ಒಬ್ಬ ಹುಡುಗ ಮಾತ್ರ ‘ಡ್ಯಾನ್ಸಿಂಗ್’ ಪದ ಹೇಳಿದಾಗ ಜಾಸ್ತಿಯೇ ಕುಣಿಯುತ್ತಾ ಬಂದು ನನ್ನ ಹತ್ತಿರವೇ ಬಂದುಬಿಟ್ಟ. ನನಗೆ ತಕ್ಷಣಕ್ಕೆ ಸಿಟ್ಟು ಬಂದು ಒಂದು ಏಟನ್ನು ಕೊಟ್ಟುಬಿಟ್ಟೆ. ಅವನು ಜೋರಾಗಿ ಅಳಲು ಶುರು ಮಾಡಿದ. ಹಿಂದೆ ಪಾಠ ನೋಡಲು ಕುಳಿತ ಲೆಕ್ಚರ್ ನನಗೆ ಬಯ್ಯುತ್ತಾರೆಂದು ನಾನು ತಕ್ಷಣ ಅಳುತ್ತಿದ್ದ ಹುಡುಗನ ಬಳಿ ಹೋಗಿ ಮತ್ತೆ ಟಚ್ ಮಾಡಿದಂತೆ ಮಾಡಿ ‘ಬೀಟಿಂಗ್’ ಎಂದು ಹೇಳಿದೆ. ಹುಡುಗರೂ ‘ಬೀಟಿಂಗ್…… ಬೀಟಿಂಗ್’ ಎಂದರು. ಅವನು ಅಳುವುದನ್ನು ತೋರಿಸಿ ‘ಕ್ರೈಯಿಂಗ್.. ಕ್ರೈಯಿಂಗ್’ ಎಂದು ಹೇಳಿದೆನು. ಮಕ್ಕಳೂ ಇದೇ ರೀತಿ ಪುನರುಚ್ಛರಿಸಿದರು. ಆಗ ಅಳುತ್ತಿದ್ದ ಹುಡುಗ ನಗಲು ಪ್ರಾರಂಭಿಸಿದನು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತೆಂಟನೆಯ ಕಂತು ನಿಮ್ಮ ಓದಿಗೆ
ನಮ್ಮ ಟಿಸಿಹೆಚ್ ಕಾಲೇಜಿನಲ್ಲಿ ಕೆಲವರು ಮಠದ ಹಾಸ್ಟೆಲ್ಲಿನಲ್ಲಿ ಇದ್ದರು. ಕೆಲವರು ಹೊರಗಡೆ ರೂಮು ಮಾಡಿಕೊಂಡು ಇದ್ದರು. ಹಾಸ್ಟೆಲ್ಲಿನಲ್ಲಿ ಇದ್ದವರ ಮೇಲೆ ಉಪನ್ಯಾಸಕರು ತುಸು ಜಾಸ್ತಿ ಒಲವು ತೋರುತ್ತಿದ್ದರು. ಹೊರಗಡೆ ರೂಮು ಮಾಡಿಕೊಂಡು ಇದ್ದವರ ಮೇಲೆ ಅಷ್ಟಾಗಿ ಆಸಕ್ತಿ ತೋರುತ್ತಿರಲಿಲ್ಲ. ನಮಗೆ ಹೊರಗಡೆ ಹೋಟೆಲ್ಲಿನಲ್ಲಿ ಟೀ ಕುಡಿಯೋದು ಕೂಡ ಕಷ್ಟವಿದ್ದ ಪರಿಸ್ಥಿತಿ ಇತ್ತು. ‘ಇಂಟರ್ನಲ್ ಅಂಕಗಳನ್ನು ಕಟ್ ಮಾಡುತ್ತಾರೆ’ ಎಂಬ ಭಯವೇ ಹಲವರು ತೋರಿಕೆಯ ಗುರುಭಕ್ತಿ ತೋರಿಸಲು ಕಾರಣವಾಗಿತ್ತು!! ಈ ರೀತಿಯ ಭಕ್ತಿ ಶಿಷ್ಯನಿಗೆ ಗುರುವಿನ ಮೇಲೆ ಬಹಳ ದಿನ ಇರುವುದಿಲ್ಲ! ಇಂತಹ ಸ್ಥಿತಿ ಇದ್ದರೂ ನಾನು ಹಾಗೂ ತಿಪ್ಪೇಸ್ವಾಮಿ ಪ್ರತಿದಿನವೂ ಬೋಂಡಾ ತಿನ್ನಲು ಹೋಗುತ್ತಿದ್ದೆವು.
ಎಲ್ಲಾ ಕಾಲೇಜಿನವರಂತೆ ಪ್ಯಾಂಟು ಶರ್ಟ್ ಸಮವಸ್ತ್ರವಾಗದೇ, ಕಚ್ಚೆ ಪಂಚೆ, ಜುಬ್ಬವೇ ನಮ್ಮ ಕಾಲೇಜಿನ ಸಮವಸ್ತ್ರ ಆಗಿದ್ದರಿಂದ ನಮಗೆ ಕಚ್ಚೆಪಂಚೆ ಉಡೋದನ್ನು ಕಲಿಯುವುದು ಅನಿವಾರ್ಯವಾಗಿತ್ತು. ಇದರಿಂದಾಗಿ ಕೆಲವೊಮ್ಮೆ ಮದುವೆ ಮನೇಲಿ ವರನಿಗೆ ಕಚ್ಚೆ ಪಂಜೆ ಉಡಿಸಲು ಕೆಲವರು ನನ್ನನ್ನೇ ಕರೆದುಕೊಂಡು ಹೋಗಿದ್ದುಂಟು!! ಇಂದಿಗೂ ನನಗೆ ಪರಿಚಿತರ ಮದುವೆ ಮನೆಗೆ ಹೋದಾಗ ವರನಿಗೆ ಕಚ್ಚೆ ಪಂಚೆ ಉಡೋಕೆ ಬರದಿದ್ದಾಗ ‘ನನಗೆ ಬರುತ್ತದೆ’ ಎಂದು ತಿಳಿಸಿ ಅವರಿಗೆ ಉಡಿಸೋದು ಹಲವರ ಮುಂದೆ ನನಗೆ ಹೆಮ್ಮೆಯ ವಿಷಯವೆನಿಸುತ್ತದೆ.
ಮೊದಲನೇ ವರ್ಷದ ಟಿಸಿಹೆಚ್ನಲ್ಲಿ ಲೆಕ್ಚರರ್ಗಳು ನಮಗೆ ಪಾಠ ಮಾಡುವ ಶೈಲಿಯ ಬಗ್ಗೆ ಹೇಳಿಕೊಡುತ್ತಿದ್ದರು. ಮಕ್ಕಳಿಗೆ ಯಾವ ರೀತಿಯ ಪ್ರಶ್ನೆ ಕೇಳಬೇಕು? ಯಾವ ರೀತಿಯ ಪಾಠೋಪಕರಣ ಮಾಡಬೇಕು? ವಿಷಯದ ಪರಿಕಲ್ಪನೆಯನ್ನು ಯಾವ ರೀತಿ ಮೂಡಿಸಬೇಕು? ಎಂದು ನಮಗೆ ತಿಳಿಸುತ್ತಿದ್ದರು. ಮಾದರಿ ಪಾಠ ಕೊಡುವ ಮೂಲಕ ನಮಗೆ ಪಾಠ ಮಾಡುವ ವಿಧಾನ ತಿಳಿಸಿಕೊಡುತ್ತಿದ್ದರು. ಹಾಗೆ ಮಾದರಿ ಪಾಠ ಎಂದ ಕೂಡಲೇ ನಮ್ಮ ಸೀನಿಯರ್ಗಳು, ಯಾವ ಉಪನ್ಯಾಸಕರು ಯಾವ ಮಾದರಿ ಪಾಠ ಕೊಡುತ್ತಾರೆ ಎಂದು ಮೊದಲೇ ಹೇಳಿಬಿಡುತ್ತಿದ್ದರು. ಇದು ಇವರು ಹೇಳಿದಂತೆಯೇ ಆಗೋದು ಮಾತ್ರ ವಿಶೇಷವೆನಿಸುತ್ತಿತ್ತು. ನಮಗೂ ಟೀಚಿಂಗ್ ಹೊಸ ಅನುಭವ ಬೇರೆ. ಸರ್ಕಾರಿ ಶಾಲೆಗಳಿಗೆ ಟೀಚಿಂಗ್ ಪ್ರಾಕ್ಟೀಸ್ಗೆ ಹಾಕಿದಾಗ ತುಂಬಾ ಖುಷಿಯೆನಿಸುತ್ತಿತ್ತು. ಪಾಠ ಯೋಜನೆ ಬರೆಯೋ ಬಗ್ಗೆ ನಮ್ಮ ಅಪುನಾ ಸರ್ ಹೇಳುತ್ತಿದ್ದ ಕೆಲ ಕಾಮಿಡಿ ವಿಷಯಗಳು ಈಗಲೂ ನಗೆ ತರಿಸುತ್ತವೆ.
ಆಗಿನ ಪಾಠ ಯೋಜನೆಯ ಪ್ರಕಾರ ನಮಗೆ ಹರ್ಬಟರ್ನ ಪಂಚಸೋಪಾನಗಳು ಪದ್ಧತಿ ಇತ್ತು. ಅದರಲ್ಲಿ ಎಲ್ಲದಕ್ಕೂ ಐದು ಪ್ರಶ್ನೆಗಳು, ಐದು ಹಂತಗಳು ಎಂಬ ಕಲ್ಪನೆ ಮೂಡಿಸಿದ್ದರು. ಇದರ ಪ್ರಕಾರ ನಾವು ಯಾವುದೇ ಪಾಠ ಮಾಡುವ ಮೊದಲೇ ಐದು ಪ್ರಶ್ನೆಗಳನ್ನು ಕೇಳಲೇಬೇಕು, ಕೊನೇ ಪ್ರಶ್ನೆಯಲ್ಲಿ ಪಾಠದ ಹೆಸರು ಬರುವಂತೆ ಮಾಡಬೇಕು ಎಂಬ ಅಲಿಖಿತ ನಿಯಮ ಮಾಡಿದ್ದರು. ಇದರಂತೆ ನಾವು ಪಾಠದ ಹೆಸರನ್ನು ಐದನೇ ಪ್ರಶ್ನೆಯಲ್ಲಿ ತರಿಸಲು ಒದ್ದಾಡುತ್ತಿದ್ದೆವು. ಇದು ಸರಿಯಾದರೆ ಮಾತ್ರ ನಮ್ಮ ಪಾಠ ಯೋಜನೆಗೆ ನಮ್ಮ ಲೆಕ್ಚರರ್ಗಳು ಸಹಿ ಹಾಕುತ್ತಿದ್ದರು. ಇಲ್ಲ ಅಂದ್ರೆ ಮತ್ತೆ ‘ರೀ ರೈಟ್’ ಶಿಕ್ಷೆ ತಪ್ಪುತ್ತಿರಲಿಲ್ಲ. ಆಗ ಯಾರ ಪಾಠ ಯೋಜನೆಗೆ ಒಂದೇ ಹಂತದಲ್ಲಿ ಸಹಿ ಬೀಳುತ್ತದೆಯೋ ಅವನು ಗ್ರೇಟ್ ಎಂದೆನಿಸಿಕೊಳ್ಳುತ್ತಿದ್ದನು. ಈ ರೀತಿಯ ವಿಧಾನಕ್ಕೆ ಅಪುನಾ ಸರ್ ಹೇಳುತ್ತಿದ್ದ ಒಂದು ಕಲ್ಪನೆಯ ತಮಾಷೆಯ ಉದಾಹರಣೆ ಈ ರೀತಿ ಇದೆ.
“ಪ್ರೀತಿಯ ಮಕ್ಕಳೇ, ನಾನು ನಿಮಗೆ ಪ್ರಶ್ನೆಗಳನ್ನು ಕೇಳುತ್ತೇನೆ. ನೀವು ಉತ್ತರಿಸಿ” ಎಂದು ಹೇಳಿದ ಶಿಕ್ಷಕ ಪ್ರಶ್ನೆಗಳನ್ನು ಈ ರೀತಿ ಕೇಳುತ್ತಾನಂತೆ.
೧. ‘ನ್ಯಾಯ’ ಇದರ ವಿರುದ್ಧ ಪದವೇನು?’
೨. ‘ಸತ್ಯ’ ಇದರ ವಿರುದ್ಧ ಪದವೇನು?
೩. ‘ಧರ್ಮ’ ಇದರ ವಿರುದ್ಧ ಪದವೇನು? ಇಲ್ಲಿ ಈ ಪ್ರಶ್ನೆ ಕೇಳುತ್ತಾ ಹೋದಾಗ ಅವರು ಹೇಳಿದ ಉತ್ತರದಲ್ಲಿ ಅವರಿಗೆ ಅನ್ಯಾಯ, ಅಸತ್ಯ, ಅಧರ್ಮ ಹೀಗೆ ‘ಅ’ ಸೇರಿಸಬೇಕು ಎಂಬ ಕಲ್ಪನೆ ಬರುತ್ತದೆ ಎಂಬ ಆಧಾರದಲ್ಲಿ ನಂತರದ ಪ್ರಶ್ನೆ ಈ ರೀತಿ ಕೇಳುತ್ತಾನಂತೆ. ೪. ‘ಶೋಕ’ ಇದರ ವಿರುದ್ಧ ಪದವೇನು? ಎಂದು ಕೇಳಿದಾಗ ಆ ಮಕ್ಕಳು ಈ ಮೊದಲೇ ಉತ್ತರಿಸಿದ ಪ್ರಶ್ನೆಗಳಿಗೆ ‘ಅ’ ಸೇರಿಸಿದಾಗ ಉತ್ತರ ಬರುತ್ತದೆಯೆಂದು ಭಾವಿಸಿ, ‘ಅ’ ಸೇರಿಸಿ ‘ಅಶೋಕ’ ಎಂದು ಹೇಳಿದಾಗ ೫ ನೇ ಪ್ರಶ್ನೆಯನ್ನು ಅಶೋಕನ ಸಾಧನೆಗಳನ್ನು ತಿಳಿಸಿ ಎಂದು ಹೇಳಿ ಅವರಿಗೆ ಪಾಠ ಮುಂದುವರೆಸಬೇಕು ಎಂಬ ಕಲ್ಪನೆಯ ಪ್ರಸಂಗವು ನಮಗೆ ನಗು ತರಿಸುತ್ತಿತ್ತು.
ಅಪುನಾ ಸರ್ ಈ ರೀತಿಯ ಹಲವು ಹಾಸ್ಯ ಪ್ರಸಂಗಗಳನ್ನು ಹೇಳುವ ಜೊತೆ ಜೊತೆಗೆ ವೈಚಾರಿಕ ಸಂಗತಿ, ವೈಜ್ಞಾನಿಕ ಸಂಗತಿಗಳ ಬಗ್ಗೆಯೂ ಚರ್ಚಿಸುತ್ತಿದ್ದರು.
ನಾವು ಸರ್ಕಾರಿ ಶಾಲೆಗಳಿಗೆ ಟೀಚಿಂಗಿಗೆ ಹೋದಾಗ ಮಕ್ಕಳು ನಮ್ಮ ಸಮವಸ್ತ್ರ ನೋಡಿ ಇವರು ಏನೂ ಹೊಡೆಯುವುದಿಲ್ಲ ಎಂದು ಪಾಠ ಮಾಡುವಾಗ ತರಲೆ ಮಾಡುತ್ತಿದ್ದರು. ಇದೇ ರೀತಿ ನಾನು ಇಂಗ್ಲೀಷ್ ಪಾಠ ಮಾಡುತ್ತಿದ್ದೆನು. ನಮ್ಮ ಕಾಲೇಜಿನಲ್ಲಿ ಒಂದು ಸಿಸ್ಟಂ ಇತ್ತು. ಇಂಗ್ಲೀಷನ್ನು ಇಂಗ್ಲೀಷಿನಲ್ಲಿಯೇ ಬೋಧಿಸಬೇಕು. ಒಂದೂ ಕನ್ನಡ ಪದವನ್ನು ಬಳಸುವಂತಿಲ್ಲ ಎಂಬ ನಿಯಮ! ಎರಡನೆಯದು ಮಕ್ಕಳಿಗೆ ಹೊಡೆಯುವಂತಿಲ್ಲವೆಂಬ ನಿಯಮ. ನಾನು ಕ್ರಿಯಾಪದದ ಬಗ್ಗೆ (ವರ್ಬ್) ಬೋಧಿಸುತ್ತಿದ್ದಾಗ ನಟನೆಯ ಮೂಲಕ ಮಾಡಿ ತೋರಿಸಿ ಹೇಳಿಕೊಡುತ್ತಿದ್ದೆ. ಮಕ್ಕಳು ಖುಷಿಯಿಂದ ಪಾಠದಲ್ಲಿ ತೊಡಗಿದ್ದರು. ಆಗ ಒಬ್ಬ ಹುಡುಗ ಮಾತ್ರ ‘ಡ್ಯಾನ್ಸಿಂಗ್’ ಪದ ಹೇಳಿದಾಗ ಜಾಸ್ತಿಯೇ ಕುಣಿಯುತ್ತಾ ಬಂದು ನನ್ನ ಹತ್ತಿರವೇ ಬಂದುಬಿಟ್ಟ. ನನಗೆ ತಕ್ಷಣಕ್ಕೆ ಸಿಟ್ಟು ಬಂದು ಒಂದು ಏಟನ್ನು ಕೊಟ್ಟುಬಿಟ್ಟೆ. ಅವನು ಜೋರಾಗಿ ಅಳಲು ಶುರು ಮಾಡಿದ. ಹಿಂದೆ ಪಾಠ ನೋಡಲು ಕುಳಿತ ಲೆಕ್ಚರ್ ನನಗೆ ಬಯ್ಯುತ್ತಾರೆಂದು ನಾನು ತಕ್ಷಣ ಅಳುತ್ತಿದ್ದ ಹುಡುಗನ ಬಳಿ ಹೋಗಿ ಮತ್ತೆ ಟಚ್ ಮಾಡಿದಂತೆ ಮಾಡಿ ‘ಬೀಟಿಂಗ್’ ಎಂದು ಹೇಳಿದೆ. ಹುಡುಗರೂ ‘ಬೀಟಿಂಗ್…… ಬೀಟಿಂಗ್’ ಎಂದರು. ಅವನು ಅಳುವುದನ್ನು ತೋರಿಸಿ ‘ಕ್ರೈಯಿಂಗ್.. ಕ್ರೈಯಿಂಗ್’ ಎಂದು ಹೇಳಿದೆನು. ಮಕ್ಕಳೂ ಇದೇ ರೀತಿ ಪುನರುಚ್ಛರಿಸಿದರು. ಆಗ ಅಳುತ್ತಿದ್ದ ಹುಡುಗ ನಗಲು ಪ್ರಾರಂಭಿಸಿದನು. ಆಗ ನಾನು ‘ಲಾಫಿಂಗ್ ಲಾಫಿಂಗ್’ ಎಂದೆನು. ಈ ರೀತಿಯಾಗಿ ನಿಜವಾಗಿ ಹೊಡೆದಿದ್ದನ್ನು ಪಾಠದ ಸನ್ನಿವೇಶಕ್ಕೆ ಬಳಸಿಕೊಂಡು ಪಾಠ ಮಾಡುವಲ್ಲಿ ಯಶಸ್ವಿಯಾದೆನು. ಇದನ್ನು ನೆನಪಿಸಿಕೊಂಡು ಪಾಠ ವೀಕ್ಷಿಸುತ್ತಿದ್ದ ವೈಬಿವಿ ಮೇಡಂ ತುಂಬಾ ಖುಷಿಪಟ್ಟರು. ಈಗಲೂ ಅವರು ಕರೆ ಮಾಡಿದಾಗ ಅದನ್ನು ನೆನಪಿಸಿಕೊಂಡು ನಗುತ್ತಾರೆ.
ಚಿಕ್ಕ ಮಕ್ಕಳು ಕೆಲವೊಮ್ಮೆ ಕೇಳೋ ಪ್ರಶ್ನೆಗಳಿಗೆ ದೊಡ್ಡವರು ಉತ್ತರಿಸಲು ಆಗುವುದಿಲ್ಲ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಬೇಕು. ಆದರೆ ಕೆಲವರು ಪ್ರಶ್ನಿಸುವ ಮಕ್ಕಳಿಗೆ ಪ್ರೋತ್ಸಾಹ ಕೊಡುವುದಿಲ್ಲ. ಅವರ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಈ ರೀತಿ ಮಾಡಬಾರದು. ಕೆಲವರು ಪಾಠ ಮಾಡುವಾಗಲೂ ಅಷ್ಟೇ, ಹೆಚ್ಚು ಪ್ರಶ್ನಿಸಿದರೆ ತರಲೆ ಎಂಬ ಹಣೆಪಟ್ಟಿ ಕಟ್ಟುತ್ತಾರೆ!! ಇದು ಒಳ್ಳೆಯ ಲಕ್ಷಣವಲ್ಲ. ನನಗೂ ಸಹ ಈ ರೀತಿಯ ಅನುಭವವಾಗಿದೆ. ಕಾಲೇಜಿನಲ್ಲಿ ನಾನು ಪ್ರಶ್ನೆಗಳನ್ನು ಕೇಳಿದ್ದಕ್ಕೆ ನನ್ನನ್ನು ಕೆಟ್ಟ ಹುಡುಗನ ರೀತಿ ಬಿಂಬಿಸುತ್ತಿದ್ದುದನ್ನು ನೋಡಿ ಇಂದು ಆ ಉಪನ್ಯಾಸಕರ ಬಗ್ಗೆ ಕನಿಕರ ಮೂಡುತ್ತದೆ. ಕಲಿಕೆಯ ಬಗ್ಗೆ ಅವರಿಗಿದ್ದ ಅಲ್ಪ ಜ್ಞಾನದ ಬಗ್ಗೆ ಈಗ ಮರುಕ ಉಂಟಾಗುತ್ತದೆ.
ಕೆಲವರು ನೇರ ನುಡಿಯನ್ನು ಇಷ್ಟಪಡುವುದಿಲ್ಲ. ಹೊಗಳಿಕೆಯನ್ನು ಮಾತ್ರ ಇಷ್ಟಪಡುತ್ತಾರೆ. ಆದ್ದರಿಂದ ನಾವು ನಮ್ಮತನವನ್ನು ಬಿಟ್ಟುಕೊಡಲಾಗದ ಸನ್ನಿವೇಶಗಳಲ್ಲಿ ಇದ್ದರೆ ಸುಮ್ಮನಿರುವುದು ಲೇಸು. ಕೆಲವರಂತೂ ಬಿಡಿ, ಬಕೆಟ್ ಹಿಡಿದು ತಮ್ಮ ಕಾರ್ಯ ಸಾಧನೆ ಮಾಡಿಕೊಳ್ತಾರೆ. ಅದಕ್ಕೆಂದೇ ನಾನು ಈ ಚುಟುಕು ಹೇಳುತ್ತಿರುತ್ತೇನೆ.
“ಟೀಂ ನಲ್ಲಿ ಬೌಲರ್ ಉಳಿಯೋದಿಕ್ಕೆ
ತೆಗೆಯಲೇಬೇಕು ವಿಕೆಟ್..
ಕೆಲವರಂತೂ ಬಿಡಿ ತಮ್ಮ ಕಾರ್ಯಸಾಧನೆಗೆ
ಹಿಡೀತಾರೆ ಬಕೆಟ್!!!”
ಆದರೆ ನಾನು ಬಕೇಟ್ ಹಿಡಿಯುವ ವಿಷಯದಲ್ಲಿ ಫೇಲ್ ಆಗಿ ಹಲವನ್ನು ಕಳೆದುಕೊಂಡಿದ್ದೇನೆ. ಕೆಲಸವನ್ನು ಹಾಗೂ ಜ್ಞಾನವನ್ನು ಮಾತ್ರ ಗೌರವಿಸುತ್ತೇನೆ. ಅದನ್ನು ಬಿಟ್ಟು ಸುಖಾಸುಮ್ಮನೆ ಯಾರನ್ನೂ ಹೊಗಳುವ ಮನಸ್ಸು ನನಗೆ ಬರುವುದಿಲ್ಲ.
ಅಯ್ಯೋ ವಿಷಯ ಎಲ್ಲೆಲ್ಲಿಗೋ ಹೋಯ್ತಲ್ಲ ಅಂದ್ಕೋಬೇಡಿ. ಇನ್ನು ಶಾಲಾ ವಿಷಯಕ್ಕೆ ಬರೋಣ. ಒಮ್ಮೆ ಗಾಳಿಯ ಘಟಕಗಳ ಬಗ್ಗೆ ಪಾಠ ಮಾಡುತ್ತಿದ್ದೆ. ಆಗ ನಾಲ್ಕನೇ ತರಗತಿಯ ಒಬ್ಬ ಹುಡುಗ ಎದ್ದು ನಿಂತು ‘ಗಾಳಿಯಲ್ಲಿ ಸಾರಜನಕ, ಇಂಗಾಲದ ಡೈ ಆಕ್ಸೈಡ್, ಆಮ್ಲಜನಕ ಹೀಗೆ ವಿವಿಧ ಘಟಕಗಳು ಇದ್ದರೂ ಅದು ನಮಗೆ ಗೊತ್ತಾಗದಿಲ್ವಲ್ಲ’ ಎಂದು ಕೇಳಿದ. ಆಗ ನಾನು ಅವನ ಮಟ್ಟಕ್ಕೆ ತಕ್ಕಂತೆ ಉತ್ತರ ಕೊಡಬೇಕಾಗಿತ್ತು. ಅದಕ್ಕೆ ನಾನು ‘ಟೀ ಮಾಡೋಕೆ ಏನೇನು ಬೇಕು?’ ಎಂದು ಕೇಳಿದೆ ಅವನು ಅದಕ್ಕೆ ‘ಹಾಲು. ಟೀ ಪುಡಿ, ನೀರು’ ಎಂದ. ಹಾಗಾದರೆ ‘ಟೀನಲ್ಲಿ ಅವೆಲ್ಲಾ ಕಾಣ್ತಾವಾ’ ಎಂದು ಕೇಳಿದೆ. ಅವನು ‘ಇಲ್ಲ’ ಎಂದ. ಅವನು ಈ ಉತ್ತರಕ್ಕೆ ಸಮಾಧಾನಪಟ್ಟುಕೊಂಡವನಂತೆ ಕಂಡ. ಶಿಕ್ಷಕರಾದವರು ಮಕ್ಕಳ ಮಟ್ಟಕ್ಕೆ ತಕ್ಕಂತೆ ಉತ್ತರಿಸಬೇಕು.
ಮಕ್ಕಳ ಆಸಕ್ತಿಯ ಕ್ಷೇತ್ರ ನಿರ್ಧಾರವಾಗುವುದು ಶಿಕ್ಷಕರ ಕೈಯಲ್ಲಿ ಇರುತ್ತದೆ. ಒಂದು ವಿಷಯ ಬೋಧಿಸುವ ಶಿಕ್ಷಕ ಆ ವಿಷಯವನ್ನು ಆಸಕ್ತಿದಾಯಕವಾಗಿ ಬೋಧಿಸಿದರೆ ಮಕ್ಕಳಿಗೆ ಆ ವಿಷಯದಲ್ಲಿ ಆಸಕ್ತಿ ಬರುತ್ತದೆ. ಮಗು ಅದೇ ವಿಷಯದ ಕ್ಷೇತ್ರದಲ್ಲಿ ಮುಂದುವರೆಯುತ್ತದೆ. ಒಂದು ವಿಷಯವನ್ನು ನೀರಸವಾಗಿ ಬೋಧಿಸಿದರೆ ಮಗು ಆ ವಿಷಯದಲ್ಲಿ ಆಸಕ್ತಿ ತೋರಿಸುವುದಿಲ್ಲ. ಒಂದು ಚಿಕ್ಕ ಸಾಧನೆಗೂ ಮಗುವಿನ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು. ಒಂದು ಮಗು ತಪ್ಪು ಮಾಡಿದಾಗ ಅದನ್ನು ಗುಂಪಿನಲ್ಲಿ ಹೇಳದೇ, ಒಬ್ಬರನ್ನೇ ಕರೆದು ಬುದ್ಧಿ ಹೇಳಬೇಕು. ಉತ್ತಮ ಕೆಲಸ ಮಾಡಿದಾಗ ಗುಂಪಿನಲ್ಲಿ ಹೇಳಬೇಕು. ಈ ಸೂಕ್ಷ್ಮಪ್ರಜ್ಞೆ ನಮಗೆ ಇರಬೇಕು. ಹಾಗೆಯೇ ಮಕ್ಕಳನ್ನು ಮತ್ತೊಬ್ಬರೊಂದಿಗೆ ಹೋಲಿಕೆ ಮಾಡುವುದು ತಪ್ಪು. ಇಲ್ಲಿ ಪ್ರತೀ ಮಗುವೂ ಭಿನ್ನ. ವೈಯಕ್ತಿಕ ಭಿನ್ನತೆ ಇರುತ್ತದೆ. ಇದನ್ನು ನಾವು ಪಾಲಿಸಬೇಕು. ಮಕ್ಕಳ ಪೋಷಕರ ಪಾತ್ರವೂ ಬಹುಮುಖ್ಯ

ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
ವಿದ್ಯಾರ್ಥಿ ಜೀವನದ ರಸ ಪ್ರಸಂಗಗಳನ್ನು ಓದುವದೇ ನಮಗೆ ಒಂದು ದೊಡ್ಡ ಖುಷಿ. 🙏🙏
ಟೀ ಉದಾಹರಣೆ ಚೆನ್ನಾಗಿದೆ.