“ನಾನೆಂದೂ ಅವರ ಬಳಿ ಹೆಚ್ಚು ಮಾತನಾಡದಿದ್ದರೂ ಅವರ ಪ್ರಭಾವ ನನ್ನ ಎಳೆವಯಸ್ಸಿನಲ್ಲಿಯೇ ಆಗಿದೆ. ಅದರಿಂದಾಗಿ ಬಣ್ಣಗಳ ಬಗೆಗೆ, ವಿನ್ಯಾಸದ ಬಗೆಗೆ, ಚಿತ್ರಕಲೆಯ ಬಗೆಗೆ ನನ್ನೊಳಗೆ ಅಮೂರ್ತ ಕಲ್ಪನೆ ಮತ್ತು ಅವುಗಳ ಬಗ್ಗೆ  ಗಾಢವಾದ ಒಲವನ್ನು ಮೂಡಿಸಿದೆ. ಮುಖ್ಯವಾಗಿ ಅಲಂಕಾರಿಕ ಚಿತ್ರಗಳ ಭ್ರಮೆಯಿಂದ ನನ್ನನ್ನು ದೂರಮಾಡಿದೆ. ಮನುಷ್ಯ ಮುಖದ ಓರೆಕೋರೆಗಳನ್ನು ಅತ್ಯಂತ ಸರಳವಾದ ಕೆಲವೇ ರೇಖೆಗಳಲ್ಲಿ ಹಿಡಿದಿಡುತ್ತಿದ್ದ ರಾವ್ ಬೈಲ್ ತಮ್ಮ ತುಂಬು ಜೀವನವನ್ನು ಸಂತೆಯ ಗದ್ದಲದಲ್ಲೇ ಮಾಡಿದವರು”
ರಂಗ ಕಲಾವಿದೆ ರಜನಿ ಗರುಡ ಬರೆದ ಅನುಪಮ ಕಲಾವಿದನೊಬ್ಬನ ನೆನಪುಗಳು..

೬ ಅಥವಾ ೭ನೆಯ ತರಗತಿಯಲ್ಲಿದ್ದ ನಾನು ಚಂದಮಾಮಾ, ಬಾಲಮಿತ್ರ, ಕನ್ನಡ ಭಾರತ-ಭಾರತಿ, ಅಮರಚಿತ್ರ ಕಥಾಕೋಶ ಇದನ್ನೆಲ್ಲ ಓದುತ್ತಲೇ ಸುಧಾ, ತರಂಗದಂತಹ ವಾರಪತ್ರಿಕೆಗಳನ್ನು ಓದಲು ಚಡಪಡಿಸುತ್ತಿದ್ದ ದಿನಗಳು. ನನ್ನ ಚಿಕ್ಕಪ್ಪ ಪ್ರತಿವಾರವೂ ಸುಧಾ, ತರಂಗ ತರುತ್ತಿದ್ದರು. ಅವರು ಓದಿದ ನಂತರವೇ ನಾವು ಮಕ್ಕಳು ಓದಬೇಕೆನ್ನುವ ಅಘೋಷಿತ ಕಾನೂನು ನಮಗಿತ್ತು. ಅವರು ಮೊದಲ ಪುಟದಿಂದ ಕೊನೆಯ ಪುಟದವರೆಗೂ ಬಿಡದಂತೆ ಓದುತ್ತಿದ್ದರು. ನಮಗೋ… ಕುತೂಹಲ ತಡೆಯಲಾಗುತ್ತಿರಲಿಲ್ಲ. ಅವರು ಪುಸ್ತಕ ಪಕ್ಕಕ್ಕಿಟ್ಟು ನಿದ್ದೆಹೋಗುವುದನ್ನೇ ಕಾಯುತ್ತಿರುತ್ತಿದ್ದೆವು. ಅವರಿಗೆ ನಿದ್ದೆಬಂದ ತಕ್ಷಣ ಮೆಲ್ಲಗೆ ಆ ಪುಸ್ತಕ ಎಗರಿಸಿ ಸ್ವಲ್ಪ ದೂರದಲ್ಲಿ ನಾವೆಲ್ಲ ಸುತ್ತುವರಿದು, ಗಡಿಬಿಡಿಯಲ್ಲಿ ಓದಿ ಅವರಿಗೆ ಎಚ್ಚರಾಗುವುದರೊಳಗೆ ಮತ್ತೆ ಅದೇ ಜಾಗದಲ್ಲಿ ಹಾಗೆಯೇ ಇಟ್ಟು ಓಡಿಬಿಡುತ್ತಿದ್ದೆವು. ಮುಂದೆ ಸಂಪಿಗೆ ಮರದ ಮೇಲೊ, ಅಡಿಕೆ ಅಟ್ಟದ ಮೇಲೊ ಕೂತು ನಾವೆಲ್ಲ ಓದಿದ್ದರ ಪುಟ್ಟ ವಿಮರ್ಶೆ ನಡೆಯುತ್ತಿತ್ತು. ಇಷ್ಟು ಸಾಹಸ ಮಾಡುತ್ತಿದ್ದುದು ಯಾಕೆಂದರೆ ಅದರಲ್ಲಿ ಬರುವ ಕಾಮಿಕ್ಸ್ ಓದಲು!! ಹಿಂದಿನ ವಾರದಿಂದ ಕಾಯುತ್ತಿದ್ದ ಭಯಂಕರ ಕುತೂಹಲ ಬಹಳ ಸಮಯ ತಡೆಹಿಡಿದಿಡಲು ನಮಗೆ ಅಸಾಧ್ಯದ ಮಾತಾಗಿತ್ತು.

ಇಂಥಾ ನಮ್ಮ ಅಸಾಧ್ಯ ಕುತೂಹಲದ ದಿನಮಾನದಲ್ಲಿ, ತರಂಗದಲ್ಲಿ ಅದರ ಸಂಪಾದಕರಾದ ಶ್ರೀ. ಸಂತೋಷಕುಮಾರ ಗುಲ್ವಾಡಿಯವರು ಮುಂಬೈ ಶಹರದ ರೆಡ್ ಲೈಟ್ ಏರಿಯಾ ಕಾಮಾಟಿಪುರದ ಕುರಿತು ಧಾರಾವಾಹಿ ಶುರುಮಾಡಲಿದ್ದೇವೆ ಎಂದು ಸಾರಿಬಿಟ್ಟರು. ಮುರುಕು ಚಾಳದಂತಹವುಗಳ ಮುಂದೆ ಅರೆಬೆತ್ತಲೆಯಲ್ಲಿ ಸಾಲುಸಾಲಾಗಿನಿಂತ ಎಳೆಯ ಹೆಣ್ಣುಗಳ ಚಿತ್ರ, ಅದರ ಲೇಖಕ ಮತ್ತು ಚಿತ್ರಕಲಾವಿದ ಅಬಿದ್ ಸುರ್ತಿಯವರ ಚಿತ್ರ, ಅದಕ್ಕೆ ರೇಖಾಚಿತ್ರಗಳನ್ನು ಮಾಡುವವರು ಇನ್ನೊಬ್ಬ ಚಿತ್ರಕಲಾವಿದ ಮತ್ತು ವ್ಯಂಗ್ಯಚಿತ್ರಕಾರ ರಾವ್‌ಬೈಲ್ ಅವರ ಚಿತ್ರ ಮತ್ತು ಅವರಿಬ್ಬರ ಬಗೆಗೆ ಪರಿಚಯದ ಕಿರುಲೇಖನ ಎಲ್ಲವೂ ಇತ್ತು. ಗಂಡು-ಹೆಣ್ಣಿನ ದೇಹವ್ಯಾಪಾರದ ವಿಕೃತ ಜಗತ್ತಿನ ಕಥೆ ಮತ್ತು ಕಪ್ಪನೆಯ ಕೆಲವೇ ಗೆರೆಗಳ ಹಿಂಜಿದಂತಹ ಮನುಷ್ಯರ ಚಿತ್ರ ನನ್ನ ಸುಕುಮಾರ ಜಗತ್ತಿನಲ್ಲಿ ಭೂಕಂಪನವನ್ನುಂಟುಮಾಡಿದ್ದಂತೂ ನಿಜ. ಚಂದಮಾಮಾ, ಅಮರಚಿತ್ರ ಕಥಾಕೋಶದಲ್ಲಿರುವಂತ ರಮ್ಯಕಥಾ ಜಗತ್ತಿಗಿಂತ ಭಿನ್ನವಾದ ಹಸಿಹಸಿ ಬದುಕಿನ ಕಥೆಯೂ ಇದೆ ಎನ್ನುವುದನ್ನು ಬಹಳ ಕಷ್ಟದಿಂದ ಒಪ್ಪಿಕೊಂಡೆ. ಇನ್ನೊಂದು ಕಾಮಿಕ್ಸ್, ಚಂದಮಾಮಾ, ಬಾಲಮಿತ್ರ ಇವುಗಳಲ್ಲಿರುವಂತಹ ಮುದ್ದು ಮುದ್ದಾದ ಚಿತ್ರಕಲೆಯ ಆಚೆ ಇನ್ನೊಂದು ಬಗೆಯಲ್ಲಿ ಚಿತ್ರಗಳಿರುತ್ತವೆ ಮತ್ತು ಅದು ಎಲ್ಲವನ್ನೂ ಅಂದವಾಗಿ ತೋರಿಸದೆ, ಬೇರೆ ಇನ್ನೇನನ್ನೊ ಹೇಳುತ್ತವೆ ಎನ್ನುವ ಸ್ಥೂಲ ಪರಿಕಲ್ಪನೆ ನನಗಾಯಿತು. ನನ್ನ ಚಿಕ್ಕಪ್ಪ, ದೊಡ್ಡಪ್ಪ ಇಬ್ಬರೂ ಆಯಿಲ್ ಪೇಂಟ್ ನಲ್ಲಿ ವ್ಯಕ್ತಿಚಿತ್ರ ಮಾಡುತ್ತಿದ್ದರು. ವಾಟರ್ ಪೇಂಟ್ ಕೂಡ ಮಾಡುತ್ತಿದ್ದರು. ಅವರಿಲ್ಲದಾಗ ನಾವು ಮಕ್ಕಳೆಲ್ಲ ಅದರ ಪ್ರಯೋಗ ಮಾಡುತ್ತಿದ್ದೆವು. ಸಹಜವಾಗಿಯೆ ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇತ್ತು. ರಾವ್‌ಬೈಲ್ ಅವರ ರೇಖಾಚಿತ್ರ ನೋಡುತ್ತ ರಂಗೋಲಿ ಮತ್ತು ಫ್ರೀಹ್ಯಾಂಡ್ ಡ್ರಾಯಿಂಗ್ಸ್ ಬಗ್ಗೆ ಆಸಕ್ತಿ ನನ್ನಿಂದ ದೂರಾಯಿತು. ಹೈಸ್ಕೂಲಿನಲ್ಲಿ ಡ್ರಾಯಿಂಗ್ ನ ಸೀನಿಯರ್ ಪರೀಕ್ಷೆ ಚೆನ್ನಾಗಿ ಪಾಸು ಮಾಡಿದ್ದರೂ ನನ್ನೂರು ಶಿರಸಿಯಲ್ಲಿ ಮುಂದೆ ಕಲಿಯಲು ಅವಕಾಶ ಇರಲಿಲ್ಲ. ನಂತರ ನನ್ನ ಖುಷಿಗಷ್ಟೇ ಚಿತ್ರ ಬಿಡಿಸುವುದು ಅನಿವಾರ್ಯವಾಯಿತು.

ಗಂಡು-ಹೆಣ್ಣಿನ ದೇಹವ್ಯಾಪಾರದ ವಿಕೃತ ಜಗತ್ತಿನ ಕಥೆ ಮತ್ತು ಕಪ್ಪನೆಯ ಕೆಲವೇ ಗೆರಗಳ ಹಿಂಜಿದಂತಹ ಮನುಷ್ಯರ ಚಿತ್ರ ನನ್ನ ಸುಕುಮಾರ ಜಗತ್ತಿನಲ್ಲಿ ಭೂಕಂಪನವನ್ನುಂಟುಮಾಡಿದ್ದಂತೂ ನಿಜ. ಚಂದಮಾಮಾ, ಅಮರಚಿತ್ರ ಕಥಾಕೋಶದಲ್ಲಿರುವಂತ ರಮ್ಯಕಥಾ ಜಗತ್ತಿಗಿಂತ ಭಿನ್ನವಾದ ಹಸಿಹಸಿ ಬದುಕಿನ ಕಥೆಯೂ ಇದೆ ಎನ್ನುವುದನ್ನು ಬಹಳ ಕಷ್ಟದಿಂದ ಒಪ್ಪಿಕೊಂಡೆ. ಇನ್ನೊಂದು ಕಾಮಿಕ್ಸ್, ಚಂದಮಾಮಾ, ಬಾಲಮಿತ್ರ ಇವುಗಳಲ್ಲಿರುವಂತಹ ಮುದ್ದು ಮುದ್ದಾದ ಚಿತ್ರಕಲೆಯ ಆಚೆ ಇನ್ನೊಂದು ಬಗೆಯಲ್ಲಿ ಚಿತ್ರಗಳಿರುತ್ತವೆ ಮತ್ತು ಅದು ಎಲ್ಲವನ್ನೂ ಅಂದವಾಗಿ ತೋರಿಸದೆ, ಬೇರೆ ಇನ್ನೇನನ್ನೊ ಹೇಳುತ್ತವೆ ಎನ್ನುವ ಸ್ಥೂಲ ಪರಿಕಲ್ಪನೆ ನನಗಾಯಿತು.

ಮುಂದೆ ಧಾರವಾಡದಲ್ಲಿ ನೆಲೆಸಿದ ಮೇಲೆ ರಾವ್‌ಬೈಲ್ ಅವರನ್ನೇ ಭೇಟಿಯಾಗುವ ಅವಕಾಶ ದೊರೆಯತೊಡಗಿತು. ಅವರಾಗಲೇ ಮುಂಬೈಯಿಂದ ಧಾರವಾಡಕ್ಕೆ ಬಂದು ನೆಲೆಸಿ ಹಲವಾರು ವರ್ಷಗಳಾಗಿದ್ದವು. ಅವರ ಹೆಂಡತಿ ಕುಮುದಿನಿ ರಾವ್ ಡಾನ್ಸ್ ಕ್ಲಾಸ್ ನಡೆಸುತ್ತಿದ್ದರು. ನನ್ನ ಮಗಳು ಅವರ ಬಳಿ ಕಥಕ್ ಕಲಿಯುತ್ತಿದ್ದಳು. ಒಮ್ಮೆ ಕೃಷ್ಣಾ ನೀ ಬೇಗನೆ ಬಾರೋ… ಇನ್ನೊಮ್ಮೆ ಮುಜೆ ಚೆಡೋನ ಕಾನ್ಹಾ… ಎಂದು ಹಾಡುತ್ತ ಗೆಜ್ಜೆಕಟ್ಟಿ ಕಥಕ್ ಮತ್ತು ಭರತನಾಟ್ಯ ಮಾಡುವ ಮುದ್ದಾದ ಪುಟ್ಟ ಗೋಪಿಕೆಯರೆಲ್ಲ ಬಾಗಿ ಬಳುಕುವುದ ನೋಡುತ್ತ ಉದ್ದನೆಯ ಪಡಸಾಲೆಯ ಮೂಲಕ ಹಾದು ಮೆಟ್ಟಿಲೇರಿ ಮಗಳ ಜೊತೆ ಅವರನ್ನು ಭೇಟಿಯಾಗಲು ಹೋಗುತ್ತಿದ್ದೆ. ಅವರ ಮನೆಯ ತುಂಬಾ ಮಕ್ಕಳು ಮತ್ತವರ ಅಮ್ಮಂದಿರು ಯಾವಾಗಲೂ ತುಂಬಿರುತ್ತಿದ್ದರು. ದಿನವೂ ೫-೬ ಬ್ಯಾಚ್ ತರಗತಿಗಳು, ಪ್ರೊಗ್ರಾಮ್ ಕೊಡುವವರು, ಹಾಡುವವರು, ವಾದ್ಯದವರು, ಕಾಸ್ಟ್ಯೂಮ್ ನವರು, ಮೇಕಪ್ಪಿನವರು, ಸಂಗೀತ-ನೃತ್ಯದ ಪರೀಕ್ಷೆಗಳ ಬಗೆಗೆ ವಿಚಾರಿಸಲು ಬರುವವರು… ಮನೆಯ ತುಂಬ ಆಡಿ ಎಸೆದ ಗಜ್ಜುಗದ ಕಾಯಿಗಳಂತೆ ಉರುಳುತ್ತ ಅವರ ಮನೆಯ ಎಲ್ಲ ಕೋಣೆಯಲ್ಲೂ ಓಡಾಡುತ್ತ ಗೌಜಿ ಮಾಡುತ್ತಿರುತ್ತಿದ್ದರು. ರಾವ್‌ಬೈಲ್ ಎದುರು ಕೋಣೆಯಲ್ಲಿ ಕೂತು ಎಲ್ಲ ಮಕ್ಕಳ ಹೆಸರು ನೊಂದಾಯಿಸಿಕೊಳ್ಳುತ್ತ ಮಕ್ಕಳ ಫೋಟೊ ಅಂಟಿಸುತ್ತಿರುತ್ತಿದ್ದರು. ಅವರ ಸುತ್ತಲೂ ನೆರೆದ ಮಕ್ಕಳು-ಅಮ್ಮಂದಿರು ಒಬ್ಬರು ಕೇಳಿದ ಪ್ರಶ್ನೆಗಳನ್ನೇ ಮತ್ತೊಬ್ಬರು ಕೇಳುತ್ತಿದ್ದರೂ ಏನೂ ಬೇಸರಿಸಿಕೊಳ್ಳದೆ ಅವರಿಗೆಲ್ಲ ಮೆಲುದನಿಯಲ್ಲಿ ಉತ್ತರಿಸುತ್ತ ಕೂತಿರುತ್ತಿದ್ದ ಅವರ ಅಸಾಧ್ಯ ತಾಳ್ಮೆಯು ನನ್ನ ತಾಳ್ಮೆಯನ್ನು ಕೆಡಿಸುತ್ತಿತ್ತು. ಯಾವತ್ತೂ ಬಿಳಿಯ ಜುಬ್ಬ ಮತ್ತು ಬಿಳಿಯ ಲುಂಗಿಯಲ್ಲಿರುತ್ತಿದ್ದ ಅವರು ಉದ್ದನೆಯ ಅಜಾನುಬಾಹು ವ್ಯಕ್ತಿ. ಸಣ್ಣದಾದ ನಿರ್ಲಿಪ್ತ ನಗುವೊಂದು ಮುಖದಲ್ಲಿ ಯಾವತ್ತೂ ಇರುತ್ತಿತ್ತು. ನನಗೊಮ್ಮೆಯೂ ಅವರು ಚಿತ್ರಕಲೆಯ ಬಗೆಗೆ ದೀರ್ಘವಾಗಿ ಮಾತನಾಡಲು ಸಿಕ್ಕಿಲ್ಲ. ಯಾವತ್ತೂ ಅವರ ಸುತ್ತಲೂ ಸುತ್ತುವರೆದಿರುವವರ ಮಧ್ಯೆ ಅವರ ಅಸಹಾಯಕತೆಯನ್ನು ನೋಡಿ ಸುಮ್ಮನೆ ಬಂದುಬಿಡುತ್ತಿದ್ದೆ. ನನ್ನ ಮಗಳೇ ನನಗಿಂತ ಭಾಗ್ಯವಂತೆ. ಮಧ್ಯದಲ್ಲಿ ಹೇಗೋ ಸಮಯಮಾಡಿಕೊಂಡು ಹೋಗಿ ಅವರ ಪೇಂಟಿಂಗ್ಸ್ ಎಲ್ಲ ನೋಡಿ ಬರುತ್ತಿದ್ದಳು. ಅವರ ಟೇಬಲ್ ಮತ್ತು ಅಲ್ಲಿರುತ್ತಿದ್ದ ಬಣ್ಣಗಳು, ಕುಂಚಗಳೆಲ್ಲ ಅವಳಿಗೆ ಭಾರೀ ಆಕರ್ಷಣೆಯ ಆಟಿಕೆಗಳಾಗಿದ್ದವು.

ಯಾವತ್ತೂ ಬಿಳಿಯ ಜುಬ್ಬ ಮತ್ತು ಬಿಳಿಯ ಲುಂಗಿಯಲ್ಲಿರುತ್ತಿದ್ದ ಅವರು ಉದ್ದನೆಯ ಅಜಾನುಬಾಹು ವ್ಯಕ್ತಿ. ಸಣ್ಣದಾದ ನಿರ್ಲಿಪ್ತ ನಗುವೊಂದು ಮುಖದಲ್ಲಿ ಯಾವತ್ತೂ ಇರುತ್ತಿತ್ತು. ನನಗೊಮ್ಮೆಯೂ ಅವರು ಚಿತ್ರಕಲೆಯ ಬಗೆಗೆ ದೀರ್ಘವಾಗಿ ಮಾತನಾಡಲು ಸಿಕ್ಕಿಲ್ಲ. ಯಾವತ್ತೂ ಅವರ ಸುತ್ತಲೂ ಸುತ್ತುವರೆದಿರುವವರ ಮಧ್ಯೆ ಅವರ ಅಸಹಾಯಕತೆಯನ್ನು ನೋಡಿ ಸುಮ್ಮನೆ ಬಂದುಬಿಡುತ್ತಿದ್ದೆ. ನನ್ನ ಮಗಳೇ ನನಗಿಂತ ಭಾಗ್ಯವಂತೆ. ಮಧ್ಯದಲ್ಲಿ ಹೇಗೋ ಸಮಯಮಾಡಿಕೊಂಡು ಹೋಗಿ ಅವರ ಪೇಂಟಿಂಗ್ಸ್ ಎಲ್ಲ ನೋಡಿ ಬರುತ್ತಿದ್ದಳು. ಅವರ ಟೇಬಲ್ ಮತ್ತು ಅಲ್ಲಿರುತ್ತಿದ್ದ ಬಣ್ಣಗಳು, ಕುಂಚಗಳೆಲ್ಲ ಅವಳಿಗೆ ಭಾರೀ ಆಕರ್ಷಣೆಯ ಆಟಿಕೆಗಳಾಗಿದ್ದವು.

ಧಾರವಾಡದಲ್ಲಿ ನಾನು ಶಾಲೆ ಪ್ರಾರಂಭಿಸಿದಾಗ ರಂಗಭೂಮಿಗೆ ಕೊಟ್ಟಷ್ಟೇ ಪ್ರಾಮುಖ್ಯತೆ ಸಂಗೀತ ಮತ್ತು ಚಿತ್ರಕಲೆಗೂ ಕೊಟ್ಟಿದ್ದೆ. ಎಲ್ಲರೂ ಕಲಾವಿದರಾಗದೇ ಇದ್ದರೂ ಅದರ ಅಭಿರುಚಿ ಬೆಳೆಯಲಿ ಮತ್ತು ಅದು ಅವರ ಸೃಜನಶೀಲ ಆಯಾಮದ ಬೆಳವಣಿಗೆಗೆ ಬಹಳ ಅಗತ್ಯ ಎನ್ನುವುದನ್ನು ನನ್ನ ರಂಗಭೂಮಿಯ ಕೆಲಸಗಳಿಂದ ಕಂಡುಕೊಂಡಿದ್ದೆ. ರಂಗೋಲಿ ಮತ್ತು ಅಲಂಕಾರಿಕ ಚಿತ್ರಗಳನ್ನು ಬಿಡಿಸಲು ಕೊಡುತ್ತಿರಲಿಲ್ಲ. ಯಾಕೆಂದರೆ ಅದರಿಂದ ಮಕ್ಕಳ ಕಲ್ಪನೆ ಬೆಳೆಯಲಾರದು. ಅವರಿಗೆ ಚಂದದ ಚಿತ್ರಗಳಿರುವ ಪುಸ್ತಕ ತಂದುಕೊಡುತ್ತಿದ್ದೆ. ಚಿಲ್ಡ್ರನ್ಸ್ ಬುಕ್ ಟ್ರಸ್ಟ್ ಮತ್ತು ನ್ಯಾಶನಲ್ ಬುಕ್ ಟ್ರಸ್ಟಿನ ಪುಸ್ತಕಗಳು ಕೇವಲ ೮-೧೦ ರೂಪಾಯಿಗೆ ಸಿಗುತ್ತಿತ್ತು. ಅದರಲ್ಲಿ ಪುಟ್ಟಪುಟ್ಟ ಕಥೆಗಳು, ಅದಕ್ಕೆ ಖ್ಯಾತ ಚಿತ್ರಕಲಾವಿದರು ಚಿತ್ರಬಿಡಿಸಿರುತ್ತಾರೆ. ಅದರಲ್ಲಿ ಕೆ.ಜಿ.ಸುಬ್ರಮಣ್ಯನ್, ಮಾರಿಯಾ ಮಿರಾಂಡಾ, ಮಿಕ್ಕಿ ಪಟೇಲ್ ಮುಂತಾದ ಖ್ಯಾತ ಕಲಾವಿದರು ಮಾಡಿದ ಚಿತ್ರಗಳಿರುವ ಕಥೆಪುಸ್ತಕಗಳನ್ನು ಹೆಚ್ಚು ತರುತ್ತಿದ್ದೆ. ಮಕ್ಕಳಿಗೆ ಅವು ಬಹಳ ಖುಷಿಕೊಡುತ್ತಿದ್ದವು. ರಾವ್‌ಬೈಲ್ ಆಗ ಕ್ರೈ ಎನ್ನುವ ಸಂಸ್ಥೆಗೆ ಗ್ರೀಟಿಂಗ್ ಕಾರ್ಡ್ಗಳನ್ನು ಮಾಡಿಕೊಡುತ್ತಿದ್ದರು. ನಾನು ಅವುಗಳನ್ನೂ ಸಂಗ್ರಹಿಸಿ ಮಕ್ಕಳಿಗೆ ತೋರಿಸುತ್ತಿದ್ದೆ. ಅಂತರಾಷ್ಟ್ರೀಯ ಖ್ಯಾತಿಯ ಇಂತಹ ಅನೇಕ ಕಲಾವಿದರು ಚಿಲ್ಡ್ರನ್ಸ್ ಬುಕ್ ಟ್ರಸ್ಟ್ ಮತ್ತು ನ್ಯಾಶನಲ್ ಬುಕ್ ಟ್ರಸ್ಟ್ ಗಳ ಪುಸ್ತಕಗಳಿಗೆ ತುಂಬ ಸರಳವಾದ ಚಿತ್ರಗಳನ್ನು ಬಿಡಿಸಿಕೊಡುವುದರ ಮೂಲಕ ಮಕ್ಕಳ ಕಲ್ಪನಾಶಕ್ತಿ, ಬಣ್ಣಗಳ ಬಗೆಗೆ ಆತ್ಮೀಯತೆ ಬೆಳೆಸಿಕೊಳ್ಳಲು ಕಾರಣರಾಗಿದ್ದಾರೆ. ಆದರೆ ಮಕ್ಕಳ ದುರದೃಷ್ಟವೆಂದರೆ ಅತ್ಯಂತ ಕಡಿಮೆ ಬೆಲೆಯ ಈ ಪುಸ್ತಕಗಳು ಇಂದು ಅಂಗಡಿಗಳಲ್ಲಿ ಸಿಗುತ್ತಿಲ್ಲ.

ರಾವ್‌ಬೈಲ್ ಅವರನ್ನು ಎಂದೂ ನಾನು ಧಾರವಾಡದಲ್ಲಿ ಸಾರ್ವಜನಿಕ ಸಭೆಗಳಲ್ಲಿ ನೋಡಿಲ್ಲ. ಆದರೆ ಅವರ ಮನೆಯಲ್ಲಿ ಮಾತ್ರ ಮಕ್ಕಳು, ಪಾಲಕರು ಅವರನ್ನು ಮುತ್ತಿರುತ್ತಿದ್ದರು. ನಾನೆಂದೂ ಅವರ ಬಳಿ ಹೆಚ್ಚು ಮಾತನಾಡದಿದ್ದರೂ ಅವರ ಪ್ರಭಾವ ನನ್ನ ಎಳೆವಯಸ್ಸಿನಲ್ಲಿಯೇ ಆಗಿದೆ. ಅದರಿಂದಾಗಿ ಬಣ್ಣಗಳ ಬಗೆಗೆ, ವಿನ್ಯಾಸದ ಬಗೆಗೆ, ಚಿತ್ರಕಲೆಯ ಬಗೆಗೆ ನನ್ನೊಳಗೆ ಅಮೂರ್ತ ಕಲ್ಪನೆ ಮತ್ತು ಅದರ ಬಗೆಗೆ ಗಾಢವಾದ ಒಲವನ್ನು ಮೂಡಿಸಿದೆ. ಮುಖ್ಯವಾಗಿ ಅಲಂಕಾರಿಕ ಚಿತ್ರಗಳ ಭ್ರಮೆಯಿಂದ ನನ್ನನ್ನು ದೂರಮಾಡಿದೆ. ಮನುಷ್ಯ ಮುಖದ ಓರೆಕೋರೆಗಳನ್ನು ಅತ್ಯಂತ ಸರಳವಾದ ಕೆಲವೇ ರೇಖೆಗಳಲ್ಲಿ ಹಿಡಿದಿಡುತ್ತಿದ್ದ ರಾವ್‌ಬೈಲ್ ತುಂಬು ಸಂಸಾರವನ್ನು, ತುಂಬು ಜೀವನವನ್ನು ಸಂತೆಯ ಗದ್ದಲದಲ್ಲೇ ಮಾಡಿದವರು. ಆದರೆ ಅಂತರಾಷ್ಟ್ರೀಯ ಮಟ್ಟದ ಈ ಕಲಾವಿದ ಆ ಗದ್ದಲದಲ್ಲಿ ಏಕಾಂತದ ಧ್ಯಾನ ಸಾಧಿಸಿ ನಮ್ಮಂತಹವರ ಕೆಲಸಗಳಲ್ಲಿ, ಬದುಕಿನಲ್ಲಿ, ನೆನಪಿನಲ್ಲಿ ಚಿರಸ್ಥಾಯಿಯಾಗಿದ್ದಾರೆ. ಈ ಬರಹದ ಮೂಲಕ ಅವರಿಗೊಂದು ಗೌರವದ ನಮನ.