Advertisement
ರಟ್ಟೀಹಳ್ಳಿ ರಾಘವಾಂಕುರ ಬರೆದ ಕೆಲವು ಬಿಡಿ ದ್ವಿಪದಿಗಳು

ರಟ್ಟೀಹಳ್ಳಿ ರಾಘವಾಂಕುರ ಬರೆದ ಕೆಲವು ಬಿಡಿ ದ್ವಿಪದಿಗಳು

1.
ಅರಳುವ ಪ್ರೀತಿಗೆ ಕೆಂಡದ ಹಾಸಿಗೆ
ಬದುಕು ನಿತ್ಯ ನಿಗಿ ನಿಗಿಸುತ್ತಿದೆ

2.
ಯಾರು ತೊಳೆದರೂ ಹೊಳೆಯುವ ಕಿವಿಗಳು
ಕೇಳಿಸಿಕೊಳ್ಳುತ್ತವಷ್ಟೆ; ಸ್ವಂತ ಆಲೋಚಿಸಲಾರವು

3.
ನೆನಪುಗಳ ಹರವಿ ಕೂತಿದ್ದೆ ಜೋರು ಮಳೆ ಬಂತು
ತೋಯಿಸಿಕೊಂಡ ತಪ್ಪಿಗೀಗ ನಿರುದ್ಯೋಗಿ ನಾನು

4.
ಲಿಂಗವೇ ಮೆಚ್ಚಿ ಹೌದೌದು ಎನ್ನುವ ಜೋರು ಮಳೆಯಲ್ಲಿ
ಭಾಷಣ ವ್ಯಸನದ ಗಾಳಿಮಾತು ಮಳೆ ಕೆಡಿಸಿತು

5.
ನೀನು ಬೀಸಿದ ಸುಳ್ಳಿನ ಖಡ್ಗದ ಝಳಪಿಗೆ ಆಜನ್ಮ ಋಣಿ ನಾನು
ಎಷ್ಟೊಂದು ಸತ್ಯಗಳು ಅಡಗಿ ಕೂತಿದ್ದವು ಕತ್ತಲ ಬಾಳಿನೊಳಗೆ

6.
ಎಷ್ಟು ಭಾರದಿಂದ ಹೆಜ್ಜೆಗಳ ಕಿತ್ತಿಡಬೇಕು ನೋಡಿಲ್ಲಿ
ಅಂಗಾತ ಹಾಸಿ‌ ಮಲಗಿರುವಾಗ ನಿನ್ನ ನೆನಪುಗಳು ಅಂಗಳದಲ್ಲಿ

7.
ತೋಟದ ಎಲ್ಲ ಗಿಡಗಳಿಗೂ ನೀನು ನೀರುಣಿಸಿರಬಹುದು
ಎಲ್ಲ ಗಿಡಗಳೂ ಹಣ್ಣು ಕೊಡಬೇಕೆಂಬ ನಿಯಮ ಇಲ್ಲವಲ್ಲ

8.
ನೀನು ದುಃಖಿಸಿದಾಗಲೆಲ್ಲ ನಾನು ನಂಬುತ್ತಲೆ ಹೋದೆ
ಕಿಸಕ್ಕನೆ ನಕ್ಕುಬಿಟ್ಟೆ ನೋಡು ನಂಬಿಕೆಯೆ ಕುಸಿದು ಹೋಯಿತು

9.
ಸೋಲಬೇಕಾದ ಸಮಯದಲ್ಲಿ ಸೋಲದಿದ್ದರೆ
ಗೆಲ್ಲಬೇಕಾದ ಸಮಯದಲ್ಲಿ ಗೆಲ್ಲಲಾಗುವುದಿಲ್ಲ

10.
ತರ್ಕದ ಬುದ್ಧಿಗೆ ಸೌಂದರ್ಯ ಆಸ್ವಾದಿಸುವ ಗುಣ ಕಡಿಮೆ
ಭಾವುಕತೆಗೆ ವಿವೇಕವೆಂಬುದು ಮರುಭೂಮಿಯ ಮರೀಚಿಕೆ

11.
ಕೊಡಬಾರದು ಕಾವು ಬೆಂದಷ್ಟು ಭಾವ
ಸೀದೀತು ತಳ ಒಳ ಉಳಿದೀತು ನೋವ

12.
ಯಾವುದನ್ನು ಕಲಿಯಲು ನಾವು ಸಿದ್ಧರಿಲ್ಲವೊ
ಅದನ್ನು ಕಲಿಸಲೆಂದೇ ಬದುಕು ಸಿದ್ಧವಿರುತ್ತದೆ

13.
ತಪ್ಪುಗಳು ನಿಜವಾಗಿಯೂ ಸಣ್ಣವೆ ಆಗಿರುತ್ತವೆ
ತಿದ್ದಿಕೊಳ್ಳದೇ ಬಿಟ್ಟಿದ್ದರಿಂದ ದೊಡ್ಡವಾಗುತ್ತವಷ್ಟೆ

14.
ಬಾಗುವುದ ಕಲಿಯಬೇಕು ಪ್ರೀತಿಸಲು ಕಲಿತ ಮೇಲೆ
ಬಾಗುವಂತೆ ವೃಕ್ಷಗಳು ಫಲ‌ ಕೊಡಲು ಕಲಿತ ಮೇಲೆ

15.
ಸಂಬಂಧಗಳಲ್ಲಿ ಸೋಲುವುದೆಂದರೆ ಗೆಲ್ಲುವುದು ಎಂದರ್ಥ
ಒಬ್ಬರೇ ನಿರಂತರ ಸೋತರೆ ಸಂಬಂಧವೇ ಸೋತುಬಿಡಬಹುದು

(ಇಲ್ಲಸ್ಟ್ರೇಷನ್‌ ಕಲೆ: ರೂಪಶ್ರೀ)

About The Author

ರಟ್ಟೀಹಳ್ಳಿ ರಾಘವಾಂಕುರ

ರಟ್ಟೀಹಳ್ಳಿ ರಾಘವಾಂಕುರ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಗ್ರಾಮದವರು. ಸಧ್ಯ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದಲ್ಲಿ ಪಿಎಚ್.ಡಿ  ಅಧ್ಯಯನ. ಪ್ಲಾಟ್ ಫಾರಂ ನಂ 3(ಕಿರುಕಾದಂಬರಿ) ಹಾಗೂ ಹಿಂಗಂದ್ರ ಹ್ಯಾಂಗ(ಕವನ ಸಂಕಲನ) ಪ್ರಕಟಿತ ಕೃತಿಗಳು. ಫೋಟೋಗ್ರಫಿ, ಸಾಹಿತ್ಯ, ಸಿನಿಮಾ, ಮುಖಪುಟ ವಿನ್ಯಾಸ ಆಸಕ್ತಿ ಕ್ಷೇತ್ರಗಳು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ