Advertisement
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ದಿನದ ಕವಿತೆ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ದಿನದ ಕವಿತೆ

ಅವಸ್ಥೆ

ಸುತ್ತ ನಡೆಯುತ್ತಿದೆ ವ್ಯಾಪಾರ
ಎಂದಿನ ಹಾಗೆಯೇ
ಅವನು ಮಾತ್ರ ಇದ್ದೂ ಇಲ್ಲದಂತೆ
ಎಲ್ಲೋ ದೃಷ್ಟಿ ನೆಟ್ಟು ಕೂತಿದ್ದಾನೆ.
ಸಂತೆ ಗದ್ದಲದ ಯಾವ ಪರಿಚಿತ ದನಿಯೂ
ಅವನನ್ನು ತಾಕಿದಂತೆ ಕಾಣುತ್ತಿಲ್ಲ.
ಇಂದು ಅವನು ತಂದ ಬುಟ್ಟಿಯಲ್ಲೂ
ಹೆಚ್ಚೆನೂ ಇದ್ದಂತೆ ಕಾಣುತ್ತಿಲ್ಲ,
ಆದರೂ ಬಂದು ಕೂತಿದ್ದಾನೆ ಅಭ್ಯಾಸದಿಂದೆಂಬಂತೆ.

ಯಾಕೋ ಇಂದು ಅವನ ಮನಸ್ಸು
ತಾನು ತಂದ ವಸ್ತುಗಳನ್ನು ಬಿಕರಿ ಮಾಡುವುದಕ್ಕಿಂತಲೂ,
ಸುತ್ತ ಕೂತವರ ತುಂಬಿದ ಬುಟ್ಟಿ,
ಗಿರಾಕಿಗಳನ್ನು ಸೆಳೆಯುವ ಅವರ ಮಸಲತ್ತು,
ಎಲ್ಲವನ್ನೂ ನೋಡುತ್ತಾ ಸುಮ್ಮನೆ ಕೂತಂತಿದೆ.

ನಾನು ನೋಡಿದ ಹಾಗೆ,
ಅವನು ಹೀಗಿರಲಿಲ್ಲ ಮೊದಲು.
ಬುಟ್ಟಿ ತುಂಬಾ ಸಾಮಾನು ಹೊತ್ತು ತಂದು
ಸುತ್ತ ಅದನ್ನು ನೀಟಾಗಿ ಹರಡಿ,
ಪಕ್ಕದಲ್ಲಿಟ್ಟ ನೋಟು ಚಿಲ್ಲರೆ ತುಂಬಿದ ಡಬ್ಬಿಯನ್ನೊಮ್ಮೆ ಹಿತವಾಗಿ ಮುಟ್ಟಿ,
ನಡುವೆ ಕೂತು ಹೊಸ ಹೊಸ ಗಿರಾಕಿಗಳನ್ನು
ಯಾವತ್ತಿನ ಪರಿಚಯ ಎಂಬಂತೆ;
ಕರೆದು ಕೂಗಿ ಸೆಳೆಯುವ ಅವನ ಚುರುಕಿನ
ವ್ಯಕ್ತಿತ್ವವನ್ನು ಕಂಡವರು ಈಗ ನನ್ನಂತೆಯೇ
ಅಚ್ಚರಿ ಪಡುತ್ತಾರೆ.

ಸಂತೆಯ ಅತ್ಯಂತ ಜನದಟ್ಟಣೆಯ ಸಮಯದಲ್ಲಿ
ನೀವು ಅವನನ್ನು ನೋಡಬೇಕಿತ್ತು.
ಅರಳಿದ ತಾಜಾ ಹೂವಿಗೆ ಮುತ್ತಿಕೊಂಡ ದುಂಬಿಗಳಂತೆ
ಜನ ಮಗಿಬಿದ್ದು ಅವನಿಂದ ಖರೀದಿಸುತ್ತಿದ್ದರು.
ಎಷ್ಟು ಸಲ ಕೇಳಿದರೂ ಪ್ರೀತಿಯಿಂದ ತೋರಿಸುವ
ಇಷ್ಟ ಆಗುವ ಹಾಗೆ ಹಿತವಾಗಿ ಗದರುವ
ಅವನನ್ನು ಹುಡುಕಿಕೊಂಡು ಬರುತ್ತಿದ್ದುದರಲ್ಲಿ
ಅಚ್ಚರಿಯೇನಿಲ್ಲ.
ಆಗ ಮಾತ್ರ ಅವನ ಕೈ ಮತ್ತು ಬಾಯಿ
ಅತ್ಯಂತ ಸಂಭ್ರಮದಿಂದ ಅವನ ಜೊತೆಗೇ
ಸ್ಪರ್ಧೆಗಿಳಿದಂತೆ ನನಗೆ ತೋರುತ್ತಿತ್ತು.
ನನಗೀಗಲೂ ನೆನಪಿನಲ್ಲಿರುವುದು
ಎಷ್ಟು ಕೊಂಡರೂ ಮುಗಿಯದ ಅವನ ಬುಟ್ಟಿ
ಮತ್ತು ಮುಗಿಯದ ಅವನ ಮಾತು.

ಈಗ್ಯಾಕೋ ಹೆಚ್ಚು ಸಾಮಾನುಗಳೇ ಇಲ್ಲ
ಅವನು ತರುವ ಬುಟ್ಟಿಯಲ್ಲಿ.
ಮೊದಲಿನಂತೆ ಸುತ್ತ ಹರಡಿಕೊಳ್ಳದೇ ಬುಟ್ಟಿ
ಎದುರಿಗಿಟ್ಟು ಕುಳಿತುಬಿಡುತ್ತಾನೆ.
ಇದ್ದುದನ್ನೇ ಚೌಕಾಶಿ ಮಾಡುವವರ ಬಳಿ
ವಿನಾಕಾರಣ ಸಿಟ್ಟಿಗೇಳುತ್ತಾನೆ,
ತೀರಾ ಕಡಿಮೆ ದರಕ್ಕೆ ಕೇಳುವಾಗ
ಕೇಳಿಸದಂತೆ ನಟಿಸುತ್ತಾನೆ; ಮೌನ ವಹಿಸುತ್ತಾನೆ.
ಮತ್ತು ವ್ಯಾಪಾರ ಮರೆತವನಂತೆ
ಎದುರಿಗೆ ಕೂತವರ ತುಂಬಿದ ಬುಟ್ಟಿಗಳನ್ನು
ನೋಡುತ್ತಾ ಕೂತುಬಿಡುತ್ತಾನೆ.

 

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು.
ಈಗ ಮಂಗಳೂರು ವಾಸಿ
ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು
ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. ಕರುಣಾಕರ ಪ್ರಭು

    ಶುಭವಾಗಲಿ; ಇನ್ನೂ ಉತ್ತಮ ಕವಿತೆಗಳು, ಕತೆಗಳು ನಿಮ್ಮಿಂದ ನಮಗೆ ಸಿಗುವಂತಾಗಲಿ.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ