ಯಾವುದೂ ಕಳೆದು ಹೋಗದ ಹೊರತಾಗಿ ಅದರ ಮೌಲ್ಯ ನಮಗೆ ಗೊತ್ತಾಗುವುದಿಲ್ಲ ಅನ್ನುವುದೇ ಈ ಬದುಕಿನ ಅತಿದೊಡ್ಡ ವಿಪರ್ಯಾಸ. ಪ್ರತೀ ಕ್ಷಣವನ್ನೂ ಉತ್ಕಟವಾಗಿ ಜೀವಿಸಬೇಕು ಅಂದುಕೊಳ್ಳುವ ಒಂದು ಫಿಲಾಸಫಿ ಶುರು ಆಗುವುದೇ ಈ ಕಳೆದುಹೋದ ಫೀಲ್ ಬಂದ ನಂತರವೇ. ಅಷ್ಟರಲ್ಲಾಗಲೇ ನಮ್ಮ ಅರ್ಧ ಆಯುಷ್ಯ ಮುಗಿದುಹೋಗಿರುತ್ತದೆ. ಇನ್ನು ದಿನಗಳು ಕಮ್ಮಿ ಅನ್ನುವ ಅರಿವಾಗುವಾಗ ಈ ಪ್ರತೀಕ್ಷಣವನ್ನೂ ಉತ್ಕಟವಾಗಿ ಬದುಕುವ ಆಸೆಯೊಂದು ಹುಟ್ಟಿಕೊಳ್ಳುತ್ತದೆ. ಆದರೆ ಹಾಗೆ ಬದುಕುತ್ತೇವಾ? ಹೇರಿಕೊಂಡ ಜವಾಬ್ದಾರಿಯ ಮೂಟೆಗಳನ್ನು ಇಳಿಸಿ ಹಗುರ ಆಗುವುದು ಸಾಧ್ಯನಾ? ಹಚ್ಚಿಕೊಂಡ ಬಣ್ಣವ ಅಳಿಸಿ ಸರಳವಾಗಿರೋದು ನಮ್ಮಿಂದಾಗುತ್ತಾ?
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಮೂರನೆಯ ಬರಹ
ಮಳೆಯ ದಟ್ಟಮೋಡಗಳು ಒತ್ತೊತ್ತಾಗಿ ಆಗಸದಲ್ಲಿ ಹಾಲು ತುಂಬಿದ ಹಸುವಿನ ಕೆಚ್ಚಲಿನಂತೆ ಇನ್ನೇನು ಸುರಿಯುವುದೊಂದೇ ತಡ ಎಂಬಂತೆ ಕಾಯುತ್ತಿದ್ದ ಒಂದು ಶ್ಯಾಮಲ ಸಂಜೆಯಲ್ಲಿ ಕನಸುಗಳ ಬೆನ್ನು ಹತ್ತಿ ಹೊರಟಿದ್ದೆ. ಮಳೆ ಸುರಿಯುವ ಮೊದಲಿನ ಕಡುಕಪ್ಪಾದ ಸಂಜೆಗಳ ಮೇಲೆ ನನಗ್ಯಾಕೋ ನಿಲ್ಲದ ನಿರಂತರ ಮೋಹ. ಅದೂ ಸ್ವಲ್ಪ ಗುಡುಗು ಸಿಡಿಲು ಇದ್ದರಂತೂ ಹಬ್ಬ ನನಗೆ. ಆದರೆ ಅದಕ್ಕಾಗಿ ಮತ್ತೆ ಕಾರ್ತೀಕದವರೆಗೆ ಕಾಯಲೇ ಬೇಕು. ಇಂತಹ ಸಂಜೆಗಳು ನನ್ನ ನೆನಪುಗಳನ್ನು, ಕನಸುಗಳನ್ನು ಕೆಣಕುತ್ತಾ ಕೆಣಕುತ್ತಾ ಇರುಳಿನ ಸೆರಗಲ್ಲಿ ಖಾಲಿಯಾಗುತ್ತವೆ.
ಮಳೆಗೂ ನೆನಪಿಗೂ ಬಲು ಹತ್ತಿರದ ಸಂಬಂಧ. ಕಾದ ಬೇಸಿಗೆಯ ನೆಲಕ್ಕೆ ಬಿದ್ದ ಮೊದಲ ಮಳೆ ಮನದಲ್ಲಿ ಹುದುಗಿ ಹೋಗಿದ್ದ ನೆನಪುಗಳಿಗೆಲ್ಲಾ ಮರುಜೀವ ಕೊಡುವ ಸೆಳೆ. ನೆಲದೊಡಲ ಬೀಜಗಳೆಲ್ಲಾ ಮಳೆಗೆ
ಮೊಳಕೆಯೊಡೆದಂತೆ ನೆನಪುಗಳು ಮರುಜೀವ ಪಡೆದು ಮನ ಹಸುರಾಗುತ್ತದೆ ಮತ್ತು ಅನಂತಮೂರ್ತಿಯವರ ಕವಿತೆಯೊಂದು ಅಕಾರಣವಾಗಿ ನೆನಪಾಗುತ್ತದೆ.
ಮತ್ತೆ ಮಳೆ ಹೊಯ್ಯುತಿದೆ – ಎಲ್ಲ ನೆನಪಾಗುವುದೆ
ಸುಖ ದುಃಖ, ಬಯಕೆ ಭಯ – ಒಂದೆ? ಎರಡೆ?
ನಿಜಕ್ಕೂ ಮಳೆಗೆ ಅಂಥಹ ಶಕ್ತಿ ಇದೆಯಾ? ಯಾಕೆ ಎಲ್ಲಾ ನೆನಪುಗಳು ಮನದಂಗಳಕ್ಕೆ ಧಾಂಗುಡಿಯಿಡುತ್ತವೆ ಮಳೆ ಸುರಿದ ಒಂದು ಸಂಜೆ? ಯಾಕೆ ಯಾರಿಗೋ ಕಾಲ್ ಮಾಡಿ ಮಾತಾಡುವ ಅಂತ ಅನ್ನಿಸುತ್ತದೆ? ಯಾಕೆ ಯಾರದ್ದೋ ಎದೆಗೊರಗಿ ಭಾವಗೀತೆಗಳನ್ನು ಕೇಳುವ ಮನಸ್ಸಾಗುತ್ತದೆ?
ಹೌದು ಮಳೆಗೆ ಮಾತ್ರ ನೆಲದಲ್ಲಿ ಅಡಗಿ ಕುಳಿತ ಬೀಜಕ್ಕೆ ಜೀವ ಕೊಡುವ ಶಕ್ತಿ ಇರುವುದು. ಸುಪ್ತವಾಗಿರುವುದನ್ನು
ಲೋಕಕ್ಕೆ ಪರಿಚಯಿಸುವ ಸಂಭ್ರಮ ಅದರದ್ದು. ಮಳೆ ಅಂದ್ರೆ ತೇವ ಮಳೆ ಅಂದ್ರೆ ಆದ್ರತೆ ಮಳೆ ಅಂದ್ರೆ ಭಾವ ಮತ್ತೆ ಮಳೆ ಅಂದ್ರೆ ನೆನಪುಗಳ ಮೇಳ. ಆದರೆ ನನ್ನ ಮಟ್ಟಿಗೆ ಮಳೆಗಾಲದ ಎಲ್ಲಾ ನೆನಪುಗಳು ನನ್ನನ್ನು ಬಾಲ್ಯಕ್ಕೆ ಕರೆದುಕೊಂಡು ಹೋಗುತ್ತವೆ.
ಮೊದಲ ದಿನದ ಶಾಲೆಗೆ ಅಳುತ್ತಾ ಹೋಗಿ, ಅಳುತ್ತಲೇ ಹಿಂದಿರುಗಿದಾಗ ಇಂತಹುದೇ ಒಂದು ಶ್ಯಾಮಲ ಸಂಜೆ! ಕಟಾವ್ ಆದ ಗದ್ದೆಯಲ್ಲಿ ಒಣಗಲು ಬಿಟ್ಟ ಬತ್ತದ ಸೂಡಿಗಳನ್ನು ಒದ್ದೆಯಾಗುವ ಮೊದಲೇ ಅಂಗಳ ಸೇರಿಸಲು ಹುರಿಹಗ್ಗ ತೆಗೆದುಕೊಂಡು ಅಪ್ಪನೊಂದಿಗೆ ಓಡುವುದೂ ಇಂತಹುದೇ ಮಳೆ ಮೋಡಗಳ ಸಂಜೆಗಳಲ್ಲಿ! ಬೈಲ್ ಗದ್ದೆಗಳಲ್ಲಿ ಕಟ್ಟಿದ ದನಕರುವನ್ನು ತರಲು ಅಮ್ಮನು ಓಡುವ ಉಸೇನ್ ಬೋಲ್ಟ್ ಓಟ! ಅಂಗಳದಲ್ಲಿ ಹಾಯಾಗಿ ಒಣಗುತ್ತಿದ್ದ ಅಡಿಕೆಗಳನ್ನು ಸಿಕ್ಕಿದ ಚೀಲಗಳಲ್ಲಿ ತುಂಬಿಸಿ, ಚೀಲ ಸಿಗದಿದ್ದರೆ ಬುಟ್ಟಿಗಳಲ್ಲಿ ತುಂಬಿಸುವ ಧಾವಂತಕ್ಕೆ ಕೆಲವು ಸಲ ಸೂರ್ಯನೂ ಇಣುಕುವುದುಂಟು ಮೋಡಗಳ ಮರೆಯಿಂದ. ಅರೆ! ಎಲ್ಲವೂ ಬಾಲ್ಯದ ನೆನಪುಗಳೇ. ಯಾಕೆ ಯಾವುದೋ ಪರಿಮಳ ಯಾವುದೋ ಸಂಜೆ ಯಾವುದೋ ಹಾಡು ಈಗಿನ ನೆನಪುಗಳಿಗೆ ಯಾಕೆ ಕನೆಕ್ಟ್ ಆಗಲ್ಲ? ಹೆಚ್ಚೆಂದರೆ ಮೊದಲ ಪ್ರೇಮಕ್ಕೆ ಎಲ್ಲೋ ಕೆಲವು ಸಲ ತಾಕಬಹುದು ಅನ್ನುವುದನ್ನು ಬಿಟ್ಟರೆ ಎಲ್ಲಾ ನೆನಪುಗಳು ನಮ್ಮನ್ನು ಒಯ್ಯುವುದು ಬಹುತೇಕ ಬಾಲ್ಯದ ಕಡೆಗೆ.
ಹಾಗೆ ನೋಡಿದರೆ ಎಲ್ಲರ ಬಾಲ್ಯವೂ ಶ್ರೀಮಂತವೇ. ಅದು ನಮ್ಮ ಈ ವ್ಯಾವಹಾರಿಕ ಲೋಕದ ಶ್ರೀಮಂತಿಕೆಗೆ ಸಂಬಂಧಪಟ್ಟದ್ದಲ್ಲ. ದೊಡ್ಡವರ ಕಣ್ಣಿನಲ್ಲಿ ನೋಡುವಾಗ ಮಾತ್ರ ಹೀಗೆ ಅನ್ನಿಸುವುದುಂಟು,
“ಪಾಪ ಅವನಿಗೆ ಬಾಲ್ಯದಲ್ಲಿ ಹಾಕ್ಲಿಕ್ಕೆ ಸರಿಯಾದ ಚಡ್ಡಿ ಕೂಡಾ ಇರ್ಲಿಲ್ಲ”
“ಮನೆತುಂಬಾ ಮಕ್ಳು. ಎರಡು ಹೊತ್ತಿನ ಊಟಕ್ಕೂ ಕಷ್ಟ ಇತ್ತು. ಹೇಗೋ ದೊಡ್ಡವರಾದ್ರು”
“ಎಲ್ಲಾ ಕೆಲ್ಸ ಮಾಡಿ ಅವಳು ಶಾಲೆಗೆ ಹೋಗ್ಬೇಕಿತ್ತು”
ಆದರೆ ಮಕ್ಕಳು ಹೇಗೋ ಅವರವರ ಚಟುವಟಿಕೆಗಳಿಗೆ ಸಮಯ ಖಂಡಿತವಾಗಿಯೂ ಹೊಂದಿಸಿರುತ್ತಾರೆ. ಅಂತಹ ಎಷ್ಟೋ ಪರಿಸ್ಥಿತಿಗಳಿಂದ ಸಾಗಿ ಈಗ ಬದುಕ ಸಂಧ್ಯಾಕಾಲದಲ್ಲಿ ಇರುವವರ ಬಳಿ ಕೇಳಿದ್ರೂ ಅವರವರ ಬಾಲ್ಯದ ಕುರಿತಾಗಿ ಹಿತಕರವಾದ ನೂರು ಅನುಭವಗಳನ್ನು ಹೇಳಿಯೇ ಹೇಳುತ್ತಾರೆ.
ಬಾಲ್ಯದ ನೆನಪು ಕೂಡಾ ಮಳೆಯಂತೆಯೇ ಹೃದಯವನ್ನು ಆರ್ದ್ರಗೊಳಿಸುತ್ತದೆ. ಕಾದ ನೆಲಕ್ಕೆ ಮಳೆಯ ಅಮೃತ ಸಿಂಚನವಾದ ಕೂಡಲೇ ಪ್ರಕೃತಿ ಹೊಸತನಕ್ಕೆ ತೆರೆದುಕೊಳ್ಳುವ ಹಾಗೆ ಯಾವುದೋ ಸಣ್ಣಮಾತಿನಿಂದ ನಡುವೆ ಗೋಡೆಗಳನ್ನು ಕಟ್ಟಿಕೊಂಡ ಸಂಬಂಧಗಳು ಕೂಡಾ ಬಾಲ್ಯದ ನೆನಪಿನಿಂದ ಮನಸ್ಸು ಮೃದುವಾಗಿ ಅಂತಃಕರಣ ಉಕ್ಕಿ ಮತ್ತೆ ಹೃದಯಗಳು ಬೆಸೆದುಕೊಳ್ಳುತ್ತವೆ. ಗೋಡೆಗಳು ತಾನಾಗಿಯೇ ಬಿದ್ದುಹೋಗಿ ಅಲ್ಲಿ ಬಾಂಧವ್ಯದ ಹೊಸ ಹೂವು ಅರಳಿ ಪರಿಮಳ ಬೀರುತ್ತದೆ.
ಕುವೆಂಪು ಬರೆದ ಮಹಾಕಾವ್ಯ ಶ್ರೀರಾಮಾಯಣ ದರ್ಶನಂನಲ್ಲಿ ವಾಲಿ ಸಾವಿನ ಕಾಲದಲ್ಲಿ ಹೇಳುವ ಮಾತೊಂದು ನೆನಪಿಗೆ ಬರುತ್ತದೆ. “ಬಾಳಂಚಿನೊಳ್ ನಿಂತು ಪೇಳ್ವೆನೀ ನನ್ನಿಯಂ: ಆ ಜಳ್ಳೆ ಗಟ್ಟಿ; ನಾಮ್ ಗಟ್ಟಿಯೆಂದರಿತುದೆಲ್ಲಂ ಜಳ್ಳು, ಬರಿ ಜಳ್ಳು! ಸಾವ್ ಗಾಳಿ ತೂರಲರಿವಪ್ಪುದಯ್!”
ಸಾವಿನ ಗಾಳಿ ಬೀಸತೊಡಗಿದಾಗ ಈ ಬಾಳಿನಂಚಿನಲ್ಲಿ ಅರಿವಾದ ಸತ್ಯವೆಂದರೆ ಬಾಲ್ಯದ ಆ ಕ್ಷಣಗಳು ಮಾತ್ರ ನಿಜದ ಬದುಕು. ಅದೇ ಗಟ್ಟಿಯಾದದ್ದು. ಮತ್ತೆ ಈ ಅಧಿಕಾರ ಸಂಪತ್ತು ಯಾವುದೆಲ್ಲಾ ಮಹತ್ವದ್ದು ಅಂತ ಅಂದುಕೊಂಡು ಭ್ರಮೆಯಲ್ಲಿ ಬದುಕಿದ್ದೆಲ್ಲವೂ ಬರೀ ಜಳ್ಳು. ಆ ಅಂತಿಮ ಕ್ಷಣಗಳಲ್ಲಿ ಸುಗ್ರೀವ ಆಂಜನೇಯನ ಜೊತೆ ಆಡಿದ ಬಾಲ್ಯದ ಆಟಗಳನ್ನು ವಾಲಿ ನೆನೆಯುತ್ತಾನೆ.

ಯಾಕೆಂದರೆ ಬಾಲ್ಯದ ಯಾವ ಸಂಬಂಧಗಳೂ ತೋರಿಕೆಯ ಬಂಧಗಳಲ್ಲ. ಕೋಪದಲ್ಲಿ ಮಾತುಬಿಟ್ಟದ್ದು ಮತ್ತೊಂದು ಭೇಟಿಗೆ ನೆನಪೇ ಇರದ ಹಾಗೆ ಒಬ್ಬರಿಗೊಬ್ಬರು ಜೊತೆಯಾಗುತ್ತಾರೆ. ಅದು ಯಾವ ಮುಖಗಳಿಗೂ ಮುಖವಾಡಗಳು ಹುಟ್ಟಿರದ ಕಾಲ. ಈ ಕಾಲವೇ ಬಹಳ ಮಹತ್ವದ ಕ್ಷಣ ಇಡಿಯ ಬದುಕನ್ನು ಹಿಂದಿರುಗಿ ನೋಡಿದರೆ. ಸಾವಿನ ಕೊನೆಯ ಅಂಕದಲ್ಲಿ ವಾಲಿ ಹೇಳುವ ಮಾತುಗಳು ನಮಗೆ ಬದುಕನ್ನು ಗ್ರಹಿಸುವ ಹೊಸ ದೃಷ್ಠಿಕೋನವನ್ನು ಕೊಡುತ್ತವೆ.
ವಾಲಿಯ ಈ ಪ್ರಕರಣ ಮೂಲ ರಾಮಾಯಣದಲ್ಲಿ ಹೇಗಿದೆ ಅಂತ ನನಗೆ ಗೊತ್ತಿಲ್ಲ. ಮೇಲಾಗಿ ಇದು ರಸ ಋಷಿ ಕುವೆಂಪು ಸೃಷ್ಠಿ ಇದ್ದರೂ ಇರಬಹುದು.ಆದರೆ ತುಂಬು ಜೀವನ ನಡೆಸಿದ ಅನೇಕರು ಹೇಳುವುದು ಕೂಡಾ ಇದನ್ನೇ.ಮನೆಯಲ್ಲಿನ ಹಿರಿಯ ಜೀವಗಳ ಹತ್ತಿರ ಕುಳಿತು ಅವರ ಮಾತನ್ನು ಕೇಳುವ ವ್ಯವಧಾನ ನಮಗಿದ್ದರೆ ಆಗ ನಮಗೂ ಈ ಅನುಭವ ಆಗುತ್ತದೆ. ಅವರೂ ತಮ್ಮ ಬಾಲ್ಯದ ಘಟನೆಗಳನ್ನು ನೆನೆಯುವುದೇ ಹೆಚ್ಚು. ಈಗಿನ ಸಂಬಂಧಗಳು ಹದಗೆಟ್ಟಿದ್ದರೂ ಬಾಲ್ಯದಲ್ಲಿ ನನ್ನ ಅಣ್ಣ ಹೀಗಿದ್ದ ಅಕ್ಕ ಎಲ್ಲಿ ಹೋದರೂ ನನ್ನ ಜೋಡು ಅಂತೆಲ್ಲಾ ಹೇಳುವಾಗ ಅವರ ಮುಖದಲ್ಲಿನ ಕಾಂತಿಯನ್ನು ಗಮನಿಸಬೇಕು. ಬಾಲ್ಯವನ್ನು ನೆನಪುಮಾಡಿಕೊಳ್ಳುವಾಗ ಮತ್ತೆ ಮಗುವೇ ಆಗಿಬಿಡುತ್ತಾರೆ. ಹಾಗಾಗಿ ಬದುಕಿನ ಈ ಭಾಗವೇ ಅತ್ಯಂತ ಗಟ್ಟಿ ಅನ್ನುವುದನ್ನು ನಾನೂ ನಂಬುತ್ತೇನೆ.
ಆದರೆ ಯಾವುದೂ ಕಳೆದು ಹೋಗದ ಹೊರತಾಗಿ ಅದರ ಮೌಲ್ಯ ನಮಗೆ ಗೊತ್ತಾಗುವುದಿಲ್ಲ ಅನ್ನುವುದೇ ಈ ಬದುಕಿನ ಅತಿದೊಡ್ಡ ವಿಪರ್ಯಾಸ. ಪ್ರತೀ ಕ್ಷಣವನ್ನೂ ಉತ್ಕಟವಾಗಿ ಜೀವಿಸಬೇಕು ಅಂದುಕೊಳ್ಳುವ ಒಂದು ಫಿಲಾಸಫಿ ಶುರು ಆಗುವುದೇ ಈ ಕಳೆದುಹೋದ ಫೀಲ್ ಬಂದ ನಂತರವೇ. ಅಷ್ಟರಲ್ಲಾಗಲೇ ನಮ್ಮ ಅರ್ಧ ಆಯುಷ್ಯ ಮುಗಿದುಹೋಗಿರುತ್ತದೆ. ಇನ್ನು ದಿನಗಳು ಕಮ್ಮಿ ಅನ್ನುವ ಅರಿವಾಗುವಾಗ ಈ ಪ್ರತೀಕ್ಷಣವನ್ನೂ ಉತ್ಕಟವಾಗಿ ಬದುಕುವ ಆಸೆಯೊಂದು ಹುಟ್ಟಿಕೊಳ್ಳುತ್ತದೆ. ಆದರೆ ಹಾಗೆ ಬದುಕುತ್ತೇವಾ? ಹೇರಿಕೊಂಡ ಜವಾಬ್ದಾರಿಯ ಮೂಟೆಗಳನ್ನು ಇಳಿಸಿ ಹಗುರ ಆಗುವುದು ಸಾಧ್ಯನಾ? ಹಚ್ಚಿಕೊಂಡ ಬಣ್ಣವ ಅಳಿಸಿ ಸರಳವಾಗಿರೋದು ನಮ್ಮಿಂದಾಗುತ್ತಾ?
ಇಲ್ಲ ಯಾವುದನ್ನೂ ನಾವು ಮಾಡುವುದಿಲ್ಲ. ನಮ್ಮ ಮುಂದೆ ಈ ಅಧಿಕಾರ ಅಂತಸ್ತು ಸೌಂದರ್ಯಗಳೇ ಮುಖ್ಯವಾಗಿ ಉಳಿದ ಯಾವುದೂ ಆಗ ನಮ್ಮ ಗಮನಕ್ಕೇ ಬಾರದ ಹಾಗೆ ಬದುಕಿಬಿಡುತ್ತೇವೆ. ವಾಲಿ ಬದುಕಿದ್ದೂ ಹಾಗೆಯೇ. ತಮ್ಮನನ್ನೇ ಸಂದೇಹಿಸಿ ರಾಜ್ಯದಿಂದ ಹೊರನೂಕಿ ತಮ್ಮನ ಹೆಂಡತಿ ರುಮೆಯನ್ನು ಬಂಧನದಲ್ಲಿಟ್ಟು ಅಧಿಕಾರ ಮೆರೆಯುವಾಗ ಈ ಯಾವುದೂ ನೆನಪಿಗೆ ಬರಲಿಲ್ಲ. ಸಾವಿನೆದುರು ಅಸಹಾಯಕನಾದಾಗ ಬದುಕನ್ನು ಬೇರೆ ರೀತಿ ಬದುಕಬಹುದಿತ್ತು ಅನ್ನುವುದು ನೆನಪಾಯ್ತು. ಬದುಕು ಯಾವತ್ತೂ ಮತ್ತೊಂದು ಅವಕಾಶ ಕೊಡುವುದೇ ಇಲ್ಲ. ಎಲ್ಲಿ ನಿಂತಿದೆಯೋ ಅಲ್ಲಿಂದ ಮನಸ್ಸು ಮಾಡಿದರೆ ಹೊಸ ಬದುಕು ಪ್ರಾರಂಭಿಸಬಹುದು. ಆದರೆ ಮತ್ತೆ ಮೊದಲಿನಿಂದ ಶುರು ಮಾಡುವುದು ಹೇಗೆ?
ಇದಕ್ಕೆ ನಮಗೆ ಬಾಲ್ಯದ ನೆನಪುಗಳು ಸಹಾಯಕ್ಕೆ ಒದಗುತ್ತವೆ. ಆ ನೆನಪುಗಳು ನಮ್ಮನ್ನು ಮೃದುಗೊಳಿಸಿ ಮತ್ತೆ ಮಗುವಾಗಿಸುತ್ತವೆ. ಹೊಸದಾಗಿ ಬದುಕು ಆರಂಭಿಸುವ ಮತ್ತೊಂದು ಅವಕಾಶ ನೀಡುತ್ತವೆ.
ಕೊನೆಯ ಬಾರಿಗೆ ಸುಗ್ರೀವ ವಾಲಿಯನ್ನು ಕೆಣಕಿ ಯುದ್ಧಕ್ಕೆ ಆಹ್ವಾನಿಸುವಾಗ ತಾರೆ ವಾಲಿಯನ್ನು ತಡೆದು ಹೇಳುವ ಮಾತುಗಳು ಬಹಳ ಮುಖ್ಯ ಅನ್ನಿಸುತ್ತದೆ ನನಗೆ.
“ನಿಮ್ಮಿವರೆಳೆತನದ ಲೀಲೆಯಂ, ತಾರುಣ್ಯದೋಲದುಯ್ಯಾಲೆಯಂ ನೆನೆ, ಪಿಂತೆ ನಿಮ್ಮೊಳಿರ್ದಳ್ಕರೆಯ ಸಗ್ಗಮಂ ನೆನೆ”
ಅಂತ ತಾರೆ ತಮ್ಮ ಸುಗ್ರೀವನ ಜೊತೆಗಿನ ಬಾಲ್ಯದ ನೆನಪುಗಳನ್ನು ನೆನೆಯುವಂತೆ ಹೇಳಿದಾಗ ವಾಲಿ ಶಾಂತನಾಗುತ್ತಾನೆ. ಬಾಲ್ಯದಲ್ಲಿ ತಮ್ಮನ ಜೊತೆಗಿನ ಚಿತ್ರಗಳೆಲ್ಲಾ ನೆನಪಿಗೆ ತಂದುಕೊಂಡು ಮುಗ್ದನಾಗುತ್ತಾನೆ.
ತಮ್ಮನಂ, ಅಣ್ಣ ಬಾ ಬಾರೆಂದು ಜೊಲ್ಲ ತೊದಳಿಂ ಚೀರ್ವ ಸಣ್ಣ ಸುಗ್ರೀವನಂ, ನೋಳ್ಪರಾ ಕಣ್ಮಣಿಯ ಚಿಣ್ಣನಂ, ಕಂದ ಸುಗ್ರೀವನಂ, ತನ್ನೊಲಿದ ಮುದ್ದು ಸುಗ್ರೀವನಂ ಬೆನ್ನಿನೊಳ್ ಪೊತ್ತು, ತಾಯ್ ಕಂದ ಬಾರೆನ್ನುತಿರೆ, “ಉಪ್ಪು ಬೇಕೇ ಉಪ್ಪು?” ಎನುತೆ ತಾಂ ಪರಿದಾಡುತನಿಬರಂ ನಗಿಸಿದಾ ಚಿಕ್ಕಂದಿನೊಂದು ಚಿತ್ರಂ ಸ್ಮೃತಿಗೆ ಮೈದೋರೆ, ರೋಷಚ್ಯುತಂ ವಾಲಿ ಶಾಂತನಾದನ್, ಮೈತ್ರಿ ಸಂಚರಿಸಿದುದು ಮನದಿ.
ಎಷ್ಟು ಚಂದದ ಬಾಲ್ಯದ ಚಿತ್ರಗಳನ್ನು ಕಡೆದುಕೊಡುತ್ತಾರೆ ರಸ ಋಷಿ. ಜೊಲ್ಲ ಬಾಯಿಂದ ತೊದಲುತ್ತಾ ಅಣ್ಣ ಬಾ ಅಂತ ಕರೆವ ಸಣ್ಣ ಸುಗ್ರೀವನ ನೆನಪು ಬಂದು ವಾತ್ಸಲ್ಯ ಪ್ರೀತಿ ಉಕ್ಕಿ ಆ ಬಾಲ್ಯದ ಆಟಗಳನ್ನು ನೆನಯುತ್ತಾ ವಾಲಿ ಮತ್ತೆ ಮಗುವಾಗುತ್ತಾನೆ. ವೈರ ಮರೆತು ಮತ್ತೆ ಬದುಕನ್ನು ಹೊಸದಾಗಿ ಆರಂಭಿಸುವ ಮನಸ್ಸು ಮಾಡುತ್ತಾನೆ. ಯುದ್ಧದ ನೆಪದಿಂದ ತಮ್ಮನಿಗೆ ಮತ್ತೆ ಉಪ್ಪು ಬೇಕೇ ಉಪ್ಪು ಆಟ ನೆನಪಿಸಿ ಎತ್ತಿಕೊಂಡು ತಂದು ರುಮೆಗೆ ಒಪ್ಪಿಸುವ ಮನಸ್ಸು ಮಾಡುತ್ತಾನೆ. ಬಾಲ್ಯದ ನೆನಪುಗಳಿಗೆ ಇರುವ ಆ ಶಕ್ತಿಯನ್ನು ವಾಲಿಯ ಹೃದಯಪರಿವರ್ತನೆಗೆ ಕುವೆಂಪು ಬಹಳ ಸಶಕ್ತವಾಗಿ ಬಳಸಿಕೊಂಡಿದ್ದಾರೆ.

ಬದುಕಿನ ಉತ್ಕಟ ಕ್ಷಣಗಳಲ್ಲಿ ಧರ್ಮಸಂಕಟಗಳಲ್ಲಿ ಸಿಲುಕುವಾಗ ನಾವೊಮ್ಮೆ ನಮ್ಮ ಬಾಲ್ಯವನ್ನು ನೆನೆಯಬೇಕು. ಆಗ ಹೃದಯದ ಮಣ್ಣು ಮತ್ತೆ ಹಸಿಯಾಗುತ್ತದೆ. ಪ್ರೀತಿಯ ಗಡಿಗಳು ವಿಸ್ತಾರಗೊಳ್ಳುತ್ತದೆ. ಸಂಬಂಧಗಳು ಮತ್ತೆ ಬೆಸೆದು ಅಂತಃಕರಣ ಚಿಮ್ಮುತ್ತದೆ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು
