Advertisement
ಅಲಕಾ ಕಟ್ಟೆಮನೆ ಬರೆದ ಈ ಭಾನುವಾರದ ಕತೆ “ನೋಟ”

ಅಲಕಾ ಕಟ್ಟೆಮನೆ ಬರೆದ ಈ ಭಾನುವಾರದ ಕತೆ “ನೋಟ”

ಅವರಿಗೀಗಲೂ ಶಬ್ದ ಮಾಡುವವರಿಗಿಂತ, ಆ ಶಬ್ದವೇ ಆಪ್ತವಾಗಿತ್ತು. ಆದರೆ ಮೇಲಿನ ಮನೆಯ ಆ ಶಬ್ದ ಇತ್ತೀಚಿನ ದಿನಗಳಲ್ಲಿ ಎಷ್ಟೊಂದು ಸಹಜ ಎನಿಸಿದೆಯೆಂದರೆ, ಸದ್ದಾಗುವುದೂ ತನಗೀಗ ತಿಳಿಯುತ್ತಿಲ್ಲ ಎನಿಸಿ ಸಾವಿತ್ರಮ್ಮನಿಗೆ ನಗುಬರುತ್ತಿತ್ತು. ಜೊತೆಗೆ, ತನಗೆ ಕಿವಿ ಇನ್ನಷ್ಟು ಮಂದವಾಗುತ್ತಿದೆಯೇ ಎನ್ನುವ ಅನುಮಾನವೂ ಬರುತ್ತಿತ್ತು. ದಿನವಿಡೀ ನಂಜಯ್ಯ ಮಾತಾಡುವುದು ಅಷ್ಟಕ್ಕಷ್ಟೇ. ಮನೆಗೆ ಬರುವವರು ಆಡುವ ಮಾತೂ ಹೆಚ್ಚೇನಿರುವುದಿಲ್ಲ. ಹಾಗಾಗಿ ಸದಾ ತನಗೆ ಜೊತೆಯಾಗುವುದೆಂದರೆ ಅದೊಂದು ಸದ್ದು ಮಾತ್ರ … ಈಗೀಗ ಇದೂ ಕೇಳುತ್ತಿಲ್ಲವಲ್ಲ ಎನಿಸಿ ಆಕೆಗೆ ತಳಮಳವಾಗುತ್ತಿತ್ತು.
ಅಲಕಾ ಕಟ್ಟೆಮನೆ ಬರೆದ ಕತೆ “ನೋಟ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ಸಾವಿತ್ರಮ್ಮ ಎಲ್ಲೋ ದಿಟ್ಟಿಸುತ್ತಾ ಕುಳಿತಿದ್ದರು. ಅವರು ಇತ್ತೀಚೆಗೆ ಹಾಗೆಯೇ, ಒಂದೆಡೆ ನೋಟವನ್ನು ನೆಟ್ಟು ಕುಳಿತರೆಂದರೆ ಕದಲಿಸುವ ಮಾತೇ ಇಲ್ಲ. ಅವರಿಗೇನಾದರೂ ತ್ರಿಣಯನನಂತೆ ಮೂರನೇ ಕಣ್ಣಿದ್ದಿದ್ದರೆ ಇಷ್ಟೊತ್ತಿಗೆ ಸುತ್ತಲಿನ ಲೋಕವೆಲ್ಲ ಸುಟ್ಟುರುಹಿ ಬೂದಿಯಾಗಿಬೇಕಿತ್ತು. ಕಿಟಕಿಯಾಚೆಗೆ ದಿಟ್ಟಿಸುತ್ತಾ ಕೂತರೆ, ಕಿಟಕಿ ಮುಚ್ಚಿದರೂ ಈ ಲೋಕದ ಖಬರಿಲ್ಲ; ಬಾಗಿಲ ಹೊರಗೆ ನೋಟ ನೆಟ್ಟರೆ, ಬಾಗಿಲೊಳಗೆ ಯಾರಾದರೂ ಬಂದರೂ ಇವರದ್ದು ಪ್ರತಿಕ್ರಿಯೆಯಿಲ್ಲ; ಹಾಗೆ ನೋಡಿದರೆ ಇವರ ಮನೆಗೆ ಹೋಗಿ-ಬಂದು ಮಾಡುವವರೂ ಹೆಚ್ಚು ಜನರಿಲ್ಲ. ಸಾವಿತ್ರಮ್ಮನವರ ಗಂಡನ ಇಬ್ಬರು ತಮ್ಮಂದಿರ ಕುಟುಂಬ, ದೇಖರೇಖಿಗೆ ಬರುವ ನರ್ಸ್‌ ಹಾಗೂ ನೋಡಿಕೊಳ್ಳಲೆಂದು ಇರುವ ಹುಡುಗಿ. ಇವರಿಷ್ಟೇ ಜನ ಸಾವಿತ್ರಮ್ಮನವರ ಸದ್ಯದ ಪರಿವಾರ.

ಪತಿ ನಂಜಯ್ಯನವರು ತೀರಿಕೊಂಡು ಎರಡು ವರ್ಷಗಳಾಗಿವೆ. ಮಕ್ಕಳೇ ಇಲ್ಲದಿದ್ದರಿಂದ ಆ ಬಗ್ಗೆ ಮುಂದಿನ ಮಾತಿಗೆ ಅವಕಾಶವಿಲ್ಲ. ಅಂದಹಾಗೆ, ಇತ್ತೀಚೆಗೆ ಸಾವಿತ್ರಮ್ಮನವರದ್ದೂ ಹೆಚ್ಚು ಮಾತಿಲ್ಲ, ದಿನದ ಯಾವುದೋ ಹೊತ್ತು ಒಂದಿಷ್ಟು ಮಾತು ಆಡಿದರೂ ಸೈ, ಬಿಟ್ಟರೂ ಸೈ. ಏನಿದ್ದರೂ ನೋಟದಲ್ಲೇ ತಮ್ಮ ಬದುಕು ಎಂಬಂತೆ, ಸ್ವರ್ಗದ ಅನಿಮಿಷರಂತೆ ಎವೆಯಿಕ್ಕದೆ ನೋಡುತ್ತಾ ಕುಳಿತುಬಿಡುತ್ತಿದ್ದರು. ಅವರೇನು ನೋಡುತ್ತಿದ್ದರೋ, ಯಾರಿಗೂ ಆಗದ ದರ್ಶನ ಅವರಿಗೇನು ಆಗುತ್ತಿತ್ತೋ… ಬಲ್ಲವರಾರು? ಇತ್ತೀಚಿನ ವರ್ಷಗಳಲ್ಲಿ ಕಿವಿಯೂ ಮಂದವಾಗಿದ್ದರಿಂದ ಹೀಗೆ ಹೊರಜಗತ್ತಿನಿಂದ ಕಳಚಿಕೊಂಡರೋ ಏನೋ. ಆದರೆ ಈ ದಿಟ್ಟಿಸಿ ನೋಡುವ ಶೀಲದಿಂದ ಜೊತೆಗಿರುವವರು ಇನ್ನಿಲ್ಲದಂತೆ ಕಿರಿಕಿರಿ ಅನುಭವಿಸುತ್ತಿದ್ದರು. ಅಯ್ಯ! ನೋಡಿದರೇನು…? ಎದುರಿನವರು ಸವೆದು ಹೋಗುತ್ತಾರೆಯೇ ಎಂದು ಕೇಳಬಹುದು. ಈಕೆ ಯಾರನ್ನಾದರೂ ನೋಡತೊಡಗಿದರೆ ಅವರನ್ನೇ ತಾಸುಗಟ್ಟಲೆ ನಿರಂತರವಾಗಿ ದಿಟ್ಟಿಸಿ ದಿಗಿಲು ಹಿಡಿಸುತ್ತಿದ್ದರು. ಕೂತರೆ, ನಿಂತರೆ, ಎದ್ದರೆ, ಬಿದ್ದರೆ- ಏನು ಮಾಡಿದರೂ ಸಾವಿತ್ರಮ್ಮನವರ ದೃಷ್ಟಿ ಮಾತಿಲ್ಲದೆ ಅವರನ್ನೇ ಹಿಂಬಾಲಿಸುತ್ತಿತ್ತು. ಕಡೆಗೆ ಬಾತ್‌ರೂಮಿಗೆ ಹೋದಾಗಲೂ ಆ ಕಣ್ಣುಗಳು ನೋಡುತ್ತಿವೆ ಎನಿಸಿ ಉಳಿದವರಿಗೆ ಬೆಚ್ಚುವಂತಾಗುತ್ತಿತ್ತು. ಹೀಗೇಕೆ ಮಾಡುತ್ತೀರಿ ಎಂದು ಕೇಳಿದರೆ ಉತ್ತರವಿಲ್ಲ! ಆದರೆ ಪತಿ ನಂಜಯ್ಯನವರು ಇರುವವರೆಗೆ ಈಕೆ ಹೀಗಿರಲಿಲ್ಲವಲ್ಲ, ಚೆನ್ನಾಗಿಯೇ ಇದ್ದರಲ್ಲ… ಮತ್ತೆ ಈಗೇನಾಯಿತು?

*****

ನಂಜಯ್ಯನವರದ್ದು ಬ್ಯಾಂಕಿನ ಕೆಲಸ. ಊರಿಂದೂರಿಗೆ ವರ್ಗಾವಣೆಗೊಳ್ಳುತ್ತಾ, ನಿವೃತ್ತಿಯ ನಂತರ ತಮ್ಮ ಹುಟ್ಟೂರಿಗೆ ಬಂದು ನೆಲೆಸಿದ್ದರು. ತಮ್ಮ ಪೂರ್ವೀಕರಿಂದ ಬಂದ, ದೊಡ್ಡ ಹಿತ್ತಲಿದ್ದ ಹಳೆಯ ಮನೆಯನ್ನು ಮಾರಿ, ಅದರಲ್ಲೇ ಒಂದು ಅಪಾರ್ಟ್ಮೆಂಟು ಕಟ್ಟಿಸಿಕೊಂಡಿದ್ದರು. ಆ ಸಮುಚ್ಚಯದಲ್ಲಿ ೨೦ಕ್ಕೂ ಹೆಚ್ಚು ಮನೆಗಳಿದ್ದವು. ನಂಜಯ್ಯ ಮತ್ತವರ ಇಬ್ಬರು ತಮ್ಮಂದಿರು ಅದೇ ಸಮುಚ್ಚಯದಲ್ಲಿ ವಾಸವಾಗಿದ್ದರು. ಉಳಿದ ಮನೆಗಳನ್ನು ಯಾರ್ಯಾರೋ ಖರೀದಿಸಿದ್ದರು. ಅವರು ತಮ್ಮ ಹುಟ್ಟೂರಿಗೆ ಮರಳುವುದಕ್ಕೂ ಕಾರಣಗಳಿದ್ದವು. ಕೆಲಸದಲ್ಲಿ ಇರುವವರೆಗೂ, ʻತಮಗೆ ಮಕ್ಕಳಿಲ್ಲʼ ಎನ್ನುವ ಕೊರಗು ನಂಜಯ್ಯನವರನ್ನು ಅಷ್ಟಾಗಿ ಕಾಡಿರಲಿಲ್ಲ. ದಿನವಿಡೀ ದುಡಿಮೆಯಲ್ಲಿ ವ್ಯಸ್ತರಾಗಿಯೇ ಇರುತ್ತಿದ್ದರಲ್ಲ. ಆದರೆ ಯಾವಾಗ ನಿವೃತ್ತಿಯಾಗಿ ಮನೆಯಲ್ಲಿ ಕುಳಿತರೋ, ಇದ್ದಕ್ಕಿದ್ದಂತೆ ಲೋಕವೆಲ್ಲ ಬರಿದೋಬರಿದು ಎನಿಸಲು ಪ್ರಾರಂಭಿಸಿತ್ತು. ಗೃಹಿಣಿ ಸಾವಿತ್ರಮ್ಮನವರಿಗೆ ತಮ್ಮ ಎಂದಿನ ಕೆಲಸ ಇದ್ದೇಇರುತ್ತಿತ್ತು. ಜೊತೆಗೆ, ಮಕ್ಕಳಿಲ್ಲದ ಕೊರಗಿಗೆ ಅವರು ಒಗ್ಗಿಕೊಂಡು ಬಹಳ ಕಾಲವಾಗಿತ್ತು. ತಮ್ಮ ಹೊರತಾಗಿ ಜಗತ್ತಿನ ಉಳಿದೆಲ್ಲರೂ ವ್ಯಸ್ತರು, ತಾನು ಮಾತ್ರ ಖಾಲಿ ಎನಿಸಿ, ನಂಜಯ್ಯ ಆಗಾಗ ಖಿನ್ನರಾಗುತ್ತಿದ್ದರು. ಹಾಗಾಗಿ ತಮ್ಮ ಹುಟ್ಟೂರಿಗೆ ಮರಳಿದರೆ ಕುಟುಂಬವರೆಲ್ಲ ಮತ್ತೆ ದೊರೆತು ಮನಸ್ಸಿಗೆ ನೆಮ್ಮದಿ ದೊರೆತೀತೆಂಬುದು ಅವರ ಎಣಿಕೆಯಾಗಿತ್ತು.

ಅವರ ಎಣಿಕೆ ಸುಳ್ಳೇನಾಗಿರಲಿಲ್ಲ. ಬಹಳ ವರ್ಷಗಳಿಂದ ಪರಸ್ಪರ ದೂರವಿದ್ದ ಕುಟುಂಬಗಳು ಈಗ ಹತ್ತಿರ ಬಂದಿದ್ದರಿಂದ ಎಲ್ಲರಿಗೂ ಸಂತೋಷವೇ ಆಗಿತ್ತು. ಯಾವೊಂದು ಊರಲ್ಲೂ ನೆಲೆ ನಿಲ್ಲದೆ, ಎಲ್ಲಾ ಊರಲ್ಲೂ ಸ್ನೇಹಿತರಿದ್ದಾರೆ ಎಂಬ ಭ್ರಮೆಯಲ್ಲಿ, ಯಾವುದೇ ಊರಿನಲ್ಲಿ ಯಾರಿಗೂ ಸಲ್ಲದವರಾಗಿ ತಾವು ಬದುಕು ಕಳೆಯುತ್ತಿದ್ದೇವೆ ಎಂದು ದಂಪತಿ ಹಲವು ಬಾರಿ ಬೇಸರದಿಂದ ಮಾತಾಡಿಕೊಂಡಿದ್ದರು. ಆದರೆ ಅಂಥ ಕೊರಗೆಲ್ಲ ತಮ್ಮ ಹುಟ್ಟೂರಿಗೆ ಬಂದ ಮೇಲೆ ನಂಜಯ್ಯನವರಿಗೆ ದೂರಾಗಿತ್ತು. ಒಂದಿಷ್ಟು ಹಳೆಯ ನಂಟುಗಳು ಮರುಜೀವ ಪಡೆದಿದ್ದವು. ವ್ಯಾಟ್ಸಾಪ್‌ನಲ್ಲಿ ಕೆಲವು ಗ್ರೂಪ್‌ಗಳಾಗಿದ್ದವು. ಹಬ್ಬಗಳಲ್ಲಿ ಮನೆಮಂದಿ ಸೇರುತ್ತಿದ್ದರು. ಅದೊಂದು ತೀರಾ ದೊಡ್ಡದಲ್ಲದ, ಹಾಗೆ ಸಣ್ಣದೂ ಅಲ್ಲದ ಪೇಟೆಯಾದ್ದರಿಂದ, ವಾಕಿಂಗ್‌ನಲ್ಲಿ, ರಸ್ತೆಯಂಚಿನ ಮೋರಿಕಟ್ಟೆಯ ಚರ್ಚೆಯಲ್ಲಿ, ಅಯ್ಯಂಗಾರಿ ಕಟ್ಟೆಯಲ್ಲಿ ಕಾಫಿ ಹೀರುವಾಗ, ಭಾನುವಾರದ ತರಕಾರಿ ಸಂತೆಯಲ್ಲಿ, ಯಾವುದೋ ಪರೀಕ್ಷೆ ಮಾಡಿಸಲೆಂದು ಲ್ಯಾಬ್‌ನಲ್ಲಿ ಕೂತಾಗ… ಹೀಗೆ ಎಲ್ಲೆಲ್ಲೋ ಸ್ನೇಹದ ನಗೆಮುಖಗಳು ಥಟ್ಟನೆ ಎದುರಾಗಿ ಖುಷಿ ತರುತ್ತಿದ್ದವು. ಅವರ ಬದುಕಿನಲ್ಲೀಗ ಬೇಕಾದಷ್ಟು ಲವಲವಿಕೆ ತುಂಬಿಕೊಂಡಿತ್ತು.

ಇವೆಲ್ಲ ನಂಜಯ್ಯನವರ ಪಾಲಿಗಾಯಿತು. ಸಾವಿತ್ರಮ್ಮನವರಿಗೆ…? ಇದೇನು ಅವರ ಹುಟ್ಟೂರಲ್ಲ; ಅವರಿಲ್ಲಿ ಶಾಲೆ-ಕಾಲೇಜು ಓದಿದವರಲ್ಲ; ಈ ಊರಿನಲ್ಲಿ ಅವರು ಮೊದಲು ಹೆಚ್ಚು ದಿನ ಕಳೆದವರೂ ಅಲ್ಲ; ಈ ಎಲ್ಲ ಕಾರಣಗಳಿಂದ ಅವರಿಗೆ ಸ್ನೇಹಿತರೆಂದು ಯಾರೂ ಇಲ್ಲಿಲ್ಲ. ತವರಿನ ಕಡೆಯ ನರಪಿಳ್ಳೆಯೂ ಈ ಊರಲ್ಲಿಲ್ಲ. ಪತಿಯ ಕುಟುಂಬದವರು, ಬಳಗದವರು ಇಲ್ಲಿರುವುದರಿಂದ ಆಗೀಗ ಮನೆಗೆ ಜನ ಬರುತ್ತಾರೆ ಎನ್ನುವುದನ್ನು ಬಿಟ್ಟರೆ, ಬೇರಾವುದೇ ಊರಿಗೆ ವರ್ಗಾವಣೆಗೊಂಡು ಹೋದಾಗ ಅವರೆಷ್ಟು ಒಂಟಿಯಾಗಿದ್ದರೋ ಇಲ್ಲೀಗ ಅದಕ್ಕಿಂತ ಭಿನ್ನವಾಗೇನೂ ಇರಲಿಲ್ಲ ಆಕೆ. ಈ ಊರೂರು ವರ್ಗವಾಗುವ ಉಸಾಬರಿಯಿಂದಾಗಿ ಮನೆಗೆ ದಿನಸಿ ಸಾಮಗ್ರಿಗಳನ್ನು ತರುವುದಕ್ಕೆ ಒಂದೋ ನಂಜಯ್ಯ ಒಬ್ಬರೇ ಹೋಗುತ್ತಿದ್ದರು ಅಥವಾ ಸಾವಿತ್ರಮ್ಮ ಪತಿಯ ಜೊತೆಗೆ ಹೋಗುತ್ತಿದ್ದರು. ಈಗ ಇಲ್ಲಿಯೂ ತಮ್ಮಷ್ಟಕ್ಕೆ ಒಬ್ಬರೇ ಓಡಾಡದೆ ಇರುವುದರಿಂದ, ತಮ್ಮದೇ ಆದ ಹೊಸ ಸ್ನೇಹಿತರೂ ಶ್ರೀಮತಿಯವರಿಗೆ ಇರಲಿಲ್ಲ. ಬಹುಶಃ ಅದಕ್ಕೇ ಇದ್ದೀತು, ಅವರಿಗೆ ಆ ಸದ್ದುಗಳು ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆಯುತ್ತಿದ್ದವು. ಆ ಶಬ್ದಗಳ ಬಗ್ಗೆ ಅವರಿಗೆ ತೀರದ ಅಸಹನೆಯೂ ಕುತೂಹಲವೂ ಇತ್ತು.

“ಶುರುವಾಯ್ತು ಗುಡುಗುಟ್ಟುವುದಕ್ಕೆ! ಅದೇನು ಸುಡುಗಾಡು ಮಾಡ್ತಾರೋ ಕಾಣೆ. ಮನೆಮಂದಿಯೆಲ್ಲ ಹಗ್ಲು ರಾತ್ರಿ ಅನ್ನದೆ ಕುಣೀತಿರ್ತಾರೆ” ಎಂಬ ಸಾವಿತ್ರಮ್ಮನ ಅಸಹನೆಗೆ ನಂಜಯ್ಯನವರಿಗೆ ನಗು ಬರುತ್ತಿತ್ತು.

“ಒಳ್ಳೆ ಕತೆ ನಿಂದು! ಮನೆ ಅಂದ್ಮೇಲೆ ಏನೇನೇ ಶಬ್ದಗಳು ಆಗತ್ತಪ್ಪ. ಅದಕ್ಯಾಕೆ ಇಷ್ಟೊಂದು ಕಿರಿಕಿರಿ ಮಾಡ್ಕೋಬೇಕು?” ಎಂದು ಸಾವಕಾಶವಾಗಿ ಸುಧಾರಿಸಲು ನೋಡುತ್ತಿದ್ದರು ನಂಜಯ್ಯ.

“ನಿಮಗೇನು… ಇಡೀ ದಿನ ಮನೆಯಿಂದ ಹೊರಗೇ ಇರ್ತೀರಿ. ಇಲ್ಲಿ ಈ ದರಿದ್ರ ಸದ್ದು ಕೇಳ್ಕೊಂಡು ಬಿದ್ದಿರೋಳು ನಾನು ತಾನೇ?”

“ಅಲ್ಲಾ ಕಣೆ, ಮೇಲಿನ ಮನೆಯೋರು ಮಾಡೋ ಸದ್ದಿಗೆ ನನಗ್ಯಾಕೆ ಗುದ್ದು ನಿಂದು! ಅವರಿರೋ ಗಾತ್ರಕ್ಕೆ ಹೆಜ್ಜೆ ಮೇಲೆ ಹೆಜ್ಜೆ ಇಟ್ರೂ ಸದ್ದಾಗತ್ತೆ, ಪಾಪ! ಅವರಾದ್ರೂ ಏನ್ಮಾಡಬೇಕು ಹೇಳು”

“ನಿಮಗೆ ಚೆಲ್ಲಾಟ, ನಂಗಿಲ್ಲಿ ಪ್ರಾಣಸಂಕಟ! ನಿನ್ನೆ ರಾತ್ರಿ ಈ ಹಾಳಾದ ಶಬ್ದಕ್ಕೆ ಕಣ್ಣೆವೆ ಮುಚ್ಚಕ್ಕಾಗ್ಲಿಲ್ಲ ಗೊತ್ತಾ. ನೀವೇನೋ ಸುಖಪುರುಷರು! ಚೆನ್ನಾಗಿ ಗೊರೀತಿದ್ರಿ”

“ಒಂದ್ಕೆಲ್ಸ ಮಾಡು, ಇವತ್ತು ರಾತ್ರಿ ಹೋಗಿ ಅವರನ್ನೇ ಕೇಳು… ನಿಮ್ಮನೆಯಿಂದ ಬರುತ್ತಲ್ಲ, ಏನು ಶಬ್ದ ಅದು? ಇಷ್ಟು ಊರುಗಳಲ್ಲಿ ಇದ್ದು ಬಂದಿದ್ದೀನಿ, ಒಂದೂರಲ್ಲೂ ಇಂಥ ಶಬ್ದ ಕೇಳಿಲ್ವಲ್ಲ. ಇಷ್ಟೊಂದು ಶಬ್ದ ಮಾಡೋದು ಹೇಗೆ ಸ್ವಲ್ಪ ನಂಗೂ ತೋರ್ಸಿ ಅನ್ನು”

“ಅಲ್ವಾ! ಈ ವಯಸ್ಕಾಲ್ದಲ್ಲಿ ಸಾವಿತ್ರಮ್ಮಂಗೆ ತಲೆ ಕೆಟ್ಟಿದಿಯಂತೆ. ಹುಚ್ಚಾಸ್ಪತ್ರೆಗೆ ಸೇರ್ಸೋ ಬದಲು ಮನೆಲ್ಲೇ ಇಟ್ಕೊಂಡು, ಮನೆಮಂದಿಯೆಲ್ಲಾ ಒದ್ದಾಡ್ತಿದ್ದಾರಂತೆ ಅಂತ ಊರೆಲ್ಲ ಆಡ್ಕೊಂಡು ನಗಲಿ”

“ಅಲ್ಲ ಕಣೆ, ಇನ್ನೊಬ್ಬರ ಮನೆ ಬಾಗಿಲು ತಟ್ಟಿದ್ರೆ ಹುಚ್ಚು ಅಂತಾನಾ? ಏನು ಮಾತು ನಿಂದು?”

“ಸರಿ, ಒಂದ್ಕೆಲ್ಸ ಮಾಡಣ. ನಿಮ್ಮ ಉಪಾಯ ತಪ್ಪಲ್ಲ ಅಂತಾದ್ರೆ… ನೀವೇ ಹೋಗಿ ಅವರನ್ನ ಕೇಳ್ಕೊಂಡು ಬಂದು ಹೇಳಿ ನಂಗೆ. ಇತ್ತೀಚೆಗಷ್ಟೇ ಬಂದಿದಾರಲ್ಲ, ಪರಿಚಯನೂ ಆದಂಗಾಯ್ತು… ಹೋಗಿ!”

“ಆಂ! ಕೇಡ್ಗಾಲಕ್ಕೆ ನಾಯಿ ಮೊಟ್ಟೆ ಹಾಕ್ತೂಂತ, ಈ ವಯಸ್ಕಾಲದಲ್ಲಿ ಅದೊಂದು ಬಾಕಿ ಇತ್ತು ನಂಗೆ”

“ಅಬಬಬಬ! ನಿಮಗಾದ್ರೆ ಮಹಾ ಮರ್ಯಾದೆ… ನಾನು ಮಾತ್ರ ಮೂರೂ ಬಿಟ್ಟೋಳಾ?” ಎಂದು ಮನೆದೇವ್ರಿಗೆ ದಬಾಯಿಸುವಲ್ಲಿಗೆ ಮನೆದೇವತೆಯ ಪಾರಮ್ಯ ಸಾಧಿತವಾಗುತ್ತಿತ್ತು. ಆದರೆ ಮೂಲದಲ್ಲಿ ಸಾವಿತ್ರಮ್ಮನವರಿಗೆ ಇರುವ ಸಮಸ್ಯೆ ಪರಿಹಾರ ಆಗುತ್ತಿರಲಿಲ್ಲ. ಅದೇನು ನಿಗೂಢ ಸದ್ದು ಮೇಲಿನ ಮನೆಯಿಂದ ಬರುವುದು?”

*****

ನಾಲ್ಕು ಬೀದಿಯಾಚೆಗಿರುವ ಗಣೇಶನ ಗುಡಿಗೆ ಹೋಗುವುದೆಂದರೆ ಇಬ್ಬರಿಗೂ ಇಷ್ಟ. ಅದರಲ್ಲೂ ಸಂಕಷ್ಟಿಯೋ ಮತ್ತೊಂದೋ ನೆವ ಸಿಕ್ಕಿದರಂತೂ ಸಾವಿತ್ರಮ್ಮ ತಪ್ಪದೇ ನಂಜಯ್ಯನವರನ್ನು ಹೊರಡಿಸಿಕೊಂಡು ಗುಡಿಗೆ ಹೋಗುತ್ತಿದ್ದರು. ಆ ದಿನವೂ ಅಂಥದ್ದೇ ಏನೋ ಕಾರಣಕ್ಕಾಗಿ ದಂಪತಿ ಗುಡಿಗೆ ಬಂದಾಗಲೇ ಆಕೆ ಅನಿರೀಕ್ಷಿತವಾಗಿ ಎದುರಾಗಿದ್ದು. ಈ ಹಿರಿಯ ದಂಪತಿಯತ್ತ ಪರಿಚಯದ ನಗೆಯೊಂದನ್ನು ಬೀರಿದ್ದಳು. ಸಾವಿತ್ರಮ್ಮ ಅನುಮಾನದ ನಗೆ ಬೀರಿದಾಗ, ʻಗೊತ್ತಾಗ್ಲಿಲ್ವಾ ಆಂಟಿ? ನಾವು ನಿಮ್ಮ ಮೇಲಿನ ಮನೆಗೆ ಹೊಸದಾಗಿ ಬಂದಿದ್ದೀವಲ್ಲʼ ಎಂದು ಪರಿಚಯಿಸಿಕೊಂಡಿದ್ದಳು. ʻಹೌದಲ್ಲಮ್ಮ, ನನಗೆ ತಕ್ಷಣ ಗುರ್ತೇ ಸಿಗಲಿಲ್ಲʼ ಎಂದು ಪೆಚ್ಚು ನಗೆಯಾಡಿದರು ಸಾವಿತ್ರಮ್ಮ. “ಏನು ಓದ್ತಿಯಮ್ಮ?” ಎನ್ನುವ ನಂಜಯ್ಯನ ಪ್ರಶ್ನೆಗೆ, “ಬಿ.ಕಾಂ ಫಸ್ಟ್‌ ಇಯರ್‌ ಅಂಕಲ್‌” ಎಂದಳು ಆಕೆ. ಸಾವಿತ್ರಮ್ಮ ಮೇಲಿನ ಮನೆಯವರನ್ನು ನೋಡಿಯೇ ಇರಲಿಲ್ಲ ಎಂದಲ್ಲ, ʻಸರಿಯಾಗಿʼ ನೋಡಿರಲಿಲ್ಲ. ಅವಳನ್ನು ʻಸರಿಯಾಗಿʼ ನೋಡಿದ ಮೇಲೆ, ಗುಡಿಯಿಂದ ಹೊರಗೆ ಬರುವವರೆಗೂ ಸಾವಿತ್ರಮ್ಮ ಮೌನವಾಗಿಯೇ ಇದ್ದರು.

“ಮೇಲಿನ ಮನೆ ಹುಡುಗಿ ಸಿಕ್ಕಿದ್ಲಲ್ಲ, ಕೇಳೋದಲ್ವ ಆಕೇನ… ಅದೇನು ಶಬ್ದ ಮಾಡ್ತೀರಿ ಅಂತ” ಮೌನವಾಗಿ ಮನೆಯತ್ತ ನಡೆಯುತ್ತಿದ್ದ ಸಾವಿತ್ರಮ್ಮನನ್ನು ನಂಜಯ್ಯ ಬೇಕೆಂದೇ ಕೆಣಕಿದ್ದರು.

“ಹೂಂ! ನನ್ನನ್ನೇನು ರಾಕ್ಷಸಿ ಅಂದ್ಕೊಂಡ್ರಾ… ಅವಳನ್ನು ನೋಡಿದ ಮೇಲೂ ಅಂಥ ಪ್ರಶ್ನೆ ಕೇಳೋದಕ್ಕೆ?” ಸಾವಿತ್ರಮ್ಮನ ಧ್ವನಿಯಲ್ಲಿ ನೋವಿತ್ತು. ಈಗ ಆತನೂ ಮೌನವಾದರು. “ಮಕ್ಕಳಿಲ್ಲ ಅಂತಾದ್ರೆ ಅದೊಂದೇ ಕೊರಗಿರತ್ತೆ ಕಣ್ರೀ, ಬೇರೇನೂ ಇರಲ್ಲ. ಇದೀಗ ಆ ಹುಡುಗಿ ನೋಡಿ, ಶರೀರ ಯದ್ವಾತದ್ವಾ ಬೆಳಕೊಂಡಿದೆ. ಅದಕ್ಕೆ ತಕ್ಕನಾಗಿ ಬುದ್ಧಿ ಬೆಳೆದಿಲ್ಲ. ಹಾಗಂತ ಬುದ್ಧಿಮಾಂದ್ಯತೆ ಅಂತ ಹೇಳೋದೂ ಕಷ್ಟ. ಬಿಕಾಂ ಓದ್ತಿದ್ದೀನಿ ಅಂತಾಳೆ. ಇಂಥ ಮಕ್ಕಳನ್ನು ನೋಡಿದಾಗ ಹೆತ್ತೋರಿಗೆ ಎಷ್ಟು ಸಂಕಟ ಆಗಲ್ವೇನ್ರೀ. ಕೊಟ್ಟೂಕೊಟ್ಟು ಇಂಥ ಮಕ್ಕಳನ್ನ ಕೊಡೋದಾ ದೇವ್ರು?”

“ಹೌದು ಕಣೆ, ಬುದ್ಧಿ ಕಡಿಮೆ ಅನ್ಸತ್ತೆ. ಅವಳನ್ನು ನೋಡಿದರೆ ಸ್ವಲ್ಪ ಸ್ವಲೀನತೆಯೂ ಇದ್ದ ಹಾಗಿದೆ”

“ಇನ್ನೂ ಚಿಕ್ಕವಳು. ಮುಂದಿನ ಬದುಕು ಹೇಗೋ ಏನೋ ಅವಳದ್ದು” ಅನ್ನುವಲ್ಲಿಗೆ ಆಕೆಯ ಬಗ್ಗೆ ಅವರ ಅಂದಿನ ಮಾತುಕತೆ ಮುಗಿದಿತ್ತು. ಮಾತ್ರವಲ್ಲ, ಮುಂದಿನ ಕೆಲವು ದಿನಗಳು ಆ ನಿಗೂಢ ಶಬ್ದಕ್ಕೆ ಸಾವಿತ್ರಮ್ಮ ಕೆರಳಿರಲಿಲ್ಲ. ಬದಲಿಗೆ ʻಪಾಪ!ʼ ಎಂದು ಲೊಚಗುಟ್ಟಿಕೊಂಡು ಸುಮ್ಮನಾಗುತ್ತಿದ್ದರು. ಆದರೆ ಆ ಶಬ್ದವೇನು ಎನ್ನುವ ಕುತೂಹಲ ಅವರಲ್ಲಿ ಇದ್ದೇಇತ್ತು.

ಇನ್ನೊಂದು ದಿನ, ಒಂದೆರಡು ಕೌದಿಗಳನ್ನು ಬಿಸಿಲಿಗೆ ಹಾಕುವುದಕ್ಕಾಗಿ ಟೆರೇಸಿಗೆ ತೆರಳಿದ್ದರು ದಂಪತಿ. ಮೇಲಿನ ಮನೆಯ ಆ ಹುಡುಗಿ ಟೆರೇಸಿನ ಇನ್ನೊಂದು ಭಾಗದಲ್ಲಿದ್ದಳು. ಕೈಯಲ್ಲೊಂದು ಮೊಬೈಲ್‌ ಹಿಡಿದು, ಅದರಲ್ಲಿ ದೊಡ್ಡಕ್ಕೆ ಹಾಡು ವದರಿಸಿಕೊಂಡು, ತನ್ನಷ್ಟಕ್ಕೆ ಕುಣಿಯುವ ಯತ್ನದಲ್ಲಿದ್ದಳು. ಶರೀರ ತೀರಾ ಸ್ಥೂಲವಾಗಿದ್ದರಿಂದ ʻಧೊಪ್‌ ಧೊಪ್‌ʼ ಎಂಬಂಥ ಹೆಜ್ಜೆಗಳು ತಮ್ಮ ಭಾರವನ್ನು ಸಲೀಸಾಗಿ ಸೂಚಿಸುತ್ತಿದ್ದವು. ಯಾರನ್ನೋ ಮೆಚ್ಚಿಸಲು ತಾನು ನರ್ತಿಸುತ್ತಿದ್ದೇನೆ ಎಂಬಂತೆ, ತನ್ನ ಒನಪು-ವಯ್ಯಾರಗಳಿಗೆ ಯಾರೋ ಪ್ರೇಕ್ಷಕರಿದ್ದಾರೆ ಎಂಬಂತಹ ಹಾವಭಾವಗಳಿಂದ ಆಕೆ ತನ್ನ ಕಾಲು ಹೋದಂತೆ ಅಡ್ಡಡ್ಡವಾಗಿ ಕುಣಿಯುತ್ತಿದ್ದಳು. ತನ್ನಷ್ಟಕ್ಕೇ ನಗುವುದು, ಕೂದಲು ಸಾವರಿಸಿಕೊಳ್ಳುವುದು ಇತ್ಯಾದಿ ಚರ್ಯೆಗಳನ್ನು ಕಂಡು ದಂಪತಿ ಗೊಂದಲದಿಂದ ಮುಖ-ಮುಖ ನೋಡಿಕೊಂಡರು. ಟೆರೇಸಿಗೆ ಬಂದು ಬಿಸಿಲಿನಲ್ಲಿ ಯಾಕೆ ಕುಣಿಯುತ್ತಿದ್ದಾಳೆ? ಮನೆಯಲ್ಲಿ ಯಾರಿಲ್ಲವೇ? ದಿನವೂ ಇದನ್ನೇ ಮಾಡುತ್ತಾಳೆಯೇ? ಇವಳ ಈ ಚರ್ಯೆಗಳ ಅರ್ಥವೇನು? ಮುಂತಾದ ಬಹಳಷ್ಟು ಪ್ರಶ್ನೆಗಳು ಇಬ್ಬರಿಗೂ ಮೂಡಿಬಂದವು.

“ಇಲ್ಲೇನು ಮಾಡ್ತಿದ್ದೀಯಮ್ಮ?” ಸಾವಿತ್ರಮ್ಮ ಮಾತಾಡಿಸಿದರು.

“ಸಂಕ್ರಾಂತಿಕಾಳು ಮಾಡೋದಕ್ಕೆ ಕೊಬ್ಬರಿ, ಕಡ್ಲೆಬೀಜ ಒಣಗಾಕಿದಾರೆ ಅಮ್ಮ. ಯಾವ್ದೂ ಹಕ್ಕಿ ಬರದಂಗೆ ನೋಡ್ಕೊ ಅಂದ್ರು. ಅದ್ಕೆ ಇಲ್ಲಿ ಕಾಯ್ತಿದೀನಿ” ಮುಗ್ಧವಾಗಿ ಉಲಿದಳು ಹುಡುಗಿ.

ಒಣಗಿಸಿದ ಕಾಳು-ಕಡಿಗಳತ್ತ ನೋಡಿದರೆ ಒಂದೆರಡು ಹಕ್ಕಿಗಳು ಅದರ ಸುತ್ತ ಓಡಾಡಿಕೊಂಡಿದ್ದವು. ಸಾವಿತ್ರಮ್ಮ ಅದರತ್ತ ಕೈ ತೋರಿದರು. ಅವರು ತೋರಿದತ್ತ ಕಣ್ಣಾಡಿಸಿದ ಹುಡುಗಿ, ʻಹಶ್‌… ಹಶ್‌ʼ ಎನ್ನುತ್ತಾ ಧೊಪ್ಪನೆಯ ಹೆಜ್ಜೆಗಳೊಂದಿಗೆ ಒಣಗಿಸಿದ ವಸ್ತುಗಳತ್ತ ಧಾವಿಸಿದಳು. ದಂಪತಿ ಮುಂದೆ ಮಾತಾಡದೆ ಕೆಳಗಿಳಿದರು.

“ಅಲ್ಲ ಕಣ್ರೀ, ದಿನವಿಡೀ ಮನೆಯಲ್ಲಿ ಕುಣಿಯೋದಕ್ಕೆ ಇವಳೇನು ಕಾಲೇಜಿಗೆ ಹೋಗೋದಿಲ್ವೆ?” ಶ್ರೀಮತಿಯವರ ಗೊಂದಲ ಮುಗಿದಿರಲಿಲ್ಲ.

“ನೀನೂ ಸರಿ. ಬಿ.ಕಾಂ. ಮಾಡ್ತಿದ್ದಾಳೆ ಅಂದ ಮೇಲೆ ಕ್ಲಾಸಿಗೆ ಹೋಗದಿದ್ರೆ ಆಗತ್ಯೇ?”

“ಮತ್ತೆ ಇಡೀ ದಿನ ದಡಬಡ ಸದ್ದು ಕೇಳತ್ತಲ್ಲ ಅವರ ಮನೆಯಿಂದ… ಅದ್ಹೇಗೆ?”

“ಅವರ ಮನೆಯಿಂದ ಕೇಳೋ ಸದ್ದೇ ಬೇರೆ, ಇವಳು ಕುಣಿಯುವಾಗ ಬರೋ ಸದ್ದೇ ಬೇರೆ. ಈಗ ಟಾರ್ಸಿ ಮೇಲೆ ಕೇಳಲಿಲ್ವಾ ಬರೋ ಸದ್ದು ಹೇಗಿರತ್ತೆ ಅಂತ?” ಯಜಮಾನರದ್ದು ಬೇರೆಯೇ ವಿಶ್ಲೇಷಣೆಯಿತ್ತು. ಅದು ಯಜಮಾಂತಿಗೂ ಸರಿ ಎನಿಸಿತು. “ಅದ್ನಿಜ. ಆದ್ರೂ… ಅದೇನು ವಿಚಿತ್ರ ಸದ್ದೂಂತೀನಿ” ಎಂದು ತಮ್ಮಷ್ಟಕ್ಕೇ ಗೊಣಗುತ್ತಾ ಒಳನಡೆದರು.

ಆ ಹುಡುಗಿಯ ಚರ್ಯೆ, ಹಾವ-ಭಾವಗಳು ಸಾವಿತ್ರಮ್ಮನ ಮನ ಕಲಕಿದ್ದವು. ʻಪಾಪುದ್ದು… ಬುದ್ಧಿ ಕಡಿಮೆಯಾದರೇನು, ಪ್ರಾಯ ಹೆಚ್ಚುತ್ತಿದೆಯಲ್ಲ. ಸರಿಯಾಗಿ ಕಲಿತು, ತನ್ನದೇ ಕಾಲ್ಮೇಲೆ ನಿಂತರೆ ಯಾರಾದ್ರೂ ಒಳ್ಳೆ ಹುಡುಗ ಸಿಗಬೋದು. ಅದೇನೂ ಇಲ್ಲದಿದ್ರೆ ಇಂಥವರಿಗೆ ಮದುವೆ-ಹಬ್ಬ ಎಲ್ಲಾ ಕಷ್ಟ. ಹೀಗೆಲ್ಲ ಬೆಡಗು ಮಾಡ್ತಾ ಕೂತಿದ್ರೆ ಇನ್ನೂ ಕಷ್ಟʼ ಎಂದು ತಮ್ಮಷ್ಟಕ್ಕೇ ಯೋಚಿಸುತ್ತಿದ್ದರು. ಮದುವೆಯಿಲ್ಲದೆ ಮುಂದಿನ ಬದುಕು ಹೇಗೆ ಎನ್ನುವುದಕ್ಕಿಂತ ಹೆಚ್ಚಿನದನ್ನು ಯೋಚಿಸುವುದು ಅವರ ಪರಿಧಿಯಲ್ಲಿ ಇರಲಿಲ್ಲ. ದೇವರಿಗೆ ದೀಪ ಹಚ್ಚುವಾಗ ಆ ಹುಡುಗಿ ನೆನಪಾದರೆ, ʻಅವಳನ್ನೊಂದು ದಡ ಹತ್ಸು ತಂದೆʼ ಎಂದು ಕೈಮುಗಿಯುತ್ತಿದ್ದರು. ಅವಳ ಬಗ್ಗೆ ಹೆಚ್ಚು ತಿಳಿದಷ್ಟೂ ತಳಮಳವಾಗುತ್ತಿತ್ತು. ಇಷ್ಟಾದರೂ ಆ ಸದ್ದು ಮಾತ್ರ ಅವರಿಗೆ ಇನ್ನಷ್ಟು ಕುತೂಹಲ ಮೂಡಿಸುತ್ತಿತ್ತು.

ಆ ದಿನ ಸಾವಿತ್ರಮ್ಮನವರ ಕೆಲಸದ ಹುಡುಗಿ ಹೇಳದೆಯೇ ರಜಾ ಹಾಕಿದ್ದರಿಂದ, ಬದಲಿಗೆ ಯಾರು ಸಿಕ್ಕುತ್ತಾರೆಂದು ಅರಸುತ್ತಿದ್ದರು. ಅದೇ ಸಮಯಕ್ಕೆ ಮೇಲಿನ ಮನೆಯ ಕೆಲಸ ಮುಗಿಸಿದ ಆ ಮನೆಯ ಕೆಲಸದಾಕೆ ಮೆಟ್ಟಲಿಳಿದು ಬರುತ್ತಿದ್ದಳು. ತಮ್ಮ ಹುಡುಗಿ ಇಂದು ಬಂದಿಲ್ಲದಿದ್ದರಿಂದ, ಇವತ್ತೊಂದು ದಿನ ಕೆಲಸ ಮಾಡುವಂತೆ ಆಕೆಯನ್ನು ಸಾವಿತ್ರಮ್ಮ ಕೇಳಿದರು. ಆಕೆ ಹೆಚ್ಚು ಯೋಚಿಸದೆ ಒಪ್ಪಿಕೊಂಡಳು.

ಮನೆಯೊಳಗೆ ಕಾಲಿಟ್ಟ ಐದೇ ನಿಮಿಷಗಳಲ್ಲಿ, “ಇದೇನಮ್ಮ ಇಂಗೆ ಗುಡ್ಗುಡಾಂತಾದೆ?” ಕೇಳಿದಳು ಕೆಲಸದಾಕೆ. “ಅದೇನೊ ಗೊತ್ತಿಲ್ಲ. ಮೂರ್ಹೊತ್ತೂ ಇದೇ ಗಲಾಟೆ ಮೇಲ್ಗಡೆಯಿಂದ. ಏನ್‌ ಮಾಡ್ತಿರ್ತಾರೋ!” ಮುಖ ಸಿಂಡರಿಸಿಕೊಂಡರು ಸಾವಿತ್ರಮ್ಮ. ಪಾತ್ರೆ ತೊಳೆದು ಮುಗಿಸುವವರೆಗೂ ಮೌನವಾಗಿಯೇ ಇದ್ದ ಕೆಲಸದಾಕೆ, ಆಮೇಲೆ ಕೈಗೆ ಪೊರಕೆ ತೆಗೆದುಕೊಂಡವಳು, ʻಇಲ್ಬನ್ನಿʼ ಎನ್ನುವಂತೆ ಕರೆದಳು. ಯಜಮಾನ್ತಿಗೆ ಅಚ್ಚರಿಯಾಯಿತು. ಆ ಉದ್ದನೆಯ ಪೊರಕೆಯನ್ನು ತಮ್ಮ ಎರಡೂ ಮಂಡಿಗಳ ನಡುವೆ ಸಿಕ್ಕಿಸಿಕೊಂಡವಳು, ಕುದುರೆಯ ಮೇಲೆ ಕೂತಂತೆ ಹಿಂದೆ-ಮುಂದೆ, ಹಿಂದೆ-ಮುಂದೆ ಜೀಕಿದಳು. ನಂತರ ಕಿಸಕ್ಕನೆ ನಕ್ಕು, ಮೇಲೆ ಬೆರಳು ತೋರಿದಳು. ಸಾವಿತ್ರಮ್ಮನಿಗೆ ಏನೂ ಅರ್ಥವಾಗದೆ ಪಿಳಿಪಿಳಿ ನೋಡಿದರು.

ʻಗೊತ್ತಾಯ್ಲಿಲ್ವವ್ವ? ಅದೇ ಸೋಂಡ್‌ ಬತ್ತುದೆ ಮ್ಯಾಲ್ಗಡೆ ಮನೆಯಿಂದ ಅಂದ್ರಲ್ಲ… ಇದೇ!” ಎಂದು ಮತ್ತೆ ಮುಸಿಮುಸಿ ನಕ್ಕಳು.

ʻಮೇಲಿನ ಮನೆಯ ಶಬ್ದʼ ಎನ್ನುತ್ತಿದ್ದಂತೆ ಸಾವಿತ್ರಮ್ಮನ ಕಿವಿ ಚುರುಕಾಯಿತು. ಕೆಲಸದಾಕೆಯ ಕೈಯಳತೆಯ ದೂರದಲ್ಲಿ ಬಂದು, ಸೊಂಟಕ್ಕೆ ಕೈಯಿಟ್ಟು, ಬೆನ್ನು ಕೊಂಚ ಬಾಗಿಸಿ, ʻಏನಂದೆ? ಕೇಳಿಸಲಿಲ್ಲ. ಕಿವಿ ಈಗೀಗ ಸ್ವಲ್ಪ ದೂರ ಆಗೋಗಿದೆʼ ಎಂದರು.

“ಚಿಕ್ಮಕ್ಳು ಆಡ್ತಾರಲ್ಲವ್ವ… ಬಣ್ಣುದ್ ಕುದ್ರೆ ಮ್ಯಾಲೆ ಕುಂತು ಹಿಂದುಕ್ಕೂ ಮುಂದುಕ್ಕೂ… ಅಂಗೆ ಮ್ಯಾಲ್ಗಡೆ ಮನೆ ಎಣ್ಣೂ ಆಡ್ತಾ ಇರ್ತುದೆ. ಅದು ಮನೇಲಿಲ್ದೆ ಓದಾಗ ಅದ್ರಜ್ಜಿ ಆಡ್ತುದೆ. ಅದೇಯ ಇಂಗೆ ದುಡ್ಕೂಬುಡ್ಕೂ ಸೋಂಡ್‌ ಆಗದು‌” ಎಂದಳು ಮಾಗುಮ್ಮಾಗಿ.

ಈಗಂತೂ ಸಾವಿತ್ರಮ್ಮನ ಸೋಜಿಗಕ್ಕೆ ತುದಿ-ಮೊದಲೇ ಇರಲಿಲ್ಲ. ವಯಸ್ಸಿಗೆ ತಕ್ಕಂತೆ ಬುದ್ಧಿ ಬೆಳೆಯದೇ ಇನ್ನೂ ಮಕ್ಕಳಂತೆ ಆಡುತ್ತಾಳೆ ಎಂಬುದು ಹೌದಾದರೂ ಇದೇನು… ಕುದುರೆ ಆಟ! ಆ ಬಣ್ಣಬಣ್ಣದ ಮರದ ಕುದುರೆಗಳೆಲ್ಲ ಬಾಲವಾಡಿ ಚಿಣ್ಣರ ಆಟಕ್ಕೆ ಆಗುವಂಥವು. ಹಾಗಾದರೆ ಅಷ್ಟು ದೊಡ್ಡ ಶರೀರಕ್ಕೆ ಎಷ್ಟು ದೊಡ್ಡ ಕುದುರೆ ಬೇಕಾಗಬಹುದು! ಹೀಗೆಲ್ಲ ಯೋಚಿಸಿದಷ್ಟೂ ತಲೆ ಕರಡಿದಂತಾಯ್ತು ಆಕೆಗೆ. “ಅಲ್ಲ ಕಣೆ, ಆ ಹುಡುಗಿ ಆಡ್ತಾಳೇಂತೀಯ; ಅವಳಿಲ್ಲದಾಗ ಅವಳಜ್ಜಿ ಆಡ್ತಾಳೇಂತೀಯ… ಎಷ್ಟು ದೊಡ್ಡ ಕುದ್ರೆನೇ ಅದು? ಅವಳು ಕೂತ್ರೆ ಮುರ್ದೋಗಲ್ವಾ?” ಕುತೂಹಲ ತಣಿಯದಿದ್ದರೆ ತಲೆ ಇನ್ನೂ ಹಾಳಾಗುತ್ತದೆ ಎಂಬುದು ಆಕೆಗೆ ಗೊತ್ತಿತ್ತು.

“ಅಯ್‌, ತಗೀರಿ! ಕುದ್ರೆ ಅಂದ್ರೆ ನೋಡಕ್ಕೆ ಕುದ್ರೆ ತರ ಇಲ್ಲ ಕಣವ್ವ. ಕುದ್ರೆ ತರ ಹಿಂದುಕ್ಕೂ ಮುಂದುಕ್ಕೂ ಆಡ್ಸ ಚೇರು. ಹಳೇಕಾಲುದ್ದಂತೆ… ಗಟ್ಮುಟ್ಟಾಗದೆ, ಚೆನಾಗಿ ದೊಡ್ದಾಗದೆ. ಅದ್ರಲ್ಲೇ ಈ ಪಾಟಿ ಸೋಂಡ್‌ ಬರದು” ಎಂದು ವಿವರಣೆ ನೀಡಿದಳು ಕೆಲಸದಾಕೆ.

ಅಬ್ಬ! ಸಾವಿತ್ರಮ್ಮನಿಗೆ ಈಗ ನಿರುಮ್ಮಳವಾಯ್ತು. ದೊಡ್ಡ ಕುರ್ಚಿ… ರಾಕಿಂಗ್‌ ಚೇರ್‌ ಮೇಲೆ ಕೂತು ಈ ಅಜ್ಜಿ-ಮೊಮ್ಮಗಳು ಎಬ್ಬಿಸುವ ಗದ್ದಲ ಹೀಗೆ ತಮ್ಮೆಲ್ಲರ ತಲೆ ಹಾಳು ಮಾಡುತ್ತಿದೆ, ನಿದ್ದೆ ಕಸಿಯುತ್ತಿದೆ. ಆ ಮನೆಯಲ್ಲಿ ಇನ್ನೂ ಎಷ್ಟು ಜನರಿದ್ದಾರೋ… ಹೀಗೆ ʻಆನೆ ಬಂತೊಂದಾನೆʼ ಎಂದು ಹಿಂದೆ-ಮುಂದೆ ತೂಗುವವರು! ಅವರನ್ನೊಮ್ಮೆ ಕಂಡು, ನಿಮ್ಮ ಕುರ್ಚಿಯ ಅಡಿಗೊಂದು ದಪ್ಪನೆಯ ಜಮಖಾನೆ ಹಾಕಿಕೊಂಡು ಪುಣ್ಯ ಕಟ್ಟಿಕೊಳ್ಳಿ; ಧರ್ಮಕ್ಕೆ ನಮ್ಮ ನಿದ್ದೆ ಹಾಳುಮಾಡಬೇಡಿ ಎನ್ನಬೇಕು.… ಎಂದೆಲ್ಲ ಯೋಚಿಸಿದ ಸಾವಿತ್ರಮ್ಮ, ಯಜಮಾನರು ಬರುತ್ತಿದ್ದಂತೆ ಈ ಎಲ್ಲವನ್ನೂ ವರದಿ ಮಾಡುವುದಕ್ಕೆ ಸಿದ್ಧತೆ ನಡೆಸಿದರು.

ಶಬ್ದದ ಮೂಲವನ್ನು ಕಂಡು ಹಿಡಿದಿದ್ದು ಆಕೆಯ ಪಾಲಿಗೆ ಅಷ್ಟೊಂದು ಮಹತ್ವ ಪಡೆದಿದ್ದು ಏಕೆಂಬುದು ನಂಜಯ್ಯನವರಿಗೆ ಅರ್ಥವಾಗದೆ ಏನಿಲ್ಲ. ತನಗೇನೋ ಸ್ನೇಹಿತರು ಎಲ್ಲೆಡೆ ಇರುತ್ತಿದ್ದರು. ಆದರೆ ಸಾವಿತ್ರಮ್ಮ ಮೊದಲಿನಿಂದಲೂ ಒಂಟಿಯಾಗಿಯೇ ಇದ್ದವರು. ಅಂದಿನ ಕಾಲದಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ್ದ ಆಕೆಗೆ ತಾನು ವರ್ಗವಾಗಿ ಹೋದಲ್ಲೆಲ್ಲ ಸುತ್ತಲಿನವರೊಂದಿಗೆ ಸ್ನೇಹ ಸಂಪಾದಿಸುವಷ್ಟು ಹಿಂದಿ ಅಥವಾ ಇಂಗ್ಲೀಷ್ ಬರುತ್ತಿರಲಿಲ್ಲ. ಅನುವು-ಆಪತ್ತಿಗೆ ಬೇಳೆ ಬೇಯಿಸಿಕೊಳ್ಳುವಷ್ಟು ಮಾತ್ರವೇ ಆಕೆಗೆ ಭಾಷೆ ಬರುತ್ತಿತ್ತು. ಹೋಗಲಿ, ಕಲಿಯುವುದಕ್ಕಾದರೂ ಪ್ರಯತ್ನಿಸಿದರೋ… ಅದೂ ಇಲ್ಲ. ʻಭಾಷೆ ಅಂದ್ರೆ ಏನು ಕಲಿಯೋಕಾಗದ ಬ್ರಹ್ಮವಿದ್ಯೆ ಅಲ್ಲವಲ್ಲ… ನಿಂಗೆ ಬಂದಂಗೆ ಮಾತಾಡು. ಸ್ವಲ್ಪ ದಿನಕ್ಕೆ ಸುಧಾರಿಸತ್ತೆʼ ಎಂದು ಎಷ್ಟೇ ಪುಸಲಾಯಿಸಿದರೂ ಆಕೆ ಮನಸ್ಸು ಮಾಡಲೇ ಇಲ್ಲ. ಈಗ ತಮ್ಮದೇ ಊರಿಗೆ ಬಂದರೂ ಅವರು ಯಾರನ್ನೂ ಹೆಚ್ಚಾಗಿ ಹಚ್ಚಿಕೊಳ್ಳದ ಮನಸ್ಥಿತಿಗೆ ಒಗ್ಗಿಕೊಂಡಿದ್ದಾರೆ. ಹಾಗೆಂದು ಯಾವುದೇ ಜೀವಕ್ಕಾದರೂ ಆಪ್ತ ಎನಿಸುವಂಥ ಏನಾದರೂ ಬೇಡವೇ? ತನ್ನ ಮನದ ಭಾವಗಳನ್ನು ತೋರಿಸಿಕೊಳ್ಳುವಂಥ ಯಾವುದಾದರೊಂದು ಬೇಕಲ್ಲವೇ? ಇದೀಗ ಆ ಸದ್ದು ಅವರಿಗೆ ಅಂಥದ್ದೊಂದು ಭೂಮಿಕೆಯನ್ನು ಕಲ್ಪಿಸಿತ್ತು. ತಮ್ಮ ಸಿಟ್ಟು, ತಳಮಳ, ಕುತೂಹಲ, ಕರುಣೆ, ಅಸಹನೆ ಮುಂತಾದ ಸಕಲ ಭಾವಗಳನ್ನೂ ಅದೊಂದು ಶಬ್ದದ ಮೇಲೆ ಸಲೀಸಾಗಿ ಆಕೆ ಹರಿಯಬಿಡುತ್ತಿದ್ದರು. ಹಾಗೆಂದೇ ನಂಜಯ್ಯನವರೊಂದಿಗೆ ಕಾಫಿ ಹೀರುತ್ತಿದ್ದಾಗ ಆ ಸದ್ದು ಪ್ರಾರಂಭವಾದರೆ, ʻಹುಡುಗಿ ಕಾಲೇಜಿಗೆ ಹೋದ ಮೇಲೆ ಅಜ್ಜಿಯದ್ದು ಶುರುವಾಗಿರಬೇಕು ಆನೆ ಬಂತೊಂದಾನೆʼ ಎಂದು ತಮ್ಮಷ್ಟಕ್ಕೇ ಚಾಳಿಸಿಕೊಂಡು ನಗುತ್ತಿದ್ದರು. ರಾತ್ರಿಯ ನಿದ್ದೆಗೆ ಭಂಗ ಬಂದರೆ, ʻನಿದ್ರೆ ಮಾತ್ರೆಗೆ ಎಷ್ಟಿರತ್ತೆ ರೀ? ನಾಳೆ ತಂದು ಕೊಡಿ… ಹೋಗಿ ಮೇಲಿನವರ ಮುಖಕ್ಕೆ ಬಿಸಾಕಿ ಬರ್ತೀನಿ. ಅವರದನ್ನ ತಿಂದು ಬಿದ್ಕೊಂಡ್ರೆ ನಾವು ನೆಮ್ಮದಿಯಿಂದ ಮಲಗಬೋದುʼ ಎಂದು ಸಿಟ್ಟಾಗುತ್ತಿದ್ದರು. ʻಈ ಹುಡುಗಿ ಮದುವೇಲ್ಲಿ ಆ ಜೋಲಿ ಕುರ್ಚಿನೇ ಬಳುವಳಿ ಕೊಟ್ರೆ, ಮುಂದೆ ಹುಟ್ಟೋದಕ್ಕೂ ಉಪಯೋಗವಾಗತ್ತೆʼ ಎಂದು ಹಾಸ್ಯ ಮಾಡುತ್ತಿದ್ದರು. ಇವರ ಇಂಥ ಚೇಷ್ಟೆಯ ಮಾತುಗಳು ನಂಜಯ್ಯನವರಿಗೂ ಚೇತೋಹಾರಿ ಎನಿಸುತ್ತಿದ್ದವು. ಅಂತೂ ಅದೊಂದು ಸದ್ದಿನ ನೆವದಲ್ಲಿ ತಮ್ಮ ಒಂಟಿತನಕ್ಕೊಂದು ಸಂಗಾತಿಯನ್ನು ಸಾವಿತ್ರಮ್ಮ ಅರಿವಿಲ್ಲದೇ ಹುಡುಕಿಕೊಂಡಿದ್ದು ನಂಜಯ್ಯನವರ ಅರಿವಿಗೆ ಬಂದಿತ್ತು. 

*****

ಇವೆಲ್ಲ ಕಳೆದು ವರ್ಷದೊಳಗೆ ನಂಜಯ್ಯ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಹಲವಾರು ತಿಂಗಳುಗಳು ಔಷಧಿ, ಉಪಚಾರಗಳು ನಡೆದವು. ಕುಟುಂಬದ ಇತರ ಸದಸ್ಯರು ಎಲ್ಲ ಸಂದರ್ಭದಲ್ಲೂ ಜೊತೆಗಿದ್ದರು. ಹಾಗಾಗಿ ವರ್ಷದೊಳಗೆ ತಮ್ಮ ಕೆಲಸ ತಾವು ಮಾಡಿಕೊಳ್ಳುವಷ್ಟು ನಂಜಯ್ಯ ಸುಧಾರಿಸಿದರೂ ಮಾತು ಮಾತ್ರ ಅಸ್ಪಷ್ಟವಾಗಿಯೇ ಇತ್ತು. ಸಾವಿತ್ರಮ್ಮನ ಹತ್ತು ಮಾತುಗಳಿಗೆ ಕಷ್ಟಪಟ್ಟು ಒಂದು ಮಾತಾಡುತ್ತಿದ್ದರು… ಅದೂ ಕೆಲವೊಮ್ಮೆ ಅರ್ಥವಾಗುತ್ತಿರಲಿಲ್ಲ. ಹಾಗಾಗಿ ಅವರ ಪರವಾದ ಮಾತನ್ನೂ ಸಾವಿತ್ರಮ್ಮ ತಾನೇ ಆಡುತ್ತಿದ್ದರು. “ತಿಂಡಿಗೆ ಉಪ್ಪಿಟ್ಟು ಮಾಡಲೋ, ಅವಲಕ್ಕಿಯೋ? ನಿಮಗೆ ಈರುಳ್ಳಿ ಉಪ್ಪಿಟ್ಟು ಅಂದ್ರೆ ಇಷ್ಟ ತಾನೆ… ಮಾಡಲಾ? ಬೇಡ! ಇವತ್ತು ಸಂಕಷ್ಟಿ, ಈರುಳ್ಳಿ ಉಪ್ಪಿಟ್ಟು ಮಾಡೋದರ ಬದಲು ಬಿಸಿ ಅವಲಕ್ಕಿ ಮಾಡ್ತೀನಿ. ಸರೀನಾ? ಏನು ಹಾಗೆ ನೋಡ್ತೀರಿ! ಸರೀನಪ್ಪಾ, ಮೊಸರು ಗಟ್ಟಿಯಾಗಿ ಹೆಪ್ಪಾಗಿದೆ… ಅವಲಕ್ಕಿಗೆ ಹಾಕ್ಕೊಡ್ತೀನಿ…” ಹೀಗೆ ಪ್ರಶ್ನೆಯೂ ಉತ್ತರಗಳೆರಡೂ ಅವರದ್ದೇ ಆಗಿರುತ್ತಿತ್ತು. ಇವೆಲ್ಲಕ್ಕೂ ನಂಜಯ್ಯ ತಲೆಯಾಡಿಸಿ, ಒಣ ನಗೆಯಾಡಿದರೆ ಸಮ್ಮತಿ ಸೂಚಿಸಿದಂತೆ.

ಈ ದಿನಗಳಲ್ಲೇ ಆ ಹುಡುಗಿ ಇವರ ಮನೆಯೊಳಗೆ ಬಂದಿದ್ದು. ತನ್ನಮ್ಮನಿಗೆ ಹುಷಾರಿಲ್ಲ, ಕ್ಲಿನಿಕ್‌ಗೆ ಕರೆದುಕೊಂಡು ಹೋಗಲು ನಿಮ್ಮ ಪರಿಚಯದ ಆಟೋ ನಂಬರ್‌ ಇದ್ದರೆ ಕೊಡಿ ಎನ್ನುತ್ತಾ ನೇರ ಒಳಗೇ ಬಂದಿದ್ದಳು. ನಂಜಯ್ಯನವರ ಕೈಗೆ ಎಣ್ಣೆ ನೀವುತ್ತಾ ಕುಳಿತಿದ್ದ ಸಾವಿತ್ರಮ್ಮ, ತಮ್ಮ ಮೊಬೈಲಿನಲ್ಲಿದೆ, ಅದು ಬಾಯಲ್ಲಿ ನೆನಪಿಲ್ಲ ಎಂದರು. ಆಕೆ ಅವರ ಮೊಬೈಲ್‌ ತಂದು ಕೊಟ್ಟಳು. ಆದರೆ ಶ್ರೀಮತಿಯವರ ಕೈಯಲ್ಲಾ ಎಣ್ಣೆಜಿಡ್ಡಾಗಿದ್ದರಿಂದ, ಅದರ ಪಾಸ್‌ಕೋಡ್‌ ಆಕೆಗೇ ಹೇಳಿ, ʻನಂಬರ್‌ ನೀನೆ ಕಳ್ಸಿಕೊʼ ಎಂದರು. ಅದಷ್ಟನ್ನು ಮಾಡಿಕೊಂಡು ಆಕೆ ಹೊರಟುಹೋದಳು. ನಂಜಯ್ಯ ಕಷ್ಟಪಟ್ಟು, ʻಅವಳಿಗೆ… ನಂಬರ್‌…ಯಾಕೆ?ʼ ಎಂದರು. ಅವರಮ್ಮನ ಅನಾರೋಗ್ಯದ ಪ್ರವರವನ್ನೆಲ್ಲ ಸಾವಿತ್ರಮ್ಮ ಹೇಳಿದಾಗಲೂ ʻಅವಳಿಗೆ… ಫೋನ್‌…ಯಾಕೆ?ʼ ಎಂದು ಮತ್ತೆ ಕೇಳಿದರು. ಅರೆಕ್ಷಣ ಯೋಚಿಸಿದ ಸಾವಿತ್ರಮ್ಮ, ʻನನ್ನ ಫೋನ್‌ ಪಾಸ್‌ವರ್ಡ್‌ ಹೇಳಿದ್ದಕ್ಕಾ?ʼ ಎಂದು ಹೇಳಿದಾಗ ಹೌದೆಂಬಂತೆ ನಕ್ಕರು ನಂಜಯ್ಯ. “ಅಯ್ಯೋ! ಅದನ್ನ ತಗೊಂಡು ಆ ಹುಡ್ಗಿನಾದ್ರೂ ಏನ್ಮಾಡ್ತಾಳೆ? ಹಂಗೆಲ್ಲ ಯೋಚಿಸ್ಬೇಡಿ” ಎನ್ನುತ್ತಾ ಕೈ ತೊಳೆಯಲು ಹೋದರು ಸಾವಿತ್ರಮ್ಮ. ಆನಂತರ ಹಲವಾರು ಬಾರಿ ಏನೇನೋ ಕಾರಣಗಳಿಗೆ ಆ ಹುಡುಗಿ ಮನೆಯೊಳಗೆ ಬಂದಿದ್ದಳು. ಸಾವಿತ್ರಮ್ಮನೊಂದಿಗೆ ಆಗಾಗ ಮಾತಾಡುತ್ತಿದ್ದಳು. ನಂಜಯ್ಯನಂತೂ ತಮ್ಮ ತೊದಲು ಭಾಷೆಯಲ್ಲಿ ಅವಳನ್ನು ʻಚೇರ್‌ ಹುಡ್ಗಿʼ ಎಂದೇ ಕರೆಯುತ್ತಿದ್ದರು. ಅವರ ಮಾತಿಗೆ ಆಕೆ ಬಿದ್ದೂಬಿದ್ದು ನಗುತ್ತಿದ್ದಳು. ಹಾಗೆಂದು ಹೆಚ್ಚಿನ ಬಾಂಧವ್ಯವೇನೂ ಅವರಲ್ಲಿ ಬೆಳೆದಿರಲಿಲ್ಲ. ಅವರಿಗೀಗಲೂ ಶಬ್ದ ಮಾಡುವವರಿಗಿಂತ, ಆ ಶಬ್ದವೇ ಆಪ್ತವಾಗಿತ್ತು. ಆದರೆ ಮೇಲಿನ ಮನೆಯ ಆ ಶಬ್ದ ಇತ್ತೀಚಿನ ದಿನಗಳಲ್ಲಿ ಎಷ್ಟೊಂದು ಸಹಜ ಎನಿಸಿದೆಯೆಂದರೆ, ಸದ್ದಾಗುವುದೂ ತನಗೀಗ ತಿಳಿಯುತ್ತಿಲ್ಲ ಎನಿಸಿ ಸಾವಿತ್ರಮ್ಮನಿಗೆ ನಗುಬರುತ್ತಿತ್ತು. ಜೊತೆಗೆ, ತನಗೆ ಕಿವಿ ಇನ್ನಷ್ಟು ಮಂದವಾಗುತ್ತಿದೆಯೇ ಎನ್ನುವ ಅನುಮಾನವೂ ಬರುತ್ತಿತ್ತು. ದಿನವಿಡೀ ನಂಜಯ್ಯ ಮಾತಾಡುವುದು ಅಷ್ಟಕ್ಕಷ್ಟೇ. ಮನೆಗೆ ಬರುವವರು ಆಡುವ ಮಾತೂ ಹೆಚ್ಚೇನಿರುವುದಿಲ್ಲ. ಹಾಗಾಗಿ ಸದಾ ತನಗೆ ಜೊತೆಯಾಗುವುದೆಂದರೆ ಅದೊಂದು ಸದ್ದು ಮಾತ್ರ … ಈಗೀಗ ಇದೂ ಕೇಳುತ್ತಿಲ್ಲವಲ್ಲ ಎನಿಸಿ ಆಕೆಗೆ ತಳಮಳವಾಗುತ್ತಿತ್ತು.

ಎಲ್ಲ ಆರೈಕೆಯ ನಡುವೆಯೂ ನಂಜಯ್ಯ ಹೆಚ್ಚು ದಿನ ಉಳಿಯಲಿಲ್ಲ. ಸಾವಿತ್ರಮ್ಮನನ್ನು ಅಕ್ಷರಶಃ ಒಂಟಿ ಮಾಡಿ ಹೊರಟುಹೋದರು. ಅದೇ ಸಮುಚ್ಚಯದಲ್ಲಿ ಆಕೆಯ ಕುಟುಂಬದ ಮೂರ್ನಾಲ್ಕು ಕವಲುಗಳು ವಾಸವಾಗಿದ್ದರಿಂದ ಬದುಕು ನಿರ್ವಹಣೆಗೆ ಆಕೆಗೇನೂ ತೊಂದರೆಯಾಗುತ್ತಿರಲಿಲ್ಲ. ನಂಜಯ್ಯನವರ ಕ್ಷೇಮ ತಪ್ಪಿದ ಮೇಲೆ ಅವರ ಮನೆಯ ನಿರ್ವಹಣೆಯ ಓಡಾಟವೆಲ್ಲವೂ ಅವರ ತಮ್ಮಂದಿರದ್ದೇ ಆಗಿತ್ತು. ಅದೀಗಲೂ ಮುಂದುವರಿಯಿತು. ಇರುವೊಂದು ಹೆಣ್ಣು ಜೀವಕ್ಕೆ ಕೊರತೆಯಾಗದಷ್ಟು ಸಂಪತ್ತಿತ್ತು. ಆದರೆ ಕರೆದಾಗ ತಿರುಗಿ ನೋಡುವ ಜೀವವವಿಲ್ಲದೆ ಸಾವಿತ್ರಮ್ಮ ಮಂಕಾದರು. ಅದಕ್ಕಿಂತಲೂ ಅವರಿಗೆ ದಿಗಿಲು ಹಿಡಿದಿದ್ದು ಮೇಲಿನ ಮನೆಯಿಂದ ಶಬ್ದವೇಕೆ ಕೇಳುತ್ತಿಲ್ಲ ಎನ್ನುವುದಕ್ಕೆ.

“ಮೇಲಿನ ಮನೆಯವ್ರು ಊರಿಗೆ ಹೋಗಿದ್ದಾರಾ?” ತಮ್ಮ ಕೆಲಸದಾಕೆಯನ್ನು ಕೇಳಿದರು.

“ಇದ್ದಾರಲ್ಲಮ್ಮ. ನಿನ್ನೆ ತಾನೆ ಆ ಉಡ್ಗಿ ನೋಡಿದೀನಿ. ಏನಾರ ಹೇಳ್ಬೇಕಿತ್ತಾ?”

“ಏನಿಲ್ಲ… ಸುಮ್ನೆ ಕೇಳ್ದೆ. ಮೇಲಿಂದ ಏನೂ ಶಬ್ದನೇ ಕೇಳಲ್ವಲ್ಲ. ಅದ್ಕೆ ಯಾರಿಲ್ಲವೇನೋ ಮನೆಲ್ಲಿ ಅನ್ನಿಸ್ತು”

“ಸಬ್ದನಾ! ದಡ್ಕೂಬಡ್ಕೂ ಕೇಳ್ಸುತ್ತಲ್ಲಮ್ಮ” ಎಂಬ ಕೆಲಸದವಳ ಮಾತಿನಿಂದ ಸಾವಿತ್ರಮ್ಮ ಪೆಚ್ಚಾದರು. ʻಅಲ್ಲ, ಉಳಿದೆಲ್ಲರ ಮಾತು ಸರಿಯಾಗಿ ಕೇಳಿಸುತ್ತದೆ. ಆದರೆ ಈ ಶಬ್ದವೇಕೆ ಕೇಳುತ್ತಿಲ್ಲʼ ಎಂಬ ವ್ಯಾಕುಲತೆಯಿಂದ ಲೋಕದೆಲ್ಲ ಶಬ್ದಗಳಿಗೆ ಇನ್ನಷ್ಟು ಮತ್ತಷ್ಟು ಕಿವಿಯಾನಿಸತೊಡಗಿದರು. ಯಾವ ಶಬ್ದ ಕೇಳಿದರೂ ಅದರಲ್ಲಿ, ಅಷ್ಟು ವರ್ಷಗಳಿಂದ ತನ್ನ ಹೃದಯದ ಬಡಿತದಂತೆ ಮಿಳಿತವಾಗಿದ್ದ ಆ ಶಬ್ದವನ್ನೇ ಅರಸತೊಡಗಿದರು. ಆ ಶಬ್ದ ಅವರಿಗೆ ನಂಜಯ್ಯನವರ ಉಸಿರಿನಷ್ಟೇ ಪರಿಚಿತವಾಗಿತ್ತು. ಇದೀಗ ಅವೆರಡೂ ಒಟ್ಟಿಗೇ ನಿಂತುಹೋದವೇ ಎಂಬಂತೆ ಒದ್ದಾಡಿದರು ಸಾವಿತ್ರಮ್ಮ.

ಆನಂತರದಿಂದ ಅವರ ಚರ್ಯೆಗಳು ನಿಧಾನಕ್ಕೆ ಬದಲಾಗತೊಡಗಿದವು. ಯಾರು ತನ್ನೊಂದಿಗೆ ಮಾತಾಡಿದರೂ ಅವರ ಮಾತಿನಲ್ಲಿ ತನ್ನ ಆ ಮಿಡಿತವಿದೆಯೇ ಎಂಬುದನ್ನು ಆಲಿಸತೊಡಗಿದರು. ತಮಗೆ ಬೇಕಾದ ʻದಡ್ಕೂಬಡ್ಕೂ…ʼ ಲಯವನ್ನು ಎಲ್ಲದರಲ್ಲೂ ಹುಡುಕತೊಡಗಿದರು. ನಂಜಯ್ಯನವರ ತಮ್ಮನ ಮಕ್ಕಳು ಬಂದು ಸಾವಿತ್ರಮ್ಮನವರ ಜೊತೆಗೆ ಮಾತಾಡುತ್ತಿದ್ದರೆ, ಇವರ ಗಮನ ಎತ್ತಲೋ ಇರುತ್ತಿತ್ತು. “ದೊಡ್ಡಮ್ಮ… ದೊಡ್ಡಮ್ಮಾ… ಇಲ್ನೋಡಿ… ನನ್ಕಡೆ ನೋಡಿ… ನಾನಿಲ್ಲಿ ನಿಮ್ಮತ್ರ ಮಾತಾಡ್ತಿದ್ರೆ ನೀವೆಲ್ಲೊ ಕನಸು ಕಾಣ್ತಾ ಇದ್ದೀರ” ಎಂದು ಅವರು ಸಿಟ್ಟಾದರೆ, “ಅಯ್ಯ! ನೀ ಹೇಳಿದ್ದನ್ನೇ ಕೇಳ್ತಿರೋದು ನಾನು. ಈ ವಯಸ್ನಲ್ಲಿ ನಿದ್ದೇನೇ ಬರಲ್ಲ, ಇನ್ನು ಕನಸು ಬೇರೆ ಕೇಡು! ಮುಂದಕ್‌ ಹೇಳು… ಏನಾಯ್ತು?” ಎಂದು ವಿಷಯವನ್ನು ಮರೆಮಾಚುತ್ತಿದ್ದರು. ಅವರು ಇಂಥ ವರ್ತನೆಯನ್ನು ಪದೇಪದೆ ತೋರಿಸತೊಡಗಿದಾಗ, “ನಮ್ಮನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ದೊಡ್ಡಮ್ಮ” ಎಂದು ಅವರ ಗಮನವನ್ನು ತಮ್ಮೆಡೆಗೆ ತಿರುಗಿಸಿಕೊಳ್ಳುತ್ತಿದ್ದ ಮನೆಮಂದಿ, ನಂತರ ಮಾತಾಡುತ್ತಿದ್ದರು.

ಬಹುಶಃ ಆನಂತರದಿಂದಲೇ ಅವರು ಹಾಗೆ ದಿಟ್ಟಿಸಿ ನೋಡಲು ಪ್ರಾರಂಭಿಸಿದ್ದಿರಬೇಕು. ಲೋಕದ ಎಲ್ಲ ಶಬ್ದಗಳಲ್ಲೂ ತಮಗೆ ಬೇಕಾದ್ದನ್ನು ಮಾತ್ರವೇ ಕೇಳುವ ಪ್ರಯತ್ನವನ್ನು ಆಕೆ ಮಾಡುತ್ತಿದ್ದಂತೆ, ಅವರಿಗೆ ಕಿವಿ ಮಂದವಾಗಿದೆ ಎಂಬ ತೀರ್ಮಾನಕ್ಕೆ ಮನೆಮಂದಿ ಬರಬೇಕಾಯಿತು. ಕೇಳದಿದ್ದರೆ ಕಾಣುತ್ತದಲ್ಲ, ಹಾಗಾಗಿ ಯಾರು ಅಥವಾ ಏನು ಎದುರಿಗಿದ್ದರೂ ಅವರದರಲ್ಲಿ ನೋಟ ನೆಟ್ಟು ಕುಳಿತುಬಿಡುತ್ತಿದ್ದರು. ತಮ್ಮ ಭಾವಕೋಶಕ್ಕೆ ಆಪ್ತವಾದ ಆ ಅಮೂರ್ತ ರವವನ್ನು ಮೂರ್ತರೂಪದಲ್ಲಿ ಕಾಣಲು ಯತ್ನಿಸುತ್ತಿರುವಂತೆ, ಎಂದೋ ಕಳೆದುಹೋಗಿರುವ ಮಿಡಿತವನ್ನು ಮತ್ತೆ ಕಂಡು ಅನುಭವಿಸಲು ಹಾತೊರೆಯುವಂತೆ, ಬದುಕಿನಲ್ಲಿ ಯಾರಿಗೂ ಒದಗದ ದರ್ಶನವನ್ನು ತಮ್ಮ ನೋಟದಲ್ಲೇ ಕಂಡರಿಯುವವರಂತೆ, ಕೆಲವೊಮ್ಮೆ ವ್ಯಕ್ತಿಗಳನ್ನು ಕೆಲವೊಮ್ಮೆ ಶೂನ್ಯವನ್ನು ನೋಡುತ್ತಾ ಕುಳಿತುಬಿಡುತ್ತಿದ್ದರು.

*****

ಅಂದು ಆ ಹುಡುಗಿ ಬಂದಳು, ತನ್ನ ಅಜ್ಜಿಯೊಂದಿಗೆ. ಅವರನ್ನು ಆದರದಿಂದ ಕರೆದು ಕೂರಿಸಿದರು ಸಾವಿತ್ರಮ್ಮ. ಕುಶಲೋಪರಿಯ ನಂತರ ಆ ಹುಡುಗಿಯ ಅಜ್ಜಿ, “ನಾವು ನಾಳೆ ಬೇರೆ ಊರಿಗೆ ಹೋಗ್ತಾ ಇದ್ದೀವಿ. ಇವತ್ತು ಮನೆ ಸಾಮಾನೆಲ್ಲ ತಗೊಂಡು ಹೋಗೋದಕ್ಕೆ ಪ್ಯಾಕಿಂಗ್‌ ಜನ ಬರ್ತಾರೆ. ನಮ್ಮತ್ರ ಒಂದು ಹಳೇಕಾಲದ ಮರದ ಕುರ್ಚಿ ಇದೆ. ನಮ್ಮ ಹುಡ್ಗಿ ಹೇಳ್ತಿದ್ಲು ನಿಮಗದು ತುಂಬಾ ಇಷ್ಟ ಅಂತ. ನಿಮ್ಮ ಮನೆಯೋರ್ಗೂ ಅದು ಇಷ್ಟವಾಗಿತ್ತಂತೆ. ಅದನ್ನ ನಿಮಗೇ ಕೊಟ್ಟು ಹೋಗಣಾಂತ ಇದ್ದೀವಿ. ನೀವು ಹೂಂ ಅಂದ್ರೆ ತಂದು ಇಡಸ್ತೀನಿ ಕುರ್ಚೀನಾ” ಎಂದರು. ಸಾವಿತ್ರಮ್ಮನಿಗೆ ಏನು ಹೇಳುವುದಕ್ಕೂ ತಿಳಿಯಲಿಲ್ಲ. ಯಾವುದು ತನಗೆ ಸಹಿಸಲಾಗದ್ದು ಎಂದು ತಿಳಿದಿದ್ದೆನೊ ಅದು ಆಪ್ತವಾಗಿದ್ದು ಯಾವಾಗ ಎಂಬುದು ತನಗೇ ತಿಳಿದಿರಲಿಲ್ಲ; ಆದರೆ ಈ ಹುಡುಗಿ ಅರಿತಳು. ನಂಜಯ್ಯನವರ ನಂತರದ ಶೂನ್ಯವನ್ನು ತುಂಬುವುದಕ್ಕೆ ಮನಸ್ಸು ಮಾಡಿರುವ ಇವಳಿಗೆ ʻಬುದ್ಧಿ ಕಡಿಮೆʼ ಎಂದು ತಾನೇ ತಾವು ಮಾತಾಡಿಕೊಂಡಿದ್ದು! ಸುಮ್ಮನೆ ಅಜ್ಜಿ-ಮೊಮ್ಮಗಳಿಗೆ ಮೈ ಮುಗಿದರು ಸಾವಿತ್ರಮ್ಮ.

ಸ್ವಲ್ಪವೇ ಹೊತ್ತಿನಲ್ಲಿ ಆ ಕುರ್ಚಿ ಸಾವಿತ್ರಮ್ಮನ ಮನೆಗೆ ಬಂದು ಕೂತಿತು. ಯಾವ ಶಬ್ದಕ್ಕಾಗಿ ತಾವು ಅಷ್ಟೊಂದು ದಿನಗಳಿಂದ ಹಂಬಲಿಸುತ್ತಿದ್ದರೊ, ಕಣ್ಣು-ಕಿವಿಗಳನ್ನು ಕೇವಲ ಅದಕ್ಕಾಗಿಯೇ ಎನ್ನುವಂತೆ ತೆರೆದಿರುತ್ತಿದ್ದರೋ, ಅದರ ಮೂಲವೇ ಈಗ ಕಣ್ಣೆದುರಿಗೆ ಬಂದು ಕೂತಿತ್ತು. ಅದರಲ್ಲಿ ಏನು ಕೇಳಿತೊ, ಏನು ಕಂಡಿತೊ… ಅಂತೂ ಮಹತ್ತಾದದ್ದು ಏನನ್ನೋ ದಿಟ್ಟಿಸುವವರಂತೆ, ಕುರ್ಚಿಯನ್ನೇ ನೋಡಿ ತೃಪ್ತಿಯಿಂದ ನಗುತ್ತಾ ಕುಳಿತರು ಸಾವಿತ್ರಮ್ಮ.

About The Author

ಅಲಕಾ ಕಟ್ಟೆಮನೆ

ಓದಿದ್ದು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ. ಬೆಂಗಳೂರಿನ ಸುದ್ದಿಮನೆಯೊಂದರಲ್ಲಿ ಕೆಲವು ವರ್ಷಗಳ ಕಾಲ ಕೆಲಸ. ನಂತರದ ಹಲವು ವರ್ಷಗಳು ಅಮೆರಿಕೆಯಲ್ಲಿ ವಾಸ. ಮರಳಿ ಮೈಸೂರಿಗೆ ಬಂದ ಮೇಲೆ, ನಾಲ್ಕು ವರ್ಷಗಳ ಕಾಲ ಮೈಸೂರು ಆಕಾಶವಾಣಿಯಲ್ಲಿ ಸಾಂದರ್ಭಿಕ ಉದ್ಘೋಷಕಿಯಾಗಿ ಕೆಲಸ. ಪ್ರಸ್ತುತ ಆನ್‌ಲೈನ್‌ ಪತ್ರಿಕೆಗಳಲ್ಲಿ ಫ್ರೀಲಾನ್ಸಿಯಾಗಿ ಕೆಲಸ. ಎರಡು ಕಥಾ ಸಂಕಲನಗಳು ಪ್ರಕಟವಾಗಿದ್ದು, ʻಶಾಲ್ಮಲೆಯ ಹೊನಲಲ್ಲಿʼ ಕೃತಿಗೆ- ಕರ್ನಾಟಕ ಲೇಖಕಿಯರ ಸಂಘದ ʻತ್ರಿವೇಣಿ ಸಾಹಿತ್ಯ ಪುರಸ್ಕಾರʼ, ಬಿಎಂಶ್ರೀ ಪ್ರತಿಷ್ಠಾನದ ʻಶಾ. ಬಾಲೂರಾವ್‌ ಯುವ ಬರಹಗಾರ ಪ್ರಶಸ್ತಿʼ, ʻದೇವಾಂಗನಾ ಶಾಸ್ತ್ರಿ ಪುರಸ್ಕಾರʼಗಳು ಸಂದಿವೆ. ಎರಡನೇ ಸಂಕಲನ ʻಹೊರಳು ಹಾದಿಯ ನೋಟʼ ಕೃತಿಗೆ ʻಎಚ್‌.ವಿ. ಸಾವಿತ್ರಮ್ಮ ಪ್ರಶಸ್ತಿʼ ಸಂದಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ