Advertisement
ನಾಗರಾಜ ವಸ್ತಾರೆ ಬರೆದ ಈ ಭಾನುವಾರದ ಕತೆ “ತಂತ್ರ”

ನಾಗರಾಜ ವಸ್ತಾರೆ ಬರೆದ ಈ ಭಾನುವಾರದ ಕತೆ “ತಂತ್ರ”

ಇಂತಹ ಶ್ರೇಯಾ ಈಗ ಏಕಾಏಕಿ ಹೀಗೇಕಾಗಿದ್ದಾಳೆ? ಇದು ಅವಳು ನನ್ನನ್ನು ಹಚ್ಚಿಕೊಂಡು ಹಪಹಪಿಸುತ್ತಿರುವ ಕಾರಣಕ್ಕೇ ಹೌದು. ಅದು ಚೆನ್ನಾಗಿಯೇ ಗೊತ್ತಿದೆ. ಅಥವಾ ಇದು ಬರೇ ದೈಹಿಕದ್ದೇ ಇರಬಹುದು. ಬಹುಶಃ ಮಾನಸಿಕವಾಗಿಯೂ ಇರಬಹುದು. ಒಟ್ಟಾರೆ ನನ್ನನ್ನು ಬಯಸುತ್ತಿದ್ದಾಳೆ ಅನ್ನುವುದಂತೂ ಖಾತ್ರಿಯೇ. ಇಷ್ಟಿದ್ದೂ ನಾನೇನು ತಾನೆ ಮಾಡಬಲ್ಲೆ? ಹದಿನೆಂಟು ಗಂಟೆಗಳ ನನ್ನ ಎಚ್ಚರದಲ್ಲಿ ನನಗಾಗಿಯೆಂದು ಎಷ್ಟು ತಾನೇ ಪಾಲು ಮೀಸಲಿಟ್ಟಿದ್ದೇನೆ? ಕೆಲಸ ಮತ್ತು ಮನೆಗಳ ಆಚೆ ನನ್ನದು ಅಂತ ಬದುಕನ್ನು ನಾನೆಂದೂ ಕನವರಿಸಿದವನಲ್ಲ. ಈ ಸಲವಾದರೂ ಒಂದು ವಾರ ಕೆಲಸಕ್ಕೆ ಬಿಡುವು ಕೊಟ್ಟು ಎಲ್ಲಾದರೂ ಹೋಗಿಬರಬೇಕು. ಒಂದಷ್ಟು ತುಷ್ಟಿಯಾದೀತು.
ನಾಗರಾಜ ವಸ್ತಾರೆ ಬರೆದ ಕತೆ “ತಂತ್ರ” ನಿಮ್ಮ ಈ ಭಾನುವಾರದ ಓದಿಗೆ

ಆಟೋದ ಬೆನ್ನಿನಲ್ಲಿ ಬರೆದಿದ್ದು ಓದಿ ನಗು ಉಗ್ಗುಗ್ಗಿ ಬಂತು. ಜೀವಿತವೆಂಬುದೇ ಭೌತ-ರಸಾಯನದ ಕಲಕು ಅಂತ ನಂಬಿಸುತ್ತಿರುವ ಈ ಮಂದಿಯ ನಡುವೆ ಬದುಕನ್ನು ಏನಂತ ಹೇಳಿಕೊಳ್ಳುವುದು? ಪ್ರೀತಿಯಂತ ಪ್ರೀತಿಯೇ ಬರೇ ಕೆಮಿಸ್ಟ್ರಿ ಅಂತ ಹೇಳಿ ಅದು ಹುಟ್ಟಿಸುವ ರೋಚಕತೆಯನ್ನೇ ಕಳೆದು, ಅದರ ಅಮೂರ್ತಗಳನ್ನೂ ಇವು ಇಷ್ಟೇ ಅಂತ ನಿರ್ಣಾಯಕವಾಗಿ ತಿದ್ದುವುದಾದರೆ ಬದುಕಿಗೊಂದು ಸಿಲಬಸ್ಸೇ ಬರೆದುಬಿಡಬಹುದು. ಆಕಳಿಕೆಗೆ, ತೂಕಡಿಕೆಗೆ ಆಕ್ಸಿಜನೇಷನ್ನಿನ ಕಾರಣವನ್ನು, ಪುಳಕಕ್ಕೆ ಅಡ್ರಿನಾಲಿನ್ ಸಬೂಬನ್ನು ಕೊಟ್ಟುಕೊಳ್ಳುವ ಕಾಲವಿದು. ಇನ್ನು ಖಿನ್ನತೆಗೆ ಇನ್ನೆಂತದೋ ಸ್ರಾವದ ನೆವ. ಮುಟ್ಟು ದೂಡಲಿಕ್ಕೆ ಗುಳಿಗೆಗಳು. ಉಳಿಸಿಕೊಳ್ಳಲಿಕ್ಕೆ ಹಾರ್ಮೋನು. ಆಹ್ಲಾದಕ್ಕೆ ಟ್ರ್ಯಾಂಕ್ವಿಲೈಸರು… ಹೀಗೆಯೇ ಹುಟ್ಟೂ, ಅದನ್ನು ತಡೆಯುವುದೂ ಇಷ್ಟು ಕೈಗೆಟಕುವಷ್ಟು ಸುಲಭವಾಗಿಬಿಟ್ಟರೆ! ನಗೆ ಉಗ್ಗಿ ಬಂತು… ‘ಯಾಕೆ? ಯಾಕೆ ನಗುತಿರೋದು?’ ಅಂತ ಕೇಳಿದಳು. ‘ಏನಿಲ್ಲ… ಸುಮ್ಮನೆ ನಕ್ಕೆ ಅಷ್ಟೆ.’ -ಎಂದು ಮಾತು ತೇಲಿಸಲು ಹೊಂಚಿದೆ. ಕೇಳಲಿಲ್ಲ. ತೇಲಲೂ ಇಲ್ಲ. ‘ಏನೂ ಇಲ್ಲ ಶ್ರೇ… ಸುಮ್ಮನೆ ನಕ್ಕಿದ್ದಷ್ಟೆ.’ ಅಂತ ಮತ್ತೆ ಹೇಳಿದೆ. ಸತಾಯಿಸುತ್ತಿದ್ದೇನೆಂದು ಅನಿಸಿದ್ದಿರಬೇಕು. ‘ಪ್ಲೀಸ್.. ಯಾಕೆ ನಕ್ಕಿದ್ದು ಹೇಳೂ… ನನ್ನ ಮೇಲಂತೂ ನಕ್ಕಿದ್ದಲ್ಲ ತಾನೆ?’ ನನಗೆ ವಿಷಯ ಗಂಭೀರವೆನಿಸಿದ್ದು ಆಗಲೇ. ಈಚೀಚೆಗಂತೂ ಈ ಶ್ರೇಯಾ ನಮ್ಮ ನಡುವಿನ ಅನಗತ್ಯ ಕ್ಷುಲ್ಲಕಗಳನೆಲ್ಲ ಗುಡ್ಡೆ ಹಾಕಿಕೊಂಡು ಅದರೆದುರು ಮರುಗಲೂ, ಕರುಬಲೂ ತೊಡಗಿಬಿಡುತ್ತಾಳೆ. ಎಂತೆಂಥ ಸಾಂತ್ವನಕ್ಕೂ ಬಗ್ಗದ, ಜಗ್ಗದ ದುಮ್ಮಾನದ ಗುಡ್ಡ ಅದು. ತನ್ನ ಬಗ್ಗೆ ತಾನೇ ವಿಶ್ವಾಸ ಕಳೆದುಕೊಂಡವಳ ಹಾಗೆ ಏನೇನೋ ಬಡಬಡಿಸುತ್ತಾಳೆ. ಕನಲಿದರೆ ಹಂಚಿಕೊಳ್ಳಲು ತನಗೆ ಯಾರೂ ಇಲ್ಲ ಅಂತ ಮುದುಡಿಬಿಡುತ್ತಾಳೆ. ಒಳಗೇ ಕೊರಗುತ್ತಾಳೆ. ಹೀಗೊಮ್ಮೆ ಅರೆಯುಳಿದ ಮಾತು ಒಳಗೇ ಕೀವುಗಟ್ಟುತ್ತ ಹುಣ್ಣಾಗಿ ಇನ್ನೊಮ್ಮೆ ಇನ್ನೆಲ್ಲೋ ಒಡೆದುಕೊಳ್ಳುತ್ತದೆ. ಆಗೆಲ್ಲ ಹಿಂದೊಮ್ಮೆ ಕಿವಿಯೊದಗಿಸದ್ದಕ್ಕೆ ನನಗೆ ನಾನೇ ಶಪಿಸಿಕೊಳ್ಳುವಂತಾಗುತ್ತದೆ.

‘ಈಗ ನೀನು ಹೇಳಲ್ಲ ಅಂದರೆ ನನ್ನ ಮೇಲಾಣೆ… ಹೇಳದಿದ್ದರೆ ನಂಗೊತ್ತಿಲ್ಲ. ನಾನೇನು ಮಾಡಿಬಿಡುತೀನಿ ಅಂತ…’ ಕೂಡಲೇ ಒಂದು ಧಮಕಿ. ದೇವರಾಣೆ, ತಾಯಾಣೆಗಳನ್ನು ಶ್ರೇಯಾ ಆಗಾಗ ಮಾಡುತ್ತಲೇ ಇರುತ್ತಾಳೆ. ಅಷ್ಟೇ ಶ್ರದ್ಧೆಯಿಂದ ಅವುಗಳನ್ನು ಪಾಲಿಸುತ್ತಾಳೆ. ಅವುಗಳ ಮೇಲೆ ಹೂಡುವ ನಿಯತ್ತುಗಳಲ್ಲಿ ಕಾಲಂಶವನ್ನಾದರೂ ತನ್ನ ಮೇಲೆ ತಾನೇ ನಂಬಿಕೆಯಂತೆ ತಂದುಕೊಂಡರೆ ಪ್ರಮಾದವೇ ಇರುತ್ತಿರಲಿಲ್ಲ. ಹೀಗಿರುವುದು ಬಹಳ ಸಾಮಾನ್ಯ ಅಂದುಕೊಂಡಿದ್ದಾಳೋ ಏನೋ… ಆದ್ದರಿಂದಲೇ ಉಳಿದ ಜಗತ್ತನ್ನು ಅವಳು ನಂಬುವುದಿಲ್ಲ. ಅಥವಾ ಆ ಜಗತ್ತಿಗೆ ಅವಳಿಗಿರುವಷ್ಟು ಶ್ರದ್ಧೆಯಿಲ್ಲ. ನಾನೂ ಅವಳ ಮಟ್ಟಿಗೆ ಈ ಉಳಿದ ಜಗತ್ತೇ ಆಗಿಬಿಟ್ಟಿದ್ದೀನೇನೋ…  ‘ಶ್ರೇ… ಶ್ರೇ… ಇಷ್ಟಕ್ಕೆಲ್ಲ ಅದೆಂಥ ಆಣೆಪಾಣೇನೋ! ಎದುರಿಗೆ ಒಂದು ಆಟೋ ಹೋಗ್ತಾ ಇದೆ. ಅದರ ಹಿಂದೆ ಏನೋ ಬರೆದಿತ್ತು. ಓದಿ ನಗು ಬಂತು ಅಷ್ಟೆ…’ -ಅಂದೆ. ಆದರೆ ಇಷ್ಟಕ್ಕೇ ಪಟ್ಟು ನಿಲ್ಲಬೇಕಲ್ಲ? ‘ಎಲ್ಲಿ? ಏನು ಬರೆದಿದೆ ಅಂತ ಇನ್ನೊಂದು ಸಲ ಓದು. ನಾನೂ ನಗುತೀನಿ…’ ಯಾಕೋ ಏನೋ ನನಗೆ- ಅಲ್ಲಿ ಬರೆದಿದ್ದುದನ್ನು ಓದಿ ಹೇಳಲು ಹಿಂದೇಟು. ಸುಳ್ಳು ಹೊಸೆಯಲು ಹೆಣಗಿ ಆ ಕ್ಷಣಕ್ಕೆ ತಕ್ಕ ಹಾಗೆ ಅವಳನ್ನು ನಗಿಸಬಹುದಾದದ್ದು ಹೇಳಲಿಕ್ಕೆ ಹೊಳೆಯದೆ ಹಪಹಪಿಸಿದೆ. ‘ಛೀ ಕಳ್ಳ ಅಂತ ಬರೆದಿದೆ…’ ಅಂದೆ. ‘ಇದು ನಗು ಬರೋ ಅಂತ ವಿಷಯಾನಾ? ನೀನೇನೋ ಮುಚ್ಚಿಡುತಾ ಇದ್ದೀ… ಇಲ್ಲಾ ಹೇಳಲ್ಲ ಅಂತ ಹೇಳಿಬಿಡೂ. ಇನ್ನು ಮೇಲೆ ನಿನ್ನ ಯಾವ ವಿಷಯಕ್ಕು ತಲೆ ಹಾಕುಲ್ಲ…’ ವಿಪರೀತಕ್ಕೆ ಹೋಗುತ್ತಿದೆ ಅನ್ನಿಸಿತು. ಇನ್ನು ಅತಿರೇಕವಾದರೆ ಸುಖಾಸುಮ್ಮನೆ ರೇಜಿಗೆ. ಮುನಿಸಿಕೊಂಡವಳನ್ನು ರಮಿಸಿ ಒಲಿಸಿಕೊಳ್ಳಲಿಕ್ಕೆ ವ್ಯಯವಾಗುವ ಸಮಯವನ್ನೇ ಆ ಮುನಿಸಿಗೆ ಎಡೆಯಾಗದ ಹಾಗೆ ವಿನಿಯೋಗಿಸುವುದು ಕ್ಷೇಮ ಮತ್ತು ಜಾಣತನ. ಇದು ಲೆಕ್ಕಾಚಾರವೇ ಇದ್ದಲ್ಲಿ ಹೀಗೆ ಮಾಡುವುದರಿಂದ ಸಮಯದ ಉಳಿತಾಯವೂ ಆದೀತು. ಇವಿಷ್ಟೂ ನಾನು ಈ ದಾಂಪತ್ಯದಿಂದ ಕಲಿತಿರುವ ಪಾಠವೆಂತಲೇ ಹೇಳಬೇಕು… ಸದ್ಯಕ್ಕಂತೂ ಇನ್ನೇನೋ ಹೇಳಿ ಮರೆಸಲು ನೋಡಿದರೂ ಮಾತು ತೇಲಲಿಲ್ಲ. ಕೊನೆಗೂ ಅದನ್ನು ಓದಲೇಬೇಕಾಯಿತು. `Worried about getting pregnant after last night? Eat this pill before seventy-two hours…!’ ಎಂದು ಓದುತ್ತ ಮೆಲ್ಲಗೆ ನಕ್ಕೆ. ಅವಳು ನಗಲಿಲ್ಲ. ವೃಥಾ ವಿಷಯಾಂತರವಾಗಿ ಮಾತು ಇನ್ನೆಲ್ಲೋ ಜಡಿದುಕೊಂಡಿತು.

‘ಅಂದರೆ ನೀನು ನನ್ನ ಬಗ್ಗೆನೇ ನಕ್ಕಿದ್ದು ಅಂತ ಗ್ಯಾರಂಟಿ ಆಯಿತು. ನನಗೆ ಈ ಮಾತ್ರೆ ತಗೊಳ್ಳೋ ಯೋಚನೆನೇ ಇಲ್ಲವಲ್ಲ ಬಿಡೂ… ಬಸಿರಾಗೋ ಚಿಂತೆ ಬರಲಿಕ್ಕೆ ಹಿಂದಿನ ರಾತ್ರಿಯೇನಾದರೂ ಜರುಗಿರಬೇಕಲ್ಲವಾ? ಹ್ಞುಂ… ಎಲ್ಲ ನನ್ನ ಭ್ರಾಂತು ಅಷ್ಟೆ. ನಿನಗೆ ನನ್ನ ಬಗ್ಗೆ ಆಸಕ್ತಿಯೇ ಇಲ್ಲವಲ್ಲ…? ನಿನಗೇ ಯಾಕೆ- ಯಾರಿಗೂ ನಾನು ಬೇಡವಾಗಿದ್ದೀನಲ್ಲ…’ ಅಂತ ಒಂದೇ ಸಮ ಮುಸುಮುಸುವಿಗೆ ತೊಡಗಿಬಿಟ್ಟಳು. ನಿನಗೆ ಹೀಗೆ ಮನೆ ಬಿಟ್ಟು ಹೋಗಲಿಕ್ಕೆ ಹೇಳಿದ್ದು ನಾನಾ? ಅಥವಾ… ಬೇಡವಾಗಿದ್ದು ನನಗೆ ನೀನಾ ಇಲ್ಲಾ ನಿನಗೆ ನಾನಾ? ಮದುವೆ ಆದ ಮೇಲೆ ಒಂದು ದಿನವೂ ತವರಿಗೆ ಅಂತ ಹೋಗಿಲ್ಲವಲ್ಲೇ ಅಂತ ಕೇಳಿದರೆ ನಾನು ಯಾವತ್ತೂ ನಿನ್ನನ್ನು ಬಿಟ್ಟು ಹೋಗೋದಿಲ್ಲಪ್ಪ. ಇಷ್ಟಕ್ಕೂ ನನಗೆ ತವರೂ ಅಂದರೆ ಮಗ್ಗುಲು ರೋಡೇ ತಾನೇ? ಸುಮ್ಮನೆ ಈ ಬದಿ ನಿಂತು ಮೇಯಿನ್ ರೋಡ್‍ನಲ್ಲಿ ಎಡವಿದರೆ ಸಾಕು- ಸೀದಾ ಅಮ್ಮನ ಬಡ್ಡೆ ಅಂತ ನೀನೇ ಹೇಳುತಿರುತೀಯಲ್ಲಾ… ಅಂತೆಲ್ಲ ಹೇಳುತ್ತಿದ್ದವಳು ಈಗ ಇದ್ದಕ್ಕಿದ್ದಂತೆ ಯಾವುದೋ ಕರೆಗೆ ಓಗೊಟ್ಟ ಹಾಗೆ- ಕರೀ… ಒಂದಷ್ಟು ದಿನ ನಮ್ಮಮ್ಮನ ಮನೆಗೆ ಹೋಗಿಬರಲಾ… ಅಂತ ಶನಿವಾರ ಸಂಜೆ ಲಲ್ಲೆಗೆ ತೊಡಗಿದವಳು ನೀನೇ ತಾನೆ? ನಾನು ಹ್ಞೂಂಗುಟ್ಟಿದ್ದಕ್ಕೆ, ಅಂದರೆ ನೀನು ನನ್ನನ್ನು ಬಿಟ್ಟಿರುತೀಯಾ ಅಂತ ತಗಾದೆ ತೆಗೆದೆಯೆಂದು- ಸರಿ ಇಲ್ಲೇ ಇರು ಪುಟ್ಟೂ… ಅಂದಿದ್ದಕ್ಕೆ, ಇಲ್ಲ… ಅಮ್ಮಂಗೆ ಯಾಕೋ ನನ್ನ ಜತೆ ಇರಬೇಕು ಅನಿಸಿದೆಯಂತೆ. ಅವಳು ಇಲ್ಲಿ ಬಂದುಬಿಟ್ಟರೆ ನಮ್ಮಣ್ಣನ್ನ ಯಾರು ನೋಡಿಕೊಳ್ಳೋದು ಅಂತ ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಬಟ್ಟೆಬರೆ ಜೋಡಿಸಿಕೊಂಡು ಸಂಭ್ರಮಿಸಿದ್ದು ನೀನೇ ತಾನೆ? ಆಮೇಲೆ ಆ ಒಂದಷ್ಟು ದಿನದ ಮಟ್ಟಿಗೆ ನೀನು ಹೊರಟ ರೀತಿ? ಮೂರು ಸೂಟ್‍ಕೇಸು, ನಾಲ್ಕು ಕಿಟ್‍ಬ್ಯಾಗು, ಎರಡು ದಿನದ ಬಟ್ಟೆಗಳ ಗೂಡೆ, ಮೇಕಪ್ ಕಿಟ್ಟೂ… ನಿನ್ನ ಸಕಲ ಸಂಪದವನ್ನೆಲ್ಲ ಹೊತ್ತು ಹೊರಟೆಯಲ್ಲ… ಯಾಕಮ್ಮಾ ಇದನ್ನೆಲ್ಲ ಎತ್ತಿಕೊಂಡು ಹೊರಟೆ ಅಂತ ಅಮ್ಮ ಕೇಳಿದ್ದಕ್ಕೆ, ಪದೇ ಪದೇ ಎಲ್ಲಿ ಬರೋಕಾಗುತ್ತೆ, ಅತ್ತೆ.. -ಅಂತ ಮೆಲ್ಲಗೆ ನುಣುಚಿಕೊಂಡಿದ್ದು ಯಾರು? ನಿನ್ನ ಜತೆ ನಿನ್ನ ಸಂಪತ್ತನ್ನು ಸಾಗಿಸಲಿಕ್ಕೆ ಇನೋವಾದಲ್ಲಿ ಮೂರು ಟ್ರಿಪ್ ಆಗಿತ್ತು. ಈಗ ನನ್ನನ್ನೇ ದೂರುತೀಯಲ್ಲ…. -ಹೀಗೆಲ್ಲ ಕೇಳಬೇಕು ಅನಿಸಿತು. ಕೇಳಲಿಕ್ಕಾಗಲಿಲ್ಲ. ಕೇಳುವ ವ್ಯವಧಾನವಾಗಲಿ, ಕೇಳಿಸಿಕೊಳ್ಳುವ ಪುರುಸೊತ್ತಾಗಲೀ ಇರಲಿಲ್ಲ. ಈ ಊರಿನ ಬದುಕಿನಲ್ಲಿ ನಮ್ಮ ವ್ಯವಧಾನಕ್ಕೇ ದಾಕ್ಷಿಣ್ಯ.

ಎದುರಿನ ವಿಂಡ್‍ಷೀಲ್ಡ್‌ನಲ್ಲಿ ತೋರಿಕೊಳ್ಳುವ ಚಿತ್ರಗಳು ರಭಸದಿಂದ ಎಡಬಲಗಳಲ್ಲಿ ಪಂಗಡಿಸಿಕೊಂಡು ಬೈತಲೆಯಂತಹ ರಸ್ತೆಯ ನೇರ ಹಿಂದೆ ಸಾಗಿ ಒಂದಾಗುತ್ತಿದ್ದವು. ಫುಡ್‍ವರ್ಲ್ಡ್, ಸ್ಪೆನ್ಸರ್ಸ್, ವೀಕೆಂಡರ್‍‍ನ ಫ್ಯಾಕ್ಟರಿ ಔಟ್‍ಲೆಟ್, ಬದಿಗೇ ಟೈಟಾನ್ ಶೋರೂಮ್, ಅದರೆದುರು ಮಣಿಕಟ್ಟು ಬೀಗುತ್ತಿರುವ ಅಮೀರ್‍‍ಖಾನು… ಶಾರುಖ್ ಗುಳಿಯಿಟ್ಟು ನಗುತ್ತಿರುವ ವಿಡಿಯೋಕಾನು… ಸಿಗ್ನಲ್ಲುಗಳ ಕೆಂಪು, ಹಳದಿ, ಹಸಿರು. ಎದುರುಬದುರಿನಿಂದ ಹಾಯುವ, ಅದಿಬದಿಗಳಿಂದ ಬಿರುಸುಯ್ಯುವ ಬೈಕು, ಮೊಪೆಡ್ ಮಂದಿ. ಅಲ್ಲೊಂದು ಮರಳು ತುಂಬಿದ ಲಾರಿಯ ಏದುಸಿರು. ಹಿಂದೆಯೇ ರಸ್ತೆಯ ಏರಿಗೆ ಏಗಲಾಗದೆ ಜಡಿದ ಬಸ್ಸು, ಕಾರುಗಳ ಉಬ್ಬಸ. ಮೇರು ಮೇ ಮಧ್ಯಾಹ್ನವಾದ್ದರಿಂದ ಧಗೆಯಲ್ಲಿ ಬೆರೆತ ಹೊಗೆ ಹೊಗೆ ಮೋಡ. ಒಳಗಿನ ಹವಾನುಕೂಲದ ತಂಪಿದ್ದರೂ ಹೊರಗಿನ ಧೂಳು ಹುಟ್ಟಿಸುವ ಎಂಥದೋ ಮುಜುಗರ. ಅಲ್ಲಲ್ಲಿ ಇಣಿಕಲು ಹೆಣಗುವ ಕಳೆದ ಯುಗಾದಿಯ ಚಿಗುರು ಹಸಿರಾದ ಚೂರುಪಾರು ಪುಳಕ. ಇಂತಹ ಚಿತ್ರಗಳ ನಡುವೆ ಸದರಿ ವಿಷಯ ಬಸಿರು ಕಟ್ಟದ ಹಾಗೆ ತಡೆಯುವ ಗುಳಿಗೆಗಳಿಂದ ಸುರುಗೊಂಡಿದ್ದಕ್ಕೇನೋ ಕಣ್ಣೆದುರೇ ಎಣಿಸುವ ಹಾಗೆ ಇನ್ನಷ್ಟು ಆಟೋ-ಬೆನ್ನುಗಳ ಫಲಕ ಕಂಡವು. ಐದು… ಆರು… ಏಳು…. ಎಂಟು…. ತುಸು ಗಟ್ಟಿಯಾಗೇ ಎಣಿಸಿದೆ. ಸ್ಟಿಯರಿಂಗ್‍ನಿಂದಲೇ ರಾಜೇಶ ವಾರೆಗಣ್ಣಿನಲ್ಲಿ ನನ್ನನ್ನು ಅಳೆದು ಸೋಜಿಗಗೊಂಡಿದ್ದ. ‘ಏನು ಎಣಿಸುತ್ತಿದ್ದೀ…?’ ತಡೆದು ಕೇಳಿದಳು. ‘ಎಷ್ಟೊಂದು ಆಟೋ ಮೇಲೆ ಅದೇ ಬೋರ್ಡ್ ಇದೆ… ಎಣಿಸುತಾ ಇದ್ದೆ..’ ನಕ್ಕೆ. ‘ನಿನ್ನದು ಯಾವತ್ತಿದ್ದರೂ ನಿನ್ನದೇ ಯೋಚನೆ. ನನ್ನನ್ನು ಯಾವತ್ತಾದರೂ ಈ ಮಾತ್ರೆ, ಗೀತ್ರೆ ಬಗ್ಗೆ ಯೋಚಿಸೋ ಹಾಗೆ ಮಾಡಿದ್ದೀಯೇನು? ಯಾವಾಗಲೂ ನಿನಗೆ ಕೆಲಸ. ಕೆಲಸ ಬಿಟ್ಟರೆ ಮನೆ, ನಿದ್ದೆ… ಇಷ್ಟೇ ಆಗಿಹೋಯಿತು. ಅಲ್ಲಾ. ನಾನು ಯೋಚಿಸುತ್ತಿದ್ದೆ. ನೀನು ಆ ನಿನ್ನ ಫ್ರೆಂಡು ಪ್ರಖ್ಯಾತ್ ಜತೆ ಮಾತಾಡುವಾಗ ತೋರೋ ಉತ್ಸಾಹವನ್ನೂ ನನ್ನ ಜತೆ ತೋರಿಸೋಲ್ಲವಲ್ಲ?’ ದುಗುಡ ಬಿಕ್ಕಿತು. ‘ಹಲೋ… ಪ್ರಖ್ ನನ್ನ ಕೆಲಸಕ್ಕೆ ಸರ್ವಿಸ್ ಕೊಡೋ ಇಂಜಿನಿಯರ್ ತಾನೆ? ಅವನ ಜತೆ ಮಾತಾಡಿದರೆ ತಪ್ಪಾ?’ ರೇಗಿದೆ. ‘ಛೇ! ನಾನು ಹೇಳಿದ್ದು ಹಾಗಲ್ಲ. ಅವನ ಜತೆ ಮಾತಾಡುವಾಗಿರೋ ಸಲೀಸು ನನ್ನ ಜತೆ ಇರೋಲ್ಲವಲ್ಲ ಅಂತ ಬೇಜಾರು… ನನಗೆ ಗೊತ್ತು- ನಾನು ನಿನಗೆ ಬೇಡವಾಗಿದ್ದೀನಿ ಅಂತ… ಅದಕ್ಕೆ ಅಮ್ಮನ ಮನೆಗೆ ಬಂದಿದ್ದೂ…’ ದುಗುಡ ಬಿಕ್ಕಿತು.  ‘ಶ್ರೇ… ಹಾಗೆ ನಾನು ಯಾವತ್ತಾದರೂ ಹೇಳಿದೀನಾ? ಬೇಡ ಅಂದರೆ ನಾನೇ ಹೇಳುತೀನೋ…’

‘ಅಂದರೆ ಹಾಗೆ ಹೇಳೋ ದಿನವೂ ಬರುತ್ತೆ ಅಂತಾಯಿತು… ನಾನೂ ಯಾತಕ್ಕೂ ರೆಡಿ ಇರಬೇಕು. ಹೇಗಿದ್ದರೂ ಅರ್ಧಕ್ಕರ್ಧ ಸಾಮಾನು ಸಾಗಿಸಿದ್ದಾಗಿದೆ. ಇನ್ನೊಂದು ಸ್ವಲ್ಪ ದಿನಕ್ಕೆ ಇಬ್ಬರಿಗೂ ಒಬ್ಬರಿಗೊಬ್ಬರು ಇಲ್ಲದೆ ಇರೋದೂ ಅಭ್ಯಾಸ ಆಗಿಬಿಡುತ್ತೆ….’ ಹೇಗೆ ಸಂತೈಸುವುದು ಇವಳನ್ನು? ಮೆಲ್ಲಗೆ ಲಲ್ಲೆಯಿಟ್ಟು ರಮಿಸೋಣವೆಂದರೆ ಕೆಲಸದ ನಡುವಿನ ಹೊತ್ತು. ಪೀಣ್ಯದಲ್ಲಿ ಮೂರಕ್ಕೆಲ್ಲ ಇರಬೇಕು. ಜತೆಗೆ ರಾಜೇಶನ ಸಾರಥ್ಯವೂ ಇರುವಾಗ ಗುಟ್ಟು ಹೇಗೆ ಸಾಧ್ಯ? ಕೆಲಸವಿಲ್ಲದೆ ಇವಳನ್ನು ಕರೆದಿದ್ದೇ ತಪ್ಪಾಯಿತಲ್ಲ? ಮುಚ್ಚಿಕೊಂಡು ಇರಬೇಕಿತ್ತು. ಆಗಿದ್ದು ಆಗಲಿ ಅಂತ… ಬೆಳಿಗ್ಗೆ ಏಳಕ್ಕೆಲ್ಲ ಫೋನು ಮಾಡಿ ‘ಆಮೇಲೆ ಕೆಲಸದಲ್ಲಿ ಬ್ಯುಸಿಯಾಗಿ ಬಿಡುತೀ… ಆಗಾಗ ಫೋನು ಮಾಡು’ ಅಂತ ಹೇಳಿದ್ದಳು. ಕಡಿದ ಕೂಡಲೇ ಕರೆದಿದ್ದಕ್ಕೆ- ‘ನಿಂಗೇನು ಬೇರೆ ಕೆಲಸ ಇಲ್ಲವಾ? ಈಗ ತಾನೇ ಫೋನಿಟ್ಟಿದೀನಿ’ ಅಂತ ತಮಾಷೆಗೆ ಕನಲಿದ್ದಳು. ಮತ್ತೆ- ‘ಫೋನು ಮಾಡುತಾ ಇರೋ ಪ್ಲೀಸ್…’ ಅಂತ ಮೊರೆದು ಮೊರೆಯಿಟ್ಟಿದ್ದಳು. ಬೆಳಗಿನಿಂದ ಲೆಕ್ಕವಿಟ್ಟಂತೆ ಮೂರು ಸರ್ತಿ ಮಾತನಾಡಿ ಮತ್ತೆ ಮಧ್ಯಾಹ್ನ ಮೊಬೈಲಿಗೆ ಕರೆಯುವುದಾಗಿ ಹೇಳಿದ್ದೆ. ಮೀಟಿಂಗಿನ ತಯ್ಯಾರಿ ಪೂರ್ತಿ ಮುಗಿದಿರಲಿಲ್ಲ. ಒಂದೂವರೆ ತಾಸಿನ ದಾರಿಯಲ್ಲಿ ಲ್ಯಾಪ್‍ಟಾಪ್ ತೆರೆದು ಹುದುಗಿಕೊಳ್ಳುವ ಮೊದಲು ಇವಳನ್ನೊಮ್ಮೆ ವಿಚಾರಿಸಿದರಾಯಿತು ಅಂತ ಡಯಲು ಹಚ್ಚಿದ್ದೆ. ಆಗಬಾರದ್ದು ಆಯಿತು. ‘ನಿನಗೇನು ನನ್ನ ಜತೆ ಕಾಲ ಕಳೆಯಬೇಕು ಅಂತ ಯಾವತ್ತೂ ಅನಿಸೋದೇ ಇಲ್ಲವಾ ಕರೀ? ನಾವಿಬ್ಬರೇ ಆಚೆ ಹೋಗಬೇಕು… ರೊಮಾನ್ಸ್ ಮಾಡಬೇಕು. ಮುದ್ದು ಮಾಡಬೇಕು ಅಂತ ಅನಿಸೋದೇ ಇಲ್ಲವಲ್ಲ? ನನ್ನ ಬಲವಂತಕ್ಕೆ ಎಲ್ಲಾದರೂ ಬರುತೀಯ. ದಿನ ಪೂರ್ತೀ ನಿದ್ದೆ ಮಾಡುತೀಯ. ಹಾಗೇ ಇಬ್ಬರಿಗೂ ವಯಸ್ಸಾಗಿಬಿಡುತ್ತೆ… ಒಂದು ಸಲ ಒಂದು ಸಲನಾದರೂ ಶ್ರೇಯಾ ಎಲ್ಲಾದರೂ ಹೋಗಿಬರೋಣ ಕಣೆ ಅಂತ ಹೇಳಿದ್ದೀಯಾ? ಆಫೀಸು ಕೆಲಸ ಅಂದರೆ ಎಲ್ಲ ಬಿಡುವು ಹೊಂದುತ್ತೆ ತಾನೆ? ನನಗೋಸ್ಕರ ಅಂದರೆ ಆಗೋಲ್ಲ ಅಲ್ಲವಾ?’ ಪ್ರಲಾಪವೋ ಪ್ರವಾಹವೋ ತಿಳಿಯಲಿಲ್ಲ. ‘ಯು ಈಸ್ ಔಟ್ ಹನೀ… ಮತ್ತೆ ಮಾಡುತೀನಿ.’ ಸಮಜಾಯಿಷಿಸಿದೆ. ಒಪ್ಪಲಿಲ್ಲ. ‘ಮೀಟ್ ಮಾಡೋಣ, ಒಡನಾಡೋಣ ಅನ್ನೋ ಮಾತೇ ಇಲ್ಲವಲ್ಲ… ಮನೆ ಬಿಟ್ಟು ಮೂರು ದಿನ ಆಯಿತು. ಈ ತನಕ ಒಂದು ಅಕ್ಕರೆಯ ಮಾತು ಹೇಳಿದೀಯಾ?’ ಅಷ್ಟರಲ್ಲಿ ಮೂರು ನಾಲ್ಕು ಸರ್ತಿ ನಡುವೆ ಮೊಬೈಲು ಕುಂಯಿಗುಟ್ಟಿದ್ದಾಗಿತ್ತು. ಕಾಲ್ ವೇಯ್ಟಿಂಗ್… ಎಡೆಬಿಡದೆ ಯಾರೋ ಕರೆಯುತ್ತಿದ್ದರು. ಒಂದೆರಡು ಬೀಪುಗಳೂ ಆದವು. ‘ಯಾರೋ ಟ್ರೈ ಮಾಡುತಿದಾರೆ ಕಾಣುತ್ತೆ… ಮತ್ತೆ ಮಾಡುತೀನಿ..’ ಅಂತ ಕಡಿಯಲು ಹವಣಿಸಿದೆ. ‘ಯಾವಾಗ? ಮಾಡುತೀ ತಾನೆ? ಕಾಯುತಾ ಇರುತೀನಿ…’ ಅವಳು ಪೂರೈಸುವ ಮೊದಲೇ ಬೈ ಎಂದೆ.

ಏಳು ಮಿಸ್ಸಾದ ಕರೆಗಳೂ, ನಾಲ್ಕು ಮೆಸೇಜುಗಳೂ ತೆರೆಯಲ್ಲಿ ತೋರಿ ಬಂದವು. ಯಾರದೆಂದು ನೋಡುವ ಮೊದಲೇ ಅಹಾನ್ ಕರೆಯತೊಡಗಿದ್ದ. ‘ಹಾಯ್ ಬಡೀ, ಏನು ಸಮಾಚಾರ? ಸಂಜೆ ಮೇಲೆ ಮಾಡಿದರೆ ಆಗುತ್ತಾ? ಏನಾದರೂ ಅರ್ಜೆಂಟಿದೆಯಾ?’ ಅವನೊಟ್ಟಿಗೆ ಸಂಜೆ ಏಳರ ಬಳಿಕದ ಮೀಟಿಂಗೊಂದನ್ನು ಒಡಂಬಡಿಸುವಾಗಲೇ ಮುನಿಯ ಫೋನು. ಅವನ ಜತೆ ಎರಡು ಮೂರು ನಿಮಿಷ ಮಾತು. ಮೂರನೇ ಫ್ಲೋರಿನ ಏಳು ಮತ್ತು ಎಂಟನೇ ಗ್ರಿಡ್‍ಗಳಲ್ಲಿರುವ ಕಂಭಗಳ ಲಂಬದಲ್ಲೇನೋ ಎಡವಟ್ಟಾಗಿದೆ ಅಂತ ಒಂದೇ ಸಮ ಹಾರಾಡಿದ. ಎದುರಿಗೆ ಅದರ ನಕ್ಷೆಯಿಲ್ಲದೆ ಏನೂ ಹೇಳುವುದು ಕಷ್ಟ. ಆಫೀಸಿಗೆ ವಾಪಸಾದ ಮೇಲೆ ಕರೆಯುವುದಾಗಿ ಹೇಳಿದೆ. ಆಫೀಸಿಗೆ ಕರೆ ಹಚ್ಚಿ ಅಲಗುವಿಗೆ ಅದರ ವಿವರಗಳನ್ನು ಪ್ರಿಂಟ್ ಮಾಡಿ ಒಂದು ಪ್ರತಿಯನ್ನು ಕಂಟ್ರಾಕ್ಟರಿಗೆ ಕಳಿಸಲು ಹೇಳಿದೆ. ಅಷ್ಟರಲ್ಲಿ ಮನೀಷಾ ರೆಡ್ಡಿ ಎರಡು ಸರ್ತಿ ಕರೆದಿದ್ದರು. ಅವರ ಸೈಟಿನಲ್ಲಿನ ಅಹವಾಲು ಕೇಳುತ್ತಿರುವಾಗಲೇ ಪ್ರಿಯಂವದಾ ಗಂಗೂಲಿ… ಬಳಿಕ ಡಾಕ್ಟರ್ ರೂಪೇಂದು… ಒಂದರ ಮೇಲೊಂದು. ಸಾಕು ಸಾಕಾಗಿಹೋಯಿತು. ಈ ಕರೆಗಳೇ ಹೀಗೆ. ಒಂದು ಕಡೆ ಕುಳಿತು ಹಿಡಿದ ಕೆಲಸ ಮುಗಿಯಗೊಡದ ಹಾಗೆ ಸತಾಯಿಸುತ್ತವೆ. ಹಾಳು ಮೊಬೈಲು ಆಫ್ ಮಾಡೋಣವೆಂದರೆ ಎಂಥದೋ ಮುಲಾಜು. ಇನ್ನಿತರೆ ಲೋಕದೊಟ್ಟಿಗಿನ ನಂಟು ಕಳೆದು ಅದರ ಜತೆಗಿನ ಓಟದಲ್ಲಿ ಹಿಂದುಳಿದುಬಿಟ್ಟರೆ ಎನ್ನುವ ತಣ್ಣನೆ ಭಯ. ನಾವು ಅರ್ಥಶಃ ಅಲೌಕಿಕಗೊಳ್ಳುವುದೇ ಲೋಕ-ಸಂವಹನೆಗಳಿಲ್ಲದ ಒಂದು ನಿರಾಳದ ಸ್ಥಿತಿಯಲ್ಲಿ. ಅದೂ ಎಷ್ಟು ಹೊತ್ತು ಸಾಧ್ಯ? ಅದೊಂದು ಬಗೆಯಲ್ಲಿ ಧ್ಯಾನಕ್ಕೆ ಕುಳಿತಾಗಿನ ಸ್ಥಿತಿಯೇ ಸರಿ. ಹೆಚ್ಚು ಹೊತ್ತು ಆತಂಕಗಳಿಲ್ಲದ ಮೌನವನ್ನು ಅನುಭವಿಸುವುದು ಕಷ್ಟ. ಸದಾ ಇಂತಹ ಟ್ರಾನ್ಸ್‌ನಲ್ಲೇ ಇದ್ದುಬಿಡೋಣವೆಂದುಕೊಂಡರೆ ಇವಳೇ ಕರೆದು ಮೊಬೈಲ್ ಆಫಿತ್ತಲ್ಲ- ಎಲ್ಲಿದ್ದೀ… ಎಲ್ಲಿದೀಯ ಹೇಳೂ ಅಂತೊಂದು ಅಖಂಡ ಗನ್‍ಪಾಯಿಂಟ್ ಅವಸ್ಥೆಯಲ್ಲಿ ನನ್ನನ್ನಿಟ್ಟು ತನಿಖೆಗೆ ತೊಡಗಿಬಿಡುತ್ತಾಳೆ. ಆಗೆಲ್ಲ ಎಲ್ಲಾದರೂ ಪರಾರಿಯಾಗಬೇಕೆನಿಸುತ್ತದೆ. ಇವಳಿಗೆ ಮೊಬೈಲನ್ನು ಮೌನವಾಗಿಸಿದ್ದನ್ನು ಸಕಾರಣ ಹೇಳಬೇಕಾಗುತ್ತದೆ. ಅವಾಯ್ಡ್ ಮಾಡುತ್ತಿರುವುದು ಅನಗತ್ಯ ಕರೆಗಳನ್ನಷ್ಟೇ, ಅವಳನ್ನಲ್ಲ ಅಂತ ಮನವರಿಸಲು ಹೊತ್ತು ಹಿಡಿಯುತ್ತದೆ. ಆಗ ತಣ್ಣಗೆ ನಾನು ಸದಾ ಸೇವಾತತ್ಪರ ವೃತ್ತಿಪರ ಅನ್ನುವುದನ್ನು ನೆನಪಿಸಿ ಕೀಳರಿಮೆ ಹುಟ್ಟಿಸುತ್ತಾಳೆ. ಮತ್ತೆ ಚಾಲನೆಗೆ ಒದಗುತ್ತಲೇ ಬಂದಾದ ಹೊತ್ತಿನಲ್ಲಿ ಕರೆದವರ ಸಂದೇಶಗಳು ಒಂದರ ಮೇಲೊಂದು ಮುಸುರಿಕೊಳ್ಳುತ್ತವೆ. ಒಂದು ಓದುವಷ್ಟರಲ್ಲಿ ಇನ್ನೊಂದು…. ಈ ನಡುವೆ ಪ್ರಖ್ಯಾತ್- ಎಲ್ಲಿದ್ದೀ? ಕೂಡಲೆ ಮಾತನಾಡಲಿಕ್ಕಿದೆ ಅಂತ ಐದು ಮೆಸೇಜ್ ಕಳಿಸಿದ್ದ. ಕೊಂಚ ಸುಧಾರಿಸಿಕೊಂಡು ಕರೆಯೋಣವೆಂದುಕೊಂಡು ಸೀಟಿನ ಬೆನ್ನು ಹಿಂದೆ ಬಾಗಿಸಿ ಹಿಂಜರುಗಿ ಒರಗಿಕೊಂಡೆ. ಇನ್ನು ಕೂಡಲೇ ಇವಳಿಗೆ ಫೋನಿಸಬೇಕು. ಇಲ್ಲದಿದ್ದರೆ ಧರೆ ಕೊಚ್ಚಿಹೋಗುವ ಹಾಗೆ ರಾದ್ಧಾಂತಕ್ಕೆ ತೊಡಗಿಯಾಳು! ನನಗೆ ನಾನೇ ಹೇಳಿಕೊಂಡೆ.

ಶ್ರೇಯಾ ಯಾವತ್ತಿನಿಂದ ಹೀಗಾಗಿಬಿಟ್ಟಳು ಅನ್ನುವುದಕ್ಕಿಂತಲೂ ಇದರಲ್ಲಿ ನನ್ನದೆಷ್ಟು ಹೊಣೆ ಅನ್ನುವ ವಿಚಾರ ನನ್ನನ್ನು ಇನ್ನಿಲ್ಲದಂತೆ ಬಾಧಿಸುತ್ತದೆ. ಬೆಳಿಗ್ಗೆ ಐದೂವರೆಗೆ ವಾಕಿಂಗ್‍ನಿಂದ ಸುರುಗೊಳ್ಳುವ ನನ್ನ ಜಗತ್ತು ಎಂಟರ ಸುಮಾರಿಗೆಲ್ಲ ಮನೆಯ ಉಸಾಬರಿಗಳಿಲ್ಲದ ಕೆಲಸವೆಂಬ ಕಟ್ಟಾ ಲೌಕಿಕದಲ್ಲಿ ಬೆಸೆದುಕೊಂಡುಬಿಟ್ಟಿರುತ್ತದೆ. ವಾಕಿಂಗ್ ಮುಗಿಸಿ ಆರೂ ಮುಕ್ಕಾಲು-ಏಳರ ಹೊತ್ತಿಗೆ ಬೆವರಿನ ತೊಪ್ಪೆಯಾಗಿ ಮನೆಗೆ ಬರುವುದು ವಾಡಿಕೆ. ಬಳಿಕ ಗೇಟಿನಲ್ಲೇ ಪೇಪರು ಹಿಡಿದು ಹೆಡ್‍ಲೈನ್‍ಗಳಲ್ಲಿ ಹಿಂದಿನ ರಾತ್ರಿ ನೋಡಿದ ಬ್ರೇಕಿಂಗ್ ನ್ಯೂಸ್‍ಗಳ ತಂಗಳನ್ನೇ ಉದಾಸದ ಅವಸರದಲ್ಲಿ ಕಣ್ಣಿಗುಣಿಸಿ ಸ್ನಾನಕ್ಕಿಳಿಯುವ ಹೊತ್ತಿಗೆಲ್ಲ ಹಲೋ ಗುಡ್‍ಮಾರ್ನಿಂಗ್‍ಗಳ ಮತ್ತೊಂದು ಮೊಬೈಲು-ಹಗಲು ತೆರೆದುಕೊಂಡಿರುತ್ತದೆ. ತಡವಾದರೆ ಟ್ರಾಫಿಕ್ ಹೆಚ್ಚಿ ರೋಡಿನಲ್ಲಿ ಕಚ್ಚಿಕೊಂಡೇನೆಂಬ ಒಂದೇ ಅವಸರದಲ್ಲಿ ಬೀದಿಗಿಳಿದೆನೋ ಸೈ- ಪರಸ್ಪರ ಭಾವಬಂಧಗಳ ಮನೆಯ ಪ್ರಪಂಚ ಸ್ಟಿಯರಿಸಿದಷ್ಟೂ ದೂರಕ್ಕೆ ಹಿಂಜರುಗಿಕೊಳ್ಳುತ್ತದೆ. ಸೀರಿಯಲ್ಲುಗಳಲ್ಲಿ ಹುದುಗಿ ಬಿಡುವು ದೂಡುವ ಅಮ್ಮ ಮತ್ತು ಜಿಮ್ಮ್, ಏರೋಬಿಕ್ಸ್‌ಗಳ ನಡುವೆ ಏಕ್ತಾ ಕಪೂರಳ ಕಕಾರಾದಿ ಸೋಪುಗಳಲ್ಲಿ ಮುಳುಗಿಬಿಡುವ ಶ್ರೇಯಾ -ಈ ಇಬ್ಬರ ಹೊತ್ತುಗೊತ್ತುಗಳಿಗೆ ನಾನು ಸಂದುಕೊಳ್ಳುವುದು ಇನ್ನು ರಾತ್ರಿ ಒಂಬತ್ತೂವರೆಯ ಬಳಿಕವೆ. ಊಟಕ್ಕೆ ತೊಡಗಿ ನಡುವೊಂದಷ್ಟು ಚಾನಲ್ಲುಗಳಲ್ಲಿ ಇಲ್ಲಿಂದಲ್ಲಿ ಜಾರುವಷ್ಟರಲ್ಲಿ ಕಣ್ಣು ತೂಗಿರುತ್ತದೆ. ಇವಿಷ್ಟರಲ್ಲೇ ದಿನವೊಂದರ ಸಾರ್ಥಕ್ಯದ ಗಣನೆ. ಊರೊಳಗಿನ ಎಚ್ಚರವೊಂದರ ಸಫಲ ವಿನಿಯೋಗ. ಕಳೆದ ಏಳೆಂಟು ವರ್ಷಗಳಿಂದ ಹೀಗೇ ಸಾಗುತ್ತಿರುವ ನನ್ನ ದಿನಚರಿ ಮೂರು ವರ್ಷದ ಹಿಂದೆ ಇವಳು ಬದುಕು ಹೊಕ್ಕ ಮೇಲೂ ಬದಲಾಗಿಲ್ಲವೆನ್ನುವುದು ಅಚ್ಚರಿಯೇನಲ್ಲ. ಹಾಗೆ ನೋಡಿದರೆ ನನ್ನ ದೈನಂದಿನಕ್ಕೆ ಹೊಂದಿಕೊಂಡಿರುವುದೇ ಇವಳು. ಹೀಗೆ ನಮ್ಮ ನಡುವೆ ಮದುವೆಗೆ ಮೊದಲೇ ಆದ ಒಂದು ಅಲಿಖಿತ ಕರಾರೇ ಹೌದು. ಯಾವುದೇ ತಿದ್ದುಪಡಿಗಳಿಲ್ಲದೆ, ಏನೂ ಷರಾ ಬರೆಯದೆ ನಾನು ಹೇಗಿದ್ದೆನೋ ಹಾಗೆ ಅಂತ ಇವಳು ಏಕ್‍ದಮ್ ಒಪ್ಪಿ ಒಗ್ಗಿಕೊಂಡ ಒಪ್ಪಂದವೇ ನಮ್ಮ ಬದುಕು.

ಮೂವತ್ತರ ತುದಿಯ ಇಳಿ ಹುಮ್ಮಸ್ಸಿನಲ್ಲಿ ಮದುವೆ ಯಾತಕ್ಕೆ ಅಂದುಕೊಳ್ಳುತ್ತಿರುವಾಗಲೇ ಅಮ್ಮನ ಸಾಯಿ-ಸತ್ಸಂಗದ ಗೆಳತಿ ಸಖೂಬಾಯಿ ಹೇಗೋ ಅಮ್ಮನನ್ನು ಪುಸಲಾಯಿಸಿ ತಮ್ಮ ಮಗಳನ್ನು ನನಗೆ ಒಪ್ಪಿಸಿದ್ದರು. ಶ್ರೇಯಾಳಿಗೂ ಆ ಹೊತ್ತಿಗೆ ಮೂವತ್ತು ಮೀರಿತ್ತು. ಕೆಲಸ, ಕೆರಿಯರ್ ಅಂತ ಸದಾ ಊರೂರು ಸುತ್ತಿಕೊಂಡಿದ್ದವಳಿಗೆ ಮದುವೆಯಾಗಿ ನೆಲೆಯೂರುವ ಇರಾದೆಯೇ ಇರಲಿಲ್ಲವಂತೆ. ಉಮೇದು ಹತ್ತುವ ಹೊತ್ತಿಗೆ ವಯಸ್ಸು ಮೀರಿತ್ತು. ಒಂದು ಸಂಜೆ ಇಚ್ಛೆಯನ್ನು ಅರುಹಿಕೊಂಡಾಗ ಸಖೂಬಾಯಿಯನ್ನು ಖುಷಿಯೂ ಅಲ್ಲದ ಚಿಂತೆಯೂ ಅಲ್ಲದ ವಿಷಣ್ಣತೆ ಕಾಡಿದ್ದಿರಬೇಕು. ವಯಸ್ಸಿರುವಾಗ ಆಕೆ ಇವಳನ್ನು ಮದುವೆಗೆ ಒಲಿಸಲು ಪಡದ ಕಷ್ಟವೇ ಇಲ್ಲ ಅಂತ ಅವರ ಮನೆಯಲ್ಲಿ ಇವತ್ತಿಗೂ ಕೇಳಿಬರುತ್ತದೆ. ಕೆಲಸಕ್ಕೆ ರಾಜಿನಾಮೆ ಕೊಡುವಾಗ ತಿಂಗಳಿಗೆ ಎಪ್ಪತ್ತು ಸಾವಿರದ ಎಣಿಕೆಯಿತ್ತಂತೆ. ಗತ್ತಿನ ಮೇಲುಸ್ತುವಾರಿಯ ಹುದ್ದೆ. ಮದುವೆಯ ಉಮೇದಿನಲ್ಲಿ- ಯಾರಾದರೂ ಸರಿ, ಈ ಸಂಬಳದ ಕಾಲು ಭಾಗವನ್ನು ತಿಂಗಳಿಗೆ ತನ್ನ ಖರ್ಚಿಗೆ ಕೊಟ್ಟರೆ ಸಾಕು ಅಂತ ಹೇಳಿದ್ದಳಂತೆ. ಮಗ್ಗುಲು ರಸ್ತೆಯಲ್ಲೇ ಇದ್ದರೂ ನಾವಿಬ್ಬರೂ ಒಬ್ಬರನ್ನೊಬ್ಬರು ನೋಡಿದ ನೆನಪಿಲ್ಲ. ಇದನ್ನೇ ಋಣಾನುಬಂಧ ಅನ್ನುವುದು ಅಂತ ಅಮ್ಮ ನಮ್ಮ ಸಂಬಂಧಕ್ಕೊಂದು ಪಾರಮಾರ್ಥಿಕ ಲಗತ್ತು ಹಚ್ಚಿದ್ದಿದೆ. ಪಾಂಗತವಾಗಿ ಹೆಣ್ಣು ತೋರಿಸಿ ಆದ ಮದುವೆ. ಇದರಲ್ಲಿ ನನ್ನ ಆಸಕ್ತಿಗಿಂತ ಅಮ್ಮನ ಒತ್ತಾಯವೇ ಹೆಚ್ಚಿದ್ದಿದ್ದು. ಇಷ್ಟಿದ್ದೂ ಮನೆ ತುಂಬಿದವಳು ಮನಸ್ಸು ತುಂಬಿಕೊಳ್ಳಲು ಹೆಚ್ಚು ಕಾಲವಾಗಲಿಲ್ಲ. ನನ್ನನ್ನಿರಲಿ, ಅಮ್ಮನನ್ನೂ ಎಷ್ಟರ ಮಟ್ಟಿಗೆ ಹಚ್ಚಿಕೊಂಡಳೆಂದರೆ ಈಗೀಗ ಅಮ್ಮ ನನಗಿಂತಲೂ ಅವಳಿಗೇ ಹತ್ತಿರವಾಗಿಬಿಟ್ಟಿದ್ದಾಳೆ. ಕಳೆದ ಮೂರು ವರ್ಷಗಳಲ್ಲಿ ಒಮ್ಮೆಯೂ ನನ್ನನ್ನು, ಅಮ್ಮನನ್ನು ಬಿಟ್ಟು ಇದ್ದವಳಲ್ಲ. ನಾನು ಮನೆಯಲ್ಲಿರುವವರೆಗೆ ನನ್ನ ಜತೆ, ಉಳಿದಂತೆ ಅಮ್ಮನ ಆರೋಗ್ಯದ ಉಸಾಬರಿ. ಹತ್ತರ ಬಳಿಕ ಮನೆಗೆಲಸ ಮುಗಿದ ಮೇಲೆ ಜಿಮ್ಮ್, ಏರೋನಿಕ್ಸ್. ಮಧ್ಯಾಹ್ನ ಒಂದಷ್ಟು ಟೀವಿ… ಹೀಗೆ ತನ್ನಷ್ಟಕ್ಕೆ ತಾನಿದ್ದವಳ ಬಗ್ಗೆ ಒಮ್ಮೆ ಸಖೂಬಾಯಿ- ‘ಇವಳು ಹೀಗೆ ಸಂಸಾರ ಮಾಡಿಕೊಂಡು ಇರೋ ದಿನ ಬರುತ್ತೆ ಅಂತ ನಾನಂತೂ ಅಂದುಕೊಂಡಿರಲಿಲ್ಲ…’ ಅಂದರೆ ‘ಛೀ ಬಿಡ್ತೂ ಅನ್ನಮ್ಮ… ಕಣ್ಣು ಹಾಕಬೇಡ’ ಅಂತ ಗಂಭೀರವಾಗಿ ದಬಾಯಿಸಿದ್ದಳು. ‘ಯಾಕೆ? ನಾನು ಚೆನ್ನಾಗಿರೋದು ನಿನಗಿಷ್ಟ ಇಲ್ಲವಾ? ನಾನಂತೂ ನನ್ನ ಗಂಡನ್ನ ಬಿಟ್ಟು ಎಲ್ಲೂ ಬರೋಳಲ್ಲ. ನನ್ನನ್ನು ಹಾಗೆಲ್ಲ ಕರೀಬೇಡ…’ ಹೀಗೆ ಬಾಯಿ ಬಡಿದು ಆಷಾಢಕ್ಕೂ ಶ್ರಾವಣಕ್ಕೂ ಹೋಗದೆ, ಚೌತಿ ದೀಪಾವಳಿಗಳನ್ನೂ ಇಲ್ಲೇ ಧೂಮ್‍ಧಾಮ್ ಜರುಗಿಸಿದ್ದವಳು. ಇಂತಹ ಶ್ರೇಯಾ ಈಗ ಏಕಾಏಕಿ ಹೀಗೇಕಾಗಿದ್ದಾಳೆ? ಇದು ಅವಳು ನನ್ನನ್ನು ಹಚ್ಚಿಕೊಂಡು ಹಪಹಪಿಸುತ್ತಿರುವ ಕಾರಣಕ್ಕೇ ಹೌದು. ಅದು ಚೆನ್ನಾಗಿಯೇ ಗೊತ್ತಿದೆ. ಅಥವಾ ಇದು ಬರೇ ದೈಹಿಕದ್ದೇ ಇರಬಹುದು. ಬಹುಶಃ ಮಾನಸಿಕವಾಗಿಯೂ ಇರಬಹುದು. ಒಟ್ಟಾರೆ ನನ್ನನ್ನು ಬಯಸುತ್ತಿದ್ದಾಳೆ ಅನ್ನುವುದಂತೂ ಖಾತ್ರಿಯೇ. ಇಷ್ಟಿದ್ದೂ ನಾನೇನು ತಾನೆ ಮಾಡಬಲ್ಲೆ? ಹದಿನೆಂಟು ಗಂಟೆಗಳ ನನ್ನ ಎಚ್ಚರದಲ್ಲಿ ನನಗಾಗಿಯೆಂದು ಎಷ್ಟು ತಾನೇ ಪಾಲು ಮೀಸಲಿಟ್ಟಿದ್ದೇನೆ? ಕೆಲಸ ಮತ್ತು ಮನೆಗಳ ಆಚೆ ನನ್ನದು ಅಂತ ಬದುಕನ್ನು ನಾನೆಂದೂ ಕನವರಿಸಿದವನಲ್ಲ. ಈ ಸಲವಾದರೂ ಒಂದು ವಾರ ಕೆಲಸಕ್ಕೆ ಬಿಡುವು ಕೊಟ್ಟು ಎಲ್ಲಾದರೂ ಹೋಗಿಬರಬೇಕು. ಒಂದಷ್ಟು ತುಷ್ಟಿಯಾದೀತು.

ಕಾರು ಊರೆಂಬುದರ ಬೀಡುಬೀಸು ದಾಟಿ ಪೀಣ್ಯಕ್ಕೂ ನಾಗರಬಾವಿಗೂ ನಡುವೆ ಇಕ್ಕೆಲಕ್ಕೆ ನೀಲಗಿರಿಯ ತೋಪಿರುವ ಬಯಲಿನಂತಹ ರೋಡಿನಲ್ಲಿ ಮುನ್ನುಗ್ಗುತ್ತಿತ್ತು. ಮಾಗಡಿ ರಸ್ತೆಯ ಸಂಧಿಯಲ್ಲಿ ಬಲಕ್ಕೆ ಹೊರಳುವಾಗ ರಾಜೇಶ ಮೊಬೈಲು ರಿಂಗಾಗುತ್ತಿದೆಯೆಂದು ಗಮನಕ್ಕೆ ತಂದ. ಅದು ಪ್ರಖ್ಯಾತ. ನಾನು ವಾಪಸು ಉತ್ತರಿಸಿಲ್ಲವೆಂದು ಮಾಡಿರಬೇಕು. ‘ಹಾಯ್ ಪ್ರಖ್, ಹೇಗಿದ್ದೀಯಾ? ತುಂಬಾ ದಿನ ಆಯಿತು… ನಾನೇ ಫೋನು ಮಾಡೋಣ ಅಂತಿದ್ದೆ. ಹೇಗೆ ನಡೀತಾ ಇದೆ? ನನ್ನದಾ? ಫಸ್ಟ್ ಕ್ಲ್ಯಾಸ್…!’ ಸುಂಕದಕಟ್ಟೆಯನ್ನು ಬಳಸುತ್ತಿರುವಾಗ ‘ಪ್ರಖ್, ಇಲ್ಲೊಂದು ಡೆಫ್ ಸ್ಪಾಟ್ ಇದೆ. ಮೊಬೈಲ್ ಗೋಸ್ ಆಫ್… ಎರಡೇ ನಿಮಿಷ ಬಿಟ್ಟು ಮಾಡುತೀನಿ.’ ಎಂದು ಹೇಳಿದೆ. ದಿನಕ್ಕೆ ಕಡಿಮೆಯೆಂದರೂ ನೂರು ಕಿಲೋಮೀಟರು ಊರೊಳಗೇ ಸುತ್ತುವುದರಿಂದ ಅದರ ವ್ಯಾಪ್ತಿಯಲ್ಲಿರುವ ಇಂತಹ ಕಿವುಡು ಪ್ರದೇಶಗಳು ನನಗೆ ಚೆನ್ನಾಗಿ ಗೊತ್ತು. ‘ಯಾವುದಾದರೂ ಸ್ಮಶಾನದ ಬದಿ ಇದ್ದೀಯೇನು?’ ನಾನು ಮತ್ತೆ ಮೊಬೈಲು ಹಚ್ಚುತ್ತಲೇ ಕೇಳಿದ. ವಿಚಿತ್ರವೆನಿಸಿ ಹೌಹಾರಿದೆ. ‘ಯಾಕೆ ಇದ್ದಕ್ಕಿದ್ದ ಹಾಗೆ ಈ ಪ್ರಶ್ನೆ?’

‘ನಾನಿದುನ್ನ ಗಮನಿಸಿದೀನಿ. Whenever I am around a graveyard signals go blank. ಸ್ಮಶಾನದ ಪಕ್ಕ ಮೊಬೈಲ್ ಆಫಾಗಿ ಬಿಡುತ್ತೆ. ಇಲ್ಲಾ ಏನೂ ಕೇಳಿಸೋದೇ ಇಲ್ಲ. ಇದೊಂದು ಥರ ಸ್ಪಿರಿಚುಅಲ್ ಇಂಪ್ರೆಷನ್ ಇರಬೇಕು. ಆತ್ಮಗಳ ಅಥವಾ ಆಧ್ಯಾತ್ಮಿಕ ಹಸ್ತಕ್ಷೇಪ!’ ಅಂತ ನಕ್ಕ. ಪ್ರಖ್ಯಾತನಿಗೆ ಇಂತಹ ವಿಚಾರಗಳಲ್ಲಿ ಇನ್ನಿಲ್ಲದ ನಂಬಿಕೆ. ಪ್ರಪಂಚ ತನ್ನ ವೈಚಾರಿಕತೆಯಿಂದಲೇ ಇಷ್ಟು ಎಕ್ಕುಟ್ಟಿಕೊಂಡಿರುವುದು ಅಂತ ದೃಢವಾಗಿ ನಂಬುತ್ತಾನೆ. ಮನುಷ್ಯನಿಗಿಂತ ಸೃಷ್ಟಿ ದೊಡ್ಡದು ಅಂದುಕೊಳ್ಳಲಿಕ್ಕೆ ಇಂತಹ ನಂಬಿಕೆಗಳು ಬೇಕು ಅಂತ ಎಂತೆಂತಹ ಮೌಢ್ಯವನ್ನೂ ಅನುಮೋದಿಸುತ್ತಾನೆ. ಗ್ರಹಣಕಾಲದಲ್ಲಿ ಎರೆಹುಳುವಿಗೆ ವಿಪರೀತ ನೆಗೆಟಿವ್ ಎನರ್ಜಿಯಿರುತ್ತದಂತೆ. ಕಚ್ಚಿದರೆ ಮನುಷ್ಯ ಪಡ್ಚ ಅಂತ ನನ್ನನ್ನೊಮ್ಮೆ ನಂಬಿಸಿದ್ದ. ಮೊದಲ ಮೀಟಿಂಗನ್ನು ಮಂಗಳವಾರ ಮಾಡಬಾರದು ಎನ್ನುವ ಇಲ್ಲಿನ ರಿಯಲ್ ಎಸ್ಟೇಟ್ ನಂಬಿಕೆಯನ್ನು ನಾಗರಿಕ ಜನಪದವೆಂದು ಪುಷ್ಠಿ ಕೊಡುತ್ತಾನೆ. ದೇವಸ್ಥಾನದಲ್ಲಿರುವಾಗ ಮೊಬೈಲಿಗೆ ಕರೆ ಬಂದರೆ ಅದೊಂದು ಶುಭಶಕುನವಂತೆ. ಕರೆ ಕೆಲಸಕ್ಕೆ ಸಂಬಂಧಿಸಿದ್ದಾದರೆ ನೂರಕ್ಕೆ ನೂರು ಹಣ್ಣಂತೆ… ಇತ್ಯಾದಿ. ಈಗ ಮೊಬೈಲಿನ ಸಿಗ್ನಲ್ಲು ಸ್ಮಶಾನದ ಬದಿ ತಗ್ಗುತ್ತದೆ ಎನ್ನುವ ವಾದ ಗಂಭೀರವೆನಿಸಲಿಲ್ಲ. ‘You must be crazy… ಹೇಳು. ಏನು ಸಮಾಚಾರ?’ ನೇರ ವಿಷಯಕ್ಕೆ ಬಾರೋ- ಮಗನೆ ಅನ್ನುವ ಧಾಟಿಯಲ್ಲಿ ಹೇಳಿದೆ.

‘ಏನಿಲ್ಲ ಸುಮ್ಮನೆ ಮಾಡಿದ್ದು. ತುಂಬ ದಿನ ಆಯಿತಲ್ಲ ಮಾತಾಡಿ. ಸುಮ್ಮನೆ ಹಾಯ್ ಹೇಳೋಣ ಅಂತ.’

‘ಪ್ರಖ್… ನಾನೊಂದು ಮೀಟಿಂಗಿಗೆ ಹೊರಟಿದ್ದೀನಿ. ಏನಾದರೂ ತುರ್ತಿನ ವಿಷಯ ಇತ್ತಾ? ಡ್ರೈವರ್ ಕೂಡ ಇಲ್ಲ. ನಾನೇ ಡ್ರೈವ್ ಮಾಡುತಾ ಇರೋದು.’ ಈ ಹೊತ್ತಿನಲ್ಲಿ ಅವನು ಈ ಆತ್ಮಗಳ ಹಸ್ತಕ್ಷೇಪದ ವಿಷಯವನ್ನು ಕುರಿತು ವಿಸ್ತರಿಸುವುದು ಬೇಕಿರಲಿಲ್ಲ.  ಸುಳ್ಳು ಹೊಸೆದೆ. ರಾಜೇಶ ನನ್ನತ್ತ ಸೂಚ್ಯವಾಗಿ ನೋಡಿ ನಗದಂತೆ ನಕ್ಕ. ‘ಇಲ್ಲ. ಒಂದೇ ಒಂದು ನಿಮಿಷ. ನಿನಗೆ ಈಗ ಟೈಂ ಚೆನ್ನಾಗಿದೆ ಅಂತಿಟ್ಟುಕೋ. You should make the best out of it…’ ಅಂದ. ಅವನು ಹೇಳುತ್ತಿರುವುದರ ತಲೆಬುಡ ತಿಳಿಯಲಿಲ್ಲ. ಅದು ಇಂಥದೇ ಮತ್ತೊಂದು ಅಸಂಗತವೇ ಇರಬಹುದೇನೋ. ಆದರೂ ಕೆಟ್ಟ ಕುತೂಹಲ. ರಾಜೇಶನಿಗೆ ಕಾರು ನಿಲ್ಲಿಸುವಂತೆ ಕೈಯಲ್ಲೇ ಸನ್ನೆ ಮಾಡಿದೆ. ‘ಒಂದು ನಿಮಿಷ. ಕಾರು ಬದಿಗೆ ಹಾಕಿಕೋತೀನಿ… ಒಂದೇ ನಿಮಿಷ…’ ಅಂತ ಅವನು ಮಾತು ಮುಂದುವರೆಸುವುದನ್ನು ಕಾರು ನಿಲ್ಲುವವರೆಗೆ ತಡೆದೆ. ಶ್ರೀಗಂಧದ ಕಾವಲಿನ ದೊಡ್ಡ ಅರಳೀಮರದ ಬದಿಗೆ ಕಾರು ನಿಲ್ಲಿಸಿ ರಾಜೇಶ ಇಳಿದು ದೂರ ಸರಿದ. ‘ಈಗ ಹೇಳು’ ಎನ್ನುತ್ತ ನಾನೂ ಕಾರಿನಿಂದ ಇಳಿದೆ.

‘ನಾನು ಹೇಳಿರಲಿಲ್ಲವಾ? ಈ ಜೂನ್‍ನಲ್ಲಿ ನಿಂಗೊಂದು ಬಿಗ್ ಬ್ರೇಕ್ ಇದೆ ಅಂತ. ಈಗ ನಿನ್ನ ನಕ್ಷತ್ರದವರಿಗೆ ಒಂದು ಪರ್ವಕಾಲ ಅಂತ ಹೇಳುತ್ತೆ ಶಾಸ್ತ್ರ. ಇದೊಂದು ಯೋಗ ಅಂತಾನೇ ಇಟ್ಟುಕೋ. ವರ್ಷದ ಹಿಂದೆ ಕ್ಲಯಂಟೊಬ್ಬರಿಗೆ ನಿನ್ನ ರೆಫರೆನ್ಸ್ ಕೊಟ್ಟಿದ್ದೆ. ಅವರಿಗೆ ಪ್ರಪೋಸಲ್ ಇಷ್ಟವಾಗಿದೆಯಂತೆ. ಮುಂದಿನ ವಾರ ನಿನ್ನ ಭೇಟಿ ಮಾಡುತಾರಂತೆ… ಇದಾಗಿಬಿಟ್ಟರೆ ನಮ್ಮ ಫೀಸೇ ಇಪ್ಪತ್ತು ಕೋಟಿ ಆಗಬಹುದು. It is good time, dude… ನಿನ್ನ ಜತೆಗೆ ನನ್ನದೂನೂ…’ ಪ್ರಖ್ಯಾತ ನನ್ನ ಕಟ್ಟಡ ವಹಿವಾಟುಗಳಿಗೆ ಇಂಜಿನಿಯರಿಂಗ್ ಸೇವೆ ಒದಗಿಸುತ್ತಾನೆ. ಕೆಲಸದಲ್ಲಿ ಇನ್ನಿಲ್ಲದ ಅಚ್ಚುಕಟ್ಟು. ಹೀಗೆ ನಡುನಡುವೆ ಕೆಲಸಕ್ಕೆ ಬಾರದ ವಿಷಯಗಳನ್ನು ಹೇರುತ್ತಾನೆ ಅನ್ನುವುದನ್ನು ಬಿಟ್ಟರೆ ಉಳಿದಂತೆ ನನ್ನ ಬಗ್ಗೆ ಅದೇನೋ ಅತೀವ ಅಭಿಮಾನ. ‘ನಿನಗೆ ನಿನ್ನ ಮೇಲೆ ಕಾಳಜಿ ಇಟ್ಟಿರೋರ ಮೇಲೆಲ್ಲ ಅಸಡ್ಡೆ ಕರೀ…’ ಅಂತ ಇವಳು ಪ್ರಖ್ಯಾತ ವಿಷಯದಲ್ಲಿ ಹೇಳುತ್ತಾಳೆ. ‘ಯಾರು ನಿನ್ನ ಹಿತ ಬಯಸುತಾರೆ, ಯಾರು ಚೂರಿ ಹಾಕುತಾರೆ ಅನ್ನೋದು ನಿನಗೆ ಗೊತ್ತೇ ಆಗುಲ್ಲ ಅಲ್ಲವಾ?’ ಅವನು ಹೇಳುವ ಅಲೌಕಿಕವೆನಿಸುವ ವಿಚಾರಗಳು, ಹುಣ್ಣಿಮೆ-ಅಮಾವಾಸ್ಸೆಗಳ ಬಗೆಗಿನ ತರ್ಕಗಳು, ಧನಾತ್ಮಕ, ಋಣಾತ್ಮಕಗಳನ್ನು ಕುರಿತ ನಂಬಿಕೆಗಳು ಯಕಃಶ್ಚಿತ್ ಅಡುಗೆಗೆ ಕುಕ್ಕರ್ ಇಡುವ ಮುನ್ನವೂ ರಾಹುಕಾಲವನ್ನು ನೋಡುವ ಇವಳ ಮನಃಸ್ಥಿತಿಯೊಟ್ಟಿಗೆ ತಾಳೆಯಾಗುತ್ತವೆ. ಇದನ್ನು ಕುರಿತೂ ಅವನೊಮ್ಮೆ ಚರ್ಚಿಸಿದ್ದ. ‘ಯಾರು ಹೇಳಿದ್ದು ಕರೀ ನಿನಗೆ ಅಡುಗೆಗೆ ಇಡೋದು ಯಕಃಶ್ಚಿತ್ ಅಂತ? ನಾವು ತಿನ್ನುವ ಅನ್ನದಲ್ಲಿ ಇರುತ್ತಲ್ಲ ಫುಡ್‍ವ್ಯಾಲ್ಯೂ ಅದುನ್ನ ನೀನು ಸತ್ವ ಅನ್ನಬಹುದು. ನಾನು ತತ್ವ ಅನ್ನುತ್ತೇನೆ. ಅಕ್ಕಿ ಬೇಯುವಾಗ ನಾವು ಹೂಡುವ ಅಗ್ನಿ ಇದೆಯಲ್ಲ ಅದುನ್ನ ಒಳ್ಳೆ ಮುಹೂರ್ತದಲ್ಲಿ ಇಡಬೇಕು. ಅದು ಲಾಜಿಕ್ ಅಷ್ಟೆ… ನಮಗೆ ಅನುಷ್ಠಾನ ಮುಖ್ಯ.’

ರಾಜೇಶ ಕಾರಿದ್ದ ಬಯಲಿನಂಚಿನ ಪೊದೆಗಳ ಹಿಂದೆ ನೆಲ ತೊಯ್ಯಿಸುತ್ತಿದ್ದುದು ಕಂಡಿತು. ಇವನು ಉಚ್ಚೆ ಹೊಯ್ದು ಕೈ ತೊಳೆಯದೆ ಸ್ಟಿಯರಿಂಗು ಹಿಡಿಯುತ್ತಾನಲ್ಲ ಅಂತ ಇರಿಸುಮುರಿಸೂ ಆಯಿತು. ನಾನು ಪ್ರಖ್ಯಾತ ಹೇಳುತ್ತಿದ್ದುದನ್ನು ಕೇಳುತ್ತಲೇ ಕಾರಿನ ಹಿಂದಿನ ಸೀಟಿನಲ್ಲಿ ಕೂರೋಣವೆಂದು ಬಾಗಿಲು ತೆರೆದೆ. ಸೀಟಿನೆದುರು ಕಾಲಿಡುವಲ್ಲಿ ಶ್ರೇಯಾಳ ಟವಲ್, ಕಾಸ್ಮೆಟಿಕ್ಸ್, ಷಾಂಪೂ ಇದ್ದ ಪಾಲಿಥೀನು ಇತ್ತು. ಎತ್ತಿ ಬದಿಗಿರಿಸುವಾಗ ಅಲ್ಲೇ ಇನ್ನೊಂದು ಪಾಲಿಥೀನಿನಲ್ಲಿ ಜಾಕಿ ಬ್ರೇಸಿಯರ್ಸ್ ಮತ್ತು ಪ್ಯಾಂಟೀಸ್ ಬಿಲ್ಲು ಸಹಿತ ಕಂಡವು. ಬದಿಗೇ ಒಂದು ದೊಡ್ಡ ವಿಸ್ಪರ್ ಪ್ಯಾಕೆಟ್ಟು… ಭಾನುವಾರ ಇವಳು ಕಾರಿನಿಂದ ತೆಗೆಯುವುದನ್ನು ಮರೆತಿರಬೇಕು. ಇವನ್ನೆಲ್ಲ ಕಾರು ಶುಚಿ ಮಾಡುವಾಗ ರಾಜೇಶ ಬಿಚ್ಚಿ ನೋಡಿದ್ದರೆ? ಕಸಿವಿಸಿಯಾಗಿ ಇರಿಸುಮುರಿಸು ಹೆಚ್ಚಿತು. ಎಲ್ಲವನ್ನು ಎತ್ತಿ ಡಿಕ್ಕಿಗೆ ಒಟ್ಟುವಾಗ ದೂರದಿಂದಲೇ ಅವನು ನಾನು ಮಾಡುತ್ತಿದ್ದುದನ್ನು ಗಮನಿಸುತ್ತಿರಬಹುದೆ ಅಂತ ತುಸು ನಾಚಿಕೆಯಾಯಿತು. ಸಾಲದಕ್ಕೆ ಎತ್ತಿಕೊಳ್ಳುವ ಭರದಲ್ಲಿ ವಿಸ್ಪರ್ ನೆಲಕ್ಕೆ ಬಿದ್ದು, ಅವಸರದಲ್ಲಿ ಅದನ್ನು ತುಳಿದಿದ್ದೂ ಆಯಿತು. ಈ ಸಂಜೆಯೇ ಇವನ್ನೆಲ್ಲ ಶ್ರೇಯಾಳಿಗೆ ತಲುಪಿಸಬೇಕೆಂದುಕೊಂಡು ಡಿಕ್ಕಿಯ ಕದ ಜಡಿದೆ.

‘ಏನು ಮಾಡುತಾ ಇದ್ದೀ ಕರೀ?’ ಪ್ರಖ್ ಕೇಳಿದ. ‘ನಾನು ಹೇಳಿದ್ದು ಕೇಳಿಸುಕೋತಿದ್ದೀ ತಾನೆ?’

‘ಹಿಂದಗಡೆ ಸೀಟಿನಲ್ಲಿ ಶ್ರೇಯಾ ಮೇಕಪ್ ಕಿಟ್ ಇಟ್ಟಿದ್ದಳು. ತೆಗೆದು ಡಿಕ್ಕಿಯಲ್ಲಿಟ್ಟೆ ಅಷ್ಟೆ.’

‘ಅವರೂ ನಿನ್ನ ಜತೆ ಇದ್ದಾರ?’

‘ಇಲ್ಲ.. ಒಂದೆರಡು ತಿಂಗಳು ಅಮ್ಮನ ಮನೆಯಲ್ಲಿರುತೀನಿ ಅಂತ ಹೋಗಿದ್ದಾಳೆ. ಅಪರೂಪಕ್ಕೆ…. ನೀನು ನಾನೀಗ ಫ್ರೀ ಅಂದುಕೊಂಡಿದ್ದೀಯ. ನಾನೂ ಹಾಗೇ ಅಂದುಕೊಂಡಿದ್ದೆ…’ ಅಂತ ನಕ್ಕೆ. ‘This is what I meant… ಒಳ್ಳೆಯ ಟೈಂ ಅಂತ. ಹೇಗಿದ್ದರೂ ಹೆಂಡತಿ ಮನೆಯಲ್ಲಿಲ್ಲ. ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೋ… ಹಳೆಯ ಗರ್ಲ್‍ಫ್ರೆಂಡ್ಸ್ ಇದ್ದರೆ ಫೋನ್ ಮಾಡು. ಪಬ್ಬೂ, ಗಿಬ್ಬೂ ಅಂತ ಫ್ರೀಕೌಟ್… ಇನ್ನೊಂದು ವಾರದಲ್ಲಿ ನಿನ್ನ ಕೆಲಸ, ಜವಾಬ್ದಾರಿ ಹೆಚ್ಚಾಗುತ್ತೋ ಪೆದ್ದ! ಅದು ನಿನ್ನ ಇನ್ನೂ ಒಳ್ಳೆಯ ಕಾಲದ ನಿಜವಾದ ಘಟ್ಟ.’ -ಅಂತ ನಗು ಬೆರೆಸಿದ. ‘ಸರಿ… ಸಾಯಂಕಾಲ ಬಿಡುವಿನಲ್ಲಿ ಮಾತಾಡೋಣ’ ಅಂದೆ.

ಮತ್ತೆ ಕಾರು ಹತ್ತಿ ಹೆದ್ದಾರಿಗೆ ಹೊರಳುವಾಗ ಎರಡೂ ಮುಕ್ಕಾಲಾಗಿತ್ತು. ಪೀಣ್ಯದ ಮೀಟಿಂಗಿನವರಿಗೆ ಇಪ್ಪತ್ತು ನಿಮಿಷ ತಡವಾಗಬಹುದೆಂದು ಮೆಸೇಜು ಕಳಿಸಿ ‘ರಾಜೇಶ, ಬೇಗ ಹೋಗಬೇಕು. ಲೇಟಾಯಿತು..’ ಎಂದೆ. ಮತ್ತೆ ಮೊಬೈಲು ಬಡಿದುಕೊಂಡಿತು. ‘ಶ್ರೇ… ವೀಕೆಂಡ್ ಆರೆಂಜ್‍ಕೌಂಟಿ ಬುಕ್ ಮಾಡುತೀನಿ. ಇವತ್ತು ರಾತ್ರಿನೇ ಹೊರಟುಬಿಡೋಣ…. ಹೀಗೇ ಸುಮ್ಮನೆ. ನೀನು ಇನ್ನೊಂದಿಷ್ಟು ದೂರು ಹೇಳಕ್ಕೇ ಅಂತಿಟ್ಟುಕೋ… ಇಲ್ಲ ನಾನು ಕೇಳಕ್ಕೆ ಅಂತಿಟ್ಟುಕೋ…. ಮುಂದಿನ ವಾರದಿಂದ ನಾನು ಇನ್ನಷ್ಟು ಬ್ಯುಸಿಯಾಗಿ ಬಿಡುತೀನಿ… ಯಾಕೆ ಅಂತ ಸಂಜೆ ಹೇಳುತೀನಿ, ಶ್ರೇ…’ ಅವಳಿಗೆ ಮಾತಿಗೆ ಬಿಡದೆ ಬಡಬಡಿಸಿದೆ. ರೇಗಿದ್ದಕ್ಕೇನೋ ತುಸು ಮೆತ್ತಗಾಗಿ- ‘ಛೇ! ನನ್ನ ನ್ಯಾಪ್‍ಕಿನ್ನೆಲ್ಲ ನಿನ್ನ ಕಾರಲ್ಲೇ ಉಳಿದುಬಿಟ್ಟಿದೆ. ಏನೋ ನೀನೂ…’ ಅಂತ ಲೊಚಗುಟ್ಟಿದಳು. ಪ್ರತಿಕ್ರಿಯಿಸದೆ ಮೀಟಿಂಗಿಗೆ ತಡವಾಗುತ್ತಿದೆಯೆಂದು ಮೊಟುಕಿ ಮೊಬೈಲು ಆಫ್ ಮಾಡಿದೆ. ಖುಷಿಯಿರಲಿ, ದುಃಖವಿರಲಿ ಮನಸಾ ಆಸ್ವಾದಿಸಲಿಕ್ಕೆ ಎಡೆಗೊಡುವುದಿಲ್ಲ ಹಾಳಾದ್ದು ಅಂತ ನನಗೆ ನಾನೇ ಹೇಳಿಕೊಂಡೆ. ನಾನು ಹೇಳಿದ್ದಕ್ಕೆ ಅವಳಿಗೆ ಖುಷಿಯಾಗಿರಬಹುದೆಂಬ ಉಮೇದಿನಿಂದ ಮನಸ್ಸು ಹಗುರವೆನಿಸಿತು.

 

About The Author

ನಾಗರಾಜ ವಸ್ತಾರೆ

ಕವಿ, ಆರ್ಕಿಟೆಕ್ಟ್ ಮತ್ತು ಕಥೆಗಾರ. ೨೦೦೨ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ಇವರೂ ಒಬ್ಬರು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ