ಬೆಚ್ಚಗಿನ ಸ್ವೆಟರ್, ರಾತ್ರಿ ಚಳಿಗೆ ಬೆಚ್ಚಗಿನ ಕಂಬಳಿ, ಮನೆಯ ಹೆಂಚಿನ ಮೇಲಿಂದ ಮಳೆ ನೀರು ಇಳಿಯುವ ಜೋಗುಳದಂತಹ ಶಬ್ದ, ಅಕ್ಕನ ಎಂಟು ತಿಂಗಳ ಮಗಳು ತೊಟ್ಟಿಲಿನಿಂದ ಹೊರಗೆ ತಿಳಿ – ಬಿಳಿ ಕಣ್ಣು ಬಿಟ್ಟು ಜಿಟಿಜಿಟಿ ಮಳೆಯ ರಭಸ ನೋಡುವ ಕುತೂಹಲದ ಕೂಸು. ಹಬೆಯಾಡುವ – ಹೊಗೆಯಾಡುವ ಸ್ನಾನದ ಮನೆ ಕಂಡರೆ ಸುಡುಸುಡು ನೀರನ್ನು ಒಂದೆರಡು ಕಡಾಯ ಮೈಮೇಲೆ ಸುರಿದುಕೊಳ್ಳುವ ಬಯಕೆ – ಹೊರಗಿನ ಕೆಲಸ ಮುಗಿಸಿ ಬಂದವರ ಮನಸ್ಸನ್ನು ಆಯಸ್ಕಾಂತದಂತೆ ಎಳೆಯುತ್ತಲೇ ಇರುತ್ತದೆ. ಕಾದಂಬರಿಯ ಗೀಳು ಹಿಡಿಸುತ್ತದೆ.
ಮಾನ್ಸೂನ್ ಕುರಿತು ಮಹಾಲಕ್ಷ್ಮೀ. ಕೆ. ಎನ್. ಬರಹ ನಿಮ್ಮ ಓದಿಗೆ
ಬೇಸಿಗೆಯಲ್ಲಿ ಬಿಸಿಯಾದ ಭೂಭಾಗ, ಸಮುದ್ರದಿಂದ ಹೆಚ್ಚು ತೇವಾಂಶವನ್ನು ತೆಗೆದುಕೊಂಡು ಬರುವ ದಕ್ಷಿಣ ಪಶ್ಚಿಮ ಮಾನ್ಸೂನ್ ಮಾರುತಗಳು, ಪಶ್ಚಿಮ ಘಟ್ಟ ಅಥವಾ ಹಿಮಾಲಯ ಪರ್ವತದ ಮೇಲೆರಿ ಘನೀಕರಣಗೊಂಡು ಮೋಡಗಳಾಗಿ ರೂಪಗೊಂಡು ಮಳೆಯಾಗಿ ಬೀಳುವ ಮಳೆಯೇ ಮಾನ್ಸೂನಿನ ಮಳೆ.
ಭಾರತದಲ್ಲಿ ಮಾನ್ಸೂನಿನ ವೈಶಿಷ್ಟ್ಯಗಳು:
ಮಳೆ ಜೂನ್ನಿಂದ ಸೆಪ್ಟೆಂಬರ್ವರೆಗೂ ವ್ಯಾಪಿಸುತ್ತದೆ. ಈ ಕಾಲಘಟ್ಟದಲ್ಲಿ ಬಹುಮಾನ್ಯ ಮಳೆ ಉಂಟಾಗುತ್ತದೆ. ಪಶ್ಚಿಮ ಘಟ್ಟಗಳು ಮತ್ತು ಈಶಾನ್ಯ ರಾಜ್ಯಗಳು ಅತ್ಯಧಿಕ ಮಳೆ ಪಡೆಯುವ ಪ್ರದೇಶಗಳಾಗಿವೆ. ನಮಗೆ ಗೊತ್ತಿರುವಂತೆ ಕೃಷಿ ಮತ್ತು ಆರ್ಥಿಕತೆಗೆ ಜನರು ಮಾನ್ಸೂನ್ ಮೇಲೆ ಅವಲಂಬಿತರಾಗಿದ್ದು, ಬೆಳೆಗೆ ಅಗತ್ಯ ನೀರಿನ ಪೂರೈಕೆ ಆಗುತ್ತದೆ.
ಮಳೆ ಮತ್ತು ಮಣ್ಣಿನ ಮಧುರ ಸಂಗಮವಾಗಿ,
ಜೀವವೈವಿಧ್ಯತೆಯ ನವಚೈತನ್ಯಕ್ಕೆ ತೊದಲಾಗುವ ಕಾಲ.
ಕ್ರಿಮಿಕೀಟಗಳು, ಉಭಯಚರಗಳು, ಹುಳುಗಳು, ಸಸ್ಯಜಾತಿಗಳು, ತಮ್ಮ ಜೀವನದ ಚಕ್ರವನ್ನು ಪುನಃ ಪ್ರಾರಂಭಿಸುತ್ತವೆ. ಮರಳುಗಾಡಿನಲ್ಲಿಯೂ ಕೂಡ ಕೆಲವು ಜಾತಿಯ ಹುಳುಗಳು ಹಾಗೂ ಹಕ್ಕಿಗಳು ಈ ಕಾಲದಲ್ಲಿ ಕಾಣಿಸಿಕೊಳ್ಳುತ್ತವೆ.
ಕೆರೆ, ನದಿ, ಸರೋವರಗಳು ಜೀವ ಪಡೆಯುತ್ತವೆ.ಈ ಜಲಸಂಪತ್ತು ಜಲಚರಗಳಿಗೆ ಆಶ್ರಯವಾಗುತ್ತದೆ. ಮಲೆನಾಡು, ಪಶ್ಚಿಮಘಟ್ಟಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳು, ಕವಿದ ಕಪ್ಪು ಮೋಡಗಳು, ಸಡಿಲ ಜಲಧಾರೆ, ಹಸಿರಿನ ನುಡಿ – ಇದೆಲ್ಲವೂ ಮಾನ್ಸೂನಿನಲ್ಲಿ ಮನಸೂರೆಗೊಳಿಸುತ್ತದೆ.
ಪ್ರಕೃತಿಯ ಸದ್ದು ಮದ್ದಿನ ಹಬ್ಬ ಈ ಮಾನ್ಸೂನ್.. ಬಾಲ್ಯದ ನೆನಪುಗಳನ್ನು ಮತ್ತೆ ಜೀವಂತಗೊಳಿಸುತ್ತದೆ. ಹಾಗಾಗಿ ಮಳೆಗಾಲದಲ್ಲಿ ಮಕ್ಕಳ ಆಟಗಳಿಗೇನು ಕಡಿಮೆ ಇಲ್ಲ. ಪ್ರಕೃತಿಯೊಂದಿಗೆ ಬೆರೆಸಿಕೊಳ್ಳುವ ಅವಕಾಶ, ಬಾಲ್ಯವನ್ನು ಮತ್ತೆ ಹೊಸದಾಗಿ ಬಾಳುವಂತಾಗಿಸುತ್ತದೆ. ಮನೆ ಮುಂದೆ ಹರಿಯುವ ನೀರಿಗೆ ಕಾಗದದ ದೋಣಿ ಬಿಡುವುದರಿಂದ ಬರುವ ನೆನಪೂ ಮಳೆಯಂತೆ ತಂಪಾಗಿರುತ್ತದೆ. ಜೋರು ಗಾಳಿಯ ಬಡಿತಕ್ಕೆ ಕೊಡೆ ಹಿಂದುಮುಂದಾಗು
ವುದು, ಹೃದಯದ ಮೂಲೆಯಲ್ಲಿ ಮೆಲ್ಲನೆ ಹುಟ್ಟುವ ಪ್ರೀತಿಗೆ ಮೊದಲ ಸಂಗಾತಿಯಾಗುವುದು ಈ ಮಳೆ.
ಲೈಬ್ರರಿಯ ಕಿಟಕಿಯ ಬಳಿಯ ನಿಂತು ಹೊರಗಿನ ಮಳೆಯನ್ನೇ ನೋಡುತ್ತಿದ್ದ ಕ್ಷಣದಲ್ಲಿ ಗೋಚರಿಸಿದ ಆ ಕನಸಿನ ಹುಡುಗ. ಮನೆಯ ಕೋಣೆಯ ಕಿಟಕಿಯಿಂದ ಒಳನುಗ್ಗಿದ ಆ ತಂಪು ಗಾಳಿ ನಮ್ಮ ನೋವು, ಒತ್ತಡಗಳೆಲ್ಲವನ್ನೂ ತೊಳೆಯುತ್ತದೆ.ಬಸ್ಸ್ಟ್ಯಾಂಡಿನಲ್ಲಿ ಕುಳಿತು ಬಸ್ಸಿಗೆ ಕಾಯುತ್ತಿರುವ ತರುಣರ ಕಣ್ಣು, ಬಣ್ಣ – ಬಣ್ಣದ ಕೊಡೆ ಹಿಡಿದು ಬರುತ್ತಿರುವ ಹುಡುಗಿಯರ ಕಡೆಗೆ ಹೊರಳುತ್ತದೆ. ಇನ್ನೂ ಕಾಲೇಜಿನಿಂದ ಮನೆಗೆ ಬರುವಾಗ ಸಂಜೆ ಹಿಡಿದ ಮಳೆ ಬಸ್ನ ಕಿಟಕಿಯಿಂದ ಹರಿದುಬರುವಾಗ ಓಡುವ ಕಾಲಘಟ್ಟವನ್ನು ಸ್ಥಗಿತಗೊಳಿಸಿದಂತಾಗುತ್ತದೆ.
ಬಿಸಿಬಿಸಿ ಚಹಾ, ಕಾಫಿ, ಮೆಣಸಿನಕಾಯಿ ಬಜ್ಜಿ – ಈ ಮಳೆಗೆ ಹೊಸದಾಗಿ ಚಿಗುರೊಡೆಯುತ್ತಿದ್ದ ಹರೆಯದ ಪ್ರೀತಿ, ಪ್ರೀತಿಪಾತ್ರ ಹುಡುಗನೊಟ್ಟಿಗೆ ಮಾತಾಡಬೇಕೆಂಬ ಹೃದಯದ ಕಾತುರ!
ಬೆಚ್ಚಗಿನ ಸ್ವೆಟರ್, ರಾತ್ರಿ ಚಳಿಗೆ ಬೆಚ್ಚಗಿನ ಕಂಬಳಿ, ಮನೆಯ ಹೆಂಚಿನ ಮೇಲಿಂದ ಮಳೆ ನೀರು ಇಳಿಯುವ ಜೋಗುಳದಂತಹ ಶಬ್ದ, ಅಕ್ಕನ ಎಂಟು ತಿಂಗಳ ಮಗಳು ತೊಟ್ಟಿಲಿನಿಂದ ಹೊರಗೆ ತಿಳಿ – ಬಿಳಿ ಕಣ್ಣು ಬಿಟ್ಟು ಜಿಟಿಜಿಟಿ ಮಳೆಯ ರಭಸ ನೋಡುವ ಕುತೂಹಲದ ಕೂಸು. ಹಬೆಯಾಡುವ – ಹೊಗೆಯಾಡುವ ಸ್ನಾನದ ಮನೆ ಕಂಡರೆ ಸುಡುಸುಡು ನೀರನ್ನು ಒಂದೆರಡು ಕಡಾಯ ಮೈಮೇಲೆ ಸುರಿದುಕೊಳ್ಳುವ ಬಯಕೆ – ಹೊರಗಿನ ಕೆಲಸ ಮುಗಿಸಿ ಬಂದವರ ಮನಸ್ಸನ್ನು ಆಯಸ್ಕಾಂತದಂತೆ ಎಳೆಯುತ್ತಲೇ ಇರುತ್ತದೆ. ಕಾದಂಬರಿಯ ಗೀಳು ಹಿಡಿಸುತ್ತದೆ.
ಒಣಗದ ಬಟ್ಟೆಗಳನ್ನು ಹಾಕಲು ಮನೆಯೊಳಗಿನ ಕೋಣೆಯಲ್ಲಿಯೇ ಮಾಡಿದ ವ್ಯವಸ್ಥೆ. ಅಜ್ಜಿ ಮನೆಯಲ್ಲಿ ಬೆಳೆಯುತ್ತಿರುವ ಪುಟ್ಟ ರಾತ್ರಿ ಹೋಮ್ವರ್ಕ್ ಬರೆಯುತ್ತಿದ್ದಾಗ, ಅಜ್ಜಿ ಅಡುಗೆ ಮಾಡುತ್ತಿದ್ದಾಗ, ತಾತ ಬಟ್ಟೆ ಹೊಲಿಯುತ್ತಿದ್ದಾಗ ಮಳೆಯ ಕಾರಣದಿಂದ ಕರೆಂಟ್ ಹೋಗಿ ಎಲ್ಲ ಕೆಲಸಗಳು ಅಲ್ಲಿಯೇ ನಿಂತು ಒಲೆ ಮುಂದೆ ಕುಳಿತ ಅಜ್ಜಿಯ ತೊಡೆ ಮೇಲೆ ಮಲಗಿ ತಾತನ ಕಥೆ ಕೇಳುತ್ತಾ ಸ್ವಲ್ಪ ಘಳಿಗೆ ವಿಶ್ರಮಿಸಲು ಅನುವುಮಾಡಿಕೊಡುವ ಕಾಲ ಈ ಮಳೆಗಾಲ.
ಕೆರೆ ಅಥವಾ ಹರಿವ ಹಳ್ಳಗಳಲ್ಲಿ ಮೀನು ಹಿಡಿಯುವ ಮಕ್ಕಳ ಸಾಹಸ – ಮೀನು ಸಿಕ್ಕದಿದ್ದರೂ ಸಂತೋಷವಂತೂ ಸಿಕ್ಕೆ ಸಿಗುತ್ತದೆ.
ಮಳೆಯ ತೀವ್ರತೆ ಹೆಚ್ಚಾದಾಗ, ನೀರಿನ ನಿಲ್ಲುವಿಕೆಯಿಂದ ಉಂಟಾಗುವ ಟೈಫಾಯ್ಡ್, ಅತಿಸಾರ, ಡೆಂಗ್ಯೂ ಜ್ವರ, ಕೆಮ್ಮು, ನೆಗಡಿ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆ ಊರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಬಾಗಿಲು ಮದ್ದು ಹಿಡಿದು ತೆರೆದೇ ಇರುತ್ತದೆ. ಗರ್ಭಿಣಿಯರಿಗೆ, ಬಾಣಂತಿಯರಿಗೆ, ಚಿಕ್ಕ ಮಕ್ಕಳಿಗೆ ಆರೋಗ್ಯ ಸಲಹೆಗಳು, ಮುನ್ನೆಚ್ಚರಿಕಾ ಕ್ರಮಗಳನ್ನು ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಆಗಾಗ ತಿಳಿಸುತ್ತಲೇ ಇರುತ್ತಾರೆ.
ಗದ್ದೆ ನಾಟಿ ಮಾಡುವ ವೇಳೆಗೆ ಮಳೆ ನಿತ್ಯ ಸಂಗಾತಿ. ಈ ಮಾನ್ಸೂನ್ ಮಳೆಗಾಲ ನಮ್ಮ ಭಾರತದ ಕೃಷಿ ಆಧಾರಿತ ಆರ್ಥಿಕತೆಗೆ ಜೀವನಾಡಿ. ಹಳ್ಳಿ ಬಾಳಿನ ಸಪ್ತಸ್ವರಗಳನ್ನು ನುಡಿಸುವುದು ಈ ಮಳೆಗಾಲ. ಮುಗ್ಧ ನಗು, ಸ್ನೇಹ, ಒಲುಮೆ, ಸಾಹಿತ್ಯ, ಸಂಗೀತ ಎಲ್ಲವೂ ಮಳೆಯೊಂದಿಗೇ ತಣ್ಣಗಿರುತ್ತವೆ.
