Advertisement
ನಾಲಗೆ ಹೊರಳದ ನಾಡಿನಲ್ಲಿ ಮೂರು ದಿನ…: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ನಾಲಗೆ ಹೊರಳದ ನಾಡಿನಲ್ಲಿ ಮೂರು ದಿನ…: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಸುಣ್ಣದ ಕಲ್ಲಿನ ವಿಚಿತ್ರ ವಿನ್ಯಾಸ. ಜೇನು ತಟ್ಟಿಯಂತಹ ವಿಭಿನ್ನ ಸಂಯೋಜನೆ. ಬೆಳಕಿಗೆ ಹೊಳೆವ ಕಲ್ಲಿನ ಚೂರುಗಳು. ದನದ ಕೆಚ್ಚಲಿನಾಕೃತಿಯ ವಿನ್ಯಾಸವೂ ಉಂಟು. ಹಲಸಿನ ಕಾಯಿಯಂತಹ ನೇತಾಡುವ ಮಣ್ಣ ಹೆಂಟೆಗಳು. ವಿಭಿನ್ನ ವಿನ್ಯಾಸ, ಆಕಾರ. ಹಾವು, ಶಂಕ, ಗದೆ, ರಾಕ್ಷಸ ಆಲದ ಬಿಳಲುಗಳಂತಹ ರಚನೆ. ಹತ್ತು ಹೆಡೆ ಸರ್ಪ, ಮುದುಕ, ಗಂಟಲಿನ ರಚನೆ, ಹೊಸ ಹೊಸ ವಿನ್ಯಾಸದ ಬಲ್ಬುಗಳಂತಹ ರಚನೆಗಳು, ಒಂದೇ ಎರಡೇ.
ಶ್ರೀಧರ್ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಹೊಸ ಊರಿನ ಪರಿಚಯ

ಈಶಾನ್ಯ ಭಾರತದ ಶಿಲ್ಲಾಂಗನ ಸುತ್ತಲಿನ ಪ್ರವಾಸಿ ತಾಣಗಳನ್ನು ಕಣ್ಣುತುಂಬಿಕೊಳ್ಳುವ ಕನಸಿನೊಂದಿಗೆ ಹೊರಟು ನಿಂತಿದ್ದೆ. ಅದೆಷ್ಟೇ ಪ್ರಯತ್ನ ಪಟ್ಟರೂ ಇಲ್ಲಿನ ಊರುಗಳ ಹೆಸರುಗಳನ್ನು ಹೇಳಲಾಗದೇ ಸೋಲೊಪ್ಪಿಕೊಂಡಿದ್ದೆ. ನಾಲಗೆ ಹೊರಳದ ನಾಡು!

ಮುನ್ನುಡಿ

32% ಉಷ್ಣದ ಊರಿಂದ 6-7% ತಂಪಿನ ಊರಿಗೆ ಬಂದಾಗ ದೇಹ ಮುದುರಿತ್ತು. ಗೌಹಾಟಿಯ ಗೌಜಿನಲ್ಲೂ ಸ್ಥಳೀಯ ಸೀರೆ ತೊಟ್ಟ ಸೊಗಸುಗಾತಿಯರು ವ್ಯವಹಾರಕ್ಕಿಳಿದಿದ್ದರು. ಇವರನ್ನೆಲ್ಲ ನೋಡುತ್ತಾ ಶಿಲ್ಲಾಂಗ್‌ಗೆ ಬಂದಾಗ ರಾತ್ರಿ 7 ಗಂಟೆ. ಇಲ್ಲಿಂದ ರಾಜ್ಯ ರಸ್ತೆ ಸಾರಿಗೆ ಹಾಗೂ ಟ್ಯಾಕ್ಸಿ ವ್ಯವಸ್ಥೆ ಶಿಲ್ಲಾಂಗಿಗಿದೆ.

ಸಂಜೆ ಚಹಾ ಹೀರಲು ನಿಲ್ಲಿಸಿದ ಅಂಗಡಿಯಲಿ ಸಾಲು ಸಾಲು ಮೀನು, ಏಡಿ, ಸಿಗಡಿಗಳ ಉಪ್ಪಿನಕಾಯಿ ನೋಡಿದ್ದೇ ಗೆಳೆಯ ನಾಗರಾಜ ಉಸುರಿದ “ಬಿಟ್ಟರೆ ಮನುಷ್ಯರನ್ನು ಹುರಿದು ಉಪ್ಪಿನಕಾಯಿ ಮಾಡ್ತಾರೆ ಇವರು”. ಗೆಳೆಯರ ನಡುವೆ ನಗುವಿನಲೆ ಉಕ್ಕಿತು. ಸಿಕ್ಕಿದ್ದನ್ನೆಲ್ಲಾ ಉಪ್ಪಿನಕಾಯಿ ಮಾಡಿದ್ದರು! ನಮ್ಮೂರಿನ ಉಪ್ಪಿನಕಾಯಿ ನೆನಪಾಯಿತು. ಕ್ಷಣ ಮಾತ್ರ ಅಯ್ಯೋ ಶಿವನೇ ಎಂತಹ ಲೋಕಕ್ಕೆ ಕಾಲಿಟ್ಟೆವಲ್ಲವೆಂಬ ಆತಂಕವೂ ಕಾಡಿತು. ಊಟಕ್ಕೆ ಕುಳಿತಾಗ ತಟ್ಟೆಗೆ ಬಂದು ಬಿದ್ದ ದೊಡ್ಡ ದೊಡ್ಡ ಮುಸುಂಬಿ ಹೋಳುಗಳನ್ನು ಕಂಡು ಊಟದ ಜೊತೆಗೇಕೆ ಮುಸುಂಬಿ ಎಂದು ಚಕಿತಗೊಂಡಿದ್ದೆ. ಮೂಸಿ ನೋಡಿದರೆ ಲಿಂಬೆಯ ಪರಿಮಳ! ಪರಿಚಾರಕನಲ್ಲಿ ವಿಚಾರಿಸಿದರೆ ‘ಅದು ಮುಸುಂಬಿಯಲ್ಲಾ ಲಿಂಬೆʼ ಎನಬೇಕೆ? ಮೂಕವಿಸ್ಮಿತನಾಗಿದ್ದೆ. ದಾಲ್‌ ಅನ್ನದೊಂದಿಗೆ ಈ ಲಿಂಬೆಯ ರಸ ಬೆರಸಿ ಉಂಡರೆ ಬಲ್ಲವನೇ ಬಲ್ಲ ಇದರ ರುಚಿ!

ನಾಲಗೆ ಹೊರಳದ ನಾಡಿನ ಕತೆಗಳಿಗೆ ಕಿವಿಯಾಗೋಣ ಬನ್ನಿ. ಮೇಘಾಲಯದ ಗೆಸ್ಟ್ ಹೌಸ್‌ನಲ್ಲಿ ಬಂದಿಳಿದಾಗ ತಂದಿರಿಸಿದ ರಾಶಿ ಚೀನಿ ಕುಂಬಳ ಕಾಯಿಗಳ ಸ್ವಾಗತ! ನನ್ನ ಪರಮ ವೈರಿ ಚೀನಿ ಗುಂಬಳಕಾಯಿ ನೆನೆದು ನಮ್ಮನ್ನು ಓಡಿಸಲೇ ಇದನ್ನು ಇಷ್ಟು ರಾಶಿ ಹಾಕಿ ಕೊಂಡಿದ್ದಾರೆ ಎಂದುಕೊಂಡೆ. ನಾಗರಜನ ಗೆಳತಿಯ ಮನೆಯಲ್ಲಿ ನಮಗೆ ಆ ದಿನ ರಾತ್ರಿಯ ವಿಶೇಷ ಭೋಜನ ವ್ಯವಸ್ಥೆ ಮಾಡಿದ್ದರಿಂದ ಒಪ್ಪತ್ತಿನ ಮಟ್ಟಿಗಾದರೂ ಚೀನಿ ಕುಂಬಳದಿಂದ ಬಿಡುಗಡೆ ದೊರಕಿತ್ತು!! ಬದುಕಿದೆಯಾ ಬಡ ಜೀವವೇ! ಅಲ್ಲಿಂದ ಹೊರಟ ನಮ್ಮ ಸವಾರಿ ಸೇರಿದ್ದು ಗೆಳತಿ ಜೋಯ್ಸ್‌ ಮನೆಗೆ.

ವಿಶೇಷ ‘ಖಾಸಿ’ ಅಡುಗೆ

ಗೆಳತಿ ಜೋಯ್ಸ್ ಅವರ ಮನೆಯಲ್ಲಿ ಒಣಗಿದ ಬೆಳ್ಳುಳ್ಳಿ ಮಿಶ್ರಿತ ಹಸಿ ಮೂಲಂಗಿಯ ಪಲ್ಯ, ಹುದುಗು ಬರಿಸಿದ ಬೀನ್ಸ್‌ನ ವಿಚಿತ್ರ ಚಟ್ನಿ, ಬೇಯಿಸಿದ ಸಾಸಿವೆ ಎಲೆ, ಜೀವಮಾನದಲಿ ಒಮ್ಮೆಯೂ ಸವಿಯದ ಅಮೃತ ರುಚಿಯ ಐಸ್‌ಕ್ರೀಮ್ ಮೊಸರು, ಭಿನ್ನರುಚಿಯ ಅನ್ನ ಹೀಗೆ ವಿವಿಧ ಖಾಸಿ ಜನರ ಅಡುಗೆಯ ಖಾಸಗಿಯೂಟ. ಮರೆಯಲಾಗದ ಸವಿಯೂಟ. ಅವರೇ ಬೆಳೆದ ಅಕ್ಕಿಯಿಂದ ವಿಶಿಷ್ಟ ರುಚಿಯ ಅನ್ನ ಬಡಿಸಿದ್ದರು. ತಟ್ಟೆಗೆ ಬೀಳುತ್ತಲೇ ಘಮ್‌ ಎನ್ನುವ ಪರಿಮಳ. ಎಲ್ಲವೂ ಹೊಸತು. ಅವರಮ್ಮನ ಆತಿಥ್ಯಕ್ಕೆ ಸೋತು ಹೋದೆವು. ಭಿನ್ನ ರುಚಿಯ ಊಟವೊಂದು ನನ್ನ ದಿನಚರಿಯಲ್ಲಿ ದಾಖಲಾಯಿತು. ನಾಳೆಯ ಚರ‍್ರಿ ಬ್ಲಾಸಂ ಹಬ್ಬಕ್ಕೆ ಎಲ್ಲಾ ಗೆಳೆಯರು ಹೊರಟು ನಿಂತಿದ್ದರು. ಹಗಲಿಡೀ ಸೂಟಿ! ಹಾಗಾಗಿ ನಾನೊಬ್ಬನೇ ಊರು ತಿರುಗಲು ಹೊರಟೆ.

ನಾವಲ್ಲಿಗೆ ಕಾಲಿಟ್ಟಾಗ ಚಳಿಗಾಲ ಕಾಲಿಟ್ಟಿತ್ತು. ಅಸಾಧ್ಯ ಚಳಿ. ಮೈ ಮನಸು ಮುದುರಿತ್ತು. ಪುನಃ ಗೆಸ್ಟ್‌ ಹೌಸ್‌ಗೆ ಬಂದು ಮಲಗಿದೆವು. ಮುಂದಿನ ಮುಂಜಾನೆಯ ವಿಹಾರದ ಕನಸು ಹೊತ್ತು ಮಲಗಿದೆ.

ಸೋಹ್ರಾದಿಂದ ಮೌಸ್ವಾಮಿನತ್ತ

ಹೇಗೆ ಈ ಗುಹೆಯ ಹೆಸರನ್ನು ಉಚ್ಚರಿಸಬೇಕೆಂದು ಇನ್ನೂ ಗೊಂದಲದಲ್ಲಿರುವೆ. ಮುಂಜಾನೆ ಮುಸುಕಿದ ಮೋಡಗಳ ಮುತ್ತಿಡುತ್ತಾ ಹೆದ್ದಾರಿಯಲಿ ಸಾಗಿತ್ತು ನಮ್ಮ ಕಾರು. ನಡುವೆಲ್ಲೂ ನಿಲ್ಲಿಸಿ ಪರೋಟ, ವಡೆ ತಿಂದು, ಚಹಾ ಹೀರಿ ಹೊರಟರೂ ಹೋಗದ ಮಂಜು. ಹಾಗಾಗಿ ಹೆಸರು ಮೇಘಾಲಯ. 10-12 ಡಿಗ್ರಿ ಉಷ್ಣಾಂಶ. ಗೆಳೆಯನಂತಹ ಚಾಲಕ. ಚೆರಿ ಹೂವರಳಿ ನಿಂತ ಹಾದಿಯಲಿ ಹೂ ನುಜ್ಜು ಗುಜ್ಜಾಗದಿರಲೆಂದು ‘ಹಗುರ ಹೋಗು ಮರಾಯ.’ ಎಂದೆ. ಹುಳುಕಾದ ಹಲ್ಲು ತೋರಿಸುತ್ತ ದೇಶಾವರಿ ನಗೆ ನಕ್ಕ. ಬಹುಶಃ ಆತನಿಗೆ ನನ್ನ ಭಾಷೆ ತಿಳಿಲಿಲ್ಲವೋ ಏನೋ. ಹಾಗೆ ನೊ ಕಲಿಕೈ ಜಲಧಾರೆ ತೋರಿಸಿಕೊಂಡು, ಅದರ ಕುರಿತು ಲೈವ್ ಕಾಮೆಂಟರಿ ಕೊಡುತ್ತಾ ಸುಣ್ಣದ ಕಲ್ಲಿನ ಗುಹೆಗಳತ್ತ ಕಾರು ಹೊರಳಿಸಿದ. ಬಟಾ ಬಯಲಿನ ನಡುವೆ ಹೆಬ್ಬಾವಿನಂತೆ ಮಲಗಿದ ದಾರಿ. ಬೆಟ್ಟದ ನಡು ತಿರುವಿನಲ್ಲಿ ಕಂಡ ಒಂದು ಹೋಟೆಲ್‌ ಬಿಟ್ಟರೆ ದಾರಿ ಎಲ್ಲೆಲ್ಲೂ ನರ‍್ಮಾನುಶ! ಬುಟ್ಟಿ ಹೊತ್ತು ಹೊರಟ ಒಂದಿಬ್ಬರು ಬಿಟ್ಟರೆ ಬೆಟ್ಟವೆಲ್ಲಾ ಹುಲ್ಲ ಬಯಲು. ಈಗಲ್ಲಿ ನೂರಾರು ಹೋಂ ಸ್ಟೇಗಳ ಆರ್ಭಟ. ನೀರ ಅನುರಣನದ ದಾರಿಯಲ್ಲಿ ಹೋಂ ಸ್ಟೇಗಳ ಗೌಜಿ. ಅಂದು ಅನನ್ಯ ಅನುಭವ ನೀಡಿದ್ದ ಜಲಪಾತದ ಸನಿಹ ಮಾನವ ಇರುವಿನ ಕುರುಹು ಇರಿಸು ಮುರಿಸು ಉಂಟು ಮಾಡಿತ್ತು.

ಜನಜೀವನ

ಪ್ರವಾಸೋಧ್ಯಮ, ಸುಣ್ಣದ ಕಲ್ಲು ಮತ್ತು ಮಸಾಲೆ ಪದಾರ್ಥಗಳೇ ಇವರ ಜೀವನ ಆಧಾರ. ಸುಣ್ಣದಕಲ್ಲಿನ ನೂರಾರು ಗುಹೆಗಳು ನಿಮಗೆ ಶಿಲ್ಲಾಂಗಿನಿಂದ ಚಿರಾಪುಂಜಿಯೆಡೆಗೆ ಹೊರಟಾಗ ಕಾಣಸಿಗುತ್ತದೆ. ಇನ್ನು ಕಣಿವೆಯಲ್ಲಿ ವಾಸಿಸುವವರು ಸ್ವಲ್ವ ಕಿತ್ತಳೆ, ಶುಂಠಿ ಮತ್ತು ಕಾಳುಮೆಣಸು ಬೆಳೆದುಕೊಳ್ಳುತ್ತಾರೆ. ಕಾಡುತ್ಪತ್ತಿ ಸಂಗ್ರಹಿಸುತ್ತಾರೆ. ಇಲ್ಲಿನ ಕಿತ್ತಳೆ ಬಲು ಹುಳಿ. ಇವರ ಇನ್ನೊಂದು ಆದಾಯದ ಮೂಲ ಭತ್ತ ಮತ್ತು ಬಿದಿರು. ಇವರ ಬಿದಿರಿನ ನಾಜೂಕು ನಮಗೆ ಅಸಾಧ್ಯ, ಅಂಟು ಬಳಸದೆಯೇ ಭತ್ತದ ಬುಟ್ಟಿಗಳ ಹೆಣೆಯುವ ನೈಪುಣ್ಯದಲ್ಲಿ ಅಸಾಧ್ಯ ಕಲೆಗಾರಿಕೆ. ವಿಮಾನ ಮುಂತಾದ ಕಡೆ ಎಳೆದಾಡಿದರೂ ಚೂರೂ ಕೊಸರದೇ ಉಳಿದಿತ್ತು. ನಾಕೊಂಡ ಬೆತ್ತದ ಪುಟಾಣಿ ಬುಟ್ಟಿ. ಎಲ್ಲಾ ಕೆಲಸಗಳಲ್ಲೂ ಸಿದ್ಧ ಹಸ್ತರೂ ಕೂಡ. ನಮ್ಮ ಸ್ನೇಹಿತನ ಹರಿದ ಚಪ್ಪಲಿಯೊಂದನ್ನು ಕ್ಷಣಾರ್ಧದಲ್ಲೆ ಹೊಲಿದುಕೊಟ್ಟನೊಬ್ಬ. ಹೆಂಗಸರೇ ಹೆಚ್ಚು ದುಡಿಯುವವರು. ಮಂಜಿನಿಂದಾಗಿ ಅಲ್ಲಲ್ಲಿ ಚಳಿ ಕಾಯಿಸುವ ಜನ. ಸುಣ್ಣದ ಕಲ್ಲನ್ನು ಆರಿಸಿ ಆರಿಸಿ ಬೃಹತ್ ಗುಹೆಗಳು ನುಂಗುವಂತೆ ದಾರಿಯುದ್ದಕ್ಕೂ ಬಾಯ್ದೆರೆದಿದ್ದವು. ಎಲ್ಲವೂ ಸೊಹ್ರಾದ ಸಿಮೆಂಟ್ ಕಾರ್ಖಾನೆಗೆ ಹೋಗುತಲಿತ್ತು.

ಗುಹೆ ಎದುರಿಗೆ

ಸೊಹ್ರಾದಿಂದ ಹೊರಟು ಊಟ ಮಾಡಿ ನಡು ಮಧ್ಯಾಹ್ನಕ್ಕೆ ಪಾರ್ಕಿಂಗ್‌ ಜಾಗದಲ್ಲಿದ್ದೆವು. ಗುಹೆ ತಲುಪುವ ದಾರಿಯಂತೂ ಅಮೋಘ. ನೂರಾರು ಫರ್ನ್‌ಗಳು, ಆರ್ಕಿಡ್‌ಗಳು ಬಂಡೆಗಳ ಮೇಲೆ ಅರಳಿ ನಿಂತಿದ್ದವು. ಸಿಕ್ಕ ಚಿಕ್ಕ ಬಿರುಕಿನಲ್ಲೇ ಬೇರು ಬಿಟ್ಟು ಬೆಳೆವ ಇವುಗಳ ಅದಮ್ಯ ಚೇತನಕೆ ಬೆರಗಾದೆ! ದೂರದೂರದಿಂದ ಹಕ್ಕಿ ಉಲಿ ಗುಹೆ ದಾರಿಯಲ್ಲೇ ಉಳಿವಂತೆ ಮಾಡುತ್ತಿತ್ತು. ಹತ್ತಾರು ಜೇಡಗಳು ಮರಗಳ ಮೇಲೆ, ಬಂಡೆಗಳ ಮೇಲೆ ಸಂಸಾರ ಹೂಡಿದ್ದವು! ಇಂತಿಪ್ಪ ದಾರಿ ಸವೆಸಿ ನಡೆದರೆ ಗುಹೆ ಎದುರಿಗಿರುತ್ತೀರಿ.

ನಾನಲ್ಲಿಗೆ ಅಡಿ ಇಟ್ಟಾಗ ‘ಮೆ ನಹಿ ಆಂವೂಗಿ'(ನಾ ಬರೋದಿಲ್ಲ) ಎಂಬ ಕೂಗು ಗುಹೆ ಎದುರಿಂದ ಕೇಳಿ ಬರುತಲಿತ್ತು. ಎದೆನಡುಗಿಸುವ ಗುಹಾದ್ವಾರದೆದುರು ಅನೇಕ ಹೆಂಗಸರು ಒಳ ಹೋಗಲು ಹೆದರಿ ಹೀಂದೇಟು ಹಾಕುತ್ತಿದ್ದರು. ಅವರ ಗಂಡಂದಿರು ಅವರನ್ನು ಒಳ ಹೋಗಲು ಒತ್ತಾಯಿಸುತ್ತಿದ್ದರು. ಮುದುಕನೊಬ್ಬನ ಬಾಯೊಳಗೆ ನುಸುಳಿದಂತೆ ಕಂಡು ಬರುವ ಈ ದ್ವಾರ ಎಂಥವರನ್ನೂ ಭಯಗೊಳಿಸುವುದು. ಯಾರದೋ ಜೀರ್ಣನಾಳದೊಳಗೆ ಮೂಗು ತೂರಿಸಿದ ಅನುಭವ!! ಮತ್ತೆ ಹೇಗೆ ಒಳ ಹೊಕ್ಕಾರು ಅವರೆಲ್ಲ. ಪಾಪ. ಕುಸಿದು ಬಿದ್ದರೆ ಬದುಕಿನ ಅಧ್ಯಾಯ ಮುಗಿದಂತೆ. ಬರೋಬ್ಬರಿ 6.5 ಕಿಲೋ ಮೀಟರ್ ಬಾಯ್ದೆರೆದ ಭಯಾನಕ ಗುಹೆ. ಕೆಲವೆಡೆ ತೆವಳುತ್ತಾ ಸಾಗಬೇಕು. ಸಣ್ಣ ಝರಿಯೊಂದು ಗುಹೆಯೊಳಗೇ ಹಾದು ಹೋಗಿತ್ತು. ಗೋಡೆಗಳ ಮೇಲೆಲ್ಲಾ ಸುಣ್ಣದ ಕಲ್ಲಿನ ಚಿತ್ತಾರ.

ಗುಹೆಯೊಳಗಿನ ನೆಲ ಸವೆದು ಜಾರುವ ಟೈಲ್ಸ್‌ನಂತಿತ್ತು. ಅನೇಕ ಕಡೆ ಜಾರಿ ಬೀಳುವಷ್ಟರಲ್ಲಿ ಸುಧಾರಿಸಿಕೊಂಡೆ. ಬಕಾಸುರನಂತೆ ಬಾಯಿ ಕಳೆದ ಗುಹೆ ಕಂಡಾಗ ಶ್ರೀ ಕೃಷ್ಣನ ನೆನಪು. ಗುಹೆಯೊಳಗೆ ಏನುಂಟು ಏನಿಲ್ಲ ತಣ್ಣಗೆ ಹರಿವ ಜಲರಾಶಿ, ಜೀವರಾಶಿ. ಅಪರೂಪದ ಜೇಡಗಳು. ವಿಚಿತ್ರ ವಿನ್ಯಾಸದೊಂದಿಗೆ ತೊಟ್ಟಿಕ್ಕುವ ನೀರು, ಗುಹೆಯೊಳು ಗಂವ್ ಎನ್ನುವ ಕತ್ತಲು. ನೆತ್ತಿ ಸುಡುವ ಬಿಸಿಲಿದ್ದರೂ ಒಳಗೆ ಹವಾನಿಯಂತ್ರಣದಷ್ಟು ತಂಪು. ಯಾರದೋ ಜೀರ್ಣನಾಳದೊಳಗೆ ಜಾರಿಹೋದಂತಹ ಅನುಭವ. ಹೆಬ್ಬಾವಿನ ಹೊಟ್ಟೆ ಸೇರಿದ ಭಾವ. ಯಾರದೋ ಕರುಳಿನೊಳಗೆ ಹೂತು ಹೋದಂತೆ. ಆಹಾರದ ಕಣದಂತೆ ಚಲಿಸುವ ಜನಸಂದಣಿ. ಒಳಾಂಗಣದಲಿ ಅಲ್ಲಲ್ಲಿ ಬೆಳಕಿನ ವ್ಯವಸ್ಥೆ. ಗುಹೆಯ ಉದ್ದ ಸರಿಸುಮಾರು 6.5 ಕಿ.ಮೀ.

ವಿನ್ಯಾಸ

ಸುಣ್ಣದ ಕಲ್ಲಿನ ವಿಚಿತ್ರ ವಿನ್ಯಾಸ. ಜೇನು ತಟ್ಟಿಯಂತಹ ವಿಭಿನ್ನ ಸಂಯೋಜನೆ. ಬೆಳಕಿಗೆ ಹೊಳೆವ ಕಲ್ಲಿನ ಚೂರುಗಳು. ದನದ ಕೆಚ್ಚಲಿನಾಕೃತಿಯ ವಿನ್ಯಾಸವೂ ಉಂಟು. ಹಲಸಿನ ಕಾಯಿಯಂತಹ ನೇತಾಡುವ ಮಣ್ಣ ಹೆಂಟೆಗಳು. ವಿಭಿನ್ನ ವಿನ್ಯಾಸ, ಆಕಾರ. ಹಾವು, ಶಂಕ, ಗದೆ, ರಾಕ್ಷಸ ಆಲದ ಬಿಳಲುಗಳಂತಹ ರಚನೆ. ಹತ್ತು ಹೆಡೆ ಸರ್ಪ, ಮುದುಕ, ಗಂಟಲಿನ ರಚನೆ, ಹೊಸ ಹೊಸ ವಿನ್ಯಾಸದ ಬಲ್ಬುಗಳಂತಹ ರಚನೆಗಳು, ಒಂದೇ ಎರಡೇ. ನಿಮ್ಮ ಕಲ್ಪನಾ ಲೋಕದ ವಿಸ್ತಾರ. ಬೀಳುವವೇನೋ ಎಂದು ನಿರುಕಿಸಿ ನಿರುಕಿಸಿ ಸೋತೆ. ಒಂದೂ ಹಿಸಿದು ಬೀಳಲೇ ಇಲ್ಲ. ಆಲದ ಬಿಳಲುಗಳಂತೆ ನೇತಾಡುವ ಸಪೂರ ಗುಹಾ ರಚನೆ. ಇಲ್ಲೆಲ್ಲಾ ನುಸುಳಿ, ತೆವಳಿ ಸಾಗಬೇಕಾದ ಅನಿವಾರ್ಯತೆ. ನಡುವಲ್ಲಿ ವಿಶಾಲವಾಗಿ ಮತ್ತೆ ಕುಗ್ಗಿ ಚಲಿಸಿತ್ತು ಗುಹೆ. ಸಾಕ್ಷಾತ್‌ ಗಂಟಲಿನಿಂದ ನುಸುಳಿ ಹೊಟ್ಟೆಗೆ ಕಾಲಿಟ್ಟಂತೆ! ಇಲ್ಲಿ ಸುಣ್ಣದಕಲ್ಲು ಗುಡ್ಡ ಕುಡಿದ ನೀರಿನೊಂದಿಗೆ ಬೆರೆತ ನೋಳಿ(ಅಂಟು) ರಸದಂತೆ ಸದಾ ಹರಿಯುತ್ತಲೇ ಇರುತ್ತದೆ. ಕೊನೆಯಲ್ಲಿ ಗುಹೆ ತನ್ನ ಬಾಯಿ ಕಳೆದು ನಿಂತಿತ್ತು. ಹೊರಗಿನ ಬಿಸಿಲ ಕೋಲುಗಳು ಗುಹೆಯೊಳಗೆ ನುಗ್ಗಿ ಗುಹೆಯನ್ನು ಚೆಚ್ಚಗೆ ಮಾಡಿ ಹೊರಟು ಹೋಗಿದ್ದವು. ಮೂರು ಪುಟಾಣಿ ದ್ವಾರಗಳು ಇಲ್ಲಿಂದ ತೆರೆದುಕೊಳ್ಳುತ್ತದೆ. ಒಂದರೊಳಗಾದರೂ ನುಗ್ಗಿ ಮತ್ತೊಂದರಿಂದ ಹೊರ ಬರಬೇಕೆಂಬ ಅದಮ್ಯ ಇಚ್ಚೆಯಾದರೂ ಒಂಟಿಯಾಗಿರುವುದರಿಂದ ಸುಮ್ಮನಾದೆ. ಜೊತೆಗೆ ಇಲ್ಲಿಂದ ಮುಂದೆ ಹೋಗಬಾರದೆಂದು ಸಣ್ಣ ಬೋರ್ಡೊಂದು ನೇತು ಹಾಕಿದ್ದರು.

ರಚನೆ

ನೀರೇ ಈ ಎಲ್ಲಾ ರಚನೆಗಳ ವಿನ್ಯಾಸಗಾರ! ಸಹಸ್ರಾರು ವರ್ಷಗಳಿಂದ ನೀರು ಈ ಗುಹೆಗಳ ಮೂಲಕ ಹರಿದು ಹರಿದು ವಿಚಿತ್ರಗಳು ರಚನೆಯಾಗಿವೆ ಅನ್ನುತ್ತಾರೆ. ಇಲ್ಲಿನ ಲೈಮ್‌ ಸ್ಟೋನ್‌ಗಳು ಕರಗಿ ಈ ರಚನೆಗಳು ಉಂಟಾಗಿವೆ. ನೀರಿನ ಅದ್ಭುತ ಶಕ್ತಿಯ ನೆನೆದು ಅಚ್ಚರಿಯಾಯಿತು.

ಮುಂದಕ್ಕೆ

‘ಪ್ರಕೃತಿ ನಿರ್ಮಿತ ‘ಲಿಯತ್ ಪ್ರಹಾ’ ಎಂಬ ಗುಹೆ 30 ಕಿ.ಮೀ. ಉದ್ದವಿದೆ!’ ಎಂದ ನಮ್ಮ ಡ್ರೈವರ್. ಇವುಗಳಲ್ಲಿ ಕೆಲವೊಂದು ಕಡೆ ತೆವಳಿ ಸಾಗಬೇಕಾದ ಅನಿವಾರ್ಯತೆಯಂತೆ. ‘ಗಾರ್ಡನ್ ಗುಹೆ’ಎಂದು ಕರೆಯಲ್ಪಡುವ ಗುಹೆ ಸುಮಾರು ಕಿ.ಮೀ. ಉದ್ದವಿದೆ ಎಂಬ ಬೋರ್ಡೊಂದನ್ನು ಇಲ್ಲಿ ಕಂಡೆ. ಜೊತೆಗೆ ಗುಹೆಯೊಳಗೆ ಒಂದು ಜಲಪಾತವೂ ಇದೆ! ಇಲ್ಲಿನ ಗುಹೆಗಳು ಅಚ್ಚರಿಗಳ ಮೂಟೆ. ಮೇಘಾಲಯದಲ್ಲಿ ಸುಮಾರು 1950 ಕ್ಕೂ ಹೆಚ್ಚು ಗುಹೆಗಳಿವೆ! ವಿಶ್ವ ಪ್ರಸಿದ್ಧ ಮೊದಲ 9 ಗುಹೆಗಳಿರುವುದು ನಮ್ಮ ಮೇಘಾಲಯದಲ್ಲೇ. ಪ್ರತಿಯೊಂದೂ ಭಿನ್ನ. ಯುತ್ ಹಾಸ್ಟೆಲ್‌ನವರು ವರ್ಷಂಪ್ರತಿ ಇಲ್ಲಿ ಮೂರು ನಾಲ್ಕು ಗುಹೆ ತೋರಿಸುವ ಕಾರ್ಯಕ್ರಮವೇರ್ಪಡಿಸುತ್ತಾರೆ.

ಚಿಕ್ಕ ವಯಸ್ಸಿನಲ್ಲೇ ಮೇಘಾಲಯಕ್ಕೆ ಹೋಗಿ ಬರಬೇಕೆಂಬ ಕನಸೊಂದು ಬಹಳ ವರ್ಷಗಳ ನಂತರ ನೆರವೇರಿತು. ಬದುಕಿನ ಬಣ್ಣಕ್ಕೆ ಹೊಸ ಗರಿಯೊಂದು ಸೇರಿತು. ಶಿಲ್ಲಾಂಗ್‌ನ ಸನಿಹವೇ ಇರುವ ಈ ಗುಹೆಗಳನ್ನು ನೋಡದೆ ಹೋದರೆ ಮೇಘಾಲಯ ಪ್ರವಾಸ ಅಪೂರ್ಣ. ಅರವಾ ಗುಹೆಗಳನ್ನು ನೋಡದೇ ಹಾಗೆ ವಾಪಾಸು ಬಂದಿದ್ದು ಬೇಸರವೆನಿಸಿದರೂ ಮತ್ತೊಮ್ಮೆ ಬರುವ ಇರಾದೆಯೊಂದಿಗೆ ಅಸ್ಸಾಂನತ್ತ ಹೊರಟು ನಿಂತೆವು. ನಾಲಗೆ ಹೊರಳದ ನಾಡಲ್ಲಿ ತಿರುಗಿ ಬರುವ ಮಜವೇ ಬೇರೆ. ಯಾಕಿನ್ನು ಯೋಚನೆ ಪ್ಯಾಕ್‌ಪ್ ಹೇಳಿ, ಜೀವಂತ ಸೇತುವೆಗಳೊಂದಿಗೆ ಒಂದು ದಿನ ಕಳೆಯುವ ಆಲೋಚನೆಯೊಂದಿಗೆ ಇಂದಿನ ಪ್ರವಾಸಕ್ಕೆ ನಾವು ಪ್ಯಾಕಪ್ ಹೇಳಿದೆವು.

About The Author

ಶ್ರೀಧರ್‌ ಎಸ್.‌ ಸಿದ್ದಾಪುರ

ಶ್ರೀಧರ್‌ ಎಸ್.‌ ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ.  “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ