರಡೆರಡು ಬಾರಿ ಹೂಡಿ, ಕೊರಡು ಹೊಡೆದು ಸಿದ್ಧಪಡಿಸುತ್ತಿದ್ದರು. ಅಲ್ಲಿಂದ ಸಸಿ ಕೀಳುವ, ಗದ್ದೆ ನೆಡುವ ಕೆಲಸ ಶುರು. ಅದು ಮಾತ್ರ ಹೆಣ್ಣಾಳುಗಳ ಕೆಲಸ. ಮೊಣಕಾಲ ತನಕ ಸೀರೆ ಎತ್ತಿಕಟ್ಟಿ, ಬೆಚ್ಚನೆಯ ಕಂಬಳಿ ಕೊಪ್ಪೆ ಹೊದ್ದು, ಬಾಯ್ತುಂಬ ತಂಬಾಕಿನ ಕವಳ (ತಾಂಬೂಲ) ತುಂಬಿಕೊಂಡು ಹೆಂಗಸರೆಲ್ಲ ನೀರು ತುಂಬಿ ನಿಂತ ಅಗೆ ಗದ್ದೆಗಿಳಿದರೆಂದರೆ ಮುಗಿಯಿತು. ಯಂತ್ರಗಳಿಗಿಂತ ವೇಗವಾಗಿ ಎರಡೂ ಕೈಯ್ಯಲ್ಲೂ ಸಸಿ ಕಿತ್ತು ಸಿವುಡು ಕಟ್ಟಿ, ಕಟ್ಟಿ ಸಾಲುಗಟ್ಟುವ ಅವರ ಚಾಕಚಕ್ಯತೆಗೆ ಯಾರಾದರೂ ಬೆರಗಾಗಬೇಕು. ಆ ಸಸಿಗಳನ್ನು ಕೀಳುವಲ್ಲೂ ಒಂದು ಪದ್ಧತಿ ಇದೆ. ಸಸಿಯ ತೀರ ಬುಡಕ್ಕೆ ಕೈ ಹಾಕಿ ಎಳೆದರೆ ಮಾತ್ರ ಬೇರು ಸಮೇತ ಬಂದೀತು. ಇಲ್ಲವಾದರೆ ಅದರ ಬುಡ ಹರಿಯುವ ಸಾಧ್ಯತೆ ಹೆಚ್ಚು. ಅದನ್ನು ನೋಡಲೆಂದೆ ಗದ್ದೆಯ ಬದುವಲ್ಲೊಬ್ಬ ಶೇರೂಗಾರ (ಮೇಸ್ತ್ರಿ) ನಿಂತಿರುತ್ತಾನೆ. ಹೊಸಬರಿದ್ದರಂತೂ ಅವನ ಚೂಪುಗಣ್ಣು ಅವರ ಕೈಯತ್ತಲೇ ನಟ್ಟಿರುತ್ತದೆ. “ಬುಡಕ್ಕೆ ಕೈ ಹಾಕಿ. ಸಸಿ ಹರೀಬ್ಯಾಡಿ” ಎಂದು ಆಗಾಗ ಕೂಗಿ ಅಂಥವರನ್ನು ಎಚ್ಚರಿಸುತ್ತಾನೆ. ಹಾಗೇ ಸಸಿ ನಡುವುದರಲ್ಲೂ ಒಂದು ಪದ್ಧತಿ ಇದೆ. ಎರಡು, ಮೂರು ಭತ್ತದ ಸಸಿ ಒಟ್ಟು ಹಿಡಿದು ಅದರ ಬೇರಿನ ಭಾಗವನ್ನು ಆ ಕೆಸರಲ್ಲಿ ಮೆಲ್ಲಗೆ ಹೂಳಬೇಕು. ಹಾಗಂತ, ಶಕ್ತಿ ಹಾಕಿ ತೀರ ಕೆಳಗೆ ಒತ್ತಿದರೆ, ಅದು ಕೊಳೆಯುತ್ತದೆ, ಮೇಲೆ ಮೇಲೆ ನೆಟ್ಟರೆ, ನೆಲಕ್ಕೆ ಕಾಲೂರದೇ ನೀರಲ್ಲಿ ತೇಲಿ ಮೇಲೆ ಬರುತ್ತದೆ.

ಈ ಗದ್ದೆ ಕೆಲಸ ನಡೆಯುವಾಗ ನಾನಂತೂ ಮಧ್ಯಾಹ್ನ ಶಾಲೆ ಬಿಟ್ಟೊಡನೆ ಗದ್ದೆಗೆ ಓಡುತ್ತಿದ್ದೆ. ಅವೆಲ್ಲವನ್ನೂ ಕಣ್ಣು ತುಂಬಿಕೊಳ್ಳುತ್ತ, ಅವರ ಮಾತು, ಗಲಗಲ ನಗೆಗೆ ನಾನೂ ಹಲ್ಲು ಕಿಸಿಯುತ್ತ ಮೈ ಮರೆತು ನಿಂತು ಬಿಡುತ್ತಿದ್ದೆ. ತಿರುಗಾ ಆಯಿ ಜೋರಾಗಿ ಕರೆದು, “ಯೇ ಬಾರೇ. ಊಟ ಮಾಡಿ ಶಾಲೆಗೆ ಹೊರಡು” ಎಂದು ಗದರಿದಾಗ, “ಥೋ… ಇದೊಂದು ಮಳ್ಳು ಶಾಲೆ” ಎಂದು ನನ್ನೊಳಗೇ ಗೊಣಗುತ್ತ, ಅಲ್ಲಿಂದ ಕಾಲು ಕೀಳುತ್ತಿದ್ದೆ. ರವಿವಾರ ಬಂದರಂತೂ ಮುಗಿಯಿತು. ನಾವೆಲ್ಲ ಗದ್ದೆಗಿಳಿದು ಆಟ ಆಡುತ್ತಿದ್ದೆವು. ಆ ಕೆಸರು ಗದ್ದೆಯಲ್ಲಿಳಿದು, ಹೂತು ಹೋದ ಕಾಲನ್ನು ಎತ್ತಿಹಾಕುವದೇ ಒಂದು ಆಟವಾಗಿತ್ತು ನಮಗೆ. ಆಗಾಗ ಗದ್ದೆ ನೆಟ್ಟಿಯಲ್ಲೂ ಆಯಿಯ ಜೊತೆಗೂಡಿ, ಸಸಿ ನೆಡುವ ಸಾಹಸ ಮಾಡುತ್ತಿದ್ದೆವು. ಆಗೆಲ್ಲ ನಾವು ಸಸಿ ನೆಟ್ಟ ಜಾಗ ನೆನಪಿಟ್ಟುಕೊಂಡು, ಅದು ಕ್ರಮೇಣ ಬೆಳೆದು ದೊಡ್ಡದಾಗಿ, ತೆನೆಹೊತ್ತು ಬಾಗುವುದ ನೋಡುತ್ತ, ನಾವೂ ಹೆಮ್ಮೆಯಿಂದ ”ಅದು ನಾನು ನೆಟ್ಟಿದ್ದು” ಅಂತ ಬೀಗುತ್ತಿದ್ದೆವು.

ಈ ಗದ್ದೆ ಕದಿರು ಬಿಡಲು ಆರಂಭಿಸಿದರೆ ಸಾಕು, ಹಗಲು ಹಕ್ಕಿಗಳ ಕಾಟ, ರಾತ್ರಿ ಕಾಡು ಹಂದಿಗಳ ಕಾಟ. ಈ ಹಂದಿಗಳಿಂದ ಬೆಳೆ ರಕ್ಷಿಸಿಕೊಳ್ಳುವುದೇ ಒಂದು ಸಾವಾಲಾಗಿತ್ತು. ಅದರ ಸಲುವಾಗಿ ಗದ್ದೆಯಲ್ಲಿ ನಾಲ್ಕು ಎತ್ತರದ ಕಂಭ ಹೂತು ಅಟ್ಟ ಕಟ್ಟಿ ಅದರ ಮೇಲೊಂದು ಸೋಗೆಯ ಮೇಲ್ಛಾವಣಿ ಹೊದಿಸಿ, ರಾತ್ರಿ ಅಟ್ಟದಲ್ಲಿ ಕೂತೋ, ಮಲಗಿಯೋ ಕಾವಲು ಕಾಯುತ್ತಿದ್ದರು. ಸಪ್ಪಳವಾದೊಡನೆ, ಹುಯಿಲು ಹಾಕುವುದು (ಬೆದರಿಸುವ ದನಿ) ಪಟಾಕಿ ಹೊಡೆದೋ, ಡಬ್ಬಿ ಬಾರಿಸಿಯೋ ಅವುಗಳು ಗದ್ದೆಗೆ ಬಾರದಂತೆ ಕಾಯುತ್ತಿದ್ದರು. ಆದರೂ ಒಂದಿಷ್ಟು ಭತ್ತ ಅವುಗಳ ಪಾಲಾಗುತ್ತಿದ್ದುದು ತಪ್ಪುತ್ತಿರಲಿಲ್ಲವೆನ್ನಿ.

ಶ್ರಾವಣಕ್ಕೆ ನೆಟ್ಟ ಭತ್ತ ಕಾರ್ತೀಕ ಮಾಸದ ಕೊನೆಯೊಳಗೆ ಕೊಯಿಲಿಗೆ ಬರುತ್ತಿತ್ತು. ಅವುಗಳನ್ನು ಕೊಯ್ದು, ಹೊರೆಕಟ್ಟಿ, ಹಸನು ಮಾಡಿದ ಕಣಕ್ಕೆ ತಂದು, ಬಡಿದು, ಭತ್ತ ಹುಲ್ಲು ಬೇರೆಯಾಗಿಸಿ, ಹುಲ್ಲಿನ ಬಣವೆ ಹಾಕಿ, ಭತ್ತವನ್ನು ಚೀಲದಲ್ಲಿ ತುಂಬಿ ಮನೆಯೊಳಗೆ ಸಾಗಿಸಿದರೆ, ಅಲ್ಲಿಗೆ ಒಂದು ವರ್ಷದ ಕೆಲಸ ಮುಗಿದಂತೆ.

ಈ ಗದ್ದೆ ನೆಟ್ಟಿಯ ಕಾಲದಲ್ಲಿ ಮನೆ ಮಂದಿಗೆಲ್ಲ ಪುರುಸೊತ್ತಿಲ್ಲದಷ್ಟು ಕೆಲಸ. ಗಂಡಸರು, ಗದ್ದೆಯಲ್ಲಿ ಕೆಲಸಮಾಡಿದರೆ, ಮನೆಯ ಹೆಂಗಸರಿಗೆ, ಆ ಆಳುಗಳಿಗೆ ಚಹಾ, ತಿಂಡಿ (ದೋಸೆ) ಮಾಡುವುದೇ ದೊಡ್ಡ ಕೆಲಸ. ಅದರ ಜೊತೆಗೆ, ಅವರಿಗೆ ಕವಳ (ತಾಂಬೂಲ) ಕೊಡುವುದೂ ದೊಡ್ಡ ಕೆಲಸವೇ. ಅದು ಸಾಮಾನ್ಯವಾಗಿ ನಮ್ಮಂಥ ಮಕ್ಕಳ ಕೆಲಸವಾಗಿತ್ತು. ಬರೀ ಎಲೆ ಅಡಕೆ ಸುಣ್ಣ ಕೊಟ್ಟರಾಗದು. ಅದರ ಜೊತೆ ಉದ್ದುದ್ದ ತಂಬಾಕೂ ಕೊಡಬೇಕು. ನಮ್ಮಲ್ಲೆಲ್ಲ ನಿಪ್ಪಾಣಿಯ ಎಸಳು ತಂಬಾಕು ಉಪಯೋಗಿಸುವ ಅಭ್ಯಾಸ. ತಂಬಾಕಿನ ಉದ್ದುದ್ದ ಒಣ ಎಲೆಗಳನ್ನು ನೀರಲ್ಲಿ ಒಮ್ಮೆ ಅದ್ದಿ ತೆಗೆದು, ಅದರ ದಂಟು ಕಿತ್ತೆಸೆದು ಹದಮಾಡಿ, ಹಂಡೆಯಲ್ಲಿ ತುಂಬಿಡುತ್ತಿದ್ದರು. ಅದನ್ನು ಎಳೆದು ಚೂರುಮಾಡಿ, ಸುಣ್ಣದ ಜೊತೆ ಅಂಗೈನಲ್ಲಿಟ್ಟು ತಿಕ್ಕಿ ಹದಮಾಡಿ, ಎಲೆ ಅಡಿಕೆಯ ಜೊತೆ ತಿನ್ನುತ್ತಿದ್ದರು. ನಮ್ಮಲ್ಲಿ ಮಂಜಿ ಅಂತ ಮುದುಕಿಯೊಬ್ಬಳು ಗದ್ದೆ ನೆಟ್ಟಿಗೆ ಬರುತ್ತಿದ್ದಳು. ಅವಳಿಗಂತೂ ಎಷ್ಟು ತಂಬಾಕು ಕೊಟ್ಟರೂ ಸಾಲದು. ತೀರ ಹಣ್ಣು ಮುದುಕಿಯಂತೆ ಕಂಡರೂ ಬಲು ಗಟ್ಟಿ ಇದ್ದಳು. ಅವಳು ಇಷ್ಟುದ್ದ ಘಾಟು ತಂಬಾಕನ್ನು ಎಲೆಯ ಜೊತೆ ಲೀಲಾಜಾಲವಾಗಿ ಜಗೆಯುವುದನ್ನು ನೋಡುವುದೇ ಒಂದು ಮಜಾ “ಮಂಜೀ ಆ ತಂಬಾಕು ಯಂತಕ್ಕೆ ತಿಂತೆ? ” ಅಂತ ನಾನೊಮ್ಮೆ ಕೇಳಿದ್ದೆ. ಅದಕ್ಕವಳು. ಮೈಯನ್ನು ಕಂಬಳಿ ಕೊಪ್ಪೆ ಬೆಚ್ಚಗೆ ಇಡ್ತದೆ ಮೈ ವಳಗೆ ತಂಬಾಕು ಬೆಚ್ಚಗೆ ಮಾಡ್ತದೆ” ಅಂತ ಉತ್ತರ ಕೊಟ್ಟಿದ್ದಳು.

ಮಳೆಗಾಲದಲ್ಲಿ ಗದ್ದೆಯಲ್ಲಿ ಭತ್ತದ ಕೃಷಿ ನಡೆದರೆ, ಮನೆಯಂಗಳದಲ್ಲಿ ಹೂವಿನ ಗಿಡಗಳ ಕೃಷಿ ಜೋರಾಗಿ ನಡೆಯುತ್ತಿತ್ತು. ಹೆಂಗಸರು ಅವರಿವರ ಮನೆಗೆ ಹೋಗಿ, ತಮ್ಮಲ್ಲಿಲ್ಲದ ಹೊಸಥರದ ಹೂಗಿಡ ತಂದು ನೆಟ್ಟು ಪೋಷಿಸುತ್ತಿದ್ದರು. ಇಲ್ಲೂ ಪರಸ್ಪರ ಗಿಡಗಳ ವಿನಿಮಯವೇ ನಡೆಯುತ್ತಿತ್ತು. ಹಾಗಾಗಿ, ಪ್ರತಿಯೊಬ್ಬರ ಅಂಗಳದಲ್ಲೂ ಥರ ಥರದ ಡೇರೆ, ಜಿನಿಯಾ, ಗುಲಾಬಿ, ದಾಸವಾಳವೆಲ್ಲ ಹೂಬಿಟ್ಟು, ನಂದನ ವನದಂತೆ ರಾರಾಜಿಸುತ್ತಿತ್ತು.

ಮುಂದುವರಿಯುತ್ತದೆ…
(ಹಿಂದಿನ ಕಂತು: ನನ್ನ ಪುಟ್ಟ ಶಾಲೆ)

About The Author

ರೂಪಾ ರವೀಂದ್ರ ಜೋಶಿ

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು  (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.

2 Comments

  1. Bhagyashree Bhagyashree

    ಸುಂದರವಾದ ಬರಹ!
    ಮಲೆನಾಡಿನ ಜೀವನ ಅದ್ಭುತವಾಗಿ ಚಿತ್ರಿಸಲಾಗಿದೆ.

    Reply
  2. ಎಸ್. ಪಿ. ಗದಗ

    ಮಲೆನಾಡಿನ ಹಸಿರು ಭತ್ತದ ಗದ್ದೆಗಳನ್ನು ನೋಡುವದೇ ನಮಗೆ ಒಂದು ಹಬ್ಬ. ಓದಿನ ಖುಷಿ ಜೊತೆಗೆ ಈ ಪೈರಿನ ನಾಟಿಯ ವಿವರ ಸಂಪೂರ್ಣ ತಿಳಿದು ಬಂತು.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ