ವರ್ತಮಾನದ ಕಾಲದೊಳಗೆ ಇಣುಕಿ ನೋಡುವ, ಜೀವನದ ಜಾಲದಲ್ಲಿ ತನ್ನ ಸ್ಥಾನವನ್ನು ನಿರ್ಧರಿಸಿಕೊಳ್ಳುವಂತಹ ತನ್ನ ಸರಳ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಆತುರಪಡದೆ ಸಾವಕಾಶವಾಗಿ ಎಲ್ಲವನ್ನೂ ಹತ್ತಿರದಿಂದ ನೋಡುತ್ತಾರೆ, ವಸ್ತುಗಳು, ಪರಿಕಲ್ಪನೆಗಳು, ಘಟನೆಗಳನ್ನು ಸೂಕ್ಷ್ಮವಾಗಿ ಆಲಿಸುತ್ತಾರೆ ಮತ್ತು ಪ್ರತಿಯೊಂದೂ ತನ್ನ ಜ್ಞಾನವನ್ನು ತನಗೆ ಬಹಿರಂಗಪಡಿಸಲು ಅವಕಾಶ ಮಾಡಿಕೊಡುತ್ತಾರೆ. ನಂತರ ಅವರು ಆ ಜ್ಞಾನವನ್ನು ಒಂದು ‘ಎಕ್ಯಾಟರೀನಾ ಯೊಸಿಫೋವಾ’ ಕವಿತೆಯ ರೂಪದಲ್ಲಿ ನಮಗೆ ಪ್ರಸ್ತುತಪಡಿಸಲು ಸಾಧ್ಯವಾಗುವವರೆಗೆ ಹಿಡಿದಿಟ್ಟುಕೊಳ್ಳುತ್ತಾರೆ…
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಬಲ್ಗೇರಿಯಾ ದೇಶದ ಕವಿ ಎಕ್ಯಾಟರೀನಾ ಯೊಸಿಫೋವಾ-ರವರ
(Ekaterina Yosifova) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
1941-ರಲ್ಲಿ ಕ್ಯುಸ್ಟೆಂಡಿಲ್ (Kyustendil) ನಗರದಲ್ಲಿ ಜನಿಸಿದ ಎಕ್ಯಾಟರೀನಾ ಯೊಸಿಫೋವಾ, ಬಲ್ಗೇರಿಯಾ ದೇಶದ ರಾಜಧಾನಿ ಸೋಫಿಯಾ ನಗರದಲ್ಲಿರುವ ಸೆಂಟ್ ಕ್ಲಿಮೆಂಟ್ ಒಹ್ರಿಡ್‌ಸ್ಕಿ ವಿಶ್ವವಿದ್ಯಾಲಯದಿಂದ 1964-ರಲ್ಲಿ ರಷ್ಯನ್ ಫಿಲಾಲಜಿ ವಿಷಯದಲ್ಲಿ ಬಿ.ಎ. ಪದವಿ ಪಡೆದರು. ಕ್ಯುಸ್ಟೆಂಡಿಲ್ ನಗರದಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿದ್ದಾಗ ಅವರು Kuso Putuvane (Brief Journey, 1969) ಹಾಗೂ Noshtem ide Vyatur (The Wind Comes at Night, 1972) ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದರು. ಸರಕಾರಿ ಅಧಿಷ್ಠಾನದಿಂದ ಟೀಕೆಗೊಳಪಟ್ಟರೂ ಮುಕ್ತಮನಸ್ಸಿನ ಓದುಗರು ಈ ಸಂಕಲನಗಳನ್ನು ಉತ್ಸಾಹದಿಂದ ಸ್ವಾಗತಿಸಿದರು, ಓದಿದರು. Posveshtenie (Dedication, 1979), Kushta v Poleto (House in the Field, 1983), ಹಾಗೂ Imena (Names, 1984) ಎಂಬ ಅವರ ಮುಂದಿನ ಕವನ ಸಂಗ್ರಹಗಳಲ್ಲಿ, ಪ್ರಕೃತಿಯಿಂದ ಅಥವಾ ದೈನಂದಿನ ದಿನಚರಿಯಿಂದ ತೆಗೆದ ರೂಪಕಗಳಿಗೆ ಸಾಂಕೇತಿಕ ಮಹತ್ವವನ್ನು ತುಂಬುವ ಅನಿರೀಕ್ಷಿತ ಮಾರ್ಗಗಳನ್ನು ಯೊಸಿಫೋವಾ ಕಂಡುಕೊಳ್ಳುತ್ತಾರೆ. Podozreniya (Suspicions, 1993) ಹಾಗೂ Nenuzhno Povedenie (Useless Conduct, 1994) ಸಂಕಲನಗಳ ನಿರುತ್ಸಾಹಕರ ಮನಸ್ಥಿತಿಯನ್ನು ಉಲ್ಲಾಸದಿಂದ ಕೂಡಿದ Prikazka za Drakoncheto Poli (Tale about the Little Dragon Poli, 1995) ಸಂಕಲನ ಭಾಗಶಃ ಸರಿದೂಗಿಸುತ್ತದೆ.
ಎಕ್ಯಾಟರೀನಾ ಯೊಸಿಫೋವಾರವರ ಹಲವಾರು ಕವನಗಳನ್ನು ಇಂಗ್ಲಿಷಿಗೆ ಅನುವಾದಿಸಿದ ಹಾಗೂ “ದ ಸೀಜ಼ನ್ ಆಫ಼್ ಡೆಲಿಕೆಟ್ ಹಂಗರ್” ಎಂಬ ಇಂಗ್ಲಿಷ್ ಅನುವಾದಿತ ಸಮಕಾಲೀನ ಬಲ್ಗೇರಿಯನ್ ಕವಿತೆಗಳ ಸಂಗ್ರಹದ ಸಂಪಾದಕರು ಹಾಗೂ ಅನುವಾದಕರಾದ ಕ್ಯಾಟರೀನಾ ಸ್ಟೊಯ್ಕೋವಾ-ಕ್ಲೆಮೆರ್-ರವರು ಯೊಸಿಫೋವಾರವರ ಕಾವ್ಯದ ಬಗ್ಗೆ ಮಾತನಾಡತ್ತಾ ಅವರ ಎರಡು ಕವನಗಳನ್ನು ವಿಶ್ಲೇಷಿಸುತ್ತಾರೆ: “ಎಕ್ಯಾಟರೀನಾ ಯೊಸಿಫೋವಾ ಎಲ್ಲರ ಅಚ್ಚುಮೆಚ್ಚಿನ ಹಾಗೂ ಗೌರವಾನ್ವಿತ ಬಲ್ಗೇರಿಯನ್ ಕವಿ. ವರ್ತಮಾನದ ಕಾಲದೊಳಗೆ ಇಣುಕಿ ನೋಡುವ, ಜೀವನದ ಜಾಲದಲ್ಲಿ ತನ್ನ ಸ್ಥಾನವನ್ನು ನಿರ್ಧರಿಸಿಕೊಳ್ಳುವಂತಹ ತನ್ನ ಸರಳ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಆತುರಪಡದೆ ಸಾವಕಾಶವಾಗಿ ಎಲ್ಲವನ್ನೂ ಹತ್ತಿರದಿಂದ ನೋಡುತ್ತಾರೆ, ವಸ್ತುಗಳು, ಪರಿಕಲ್ಪನೆಗಳು, ಘಟನೆಗಳನ್ನು ಸೂಕ್ಷ್ಮವಾಗಿ ಆಲಿಸುತ್ತಾರೆ ಮತ್ತು ಪ್ರತಿಯೊಂದೂ ತನ್ನ ಜ್ಞಾನವನ್ನು ತನಗೆ ಬಹಿರಂಗಪಡಿಸಲು ಅವಕಾಶ ಮಾಡಿಕೊಡುತ್ತಾರೆ. ನಂತರ ಅವರು ಆ ಜ್ಞಾನವನ್ನು ಒಂದು ‘ಎಕ್ಯಾಟರೀನಾ ಯೊಸಿಫೋವಾ’ ಕವಿತೆಯ ರೂಪದಲ್ಲಿ ನಮಗೆ ಪ್ರಸ್ತುತಪಡಿಸಲು ಸಾಧ್ಯವಾಗುವವರೆಗೆ ಹಿಡಿದಿಟ್ಟುಕೊಳ್ಳುತ್ತಾರೆ – ಪ್ರಸ್ತುತಪಡಿಸಿದಾಗ, ತನ್ನನ್ನೇ ನೋಡಿ ಕಣ್ಣು ಮಿಟುಕಿಸಬಲ್ಲ ಒಂದು ಅರಿವಿನ ರತ್ನದಂತಹ ಕೃತಿ, ನಂತರದ ಓದುವಿಕೆಗಳಲ್ಲಿ ಹೆಚ್ಚುವರಿ ಪದರಗಳನ್ನು ಪ್ರದರ್ಶಿಸುವ ಎರಡು ಆಯಾಮದ ಕೃತಿಯೊಂದು ತಯಾರಾಗುತ್ತದೆ. “I assume a comfortable position” (ಒರಗಿರುವೆ ನಾನು ಆರಾಮವಾಗಿ) ಹಾಗೂ ”Word Web” (ಪದಜಾಲ) ಎಂಬ ಎರಡು ಕವಿತೆಗಳು ಯೊಸಿಫೋವಾ-ರವರ ಈ ತರಹದ ಕವಿತೆಗಳ ಇತ್ತೀಚಿನ ಮಾದರಿಯಾಗಿದೆ. “ಒರಗಿರುವೆ ನಾನು ಆರಾಮವಾಗಿ” ಎಂಬ ಕವನದಲ್ಲಿ ಅವರು ಓದುವ ಮತ್ತು ನಮ್ಮ ಸ್ವಂತ ಆಧ್ಯಾತ್ಮಿಕ ಮತ್ತು ಬೌದ್ಧಿಕ ಅಗತ್ಯಗಳನ್ನು ಪೂರೈಸುವ ಶಾಂತ, ಅಹಿಂಸಾತ್ಮಕ ಬಂಡಾಯದ ಬಗ್ಗೆ ಮಾತನಾಡುತ್ತಾರೆ. “ಪದಜಾಲ” ಕವನದಲ್ಲಿ, ತನ್ನದೇ ಆದ ಪ್ರತ್ಯೇಕತೆಯನ್ನು ಗೌರವಿಸುವ ಮತ್ತು ತನ್ನದೇ ಆದ ನಿಯಮಗಳ ಮೇಲೆ ತನ್ನ ಜೀವನವನ್ನು ನಡೆಸಲು ನಿರ್ಧರಿಸುವ ಒಬ್ಬ ಮಹಿಳೆಯನ್ನು ನಾನು ನೋಡುತ್ತೇನೆ. ಎರಡೂ ಕವನಗಳಲ್ಲಿ ಹಾಸ್ಯವಿದೆ, ಮತ್ತು ಆತ್ಮಪ್ರತಿಷ್ಠೆಯ ಸಂಪೂರ್ಣ ಕೊರತೆಯು ಓದುಗರ ದೃಷ್ಟಿಯಲ್ಲಿ ಕವನಗಳನ್ನು ಹೆಚ್ಚು ಮಹತ್ವಪೂರ್ಣವಾಗಿ ಮಾಡುತ್ತದೆ.”
1971-ರಿಂದ ಯೊಸಿಫೋವಾರವರು ಕ್ಯುಸ್ಟೆಂಡಿಲ್-ನಲ್ಲಿ ದಿನಪತ್ರಿಕೆಯ ಸಂಪಾದಕರಾಗಿ ಹಾಗೂ ರಂಗಭೂಮಿಯ ಸಲಹೆಗಾರರಾಗಿ ಕೆಲಸ ಮಾಡಿದರು. ಇದರ ನಂತರ ಅವರು ಬಹಳ ವರ್ಷಗಳ ಕಾಲ ‘ಸ್ಟ್ರೂಮಾ’ (Struma) ಎಂಬ ಸಾಹಿತ್ಯ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿದರು. ಹದಿಮೂರು ಕವನ ಸಂಕಲನಗಳಲ್ಲದೆ, ಗದ್ಯ ಪುಸ್ತಕಗಳನ್ನು ಸಹ ಪ್ರಕಟಿಸಿದ ಯೊಸಿಫೋವಾರವರು ಹಲವಾರು ಸಾಹಿತ್ಯಿಕ ಬಹುಮಾನಗಳಿಗೆ ಪಾತ್ರರಾಗಿದ್ದಾರೆ. ಅವರು ಪಡೆದ ಸನ್ಮಾನಗಳಲ್ಲಿ ಕೆಲವು ಪ್ರಮುಖವಾದ ಪ್ರಶಸ್ತಿಗಳು – 1984-ರಲ್ಲಿ ಯೂನಿಯನ್ ಆಫ಼್ ಬಲ್ಗೇರಿಯನ್ ರೈಟರ್ಸ್-ರವರು ನೀಡಿದ ವಾರ್ಷಿಕ ಕಾವ್ಯ ಪ್ರಶಸ್ತಿ, 1998-ರಲ್ಲಿ ಅಸೋಸಿಯೇಶನ್ ಆಫ಼್ ಬಲ್ಗೇರಿಯನ್ ರೈಟರ್ಸ್-ರವರ ವಾರ್ಷಿಕ ಪ್ರಶಸ್ತಿ, 1999-ರಲ್ಲಿ ಜೀವಮಾನ ಸಾಹಿತ್ಯ ಸಾಧನೆಗಾಗಿ ಇವಾನ್ ನಿಕೊಲೊವ್ ಪ್ರಶಸ್ತಿ, 2014-ರಲ್ಲಿ ಸೊಫಿಯಾ ವಿಶ್ವವಿದ್ಯಾಲಯ ನೀಡಿದ ಸಾಹಿತ್ಯಕ್ಕಾಗಿ ಅತ್ಯುಚ್ಚ ಪ್ರಶಸ್ತಿ (Grand Prix). ಯೊಸಿಫೋವಾರವರ ಕವನಗಳನ್ನು ಇಂಗ್ಲಿಷ್, ಜರ್ಮನ್, ರಷ್ಯನ್, ಇಟ್ಯಾಲಿಯನ್, ಹಂಗೇರಿಯನ್, ಫ್ರೆಂಚ್, ಡಚ್, ಕ್ರೊಯೇಶಿಯನ್, ಟರ್ಕಿಷ್ ಸೇರಿದಂತೆ ಬಹಳಷ್ಟು ಭಾಷೆಗಳಿಗೆ ಅನುವಾದಿಸಲಾಗಿದೆ. 2022-ರ ಆಗಸ್ಟ್ ತಿಂಗಳಲ್ಲಿ ಎಕ್ಯಾಟರೀನಾ ಯೊಸಿಫೋವಾರವರು ತಮ್ಮ 81-ನೆಯ ವಯಸ್ಸಿನಲ್ಲಿ ಕಾಲವಾದರು.
ನಾನು ಇಲ್ಲಿ ಕನ್ನಡ ಭಾಷೆಗೆ ಅನುವಾದಿಸಿರುವ ಎಕ್ಯಾಟರೀನಾ ಯೊಸಿಫೋವಾರವರ ಎಲ್ಲಾ ಎಂಟು ಕವನಗಳನ್ನು ಕ್ಯಾಟರೀನಾ ಸ್ಟೊಯ್ಕೋವಾ-ಕ್ಲೆಮರ್-ರವರು (Katerina Stoykova-Klemer) ಮೂಲ ಬಲ್ಗೇರಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿರುವರು.
೧
ನಿಶ್ಚಿತಗಳು
ಮೂಲ: Givens
ನಿನ್ನಲ್ಲಿ ಒಂದು ಕೊಡಲಿ ಇದೆ, ಮತ್ತೊಂದು ದ್ವೀಪವಿದೆ.
ದ್ವೀಪದಲ್ಲೊಂದು ಮರವಿದೆ.
ಸಾಕು ಒಂದು ದೋಣಿ ಕಟ್ಟಲಿಕ್ಕೆ.
ನೀನು ದೋಣಿಯನ್ನೇರುವೆ.
ನೀನು ದಡವ ದೂಡಿ ಹೋಗುವೆ ಮುಂದೆ
ಆ ಮಾಜಿ ಮರದ ಅತಿ ಗಟ್ಟಿಯಾದ
ಟೊಂಗೆಯ ಹಿಡಿದು.
ಅನುಕೂಲ ಪ್ರವಾಹವೊಂದು ದೋಣಿಯ ಹಿಡಿದೆತ್ತಿ
ಭೂಖಂಡದ ದಡವ ಸೇರಿಸುತ್ತೆ.
ನೀನಲ್ಲಿ ಮನೆ ಮಾಡುವೆ, ಅಲ್ಲ,
ದಡದಲ್ಲಲ್ಲ – ಶಹರದಲ್ಲಿ.
ದೋಣಿ ಎಂದೋ ಲೊಡ್ಡಾಗಿ ಹೋಗಿದೆ.
ನಿನಗೆ ಗೊತ್ತಿಲ್ಲ – ನೀನು ಕೇಳಲ್ಲ –
ಆ ದ್ವೀಪದ ಹೆಸರು.
ಆ ಮರದ ಹೆಸರೂ ಕೂಡ.
೨
ಬೆಳಗ್ಗೆದ್ದು ಕವನವ ಓದುವವ
ಮೂಲ: The one reading a poem
ಬೆಳಗ್ಗೆದ್ದು ಕವನವ ಓದುವನು,
ಹಾಸಿಗೆಯಲ್ಲೇ ಸುಮಾರು ಎಂಟು ನಿಮಿಷಗಳ ಕಾಲ.
ಏಳುತ್ತಾನೆ, ಮಾಡಬೇಕಾದ್ದನ್ನ ಮಾಡುತ್ತಾನೆ,
ಹೊರಗೆ ಹೋಗುತ್ತಾನೆ,
ಉಳಿದ ತಾಸುಗಳನ್ನು ಚೆನ್ನಾಗಿ ತಾಳಿಕೊಳ್ಳುತ್ತಾನೆ.
೩
ಒರಗಿರುವೆ ನಾನು ಆರಾಮವಾಗಿ
ಮೂಲ: I assume a comfortable position
ಮಂಚದ ಮೇಲೆ, ನನ್ನ ಸುತ್ತ ದಿಂಬು,
ಮೆತ್ತನೆಯ ಹೊದಿಕೆ,
ಪುಸ್ತಕಗಳು.
ಬೆಳಕೂ ಚೆನ್ನಾಗಿದೆ.
ಯಾರೂ ಒಳಗೆ ಬರುವುದಿಲ್ಲ,
ಆದರೂ, ಭರವಸೆ ಕಳಕೊಳ್ಳುವುದಿಲ್ಲ ನಾನು.
ಯಾರಾದರೊಬ್ಬರು ಒಳಗೆ ಬಂದು
ಹೀಗೆ ಹೇಳಿ ಆಕ್ಷೇಪಿಸುವರು ಎಂಬ ದೃಢನಂಬಿಕೆ ಇದೆ:
ಈ ಸರಕಾರವೂ ಬಿದ್ದು ಹೋಯಿತು,
ಆಗಿಯೂ ನೀನು ಲಾವೋತ್ಸೆ-ಯನ್ನು ಓದುತ್ತಿರುವೆಯಾ.
ಅದಕ್ಕೆ ನಾನು ಉತ್ತರಿಸುವೆನು:
Exactly!
೪
ಗಾರ್ಹಸ್ಥ್ಯ
ಮೂಲ: Domesticity
ದೀಪ ಬೆಳಗಿಸಿದೆವು, ಪರದೆ ಮುಚ್ಚಿದೆವು.
ಮೊನ್ನೆ, ಬೆನ್ನಚೀಲ ಏರಿಸಿಕೊಂಡವನೊಬ್ಬ
ಹೊರಗೆ ನಡೆದುಕೊಂಡು ಹೋದ.
ಕಿಟಕಿಗಳೊಳಗೆ ನೋಡುತ್ತಾ ಹೋಗುವವರ
ಪೈಕಿಗೆ ಸೇರಿದಂವ.
ಆದರೆ ಒಳಗೆ ಇರಲು ಬಯಸದಂವ.
೫
ದಿನಪತ್ರಿಕೆಯಲ್ಲಿ ಸುದ್ದಿ ಬಂದಿತ್ತು
ಮೂಲ: It was in the Paper
ಮೊದಲ ಪುಟದಲ್ಲಲ್ಲ, ಕೊನೆಯ ಪುಟದಲ್ಲೂ ಅಲ್ಲ,
ಮತ್ತೆ, ಹಾಸ್ಯ ಅಂಕಣಗಳಲ್ಲಲ್ಲ;
ಒಂದು ಗಂಭೀರವಾದ ಪ್ರಕಟಣೆ,
ಈ ಬ್ರಹ್ಮಾಂಡ ತನ್ನ ಬಾಗಿಲನ್ನು ತೆರೆದುಕೊಂಡಿತ್ತಂತೆ,
ಹೌದು ನಿಜವಾಗಲೂ,
ಹಲವು ಯುಗಗಳಿಂದ ಬಗ್ಗದ ಬಾಗಿಲು,
ಅಚಾನಕ್ಕಾಗಿ ಅದರ ಕೀಲುಗಳು ಕಿರುಚುತ್ತವೆ:
ತನ್ನನ್ನು ತಾನು ತೆರೆದುಕೊಳ್ಳುತ್ತದೆ,
ಅನಸ್ತಿತ್ವದ ಅಸ್ತಿತ್ವವನ್ನು ಮನ್ನಿಸಿ ತೆರೆದುಕೊಂಡಿರಬಹುದು,
ಅಥವಾ ಅನಂತದ ಅಂತ್ಯವ ಮನ್ನಿಸಿಯೂ ಇರಬಹುದು,
ನನಗೆ ಸರಿಯಾಗಿ ನೆನಪಿಲ್ಲ,
ಆ ಸುದ್ದಿಯನ್ನು ಕತ್ತರಿಸಿ ಇಟ್ಟುಕೊಳ್ಳಬೇಕೆಂದುಕೊಂಡ್ಡಿದ್ದೆ,
ಆದರೆ ಆ ದಿನಪತ್ರಿಕೆ ನನ್ನದಾಗಿರಲಿಲ್ಲ;
ಇದರ ಬಗ್ಗೆ ಸ್ವಲ್ಪ ಕ್ಲಾರಿಟಿ ಸಿಗಬಹುದಾ?
೬
ಬಿಳಿ ಸರ್ಪ
ಮೂಲ: White Snake
ನಾನೇನು ಮಾಡುತ್ತಿದ್ದೆ,
ಊಹಿಸಿಕೊಳ್ಳುವೆ ನಾನು ಮತ್ತೆ,
ನಾನೊಂದು ಬುದ್ಧಿಯುಳ್ಳ ಸರ್ಪವಾಗಿದ್ದಿದ್ದರೆ!
ಅಂದರೆ,
ನಾನು ಸೇಬನ್ನು ಎತ್ತಿಕೊಳ್ಳುತ್ತಿದ್ದೆ,
ನಾನದನ್ನು ಯಾವುದೋ ತಿಳಿವಿಲ್ಲದ ಹೆಂಗಸಿಗೆ ಕೊಡುತ್ತಿರಲಿಲ್ಲ,
ಆದಮನಿಗಂತೂ ಕೊಡುವ ಮಾತೇ ಇಲ್ಲ; ಆಮೇಲೆ
ನಾನದನ್ನು ತಿನ್ನತೊಡಗುವೆ,
ತನಿಯಾಗಿ,
ಚೂರು ಚೂರಾಗಿ:
ಪ್ರಜ್ಞೆ, ಜ್ಞಾನ,
ಅರಿವು.
೭
ಇಬ್ಬದಿ ಮೊನಚಿನ ಚಾಕು
ಮೂಲ: Double-edged Knife
ಸೇಬು ಹಣ್ಣನ್ನು ಸುಲಿಯಲು ಅನುಕೂಲವಲ್ಲದ ಚಾಕು.
ಪೆನ್ಸಿಲನ್ನು ಚೂಪುಗೊಳಿಸಲೂ ಸಹ.
ಅದಕ್ಕೆ ಕೊಡಲು ನನ್ನಲ್ಲಿ ಏನೂ ಇಲ್ಲ,
ಇರಿಯಲು, ತಿವಿಯಲು,
ಹೆರೆಯಲೂ ಸಹ.
ಆದಾಗ್ಯೂ, ಅದನ್ನು ನೇತು ಹಾಕುವೆ
ಸಿಂಕಿನ ಬದಿಯ ಗೋಡೆಯ ಮೇಲೆ,
ನನ್ನ ಅನಪಾಯಕಾರಿ ಪರಿಸರವನ್ನು
ಕೋಪ, ತಾತ್ಸಾರದಿಂದ ಅದು ನೋಡುತ್ತಿರುವಾಗ,
ನಾನು ಮತ್ತು ಅಲ್ಲಿರುವ ಇತರ ವಸ್ತುಗಳು
ಮುಂದಿನಂತೆಯೇ ಬದುಕ ನಡೆಸುವೆವು,
ಹಾಗೂ ನಮ್ಮ ಪ್ರಪೂರ್ವಜಸದೃಶ
ಒಳಚರ್ಮಗಳೊಳಗೆ ಎಚ್ಚರದಿಂದಿರುವೆವು.
೮
ಪದಜಾಲ
ಮೂಲ: Word Web
ನಾವೆಲ್ಲ
ಸರಿ ಸುಮಾರಾಗಿ ಕಣ್ಣಿಗೆ ಕಾಣಿಸುವ
ಬಣ್ಣಬಣ್ಣದ ದಾರಗಳಿಂದ
ತಲೆಗಳಿಗೆ, ಜೇಬುಗಳಿಗೆ, ಜನನಾಂಗಗಳಿಗೆ,
ಅರಿವೆಗಳಿಗೆ, ಭಾಷೆಗಳಿಗೆ, ಇತ್ಯಾದಿಗಳಿಗೆ
ಸರಿ ಸುಮಾರಾಗಿ
ಬೆಸೆದುಕೊಂಡಿದ್ದೇವೆ, ಎಂದೇ
ಎಲ್ಲವನ್ನೂ ಹೆಣೆಯಲಾದ ಒಂದು
ಸುಂದರವಾದ ಜೇಡರಬಲೆ ಆಗುತ್ತೇವೆ ನಾವು,
ಆದರೂ, ಇಷ್ಟೆಲ್ಲ ಆದ ಮೇಲೂ
ಇದರಲ್ಲಿ ಯಾರೋ ತಪ್ಪಿಹೋಗಿರುತ್ತಾರೆ.
ಯಾಕೆ?
ಯಾರು?
ನಾನೂ ಕೂಡ ಆ ಯಾರೋ
ಆಗಬೇಕೆಂದು ಆಶಿಸುವೆ.

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು. ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು” (ಪೋಲೀಷ್ ಕವಿತೆಗಳ ಕನ್ನಡಾನುವಾದಿತ ಸಂಕಲನ). ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ. ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ ‘ಬಾಲ್ಟಿಕ್ ಕಡಲ ಗಾಳಿ’ ಇತ್ತೀಚೆಗೆ ಪ್ರಕಟವಾಗಿದೆ.