Advertisement
ಲಕ್ಷ್ಮಣ ಶರೆಗಾರ ಬರೆದ ಈ ಭಾನುವಾರದ ಕತೆ

ಲಕ್ಷ್ಮಣ ಶರೆಗಾರ ಬರೆದ ಈ ಭಾನುವಾರದ ಕತೆ

ಇಲ್ಲಿಯವರೆಗೂ ನಿತ್ಯ ದೀಪ ಬೆಳಗುತ್ತಿದ್ದೆ.. ಅವನು ನನ್ನದೇ ಮನೆಯ ದಾರಿಯಲಿರುವನೆಂದು.. ದಿನವೂ ಬಾಗಿಲ ತುದಿಗೆ ನಿಂತು ಕಾಯುತ್ತಿದ್ದೆ, ಇನ್ನೇನು ಅವನು ಬಂದೇ ಬಿಡುವನೆಂದು.. ಆದರೇನು ಮಾಡುವುದು.. ಅಗಲಿಕೆಯ ನೋವುಗಳು ಎದೆಗೆ ಚೂರಿಯಾಗಿ ಇರಿದವು.. ಈ ಅಧೂರಿ ಪ್ರೇಮ್ ಕಹಾನಿ ಇದೇ ಜನುಮಕೆ ಮುಗಿದುಬಿಡಲಿ.. ಬೇರೇನೂ ಬಯಸಿರಲಿಲ್ಲ ನಾನು .. ನಮ್ಮದಾದ ಈ ಮುಹೊಬ್ಬತ್ತ್ ಹಾಗೆಯೇ ಇರಲೆಂದು ಹರಕೆ ಹೊತ್ತಿದ್ದೆ.. ಆ ಫಕೀರ ಜೋಡಿ ಸಲಾಮತ್ ರಹೇ ಎಂದು ಕೂಡ ಹರಸಿದ್ದನಲ್ಲ ಅವತ್ತು.. ಹಾಗೆ ಹರಸಿ ತಾಯತ ಕಟ್ಟಿದ್ದನಲ್ಲ ನಿನಗೆ.. ಎಲ್ಲಿ ಹರಿದು ಹಾಕಿದೆ ಆ ತಾಯತವನ್ನು.. ತಾಯತದ ಬದಲಿಗೆ ಬಂಗಾರದ ಕೈ ಕೊಳ  ಹಾಕಿಕೊಂಡಿರುವೆಯಲ್ಲ..
ಲಕ್ಷ್ಮಣ ಶರೆಗಾರ ಬರೆದ ಈ ಭಾನುವಾರದ ಕತೆ “ಖುಧಾ ಹಾಫೀಸ್”

ಇಬ್ಬರ ನಡುವೆ ಸಮೀಪದ ಅಂತರ..
ಅದೇ ಮೈ ವಾಸನೆ ಈಗಿಲ್ಲ ನಿನಗೆ..
ವಿದಾಯ ಕೂಡ ಹೇಳದೆ ಹೋದವರು ನಾವುಗಳು..

ನಿನ್ನದೇ ಹೆಸರಿಗೆ ನನ್ನ ಇಡೀ ಬದುಕನೆ ಬರೆದು ಕೊಟ್ಟುಬಿಟ್ಟಿದ್ದೆನಲ್ಲ… ಆಮೇಲೇನಾಯಿತು.. ಏಕಾಂತದ ಜಿಂದಗಿಯನ್ನು ಸುಖಾ ಸುಮ್ಮನೆ ಅನುಭವಿಸಿಬಿಟ್ಟೆನಲ್ಲ..

ನಿನ್ನ ಮೇಲೆ ಈ ಮೊಹಬ್ಬತ್ ಎಂಬುವುದು ಆದಮೇಲೆ ಈ ಬದುಕಿನಲ್ಲಿ ಮತ್ತೊಂದು ಪ್ರೇಮ ಹುಟ್ಟಲೇ ಇಲ್ಲ..
ನಿನ್ನ ತಲುಪಿಯಾದ ಮೇಲೆ ನಾನು ಮತ್ತೆ ನಿನ್ನಿಂದ ಮುಂದೆ ಪಯಣಿಸಲೇ ಇಲ್ಲ..

ಪ್ರೇಮವೆಂದರೆ ಅಗಲಿಕೆ ನಾ…

ಯಾರದೋ ಮೆಹಫಿಲ್‌ನಲ್ಲಿ ಎದುರು ಬದುರಾಗುತ್ತೇವೆ…

ನೋಡಿಯೂ ನೋಡದವರಂತೆ ನಟಿಸುತ್ತೇವೆ…

ಪರದೆಯ ಹಿಂದೆ ನಟಿಸಲು ಬಾರದೆ ಬಾರಿ, ಬಾರಿ ಸೋಲುತ್ತೇವೆ…

ಸುತ್ತಲೂ ಇರುವ ಪರಿಚಿತರೊಂದಿಗೆ ಒಬ್ಬರಿಗೆ ಇನ್ನೊಬ್ಬರು ಅಪರಿಚಿತದವರಾಗಿ ತೋರಿಸುವ ಆಟ ನಮ್ಮನ್ನು ದಣಿಸುತ್ತದೆ…

ಅವನು ನನ್ನೊಂದಿಗೆ ಅಂತರವನ್ನು ಕಾಯ್ದುಕೊಳ್ಳಲು ಯತ್ನಿಸುವಾಗ ಥಟ್ಟನೆ ಅನ್ನಿಸಿಬಿಡುವುದು: ಅವನೊಳಗಿನ ಪ್ರಿಯತಮ ಅದ್ಯಾವಾಗ ಸತ್ತುಹೋದನೋ… ಎಂದು.

ಜಿಂದಗೀಭರ್ ಜೊತೆಗೆ ನಡೆಯುವಿ ಎಂಬ ಉಮ್ಮೀದಿತ್ತು…

ನಮ್ಮ ಮುಂದೆ ದಾರಿ ಇತ್ತು…

ನಾನು ನಡೆಯುತ್ತಲೇ ಇದ್ದೆ…

ನೀನೇ ಅದೇಕೋ ಹೇಳದೆ ಕೇಳದೆ ನಿಂತೇಹೋದೆ…

ಹಿಂತಿರುಗಿ ನೋಡುವಷ್ಟರಲ್ಲಿ ನೀನು ಬಹಳ ದೂರ ಉಳಿದುಬಿಟ್ಟಿದ್ದಿ… ಮಜಬೂರಿಯ ಭಾರ ಹೊತ್ತ ನೀನು ನಡೆಯಲು ಬಾರದಷ್ಟು ವಜ್ಜೆ ಹೊತ್ತುಕೊಂಡುಬಿಟ್ಟಿದ್ದಿ.. ಹೀಗಾಗಿ ಮುಂದೆ ನಡೆಯಲು ನಿನಗೆ ಆಗಲೇ ಇಲ್ಲ…

ಏನೆಂದರೆ: ಒಡೆದು ಹೋದ ಪ್ರೇಮ ಜೊತೆಯಲ್ಲಿಟ್ಟುಕೊಂಡು ಬಹಳ ದೂರದವರೆಗೂ ನಡೆಯುವುದು ಬೇಹಿಸಾಬ್ ದರ್ದ್ ಕೊಡುತ್ತದೆ ಎಂಬುವುದನ್ನು ನೀನು ಅರಿಯದವನಾ…

ದಿನ ರಾತ್ರಿ ಏಕಾಂತದಲ್ಲಿ ಗಾಳಿಗೆ ಕಿಟಕಿ ಪರದೆಗಳು ಅಲುಗಿದರೆ ಹೊರಗೆ ಬಂದನೇನು ಅವನೆಂದು ಅನ್ನಿಸಿಬಿಡುತ್ತಿತ್ತು…

ಈಗ ನೀನು ನನ್ನೊಂದಿಗೆ ಇದ್ದಿದ್ದರೆ ಹೇಗಿರುತ್ತಿತ್ತು… ಹಗಲುಗನಸುಗಳಿಗೆ ರೆಕ್ಕೆ ಪುಕ್ಕ ಬರಿಸಿ ಹಾರಲು ಬಿಟ್ಟಿರುತ್ತಿದ್ದೆವು.. ನೀಲಾಗಸದ ಕೆಳಗೆ ಕುಳಿತು ನಕ್ಷತ್ರಗಳನ್ನು ಎಣಿಸಿರುತ್ತಿದ್ದೆವು… ನನ್ನ ಮಿದುವೆದೆಯಲ್ಲಿ ನಿನ್ನ ಮುಖ ಇರ್ತಿತ್ತು.. ನನ್ನ ಬಾಹುಗಳಲ್ಲಿ ನಿನ್ನನ್ನು ಬಂಧಿಸಿರುತ್ತಿದ್ದೆ.. ಪ್ರೇಮದ ಒಂದೊಂದೇ ಹನಿಗಳನ್ನು ಗುಟುಕು ಗುಟುಕಾಗಿ ಕುಡಿಸಿರುತ್ತಿದ್ದೆ.. ಜೀವಬರಿಸಿಕೊಂಡ ನೀನು ನನ್ನದೆಯಲ್ಲಿ ಉಸಿರಾಡುತ್ತಿದ್ದರೆ ಸ್ವರ್ಗ ಮೂರೇ ಗೇಣುದ್ದದಲ್ಲಿ…

ಎಲ್ಲಿ ಹೋದವು ಆ ದಿನಗಳು…

ನಿನ್ನ ಇಂತಜಾರ್ ಈಗ ಇಲ್ಲವೆಂದರೆ ನನಗೆಯೇ ನಾನು ಸುಳ್ಳು ಹೇಳಿಕೊಂಡಂತಾಗುತ್ತದೆ…

ನೂರು ತಕರಾರುಗಳನ್ನು ಹೇಳಿಕೊಂಡು ಮುಖ ತಿರುವಿದ್ದರೆ ನಾನು ಹಗುರವಾಗಿರುತ್ತಿದ್ದೆ.. ಆದರೆ ಹಾಗಾಗಲಿಲ್ಲ.. ನನ್ನದು ತಕರಾರುಗಳ ಆಚೆಗಿನ ಪ್ರೇಮವಾಗಿತ್ತು.. ನಾನು ನಿನ್ನನ್ನು ಇದ್ದ ಹಾಗೆಯೇ ಒಪ್ಪಿಕೊಂಡಿದ್ದೆ.. ನಿನ್ನೊಳಗಿನ  ಅತೃಪ್ತಿಗಳ ಒಟ್ಟು ಮೊತ್ತ ನಾನಾಗಿದ್ದೇನೆಂದು ನಂಗೊತ್ತಿತ್ತು.. ನೀನು ಬಾಯಿ ಬಿಟ್ಟು ಹೇಳಲಾಗದ್ದನ್ನು ನನ್ನೊಳಗೆ ಹುಡುಕುತ್ತಿದ್ದೆ.. ಹಾಗೆ ಹುಡುಕುತ್ತ, ಹುಡುಕುತ್ತ ಎಡವಿ ಬೀಳುತ್ತಿದ್ದೆ.. ನಾನಿಲ್ಲದೆ ಅವನು ತನ್ನನ್ನು ತಾನು ಅದು ಹೇಗೆ ಸಂಭಾಳಿಸಿಕೊಳ್ಳುತ್ತಾನೋ ಎಂದೆಲ್ಲ ನನಗೆ ದಿಗಿಲಾಗುತ್ತಿತ್ತು..  ಆಗ ನಾನಂದುಕೊಂಡಿದ್ದು ಈಗ ನಿಜವೇ ಆಗಿದೆ…

ಅವನಿಗೆ ತನ್ನನ್ನು ತಾನು ಸಂಭಾಳಿಸಿಕೊಳ್ಳಲು ಆಗುತ್ತಲೇ ಇಲ್ಲ…

ಈ ಮೆಹಫಿಲ್‌ನಲ್ಲಿ ಯಾರೊಂದಿಗೊ ಸಂಬಂಧವಿಲ್ಲದ ಅದೇನನ್ನೋ ಮಾತನಾಡುತ್ತಾನೆ… ಹಾಗೆಲ್ಲ ಮಾತನಾಡುವಾಗ ತಡವರಿಸುತ್ತಾನೆ… ತನ್ನ ಮಾತಿಗೆ ತಾನೇ ಅರ್ಥ ಹುಡುಕುತ್ತಾನೆ, ಅಲ್ಲೆಲ್ಲೋ ಗೋಡೆಗಾಣಿಸಿದ ಕನ್ನಡಿಯಲ್ಲಿ ತನ್ನ ಮುಖದ ಚಹರೆ ಅರಸುತ್ತಾನೆ… ಹಾಗೆ ನೋಡಿದ ಕನ್ನಡಿಯ ಮೈಯ ಒಳಗೆ ನನ್ನ ಇರುವಿಕೆಯನ್ನು ನೋಡಲು ತವಕಿಸುತ್ತಾನೆ… ನಿಂತ ನಿಂತಲ್ಲಿಯೇ ಎಡವುತ್ತಾನೆ… ತನ್ನನ್ನೇ  ಸಂಭಾಳಿಸಿಕೊಳ್ಳಲು ಕೈ ಚಾಚುತ್ತಾನೆ.. ಹಾಗವನು ಕೈ ಚಾಚಿದ್ದು ನನಗೆಯೇ ಅನ್ನುವಂತಾಗಿ ಓಡಿಹೋಗಿ ಅವನ ಕೈ ಹಿಡಿದುಕೊಳ್ಳಬೇಕೆಂದುಕೊಳ್ಳುತ್ತೇನೆ.. ಆದರೇನು ಮಾಡುವುದು ಇಬ್ಬರ ನಡುವೆ ಹಲವು ನೆರಳುಗಳಿವೆ… ಆಗಂದುಕೊಳ್ಳುತ್ತೇನೆ: ನೇರವಾಗಿ ನನ್ನ ಕಡೆಗೆಯೇ ಕೈ ಚಾಚದಿರುವವ ಅವನೊಳಗಿನ ಮಜಬೂರಿಗೆ ನಾನು ಮರುಕಪಡುತ್ತೇನೆ..

ಯಾರದೊ ಮೆಹಫಿಲ್ನಲ್ಲಿ ಮುಖ ತಿರುವಿ ಅಪರಿಚಿತರಾಗುಳಿದೆವು.. ಬತ್ತಲೆಯಾಗಿ ನಿಂತ ಕನ್ನಡಿಯಲ್ಲಿ ಒಬ್ಬರ ಮುಖ ಇನ್ನೊಬ್ಬರು ಅರಸಿದೆವು…

ಹೀಗೆ ನೀನು ವಿನಾಕಾರಣ ಬೇಗುದಿಗೆ ಒಳಗಾದರೆ ಹೇಗೆ ಹೇಳು… ಮೆಹಫಿಲ್‌ನಲ್ಲಿ ಎಲ್ಲರ ಕಣ್ಣು ನಮ್ಮ ಮೇಲೆ…. ಜಗತ್ತಿಗೆ ಎಲ್ಲ ಗೊತ್ತಿದೆ… ಮುಖಾಮುಖಿಯನ್ನು ತಪ್ಪಿಸಿ ಅಪರಿಚಿತ ಆಗಿ ಉಳಿಯುವ ಆಟ ನಿನಗೆ ಆಡಲು ಬಾರದು ಗೆಳೆಯ..

*****

ನಿನ್ನ ಮೌನದ ಅಲ್ವಿದಾ ನನ್ನೊಳಗೊಂದು ಭರಿಸಲಾಗದ ಥಣ್ಣಗಿನ ಖಾಮೋಷಿ ಉಳಿಸಿದೆ..

ಮೌನದ ಸದ್ದು ಅದೆಷ್ಟೊಂದು ದೊಡ್ಡದು ಅಂತ ನೀನು ಸದ್ದಿಲ್ಲದೆ ನಡೆದು ಹೋದ ಮೇಲೆ ಕೇಳಿಸಿದ್ದು..

ಜಗದ ಕಣ್ಣಿನಲ್ಲಿ ವಿದಾಯ ಹೇಳಿದವಳು ನಾನಾಗಿರಲಿಲ್ಲ… ಈಗಲೂ ನಿನ್ನನ್ನು ವಿಧಿಯ ಆಟದ ದಾಳ ಎಂದು ಬಣ್ಣಿಸಲಾಗುತ್ತಿರುವುದಕ್ಕೆ ಏನು ಹೇಳಲಿ…

ಹೇಳಲೆ: ನೀನು ತಿರಸ್ಕರಿಸಿ ಹೋಗಿದ್ದು ನನ್ನ ಪ್ರೇಮವಾಗಿರಲಿಲ್ಲ… ನಿನ್ನನ್ನೇ ನೀನು ತಿರಸ್ಕರಿಸಿಕೊಂಡು ಹೋದವನು ನನ್ನ ಹೊರತಾಗಿ ಅದೇನನ್ನ ಪಡೆದುಕೊಂಡಿದ್ದೆ… ಕಾಲನ ಉತ್ತರ ತಡವಾಗಿಯಾದರೂ ನಿನಗೂ ತಿಳಿದಾಗಿದೆ..

ದಿನ ರಾತ್ರಿಯಲ್ಲಿ ಏಕಾಂತದಲ್ಲಿ ಈಗಲೂ ನೀನು ಮದಿರೆಯ ಹನಿಗಳನ್ನು ಗುಟುಕರಿಸುತ್ತಿರುವಾಗ ನಿನಗೆ ನಾನಲ್ಲದೆ ಮತ್ತೇನೂ ನೆನಪಾಗುವುದಿಲ್ಲವೆಂದು ನನಗೆ ಗೊತ್ತಿದೆ… ಅದೇ ಕಾರಣಕ್ಕಾಗಿ: ನೀನು ನಿಲ್ಲಿಸಿ ಹೋದಲ್ಲಿಯೇ ಈಗಲೂ ನಾನು ಅಲ್ಲಿಯೇ ನಿಂತಿರುವೆನೆಂದು ಹೇಳಿದರೆ ನೀನು ನಂಬಲೇಬೇಕು… ಹಿಂದೆ ಹೋಗಲಾರದಷ್ಟು ಮುಂದೆ ಬಂದುಬಿಟ್ಟಿದ್ದೆ.. ಹೀಗಾಗಿ ನಾನು ನೀನು ನಿಲ್ಲಿಸಿ ಹೋದಲ್ಲಿ ಇನ್ನೂ ನಿಂತೇ ಇದ್ದೇನೆ…

ಶಿಶಿರ ಇನ್ನೂ ದೂರವಿತ್ತು… ಒಣಗಿದ ಎಲೆಗಳಂತೆ ಒಂದೊಂದೇ ಹಗಲುಗನಸುಗಳು ಕಳಚಿ ಬೀಳುತಲಿದ್ದವು.. ಇಬ್ಬರ ನಡುವೆ ಒಣಗಿದ ಎಲೆಯೊಂದು ಕಳಚಿ ಬಿದ್ದ ಸದ್ದು ದೊಡ್ಡದೇ ಆಗಿತ್ತು… ಹಾಗೆ ಒಂದೊಂದಾಗಿ ಕಳಚಿ ಬಿದ್ದ ಯಾವ ಕನಸುಗಳನ್ನೂ ನಾನು ಗುಡಿಸಲು ಹೋಗಲಿಲ್ಲ… ಏಕಾಏಕಿ ಇಬ್ಬರ ನಡುವಿನ ಋತುಗಳು ಹಿಂದು ಮುಂದಾದವು… ಕಡಲ ನಡುವೆ ಎದ್ದ ಉಬ್ಬರಕ್ಕೆ ದಡದ ಎದೆಯು ನಲುಗಿತು… ಕಿನಾರೆಯಲ್ಲಿ ಇಬ್ಬರೂ ಕೂಡಿ ಕಟ್ಟಿದ್ದ ಬೆಚ್ಚನೆಯ ಮರಳ ಗೂಡಿತ್ತು…  ಸುನಾಮಿಯ ಹೊಟ್ಟೆಗೆ ಮರಳ ಗೂಡು ಈಡಾಗುವುದಿಲ್ಲವೆಂದು ನನಗೆ ಗೊತ್ತಿತ್ತು.. ನಾನು ಏನನ್ನೂ ರಕ್ಷಿಸಿ ಇಟ್ಟುಕೊಳ್ಳಲು ಹೋಗಲಿಲ್ಲ… ಬಂದುದನ್ನು ಎದುರಿಸಲು ಕೂಡ ಸಿದ್ಧತೆ ಮಾಡಿಕೊಳ್ಳಲಿಲ್ಲ..

ಮೇಹಫಿಲ್ಲನ್ನು ಇನ್ನಷ್ಟು ಖಳೆಗಟ್ಟಿಸಲು ಒಂದು ಮೂಲೆಯಲ್ಲಿಂದ ಸಂಗೀತ, ಹಾಡು ಅಂತೆಲ್ಲ ಶುರುವಾಗುತ್ತದೆ..

ಮೇರಿ ಕಿಸ್ಮತ್ ಮೆ ತು ನಂಹೀ ಶಾಯದ್…

..ಶುರುವಾದ ಹಾಡಿನ ಸಮೀಪ ಸರಿದು ನಿಲ್ಲುತ್ತೇನೆ… ಯಾಕೋ ಹಾಡು ತೀರ ಆಪ್ತ ಅನ್ನಿಸಿ ಆರ್ದ್ರಗೊಳ್ಳುವುದಾಗುತ್ತದೆ…

ಯಾರು ಹೇಳುತ್ತಾರೆ ಅವನ ಹೃದಯದಲ್ಲಿ ಈಗಲೂ  ಮೊಹಬ್ಬತ್ ಇಲ್ಲವೆಂದು.. ಅಫಸೋಸ್ ಏನೆಂದರೆ ಈಗವನು ರಿವಾಜಿನಲ್ಲಿ ಬಂದಿಯಾಗಿದ್ದಾನೆ.. ಹಾಗೆ ಬಂದಿಯಾದವನ ಒಳಗಿನ ಮೊಹಬ್ಬತ್ ತನ್ನ ರೆಕ್ಕೆಗಳನ್ನು ಫಡ ಫಡಿಸುವುದೇ ಇಲ್ಲ…

ಸೋರುವ ಸೂರಿನ ಕೆಳಗೆ ಇದ್ದುಕೊಂಡು ಮಳೆಯ ಮೇಲೆ ಸಿಖಾಯುತ್ ಎಂಥದು… ಹೇ ಖುದಾ…  ನನ್ನ ಮೇಲೆ ಅದೆಂಥ ದ್ವೇಷ ನಿನ್ನದು… ದಣಿದಿದ್ದೇನೆ… ಒಂದಿಷ್ಟು ಕರುಣೆ ದಯಪಾಲಿಸು…

ನಿನ್ನೊಂದಿಗೆ ಓಡಿ ಬರಲು ನಾನಿನ್ನೂ ಒಂಟಿ ಕಾಲಿನಲ್ಲಿ ನಿಂತಿದ್ದೇನೆಂದು ಇಲ್ಲಿ ಚೀರಿ ಹೇಳಲೇನು..

ಮೆಹಬೂಬಾ ಆಗಿ ಅಲ್ಲವಾದರೂ ಸರಿಯೇ ನಾನು ಇಟ್ಟುಕೊಂಡವಳು ಇವಳು  ಅಂತಲಾದರೂ ನನ್ನನ್ನು ಇದೇ ಮೆಹಫಿನಲ್ಲಿ ಪರಿಚಯಿಸಿಕೊಡು.. ದೂಸರಾ ಮಾತಿಲ್ಲದೆ ನಿನ್ನ ಹಿಂದೆ ಬಂದುಬಿಡುತ್ತೇನೆ.. ನಿನ್ನದೇ ಸೂರು ನಿನಗೆ ಉಸಿರುಗಟ್ಟಿಸಿದಾಗ ಅದೇ ಕಡಲ ಕಿನಾರೆಯಲ್ಲಿ ನಿನಗಾಗಿ ಕಾದಿರುತ್ತೇನೆ.. ಬಾ.. ಹಕ್ಕಿಲ್ಲದ ನಾನು ನನ್ನ ತೊಡೆಯ ಮೇಲೆ ನಿನ್ನ ತಲೆ ಇರಿಸಿಕೊಂಡು ಬೇಕಾದರೆ ನಾನೇ ಅರುಂಧತಿ ನಕ್ಷತ್ರ ತೋರಿಸುತ್ತೇನೆ..

ಏನು ಮಾಡುವುದು: ನನಗಾಗಿ ನೀನು ನನ್ನೊಂದಿಗೆ ಹೆಜ್ಜೆ ಹಾಕಲಿಲ್ಲ..

ಮೇಹಫಿಲ್ ಯಾರದಿದ್ದರೂ ಇಲ್ಲಿ ನಿನ್ನನ್ನು ನೋಡಲು ಆಯ್ತಲ್ಲ.. ಅದೇ ಸಂತೋಷ ನನಗೆ.. ಇಲ್ಲಿಗೆ ಬರುವಾಗ ಬಹಳ ಹೊತ್ತು ಕನ್ನಡಿಯ ಮುಂದೆ ನಿಂತು ಬಂದವನಂತೆ ಕಾಣುತ್ತೀ.. ನೀನಿಲ್ಲಿ ಬಂದೇ ಬರುವಿಯೆಂದು ನನಗೂ ಗೊತ್ತಿತ್ತು.. ಅದಕ್ಕೆಯೇ ನಾನೂ ಬಹಳ ಹೊತ್ತು ಕನ್ನಡಿಯ ಮುಂದೆ ನಿಂತು ಬಂದವಳೇ ಆಗಿದ್ದೇನೆ… ಯಾರದೋ ಮೆಹಫಿಲ್‌ನಲ್ಲಿ ಹೀಗೆ ಒಬ್ಬರನ್ನೊಬ್ಬರು ಭೇಟಿಯಾಗಲು ಕಾತರಗೊಳ್ಳುವುದು ನಮ್ಮ ದುರ್ದೆಸೆಯೇ ಆಗಿದೆ..

ಅಚಾನಕ್ಕಾಗಿ ನೀನು ಪ್ರೇಮದ ದಾರಿಯಿಂದ ಹಿಂತಿರುಗಿ ನಡೆದು ಹೋದ ಮೇಲೆ ಬಾಲ್ಕನಿಯಲ್ಲಿ ಯಾವ ಹೂವೂ ಅದ್ಯಾಕೋ ಅರಳಲೇ ಇಲ್ಲವೆಂದು ನಾನು ಹೇಳಿದರೆ ನೀನು ನಂಬಲೇಬೇಕು.. ಅಲ್ಲಿಂದಾಚೆಗೆ ನಾನು ಮತ್ತೊಂದು ವಸಂತ ಋತುವನ್ನು ಕಾಣಲೇ ಇಲ್ಲ..

ನೀನು ಆಗಾಗ ನನಗೆ ಅಷ್ಟೊಂದು ಪ್ರೀತಿಯಿಂದ ತಂದು ಮುಡಿಸುತ್ತಿದ್ದ ಮಲ್ಲಿಗೆ ಹೂವು ಬಾಡಿಹೋದ ಹೂವುಗಳನ್ನು ಕಸಕ್ಕೆ ಹಾಕುತಿರಲಿಲ್ಲ… ಬದಲಿಗೆ ನೀನೇ ಕೊಡಿಸಿದ್ದ ಸೀರೆಗಳಲ್ಲಿ ಮುದುಡಿದ ಹೂವಿನ ಪಕಳೆಗಳನ್ನು ಜೋಪಾನವಾಗಿ ಇಟ್ಟಿರುತ್ತಿದ್ದೆ..  ಅವೆಲ್ಲ ಹಳೆಯ ನೆನಪುಗಳಾಗಿ ಸೀರೆಯ ಕಪಾಟಿನಲ್ಲಿ ಇನ್ನೂ ಪಳೆಯುಳಿಕೆಯಾಗಿ ಹಾಗೆಯೇ ಇವೆ..

ಅದ್ಯಾವುದೋ ಕಾರಣಕ್ಕಾಗಿ ನೀನಂದು ಬಹಳ ಹೊತ್ತಿನವರೆಗೂ ನನ್ನ ಮಡಿಲಲ್ಲಿ ಮಲಗಿಕೊಂಡು ಸುರಿಸಿದ ಕಂಬನಿಗಳನ್ನು ಬಹಳ ದಿನಗಳವರೆಗೂ ಹಾಗೆಯೇ ಯಥಾವತ್ತಾಗಿ ಆ ಬೆಚ್ಚನೆಯ ಭಾವದ ಬಿಸುಪನ್ನು ಅಂದು ಉಟ್ಟುಕೊಂಡಿದ್ದ ಅದೇ ಸೀರೆಯಲ್ಲಿ ಕಾಯ್ದಿಟ್ಟುಕೊಂಡಿದ್ದೇನೆ.. ನಂದು ಹುಚ್ಚಲ್ಲವೇನೊ..

ಮಂಚದ ತುಂಬಾ ನೀನು ಬಿಟ್ಟ ಉಸಿರುಗಳು ಕೋಣೆಯ ಆಚೆಗೆ ಹೋಗದಿರಲೆಂದು ಈಗಲೂ ನಾನು ಕೋಣೆಯ ಕಿಟಕಿ, ಬಾಗಿಲುಗಳನ್ನು ಭದ್ರವಾಗಿ ಹಾಕಿ ಬಿಟ್ಟಿದ್ದೇನೆ..  ಕೋಣೆಯ ಒಳಗೆ ಹೋದಾಗೊಮ್ಮೆ ಎದೆ ತುಂಬ ಉಸಿರೆಳೆದುಕೊಳ್ಳುತ್ತೇನೆ.. ಗಾಳಿಯಾಗಿ ನೀನು ನನ್ನೊಳಗೆ ಸಮಾಹಿತಗೊಳ್ಳುವಾಗ ಅದೆಂಥದೊ ಜೀವನೋತ್ಸಾಹದಿಂದ ನಳನಳಿಸುತ್ತೇನೆ.. ನೀನಂದು ನನ್ನ ಸೆರಗಿಗೆ ಮುಖ ಒರೆಸಿಕೊಂಡ ಸೀರೆಯನ್ನು ಒಗೆಯದೆ ಇನ್ನೂ ಹಾಗೆಯೇ ಇಟ್ಟಿದ್ದೇನೆ… ನನ್ನ ಎದೆಯ ತುಂಬ ಆಡಿಸಿದ ಆ ನವಿಲುಗರಿ ಆಗಾಗ ನನ್ನನ್ನು ನೋಡುತ್ತ ಈಗಲೂ ಅಣಕಿಸುತ್ತದೆ..

ಅಂದು ನೀನು ಮಂಚದ ಮೇಲಿನ ಮೇಲ್ಹಾಸನು ಮುದುಡಿಸಿ ಹೋಗಿದ್ದನ್ನು ಇನ್ನೂ ಸರಿಪಡಿಸದೆ ಹಾಗೆಯೇ ಒಂದಿಂಚೂ ಚದುರಿಸದೆ ಜೋಪಾನವಾಗಿಟ್ಟುಕೊಂಡಿದ್ದೇನೆ… ಈ ಎಲ್ಲ ಕಾರಣಗಳಿಗಾಗಿ ನಾನು ಮನೆಯ ಒಳಗೆ ಯಾರನ್ನೂ ಬಿಟ್ಟುಕೊಳ್ಳುವುದಿಲ್ಲ ನಿನ್ನ ನೆನಪಿನ ಹೊರತಾಗಿ.. ಒಮ್ಮೆ ಬಂದು ನೋಡಬೇಕು ನೀನು ನನ್ನ ಮನೆಯ ಅವಸ್ಥೆಯನ್ನು…

.. ಹೌದೂ… ನನ್ನ ಹುಚ್ಚಿಗೆ ಪ್ರತಿಯಾಗಿ ನೀನೂ ಪ್ರೇಮದ ಹುಚ್ಚನ್ನು ನೆತ್ತಿಗೆ ಯಾಕೆ ಸವರಿಕೊಳ್ಳಲಿಲ್ಲ ಅನ್ನುವುದೇ ಸೋಜಿಗ ನನಗೆ…

ನನ್ನಿಂದ ದೂರ ಅಲ್ಲೆಲ್ಲೋ ಕಾರಣವಿಲ್ಲದೆ ಯಾಕೆ ಅಡ್ಡಾಡುತ್ತಿ.. ಒಮ್ಮೆ ನನ್ನ ಸಮೀಪ ಬಂದು ಎದೆ ತುಂಬ ಉಸಿರೆಳೆದುಕೋ… ಮರೆತು ಹೋದ ಪ್ರೇಮ ಮತ್ತೆ ನೆನಪಾಗದಿದ್ದರೆ ಹೇಳು..

ಮನೆಯಿಂದ ಬರುವಾಗ ಗಟ್ಟಿ ಮನಸ್ಸು ಮಾಡಿಕೊಂಡು ನನಗೆಯೇ ನಾನು ಹೇಳಿಕೊಂಡಿದ್ದೆ: ಈ ಮೆಹಫಿಲ್‌ನಲ್ಲಿ ನಿನ್ನೊಂದಿಗೆ ಫಾಸಲೆಯನ್ನು ಕಾಯ್ದುಕೊಳ್ಳಬೇಕೆಂದು.. ಆದರೆ ಇಲ್ಲಿ ಏನಾಗಿಹೋಯಿತು.. ನೀನು ಹೋದಲ್ಲೆಲ್ಲ ಕಣ್ಣಂಚಿನಲ್ಲಿಯೇ ನಿನ್ನ ಗಮನಿಸುತ್ತೇನೆ.. ನೀನು ನನ್ನನ್ನು ಗಮನಿಸುವುದನ್ನು ನಾನು ಇನ್ನೊಬ್ಬರ ಕಣ್ಣಲ್ಲಿ ಗುರುತಿಸಿಕೊಳ್ಳುತ್ತೇನೆ..

ನಟಿಸುತ್ತ ನಟಿಸುತ್ತ ಪ್ರೇಮವನ್ನು ಆವಾಹಿಸಿಕೊಂಡಿದ್ದು ಇತ್ತೆಫಾಕ್ ಆಗಿತ್ತು… ತಕ್ಧೀರ್ ಎಂಬುವುದು ಒಬ್ಬರ ಹೆಸರನ್ನು ಇನ್ನೊಬ್ಬರ ಹಣೆಯಲ್ಲಿ ಬರೆದಿರಲೇ ಇಲ್ಲ..

ಈಗಲೂ ನಾನು ಅಂಗೈ ಗೆರೆಗಳಲ್ಲಿ ನಿನ್ನನೆ ಹುಡುಕುತ್ತ ಬೇಸತ್ತಿದ್ದೇನೆ… ಕೊನೆಗೂ ದಕ್ಕದೆ ಹೋದ ನಿನ್ನನ್ನು ನಾನು ಅದೇ ಬೆಳದಿಂಗಳ ರಾತ್ರಿಯಲ್ಲಿ…  ಕಡಲ ಕಿನಾರೆಯಲ್ಲಿ..  ಎಲ್ಲಿ ನೀನು ಅಲೆಗಳ ಬೆನ್ನೇರಿ ಬರುವೆಯೆಂದು ಕಾಯುತ್ತಲೇ ಇರುವೆನು… ನನಗೆ ಗೊತ್ತಿದೆ ಅಲೆಗಳ ಮೇಲೆ ಸವಾರಿ ಮಾಡುವ ದಾರ್ಷ್ಟ್ಯ ನಿನಗೆ ಇಲ್ಲವೆಂದು.. ರಿವಾಜಿನ ಹೆಸರು ಹೇಳುತ್ತ ನೀನು ಅದು ಹೇಗೆ ಹೇಡಿಯಾದೆ ಎಂದು ನನಗೆ ಈಗಲೂ ಅರ್ಥವಾಗುವುದೇ ಇಲ್ಲ.. ಹೇಳು: ನಾನು ಮತ್ತು ನನ್ನ ಪ್ರೇಮ ನಿಷೇಧಿಸಲ್ಪಟ್ಟಿರುವುದಾ.. ಹಾಗಿದ್ದರೆ ನನ್ನೊಂದಿಗೆ ತುಳಿದ ಸಾವಿರ, ಸಾವಿರ ಹೆಜ್ಜೆಗಳ ಅರ್ಥವನ್ನು ಅದಾರು ಹೇಳುವರು.. ಈ ಮೆಹಫಿಲ್‌ನಲ್ಲಿ ಚೀರಿ, ಚೀರಿ ಹೇಳಲೇನು.. ನೀನು ಹೇಡಿ ಎಂದು..

ಪ್ರೇಮಿಸಿದರೆ ಏನಾಯಿತು… ಪ್ರೇಮವನ್ನು ನಿಭಾಯಿಸುವುದೂ ಇರುತ್ತದೆ..- ಎಂದು ನೀನು ಹೇಳಿದ ಪರದೆಯ ಹಿಂದಿನ ಡೈಲಾಗನ್ನು ನೀನೇ ಮರೆತು ಹೋದೆಯಾ.. ಹೇಳುವುದು ಒಂದು.. ಮಾಡುವುದು ಇನ್ನೊಂದು ಅಂದರೆ ಹೇಗೆ ಹುಡುಗಾ…

ನಾನಿಲ್ಲದೆ ಈ ಜಗದಲ್ಲಿ ನೀನು ಬದುಕಿರಬಲ್ಲೆಯಾ… ನನ್ನ ಹೊರತಾದ ಬದುಕು ನಿನಗಿದೆಯಾ.. ಎಂದೆಲ್ಲ ನಾನು ಆಗ ಅದೆಷ್ಟೊಂದು ಬಾರಿ ಆತಂಕಪಟ್ಟುಕೊಂಡಿದ್ದೆ… ಈಗ ನೀನು ನನ್ನೆದುರಿಗೆ ಹೆಜ್ಜೆ, ಹೆಜ್ಜೆಗೂ ಎಡವುದು ಕಂಡು ಖಾತರಿಯಾಗಿದೆ: ನಾನಿಲ್ಲದೆ ನಿನ್ನನೇ ನಿನಗೆ ಸಂಭಾಳಿಸಿಕೊಳ್ಳಲು ಆಗುವುದಿಲ್ಲವೆಂದು..

ಅದ್ಯಾವಾಗ ನೀನು ನನ್ನ ಮೈಗಂಧದ ಮೆಹಸೂಸ್‌ನ ಆಚೆಗೆ ನಿಂತೆಯೋ ಅವಾಗಲೇ ನೀನು ನಿನ್ನ ಮೈಯೊಳಗಿನ ಮನುಷ್ಯನ ವಾಸನೆಯನ್ನು ಕಳೆದುಕೊಂಡೆ..- ಎಂದು ಬಾಯಿ ಬಿಟ್ಟು ಹೇಳಿದರೆ ತಪ್ಪಾಗಿ ತಿಳಿಯಬೇಡ, ಕೋಪಿಸ್ಕೊಬೇಡ ಒಲವೇ..

ಅಂದು ನೀನು ಹಿಂತಿರುಗಿ ಹೋಗಲು ತಯಾರಾಗಿ ನಿಂತಿದ್ದೆ… ನಿನ್ನನ್ನು ನಿಲ್ಲಿಸಿಕೊಳ್ಳಲು ನಾನು ನನ್ನವೇ ಆದ ಕಾರಣಗಳನ್ನು ಮುಂದಿಟ್ಟುಕೊಂಡು ವಾದಿಸಿ ನಿನ್ನ ಒಪ್ಪಿಸಲು ನಾನು ಸುತಾರಾಂ ತಯಾರಿರಲಿಲ್ಲ .. ಪ್ರೇಮವೆಂದರೆ ವಾದಿಸಿ ಒಪ್ಪಿಸುವ ಆಟವಲ್ಲವೆಂದು ನಿನಗೂ ಗೊತ್ತಿದೆ..

ನವಿರಾದ ಪ್ರೇಮವನ್ನು ಪರದೆಯ ಮೇಲೆ ಅದೆಷ್ಟೋ ಬಾರಿ ನಟಿಸಿದ ನಿನಗೆ ಒಂಟಿ ಪಯಣ ಅದೆಷ್ಟು ಮುಷ್ಕಿಲ್ ಎಂದು ನಿನಗೆ ಗೊತ್ತಿಲ್ಲವಾ..

ನೀನೋ ನಮ್ಮೀ ಸಫರನ್ನು ಅರ್ಧಕ್ಕೆ ನಿಲ್ಲಿಸಿ, ಹಿಂತಿರುಗಿ ಹೋಗಿ ಅದೇನನ್ನೋ ಪಡೆದುಕೊಂಡೆ..

ನನಗಾದರೂ ನೀನಿಲ್ಲದೆ ಮುಂದೆ ಪಯಣಿಸಿ ನಿನ್ನ ಹೊರತಾದ ಅದೇನನ್ನು ಪಡೆದುಕೊಳ್ಳುವುದಿತ್ತು..

ಹೀಗಾಗಿ ನೀನು ನಿಲ್ಲಿಸಿ ಹೋದಲ್ಲಿಯೇ ನಾನು ಇನ್ನೂ ನಿಂತೇ ಇದ್ದೇನೆ..

ಈಗನಿಸುತ್ತಿದೆ: ಆಗಲೂ ನೀನು ನನ್ನವನಾಗಿರಲಿಲ್ಲ.. ಈಗಲೂ ನೀನು ನನ್ನವನಾಗಿಲ್ಲ..

ನನ್ನ ಹೊರತಾದ ದುನಿಯಾ ನಿನಗೆ ಮತ್ತೊಂದು ಇತ್ತೆಂದರೆ ಈಗಲೂ ನನಗೆ ನಂಬಲು ಆಗುವುದೇ ಇಲ್ಲ..

ಈಗ ನಿನ್ನ ಮೇಲೆ ಯಾವುದೇ ಸಿಖವಾ ಇಲ್ಲ.. ಪಲಾಯಣದ ದಾರಿ ತುಳಿದ ನೀನು ಶುದ್ಧ ಹೇಡಿ ಅಲ್ಲದೆ ಮತ್ತೇನಾಗಿ ಉಳಿದಿಲ್ಲ..

ಮತ್ತೆ ಅಂದುಕೊಳ್ಳುತ್ತೇನೆ: ನಿನ್ನ ಹೆಸರು ಹೇಳಿ ಉಸಿರೆಳೆದುಕೊಳ್ಳುವುದರಲ್ಲಿ ಇನ್ನು ಅರ್ಥವೇ ಇಲ್ಲ..- ಎಂದು..

ಈಗ ನೀನು ಯಾರವನೂ ಆಗಿ ಉಳಿದಿಲ್ಲ.. ನೀನೂ ನಿನ್ನವನಾಗಿ ಉಳಿಯದ ಹೊತ್ತಿನಲ್ಲಿ ನಿನಗೆ ಇನ್ನಾರವನು ಆಗಲು ಸಾಧ್ಯವಿದೆ..

ಇದೇನು ಅಷ್ಟು ವಯಸ್ಸಾಗಿ ಹೋಯಿತಾ ನಿನಗೆ.. ಬಾಗಿದ ಬೆನ್ನನ್ನು ಆದೆಷ್ಟೂಂತ ಜಗ್ಗಿ ನಿಲ್ಲಿಸುತ್ತಿ.. ಲೌಕಿಕದ ಗಿರಣಿಯಲ್ಲಿ ಬಿದ್ದ ನಿನಗೆ ನಿಜವಾಗಿ ವಯಸ್ಸಾಗಿ ಹೋಯಿತಲ್ಲೋ.. ನನ್ನ ಬಾಹುಗಳಲ್ಲಿ ನೀನು ಅದೆಷ್ಟೋಂದು ನಳ ನಳಿಸುತ್ತಲಿದ್ದಿ.. ಈಗೀಗ ಕನ್ನಡಿಯ ಮುಂದೆ ಒಬ್ಬನೇ ನಗಲು ಯತ್ನಿಸುತ್ತಿರುವೆಯಂತೆ.. ವಿಸ್ಮಯ ಏನೆಂದರೆ ನನಗೆ ಬೆನ್ನು ತಿರುವಿ ಹೋದಮೇಲೆ ನಟಿಸಲು ನಿನಗೆ ಪ್ರಿಯತಮನ ಪಾತ್ರ ಹುಡುಕಿಕೊಂಡು ಬರಲೇ ಇಲ್ಲವಂತೆ.. ಆಮೇಲೆ ನಿನ್ನ ನಟನೆಯಲ್ಲಿ ನೀನೇ ಇರುತ್ತಿದ್ದೀಯಂತೆ.. ಯಾವಾಗೆಲ್ಲ ನೀನು ನೀನಾಗಿ ನಟಿಸಿದ್ದೀಯೋ ಆಗೆಲ್ಲ ನೀನು ಸೋತು ಹೋಗಿದ್ದಿ.. ಇನ್ನು ಸಾಕು ಈ  ನಟನೆ..

ಮೆಹಫಿಲ್‌ನ ಈ ಗದ್ದಲಿನಲ್ಲಿದ್ದರೂ ಅದೆಷ್ಟೊಂದು ಏಕಾಂತವನ್ನು ಅನುಭವಿಸುತ್ತಿರುವೆ… ಇಂಥದೊಂದು ಸನ್ನಿವೇಶದಲ್ಲಿ ನಿನ್ನ ನೋಡಿದರೆ ಅಯ್ಯೋ ಅನ್ನಿಸುತ್ತದೆ. ಹೇಗಿದ್ದೆ? ಹೇಗಾಗಿ ಹೋಗಿರುವೆಯಲ್ಲ.. ಮಾರಾಯ..

ಎಲ್ಲೀತನಕ ಕಾಯುತ್ತಿರುವುದು ನಿನ್ನನ್ನು… ಇಂತಜಾರ್ ಅನ್ನುವುದು ಕೊನೆಯ ಉಸಿರಿನವರೆಗೂ ಇರಬೇಕೆಂದು ನಾನ್ಯಾಕೆ ಅಂದುಕೊಳ್ಳಲಿ… ಸಂಭ್ರಮದ ಆಚರಣೆ, ನರ್ತನ ಎಲ್ಲವೂ ಉಸಿರಿನ ಒಳಗೆಯೇ ಆಗಿರಬೇಕಲ್ಲವೇ…  ಉದ್ದಕ್ಕೂ ಪಯಣಿಸೋಣ ರೈಲು ಹಳಿಗಳ ಹಾಗೆ… ಅನ್ನುವ ನಿನ್ನ ಸೂಚ್ ನನಗೆ ಯಾವ ಕಾಲಕ್ಕೂ ಒಪ್ಪಿಗೆ ಆಗುವುದೇ ಇಲ್ಲ..

ಬಯಲಿನಲ್ಲಿ ನಿಂತವಳ ಭಾವವನ್ನು ಅರ್ಥ ಮಾಡಿಕೊಳ್ಳಲು ಆಗದ ನಿನ್ನ ನಡೆಯನ್ನು ನೆನಪಿಸಿಕೊಂಡು ಈಗಲೂ ನಾನು ಪುರುಸೊತ್ತಿನಲ್ಲಿ ನೊಂದುಕೊಳ್ಳುತ್ತೇನೆ..

ನೀನು ಅದ್ಯಾವಾಗ ಮತ್ಲಬಿ ಆಗಿಹೋದೆಯೆಂದು ನನಗೆ ಗುರುತಾಗಲೇ ಇಲ್ಲ.. ನಿನ್ನ ಮತ್ಲಬಿಗೆ ಒಂದು ಸಫಾಯಿಯನ್ನ ಇದೇ ಮೆಹಫಿಲ್‌ನಲ್ಲಿ ಕೊಡುತ್ತೇನೆಂದರೆ ನಾನು ಅದೇನೆಂದು ಕೇಳಲು ಹೋಗುವುದೇ ಇಲ್ಲ..

ಏನು ಗೊತ್ತಾ: ಒಮ್ಮೆ ಪ್ರೇಮಿಸಿ ಆದಮೇಲೆ ನೀನು ಪ್ರೇಮವೇ ಆಗಿ ಉಳಿಯಬೇಕಿತ್ತು.. ಪ್ರೇಮವಾಗಿ ಮುಂದುವರಿಯದ ನಿನ್ನ ನೂರು ಕಾರಣಗಳು ನನಗೆ ಬೇಕಾಗಿಯೇ ಇಲ್ಲ..

ನನ್ನೊಂದಿಗಿನ ರಿಷ್ತೆಯಲ್ಲಿನ ಫಾಸಲೆಯನ್ನು ನೀನು ಖಾಯಂ ಆಗಿ ಕಾಯ್ದುಕೊಂಡು ಬಂದಿರುವುದನ್ನು ನಾನು ಈಗಲೂ ದ್ವೇಷಿಸುತ್ತೇನೆ..

ನಾವಿಬ್ಬರೂ ಈ ಮೆಹಫೀಲ್‌ನಲ್ಲಿ ಹಾಜರಿರುವೆವೇನೊ ಸರಿಯೇ..  ಮುಖಾಮುಖಿಯಾಗದಿರುವುದೇ ಉಳಿದ ಎಲ್ಲರಿಗೂ ಒಂದು ತಮಾಷೆಯಾಗಿದೆ… ಇಲ್ಲಿರುವ ಎಲ್ಲರೂ ನಮ್ಮಿಬ್ಬರನ್ನೇ ಗಮನಿಸುತ್ತಿದ್ದಾರೆ ಎನ್ನುವುದು ನಿನಗೆ ಗುರುತಾಗುತ್ತಿಲ್ಲವಾ.. ನನ್ನನ್ನು ನೋಯಿಸಿ ನೀನು ಕೂಡ ಅದೆಷ್ಟೊಂದು ನೋವು ಪಟ್ಟಿರುವೆ ಎಂದು ನಿನ್ನ ಬಿಳಿಚಿಹೋದ ಮುಖ ನೋಡಿದರೆ ನನಗೆ ಗೊತ್ತಾಗುತ್ತದೆ.. ನಡೆದಾಡುವ ಶವ ಅಲ್ಲದೆ ಮತ್ತೇನಾಗಿಲ್ಲ ಉಳಿದಿಲ್ಲೀಗ ನೀನು..

ನಾವಿಬ್ಬರೂ ಮರ ಸುತ್ತಿ ಹಾಡಿದ ಯುಗಳ ಗೀತೆಗಳನ್ನು ಈಗಲೂ ನಾನು ಒಮ್ಮೆ, ಮತ್ತೊಮ್ಮೆ ಅಂತೆಲ್ಲ ಕೇಳುತ್ತಲೇ ಇರುತ್ತೇನೆ… ಆದರೆ ನೀನೋ.. ಆ ಭೂಲೇ ಭಿಸರೇ ಗೀತ್ ಶುರುವಾದರೆ ವ್ಹಾಲ್ಯೂಮ್ ಮ್ಯೂಟ್ ಮಾಡುತ್ತೀಯಂತೆ.. ಎದ್ದು ಹೋಗಿ ಮುಖದ ತುಂಬ ಹೊದ್ದು  ಬಿಕ್ಕಳಿಸುತ್ತೀಯಂತೆ..

ಈ ಕಣ್ಣ ಮುಚ್ಚಾಲೆ ಆಟ ಸಾಕು.. ಒಮ್ಮೆ ತಿರುಗಿ ನೋಡು.. ದಡವನು ಮುಳುಗಿಸಲು ಬರುವ ಅಲೆಗಳಷ್ಟು ನಿರ್ದಯಿ ಆಗಬೇಡ..

ನನ್ನ ಬಾಹುಗಳಿಲ್ಲದೆ
ರಿವಾಜಿನೊಂದಿಗಿನ ನಿನ್ನ ಈ ನರ್ತನ
ನನ್ನನ್ನೂ ದಣಿಸಿದೆ..

…ಹೇಡಿ ಕಣೋ ನೀನು.. ನೀನು ನನ್ನವನು ಅನ್ನುವ ಒಂದೇ ಒಂದು ಕಾರಣಕ್ಕೆ ನಾನು ಇಲ್ಲಿಯವರೆಗೂ ನಿನ್ನನ್ನು ನನ್ನ ಖಯಾಲ್‌ನಲ್ಲಿ ಅಂದಿನ ಪ್ರೇಮವನ್ನು ನೆನಪಿನಲ್ಲಿಯೇ ಸುಖಿಸುತ್ತಿದ್ದೇನೆ..

ನೀನು ನನ್ನನ್ನು ಮತ್ತೆ ಪ್ರೀತಿಸುವ ಸಣ್ಣ ತಪ್ಪನ್ನಾದರೂ ಒಮ್ಮೆ ಮಾಡಿ ನೋಡು.. ಉದುರಿ ಬಿದ್ದ ಎಲೆಗೂ ಮತ್ತೆ ವಸಂತ ಬರುವುದು ನೋಡು – ಹಾಡಿ, ಕುಣಿದ ಗತಕ್ಕೆ ಮತ್ತೆ ಜಾರುತ್ತೇನೆ.. ತೇಲುಗಣ್ಣಾಗುತ್ತೇನೆ..

ಮುದ್ದಾ ಏನೆಂದರೆ: ಈಗ ಮೊದಲ ಹೆಜ್ಜೆ ಯಾರದು ಅನ್ನುವುದೇ ನಡಿಗೆಗೆ ತೊಡಕು..

ನೀ ನನಗೆ ಅಲ್ವಿದಾ ಹೇಳಿಯಾದ ಮೇಲೆ ಇಡೀ ಶಹರು ಅಪರಿಚಿತವಾಯಿತು ಏನು ಮಾಡಲಿ..

ನೀನಿಲ್ಲದೇ ಪಯಣಿಸಲು ದಾರಿ ಎಂಬುವುದು ಕಾಲ ಕೆಳಗೆ ಇರದೇ ಹೋಯಿತು ಏನು ಮಾಡಲಿ ..

ಕಣ್ಣೆದುರಿನ ಪರದೆಯ ಮೇಲೆ ನಾವಿಬ್ಬರೂ ಹಾಡಿ ಕುಣಿದು ಪ್ರೇಮಿಸಿಕೊಂಡ ಚಿತ್ರವಿತ್ತು,

ನನ್ನ ಮೈ ತುಂಬ ನಿನ್ನದೇ ಮೈಯ ವಾಸನೆಯಿತ್ತು..

ಕತ್ತಲ ಎದೆಯ ಮೇಲೆ ಕುಳಿತು ನಕ್ಷತ್ರಗಳನ್ನು ಎಣಿಸುವುದಾಯಿತು ಏನು ಮಾಡಲಿ..

ಒಳಗೊಂದು ಬೇಬಸಿ ಇಟ್ಟುಕೊಂಡ ನೀನೆಂಬ ಅಜನಭಿ ಹಾಡು ಹಗಲೇ ನನ್ನೆದುರಿಗೆ ಹರಾಜ್ ಆಗುತ್ತಾ ಹೋದ ದುರಂತತೆ ಇತ್ತು.. ರಿವಾಜ್ ಎಂದು ಆರಜೂಗಳನ್ನು ಗೆರೆಯಾಚೆ ನಿಲ್ಲಿಸಿದಿ, ಶಿಲೆಯಾಗುವುದಾಯಿತು ಏನು ಮಾಡಲಿ..

ಏಳನೇಯ ಹೆಜ್ಜೆಯ ಆಚೆಗಿನ ದಾರಿಯೇ ಸುಳ್ಳಾಯಿತು ಏನು ಮಾಡಲಿ… ಶಿಲ್ಪವಾಗಿದ್ದವನ ಕೊರಳಿಗೆ ಮಾಲೆ ಹಾಕಿದೆ.. ಅಲ್ಲಿಂದ ಶುರುವಾಯಿತು ನಟನೆಯ ನಡಿಗೆ.. ವಿಷಾದವೆಂದರೆ ನಾಟಕದ ಮೊದಲ ಪ್ರೇಕ್ಷಕ ನಾನೇ ಆಗುವುದಾಯಿತು ಏನು ಮಾಡಲಿ..

ಮೆಹಫಿಲ್‌ನಲ್ಲಿ ನನ್ನನ್ನು ಗುರುತಿಸಲು ಕೂಡ ಒಲ್ಲೆನೆಂದುಕೊಳ್ಳುವವರು ಹಿಂದುಗಡೆ ನಮ್ಮದೇ ಪ್ರೇಮವನ್ನು ಗುಣಗುಣಿಸುತ್ತಾರೆಂದು ನನಗೆ ಗೊತ್ತಿದೆ..

ನಮ್ಮಿಬ್ಬರ ಕೊನೆಯ ಮುಲಾಖಾತ್‌ಗೆ ನಾನಂತೂ ತಯಾರಾಗಿರಲೇ ಇಲ್ಲ.. ನೀನೇನು ಅಲ್ವಿದಾ ಕೂಡ ಹೇಳದೆ ಹೋದಿ… ರಿವಾಜಿನ ಸೆಳವು ನಿನ್ನನ್ನು ತನ್ನೊಳಗೆ ಎಳೆದುಕೊಳ್ಳುತ್ತಲಿತ್ತು.. ನನ್ನ ತಲುಪಿಯಾದ ಮೇಲೆ ನಿನಗೆ ಮತ್ತೆ ಬೇರೆಲ್ಲಿಗೂ ಹೋಗುವುದು ಇರಲಿಲ್ಲ.. ನಿನಗೆ ರಿವಾಜಿನ ಲೋಕದಲ್ಲಿ ಬದುಕಬೇಕಿತ್ತು.. ಇನ್ನೊಂದು ದಡದ ಕಡೆಗೆ ಈಜಿ ಹೋದೆ… ಆಗ ನಾನೊಂದು ತೀರ, ನೀನೊಂದು ತೀರ ಆಗಿ ಹೋದೆವು..

ಆಡದೆ ಉಳಿದ ನೂರು ಮಾತುಗಳಿದ್ದವು ಎರಡು ಮೈಗಳ ನಡುವಿನ ಬೇಕರಾರಿಯಲ್ಲಿ.. ಏಳು ಜನುಮಗಳ ದ್ವೇಷವನು ಒಂದೇ ಜನುಮದಲಿ ತೀರಿಸಿಕೊಳ್ಳುತಿರುವೆ ಏನು.. ದವಾ ಎಂದೆಲ್ಲ ಹೇಳಿ ಅವನವರೇ ಅವನಿಗೆ ನಗು-ನಗುತ್ತ ವಿಷ ಕುಡಿಸಿದರಂತೆ.. ಮರಳಲಿ ಕಿಸ್ಮತ್ ದಫನ್ ಮಾಡಿ ಅಲೆಗಳಿಗೆ ಮರಳಲು ಹೇಳಿದವಳು ನಾನು..

ಬಿಸಿಲು ಮುಟ್ಟುವ ಆಟದಲ್ಲಿ ನೆರಳು ಕೂಡ ದಣಿದಿದೆ.. ಮೈಗೆ ಅಂಟಿದ ನೆರಳಿಗೂ ವಯಸ್ಸಾಯ್ತು.. ಗಾಳಿಯಲ್ಲಿ ಮಾತನಾಡಿಕೊಂಡಿದ್ದೇ ಹೆಚ್ಚಾಯಿತು.. ಒಬ್ಬರ ಕಿವಿಯಲ್ಲಿ ಇನ್ನೊಬ್ಬರು ಉಸುರಿಕೊಳ್ಳಲೇ ಇಲ್ಲ.. ಬಯಸಿದ್ದು ಎದುರಿನಲ್ಲಿದ್ದರೂ ಕಣ್ಮುಚ್ಚಿಕೊಂಡು ಗುರುತಿಸದೇ ಹೋದವನು ನೀನು ..

ಹೇಳು: ನಿನಗಿಂತ ನಿನ್ನ ನೆನಪೇ ಚೆಂದವೆಂದರೆ ದಡ ತಲುಪಲಾಗದೆ ನಡುವೆಯೇ ಮುಳುಗಿ ಸತ್ತ ಅಲೆಯಾಗಿ ಬಿಡುವೆನು.. ಆಗ ಮತ್ತೊಂದು ಅಲೆಯ ಮೂಲಕ ದಡಕ್ಕೆ ಬಂದು ಬೀಳುವುದು ನನ್ನ ಹೆಣ ಮಾತ್ರ ಆಗಿರುತ್ತದೆ..

ಹ್ಹೇ ಖುದಾ.. ಮೆಹಫಿಲ್‌ನ ಈ  ಇರುಳಿಗೆ ಹಗಲೆನ್ನುವುದು ಆಗದೇ ಇರಲಿ..
ಕಣ್ಣ ಮುಂದಿನ ಅವನ ಇರವಿನ ಸುಖವು ಎವೆಗಳ ಆಚೆಗೆ ತುಳುಕದೇ ಇರಲಿ

ಯೋಚಿಸುತ್ತೇನೆ ಗೆಳೆಯರೇ… ಅವನ ಮೇಲೆ ಯಾಕೆ ಒಂದು ಮೊಖದ್ದಮೆ ದಾಖಲಿಸಬಾರದು ಎಂದು..

ಅದೇ ಕಾರಣಕ್ಕಾಗಿಯಾದರೂ ಪ್ರತೀ ತಾರೀಖಿನ ದಿನ ಅವನೊಂದಿಗೆ ಭೇಟಿ ಆಗುವುದು ಎಂದು.. -ಗುಲ್ಜಾರ್ ನ ಸಾಲು ನೆನಪಾಗಿ ತುಟಿಯಂಚಲಿ ನಗುವೊಂದು ಅರಳಿ ನಿಲ್ಲುತ್ತದೆ..

ನೋಡಿರಿ… ಹಾಗೆ ಮುಖವಾಡ ಧರಿಸಿ ಅಲ್ಲಿ ನಿಂತಿರುವವನು ಅವನಲ್ಲ.. ಅವನೆಂದರೆ ನನ್ನ ನೆರಳಿನೊಂದಿಗೆ ಇರುವವನು.. ತನ್ನ ನೆರಳನ್ನು ತನಗೆಯೇ ಕಟ್ಟಿಹಾಕಿಕೊಳ್ಳಲು ಆಗದಿರುವವನು ಅವನು..

ನನ್ನೊಂದಿಗಿನ ಪ್ರೇಮದ ಹೊರತಾದ ದುನಿಯಾ ನಿನಗೆ ಮತ್ತೊಂದು ಇತ್ತೆಂದರೆ ನಾನು ಈಗಲೂ ನಂಬುವುದಿಲ್ಲ..

ನಾನು ಅದೆಷ್ಟೊಂದು ಒಡೆದು ಹೋಗಿದ್ದೇನೆ, ಚೂರು-ಚೂರಾಗಿದ್ದೇನೆಂದು ನಿನಗೆ ಹೇಗೆ ತೋರಿಸಿಕೊಳ್ಳಲಿ..

ನೀನು ನನ್ನಿಂದ ದೂರಾಗಿದ್ದ ಮಜಬೂರೀ ನನಗೆ ನಿನ್ನ ಹೊರತಾದ ಇನ್ನೊಂದು ಕಥೆಯನ್ನೇ ಹೇಳಿತು..

ನೀನು ಜೊತೆಗಿಲ್ಲದ ದಾರಿಯನ್ನು ನಾನು ಅದೆಷ್ಟು ಉದ್ದ ಸವೆಸಿದರೂ ಏನು ಉಪಯೋಗ.. – ಎಂದೆಲ್ಲ ಹೇಳಿಕೊಳ್ಳುತ್ತ ನಾನು ನೀನು ನಿಲ್ಲಿಸಿ ಹೋದಲ್ಲಿಯೇ ನಿಂತು ಬಿಟ್ಟೆ..

ನನ್ನ ಮತ್ತು ನನ್ನ ಪ್ರೇಮದ ಅಸ್ಥಿತ್ವ ನಿನಗಿಲ್ಲವೆಂದಾದ ಮೇಲೆ ನಾನು ನಿನ್ನನ್ನು ಅದು ಹೇಗೆ ಇನ್ನೂ ಗೌರವಿಸುತ್ತ ಇದ್ದು ಬಿಡಲಿ…

ನನ್ನನ್ನು ಇನ್ನೂ ಮತ್ತೂ ಬಾಗಿಸದಿರು ಹ್ಹೇ ವಿಧಿಯೇ… ಈಗಾಗಲೇ ನಾನು ತುಂಬ ದಣಿದಿದ್ದೇನೆ..

ಮೆಹಫಿಲ್‌ನಲ್ಲಿರುವ ಈ ಭೀಡ್‌ನಲ್ಲಿ ನನ್ನ ತಾಳ್ಮೆಯನ್ನು ಪರೀಕ್ಷಿಸದಿರು ನನ್ನ ಮರೆತುಹೋದ ಒಲವೇ..

ಅದೊಂದಿನ ನಾನು ಕೇಳಿದ್ದೆ: ಬೇಷರತ್ತಿನ ಈ ಇಷ್ಕನ ಸಫರ್ ನಲ್ಲಿ ಪಯಣಿಸುವುದು ಅದೆಲ್ಲಿಯವರೆಗೆ..- ಎಂದು.

ಅದಕ್ಕೆ ಅವನಂದಿದ್ದ: ಉಸಿರು ನಿಲ್ಲುವವರೆಗೆ.. ಮುಂದಿನ ಜನುಮದ ಮೈಲಿಗಲ್ಲು ಕಾಣುವವರೆಗೆ..

ಮತ್ತೆ ನಾನು ಕೇಳಿದ್ದೆ: ಜೊತೆಗೆ ಏನೇನಿರುತ್ತೆ..

ಅವನಂದಿದ್ದ: ಜೊತೆಗೆ ನಾನಿರುತ್ತೀನಿ.. ಹಗಲುಗನಸುಗಳಿರುತ್ತವೆ.. ಹಾಡುಗಳಿರುತ್ತವೆ.. ನದಿ, ದೋಣಿ, ದಡ ಮತ್ತು ಅಲೆಗಳು ಕೂಡ ಇರುವವು..

ಸಫರ್ ಶುರು ಮಾಡಿದ್ದು ಹೀಗೆ ಒಬ್ಬರಿಗೆ ಇನ್ನೊಬ್ಬರು

ವಿಮುಖವಾಗಿ, ಅಪರಿಚಿತರಾಗಿ ಇರುವುದಕ್ಕೆನೆಯೇ.. ಅನ್ನುವಂತಾಗಿದೆ ಈಗ..

ಇಲ್ಲಿಯವರೆಗೂ ನಿತ್ಯ ದೀಪ ಬೆಳಗುತ್ತಿದ್ದೆ.. ಅವನು ನನ್ನದೇ ಮನೆಯ ದಾರಿಯಲಿರುವನೆಂದು.. ದಿನವೂ ಬಾಗಿಲ ತುದಿಗೆ ನಿಂತು ಕಾಯುತ್ತಿದ್ದೆ, ಇನ್ನೇನು ಅವನು ಬಂದೇ ಬಿಡುವನೆಂದು.. ಆದರೇನು ಮಾಡುವುದು.. ಅಗಲಿಕೆಯ ನೋವುಗಳು ಎದೆಗೆ ಚೂರಿಯಾಗಿ ಇರಿದವು.. ಈ ಅಧೂರಿ ಪ್ರೇಮ್ ಕಹಾನಿ ಇದೇ ಜನುಮಕೆ ಮುಗಿದುಬಿಡಲಿ.. ಬೇರೇನೂ ಬಯಸಿರಲಿಲ್ಲ ನಾನು .. ನಮ್ಮದಾದ ಈ ಮುಹೊಬ್ಬತ್ತ್ ಹಾಗೆಯೇ ಇರಲೆಂದು ಹರಕೆ ಹೊತ್ತಿದ್ದೆ.. ಆ ಫಕೀರ ಜೋಡಿ ಸಲಾಮತ್ ರಹೇ ಎಂದು ಕೂಡ ಹರಸಿದ್ದನಲ್ಲ ಅವತ್ತು.. ಹಾಗೆ ಹರಸಿ ತಾಯತ ಕಟ್ಟಿದ್ದನಲ್ಲ ನಿನಗೆ.. ಎಲ್ಲಿ ಹರಿದು ಹಾಕಿದೆ ಆ ತಾಯತವನ್ನು.. ತಾಯತದ ಬದಲಿಗೆ ಬಂಗಾರದ ಕೈ ಕೊಳ  ಹಾಕಿಕೊಂಡಿರುವೆಯಲ್ಲ..

ಪಯಣದ ನಡುವಲೇ ಇಳಿದುಹೋದ ಮುಸಾಫಿರ್ ನಾವುಗಳು.. ಅನುರಾಗವೊಂದನು ಉಮ್ರಭರ್ ಬೇಗುದಿಯಾಗಿಸಿಕೊಂಡು ಬೆಂದು ಹೋಗುತ್ತಿರುವವರು ನಾವುಗಳು…

ಒಂದಾಗಿರುವುದು ಸುಲಭವಲ್ಲವೆಂದು ಗೊತ್ತಿತ್ತು ಮೊದಲೇ… ದುನಿಯಾ ಹೀಗೆಯೇ ಇರುವುದು, ಸುಖಾಸುಮ್ಮನೆ ದೂರವಾದೆವು..

.. ನೀನು ನನ್ನಿಂದ ಕಾಯ್ದುಕೊಳ್ಳುತಿರುವ ಅಂತರದಿಂದಾಗಿ ನನಗೆ ನೋವಾಗುತ್ತದೆ..

ನೀನು ಬೆನ್ನು ತಿರುಗಿಸಿದ ಮೇಲೆ ನಮ್ಮಿಬ್ಬರ ನಡುವೆ ಬಿರುಕು ಮೂಡಿದ್ದನ್ನ ಇಡೀ ಜಗತ್ತು ಕಣ್ಬಿಟ್ಟು ನೋಡಿದೆ..  ಹಿಂತಿರುಗಿಯೂ ನೋಡದೆ ಹೋದ ನಿನ್ನ ನಡೆಯನು ನಾನೀಗ ಜೀರ್ಣಿಸಿಕೊಳ್ಳಬೇಕಿದೆ..

ನೀನು ಜಗದ ಕಣ್ಣಿಗೆ ಒಳ್ಳೆಯವನು ಆಗಲು ಹವಣಿಸಿದಿ.. ಜಗದ ಕಣ್ಣಿಗೆ ನೀನು ಒಳ್ಳೆಯವನು ಆಗಲು ಹವಣಿಸಿದ್ದನ್ನು ಪತ್ರಿಕೆಗಳಲ್ಲಿ ಓದಿ ನಗುತ್ತಿದ್ದೆ..

ಸೂಕ್ಷ್ಮತೆಯನ್ನು ಕಳೆದುಕೊಂಡು ಸಭ್ಯನಂತೆ ತನ್ನನ್ನು ತಾನೇ ಪ್ರದರ್ಶಿಸಿಕೊಳ್ಳುತ್ತ ಮೆಹಫಿಲ್ ನಲ್ಲಿ ತಡವರಿಸುತ್ತ ನಿಂತವನು ನಾನು ಪ್ರೀತಿಸಿದವನು ಅಲ್ಲವೇ ಅಲ್ಲ ಅನ್ನುವಂತಾಗಿ ನೋಟವನ್ನು ಅವನ ಮೇಲಿನಿಂದ ಬಲವಂತವಾಗಿ ಕಿತ್ತುಕೊಳ್ಳುತ್ತೇನೆ.. ಈಗ ನನ್ನೆದುರು  ಜಡ್ಡುಗಟ್ಟಿ ನಿಂತವನು ಮತ್ಲಬಿ ಮನುಷ್ಯ.. ಪ್ರೇಮದಲ್ಲಿ ನಾನು ಒಂದೊಂದೇ ಕಟ್ಟುಗಳನ್ನು ಬಿಚ್ಚಿಕೊಳ್ಳುತ್ತ ಬಿಡುಗಡೆಯನ್ನು ಅನುಭವಿಸುತ್ತಾ ಹೊರಟಿದ್ದರೆ.. ಅವನೊ.. ರಿವಾಜಿನ ನಾಜೂಕಿನ ನೂಲನ್ನು ನೇಯುತ್ತ, ನೇಯುತ್ತ ಹೊರಬರಲಾಗದಂತೆ ಉಳಿದುಬಿಟ್ಟ.. ತಾನೇ ಚಂದವಾಗಿ ಹೆಣೆದ ನೇಯ್ಗೆಯ ಒಳಗೇ ಬಂಧಿಯಾಗಿಬಿಟ್ಟವನು ಏಕದಂ ಅಜನಭಿ ಅನ್ನಿಸಿ: ಅದು ಹೇಗೆ ತಾನು ಇಲ್ಲಿಯವರೆಗೂ ಅವನದೇ ಹೆಸರನ್ನು ಹೇಳಿಕೊಳ್ಳುತ್ತಾ ಸುಖಾಸುಮ್ಮನೆ ಇಷ್ಟೊಂದು ವರುಷಗಳನ್ನು ಕಳೆದುಬಿಟ್ಟೆನಲ್ಲ ಎಂದು ಖೇಧವಾಗುತ್ತದೆ.. ರಿವಾಜಿನ ಬಂಧನದಲ್ಲಿ ಉಸಿರಾಡುತಿರುವ ನಿನಗೆ ಪ್ರೇಮದಲ್ಲಿನ ಬಿಡುಗಡೆ ಅರ್ಥವಾಗುವುದೇ ಇಲ್ಲ.. ನಿನ್ನದೇ ರಿವಾಜು ನಿನಗೆ ಬಂಧನವಾದ ಹೊತ್ತಿನಲ್ಲಿ ನಿನ್ನೊಂದಿಗಿನ ಪ್ರೇಮ ನನಗೆ ಬಿಡುಗಡೆ ಆಗಿತ್ತು.. ಪರದೆಯ ಮುಂದೆ ಇನ್ಯಾರೋ ಬರೆದುಕೊಟ್ಟ ಡೈಲಾಗ್ ಅನ್ನು ಹಲವು ಸಲ ರಿಹರ್ಸಲ್ ಮಾಡಿ ಟೇಕ್, ರೀ ಟೇಕ್ ಹೇಳಿಕೊಂಡ ಮಾತ್ರಕ್ಕೆ ನೀನು ಹೀರೋ ಆಗುವುದಿಲ್ಲ..

ನೀನು ನನ್ನೊಂದಿಗೆ ತುಳಿದ ಹೆಜ್ಜೆಗಳನ್ನು ಮರೆಯಬಲ್ಲೆ ಎಂದಾದರೆ… ನಾನು ನಿನ್ನೊಂದಿಗೆ ಕಳೆದ ಕ್ಷಣಗಳನ್ನು ಕೂಡ ಮರೆಯಬಲ್ಲೆ ಎಂಬ ಸಂಗತಿಯನ್ನು ನೀನು ಅರಗಿಸಿಕೊಳ್ಳಬಲ್ಲೆಯ…

ಅವನು ಪ್ರೇಮದಲ್ಲಿ ಹುಚ್ಚ ಆಗಿರಲಿಲ್ಲ.. ಹೀಗಾಗಿ ಅವನಿಗೆ ಇನ್ನೂ ಪ್ರೇಮವೆಂದರೆ ಏನೆಂಬುವುದು ತಿಳಿದೇ ಇಲ್ಲ.. ಅವೆಷ್ಟೋ ಹಾಡುಗಳಲ್ಲಿ ಮರ ಸುತ್ತಿದರೆ ಏನಾಯಿತು.. ಪ್ರೇಮವನ್ನು ಆರಾಧಿಸಲು, ಸಂಭ್ರಮಿಸಲು ಮಂದಿರ ಹುಡುಕಲೆ ಇಲ್ಲ ಅವನು…

ಅವನೊಳಗೆ ಪ್ರೇಮದ ತಲಬು ಎಂಬುವುದು ಇತ್ತಾ.. ಎಂದು ಈಗ ನಾನು ಮತ್ತೊಮ್ಮೆ ಮೊದಲಿನಿಂದ ಯೋಚಿಸಲು ಶುರು  ಮಾಡಬೇಕಾಗುತ್ತದೆ…

ಹೀಗೆ ಅವನ ಮೇಲೆ ನೂರೊಂದು ದೂರನ್ನು ಹೇಳಿಕೊಳ್ಳುತ್ತಲ್ಲಿದ್ದ ನನಗೆ ದೂರಿನ ಪಟ್ಟಿ ಇನ್ನೂ ಮತ್ತೂ ಬೆಳೆಯತೊಡಗಿದ್ದರ ಅರಿವಾಗಿ ಒಂದು ಕ್ಷಣ ನನಗೆಯೇ ನಾಚಿಕೆ ಅನ್ನಿಸಿ ಸುಮ್ಮನಾಗುತ್ತೇನೆ…  ಸ್ಕಾಚ್‌ನ ಗುಟುಕಗಳು ನರ ನರಗಳಲ್ಲಿ ಪ್ರವಹಿಸಿದಂತಾಗಿ ಒಂದು ಕ್ಷಣ ಮನಸ್ಸು ಸಡಿಲಾದ ಅನುಭವ ನನಗೆಯೇ ಹತ್ತುವುದು..

ಶವವಸ್ತ್ರ ಮಾತ್ರವೇ ತುಟ್ಟಿಯಾಗಿದೆ ಅಷ್ಟೇ

ಮನುಷ್ಯರು ಈಗಲೂ ಮೂರು ಕಾಸಿನವರೇ ಆಗಿದ್ದಾರೆ.. – ಅನಾಮಿಕದವನೊಬ್ಬನ ಈ ಮಾತು ಇವನನ್ನು ನೋಡಿಯೇ ಹೇಳಿರಬೇಕೆಂದು ಅನಿಸುತ್ತದೆ..

ಒಂದಿಷ್ಟು ರಫು ಮಾಡಿ ನೋಡಿ ಮತ್ತೆ ಈ ಇಷ್ಕ್ ಹೊಸದಾಗಿ ಕಾಣಲು ಆಗುವುದೇನು ಎಂಬುವುದಕ್ಕೆ ಕಾಲ ಕೂಡ ಸಾತ್ ಕೊಡದೆ ಮುಟ್ಟಿಗೆಯೊಳಗಿನ ಮರಳಿನ ಹಾಗೆ ಸೋರಿ ಹೋಗಿದೆ…

ಒಂದೇ ದಿನದಲ್ಲಿ ಎಲ್ಲವೂ ಎಲ್ಲಿ ಮುಗಿದು ಹೋಯಿತು.. ಬಹಳ ದಿನಗಳಿಂದ ಅಲ್ವಿದಾ ಹೇಳಲು ನೀನು ತುಂಬಾ ತಯ್ಯಾರಿ ನಡೆಸಿದ್ದನ್ನು ನನ್ನಿಂದ ಮುಚ್ಚಿಟ್ಟುಕೊಳ್ಳಲಾಗಿರಲಿಲ್ಲ ನಿನಗೆ.. ದಿನವೂ ಒಂದೊಂದೇ ಇಟ್ಟಿಗೆಗಳನ್ನು ಇಡುತ್ತ ಹೊರಟಿದ್ದೆ.. ಅದು ಯಾವಾಗ ನಮ್ಮಿಬ್ಬರ ನಡುವೆ ಗೋಡೆ ಎದ್ದು ನಿಂತಿತೊ ಗುರುತೇ ಆಗಲಿಲ್ಲ.. ನಂತರದಲ್ಲಿ ನಾನಿಲ್ಲಿ ಮಗ್ಗುಲ ಬದಲಿಸಿದರೆ ನೀನಲ್ಲಿ ಮಗ್ಗುಲ ಬದಲಿಸುತ್ತಾ ಇರುಳನ್ನು ಹಗಲಾಗಿಸುತ್ತಿದ್ದೆ.. ಬಹಳ ದಿನಗಳಿಂದ ನಿದ್ರೆ ಮಾತ್ರೆ ತೆಗೆದುಕೊಳ್ಳುತ್ತಿರುವಂತೆ.. ನಿದ್ರಿಸಲು ಆಗದೆ ಇರುವ ಕಾರಣವಾದರೂ ಏನು..  ಅದೇನನ್ನು ಮರೆತು ನಿದ್ರಿಸಲು ಯತ್ನಿಸುವೆ ನೀನು..

ನಿನ್ನ ರಿವಾಜಿನ ಹೆಜ್ಜೆಗಳ ಆಚೆಗಿನವಳು ನಾನು..
ದೂರದಿಂದಲೇ ಅವನಿಗೊಂದು ಆದಾಬ್ ಹೇಳುತ್ತೇನೆ..
ನಿನ್ನ ಜುದಾಯಿ ನನಗೂ ಕುಬೂಲ್ ಇದೆ.. ಹೋಗು..
ಕಿಸಿ ಕಿ ಜಿಂದಗಿ ಬನೆ ಕಿ ಬಂದಗಿ
ಮೆರೇಲಿಯೇ ತೊ ಮರ್ಗಯೇ ಹೋ ಖುಷ್ ರಹೋ..
.. ಖುದಾ ಹಾಫೀಸ್

About The Author

ಲಕ್ಷ್ಮಣ ಶರೆಗಾರ

ಲಕ್ಷ್ಮಣ ಶರೆಗಾರ ವಕೀಲ ವೃತ್ತಿ, ಗೋಕಾಕದಲ್ಲಿ ವಾಸ, ಮೂರು ಕಥಾಸಂಕಲನಗಳು ಪ್ರಕಟ ಆಗಿವೆ, ಗಝಲ್ ಸಂಕಲನ ಪ್ರಕಟಿಸುವುದಿದೆ.. ಬಿಡುಗಡೆ ಕತೆಗೆ, ಸುರಭಿ ಕಥಾಸ್ಪರ್ಧೆಯಲ್ಲಿ ಮೂರನೇ ಬಹುಮಾನ ಬಂದಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ