Advertisement
ರವೀಂದ್ರಕುಮಾರ್ ಈವರೆಗಿನ ಕಾವ್ಯದ ಕುರಿತು ವಾಸುದೇವ್ ನಾಡಿಗ್ ಬರಹ

ರವೀಂದ್ರಕುಮಾರ್ ಈವರೆಗಿನ ಕಾವ್ಯದ ಕುರಿತು ವಾಸುದೇವ್ ನಾಡಿಗ್ ಬರಹ

ಕವಿತೆಗಳ ಕುರಿತ ಚರ್ಚೆಯೇ ಹಾಗೆ. ವೃಥಾ ತಲೆಚಚ್ಚಿಕೊಳ್ಳುತ್ತೇವೆ. ಕವಿತೆಯ ಶರೀರ ಆತ್ಮ ರಸ ರೀತಿ ಶೈಲಿ ದನಿ ಔಚಿತ್ಯ ಅಂತ. ಆದರೆ ನಿಜವಾದ ಕವನ ಅಲ್ಲೆಲ್ಲೋ ಮರೆಯಲ್ಲಿ ನಿಂತು ಮುಗುಳ್ನಗುತ್ತಿರುತ್ತದೆ. ಯಾರ ಕೈಗೂ ತಾನು ಸಿಗದೇ ಕಣ್ಣು ಮಿಟುಕಿಸುವ ತುಂಟ ಶಾಮನ ಹಾಗೆ. ಕೈಗೂ ಸಿಗದೇ ಕಣ್ಣಿಗೂ ಸಿಗದೇ ನುಣುಚಿಕೊಳ್ಳುವ ಮಾಯಾಂಗನೆ ಹಾಗೆ. ಕವಿತೆಯ ಸ್ವರೂಪ ಮತ್ತು ವ್ಯಾಕಪತೆ ಕುರಿತ ಒಂದು ನಿರ್ದಿಷ್ಟ ನಿಲುವು ಸಾಧ್ಯವಾಗದೇ ಇರುವುದಕ್ಕೆ ಮುಖ್ಯ ಕಾರಣ ಪ್ರತಿಯೊಬ್ಬ ಕವಿಯ ಕಾವ್ಯ ಮೀಮಾಂಸೆಗಳೇ ಬೇರೆ ಬೇರೆ.
ಇತ್ತೀಚೆಗೆ ತೀರಿಹೋದ ಕವಿ ಜಿ.ಕೆ ರವೀಂದ್ರಕುಮಾರ್ ಈವರೆಗಿನ ಕಾವ್ಯದ ಕುರಿತು ವಾಸುದೇವ್ ನಾಡಿಗ್ ಬರಹ 

 

‘ನೂಲು, ಕದ, ಊರು, ಮರ, ಕಂಡ ಕಡೆಗೆಲ್ಲ ಕವಿತೆಯ ಕಣ್ಣ ಟಾರ್ಚು..

ಪದ್ಯ ಪದವಿಲ್ಲದಿರಬೇಕು
ಹೆಜ್ಜೆಗುರುತು ಇಲ್ಲದೆ ಪಕ್ಷಿ ಹಾರುವಂತೆ

ಕಾಲದಲ್ಲಿ ಸ್ತಬ್ದ ಎನಿಸಬೇಕು
ಏರುವ ಚಂದ್ರನಂತೆ

ಹೇಳಕೂಡದು
ಇರಬೇಕು
ಯು ಆರ್ ಅನಂತಮೂರ್ತಿ

(ಅರ್ಚಿಬಾಲ್ಡ್ ಮ್ಯಾಕ್ ಲೀಶ್ ಎನ್ನುವಂತೆ ಕವಿತೆ)

ಕವಿತೆಗಳ ಕುರಿತ ಚರ್ಚೆಯೇ ಹಾಗೆ. ವೃಥಾ ತಲೆಚಚ್ಚಿಕೊಳ್ಳುತ್ತೇವೆ. ಕವಿತೆಯ ಶರೀರ ಆತ್ಮ ರಸ ರೀತಿ ಶೈಲಿ ದನಿ ಔಚಿತ್ಯ ಅಂತ. ಆದರೆ ನಿಜವಾದ ಕವನ ಅಲ್ಲೆಲ್ಲೋ ಮರೆಯಲ್ಲಿ ನಿಂತು ಮುಗುಳ್ನಗುತ್ತಿರುತ್ತದೆ. ಯಾರ ಕೈಗೂ ತಾನು ಸಿಗದೇ ಕಣ್ಣು ಮಿಟುಕಿಸುವ ತುಂಟ ಶಾಮನ ಹಾಗೆ. ಕೈಗೂ ಸಿಗದೇ ಕಣ್ಣಿಗೂ ಸಿಗದೇ ನುಣುಚಿಕೊಳ್ಳುವ ಮಾಯಾಂಗನೆ ಹಾಗೆ. ಕವಿತೆಯ ಸ್ವರೂಪ ಮತ್ತು ವ್ಯಾಕಪತೆ ಕುರಿತ ಒಂದು ನಿರ್ದಿಷ್ಟ ನಿಲುವು ಸಾಧ್ಯವಾಗದೇ ಇರುವುದಕ್ಕೆ ಮುಖ್ಯ ಕಾರಣ ಪ್ರತಿಯೊಬ್ಬ ಕವಿಯ ಕಾವ್ಯ ಮೀಮಾಂಸೆಗಳೇ ಬೇರೆ ಬೇರೆ. ಇದೇ ಕಾರಣದಿಂದ ಶೈಲಿ ಎಂದರೇನು ಎಂಬ ಚರ್ಚೆ ಕವಿಯೇ ಶೈಲಿ ಎಂಬ ನಿಲುವಿಗೆ ತಲುಪುತ್ತದೆ.

ಸದ್ಯ ಶ್ರೀ ಜಿ ಕೆ ರವೀಂದ್ರ ಕುಮಾರ ಅವರ ಕವಿತೆಯ ಮಾರ್ಗವನ್ನು ಒಮ್ಮೆ ಪರಿಶೀಲಿಸಿದಾಗ ಅನಿಸಿದ್ದು ಇದೇ ಅನಿಸಿಕೆ. ಅದು ಪ್ರತಿಯೊಬ್ಬ ಕವಿಯೂ ತಾನು ಪರಂಪರೆಯಿಂದ ಪಡೆದು ಋಣಿಯಾಗಿದ್ದರೂ ತನ್ನ ಮಾರ್ಗವೇ ಬೇರೆ ಎಂಬ ಅನನ್ಯತೆಯ ಹುಡುಕಾಟದಲ್ಲಿ ಇರುವ ಪರಿ ಇದು. ಇರುವ ಮತ್ತು ಪಡೆದ ಭಾಷೆ ಮತ್ತು ದೊರೆವ ಜೀವನಾನುಭವಗಳ ಮಧ್ಯೆ ಕವಿತೆ ಕಟ್ಟುವ ಬಗೆಯೇ ಈ ಭಿನ್ನತೆಗೆ ಕಾರಣವಾಗುತ್ತದೆ. ಬಾಳನ್ನು ನೋಡುವ ಬಗೆ ಮತ್ತು ಅದಕ್ಕೆ ಉಡಿಸುವ ಭಾಷೆಯ ಬಟ್ಟೆಯೇ ಇಲ್ಲಿ ಕಾರಣ. ಅದೇ ಕವಿ ಕವಿ ಮತ್ತು ಕವಿತೆ ಕವಿತೆಗಳ ನಡುವಣದ ಭಿನ್ನ ಆಯಾಮ ಮತ್ತು ಅನುಸಂಧಾನಕೆ ಮೂಲ ಆಗಿ ನಿಲ್ಲುತ್ತದೆ.

1994 ರಲ್ಲಿ ಬೆಳಕಿಗೆ ಬಂದ ‘ಸಿಕಾಡ’ ಕವನ ಸಂಕಲನದಿಂದ ಈಚಿನ ‘ಮರವನಪ್ಪಿದ ಬಳ್ಳಿ’ (2014) ತನಕ ರವೀಂದ್ರ ಕುಮಾರ ಅವರ ಕವಿತೆಗಳ ಪಯಣ ಹರಿದಿದೆ. ಅನಂತರ ಅವರು ಪತ್ರಿಕಾ ಅಂಕಣ ಮತ್ತು ಪ್ರಬಂಧದಂತಹ ಗದ್ಯ ಪ್ರಕಾರಗಳಲ್ಲಿ ವ್ಯಸ್ತವಾದುದರಿಂದ ತುಸು ಕಾವ್ಯಧ್ಯಾನ ಹಿಂದಿಕ್ಕಿದಂತಾಯಿತೇನೋ ಎಂಬುದು ನನ್ನ ಅನಿಸಿಕೆ.

ಜಿ ಕೆ ಆರ್ ಅವರ ಕವಿತೆಗಳ ಮೂಲ ಆಸಕ್ತಿ ಪದಗಳನ್ನು ಮುರಿದು ಕಟ್ಟುವಲ್ಲಿ ಮತ್ತು ಆಮೂಲಕ ಲೋಕಾನುಭವಕ್ಕೆ ಹೊಸ ಹೊಳಹೊಂದನ್ನು ಕಸೂತಿ ಮಾಡುವಿಕೆ. ಇದು ಸಿಕಾಡದಿಂದಲೂ ಸಹಜ ಮತ್ತು ಪ್ಯಾಂಜಿಯಾದಲ್ಲಿ ದಟ್ಟವಾಗಿ ಕಾಣಬಹುದು.

‘ಅವರವರ ಸತ್ಯಕ್ಕೆ ನೂರೆಂಟು ದಾರಿಗಳಿರುವಾಗ..’ ಎಂದೆ ವ್ಯಾಪಕವಾದ ಸಿದ್ಧಾಂತವೊಂದನ್ನು ನಂಬಿರುವ ಕವಿ ಇಲ್ಲಿ ಇದನ್ನು ಕಾವ್ಯಸತ್ಯವಾಗಿಯೂ ದಾಟಿಸಿಬಿಡುತ್ತಾರೆ.

‘ರೂಢಿಯಾದ ದೇಹಕ್ಕೆ ಯಾರಾರದೊ ಅವಯಯ’ ಎಂಬಿತ್ಯಾದಿ ಸಾಲುಗಳಲ್ಲಿನ ಸಹಜವಾದ ಭಾಷಾಕ್ರಮ ಮತ್ತು ಅದು ಕಟ್ಟಿಕೊಡುವ ಅನುಭವವನ್ನು ನಾವು ಗಮನಿಸಲೇಬೇಕಾಗುತ್ತದೆ.

ಇಂತಹ ಕಡೆಯಲೆಲ್ಲ ಜಿ ಕೆ ಆರ್ ಅವರು ಅನಾಯಾಸವಾಗಿ ಅಭಿವ್ಯಕ್ತಿಸುತ್ತಾರೆ, ಬದಲಿಗೆ ಯಾವುದೆ ಬೌದ್ಧಿಕ ಕಸರತ್ತಾಗಲಿ ಅಥವಾ ಭಾವ ಸಂಕೀರ್ಣತೆಗಾಗಲಿ ಅವರು ಕಟ್ಟು ಬೀಳುವುದಿಲ್ಲ ಹಾಗಾಗೇ ಭಾಷೆಯನ್ನು ಹಚ್ಚಿಕೊಂಡ ಕವಿಯೇ ಹೊರತು ನಾನಾ ವರಸೆ ಕಸರತ್ತು ಗಳಿಗೆ ಎಳಸುವ ಗೂಢ ಕವಿಯಾಗಲು ಇಷ್ಟ ಪಡುವುದಿಲ್ಲ.

ನಿಜ, ‘ಅವರಿವರು ಹಾಡಿದ್ದು ನಮ್ಮ ಬದುಕಾಗುವುದಿಲ್ಲ’ ( ಸಿಕಾಡ-ಅವರಿವರು ಹಾಡಿದ್ದು) ಹಾಗೆ ಅವರಿವವರ ಹಾಗೇ ಕವಿತೆ ಬರೆಯಲಾಗುವುದಿಲ್ಲ. ಕವಿ ಸದಾ ಹೊಚ್ಚ ಹೊಸತನಕ್ಕೆ ಕಾಯುವ ಮಾರ್ಗವಿದು. ಸೃಜನಶೀಲತೆಯ ಮೂಲ ತಪತಪಿಸುವಿಕೆ ಇದು.

‘ಪ್ರೀತಿಸುವ ಮತ್ತು ಪ್ರೀತಿಸಲಾಗದ
ಧ್ರುವಗಳ ನಡುವಿನ ರೇಖೆಯಲ್ಲೆಲ್ಲೋ
ನಮ್ಮ ವ್ಯಕ್ತಿತ್ವದ ಬೀಜ ಅಡಗಿದೆ’ ( ಸಿಕಾಡ- ಹುಡುಕಾಟ)

ರವೀಂದ್ರ ಕುಮಾರ್ ಅವರ ಕವಿತೆಗಳ ಧ್ಯಾನ ಅಪರಿಮಿತ ಕಲ್ಪನೆಯದಲ್ಲ ಬದಲಿಗೆ ತಮಗೆ ಸಿದ್ಧಿಸಿದ ಭಾಷಿಕ ಕ್ರಮದಲ್ಲೇ ದಕ್ಕುತ್ತದೆ. ಆದ್ದರಿಂದಲೇ ಅದು ಮಾತಿಗೆ ಕೂತ ಪದಗಳ ಅಂಗಳದಲ್ಲಿ ಜೀವ ಸಾಧ್ಯತೆ ಮತ್ತು ಬದುಕಿನ ಇಕ್ಕೆಲಗಳ ಮುಖಾಮುಖಿ ಎನಿಸುತ್ತದೆ.


ಸಿಕಾಡಾ ನಂತರದ ಪ್ಯಾಂಜಿಯ, ಕದವಿಲ್ಲದ ಊರಲ್ಲಿ, ಒಂದು ನೂಲಿನ ಜಾಡು ಮತ್ತು ಮರವನಪ್ಪಿದ ಬಳ್ಳಿ ಸಂಕಲನಗಳು ಜಿ ಕೆ ಆರ್ ಅವರ ಮೂಲ ತಾತ್ವಿಕ ನೆಲೆಯ ಬೇರೆ ಬೇರೆ ಹುಡುಕಾಟದ ವಿಸ್ತೃತ ಮುಂದುವರಿಕೆಯ ಮಾದರಿಗಳೇ ಆಗಿವೆ. ಹಾಗಂತ ಹೊಸ ಸಂವೇದನೆ ಇಲ್ಲ ಅಂತ ಅರ್ಥವಲ್ಲ ಬದಲಿಗೆ ಅದು ಅವರ ಕಾವ್ಯಯಾನದ ನಿರಂತರತೆಗೆ ಮೆಟ್ಟಿಲುಗಳೇ ಆಗಿವೆ.

ಇರುವ ಮತ್ತು ಪಡೆದ ಭಾಷೆ ಮತ್ತು ದೊರೆವ ಜೀವನಾನುಭವಗಳ ಮಧ್ಯೆ ಕವಿತೆ ಕಟ್ಟುವ ಬಗೆಯೇ ಈ ಭಿನ್ನತೆಗೆ ಕಾರಣವಾಗುತ್ತದೆ. ಬಾಳನ್ನು ನೋಡುವ ಬಗೆ ಮತ್ತು ಅದಕ್ಕೆ ಉಡಿಸುವ ಭಾಷೆಯ ಬಟ್ಟೆಯೇ ಇಲ್ಲಿ ಕಾರಣ. ಅದೇ ಕವಿ ಕವಿ ಮತ್ತು ಕವಿತೆ ಕವಿತೆಗಳ ನಡುವಣದ ಭಿನ್ನ ಆಯಾಮ ಮತ್ತು ಅನುಸಂಧಾನಕೆ ಮೂಲ ಆಗಿ ನಿಲ್ಲುತ್ತದೆ.

ಇದು ಕವಿಯೊಬ್ಬನ ಸಹಜ ನಡೆ ಕೂಡಾ. ಕವಿತೆ ಎನ್ನುವುದು ಜೀವಯಾನದ ಹೆಜ್ಜೆಗುರುತು ಎಂಬ ತಾತ್ವಿಕತೆಯ ಹಿನ್ನೆಲೆಯಲ್ಲಿ ಈ ಬಗೆಯ ಬದ್ಧತೆ ಮತ್ತು ನಿರತತನ ಅಗತ್ಯ. ತೇವಸಾಲಿನ ಕವಿತೆ ಯಲ್ಲಿ ಅವರೇ ಹೇಳುವ ಹಾಗೆ

ದಾಟಿಕೊಳ್ಳುವ ಕವಿತೆಗೆ
‘ತೀರವೆಂಬ ತೇವ ಸಾಲು
ಮೊದಲ ಸಾಲೋ
ಕೊನೆಯ ಸಾಲೋ
ಮರಳ ಹಾಳೆಗೆ
ಇನ್ನೊಂದು ನಾಳೆ’ ( ಒಂದು ನೂಲಿನ ಜಾಡು)

ಎಂಬಂತೆ ಹೊಸಕವಿತೆಗಾಗಿ ಕಾಯುವ ಜೀವ ಹೊಸ ಅನುಸಂಧಾನಕ್ಕೂ ಕಾಯಲೇಬೇಕು.

ಹಾಗಾಗಿ ಇವರ ಒಟ್ಟೂ ಕವಿತೆಗಳ ಸ್ವರೂಪ ಅದು ಸಾವಯವತೆಯ ನೂಲಿನ ಹಾದಿಯೇ ಹೊರತು ಬಿಡಿ ಹೂವುಗಳನ್ನು ಎಣಿಸಿ ಪೋಣಿಸಿದಂತಲ್ಲ. ಅವರದೇ ಮಾತಿನಲ್ಲಿ ಹೇಳುವುದಾದರೆ

‘ಜೀವ ತಪ್ಪಲು
ನೀನು ಒಕ್ಕಲು’ ( ಮರವನಪ್ಪಿದ ಬಳ್ಳಿ-ತಾಗಿಕೊಂದ ಮೇಲೆ)

ಇದು ಕವಿಮನಸು ಬಾಳಿಗೆ ಬಾಳ ಬವಣೆಗೆ ಬಾಳ ನದಿಗೆ ನಿರತ ತಾಗಿಕೊಂಡ ರೂಪಕ.

ಹಾಗಾಗಿಯೇ
‘ಎದೆಗೊರಗಿದರೂ
ಎದೆ ನೀರು ಕರಗುವುದಿಲ್ಲ
ಇಳಿವ ಮೆಟ್ಟಿಲು ಮುಗಿವುದೇ ಇಲ್ಲ’ (ಪ್ಯಾಂಜಿಯಾ)

ರವೀಂದ್ರಕುಮಾರ್ ಅವರ ಕವಿತೆಯ ಮೂಲ ಆಸಕ್ತಿ ತನಗೆ ತಾನೆ ಪ್ರಶ್ನೆಗಳನ್ನು ಕೇಳಿಕೊಳ್ಳುವುದರ ಮೂಲಕ ಆಲೋಚನೆಗಳನ್ನು ವಿಸ್ತೃತಗೊಳಿಸುತ್ತದೆ. ಜಿಜ್ಞಾಸೆಗೆ ಕಾವ್ಯವನ್ನು ಬಹಳ ಸಶಕ್ತವಾಗಿ ಬಳಸಿಕೊಂಡ ಬಗೆ ಇಲ್ಲಿ ಕಾಣುತ್ತೇವೆ. ಹಾಗೆ ನೋಡಿದರೆ ಇವರ ಬಹುತೇಕ ಕವಿತೆಗಳ ಸ್ಥಾಯಿ ಜಿಜ್ಞಾಸೆಯೇ ಆಗಿದೆ.

ಚರಿತೆಯ ರುಂಡಕಡಿಯುವುದು ಬೇಡ, ಪ್ಯಾಂಜಿಯಾ, ದೇಶವೊಂದು ಹಾಳೆಯಾಗದಿರಲಿ, ಗಂಡ ಭೇರುಂಡ, ಮತ್ತೂ ಮತ್ತೂ ಆಗುವಲ್ಲಿ ಇತ್ಯಾದಿ ಕವಿತೆಗಳಲ್ಲಿ ಈ ಗುಣವಿದೆ. ಕಳೆದ ಎರಡೂವರೆ ದಶಕಗಳ ಇವರ ಕವಿತೆಗಳ ನಡೆ ಹಲವಾರು ವಸ್ತುಗಳ ಸಂಗತಿಗಳ ವಿಸಂಗತಿ ಮತ್ತು ವಿಲೋಮ ಆಯಾಮಗಳನ್ನು ತೆರೆದಿಡುವಲ್ಲಿ ಉತ್ಸುಕವಾಗಿರುವುದು ಕಾವ್ಯದ ನಿರಂತರ ಚಲನಶೀಲತೆಗೂ ಕಾರಣವಾಗಿದೆ. ಅವರೇ ಹೇಳುವ ಹಾಗೆ

‘ನನ್ನೊಳಗಿನ ಆಕಾಶದಲ್ಲಿ ಹುಡುಕಾಡಿದೆ
ಅಲ್ಲೊಂದು ಪುಟ್ಟ ಭೂಮಿ
ಮೇಲೊಂದು ಬಯಲು
ಅಲ್ಲಿ ನಾನೇ ನನ್ನ ಕರೆದಂತೆ’

ಕವಿತೆಗೆ ಬೇಕಾಗಿರುವುದು ಇಂತಹ ಕರೆ. ಆ ಕರೆ ಮತ್ತೆ ಮತ್ತೆ ಅನುರಣಸಿ ಇನ್ನಷ್ಟು ಉಜ್ವಲವಾದ ಕವಿತೆಗಳನ್ನು ನಮಗೆ ಒದಗಿಸಲಿ ಎಂಬುದೆ ಈ ಹೊತ್ತಿನ ನನ್ನ ಆಕಾಂಕ್ಷೆ.

(ತಮ್ಮ ಈ ವರೆಗಿನ ಕವಿತೆಗಳ ಸಂಕಲನದ ತಯಾರಿಯಲ್ಲಿದ್ದ ಜಿ ಕೆ ರವೀಂದ್ರಕುಮಾರ್ ಸರ್ ಅವರು ಅದಕ್ಕಾಗಿ ನನ್ನ ಮೂಲಕ ಪ್ರೀತಿಯಿಂದ ಬರೆಸಿಕೊಂಡ ಲೇಖನ)

About The Author

ವಾಸುದೇವ ನಾಡಿಗ್

ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. ೨೦ ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ಪ್ರಶಸ್ತಿ ಇವರಿಗೆ ದೊರೆತಿವೆ.

2 Comments

  1. Ravishankar.M.S. Shankar

    ಬರಹ ಚೆನ್ನಾಗಿದೆ.

    Reply
  2. Gubbachchi sathish

    ‘ನನ್ನೊಳಗಿನ ಆಕಾಶದಲ್ಲಿ ಹುಡುಕಾಡಿದೆ
    ಅಲ್ಲೊಂದು ಪುಟ್ಟ ಭೂಮಿ
    ಮೇಲೊಂದು ಬಯಲು
    ಅಲ್ಲಿ ನಾನೇ ನನ್ನ ಕರೆದಂತೆ’

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ