Advertisement
ಮುನ್ನೂರು ರಾಮಾಯಣಗಳು ಮತ್ತು…: ಸುಕನ್ಯಾ ಕನಾರಳ್ಳಿ ಬರಹ

ಮುನ್ನೂರು ರಾಮಾಯಣಗಳು ಮತ್ತು…: ಸುಕನ್ಯಾ ಕನಾರಳ್ಳಿ ಬರಹ

ಶತಮಾನಗಳ ಅವಧಿಯಲ್ಲಿ ಈ ಭಾಷಾಪಟ್ಟಿಯಲ್ಲಿರುವ  ಕೆಲವಂತೂ ಒಂದಕ್ಕಿಂತ ಹೆಚ್ಚು ರಾಮನ ಕಥೆಗಳನ್ನು ಹೊಮ್ಮಿಸಿವೆ. ಸಂಸ್ಕೃತ ಒಂದರಲ್ಲೇ ಕಾವ್ಯ, ಪುರಾಣಗಳ ರೂಪದಲ್ಲಿ ಇಪ್ಪತ್ತೈದಕ್ಕಿಂತಲೂ ಹೆಚ್ಚು ರಾಮಕಥೆಗಳಿವೆ. ಶಾಸ್ತ್ರೀಯ ಮತ್ತು ಜಾನಪದೀಯ ನೆಲೆಗಳೆರಡರಲ್ಲೂ  ನಾಟಕ, ನೃತ್ಯ-ನಾಟಕ ಮತ್ತು ಇತರ ರೂಪಗಳನ್ನು ಸೇರಿಸಿದರೆ ಅದರ ಸಂಖ್ಯೆ ಇನ್ನೂ ಹೆಚ್ಚು. ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಸಂಸ್ಕೃತಿಗಳಲ್ಲಿ ಇರುವ ಎಲ್ಲ ಶಿಲ್ಪ, ಉಬ್ಬುಶಿಲ್ಪ, ಮುಖವಾಡ, ನೆರಳಿನಾಟ, ಮತ್ತು ಚಕ್ಕಳಗೊಂಬೆ ಪ್ರದರ್ಶನಗಳನ್ನೂ ಸೇರಿಸಬೇಕು.
ಎ. ಕೆ. ರಾಮಾನುಜನ್ನರ ಸಂಶೋಧನಾ ಲೇಖನ ‘ಮುನ್ನೂರು ರಾಮಾಯಣಗಳು, ಐದು ಉದಾಹರಣೆಗಳು ಮತ್ತು ಅನು-ವಾದದ ಬಗೆಗಿನ ಮೂರು ಚಿಂತನೆಗಳು’ ಕುರಿತು ಸುಕನ್ಯಾ ಕನಾರಳ್ಳಿ ಬರಹ

ಟಿಪ್ಪಣಿ:

ಮೈಸೂರಿನ ಎ ಕೆ ರಾಮಾನುಜನ್ ಎಂಬ ಅದ್ಭುತ ಪ್ರತಿಭೆ ಬರೆದ  ಒಂದು ಪದ್ಯ ಹೀಗಿದೆ:

ಇದು ಮಾತ್ರ ನಿನ್ನದಯ್ಯ?

ಇರುವ

ದೇಹ
ಮಾತು
ಜಗ ಜಗ ತಿರುಗುವ ಈ ಗಾಳಿಗುಂಬಸ್ಸು
ಒಳಗೆ ಹೊರಗೆ ಹರಿದು ಇಂಗುವ ನೀರು

ಅಪ್ಪ ಅಮ್ಮ
ಇವಳು ಇವಳ ಒಂಬತ್ತು ತೂತು
ಇವಳ ಮಗಳು
ಆ ಮರ
ದ ಕೃತ್ತಿಕಾ ನಕ್ಷತ್ರ

ಯಾವುದೂ ನಮ್ಮದಲ್ಲದ
ಈ ಪರಿ—
ಸ್ಥಿತಿಯಲ್ಲಿ

ಇದು

ಮಾತ್ರ
ನಿನ್ನದೇನಯ್ಯ?

ಎ. ಕೆ. ರಾಮಾನುಜನ್ನರ ಸಂಶೋಧನಾ ಲೇಖನ ‘ಮುನ್ನೂರು ರಾಮಾಯಣಗಳು, ಐದು ಉದಾಹರಣೆಗಳು ಮತ್ತು ಅನು-ವಾದದ ಬಗೆಗಿನ ಮೂರು ಚಿಂತನೆಗಳು’ ನೆಲೆಯಲ್ಲಿ ಮೇಲಿನ ಅವರದೇ ಪದ್ಯದ ಕೊನೆಯ ಪ್ರಶ್ನೆಯನ್ನು ಸ್ವಲ್ಪ ಬೇರೆ ರೀತಿಯಲ್ಲಿ ಕೇಳಬೇಕಾಗುತ್ತದೆ. ‘ಇದು ನಿನ್ನದೇ ಮಾತ್ರವೇನಯ್ಯ?’ ಯಾರನ್ನ ಕೇಳಬೇಕು? ಏಕದ-ಗೀಳು ಎಂಬ ರೋಗವನ್ನು ಹಾಸಿ ಹೊದ್ದವರಿಗೆ.

ಮುನ್ನೂರು, ನಾನೂರು, ಸಾವಿರಾರು ರಾಮಾಯಣಗಳು ಭಾರತೀಯ ಉಪಖಂಡದ ಸಾಂಸ್ಕೃತಿಕ ಶ್ರೀಮಂತಿಕೆಯ ಒಂದು ಸಂಕೇತ. ಹಾಗೆಯೇ, ಅದನ್ನು  ವಿರೋಧಿಸಿ ಅದರ ಒಂದೇ ಒಂದು ರೂಪವನ್ನು ಇರುವುದಿಷ್ಟೇ ಎಂದು ಸಾರಲು ಗೂಂಡಾಗಿರಿ ನಡೆಸುವುದು ಇಂದಿನ ಬೌದ್ಧಿಕ ದಾರಿದ್ರ್ಯದ ಒಂದು ಸಂಕೇತ. ಬಾಹುಳ್ಯ ಎನ್ನುವುದು ಒಂದು ನಿಸರ್ಗದ ತತ್ವ. ಪರಸ್ಪರತೆಯಲ್ಲಿ ಮೈತಳೆಯುವ ಒಂದು ಸಹಜ ಕ್ರಿಯೆ. ತಾವು ಯಾವುದರ ವಿರುದ್ಧ ಪ್ರತಿಭಟಿಸುತ್ತಿದ್ದೇವೆ ಎನ್ನುವುದರ ಅರಿವೂ ಇರದ ಹುಂಬತನಕ್ಕೆ, ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿರಲಿ, ಅದನ್ನು ಓದುವ ಗೋಜಿಗೂ ಹೋಗದ ಮರಿ ‘ಇಸ್ವ-ನಾಯಕ’ರಿಗೆ ಅದು ಅಸಹನೆಯ ತಿದಿ ಒತ್ತಿ ಒತ್ತಿ ಮಂದಿಯನ್ನು (ವಿದ್ಯಾರ್ಥಿಗಳನ್ನು) ಹುಚ್ಚೆಬ್ಬಿಸುವ ಒಂದು ಸಾಧನ ಅಷ್ಟೇ.

ದೆಹಲಿ ವಿಶ್ವವಿದ್ಯಾಲಯದಲ್ಲಿ ಇದು 2006ರಿಂದ ಬೋಧನೆಯ ಒಂದು ಪಠ್ಯವಾಗಿತ್ತು. ಸಂಘ ಪರಿವಾರದ ವಿದ್ಯಾರ್ಥಿ ಅಂಗವಾದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮುಂದಾಳುತ್ವದಲ್ಲಿ 2008ರಿಂದಲೂ ಪ್ರತಿಭಟನೆಗಳು ನಡೆದಿದ್ದವು. ಪಾಠ ನಡೆಯುತ್ತಿದ್ದ ಕೊಠಡಿಗೆ ನುಗ್ಗಿ ದಾಂಧಲೆ ನಡೆಸಿ ನಂತರ ಇತಿಹಾಸ ವಿಭಾಗದ ಮುಖ್ಯಸ್ಥರ ಕೊಠಡಿಗೂ ನುಗ್ಗಿ ದಾಂಧಲೆ ನಡೆಸಿತ್ತು.  ಪ್ರತಿಭಟನೆ ಹಿಂಸೆಗೂ ತಿರುಗಿತ್ತು. 2011ರಲ್ಲಿ ಅದನ್ನು ಪಠ್ಯಕ್ರಮದಿಂದ ಕೈ ಬಿಡಲಾಯಿತು.

ಮೈಸೂರಿನ ಎ. ಕೆ. ರಾಮಾನುಜನ್ ಒಬ್ಬ ಪ್ರತಿಭಾವಂತ ಕವಿ, ಸಂಶೋಧನಕಾರ, ಲೇಖಕ ಮತ್ತು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ದ್ರಾವಿಡ ಭಾಷೆಗಳ ವಿಭಾಗದ ಮುಖ್ಯಸ್ಥ, ಮತ್ತು ಪ್ರಾಧ್ಯಾಪಕರಾಗಿದ್ದ ಒಂದು ಅದ್ಭುತ ಪ್ರತಿಭೆ. ದಕ್ಷಿಣ ಏಷ್ಯಾದ ಅಧ್ಯಯನಕ್ಕೆ ಸಂಬಂಧಿಸಿದಂತೆ ಹಲವಾರು ಅಪರೂಪದ ಆಕರಗಳನ್ನು ಕಲೆ ಹಾಕಿರುವ ರಾಮಾನುಜನ್ನರ ಶ್ರೀಮಂತ ಸಂಗ್ರಹಕ್ಕೆ ಸಾಟಿಯಾಗುವ ಇನ್ನೊಂದು ಜಗತ್ತಿನಲ್ಲಿ ಎಲ್ಲಿಯೂ ಇಲ್ಲ ಎಂಬ ಅಭಿಪ್ರಾಯವಿದೆ.


ಪತ್ರಕರ್ತ ಮತ್ತು ಬರಹಗಾರ ಸುಗತ ಶ್ರೀನಿವಾಸರಾಜು ಅಭಿಪ್ರಾಯಿಸುವಂತೆ ಈ ದಾಂಧಲೆ ನಡೆಸುವ ಮನಸ್ಸುಗಳಿಗೆ ರಾಮಾಯಣ ಎನ್ನುವುದು ಒಂದು ಬೆಡ್ ಟೈಮ್ ಸ್ಟೋರಿಯಾಗಿರಬೇಕು ಅಷ್ಟೇ. ಅಲ್ಲಿ ಚಿಂತನೆಗೆ ಹಚ್ಚುವ ಯಾವ ಅಂಶವೂ ಇರಬಾರದು. ಅದು ಎಲ್ಲರಿಗೂ ಗೊತ್ತಿರುವಂತಹ ಒಂದೇ ಕಥೆಯಾಗಿರಬೇಕು. ಕೇಳುತ್ತಾ ಕೇಳುತ್ತಾ ಸುಖವಾಗಿ ನಿದ್ದೆಗೆ ಜಾರಿಕೊಳ್ಳಬೇಕು.

ಇದು ಹೊಸದೇನಲ್ಲ. ಎಂಬತ್ತರ ದಶಕದಿಂದಲೂ ನಡೆದೇ ಇರುವಂತದ್ದು.. ಶಿವಸೇನೆಯ ಮಂದಿ (‘ಕಾರ್ಯಕರ್ತರು’ ಎಂಬ ಪದದ ಬಳಕೆಯನ್ನು ಬಿಡುವುದು ಸೂಕ್ತ. ಧ್ವಂಸವನ್ನೇ ಗುರಿಯಾಗಿಸಿಕೊಂಡವರು ಮಾಡುವ ‘ಕಾರ್ಯಗಳ’ ಉಪಯೋಗ ಏನು ಎನ್ನುವುದು ತುಂಬ ಚರ್ಚಾಸ್ಪದ) ರೋಹಿಂಟನ್ ಮಿಸ್ಟ್ರಿಯ Such a Long Journey ಕಾದಂಬರಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಪಠ್ಯವಾದಾಗಲೂ ಹೀಗೇ ವರ್ತಿಸಿತ್ತು. ಆ ಕಾದಂಬರಿ ೧೯೯೧ ರಲ್ಲಿ ಬೂಕರ್ ಪ್ರಶಸ್ತಿಯ ಶಾರ್ಟ್ ಲಿಸ್ಟ್  ಸೇರಿದ್ದ ಒಂದು ಪ್ರತಿಷ್ಠಿತ ಪಠ್ಯ.  ಪುಸ್ತಕಗಳನ್ನು ಸುಡುವ ಸಂಸ್ಕೃತಿ ನಾಜಿಗಳನ್ನು ನೆನಪಿಸುತ್ತದೆ. ‘ಸಂಸ್ಕೃತಿ-ರಕ್ಷಕರು’ ಎಂದು ತಮ್ಮನ್ನು ಕರೆದುಕೊಳ್ಳುವ ಅಕ್ಷರ-ದ್ವೇಷಿಗಳು ಮಿಸ್ತ್ರಿಯವರ ಕಾದಂಬರಿಯ ಪ್ರತಿಗಳನ್ನು ಸುಟ್ಟು ಬೀಗಿದ್ದರು.

ಗುಜರಾತ್ ಪ್ರಭುತ್ವ 2010 ರಲ್ಲಿ ಪುಲಿಟ್ಜರ್ ಪ್ರಶಸ್ತಿ ವಿಜೇತ ಲೇಖಕ ಜೋಸೆಫ್ ಲೆಲಿವೆಲ್ಡ್ ಅವರ Great Soul: Mahatma and His Struggle with India ಎಂಬ ಕೃತಿಯನ್ನು ಭಾರತದಲ್ಲಿ ಬಿಡುಗಡೆಯಾಗುವ ಮುಂಚೆಯೇ ಬಹಿಷ್ಕರಿಸಿತ್ತು. ಸಲಿಂಗಕಾಮಿಯಾಗಿದ್ದಿರಬಹುದಾದ ಒಬ್ಬ ಜರ್ಮನ್ ವ್ಯಕ್ತಿಯ ಜೊತೆ ಗಾಂಧೀಜಿಗೆ ಸ್ನೇಹವಿತ್ತು ಎನ್ನುವುದನ್ನು ಕೃತಿ ವೈಭವೀಕರಿಸುತ್ತದೆ ಎಂದು ಯಾರೋ ಹೇಳಿದರಂತೆ. ಅದು ಸುಳ್ಳು ಎಂದು ನಂತರ ತಿಳಿದು ಬಂದರೂ ಸಹ ನಿಷೇಧ ಮಾತ್ರ ಹಾಗೆಯೇ ಉಳಿಯಿತು. ಬಿಟ್ಟ ಬಾಣ ಮರಳಿ ಬಾರದು!

ನಾನಿದ್ದ ಕಿವಿನಾಡಿನ ಲೈಬ್ರರಿಗಳಲ್ಲಿ world’s banned books ಎಂಬ ವಿಭಾಗವೇ ಇರುತ್ತಿತ್ತು. ಮತ್ತು ಅದರ ಪ್ರದರ್ಶನವೂ ನಡೆಯುತ್ತಿತ್ತು. ಉದ್ದೇಶ ಇಷ್ಟೇ: ಎದುರಿಗಿಟ್ಟಿದ್ದೇವೆ, ಪ್ರಜ್ಞಾವಂತ ಓದುಗರು ಪರಾಮರ್ಶಿಸಬೇಕು! ಯಾಕೆಂದರೆ ಬೌದ್ಧಿಕ ಸ್ವಾತಂತ್ರ್ಯ ಎನ್ನುವುದು ಪ್ರಜಾಪ್ರಭುತ್ವದ ಒಂದು ಮುಖ್ಯ ಗುಣ. ಕೋಮುವಾದಿಗಳ ಪ್ರಕಾರ  ಸರಕಾರ ಇದ್ದುಕೊಳ್ಳಲಿ, ಆದರೆ ಅದು ಪುರೋಹಿತಶಾಹಿಯಾಗಿರಲಿ!

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇಷ್ಟೂ ಕ್ಯಾರೆ ಎನ್ನದ ಹಿಂದೂ ಕೋಮುವಾದಿಗಳ ‘ಸ್ಪರ್ಧಾತ್ಮಕ ಅಸಹನೆ’ ಬಗ್ಗೆ ಸಲೀಲ್ ತ್ರಿಪಾಠಿ ಸಾಕಷ್ಟು ಬರೆದಿದ್ದಾರೆ. ಇರಲಿ, ಪಟ್ಟಿಯನ್ನು ಎಷ್ಟು ಬೇಕಾದರೂ ಬೆಳೆಸಬಹುದು. ಆದರೆ ಅಂತಹ ಪಟ್ಟಿಯಲ್ಲಿ ಒಂದಾದರೂ ಪಠ್ಯವನ್ನು ಓದುವ ಪ್ರಯತ್ನವನ್ನಾದರೂ ಮಾಡಬೇಕು ಎಂದು ರಾಮಾನುಜನ್ನರ ‘ಮುನ್ನೂರು ರಾಮಾಯಣಗಳು’ ಪಠ್ಯದ ಭಾಷಾಂತರವನ್ನು ಇಲ್ಲಿ ಕೊಡಲಾಗಿದೆ. ಮೂಲ ಅಂತರ್ಜಾಲದಲ್ಲಿ ಹಲವಾರು ಕಡೆ ಲಭ್ಯವಿದೆ.

1988 ರಲ್ಲಿ ಸಲ್ಮಾನ್ ರಶ್ದಿ ಅವರ Satanic Verses ಇಸ್ಲಾಮಿಗೆ ಅವಮಾನ ಮಾಡಿದೆ ಎಂಬ ಕಾರಣದಿಂದ ನಿಷೇಧಕ್ಕೆ ಒಳಗಾಗಿತ್ತು. ಖೋಮೇನಿಯಂತೂ ರಶ್ದಿಯವರ ತಲೆದಂಡವನ್ನು ಬೇಡಿ ಬೊಬ್ಬೆ ಹೊಡೆದಿದ್ದ.  2003ರಲ್ಲಿ ವೆಂಡಿ ಡೋನಿಗರ್ ಎಂಬ ಭಾರತಶಾಸ್ತ್ರಜ್ಞೆಯ ಮೇಲೆ ಭಾರತೀಯ ಮೂಲದ ವ್ಯಕ್ತಿಯೊಬ್ಬ ಲಂಡನ್ನಿನಲ್ಲಿ ಮೊಟ್ಟೆಯನ್ನು ಎಸೆದ. ಕಾರಣ? ನಮ್ಮ ‘ಪವಿತ್ರ ಪಠ್ಯ’ಗಳಲ್ಲಿ ಇದ್ದ ಲೈಂಗಿಕತೆಗೆ ಆಕೆ ಒತ್ತು ಕೊಟ್ಟು ಲೇಖನಗಳನ್ನು ಬರೆದಿದ್ದರು! ಹಾಗಿದ್ದರೆ ಭಾರತದಾದ್ಯಂತ ದೇವಾಲಯಗಳಲ್ಲೇ  ಇರುವ ಲೈಂಗಿಕ ಪ್ರಧಾನ ಶಿಲ್ಪಗಳನ್ನೆಲ್ಲಾ ಏನು ಮಾಡುತ್ತಾರೋ! ಕಲೆಯನ್ನು ನಾಶ ಮಾಡಿ ಸಂಸ್ಕೃತಿಯನ್ನು ರಕ್ಷಿಸಿದೆವು ಎಂದು ಬೀಗಬಹುದೋ ಏನೋ!

ಆದರೆ ಅಷ್ಟು ಸುಲಭವಾಗಿ ಅಳಿಸಲಾಗುವುದೇ? ರಾಮಾನುಜನ್ನರ ಒಂದು ಪದ್ಯವೇ ಅದನ್ನು ಹೇಳುತ್ತದೆ:

ಯಾವುದೂ

ಯಾವುದೂ ಅಳಿಸಿ ಹೋಗುವುದಿಲ್ಲ. ಸ್ಲೇಟಿ
ನಲ್ಲಿ ಬರೆದು ಅಳಿಸಿ ಬರೆದು ಅಳಿಸಿ
ದ ಅಕ್ಷರಲಕ್ಷ್ಮಿ ಮೆಕ್ಸಿಕೋನಲ್ಲಿದ್ದಾಗ ಬಾಗಿಲಿ
ಗೆ ಬಂದು ಬಾಗಿಲು ಹಾಕಿದೆ. ಅವಳ ಬೆರಳು
ಸಿಕ್ಕಿ ರಕ್ತ ಬಂತು. ನಾನು ಒಳಗೆ ಕರೆದು
ಗಾಯಕ್ಕೆ ಬ್ಯಾಂಡೇಜು ಕಟ್ಟಿದೆ. ಆ ಸ್ಪಾನಿಷ್ಟ
ನಲ್ಲಿ ನನ್ನ ಇಂಗ್ಲೀಷು. ನನ್ನ ಇಂಗ್ಲೀಷಿನಲ್ಲಿ ಈ ಇವಳ
ಕನ್ನಡದ ಬ್ಯಾಂಡೇಜು ಬೆರಳು.

ಚಿಕ್ಕಂದು ಸತ್ತ
ಸಂಪಗೆಮನೆ ಹುಡುಗಿಯ ಬಾದಾಮಿ ಬಾಯಿ
ಹಾಂಕಾಂಗು ಸೂಳೆಯರ ಮುಖದಲ್ಲಿ.
ಯಾವುದೂ ಅಳಿಸಿ
ಹೋಗುವುದಿಲ್ಲ, ಸ್ವಾಮೀ.

***

ಬೌದ್ಧಿಕ ಋಣ
ರಮಾಕಾಂತ ಜೋಶಿ ಮತ್ತು ಎಸ್. ದಿವಾಕರ್ (ಸಂ), . ಕೆ. ರಾಮಾನುಜನ್ ಸಮಗ್ರ, ಧಾರವಾಡ: ಮನೋಹರ ಗ್ರಂಥ ಮಾಲಾ, ೨೦೧೧
  1. Ramanujan, ‘Three Hundred Ramayanas: Five Examples and Three Thoughts on Translation’, https://archive.org/details/akramanujan-three-hundred-ramayanas
BBC News, ‘Ramayana: An ‘epic’ controversy’, https://www.bbc.com/news/world-south-asia-15363181#:~:text=By,the essay offend Hindu beliefs.

*****

(ಒಮ್ಮೆ ಒಬ್ಬ ಕನ್ನಡ ವಿದ್ವಾಂಸರ ಜೊತೆ ಮಾತಾಡುತ್ತಾ Camille Bulcke ಪಟ್ಟಿ ಮಾಡಿದ್ದ ಮುನ್ನೂರು ರಾಮಾಯಣಗಳ ಬಗ್ಗೆ ಪ್ರಸ್ತಾಪ ಮಾಡಿದಾಗ ಅವರು ಇತ್ತೀಚೆಗೆ ಎಲ್ಲ ಪ್ರಕಾರಗಳು ಸೇರಿದಂತೆ ಕನ್ನಡದಲ್ಲೇ ಸುಮಾರು ಸಾವಿರದಷ್ಟು ರಾಮಾಯಣಗಳ ಲೆಕ್ಕ ಹಾಕಿದ್ದರ ಬಗ್ಗೆ ಹೇಳಿದರು. ಇನ್ನೊಬ್ಬರು ತೆಲುಗಿನಲ್ಲಿ ಸಹ  ಸಾವಿರದಷ್ಟು ಇರುವ ಅಂಶದ ಬಗ್ಗೆ ಗಮನ ಸೆಳೆದರು. ಆದ್ದರಿಂದ ಇಲ್ಲಿ ‘ಮುನ್ನೂರು’ ಎನ್ನುವುದನ್ನು ಅಕ್ಷರಶಃ ಅರ್ಥಮಾಡಿಕೊಳ್ಳಬಾರದು. – ಎಕೆಆರ್)

ಎಷ್ಟು ರಾಮಾಯಣಗಳು ಇವೆ? ಮುನ್ನೂರೇ? ಅಥವಾ ಮೂರು ಸಾವಿರವೇ? ಕೆಲವು ರಾಮಾಯಣಗಳ ಕೊನೆಯಲ್ಲಿ ‘ಎಷ್ಟು ರಾಮಾಯಣಗಳು ಆಗಿ ಹೋಗಿವೆ?’ ಎಂಬ ಪ್ರಶ್ನೆಯನ್ನೂ ಸಹ ಕೇಳಲಾಗಿದೆ. ಅದಕ್ಕೆ ಉತ್ತರವಾಗಿ ಇನ್ನೊಂದು ಕಥೆಯನ್ನು ಹೇಳಲಾಗುತ್ತೆ. ಅವುಗಳಲ್ಲಿ ಇದೂ ಒಂದು.

ಒಮ್ಮೆ ರಾಮ ತನ್ನ ಸಿಂಹಾಸನದ ಮೇಲೆ ವಿರಾಜಮಾನನಾಗಿದ್ದಾಗ ಅವನ ಉಂಗುರ ಬಿದ್ದು ಹೋಯಿತು. ನೆಲ ಮುಟ್ಟಿದ ತಕ್ಷಣವೇ ಅಲ್ಲೊಂದು ತೂತು ಕಾಣಿಸಿಕೊಂಡು ಅದರೊಳಗೆ ಜಾರಿ ಮಾಯವೇ ಆಯಿತು. ಸರಿ, ರಾಮ ಪಾದದ ಬಳಿಯೇ ಕೂತಿದ್ದ ತನ್ನ ನೆಚ್ಚಿನ ಭಂಟ ಹನುಮಂತನಿಗೆ ಅದನ್ನು ಮರಳಿ ತರುವಂತೆ ಆದೇಶವಿತ್ತ.

ಹನುಮಂತ ತೂತಿಗಿಂತ ಕಿರಿದಾಗಿ ಬೆಟ್ಟಕ್ಕಿಂತ ಹಿರಿದಾಗಿ ಬೆಳೆಯಬಲ್ಲ ಶಕ್ತಿಯಿದ್ದವ. ಪ್ರಭುವಿನ ಅಪ್ಪಣೆಯನ್ನು ಪಾಲಿಸಲು ತಕ್ಷಣವೇ ತೂತಿನೊಳಗೆ ಕಾಣೆಯಾದ.

ಕೆಳಗೆ, ಅದರೊಳಗೆ, ಆಳಕ್ಕೆ ಹೋಗುತ್ತಲೇ ಇದ್ದ ಹನುಮಂತ ಥಟ್ಟನೆ ಪಾತಾಳದ ನೆಲದ ಮೇಲೆ ಬಿದ್ದ. ಅಲ್ಲಿದ್ದ ಹೆಂಗಸರು ‘ನೋಡಿಲ್ಲಿ! ಪುಟಾಣಿ ಕಪಿ! ಮೇಲಿನ ಲೋಕದಿಂದ ಬಿತ್ತು!’ ಎಂದು ವಿಸ್ಮಯದಲ್ಲಿ ಸಂಭ್ರಮಿಸುತ್ತಾ ಅದನ್ನು ಹಿಡಿದು ಒಂದು ಊಟದ ತಟ್ಟೆಯಲ್ಲಿ ಇರಿಸಿದರು. ಪಾತಾಳದ ಭೂತರಾಜನಿಗೆ ಪ್ರಾಣಿಗಳನ್ನು ತಿನ್ನುವುದೆಂದರೆ ಬಲು ಇಷ್ಟ. ನಡುವಿನಲ್ಲಿ ಕಪಿಯನ್ನು ಕೂರಿಸಿ ಸುತ್ತ ರಾಜ ತಿನ್ನುವ ತರಕಾರಿಗಳನ್ನು ಹರಡಿ ಭೋಜನಕ್ಕೆ ಕಳಿಸಿದರು. ಈಗೇನು ಮಾಡುವುದು ಎಂದು ಯೋಚಿಸುತ್ತಾ ಕಪಿ ಕೂತಿತ್ತು.

ಅತ್ತ ಪಾತಾಳದಲ್ಲಿ ಇಷ್ಟೆಲ್ಲಾ ನಡೆಯುತ್ತಿರುವಾಗ ಇತ್ತ ಭೂಲೋಕದಲ್ಲಿ ರಾಮ ಕಾಯುತ್ತಾ ಕೂತಿದ್ದ. ಅಲ್ಲಿಗೆ ವಸಿಷ್ಠ ಮತ್ತು ಬ್ರಹ್ಮದೇವ ಬಂದರು. ‘ಕೇವಲ ನಿನ್ನ ಹತ್ತಿರ ಮಾತ್ರ ಮಾತಾಡುವುದಿದೆ. ಯಾರೂ ತೊಂದರೆ ಕೊಡಬಾರದು. ಸರಿಯಾ?’

‘ಸರಿ, ಬನ್ನಿ ಮಾತಾಡೋಣ.’

‘ಯಾರಾದರೂ ಥಟ್ಟನೆ ಬಂದುಬಿಟ್ಟರೆ? ಒಂದು ಕರಾರನ್ನು ಮಾಡಿಕೊಳ್ಳೋಣ. ನಡುವೆ ಬಂದು ತಲೆ ಹಾಕಿದವರ ತಲೆ ಹಾರಿಸಬೇಕು.’

ರಾಮನ ಒಪ್ಪಿಗೆಯಿತ್ತು.

ಆದರೆ ಯಾರನ್ನೂ ಒಳಗೆ ಬಿಡದಂತೆ  ಬಾಗಿಲು ಕಾಯುವ ನಂಬಿಕಸ್ಥ ಬೇಕಲ್ಲ? ಹನುಮಂತ ಉಂಗುರ ತರಲು ತಳಕ್ಕೆ ಜಾರಿಕೊಂಡಿದ್ದ. ಬಿಟ್ಟರೆ ಲಕ್ಷ್ಮಣನೇ ಇದಕ್ಕೆ ತಕ್ಕವನು. ‘ಯಾರನ್ನೂ ಒಳಗೆ ಬಿಡಕೂಡದು’ ಎಂದು ರಾಮ ಕಟ್ಟುನಿಟ್ಟಾದ  ಆದೇಶವಿತ್ತ.

ಲಕ್ಷ್ಮಣ ಬಾಗಿಲು ಕಾಯುತ್ತಿರುವಾಗ ವಿಶ್ವಾಮಿತ್ರ ಬಂದ. ‘ತಕ್ಷಣವೇ ರಾಮನನ್ನು ಕಾಣಬೇಕಿದೆ. ಅತ್ಯಂತ ತುರ್ತಾದ ಕೆಲಸ. ಎಲ್ಲಿ ರಾಮ?’

‘ಒಳಗೆ ಹೋಗಬೇಡಿ ಮುನಿಗಳೇ. ತುಂಬ ಮುಖ್ಯವಾದ ಸಮಾಲೋಚನೆ ನಡೀತಿದೆ.’

‘ನನ್ನಿಂದಲೂ ಮುಚ್ಚಿಡುವಂಥದ್ದು ಏನಿದೆ? ನಾನು ರಾಮನನ್ನು ಕಾಣಬೇಕು. ಈಗಿಂದೀಗಲೇ.’

‘ಅದಕ್ಕೆ ನಾನು ರಾಮನ ಅನುಮತಿಯನ್ನು ಪಡೆಯಬೇಕು.’

‘ಸರಿ, ಹೋಗಿ ಕೇಳು.’

‘ಆದರೆ ಈಗಲ್ಲ. ರಾಮ ಹೊರಗೆ ಬಂದ ಮೇಲೆಯೇ. ತಾವು ಕಾಯಬೇಕು.’

‘ಏನು? ಕಾಯುವುದೇ? ಈಗಿಂದೀಗಲೇ ಹೋಗಿ ನಾನು ಬಂದಿರುವ ಸುದ್ದಿಯನ್ನು ರಾಮನಿಗೆ ತಿಳಿಸದಿದ್ದರೆ ನನ್ನ ಶಾಪದ ಬಲದಿಂದ ಇಡೀ ಅಯೋಧ್ಯೆಯನ್ನೇ ಸುಡುತ್ತೇನೆ, ಎಚ್ಚರಿಕೆ!’

ಲಕ್ಷ್ಮಣ ಮನಸ್ಸಿನಲ್ಲೇ ಲೆಕ್ಕ ಹಾಕಿದ. ನಾನು ಈಗ ಒಳಗೆ ಹೋದರೆ ಸಾಯಬೇಕಾದವನು ನಾನೊಬ್ಬನೇ. ಹೋಗದಿದ್ದರೆ ಈ ಕೋಪಿಷ್ಟ ಮುನಿಯ ಶಾಪಕ್ಕೆ ಇಡೀ ಅಯೋಧ್ಯೆಯೇ ಸುಟ್ಟು ಭಸ್ಮವಾಗುತ್ತದೆ. ನಾನೊಬ್ಬನೇ ಇದಕ್ಕೆ ತಲೆ ಕೊಡುವುದು ವಾಸಿ.

ಲಕ್ಷ್ಮಣ ಒಳಗೆ ಹೋದ. ರಾಮ ಏನೆಂದು ವಿಚಾರಿಸಿದ. ವಿಶ್ವಾಮಿತ್ರ ಬಂದಿರುವುದನ್ನು ಕೇಳಿ, ಸರಿ, ಒಳಗೆ ಕಳಿಸೆಂದ.

ನಿಜ ಏನೆಂದರೆ ಅಷ್ಟೊತ್ತಿಗೆ ಮಂತ್ರಾಲೋಚನೆ ಮುಗಿದಿತ್ತು. ಬ್ರಹ್ಮ-ವಸಿಷ್ಠರಿಗೆ ಹೇಳಬೇಕಿದ್ದು ಇಷ್ಟೇ: ‘ಭೂಲೋಕದಲ್ಲಿ ನಿನ್ನ ಕೆಲಸ ಮುಗಿದಿದೆ. ರಾಮನ ಅವತಾರ ಕೊನೆಯಾಗಬೇಕು. ಈ ಮನುಷ್ಯ ದೇಹವನ್ನು ತ್ಯಜಿಸಿ ಮೇಲೆ ಬಾ. ದೇವತೆಗಳು  ನಿನಗಾಗಿ ಕಾಯುತ್ತಿದ್ದಾರೆ.’

ಲಕ್ಷ್ಮಣ ಹೇಳಿದ, ‘ಅಣ್ಣಾ, ನೀನು ನನ್ನ ತಲೆ ಹಾರಿಸಬೇಕು.’

ರಾಮ ತಲೆಯಾಡಿಸುತ್ತಾ ಹೇಳಿದ, ‘ಹಾಗೇನಿಲ್ಲ. ನಮ್ಮ ನಡುವಿನ ಮಾತುಕತೆ ಮುಗಿದಿತ್ತು. ತಲೆ ಹಾರಿಸುವ ಪ್ರಶ್ನೆ ಯಾಕೆ?’

ಲಕ್ಷ್ಮಣ ಅದಕ್ಕೆ ಒಪ್ಪಲಿಲ್ಲ. ‘ತಮ್ಮನೆಂಬ ಕಾರಣಕ್ಕೆ ರಾಮ ಮಾತಿಗೆ ತಪ್ಪಿದ ಎಂದು ನಿನ್ನ ಮೇಲೆ ಅಪವಾದ ಬರುತ್ತದೆ. ಹೆಂಡತಿಯನ್ನು ಸಹ ಕಾಡಿಗೆ ಕಳಿಸಿದ ನುಡಿಪಾಲಕ ನೀನು. ನನಗೆ ಶಿಕ್ಷೆಯಾಗಲೇಬೇಕು.’

ಲಕ್ಷ್ಮಣ ಶೇಷನ ಅವತಾರ. ವಿಷ್ಣು ವಿರಾಜಮಾನನಾದ ಸಾಕ್ಷಾತ್ ಶೇಷ. ಅವನ ಕಾಲವೂ ಮುಗಿದಿತ್ತು. ಸೀದಾ ಸರಯೂ ನದಿಗೆ ಹೋಗಿ ಬಿದ್ದು ಪ್ರಾಣ ಕಳೆದುಕೊಂಡ.

ಲಕ್ಷ್ಮಣ ದೇಹತ್ಯಾಗ ಮಾಡಿದ ಮೇಲೆ ರಾಮ ತನ್ನ ಆಪ್ತರಾದ ವಿಭೀಷಣ, ಸುಗ್ರೀವ, ಮತ್ತು ಇತರರನ್ನು ಕರೆಸಿ, ಸಮಾಲೋಚನೆ ನಡೆಸಿ ಲವ-ಕುಶರಿಗೆ ಪಟ್ಟ ಕಟ್ಟಿ ತಾನೂ ಸರಯೂ ನದಿಯನ್ನು ಪ್ರವೇಶಿಸಿದ.

ಇದೆಲ್ಲ ನಡೆಯುತ್ತಿರುವಾಗ ಹನುಮಂತ ಪಾತಾಳದಲ್ಲಿದ್ದನಲ್ಲ? ಭೂತರಾಜನ ಬಳಿಗೆ ಅವನನ್ನು ಒಯ್ದಾಗ ಅವನ ಬಾಯಿಂದ ಬರುತ್ತಿದ್ದದ್ದು ಒಂದೇ ನುಡಿ. ‘ರಾಮ, ರಾಮ, ರಾಮ…’

ಭೂತರಾಜ ಕೇಳಿದ, ‘ಯಾರು ನೀನು?’

‘ಹನುಮಂತ.’

‘ಹನುಮಂತ? ಇಲ್ಲಿಗೇಕೆ ಬಂದೆ?’

‘ರಾಮನ ಉಂಗುರ ನೆಲದ ರಂಧ್ರದಲ್ಲಿ ಬಿದ್ದು ಹೋಯಿತು. ಅದನ್ನು ಕೊಂಡೊಯ್ಯಲು ಬಂದಿದ್ದೇನೆ.’

ರಾಜ ಅತ್ತಿತ್ತ ಕಣ್ಣುಹಾಯಿಸಿ ಒಂದು ಹರಿವಾಣವನ್ನು ತರಿಸಿ ಹನುಮಂತನಿಗೆ ತೋರಿಸಿದ. ಅದರಲ್ಲಿ ಸಾವಿರಾರು ಉಂಗುರಗಳಿದ್ದವು. ಅವೆಲ್ಲ ರಾಮನ ಉಂಗುರಗಳೇ. ‘ಇದರಲ್ಲಿ ನಿನ್ನ ರಾಮನ ಉಂಗುರ ಯಾವುದೋ ಅದನ್ನು ಕೊಂಡೊಯ್ಯಬಹುದು.’

ಹನುಮಂತ ಈಗ ಗೊಂದಲಕ್ಕೆ ಬಿದ್ದ. ಎಲ್ಲವೂ ಒಂದೇ ತರ ಇವೆಯಲ್ಲ! ಆರಿಸುವುದಾದರೂ ಹೇಗೆ?

ಈಗ ಭೂತರಾಜ ಹೇಳಿದ, ‘ನೋಡು, ಇಲ್ಲಿ ಎಷ್ಟು ಉಂಗುರಗಳಿವೆಯೋ, ಅಷ್ಟು ಮಂದಿ ರಾಮರು ಆಗಿಹೋಗಿದ್ದಾರೆ. ಒಂದು ಅವತಾರ ಮುಗಿಯುವಾಗ ಆ ರಾಮನ ಉಂಗುರ ಕೆಳಗೆ ಬೀಳುತ್ತದೆ. ನಾವು ಅದನ್ನು ಹೆಕ್ಕಿ ಇಡುತ್ತೇವೆ. ನೀನೀಗ ಹೋಗಬಹುದು.’

ಸರಿ, ಹನುಮಂತ ಅಲ್ಲಿಂದ ಹೊರಟ.

*****

ಈ ಕಥೆಯನ್ನು  ಸಾಮಾನ್ಯವಾಗಿ ಎಷ್ಟು ರಾಮರು ಇದ್ದರೋ, ಅಷ್ಟೂ  ರಾಮಾಯಣಗಳು ಇವೆ ಎಂದು ಸೂಚಿಸಲು ಬಳಸಿಕೊಳ್ಳಲಾಗುತ್ತದೆ. ಕಳೆದ ಎರಡೂವರೆ ಸಾವಿರ ವರ್ಷಗಳಷ್ಟು ವರ್ಷಗಳಲ್ಲಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಹೊಮ್ಮಿರುವ ರಾಮಾಯಣದ ಸಂಖ್ಯೆ ಮತ್ತು ಅವುಗಳ ಪ್ರಭಾವವನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ. ರಾಮನ ಕಥೆಗಳು ಲಭ್ಯವಿರುವ ಭಾಷಾಪಟ್ಟಿಯನ್ನೊಮ್ಮೆ ಗಮನಿಸಿದರೂ ಸಾಕು: (ವಿಯೆಟ್ನಾಮಿನ) ಅನ್ನಾಮಿ, ಬಾಲಿ, ಬಂಗಾಳಿ, ಕಾಂಬೋಡಿ, ಚೈನಿ, ಗುಜರಾತಿ, ಜಾವನಿ, ಕನ್ನಡ, ಕಾಶ್ಮೀರಿ, ಖೋಟಾನಿ, ಲಾವೋನಿ, ಮಲೇಶಿಯನ್, ಮರಾಠಿ, ಒರಿಯಾ, ಪ್ರಾಕೃತ, ಸಂಸ್ಕೃತ, ಸಂತಾಲಿ, ಸಿಂಹಳೀಯ, ತಮಿಳು, ತೆಲುಗು, ಥಾಯ್, ಟಿಬೆಟನ್ ಇತ್ಯಾದಿ. ಪಾಶ್ಚಿಮಾತ್ಯ ಭಾಷೆಗಳನ್ನು ಇಲ್ಲಿ ಸೇರಿಸಿಲ್ಲ.

ಶತಮಾನಗಳ ಅವಧಿಯಲ್ಲಿ ಈ ಭಾಷಾಪಟ್ಟಿಯಲ್ಲಿರುವ  ಕೆಲವಂತೂ ಒಂದಕ್ಕಿಂತ ಹೆಚ್ಚು ರಾಮನ ಕಥೆಗಳನ್ನು ಹೊಮ್ಮಿಸಿವೆ. ಸಂಸ್ಕೃತ ಒಂದರಲ್ಲೇ ಕಾವ್ಯ, ಪುರಾಣಗಳ ರೂಪದಲ್ಲಿ ಇಪ್ಪತ್ತೈದಕ್ಕಿಂತಲೂ ಹೆಚ್ಚು ರಾಮಕಥೆಗಳಿವೆ. ಶಾಸ್ತ್ರೀಯ ಮತ್ತು ಜಾನಪದೀಯ ನೆಲೆಗಳೆರಡರಲ್ಲೂ  ನಾಟಕ, ನೃತ್ಯ-ನಾಟಕ ಮತ್ತು ಇತರ ರೂಪಗಳನ್ನು ಸೇರಿಸಿದರೆ ಅದರ ಸಂಖ್ಯೆ ಇನ್ನೂ ಹೆಚ್ಚು. ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಸಂಸ್ಕೃತಿಗಳಲ್ಲಿ ಇರುವ ಎಲ್ಲ ಶಿಲ್ಪ, ಉಬ್ಬುಶಿಲ್ಪ, ಮುಖವಾಡ, ನೆರಳಿನಾಟ, ಮತ್ತು ಚಕ್ಕಳಗೊಂಬೆ ಪ್ರದರ್ಶನಗಳನ್ನೂ ಸೇರಿಸಬೇಕು.

Camille Bulcke (1950) ಎಂಬ ಹೆಸರಿನ ರಾಮಾಯಣ ವಿದ್ಯಾರ್ಥಿಯೊಬ್ಬ ಮುನ್ನೂರು ರಾಮಕಥೆಗಳನ್ನು ಪಟ್ಟಿ ಮಾಡಿದ್ದ. ಹದಿನಾಲ್ಕನೆಯ ಶತಮಾನದಷ್ಟು ಹಿಂದಿನ ಕುಮಾರವ್ಯಾಸ ‘ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ’ ಎಂದು ಭೂಮಿಯನ್ನು ಹೊತ್ತಿರುವ ಫಣಿರಾಯನ ಸಂಕಷ್ಟಕ್ಕೆ ಮರುಗಿ, ಬರೆಯಲು ಮಹಾಭಾರತವನ್ನು ಆಯ್ದುಕೊಂಡಿದ್ದ.

ಹಿಂದಿನ ವಿದ್ವಾಂಸರು, ಮತ್ತು ಭಾಷಾಂತರಕಾರರೆಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸುತ್ತಾ ಹಲವಾರು ಸಂಸ್ಕೃತಿ, ಭಾಷೆ, ಮತ್ತು ಧಾರ್ಮಿಕ ಸಂಪ್ರದಾಯಗಳಲ್ಲಿ ಹೊಮ್ಮಿರುವ ನೂರಾರು ರಾಮಕಥೆಗಳು ಪರಸ್ಪರ ಹೇಗೆ ಪ್ರಭಾವಿಸಿದವು, ಯಾವ್ಯಾವ ರೀತಿಯ ಅನುವಾದಗಳಿಗೆ ಒಳಗಾದವು, ಅಲ್ಲಿ ನಡೆದ  ಕಥನ-ಕಸಿ ಯಾವ ಬಗೆಯದ್ದು ಮತ್ತು ಆ ಪ್ರಕ್ರಿಯೆಯಲ್ಲಿ ಆದ ಪಲ್ಲಟಗಳೇನು ಎಂದು ವಿಂಗಡಿಸಿ ಸ್ಪಷ್ಟಪಡಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಅದರಿಂದ ಉಳಿದವರಿಗೂ ಉಪಯೋಗವಾಗಬಹುದು ಎಂದು ಆಶಿಸುತ್ತೇನೆ.

*****

ವಾಲ್ಮೀಕಿ ರಾಮಾಯಣ ಮತ್ತು ಕಂಬನ್ ರಾಮಾಯಣ: ಇಬ್ಬರು ಅಹಲ್ಯೆಯರು

ಸ್ಪಷ್ಟವಾಗಿಯೇ ಈ ನೂರಾರು ರಾಮಕಥೆಗಳು ಪರಸ್ಪರ ಭಿನ್ನವಾಗಿವೆ. ಅದನ್ನು ಸೂಚಿಸಲೆಂದೇ ‘ರಾಮಕಥೆ’ (tellings) ಎಂಬ ಪದಗಟ್ಟನ್ನು ಆರಿಸಿಕೊಂಡಿದ್ದೇನೆ. ‘ಆವೃತ್ತಿಗಳು’ ಎಂದರೆ ಅವುಗಳಿಗೆ ಒಂದು ‘ಮಹಾಮೂಲ’ ಇದೆ ಎಂದು ತಪ್ಪಾಗಿ ಗ್ರಹಿಸಲು ಅವಕಾಶವಿದೆ. ಸಾಮಾನ್ಯವಾಗಿ ಸಂಸ್ಕೃತದಲ್ಲಿರುವ, ಎಲ್ಲಕಿಂತ ಹಳೆಯದಾದ, ಮತ್ತು ಪ್ರತಿಷ್ಠಿತ ವಾಲ್ಮೀಕಿ ರಾಮಾಯಣವೇ ಮೂಲ ಎಂದು ನಂಬಲಾಗಿದೆ. ಆದರೆ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ವಲಸೆ ಹೋದದ್ದು ಕೇವಲ ವಾಲ್ಮೀಕಿ ರಾಮಾಯಣವಲ್ಲ ಎನ್ನುವುದು ಮುಂದಿನ ಭಾಗಗಳಲ್ಲಿ ಸ್ಪಷ್ಟವಾಗುತ್ತಾ ಹೋಗುವುದನ್ನು ಗಮನಿಸಬಹುದು.

ಶುರು ಮಾಡುವ ಮುಂಚೆ ಕೆಲವು ಸ್ಪಷ್ಟನೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ. ಸಂಪ್ರದಾಯವೇ ‘ರಾಮಕಥೆ’ ಮತ್ತು ‘ರಾಮಾಯಣ’ಗಳ ನಡುವಿನ ವ್ಯತ್ಯಾಸವನ್ನು ಹೇಳುತ್ತದೆ. ರಾಮಾಯಣ ನಿರ್ದಿಷ್ಟ ವ್ಯಕ್ತಿಗಳಿಂದ ಹೊಮ್ಮಿದ್ದು. ಉದಾಹರಣೆಗೆ ವಾಲ್ಮೀಕಿ, ಕಂಬನ್, ಅಥವಾ ಕೃತ್ತಿವಾಸ. ರಾಮಾಯಣ ಎಂದು ಕರೆಯುವ ರೂಢಿ ಇದ್ದರೂ ಸಹ ಅದರ ಶೀರ್ಷಿಕೆಗಳು ಬೇರೆ. ಉದಾಹರಣೆಗೆ ‘ಇರಾಮಾವತಾರಂ’, ‘ರಾಮಚರಿತಮಾನಸ’, ‘ರಾಮಕೀಯನ್’ ಇತ್ಯಾದಿ. ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ ಕಥೆಯ ಹಂದರ ಒಂದೇ ಇದ್ದರೂ ಸಹ ಕಥಾನಕ ಅತ್ಯಂತ ವಿಭಿನ್ನವಾಗಿಯೇ ಇರಬಹುದು. ಘಟನಾವಳಿಯಲ್ಲಿ ಸಾಮ್ಯತೆ ಇದ್ದರೂ ಸಹ ಕಥನಿಸುವ ರೀತಿ, ವಿವರ, ಧಾಟಿ, ನೇಯ್ಗೆಗಳಲ್ಲಿ ವ್ಯತ್ಯಾಸಗಳಿದ್ದು ಪರಿಣಾಮದಲ್ಲಿ ಬೇರೆಯಂತೆಯೇ ತೋರಬಹುದು.

ಇಲ್ಲಿ ಎರಡು ಕಥಾನಕಗಳಲ್ಲಿ ಒಂದೇ ಕಾಲದಲ್ಲಿ ನಡೆದ ‘ಅದೇ’ ಪ್ರಸಂಗವನ್ನು ಗಮನಿಸಲಾಗಿದೆ. ಮೊದಲನೆಯದು ಸಂಸ್ಕೃತ ಕೃತಿ ವಾಲ್ಮೀಕಿ ರಾಮಾಯಣದ ಬಾಲಕಾಂಡಕ್ಕೆ ಸೇರಿದ್ದು. ಎರಡನೆಯದು ಕಂಬನ್ ಕವಿಯ ತಮಿಳು ಕೃತಿ ‘ಇರಮಾವತಾರಂ’ನಲ್ಲಿ  ಬರುವ ಬಾಲಕಾಂಡಂ ಗೆ ಸೇರಿದ್ದು. ಇವೆರಡೂ ಕೃತಿಗಳು ಅಹಲ್ಯೆಯ ಕತೆಯನ್ನು  ನಿರೂಪಿಸುತ್ತವೆ.

ವಾಲ್ಮೀಕಿ: ಅಹಲ್ಯಾ ಪ್ರಸಂಗ

ಫಳಫಳನೆ ಹೊಳೆಯುತಿಹ
ಮಿಥಿಲೆಯನು ಕಂಡೊಡನೆ
ಋಷಿಗಳೆಲ್ಲರು ನುಡಿದರು,
ಭಲೇ! ಭಲೇ!

ಮಿಥಿಲೆಯ ಆಚೆಯಲಿ ಪುರಾತನ
ನಿರ್ಜನವಾದ ಸುಂದರ ಆಶ್ರಮವ
ಕಂಡು ರಾಘವನು ಕೇಳಿದನು,
ಇದಾವ ಪವಿತ್ರಸ್ಥಳ ಮುನಿವರ್ಯರೇ?

ಆಶ್ರಮದಂತಿದೆ, ಸನ್ಯಾಸಿಯಿಲ್ಲ,
ಹೇಳಿ ಗುರುಗಳೇ, ಕೇಳುವಾಸೆ ನನಗೆ,
ಯಾರದಾಗಿತ್ತು ಇದು? ರಾಘವನ
ಮಾತಿಗೆ ಮಹಾಮುನಿ ವಿಶ್ವಾಮಿತ್ರ,

ಆ ವಾಕ್ಯ ವಿಶಾರದ, ಇಂತೆಂದನು.
ಹೇಳುವೆನು ಕೇಳು, ರಾಘವ,
ಈ ಆಶ್ರಮದ ಮಹಾತ್ಮನು
ಕೋಪದಲಿ ಶಾಪವಿತ್ತ ಕತೆಯನ್ನು.

ಸ್ವರ್ಗವನೆ ನೆನಪಿಸುವ ಈ ಆಶ್ರಮ!
ದೇವತೆಗಳಿಗಿದು ಪೂಜ್ಯನೆಲ,
ತಪದಲ್ಲಿ ನಿರತನು ಋಷಿ ಗೌತಮ,
ಜೊತೆಗವನ ಹೆಂಡತಿ ಅಹಲ್ಯಾ!

ಉರುಳಿದವು ವರುಷಗಳೆಷ್ಟೋ,
ಒಮ್ಮೆ ಶಚಿ-ಪತಿ, ಸಹಸ್ರಾಕ್ಷ ಇಂದ್ರ,
ಗೌತಮನ ವೇಷದಲಿ ಧರೆಗಿಳಿದು
ಅಹಲ್ಯೆಗೆ ಇಂತೆಂದನು.

ಹೇ, ಸುಮಧ್ಯೇ, ಕಡುಪ್ರೇಮಿಗೆ
ಸಕಾಲದ ಹಂಗೇಕೆ? ಸಂಗಮವ
ಬಯಸಿಹೆನು, ನಿನ್ನೆಡೆಗೆ ಬಂದಿಹೆನು
ಒಂದಾಗು ನನ್ನಲ್ಲಿ ಇಂದೀಗಲೇ.

ಮುನಿವೇಷದಲ್ಲೂ ಮಿನುಗಿದ
ಸಹಸ್ರಕಣ್ಣುಗಳ ಬಲ್ಲದಿರಳೇ ಅಹಲ್ಯೆ?
ತಣಿದ ದೇಹವ ಹೊತ್ತು ನುಡಿದಳಿಂತು,
‘ಧನ್ಯೆ ಪ್ರಭೂ! ಮರಳಿ ಹೋಗಿರಿ
ಈ ಕ್ಷಣವೇ, ರಕ್ಷಿಸಿ ನಮ್ಮೆಲ್ಲರನು.

ನಗುವನು ಬೀರುತ್ತ ಇಂದ್ರನಿಂತೆಂದ,
ಹೇ ಸುನಿತಂಬಿನಿ, ಸಂತುಷ್ಟನಾಗಿಹೆನು,
ಮರಳುವೆನು ಬಂದಂತೆಯೇ,
ಕಳವಳಿಸದಿರು ನೀನು.

ಸಂಗಮದಿ ಮಿಂದೆದ್ದ ಪ್ರೇಮಿ
ತ್ವರಿತದಲಿ ಹೊರಬರಲು
ಕಣ್ಣೆದುರು ಕಂಡದ್ದೇನು?

ನದಿಯಲ್ಲಿ ಮಿಂದೆದ್ದ ತಪಸ್ವಿ!
ಕುಶತೃಣ, ದೀಪವನು ಹಿಡಿದಿದ್ದ
ತೇಜೋಮಯಿ, ಸಾಕ್ಷಾತ್ ಗೌತಮ!
ದೇವದಾನವರೆಲ್ಲರನು ಮೀರಿದ ಶಕ್ತಿ!

ಬೆಚ್ಚಿದ ಸುಂದರ ಇಂದ್ರನೀಗ ವಿವರ್ಣ!
‘ನನ್ನ ವೇಷವ ತಳೆದು
ಸಲ್ಲದನು ಗೈದ ದುರ್ಮಾರ್ಗಿ ನೀನು!
ವಿಫಲವಾಗಿ ಹೋಗು!

ಶಾಪವದು ಮುಗಿದಿಲ್ಲ, ಆದರೂ
ಉದುರಿದವು ಧರೆಯ ಮೇಲೆ,
ಸಹಸ್ರಾಕ್ಷನಿಗೆ ಈಗ ವೃಷಣವೇ ಇಲ್ಲ!
ಈಗ ಅಹಲ್ಯೆಯ ಸರದಿ,

‘ಗಾಳಿಯನು ಕುಡಿದು, ಬೂದಿಯಲಿ ಹೊರಳುತ್ತ
ಯಾರ ಕಣ್ಣಿಗೂ ಬೀಳದೆಲೆ ಸಹಸ್ರಾರು
ವರ್ಷ ಇಲ್ಲೇ ಬದುಕಿರು, ದುಷ್ಟೆ!
ರಾಮ ಬರುವನು, ಆ ಅಪ್ರತಿಮ ಶೂರ,
ದಶರಥನ ಪುತ್ರ, ಈ ದಟ್ಟಡವಿಗೆ.

ಲೋಭಮೋಹಗಳ ತ್ಯಜಿಸಿ
ಮರಳಿ ಸುರೂಪವ ಹೊತ್ತು
ಸಂತಸದಿ ಬರಬಲ್ಲೆ ನನ್ನೆಡೆಗೆ.
ಆ ತನಕ ನಿನಗಿದೇ ಗತಿ!’

ಹೀಗೆಂದು ಹೇಳುತಲಿ
ನಖಶಿಖಾಂತ ಉರಿಯುತಲಿ
ನಡೆದನಾ ಮುನಿವರ್ಯ ಸಿದ್ಧಚರಣರ
ನೆಲೆಯಾದ ಹಿಮಾಲಯದತ್ತ,
ತಪದಲ್ಲಿ ಮುಳುಗಿ ಶುದ್ಧವಾಗಲೆಂದು.

ಅ-ಫಲಸ್ಥ ಇಂದ್ರ ಅಗ್ನಿದೇವಾದಿಗಳಲಿ,
ಸಿದ್ಧ ಚರಣರಲಿ ಮೊರೆಯಿಟ್ಟ,
ಮಹಾಮುನಿಯ ತಪವನ್ನು
ಕೆಡಿಸಿದ್ದು ದೇವತೆಗಳ ಹಿತಕೆಂದೇ.

ನಾನೀಗ ಅ-ಫಲಸ್ಥ, ಅಹಲ್ಯೆ ರೂಪಹೀನೆ
ನನ್ನ ವೃಷಣಗಳ ಮರಳಿಸುವ
ಹೊಣೆ ನಿಮ್ಮದೇ ಎಂದಾಗ
ಹೊರಟರೆಲ್ಲರೂ ಪಿತೃದೇವರೆಡೆಗೆ.

ಮಾನವರು ಮೇಷವನು ನಿನಗೆಂದು
ಅರ್ಪಿಸುವರು, ಇಂದ್ರನಿಗೆ ವೃಷಣಗಳಿಲ್ಲ,
ಈ ಮೇಷಕ್ಕೆ ಇಹುದಲ್ಲ!
ಕೊಡಲಾಗದೆ ಅವನ್ನು ನಮ್ಮ ಇಂದ್ರನಿಗೆ?

ವೃಷಣಹೀನ ಮೇಷ ಪರಮ
ತುಷ್ಟಿಯು ದೇವರಿಗೆ, ಅರ್ಪಿಸಿದವಗೆ
ಪರಮಪ್ರಾಪ್ತಿಯು ಎಂದೆಲ್ಲ ಹೇಳಿ ಕಸಿ
ಮಾಡಿದರವನು ಸಾವಿರ ಕಣ್ಣಿನವಗೆ.

ಇಂದ್ರ ಮೇಷವೃಷಣನಾದ ಕಥೆಯಿದು,
ಕೇಳು ಮಹಾತೇಜ, ನೀನೀಗ ಆಶ್ರಮಕೆ
ಬಂದಾ ದೇವರೂಪಿಣಿ ಅಹಲ್ಯೆಯನು
ಬಿಡಿಸೆಂದ ವಿಶ್ವಾಮಿತ್ರ.

ಇದ ಕೇಳಿ ರಾಘವನು ಲಕ್ಷ್ಮಣನ
ಒಡಗೂಡಿ ಹಿಂಬಾಲಿಸಿದನು
ಮುನಿವರ್ಯರನು ಆಶ್ರಮದೊಳಗೆ,

ತಪದ ಫಲವಾಗಿ ಆತ್ಮದಾ
ಬೆಳಕಲ್ಲಿ ಹೊಳೆಹೊಳೆವ
ಅಹಲ್ಯೆ ಇದ್ದಳಲ್ಲಿ, ಅವರಿವರ,
ಸುರಾಸುರರ ಕಣ್ಣಿಗೂ ಬೀಳದಂತೆ.

ಅಹಲ್ಯಾ ಪ್ರಕರಣ: ಕಂಬನ್

ಗೋಪುರ ನಗರಿ ಮಿಥಿಲೆಯನು ತಲುಪಿ
ನಿಂದರಲ್ಲಿ ಕೋಟೆಯ ಬಾಗಿಲಲ್ಲಿ.
ಕಂಡವಲ್ಲಿ ಹಲಬಗೆಯ ಧ್ವಜಗಳು
ಗೋಪುರಗಳ ತಲೆಯಲ್ಲಿ.

ಬಯಲಲ್ಲಿ ಕಂಡಿತ್ತು ಎತ್ತರದ
ಕಪ್ಪು ಕಲ್ಲೊಂದು, ಒಂದಾನೊಂದು
ಕಾಲದ ಅಹಲ್ಯೆ!

ಮುನಿಪತ್ನಿ ಮದುವೆಯ ಕುರುಹಾದ
ಪಾತಿವ್ರತ್ಯಕ್ಕೆ ಎರವಾಗಿ
ಈ ದುಃಸ್ಥಿತಿಯ ತಲುಪಿದಾಕೆ.

ಬಿದ್ದು ರಾಮನ ಕಣ್ಣು
ಕಲ್ಲಿನ ಮೇಲೆ, ಪಾದದಾ
ಧೂಳದನು ಸವರಿತ್ತಷ್ಟೇ!

ಮೂರ್ಛೆ ಹೋದವ
ಮರೆವನ್ನು ಸರಿಸಿ
ಎಚ್ಚೆತ್ತುಕೊಳುವಂತೆ,

ಭಗವಂತನ ಪಾದವ ಕಂಡ
ಕರಿಹೆಣ ನಿಜರೂಪವ
ತಳೆದು ಹೊಳೆವಂತೆ,

ಹೊಮ್ಮಿದಳು ಅಹಲ್ಯೆ
ಗತದ ಜೀವಂತಿಕೆಯಲಿ
ಚೈತನ್ಯವ ಸೂಸುತಲಿ.

ರಾಮ ಈ ಸುಂದರ ಹೆಣ್ಣೇಕೆ ಕಲ್ಲಾಗಿದ್ದಳು ಎಂದು ಕೇಳಿದಾಗ ವಿಶ್ವಾಮಿತ್ರ ಹೇಳುತ್ತಾನೆ:

ಬರಿಯ ಚೈತನ್ಯವಾದ ಗೌತಮನ
ಗೈರುಹಾಜರಿಗೆ ಕಾದಿದ್ದ
ವಜ್ರಖಡ್ಗದಾರಿ ಇಂದ್ರ!

ಚಿಗರೆಗಣ್ಣಿನ ಮುನಿಪತ್ನಿ ಅಹಲ್ಯೆ!
ಅವಳ ತನಿಮೊಲೆಯ ಕನಸಿನಲಿ
ಇಂದ್ರ ಮಹಾ ಅಸ್ವಸ್ಥ!

ಮನ್ಮಥನ ಬಾಣಕ್ಕೆ, ಅಹಲ್ಯೆಯ
ನೋಟದೀಟಿಗೆ, ತತ್ತರಿಸಿ ಹೊರಳಾಡಿ
ಹೂಡಿದನು ಹಲವು ಉಪಾಯಗಳನು.

ನಿಷ್ಕಪಟಿ ಗೌತಮನೊಮ್ಮೆ
ಮನೆಯಲ್ಲಿರದ ಗಳಿಗೆಯ ನೋಡಿ
ಅವನದೇ ರೂಪವ ತಳೆದು
ಆಶ್ರಮವ ಹೊಕ್ಕನೇ!

ಕೂಡಿದನು ಅಹಲ್ಯೆಯನು,
ಹೀರಿದರು ಇಬ್ಬರೂ
ಮೊದಲ ರಾತ್ರಿಯ ಮಧುರವನು,
ಅವನಾರೆಂದು ಬಲ್ಲದಿರಳೇ?

ಆದರೇನು? ಸ್ವಂತವಲ್ಲದ ಸಿರಿಯ
ತೊರೆಯುವ ಮನ ಬಾರದೆ
ಸುಖದಲ್ಲಿ ನರಳಿದಳು!

ಮೂರುಕಣ್ಣಿನ ಮುನಿ,
ಸಾಕ್ಷಾತ್ ಶಿವ! ಕಾಣನೇ? ಅರಿಯನೇ?
ಧಾವಿಸುತ ಮರಳಿದನೇ!

ಬಿಲ್ಲಿಂದ ಬಾಣವನು ಬಿಡಲರಿಯ
ಗೌತಮನು, ಗೊತ್ತಿದ್ದೂ ಎರಡೇ,
ಆಶೀರ್ವಾದ, ಯಾ ಶಾಪ!
ಪಾರಾಗಲು ಸಾಧ್ಯವೇ?

ಗೌತಮನ ಕಂಡೊಡನೆ ಬೆದರಿ
ಬೆಚ್ಚಿ ನಿಂತಳು ಅಹಲ್ಯೆ,
ಕೊನೆಯಿರದ ಬ್ರಹ್ಮಾಂಡಕಿಂತಲೂ
ಹಿರಿದಾದ ಹಾದರದ ಲಜ್ಜೆಯಲಿ.

ತತ್ತರಿಸಿದ ಇಂದ್ರ ಬೆಕ್ಕು ರೂಪವ
ತಳೆದು ಕಳ್ಳ ಹೆಜ್ಜೆಯನಿಡುತ
ನಡೆದಿರಲು ಬೆಂಕಿಯನೆ
ಉಗುಳಿದವು ಮುನಿಕಂಗಳು.

ಬಾಯಿಂದ ಹೊಮ್ಮಿದ್ದು
ಬೆಂಕಿಯಾ ಬಾಣಗಳು,
ಸಾವಿರ ಯೋನಿಗಳಲಿ
ನಿನ್ನ ಮೈ ಮುಚ್ಚಿ ಹೋಗಲಿ!

ಕಣ್ಮುಚ್ಚಿ ತೆರೆಯುವ ಮುನ್ನ
ಇಂದ್ರನ ದೇಹವಿಡೀ ಯೋನಿಮಯ!
ಲಜ್ಜೆಯಲಿ ಕುಸಿದವನು
ತಡಬಡಿಸಿ ಹೊರಟನಲ್ಲಿಂದ.

ಈಗ ಎಳೆ ಹೆಂಡತಿಯ ಸರದಿ!
ಗುಲಾಮ ಹೆಣ್ಣು ನೀ! ಪತ್ನಿಯಲ್ಲ,
ಕಲ್ಲಾಗಿ ಹೋಗು ಈ ಕ್ಷಣವೇ!

ಮರುಗಳಿಗೆಯಲಿ ಉರುಳಿದಳು
ಅಹಲ್ಯೆ, ಕಪ್ಪು ಕಲ್ಲಾಗಿ!
ಬೀಳಬೀಳುತಲೇ ಬೇಡಿಕೊಂಡಳು,
ಹಿರಿತನವೆಂದರೆ ಸಹನೆ ಕ್ಷಮೆಗಳೇ ತಾನೆ?
ಶಿವನಂಥ ಪತಿಯೇ, ಕಾಲದ ಎಲ್ಲೆಯಿರಲಿ ಶಾಪಕ್ಕೆ.

ಗೌತಮನು ಅದಕಿಂತೆಂದ,
‘ರಾಮ ಬರುವನು, ಸುತ್ತ ದುಂಬಿಗಳು
ಜುಯ್ಯೆನ್ನುವ ಹೂಮಾಲೆಯನು ಧರಿಸಿ,
ಪವಿತ್ರ ಪಾದಧೂಳಿ ನಿನ್ನ ಸೋಕಿದ ಕ್ಷಣವೇ
ಕಲ್ಲು ದೇಹವ ನೀನು ತೊರೆಯಬಲ್ಲೆ.

ಇತ್ತ ದೇವತೆಗಳೆಲ್ಲ ತಮ್ಮ
ರಾಜನ ಪಾಡು ನೋಡಿ ಬ್ರಹ್ಮನನು
ಮುಂದಿರಿಸಿ ಗೌತಮನೆಡೆಗೆ
ಬಂದು ಬೇಡಿದರು ಕ್ಷಮಿಸಿಬಿಡೆಂದು.

ಗೌತಮನೀಗ ತುಸು ಶಾಂತ,
ಯೋನಿರೂಪದ ಗುರುತುಗಳೆಲ್ಲ
ಕಣ್ಗಳಾಗಲೆಂದು ಉಶ್ಯಪಿಸಿದ ಮೇಲೆ
ತೆರಳಿದರು ದೇವತೆಗಳೆಲ್ಲ ಸ್ವರ್ಗಕ್ಕೆ,
ಉಳಿದಳಿಲ್ಲಿ ಅಹಲ್ಯೆ, ಒಬ್ಬಳೇ! ಕಲ್ಲಾಗಿ!

*****

ಈ ಎರಡು ಕಥಾನಕಗಳಲ್ಲಿ ಇರುವ ವ್ಯತ್ಯಾಸವನ್ನು ಸಂಕ್ಷಿಪ್ತವಾಗಿ ಗುರುತಿಸಲು ಪ್ರಯತ್ನಪಡುತ್ತೇನೆ. ವಾಲ್ಮೀಕಿ ರಾಮಾಯಣದಲ್ಲಿ ಇಂದ್ರನಷ್ಟೇ ಪಾಲು ಅಹಲ್ಯೆಯದೂ ಇದೆ. ಕಂಬನ್ ಹೇಳುವ ಕಥೆಯಲ್ಲಿ ತಾನು ತಪ್ಪು ಮಾಡುತ್ತಿದ್ದೇನೆ ಎಂದು ಅವಳಿಗೆ ಅರಿವಾಗುತ್ತೇನೋ ನಿಜ, ಆದರೆ ಅರಸಿ ಬಂದಿರುವ ಸುಖವನ್ನು ಬಿಡುವ ಮನಸ್ಸಿಲ್ಲ. ಅವಳ ಋಷಿಪತಿ ಕೇವಲ ಚೈತನ್ಯರೂಪಿ ಎಂದು ಮೊದಲೇ ಸೂಚಿಸಲಾಗಿದೆ. ಆ ವಿವರ ಈ ಘಟನೆಗೆ ಒಂದು ರೀತಿಯ ಮನಶಾಸ್ತ್ರೀಯ ಸೂಕ್ಷ್ಮವನ್ನು ನೀಡಿದೆ. ಇಂದ್ರ ಸಹ ಬೆಕ್ಕಿನ ವೇಷದಲ್ಲಿ ಪಾರಾಗಲು ಪ್ರಯತ್ನಿಸುತ್ತಾನೆ ಎನ್ನುವುದು ಗಮನಿಸಬೇಕಾದ ಅಂಶ.  ಇಂತದ್ದೇ ಮಾದರಿಯನ್ನು ಹನ್ನೊಂದನೆಯ ಶತಮಾನದ ಸಂಸ್ಕೃತ ಪಠ್ಯ ‘ಕಥಾಸರಿತ್ಸಾಗರ’ ಎಂಬ ಜನಪದ ಸಂಗ್ರಹದಲ್ಲೂ ಕಾಣಬಹುದು. (ನೋಡಿ: tawney 1927).

ಇಂದ್ರನಿಗೆ ತಗುಲಿದ್ದು ಸಾವಿರ ಯೋನಿಗಳನ್ನು ದೇಹದ ಮೇಲೆ ಭರಿಸುವ  ಶಾಪ. ಉಶ್ಯಾಪದಲ್ಲಿ ಅದು ಸಾವಿರ ಕಣ್ಣುಗಳಾಗಿ ಬದಲಾಗುತ್ತದೆ. ಅಹಲ್ಯೆ ಬದಲಾಗದ ಕಲ್ಲಾಗಿಯೇ ಉಳಿಯಬೇಕು. ಅವರವರ ಪಾಪಕ್ಕೆ ತಕ್ಕ ಶಿಕ್ಷೆ. ಅಹಲ್ಯೆಯನ್ನು ಕಾಮದ ಕಣ್ಣಿಂದ ಕಂಡಿದ್ದಕ್ಕೆ ಕಣ್ಣುಗಳ ಶಿಕ್ಷೆ. ಅವನಿಗೆ ಸ್ಪಂದಿಸಿದ್ದಕ್ಕೆ ಯಾವ ಸ್ಪಂದನಕ್ಕೂ ಒಳಗಾಗದಂತೆ ಕಲ್ಲಾಗುವ ಶಿಕ್ಷೆ ಅಹಲ್ಯೆಗೆ.

ಈ ಮಾದರಿಗಳು ವಾಲ್ಮೀಕಿಯಲ್ಲಿ ಕಂಡುಬರುವುದಿಲ್ಲ. ಆದರೆ ದಕ್ಷಿಣ ಭಾರತದ ಜಾನಪದದಲ್ಲಿ ಮತ್ತು ಶಾಸನ, ಪುರಾತನ ತಮಿಳು ಕಾವ್ಯ, ಇತ್ಯಾದಿ ರಾಮಕಥೆಗಳಲ್ಲಿ ಕಂಡುಬರುತ್ತವೆ. ಕಂಬನ್ ತನಗಿಂತ ಮುಂಚಿನವನಾದ ವಾಲ್ಮೀಕಿಯ ಸಾಮಗ್ರಿಯನ್ನು ಇಡಿಯಾಗಿ ಬಳಸಿಕೊಳ್ಳುವುದಷ್ಟೇ ಅಲ್ಲ, ಅದರೊಂದಿಗೆ ಸ್ಥಳೀಯ ಜನಪದ ವಿವರಗಳನ್ನೂ ಹೆಣೆಯುತ್ತಾನೆ. ಅವನ ಮೂಲಕ ಅವು ಬೇರೆ ರಾಮಾಯಣಗಳ ಭಾಗವಾಗಿ ಸಾಗುತ್ತವೆ.

ತಂತ್ರದಲ್ಲಿ ಸಹ ಕಂಬನ್ ನಾಟಕೀಯತೆಗೆ ವಾಲ್ಮೀಕಿಗಿಂತ ಹೆಚ್ಚು ಒತ್ತು ಕೊಟ್ಟವ. ಮೊದಲು ರಾಮನ ಪಾದಸ್ಪರ್ಶಕ್ಕೆ ಅಹಲ್ಯೆ ಜೀವ ತಳೆಯುತ್ತಾಳೆ. ನಂತರವೇ ಅವಳ ಕತೆಯನ್ನು ಹೇಳಲಾಗುತ್ತದೆ. ರಾಮ ಬರುವನೆಂದು ಅವನ ಕಣ್ಣಿಗೆ ಬೀಳಲೆಂದೇ ಹರವಾದ ಬಯಲಿನಲ್ಲೆಲ್ಲೋ ದಿಬ್ಬದ ಮೇಲೆ ಕಾದಿರುವ ಕಲ್ಲು ಅದರ ಸಮರ್ಥ ಸಂಕೇತವಾಗಿ ಕಣ್ಣಿಗೆ ಕಟ್ಟುತ್ತದೆ. ನಿರ್ಜೀವ ಕಲ್ಲಿನಿಂದ ಹೊಮ್ಮುವ ಜೀವಂತ ಅಹಲ್ಯೆ ಭಕ್ತಿಯ ಉತ್ಕೃಷ್ಟ ಮಾದರಿಯಾಗಿ, ಆತ್ಮವೆಂಬುದು ಪರಮಾತ್ಮನಲ್ಲಿ ಜೀವ ತಳೆಯುವ ದಿವ್ಯಗಳಿಗೆಯಾಗಿ ಗೋಚರಿಸುತ್ತದೆ.

ಕೊನೆಯಲ್ಲಿ, ಅಹಲ್ಯೆ ಪ್ರಕರಣದಲ್ಲಿ  ರಾಮ ವಧಿಸುವ ತಾಟಕದಂತಹ ಮುಂಚಿನ ಪ್ರಸಂಗಗಳ ಪ್ರಸ್ತಾಪವೂ ಬರುತ್ತದೆ. ಅಲ್ಲಿ ಅವನು ದುಷ್ಟರನ್ನು ಶಿಕ್ಷಿಸುವ ಶಕ್ತಿ. ಇಲ್ಲಿ ಅಹಲ್ಯೆಗೆ ಜೀವ ಕೊಡುವ ಕರಿಮೋಡದಂತಹ ಫಲವಂತ ಶಕ್ತಿ. ಕಂಬನ್ ಕಾವ್ಯದುದ್ದಕ್ಕೂ ರಾಮ ಒಬ್ಬ ತಮಿಳು ನಾಯಕ. ಔದಾರ್ಯ ಅವನ ಗುಣ. ಕೈಯೆತ್ತಿ ಕೊಡುವಂತೆಯೇ

ದುಷ್ಟಸಂಹಾರಕನೂ ಹೌದು. ಶಾಪ ವಿಮೋಚನೆ ನೀಡಿ ಕಲ್ಲಿನಂತಹ ಕಲ್ಲಿನಿಂದ ಬಿಡುಗಡೆ ಮಾಡುವ ರಾಮ ಸಂಸಾರದ ಬಲೆಯಿಂದ ಪ್ರತಿಯೊಂದು ಜೀವವನ್ನು ಪಾರು ಮಾಡುವ ಶಕ್ತಿಯುಳ್ಳವ.

ವಾಲ್ಮೀಕಿಯಲ್ಲಿ ರಾಮ ಒಬ್ಬ ದೇವರಲ್ಲ, ಅವನೊಬ್ಬ ನರ-ದೇವ. ನರಜನ್ಮದ ಮಿತಿಗಳು ಅವನನ್ನು ಸಹ ಕಾಡಬಲ್ಲವು. ಕೆಲವರ ವಾದದ ಪ್ರಕಾರ ರಾಮ ಒಬ್ಬ ದೇವರು ಮತ್ತು ರಾವಣನ ಸಂಹಾರಕ್ಕೆಂದೇ ಹುಟ್ಟಿ ಬಂದ ಅವತಾರ ಎನ್ನುವುದು ಕೃತಿಯ ಮೊದಲು ಮತ್ತು ಕೊನೆಯಲ್ಲಿ ಸೇರಿಸಲ್ಪಟ್ಟ ಭಾಗಗಳು. ಅದೇನೇ ಇರಲಿ, ಕಂಬನ್ ಕೃತಿಯಲ್ಲಿ ಮಾತ್ರ ರಾಮ ನಿಸ್ಸಂಶಯವಾಗಿ ದೇವರೇ. ಹಾಗಾಗಿ ಮೇಲೆ ಪ್ರಸ್ತಾಪಿಸಿದ ಅಹಲ್ಯೆ ಪ್ರಸಂಗ ಧಾರ್ಮಿಕ ಭಾವನೆ ಮತ್ತು ಭಕ್ತಿ ಪ್ರತೀಕಗಳನ್ನು ದಟ್ಟವಾಗಿ ಹೊದ್ದಂತಿದೆ.

ಹನ್ನೆರಡನೆಯ ಶತಮಾನದ ಕಂಬನ್ ತಮಿಳು ಭಕ್ತಿಯ ಪ್ರಭಾವದಡಿ ಬರೆಯುತ್ತಿದ್ದ ಕವಿ. ಒಂಬತ್ತನೆಯ ಶತಮಾನದಲ್ಲಿ (?) ಬದುಕಿದ್ದ ಶ್ರೀವೈಷ್ಣವ ಪಂಥದ ಅತ್ಯಂತ ಮಹತ್ವದ ಕವಿ ನಮ್ಮಳ್ವಾರ್ ಅವನ ಗುರು. ಹಾಗಾಗಿಯೇ ಕಂಬನ್ ರಾಮ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಿ ಜಗದ ಜೀವಿಗಳಿಗೆಲ್ಲ ಮೋಕ್ಷವನ್ನು ಕರುಣಿಸಬಲ್ಲ ಶಕ್ತಿ. ಅಹಲ್ಯೆ ಪ್ರಕರಣ ಅವನ ಯಾತ್ರೆಯಲ್ಲಿ ಕೇವಲ ಒಂದು ಭಾಗ  ಅಷ್ಟೇ. ರಾವಣನಂತಹ ದುಷ್ಟನ  ಸಂಹಾರವೇ ಕೊನೆಯ ಭಾಗ. ನಮ್ಮಾಳ್ವಾರರಿಗೆ ತೃಣದಿಂದ ಹಿಡಿದು ದೇವತೆಗಳ ತನಕದ ಅಗಾಧ ಹರವಿಗೆ ರಾಮ ಮೋಕ್ಷವನ್ನು ಕರುಣಿಸಬಲ್ಲ ಮಹಾನ್ ಶಕ್ತಿ.

ರಾಮನ ದಯೆಯಿಂದ

ಅರಿಯಲು ರಾಮನಲ್ಲದೆ
ಬೇರೊಂದುಂಟೆ ಜಗದಲ್ಲಿ?

ಹುಲ್ಲಿಂದ, ತೆವಳುವ ಇರುವೆಯಿಂದ
ಹಿಡಿದು ಸಕಲವನು ರಕ್ಷಿಸುವನು,

ಚಲಿಸುವ, ಚಲಿಸದ ಎಲ್ಲವನು
ತನ್ನ ನಗರದಲಿ ಪೊರೆವನು,

ಬ್ರಹ್ಮನಿಂದ ಹೊಮ್ಮಿದ ಸಕಲವನು
ಎದೆಯೊಳಗೆ ಕಾಪಿಟ್ಟು ಸಲಹುವನು,
ಎಲ್ಲರನು ಪರಮಪದಕೆ
ಸಮಭಾವದಲಿ ಒಯ್ಯುವವನು

(ನಮ್ಮಳ್ವಾರ್ 7.5.1; ರಾಮಾನುಜನ್ 1981, 47)

ಕಂಬನ್ ಮಹಾಕಾವ್ಯ ನಮ್ಮಳ್ವಾರರ ರಾಮದರ್ಶನವನ್ನು ಪರಮಭಕ್ತಿಯಲ್ಲಿ ಮತ್ತು ದಟ್ಟವಾದ ವಿವರಗಳಲ್ಲಿ ಸಾಕಾರಗೊಳಿಸುತ್ತದೆ.

ಹೀಗೆ ಅಹಲ್ಯೆ ಪ್ರಸಂಗ ಕಥೆಯ ನೆಲೆಯಲ್ಲಿ  ಎರಡರಲ್ಲೂ ಒಂದೇ ಅಂತನ್ನಿಸಬಹುದು. ಆದರೆ ಅದರ ನೇಯ್ಗೆ, ವಿನ್ಯಾಸ, ಬಣ್ಣಗಳು ಮಾತ್ರ ಬೇರೆ ಬೇರೆ. ಕಂಬನ್ ಕಾವ್ಯದ ಚೆಲುವು ಭಾಗಶಃ ತನ್ನ ಹಿಂದಿನವರ ಕೃತಿಯನ್ನು ಬಳಸಿಕೊಳ್ಳುತ್ತಲೇ ಮಹತ್ತರ ಬದಲಾವಣೆಗಳನ್ನು ಮಾಡಿಕೊಂಡ ಸೃಷ್ಟಿಶೀಲತೆಯಲ್ಲಿದೆ ಎನ್ನಬಹುದು. ಸ್ವಲ್ಪ ಮಟ್ಟಿಗೆ ನಂತರದ ಎಲ್ಲ ರಾಮಾಯಣಗಳೂ ಹಿಂದಿನ ರಾಮಕಥೆಗಳ ಆಧಾರದ ಮೇಲೆಯೇ ಹೊಮ್ಮಿದಂತವು. ಅಷ್ಟರ ಮಟ್ಟಿಗೆ ಅವು ಮೆಟಾ-ರಾಮಾಯಣಗಳು.

ಇಲ್ಲೊಂದು ನನಗೆ ತುಂಬ ಹಿಡಿಸಿದ ನಿದರ್ಶನವನ್ನು ಹೇಳಿಯೇ ಮುಂದೆ ಹೋಗುತ್ತೇನೆ. ನಂತರದ ಹಲವಾರು ರಾಮಾಯಣಗಳಲ್ಲಿ (ಉದಾಹರಣೆಗೆ ಹದಿನಾರನೆಯ ಶತಮಾನದ ‘ಅಧ್ಯಾತ್ಮ ರಾಮಾಯಣ’) ರಾಮ ವನವಾಸಕ್ಕೆ ಹೋಗಬೇಕಾದಾಗ ಸೀತೆ ತನ್ನೊಂದಿಗೆ ಬರುವುದು ಬೇಡವೆಂದು ಹೇಳುತ್ತಾನೆ. ಆದರೆ ಸೀತೆ ಕೇಳುವುದಿಲ್ಲ. ಮೊದಮೊದಲು ಸಹಜವಂತನ್ನಿಸುವ ಪಟ್ಟುಗಳು — ನಾನು ನಿನ್ನ ಹೆಂಡತಿ, ನಿನ್ನ ಕಷ್ಟಸುಖಗಳಲ್ಲಿ ಸಮಭಾಗಿ, ವನವಾಸವೇಕೆ ಅದಕ್ಕೆ ಹೊರತಾಗಬೇಕು? ಇತ್ಯಾದಿ.

ಯಾವುದಕ್ಕೂ ರಾಮ ಬಗ್ಗದಿದ್ದಾಗ ಬೇಸತ್ತು, ‘ಇದಕ್ಕೂ ಮುಂಚೆ ಲೆಕ್ಕವಿಲ್ಲದಷ್ಟು ರಾಮಾಯಣಗಳು ಬಂದು ಹೋಗಿವೆಯಲ್ಲ? ಅದರಲ್ಲಿ ಯಾವುದಾದರೂ ಒಂದರಲ್ಲಿ ಸೀತೆ ರಾಮನೊಟ್ಟಿಗೆ ಹೋಗದಿರುವ ಉದಾಹರಣೆಯಿದ್ದರೆ ಹೇಳು, ನೋಡೋಣ’ ಎಂದು ಸವಾಲೆಸೆಯುತ್ತಾಳೆ. ರಾಮನಲ್ಲಿ ಇದಕ್ಕೆ ಉತ್ತರವಿಲ್ಲ. ಕೊನೆಗೂ ಸೀತೆಯ ಹಠವೇ ಗೆಲ್ಲುತ್ತದೆ. (ಅಧ್ಯಾತ್ಮ ರಾಮಾಯಣ 2.4.77-8; ನೋಡಿ Nath 1913, 39). ಭಾರತದಲ್ಲಿ ಯಾವುದೂ ಒಂದೇ ಬಾರಿ ಆಗುವುದಿಲ್ಲವಲ್ಲ? ಇದೇ ಪ್ರಸಂಗ ನಂತರದ ಒಂದಕ್ಕಿಂತ ಹೆಚ್ಚು ರಾಮಾಯಣಗಳಲ್ಲಿ ಕಾಣಿಸಿಕೊಂಡಿದೆ.

ತಮಿಳಿನ ಕಂಬನ್ ರಾಮಾಯಣ ನಂತರ ಬಂದ ಇತರ ರಾಮಕಥೆಗಳನ್ನು  ವಿಶೇಷವಾಗಿ ಪ್ರಭಾವಿಸಿದೆ. ತೆಲುಗು ದೇಶದಲ್ಲಿ ತೆಲುಗು ಪಾತ್ರಗಳ ಸಮೇತ  ಪಠಿಸಲ್ಪಟ್ಟರೆ, ಮಲಯಾಳಂ ಪ್ರದೇಶದಲ್ಲಿ ದೇವಸ್ಥಾನದ ಆಚರಣೆಯಾಗಿ ರಂಗದ ಮೇಲೆ ಪ್ರದರ್ಶಿಸಲ್ಪಟ್ಟಿದೆ. ಹಾಗೆಯೇ ಆಗ್ನೇಯ ಏಷಿಯಾದ ರಾಮಕಥೆಗಳಲ್ಲಿ ಸಹ ಒಂದು ಮುಖ್ಯ ಕೊಂಡಿಯಾಗಿ ಕಾಣಿಸಿಕೊಂಡಿದೆ. ಹದಿನೆಂಟನೆಯ ಶತಮಾನದ ಥಾಯ್ ರಾಮಕೀನ್ ಮೂಲ ತಮಿಳು ರಾಮಾಯಣವೇ ಎನ್ನುವುದನ್ನು ಸಂಶೋಧಕರು ನಿರ್ಣಾಯಕವಾಗಿ ತೋರಿಸಿಕೊಟ್ಟಿದ್ದಾರೆ. ಉದಾಹರಣೆಗೆ ಥಾಯ್ ಕೃತಿಯಲ್ಲಿ ಬರುವ ಹಲವಾರು ಹೆಸರುಗಳು ಸಂಸ್ಕೃತದಲ್ಲಿ ಇಲ್ಲ, ಬದಲಿಗೆ ತಮಿಳಿನಲ್ಲಿವೆ. (ಉದಾಹರಣೆಗೆ, ಸಂಸ್ಕೃತದ ಋಷ್ಯಶೃಂಗ ತಮಿಳಿನಲ್ಲಿ ಕಲೈಕ್ಕೋಟು ಆಗಿ ಥಾಯ್ ರಾಮಕಥೆಯಲ್ಲಿ ಕಾಣಿಸುವುದು ಈ ಹೆಸರೇ.) ತುಳಸಿಯವರ ಹಿಂದಿ ‘ರಾಮಚರಿತಮಾನಸ’ ಮತ್ತು ಮಲೇಷಿಯಾದ ‘ಹಿಕಯತ್ ಸೆರಿ ರಾಮ್’ ಸಹ ಕಂಬನ್ ಕಾವ್ಯದಿಂದ ಪಡೆದ ಹಲವಾರು ವಿವರಗಳನ್ನು ಹೊತ್ತಿವೆ (Singaravelu 1968).

ಈ ಕಥನ-ಕಸಿ ಹಲವಾರು ರೀತಿಗಳಲ್ಲಿ ಆಗಲು ಸಾಧ್ಯವಿದೆ. ಸಂತೋಷ್ ದೇಸಾಯಿ ಅವರ ಪ್ರಕಾರ ರಾಮಕಥೆ ಮೂರು ಮಾರ್ಗಗಳಲ್ಲಿ ಪ್ರಯಾಣಿಸಿದೆ. ಉತ್ತರದ ಭೂಮಾರ್ಗ ಪಂಜಾಬ್, ಕಾಶ್ಮೀರಗಳಿಂದ ಚೀನಾ, ಟಿಬೆಟ್, ಮತ್ತು ಪೂರ್ವ ತುರ್ಕಿಸ್ತಾನಗಳಿಗೆ ಹೋಯಿತು. ಸಮುದ್ರಮಾರ್ಗವಾಗಿ ಹೋದದ್ದು ದಕ್ಷಿಣದ ಕಡೆಗೆ. ಗುಜರಾತ್ ಮತ್ತು ದಕ್ಷಿಣ ಭಾರತದಿಂದ ಜಾವಾ, ಸುಮಾತ್ರಾ, ಮಲಯಗಳಿಗೆ ಹೋಯಿತು. ಪೂರ್ವದಲ್ಲಿ ಹೋದದ್ದು ಭೂಮಾರ್ಗವಾಗಿಯೇ. ಬಂಗಾಳದಿಂದ ಬರ್ಮಾ, ಥೈಲ್ಯಾಂಡ್, ಮತ್ತು ಲಾವೋಸ್ ದೇಶಗಳಿಗೆ ಹೋಯಿತು. ವಿಯೆಟ್ನಾಂ ಮತ್ತು ಕಾಂಬೋಡಿಯಾಗಳು ಪೂರ್ವಮಾರ್ಗದಲ್ಲಿ ಕೆಲಮಟ್ಟಿಗೆ ಭಾರತದಿಂದ ಮತ್ತು ಕೆಲಮಟ್ಟಿಗೆ ಜಾವಾದಿಂದ ಪಡೆದುಕೊಂಡವು (Desai 1970, 5).

ಜೈನ ರಾಮಕಥೆಗಳು 

ಜೈನ ರಾಮಕಥೆಗಳ ಲೋಕಕ್ಕೆ ಹೋದಲ್ಲಿ ಅಲ್ಲಿ ಹಿಂದೂ ಮೌಲ್ಯಗಳು ಇಲ್ಲ ಎನ್ನುವುದು ಹೊಳೆಯುತ್ತದೆ. ಹಾಗೆ ನೋಡಿದರೆ ಜೈನ ಪಠ್ಯಗಳ ಅಭಿಪ್ರಾಯದಲ್ಲಿ ಹಿಂದೂಗಳು, ವಿಶೇಷವಾಗಿ ಬ್ರಾಹ್ಮಣರು, ರಾವಣನನ್ನು ಖಳನಾಯಕನಾಗಿಸಿ ಮಹಾ ಅನ್ಯಾಯ ಮಾಡಿದ್ದಾರೆ.

 ಜೈನ ಪಠ್ಯಗಳು ಕೇಳುವ ಕೆಲವು ಪ್ರಶ್ನೆಗಳು ಇಂತಿವೆ:

ಕಪಿಗಳು ರಾವಣನಂತಹ ರಾಕ್ಷಸವೀರನನ್ನು ಸೋಲಿಸುವುದು ಎಂದಾದರೂ ಸಾಧ್ಯವೇ? ರಾವಣ ಮಾಂಸ ತಿಂದು ರಕ್ತ ಕುಡಿಯುತ್ತಿದ್ದ ಎನ್ನುವುದನ್ನು ಪ್ರತಿಷ್ಠಿತರು ಮತ್ತು ಯೋಗ್ಯ ಜೈನರು ಒಪ್ಪಿಕೊಳ್ಳಲು ಸಾಧ್ಯವೇ? ಕುದಿಯೆಣ್ಣೆಯನ್ನು ಕಿವಿಗೆ ಸುರಿದರೂ, ಆನೆಯಿಂದ ದೇಹವನ್ನು ತುಳಿಸಿದರೂ, ತನ್ನ ಸುತ್ತ ಯುದ್ಧಕಹಳೆಗಳು ಮೊಳಗುತ್ತಿದ್ದರೂ ಕುಂಭಕರ್ಣ ವರ್ಷದ ಆರು ತಿಂಗಳು ನಿದ್ದೆ ಹೊಡೆಯುತ್ತಿದ್ದ ಎನ್ನುವುದು ನಿಜವಿರಲು ಸಾಧ್ಯವೇ? ಅಷ್ಟೇ ಅಲ್ಲ, ರಾವಣ ಇಂದ್ರನಿಗೆ ಕೈಕೋಳ ತೊಡಿಸಿ ಲಂಕೆಯ ತನಕವೂ ಎಳೆದುಕೊಂಡು ಹೋದ ಎನ್ನುತ್ತಾರಲ್ಲ? ಇಂದ್ರನಿಗೆ ಹಾಗೆ ಮಾಡುವುದು ಎಂದಾದರೂ ಸಾಧ್ಯವೇ? ಇದೆಲ್ಲ ಅತಾರ್ಕಿಕ ಸುಳ್ಳುಗಳಿಂದ ಕೂಡಿದ ಕಟ್ಟುಕಥೆಯಂತೆ ಕೇಳಿಸಿದರೆ ತಪ್ಪೇನು?

ಈ ಪ್ರಶ್ನೆಗಳನ್ನು ಹೊತ್ತು ಶ್ರೇನಿಕ ರಾಜ ಗೌತಮನಲ್ಲಿಗೆ ಹೋಗಿ ತನ್ನ ಸಂದೇಹಗಳನ್ನು ಪರಿಹರಿಸಿ ನಿಜವಾದ ಕಥೆಯನ್ನು ಹೇಳುವಂತೆ ಕೇಳಿಕೊಳ್ಳುತ್ತಾನೆ. ಗೌತಮನು ಅವನಿಗೆ ‘ಯೋಗ್ಯಜೈನರ ಪ್ರಕಾರ ರಾವಣ ರಾಕ್ಷಸನಲ್ಲ. ಅವನು ಮನುಷ್ಯರನ್ನು ಭಕ್ಷಿಸುತ್ತಿರಲಿಲ್ಲ, ಮಾಂಸವನ್ನು ತಿನ್ನುತ್ತಿರಲಿಲ್ಲ. ಇದೆಲ್ಲ ತಲೆಕೆಟ್ಟ ಮೂರ್ಖರ ಕಲ್ಪನೆಯೇ ಸರಿ,’ ಎಂದು ಹೇಳಿ ತನ್ನ ರಾಮಕಥೆಯನ್ನು ಹೇಳಲು ಪ್ರಾರಂಭಿಸುತ್ತಾನೆ (Chandra 1970, 234).

ಸ್ಪಷ್ಟವಾಗಿಯೇ, ವಿಮಲಸೂರಿಯ ಜೈನ ರಾಮಾಯಣಕ್ಕೆ (ಪೌಮಚರೀಯ ಎಂದದರ ಶೀರ್ಷಿಕೆ, ಅದು ಸಂಸ್ಕೃತದ ಪದ್ಮಚರಿತಕ್ಕೆ ಪ್ರಾಕೃತ ಪದಗಟ್ಟು) ವಾಲ್ಮೀಕಿ ತಿಳಿದಿಲ್ಲವೆಂದಲ್ಲ. ಆದರೆ ವಾಲ್ಮೀಕಿಯ ತಪ್ಪುಗಳನ್ನು ಮತ್ತು ಹಿಂದೂ ಅತಿರೇಕಗಳನ್ನು ಅದು ತಿದ್ದಲು ಪ್ರಯತ್ನಿಸುತ್ತದೆ. ಬೇರೆಲ್ಲಾ ಜೈನ ಪುರಾಣಗಳಂತೆ ಇದೂ ಒಂದು ಪ್ರತಿ-ಪುರಾಣ. ‘ಪ್ರತಿ’ ಎಂಬ ಪೂರ್ವಪದ ಜೈನರಿಗೆ ಇಷ್ಟವಾದ್ದು.

ಜೈನ ವಿಮಲಸೂರಿ ಕತೆಯನ್ನು ಪ್ರಾರಂಭಿಸುವುದು ರಾಮನ ವಂಶದ ಪ್ರಸ್ತಾಪದಿಂದಲ್ಲ. ಬದಲಿಗೆ ರಾವಣನ ವಂಶದಿಂದ. ಜೈನ ಪರಂಪರೆಯ ಅರವತ್ಮೂರು ನಾಯಕರಲ್ಲಿ (ಶಲಾಕಪುರುಷರು) ರಾವಣನೂ ಒಬ್ಬ. ಆತ ಉದಾತ್ತ, ವಿದ್ವಾಂಸ, ಮತ್ತು ತನ್ನೆಲ್ಲ ಪವಾಡಶಕ್ತಿಯನ್ನು ಮತ್ತು ಆಯುಧಗಳನ್ನು ತಪಸ್ಸು ಮಾಡಿಯೇ ಪಡೆದುಕೊಂಡವ. ಅವನೊಬ್ಬ ಜೈನಗುರುಗಳ ಭಕ್ತನೂ ಹೌದು. ಅವರಲ್ಲೊಬ್ಬರನ್ನು ಮೆಚ್ಚಿಸಲು ಒಪ್ಪಿಗೆಯಿಲ್ಲದ ಹೆಣ್ಣನ್ನು ತಾನೆಂದೂ ಮುಟ್ಟೆನು ಎಂದು ಪ್ರತಿಜ್ಞೆಯನ್ನೂ ಮಾಡಿರುತ್ತಾನೆ.

ಹೀಗೊಂದು ನೆನಪಲ್ಲುಳಿಯುವ ಪ್ರಸಂಗವಿದೆ. ಒಮ್ಮೆ ರಾವಣ ಅಭೇದ್ಯ ಕೋಟೆಯೊಂದಕ್ಕೆ ಮುತ್ತಿಗೆ ಹಾಕುತ್ತಾನೆ. ಅಲ್ಲಿಯ ರಾಣಿಗೆ ಅವನ ಮೇಲೆ ಪ್ರೇಮವಿರುತ್ತದೆ. ಅದನ್ನು ಬಳಸಿಕೊಂಡು ಕೋಟೆಯ ರಹಸ್ಯಗಳನ್ನು ತಿಳಿದುಕೊಂಡು ರಾಜನನ್ನು ಸೋಲಿಸುತ್ತಾನೆ. ಆದರೆ ತಕ್ಷಣವೇ ರಾಜ್ಯವನ್ನು ಅವನಿಗೇ ಹಿಂತಿರುಗಿಸಿ ರಾಣಿಗೆ ರಾಜನೆಡೆಗೆ ಮರಳುವಂತೆ ಉಪದೇಶಿಸುತ್ತಾನೆ.

ಆದರೆ ಭವಿಷ್ಯ ಹೇಳುವವರ ಬಾಯಿಂದ ತನ್ನ ಕೊನೆಗಾಲ ಬರುವುದು ಸೀತೆ ಎಂಬ ಹೆಣ್ಣೊಬ್ಬಳ ಮೂಲಕ ಎಂದು ಕೇಳಿದಾಗ ತೀರಾ ಅಸ್ವಸ್ಥನಾಗುತ್ತಾನೆ. ನಂತರ ಸೀತೆಯ ಸೌಂದರ್ಯಕ್ಕೆ ಮನಸೋಲುವುದು ಇದೇ ರಾವಣ. ಅವಳನ್ನು ಅಪಹರಿಸಿಕೊಂಡು ಹೋಗಿ ಅವಳ ಮನಸ್ಸನ್ನು ಗೆಲ್ಲಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಾನೆ. ಸಾಧ್ಯವಾಗದೆ ತನ್ನ ಪತನಕ್ಕೆ ತಾನೇ ಪ್ರೇಕ್ಷಕನಾಗುತ್ತಾನೆ. ಕೊನೆಗೆ ಯುದ್ಧಭೂಮಿಯಲ್ಲಿ ಮಡಿಯುತ್ತಾನೆ. ಈ ಕಥೆಯಲ್ಲಿ ಅವನೊಬ್ಬ ಉದಾತ್ತ ಹೃದಯಿ. ಆದರೆ ಏನನ್ನು ತಾನು ಮಾಡೆನೆಂದುಕೊಂಡಿದ್ದನೋ ಅದನ್ನು ಮಾಡಲೇಬೇಕಾದ  ದುರಂತಕ್ಕೆ ಸಿಕ್ಕವನು.

ಜೈನರಾಮಾಯಣದ ಪರಂಪರೆಯಲ್ಲಿ ಇನ್ನೊಂದು ಕಡೆ ಸೀತೆ ಅವನ ಮಗಳೇ ಆಗಿರುತ್ತಾಳೆ. ಆದರೆ ಅವನಿಗದು ತಿಳಿದಿಲ್ಲ. ದುರಂತದ ಚದುರಂಗದಾಟದಲ್ಲಿ ಅವನ ವಿರುದ್ಧ ಹಲವಾರು ದಾಳಗಳನ್ನು  ಈಗಾಗಲೇ ಹೂಡಿಯಾಗಿದೆ. ಸೀತೆಯ ಹುಟ್ಟಿಗೆ ಸಂಬಂಧಿಸಿದಂತೆ ಮುಂದಿನ ಭಾಗದಲ್ಲಿ ಹೆಚ್ಚಿನ ಪ್ರಸ್ತಾಪವಿದೆ.

ಹಾಗೆ ನೋಡಿದರೆ ನಮ್ಮ ಆಧುನಿಕ ಕಣ್ಣಿಗೆ ರಾವಣನೊಬ್ಬ ದುರಂತ ನಾಯಕನಂತೆ ಕಾಣುತ್ತಾನೆ. ಜೈನರು ಅವನ ಕಥೆಯನ್ನು ಹೇಳುವಾಗ ನಮಗೆ ಏಕಕಾಲದಲ್ಲಿ ಮೆಚ್ಚುಗೆ ಅನುಕಂಪಗಳು ಮೂಡುತ್ತವೆ. ಇಲ್ಲಿ ಮತ್ತೊಂದು ಧಾರೆಯನ್ನು ಗುರುತಿಸಬಹುದು. ಜೈನರಲ್ಲಿ  ವಾಸುದೇವ ಮತ್ತು ಪ್ರತಿವಾಸುದೇವ ಎಂಬ ಪರಿಕಲ್ಪನೆಗಳಿವೆ. ಸ್ವ ಮತ್ತು ಅನ್ಯಗಳಂತೆ, ಅಥವಾ ನಾಯಕ-ಪ್ರತಿನಾಯಕರಂತೆ ಅವೆರಡೂ ಪ್ರತಿದ್ವಂದಿಗಳು. ಪರಸ್ಪರ ಹೊಡೆದಾಡಿಕೊಳ್ಳುತ್ತಾ ಸಾಯುವ, ನಂತರ ಮತ್ತೆ ಮತ್ತೆ ಹುಟ್ಟಿ ಬರುತ್ತಲೇ ಇರುವ ಜೋಡಿ ಇದು.

ಲಕ್ಷ್ಮಣ ಮತ್ತು ರಾವಣ ಈ ಅವಳಿಯ ಎಂಟನೆಯ ಅವತಾರ. ವಾಸುದೇವ ಪ್ರತಿವಾಸುದೇವನನ್ನು ಸಾಯಿಸುವುದು ಅನಿವಾರ್ಯ. ಲಕ್ಷ್ಮಣನೇ ತನ್ನ ಜೀವ ತೆಗೆಯಲು ಬಂದ ವಾಸುದೇವ ಎನ್ನುವುದು ಕೊನೆಯಲ್ಲಿ ರಾವಣನಿಗೆ ಅರ್ಥವಾಗಿದೆ. ಆದರೂ, ಶಾಂತಿಸಂಧಾನದ ಪ್ರಯತ್ನಗಳೆಲ್ಲ ವ್ಯರ್ಥವಾದ ಮೇಲೆ, ತನ್ನ ಪ್ರಬಲ ಅಸ್ತ್ರಗಳನ್ನು ಹೂಡುತ್ತಾ ಹೋರಾಡುತ್ತಲೇ ಇರುತ್ತಾನೆ. ಕೊನೆಗೆ ತನ್ನ ಅತ್ಯಂತ ಪ್ರಬಲ ಅಸ್ತ್ರವಾದ ಚಕ್ರವನ್ನು ಬೀಸಿದಾಗ ಅದು ಲಕ್ಷ್ಮಣನ ತಲೆಯನ್ನು ಕತ್ತರಿಸುವ ಬದಲು ಹೋಗಿ ಅವನ ಕೈಯನ್ನು ಸೇರುತ್ತದೆ. ತನ್ನ ಅಸ್ತ್ರದಿಂದಲೇ ಲಕ್ಷ್ಮಣನ ಕೈಲಿ ಸಾಯುವ ದುರಂತ ರಾವಣನದು.

ಇಲ್ಲಿ ಹಿಂದೂ ರಾಮಾಯಣದಂತೆ ರಾಮ ರಾವಣನ್ನು ಸಾಯಿಸುವುದಿಲ್ಲ. ರಾಮ ನಿಜವಾದ ಅರ್ಥದಲ್ಲಿ ಪ್ರಾಪಂಚಿಕವನ್ನು ಮೀರಿದ ಒಬ್ಬ ಜೈನ. ಇದು ಅವನ ಕಡೆಯ ಜನ್ಮವಾದ್ದರಿಂದ ಕೊಲ್ಲಲಾರ. ರಾವಣನನ್ನು ಕೊಂದು ಲಕ್ಷ್ಮಣ ನರಕಕ್ಕೆ ಹೋಗುತ್ತಾನೆ. ರಾಮನಿಗೆ ಕೈವಲ್ಯ ಪ್ರಾಪ್ತಿಯಾಗುತ್ತದೆ.

‘ಪೌಮಚರಿಯ’ ಕೃತಿ ಜೈನರ ಪವಿತ್ರಸ್ಥಳಗಳು, ಜೈನಮುನಿಗಳ ಬಗೆಗಿನ ಕತೆಗಳು, ಜೈನ ಆಚರಣೆಗಳು ಮತ್ತು ದಂತಕಥೆಗಳಿಂದ ತುಂಬಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಲ್ಲದೆ, ಹಿಂದೂಗಳ ರಕ್ತಪಾತದಿಂದ ತುಂಬಿದ ಪರಿಕಲ್ಪನೆಗಳಿಗೆ ಮತ್ತು ವಿಧಿವಿಧಾನಗಳಿಗೆ ವಿರುದ್ಧವಾಗಿ ತಾವು ವಿಚಾರವಾದಿಗಳು ಎಂದು ಜೈನರು ಭಾವಿಸಿರುವುದರಿಂದ ಪವಾಡ, ರಕ್ತಪಾತದಂತಹ ಹಿಂಸೆ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ಹೊರಗಿಡುತ್ತಾರೆ.

ಹಾಗೆಯೇ, ಜೈನ ರಾಮಾಯಣದಲ್ಲಿ ರಾಮ ಮತ್ತವನ ತಮ್ಮಂದಿರು ಸಹಜವಾಗಿಯೇ ಹುಟ್ಟಿದವರು. ರಾವಣ ಹತ್ತು ತಲೆಗಳಿದ್ದ ರಾಕ್ಷಸ ಎಂಬ ಪರಿಕಲ್ಪನೆಗೂ ಸಹ  ತಾರ್ಕಿಕ ಹಿನ್ನೆಲೆಯಿದೆ. ಅವನು ಹುಟ್ಟಿದಾಗ ಒಂಭತ್ತು ರತ್ನಗಳಿದ್ದ ಕೊರಳ ಮಾಲೆಯನ್ನು ಅವನ ತಾಯಿಗೆ ಯಾರೋ ಉಡುಗೊರೆಯಾಗಿ ಕೊಟ್ಟಿದ್ದರು. ಅವಳದನ್ನು ಧರಿಸಿದಾಗ ಅವನ ಮುಖ ಆ ಒಂಭತ್ತೂ ರತ್ನಗಳಲ್ಲಿ ಕಂಡಿತ್ತು. ಆದ್ದರಿಂದ ಅವನನ್ನು ‘ದಶಮುಖ’ ಎಂದು ಕರೆಯಲಾಯಿತು. ಅಲ್ಲಿ ಕಪಿಗಳು ಸಹ ಕಪಿಗಳಲ್ಲ, ಬದಲಿಗೆ ವಿದ್ಯಾಧರರು. ತಾತಮುತ್ತಾತರ ಮೂಲಕ ಅವರು ರಾವಣನ ಸಂಬಂಧಿಗಳೇ. ಅವರ ಧ್ವಜಗಳಲ್ಲಿ ಕಪಿಯ ಚಿಹ್ನೆ ಇರುವುದರಿಂದ ‘ವಾನರರು’ ಎಂದು ಕರೆಯಲ್ಪಡುತ್ತಾರೆ.

ಮೌಖಿಕದಿಂದ ಲಿಖಿತದೆಡೆಗೆ

ಈಗ ದಕ್ಷಿಣ ಭಾರತೀಯ ಜನಪದ ರಾಮಾಯಣವನ್ನು ಗಮನಿಸಬಹುದು. ಇವುಗಳಲ್ಲಿ ಕಥೆ ತುಣುಕು ತುಣುಕಾಗಿ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ಕನ್ನಡದಲ್ಲಿ ಸೀತೆಯ ಹುಟ್ಟು, ಮದುವೆ, ಪಾತಿವ್ರತ್ಯ ಪರೀಕ್ಷೆ, ಕಾಡುಪಾಲು, ಲವಕುಶರ ಜನನ, ರಾಮನೊಂದಿಗೆ ಅವರ ಯುದ್ಧ, ಇತ್ಯಾದಿಗಳ ಬಗ್ಗೆ ಬೇರೆ ಬೇರೆ ಕಥೆಗಳಿವೆ. ಆದರೆ ತಂಬೂರಿ ದಾಸಯ್ಯರು ಹಾಡುವ ಕಥೆಯಲ್ಲಿ ಸಂಪೂರ್ಣ ರಾಮಾಯಣವನ್ನು ಕಾಣಬಹುದು. ಅಲ್ಲಿ ಪ್ರತಿ ಎರಡು ಸಾಲುಗಳ ನಂತರ ಪುನರಾವರ್ತಿಸುವ ಮೇಳಗೀತವಿರುತ್ತದೆ. ಮುಂದಿನ ಭಾಗ ರಾಮೇಗೌಡ, ಪಿ. ರಾಜಶೇಖರ, ಮತ್ತು ಎಸ್. ಬಸವಯ್ಯ (1973) ಅವರು ಮಾಡಿದ ಲಿಪ್ಯಂತರವನ್ನು ಆಧರಿಸಿದೆ. ಅವರಿಗೆ ನಾನು ಋಣಿಯಾಗಿದ್ದೇನೆ.

ಈ ಜನಪದ ಕಥನ ಹೊಮ್ಮುವುದು ಒಬ್ಬ ಅಸ್ಪೃಶ್ಯ ಕವಿಯ ಹಾಡಿನಲ್ಲಿ. ಅದು ಪ್ರಾರಂಭವಾಗುವುದು ರಾವಣ (ರಾವುಲ) ಮತ್ತು ಮಂಡೋದರಿಯರ ಮೂಲಕ. ಅವರಿಗೆ ಮಕ್ಕಳಿಲ್ಲ, ಬದುಕಿನಲ್ಲಿ ಸಂತೋಷವಿಲ್ಲ. ಮಕ್ಕಳನ್ನು ಪಡೆಯುವ ಹಂಬಲದಲ್ಲಿ ರಾವುಲ ಒಮ್ಮೆ ಕಾಡಿಗೆ ಹೋಗಿ ಏನೇನೋ ದೇಹದಂಡನೆಯ ವಿಧಿಗಳನ್ನು ಆಚರಿಸುತ್ತಾನೆ. ಬೆನ್ನಿಂದ ರಕ್ತ ಕಿತ್ತು ಬರುವ ತನಕ ಮಾಡುವ ಉರುಳು ಸೇವೆಯೂ ಅದರಲ್ಲಿ ಒಂದು.

ಅಲ್ಲಿಗೆ ಒಬ್ಬ ಜೋಗಿ ಬರುತ್ತಾನೆ. ಅವನು ಸಾಕ್ಷಾತ್ ಶಿವನೇ. ಮಂತ್ರಿಸಿದ ಮಾವಿನಹಣ್ಣೊಂದನ್ನು ಕೊಟ್ಟು ಹೆಂಡತಿ ಮಂಡೋದರಿಯೊಂದಿಗೆ ಅದನ್ನು ಹೇಗೆ ಹಂಚಿಕೊಳ್ಳುತ್ತೀಯೇ ಎಂದು ಕೇಳಿದಾಗ ರಾವುಲ ‘ಅವಳಿಗೆ ಸಿಹಿಯಾದ ತಿರುಳೆಲ್ಲವನ್ನು ಕೊಟ್ಟು ನಾನು ಬೀಜಕ್ಕೆ ಅಂಟಿದ ಹಣ್ಣನ್ನು ನೆಕ್ಕುತ್ತೇನೆ,’ ಎನ್ನುತ್ತಾನೆ. ಜೋಗಿ ನಂಬಲು ಸಿದ್ಧನಿಲ್ಲ. ‘ನೀನು ಹೇಳುವುದು ಒಂದು, ಮಾಡುವುದು ಇನ್ನೊಂದು. ನಿನ್ನ ಹೊಟ್ಟೆಯಲ್ಲಿ ವಿಷವಿದೆ. ನನಗೆ ತಿನ್ನಲು ಬೆಣ್ಣೆ ಕೊಟ್ಟರೂ ನಿನ್ನ ಉದ್ದೇಶ ಬೇರೆಯದೇ ಇರುತ್ತದೆ. ನನಗೆ ಸುಳ್ಳು ಹೇಳಿದರೆ ಅದರ ಫಲ ಸ್ವತಃ ಅನುಭವಿಸುತ್ತೆಯೇ,’ ಎಂದು ಎಚ್ಚರಿಸಿ ಅಲ್ಲಿಂದ ತೆರಳುತ್ತಾನೆ. ರಾವುಲ ಕನಸಿನಲ್ಲಿ ಕಾಣುವುದು ಬೇರೆ, ಕಣ್ಣು ಬಿಟ್ಟಾಗ ಕಾಣುವುದು ಬೇರೆಯೇ ಎಂದು ಕವಿ ಹಾಡುತ್ತಾನೆ.

ಮಾವಿನಹಣ್ಣನ್ನು ಮನೆಗೆ ತಂದು ಹಣ್ಣುಹೂವುಗಳಿಂದ ಸಿಂಗರಿಸಿ ಸಾಂಗವಾಗಿ ಪೂಜೆ ಮಾಡಲಾಗುತ್ತದೆ. ಮಂಡೋದರಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾಳೆ. ಶಿವನಿಗೆ ಪೂಜೆ, ಪ್ರಾರ್ಥನೆಗಳೆಲ್ಲ ಸಂದ ಮೇಲೆ ರಾವುಲನೀಗ ಮಾವಿನಹಣ್ಣನ್ನು ಹಂಚಿ ತಿನ್ನಲು ಸಿದ್ಧನಾಗುತ್ತಾನೆ. ಆದರೆ ಅವಳಿಗೆ ಮೊದಲು ಕೊಟ್ಟರೆ ತಿರುಳನ್ನು  ತಿಂದು ಅವಳ ಹೊಟ್ಟೆ ತುಂಬುತ್ತದೆ, ತಾನು ಹಸಿವಿನಿಂದ ಉಳಿಯಬೇಕಾಗುತ್ತದೆ ಎಂದು ಯೋಚಿಸಿ  ತಿರುಳನ್ನು ಗಬಗಬನೆ ತಿಂದು ಬೀಜವನ್ನು ಅವಳಿಗೆ ಕೊಡುತ್ತಾನೆ. ಅವಳು ಅದನ್ನು ನೆಕ್ಕಿದ ಮೇಲೆ ಅಂಗಳಕ್ಕೆ ಎಸೆಯುತ್ತಾಳೆ. ಅಲ್ಲಿ ಬೀಜ ಮೊಳೆತು, ಚಿಗುರಿ, ಸೊಂಪಾದ ಮಾವಿನ ಮರವಾಗಿ ಬೆಳೆಯುತ್ತದೆ.

ಇತ್ತ ರಾವುಲ ಬಸಿರಿಯಾಗುತ್ತಾನೆ. ಅವನ ಬಸಿರಿನ ಒಂದು ದಿನ ಒಂದು ತಿಂಗಳಿಗೆ ಸಮ. ಎರಡನೆಯ ದಿನ (ತಿಂಗಳು) ಅವನಿಗೆ ಬಯಕೆಗಳು ಪ್ರಾರಂಭವಾಗುತ್ತವೆ. ಒಂದೊಂದು ದಿನ ಕಳೆದಾಗಲೂ ಜನರಿಗೆ ಹೇಗೆ ಮುಖ ತೋರಿಸಲಿ ಶಿವನೇ ಎಂದು ರಾವುಲ ಗೋಳಿಡುತ್ತಾನೆ. ಒಂಭತ್ತನೆಯ ದಿನದ ಹೊತ್ತಿಗೆ ಉರುಟಾಗಿ ಉಬ್ಬಿದ್ದವ  ಭಾರ ತಡೆಯಲಾರದೆ ‘ಅಕ್ಷೀ…’ ಎಂದು ಸೀನಿದಾಗ ಹುಟ್ಟಿದವಳೇ ‘ಸೀತಮ್ಮ’.

ಆದರೆ ಸಂಸ್ಕೃತದಲ್ಲಿ ಆ ಪದದ ಅರ್ಥ ಬೇರೆಯೇ. ಸೀತಾ ಎನ್ನುವುದಕ್ಕೆ ಉಳುಮೆ ಮಾಡಿದ ಸಾಲು ಅಥವಾ ನೇಗಿಲಿನಿಂದ ಮೂಡಿದ ಗೆರೆ ಎಂಬ ಅರ್ಥವಿರುವುದರಿಂದ ಜನಕರಾಜನ ನೆಲದಲ್ಲಿ ಉಳುವಾಗ ಸಿಕ್ಕ ಮಗು ಸೀತಾ ಎನಿಸಿಕೊಂಡಳು.

ಇರಲಿ, ಇತ್ತ ರಾವುಲ ಕಣಿ ಹೇಳುವ ಮಂದಿಯ ಹತ್ತಿರ ತನ್ನ ಗೋಳು ತೋಡಿಕೊಂಡಾಗ ಕೊಟ್ಟ ಮಾತಿಗೆ ತಪ್ಪಿದ್ದಕ್ಕೆ ಶಿಕ್ಷೆ ಅನುಭವಿಸಲೇಬೇಕು ಎನ್ನುತ್ತಾರೆ. ಸರಿ, ಈಗ ಮಗುವನ್ನು ಚೆಂದವಾಗಿ ಸಿಂಗರಿಸಿ ಪೆಟ್ಟಿಗೆಯಲ್ಲಿ ಹಾಕಿ

ಎಲ್ಲಿಯಾದರೂ ಬಿಡು, ಯಾರಾದರೂ ಪುಣ್ಯಾತ್ಮರು ಸಾಕಿಕೊಳ್ಳುತ್ತಾರೆ ಎಂಬ ಸಲಹೆಯ ಮೇರೆಗೆ ಜನಕನ ಹೊಲದೊಳಗೆ ಇಳಿಸಲಾಗುತ್ತದೆ.

ಹೀಗೆ ಸೀತೆಯ ಹುಟ್ಟಿನ ಕಥೆಯನ್ನು ಹೇಳಿದ ಮೇಲೆಯೇ ತಂಬೂರಿ ದಾಸಯ್ಯ ರಾಮ ಲಕ್ಷ್ಮಣರ ಹುಟ್ಟು ಪರಾಕ್ರಮಗಳನ್ನು ಹಾಡುವುದಕ್ಕೆ ಹೊರಳಿಕೊಳ್ಳುತ್ತಾನೆ. ನಂತರ ಸೀತಾ ಸ್ವಯಂವರದ ದೀರ್ಘ ಭಾಗವಿದೆ. ಅಲ್ಲಿಗೆ ರಾವುಲನೂ  ಬಂದಿರುತ್ತಾನೆ. ಮಹಾ ಭಾರವಾದ ಬಿಲ್ಲನ್ನು ಎತ್ತಲಾಗದೆ ಬಿದ್ದು ಅವಮಾನಕ್ಕೆ ಒಳಗಾಗುತ್ತಾನೆ. ರಾಮ ಅದನ್ನು ಸಲೀಸಾಗಿ ಎತ್ತಿ ಸೀತೆಯನ್ನು ಮದುವೆಯಾಗುತ್ತಾನೆ. ನಂತರದಲ್ಲಿ ರಾವುಲನಿಂದ ಸೀತಾಪಹರಣ ನಡೆಯುತ್ತದೆ. ಕಪಿಗಳ ಜೊತೆ ರಾಮ ಹೋಗಿ ಯುದ್ಧ ಮಾಡಿ ಸೀತೆಯನ್ನು ಬಿಡಿಸಿಕೊಂಡು ಅಯೋಧ್ಯೆಗೆ ಬಂದು ರಾಜನಾಗುತ್ತಾನೆ. ಆದರೆ ಅದು ದೀರ್ಘವಾದ ಭಾಗವೇನೂ ಅಲ್ಲ.

ಕಥೆ ಮತ್ತೆ ಸೀತೆಯ ಸಂಕಷ್ಟಗಳಿಗೆ ಹೊರಳಿಕೊಳ್ಳುತ್ತದೆ. ಅಪವಾದವನ್ನು ಹೊತ್ತು ಕಾಡುಪಾಲಾದ ಸೀತೆ ಲವಕುಶರನ್ನು ಹೆರುತ್ತಾಳೆ. ಅವರು ಪರಾಕ್ರಮಿಗಳಾಗಿ ಬೆಳೆಯುತ್ತಾರೆ. ರಾಮನ ಅಶ್ವಮೇಧಯಾಗದ ಕುದುರೆಯನ್ನು ಕಟ್ಟಿಹಾಕಿ ಜೊತೆಗಿದ್ದ ಸೈನ್ಯವನ್ನೂ ಸೋಲಿಸಿದ ಮೇಲೆ ಅಪ್ಪಮಕ್ಕಳೆಲ್ಲ ಒಂದಾಗಿ ಅಯೋಧ್ಯೆಗೆ ಮರಳುತ್ತಾರೆ. ಅಲ್ಲಿಗೆ ಕಥೆ ಸುಖಾಂತ.

ಈ ಕಥೆಯಲ್ಲಿ ಒಂದು ಅಂಶವನ್ನಂತೂ ಗಮನಿಸಲೇಬೇಕು. ತಂಬೂರಿ ದಾಸಯ್ಯ ಸೀತೆಯ ಬದುಕಿನ ಸಂಕಷ್ಟಗಳಿಗೆ ಮತ್ತೆ ಮತ್ತೆ ಹೊರಳಿಕೊಳ್ಳುತ್ತಾನೆ. ಆಕೆಯ ಹುಟ್ಟು, ದತ್ತು, ಮದುವೆ, ಅಪಹರಣ, ಬಿಡುಗಡೆಗಳು  ರಾಮಲಕ್ಷ್ಮಣರ ಬದುಕಿನ ಭಾಗಗಳಷ್ಟೇ ದೀರ್ಘವಾಗಿವೆ. ಕಾಡುಪಾಲಾದಾಗ ಅವಳ ಸಂಕಷ್ಟ, ನಂತರ ಮಕ್ಕಳೊಂದಿಗೆ ಗಂಡನನ್ನು ಸೇರಿಕೊಳ್ಳುವತನಕದ ಬದುಕಿನ ಹೊರೆಗಳು ರಾಮ-ರಾವುಲರ ಯುದ್ಧದಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ.

ಅಷ್ಟೇ ಅಲ್ಲ, ಗಂಡಸಿಗೆ (ರಾವುಲನಿಗೆ) ಹುಟ್ಟಿದ ಮಗಳಾಗಿ ಕಥೆ ಹಲವಾರು ಸುಳುಹುಗಳನ್ನು ಹೊಳೆಯಿಸುತ್ತದೆ. ಭಾರತೀಯ ಸಾಹಿತ್ಯದಲ್ಲಿ ಸಾಕಷ್ಟು ಕಾಣಿಸಿಕೊಳ್ಳುವ ಗಂಡಸಿನ ಗರ್ಭಾಸೂಯೆ, ಹೆರಿಗೆ-ಅಸೂಯೆ; ಮತ್ತು ‘ಈಡಿಪಸ್’ ಸುಪ್ತ ಸೆಳೆತ, ವಿಶೇಷವಾಗಿ ಅಂತಹ ತಂದೆಯ ಸಾವಿಗೆ ಮಗಳೇ ಕಾರಣವಾಗುವುದು, ಇವೆಲ್ಲ ಗಮನಿಸಬೇಕಾದ ಅಂಶಗಳು.

ರಾವಣನ ಮಗಳು ಸೀತೆ ಎಂಬ ಅಂಶ ಬೇರೆ ಕಡೆಯ ರಾಮಾಯಣಗಳಲ್ಲಿ ಬಂದಿಲ್ಲವೆಂದಲ್ಲ. ‘ವಾಸುದೇವಹಿಮ್ದಿ’ ಯಂತಹ ಜೈನಕಥೆಗಳಲ್ಲಿ, ಕನ್ನಡ, ತೆಲುಗು ಜನಪದ ಪರಂಪರೆಗಳಲ್ಲಿ ಮತ್ತು ಆಗ್ನೇಯ ಏಷ್ಯಾದ ರಾಮಾಯಣಗಳಲ್ಲಿ ಸಹ ಅದರ ಪ್ರಸ್ತಾಪವಿದೆ. ಕೆಲವು ಕಥೆಗಳಲ್ಲಿ ರಾವಣ ತನ್ನ ಯೌವ್ವನದ ಲಂಪಟತನದಲ್ಲಿ ಒಬ್ಬ ಯುವತಿಯನ್ನು ಬಲಾತ್ಕರಿಸಿದಾಗ ಆಕೆ ಪ್ರತೀಕಾರದ ಪ್ರತಿಜ್ಞೆ ಮಾಡಿ ಅವನ ಮಗಳಾಗಿ ಹುಟ್ಟಿಬಂದು ಅವನ ಸಾವಿಗೆ ಕಾರಣಳಾಗಿ ಸೇಡು ತೀರಿಸಿಕೊಂಡಳು ಎಂಬ ಆಯಾಮವಿದೆ. ಹೀಗೆ ಮೌಖಿಕ ಪರಂಪರೆಗಳು ವಾಲ್ಮೀಕಿಯಲ್ಲಿ ಕಾಣಸಿಗದ ಹಲವಾರು ಮಹತ್ವದ ಅಂಶಗಳನ್ನು ಒಳಗೊಳ್ಳುತ್ತವೆ.

ದಕ್ಷಿಣ ಏಷ್ಯಾದ ರಾಮಾಯಣ

ಭಾರತದಿಂದ ಆಚೆಗೆ ದಕ್ಷಿಣ ಏಷ್ಯಾದತ್ತ ಹೋದರೆ ರಾಮಕಥೆಯ ಹಲವಾರು ರೂಪಗಳು ಟಿಬೆಟ್, ಥೈಲ್ಯಾಂಡ್, ಬರ್ಮಾ, ಲಾವೋಸ್, ಕಾಂಬೋಡಿಯ, ಮಲೇಷಿಯಾ, ಜಾವಾ, ಮತ್ತು ಇಂಡೋನೇಷಿಯಾದಲ್ಲಿ  ಕಾಣಸಿಗುತ್ತವೆ. ಇಲ್ಲಿ ಥಾಯ್ ನೆಲದ ‘ರಾಮಕೀರ್ತಿ’ಯನ್ನು ಗಮನಿಸಲಾಗಿದೆ.

ಸಂತೋಷ್ ದೇಸಾಯರ  (Desai 1980, 63) ಪ್ರಕಾರ ಹಿಂದೂ ಮೂಲದ ಯಾವುದೇ ಅಂಶ ಥಾಯ್ ಬದುಕನ್ನು ಪ್ರಭಾವಿಸಿದ್ದರೆ ಅದು ರಾಮಕಥೆ ಮಾತ್ರವೇ. ಅವರ ಬೌದ್ಧೀಯ ದೇವಸ್ಥಾನಗಳಲ್ಲಿ ಕಾಣಸಿಗುವ ಉಬ್ಬುಶಿಲ್ಪ, ವರ್ಣಚಿತ್ರಗಳು ಮತ್ತು ಹಳ್ಳಿ, ಪಟ್ಟಣಗಳಲ್ಲಿ ನಡೆಯುವ ರಂಗಪ್ರದರ್ಶನಗಳು ಮತ್ತು ಬ್ಯಾಲೆ ನೃತ್ಯಗಳೆಲ್ಲವೂ ರಾಮಕಥೆಯನ್ನು ಪುನರ್-ನಿರೂಪಿಸುವ ಪ್ರಯತ್ನ ಮಾಡುತ್ತವೆ. ಅಲ್ಲಿ ರಾಮನ ಹೆಸರನ್ನು ಹೊತ್ತ ಮತ್ತು ರಾಮಾಯಣದ ಪ್ರಸಂಗಗಳನ್ನು ಥಾಯ್ ಭಾಷೆಯಲ್ಲಿ ಬರೆದ ರಾಜರ ಸಾಲೇ ಇದೆ.

ಮೊದಲನೆಯ ರಾಜಾರಾಮ ಐವತ್ತು ಸಾವಿರ ಚರಣಗಳಲ್ಲಿ ರಾಮಾಯಣವನ್ನು ಬರೆದರೆ, ಎರಡನೆಯ ರಾಜಾರಾಮ ನೃತ್ಯಕ್ಕೆಂದೇ ಹೊಸ ಪ್ರಸಂಗಗಳನ್ನು ಬರೆದ. ಆರನೆಯ ರಾಜಾರಾಮ ಹೆಚ್ಚಿನಂಶ ವಾಲ್ಮೀಕಿಯಿಂದ ಎರವಲು ಪಡೆದ ಭಾಗಗಳನ್ನು ಸೇರಿಸಿದ. ತಮ್ಮ ಖ್ಮೇರ್ ಮತ್ತು ಥಾಯ್ ಕಲೆಗಳ ಅವಶೇಷಗಳೂ ಸೇರಿದಂತೆ

ಥಾಯ್-ಲ್ಯಾಂಡಿನ ಲಾಪ್-ಬುರಿ (ಸಂಸ್ಕೃತದ ಲವಪುರಿ), ಖಿಡಕಿನ್ (ಕಿಷ್ಕಿಂಧಾ), ಮತ್ತು ಅಯುತೀಯ (ಅಯೋಧ್ಯಾ)ಗಳು ರಾಮಕಥೆಗಳಿಂದ ಪ್ರೇರಣೆಯನ್ನು ಪಡೆದುಕೊಂಡಿವೆ.

ಥಾಯ್ ‘ರಾಮಕೀರ್ತಿ’ ಅಥವಾ ‘ರಾಮಕೀಯನ್’ (ರಾಮಕಥೆ)ಗಳ  ಶುರುವಿನಲ್ಲಿ  ಮನುಷ್ಯ, ರಾಕ್ಷಸ, ಮತ್ತು ವಾನರ ಎಂಬ ಮೂರು ಬಗೆಯ ಪಾತ್ರಗಳ ಮೂಲವನ್ನು ನಿರೂಪಿಸುವ ಪ್ರಯತ್ನವಿದೆ. ಎರಡನೆಯ ಭಾಗ ರಾಮಲಕ್ಷ್ಮಣ ಮತ್ತು ರಾಕ್ಷಸರ ನಡುವಿನ ಮೊಟ್ಟಮೊದಲ ಮುಖಾಮುಖಿ, ರಾಮಸೀತೆಯರ ಮದುವೆ, ವನವಾಸ, ಸೀತಾಪಹರಣ, ಮತ್ತು ವಾನರ ಸಮುದಾಯದೊಡನೆ ಭೇಟಿಗಳನ್ನು ಒಳಗೊಂಡಿದೆ. ಅಲ್ಲಿ ಯುದ್ಧದ ಸಿದ್ಧತೆಯೂ ಬರುತ್ತದೆ. ಜೊತೆಗೆ ಹನುಮಂತನ ಲಂಕಾದಹನ, ಆಮೇಲಿನ ಸೇತುವೆ ನಿರ್ಮಾಣ, ರಾಮ-ರಾವಣರ ಯುದ್ಧ, ರಾವಣನ ಸಾವು, ರಾಮಸೀತೆಯರ ಪುನರ್ಮಿಲನಗಳನ್ನೂ ಅದು ಒಳಗೊಳ್ಳುತ್ತದೆ.

ಮೂರನೆಯ ಭಾಗ ಲಂಕೆಯಲ್ಲಿ ಎದ್ದ ದಂಗೆ ಮತ್ತು ಅದನ್ನು ಹತ್ತಿಕ್ಕಲು ರಾಮ ತನ್ನ ಇಬ್ಬರು ತಮ್ಮಂದಿರನ್ನು ಕಳುಹಿಸುವ ಪ್ರಸಂಗವನ್ನು ಒಳಗೊಂಡಿದೆ. ಅಲ್ಲಿ ಸೀತೆಯ ಕಾಡುಪಾಲು, ಲವ-ಕುಶರ ಜನ್ಮ, ರಾಮ-ಲವಕುಶರ ನಡುವಿನ ಯುದ್ಧ, ಸೀತೆಯ ಭೂತಾಯಿ ಪ್ರಾರ್ಥನೆ, ದೇವತೆಗಳು ಪ್ರತ್ಯಕ್ಷರಾಗಿ ರಾಮಸೀತೆ ಒಂದಾಗುವ ಘಟನೆಗಳೆಲ್ಲವೂ ಅಲ್ಲಿಯೇ ಬರುತ್ತದೆ.

ಒಟ್ಟಿನಲ್ಲಿ ವಾಲ್ಮೀಕಿಯ ಕಥೆಯೇ ಅಲ್ಲಿ ಮರುನಿರೂಪಣೆಗೆ ಒಳಗಾದಂತೆ ಕಂಡರೂ ಸಹ ಸಾಕಷ್ಟು ವ್ಯತ್ಯಾಸಗಳನ್ನು ಗಮನಿಸಬಹುದು. ಉದಾಹರಣೆಗೆ ದಕ್ಷಿಣ ಭಾರತೀಯ ರಾಮಾಯಣಗಳಲ್ಲಿ (ಮತ್ತು ಕೆಲವು ಜೈನ, ಬಂಗಾಳಿ, ಮತ್ತು ಕಾಶ್ಮೀರಿ ರಾಮಕಥೆಗಳಲ್ಲಿ) ಕಂಡುಬರುವಂತೆ ಅಲ್ಲಿಯೂ ಸೀತೆಯ ಕಾಡುಪಾಲಿಗೆ ಒಂದು ನಾಟಕೀಯ ಸಮರ್ಥನೆಯನ್ನು ಒದಗಿಸಲಾಗಿದೆ.

ರಾಮಲಕ್ಷ್ಮಣರು ವನವಾಸದ ಸಮಯದಲ್ಲಿ ಕಿವಿಮೂಗು ಕತ್ತರಿಸಿ ವಿರೂಪಗೊಳಿಸಿದ್ದ ಶೂರ್ಪನಖಿಯ ಮಗಳು ಅದಕ್ಕೆಲ್ಲ ಸೀತೆಯೇ ಕಾರಣಳೆಂದು ಅವಳ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿರುತ್ತಾಳೆ. ಅವಳು ಅಯೋಧ್ಯೆಗೆ ಬಂದು ಸೀತೆಯ ದಾಸಿಯಾಗಿ ಕೆಲಸಕ್ಕೆ ಸೇರಿಕೊಂಡ ಮೇಲೆ ರಾವಣನ ಚಿತ್ರವನ್ನು ಬಿಡಿಸುವಂತೆ ಸೀತೆಯ ಮನವೊಲಿಸಿ ಯಶಸ್ವಿಯಾಗುತ್ತಾಳೆ. ಅದು ಅಳಿಸಲಾಗದ ಸ್ಪಷ್ಟತೆಯನ್ನು ಪಡೆದು (ಕೆಲವು ಕಥೆಗಳಲ್ಲಿ ಅದು ಜೀವಂತವಾಗಿ ಮೈದಳೆಯುತ್ತದೆ) ರಾಮನ ಕಣ್ಣಿಗೆ ಬೀಳುವಂತೆ ಮಾಡಲಾಗುತ್ತದೆ. ಮತ್ಸರದಿಂದ ಹುಚ್ಚಾದ ರಾಮ ಸೀತೆಯನ್ನು ಕೊಲ್ಲುವಂತೆ ಆಜ್ಞಾಪಿಸುತ್ತಾನೆ. ಆದರೆ ಲಕ್ಷ್ಮಣ ಅನುಕಂಪದಿಂದ ಅವಳನ್ನು ಕಾಡಿನಲ್ಲಿ ಬಿಟ್ಟು ಬರುತ್ತಾನೆ.

ರಾಮ-ಸೀತೆಯರು ಮರಳಿ ಒಂದಾಗುವ ರೀತಿಯೂ ಬೇರೆಯೇ. ಸೀತೆಯಿನ್ನೂ ಬದುಕಿರುವ ಸುದ್ದಿ ತಿಳಿದು ರಾಮ ಅವಳನ್ನು ಅರಮನೆಗೆ ಕರೆಸಿಕೊಳ್ಳುವ ಉದ್ದೇಶದಿಂದ ತನ್ನ ಸಾವಿನ ಸುದ್ದಿಯನ್ನು ಹರಡುತ್ತಾನೆ. ಸೀತೆ ಓಡೋಡಿ ಬರುತ್ತಾಳೇನೋ ಸರಿ. ಆದರೆ ಅದೊಂದು ಕುತಂತ್ರವೆಂದು ಅರಿತಾಗ ಕೋಪದಲ್ಲಿ ಹುಚ್ಚಾಗುತ್ತಾಳೆ. ತನ್ನನ್ನು ಒಳಗೆ ಕರೆದುಕೊಳ್ಳೆಂದು ಭೂತಾಯಿಗೆ ಪ್ರಾರ್ಥಿಸಿ ಒಳಗೆ ಜಾರುತ್ತಾಳೆ. ಭೂಗರ್ಭದ ನಡುವಿನಲ್ಲೆಲ್ಲೋ ಇರುವ ಅವಳನ್ನು ಕರೆತರಲು ಹನುಮಂತನನ್ನು ಕಳಿಸಲಾಗುತ್ತದೆ. ಆದರೂ ಸೀತೆ ಒಪ್ಪುವುದಿಲ್ಲ. ಕೊನೆಗೆ ಶಿವನೇ ಬಂದು ಅವರನ್ನು ಒಂದುಗೂಡಿಸಬೇಕಾಗುತ್ತದೆ.

ಜೈನಕಥೆಗಳಲ್ಲಿ ಮತ್ತು ದಕ್ಷಿಣ ಭಾರತೀಯ ಜಾನಪದ ಕಾವ್ಯಗಳಲ್ಲಿ ಇರುವಂತೆ ಇಲ್ಲೂ ಸಹ ಸೀತೆಯ ಹುಟ್ಟು ವಾಲ್ಮೀಕಿಯದಕ್ಕಿಂತ ಬೇರೆಯೇ. ಒಮ್ಮೆ ದಶರಥ ಯಜ್ಞಯಾಗವನ್ನು ಮಾಡುತ್ತಿದ್ದಾಗ ಒಂದು ಅನ್ನದ ಉಂಡೆಯನ್ನು (ವಾಲ್ಮೀಕಿಯಲ್ಲಿ ಬರುವಂತೆ ಅನ್ನದ ಪಾಯಸ ಅಲ್ಲ) ಪಡೆಯುತ್ತಾನೆ. ಒಂದು ಕಾಗೆ ಆ ಅನ್ನದ ಕೆಲವು ಅಗುಳುಗಳನ್ನು ಕದ್ದುಕೊಂಡು ಹೋಗಿ ಮಂಡೋದರಿಗೆ ಕೊಟ್ಟಾಗ ಅದನ್ನು ತಿಂದ ಮಂಡೋದರಿ ಸೀತೆಯನ್ನು ಹೆರುತ್ತಾಳೆ. ತನ್ನ ಸಾವು ತನ್ನ ಮಗಳಿಂದಲೇ ಎಂದು ಭವಿಷ್ಯವಾಣಿಯನ್ನು ಕೇಳಿದ ರಾವಣ ಮಗುವನ್ನು ಸಮುದ್ರಕ್ಕೆ ಎಸೆಯುತ್ತಾನೆ. ಸಮುದ್ರದೇವತೆ ಆ ಮಗುವನ್ನು ರಕ್ಷಿಸಿ ಜನಕನಿಗೆ ನೀಡುತ್ತದೆ.

ಅಷ್ಟೇ ಅಲ್ಲ, ರಾಮ ವಿಷ್ಣುವಿನ ಅವತಾರ ಎಂದು ಪರಿಗಣಿಸಲ್ಪಟ್ಟಿದ್ದರೂ ಸಹ ಥಾಯ್-ಲ್ಯಾಂಡಿನಲ್ಲಿ ಅವನು ಶಿವನ ಅಧೀನ. ರಾಮ ಮನುಷ್ಯರ ನಡುವಿನ ಒಬ್ಬ ಮಹಾನಾಯಕ. ಆದರೆ ‘ರಾಮಕೀರ್ತಿ’ ಒಂದು ಧಾರ್ಮಿಕ ಪಠ್ಯವಲ್ಲ. ಅಥವಾ ಸಾಮಾನ್ಯ ಮಂದಿ ರಾಮಸೀತೆಯರನ್ನು ಬದುಕಿನಲ್ಲಿ ಅನುಕರಿಸಬೇಕು ಅಂತಲೂ ಅದು ಹೇಳುವುದಿಲ್ಲ.

ಥಾಯ್ ಜನರಿಗೆ ತುಂಬ ಇಷ್ಟವಾದ ಭಾಗವೆಂದರೆ ಸೀತಾಪಹರಣ ಮತ್ತು ನಂತರ ನಡೆಯುವ ಯುದ್ಧ. ಹಿಂದೂ ರಾಮಾಯಣಗಳಲ್ಲಿ ಅಗಲಿಕೆ, ವಿರಹ, ಪುನರ್ಮಿಲನಗಳು ಪ್ರಚಂಡ ಮಹತ್ವವನ್ನು ಪಡೆದುಕೊಂಡಿವೆ.

ಆದರೆ ಥಾಯ್ ಮಂದಿಗೆ ಯುದ್ಧ ತಂತ್ರಗಳು ಮತ್ತು ಅದರಲ್ಲಿ ಬಳಸಲ್ಪಡುವ ಅದ್ಭುತ ಶಸ್ತ್ರಗಳು ಮಹಾ ಖುಷಿ ಕೊಡುತ್ತವೆ. ಅಲ್ಲಿ ಯುದ್ಧಕಾಂಡವೇ ಪ್ರಧಾನ. ಕನ್ನಡ ಜನಪದ ಕಥೆಗಳಲ್ಲಿ ಅದು ನಗಣ್ಯ.

ದೇಸಾಯಿ ಈ ಯುದ್ಧಮಹತ್ವದ ನೆಲೆಯನ್ನು ಪುರಾತನ ಥಾಯ್ ಚರಿತ್ರೆಯಲ್ಲಿ ಗುರುತಿಸುತ್ತಾರೆ. ಬದುಕುಳಿಯಲು ಥಾಯ್ ಮಂದಿ ಹಲವಾರು ಯುದ್ಧಗಳನ್ನು ಮಾಡುವುದು ಅನಿವಾರ್ಯವಾಗಿತ್ತು. ರಾಮಕೀಯನ್ ಕೃತಿಯ ಒತ್ತು ಕೌಟುಂಬಿಕ ಅಥವಾ ಆಧ್ಯಾತ್ಮಿಕ ಮೌಲ್ಯಗಳ ಮೇಲಲ್ಲ.

ಥಾಯ್ ಪ್ರೇಕ್ಷಕರಿಗೆ ರಾಮನಿಗಿಂತಲೂ ಹನುಮಂತ ಹೆಚ್ಚು ಪ್ರಿಯ. ಹಿಂದೂ ರಾಮಾಯಣಗಳಲ್ಲಿ ಬರುವ ಹನುಮಂತ ಬ್ರಹ್ಮಚಾರಿ ಮತ್ತು ಮಹಾಭಕ್ತ. ಆದರೆ ಥಾಯ್ ಹನುಮಂತ ಮಹಾ ಸ್ತ್ರೀಪ್ರಿಯ. ಹಾಗಾಗಿಯೇ ಲಂಕೆಯಲ್ಲಿ ಗಂಡಹೆಂಡಿರು  ಮಲಗುವ ಕೋಣೆಯಲ್ಲಿ ಇಣಿಕಿ ನೋಡಲು ಹಿಂಜರಿಯಲಾರ. ಮತ್ತು, ಒಬ್ಬನ ಹೆಂಡತಿ ಇನ್ನೊಬ್ಬನ ಜೊತೆ ಮಲಗುವುದು ಅವನ ಪ್ರಕಾರ ಅನೈತಿಕವೇನೂ ಅಲ್ಲ. ವಾಲ್ಮೀಕಿ ಮತ್ತು ಕಂಬನ್ ಹನುಮಂತರು ಅವನಿಗೆ ತದ್ವಿರುದ್ಧ.

ಹಾಗೆಯೇ ಇಲ್ಲಿಯ ರಾವಣನೂ ಸಹ ಬೇರೆಯೇ. ‘ರಾಮಕೀರ್ತಿ’ಗೆ ರಾವಣನ ಸಂಪನ್ಮೂಲತೆಯ ಬಗ್ಗೆ ಮೆಚ್ಚಿಗೆ ಇದೆ. ಅವನೊಬ್ಬ ವಿದ್ವಾಂಸನೆಂದು ಗೌರವಿಸುತ್ತದೆ. ಅವನು ಸೀತೆಯನ್ನು ಅಪಹರಿಸಿದ್ದು ಅವಳ ಮೇಲಿದ್ದ ಪ್ರೇಮದ ಕಾರಣಕ್ಕೆ ಎಂದು ಅನುಕಂಪಿಸುತ್ತದೆ. ಆ ಪ್ರೇಮಕ್ಕೋಸ್ಕರ ತನ್ನ ಕುಟುಂಬ, ರಾಜ್ಯ, ಮತ್ತು ಬದುಕನ್ನೂ ಒತ್ತೆ ಇಟ್ಟನಲ್ಲ ಎಂದು ಅಚ್ಚರಿಪಡುತ್ತದೆ.

ರಾವಣನ ಕೊನೆಗಾಲದ ಮಾತುಗಳು ಹತ್ತೊಂಬತ್ತನೆಯ ಶತಮಾನದಲ್ಲಿ ಬ್ಯಾಂಗ್ ಕಾಕ್‌ನ ಬೌದ್ಧ ದೇವಾಲಯದ ಶಾಸನವೊಂದರಲ್ಲಿ ಮೂಡಿದ ಪ್ರೇಮಕಾವ್ಯಕ್ಕೆ ಪ್ರೇರಣೆಯಾಗಿತ್ತು (Desai 1980, 85). ವಾಲ್ಮೀಕಿ ಸೃಷ್ಟಿಸುವ ಪಾತ್ರಗಳಿಗಿಂತ ಭಿನ್ನವಾಗಿ ಕಾಣುವ ಥಾಯ್ ಪಾತ್ರಗಳು ಒಳಿತು-ಕೆಡುಕುಗಳ ಪ್ರಭಾವಕ್ಕೆ ಪಕ್ಕಾಗುವ ಮಾನವೀಯ ಗುಣಗಳನ್ನು ಹೊಂದಿದವರು. ರಾವಣ ಉರುಳಿದಾಗ ವಾಲ್ಮೀಕಿಯಂತೆ ಹೋ ಎಂದು ಸಂಭ್ರಮಿಸುವುದಿಲ್ಲ. ಬದಲಿಗೆ ಮರುಕ ತುಂಬಿದ ಮೌನ ಅಲ್ಲಿ ಸುತ್ತಿಕೊಳ್ಳುತ್ತದೆ.

ಭಿನ್ನತೆಯ  ಮಾದರಿಗಳು

ಹೀಗೆ ನಮ್ಮೆದುರು ಸಂಸ್ಕೃತದ  ವಾಲ್ಮೀಕಿ ರಾಮಾಯಣವಿದೆ. ಇನ್ನೊಂದು ಕಡೆ ಪರಸ್ಪರ ಹಲವಾರು ಭಿನ್ನತೆಗಳನ್ನು ಹೊತ್ತ ಇತರ ರಾಮಕಥೆಗಳಿವೆ. ಮೇಲೆ ಹೇಳಿರದ ಇನ್ನಷ್ಟು ಭಿನ್ನತೆಗಳ ಅಂಶಗಳನ್ನು ಇಲ್ಲಿ ನೀಡಲು ಪ್ರಯತ್ನಿಸುತ್ತೇನೆ.

ಉದಾಹರಣೆಗೆ ಸಂಸ್ಕೃತ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಎರಡು ರೀತಿಯ ಮುಗಿತಾಯಗಳಿವೆ. ಒಂದು, ರಾಮಸೀತೆಯರು ರಾಮರಾಜ್ಯದ ರಾಜಧಾನಿ ಅಯೋಧ್ಯೆಗೆ ಮರಳಿ, ರಾಮನ ಪಟ್ಟಾಭಿಷೇಕ ನಡೆಯುತ್ತದೆ. ಇನ್ನೊಂದು, ವಾಲ್ಮೀಕಿ ಮತ್ತು ಕಂಬನ್ ರಾಮಾಯಣಗಳಲ್ಲಿ ನಂತರ ಸೇರ್ಪಡೆಯಾದವು ಎಂಬ ಭಾಗದಲ್ಲಿ ರಾಮ ಜನಾಪವಾದಕ್ಕೆ ಹೆದರಿ ಸೀತೆಯನ್ನು ಕಾಡಿಗೆ ಕಳುಹಿಸಿ, ಅವಳು ಕಾಡಿನಲ್ಲಿ  ಲವಕುಶರನ್ನು ಹೆತ್ತ ಪ್ರಸಂಗ ಬರುತ್ತದೆ.

ಅಲ್ಲಿ ವಾಲ್ಮೀಕಿಯ ಆಶ್ರಮದಲ್ಲಿ ಬೆಳೆಯುತ್ತಿರುವ ಲವಕುಶರು ವಾಲ್ಮೀಕಿಯಿಂದ ರಾಮಾಯಣದ ಜೊತೆಗೆ ಯುದ್ಧವಿದ್ಯೆಗಳನ್ನೂ ಕಲಿಯುತ್ತಾರೆ. ರಾಮನ ಸೈನ್ಯವನ್ನು ಸೋಲಿಸಿದ ಮೇಲೆ ಸಾಕ್ಷಾತ್ ರಾಮನಿಗೆ ಎದುರಾದಾಗ ರಾಮ ಅವರನ್ನು ಗುರುತಿಸುವುದಿಲ್ಲ. ಆಗ ರಾಮಾಯಣವನ್ನೂ ವಾಚಿಸಿ ನೆನಪಿಸಲು ಪ್ರಯತ್ನಿಸುತ್ತಾರೆ.

ಇವೆರಡೂ ಪರಸ್ಪರ ಮಹಾ ಭಿನ್ನವೇ. ಮೊದಲನೆಯದು ಸುಖಾಂತ. ಎರಡನೆಯದರಲ್ಲಿ ಆ ಸುಖ-ಶಾಂತಿಗಳು ಬಹಳ ದಿನ ಉಳಿಯುವುದಿಲ್ಲ. ಮತ್ತೊಮ್ಮೆ ಪ್ರೀತಿಪಾತ್ರರ ಅಗಲುವಿಕೆ (ವಿಪ್ರಲಂಭ) ತಲೆಯೆತ್ತಿ ಇಡೀ ಕೃತಿಯ ಕೇಂದ್ರವಾಗಿಬಿಡುತ್ತದೆ. ಅದರಲ್ಲಿ ಬದುಕಿನ ದುರಂತದ ಛಾಯೆ ಇದೆ.

ಸೀತೆಗೆ ಇನ್ನು ಸಹಿಸಲು ಸಾಧ್ಯವಿಲ್ಲ. ಎಲ್ಲಿಂದ ಬಂದೆನೋ ಅಲ್ಲಿಗೇ ಕರೆದುಕೋ ಎಂದು ಭೂಮಿತಾಯಿಯನ್ನು ಪ್ರಾರ್ಥಿಸುತ್ತಾಳೆ. ಸೀತೆಯ ಕತೆಯಲ್ಲಿ ಪ್ರಕೃತಿಯ ಸ್ತ್ರೀತತ್ವವಿದೆ. ಸೀತೆ ಭೂಮಿಯಿಂದ ಮೊಳೆಯುವ ಒಂದು ಬೀಜ. ಕರಿಮೋಡ ಬಣ್ಣದ ದೇಹ ಹೊತ್ತ ರಾಮನೇ ಮಳೆ. ರಾವಣ ಅವಳನ್ನು ಅಪಹರಿಸಿ ಸಾವಿನ ಸಂಕೇತವಾದ ದಕ್ಷಿಣಕ್ಕೆ ಕರೆದೊಯ್ಯುತ್ತಾನೆ. ಆದರೆ ಸೀತೆ ಅಲ್ಲಿಂದ ಬಿಡುಗಡೆಯಾಗಿ ಮರಳಿ ಕೆಲಕಾಲದ ಮಟ್ಟಿಗೆ ಪರಿಶುದ್ಧ ಬೆಳಕಲ್ಲಿ ಹೊಳೆದು ಕೊನೆಗೆ ಭೂಮಿತಾಯಿಯ ಗರ್ಭದೊಳಗೇ ಮಾಯವಾಗುತ್ತಾಳೆ.

ಇದೊಂದು ಕೇವಲ ಮಿಥ್ ನಂತೆ ನೋಡಬೇಕೆ ಹೊರತು ಅನ್ಯೋಕ್ತಿಗೆ ಇಳಿಸುವ ಸಾಹಸ ಮಾಡಬಾರದು. ಈ ಮಿಥ್ ಹಲವಾರು ವಿವರಗಳಲ್ಲಿ ಕಥೆಯುದ್ಧಕ್ಕೂ ಕಾಣಿಸಿಕೊಳ್ಳುತ್ತದೆ. ಭೂಮಿಯ ಫಲವತ್ತತೆ; ಮಳೆ; ರಾಮನಿಗಿರುವ  ಶಿವನ ರೂಪದ ಯೋಗಿಗಳ ವಿರುದ್ಧದ  ನಿಲುವು (ಕಂಬನ್ ರಾಮಾಯಣದ ಅಹಲ್ಯೆಯ ಪ್ರಸಂಗದಲ್ಲಿ ಅದು ಹೆಚ್ಚು ಸ್ಪಷ್ಟವಾಗಿದೆ); ಮತ್ತು ಅವನ ಪೂರ್ವಜ ಭಗೀರಥ ಗಂಗೆಯ ಅವತರಣಕ್ಕೆ ಬೇಡಿಕೊಳ್ಳುವುದು, ಅವುಗಳಲ್ಲಿ ಕೆಲವು.

ಹಾಗೆಯೇ ಋಷ್ಯಶೃಂಗನ ಕತೆಯನ್ನೂ ಗಮನಿಸಬೇಕು. ಅವನೊಬ್ಬ ಲೈಂಗಿಕ-ಮುಗ್ಧ ಋಷಿ. ಸುಂದರ ಹೆಣ್ಣೊಬ್ಬಳ ಪ್ರೇಮದಲ್ಲಿ ಸಿಲುಕಿ ಲೋಮಪಾದನ ರಾಜ್ಯಕ್ಕೆ ಮಳೆ ತರಿಸುತ್ತಾನೆ. ನಂತರ ದಶರಥನ ಪುತ್ರಕಾಮೆಷ್ಟಿ ಯಾಗವನ್ನು ನೆರವೇರಿಸಿ ಅವನ ಹೆಂಡತಿಯರು ಗರ್ಭಧರಿಸುವಂತೆ ಸಹ ಮಾಡುತ್ತಾನೆ. ಈ ಪುರಾಣೀಯ ಬಾಹುಳ್ಯದಲ್ಲಿ ಪ್ರಾಕೃತಿಕ ವಿವರಗಳು ನಿತ್ಯ ಹರಿಯುತ್ತಲೇ ಇರುತ್ತವೆ.

ಸೀತೆಯನ್ನು ಹುಡುಕುವಾಗ ರಾಮನಿಗೆ ಎದುರಾಗುವ ಪಕ್ಷಿಪ್ರಾಣಿಗಳ ಸಂಕುಲವೂ ಅದರ ಭಾಗವೇ. ವಾನರರಂತೂ ವಾಲ್ಮೀಕಿ ರಾಮಾಯಣದ ಒಂದು ಕಾವ್ಯಾತ್ಮಕ ಅನಿವಾರ್ಯದಂತೆ ತೋರುತ್ತಾರೆ (ಜೈನರ ದೃಷ್ಟಿಯಲ್ಲಿ ಮಾತ್ರ ಅವು ಬೇಡದ ಗಡ್ಡೆಗಳು). ಪ್ರತಿಯೊಂದು ಸರ್ಗದ ಕೊನೆಯಲ್ಲಿ ಕಥಾನಕದ ವಿಶಿಷ್ಟ  ಆಯಾಮಕ್ಕೆ ಒತ್ತು ಬಿದ್ದು ಕಾವ್ಯಾತ್ಮಕ ನಿಲುವನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿದೆ.

ಶುರುವಾತುಗಳ ಬಗ್ಗೆ ಸಹ ಅದೇ ಮಾತನ್ನು ಹೇಳಬಹುದು. ವಾಲ್ಮೀಕಿ ತನ್ನ ಅನುಭವದಿಂದಲೇ ಪ್ರಾರಂಭಿಸುತ್ತಾನೆ. ಬೇಡನೊಬ್ಬ ಬೇಟದಲ್ಲಿ ನಿರತವಾಗಿದ್ದ ಕ್ರೌಂಚಪಕ್ಷಿಗಳಿಗೆ ಬಾಣ ಹೂಡುತ್ತಿದ್ದುದನ್ನು ಕವಿ ನೋಡಿದ. ಹೆಣ್ಣು ಸತ್ತ ತನ್ನ ಪ್ರೇಮಿಯನ್ನು ಸುತ್ತುವರೆಯುತ್ತಾ ಅಗಾಧ ದುಃಖದಲ್ಲಿ ಗೋಳಿಡುತ್ತಿದ್ದದ್ದು ಕಂಡಿತು. ವಾಲ್ಮೀಕಿ ಋಷಿಗೆ ಅದೆಷ್ಟು ವೇದನೆಯಾಯಿತೆಂದರೆ ಆತ ಬೇಡನನ್ನು ಶಪಿಸಿದ. ತಕ್ಷಣವೇ ತನ್ನ ಶಾಪ ಶೋಕದ ಭಾರದಲ್ಲಿ ಶ್ಲೋಕವಾಗಿದ್ದನ್ನು ಗಮನಿಸಿದ.

ವಾಲ್ಮೀಕಿ ಅದೇ ಲಯವನ್ನು ಉಪಯೋಗಿಸಿ ರಾಮಕಥೆಯನ್ನು ಬರೆಯಲು ನಿರ್ಧರಿಸಿದ. ಭಾವ ಸಹಜವಾಗಿದ್ದರೆ ತನ್ನದೇ ರೂಪ-ರಸಗಳನ್ನು ಹೊಂದಿದ ಕಾವ್ಯವಾಗುತ್ತದೆ ಎಂಬ ನಂಬಿಕೆಗೆ ಅದು ಹಾದಿ ಮಾಡಿಕೊಟ್ಟಿತು. ವಾಲ್ಮೀಕಿ ರಾಮಾಯಣದ ಈ ಶುರುವಾತು ಒಂದು ಬಗೆಯ ಸೌಂದರ್ಯಾತ್ಮಕ ಸ್ವ-ಪ್ರಜ್ಞೆಗೆ ಒತ್ತು ಕೊಟ್ಟಿತು.

ಹೀಗೆ, ಅತ್ಯಂತ ಪ್ರೀತಿಪಾತ್ರರ ನಡುವಿನ ಅಗಲಿಕೆಯ ನೋವು ರಾಮಾಯಣದ ಕಥಾಹಂದರಕ್ಕೆ ಪ್ರೇರಣೆಯಾಯಿತು. ಕಾವ್ಯದ ಹಲವಾರು ಮಹತ್ವದ ತಿರುವುಗಳು ಪ್ರಾಣಿವಧೆಯ ಗಳಿಗೆಗಳಲ್ಲಿ ಉಂಟಾಗುತ್ತವೆ ಎನ್ನುವುದನ್ನು ಗಮನಿಸಬೇಕು. ದಶರಥ ಆನೆ ನೀರು ಕುಡಿಯುತ್ತಿದೆ ಎಂದು ಭ್ರಮಿಸಿ ಬಾಣ ಬಿಟ್ಟಾಗ ಸಾಯುವುದು ಒಬ್ಬ ಶ್ರವಣ ಕುಮಾರನಂತಹ ಎಳೆಯ ಸನ್ಯಾಸಿ. ಆಗ ಸಿಕ್ಕ ಶಾಪ, ರಾಮನ ವನವಾಸ ಮತ್ತು ಆ ಮೂಲಕ ತಂದೆ ಮಕ್ಕಳ ಅಗಲಿಕೆಗೆ ಹಾದಿ ಮಾಡಿಕೊಡುತ್ತದೆ.

ರಾಮ ಮಾಯಾಜಿಂಕೆಯನ್ನು ಬೆನ್ನಟ್ಟಿ ಹೋದಾಗ, ಮಾರುವೇಷದಲ್ಲಿ ಬಂದಿದ್ದ ಮಾರೀಚ ರಾಮನ ಧ್ವನಿಯನ್ನು ಅನುಕರಿಸಿ, ‘ಓ ಲಕ್ಷ್ಮಣಾ! ಓ ಸೀತಾ!’ ಎಂದು ಕರೆಯುತ್ತಾನೆ. ಮೃಗವನ್ನು ಕೊಲ್ಲುವ ಉದ್ದೇಶ ಸೀತೆಯ ಅಪಹರಣಕ್ಕೆ ನಾಂದಿ ಹಾಡುತ್ತದೆ. ಅಪಹರಣದ ಸಮಯದಲ್ಲಿ ರಾವಣ ಜಟಾಯುವಿನ ರೆಕ್ಕೆಯನ್ನು ಕತ್ತರಿಸಿ ಹಾಕುತ್ತಾನೆ. ಕ್ರೌಂಚಪಕ್ಷಿಯ ಆರ್ತರೋಧನ ಅಣ್ಣತಮ್ಮಂದಿರ, ತಂದೆತಾಯಿ-ಮಕ್ಕಳ, ಗಂಡಹೆಂಡತಿಯರ ನಡುವಿನ ಅಗಲಿಕೆಯ ನೋವಿನಲ್ಲಿ ಪ್ರತಿಧ್ವನಿಸುತ್ತಾ ಹೋಗುತ್ತದೆ.

ಹೀಗೆ ಮಹಾಗಾಥೆಯ ಪ್ರಾರಂಭದಲ್ಲೇ ಮುಂಬರುವ ಘಟನಾವಳಿ ಮತ್ತು ಆಕಾರಗಳ ಮಾದರಿಯನ್ನು ಧ್ವನಿಸುವ ಪ್ರಯತ್ನವಿರುತ್ತದೆ. ತಮಿಳಿನ ಕಂಬನ್ ಪಠ್ಯ ಮಾತ್ರ ಬೇರೆ ರೀತಿಯಲ್ಲಿ ಪ್ರಾರಂಭವಾಗುತ್ತದೆ. ಕೆಲವು ಚರಣಗಳನ್ನು ಉದ್ಧರಿಸುವುದು ಸೂಕ್ತವಾಗಬಹುದು.

ಮಳೆಹೊಳೆ

ಸಾಗರದ ಆವಿಯನು ಹೀರಿ ಮೇಲೆ
ತೆರಳುವ ಮೋಡ, ಶಿವನಂತೆ
ಬಿಳಿಬಿಳಿಯ ವಸ್ತ್ರಗಳ ಹೊದ್ದು
ಹೊಳೆಸಿತ್ತು ಬಾನನ್ನು.

ಬಲಗಡೆಗೆ ಪಾರ್ವತಿ, ಮೃದುಮಧುರ
ಎದೆಯುಳ್ಳ ಹೆಮ್ಮೆಯ ಹೆಂಡತಿ!

ಹಿಮಾಲಯದ ಬೆಳಗನ್ನು ಹೊನ್ನಮಾಲೆ
ಎಂದೆಣಿಸಿದ ಮೋಡಮಾಲೆ ಶಿವಮುಖದ
ಬಣ್ಣವನೆ ತಳೆದು ಸುರಿಸಿತ್ತು ಮಳೆಯನ್ನು
ಹೊಳೆಹೊಳೆವ ಧಾರೆಯಾಗಿ.

ಏನಿದೆ ಏನಿಲ್ಲ ಎಂದೆಲ್ಲ ಬಗೆಯುತ್ತ
ಇರುವುದೆಲ್ಲವ ತೆರೆದು ಸುರಿಸಿರಲು
ಹೊಳೆಯಾಗಿ ಹರಿದಿತ್ತು ಮಳೆ,

ಛತ್ರಚಾಮರದ ನೆರಳಲ್ಲಿ
ಬೀಗಿ ಕುಳಿತಿಹ ದೊರೆಯ
ಕೀರ್ತಿ ಎಲ್ಲೆಲ್ಲಿ ಹರಡುವ ತೆರದಲ್ಲಿ.

ನಲ್ಲರ ತಲೆಯನ್ನು ನೇವರಿಸಿ
ಕಾಲನ್ನು ಮುದ್ದಿಸಿ, ಮೈಯ್ಯನ್ನೆ ತಬ್ಬಿ
ಆದರಿಸುವ ಪ್ರೇಯಸಿಯರು,

ಗಿರಿಯಷ್ಟು ಸಿರಿಯ ಪಡೆದರೂ
ಮುಂಬರುವ ಹಾದಿಗೆ ಅಂಗೈಯಷ್ಟನ್ನೇ
ಮುಚ್ಚಟೆಯಾಗಿ ಉಳಿಸಿಕೊಳ್ಳುವ ತೆರದಿ

ಗಿರಿಯಿಂದ ಧುಮುಕಿ
ಕಣಿವೆಯನು ಸೇರುವ ಮಳೆ!
ಮೇಲಿಂದ ಹೊರಟು ತಳವ
ತಲುಪುವ ಕರುಣೆ!

ಚಿನ್ನ, ನವಿಲುಗರಿ, ದಂತ, ಶ್ರೀಗಂಧ,
ಹೊತ್ತ ವರ್ತಕರ ದಂಡು ಮುಂದೆ
ಸಾಗುವ ತೆರದ ಸಿರಿಮಳೆ!

ಹೊಳೆಯ ಅಂಚಿನಲಿ ಬಾಗಿ ಹರಿದಿಹ
ಮಳೆಯಲ್ಲಿ ಹೂದಳಗಳ ಹೋಳಿ!
ಹಳದಿ ಪರಾಗ, ಜೇನು, ಆನೆಗಳ
ಮಸ್ತಿಯ ಕೇಸರಿ! ಭುವಿಗಿಳಿದ ಕಾಮನಬಿಲ್ಲು!

ಸೂರೆಯಾದ ಗಿರಿಗಳು, ಉರುಳಿದ
ಮರಗಳು, ಎಲ್ಲೆಲ್ಲಿ ಎಲೆಗಳನು
ಚೆಲ್ಲುತಲಿ ಹರಿದಿತ್ತು ಮಳೆಹೊಳೆ!

ಭೋರ್ಗರೆವ ಸಮುದ್ರದ ನಡುವಲ್ಲಿ
ಸೇತುವೆಯ ಹುಡುಕುತಿಹ ಕಪಿಕುಲದಂತೆ.

ಒರಟುಮುಖದ ಸೊಕ್ಕಿದಾನೆಗಳು
ಬುರುಗನ್ನು ಸುರಿಸಿರುವ ಕುದುರೆಗಳು
ಎಲ್ಲೆಲ್ಲಿ ಮೊಳಗಿಹುದು ರಣಕಹಳೆ!

ಹೋ ಎಂದು ಕೂಗುತಲಿ, ಧ್ವಜವನೆತ್ತಿ
ಹಿಡಿಯುತಲಿ, ಮುನ್ನುಗ್ಗಿತ್ತು ಹೊಳೆ,
ಸಮುದ್ರದ ಮೇಲೆ ಯುದ್ಧವನು ಸಾರಿ.

ರಾಜಮಹಾರಾಜರು
ಸೂರ್ಯವಂಶೀಯರು,
ಗುಣದಲ್ಲಿ ರತ್ನರು!

ಹೊಳೆಯು ಮುನ್ನುಗ್ಗಿತ್ತು ನಡುಗಡ್ಡೆಗಳ
ಮೇಲೆ, ಜೀವದಾಯಿನಿ ಜಲ
ತಾಯ ಎದೆಹಾಲಿನಂತೆ,
ಸುತ್ತೆಲ್ಲ ಉಪ್ಪುನೀರು.

ಕಳ್ಳನ ಗುಡಾರ ಬೆಟ್ಟದ ಮೇಲೆಲ್ಲೋ,
ಮಳೆಯ ಬಾಣಕೆ ಚಿಂದಿ ಚೂರು.

ತತ್ತರಿಸಿ ಬಾಯಿ ಬಡಿದಿರುವ
ಹೆಂಗಸರು ತಂತಮ್ಮ ಬಿಲ್ಲುಬಾಣಗಳ
ಎತ್ತಿಕೊಳ್ಳುತ ಪರಾರಿ!

ಹಳ್ಳಿಗಳ ಸದೆಬಡಿದು ಸಾಗಿತ್ತು
ಮಳೆಹೊಳೆ, ರಾಜಸೈನ್ಯದ ರೋಷದಲಿ.

ಹಗ್ಗದಲಿ ತೂಗಿಬಿದ್ದಿದ್ದ
ಮಡಕೆಯಲಿ ಹಾಲು, ಬೆಣ್ಣೆ,
ಮಜ್ಜಿಗೆ, ಬಿಸಿತುಪ್ಪ, ಎಲ್ಲವನು
ಕಬಳಿಸುತಲಿ ಸಾಗಿತ್ತು ಮಳೆಹೊಳೆ.

ಕುರುಂದಂನಲ್ಲಿ ನೀರಾಟಕೆಂದು ಬಂದಿದ್ದ
ಹುಡುಗಿಯರ ಬಟ್ಟೆ ಕಡಗಗಳೆಲ್ಲ
ಮರುಂದಂ ಮರಕ್ಕೆ ಒರಗಿದ್ದವು,
ಎಲ್ಲವನು ಸೆಳೆದೊಯ್ದ ಮಳೆಹೊಳೆ!

ಕಾಳಿಂಗನ ತಲೆಯ ಮೇಲೆ
ತುಂಟಕೃಷ್ಣನ ಕುಣಿತ!
ಮಳೆಯ ತುಂಟತನವೇನು ಕಮ್ಮಿ?

ಕಾಡೆಲ್ಲ ಬಯಲಾಗಿ, ಹೊಲವೆಲ್ಲ
ಕಾಡಾಗಿ, ಸಮುದ್ರದಂಡೆಯದು
ಹಸಿರಾಗಿ ನಳನಳಿಸಿತ್ತು!

ಎಲ್ಲೆಗಳ ಪಲ್ಲಟಿಸಿ, ಭೂಗುರುತಗಳ
ಬದಲಿಸಿ, ಹುಚ್ಚು ಮಳೆಹೊಳೆ
ಹರಿಯುತ್ತ ಸಾಗಿತ್ತು.

ಗತವೆದ್ದು ನಿಂತು ವರ್ತಮಾನದ
ಬದುಕನ್ನು ಹಿಂಬಾಲಿಸುವ ತೆರದಲ್ಲಿ.

ಹಿಮಾಲಯದ ಕಲ್ಲಲ್ಲಿ ಹುಟ್ಟಿ
ಸಮುದ್ರವ ಬೆರೆಯುವ ಮಳೆಹೊಳೆ
ನಡುವೆ ತಳೆದ ಮೈಗಳೆಷ್ಟು?

ಏಕ-ಅನೇಕ! ಒಟ್ಟೊಟ್ಟಾಗಿಯೇ!
ವೇದಗಳ ಪದಗಳೂ ಹಿಡಿಯಲಾಗದ
ಆ ಮಹಾ-ಆದಿಯಂತೆ!

ಪರಾಗದ ಧೂಳಲ್ಲಿ ಮಿಂದ ತೋಪು
ಚಂಪಕದ ಗೊಂಚಲು,
ತಾವರೆಯ ಕೊಳ,

ಹೂದೋಟದಲಿ ಹೊಸ ಮರಳ ಚೆಲ್ಲಿ
ಬಳ್ಳಿಗಳ ಬೇಲಿಯನು ಅತ್ತಿಂದಿತ್ತ ಸರಿಸಿ,

ಇದರ ಜೀವವ ಅದಕಿತ್ತು ಅದರ
ಜೀವವ ಇನ್ನೆಲ್ಲಿಗೋ ಹೊತ್ತೊಯ್ದು
ಬರಡನ್ನು ಹನಿಸುತ್ತ ಕೊರಡನ್ನು ಕೊನರಿಸಿ,
ಮೊರೆಯುತಲಿ ಸಾಗಿಹುದು ಮಳೆಹೊಳೆ!

*****

ಈ ಪಠ್ಯ ಕಂಬನ್ ಕವಿಗೆ ವಿಶಿಷ್ಟವಾದದ್ದು. ಇದು ವಾಲ್ಮೀಕಿಯಲ್ಲಿ ಕಾಣಸಿಗುವುದಿಲ್ಲ. ಮೋಡಗಳು ಸಮುದ್ರಗಳಿಂದ ಪಡೆದ ನೀರನ್ನು ಸುರಿಸಿ, ಆ ನೀರು ಹೊಳೆಯಾಗಿ ಹರಿದು ಪ್ರವಾಹವಾಗಿ ಸರಯೂ ದಾಟಿ ರಾಮನ ರಾಜಧಾನಿ ಅಯೋಧ್ಯೆಯೊಳಗೆ ನುಗ್ಗುತ್ತದೆ ಎನ್ನುವುದನ್ನು ಅದು ಬಣ್ಣಿಸುತ್ತದೆ. ಇದರ ಮೂಲಕ ಕಂಬನ್ ತನ್ನ ಕಾವ್ಯದ ವಸ್ತುವನ್ನು ವಿವರಗಳೊಂದಿಗೆ, ಪಾತ್ರಗಳೊಂದಿಗೆ, ಫಲವಂತಿಕೆಯ ಕಾಳಜಿಯೊಂದಿಗೆ (ಅದು ವಾಲ್ಮೀಕಿಯಲ್ಲೂ ಇದೆ), ರಾಮನ ಪೂರ್ವಜರ ಹೆಸರುಗಳೊಂದಿಗೆ ಹಾಗೂ ತನ್ನ ಭಕ್ತಿ-ದರ್ಶನದ ಹರವಿನೊಂದಿಗೆ ಮಂಡಿಸುತ್ತಾನೆ.

ಹಲವಾರು ಉಪಮೆ ಮತ್ತು ಪ್ರಸ್ತಾಪಗಳು ಕಂಬನ್ ಕವಿಯ ಕಾವ್ಯಲೋಕವನ್ನು ಕಟ್ಟಿಕೊಡುತ್ತಾ ಹೋಗುತ್ತವೆ. ನೀರಿನ ಪ್ರತಿಯೊಂದು ಆಯಾಮ ಕಥೆಯ ಒಂದು ಹರವಿಗೆ ಸಂಕೇತವಾಗಿ ರಾಮಾಯಣ ಜಗತ್ತಿನ ಒಂದು ನಿರ್ದಿಷ್ಟ ಅಂಶವನ್ನು (ಉದಾಹರಣೆಗೆ ಕಪಿಗಳು) ಪ್ರತಿನಿಧಿಸುತ್ತದೆ. ಜೀವದಾಯಿನಿ ನೀರು ಫಲವಂತಿಕೆಯ

ಸಂಕೇತವೂ ಹೌದು. ಅದಕ್ಕೆ ತಮಿಳು ಸಾಹಿತ್ಯ ಸಂಪ್ರದಾಯದಲ್ಲಿ ನೀರು ಒಂದು ಪ್ರಧಾನ ಅಂಶ. ಸಫಲ ಬದುಕಿನ ಹಾದಿ-ಗುರಿಗಳ ಬಗ್ಗೆ ಹಾಡುವ ತಿರುಕ್ಕುರಳ್ ದೇವಸ್ತುತಿಯೊಂದಿಗೆ ಆರಂಭವಾಗಿ ತಕ್ಷಣವೇ ಮಳೆಯನ್ನು ವಿಜೃಂಭಿಸುವ ಹಾಡಿಗೆ ಹೊರಳಿಕೊಳ್ಳುತ್ತದೆ.

ರಾಮಾಯಣಗಳ ನಡುವಿನ ಇನ್ನೊಂದು ಭಿನ್ನತೆ ಎಂದರೆ ಮಹತ್ವದ ಪಾತ್ರಗಳಿಗೆ ಅವು ಎಷ್ಟು ಪ್ರಾಶಸ್ತ್ಯ ನೀಡುತ್ತವೆ ಎಂಬ ಅಂಶ. ವಾಲ್ಮೀಕಿ ಪ್ರಾರಂಭದಲ್ಲೇ ರಾಮ ಮತ್ತು ಅವನ ಚರಿತ್ರೆಗೆ ಒತ್ತು ನೀಡುತ್ತದೆ. ವಿಮಲಸೂರಿಯ ಜೈನರಾಮಾಯಣ ಮತ್ತು ಥಾಯ್ ಮಹಾಗಾಥೆ ರಾಮನ ಬದಲಾಗಿ ರಾವಣನ ವಂಶಾವಳಿ, ಮತ್ತು ಅವನ ಪರಾಕ್ರಮಗಳಿಗೆ ಮಹತ್ವ ನೀಡುತ್ತದೆ.

ಕನ್ನಡದ ತಂಬೂರಿ ದಾಸಯ್ಯ ರಾಮಾಯಣ ಸೀತೆಯ ಹುಟ್ಟು, ಮದುವೆ, ಅವಳು ಎದುರಿಸುವ ಸಂಕಷ್ಟದ ಸರಣಿಗೆ ಪ್ರಾಶಸ್ತ್ಯವನ್ನು ನೀಡುತ್ತದೆ. ನಂತರ ಬಂದ ‘ಅದ್ಭುತ ರಾಮಾಯಣ’ ಮತ್ತು ತಮಿಳಿನ ‘ಶತಕಂಠರಾವಣ’ ಸೀತೆಯ ಧೈರ್ಯ ಪರಾಕ್ರಮಗಳನ್ನು ಹಾದಿ ಹೊಗಳುತ್ತವೆ.

ದಶಮುಖ ರಾವಣ ಕೆಳಗೆ ಉರುಳಿದಾಗ ಶತಮುಖ ರಾವಣ ಕಾಣಿಸಿಕೊಳ್ಳುತ್ತಾನೆ. ಇದನ್ನು ಹೇಗೆ ನಿಭಾಯಿಸಬೇಕೋ ತಿಳಿಯದೆ ರಾಮ ತತ್ತರಿಸಿದಾಗ ಸೀತೆ ಯುದ್ಧಕ್ಕೆ ಹೋಗಿ ಅವನನ್ನು ಸಂಹರಿಸುತ್ತಾಳೆ (ನೋಡಿ, Shulman 1979).

ಮೌಖಿಕ ಪರಂಪರೆಯೇ ಪ್ರಧಾನವಾಗಿರುವ ಸಂತಾಲ್ ಸಮುದಾಯ ಸೀತೆಯನ್ನು ವ್ಯಭಿಚಾರಿಯಾಗಿ ಸಹ ಮಾಡುತ್ತದೆ. ವಾಲ್ಮೀಕಿ ಮತ್ತು ಕಂಬನ್ ರಾಮಾಯಣ ಓದಿ ಬೆಳೆದ ಮನಸ್ಸು ಇದರಿಂದ ಬೆಚ್ಚಿ ಬೀಳಬಹುದು. ಅಲ್ಲಿ ರಾವಣ ಮತ್ತು ಲಕ್ಷ್ಮಣರಿಬ್ಬರೂ ಸೀತೆಯಲ್ಲಿ ಅನುರಕ್ತರಾಗಿರುತ್ತಾರೆ.

ಆಗ್ನೇಯ ಏಷ್ಯಾದ ಪಠ್ಯಗಳಲ್ಲಿ ಹನುಮಂತ ಕಪಿಮುಖದವನೂ ಅಲ್ಲ, ಬ್ರಹ್ಮಚಾರಿಯೂ ಅಲ್ಲ, ಭಕ್ತನೂ ಅಲ್ಲ. ಹಲವಾರು ಪ್ರೇಮಪ್ರಕರಣಗಳಲ್ಲಿ ಸಿಕ್ಕಿ ಬೀಳುವ ಒಬ್ಬ ಪ್ರೇಮಿ.

ಕಂಬನ್ ಮತ್ತು ತುಳಸಿ ರಾಮಾಯಣಗಳಲ್ಲಿ ರಾಮ ಒಬ್ಬ ದೇವರು. ಜೈನ ಪಠ್ಯಗಳಲ್ಲಿ ಅವನೊಬ್ಬ ವಿಕಾಸದ ತುದಿಯನ್ನು ಮುಟ್ಟಿದ ಮಾನವ. ಅದಕ್ಕೆ ಅವನು ರಾವಣನನ್ನು ಕೊಲ್ಲಲಾರ. ತುಳಸಿ ರಾಮಾಯಣದಲ್ಲಿ ರಾವಣ ಒಬ್ಬ ದುರಂತ ನಾಯಕ. ಕರ್ಮದ ಫಲವಾಗಿ ಸೀತೆಯನ್ನು ಮೋಹಿಸಿ ತನ್ನ ಅಂತ್ಯವನ್ನು ತಾನೇ ತಂದುಕೊಂಡವನು. ಉಳಿದ ಪಠ್ಯಗಳಲ್ಲಿ ಅವನೊಬ್ಬ ರಾಕ್ಷಸ. ಹೀಗೆ ಈ ಮಟ್ಟಿಗಿನ ಭಿನ್ನತೆಗಳು ತಾವು ನಂಬುವ ರಾಮಾಯಣಕ್ಕೆ ಬದಲಾಗಿ ಇನ್ನೊಂದನ್ನು ನಂಬುವವರ ಬಗ್ಗೆ ಕಠೋರವಾದ ನಿಲುವನ್ನು ತಳೆಯುವಂತೆ ಮಾಡುತ್ತವೆ.

ಹಾಗೆಯೇ, ಸೀತೆ ಯಾಕೆ ಕಾಡುಪಾಲಾಗಬೇಕಾಯಿತು, ಅವಳಿಗೆ ಎರಡನೆಯ ಬಾರಿ ಮಗ ಹುಟ್ಟಿದ್ದು ಹೇಗೆ, ಮತ್ತು ರಾಮಸೀತೆಯರ ಕೊನೆಯ ಪುನರ್ಮಿಲನ ಇವುಗಳ ನೆಲೆಯಲ್ಲಿ ಸಹ ಈ ಬಗೆಯ ಮಹತ್ತರ ವ್ಯತ್ಯಾಸಗಳನ್ನು ಗಮನಿಸಬಹುದು. ಮೇಲೆ ಹೇಳಿದ ಅಂಶಗಳೆಲ್ಲ ಒಂದಕ್ಕಿಂತ ಹೆಚ್ಚು ಪಠ್ಯಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅವು ಕೇವಲ ಒಂದು ಪಠ್ಯಸಮುದಾಯಕ್ಕೆ (ಹಿಂದೂ, ಜೈನ, ಅಥವಾ ಬೌದ್ಧೀಯ) ಸೀಮಿತವಾಗಿಲ್ಲ. ಹಾಗೆಯೇ ಒಂದೇ ಪ್ರದೇಶಕ್ಕೂ ಸೀಮಿತವಾಗಿಲ್ಲ.

ಸಂಬಂಧಗಳನ್ನು ಹೊರತುಪಡಿಸಿ (ರಾಮ, ತಮ್ಮ ಲಕ್ಷ್ಮಣ, ಹೆಂಡತಿ ಸೀತೆ, ಅಪಹರಣಕಾರ ರಾವಣ) ರಾಮಕಥೆಗಳಿಗೆಲ್ಲ  ಸಾಮಾನ್ಯವಾದ ಒಂದು ನೆಲೆ ಇದೆಯೇ? ಅಥವಾ ವಿಟ್ಟಿಗೆನ್ಸ್ಟೈನ್ ಪರಿಕಲ್ಪನೆಯ ಕೌಟುಂಬಿಕ ಸಾಮ್ಯತೆ (family resemblance) ಅಷ್ಟೆಯೇ? ಅಥವಾ ಅರಿಸ್ಟಾಟಲ್ ಪರಿಕಲ್ಪನೆಯ jack knife ಸೂಕ್ತವಾಗಬಹುದೇ?

ಅರಿಸ್ಟಾಟಲ್ ಒಮ್ಮೆ ಒಬ್ಬ ಬಡಗಿಯನ್ನು ಅವನ ಉಳಿ ಎಷ್ಟು ಹಳೆಯದು ಎಂದು ಕೇಳಿದನಂತೆ. ಅದಕ್ಕೆ ಅವನು, ‘ಓ ಇದು ನನ್ನ ಬಳಿ ಕಳೆದ ಮೂವತ್ತು ವರ್ಷಗಳಿಂದಲೂ ಇದೆ. ಹಲವು ಬಾರಿ ಅಲಗನ್ನು ಬದಲಾಯಿಸಿದ್ದೇನೆ. ಇನ್ನೂ ಹಲವು  ಬಾರಿ ಹಿಡಿಯನ್ನು ಬದಲಾಯಿಸಿದ್ದೇನೆ. ಅಷ್ಟು  ಬಿಟ್ಟರೆ ಇದು ಹಳೆಯ ಉಳಿಯೇ,’ ಎಂದನಂತೆ.

ಸಾಮ್ಯ ಎನ್ನುವುದು ತೆಳುವಾದ ನೆರಳಾಗಿದ್ದರೂ ಪರವಾಗಿಲ್ಲ, ಎರಡೂ ಒಂದೇ ಎಂದು ಭಾವಿಸುತ್ತೇವೆ. ದೃಷ್ಟಿಯಿಟ್ಟು ಗಮನಿಸಿದಾಗ ಒಂದು ಇನ್ನೊಂದರ ತರ ಇಲ್ಲ ಎನ್ನುವುದು ಹೊಳೆಯುತ್ತದೆ. ಒಂದೇ ಹೆಸರಿದ್ದವರೆಲ್ಲಾ ಒಂದೇ ವರ್ಗಕ್ಕೆ ಸೇರಿದವರು ಎಂದು ವಾದಿಸಲು ಸಾಧ್ಯವೇ?

ಅನುವಾದದ ಬಗ್ಗೆ ಕೆಲವು ಚಿಂತನೆಗಳು

ಮೇಲೆ ಹೇಳಿದ ಅಂಶ ಬಹುಶಃ ಕಟುವಾಗಿ ಕೇಳಿಸಬಹುದು. ಪಠ್ಯಗಳ ನಡುವಿನ ಸಾಮ್ಯತೆ ಮತ್ತು ಭಿನ್ನತೆಗಳನ್ನು ಇನ್ನಷ್ಟು ಹರವಾದ ನೆಲೆಯಲ್ಲಿ ತಾತ್ವೀಕರಿಸಲು ಪ್ರಯತ್ನಿಸುತ್ತೇನೆ. ಯಾಕೆಂದರೆ ಅವುಗಳ ನಡುವೆ ಸಂಬಂಧವಿರುವುದಂತೂ ನಿಜ. ರಾಮಕಥೆಗಳನ್ನು ಅನುವಾದ ಸರಣಿ ಅಂತಲೂ ನೋಡಬಹುದು. ಅವು ಕೆಲವು ಪ್ರಧಾನ ಪಠ್ಯಗಳ ಸುತ್ತ ಕೆಲವು ಸಾಮ್ಯತೆಗಳ ಮೂಲಕ ಒಟ್ಟುಗೂಡುತ್ತವೆ. ಕೆಲವು ವಾಲ್ಮೀಕಿಯ ಸುತ್ತ, ಕೆಲವು ಜೈನ ವಿಮಲಸೂರಿಯ ಸುತ್ತ… ಹೀಗೇ.

ಪಠ್ಯಗಳ ನಡುವಿನ ಈ ಅನುವಾದ-ಸಂಬಂಧಗಳನ್ನು ಅರ್ಥ ಮಾಡಿಕೊಳ್ಳುವಾಗ ಅಮೆರಿಕನ್ ದರ್ಶನಶಾಸ್ತ್ರಜ್ಞ ಚಾರ್ಲ್ಸ್ ಪಿಯರ್ಸ್‌ನ (Charles Pearce)  ಕೆಲವು ತಾತ್ವಿಕ ಪರಿಕಲ್ಪನೆಗಳು ಸಹಾಯ ಮಾಡಬಹುದು. ಅವನ ಪ್ರಕಾರ ನಂಬಿಕೆಗಳನ್ನು ಅರ್ಥ ಮಾಡಿಕೊಳ್ಳುವಾಗ ಅವನ್ನು ಯಾವ ಕಾರಣಕ್ಕೆ ಬಳಸಿಕೊಳ್ಳುತ್ತೇವೆ ಎಂಬುದರ ಹಿನ್ನೆಲೆಯಲ್ಲಿ ಪರಿಶೀಲಿಸಬೇಕು.

ಪಠ್ಯ ೧ ಮತ್ತು ಪಠ್ಯ ೨ ರ ನಡುವೆ ಜ್ಯಾಮಿತೀಯ ನೆಲೆಯಲ್ಲಿ ಸಾಮ್ಯಗಳಿರಬಹುದು. ಅಂದರೆ ಕೋನ, ರೇಖೆ, ಬಣ್ಣಗಳಲ್ಲಿ ವ್ಯತ್ಯಾಸಗಳಿದ್ದರೂ ಸಹ ಎರಡು ತ್ರಿಕೋನಗಳ ನಡುವೆ ಸಾಮ್ಯ ಇರುವಂತೆ. ಅಂಥ ಸಂಬಂಧವನ್ನು ಪ್ರತಿಮಾತ್ಮಕ (iconic) ಎಂದು ಕರೆಯಬಹುದು.

ಪಶ್ಚಿಮದಲ್ಲಿ ಅನುವಾದಗಳು ಮೂಲಕ್ಕೆ ಬದ್ಧವಾಗಿರಬೇಕು, ಅಂದರೆ, ಪ್ರತಿಮಾತ್ಮಕವಾಗಿರಬೇಕು ಎಂಬ ನಿರೀಕ್ಷೆಯಿದೆ. ಚಾಪ್ ಮನ್ ಹೋಮರ್ ನನ್ನು ಅನುವಾದಿಸುವಾಗ ಕೆಲವು ತಳಮಟ್ಟದ ಪಠ್ಯೀಯ ಗುಣಗಳನ್ನು (ಉದಾಹರಣೆಗೆ ಪಾತ್ರಗಳು, ಘಟನಾವಳಿ, ಚಿತ್ರಣ, ಇತ್ಯಾದಿ) ಉಳಿಸಿಕೊಳ್ಳುವುದಷ್ಟೇ ಅಲ್ಲ, ಮೂಲದ ಗ್ರೀಕ್ ಭಾಷೆಯಲ್ಲಿ ಇರುವಂತೆಯೇ ಷಟ್-ಲಯ (hexameter) ಮತ್ತು ಅಷ್ಟೇ ಸಂಖ್ಯೆಯ ಸಾಲುಗಳನ್ನು ಬಳಸುತ್ತಾನೆ. ವ್ಯತ್ಯಾಸ? ಭಾಷೆ ಇಂಗ್ಲಿಷ್, ಮತ್ತು ನುಡಿಗಟ್ಟು ಎಲಿಜಬೆತನ್, ಅಷ್ಟೇ.

ಕಂಬನ್ ವಾಲ್ಮೀಕಿ ರಾಮಾಯಣವನ್ನು ತಮಿಳಿನಲ್ಲಿ ನಿರೂಪಿಸುವಾಗ ಹೆಚ್ಚಿನಂಶ ಮೂಲಕ್ಕೆ ಬದ್ಧನಾಗಿಯೇ ಇದ್ದಾನೆ. ಅಂದರೆ ಘಟನಾವಳಿ ಮತ್ತು ಪಾತ್ರಗಳ ನಡುವಿನ ಸಂಬಂಧಗಳ ನೆಲೆಯಲ್ಲಿ ಮಾತ್ರ. ಆದರೆ ಅವನ ಕೃತಿ ವಾಲ್ಮೀಕಿಯದಕ್ಕಿಂತ ಸಾಕಷ್ಟು ದೀರ್ಘವಾಗಿದೆ. ಮತ್ತು ಅದರಲ್ಲಿ ಸುಮಾರು ಇಪ್ಪತ್ತಕಿಂತಲೂ ಹೆಚ್ಚು ತಮಿಳು ಲಯಗಳನ್ನು ಗುರುತಿಸಬಹುದು. ವಾಲ್ಮೀಕಿ ಬಳಸುವುದು ಕೇವಲ ಶ್ಲೋಕದ ಲಯ.

ಹಲವಾರು ಕಡೆಗಳಲ್ಲಿ, ಪಠ್ಯ ೨ ಪಠ್ಯ ೧ ರ ಜೊತೆಗೆ ಪ್ರತಿಮಾತ್ಮಕ ಸಂಬಂಧವನ್ನು ಹೊಂದಿದ್ದರೂ ಸಹ ಕಥಾವಸ್ತು ಸ್ಥಳೀಯ, ಜನಪದ, ಕಾವ್ಯ ಸಂಪ್ರದಾಯ, ಚಿತ್ರಣಗಳ ವಿವರಗಳಿಂದ ತುಂಬಿರುವುದನ್ನು ಕಾಣಬಹುದು. ತಮಿಳಿನ ಕಂಬನ್ ಅಥವಾ ಬಂಗಾಳಿ ಕೃತ್ತಿವಾಸರು ಅದಕ್ಕೆ ಉದಾಹರಣೆ.

ಬಂಗಾಳಿ ರಾಮಾಯಣದಲ್ಲಿ ಸೀತಾ-ರಾಮರ  ಮದುವೆ ಬಂಗಾಳಿ ಸಂಪ್ರದಾಯ, ಬಂಗಾಳಿ ಅಡುಗೆಗಳಿಂದ ಕೂಡಿದ ಬಂಗಾಳಿ ಮದುವೆಯೇ (Sen 1920). ಅದನ್ನು ಸೂಚ್ಯಾತ್ಮಕ (indexical) ಎಂದು ಕರೆಯಬಹುದು. ಪಠ್ಯವನ್ನು ಸ್ಥಳೀಯ ವಿವರಗಳಿಲ್ಲದೆ ಗ್ರಹಿಸುವುದು ಅಸಾಧ್ಯ ಅಂತನ್ನಿಸುವಷ್ಟು ಅವು ದಟ್ಟವಾಗಿರುತ್ತವೆ. ಆದ್ದರಿಂದ ಇಲ್ಲಿ ರಾಮಾಯಣ ಎನ್ನುವುದು ಪ್ರತ್ಯೇಕ ಪಠ್ಯಗಳ ಗುಂಪಾಗಲಾರದು. ಬದಲಿಗೆ ಅದೊಂದು ಪ್ರಕಾರ ಎನಿಸಿಕೊಳ್ಳುತ್ತದೆ. ಆ ಪ್ರಕಾರದ ನಿದರ್ಶನಗಳು ಹಲವಾರು ಇರಬಹುದು.

ಆಗೀಗ ಪಠ್ಯ ೨, ಪಠ್ಯ ೧ ರ ಕಥಾಹಂದರ ಮತ್ತು ಪಾತ್ರಗಳನ್ನು ಸೀಮಿತವಾಗಿ ಬಳಸಿಕೊಳ್ಳುವ ಮೂಲಕ ಇನ್ನೊಂದು ಹೊಸಾ ಕಥೆಯನ್ನು ಕಟ್ಟಬಹುದು. ಅಂತಹ ಪ್ರಯತ್ನ ಒಂದು ಪ್ರತಿ-ಪಠ್ಯವನ್ನೇ ಕಟ್ಟಿಕೊಟ್ಟು ತನ್ನ ಹಿಂದಿನ ಪಠ್ಯಾತ್ಮಕ ಗ್ರಹಿಕೆಗಳನ್ನು ಬುಡಮೇಲು ಮಾಡಬಹುದು. ಆ ತರಹದ ಅನುವಾದವನ್ನು ‘ಸಾಂಕೇತಿಕ’ (symbolic) ಎನ್ನಬಹುದು.

ಅಲ್ಲಿ ಅನುವಾದದ ಪ್ರಕ್ರಿಯೆ ಗಣಿತಾತ್ಮಕವಾಗಿರುತ್ತದೆ, ಅಂದರೆ ಒಂದು ನೆಲೆಯಿಂದ ಸಂಬಂಧಗಳ ರಚನೆಯನ್ನು ಪಡೆದುಕೊಂಡು ಇನ್ನೊಂದು ಸಾಂಕೇತಿಕ ನೆಲೆಯಲ್ಲಿ ನಕಾಶಿಸುವುದು (ಮ್ಯಾಪಿಂಗ್ ಎಂಬ ಅರ್ಥದಲ್ಲಿ). ಇದು ನಡೆದಾಗ ರಾಮಕಥೆ ಆ ಪ್ರದೇಶದ ಎರಡನೆಯ ಸಾಂಸ್ಕೃತಿಕ ಭಾಷೆಯಾಗಿಬಿಡುತ್ತದೆ.

ಪಠ್ಯ ೧ ಏನೋ ಹೇಳಿದರೆ ಪಠ್ಯ ೨ ಆ ಪ್ರದೇಶಕ್ಕೆ ವಿಶಿಷ್ಟವಾದ ಹೆಸರು, ವಿವರ, ಮಾದರಿ, ಘಟನೆ ಇತ್ಯಾದಿಗಳ ಮೂಲಕವೇ ಇನ್ನೇನನ್ನೋ ಅಥವಾ ತದ್ವಿರುದ್ಧವಾದದ್ದನ್ನೇ ಹೇಳುವ ಸಾಧ್ಯತೆ ಇರಬಹುದು. ಭಾರತದಲ್ಲಿ ವಾಲ್ಮೀಕಿಯ ಹಿಂದೂ ಮತ್ತು ವಿಮಲಸೂರಿಯ ಜೈನ ರಾಮಾಯಣ, ಹಾಗೂ ಆಗ್ನೇಯ ಏಷಿಯಾದ ಥಾಯ್ ‘ರಾಮಕೀರ್ತಿ’ ಅಂತಹ ಸಾಂಕೇತಿಕ ಅನುವಾದಗಳಿಗೆ ಉದಾಹರಣೆ.

ಆದರೆ ಎಲ್ಲ ಅನುವಾದಗಳಲ್ಲಿ ಸ್ವಲ್ಪಮಟ್ಟಿಗಾದರೂ ಈ ಮೂರೂ ತರದ ಅನುವಾದೀಯ ಗುಣಗಳು ಇದ್ದೇ ಇರುತ್ತವೆ ಎನ್ನುವುದನ್ನು ಮರೆಯಬಾರದು. ಗೋಲ್ಡ್ಮನ್ (1984—) ಮತ್ತು ಅವನ ಗುಂಪಿನ ವಿದ್ವಾಂಸರು ವಾಲ್ಮೀಕಿ ರಾಮಾಯಣದ ಆಧುನಿಕ ಅನುವಾದದಲ್ಲಿ  ಉಳಿಸಿಕೊಂಡಿರುವ ಸಂಸ್ಕೃತ ಹೆಸರುಗಳು, ಶ್ಲೋಕಗಳ ಸಂಖ್ಯೆ ಮತ್ತು ಕ್ರಮ, ಘಟನಾವಳಿ ಇತ್ಯಾದಿಗಳ ನೆಲೆಯಲ್ಲಿ ಅದೊಂದು ಪ್ರತಿಮಾತ್ಮಕ ಅನುವಾದ ಎನಿಸಿಕೊಳ್ಳುತ್ತದೆ.

ಅಲ್ಲದೇ, ಅವು ಸೂಚ್ಯಾತ್ಮಕ ಅನುವಾದವೂ ಹೌದು. ಬಳಸಿರುವ ಇಂಗ್ಲಿಷ್ ನುಡಿಗಟ್ಟು, ಮುನ್ನುಡಿ, ಅಡಿಟಿಪ್ಪಣಿ ಇತ್ಯಾದಿಗಳು ಇಪ್ಪತ್ತನೆಯ ಶತಮಾನದ   ಧೋರಣೆಗಳನ್ನು ಒಳಗೊಂಡಿರುತ್ತವೆ. ಹಾಗೆಯೇ, ಅವರ ಆಧುನಿಕ ಗ್ರಹಿಕೆಯ ಕ್ರಮಗಳ ದೆಸೆಯಿಂದ ಅದು ಸಾಂಕೇತಿಕ ಅನುವಾದವೂ ಆಗುತ್ತದೆ.

ಆದರೆ ಈ ಮೂರು ಬಗೆಯ ಅನುವಾದಗಳ  ನಡುವಿನ ಸಂಬಂಧದಲ್ಲಿ ಕಂಬನ್ ಅನುವಾದ ಮತ್ತು ಗೋಲ್ಡ್ಮನ್ ಅನುವಾದಗಳು ಅಗಾಧವಾದ ವ್ಯತ್ಯಾಸಗಳನ್ನು ಹೊತ್ತಿರುತ್ತವೆ. ನಾವು ನಮ್ಮದೇ ಕಾರಣ ಮತ್ತು ನಿರೀಕ್ಷೆಗಳ ಹಿನ್ನೆಲೆಯಲ್ಲಿ ಅವನ್ನು ಓದುತ್ತೇವೆ.

ವಿದ್ವತ್ಪೂರ್ಣವಾದ ಆಧುನಿಕ ಅನುವಾದವನ್ನು ಓದುವುದು ಮೂಲದ ವಾಲ್ಮೀಕಿ ಎಷ್ಟರ ಮಟ್ಟಿಗೆ ಇಲ್ಲಿ ಮೈದಳೆದಿದ್ದಾನೆ ಮತ್ತು ಅನುವಾದ ಮೂಲಕ್ಕೆ ಎಷ್ಟರ ಮಟ್ಟಿಗೆ ಬದ್ಧವಾಗಿದೆ ಎನ್ನುವುದನ್ನು ಗ್ರಹಿಸುವ ಕಾರಣಕ್ಕೆ. ಆದರೆ ಕಂಬನ್ ರಾಮಾಯಣ ಓದುವಾಗ ಅದನ್ನು ಕಂಬನ್ ಕವಿಯನ್ನು ಗ್ರಹಿಸಲೆಂದೇ ಓದುತ್ತೇವೆ. ಅವನು ವಾಲ್ಮೀಕಿಗೆ  ಎಷ್ಟರ ಮಟ್ಟಿಗೆ ಬದ್ಧನು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಕಂಬನ್ ಎಷ್ಟರ ಮಟ್ಟಿಗೆ ವಾಲ್ಮೀಕಿಯಿಂದ ಬೇರೆಯಾಗಿದ್ದಾನೆ ಎನ್ನುವ ನಿರೀಕ್ಷೆಯೇ ಹೆಚ್ಚು. ಒಂದರಲ್ಲಿ ಸಾಮ್ಯತೆಯ ನಿರೀಕ್ಷೆ ಇದ್ದರೆ ಇನ್ನೊಂದರಲ್ಲಿ ಭಿನ್ನತೆಯನ್ನು ಕಾಣಲು ಇಷ್ಟಪಡುತ್ತೇವೆ.

ಸ್ಥಳೀಯತೆಯ ನೆಲೆಯಲ್ಲಿ ಮೈದಳೆದ ರಾಮಾಯಣಗಳಲ್ಲಿ ಸಾಂಸ್ಕೃತಿಕ ಸೂಚಕಗಳ ದಂಡೇ ಇರುತ್ತದೆ. ಅದು ರಾಮಾಯಣದ ಕಥಾಹಂದರ, ಪಾತ್ರ, ಹೆಸರು, ಭೂಗೋಳ, ಪ್ರಸಂಗ ಮತ್ತು ಸಂಬಂಧಗಳನ್ನು ಸೂಚಿಸುತ್ತಿರುತ್ತದೆ. ಮೌಖಿಕ, ಲಿಖಿತ, ಮತ್ತು ರಂಗಪ್ರದರ್ಶನ ಸಂಪ್ರದಾಯಗಳು ಬಳಸುವ ಹಲವಾರು ನುಡಿಗಟ್ಟು, ಗಾದೆ, ಅಷ್ಟೇ ಏಕೆ ಅವಹೇಳನ, ತಿರಸ್ಕಾರಗಳಿಗೂ ಸಹ ರಾಮಕಥೆಯ ಸಂಬಂಧವಿರುತ್ತದೆ.                    ಉದಾಹರಣೆಗೆ, ಯಾರಾದರೂ ಪೀಡಿಸುತ್ತಿದ್ದರೆ, ‘ನಿಂದೇನು ರಾಮಾಯಣ! ಸಾಕಿನ್ನು!’ ಎಂದು ಗದರಿಸಬಹುದು. ತಮಿಳಿನಲ್ಲಿ ಇಕ್ಕಟ್ಟಾದ ಜಾಗಕ್ಕೆ ‘ಕಿಷ್ಕಿಂದೆ’ ಎಂದು ಕರೆಯುವ ವಾಡಿಕೆಯಿದೆ. ದಡ್ಡತನದ ಲೇವಡಿಗೆ, ‘ರಾತ್ರಿಯಿಡೀ ರಾಮಾಯಣ ಕೇಳಿ ಬೆಳಗಾದ ಮೇಲೆ ರಾಮಂಗೂ ಸೀತೆಗೂ ಏನು ಸಂಬಂಧ ಅಂದ ಹಾಗಾಯ್ತು!’ ಉಪಯೋಗಕ್ಕೆ ಬರುತ್ತದೆ. ಬಂಗಾಳಿ ಅಂಕಗಣಿತದ ಪಠ್ಯವೊಂದರಲ್ಲಿ, ಹನುಮಂತ ಕಟ್ಟಿದ ಗೋಡೆಯನ್ನು ಈ ಪ್ರಮಾಣದಲ್ಲಿ ತಮಾಷೆಗೆ ಕೆಡವಿದಲ್ಲಿ ಉಳಿಯುವ ಗೋಡೆಯ ಉದ್ದಗಲಗಳೇನು ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. ಇಂಥ ಉದಾಹರಣೆಗಳ ಜೊತೆ ಮದುವೆ ಹಾಡು, ಕಥೆ-ಕಾವ್ಯ, ಸ್ಥಳ ಐತಿಹ್ಯ, ದೇವಾಲಯ ನಂಬಿಕೆಗಳು, ವರ್ಣಚಿತ್ರ, ವಾಸ್ತುಶಿಲ್ಪ ಮತ್ತು ಹಲವಾರು ಪ್ರದರ್ಶನ ಕಲೆಗಳನ್ನೂ ಸೇರಿಸಿಕೊಳ್ಳಬಹುದು.

ಈ ಹಲವಾರು ಪಠ್ಯಗಳು ಹಿಂದಿನ ಪಠ್ಯಗಳ ಜೊತೆ ನೇರವಾದ ಸಂಬಂಧವನ್ನಷ್ಟೇ ಹೊಂದಿರುವುದಿಲ್ಲ, ಹಲವಾರು ರಾಮಾಯಣೀಯ ಸಂಕೇತಗಳ ಮೂಲಕವೂ ಪರಸ್ಪರತೆಯನ್ನು ಸಾಧಿಸಿರುತ್ತವೆ. ರೂಪಕದ ಮೂಲಕ ವಿವರಿಸುವ ದಾರ್ಷ್ಟ್ಯ ತೋರಿಸುವುದಾದರೆ ಪ್ರತಿಯೊಬ್ಬ ಕರ್ತೃ ಆ ರಾಮಾಯಣೀಯ ಸಂಕೇತಗಳ ಕೊಳದಲ್ಲಿ ಮುಳುಗಿ ಹೊಸ ಬಗೆಯಲ್ಲಿ ಹರಳುಗಟ್ಟಿದ ಕೃತಿಯನ್ನು ಹೊರತರುತ್ತಾನೆ.

ಮಹಾಪಠ್ಯಗಳು ಸಣ್ಣಪುಟ್ಟ ಪಠ್ಯಗಳನ್ನು ಹೊಸ ರೀತಿಯಲ್ಲಿ ಒಟ್ಟು ಹಾಕಿ ಹೊಸದನ್ನು ಸೃಷ್ಟಿಸುತ್ತವೆ. ವ್ಯಾಲೆರಿ (Valéry) ಹೇಳಿದಂತೆ ‘ಹುಲಿಗಳು ಕುರಿಗಳಿಂದ ಮಾಡಲ್ಪಟ್ಟಿವೆ.’ ಆದರೆ ಕುರಿಗಳು ಹುಲಿಗಳಿಂದ ಮಾಡಲ್ಪಟ್ಟಿವೆ ಎನ್ನುವುದು ಅಷ್ಟೇ ನಿಜ. ಒಂದು ಜಾನಪದ ದಂತಕತೆಯ ಪ್ರಕಾರ ಯುದ್ಧದ ನಂತರ ಹನುಮಂತ ಬೆಟ್ಟವೊಂದರ ಮೇಲೆ ಕೂತು ರಾಮಾಯಣವನ್ನು ಬರೆದನಂತೆ. ಹಸ್ತಪ್ರತಿ ಭಾರೀ ಅಗಾಧವಾಗಿತ್ತು. ನಂತರ ಬೆಟ್ಟದ ಮೇಲಿಂದ ಅದನ್ನು ಕೆಳಕ್ಕೆ ಚೆಲ್ಲಿದನಂತೆ. ವಾಲ್ಮೀಕಿಯ ಕೈಗೆ ಸಿಕ್ಕಿದ್ದು ಕೇವಲ ಒಂದು ಭಾಗ ಮಾತ್ರ. ಈ ಅರ್ಥದಲ್ಲಿ ಯಾವ ಪಠ್ಯವೂ ಮೂಲವೆಂದೆನಿಸಿಕೊಳ್ಳುವುದಿಲ್ಲ. ಹಾಗೆಯೇ ಯಾವ ಅನುವಾದವೂ ಕೇವಲ ಅನುವಾದವಲ್ಲ. ಆದ್ದರಿಂದಲೇ ರಾಮಕಥೆಗೆ ಕೊನೆಯೇ ಇಲ್ಲ. ಭಾರತದಲ್ಲಿ ಮತ್ತು ಆಗ್ನೇಯ ಏಷ್ಯಾದಲ್ಲಿ ರಾಮಾಯಣ ಮಹಾಭಾರತಗಳನ್ನು ಯಾರೂ ಮೊದಲಬಾರಿಗೆ ಓದುವುದಿಲ್ಲ. ಅವು ಸದಾಕಾಲ ಇದ್ದಂತವೇ.

ಆಲಿಕೆಯ ಶಕ್ತಿ 

ಎಷ್ಟು ರಾಮಾಯಣಗಳು ಇವೆ ಎಂಬ ಪ್ರಶ್ನೆಗೆ ಉತ್ತರವಾಗಿ ಜನಪದ ಕತೆಯೊಂದನ್ನು ಪ್ರಾರಂಭದಲ್ಲಿ ಹೇಳಲಾಗಿತ್ತು. ಮುಗಿಸುವ ಮುನ್ನ ರಾಮನ ಉಂಗುರ ಮತ್ತು ಹನುಮಂತರಿಗೆ ಸಂಬಂಧಿಸಿದ ಇನ್ನೊಂದು ಕಥೆಯನ್ನು ಹೇಳುವುದು ಸೂಕ್ತ ಎನಿಸುತ್ತದೆ. ಈ ಕಥೆ ರಾಮಾಯಣದಂತಹ ಮಹಾಗಾಥೆಯನ್ನು ಕಿವಿಗೊಟ್ಟು ಆಲಿಸಿದಾಗ ಶತದಡ್ಡನಿಗೂ ಸುಮ್ಮನಿರಲು ಸಾಧ್ಯವಿಲ್ಲ. ವಾಸ್ತವಕ್ಕೂ ಕತೆಗೂ ನಡುವಿನ ಗೆರೆಯನ್ನು ಅದು ಅಳಿಸಿಹಾಕಿಬಿಡುತ್ತದೆ ಎನ್ನುವುದರ ನಿರೂಪಣೆ.

ಒಬ್ಬ ಹಳ್ಳಿಮುಕ್ಕ. ಅವನಿಗೆ ಸಂಸ್ಕೃತಿ ಎಂದರೇನು ಎಂದು ತಿಳಿಯದು. ಆಸಕ್ತಿಯೂ ಇರಲಿಲ್ಲವೆನ್ನಿ. ಅದು ಹೇಗೋ ಒಬ್ಬ ಸುಸಂಸ್ಕೃತ ಹೆಣ್ಣಿನೊಂದಿಗೆ ಅವನ ಮದುವೆಯಾಯಿತು. ಅವಳು ಅವನನ್ನು ತಿದ್ದಲು ಹಲವಾರು ರೀತಿಯಲ್ಲಿ ಪ್ರಯತ್ನಿಸಿದರೂ ಸಹ ಏನೂ ಪ್ರಯೋಜನವಾಗಿರಲಿಲ್ಲ.

ಒಮ್ಮೆ ಒಬ್ಬ ಸುಪ್ರಸಿದ್ಧ ಗಮಕಿ ಹಳ್ಳಿಗೆ ಬಂದ. ಅವನು ವಾಚಿಸಬೇಕಿದ್ದು ರಾಮಾಯಣವನ್ನು. ಪ್ರತಿದಿನ ಸಂಜೆ ಹಾಡುತ್ತಿದ್ದ, ವಾಚಿಸುತ್ತಿದ್ದ, ಶ್ಲೋಕಗಳ ಅರ್ಥ ಹೇಳುತ್ತಿದ್ದ. ಭಾರೀ ಜನ ಸೇರುತ್ತಿದ್ದರು.

ಈ ಹಳ್ಳಿಗಮಾರನ ಹೆಂಡತಿ ಅವನನ್ನು ಅಲ್ಲಿಗೆ ಹೋಗೆಂದು ಸಾಕಷ್ಟು ಪೀಡಿಸಿದಳು. ಒಂದು ದಿನ ಮಾತ್ರ, ಸರಿ ಹೋಗಿ ನೋಡಿಯೇ ಬಿಡುತ್ತೇನೆ, ಅವಳಿಗೆ ಖುಷಿಯಾದರೂ ಆಗುತ್ತದೆ ಎಂದೆಣಿಸಿ ಮನೆಯಿಂದ ಹೊರಟ. ಹೋಗಿ ಹಿಂದಿನ ಸಾಲಿನಲ್ಲಿ ಕೂತ. ಅದು ಇಡೀ ರಾತ್ರಿ ನಡೆಯುವ ಕಾರ್ಯಕ್ರಮ. ಎಷ್ಟು ತಡೆದರೂ ನಿದ್ದೆ ಒತ್ತರಿಸಿಕೊಂಡು ಬಂತು. ರಾತ್ರಿಯಿಡೀ ನಿದ್ದೆ ಹೊಡೆದ. ಬೆಳಗಿನ ಜಾವದಲ್ಲಿ ಸರ್ಗವೊಂದು ಮುಗಿದಾಗ ಸಂಪ್ರದಾಯದಂತೆ ಸಿಹಿ ಹಂಚಲಾಯಿತು. ಮಲಗಿ ಬಾಯಿ ತೆರೆದುಕೊಂಡು ಗೊರಕೆ ಹೊಡೆಯುತ್ತಿದ್ದ ಇವನ ಬಾಯಲ್ಲಿ ಯಾರೋ ಸಿಹಿ ಹಾಕಿದರು. ಎದ್ದು ಮನೆಗೆ ಹಿಂತಿರುಗಿದ. ಇಡೀ ರಾತ್ರಿ ರಾಮಾಯಣ ಕೇಳಿದ ಗಂಡನ ಬಗ್ಗೆ ಹೆಮ್ಮೆಯೆನಿಸಿ, ‘ಹೇಗಿತ್ತು?’ ಎಂದು ಕೇಳಿದಳು. ಅವನು ‘ಸಿಹಿಯಾಗಿತ್ತು,’ ಎಂದಾಗ ಅವಳಿಗೆ ಖುಷಿಯಾಯಿತು.

ಮರುದಿನವೂ ಅವನು ಅವಳ ಒತ್ತಾಯಕ್ಕೆ ಕಟ್ಟುಬಿದ್ದು ಹೊರಟ. ಗಮಕಿ ಕೂತಿದ್ದ ಟೆಂಟಿನಲ್ಲಿ ಗೋಡೆಗೆ ಒರಗಿಕೊಂಡು ಕೂತ. ತಕ್ಷಣ ನಿದ್ದೆ ಹೋದ. ಅವತ್ತು ಸಿಕ್ಕಾಪಟ್ಟೆ ಜನರಿದ್ದರು. ಕೂರಲು ಜಾಗ ಸಿಗದ ಸಣ್ಣ ಹುಡುಗನೊಬ್ಬ ಇವನ ಭುಜದ ಮೇಲೆ ಕೂತು ಬಿಟ್ಟ ಬಾಯಿಯಲ್ಲಿ  ಕತೆಯನ್ನು ಆಸ್ವಾದಿಸಿದ. ವಚನ ಮುಗಿಯಿತು. ಹುಡುಗ ಸ್ವಲ್ಪ ಮುಂಚೆಯೇ ಎದ್ದು ಹೋಗಿದ್ದ. ಇವನು ಹೋಗಲು ಎದ್ದರೆ ಮೈಕೈಯೆಲ್ಲಾ ನೋವು. ಹೆಂಡತಿ ಉತ್ಸಾಹದಲ್ಲಿ ‘ಹೇಗಿತ್ತು?’ ಎಂದು ಕೇಳಿದಾಗ ‘ಬೆಳಗಾಗುತ್ತಾ ಹೋದಂತೆಲ್ಲ ಭಾರವಾಗುತ್ತಾ ಹೋಗಿತ್ತು,’ ಎಂದ. ಪರವಾಗಿಲ್ಲವೇ! ರಾಮಾಯಣದ ಮಹತ್ವ ಈತನಿಗೂ ಅರ್ಥವಾಗಹತ್ತಿದೆ ಎಂದು ಹೆಂಡತಿಗೆ ಸಂತೋಷವಾಗಿತ್ತು.

ಮೂರನೆಯ ಸಂಜೆ ಜನಸಂದಣಿಯ ಅಂಚಿನಲ್ಲಿ ಒಂದು ಕಡೆ ಕೂತ. ಕಣ್ಣೆಳೆತ ತಡೆಯಲಾಗದೆ ಹಾಗೆಯೇ ಉರುಳಿಕೊಂಡು ಗೊರಕೆ ಹೊಡೆಯಹತ್ತಿದ. ಬೆಳಗಿನ ಜಾವದಲ್ಲಿ ನಾಯಿಯೊಂದು ಅವನ ಬಾಯಿಗೆ ಉಚ್ಚೆ ಹೊಯ್ದು ಹೋಗಿತ್ತು. ಸ್ವಲ್ಪ ಹೊತ್ತಿನ ನಂತರ ಅವನಿಗೆ ಎಚ್ಚರವಾಗಿ ಮನೆಗೆ ಹೋದ. ಹೆಂಡತಿ ಹೇಗಿತ್ತು ಎಂದು ಕೇಳಿದಾಗ ಮುಖವನ್ನು ಹುಳ್ಳಗೆ ಮಾಡಿಕೊಂಡು, ‘ಥೂ! ಉಪ್ಪುಪ್ಪಾಗಿತ್ತು!’ ಎಂದಾಗ ಮಾತ್ರ ಅವಳಿಗೆ ಸಂಶಯ ಬಂತು. ಸಾಕಷ್ಟು ಪೀಡಿಸಿದ ಮೇಲೆ ಅವನ ಬಾಯಿಂದ ನಿಜ ಹೊರಬಿತ್ತು.

ನಾಲ್ಕನೆಯ ದಿನ ಹೆಂಡತಿಯೂ ಹೊರಟಳು. ಮೊದಲನೇ ಸಾಲಿನಲ್ಲಿ ಇಬ್ಬರೂ ಕೂತರು. ತೂಕಡಿಸಕೂಡದು ಎಂದಾಕೆ ಗಂಡನಿಗೆ ಕಟ್ಟುನಿಟ್ಟಾಗಿ ಹೇಳಿದಳು. ಸರಿ ವಿಧೇಯನಾಗಿ ಕೂತು ಆಲಿಸಲು ಪ್ರಾರಂಭಿಸಿದ. ಕೇಳುತ್ತಾ ಕೇಳುತ್ತಾ ಕಥೆಯಲ್ಲೇ ಮುಳುಗಿಹೋದ. ಆ ದಿನ ಗಮಕಿ ಹನುಮಂತನ ಸಾಹಸವನ್ನು ಬಣ್ಣಿಸುತ್ತಿದ್ದ. ಹೇಗೆ ಅವನು ರಾಮಮುದ್ರೆಯುಳ್ಳ ಉಂಗುರವನ್ನು ಹೊತ್ತು ಸಮುದ್ರೊಲ್ಲಂಘನ ಮಾಡಿ ಸೀತೆಯನ್ನು ಕಂಡು ಉಂಗುರವನ್ನು ಕೊಡಲು ಹೋಗುತ್ತಿದ್ದ ಎನ್ನುವುದರ ವರ್ಣನೆ. ಸಮುದ್ರದ ನಡುವಿನಲ್ಲಿ ಉಂಗುರ ಬಿದ್ದು ಹೋಯಿತು. ಹನುಮಂತನಿಗೆ ಏನು ಮಾಡಲು ತಿಳಿಯದೆ ಕೈಕೈ ಹಿಸುಕಿಕೊಳ್ಳಹತ್ತಿದ. ಛೇ! ಹಿಡಿದ ಕೆಲಸ ಮುಗಿಸದ ನಾನೆಂತ ರಾಮಭಕ್ತ?

ಮೊದಲ ಸಾಲಿನಲ್ಲಿ ಕೂತು ತದೇಕಚಿತ್ತನಾಗಿ ಆಲಿಸುತ್ತಿದ್ದ ಗಂಡನಿಗೆ ಇನ್ನು ತಡೆಯಲಾಗಲಿಲ್ಲ. ಥಟ್ಟನೆ ಎದ್ದುನಿಂತು, ‘ಹನುಮಂತಾ! ಚಿಂತಿಸಬೇಡ, ನಾನಿದ್ದೇನೆ,’ ಎನ್ನುತ್ತಾ ಒಂದಡಿ ಮೇಲಕ್ಕೆ ನೆಗೆದು ಸಮುದ್ರದಲ್ಲಿ ಮುಳುಗಿ ಅದರ ತಳದಲ್ಲಿ ಇದ್ದ ಉಂಗುರವನ್ನು ಹೆಕ್ಕಿಕೊಂಡು ತಂದುಕೊಟ್ಟ.

ಎಲ್ಲರಿಗೂ ಅಚ್ಚರಿಯೋ ಅಚ್ಚರಿ. ಈತನಿಗೆ ಏನೋ ವಿಶೇಷ ಶಕ್ತಿಯಿದೆ, ರಾಮ-ಹನುಮಂತರ ಕೃಪೆ ಇವನ ಮೇಲಿದೆ ಅಂತ ಮಾತಾಡಿಕೊಂಡರು. ಅಂದಿನಿಂದ ಅವನಿಗೆ ಹೆಚ್ಚು ಹೆಚ್ಚು ಮರ್ಯಾದೆ ಸಿಕ್ಕುತ್ತಾ ಹೋಯಿತಂತೆ. ಅವನೂ ಸಹ ಘನಗಾಂಭೀರ್ಯದಿಂದ ವರ್ತಿಸಲು ಪ್ರಾರಂಭಿಸಿದಂತೆ. ನೋಡಿ, ಕಥೆ ಕೇಳಿದರೆ ಏನೆಲ್ಲಾ ಸಾಧ್ಯ! ಅದರಲ್ಲೂ ರಾಮಾಯಣ ಕೇಳಿದರೆ!

About The Author

ಸುಕನ್ಯಾ ಕನಾರಳ್ಳಿ

ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ, ಲೇಖಕಿ, ಮತ್ತು ಭಾಷಾಂತರಕಾರ್ತಿ. ವೈದೇಹಿ (An Afternoon with Shakuntala and Other Stories) ಮತ್ತು ಅಗ್ರಹಾರ ಕೃಷ್ಣಮೂರ್ತಿಯವರ ಕೃತಿಗಳು (Love and Water Flow Together) [(ಕುವೆಂಪು ಭಾಷಾಭಾರತಿ ಪ್ರಶಸ್ತಿ  (2023) ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಅನುವಾದಿತ ಪುಸ್ತಕ ಪ್ರಶಸ್ತಿ (2023)] ಇಂಗ್ಲೀಷಿಗೆ ಅನುವಾದಿಸಲ್ಪಟ್ಟ ಕೃತಿಗಳು.  ‘ಹೇಳುತೇನೆ ಕೇಳು: ಮಹಿಳೆಯರ ಆತ್ಮಕಥೆಗಳು’; ‘ಕಥೆ ಹೇಳುವೆ’; ‘ಬರ್ತಿಯಾ?… ಎಷ್ಟು?…: ಭಾರತೀಯ ಸೂಳೆಲೋಕದಕಥೆಗಳು’; ನಯನತಾರ ಸೆಹಗಲ್ ಅವರ ‘ಚಿಟ್ಟೆಗಳ ಪಾಡು’ ಇತ್ಯಾದಿ ಅವರ ಕನ್ನಡ ಭಾಷಾಂತರ ಕೃತಿಗಳು. ಮೌಲಾನಾ ಜಲಾಲುದ್ದೀನ್ ರೂಮಿಯ ಕಾವ್ಯದ ಭಾಷಾಂತರ ಕೃತಿ ‘ದಿವ್ಯದಲ್ಲಿ ಹಿಸ್ಸೆಯಿಲ್ಲ: ಕಡುಪ್ರೇಮಿಯ ಎದೆಯ ಹಾಡು ಇತ್ತೀಚೆಗೆ ಬಿಡುಗಡೆಯಾದ ಕೃತಿ. 'ಕನ್ನಡ-ಕಾಸರವಳ್ಳಿಯವರ ಸಿನಿಮಾಗಳಲ್ಲಿ ರಾಷ್ಟ್ರ ಮತ್ತು ಹೆಣ್ಣು' ಎರಡು ಪುಸ್ತಕಗಳಾಗಿ ಸದ್ಯದಲ್ಲೇ ಬೆಳಕು ಕಾಣಲಿದೆ. 

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ