Advertisement
ಪ್ರಾಚೀನ ತಾಮ್ರ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ಪ್ರಾಚೀನ ತಾಮ್ರ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ಪ್ರಾಚೀನ ತಾಮ್ರ ಗಣಿಗಾರಿಕೆ ಚಟುವಟಿಕೆಗಳು ರೊಲಾಡಿಹ್, ಬಡಿಯಾ, ಧಲ್‌ಭಮ್ ಮತ್ತು ದುವಾಯಪುರಂನ ಧೋಬನಿ ಬೆಟ್ಟಗಳು ಮತ್ತು ಖಾಸ್ವಾನ್ ಪ್ರದೇಶಗಳಲ್ಲಿ ಗಲುದಿಹ್ ಮತ್ತು ರಾಗದಿಹ್ ಹತ್ತಿರವೂ ನಡೆದಿರುವುದಾಗಿ ತಿಳಿದುಬಂದಿದೆ. ಚಂದ್ರಬಾರು, ರಾಜದೋಹಾ, ರಾಖಾ, ಸಿದ್ಧೇಶ್ವರ, ಸುರ್ದಾ, ಲೌಕೇಸ್ರಾ ಇತರ ಪ್ರಮುಖ ತಾಮ್ರದ ಗಣಿಗಾರಿಕೆ ತಾಣಗಳಾಗಿವೆ. ಕೆಲವು ಹಳೆ ಗಣಿಗಳು ಭಂಕುರಾ ಮತ್ತು ಬರಗುಂದ ಸಮೀಪದ ಸಿಂಘ್‌ಭೂಮ್‌ನ ಪೂರ್ವ ಗಡಿಯಲ್ಲಿ ದೊಡ್ಡ ಶ್ಯಾಫ್ಟ್‌ಗಳು ಮತ್ತು ಹೊಂಡಗಳಿರುವ ಗಣಿಗಾರಿಕೆ ಕುರುಹುಗಳು ಕಂಡುಬಂದಿವೆ. ಪ್ರಸ್ತುತ ಮಧ್ಯಪ್ರದೇಶದಲ್ಲಿರುವ ಮಲಂಜ್‌ಖಂಡ್‌ನಲ್ಲಿ ದೊಡ್ಡ ತಾಮ್ರ ಗಣಿಗಾರಿಕೆ ನಡೆಯುತ್ತಿದೆ.
ಡಾ.
ಎಂ. ವೆಂಕಟಸ್ವಾಮಿ ಅನುವಾದಿತ “ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ” ಸರಣಿಯಲ್ಲಿ ಐದನೆಯ ಅಧ್ಯಾಯ

ಕ್ರಿ.ಪೂ. 4000 ದಿಂದ 3000 ವರ್ಷಗಳ ನಡುವಿನ ಕಾಲಘಟ್ಟದಲ್ಲಿ ತಾಮ್ರ ಬೆಳಕಿಗೆ ಬಂದಿತು ಎನ್ನಲಾಗಿದೆ. ನಂತರ ಮೆಸೊಪೊಟೋಮಿಯಾ ನಾಗರಿಕತೆಯಲ್ಲಿ ತಾಮ್ರ ಯುಗದ ಕುರುಹುಗಳು ಸ್ಪಷ್ಟವಾಗಿ ಕಂಡುಬಂದಿವೆ. ನವ ಶಿಲಾಯುಗದಲ್ಲಿ ಬಳಸುತ್ತಿದ್ದ ಸಾಧನಗಳನ್ನು ಇಲ್ಲಿಯೂ ಬಳಸಿರುವುದು ಕಂಡುಬಂದಿದೆ. ಟೈಗ್ರಿಸ್-ಯುಫ್ರೆಟೆಸ್‌ನಲ್ಲಿ ಮೊದಲ ಬಾರಿಗೆ ತಾಮ್ರದ ಸಂಸ್ಕರಣೆ ಮತ್ತು ಅದರ ಬಳಕೆ ಕಂಡುಬರುತ್ತದೆ. ಪರ್ಷಿಯನ್ ಗುಡ್ಡಗಾಡುಗಳಿಂದ ವಲಸೆ ಬಂದ ಬುದ್ಧಿವಂತ ಜನರು ಬಹುಶಃ ತಾಮ್ರ ಸಂಸ್ಕರಣೆಯನ್ನು ಪ್ರಾರಂಭಿಸಿರಬಹುದೆಂದು ಇತಿಹಾಸಕಾರರು ಹೇಳುತ್ತಾರೆ. ಈ ಕಾಲವನ್ನು ಕ್ರಿ. ಪೂ. 4000 ದಿಂದ 3000 ವರ್ಷಗಳು ಎಂದು ಗುರುತಿಸಿದ್ದು ಆರಂಭದಲ್ಲಿ ಸಹಜವಾಗಿ ದೊರಕುತ್ತಿದ್ದ ತಾಮ್ರವನ್ನು ಬಳಸಿದ್ದಾರೆ. ನಂತರ ತಾಮ್ರದ ಅದಿರಿನಿಂದ ಲೋಹವನ್ನು ಪಡೆಯಲು ದೀರ್ಘಕಾಲ ತೆಗೆದುಕೊಂಡರೂ ಅದರಲ್ಲಿ ಯಶಸ್ವಿ ಪಡೆದಿದ್ದಾರೆ. ಆದರೆ ಲೋಹ ಕರಗಿಸಿ ಅಚ್ಚು ಹಾಕುವ ತಂತ್ರಜ್ಞಾನವನ್ನು ಆಗಲೂ ಸಾಧಿಸಿರಲಿಲ್ಲ.

ಚಾಲ್ಡಿಯಾ ಎಂಬ ಪ್ರದೇಶದಿಂದ ಬಂದವರು (ಈ ಪ್ರದೇಶ ಮುಂದೆ ಮೆಸೊಪೊಟೋಮಿಯಾದಲ್ಲಿ ಸೇರಿಹೋಯಿತು) ಈ ತಂತ್ರಜ್ಞಾನದಲ್ಲಿ ನಿಪುಣರಾಗಿದ್ದರು ಮತ್ತು ಇವರು ಮುಂದೆ ಈಜಿಪ್ಟ್ ಕಡೆಗೆ ವಲಸೆ ಹೋಗಿ ಅಲ್ಲಿಂದ ಮೆಡಿಟರೇನಿಯನ್ ತೀರದ ಪ್ರದೇಶಗಳಲ್ಲಿ ಈ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ ಸಾಧ್ಯತೆಗಳಿವೆ ಎನ್ನಲಾಗಿದೆ. ಮುಂದೆ ಮಧ್ಯ ಹಾಗೂ ಉತ್ತರ ಯೂರೋಪಿಗೆ ಹರಡುವ ಹಂತದಲ್ಲಿ ಬಳಸುತ್ತಿದ್ದ ಸಾಧನಗಳು, ಸಲಕರಣೆಗಳು ಇನ್ನಷ್ಟು ಅಭಿವೃದ್ಧಿ ಹೊಂದಿದವು. ಲೋಹವನ್ನು ಕರಗಿಸಲು ದೊಡ್ಡ ಪ್ರಮಾಣದ ಬೆಂಕಿಯನ್ನು ಉರಿಸಬೇಕಾಗಿತ್ತು. ಮೂಲದ ಅದಿರು ಒಂದು ಬಣ್ಣವಾದರೆ, ದ್ರವರೂಪಕ್ಕೆ ಬರುವ ಬಣ್ಣ ಬೇರೆಯಾಗಿತ್ತು. ಕರಗಿಸಿದ ಲೋಹವನ್ನು ಯಾವುದೇ ಆಕಾರದಲ್ಲಿ ಎರಕ ಹೊಯ್ಯುವ ಜ್ಞಾನವೂ ಹುಟ್ಟಿಕೊಂಡಿತು. ಇದರಿಂದ 3000 ವರ್ಷಗಳ ಹಿಂದೆ ತಾಮ್ರದ ಒಡವೆಗಳನ್ನು ಮಾಡುವುದು ನೈಲ್ ನದಿ ಕಣಿವೆಯಲ್ಲಿ ರೂಢಿಗೆ ಬಂದಿತು. ಮತ್ತು ಇದರ ಜೊತೆಗೆ 3000 ವರ್ಷಗಳ ಹಿಂದೆಯೇ ಆಳವಾದ ತಾಮ್ರ ಗಣಿಗಳನ್ನು ತೋಡಿರುವ ಕುರುಹುಗಳು ಕಂಡುಬಂದಿವೆ.

ಕಂಚಿನಯುಗ: ತಾಮ್ರಯುಗದ ಜೊತೆಜೊತೆಗೆ ಮನುಷ್ಯ ಕಂಚಿನ ಯುಗವನ್ನು ಪ್ರವೇಶಿಸಿದ. ಈ ಕಾಲಘಟ್ಟದ ದೊಡ್ಡ ಸವಾಲೆಂದರೆ ಬೇರೆಬೇರೆ ಲೋಹಗಳನ್ನು ಬೆರೆಸಿ ಮಿಶ್ರಲೋಹ ತಯಾರಿಸುವುದು. ಮಿಶ್ರಲೋಹಗಳನ್ನು ತಯಾರು ಮಾಡಬೇಕಾದರೆ ಲೋಹಗಳು ರಾಸಾಯನಿಕವಾಗಿ, ಭೌತಿಕವಾಗಿ ಮಿಶ್ರಣ ಆಗುತ್ತವೆಯೇ ಅಥವಾ ಇಲ್ಲವೇ ಎಂಬ ಜ್ಞಾನ ಅತ್ಯವಶ್ಯಕ. ಇದನ್ನು ಕಂಡುಕೊಳ್ಳಬೇಕಾದರೆ ಲೋಹಗಳ ರಾಸಾಯನಿಕ ಮತ್ತು ಭೌತಿಕ ಗುಣಗಳ ಬಗ್ಗೆ ನಿಖರವಾದ ಪರಿಚಯ ಇರಬೇಕು. ಎಷ್ಟು ಉಷ್ಣತೆಯಲ್ಲಿ ಯಾವ ಲೋಹ ಕರಗುತ್ತದೆ ಎಂಬುದರ ಪ್ರಾಯೋಗಿಕ ತಿಳಿವಳಿಕೆ ಇರಬೇಕು. ಕಂಚು ಒಂದು ಮಿಶ್ರಲೋಹವಾಗಿದ್ದು ತಾಮ್ರ ಮತ್ತು ತವರನ್ನು ಮಿಶ್ರಣ ಮಾಡಿ ತಯಾರಿಸಲಾಗುತ್ತದೆ.

ಕ್ರಿ.ಪೂ. 3000ರ ಹೊತ್ತಿಗೆ ತಾಮ್ರ ಮತ್ತು ತವರ ಲೋಹಗಳನ್ನು ಮಿಶ್ರಣ ಮಾಡಿ ಕಂಚನ್ನು ತಯಾರಿಸುವ ತಂತ್ರಜ್ಞಾನವನ್ನು ಸ್ವಷ್ಟವಾಗಿ ತಿಳಿದುಕೊಳ್ಳಲಾಯಿತು. ಕಂಚು ತಯಾರಿಸಲು ತಾಮ್ರದ ಪ್ರಮಾಣ 7 ರಿಂದ 8 ಭಾಗ, ತವರದ ಪ್ರಮಾಣ 1 ರಿಂದ 8 ಭಾಗ ಎಂದು ಪ್ರಯೋಗ ಮಾಡಿ ತಿಳಿದುಕೊಳ್ಳಲಾಯಿತು. ತವರ ಲೋಹದ ಅದಿರು ಕ್ಯಾಸಿಟೆರೈಟ್ (Sಟಿಔ2), ಬೇರೆ ಬೇರೆ ಸಲ್ಫೈಡ್ ಖನಿಜಗಳೊಂದಿಗೆ ಬೆರೆತಿದ್ದು ವಾಣಿಜ್ಯ ಉತ್ಪಾದನೆಗೆ ಕ್ಯಾಸಿಟೆರೈಟ್ ಅದಿರು ಮೂಲವಾಗಿದೆ. ತಾಮ್ರ ಮತ್ತು ತವರ ಜೊತೆಗೆ ಅಲ್ಪ ಪ್ರಮಾಣದ ರಂಜಕ, ಆರ್ಸೆನಿಕ್, ಇನ್ನೂ ಲೇಶ ಪ್ರಮಾಣದಲ್ಲಿ ಚಿನ್ನ, ಬೆಳ್ಳಿಯೂ ಇರುತ್ತದೆ. ಈಜಿಪ್ಟ್‌ನ ರಾಜರ ಆಳ್ವಿಕೆಯಲ್ಲಿ ಕಂಚಿನ ಸಾಮಗ್ರಿಗಳನ್ನು ಬಳಸಿರುವ ಪುರಾವೆಗಳು ದೊರಕಿವೆ.

ಕ್ರಿ.ಪೂ. ಮೂರು ಸಹಸ್ರಮಾನಗಳ ಮುಂಚೆಯೇ ಕಂಚಿನ ಯುಗ ಪ್ರಾರಂಭವಾಗಿದ್ದು, ತಾಮ್ರದ ನಿಕ್ಷೇಪಗಳು ಅನೇಕ ದೇಶಗಳಲ್ಲಿ ಕಂಡುಬಂದು ಗಣಿ ಕಾರ್ಯಗಳು ನಡೆದಿದ್ದವು. ಅನೇಕ ಇತಿಹಾಸಕಾರರು ಊಹಿಸಿರುವಂತೆ ಇಡೀ ಕಂಚಿನಯುಗ ಪ್ರಾರಂಭವಾಗಿದ್ದು ಏಷ್ಯಾ ಮೈನರ್ ಮತ್ತು ಆರ್ಮೇನಿಯಾದಲ್ಲಿ. ಏಷ್ಯಾ ಮೈನರ್ ದೇಶಗಳೆಂದರೆ ಇಟಲಿ, ಗ್ರೀಸ್, ಅಲ್ಬೇನಿಯಾ, ಬಲ್ಗೇರಿಯಾ, ಟರ್ಕಿ, ಈಜಿಪ್ಟ್, ಲಿಬಿಯಾ ಇಸ್ರೇಲ್ ಇತ್ಯಾದಿ ದೇಶಗಳು. ಅಲ್ಲಿಂದ ಪೂರ್ವ ಏಷ್ಯಾ ಮತ್ತು ಕೊನೆಗೆ ಕ್ರಿ.ಪೂ. 2500ರ ಹೊತ್ತಿಗೆ ಭಾರತಕ್ಕೂ ಪ್ರವೇಶಿಸಿತು ಎನ್ನಲಾಗಿದೆ. ತವರ ನಿಕ್ಷೇಪಗಳು ಆರ್ಮೇನಿಯಾ, ಸಿರಿಯ, ವಾಯುವ್ಯ ಪರ್ಷಿಯ, ಭಾರತದಲ್ಲೂ ದೊಡ್ಡ ಪ್ರಮಾಣದಲ್ಲಿ ದೊರಕುತ್ತವೆ. ಯೂರೋಪ್‌ನಲ್ಲಿ ಒಹೇಮಿಯ, ಸ್ಪೇನ್, ಬ್ರಿಟಿಷ್ ದ್ವೀಪಗಳು, ಉತ್ತರ ನೈಜೀರಿಯ, ಟ್ರಾನ್ಸ್ವಾಲ್ ಮುಖ್ಯ ತವರ ನಿಕ್ಷೇಪಗಳನ್ನು ಹೊಂದಿರುವ ದೇಶಗಳಾಗಿವೆ.

ಕಂಚಿನ ಯುಗದಲ್ಲಿ ಪಟ್ಟಣಗಳು ಮತ್ತು ನಗರಗಳು ಅಭಿವೃದ್ಧಿ ಹೊಂದುತ್ತಿದ್ದವು. ಸಿಂಧೂ ನಾಗರಿಕತೆ ಇದೇ ಕಾಲಕ್ಕೆ ಸೇರುತ್ತದೆ. ಕುಂಬಾರಿಕೆ ಕಲೆಯ ಜೊತೆಗೆ ಕಂಚಿನ ವಿಗ್ರಹಗಳನ್ನು ಮಾಡುವಷ್ಟು ತಂತ್ರಜ್ಞಾನ ಬೆಳೆದಿತ್ತು. ಸಿಂಧೂ ನಾಗರಿಕತೆಯ ವಾಣಿಜ್ಯ ವ್ಯವಹಾರ ಟೈಗ್ರಸ್ ಮತ್ತು ಯುಫ್ರೆಟಿಸ್‌ಗೂ ಹರಡಿತು. ಸಿರಿಯಾ ದೇಶದಿಂದ ಸೈಪ್ರೆಸ್‌ವರೆಗೂ ಮತ್ತು ಏಷ್ಯಾ ಮೈನರ್‌ನ ಅನೇಕ ಪಟ್ಟಣಗಳ ನಡುವೆ ವಾಣಿಜ್ಯ ವ್ಯವಹಾರ ತೀವ್ರವಾಗಿ ಏರ್ಪಟ್ಟಿತ್ತು. ಮುಂದಿನ ಹಂತಗಳಲ್ಲಿ ಇಟಲಿಯ ಮೂಲಕ ಯೂರೋಪಿಗೂ ಕಂಚಿನ ತಂತ್ರಜ್ಞಾನ ಹರಡಿತು. ಈ ಹೊತ್ತಿಗೆ ಲೋಹ ವಿದ್ಯೆಯಲ್ಲಿ ತೊಡಗಿಕೊಂಡವರ ಒಂದು ಜನಾಂಗವೇ ಹುಟ್ಟಿಕೊಂಡಿತು. ಅದರ ಜೊತೆಜೊತೆಗೆ ಜಾತಿಪದ್ಧತಿ ನಿಧಾನವಾಗಿ ತಲೆ ಎತ್ತತೊಡಗಿತು.

(ಚಿತ್ರ: ರಾಜಸ್ತಾನದ ದರಿಬಾ ಪ್ರಾಚೀನ ತಾಮ್ರ ಗಣಿಯ ಪ್ರವೇಶದ್ವಾರ, ಚಿತ್ರ ಥಾಮಸ್ ಕ್ಯಾಡೆಲ್, ಬ್ರಿಟಿಷ್ ಗ್ರಂಥಾಲಯ.)

ಈ ಎಲ್ಲದರ ವಿವರಣೆಗಳಿಂದ ಭಾರತದಲ್ಲಿಯೂ ತಾಮ್ರ ಗಣಿಗಾರಿಕೆ ಬಹಳ ಪ್ರಾಚೀನ ಇತಿಹಾಸವನ್ನು ಹೊಂದಿದೆ ಎನ್ನುವುದು ತಿಳಿಯುತ್ತದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾಮ್ರ ಗಣಿಗಾರಿಕೆ, ತಾಮ್ರ ಕುಶಲಗಾರಿಕೆ, ಸ್ಲ್ಯಾಗ್(ಕಿಟ್ಟ)-ತ್ಯಾಜ್ಯ ಮತ್ತು ಲೋಹಶಾಸ್ತ್ರೀಯ ತಂತ್ರಜ್ಞಾನ ಕಂಡುಬಂದಿದೆ. ಪ್ರಾಚೀನ ಸಾಹಿತ್ಯದಲ್ಲಿ ಗಣಿಗಾರಿಕೆಯ ಬಗ್ಗೆ ಸಾಕಷ್ಟು ವಿವರಣೆಗಳು ದೊರಕಿದರೂ ಗಣಿಗಾರಿಕೆ ನಡೆದ ಸ್ಥಳಗಳನ್ನು ಮತ್ತು ಅವುಗಳ ಕಾರ್ಯಾಚರಣೆಯ ನಿರ್ದಿಷ್ಟ ಕಾಲಾವಧಿಯನ್ನು ಪರಸ್ಪರ ಹೊಂದಿಸಲು ದತ್ತಾಂಶ ಅತ್ಯಲ್ಪವಾಗಿದೆ ಎನ್ನಲಾಗಿದೆ.

ಕುಮೌನ್‌ನಲ್ಲಿ (ಮಧ್ಯ ಹಿಮಾಲಯ) ಕಬ್ಬಿಣ ಮತ್ತು ತಾಮ್ರ ಕುಶಲತೆಯನ್ನು ಸಂಪ್ರದಾಯ ತಂತ್ರಜ್ಞಾನ ಎಂದು ಪರಿಗಣಿಸಲಾಗಿದೆ. ಪ್ರಾಚೀನ ದಾಖಲೆಗಳ ಪ್ರಕಾರ ಹಳೆ ನಾಗರಿಕತೆಗಳಿಗೆ ಸುಮಾರು 10,000 ವರ್ಷಗಳ ಹಿಂದೆಯೆ ತಾಮ್ರ ಲೋಹದ ಬಗ್ಗೆ ತಿಳಿದಿತ್ತು ಎನ್ನಲಾಗಿದೆ. ವೇದಗಳಲ್ಲಿ ಲೋಹಗಳು ಮತ್ತು ಅವುಗಳ ಕೆಲಸದ ಬಗ್ಗೆ ಅನೇಕ ಉಲ್ಲೇಖಗಳಿದ್ದು ಇವುಗಳನ್ನು ರೂಪಕಗಳಾಗಿ ಬಳಸಲಾಗಿದೆ. ಋಗ್‌ವೇದದಲ್ಲಿ “ಆಯಸ್” ಎಂಬ ಪದ ತಾಮ್ರ ಅಥವಾ ಕಂಚನ್ನು ಸೂಚಿಸುವ ಪದವಾಗಿದೆ. ನಂತರದ ಸಾಹಿತ್ಯದಲ್ಲಿ “ಕೃಷ್ಣನಾಯಶ”, “ಕಲಾಯಶ” ಅಥವಾ “ಶ್ಯಾಮಲಾಲೋಹ” ಎಂದು ಕರೆಯಲಾಗಿದೆ. ಕಬ್ಬಿಣವನ್ನು ಲೋಹ ಎಂದು ಕರೆಯಲಾಗಿದೆ.

ಚಿತ್ರ: ಅರ್ಧಕ್ಕೆ ಕತ್ತರಿಸಿದ ತಾಮ್ರಯುಗದ ತಾಮ್ರ ಬಾಣಗಳ ತಲೆಗಳು ಮತ್ತು ಕಂಚಿನ ವಿಗ್ರಹ, ಬಿಜ್ನೋರ್ (ಉತ್ತರ ಪ್ರದೇಶ), (www.museumsofindia.gov.in).

(ಚಿತ್ರ: ತಾಮ್ರಯುಗದ ಗೋಲಾ ಧೋರಾ ತಾಮ್ರ ಕಲಾಕೃತಿಗಳು, ಸಿಂಧೂ ಕಣಿವೆ, (https://www.harappa.com/)

ಒಂದು ಕಾಲದಲ್ಲಿ ಭರತ ಖಂಡದ ಭಾಗವಾಗಿದ್ದ ಈಗಿನ ಬಲುಚಿಸ್ತಾನದ ಮೆಹರ್ಗರ್‌ನಲ್ಲಿ ದೊರಕಿದ ತಾಮ್ರ ಕಲಾಕೃತಿಗಳು ಕ್ರಿ.ಪೂ. 6500 ವರ್ಷಗಳ ಹಿಂದಿಯೇ ನಿಯಮಿತ ಬಳಕೆಯಲ್ಲಿದ್ದ ಪುರಾವೆಗಳನ್ನು ಸೂಚಿಸುತ್ತವೆ. ಅದೇ ರೀತಿ ರಾಜಸ್ಥಾನದ ಖೇತ್ರಿಯ ಪೂರ್ವದಲ್ಲಿರುವ ಹಳೆಯ ತಾಮ್ರದ ಗಣಿಗಾರಿಕೆಯ ಪಟ್ಟಣವಾದ ಗಣೇಶ್ವರದ ಉತ್ಖನನದಲ್ಲಿ ದೊರಕಿದ ಕಲಾಕೃತಿಗಳು ಸಿಂಧೂ ಕಣಿವೆ ನಾಗರಿಕತೆಯ (ಕ್ರಿ.ಪೂ. 3000-5000 ವರ್ಷಗಳ) ಮುಂಚಿನ ತಾಮ್ರ ಗಣಿಗಾರಿಕೆಗೆ ಸಂಬಂಧಪಟ್ಟವು ಎಂದು ತಿಳಿದುಬರುತ್ತದೆ.

(ಚಿತ್ರ: ತಾಮ್ರ ಕರಗಿಸುವ ಪ್ರಾಚೀನ ಕುಲುಮೆ ಮತ್ತು ತಾಮ್ರಸಲ್ಫೇಟ್ ಕಾರ್ಯಗಾರ, ರಾಜಸ್ತಾನ (Picture courtesy Ball’s Economic Geology of India).

ಭಾರತೀಯ ಹಳೆ ಐತಿಹಾಸಿಕ ಪಠ್ಯಗಳಲ್ಲಿ ತಾಮ್ರ ಗಣಿಗಾರಿಕೆ ಮತ್ತು ತಾಮ್ರ ಲೋಹಶಾಸ್ತ್ರದ ಬಗ್ಗೆ ಅನೇಕ ಕಡೆ ಉಲ್ಲೇಖಗಳು ಕಂಡುಬರುತ್ತವೆ. ಕೌಟಿಲ್ಯನ ಅರ್ಥಶಾಸ್ತ್ರದಿಂದ (ಕ್ರಿ.ಪೂ. 3ನೇ ಶತಮಾನ) ಹಿಡಿದು 1590ರ ಐನ್-ಅಕ್ಬರಿಯ ದಾಖಲೆಗಳವರೆಗೂ (ಕ್ರಿ.ಶ. 1590) ನೋಡಬಹುದು. ಕೌಟಿಲ್ಯನ ಗ್ರಂಥದ “ಗಣಿ ಇಲಾಖೆ”ಯ ಅಧ್ಯಾಯದಲ್ಲಿ ವಿವಿಧ ರೀತಿಯ ಲೋಹಗಳ ಅದಿರು ಮತ್ತು ಲೋಹಗಳನ್ನು ಶುದ್ಧೀಕರಿಸುವ ಮತ್ತು ಮಿಶ್ರಲೋಹಗಳನ್ನು ತಯಾರಿಸುವ ತಂತ್ರಜ್ಞಾನವು ದಾಖಲಾಗಿದೆ. ಅದೇ ಗ್ರಂಥದಲ್ಲಿ ಗಣಿಗಳ ಬಗ್ಗೆ ಪ್ರಸ್ತಾಪಿಸುತ್ತ ಕೌಟಿಲ್ಯನು “ರಾಜ್ಯ ಖಜಾನೆಗೆ ಗಣಿಗಳಿಂದ ಸಂಪತ್ತು ಬರುತ್ತದೆ ಮತ್ತು ಆ ಸಂಪತ್ತಿನಿಂದ ಜಗತ್ತನ್ನು ಗೆಲ್ಲಬಹುದಾದ ಸೈನ್ಯ ಮತ್ತು ಆಭರಣಗಳನ್ನು ಖರೀದಿಸಬಹುದು” ಎಂದು ದಾಖಲಿಸಿದ್ದಾನೆ.

ಪ್ರಾಚೀನ ಸಾಹಿತ್ಯದ ಪ್ರಕಾರ ಶುದ್ಧ ಲೋಹಗಳಲ್ಲಿ ನಾಲ್ಕು ರೀತಿ. ಸುವರ್ಣ (ಚಿನ್ನ/ಬಂಗಾರ), ರಜತ (ಬೆಳ್ಳಿ), ತಾಮ್ರ (ತಾಮ್ರ) ಮತ್ತು ಲೋಹ (ಕಬ್ಬಿಣ). ಇದರ ಜೊತೆಗೆ ಎರಡು ಪುತಿಲೋಹಗಳಿದ್ದು (ಸೀಸ ಮತ್ತು ತವರ) ಇವುಗಳನ್ನು ಕಾಯಿಸುವಾಗ ಕೆಟ್ಟ ವಾಸನೆ ಹೊರಹೊಮ್ಮುತ್ತದೆ. ಇವುಗಳ ಜೊತೆಗೆ ಮೂರು ಮಿಶ್ರಲೋಹಗಳೂ ಇವೆ. ಅವೆಂದರೆ ಹಿತ್ತಾಳೆ, ಕಂಸಾ (ಗಂಟೆಲೋಹ) ಮತ್ತು ವಾರ್ತಾಲೋಹ (ಪಂಚ ಲೋಹಗಳ ಮಿಶ್ರಣದಿಂದ ತಯಾರಿಸುವ ಲೋಹ). ಪಂಚಲೋಹಗಳೆಂದರೆ ಚಿನ್ನ, ಬೆಳ್ಳಿ, ತಾಮ್ರ, ಸತು ಮತ್ತು ಕಬ್ಬಿಣ. ಕೆಲವೊಮ್ಮೆ ಸತು ಬದಲಿಗೆ ತವರ (ಕಲಾಯಿ ಮಾಡುವ) ಮತ್ತು ಸೀಸವನ್ನು ಮಿಶ್ರಣ ಲೋಹ ತಯಾರು ಮಾಡಲು ಬಳಸಲಾಗುತ್ತದೆ. ಬಹಳಷ್ಟು ದೇವರ ಮೂರ್ತಿಗಳನ್ನು ಪಂಚಲೋಹಗಳಿಂದ ತಯಾರಿಸಲಾಗುತ್ತದೆ. ಚಿನ್ನ, ಬೆಳ್ಳಿ, ತಾಮ್ರ, ತವರ ಇತ್ಯಾದಿಗಳನ್ನು ಒಳಗೊಂಡಂತೆ ಅನೇಕ ಖನಿಜಗಳು ಮತ್ತು ಲೋಹಗಳ ಸಾರಗಳ ಔಷಧೀಯ ಅನ್ವಯಗಳನ್ನು ಕ್ರಿ.ಪೂ. 5 ಮತ್ತು 2ನೇ ಶತಮಾನಗಳಲ್ಲಿ ರಚಿಸಲಾದ ಆಯುರ್ವೇದ ಗ್ರಂಥಗಳಾದ “ಸುಸ್ರುತ್” ಮತ್ತು “ಚರಕ ಸಂಹಿತೆ”ಯಲ್ಲಿ ಉಲ್ಲೇಖಿಸಲಾಗಿದೆ.

ತಾಮ್ರ ಕರಗಿಸುವಿಕೆಯ ಇತಿಹಾಸ: ಭಾರತದಲ್ಲಿ ತಾಮ್ರ ಕರಗಿಸುವ (ಕುಲುಮೆ) ವಿಧಾನ ಇತಿಹಾಸ ಪೂರ್ವ ಕಾಲದವರೆಗೂ ಚಾಚಿಕೊಂಡಿದೆ. ಗುಂಗೇರಿಯಾ (ಘಂಘರಿಯಾ) ಬಾಲಘಾಟ್ ಜಿಲ್ಲೆ, ಮಧ್ಯಪ್ರದೇಶ; ನೇಪಾಳದ ಗಡಿಯಲ್ಲಿರುವ ಅಶೋಕ-ಕಂಬದಲ್ಲಿನ ಗಮನಾರ್ಹವಾದ ತಾಮ್ರ ಬೋಲ್ಟ್, ಬಿಹಾರ ರಾಜ್ಯದ ಸುಲ್ತಾನ್‌ಗಂಜ್ ನಲ್ಲಿರುವ ಬುದ್ಧನ ಬೃಹತ್ ತಾಮ್ರ ಪ್ರತಿಮೆ, ಚೀನಾ ಪ್ರವಾಸಿ ಹೆಯ್ನ್-ತ್ಸಾಂಗ್ ದಾಖಲಿಸಿರುವ 80 ಅಡಿ ಎತ್ತರದ ನಳಂದ ಪ್ರತಿಮೆ, ರಾಜ ಶಿಲಾದಿತ್ಯನು 100 ಅಡಿ ವ್ಯಾಸದ ಗಂಟೆಯ ತಳದಲ್ಲಿ ನಿರ್ಮಿಸಿದ ತಳಭಾಗ, ತಾಮ್ರದ ನಾಣ್ಯಗಳು, ಫಲಕಗಳು, ಪೆಟ್ಟಿಗೆಗಳು; ಕ್ರಿಶ್ಚಿಯನ್ ಪೂರ್ವ ಕಾಲದ ಪೆಟ್ಟಿಗೆಗಳು, ಪಾತ್ರೆಗಳು ಮತ್ತು ಮೊಘಲ್ ಕಾಲದ ಹಿತ್ತಾಳೆ ಬಂದೂಕುಗಳು, ಫಿರಂಗಗಳು ಇತ್ಯಾದಿ.

ಪುರಾತತ್ತ್ವಶಾಸ್ತ್ರ ಇಲಾಖೆಯವರು ಸಂಗ್ರಹಿಸಿರುವ ಮೇಲಿನ ತಾಮ್ರದ ಮಾದರಿಗಳು ಮಧ್ಯಕಾಲೀನ ಭಾರತದಲ್ಲಿ (ಇತಿಹಾಸ ಪೂರ್ವದಲ್ಲಿ) ಉತ್ಕೃಷ್ಟವಾಗಿ ಬೆಳೆದು ನಿಂತಿದ್ದ ತಾಮ್ರ ಗಣಿಗಾರಿಕೆ, ಕುಲುಮೆ ಚಟುವಟಿಕೆಗಳು ವೈಜ್ಞಾನಿಕ ಮತ್ತು ಸಾಹಿತ್ಯ ಸಾಕ್ಷ್ಯಾಧಾರಗಳಿಂದ ಕೂಡಿವೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ತಾಮ್ರ ಅದಿರನ್ನು ಹಸಿರು, ಬೂದು, ಕೆಂಪು ಮತ್ತು ಭಾರೀ ಲೋಹ ಎಂದು ವಿವರಿಸಲಾಗಿದೆ. ಇದು ಬಹುಶಃ ತಾಮ್ರದ ವಿವಿಧ ರೀತಿಯ ಅದಿರು ಪ್ರಕಾರಗಳಾದ ಮಲಾಕೈಟ್, ಚಾಲ್ಕೊಸೈಟ್, ಬರ್ನೈಟ್ ಮತ್ತು ಆಕ್ಸಿಡೀಕೃತ ಅದಿರುಗಳಿಗೆ ಸಂಬಂಧಿಸಿದ್ದಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿರುವ ಹಸಿರು ಶಿಸ್ಟ್ ಪಟ್ಟಿಯ ಶಿಲಾ ರಚನೆಗಳಲ್ಲಿ ತಾಮ್ರ ಅದಿರುಗಳು ರೂಪುಗೊಂಡಿವೆ. ಲೋಹಗಳನ್ನು ಕರಗಿಸುವ ಕುಲುಮೆಗಳ ಆರಂಭಿಕ ಪುರಾವೆಗಳನ್ನು ಹರಪ್ಪ ಅಥವಾ ಸಿಂಧೂ ಕಣಿವೆಯ ನಾಗರಿಕ ತೊಟ್ಟಿಲುಗಳಲ್ಲಿ ಕಾಣಬಹುದು.

(ಚಿತ್ರ: ಸುಲ್ತಾನ್‌ಗಂಜ್‌ನ ಬುದ್ಧ ಪ್ರತಿಮೆ, ನಳಂದ ತಾಮ್ರದ ತಟ್ಟೆ, ಹರಪ್ಪ ತಾಮ್ರದ ಕನ್ನಡಿ ಮತ್ತು ಗುಂಟೂರು ಕಂಚಿನ ವಿಗ್ರಹ.)

ತಾಮ್ರದ ಪ್ರಮುಖ ನಿಕ್ಷೇಪಗಳಿರುವ ಕೇಂದ್ರಗಳೆಂದರೆ ರಾಜಸ್ತಾನ ರಾಜಸ್ಥಾನ, ಉತ್ತರ ಗುಜರಾತಿನ ಅರಾವಳಿ ಬೆಟ್ಟಗಳು, ಜಾರ್ಖಂಡ್‌ನ ಛೋಟಾ ನಾಗ್ಪುರ, ಉತ್ತರಾಂಚಲ್‌ನ ಗಡ್ವಾಲ್, ಮಧ್ಯಪ್ರದೇಶದ ಜಬ್ಬಲ್‌ಪುರ ಮತ್ತು ಬಾಲಘಾಟ್, ಆಂಧ್ರಪ್ರದೇಶದ ಕರ್ನೂಲ್ ಮತ್ತು ಅಗ್ನಿಕುಂಡಲ ಮತ್ತು ಚಿತ್ರದುರ್ಗ ಹತ್ತಿರದ ಇಂಗಲ್‌ದಲ್ (ಊegಜe, 1991, Ziಚಿuಜಜiಟಿ, 1961). ಈ ಪ್ರದೇಶಗಳಲ್ಲೆಲ್ಲ ಕೆಲವು ಸಾವಿರ ವರ್ಷಗಳ ಹಿಂದೆಯೇ ತಾಮ್ರ ಗಣಿಗಾರಿಕೆ ನಡೆದು ಟನ್ನುಗಟ್ಟಲೆ ತಾಮ್ರ ಮತ್ತು ಇತರ ಉಪಉತ್ಪನ್ನ ಲೋಹಗಳನ್ನು ಉತ್ಪಾದಿಸಲಾಗಿದೆ.

ಚಿತ್ರ: ಧನಯೋಟದ ಹಳೆಯ ಶ್ಯಾಫ್ಟ್ ಮತ್ತು ಖೇತ್ರಿ ತಾಮ್ರ ಶಿಸ್ಟ್ ಪಟ್ಟಿ, ರಾಜಸ್ತಾನ.

ರಾಜಸ್ತಾನದ ಖೇತ್ರಿ ಪ್ರದೇಶದ ಬಾಳೇಶ್ವರದಲ್ಲಿ ದೊರಕಿದ ತಾಮ್ರ ಗಣಿಗಾರಿಕೆಯ ಪುರಾವೆಗಳು ಕ್ರಿ.ಪೂ. 3ನೇ ಮತ್ತು 2ನೇ ಸಹಸ್ರಮಾನದ ಹರಪ್ಪ ನಾಗರಿಕತೆಯ ಕಾಲಕ್ಕೆ ಸೇರಿದವಾಗಿವೆ (ಕ್ರಿ.ಪೂ. 3300 ರಿಂದ ಕ್ರಿ.ಪೂ. 1300). ಅಲ್ವಾರ್, ಖೇತ್ರಿ ಮತ್ತು ಭಿಲ್ವಾರಾ ಪ್ರದೇಶಗಳ ಜೊತೆಗೆ ದಕ್ಷಿಣ ರಾಜಸ್ತಾನದ ಸಲುಂಬಾರ್ ಕೂಡ ತಾಮ್ರ ಗಣಿಗಾರಿಕೆಗೆ ಪ್ರಸಿದ್ಧಿ ಪಡೆದಿದೆ. ರಾಜ್‌ಪುರ-ದರಿಬಾದಲ್ಲಿನ ಗಣಿಗಾರಿಕೆ 2500 ವರ್ಷಗಳ ಹಳೆಯ ಗಣಿ ತ್ಯಾಜ್ಯ/ಕಿಟ್ಟ ರಾಶಿಗಳು, ರೆರ್ಟಾಟ್‌ಗಳು, ಬ್ಲೋಪೈಪ್‌ಗಳು, ಕುಲುಮೆಗಳು, ಕ್ರೂಸಿಬಲ್‌ಗಳು ಇತ್ಯಾದಿಗಳ ಉಪಸ್ಥಿತಿಯಿಂದ ಪ್ರಾಚೀನ ಗಣಿಗಾರಿಕೆಯ ಶ್ರೇಷ್ಠತೆ ಮತ್ತು ಲೋಹಶಾಸ್ತ್ರದ ಉತ್ಕೃಷ್ಟ ಜ್ಞಾನವನ್ನು ತೋರಿಸುತ್ತದೆ. ದರಿಬಾ ಮತ್ತು ಖೇತ್ರಿ-ಸಿಂಘಾನಾ ಪ್ರದೇಶಗಳಲ್ಲಿ ತಾಮ್ರದ ಗಣಗಾರಿಕೆ 19ನೇ ಶತಮಾನದ ಅಂತ್ಯದವರೆಗೆ ದೊಡ್ಡ ಪ್ರಮಾಣದಲ್ಲಿ ನಡೆದಿತ್ತು.

ರಘುನಂದನ್ ಮತ್ತು ಇತರರು 1981ರಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿರುವ ಸೀಸ-ಸತು, ತಾಮ್ರ ಅದಿರುಗಳು ಮತ್ತು ಪ್ರಾಚೀನ ಗಣಿಗಾರಿಕೆಗಳ ವಿವರಣೆಗಳನ್ನು ಸಂಗ್ರಹಿಸಿ ವರದಿಗಳನ್ನು ಪ್ರಕಟಿಸಿದ್ದಾರೆ. ಆಂಧ್ರಪ್ರದೇಶದ ಹಸಿರು ಶಿಸ್ಟ್ ಶಿಲಾಪಟ್ಟಿಗಳಲ್ಲಿ ಅನೇಕ ಕಡೆ ಗಣಿಗಾರಿಕೆ ನಡೆದಿರುವುದು ಕಂಡುಬಂದಿದೆ. ಹಲವಾರು ಜಿಲ್ಲೆಗಳಲ್ಲಿ ಹಳೆಯ ತಾಮ್ರ ಗಣಿಗಾರಿಕೆ ನಡೆದಿರುವುದು ಕಂಡುಬಂದಿದೆ; ಮುಖ್ಯವಾಗಿ ನೆಲ್ಲೂರು, ಖಮ್ಮಂ ಮತ್ತು ಗುಂಟೂರು ಜಿಲ್ಲೆಗಳಲ್ಲಿ. ನೆಲ್ಲೂರು ಜಿಲ್ಲೆಯಲ್ಲಿರುವ ಹಳೆಯ ತಾಮ್ರದ ಗಣಿಗಳು ಕನಿಷ್ಟ 100 ಅಡಿ ಆಳ ಮತ್ತು ನೂರಾರು ಅಡಿಗಳ ಉದ್ದದ ಕಂದಕಗಳು ಮತ್ತು ಗುಂಡಿಗಳಿಂದ ಹರಡಿಕೊಂಡಿವೆ. ಗಣಿ ತ್ಯಾಜ್ಯ, ಅದಿರು ಅರಿದಿರುವ ಕಲ್ಲುಗಳು, ನೀರಿನ ಹೊಂಡಗಳು, ಕುಲುಮೆಗಳು ಇತ್ಯಾದಿ ಕಂಡುಬಂದಿವೆ. ಪ್ರಮುಖ ತಾಮ್ರ (ಇತರ ಲೋಹಗಳೊಂದಿಗೆ) ಗಣಿಗಾರಿಕೆ ನಡೆದಿರುವ ಸ್ಥಳಗಳೆಂದರೆ ಅಗ್ನಿಗುಂಡಲಂ, ಜಂಗಮರಾಜುಪಲ್ಲೆ-ವರಿಕುಂಟ, ಬಂಡ್ಲಮೊಟ್ಟು, ನಲ್ಲಕೊಂಡ, ಧೂಕೊಂಡ, ಗಣಿ-ಕಲ್ವ ಮತ್ತು ಮೈಲಾರಂ.

ಕರ್ನಾಟಕದಲ್ಲಿ ಚಿತ್ರದುರ್ಗ, ಗುಲ್ಬರ್ಗ, ರಾಯಚೂರು, ಹಾಸನ, ಶಿವಮೊಗ್ಗ, ಉತ್ತರಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಹಸಿರು ಶಿಸ್ಟ್ ಶಿಲಾಪಟ್ಟಿಗಳಲ್ಲಿ ತಾಮ್ರದ ನಿಕ್ಷೇಪಗಳು ಹರಡಿಕೊಂಡಿವೆ. ಈ ಜಿಲ್ಲೆಗಳಲ್ಲಿ ಪ್ರಮುಖವಾದ ನಿಕ್ಷೇಪಗಳಿರುವ ಮತ್ತು ಗಣಿಗಾರಿಕೆ ನಡೆದಿರುವ ಸ್ಥಳಗಳೆಂದರೆ ಇಂಗಳಧಳು, ಕಲ್ಲೂರು, ಮಾಚನೂರು, ತಿಂಥಿಣಿ, ಕಲ್ಯಾಡಿ, ಆಲದಹಳ್ಳಿ, ಮೋತಿಮಕ್ಕಿ, ಕಳಸಾಪುರ, ಕೈಗಾ ಇತ್ಯಾದಿ.

(ಚಿತ್ರ: ಪ್ರಸ್ತುತ ನಡೆಯುತ್ತಿರುವ “ರಾಂಪುರ-ಅಗುಚಾ” ಸತು ಗಣಿಯ ಒಂದು ನೋಟ (ಎಚ್.ಜೆಡ್.ಎಲ್), ರಾಜಸ್ತಾನ.)

ಜಾರ್ಖಂಡ್ ರಾಜ್ಯದ ಸಿಂಘ್‌ಭೂಮ್ ಹಸಿರು ಶಿಸ್ಟ್ ಶಿಲಾಪಟ್ಟಿಯಲ್ಲಿರುವ ಜಮ್‌ಶೆಡ್‌ಪುರ್, ಖರ್ಷವಾನ್, ಸರೈಕೆಲಾ ಮತ್ತು ದಲ್‌ಭೂಮ್ ಪ್ರದೇಶಗಳಲ್ಲಿ ತಾಮ್ರ ನಿಕ್ಷೇಪಗಳಿವೆ. ಇಲ್ಲೆಲ್ಲ ಶ್ಯಾಫ್ಟ್‌ಗಳು, ಕುಲುಮೆಗಳು, ಹೊಂಡಗಳಿರುವ ಪ್ರಾಚೀನ ಗಣಿಗಾರಿಕೆ ಕುರುಹುಗಳು ಪತ್ತೆಯಾಗಿವೆ. ಸರೈಕೆಲಾ ಜಿಲ್ಲೆಯ ನಾರಾಯಣ್‌ಪುರದ ಹತ್ತಿರ ಇರುವ ತಮಾದುಂಗ್ರಿ ಬೆಟ್ಟದಲ್ಲಿ 12 ಹಳೆಯ ಶ್ಯಾಫ್ಟ್‌ಗಳು (60 ಅಡಿ ಆಳದವರೆಗೆ) ಕಂಡುಬಂದಿವೆ.

ಪ್ರಾಚೀನ ತಾಮ್ರ ಗಣಿಗಾರಿಕೆ ಚಟುವಟಿಕೆಗಳು ರೊಲಾಡಿಹ್, ಬಡಿಯಾ, ಧಲ್‌ಭಮ್ ಮತ್ತು ದುವಾಯಪುರಂನ ಧೋಬನಿ ಬೆಟ್ಟಗಳು ಮತ್ತು ಖಾಸ್ವಾನ್ ಪ್ರದೇಶಗಳಲ್ಲಿ ಗಲುದಿಹ್ ಮತ್ತು ರಾಗದಿಹ್ ಹತ್ತಿರವೂ ನಡೆದಿರುವುದಾಗಿ ತಿಳಿದುಬಂದಿದೆ. ಚಂದ್ರಬಾರು, ರಾಜದೋಹಾ, ರಾಖಾ, ಸಿದ್ಧೇಶ್ವರ, ಸುರ್ದಾ, ಲೌಕೇಸ್ರಾ ಇತರ ಪ್ರಮುಖ ತಾಮ್ರದ ಗಣಿಗಾರಿಕೆ ತಾಣಗಳಾಗಿವೆ. ಕೆಲವು ಹಳೆ ಗಣಿಗಳು ಭಂಕುರಾ ಮತ್ತು ಬರಗುಂದ ಸಮೀಪದ ಸಿಂಘ್‌ಭೂಮ್‌ನ ಪೂರ್ವ ಗಡಿಯಲ್ಲಿ ದೊಡ್ಡ ಶ್ಯಾಫ್ಟ್‌ಗಳು ಮತ್ತು ಹೊಂಡಗಳಿರುವ ಗಣಿಗಾರಿಕೆ ಕುರುಹುಗಳು ಕಂಡುಬಂದಿವೆ. ಪ್ರಸ್ತುತ ಮಧ್ಯಪ್ರದೇಶದಲ್ಲಿರುವ ಮಲಂಜ್‌ಖಂಡ್‌ನಲ್ಲಿ ದೊಡ್ಡ ತಾಮ್ರ ಗಣಿಗಾರಿಕೆ ನಡೆಯುತ್ತಿದೆ.

ಮಧ್ಯಪ್ರದೇಶದ ಬೇತುಲ್, ಕಟ್ನಿ ಮತ್ತು ಬಾಲಘಾಟ್ ಜಿಲ್ಲೆಗಳ ಅನೇಕ ಕಡೆಗಳಲ್ಲಿ ತಾಮ್ರ ಗಣಿಗಾರಿಕೆ ನಡೆದಿರುವುದು ಕಂಡುಬಂದಿದೆ. ಗುಂಗೇರಿಯಾ ಪ್ರದೇಶದಲ್ಲಿ ಸಂಗ್ರಹಿಸಿದ ವಿವರಗಳಿಂದ ಹೆಚ್ಚು ತಾಮ್ರ ಉತ್ಪಾದನೆಯಾಗಿರುವುದು ಬಾಲಘಾಟ್ ಗಣಿಗಳಿಂದ ಎಂದು ತಿಳಿದುಬರುತ್ತದೆ. ಛತ್ತೀಸ್‌ಗರ್ ತಾಮ್ರ ನಿಕ್ಷೇಪಗಳು ಮತ್ತು ಹಳೆ ಗಣಿಗಳು ಬಸ್ತಾರ್ ಜಿಲ್ಲೆಯ ಮಂಡತ್ರಿಕಾ, ನೇತಾನಾರ್, ಒಡೆನಾರ್, ಟೊಂಗ್ಸಾಲ್ ಡೋಂಗ್ರಿ, ಕೇಸರ್ಪಾಲ್ ಪ್ರದೇಶಗಳಲ್ಲಿ ಕಂಡುಬಂದಿವೆ.

ಉತ್ತರಾಂಚಲದ ಗರ್ವಾಲ್ ಹಿಮಾಲಯ ಪಟ್ಟಿಯಲ್ಲಿ ಪ್ರಾಚೀನ ತಾಮ್ರ ಗಣಿಗಾರಿಕೆಯ ಪುರಾವೆಗಳು ಅನೇಕ ಸ್ಥಳಗಳಲ್ಲಿ ಪತ್ತೆಯಾಗಿವೆ. ಇವುಗಳಲ್ಲಿ ಪ್ರಮುಖವಾದವೆಂದರೆ ಅಲ್ಮೋರಾ ಜಿಲ್ಲೆಯ ಚನ್ನಪಾಣಿ, ದೇವಲ್ಧರ್, ತಮಖಾನಿ, ಮತ್ತು ಥೇಲಾ; ಚಮೋಲಿ ಜಿಲ್ಲೆಯ ಬರ್ಮತಿಯ, ಧನ್ಪುರ, ಮಲಾರಿ, ಮೋಹನ್ಖಲ್, ರಾತುರಾ, ಲ್ಯಾಮೇರಿ, ದೋಬ್ರಿ ಮತ್ತು ಫೋಖ್ರಿ. ಪ್ರಮುಖ ದೋಬರಿ ಮತ್ತು ಧನ್ಫುರ ತಾಮ್ರ ಗಣಿಗಳು ದೇವಲಗಡ್ ಪ್ರದೇಶದಲ್ಲಿವೆ. ದೋಬರಿ ಗಣಿ ಪ್ರದ್ಯುಮಾನ್ ಷಾ ಆಡಳಿತದ (1779-1785) ಕಾಲದಲ್ಲಿ ಭೂಕಂಪನದಿಂದ ನಾಶವಾಗಿರುವುದಾಗಿ ದಾಖಲಾಗಿದೆ. ಲೋಭಾ ಪ್ರದೇಶದ ಅಗರಸೀರದಲ್ಲಿ ಒಂದು ತಾಮ್ರ ಗಣಿ ಇರುವುದು ಕಂಡುಬಂದಿದೆ. ಚೌರಿಯ ಗಣಿ ಮತ್ತು ಫೋಖಾರಿಯ ರಾಜ ಕಿ ಖಾನ್ ಪ್ರಸಿದ್ಧ ತಾಮ್ರದ ಗಣಿಗಳು. ಥಲ್‌ದಂಡ್ ತಾಲ್‌ಪುಂಗೇಲಾ ಮತ್ತು ಖರ್ನಾಗಳಲ್ಲಿ ತಾಮ್ರದ ಗಣಿಗಾರಿಕೆ ನಡೆದಿರುವ ಕುರುಹುಗಳು ದೊರಕಿವೆ.

(ಚಿತ್ರ: ಖೋ-ದರಿಬಾ ಗಣಿ ಕಿಟ್ಟ, ಅಲ್ವಾರ್ ಶಿಸ್ಟ್ ಪಟ್ಟಿ, ರಾಜಸ್ತಾನ (ಲಾ,2011).

(ಚಿತ್ರ: ಸಿಂಗಾನ ಗಣಿ ಕಿಟ್ಟ, ಖೇತ್ರಿ ಶಿಸ್ಟ್ ಪಟ್ಟಿ, ರಾಜಸ್ತಾನ (ಲಾ,2011)

ಮಹಾರಾಷ್ಟ್ರದ ಭಂಡಾರ, ಚಂದ್ರಾಪುರ, ಗಡ್ಚಿರೋಲಿ ಮತ್ತು ನಾಗ್ಪುರ ಜಿಲ್ಲೆಗಳ ಹಸಿರು ಶಿಲಾಪಟ್ಟಿಗಳಲ್ಲಿ ಅನೇಕ ಕಡೆ ತಾಮ್ರ ಗಣಿಗಾರಿಕೆ ನಡೆದಿರುವ ಕುರುಹುಗಳು ಇವೆ. ಇವುಗಳಲ್ಲಿ ಹಳೆ ಶ್ಯಾಫ್ಟ್ಗಳು, ಗಣಿ ತ್ಯಾಜ್ಯ ಮತ್ತು ಕಿಟ್ಟದ ರಾಶಿಗಳು ಬಿದ್ದಿದೆ.

ಸಿಂಧೂ ನಾಗರಿಕತೆ ತೊಟ್ಟಿಲುಗಳಲ್ಲಿ ಕಲ್ಲು, ಜೇಡಿ-ಮಣ್ಣು ಲೋಹಗಳು ಮತ್ತು ಮೂಳೆಗಳಲ್ಲಿ ತಯಾರು ಮಾಡಿದ ಚಿಪ್ಪು ಕಲಾಕೃತಿಗಳು ದೊರಕಿವೆ. ಅಂಬಾಮಾತಾ, ಗುಜರಾತ್ ರಾಜ್ಯದ ಮಧ್ಯಕಾಲೀನ ಮುಖ್ಯ ತಾಮ್ರ ನಿಕ್ಷೇಪವಾಗಿದೆ. ಸಿಕ್ಕಿಂ ರಾಜ್ಯದಲ್ಲಿ ಮಧ್ಯಕಾಲೀನ ಕಾಲದಲ್ಲಿ ನಡೆದಿರುವ ಗಣಿಗಾರಿಕೆ ಪ್ರದೇಶಗಳೆಂದರೆ ಭೋಟಾಂಗ್, ರಂಗ್ಪೋ ಮತ್ತು ದಿಕ್ಚು. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಅನೇಕ ಹಳೆಯ ತಾಮ್ರ ಗಣಿಗಳು ಕಂಡುಬಂದಿವೆ.

(ಚಿತ್ರ: ಜಗದುಮ್ ಹಳೆ ತಾಮ್ರ ಗಣಿ, ಸಿಕ್ಕಂ ಮತ್ತು ಚಾರ್ಗಾಂವ್ ಹಳೆ ತಾಮ್ರ ಗಣಿ, ಕಿನ್ನೌರ್ ಹಿಮಾಚಲ ಪ್ರದೇಶ (ಲಾ, 2011).

ಜಮ್ಮು ಮತ್ತು ಕಾಶ್ಮೀರದಲ್ಲಿ ಈಶ್ಮಾಕಮ್ ಬಳಿಯ ಹಪಟ್ನಾರ್ (ಶುಮಹಾಲ್) ಪ್ರದೇಶದಲ್ಲಿ 60ಕ್ಕಿಂತ ಹೆಚ್ಚು ಸಂಖ್ಯೆಯ ಆಳದ ಹಳೆಯ ಕ್ವಾರಿಗಳು, ಹೊಂಡಗಳು, ಇಳಿಜಾರು ಶ್ಯಾಫ್ಟ್‌ಗಳು ಮತ್ತು ಭೂಗತ ಕೆಲಸಗಳು ನಡೆದಿರುವ ತಾಮ್ರ ಗಣಿಗಾರಿಕೆ ಕಂಡುಬಂದಿದೆ (ಮಿಡ್ಲಮಿಸ್, 1929). ಪುರಾತನ ತಾಮ್ರದ ಗಣಿಗಾರಿಕೆ ಪ್ರಾಚೀನ ಸ್ವರೂಪದ್ದಾಗಿದೆ. ಇಲ್ಲಿನ ಹಳೆಯ ಗಣಿಗಳಲ್ಲಿ ಕೆಲವು ಸ್ಥಳಗಳನ್ನು ಹೊರತುಪಡಿಸಿ ಗಟ್ಟಿ ಶಿಲೆಯಲ್ಲೆ ಸ್ತಂಭಗಳನ್ನು ಬೆಂಬಲವಾಗಿ ಬಳಸಿಕೊಳ್ಳಲಾಗಿದೆ.

ಆದರೆ ಶ್ಯಾಫ್ಟ್‌ಗಳು ಕೆಲವು ಕಡೆ ಬಾವಿಗಳಂತೆ ಕಾಣುತ್ತಿದ್ದು ಕೆಲವು ಕಡೆ ಮೆಟ್ಟಿಲುಗಳನ್ನು ಇಡಲಾಗಿದೆ. ಮೆಟ್ಟಿಲುಗಳ ಮೂಲಕ ನೀರು ಮತ್ತು ಅದಿರನ್ನು ಹೊರಕ್ಕೆ ತರಲಾಗುತ್ತಿತ್ತು. ರಾಜಸ್ತಾನದ ರಾಜ್‌ಪುರ-ದರಿಬಾ ಹಳೆಯ ಗಣಿಗಳು ಸುಮಾರು 200 ಮೀಟರುಗಳ ಆಳದವರೆಗೂ ಇಳಿದಿವೆ.

ಭಾರತದ ಹಲವಾರು ಸ್ಥಳಗಳಲ್ಲಿ ಕಂಡುಬರುವ ಹಿತ್ತಾಳೆ ಮತ್ತು ಕಂಚಿನ ಕಲಾಕೃತಿಗಳು ಲೋಹಶಾಸ್ತ್ರದ ಸ್ಥಳೀಯ ಜ್ಞಾನವನ್ನು ಸೂಚಿಸುತ್ತದೆ. ಅದಿರನ್ನು ಗಣಿ ಮಾಡಿ ಹೊರತೆಗೆಯುವುದು, ಲೋಹ ಎರಕ ಹೊಯ್ಯುವುದು, ಕುಲುಮೆಗಳು, ಮಿಶ್ರಲೋಹಗಳ ತಯಾರಿಕೆ ಇತ್ಯಾದಿ ಅತ್ಯಂತ ನುರಿತ ಕರಕುಶಲತೆಯಿಂದ ತಯಾರು ಮಾಡಿದ ಬೃಹತ್ ತಾಮ್ರ, ಹಿತ್ತಾಳೆ ಮತ್ತು ಕಂಚಿನ ಕಲಾಕೃತಿಗಳು ಭಾರತೀಯರ ಸೃಜನಶೀಲತೆಯನ್ನು ತೊರಿಸುತ್ತದೆ. ಇದೆಲ್ಲ ಹೆಚ್ಚಾಗಿ ಅಭಿವೃದ್ಧಿಗೊಂಡಿದ್ದು ಮಧ್ಯಕಾಲೀನ ಅವಧಿಯಲ್ಲಿ (ಕ್ರಾಡಾಕ್, 2015).

ಭೂಪದರಗಳಲ್ಲಿ ದೊರಕುವ ತಾಮ್ರ: ನಮ್ಮ ಭೂಮಿಯ ಮೇಲಿನ ಖನಿಜ/ಲೋಹ ಸ್ತರಗಳನ್ನು ಹೊಂದಿರುವ ಹೊರಪದರು ಕಾಲಾನುಕ್ರಮದಲ್ಲಿ ಗಟ್ಟಿಗೊಳಿಸಿರುವ ಮತ್ತು ಘನೀಕರಣಗೊಂಡಿರುವ ಜೀವ ಪ್ರಕ್ರಿಯೆಗಳು (ಜೀವ ವಿಕಾಸ) ನಡೆದಿರುವುದನ್ನು ಸೂಚಿಸುತ್ತದೆ. ನೀರು, ಗಾಳಿ ಮತ್ತು ಶಾಖಕ್ಕೆ ಸಂಬಂಧಿಸಿದಂತೆ, ಜೀವಪ್ರಕ್ರಿಯೆಗಳಿಗೆ ಸಂಬಂಧಿಸಿದ ಖನಿಜ ನಿಕ್ಷೇಪಗಳು ಭೂಮಿಯಲ್ಲಿ ರೂಪುಗೊಂಡಿವೆ. ಭೂಮಿಯ ಹೊರಪದರಿನ ಆಳದಲ್ಲಿ ಖನಿಜ ವಲಯದಲ್ಲಿ ಕೆಲಸ ಮಾಡುವ ಮತ್ತು ರೂಪುಗೊಳ್ಳುವ ಶಕ್ತಿ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ತಾಮ್ರದ ಅಂಶವನ್ನು ಎಲ್ಲಾ ರೀತಿಯ ಶಿಲಾರಚನೆಗಳಲ್ಲಿ, ಮಣ್ಣಿನಲ್ಲಿ ಮತ್ತು ಸಸ್ಯಗಳಲ್ಲೂ ಕಾಣಬಹುದು. ಮಣ್ಣಿನಲ್ಲಿ ತಾಮ್ರದ ಕೊರತೆಯಾದರೆ ಕ್ಲೋರೋಪಿಲ್ ಉತ್ಪಾದನೆಯಾಗದೆ ಎಲೆಗಳು ನಶಿಸಿ, ಗಿಡಗಳ ಬೆಳವಣಿಗೆ ಕುಂಟಿತಗೊಳ್ಳುತ್ತದೆ.

ತಾಮ್ರವು ಸಮೃದ್ಧವಾದ ಸಂಯುಕ್ತಗಳನ್ನು ರೂಪಿಸುತ್ತದೆ. ಸಾಮಾನ್ಯವಾಗಿ ಆಕ್ಸಿಡೀಕರಣ ಅಥವಾ ಉತ್ಕರ್ಷಣ ಸ್ಥಿತಿಗಳೊಂದಿಗೆ +1 ಮತ್ತು +2 ಇವುಗಳನ್ನು ಕ್ರಮವಾಗಿ ಕಪ್ರೂಸ್ ಮತ್ತು ಕ್ಯುಪ್ರಿಕ್ ಎಂದು ಕರೆಯಲಾಗುತ್ತದೆ. ತಾಮ್ರದ ಸಂಯುಕ್ತಗಳು, ಸಾವಯವ ಸಂಕೀರ್ಣಗಳು ಅಥವಾ ಆರ್ಗನೋಮೆಟಾಲಿಕ್ ಗಳಾಗಿರಲಿ, ಹಲವಾರು ರಾಸಾಯನಿಕ ಮತ್ತು ಜೈವಿಕ ಪ್ರಕ್ರಿಯೆಗಳನ್ನು ಉತ್ತೇಜಿಸುತ್ತದೆ ಅಥವಾ ವೇಗವರ್ಧಿತಗೊಳಿಸುತ್ತದೆ. ಇತರ ಅಂಶಗಳಂತೆ ತಾಮ್ರದ ಸರಳ ಸಂಯುಕ್ತಗಳು ಬೈನರಿ ಸಂಯುಕ್ತಗಳಾಗಿವೆ. ಚಿನ್ನ, ಬೆಳ್ಳಿ, ಸೀಸ-ಸತುವಿನಂತೆ ತಾಮ್ರವನ್ನೂ ಸಹ ತೆರೆದ ಮತ್ತು ಭೂಗತ ಗಣಿಗಳಿಂದ ತೆಗೆಯಲಾಗುತ್ತದೆ.

(ಚಿತ್ರ : ಶಿಥಿಲೀಕರಣಗೊಂಡಿರುವ ತಾಮ್ರ ಅದಿರು (ಮಾಲಾಕೈಟ್)

About The Author

ಡಾ. ಎಂ. ವೆಂಕಟಸ್ವಾಮಿ

ಡಾ. ವೆಂಕಟಸ್ವಾಮಿ ಇಂದಿನ ಕೆ.ಜಿ.ಎಫ್. ತಾಲ್ಲೂಕು, ಕೋಲಾರ ಜಿಲ್ಲೆಯವರು. ಪ್ರ.ದ.ಕಾಲೇಜ್‌ನಲ್ಲಿ ಬಿ.ಎಸ್ಸಿ,. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ(ಭೂವಿಜ್ಞಾನ) ಎಂ.ಎಸ್ಸಿ. ಮುಗಿಸಿದ್ದಾರೆ. ೧೯೮೫ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ(ಯು.ಪಿ.ಎಸ್.ಸಿ. ಮೂಲಕ) ಸೇರಿಕೊಂಡು ೨೦೧೫ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಉಪ ಮಹಾನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದಾರೆ. "ಕೋಲಾರ ಚಿನ್ನದ ಗಣಿಗಳು" ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್. ದೊರಕಿದೆ. ಕಳೆದ ನಾಲ್ಕೂವರೆ ದಶಕಗಳಿಂದಲೂ ಇವರು ಸಾಹಿತ್ಯಸೇವೆಯಲ್ಲಿ ತೊಡಗಿಕೊಂಡಿದ್ದು, ಈಶಾನ್ಯ ರಾಜ್ಯಗಳ ಸಾಹಿತ್ಯವನ್ನು ಕನ್ನಡಕ್ಕೆ ಮೊದಲು ತಂದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಇವರ ಕೃತಿಗಳು ನಾಡಿನ ಪ್ರಮುಖ ಪ್ರಕಾಶನಗಳಲ್ಲಿ ಒಟ್ಟು ೩೭ ಕೃತಿಗಳು ಪ್ರಕಟಗೊಂಡಿವೆ. ೨೦೧೯ರಲ್ಲಿ ಬಂಗಾರಪೇಟೆ ತಾಲ್ಲೂಕಿನ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯನ್ನು ವಹಿಸಿದ್ದರು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ