ಈ ಮಿಡಲ್ ಬಂದ ಒಂದು ತಿಂಗಳಲ್ಲಿ ಅಂತ ಕಾಣ್ಸುತ್ತೆ ಹೆಗಡೆ ಸಾಹೇಬರು ಎಲ್ಲೋ ಭಾಷಣ ಮಾಡುತ್ತಾ ಶೇಖಡಾ ಹತ್ತರಷ್ಟು ಉಳಿಸಿ ಸರ್ಕಾರದಲ್ಲಿ ಇಡಿ ಅಂತ ಹೇಳಿದರೆ ಜನ ತಮಾಷೆ ಮಾಡ್ತಾರೆ ಅಂತ ಹೇಳಿದ್ದರು. ಸರ್ಕಾರದ ವರಿಷ್ಠರು ಸಹಾ ಈ ಮಿಡಲ್‌ಗಳನ್ನೂ ಆಸಕ್ತಿಯಿಂದ ಓದುತ್ತಾರೆ ಅಂತ ಗೊತ್ತಾಗಿತ್ತು. ಮಿಡಲ್ ಮೋಡಿಯಲ್ಲಿ ಕತೆ ನಿಂತೆ ಬಿಡ್ತು ಅಂತ ಅನಿಸಲಿಲ್ಲ. ಕಾರಣ ಮನಸು ಪೂರ್ತಿ ಮಿಡಲ್ ಹಾಗೂ ಹಾಸ್ಯ ಲೇಖನಗಳತ್ತ ಪೂರ್ಣ ವಾಲಿಬಿಟ್ಟಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೪ನೇ ಬರಹ ನಿಮ್ಮ ಓದಿಗೆ
ಕತೆ ಬರೆಯುವುದರಿಂದ ಮಿಡಲ್‌ಗಳ ಕಡೆ ಹಾರಿದ ಸನ್ನಿವೇಶ ವಿವರಿಸಿ ಹೀಗೆ ಮುಂದುವರೆದಿದ್ದೆ.
….ಒಂದು ಉಪಾಯ ಅದೇ ಕಂಡು ಹಿಡಿಯಿತು.
“ಕತೆ ಬರೆದರೆ ಅದು ಅಸ್ವೀಕೃತವಾಗಿ ವಾಪಸ್ ಬಂದರೆ ಬೇರೆ ಬೇರೆ ಪತ್ರಿಕೆಗೆ ರವಾನಿಸಬೇಕು. ಅದರಿಂದ ಕತೆ ಬರೆಯೋದು ಕಮ್ಮಿ ಮಾಡ್ಕೋ. ಅದರ ಬದಲು ಮಿಡಲ್ ಬರಿ. ಹೇಗಿದ್ದರೂ ಅದು ರಾಜಕೀಯದ್ದು. ರಿಲೀವೆನ್ಸ್ ಕಡಿಮೆ ಆಗುತ್ತೆ ಬೇರೆ ಕಡೆ ಕಳಿಸಬೇಕು ಅಂತ ಅನಿಸೋದಿಲ್ಲ. ಜತೆಗೆ ಇದು ವಾಪಸ್ ಬರಲಿ ಅಂತ ವಾಪಸ್ ಪ್ರಯಾಣಕ್ಕೆ ಸ್ಟಾಂಪ್ ಇಡುವುದು ಸಹ ಬೇಡ…” ಈ ಐಡಿಯ ಹೇಗೆ ವರ್ಕ್ ಮಾಡಿತು ಅಂದರೆ ರಿಟರ್ನ್ ಜರ್ನಿ ಸ್ಟಾಂಪ್ ಇಲ್ಲದೇ ಹೇರಳವಾಗಿ ಮಿಡಲ್‌ಗಳು ಹೋದವು ಹೋದವು ಹೋದವು. ಕೆಲವು ಸಲ ದಿವಸಕ್ಕೆ ಐದು ಆರು ಹೋಗಿದ್ದೂ ಸಹ ಉಂಟು. ಹೀಗೆ ಹೋದವು ಎಲ್ಲವೂ ಪ್ರಿಂಟ್ ಆಗ್ತಾ ಇರಲಿಲ್ಲ. ಆದರೆ ಒಂದು solace ಇರ್ತಾ ಇತ್ತು. ಮನಸಿಗೆ ಬಂದದ್ದು ಪೆನ್ ಪೇಪರ್ ಮೂಲಕ ಕಕ್ಕಿದ್ದು. ಶ್ರೀ ಕೃಷ್ಣ ಪರಮಾತ್ಮನ ನಿನ್ನ ಕರ್ಮ ನೀನು ಮಾಡು, ಅದರ ಫಲದ ಬಗ್ಗೆ ಚಿಂತೆ ಬೇಡ (ಕರ್ಮಣ್ಯೇ ವಾಧಿಕಾರಸ್ತೆ…… ಅಂತೇನೋ ಒಂದು ಶ್ಲೋಕ ಗೀತೆಯಲ್ಲಿದೆ)ಈ ಮಾತಿನಲ್ಲಿ ಅತಿಯಾದ ನಂಬಿಕೆ ಹುಟ್ಟಿ ಬೆಳೆಯಿತು. ಬರೆಯೋದು ನಿನ್ನ ಕರ್ಮ, ಪತ್ರಿಕೆಗಳಿಗೆ ಕಳಿಸೋದು ಸಹ ಒಂದು ಕರ್ಮ. ಪ್ರಿಂಟ್ ಆಗತ್ತೋ ಬಿಡುತ್ತೋ ಅದರ ಬಗ್ಗೆ ಚಿಂತೆ ಬೇಡ(ಅದು ಪತ್ರಿಕೆಯ ಕರ್ಮ… ಇದು ನಾನು ಸೇರಿಸಿದ್ದು)ನಿನ್ನ ಕರ್ಮ ನೀನು ಮಾಡು. ಅದರ ಫಲದ ಬಗ್ಗೆ ಚಿಂತೆ ಬಿಡು………! ಇದು ಅಂದರೆ ಈ ಹುಚ್ಚು ಹೇಗೆ ಹತ್ತಿತು ಎಂದರೆ ಒಂದೇ ಹೆಸರಲ್ಲಿ ಲೇಖನಗಳು ಹೀಗೆ ಹೋದರೆ ಪ್ರಿಂಟು ಆಗುತ್ತೋ ಇಲ್ಲವೋ ಎನ್ನುವ ಯೋಚನೆ ಬಂದಿತಾ? ಅದರಿಂದ ಮತ್ತೆ ಕೆಲವು ಗೂಢ ನಾಮಗಳು ಹುಟ್ಟಿದವು ಮತ್ತು ಒಂದೇ ಮನುಷ್ಯ ಇಷ್ಟೊಂದು ಗೂಢ ನಾಮ ಇರಿಸಿಕೊಳ್ಳಲು ಸಾಧ್ಯವೇ ಎನ್ನುವಷ್ಟರ ಮಟ್ಟಿಗೆ ಇದು ಬೆಳೆಯಿತು. ಎಷ್ಟೋ ವರ್ಷಗಳ ನಂತರ ನನ್ನ ಬಯೋಡೇಟಾ ಬರೆಯಲು ಹೊರಟಾಗ ಹಲವು ಗೂಢನಾಮಗಳು ಮರೆತೇ ಹೋಗಿದ್ದವು!
ಮುಂದೆ…..
ವಾರಕ್ಕೆ ಅಷ್ಟೊಂದು ಒಂದೇ ಹೆಸರಲ್ಲಿ ಪ್ರಕಟಿಸುವುದು ಪತ್ರಿಕೆಯವರಿಗೆ ಇರಸು ಮುರುಸು ಉಂಟು ಮಾಡಬಹುದು ಎಂದು ಅನಿಸಿತಾ? ಈ ಅನಿಸಿಕೆ ಸುಮಾರು ಮೂವತ್ತು ನಲವತ್ತು ಮಿಡಲ್‌ಗಳು ಪ್ರಕಟವಾದ ನಂತರ ಹುಟ್ಟಿದ್ದು. ಸರಿ ಮೂಲ ಗೂಢ ನಾಮದ ಜತೆಗೆ ಮತ್ತೆ ಕೆಲವು ಹುಟ್ಟಿದವು. ಕೆಲವರಿಗೆ ಮಾತ್ರ ಒಬ್ಬರೇ ಈ ಹೆಸರಲ್ಲಿಯೂ ಬರೆಯುತ್ತಾರೆ ಅನಿಸಿರಬಹುದು. ಆದರೆ ಓದುಗರು ಲೇಖನ ಪ್ರಕಟ ಆದ ಆದ ಹಾಗೆ ಅದನ್ನು ಬರಮಾಡಿಕೊಂಡರು. ಪತ್ರಿಕೆಯಲ್ಲಿ ಇಂತಹ ಲೇಖನಗಳ ಬಗ್ಗೆ ಓದುಗರ ಪ್ರತಿಕ್ರಿಯೆಗೆ ಅಂತ ಬೇರೆ ಕಾಲಂ ಇರಲಿಲ್ಲ. ಭಾನುವಾರದ ಸಂಚಿಕೆಯ ಬರಹಗಳಿಗೆ ಓದುಗರ ಪ್ರತಿಕ್ರಿಯೆ ಒಂದು ರೀತಿ ಸೀಮಿತವಾಗಿತ್ತು. ಮಿಡಲ್ ಓದುವ ಗೆಳೆಯರ ಮೂಲಕ ಅವರ ಇವರ ಅನಿಸಿಕೆ ಗೊತ್ತಾಗುತ್ತಾ ಇತ್ತು. ಬೇರೆ ಓದುಗರ ಅನಿಸಿಕೆ ಗೊತ್ತಾಗುತ್ತಾ ಇರಲಿಲ್ಲ. ಕೆಲವು ಸಲ ಇದು ಬೇರೆ ರೀತಿಯಲ್ಲಿ ಮೆದುಳಿಗೆ ಅಪ್ಪಳಿಸುತ್ತಾ ಇದ್ದವು. ಈಗ ಅದರ ಒಂದು ಪುಟ್ಟ ನೆನಪು.. ಅವತ್ತು ತಾನೇ ಒಂದು ಮಿಡಲ್ ಪ್ರಕಟ ಆಗಿತ್ತು. ಅದರಲ್ಲಿ ಗಂಡನನ್ನು ಹೆಂಡತಿ ನಪುಂಸಕ ಲಿಂಗದಲ್ಲಿ ಹೇಳುತ್ತಾಳೆ. ಅದು ಹೀಗೆ. “ನಮ್ಮದಕ್ಕೆ ಅಷ್ಟು ಜ್ಞಾನ ಇಲ್ಲ. ಅದು ಯಾವಾಗಲೂ ಹಾಗೇನೇ. ಅದರ ಸ್ನೇಹಿತರು ಬರುತ್ವೆ ನೋಡಿ ಅವೇ ಮಾತಾಡ್ತಾ ಇರ್ತವೆ. ಇದು ಕೋಲೆ ಬಸವನ ಹಾಗೆ ತಲೆ ಆಡಿಸ್ತಾ ಕೂತಿರತ್ತೆ, ನಮ್ಮ ಮನೇಲಿ ಇದು ಒಂದು ತರಹ ಜೀವ ಇರೋ ಬೊಂಬೆ, ಥೇಟ್ ನಮ್ಮ ಮುಖ್ಯ ಮಂತ್ರಿ ಹಾಗೆ……”(ಇಲ್ಲಿ ಮುಖ್ಯ ಮಂತ್ರಿ ಪ್ರಸ್ತಾಪ ಅಪ್ರಸ್ತುತ. ಆದರೆ ಮಿಡಲ್ ಅಂದರ ಅದು ದೊಡ್ಡ ಬೊಮ್ಮಸಂದ್ರದ ನ್ಯಾಯಬೆಲೆ ಅಂಗಡಿ. ವಿದ್ಯಾರಣ್ಯಪುರಕ್ಕೆ ಶಿಫ್ಟ್ ಆಗಿ ಕೆಲವು ತಿಂಗಳು ಕಳೆದಿತ್ತು ಮತ್ತು ವಿದ್ಯಾರಣ್ಯಪುರದ ರೇಷನ್ ಅಂಗಡಿ ಇನ್ನೂ ಹುಟ್ಟಿರಲಿಲ್ಲ. ಅದರಿಂದ ಹಳೇ ಹಿಂದೆ ವಾಸವಿದ್ದ ಮನೆಗಳ ಬಳಿಯ ನ್ಯಾಯಬೆಲೆ ಅಂಗಡಿ ಮೇಲೆ ನಮ್ಮ ಡಿಪೆಂಡೆನ್ಸ್ ಇತ್ತು. ನಮ್ಮ ಅಂದರೆ ವಿದ್ಯಾರಣ್ಯಪುರದ ಆಗಿನ ಎಲ್ಲಾ ನಿವಾಸಿಗಳದ್ದು ಅಂತ ಅರ್ಥ.
ದೊಡ್ಡ ಬೊಮ್ಮಸಂದ್ರದ ನ್ಯಾಯಬೆಲೆ ಅಂಗಡಿ ಕ್ಯೂ ನಲ್ಲಿ ನಿಂತಿದ್ದೆ. ಕೈಯಲ್ಲಿ ಮೂರು ದೊಡ್ಡ ಬ್ಯಾಗ್ ತಲಾ ಹತ್ತು ಹದಿನೈದು ಕೆಜಿ ಹಿಡಿಯೊಂತಹವು. ಸೈಕಲ್ ಪಕ್ಕದಲ್ಲಿ ನಿಲ್ಲಿಸಿ ಕ್ಯೂ ಬಾಲ ಸೇರಿದ್ದೆ. ನನ್ನ ಮುಂದೆ ಮೂರು ನಾಲ್ಕು ಜನ ಹೆಂಗಸರು, ಎಲ್ಲರೂ ಕನ್ನಡದವರು. ಅವರು ಯಾರಿಗೂ ನಾನು ಒಬ್ಬ ಬರಹಗಾರ ಎನ್ನುವ ಅರಿವು ಇಲ್ಲ. ಕ್ಯೂನಲ್ಲಿ ನಿಂತು ಅವರು ಮಾತಾಡುತ್ತಿದ್ದರು. ನನ್ನ ಕಿವಿ ಮೇಲೆ ಬೇಡ ಅಂದರೂ ಅವರ ಮಾತು ಬೀಳುತ್ತಿತ್ತು ಮತ್ತು ಮತ್ತು ಗಮನಿಸಿ ಆಗಿನ್ನೂ ನನ್ನ ಕಿವಿ ಚೆನ್ನಾಗಿದ್ದ ಕಾಲ. ಕಿವಿ ಕೆಪ್ಪ ಆಗಿರಲಿಲ್ಲ ಮತ್ತು ಕಣ್ಣಿಗೆ ಇನ್ನೂ ಕನ್ನಡಕ ಬಂದಿರಲಿಲ್ಲ. ಅಂದರೆ ನನ್ನ ಸೆನ್ಸರಿ ಆರ್ಗನ್ಸ್ ನೂರಕ್ಕೆ ನೂರು ಪರ್ಫೆಕ್ಟ್ ಆಗಿದ್ದ ಕಾಲ!
ಅವರ ಮಾತು ಕಿವಿ ಮೇಲೆ ಬೀಳುತ್ತಿತ್ತು ಅಂದೆ ತಾನೇ? ಅವರು ಅಂದಿನ ನನ್ನ ಮಿಡಲ್ ಬಗ್ಗೆ ಮಾತಾಡುತ್ತಾ ಇದ್ದರು ಅಂತ ನಂತರ ತಿಳಿಯಿತು, ಅವರ ಮಾತು ಕೇಳಿದ ಮೇಲೆ..
“ಏನೇ ಹೇಳಿ ಗಂಡಸನ್ನ ಅದು ಇದು ಹೋಗುತ್ತೆ ಬರುತ್ತೆ ಅಂತ ಕೋಜಾ ಲಾಂಗ್ವೇಜ್‌ನಲ್ಲಿ ಹೇಳಬಾರದು ಕಣೇ…”(ಕೋಜಾ ಲಾಂಗ್ವೇಜ್ ಅಂದರೆ ನಪುಂಸಕ ಲಿಂಗ ಅಂತ ಅರ್ಥೈಸಿಕೊಂಡು ಇಡೀ ಸಂಭಾಷಣೆ ಫಾಲೋ ಮಾಡಿದೆ.)
“ಆ ಹೆಂಗಸು ಬರೆದದ್ದು ಹೀಗೆ ಇರುತ್ತಾ ಅಂತ ಅವರ ಗಂಡ ಓದುತ್ತಾರೋ ಇಲ್ವೋ ಆದರೂ ಗಂಡನ್ನ ಹೀಗೆ ನ್ಯೂಟ್ರಲ್ ಜೆಂಡರ್‌ನಲ್ಲಿ ಕರೆಯೋದು ಅಂದರೆ….”
ನಾನು ಫೀಮೇಲ್ ಹೆಸರಲ್ಲಿ (ಪ್ರಭಾ)ಬರೀತಾ ಇದ್ದೆ ತಾನೇ.
ಈ ಧಾಟಿಯಲ್ಲಿ ಮಾತು ಒಂದು ಗಂಟೆ ಅವರು ಅಕ್ಕಿ ಗೋಧಿ ಸಕ್ಕರೆ ತಗೊಂಡು ಹೋಗುವರೆಗೂ ನಡೆಯಿತು. ಅದರ ಜತೆಗೆ ನನ್ನ ಹಿಂದಿನ ಕೆಲವು ಮಿಡಲ್‌ಗಳೂ ಸಹ ತೌಲನಿಕ ಅಧ್ಯಯನ ಕಂಡವು! ಈ ಪದ ತೌಲನಿಕ ಅನ್ನುವ ಪದ ನಾನು ಎಂ ಎ ಓದಬೇಕಾದ ಸಂದರ್ಭದಲ್ಲಿ ಹೆಚ್ಚು ಬಳಸಿದೆ. ಅದಕ್ಕೆ ಮೊದಲು ಈ ಪದದ ಬಳಕೆ ಆಲ್ಮೋಸ್ಟ್ ಸೊನ್ನೆ ಅಂತ ಕಾಣ್ಸುತ್ತೆ.
ಅಪ್ಪಿ ತಪ್ಪಿಯೂ ನಾನೇ ಅವರು ಚರ್ಚಿಸುತ್ತಾ ಇದ್ದ ಮಿಡಲ್ ಬ್ರಹ್ಮ ಅಂತ ಅವರೆದುರು ಬಾಯಿ ಬಿಡದೇ ತೆಪ್ಪಗಿದ್ದೆ.
ಬಹುಶಃ ಇದು ನನ್ನ ಲೇಖನಗಳ ಬಗ್ಗೆ ಮೊಟ್ಟ ಮೊದಲ ಮುಖಾ ಮುಖಿ ವಿಮರ್ಶೆ ಇರಬಹುದು. ಗೂಢ ನಾಮ ಆಗಿದ್ದರಿಂದ ಹೀಗೆ ನನ್ನ ಉಪಸ್ಥಿತಿಯಲ್ಲಿ ನಾನು ಅಗಣಿತನಾಗಿ ನಡೆದ ಮೊಟ್ಟ ಮೊದಲ ವಿಮರ್ಶೆ ಇದು. ಇಂತಹದ್ದನ್ನು ಯಾರು ಓದುತ್ತಾರೆ ಎನ್ನುವ ಸಂಶಯ ಅವತ್ತು ಬುಡದ ಸಮೇತ ಹೋಯಿತಾ? ಅದರಿಂದ ನನ್ನ ಬರವಣಿಗೆಯಲ್ಲಿ ಇಂಪ್ರೂವ್ ಆಗಿ ಗಂಡನ ಬಗ್ಗೆ ನ್ಯೂಟ್ರಲ್ ಜೆಂಡರ್ ಹೋಯ್ತಾ ಅಂದರೆ ಊಹೂಂ ಇಲ್ಲ, ಅದು ಇನ್ನೂ ಆಳ ಆಯಿತು ಕೋತಿಗೆ ಹೆಂಡ ಕುಡಿಸಿದ ಹಾಗೆ…!
ಇನ್ನೊಂದು ಈ ಮಿಡಲ್ ಎಫೆಕ್ಟ್ ಕಾಣಿಸಿದ್ದು ಮತ್ತೊಂದು ಸನ್ನಿವೇಶದಲ್ಲಿ. ಅದೂ ರಾಜ್ಯದ ಮುಖ್ಯಮಂತ್ರಿ ಅವರ ಬಾಯಲ್ಲಿ. ಅಂದರೆ most unexpected corner ನಿಂದ. ರಾಜಕಾರಣಿಗಳು ಅದೂ ತುರುಸಿಕೊಳ್ಳಲು ಸಹ ಪುರುಸೊತ್ತು ಇಲ್ಲದೇ ದೆಹಲಿ ಬೆಂಗಳೂರು ಹೈ ಕಮಾಂಡು ಲೋ ಕಮಾಂಡ್, ನಾನೇ ಫೈನಲ್ ಎಲ್ಲದಕ್ಕೂ…. ಎಂದು ಸುತ್ತಿ ಸುತ್ತಿ ಸುತ್ತುವ ಬಿಡುವೇ ಇಲ್ಲ ಎಂದು ಪೋಸ್ ನೀಡುವ ಮುಖ್ಯಮಂತ್ರಿಗಳು ಮಿಡಲ್ ಓದುತ್ತಾರೆ ಅಂದರೆ… ಈಗ ಅದರ ಉಪಕತೆ.
ರಾಮಕೃಷ್ಣ ಹೆಗಡೆ ಅವರು ಮುಖ್ಯ ಮಂತ್ರಿ ಆಗಿದ್ದ ಕಾಲ ಅದು. ನೆರೆಯ ಆಂಧ್ರದಲ್ಲಿ ಎನ್ ಟಿ ರಾಮರಾವ್ (ಮುಂದೆ ಇವರನ್ನು ಅವರ ಮೆಚ್ಚಿನ ನಾಮಧೇಯ ವಾದ ಎನ್ ಟಿ ಆರ್ ಎಂದು ಕೂಗುತ್ತೇನೆ. ಅಷ್ಟುದ್ದ ಹೆಸರು ಬರೆಯಲು ತೋರುಬೆರಳು ನೋವು ಅಂತ ಹೇಳುತ್ತೆ. ತೋರುಬೆರಳು ನೋವು ಅಂತ ಯಾಕೆ ಹೇಳುತ್ತೆ ಅಂದರೆ ನಾನು ಮೊಬೈಲ್‌ನಲ್ಲಿ ನನ್ನ ಲೇಖನ ತಯಾರಿಸೋದು. ಅದರಲ್ಲಿ ಎರಡೂ ಕೈಗಳ ಹತ್ತೂ ಬೆರಳು ಉಪಯೋಗಿಸೋದು ತುಂಬ ಕಷ್ಟ. ಬೆರಳು ಕೈನಷ್ಟು ದಪ್ಪ ಇರೋದು ಮತ್ತು ಅಭ್ಯಾಸ ಇಲ್ಲದೇ ಇರೋದು. ಅದರಿಂದ ಒಂದೇ ಬೆರಳು ಪ್ರಯೋಗಿಸೋದು. ಅದೂ ಹೇಗೆ ಅಂದರೆ ಬಲಗೈ ಹೆಬ್ಬೆರಳು ಮೊಬೈಲ್ ತಳದಲ್ಲಿ ಸಪೋರ್ಟ್ ಕೊಟ್ಟರೆ ಬಲಗೈ ತೋರುಬೆರಳು ಕುಟ್ಟುತ್ತಾ ಕುಟ್ಟುತ್ತಾ ಸ್ಕ್ರೀನ್ ಮೇಲೆ ಅಕ್ಷರಗಳ ಚಿತ್ತಾರ ಬಿಡಿಸುತ್ತಾ ಹೋಗುತ್ತದೆ. ಅಕಸ್ಮಾತ್ ಈ ತೋರುಬೆರಳನ್ನು ಯಾರಾದರೂ ಏಕಲವ್ಯನಿಂದ ಹೆಬ್ಬೆರಳು ದಾನ ಪಡೆದ ಹಾಗೆ ಪಡೆದು ಬಿಟ್ಟರೆ ಭುವನೇಶ್ವರಿ ಗತಿ ಏನು ಎನ್ನುವ ಚಿಂತೆ ನನ್ನನ್ನು ಆಗಾಗ ಕಾಡುತ್ತದೆ. ಅದನ್ನು ಪಕ್ಕಕ್ಕೆ ಸರಿಸಿ ನನ್ನ ಸೇವೆ ಮುಂದುವರೆಸುತ್ತಾ ಇದೇನೆ)ಅವರು ಮುಖ್ಯಮಂತ್ರಿ. ಎರಡೂ ರಾಜ್ಯಗಳಿಗೆ ಉತ್ತಮ ಬಾಂಧವ್ಯ ಇತ್ತು ಮತ್ತು ಆಗಾಗ್ಗೆ ಎರಡೂ ಮುಖ್ಯಮಂತ್ರಿಗಳು ಭೇಟಿ ಆಗುತ್ತಿದ್ದರು, ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡಿರುತ್ತಿದ್ದ ಫೋಟೋಗಳು ನಿಯತವಾಗಿ ಸ್ಥಳೀಯ ಪತ್ರಿಕೆಗಳಲ್ಲಿ ಬರುತ್ತಿದ್ದವು. ಎರಡೂ ರಾಜ್ಯಗಳಿಗೆ ಒಂದು ಕಾಮನ್ ಪ್ರಾಬ್ಲಂ. ಅದೇ ಕಾಮನ್ ಪ್ರಾಬ್ಲಂ ಈಗಲೂ ಇದೆ ಮುಂದೆ
ರಾಮಕೃಷ್ಣ ಹೆಗಡೆ ಈ ಪ್ರಸಂಗದಿಂದ ಒಂದು ಹಾಳೆ ತಗೊಂಡರು. ಹೀಗಂದರೆ took a page from the story ಅಂತ! ನೀವು ಸಿಕ್ಕಾಪಟ್ಟೆ ಇಂಗ್ಲಿಷ್ ಪತ್ತೇದಾರಿ ಕಾದಂಬರಿಗಳನ್ನು ಓದಿದ್ದರೆ taking a page ಅನ್ನುವುದರ ಅರ್ಥ ಸೊಗಸಾಗಿ ತಿಳಿದಿರುತ್ತೆ.
ನೀವು ಇಂಗ್ಲಿಷ್ ಪತ್ತೇದಾರಿ ಕಾದಂಬರಿಗಳನ್ನು ಓದಿಲ್ಲ ಅಂದರೆ ಸುಲಭವಾಗಿ ನಿಮಗೆ ಕನ್ನಡದಲ್ಲಿ ಹೀಗೆ ಹೇಳಬಹುದು. ಎನ್ ಟಿ ಆರ್ ಅವರ ಶೇಖಡಾ ಹತ್ತರ ಭಾಷಣ ಇವರಿಗೆ ಅಂದರೆ ಹೆಗಡೆ ಅವರಿಗೆ ಪ್ರೇರೇಪಿಸಿತು ಅಂತ. ಪ್ರೇರೇಪಣೆ ಹೇಗಾಯಿತು ಅಂದರೆ ಉತ್ತರ ಕರ್ನಾಟಕದಲ್ಲಿ ಒಂದು ಕಡೆ ಹೆಗಡೆ ಅವರು ಭಾಷಣ ಮಾಡುತ್ತಾ ಆಂಧ್ರದಲ್ಲಿ ಎನ್ ಟಿ ಆರ್ ಅವರ ಭಾಷಣದ ಬಗ್ಗೆ ಹೇಳಿ ಇಲ್ಲಿನ ಜನರೂ ಸಹ ಶೇಖಡಾ ಹತ್ತು ಉಳಿಸಿದರೆ ಉಳಿಸಿ ಸರ್ಕಾರಕ್ಕೆ ನೀಡಿದರೆ ಇಲ್ಲಿನ ನೀರಾವರಿ ಸಮಸ್ಯೆಗಳಿಗೆ ಒಂದು ಪರಿಹಾರ ಕಂಡು ಹಿಡಿಯಬಹುದು, ಅದರಿಂದ ಶೇಖಡಾ ಹತ್ತು ಉಳಿಸಿ, ಉಳಿಸಿ ಸರ್ಕಾರಕ್ಕೆ ನೀಡಿ…. ಎನ್ನುವುದು ಭಾಷಣದ gist ಅಂದರೆ ಸಾರಾಂಶ. ಜನ ಶೇಖಡಾ ಹತ್ತು ಉಳಿಸಿದರೋ ಬಿಟ್ಟರೋ ಆದರೆ ಮಿಡಲ್ ಬರೆಯೋ ನಮಗೆ ಸುಗ್ಗಿ ಆಯಿತು. ಹಲವು ಮಿಡಲ್ ಬಂದವು. ಒಂದು ಮಿಡಲ್ ಸ್ವರೂಪ ಹೀಗಿತ್ತು.

ಮನೆ ಯಜಮಾನ, ಅವನ ಹೆಂಡತಿ ಇಬ್ಬರೂ ಕೂತು ಮುಂದಿನ ತಿಂಗಳ ಆಯವ್ಯಯ ಅಂದರೆ ಬಜೆಟ್ ಲೆಕ್ಕ ಹಾಕ್ತಾ ಇರ್ತಾರೆ. ಹೆಂಡತಿ ಒಂದೊಂದೇ ಸಾಮಾನು ಹೇಳುತ್ತಾ ಹೋಗುತ್ತಾಳೆ. ಗಂಡ ಅದರ ಪಟ್ಟಿ ಮಾಡುತ್ತಾ ಹೋಗುತ್ತಾನೆ. ಅದರ ಒಂದು ಸ್ಥೂಲ ನೋಟ ಹೀಗೆ..
“ಅಕ್ಕಿ ಆರು ಕೇಜಿ ಬರಕೊಳ್ಳಿ…”
“ಆರು ಕೇಜಿ ಅಂದರೆ ಆರು ಸಾವಿರ ಗ್ರಾಂ. ಅದಕ್ಕೆ ಶೇಖಡಾ ಹತ್ತು ಅಂದರೆ ಆರುನೂರು. ಆರುಸಾವಿರದಲ್ಲಿ ಆರುನೂರು ಹೋದರೆ ಐದು ಸಾವಿರದ ನಾಲ್ಕು ನೂರು…. ಹೂಂ ಬರ್ಕೊಂಡೆ…”
“ತೊಗರಿ ಬೇಳೆ ಮೂರೂವರೆ ಕೆಜಿ.. ಬರ್ಕೊಳ್ಳಿ…”
“ಹೂಂ ಮೂರೂವರೆ ಕೆಜಿ. ಅಂದರೆ ಮೂರುಸಾವಿರದ ಐನೂರು ಗ್ರಾಂ. ಅದಕ್ಕೆ ಶೇಖಡಾ ಹತ್ತು ಅಂದರೆ ಮುನ್ನೂರಾ. ಐವತ್ತು ಗ್ರಾಂ. ಮೂರುವರೆ ಸಾವಿರದಲ್ಲಿ ಮುನ್ನೂರಾ. ಐವತ್ತು ಹೋದರೆ ಮೂರು ಸಾವಿರದ ನೂರೈವತ್ತು ಗ್ರಾಂ….ಹೂಂ ಬರ್ಕೊಂಡೆ… ಮುಂದೆ ಹೇಳು..”
” ರೇಷನ್ ಗೋಧಿ ಬರೀ ಹುಳು, ಮುಗ್ಗಲು ಮುಗ್ಗಲು, ಅದು ತರೋದು ಬೇಡ. ಜವೆ ಗೋಧಿ ನಾಲ್ಕು ಕೆಜಿ ಬರ್ಕೊಳ್ಳಿ ಇದು ಸೊಸೈಟಿಯಿಂದ ತರಬೇಕು….”
“ಜವೆ ಗೋಧಿ ನಾಲ್ಕು ಕೆಜಿ ಅಂದರೆ ನಾಲ್ಕು ಸಾವಿರ ಗ್ರಾಂ. ಅದಕ್ಕೆ ಶೇಖಡಾ ಹತ್ತು ಅಂದರೆ ನಾಲ್ಕುನೂರು ಗ್ರಾಂ. ನಾಲ್ಕು ಸಾವಿರದಲ್ಲಿ ನಾನ್ನೂರು ಹೋದರೆ ಮೂರು ಸಾವಿರದ ಆರುನೂರು ಗ್ರಾಂ. ಜವೆ ಗೋಧಿ ಮೂರು ಸಾವಿರದ ಆರುನೂರು ಗ್ರಾಂ… ಹುಂ ಬರ್ಕೊಂಡೆ.. ಮುಂದಕ್ಕೆ ಹೇಳು…”
ಇದೇ ರೀತಿ ಮುಂದಿನ ತಿಂಗಳ ಮನೆ ಸಾಮಾನೆಲ್ಲವನ್ನೂ ಪಟ್ಟಿ ಮಾಡ್ತಾರೆ. ಪಟ್ಟಿ ಆಯ್ತಾ. ಅದಕ್ಕೆ ಎಷ್ಟೆಷ್ಟು ಕಾಸು ಅಂತ ಲೆಕ್ಕ ಬರೀತಾರೆ. ಅದನ್ನೆಲ್ಲಾ ಏಕ ದಶಕ ನೂರು ಅಂತ ಲೆಕ್ಕ ಹಾಕಿ ಹಾಕಿ ಕೂಡುತ್ತಾರೆ. ಗಂಡನ ಸಂಬಳ ಕ್ಕಿಂತಲೂ ಹೆಚ್ಚಾಗಿ ಈ ಶೇಖಡಾ ಹತ್ತು ಕಟ್ ಆಗಿದ್ದ ಲೆಕ್ಕ ತೋರಿಸುತ್ತೆ.
“ನಮ್ಮ ಹೆಗಡೆ ಸಾಹೇಬರು ಹೇಳಿದ್ದಾರೆ ಶೇಖಡಾ ಹತ್ತು ಖರ್ಚು ಕಡಿಮೆ ಅಂತ. ಖರ್ಚು ಮಾಡಿ ಅವರಿಗೆ ಸಹಾಯ ಮಾಡೋಣ ಅಂದರೆ ನಮ್ಮದೇ ಡೆಫಿಸಿಟ್ ಬಜೆಟ್ ಆಗಿಬಿಟ್ಟಿತು…..” ಅಂತ ಗಂಡ ಪೇಚಾಡಿಕೊಂಡು ಬೇಜಾರು ಮಾಡಿಕೊಳ್ಳುತ್ತಾನೆ. ಹೆಂಡತಿ ಅವನಿಗೆ ಸಮಾಧಾನ ಪಡಿಸುತ್ತಾಳೆ “ಹೆಗಡೆ ಸಾಹೇಬರು ರಾಜ್ಯ ಸರ್ಕಾರದ ನೌಕರರಿಗೆ ಹೀಗೆ ಹೇಳಿರೋದು ರೀ…. ಫ್ಯಾಕ್ಟರಿ ಅವರಿಗೆ ಅಲ್ಲ. ಪಾಪ, ಫ್ಯಾಕ್ಟರಿ ಅವರಿಗೆ ಕೊಡ್ತಿರೋದು ತುಂಬಾ ಕಡಿಮೆ ಅಂತ ಅವರಿಗೆ ಗೊತ್ತು. ರಾಜ್ಯ ಸರ್ಕಾರದವರಿಗೆ ಹೆಚ್ಚು ಬರುತ್ತೆ ಅಲ್ವಾ ಅದಕ್ಕೇ ಅವರಿಗೆ ಶೇಖಡಾ ಹತ್ತು ಇತ್ತ ತಳ್ಳಿ ಅಂದಿರೋದು….” ಎಂದು ಹೇಳುತ್ತಾಳೆ. ಈ ಮಿಡಲ್ ಬ್ರಹ್ಮ ನಾನು!
ಈ ಮಿಡಲ್ ಬಂದ ಒಂದು ತಿಂಗಳಲ್ಲಿ ಅಂತ ಕಾಣ್ಸುತ್ತೆ ಹೆಗಡೆ ಸಾಹೇಬರು ಎಲ್ಲೋ ಭಾಷಣ ಮಾಡುತ್ತಾ ಶೇಖಡಾ ಹತ್ತರಷ್ಟು ಉಳಿಸಿ ಸರ್ಕಾರದಲ್ಲಿ ಇಡಿ ಅಂತ ಹೇಳಿದರೆ ಜನ ತಮಾಷೆ ಮಾಡ್ತಾರೆ ಅಂತ ಹೇಳಿದ್ದರು. ಸರ್ಕಾರದ ವರಿಷ್ಠರು ಸಹಾ ಈ ಮಿಡಲ್‌ಗಳನ್ನೂ ಆಸಕ್ತಿಯಿಂದ ಓದುತ್ತಾರೆ ಅಂತ ಗೊತ್ತಾಗಿತ್ತು. ಮಿಡಲ್ ಮೋಡಿಯಲ್ಲಿ ಕತೆ ನಿಂತೆ ಬಿಡ್ತು ಅಂತ ಅನಿಸಲಿಲ್ಲ. ಕಾರಣ ಮನಸು ಪೂರ್ತಿ ಮಿಡಲ್ ಹಾಗೂ ಹಾಸ್ಯ ಲೇಖನಗಳತ್ತ ಪೂರ್ಣ ವಾಲಿಬಿಟ್ಟಿತ್ತು.
ಮಿಡಲ್‌ಗಳಿಂದ ಹಾಸ್ಯ ಲೇಖನದತ್ತ ಹೇಗೆ ತಿರುಗಿದೆ ಅಂತ ಮರೆತು ಹೋಗಿದೆ. ಕೆಲವು ಸಲ ಮಿಡಲ್ ಅದರ ಮಿತಿ ಮೀರಿ ನಾಲ್ಕು ಐದು ಪುಟಕ್ಕೆ ಹಾರಿ ಬಿಡುತ್ತಾ ಇತ್ತು. ಅಂತಹ ಸಮಯದಲ್ಲಿ ಅದು ಮಿಡಲ್ ಪ್ರಕಟಿಸುತ್ತಿದ್ದ ಪ್ರಜಾವಾಣಿ ಕನ್ನಡ ಪ್ರಭ ದಾಟಿ ಮಿಕ್ಕ ಪತ್ರಿಕೆಗಳಿಗೆ ಹೋಗುತ್ತಿತ್ತು. ಪ್ರಜಾವಾಣಿಯಲ್ಲಿ ಮಿಡಲ್ ಶುರುವಾದ ಸುಮಾರು ಕಾಲದ ನಂತರ ಕನ್ನಡ ಪ್ರಭದಲ್ಲಿ ಮಿಡಲ್ ಕಾಲಂ ಶುರು ಆಗಿದ್ದು. ಪ್ರಜಾವಾಣಿ ಪತ್ರಿಕೆಯಿಂದ ನಿವೃತ್ತಿ ನಂತರ ವೈಯೆನ್ಕೆ ಕನ್ನಡ ಪ್ರಭಕ್ಕೆ ಬಂದರು. ಪ್ರಜಾವಾಣಿಯ ಕೆಲವು ಜನಪ್ರಿಯ ಕಾಲಂ ಗಳು ಕನ್ನಡ ಪ್ರಭದಲ್ಲಿ ಸಹ ಆರಂಭಗೊಂಡವು. ಅಂತಹ ಕಾಲಂ ಗಳಲ್ಲಿ ಮಿಡಲ್‌ಗಳೂ ಸಹ ಸೇರಿತ್ತು.
ಇವೆರಡು ಪತ್ರಿಕೆ ಬಿಟ್ಟರೆ ಉದಯವಾಣಿ, ಸಂಯುಕ್ತ ಕರ್ನಾಟಕ ಪತ್ರಿಕೆಗಳು ಹೆಚ್ಚು ಪ್ರಸಾರ ಹೊಂದಿದ್ದವು. ಅವುಗಳಲ್ಲಿ ಮಿಡಲ್ ಕಾಲಂ ಕಾನ್ಸೆಪ್ಟ್ ಇರಲಿಲ್ಲ. ಅಂದಹಾಗೆ ಕನ್ನಡದಲ್ಲಿ ಹೀಗೆ ಮಿಡಲ್ ಕಾಲಂ ಮೂಲಕ ಬರವಣಿಗೆ ಶುರುಮಾಡಿದ ಸುಮಾರು ಜನ ಮುಂದೆ ಖ್ಯಾತ ಸಾಹಿತಿಗಳಾದರು. ಮಿಡಲ್ ಬರಹಗಳು ಸಾಹಿತ್ಯದ ಯಾವ ಪ್ರಕಾರಕ್ಕೂ ಸೇರದು ಎನ್ನುವ ನಿಲುವು ಕೆಲವು ವಿಮರ್ಶಕರು ಹೊಂದಿದ್ದರು. ಕೆಲವರಂತೂ ಮಿಡಲ್ ಬರಹಗಾರರು ಎಂದರೆ ಅಸ್ಪೃಶ್ಯರು ಎಂದು ಭಾವಿಸಿದ್ದರು! ಒಮ್ಮೆ ಒಬ್ಬರು ಖ್ಯಾತ ವಿಮರ್ಶಕರೊಂದಿಗೆ ಮಾತು ಆಡುತ್ತಿದ್ದೆ, ಕೆಲವು ಮಿಡಲ್ ಬರಹಗಾರರು ಸಹ ಜತೆಯಲ್ಲಿದ್ದರು. ಯಾವುದೋ ಪುಸ್ತಕ ಬಿಡುಗಡೆ ಕಾರ್ಯಕ್ರಮ ಅದು. ಸಭೆ ಶುರುವಾಗಲು ಇನ್ನೂ ಸಮಯ ಇದ್ದದ್ದರಿಂದ ಮಾತು ಆಡುತ್ತಾ ಕುಳಿತಿದ್ದೆವು. ಅನೌಪಚಾರಿಕ ಮಾತುಕತೆ ಅದು. ವಿಮರ್ಶೆಯ ಮಾನದಂಡ ಯಾವುದು, ಅದು ವ್ಯಕ್ತಿ ನಿಷ್ಠವೋ ಕರ್ತೃ ನಿಷ್ಠವೋ ಅಥವಾ ಅದಕ್ಕೂ ಮಿಗಿಲಾಗಿ ಮತ್ತಾವುದಾದರೂ ಮಾನದಂಡ ಇದೆಯೇ ಎನ್ನುವ ಚರ್ಚೆ ನಡೆದಿತ್ತು. ಆಗ ಪ್ರತಿವರ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯಾ ವರ್ಷದ ಕತೆ, ಕವನ, ಪ್ರಬಂಧ.. ಹೀಗೆ ಹಲವು ಪ್ರಾಕಾರದಲ್ಲಿ ಸಂಕಲನ ತರುತ್ತಿತ್ತು, ಅದಕ್ಕೆ Anthology ಎನ್ನುವ ಹೆಸರನ್ನು ವಿಮರ್ಶಕರು ಬಳಸುತ್ತಿದ್ದರು. ಅದಕ್ಕೆ ಒಬ್ಬ ಖ್ಯಾತರು ಮುನ್ನುಡಿ ಕಂ ವಿಮರ್ಶಾ ರೂಪದ ಲೇಖನ ಬರೆಯುತ್ತಿದ್ದರು. ಸಂಕಲನದಲ್ಲಿ ಸೇರಿರದ ಬರಹಗಾರರ ಬಗ್ಗೆಯೂ ಸಹ ಕೆಲವು ಸಾಲುಗಳನ್ನು ಉದಾರವಾಗಿ ಸೇರಿಸುತ್ತಿದ್ದರು. ಸುಮಾರು ಮಿಡಲ್ ಬರಹಗಾರರ ಮಿಡಲ್‌ಗಳು, ಹಾಸ್ಯ ಲೇಖನಗಳು, ಕತೆಗಳು ಆಯಾ ಪ್ರಕಾರದಲ್ಲಿ ಸೇರುತ್ತಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಮಿಡಲ್ ಬರಹಗಾರರು ವಿಮರ್ಶಕರ ಸುತ್ತ ಸೇರಿ ವಿಚಾರ ವಿನಿಮಯ ನಡೆಸಿದ್ದೆವು. ವಿಮರ್ಶಕರು ವಿಮರ್ಶೆ ವ್ಯಕ್ತಿ ನಿಷ್ಠವೋ ಕರ್ತೃ ನಿಷ್ಠವೋ ಎನ್ನುವ ಬಗ್ಗೆ ಹೇಳುತ್ತಾ ಹೇಳುತ್ತಾ ಒಮ್ಮೆಲೇ ಉದ್ವಿಗ್ನರಾದರು. ಏನಂತ ಬರೀಬೇಕು ನಿಮ್ಮ ಬಗ್ಗೆ? ಮಿಡಲ್ ಬರೀತಾರೆ ಅಂತ ಬರೆಯೋದಾ? ಮಿಡಲ್ ಕಾಲಂ ಸಾಹಿತ್ಯ ಅಂತ ರೆಕಗ್ನೈಸ್ ಆಗಿ ಇಲ್ಲವಲ್ಲ… ಅಂದರು. ಹಾಗೆ ನೋಡಿದರೆ ಹಾ. ಮಾ. ನಾಯಕರು ಅಂಕಣ ಸಾಹಿತಿಗಳೆಂದು ವಿಮರ್ಶಕರು ಹೀಯಾಳಿಸುತ್ತಿದ್ದರು. ಅಂಕಣ ಬರಹ ಸಾಹಿತ್ಯವೇ ಅಲ್ಲ ಎನ್ನುವ ಒಂದು ಥಿಂಕಿಂಗ್ ಸಹ ಇತ್ತು. ತಮಾಷೆ ಎಂದರೆ ಅಂಕಣ ಬರಹಗಳ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಟ್ಟಿತ್ತು! ವಿಮರ್ಶಕರ ಈ ಮಾತಿಗೆ ನಮ್ಮ ಮಿಡಲ್ ಬರಹಗಾರರೇ ಒಬ್ಬರು ಉತ್ತರಿಸಿದರು. ಸಾರ್ ನೀವು ಇದು ಸಾಹಿತ್ಯ ಅಂತ ಒಪ್ಪದೇ ಹೋದರೂ ನಮಗೆ ಇದರಲ್ಲೇ ಹೆಚ್ಚು ಆಸಕ್ತಿ, ಇದನ್ನೇ ರೂಢಿಸಿಕೊಳ್ತೀವಿ!
ಇದಾದ ಎಷ್ಟೋ ವರ್ಷಗಳ ನಂತರ ಮಿಡಲ್ ಕಾಲಂ ಸಹ ಸಾಹಿತ್ಯ ಎಂದು ಪರಿಗಣಿತವಾದರೂ ಅದರಲ್ಲಿನ ವ್ಯಂಗ್ಯ ವಿಡಂಬನೆ ಹಾಸ್ಯ ಮೊದಲಾದ ಗುಣಗಳ ಮೂಲಕ ಅದು ಪ್ರಬಂಧ ಮತ್ತು ಹಾಸ್ಯ ಲೇಖನಗಳ ಗುಂಪಿಗೆ ಸೇರಿದೆ! ವಾರ್ಷಿಕ Anthology ಗಳಲ್ಲಿ ಇವೂ ಸೇರಿದವು!
ವಿಷಯ ಹೇಗೆ ಎಲ್ಲಿಂದ ಎಲ್ಲಿಗೆ ಹಾರುತ್ತಿದೆ ನೋಡಿ.

ಒಟ್ಟಿನಲ್ಲಿ ಹೊಸಾ ಮನೆಗೆ ಹೋಗಿದ್ದೆ ಮತ್ತು ಅಲ್ಲಿನಿಂದ ನನ್ನ ಸಾಹಿತ್ಯ ಸೇವೆ, ಭುವನೇಶ್ವರಿ ಪೂಜೆ ಶುರು ಆಗಿತ್ತು. ಇದರ ಮತ್ತೊಂದು ಮಜಲು ಮುಂದೆ ವಿವರವಾಗಿ ಹೇಳುವ ಯೋಜನೆಯೊಂದಿಗೆ ನಿಮಗೆ ಗುಡ್ ಬೈ ಸರ ಗುಡ್ ಬೈ ಮೇಡಮ್ಮೋರ…..
ಮುಂದುವರೆಯುವುದು…

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
