ಶಾಲೆಗೆ ಹೋಗುವಾಗ, ಹಲವೆಡೆ ನಾವು ಇಂಥ ನಯನ ಮನೋಹರ “ಹೂ ರಥ” ನೋಡುತ್ತ ಹೋಗುತ್ತಿದ್ದೆವು. ಈಗಲೂ ಆ ಸುಂದರ ದೃಶ್ಯ ನನ್ನ ಕಣ್ಣಿಗೆ ಕಟ್ಟಿದಂತಿದೆ. ಹಾಗೇ ಇನ್ನೊಂದು ಚಂದದ ಹೂ ಅಂದರೆ, ಚದುರಂಗಿ. ಇದು ತೀರಾ ಪುಟಾಣಿ ಹೂಗಳ ಗೊಂಚಲು. ನಕ್ಷತ್ರದ ಆಕಾರದ ಗಾಢ ಕೇಸರಿ, ಕೆಂಪು ಹೂಗಳ ಚದುರಂಗಿ ಪೊದೆಯಾಗಿ ಬೆಳೆಯುವ ಸಸ್ಯ. ಇದರ ಸಪೂರ ಕಾಂಡಕ್ಕೆ ಸೂಕ್ಷ್ಮ ಮುಳ್ಳುಗಳಿರುತ್ತವೆ. ಇದರ ಹೂ ನೋಡಲು ಬಹಳ ಚಂದ. ಅದಕ್ಕಿಂತಲೂ ಇದರ ಹಣ್ಣು ನನಗೆ ಇಷ್ಟ ಆಗುತ್ತಿತ್ತು.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹನ್ನೊಂದನೆಯ ಕಂತು
ಕಾಡು ಸುಂದರ. ವಿವಿಧ ಜೀವ ವೈವಿಧ್ಯಗಳ ಆಗರ. ಏಕತೆಯ ಸಂಕೇತ. ಸಂಘ ಜೀವನದ ಪಾಠ ಬೋಧಿಸುವ ಪಾಠ ಶಾಲೆ. ವೈರಿಗಳ ಕಣ್ಣಿಗೆ ಮಣ್ಣೆರಚಿ ಬದುಕುವ ಚತುರ ಜೀವ ಲೋಕ. ಹೀಗೇ ಹೇಳುತ್ತ ಹೊರಟರೆ, ಮುಗಿಯಲಾರದಷ್ಟಿದೆ. ಕೆಲವು ನಡವಳಿಕೆಗಳಲ್ಲಿ ಕಾಡಿನ ಲೋಕಕ್ಕೂ ಮನುಷ್ಯ ಲೋಕಕ್ಕೂ ಬಹಳ ಸಾಮ್ಯತೆ ಇದೆ. ದಟ್ಟಡವಿಯಲ್ಲಿ ಒಂದಕ್ಕೊಂದು ಒತ್ತಿ ಬೆಳೆದು ನಿಲ್ಲುವ ಗಿಡಮರಗಳು, ತಮ್ಮ ರೆಂಬೆ ಕೊಂಬೆಗಳನ್ನು ವಿಸ್ತಾರವಾಗಿ ಹರಡಿ ನಿಲ್ಲುವಲ್ಲಿ ಪರಸ್ಪರ ಪೈಪೋಟಿ ನಡೆಸುತ್ತವೆ. ಇಲ್ಲಿ ಬಲವಾದ ಮರ ಮೇಲೆ ಮೇಲೆ ಏರಿ, ಸೂರ್ಯನ ಕಿರಣಕ್ಕೆ ಮೈ ಒಡ್ಡುತ್ತದೆ. ಆಗ ಅದರ ಪಕ್ಕದ್ದಕ್ಕೆ ಸೂರ್ಯ ರಶ್ಮಿಯ ಸ್ಪರ್ಶವಾಗಬೇಕೆಂದರೆ, ಅದನ್ನೂ ಮೀರಿ ಮೇಲೇರಬೇಕು. ಸದಾ ಈ ಪೈಪೋಟಿಯಲ್ಲಿಯೇ ಕಾಡಿನಲ್ಲಿ ಮರಗಳು ಅಷ್ಟುದ್ದ ಬೆಳೆಯುತ್ತವೆ. ಈ ಪೈಪೋಟಿ ಎದುರಿಸಲಾರದ ದುರ್ಬಲ ಸಸ್ಯ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಅದೆಷ್ಟೋ ಸಾರಿ ಕೆಲವು ಸೋಮಾರಿ ಜಾತಿಯ(ಆರ್ಕಿಡ್) ಪರಾವಲಂಬಿ ಸಸ್ಯಗಳು ಇಂಥ ಬಲವಾದ ಮರಗಳ ಮೈಗಂಟಿ, ಕೊನೆಗೆ ಅದರೊಡಲೊಳಗೆ ಬೇರು ಬಿಟ್ಟು, ಅದರ ಅಡಿಗೆಯನ್ನೇ ಕದ್ದುಂಡು, ಮೆರೆಯುವುದನ್ನೂ ನಾವು ಧಾರಾಳವಾಗಿ ನೋಡಬಹುದು. ಇವು ಎಷ್ಟೋ ವಾಸಿ. ಆಲ, ಅಶ್ವತ್ಥದಂತಹಾ ಬೃಹತ್ ಜಾತಿಯ ಮರದ ಬೀಜ ಅದ್ಯಾವುದೋ ಕರಾಮತ್ತಿನಿಂದ ದೊಡ್ಡ ಮರದ ಪೊಟರೆ ಸೇರಿ, ಕಾದು ಕೂತು, ಕದ್ದು ಮೊಳಕೆಯೊಡೆದು, ಕಳ್ಳನಂತೇ ಒಳಗೇ ಆಕ್ರಮಿಸಿ, ಒಂದುದಿನ ಆ ಬೃಹತ್ ಮರದ ಹೊಟ್ಟೆ ಸೀಳಿ ತನ್ನ ರೆಂಬೆ ಕೊಂಬೆಗಳನ್ನು ಚಾಚುತ್ತ, ಕೊನೆಗೊಂದು ದಿನ ಆ ಮೂಲ ಮರದ ಅಸ್ತಿತ್ವವನ್ನೇ ಅಳಿಸಿಬಿಡುವ ಚತುರತೆ (ಧೂರ್ತತೆ)ಯನ್ನು ಅಲ್ಲಿ ನಾವು ನೋಡಬಹುದು. ನೋಡಿ, ಮನುಷ್ಯ ಲೋಕದ ಬಹುತೇಕ ಲಕ್ಷಣಗಳು ಅಲ್ಲೂ ಕಂಡುಬರುತ್ತವೆ ಅನ್ನುವುದಕ್ಕೆ ಇಷ್ಟು ಉದಾಹರಣೆ ಸಾಕಲ್ಲವೆ?
ನಮ್ಮೂರ ಕಾಡುಗಳಲ್ಲಿ ಇಂಥ ವಿಸ್ಮಯ ನೋಡುತ್ತಲೇ ಬೆಳೆದವರು ನಾವು. ನಮ್ಮ ಕಾಡಲ್ಲಿ ಮತ್ತಿ, ಹೊನ್ನೆ, ಬೀಟೆ, ಎತ್ತುಗಲ, ಬಿಲ್ಕಂಬಿ ಹೀಗೇ ನಾನಾ ಜಾತಿಯ ಮರಗಳಿದ್ದವು. ಇವು ‘ಕ್ಲಾಸ್ ವನ್’ ಅಂದರೆ ಉಚ್ಛ ವರ್ಗಕ್ಕೆ ಸೇರಿದವು. ಇನ್ನು ಅದರ ನಂತರದ ಶ್ರೇಣಿ ಎಂದರೆ, ಕಣಗಲ, ಕಾರೆ, ಮುತ್ತುಗ, ಕಾಸರಕ, ತಾರೆ, ಹೆಬ್ಬಲಸು, ನೆಲ್ಲಿ, ಚಂದಕಲು ಇತ್ಯಾದಿ… ಇತ್ಯಾದಿ… ಇವುಗಳನ್ನು ಎರಡನೆ ವರ್ಗಕ್ಕೆ ಸೇರಿಸಬಹುದು. ಇನ್ನು ಗಿಡ ಗಂಟಿಗಳು, ಬಳ್ಳಿಗಳು, ಮುಳ್ಳು ಪೊದೆಗಳಂತೂ ಹೆಸರಿಸಲಾರದಷ್ಟು ಅಸಂಖ್ಯವಾಗಿದ್ದವು. ಅದರಲ್ಲಿ ಒಂದಿಷ್ಟು ವಿಶೇಷ ಗಿಡ ಬಳ್ಳಿಗಳ ಬಗ್ಗೆ ಹೇಳುವ ಪ್ರಯತ್ನ ಮಾಡುತ್ತೇನೆ. ಇದರಲ್ಲಿ ಕೆಲವೊಂದು ಜಾತಿಯ ಹೂ ಗಿಡಗಳಂತೂ, ನನ್ನ ಬಾಲ್ಯದ ನೆನಪುಗಳನ್ನು ತಾಜಾಗೊಳಿಸುವುದು ಪಕ್ಕಾ.

ಎಲ್ಲಕ್ಕಿಂತ ಮೊದಲು ‘ತಗ್ಗಿ ಗಿಡ’ ದ ಬಗ್ಗೆ ಹೇಳಬೇಕು. ಮಳೆಗಾಲದ ಆರಂಭಕ್ಕೆ ಚಿಗಿತು, ಎರಡು ತಿಂಗಳಿಗೇ ಮೊಳದಷ್ಟೆತ್ತರ ಬೆಳೆದು, ತಲೆಯ ಮೇಲೆ ಹೂ ಕಲಶವಿಟ್ಟುಕೊಂಡಂತೆ, ಮಲ್ಲಿಗೆಯಂಥ ಬೆಳ್ಳನೆಯ ಪುಟ್ಟ ಪುಟ್ಟ ಹೂ, ಮೊಗ್ಗುಗಳ ಗೊಂಚಲನ್ನು ಹೊತ್ತು, ಕಾಲು ಹಾದಿಯ ಅಕ್ಕ ಪಕ್ಕ ಕಾಲೂರಿ ನಿಂತು ಸೆಳೆಯುವ ಈ ತಗ್ಗಿ ಗಿಡದ ಜೊತೆ ನನ್ನ ಬಾಲ್ಯದ ಒಂದು ಸುಂದರ ಅನುಭಾವವಿದೆ. ಈ ಹೂವಿನ ಮಧ್ಯದಲ್ಲಿ ಚಾಕಲೇಟು ಬಣ್ಣದ ಪುಟ್ಟ ಬೊಟ್ಟನ್ನಿಟ್ಟಂತಿದ್ದು, ಅದರಿಂದಲೇ ಹೊರಬರುವ ಉದ್ದುದ್ದ ಕುಸುಮಗಳ ದೇಟು. ಅದರ ತುದಿಗೆ ಅಂಟಿದ ಪರಾಗ. ಅದರ ಮೋಡಿಗೆ ಒಳಗಾಗಿ, ಗುಂಯ್ ಎಂದು ಮುತ್ತುವ ದುಂಬಿಗಳು ಜೇನು ನೊಣಗಳ ಹಿಂಡು. ಶಾಲೆಗೆ ಹೋಗುವಾಗ ಅದನ್ನು ನೋಡುವುದೇ ಒಂದು ವಿಶೇಷ ಆನಂದ. ಆ ಹೂವುಗಳು ದುಂಬಿಗಳನಷ್ಟೇ ಅಲ್ಲ, ನನ್ನನ್ನೂ ಅತಿಯಾಗಿ ಆಕರ್ಷಿಸುತ್ತಿತ್ತು. ಆ ಹೂವಿನ ತುಂಬ ನವಿರಾದ ಗಂಧ ಆಘ್ರಾಣಿಸುವ ಆಸೆ ನನಗೆ. ಮಧ್ಯಾಹ್ನ ಶಾಲೆ ಬಿಟ್ಟು ಊಟಕ್ಕೆ ಹೋಗುವಾಗ, ಬೊಗಸೆ ತುಂಬ ತಗ್ಗಿ ಹೂ ಕೊಯ್ದು ಒಯ್ಯುತ್ತಿದ್ದೆವು. ಬಾಳೆಯ ನಾರಿನಲ್ಲಿ ದಂಡೆ ಕಟ್ಟಿಸಿಕೊಂಡು ತಲೆ ತುಂಬ ಮುಡಿದುಕೊಳ್ಳುವ ಆ ಸಂಭ್ರಮದ ನಡುವೆ, “ಮನೇಲಿ ಇಷ್ಟು ಹೂವು ಇರುವಾಗ, ಆ ಮಳ್ಳು ಕಾಡು ಹೂವು ‘ಸೂಡೋದು’ ಯಂತಕ್ಕೆ?” ಎಂಬ ಆಯಿಯ ಅಸಮಾಧಾನ ನಮ್ಮ ಗಮನಕ್ಕೂ ಬರುತ್ತಿರಲಿಲ್ಲ. ಇನ್ನು ಶಾಲೆಯಲ್ಲಿ ಆಗಸ್ಟ್ ೧೫ ರ ಆಚರಣೆಯ ದಿನವಂತೂ ಧ್ವಜದ ಕಟ್ಟೆಯ ಅಲಂಕಾರಕ್ಕೆ ಆ ಹೂವಿನದೇ ಅಗ್ರಸ್ಥಾನ.
ನನ್ನ ನೆನಪಿನಲ್ಲಿರುವ ಇನ್ನೊಂದು ಬಳ್ಳಿಯೆಂದರೆ, “ಎಮ್ಮೆಯ ಮೊಲೆ” ಹೂವಿನ ಬಳ್ಳಿ. ಇದರ ಮೃದುವಾದ ಉದ್ದವಾದ ನಸು ಬೆಳ್ಳಗಿನ ಮೊಗ್ಗು ಎಮ್ಮೆಯ ಮೊಲೆಯ ಆಕಾರವೇ ಇರುವುದರಿಂದ ಬಹುಶಃ ಈ ಹೆಸರು ಇದಕ್ಕೆ ಬಂದಿರಬಹುದು. ಈ ಬಳ್ಳಿ ಯಾವುದಾದರೂ ಪೊದೆಗೆ ಹಬ್ಬಿ ಮೈತುಂಬ ತಿಳಿ ನೇರಳೇ ಬಣ್ಣದ ದೊಡ್ಡ ದೊಡ್ಡ ಹೂ ಅರಳಿಸಿ ನಿಂತರೆ, ಇಡೀ ಪೊದೆ ಸುಂದರವಾದ ಹೂವಿನ ತೇರಂತೇ ಕಾಣುತ್ತಿತ್ತು. ಶಾಲೆಗೆ ಹೋಗುವಾಗ, ಹಲವೆಡೆ ನಾವು ಇಂಥ ನಯನ ಮನೋಹರ “ಹೂ ರಥ” ನೋಡುತ್ತ ಹೋಗುತ್ತಿದ್ದೆವು. ಈಗಲೂ ಆ ಸುಂದರ ದೃಶ್ಯ ನನ್ನ ಕಣ್ಣಿಗೆ ಕಟ್ಟಿದಂತಿದೆ. ಹಾಗೇ ಇನ್ನೊಂದು ಚಂದದ ಹೂ ಅಂದರೆ, ಚದುರಂಗಿ. ಇದು ತೀರಾ ಪುಟಾಣಿ ಹೂಗಳ ಗೊಂಚಲು. ನಕ್ಷತ್ರದ ಆಕಾರದ ಗಾಢ ಕೇಸರಿ, ಕೆಂಪು ಹೂಗಳ ಚದುರಂಗಿ ಪೊದೆಯಾಗಿ ಬೆಳೆಯುವ ಸಸ್ಯ. ಇದರ ಸಪೂರ ಕಾಂಡಕ್ಕೆ ಸೂಕ್ಷ್ಮ ಮುಳ್ಳುಗಳಿರುತ್ತವೆ. ಇದರ ಹೂ ನೋಡಲು ಬಹಳ ಚಂದ. ಅದಕ್ಕಿಂತಲೂ ಇದರ ಹಣ್ಣು ನನಗೆ ಇಷ್ಟ ಆಗುತ್ತಿತ್ತು. ಪುಟಾಣಿ ಕಾಳು ಮೆಣಸಿನ ಗಾತ್ರದ ಕಪ್ಪು ಹಣ್ಣುಗಳ ಗೊಂಚಲು ಕಂಡರೆ, ಆ ಮುಳ್ಳುಗಳ ನಡುವೆಯೂ ನುಗ್ಗಿ, ಹಣ್ಣು ಕೊಯ್ದು ಚಪ್ಪರಿಸುತ್ತಿದ್ದೆ. ಎಷ್ಟೋ ಸಾರಿ ಅದರ ಎಲೆಯನ್ನೂ ತಿನ್ನುತ್ತಿದ್ದೆ. ದೊರಗಾದ ಇದರ ಎಲೆಗಳು ತುಂಬ ಔಷಧೀಯ ಗುಣ ಹೊಂದಿರುತ್ತವೆ. ಬಿದ್ದ ಗಾಯ, ತರಚು ಗಾಯಕ್ಕೆಲ್ಲ ಇದರ ಎಲೆಯ ರಸ ಹಚ್ಚುವ ಪದ್ಧತಿ ಇತ್ತು. ನಾವೆಲ್ಲ ಎಲ್ಲಿ ಬಿದ್ದು ಗಾಯ ಮಾಡಿಕೊಂಡರೂ, ಈ ಎಲೆ ರಸ ಸವರಿಕೊಂಡು, ಗಾಯ ಶಮನಮಾಡಿಕೊಂಡು ಹಿರಿಯರ ಬೈಗುಳದಿಂದ ಪಾರಾಗುತ್ತಿದ್ದೆವು.

ಹಾಂ.. ನನ್ನ ಬಾಲ್ಯದ ಮುಗ್ಧತೆಯ ಜೊತೆ ನಂಟು ಇದ್ದ ಇನ್ನೊಂದು ಜಾತಿಯ ಮರದ ಕುರಿತು ಹೇಳಬೇಕು. ಅದು ಕಾಸರಕ (ಬಹುಶಃ) ಮರ. ನಾನು ಶಾಲೆಗೆ ಹೋಗುವ ದಾರಿಗುಂಟ ಎತ್ತರವಾದ ಎರಡು ಮೂರು ಮರಗಳು ಇದ್ದವು. ಅದರಲ್ಲಿ ಗೋಲಾಕಾರದ ಕಾಯಿ ಆಗುತ್ತಿತ್ತು. ಛಳಿಗಾಲದಲ್ಲಿ ಅದು ಒಣಗಿ, ಒಡೆದು ಅದರ ಬೀಜ ದಾರಿಯಲ್ಲಿ ಬಿದ್ದಿರುತ್ತಿತ್ತು. ನಸು ಬೆಳ್ಳಗೆ, ಹೆಚ್ಚೂ ಕಮ್ಮಿ ಎರಡು ಪೈಸೆಯಾಕಾರವಿದ್ದ ಆ ಬೀಜವೆಂದರೆ ನಮಗೆಲ್ಲ ಅದೆಷ್ಟು ಪ್ರೀತಿಯಾಗಿತ್ತು ಗೊತ್ತೆ!! ಅದನ್ನು ನಾವೆಲ್ಲ “ಪೈಸೆ” ಎಂದೇ ಕರೆಯುತ್ತಿದ್ದುದು. ದಿನಾ ಶಾಲೆ ಬಿಟ್ಟು ಬರುವಾಗ ಆ ಬೀಜ ಆರಿಸಿಕೊಂಡು, ಅಂಗಿಯ ಮಡಿಲಲ್ಲಿ ತುಂಬಿಕೊಳ್ಳುತ್ತಿದ್ದೆವು. ನಂತರ ಎಣಿಸಿ, “ನನ್ನಲ್ಲಿ ಇಷ್ಟು ಪೈಸೆ ಇದೆ ನೋಡೇ” ಎಂದು ಪರಸ್ಪರ ಹೆಮ್ಮೆಯಿಂದ ಗೆಳತಿಯರಿಗೆಲ್ಲ ತೋರಿಸಿ, ಜಂಭಕೊಚ್ಚಿಕೊಳ್ಳುತ್ತಿದ್ದೆವು. ಅವತ್ತು ಕಡಿಮೆ “ಪೈಸೆ” ಸಿಕ್ಕವರಿಗೆ ಒಂಥರಾ ಬೇಜಾರು. ಅಳು ಎಲ್ಲ ಬರುತ್ತಿತ್ತು. ಮರುದಿನ ಅವರು ಎಲ್ಲರಿಗಿಂತ ಮೊದಲು ಆರಿಸಿಕೊಂಡು, ಮಡಿಲು ತುಂಬಿಸಿಕೊಂಡು ಬೀಗುತ್ತಿದ್ದರು. ಒಮ್ಮೊಮ್ಮೆ ನನಗಂತೂ “ಇದು ನಿಜವಾಗಲೂ ಪೈಸೆಯೇ ಇರಬಹುದಾ?” ಎಂದೆನ್ನಿಸಿಬಿಡುತ್ತಿತ್ತು.
ಮುಂದುವರಿಯುವುದು…

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.
