Advertisement
ಮಕ್ಕಳ ಶೋಷಣೆಯ ಪಾಪಿಷ್ಟರು: ಡಾ. ವಿನತೆ ಶರ್ಮಾ ಅಂಕಣ

ಮಕ್ಕಳ ಶೋಷಣೆಯ ಪಾಪಿಷ್ಟರು: ಡಾ. ವಿನತೆ ಶರ್ಮಾ ಅಂಕಣ

ಹದಿನೆಂಟು ವರ್ಷವಾದಾಗ ಒಬ್ಬ ವ್ಯಕ್ತಿ ‘adult’ ಎಂದು ಸರ್ಕಾರ ಹೇಳುತ್ತದೆ. ಇವರು ತಮ್ಮ ಜೀವನಕ್ಕೆ ತಾವೇ ಸಂಪೂರ್ಣವಾಗಿ ಜವಾಬ್ದಾರರು. ಪೂರ್ಣಾವಧಿ ಉದ್ಯೋಗದಲ್ಲಿದ್ದು ಮುಂದೆ ತಮ್ಮದೇ ಕುಟುಂಬ ಆರಂಭಿಸಿದಾಗ ಇವರ ಮಕ್ಕಳು ಚೈಲ್ಡ್ ಕೇರ್ ಸೆಂಟರ್‌ಗೆ ಹೋಗುವುದು ಅನಿವಾರ್ಯವಾಗುತ್ತದೆ. ಪಾರ್ಟ್ ಟೈಮ್ ಕೆಲಸ ಮಾಡುತ್ತಾ ಮಕ್ಕಳನ್ನು ಪೋಷಿಸುತ್ತೀವಿ ಎಂದರೆ ಅವರ ಕೆರಿಯರ್‌ಗೆ ದೊಡ್ಡ ಹೊಡೆತ. ಅಲ್ಲದೆ ಒಂದೂವರೆ ಸಂಬಳವಿದ್ದರೆ ಇತ್ತ ಕಡೆ ಕುಟುಂಬದ ಖರ್ಚುಗಳನ್ನು ತೂಗಿಸಲು ಕಷ್ಟ. ಅತ್ತ ಕಡೆ ಸರಕಾರದಿಂದ welfare ಸಹಾಯ ಸಿಗುವುದಿಲ್ಲ. ಕಾರು, ಮನೆ ಕೊಳ್ಳುವುದು ಇತ್ಯಾದಿಗಳಿಗೆ ಕಡಿವಾಣ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

ಪ್ರಿಯ ಓದುಗರೆ,

ಹೋದ ಬಾರಿ ಬರೆದ ‘ಆಸ್ಟ್ರೇಲಿಯಾ ಪತ್ರ’ ದಲ್ಲಿ ಎರಿನ್ ಪ್ಯಾಟರ್ಸನ್ ಎಂಬಾಕೆ ಅಣಬೆ-ಅಡುಗೆಯ ಸಲುವಾಗಿ ಹೆಸರಾಂತ ಅಪರಾಧಿಯಾದದ್ದರ ಬಗ್ಗೆ ಹೇಳಿದ್ದೆ. ಇವತ್ತಿನ ಪತ್ರದಲ್ಲಿ ಆಸ್ಟ್ರೇಲಿಯಾದಲ್ಲಿ ಬಹಳ ಚರ್ಚಿತವಾಗುತ್ತಿರುವ ಇನ್ನೊಂದು ವಿಷಯದ ಬಗ್ಗೆ ಹೇಳುತ್ತೀನಿ. ಇಲ್ಲಿ ಸಣ್ಣದೊಂದು ಎಚ್ಚರಿಕೆಯ (disclaimer ಮತ್ತು content warning ) ಮಾತು. ಇದು ಮಕ್ಕಳ ಕುರಿತಾದ ಮತ್ತು ಲೈಂಗಿಕ ಶೋಷಣೆ ಬಗೆಗಿನ ವಿಷಯ. ಓದುವಾಗ ಸ್ವಲ್ಪ ಜಾಗೃತೆಯಿರಲಿ.

ಎರಿನ್ ಪ್ಯಾಟರ್ಸನ್ ಕೇಸ್ ನಡೆದಿದ್ದು ವಿಕ್ಟೋರಿಯಾ ರಾಜ್ಯದಲ್ಲಿ. ಈ ರಾಜ್ಯದ ರಾಜಧಾನಿ ಮೆಲ್ಬೋರ್ನ್ ನಗರ. ಇಲ್ಲಿನ ಕೆಲ ಶಿಶುಪಾಲನಾ ಕೇಂದ್ರಗಳಲ್ಲಿ (ಚೈಲ್ಡ್ ಕೇರ್ ಸೆಂಟರ್) ಮಕ್ಕಳನ್ನು ಲೈಂಗಿಕ ಶೋಷಣೆಗೆ ಒಳಪಡಿಸಿದ್ದು ಪೋಷಕರಲ್ಲಿ ಮತ್ತು ಸಮಾಜದಲ್ಲಿ ನಡುಕ ತಂದಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ದೊಡ್ಡದೊಂದು ತಲೆನೋವು, ಚಿಂತೆ ತರಿಸಿದೆ.

ವಿಷಯ ಏನಂದರೆ, ಇಪ್ಪತ್ತಾರು ವರ್ಷ ವಯಸ್ಸಿನ ಜೆ ಬ್ರೌನ್ ಎಂಬಾತ ೨೦೧೭ ರಿಂದ ೨೦೨೫ ರವರಗಿನ ಅವಧಿಯಲ್ಲಿ ತಾನು ಕೆಲಸ ಮಾಡಿದ್ದ ಒಂದು ಶಿಶುಪಾಲನಾ ಕೇಂದ್ರದಲ್ಲಿ ಎಂಟು ಎಳೆವಯಸ್ಸಿನ ಮಕ್ಕಳನ್ನು ಲೈಂಗಿಕ ಶೋಷಣೆಗೆ ಒಳಪಡಿಸಿದ್ದ. ಅಲ್ಲದೆ, ತಾನು ಕೆಲಸ ಮಾಡಿದ್ದ ಬೇರೆ ಬೇರೆ ಹಲವಾರು ಶಿಶುಪಾಲನಾ ಕೇಂದ್ರಗಳಲ್ಲಿ ಮಕ್ಕಳ ವಿರುದ್ಧ ಲೈಂಗಿಕ ಶೋಷಣೆಯ ಅಪರಾಧಗಳನ್ನು ಮಾಡಿದ್ದಿರಬಹುದಾದ ಸಾಧ್ಯತೆಗಳಿವೆ. ಇವೆಲ್ಲಾ ಈಗಷ್ಟೆ ಬೆಳಕಿಗೆ ಬಂದಿದೆ. ಅವನನ್ನು ಕಳೆದ ಮೇ ತಿಂಗಳಲ್ಲಿ ಬಂಧಿಸಿದ್ದಾರೆ. ಅವನ ವಿರುದ್ಧ ಸುಮಾರು ಎಪ್ಪತ್ತು ವಿಧಗಳ ಅಪರಾಧಗಳನ್ನು ದಾಖಲಿಸಿದ್ದಾರೆ. ಅವನು ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಕೋರ್ಟ್ ಕಟಕಟೆ ಏರಬಹುದು. ವಿಕ್ಟೋರಿಯಾ ರಾಜ್ಯ ಪೊಲೀಸರು ಇನ್ನೂ ಮಾಹಿತಿಗಳನ್ನು, ವಿವರಗಳನ್ನು ಕಲೆ ಹಾಕುತ್ತಿದ್ದಾರೆ. ರಾಜ್ಯ ಸರಕಾರವು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಕ್ಕಳ ಪೋಷಕರನ್ನು ಸಂಪರ್ಕಿಸಿ ಅವರ ಮಕ್ಕಳ ಆರೋಗ್ಯದ ಒಳಿತಿಗಾಗಿ ವೈದ್ಯಕೀಯ ತಪಾಸಣೆ ಮಾಡಿಸಲು ಹೇಳಿದೆ. ಸಾಮಾನ್ಯವಾಗಿ ಬಂಧನವಾದಾಗ ಅಪರಾಧಿಯ ಹೆಸರನ್ನು ಪ್ರಕಟಪಡಿಸುವುದಿಲ್ಲ. ಆದರೆ ಈ ಕೇಸ್ ಬಹಳ ಸೂಕ್ಷ್ಮವಾದದ್ದು ಎಂದು ಸರ್ಕಾರ ಹೇಳಿದೆ.

ಅವನನ್ನು ಬಂಧಿಸಿದಾಗ ಅವನ ಬಳಿ ‘ಮಕ್ಕಳೊಡನೆ ಕೆಲಸ ಮಾಡುವ’ ಪರವಾನಗಿ ಇತ್ತು. ಆಸ್ಟ್ರೇಲಿಯಾದಲ್ಲಿ ಇಂತಹದೊಂದು ರಾಜ್ಯ ಸರ್ಕಾರ ನೀಡುವ ಪರವಾನಗಿ ಇದ್ದರೆ ಮಾತ್ರ ನಾವು ೧೮ ವರ್ಷದ ಒಳಗಿನ ಮಕ್ಕಳ ಜೊತೆ ಕೆಲಸ ಮಾಡಲು ಸಾಧ್ಯ. ಅಂದರೆ ಶಾಲಾ ಶಿಕ್ಷಕರಿಂದ ಹಿಡಿದು ನಾನಾ ವಿಧಗಳ ವೃತ್ತಿಪರರು ಈ ಪರವಾನಗಿ ಹೊಂದಿರಬೇಕು. ಜೆ ಬ್ರೌನ್ ಪ್ರಕರಣದಿಂದ ಈಗ ಕೇಂದ್ರ ಸರಕಾರವು ಚೈಲ್ಡ್ ಕೇರ್ ಸೆಂಟರ್‌ಗಳು ಮತ್ತಷ್ಟು ತೀವ್ರವಾಗಿ ತಮ್ಮ ನೌಕರರ ‘background ಚೆಕ್’ ನಡೆಸುವಂತೆ ಮಾಡಲು ಇನ್ನೂ ಗಮನಾರ್ಹ ಕ್ರಮಗಳನ್ನು ತರುವುದಾಗಿ ಹೇಳಿದೆ. ಕೇಂದ್ರಗಳ ಕೆಲಸದ ಬಗ್ಗೆ, ಅವರು ಕಡ್ಡಾಯವಾಗಿ ಪಾಲಿಸಬೇಕಿರುವ ಸುರಕ್ಷತಾ ಕ್ರಮಗಳ ಬಗ್ಗೆ ಏನಾದರೂ ದೂರುಗಳು ಬಂದರೆ ಅವರ ಲೈಸೆನ್ಸ್ ರದ್ದುಮಾಡುವುದಾಗಿ ಮತ್ತು ಅವುಗಳಿಗೆ ಕೊಡುವ ಸಬ್ಸಿಡಿ ಮತ್ತು funding ನಿಲ್ಲಿಸುವುದಾಗಿ ಹೇಳಿದೆ.

ಆದರೆ ಇದನ್ನು ಜಾರಿಗೆ ತರುವುದು ಸುಲಭವಲ್ಲ. ಏಕೆಂದರೆ ದೇಶದಾದ್ಯಂತ ಚೈಲ್ಡ್ ಕೇರ್ ಸೆಂಟರ್‌ಗಳಿಗೆ ತೀವ್ರ ಬೇಡಿಕೆ ಇದೆ. ಕ್ಯಾಪಿಟಲಿಸಂ ಮತ್ತು ನವ-ಉದಾರೀಕರಣ ನೀತಿಗಳ ಅಡಿಯಲ್ಲಿ ಪ್ರತಿಯೊಬ್ಬ ವಯಸ್ಕ ವ್ಯಕ್ತಿ ತನ್ನ ಕಾಲಿನ ಮೇಲೆ ನಿಂತು ಉದ್ಯೋಗದಲ್ಲಿದ್ದು ಸಂಪಾದಿಸುತ್ತಾ ಇರಬೇಕು. ಹದಿನೆಂಟು ವರ್ಷವಾದಾಗ ಒಬ್ಬ ವ್ಯಕ್ತಿ ‘adult’ ಎಂದು ಸರ್ಕಾರ ಹೇಳುತ್ತದೆ. ಇವರು ತಮ್ಮ ಜೀವನಕ್ಕೆ ತಾವೇ ಸಂಪೂರ್ಣವಾಗಿ ಜವಾಬ್ದಾರರು. ಪೂರ್ಣಾವಧಿ ಉದ್ಯೋಗದಲ್ಲಿದ್ದು ಮುಂದೆ ತಮ್ಮದೇ ಕುಟುಂಬ ಆರಂಭಿಸಿದಾಗ ಇವರ ಮಕ್ಕಳು ಚೈಲ್ಡ್ ಕೇರ್ ಸೆಂಟರ್‌ಗೆ ಹೋಗುವುದು ಅನಿವಾರ್ಯವಾಗುತ್ತದೆ. ಪಾರ್ಟ್ ಟೈಮ್ ಕೆಲಸ ಮಾಡುತ್ತಾ ಮಕ್ಕಳನ್ನು ಪೋಷಿಸುತ್ತೀವಿ ಎಂದರೆ ಅವರ ಕೆರಿಯರ್‌ಗೆ ದೊಡ್ಡ ಹೊಡೆತ. ಅಲ್ಲದೆ ಒಂದೂವರೆ ಸಂಬಳವಿದ್ದರೆ ಇತ್ತ ಕಡೆ ಕುಟುಂಬದ ಖರ್ಚುಗಳನ್ನು ತೂಗಿಸಲು ಕಷ್ಟ. ಅತ್ತ ಕಡೆ ಸರಕಾರದಿಂದ welfare ಸಹಾಯ ಸಿಗುವುದಿಲ್ಲ. ಕಾರು, ಮನೆ ಕೊಳ್ಳುವುದು ಇತ್ಯಾದಿಗಳಿಗೆ ಕಡಿವಾಣ. ಕನಸುಗಳಿಗೆ ಕತ್ತರಿ ಬೀಳುತ್ತದೆ. ಈ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡು ಬೇಲಾಡುವುದಕ್ಕಿಂತ ಪೂರ್ಣಾವಧಿ ಕೆಲಸ ಮಾಡುವುದೆ ಒಳ್ಳೆಯದು ಎಂದು ಅನೇಕರು ತೀರ್ಮಾನಿಸುತ್ತಾರೆ. ಇವರಂತೆಯೇ ಅವರ ಮಕ್ಕಳು ಕೂಡ ಪೂರ್ಣಾವಧಿ ಚೈಲ್ಡ್ ಕೇರ್ ಸೆಂಟರ್‌ಗೆ ಹೋಗುತ್ತಾ, ಅಲ್ಲಿಯೇ ಬೆಳೆಯುತ್ತಾರೆ. ಕುಟುಂಬದ ಸಮಯ – ಫ್ಯಾಮಿಲಿ ಟೈಮ್ – ಎಂದರೆ ವಾರಾಂತ್ಯದಲ್ಲಿ ಮಾತ್ರ. ಅದರಲ್ಲೂ ಶನಿವಾರದಂದು. ಭಾನುವಾರ ಬಂತೆಂದರೆ ಮತ್ತೆ ವಾರದ ದಿನಗಳಿಗೆ ತಯ್ಯಾರಿ ನಡೆಸುವುದು. ಈ ಯಾಂತ್ರಿಕ ದಿನಚರಿಯ ಬದುಕು ಸಂಬಂಧಗಳನ್ನು ಕುಗ್ಗಿಸುತ್ತದೆ.

ಜೆ ಬ್ರೌನ್ ಕೆಲಸ ಮಾಡಿದ್ದ ಹಲವಾರು ಶಿಶುಪಾಲನಾ ಕೇಂದ್ರಗಳು ಇರುವುದು ಮೆಲ್ಬೋರ್ನ್ ನಗರದ ಪಶ್ಚಿಮ ವಲಯದಲ್ಲಿ. ಇಲ್ಲಿನ ‘ಹೊರವಲಯದ’ ಬಡಾವಣೆಗಳು ಹುಟ್ಟಿದ್ದು ಬೆಳೆದಿದ್ದು ಕಳೆದ ಇಪ್ಪತ್ತು ವರ್ಷಗಳಲ್ಲಿ. ಹೆಚ್ಚಿನ ನಿವಾಸಿಗಳು ವಲಸೆಗಾರರು, ಆಸ್ಟ್ರೇಲಿಯನ್ ಮೂಲಜನರು ಮತ್ತು ರೆಫ್ಯೂಜಿ ಸಮುದಾಯಗಳು. ಬಹುಸಂಸ್ಕೃತಿಗಳ ಜನರು. ಆಸ್ಟ್ರೇಲಿಯಾಕ್ಕೆ ಬಂದು ಹೊಸ ಗೂಡು ಕಟ್ಟಿದವರು, ತಮ್ಮ ಹೊಸ ಬದುಕಿನ, ಮುದ್ದು ಮಕ್ಕಳ ಬಗ್ಗೆ ಕನಸು ಕಂಡವರು. ಒಂದಾನೊಂದು ಕಾಲದಲ್ಲಿ ಹೀಗೆಯೆ ನನ್ನ ಕುಟುಂಬವೂ ಮೆಲ್ಬೋರ್ನ್ ನಗರದ ಪಶ್ಚಿಮದ ಇಂತಹ ಒಂದು ಬಡಾವಣೆಯಲ್ಲಿ ವಾಸವಿದ್ದೆವು. ನನ್ನದೊಂದು ಮಗುವೂ ಹೀಗೆಯೆ ಚೈಲ್ಡ್ ಕೇರ್ ಸೆಂಟರಿಗೆ ಹೋಗುತ್ತಿತ್ತು.

ಹೀಗೆ ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳ ಬಗೆಗಿನ ವಿಕೃತಿಗಳನ್ನು ನಡೆಸಿರುವುದು ಹೊಸಸುದ್ದಿಯೇನಲ್ಲ. ಕಳೆದ ವರ್ಷ ನಮ್ಮ ರಾಣಿರಾಜ್ಯದ ರಾಜಧಾನಿಯಾದ ಬ್ರಿಸ್ಬೇನ್ ನಗರದಲ್ಲಿ ಆಷ್ಲೀ ಪೌಲ್ ಗ್ರಿಫಿತ್ ಎಂಬಾತ ತಾನು ಕೆಲಸ ಮಾಡಿದ್ದ ಕೇಂದ್ರವೊಂದರಲ್ಲಿ ಹಲವಾರು ಹೆಣ್ಣುಮಕ್ಕಳ ವಿರುದ್ಧ ಲೈಂಗಿಕ ಅಪರಾಧಗಳನ್ನು ಮಾಡಿದ್ದು ರಾಷ್ಟ್ರಮಟ್ಟದ ಸುದ್ದಿಯಾಗಿತ್ತು. ಇನ್ನೂ ಗಾಬರಿ ತರಿಸುವ ವಿಷಯವೆಂದರೆ ಈ ಎರಡೂ ಪ್ರಕರಣಗಳಲ್ಲಿ ಅಪರಾಧಿಗಳು ತಾವು ಮಾಡಿದ ಲೈಂಗಿಕ ಕೃತ್ಯಗಳನ್ನು ಚಿತ್ರಿಸಿದ್ದಾರೆ. ಬೇರೆಯವರಿಗೆ ಆ ಫೋಟೋಗಳನ್ನು, ವಿಡಿಯೋಗಳನ್ನು ಹಂಚಿದ್ದ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ. ಹೀಗಿದ್ದರೂ ಕೂಡ ಸದ್ದಿಲ್ಲದೆ ಇಂತಹ ವಿಕೃತ ಕಾರ್ಯಗಳು ಇನ್ನೂ ನಡೆಯುತ್ತಲೇ ಇರುವುದು ಬಹಳ ಬೇಸರ ತರುತ್ತದೆ. ಆ ಪುಟ್ಟ ಮಕ್ಕಳ ಪಾಲಕರಿಗೆ ಅದೆಷ್ಟು ನೋವಾಗಿರಬಹುದು. ಮನುಷ್ಯರ ಈ ವಿಕೃತ ಮನಸ್ಸುಗಳ ಬಗ್ಗೆ ಧಿಕ್ಕಾರವಿರಲಿ.

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ