ಕಂಡಕ್ಟರ್ ಒಂದು ನಿರ್ಧಾರಕ್ಕೆ ಬಂದ. ಪೊಲೀಸರು ಬರಲಿ ಅವರೇ ನಿರ್ಧರಿಸಲಿ ಎಂದು ಬಸ್ ನಿಲ್ಲಿಸಲು ಡ್ರೈವರ್‌ಗೆ ಸೂಚಿಸಿದ. ಆದರೂ ಬಸ್ ನಿಲ್ಲಲಿಲ್ಲ. ಪೋಲೀಸರ ಪ್ರವೇಶ ಮಾತಿನಲ್ಲಿ ಆದದ್ದಕ್ಕೆ, ಈ ಮೂವರು “ಕರೆಸಯ್ಯ ನಾವು ನೋಡದೆ ಇರೋ ಪೋಲಿಸ್ರಾ… ಹೆದರಿಸ್ತೀಯಾ? ಕರೆಸೆ ಬಿಡು” ಎಂದು ದುಂಬಾಲು ಬಿದ್ದರು. (ಹಾಗೆ ನಟಿಸಿದರು) ಒಂದು ಸ್ಟಾಪ್ ಮುಂದೆ ಬಂದ ಬಸ್ ಅನಿವಾರ್ಯವಾಗಿ ನಿಲ್ಲಿಸಬೇಕಾಯಿತು. ಐದು ನಿಮಿಷದಿಂದ ಯಾರಿಗೋ ಫೋನ್ ಮಾಡುತ್ತಾನೆ ಇದ್ದ ಕಂಡಕ್ಟರ್ “ಪೊಲೀಸರು ಬರ್ಲಿ; ಗೊತ್ತಾಗುತ್ತೆ” ಎನ್ನುತ್ತಾ. ಬಸ್ ಅನಿವಾರ್ಯವಾಗಿ ನಿಂತಿತು.
ವಸಂತಕುಮಾರ್ ಕಲ್ಯಾಣಿ ಬರೆದ ಶೂನ್ಯ ಟಿಕೇಟ್ ಒಂದರ ಪ್ರಸಂಗ ನಿಮ್ಮ ಓದಿಗೆ
“ಎಲ್ಲಿಗೆ ಸರ್” ಅಂತ ಬಹುಶಃ ಎರಡನೆಯ ಸಲ ಕೇಳಿರಬಹುದು. ನಾನು ಅವನ ಮುಖ ನೋಡಿದೆ. ನಗುಮುಖ. ಪುನಹ “ಯಾಕೋ ಏನೋ ಸೀರಿಯಸ್ ಆಗಿ ಯೋಚನೆ ಮಾಡ್ತಾ ಇದೀರಿ. ಎಲ್ಲಿಗೆ ಹೋಗಬೇಕು” ಎಂದ ಕಂಡಕ್ಟರ್ ನಗುಮೊಗದಿಂದಲೇ. “ಹೆಬ್ಬಾಳ.. ಅಲ್ಲ ಸಾರಿ. ಟಿನ್ ಫ್ಯಾಕ್ಟರಿ; ಒಂದು ಸೀನಿಯರ್” ಅಂದೆ, “ಮುಂದೆ ಒಬ್ಬರು ಲೇಡೀಸ್ ಇದಾರೆ, ಆಧಾರ್” ಎಂದು ಸೇರಿಸಿದೆ. ಕಾರ್ಡ್ತೋರಿಸಿ ಎಂದೂ ಕೇಳದೆ ಎರಡು ಟಿಕೆಟ್ ನನ್ನ ಕೈಯಲ್ಲಿಕೊಟ್ಟ. ಇವನೇ ಅಥವಾ ಇಂಥವರೇ ಆ ಬಸ್ನಲ್ಲು ಇದ್ದಿದ್ರೆ ಇಷ್ಟೊಂದು ಸಮಸ್ಯೆ ಆಗ್ತಾ ಇರಲಿಲ್ಲ, ನನ್ನ ಯೋಚನೆಗೂ ಕಾರಣ ಇರುತ್ತಾ ಇರಲಿಲ್ಲ ಎಂದುಕೊಂಡೆ.
ಹೌದು, ಒಂದು ದಿನ ಉಳಿದುಕೊಂಡು ನೆಲಮಂಗಲದ ನಾದಿನಿ ಮನೆಯಿಂದ ವಾಪಸ್ ಹೊರಟಿದ್ದೆವು ನಾವಿಬ್ಬರು. ಮನೆ ಹತ್ತಿರದ ಸ್ಟಾಪ್‌ನಿಂದಲೇ ಬಸ್ ಸಿಕ್ಕಿತ್ತು. ಸೀಟೂ ಇತ್ತು. ನಾನೂ ಶ್ರೀಮತಿಯೂ ಒಟ್ಟಿಗೆ ಕೂತುಕೊಳ್ಳುವ ಪ್ರಯತ್ನ ಮಾಡಿದಾಗ “ಮೇಡಂ ನೀವು ಮುಂದೆ ಹೋಗಿ” ಎಂದ ಕಂಡಕ್ಟರ್. ಸಹಜವೇ!! ಮಹಿಳೆಯರಿಗೆ ಪ್ರಯಾಣ ಫ್ರೀ ಆದ ಮೇಲೆ ಅವರೇನಾದರೂ ಅವರಿಗೆ ಮೀಸಲಾದ ಆಸನದಲ್ಲಿ ಕೂರದೆ ಬೇರೆ ಆಸನದಲ್ಲಿ-ಅದು ಪುರುಷರಿಗೆ ಮಾತ್ರ ಅಲ್ಲ ಎಂಬುದು ನನ್ನ ಭಾವನೆ- ಕೂತಿದ್ದರೆ ಕೆಲವು ಗಂಡಸರು ಸಿಟ್ಟಿಗೆದ್ದು “ನೀವು ಫ್ರೀ ಓಡಾಡೋದಲ್ಲದೆ ನಮ್ಮ ಸೀಟ್ನಲ್ಲಿ ಕೂತ್ಕೊಂಬಿಡ್ತೀರಾ ಎದ್ದೇಳ್ರೀ” ಎಂದು ಕೂಗಾಡಿ ಗಲಾಟೆ ಮಾಡಿದ ಅನೇಕ ಪ್ರಸಂಗಗಳನ್ನು ಕೇಳಿದ್ದೇನೆ, ನೋಡಿದ್ದೇನೆ. ನನ್ನ ಶ್ರೀಮತಿ ಸುಮ್ಮನೆ ಮುಂದೆ ಹೋಗಿಬಿಟ್ಟಳು. ಅಲ್ಲಿಯೂ ಒಂದು ಕಡೆ ಖಾಲಿ ಸೀಟ್ ಸಿಕ್ಕಿದುದರಿಂದ ನನಗೂ ನೆಮ್ಮದಿಯಾಯಿತು.
ಸಾಮಾನ್ಯವಾಗಿ ಇತ್ತೀಚೆಗೆ ನಾನು ಬಸ್ ಪ್ರಯಾಣ ಮಾಡುವುದು ಕಡಿಮೆ. ಅದರಲ್ಲೂ ಸೀಟ್ ಸಿಕ್ಕಿದ ತಕ್ಷಣ ಚೀಲದಲ್ಲಿರುವ ಪುಸ್ತಕ ಕೈಗೆ ಬಂದಿರುತ್ತದೆ ಅಥವಾ ಬರೆಯಬೇಕಾದ ಲೇಖನ ಅಥವಾ ಯಾವುದಾದರೂ ಕಥಾ ವಸ್ತುಸಿಕ್ಕರೆ ಅದನ್ನೇ ಮನದಲ್ಲಿ ಬರೆಯುತ್ತಾ ಕುಳಿತುಬಿಡುತ್ತೇನೆ. ಈಗ ಇನ್ನೂ ಪುಸ್ತಕ ಕೈಗೆ ಬಂದಿರಲಿಲ್ಲ. ಏನನ್ನೋ ಯೋಚಿಸುತ್ತಾ ಇದ್ದೆ. ಅಷ್ಟರಲ್ಲಿ ಕಂಡಕ್ಟರ್ -ಸ್ವಲ್ಪ ಧಡೂತಿ ದೇಹ, ಕಪ್ಪುಬಣ್ಣ, ಮುಂದಲೆಯಲ್ಲಿ ಉದುರಿದ್ದ ಕೂದಲು, ಹಣೆಯಲ್ಲಿ ದೇವರ ಪ್ರಸಾದ. ಕೂದಲು ತುಂಬಿದ ಮುಂಗೈ ಚಾಚಿ “ಎಲ್ಲಿಗೆ” ಎಂದ. ನಾನು ಒಂದು ಕ್ಷಣ- ಒಂದೇಒಂದು ಕ್ಷಣ- ತಡ ಮಾಡಿದೆ. “ಬೇಗ ಹೇಳ್ರಿ ಎಲ್ಲಿಗೆ ಅಂತ” ಎಂದು ಸಿಡುಕಿಯೇಬಿಟ್ಟ. ನಾನು ತಡವರಿಸುತ್ತಾ “ಜಾಲಹಳ್ಳಿಕ್ರಾಸ್ ಅಲ್ಲಲ್ಲ ಗೊರಗುಂಟೆಪಾಳ್ಯ” ಎಂದೆ. ಸೀನಿಯರ್ ಎಂದೂ ಸೇರಿಸಿದೆ. ಹಾಗೆಯೇ ಅವರ ಬಳಿ ಕಾರ್ಡ್ ಇದೆ ಎಂದೆ. ಎಷ್ಟು ಎಂದೆ. “ಇಪ್ಪತ್ತ ಮೂರು” ಎಂದ. ಇಪ್ಪತ್ತರ ನೋಟಿನ ಜೊತೆ ಐದು ರೂಪಾಯಿ ನಾಣ್ಯ ಕೊಟ್ಟೆ. ಟಿಕೆಟ್ ಕೊಟ್ಟ. ಎರಡು ರೂಪಾಯಿ ಚಿಲ್ಲರೆ ಕೊಡಲಿಲ್ಲ. ಸರ್ಕಾರದವರು ಮೂರು ರೂ ಹೆಚ್ಚಿಸಿದರೆ ನಮ್ಮಂಥವರು ಐದು ರೂ ಕೊಡಬೇಕು. ಇದು ಮಾಮೂಲಿ ಎಂದುಕೊಂಡು (ಮನಸ್ಸಿನಲ್ಲಿ) ಸುಮ್ಮನಾದೆ.
ಹೀಗೆಯೇ ಇನ್ನೊಂದೆರಡು ಸ್ಟಾಪ್ ಕಳೆದು ಮೂರನೆಯ ಸ್ಟಾಪ್ನಲ್ಲಿ ಕೆಲವರು ಹತ್ತಿದರು. ಒಬ್ಬ ಮಧ್ಯ ವಯಸ್ಕ; ಒಂದು ಬರ್ಮುಡಾ ಒಂದು ಟೀಶರ್ಟ್ ಧರಿಸಿದ್ದಾತ – ಎರಡಕ್ಕೂ ಮ್ಯಾಚಿಂಗ್ ಇರಲಿಲ್ಲ- ಮುಂದೆ ಹತ್ತಿದ್ದ ಮಹಿಳೆಯ ಬಳಿ “ನಾನು ತಗೊಂತೀನಿ” ಎಂದ. “ಇಲ್ಲ ನಾನೇ ತಗೋತೀನಿ” ಅಂತ ಮುಂದಿಂದ ಉತ್ತರ ಬಂದಿರಬಹುದು. ಕಂಡಕ್ಟರ್ ಮುಂದೆ ಹೋಗಿದ್ದ. ಒಂದು ಸ್ಟಾಪ್ ದಾಟಿತು. ಆಗ ಶುರು ಆಯಿತು ನೋಡಿ ರಂಪ ರಾಮಾಯಣ. ಹಿಂದಿದ್ದ ಗಂಡಸು ಜಾಗ ಮಾಡಿಕೊಂಡು ಮುಂದೆ ಹೋದ. ಮಾತು, ಜಗಳ! ಯಾರು ಏನು ಹೇಳುತ್ತಿದ್ದಾರೋ ನನಗೆ ತಿಳಿಯಲಿಲ್ಲ. ಒಟ್ಟುಗೊಂದಲ. ಕಂಡಕ್ಟರ್ ಬಯ್ದುಕೊಂಡೆ ಉಳಿದವರಿಗೆ ಟಿಕೆಟ್ ಕೊಡಲು ಹಿಂದೆ ಬಂದಿದ್ದ. ಅವನ ಹಿಂದೆಯೇ ಗಂಡಸು ಬಂದು ನನ್ನ ಸೀಟಿನ ಹತ್ತಿರ ನಿಂತಿದ್ದ. ಅವನ ಜೊತೆ ಘಟನೆ ನಮ್ಮಂತವರಿಗೆ ವಿವರಿಸಲು ಅರುವತ್ತು ದಾಟಿದ ಹೆಂಗಸೊಬ್ಬರು ಹಿಂದೆ ಬಂದಿದ್ದರು. ಇಲ್ಲಿ ಇವರಿಬ್ರು ಏನೋ ಹೇಳುತ್ತಲೇ ಇದ್ದರು. ಕಂಡಕ್ಟರ್ ತನ್ನ ಪಾಲಿನ ವಾದ ಮುಂದುವರಿಸುತ್ತಲೇ ತನ್ನ ಕಾರ್ಯಮಾಡುತ್ತಿದ್ದ. ನಾಲ್ಕೂ ಜನರ ಮಾತುಗಳ ಅಬ್ಬರ ಕಡಿಮೆಯಾಗಿರಲಿಲ್ಲ. ಅಷ್ಟರಲ್ಲಿ ಮುಂದಿದ್ದ ನಲುವತ್ತು ದಾಟಿದ್ದ ಹೆಣ್ಣೊಬ್ಬಳು ಅಬ್ಬರದ ಡೈಲಾಗ್ ಹೊಡೆಯುತ್ತ ಹಿಂದೆ ಬಂದು ನಮ್ಮ ಕಣ್ಣಿಗೆ ಬಿದ್ದಳು. ಬಹುಶಃ ಇಡೀ ಪ್ರಸಂಗದ ಸೆಂಟರ್ ಆಫ್ ಅಟ್ರಾಕ್ಷನ್ ಆಯಮ್ಮನೆ ಎಂದು ನನಗೂ ನನ್ನಂಥವರಿಗೂ ಖಾತರಿ ಆಯಿತು. ಪುನಃ ಕೈಬಾಯಿ ತಿರುಗಿಸುತ್ತಾ ಆಯಮ್ಮ ಮುಂದೆ ಹೋದಳು. ನಾನು ಗಂಡಸನ್ನು ಸಮಾಧಾನ ಪಡಿಸುತ್ತಾ ಹಿಂದೆ ಖಾಲಿಯಿದ್ದ ಸೀಟ್‌ನಲ್ಲಿ ಕೂರಿಸಲು ಯತ್ನಿಸುತ್ತಿದ್ದೆ. ಬಹುಷಃ ನನ್ನ ದನಿ ಕೇಳಿ ನನ್ನ ಶ್ರೀಮತಿ ಎದ್ದುನಿಂತು ತಿರುಗಿ ಕಣ್ಣಲ್ಲಿಯೇ ಸುಮ್ಮನಿರಲು ನನಗೆ ಸೂಚಿಸುತ್ತಿದ್ದಳು. ಅವಳದೇನು ತಪ್ಪಿಲ್ಲ! ನಾನು ಗಲಾಟೆ ತಡೆಯಲು ಅನೇಕ ಸಂದರ್ಭಗಳಲ್ಲಿ ನುಗ್ಗುವುದೂ, ಕೆಲವು ಸಲ ಯಶಸ್ವಿಯಾಗುವುದು, ಕೆಲವೊಮ್ಮೆ ಇದು ನನ್ನ ಕೈ ಮೀರಿದ್ದು ಎಂದು ಅರ್ಥಮಾಡಿಕೊಂಡು ಹಿಂದೆ ಸರಿಯುವುದು ಇತ್ತು. ಆದರೆ ಇತ್ತೀಚಿಗೆ ‘ಜಗಳ ತಡೆಯಲು ಬಂದ ಮಾವನಿಗೆ ಚಾಕು ಇರಿತ’ ‘ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ಗೆಳೆಯನ ಕೊಲೆ’ ಇಂಥವುಗಳನ್ನು ಓದಿ, ಕೇಳಿ ಈ ಉಸಾಬರಿ ಬೇಡ ಎಂದು ಸುಮ್ಮನಾಗುತ್ತಿದ್ದೆ. ಆದರೂ ಚಪಲ, ಅಭ್ಯಾಸ ಬಲ… ಸುಮ್ಮನಿರದೇ ಸಮಾಧಾನ ಮಾಡುತ್ತಿದ್ದನ್ನು ಹೆಂಡತಿ ಕೇಳಿಸಿಕೊಂಡಿದ್ದಳು.
ಬಹುಶಃ ನನ್ನ ಅರಿವಿಗೆ ಬಂದದ್ದು; ಇಬ್ಬರು ಹೆಂಗಸರು, ಒಬ್ಬ ಗಂಡಸು -ಎಂಟನೇ ಮೈಲಿ ಇಳಿಯಬೇಕಾದವರು- ಹೆಂಗಸರಲ್ಲಿ ಒಬ್ಬರು ಮಾತ್ರ ಆಧಾರ್ ತಂದಿದ್ದಾರೆ, ಹಾಗಾಗಿ ಒಂದು ಉಚಿತ ಎರಡು ಹಣ ಸಂದಾಯ ಮಾಡಬೇಕಾದದ್ದು. ಆದರೆ ಬಹುಶಃ ಇಬ್ಬರೂ ಹೆಂಗಸರು ಇದ್ದುದರಿಂದ ಕಂಡಕ್ಟರ್ ಎರಡು ಉಚಿತ ಒಂದು ಹಣ ಸಂದಾಯಕ್ಕೆ ಟಿಕೆಟ್ ಹರಿದಿರಬಹುದು! ನಂತರ ವಿಷಯ ಗೊತ್ತಾಗಿದೆ. “ನೀವು ಸರಿಯಾಗಿ ಹೇಳಿಲ್ಲ” ಎಂದು ಕಂಡಕ್ಟರ್ ಮಹಾಶಯನೂ “ನೀನು ಸರಿಯಾಗಿ ಕೇಳಿಸಿಕೊಂಡಿಲ್ಲ, ನಾನು ತೋರಿಸಿದ್ದು ಒಂದೇ ಕಾರ್ಡ್; ಹಾಗಾಗಿ ನಿನ್ನದೇ ತಪ್ಪು” ಎಂದು ಪ್ರಯಾಣಿಕ ಮಹಾಶಯರೂ, ವಾದ ಮುಂದುವರೆದು ಮಾತು ಹಾದಿತಪ್ಪಿ ಅಬ್ಬರ ಹೆಚ್ಚಾಗಿರಬೇಕು. “ದಡ್ಡ ದಡ್ಡರಿಗೆ ಒಂದೇದಾರಿ” ಎಂಬ ಮಾತೇ ಇದೆಯಲ್ಲ. ಮೊದಲೇ ಗ್ರಾಮೀಣ ಪ್ರದೇಶದ ಜನರೇ ಹೆಚ್ಚಾಗಿದ್ದರು, ತಲೆಗೆ ಒಂದು ಮಾತಾಡಿದರು. ಎಲ್ಲರ ಉದ್ದೇಶ ಸುಮ್ಮನೆ ಬಸ್ ಮುಂದೆ ಹೋದರೆ ಸಾಕು, ತಮ್ಮ ಗಮ್ಯ ಬಂದು ತಾವು ಇಳಿದರೆ ಸಾಕು. ‘ಹೋ… ಸುಮ್ನಿರಮ್ಮ” “ಯಾರಾದರೂ ನಿಲ್ಲಿಸ್ರಿ” “ಎಷ್ಟು ಮಾತಾಡ್ತಿದೀರಾ?” ಹೀಗೆ ಗಾಳಿಯಲ್ಲಿ ಮಾತುಗಳು ಹಾರಾಡುತ್ತಿದ್ದು ಗಲಾಟೆ ಕಡಿಮೆಯಾಗದೆ ಇನ್ನಷ್ಟು ಹೆಚ್ಚಾಯಿತು.
ಪುನಃ ಮುಂದಿದ್ದ ನಲುವತ್ತರ ಹೆಂಗಸು ಹಿಂದೆ ಬಂದಳು, ಕಾಳಿ ಅವತಾರ ತಾಳಿ… ಇನ್ನೇನು ಕಂಡಕ್ಟರ್‌ನ ಮೂತಿಗೆ ಗುದ್ದಿಬಿಡುವ ಹಾಗೆ ಮಾತಿನಲ್ಲೂ, ಹೇಳುತ್ತಾ ಕೈ ಮುಷ್ಟಿ ಮಾಡಿಕೊಂಡಿದ್ದಳು. ಇದರ ನಡುವೆ ಅವಳು ಹೇಳಿದ ಒಂದು ಪದ ಮಾತ್ರ ನನ್ನ ಮನಸ್ಸುಮುಟ್ಟಿತು. “ನಾನು ಕ್ಲಿಯರ್ ಆಗಿ ಹೇಳಿದೆ, ಒಂದು ಶೂನ್ಯ ಎರಡಕ್ಕೆ ದುಡ್ಡು ಅಂತ” ಆಹಾ ಶೂನ್ಯ ಎಂಬ ಪದ ಉಪಯೋಗಿಸಿದಳಲ್ಲಾ… ನನ್ನ ಕನ್ನಡತನ ಜಾಗೃತವಾಯಿತು! (ಆದರೆ ಅದು ಮೂಲ ಸಂಸ್ಕೃತ ಅಲ್ಲವೇ) ಕಂಡಕ್ಟರ್ ಸ್ವಲ್ಪ ಮೆತ್ತಗಾದ ಹಾಗೆ ಕಂಡಿತು. ಒಬ್ಬರು ಮೆತ್ತಗಾದರೆ ಉಳಿದವರು ಜೋರಾಗುವುದು ಸಹಜವಲ್ಲವೇ. ಡ್ರೈವರ್ ಕೂಡಾ ಬಸ್ ನಿಲ್ಲಿಸಿ ಸಮಾಧಾನ ಮಾಡಲು ಶುರು ಮಾಡಿದ. ಯಾರೂ ಜಗ್ಗಲಿಲ್ಲ. “ರೀ ನಮಗೆ ಕೆಲಸ ಇದೆ ನಡೀರಿ” ಎಂದು ಕೆಲವರು ಹೊಸದಾಗಿ ಶುರು ಹಚ್ಚಿಕೊಂಡರು. ಹಾಗೆಯೇ ಕೆಲವರು ಮಹಿಳೆಯರಿಗೆ ಫ್ರೀ ಬಸ್ ಪರ ಹಾಗು ವಿರೋಧ ಮಾತನಾಡಲು ಶುರು ಮಾಡಿದರು. ಒಬ್ಬ ಮಹಾಶಯ “ಫ್ರೀ ಯಾವುದೂ ಕೊಡಬಾರದು, ಕೊಡೋದೇ ಆದರೆ ಎಜುಕೇಶನ್, ಆಸ್ಪತ್ರೆ ಇದೆರಡು ಮಾತ್ರ ಫ್ರೀ ಕೊಡಬೇಕು” ಎಂದರೆ ಇನ್ನೊಬ್ಬರು “ಕೊಡಲಿ ಆದರೆ ಎಲ್ಲರಿಗೂ ಕೊಡಬಾರದು…. ತೀರ ವಯಸ್ಸಾದವರಿಗೆ, ಅವಶ್ಯಕತೆ ಇರುವವರಿಗೆ, ಶಾಲೆಯ ಮಕ್ಕಳಿಗೆ ಕೊಡಲಿ” ಎಂದರು. ಮತ್ತೊಬ್ಬರು “ಫ್ರೀ ಕೊಟ್ಟರೆ ತಪ್ಪೇನಿಲ್ಲ ಆದರೆ ನಾವು ಅದರ ದುರುಪಯೋಗಪಡಿಸಿಕೊಳ್ಳಬಾರದು” ಎಂದರು. ಹೀಗೆ ತಲೆಗೆ ಒಂದು ಮಾತು ಶುರುವಾಯಿತು.
ಕಂಡಕ್ಟರ್ ಒಂದು ನಿರ್ಧಾರಕ್ಕೆ ಬಂದ. ಪೊಲೀಸರು ಬರಲಿ ಅವರೇ ನಿರ್ಧರಿಸಲಿ ಎಂದು ಬಸ್ ನಿಲ್ಲಿಸಲು ಡ್ರೈವರ್‌ಗೆ ಸೂಚಿಸಿದ. ಆದರೂ ಬಸ್ ನಿಲ್ಲಲಿಲ್ಲ. ಪೋಲೀಸರ ಪ್ರವೇಶ ಮಾತಿನಲ್ಲಿ ಆದದ್ದಕ್ಕೆ, ಈ ಮೂವರು “ಕರೆಸಯ್ಯ ನಾವು ನೋಡದೆ ಇರೋ ಪೋಲಿಸ್ರಾ… ಹೆದರಿಸ್ತೀಯಾ? ಕರೆಸೆ ಬಿಡು” ಎಂದು ದುಂಬಾಲು ಬಿದ್ದರು. (ಹಾಗೆ ನಟಿಸಿದರು) ಒಂದು ಸ್ಟಾಪ್ ಮುಂದೆ ಬಂದ ಬಸ್ ಅನಿವಾರ್ಯವಾಗಿ ನಿಲ್ಲಿಸಬೇಕಾಯಿತು. ಐದು ನಿಮಿಷದಿಂದ ಯಾರಿಗೋ ಫೋನ್ ಮಾಡುತ್ತಾನೆ ಇದ್ದ ಕಂಡಕ್ಟರ್ “ಪೊಲೀಸರು ಬರ್ಲಿ; ಗೊತ್ತಾಗುತ್ತೆ” ಎನ್ನುತ್ತಾ. ಬಸ್ ಅನಿವಾರ್ಯವಾಗಿ ನಿಂತಿತು. ಕೆಲವರು ಇಳಿಯತೊಡಗಿದರು. ನಲವತ್ತರ ಓಬವ್ವ ಡ್ರೈವರ್ ಬಳಿ ಬಂದು “ಡೋರ್ ಕ್ಲೋಸ್ ಮಾಡ್ರೀ… ಯಾರೂ ಇಳಿಯೋದು ಬೇಡ” ಎಂದಳು. ಬಹುಶಃ ತನ್ನ ಪರವಾಗಿ ಸಾಕ್ಷಿ ಹೇಳಬಹುದು ಎಂಬ ನಂಬಿಕೆಯಿಂದ. ಅವರವರಿಗೆ ಅವರವರ ಚಿಂತೆ, ತಾಪತ್ರಯ. ಮೊದಲೇ ಕೆಲವರು ಕಂಡಕ್ಟರ್ ಪರವಾಗಿದ್ದರು, ಆಯಮ್ಮ ಮುಷ್ಟಿಬಿಗಿದು ಮೂತಿಗೆ ಗುದ್ದಲು ಹೋಗಿದ್ದಾಗ ಕಂಡಕ್ಟರ್ ಪರವಾಗಿದ್ದವರ ಸಂಖ್ಯೆ ಜಾಸ್ತಿಯಾಗಿತ್ತು, ಈಗ ಅದು ಇನ್ನಷ್ಟು ಹೆಚ್ಚಾಯಿತು. “ಅಯ್ಯೋ ಹೋಗಮ್ಮ ನಿಮ್ ಕಿರಿಕಿರಿಗೆ ನಾವೇನ್ ಮಾಡೋಣ” ಅಂತ ಒಬ್ಬೊಬ್ಬರೇ ಬಹಳಷ್ಟು ಜನ ಇಳಿದೆ ಬಿಟ್ಟರು. ತಕ್ಷಣವೇ ಅಲ್ಲಿ ಬಂದು ನಿಂತ ಬಸ್ಸಿಗೆ ಬಹಳಷ್ಟು ಜನ ಹತ್ತಿಯೇಬಿಟ್ಟರು, ನಮ್ಮನ್ನೂ ಸೇರಿಸಿ! ಅಲ್ಲಿಯೂ ಅಲ್ಲಿದ್ದ ಕಂಡಕ್ಟರ್ ಬಳಿ ಈ ವಿಷಯ ವಿವರಿಸತೊಡಗಿದರು. ಬಹಳಷ್ಟು ಜನ ಕಂಡಕ್ಟರ್ ಪರವಾಗಿಯೇ ಇದ್ದರು. ಈ ಬಸ್ ಎಂಟನೇ ಮೈಲಿ ದಾಟುವ ಮೊದಲೇ ಹಿಂದಿನ ಬಸ್ ಪಾಸಾಯಿತು! ನೋಡಿದರೆ ಕಂಡಕ್ಟರ್ ಡ್ರೈವರ್ ಇಬ್ಬರೇ ಇದ್ದರು!
ನನಗೆ ಯೋಚನೆ ಶುರುವಾಯಿತು. ಪಾಪಪ್ರಜ್ಞೆ ಕಾಡತೊಡಗಿತು. ನಾನು ಅಲ್ಲಿಯೇ ಇದ್ದು ನ್ಯಾಯ ತೀರ್ಮಾನ ಆಗುವವರೆಗೂ ಉಳಿಯಬೇಕಿತ್ತಲ್ಲವೇ! ಏನೆಂದರೂ ಕಾರ್ಯನಿರತ ಕಂಡಕ್ಟರ್ ಮೇಲೆ ಅವರು ಮೂವರು ಹರಿಹಾಯ್ದ ರೀತಿ, ಉಳಿದ ಮಹಿಳೆಯರು ಕಂಡಕ್ಟರ್ ಬಗ್ಗೆ ತೋರಿದ ಸಹಾನುಭೂತಿ, ನನ್ನ ಬಳಿ ತುಸು ಒರಟುತನ ತೋರಿದರೂ ನಾನು ಕಂಡಕ್ಟರ್ ಪರ ವಾಲುವಂತಾಯಿತು. ನಾನಿದ್ದು ಸಾಕ್ಷಿ ಹೇಳಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕಿತ್ತೇ? ಅಥವಾ ನಾನು ಹಾಗೆ ಮಾಡಲು ಹೋಗಿ ಆ ಮೂವರು ಪ್ರಯಾಣಿಕರ ಕಡೆಯವರು ನನಗೆ ತದುಕಿ ಕಳಿಸಿದ್ದರೆ?! ನನ್ನ ಶ್ರೀಮತಿ ನನ್ನನ್ನು ಒಬ್ಬನೇ ಬಿಟ್ಟುಹೋಗುತ್ತಿರಲಿಲ್ಲ! ಅಥವಾ ಆ ಮೂವರು ಹೀಗೆ ಬೈದುಕೊಂಡೆ ಉಪಾಯವಾಗಿ ಅಲ್ಲಿಂದ ಪರಾರಿ ಆದರೆ? ಪೊಲೀಸರು ಬಂದರೆ ಇನ್ನೆಲ್ಲಿಯ ಗ್ರಹಚಾರ! ಎಂದು. ಅಥವಾ ಅವರನ್ನೆಲ್ಲ ಹೇಗೋ ಸಾಗಹಾಕಿ ಡ್ರೈವರ್, ಕಂಡಕ್ಟರ್ ಡಿಪೋಬಳಿ ಗಾಡಿ ಕೊಂಡು ಹೋದರೆ?! ಎಲ್ಲಾ ಅಯೋಮಯ ಎನಿಸಿ, ಇದನ್ನು ಹೇಳಿದರೆ ನನ್ನ ಶ್ರೀಮತಿ “ಇನ್ನೆರಡು ಮೂರು ದಿನ ನೀವು ಕೊರಗಿ ಕೂರಲು ಇಷ್ಟುಸಾಕು” ಎಂದಾಳು ಎಂದು ಸುಮ್ಮನಾದೆ.

ವಸಂತಕುಮಾರ್ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ‘ಬಾಲರಾಜನೂ ಕ್ರಿಕೆಟ್ಟಾಟವೂ’ ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. ‘ಕಾಂಚನ ಮಿಣಮಿಣ’ (ಸಣ್ಣಕಥಾ ಸಂಕಲನ) ‘ಪರ್ಯಾಪ್ತ’ ಪ್ರಕಟಿತ ಕಥಾ ಸಂಕಲನಗಳು.