Advertisement
ಬದುಕಿನ ನಾಟಕ ನೋಡಿ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಬದುಕಿನ ನಾಟಕ ನೋಡಿ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಈ ಗಂಡಾಂತರವೊಂದು ಕಳೆಯುತ್ತಿದ್ದಂತೆ ನನ್ನನ್ನು ಬೇರೆ ಕಂಪೆನಿಗೆ ಸದ್ದಿಲ್ಲದೆ ಕರೆದೊಯ್ದಿದ್ದರು. ಲಕ್ಷ್ಮೀಬಾಯಿಯವರ ಗಂಡ ವೆಂಕಟ ರೆಡ್ಡಿ ಅವರ ಜೊತೆ ನಂಜಪ್ಪ, ಜಕ್ಲಿ ಈಶ್ವರ ಎಲ್ಲ ಸೇರಿಕೊಂಡು ಬೇರೆ ಕಂಪೆನಿಗೆ ಹೋಗೋಣ ಎಂದು ಸೂರ್ಯಬಾನುಗೆ ಕರೆದುಕೊಂಡು ಹೋದರು. ಹೋದದ್ದೇ, ಇನ್ನು ಐದೇ ದಿನಗಳಲ್ಲಿ ನಾಟಕ ಶುರು ಮಾಡುತ್ತೇವೆ ಎಂದರು. ಇನ್ನೂ ಐದು ದಿನಗಳು! ಹಾಗಿದ್ದರೆ ಊರಿಗೆ ಹೋಗಿ ಬರಬಹುದಲ್ಲಾ ಎನಿಸಿತು. ತಕ್ಷಣ ಮಾಲೀಕರಲ್ಲಿ ಹೋಗಿ ಕೇಳಿದೆ. ಊರಿಗೆ ಹೋಗಿಬರಬೇಕಿದೆ. ನಾಟಕ ಶುರುವಾಗುವುದರೊಳಗೆ ಇಲ್ಲಿಗೆ ಬಂದು ಸೇರುವಂತೆ ನೋಡಿಕೊಳ್ಳುವ ಹೊಣೆ ನನ್ನದು. ಆದರೆ ಒಂದಷ್ಟು ಹಣ ಮುಂಚಿತವಾಗಿಯೇ ಬೇಕಿತ್ತು ಎಂದು ಕೇಳಿದೆ.
ಕೀರ್ತಿ
ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ತನೆಯ ಕಂತು

ಈ ನಡುವೆ ನಾನು ಎಲ್ಲಿದ್ದೇನೆ ಎನ್ನುವ ವಿಳಾಸವನ್ನು ಹುಡುಕಿಕೊಂಡು ಆಸಾಮಿಯೊಬ್ಬ ಬಂದೇಬಿಟ್ಟಿದ್ದ. ಬಂದವನೇ ‘ನಿನ್ನೇ ಮದ್ವಿ ಆಬಕು. ಅವ್ವ ಹೇಳ್ ಕಳಸ್ಯಾಳ’ ಎನ್ನುವ ಮಾತೊಂದೇ ಅವನ ಬಾಯಿಯಿಂದ ಹೊರಡುತ್ತಿದ್ದದ್ದು. ಸರಿ, ಎಲ್ಲ ಸೇರಿ ವಿಳಾಸ ಕೇಳಿದರೆ ತಳಕಲ್ಲು/ ತರಳಬಾಳು ಅಂತೆಲ್ಲ ಹೇಳುತ್ತಿದ್ದ. ಹಾಗಾಗಿ ಆ ಊರಿನವನೇ ಇರಬಹುದು ಎಂಬ ನಂಬಿಕೆ ಉಂಟಾಯಿತು. ಏನಾದರಾಗಲಿ, ಇವನು ಸುಮ್ಮನೆ ಬಂದಿರಲು ಸಾಧ್ಯವಿಲ್ಲ. ಏನಾದರೊಂದು ವಿಷಯ ಗುಟ್ಟಾಗಿರಲೇಬೇಕು. ನಿಜ ವಿಷಯದ ಗಂಟನ್ನು ಆತುರದಿಂದ ಬಿಡಿಸಿದರೆ ಇನ್ನಷ್ಟು ಕಗ್ಗಂಟಾದೀತು. ಸಾವಧಾನವಾಗಿ ಬಿಡಿಸಿದಾಗ ಮಾತ್ರ ಗಂಟು ಬಿಚ್ಚುತ್ತದೆ ಎಂಬುದನ್ನು ಅದಾಗಲೇ ಅರ್ಥೈಸಿಕೊಂಡಿದ್ದೆ.

ಕಂಪೆನಿ ಕ್ಯಾಂಪ್ ಕಟ್ಟಿದ್ದ ಜಾಗಕ್ಕೆ ಹತ್ತಿರದಲ್ಲೇ ಒಂದು ದೇವಸ್ಥಾನವಿತ್ತು. ಅವನ ಜೊತೆ ಪ್ರತ್ಯೇಕವಾಗಿ ಮಾತುಕತೆಗೆ ತೊಡಗಿದೆ. ಆಗ ಗೊತ್ತಾಗಿದ್ದು, ನನ್ನ ಅವ್ವ ಹೇಳಿ ಕಳಿಸಿದ್ದೆಂದು. ಕಂಪೆನಿಯಲ್ಲಿದ್ದೇನೆಂದು ತಿಳಿದಿತ್ತೇ ಹೊರತು, ಅವ್ವನಿಗೂ ನನ್ನ ವಿಳಾಸವೇನೂ ಗೊತ್ತಿರಲಿಲ್ಲ. ಹಾಗಾಗಿ ವಿಳಾಸಕ್ಕಾಗಿ ಯಾರಲ್ಲಿ ಕೇಳಿದಿರಿ ಎಂದರೆ, ‘ನಿನ್ನ ಗುರು ಭಾನಾಪುರ ಲಕ್ಷ್ಮೀದೇವಿ ಅವರಲ್ಲಿ’ ಎಂದುಬಿಟ್ಟ! ಓಹೋ, ಭಾರಿ ತಲೆ ಉಪಯೋಗಿಸಿ ವಿಳಾಸ ಕಂಡುಹಿಡಿದಿದ್ದಾನೆ ಎಂದು ತಿಳಿದ ನನ್ನ ಅವ್ವ, ‘ನೀ ಅಕೀನ್ನ ಕರ್ಕೊಂಡು ಬಂದ್ರ ನಿಂಗss ಲಗ್ನಾ ಮಾಡ್ಕೊಡ್ತೀನಿ’ ಎಂದಿದ್ದರಂತೆ. ಅದಕ್ಕಾಗಿ ಅವನು ಊರಿಗೆ ಬಾ ಎಂದು ಗೋಗರೆಯುತ್ತಿದ್ದ. ಹಾಗೇ ಕೂತು ಕೇಳಿದೆ. ನಾನಂತೂ ಏನೂ ಓದಿಲ್ಲ, ನೀನೆಷ್ಟು ಓದಿದೆ? ಎಂದು. ಅದಕ್ಕವನು ಹಲ್ಕಿರಿಯುತ್ತಾ, ‘ನಾನೂ ಓದಿಲ್ಲ. ಹೊಲದ ಕೆಲ್ಸ ಮಾಡ್ತೀನಿ. ಸಿಕ್ಕ ಸಣ್ಣಾ ಪುಟ್ಟಾ ಕೆಲ್ಸ ಏನ ಇದ್ರೂ ಮಾಡ್ತೀನಿ’ ಎಂದ. ಅಭಿರುಚಿ ಹೊಂದುವುದಿಲ್ಲ ಎನಿಸಿತು. ಮುಂದಿನ ಮಾತಿಗೆ ಅವಕಾಶ ಕೊಡಬಾರದೆಂದು, ನನಗೆ ಇಷ್ಟವಿಲ್ಲ ಹೊರಡಿ ಎಂದೆ.

ಆ ಸಂದರ್ಭದಲ್ಲಿ ಅವನಾಡಿದ ರೀತಿ, ಅವನೊಳಗಿನ ಮೃಗೀಯ ಗುಣವನ್ನು ಕಾಣಿಸುತ್ತಿತ್ತು. ಹೋಗುತ್ತಲೇ ಇಲ್ಲ. ತನ್ನನ್ನು ಒಪ್ಪಿಕೊಳ್ಳಬೇಕೆಂಬ ಹಠ. ನಾನೀಗ ಮತ್ತದೇ ಮೃದು ಧಾಟಿಯಲ್ಲಿ ತಿಳಿಸಿ ಹೇಳಲು ಪ್ರಯತ್ನಿಸುತ್ತಿದ್ದೆ. ಆದರೆ ಅವನಿಗೆ ನನ್ನ ಕಡೆಯಿಂದ ‘ಹೂಂ’ ಎನ್ನುವ ಧ್ವನಿ ಬಿಟ್ಟು ಬೇರೆ ಮಾತುಗಳಿಗೆ ಅವನಲ್ಲಿ ಆಸ್ಪದವಿರಲಿಲ್ಲ. ಕಂಪೆನಿಯವರೊಂದಿಗೆ ಈ ಕುರಿತು ಮಾತನಾಡಿದೆ. ನನ್ನ ನಿರ್ಧಾರ, ಅವನ ಒತ್ತಾಯ ಹೀಗೆಂದು ಅರುಹಿದೆ. ಯಾರೂ ಒಪ್ಪದಿದ್ದರೂ ಪರವಾಗಿಲ್ಲ, ಅಪಹರಿಸಿಕೊಂಡು ಹೋಗುತ್ತೇನೆ ಎಂದು ಆತ ಹೇಳಿದ್ದನ್ನು ಕೇಳಿದ ಮೇಲೆ ಕಂಪೆನಿಯವರು ಮುಂದಾಗುವ ಅಪಾಯ ನೆನೆದು, ಹೌಹಾರಿ, ದೌಡಾಯಿಸಿದರು. ‘ಆಕಿ ಒಲ್ಲಂತಾಳ. ನೀ ಹೊರಡಪ್ಪ’ ಎಂದೆಷ್ಟೇ ಬುದ್ಧಿ ಹೇಳಿದರೂ ಅವನಿಗೆ ಅರ್ಥವಾಗಬೇಕಲ್ಲ. ಅವನ ಕೂಗಾಟ, ಅತಿರೇಕವನ್ನು ನೋಡುವಷ್ಟು ನೋಡಿ, ಎರಡೇಟು ಕೊಟ್ಟು, ‘ಸರಸ್ವತಿನಾ ಎಲ್ಗೂ ಕಳ್ಸಲ್ಲ’ ಹೋಗೆಂದರು. ಇನ್ನು ಮತ್ತೆಲ್ಲಿಯಾದರೂ ಇತ್ತ ಸುಳಿದಿದ್ದು ತಿಳಿದರೆ, ಪೊಲೀಸರಿಗೆ ದೂರು ಕೊಡುತ್ತೇವೆ ಎಂದು ಬೆದರಿಕೆ ಹಾಕಿ, ಬಸ್ ಚಾರ್ಜ್ ಮೊತ್ತವನ್ನೂ ಕೊಟ್ಟು ಕಳಿಸಿದರು.

ಈ ಘಟನೆ ಮುಗಿಯುತ್ತಿದ್ದಂತೆ, ಬಿ.ಪಿ.ಸಣ್ಣಪ್ಪ ಅವರು ಕಂಪೆನಿಯ ಕಲೆಕ್ಷನ್ ದುಡ್ಡಿನೊಂದಿಗೆ ಕಣ್ಮರೆಯಾಗಿದ್ದು. ಬಿ.ಪಿ.ಸಣ್ಣಪ್ಪ ಅವರು ನಾಪತ್ತೆಯಾಗುತ್ತಿದ್ದಂತೆ ಬೇಬಿಗೆ ಬೆಂಡೆತ್ತಿದ್ದರು. ಅವಳದ್ದಂತೂ ‘ನನಗೆ ಗೊತ್ತಿಲ್ಲ’ ಎಂಬ ಒಂದೇ ವರಾತ. ನಂತರ ಊರ ಜನರೆಲ್ಲ ಸೇರಿ, ತಮಗಾದಷ್ಟು ದುಡ್ಡನ್ನು ನೀಡಿ, ಬೆಂಬಲವಾಗಿ ನಿಂತಿದ್ದರು. ಅದೇ ದುಡ್ಡಿನಲ್ಲಿ ಸಾಲ ಕೇಳಲು ಬಂದವರಿಗೆ ಕೊಟ್ಟು ಕಳಿಸಿದ್ದು.

ಈ ಗಂಡಾಂತರವೊಂದು ಕಳೆಯುತ್ತಿದ್ದಂತೆ ನನ್ನನ್ನು ಬೇರೆ ಕಂಪೆನಿಗೆ ಸದ್ದಿಲ್ಲದೆ ಕರೆದೊಯ್ದಿದ್ದರು. ಲಕ್ಷ್ಮೀಬಾಯಿಯವರ ಗಂಡ ವೆಂಕಟ ರೆಡ್ಡಿ ಅವರ ಜೊತೆ ನಂಜಪ್ಪ, ಜಕ್ಲಿ ಈಶ್ವರ ಎಲ್ಲ ಸೇರಿಕೊಂಡು ಬೇರೆ ಕಂಪೆನಿಗೆ ಹೋಗೋಣ ಎಂದು ಸುರೇಬಾನ ಊರಿಗೆ ಕರೆದುಕೊಂಡು ಹೋದರು. ಹೋದದ್ದೇ, ಇನ್ನು ಐದೇ ದಿನಗಳಲ್ಲಿ ನಾಟಕ ಶುರು ಮಾಡುತ್ತೇವೆ ಎಂದರು. ಇನ್ನೂ ಐದು ದಿನಗಳು! ಹಾಗಿದ್ದರೆ ಊರಿಗೆ ಹೋಗಿ ಬರಬಹುದಲ್ಲಾ ಎನಿಸಿತು. ತಕ್ಷಣ ಮಾಲೀಕರಲ್ಲಿ ಹೋಗಿ ಕೇಳಿದೆ. ಊರಿಗೆ ಹೋಗಿಬರಬೇಕಿದೆ. ನಾಟಕ ಶುರುವಾಗುವುದರೊಳಗೆ ಇಲ್ಲಿಗೆ ಬಂದು ಸೇರುವಂತೆ ನೋಡಿಕೊಳ್ಳುವ ಹೊಣೆ ನನ್ನದು. ಆದರೆ ಒಂದಷ್ಟು ಹಣ ಮುಂಚಿತವಾಗಿಯೇ ಬೇಕಿತ್ತು ಎಂದು ಕೇಳಿದೆ. ಕಂಪೆನಿಯ ಮಾಲೀಕರಾಗಿದ್ದವರು, ಶಿಶುವಿನಹಾಳದ ಗೋವಿಂದ ರೆಡ್ಡಿ. ಶಿಶುವಿನಹಾಳ ಹೆಸರನ್ನು ನೀವು ಕೇಳಿರಲಿಕ್ಕೂ ಸಾಕು. ಷರೀಫಜ್ಜರ ಊರು. ಗೋವಿಂದ ರೆಡ್ಡಿ ಏನೂ ಸಾಮಾನ್ಯರಲ್ಲ. ಮುನ್ನೂರು ಎಕರೆ ಜಮೀನು ಹೊಂದಿದ್ದ ಸಿರಿವಂತ. ಅವರ ಅಣ್ಣನಿಗೆ ಮತಿಭ್ರಮಣೆಯಾಗಿತ್ತಂತೆ. ಹಾಗಾಗಿ ಆಸ್ತಿ, ವ್ಯವಹಾರಗಳನ್ನೆಲ್ಲ ಈ ತಮ್ಮನೇ ನೋಡಿಕೊಳ್ಳುತ್ತಿದ್ದ. ಅವರಿಗೆ ಮದುವೆಯಾಗಿ, ಮಗುವೊಂದಿತ್ತು. ಈ ಹಿಂದೆ ಹೆಣ್ಣು ಮಕ್ಕಳನ್ನು ಕಂಪೆನಿಗೆ ಕರೆದುಕೊಂಡು ಬಂದು, ನಾಟಕವಾಡಿಸಿದ್ದರಂತೆ. ಆದರೆ ಕಲೆಕ್ಷನ್ ಆಗದ ಕಾರಣ, ಕಂಪೆನಿ ನಷ್ಟ ಅನುಭವಿಸಬೇಕಾಯಿತಂತೆ. ಈ ಎಲ್ಲ ವಿಚಾರಗಳೂ ಕಿವಿಗೆ ಆಗಾಗ್ಗೆ ಬೀಳುತ್ತಿತ್ತು. ಗೋವಿಂದ ರೆಡ್ಡಿ ಅವರಿಗೂ ಕುಡಿತದ ಚಟವಿತ್ತು. ಆದರೆ ನಾಮಧಾರಿಗಳಾಗಿ, ದೇವಿಯ ಆರಾಧಕರಾಗಿದ್ದ ಗೋವಿಂದ ರೆಡ್ಡಿ ಅವರು ಶ್ರಾವಣ ಮಾಸದ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ವೃತಧಾರಿಗಳಾಗುತ್ತಿದ್ದರು. ಅತ್ಯಂತ ನಿಷ್ಠೆಯಿಂದ, ತುಂಬು ಭಕ್ತಿಯಿಂದ ದೇವಿಯ ಆರಾಧನೆಯಲ್ಲಿ ತೊಡಗುತ್ತಿದ್ದರು.

ನನಗೆಂದೇ ಪ್ರತ್ಯೇಕ ಬಾಡಿಗೆ ಮನೆ ನೀಡಿದ್ದರು. ಒಂದು ಕೋಣೆ, ಸಣ್ಣ ವರಾಂಡವಿತ್ತು. ನಾನು ಊರಿಗೆ ಹೋಗುವವಳಿದ್ದೇನೆ ಎಂದು ಹೇಳುತ್ತಿದ್ದಂತೆ, ಮಾಲೀಕರಾದ ಗೋವಿಂದ ರೆಡ್ಡಿ, ಅವರ ಜೊತೆಗೇ ಇರುವ ಐನೋರು, ನನ್ನನ್ನು ಕರೆತಂದ ವೆಂಕಟ ರೆಡ್ಡಿ, ನಂಜಪ್ಪ, ಜಕ್ಲಿ ಈಶ್ವರ ಎಲ್ಲರೂ ಸೇರಿ ಮೀಟಿಂಗ್‌ಗೆಂದು ಸೇರಿದರು. ‘ನೋಡಮ್ಮಾ, ನೀನು ಚೆಂದುಳ್ಳಿ ಚೆಲುವೆ. ನೀನು ಕಂಪೆನಿಯಲ್ಲಿ ಇದ್ದೀಯಾ ಅಂದ್ರೆ ನಾಲ್ಕಾರು ಜನರ ಕಣ್ಣು ನಿನ್ ಮೇಲಿರತ್ತೆ. ಅದು ನಿಂಗೆ ಅರ್ಥವಾಗೊಲ್ಲ. ಅವ್ವ ಅಪ್ಪ ಊರಲ್ ಇರ್ತಾರೆ. ನಾಟ್ಕದ್ ಕಂಪೆನಿ ಕೆಟ್ಟದ್ದು. ನಿಂಗೇನೂ ಅನುಭವ ಇಲ್ಲ’ ಎನ್ನುವಾಗ ನಾ ಕಳೆದ ಆ ದಿನಗಳೆಲ್ಲ ಕಣ್ಮುಂದೆ ಸುಳಿದಾಡಿತ್ತು. ಸಂಪ್ರದಾಯಸ್ಥ ವಾತಾವರಣದಲ್ಲಿದ್ದ ಅವ್ವ ಒಂದು ಸಿನೆಮಾ ನೋಡಬೇಕೆಂದರೂ ಹೇಗೆ ಕದ್ದು ಮುಚ್ಚಿ, ಮುಸುಕಿನ ಮರೆಯಲ್ಲಿ ದಾರಿ ಕಾಣುತ್ತಾ, ತಲೆ ಬಗ್ಗಿಸಿ ನಡೆಯಲು ಶುರುವಿಟ್ಟರೆ ಟಾಕೀಸಿನ ಟೆಂಟಿನೆದುರು ತಲೆ ಎತ್ತುತ್ತಿದ್ದರು, ನನ್ನ ತರಲೆಗಳೇನು ಸಾಮಾನ್ಯದ್ದೇ? ನಮ್ಮ ಕುಟುಂಬದಲ್ಲಿ ಕಂಪೆನಿ ಸೇರಿದ್ದು, ಬಣ್ಣ ಹಚ್ಚಿದ್ದು, ವೇದಿಕೆ ಏರಿದ್ದು ಎಲ್ಲದಕ್ಕೂ ಮೊದಲಿಗಳಾಗಿದ್ದೆನಲ್ಲಾ! ಇವರಿಗೆಲ್ಲ ನನ್ನ ವಿಷಯ ಏನೆಂದರೆ ಏನೂ ತಿಳಿದಿಲ್ಲವಲ್ಲಾ ಎಂದು ಮನದೊಳಗೇ ನಕ್ಕೆ.

ಲೋಕ ಜ್ಞಾನವನ್ನು ಕಲಿಸುವವರಂತೆ ಮಾತು ಆರಂಭಿಸಿದ್ದೇನೊ ನಿಜ. ಆದರೆ ಆಡಿದ ಅಷ್ಟೂ ಮಾತು, ನನ್ನ ಮದುವೆಯಾಗಬೇಕು ಎಂಬ ತಾಕೀತಿಗೆ ಹಾಕಿದ ಪೀಠಿಕೆಯಂತಿತ್ತು. ಆ ಮಾತಿನ ಒಳಾರ್ಥ ನನಗೆ ತಿಳಿಯದ್ದೇನೂ ಅಲ್ಲ. ಅಷ್ಟು ಹೊತ್ತಿಗಾಗಲೇ ಮೂವತ್ತೈದು ಮಳೆಗಾಲ ಕಂಡಿದ್ದ ಗೋವಿಂದ ರೆಡ್ಡಿ ಅವರನ್ನು ಮದುವೆಯಾಗುವ ಸಾಧ್ಯತೆಯ ಬಗ್ಗೆಯೂ ಮನ ಯೋಚಿಸಿತು. ಮನೆಯವರೊಂದಿಗೆ ಮಾತನಾಡಿಯಷ್ಟೇ ತೀರ್ಮಾನಿಸುತ್ತೇನೆ ಎಂದೆ.

(ಹಿಂದಿನ ಕಂತು: ಮೋಸದ ಆಟ…)

About The Author

ಕೀರ್ತಿ ಬೈಂದೂರ್

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ