Advertisement
ಸುವರ್ಣ ಚೆಳ್ಳೂರು ಹೊಸ ಸರಣಿ “ಆಕಿ” ಇಂದಿನಿಂದ

ಸುವರ್ಣ ಚೆಳ್ಳೂರು ಹೊಸ ಸರಣಿ “ಆಕಿ” ಇಂದಿನಿಂದ

ಆ ಕತಿ ಮತ್ತೆ ಆ ಬಾಯೊಳಗೆ ಮುರಿದ ಕಾಲಿಟ್ಟ ಚಿತ್ರ ನನ್ನೊಳಾಗ ಒಂದಷ್ಟು ಪ್ರಶ್ನೆಗಳನ್ನ ಹುಟ್ಟಿಸಿತು. ಅದನ್ನೆ ಯೋಚಿಸ್ತಿರುವಾಗ ಊರೊಳಾಗ ದೇವಿ ಮೆರವಣಿಗೆ ಬಂದಿತ್ತು, ನೋಡೊಕಂತ ಹೋದಾಗ ಹಳೆ ಗೆಳತ್ಯಾರೆಲ್ಲ ಸಿಕ್ಕಿದ್ದು, ಮನಿಯೊಳಾಗ ಕೆಲಸ ಮಾಡಿ ಅಲ್ಲೆ ಇರ್ತಿದ್ದ ಹೆಣ್ಮಕ್ಕಳು ಜಾತ್ರಿ ನೆಪದಾಗ ಹೊರಾಗ ಬಂದು ಒಬ್ರನ್ನೊಬ್ರು ಖುಷಿಯಿಂದ ಮಾತಾಡಿಸ್ತಾ ನಿಂತಿದ್ದು, ಊರಿನ ಹಾದಿಯೊಳಾಗ ಜಾತಿ ಜನಾಂಗ ಎಲ್ಲಾ ಮರತು ಎಲ್ಲಾರೂ ಒಟ್ಟಾಗಿ ಸೇರಿ ಒಂದೆ ಮನ್ಯಾರೇನೊ ಅನ್ನುವಂಗ ಜಾತ್ರಿ ಕೆಲಸಾನ ಎಲ್ಲಾರೂ ಸೇರಿ ಹಂಚಿಗ್ಯಂಡು ಮಾಡಿದ್ದು ನೋಡಿ, ಎಲ್ಲಾರೂ ಒಟ್ಟಿಗೆ ಸೇರಾಕ ನಾವೆಲ್ಲಾರೂ ಒಂದSS ಅನ್ನೊದು ಮನದಟ್ಟು ಮಾಡಿಕ್ಯಳಾಕ ಜಾತ್ರಿ ಒಂದು ನೆಪ… ಅದ್ರಲ್ಲಿರೊ ಆಕಿ ಕೂಡ!
ಸುವರ್ಣ ಚೆಳ್ಳೂರು ಹೊಸ ಸರಣಿ “ಆಕಿ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

ಆಕಿ!

ಆಕಿ ಅಂದ್ರೆ?

ಯಾರ್ ಆಕಿ? ಅನ್ನೋ ಪ್ರಶ್ನೆಗಳೆಲ್ಲಾ ಈ ಸಾಹಿತ್ಯ ಪುಸ್ತಕ ಅದು ಇದು ಅಂತ ಓದುವಾಗೆಲ್ಲಾ ತಲೆ ತುಂಬಾ ಕಾಣದೆ ಇರೊ ಹುಳಗಳೆಲ್ಲಾ ಓಡ್ಯಾಡಿ ಹೊಕ್ಕಿದ್ವು, ಅವತ್ತೊಂದಿನಾನೂ ಅದೇ ಆಲೋಚನೆಯೊಳಗ

‘ಅವಳು ಅಂದ್ರೆ?’ ನನಗ್ ನಾನೆ ಪ್ರಶ್ನೆ ಹಾಕ್ಕೊಂಡು ಪೆನ್ನಿನ ತುದಿನ ಬಾಯೊಳಗಿಟ್ಟು ಏನೋ ಬರಿತಿನೆನೊ ಅನ್ನೊ ಹಾಗೆ ಕೂತಿದ್ದೆ.

ತಕ್ಷಣ ಅವ್ವನ ಫೋನ್ ಬಂದದ್ದ ತಡ ಎತ್ತಿ

‘ಹಲೊ..ಯವಾ..ಅರಾಮದಿಯನಂಗೆ?’

ಆಕಡೆಯಿಂದ ಅವ್ವ ‘ಅರಾಮದಿನಿ ನೋಡಂಗೆ, ಮತ್ಯ ಊರ್ ಜಾತ್ರಿ ಐತಿ ಬಂದ್ಬುಡು, ಮನಿ ತುಂಬಾ ಕೆಲ್ಸದಾವ’

ಅವ್ವ ಕರದದ್ದು ನೋಡಿ,‌ ಜಾತ್ರಿಗೆ ಕರದ್ಲೊ ಅಥ್ವಾ ಕೆಲಸಕ್ಕ ಕರದ್ಲೊ ಅರ್ಥ ಆಗ್ದಿದ್ರೂ ‘ಯಾವ್ ಜಾತ್ರಿ ಐತ್ಯಂಗೆ?’

ಅವ್ವ ಸ್ವಲ್ಪ ರೇಗಿದ ಧ್ವನಿಯಲ್ಲಿ ‘ಆಕಿ ಜಾತ್ರಿ ಐತ್ಯಂತ ಗೊತ್ತಿಲ್ಲನು, ನಿಮಗSss ತಿಂಗಳಾತು ಹೇಳಿ ಹೇಳಿ, ಊರ ದುರ್ಗಮ್ಮನ ಜಾತ್ರಿ ಮೂವತ್ತಾರ್ ವರ್ಷ ಆದ್ಮ್ಯಾಗ ಊರಾಗ ಆಗಕುಂತೈತಿ  ಬರಬೊಕಂತ’

ಅವ್ವನ ಬಾಯಲ್ಲಿ ಕೂಡ ‘ಆಕಿ!’ ಮತ್ತೆ ಕಣ್ಣನ್ನ ಆಕಾಶದ ಕಡೆ ಮಾಡಿ ನಿಂತೆ ಅವ್ವ ಫೋನಿನಲ್ಲಿ ಮಾತಾಡ್ತಾ ಇದ್ಲು.

‘ಭಾಳ ವರ್ಸ ಆದ್ಮ್ಯಾಗ ಊರಾಗ ಜಾತ್ರಿ ಆಗಕುಂತೈತಿ ನೀನು ಒಂದ್ವಾರ ಮುಂಚೇನ ಬಂದ್ಬುಡು, ಮನಿ ಉಳ್ಳ್ಸಿ, ಬಣ್ಣ ಬಡದು, ಮೂಲಿ ಮುಕ್ಕಟ್ಟಿ ಎಲ್ಲಾ ಸ್ವಚ್ಚ್ ಮಾಡಿ, ಹಾಸಿಗಿ ಎಲ್ಲಾ ಒಗದು ಮಟ್ಟ ಸರಿ ಮಾಡಿಕ್ಯಬೋಕು’

‘ಹೌದನಂಗೆ! ಸರಿ ತಗ ಬರತ್ನು ಬಡಾSSನ’

ಅವ್ವ ಮಾತ್ಮಾತಿಗೆ ಅದು ಮಾಡಬೋಕು ಇದು ಮಾಡಬೋಕು ಅಂತಿದ್ದದ್ದು ಕೇಳಿ, ಅವಳೊಳಗಿದ್ದ ಹಬ್ಬದ ಖುಷಿ, ಎಲ್ಲಾದ್ಕೂ ಮ್ಯಾಗ ಮನಿ ಮಟ್ಟಸರಿ ಆಕೈತಿ ಅಂಬ ಖುಷಿ ಎದ್ದು ಕುಣಿತಿತ್ತು.

ಆದ್ರ ನನ್ನ ತಲಿಯೊಳಾಗಿನ ‘ಆಕಿ’ ಅನ್ನೊ ಜೇನುಹುಳ ಗುಂಯ್ ಗುಂಯ್ ಅಂತ ಓಡ್ಯಾಡಾದು ನಿಲ್ಲವಲ್ದಾತು!

ಆದ್ರೂ ಭಾಳ ದಿನದ್ ಮ್ಯಾಲೆ ಜಾತ್ರಿ ಆಗೊದು ಒಂತರಾ ಖುಷಿ ಆಯ್ತು,. ಹಳೆ ಗೆಳತ್ಯಾರನ್ನೆಲ್ಲ  ನೋಡ್ಬೊದು, ಜಾತ್ರಿ ಅಂದ ತಕ್ಷಣ ನಂಗೆ ನೆನಪಿದ್ದದ್ದು ಊರಲ್ಲಿ ವರ್ಸಕ್ಕೊಮ್ಮೆ ಸಣ್ಣದಾಗಿ ಆಗ್ತಿದ್ದಿದ್ದ ಪಂಪಾಪತಿ ಜಾತ್ರಿ, ಈ ಜಾತ್ರಿ ಬಂತು ಅಂದ್ರ ಸಾಲಿಗೊಂದಿನ ರಜೆ‌ ಇರ್ತಿದ್ದದ್ದೆ ಖುಷಿ,‌ ಮತ್ತೆ ಅಲ್ಲಲ್ಲಿ ಜೋಗ್ಯಾರ ಅಂಗಡಿ ಹಾಕಿ ಸರಾ, ಬಳಿ, ಹೇರ್ ಬೆಂಡು, ನೇಲ್ ಪಾಲಿಷ್, ಬಣ್ಣ ಬಣ್ಣದ ಸಾಮಾನು. ರಾತ್ರಿಗೆ ಎಳಿತಿದ್ದ ತಾತನ ತೇರು, ರಾತ್ರಿಯೆಲ್ಲ ಈ ಅಂಗಡಿಗಳು‌ ಹಳದಿ‌ ಲೈಟ್ ಜೊತಿಗೆ ಮಿಂಚಿ ಮಿಂಚಿ ಕಣ್ಣ್ ಕುಕ್ಕಿ ಎಲ್ಲಾನೂ ತಗೊಬೇಕು ಅನ್ನಸ್ತಿತ್ತು,‌ ಆದ್ರೆ ಮನ್ಯಾಗ‌ ಕೊಡ್ತಿದ್ದ ಐವತ್ರುಪಾಯೊಳಗ ಸಾಲಿಯೊಳಗಿದ್ದ ಗೆಳತ್ಯಾರಿಗೆಲ್ಲ ಬಳಿ ಕಿವೇನು ಕೊಡ್ಸಿ ಅವರು ನನಿಗೇನ್ ಕೊಡಸ್ತಾರೇನೊ ಅಂಬ ಕುತೂಹಲದಾಗೆ ಜಾತ್ರೆ ಮುಗದೊಕ್ಕಿತ್ತು.

ಈ ಜಾತ್ರಿ ನೆನಪೊಳಾಗ ರೈಲು ಹತ್ತಿ ಊರಿಗೆ ಹೊದದ್ದೆ ತಡ!

ಇದು ನಮ್ಮೂರಾ?! ಅಂತನ್ನಿಸಿ ಬಾಯಿಗೆ ಬೆರಳಿಟ್ಟೆ. ಊರಿನ ಬಾಗಿಲಲ್ಲೆ ಇದ್ದ ಗುಡ್ಡೆ ಕಲ್ಲಿಂದ ಹಿಡದು ಊರ್ ತುಂಬಾ ಲೈಟಿನ ಸಿಂಗಾರ, ಅದರ ಜೊತಿಗೆ ಸ್ವಾಗತ ಅಂತ ಬರ್ದಿದ್ದ ಸಾಲು ಸಾಲು ಬ್ಯಾನರ್‌ಗಳು ಅಲ್ಲಿ ದುರ್ಗಮ್ಮನ ಫೋಟೊಕಿಂತ ಹುಡುಗರ ಫೋಟೊಗಳೆ ದೊಡ್ಡದಾಗಿದ್ದು, ಅದನ್ನ ನೋಡಿದ ಒಂದು ಕ್ಷಣ ಇದು ಯಾರ್ ಜಾತ್ರಿ ಅಂತನ್ನಿಸಿ ಒಳಗೊಳಗೆ ನಕ್ಕು ಮನೆ ಸೇರಿದೆ.

ಮನಿಯೆಲ್ಲಾ ಬಣ್ಣ ಹಚ್ಚಿ, ಅರ್ಧ ಕೆಲಸ ಮುಗದಂಗಿತ್ತು. ಇನ್ನೂ ಅದು ಇದು ಅಂತ ಓಡಾಡುತ್ತಿದ್ದ ಅಪ್ಪ ಅವ್ವ ನನ್ನ‌ ನೋಡಿದ್ದೆ ತಡ ಮುಖದ ತುಂಬಾ ನಗು ಅರಳಿ ಖುಷಿಯಾಗಿ ‘ಬಂದ್ಯನು ಬಾರವSs…ಹೆಂಗಾಗೈತಿ ನಮ್ಮೂರು?’ ಅಂತ ಅಪ್ಪ ಮಾತಿಗಿಳಿದ.

ಅವರನ್ನ ನೋಡಿದ ಖುಷಿಯಲ್ಲಿದ್ದ ನಾನು ‘ಯಪಾ… ಭಾರಿ ಮಾಡಕತಿರಿ ಬುಡು ಜಾತ್ರಿನ, ಇದ್ಯಾಕ್ ಇಷ್ಟು ವರ್ಸ ಆದ್ಮ್ಯಾಗ ಊರಾಗ ಜಾತ್ರಿ ಆಗಕುಂತೈತಿ?’ ಅಂದೆ.

ಅಪ್ಪ ಅವನ ಹಳೆಯ ಜಾತ್ರೆಯ ನೆನಪು,  ಆ ಜಾತ್ರೆಯನ್ನ ವಿವರಿಸಿದ್ದು ಹೀಗೆ.

‘ನೋಡವಾSSS ಈ ಬಯಲು ಸೀಮಿ ಆಗ್ಲಿ ಯಾವದಾ ಬೆಳಿ ಬೆಳಿತಾರಲ ಆ ಪ್ರದೇಶದಾಗೆಲ್ಲ ಹಿಂದ್ಲಿಂದಾನ ಒಂದೊಂದು ಜಾತ್ರಿ ಆಗ್ತಿರ್ತಾವ, ಊರಿಗೆ ಮಳಿ ಬೆಳಿ ಚೋಲೊ ಆಗ್ಲಿ, ಊರಾಗೆಲ್ಲಾರೂ ಚೆಂದ್ ಇರ್ಲಿ ದುಡಕಂತ, ಉಂಡಕಂತ ಅಂತ ಮಾಡ್ತಾರ.

ಜಾತ್ರಿ ಮಾಡಾದು ಅಂದ್ರ ಸಣ್ಣ ಕೆಲಸಲ್ಲವSs, ಇಲ್ಲಿ ಎಲ್ಲಾ ಮಂದಿ ಕೂಡಬೋಕು, ಮೊದ್ಲು ಎಲ್ಲಾರಿಗೂ ಜಾತ್ರಿ ಮಾಡಬೋಕು ಅನ್ನ ಮನಸಿರಬೊಕು, ಹಂಗೆಲ್ಲಾರೂ ಕೂಡಿ ಮೊದ್ಲು ದುರ್ಗಮ್ಮನ ಜಾತ್ರಿಗೆ ಐದಾರು ತಿಂಗಳು ಮುಂಚೆ ಎಲ್ರೂ ಸೇರಿ ಒಂದು ಸಭೆ ಮಾಡ್ತಾರ, ಯಾವುದೇ ಊರಾಗ ಜಾತ್ರಿ ಆಗುವಾಗ ಐದಾರು ತಿಂಗಳು ಮುಂಚೆ ಊರಿನ ಸೀಮಿ ಸುತ್ತ ಹಾಲು ಎರಿತಾರ‌ ಅದಿಲ್ಲಿ ಮೊದ್ಲು ಚರ್ಚೆ ಆಗಿ ಯುಗಾದಿ ಪಾಡ್ಯದ ದಿನ ಹಾಲು ಎರದ್ವಿ, ಮುಂದ ಎಳ್ಳು ಅಮಾವಾಸ್ಯೆಗೆ ಜಾತ್ರಿ ಮಾಡನ ಅಂತ ಎಲ್ಲಾ ಮಂದಿ ಸೇರಿ ನಿಶ್ಚಯ ಆದಂಗಾತು. ಈಗ ಜಾತ್ರಿ ಮಾಡಬೊಕಂದ್ರ ಪಟ್ಟಿ ಎತ್ತಿ ಹಣ ಕೂಡಸ್ಬೊಕು ಅದಕಂತಾನ ಹೊಲ ಇರೊ ರೈತರು ಎಕರಿಗೆ ಐದ್ನೂರು ಕೊಡಬೊಕಂತ, ಹಂಗ ಹೊಲ ಇಲ್ದಾರೆಲ್ಲ ಮನಿಗೆ ಹದಿನೈದು ನೂರು ಕೊಡಬೊಕಂತ ತೀರ್ಮಾನ ಮಾಡ್ತಾರ.

ಇದಾದ್ಮೇಲೆ ಶ್ರೀ ದುರ್ಗಾದೇವಿ ಜಾತ್ರಾ ಸಮಿತಿ ರಚನೆ ಮಾಡಿದ್ರು ಅದ್ರಲ್ಲಿ ಎಲ್ಲಾ ಜಾತಿಯವರೂ ಇರ್ತಾರ. ಮೊದಲನೇ ಕಾರ್ಯ ಅಂದ್ರ, ಕಿನ್ನಾಳದಿಂದ ಹೊಸ ದೇವಿ ಮೂರ್ತಿನ ತರೊದು, ಊರಾಗಿನ ಎಲ್ಲಾ ಗುಡಿಗಳಿಗೂ ಸುಣ್ಣ ಬಣ್ಣ ಹೊಡದು ಸಿಂಗಾರ ಮಾಡಾದು, ಇದೆಲ್ಲಾದಕ್ಕೂ ಹತ್ತು ಐದು ದಿನಗಳ  ಮುಂಚೆ ಕುರಿ ಕಾಯಾರ ಹಟ್ಟಿಗೆ ಹೋಗಿ ಜಾತ್ರಿಗೆ ಅಂತಾನೆ ಒಂದು ಕುರಿನ ಕೇಳಬೋಕು, ಹಿಂಗ್ ಕುರಿ ಕೇಳುವಾಗ ಅವರಿಗೆ ಬಂಡಾರ ಕೊಡೊ ಪದ್ಧತಿ ಐತಿ, ಎರಡ್ ಎಲಿ, ಅಡಕಿ,‌ ಅರಿಶಿನ ಕೊಂಬು ಕೊಡ್ತಾರ. ಹಿಂಗೆಲ್ಲಾ ತಯಾರಿ ನಡದಾಗನ ಮತ್ತೊಂದು ಸಭೆ ನಡಸ್ತಾರ, ಇಲ್ಲಿ ದೈವದ ಕುಂಭ ಯಾರ್ ತರ್ಬೊಕು, ದೇವರ ಕಳಸಾನ ಯಾರ್ ತರ್ಬೊಕು, ಪೂಜೆಗಳನ್ನೆಲ್ಲಾ ಯಾರ್ ಮಾಡ್ಬೊಕು, ಸರ್ಗ ಯಾರ್ ಚೆಲ್ಲಬೊಕು ಅನ್ನೊದೆಲ್ಲ ಈ ಸಭೆಯೊಳಗ ಚರ್ಚಿ ಮಾಡ್ತಾರ. ಹಿಂಗ ಜಾತ್ರಿ ಪ್ರಾರಂಭ ಆಗಿ ಎಳ್ಳು ಅಮಾವಾಸ್ಯಿಗೂ ಒಂದಿನ ಮುಂಚೆ ತಂದಿದ್ದ ದೇವಿಯ ಮೂರ್ತಿಗೆ, ದೃಷ್ಟಿ ಬೊಟ್ಟು, ಪ್ರಾಣ ಪ್ರತಿಷ್ಠಾಪನೆ ಮಾಡ್ತಾರ ಅದೇ ದಿನ ಸಾಯಂಕಾಲ ಆರು ಗಂಟೆಯಿಂದ ಹೊಸದಾಗಿ ಮಾಡಿದ ದೇವಿಯ ಉತ್ಸವ ಮೂರ್ತಿ ಊರಿನ ತುಂಬಾ ಮೆರವಣಿಗೆ ಹೋಗುತ್ತ. ಈ ಮೆರವಣಿಗೆ ನಡೆಯುವಾಗ ಹಸಿರು ಸೀರೆ ಉಟ್ಟಿರೊ ಐದು ಜನ ಮಾತಂಗಿ ಅನ್ನೊ ಹೆಣ್ಮಕ್ಕಳು ಇರ್ತಾರೆ, ಮತ್ತೆ ಡೊಳ್ಳು ಬಾರಸೊರು, ಬಾಜಾ ಭಜಂತ್ರಿ ನುಡಸೊರು, ಕಳಸ ಹಿಡದಿರೊ ಹೆಣ್ಮಕ್ಕಳು ಹಾಗೆನೆ ಇದ್ರಲ್ಲಿ ಇರೊ ಮುಖ್ಯವಾದ ಕಳಸ ಊರ ಗೌಡರ ಮನೆಯಿಂದ ಬಂದಿರುತ್ತಂತೆ, ಕುಂಭ ಊರಿನ ಬಾಳಪ್ಪ ತಾತನೊರ ಹುಡೇದ ಮನ್ಯಾರ ಮಂದಿ ತರ್ತಾರೆ, ಊರಿನ ಹೊಲಕ್ಕೆ ಸರ್ಗ ಚೆಲ್ಲೊದು ಕುರಿ ಕಾಯುವ ಜನ ಹೀಗೆ ಒಂದೊಂದು ಕೆಲಸ ಒಬ್ಬೊರಿಗೆ ಹಿಂದಿನ ಕಾಲದಿಂದಲೂ ಮೀಸಲಾಗಿ ಬಂದಿರ್ತೈತಿ ಅದನ್ನ ಆ ಮಂದಿನೇ ಮಾಡಬೋಕು. ಮೆರವಣಿಗೆ ಹೀಗೆ ಎಲ್ಲಾರ್ನೂ ಒಳಗೊಂಡು ಸಾಗುತ್ತೆ, ಮೂರ್ತಿಯನ್ನ ಪಲ್ಲಕ್ಕಿಯಲ್ಲಿ ಕೂರಿಸಿರ್ತಾರೆ ಅದನ್ನ ಮೇಟಿ ಮಂದಿನೇ ಹಿಡ್ಕೊಂಡು ಹೋಗ್ಬೇಕು ಅನ್ನೊ ನಿಯಮ, ಹೀಗೆ ಊರಲ್ಲಿರೊ ಎರಡೂ ಗುಡ್ಡೆಕಲ್ಲಿನ ಹತ್ತಿರ ಹರಿಬ್ಯಾಟಿ ಮಾಡಿ ಮೂರ್ತಿಯನ್ನ ದೇವಸ್ಥಾನಕ್ಕ ಕರ್ಕೊಂಡು ಬರ್ತಾರ, ಸಹಿಂಗೆ ದೇವಸ್ಥಾನಕ್ಕೆ ಮೆರವಣೆಗೆ ಹೊಂಟಾಗ ಪಲ್ಲಕ್ಕಿಯಾಗಿರ ದೇವಿ ಊರಿನ ಬೇರೆ ಬೇರೆ ದೇವಸ್ಥಾನಕ್ಕೂ ಭೇಟಿಯಾಗಿ ಕೊನೆಗೆ ಗರ್ಭಗುಡಿಯೊಳಗೆ ದೇವಿ ಮೂರ್ತಿನ ಕೂಡಸ್ತಾರ, ಈ ಮೆರವಣಿಗೆ ಎಲ್ಲಾ ಆದ್ಮ್ಯಾಗ ರಾತ್ರಿ ಹನ್ನೆರಡು ಗಂಟಿಗೆ ನಾಯಕರು ಮನೆಯಿಂದ ದೈವದ ಕುಂಭ ಬರುತ್ತ, ಆ ಕುಂಭದೊಳಾಗ ಅನ್ನ ಮಾಡಿರ್ತಾರ ರಾತ್ರಿ ಬ್ಯಾಟಿ ಕಡಿತಾರ, ಆ ಬ್ಯಾಟಿನ ಹನ್ನೊಂದು ಭಾಗ ಮಾಡಿ, ಹನ್ನೊಂದು ಬಿದರಿನ ಪುಟ್ಟಿಯೊಳಾಗ ಅನ್ನ ಮತ್ತೆ ಬ್ಯಾಟಿಯನ್ನ ಸೇರಸ್ತಾರ, ಈ ಪುಟ್ಟಿಗಳನ್ನ ತಗೊಂಡೊಗಿ ಊರಿನ ಸುತ್ತ ಸರ್ಗ ಚೆಲ್ಲತಾರ, ಇಲ್ಲಿಂದ ಬ್ಯಾಟಿ ಕಾರ್ಯಕ್ರಮಳೆಲ್ಲ ಶುರು ಆಗ್ತಾವ, ಇದೆಲ್ಲ ಮಾಡಾದ್ರಿಂದ ಊರಿನ ಗ್ರಾಮದೇವತೆ ಶಾಂತ ಆಗಿ ಊರಿಗ್ಯಾವ ರೋಗ ರುಜಿನ ಬರದಂಗ ಕಾಪಾಡತಾಳ, ಮಳಿ ಬೆಳಿ ಬರೊಹಂಗ ಮಾಡ್ತಾಳ ಅನ್ನೊ ನಂಬಿಕಿ ಐತಿ’.

ಅಪ್ಪ ಇದನ್ನೆಲ್ಲ ಹೇಳೊದನ್ನ ಬಾಯಿಗೆ ಬೆರಳಿಟ್ಟು ಕೇಳಿ,

‘ಯಪಾ… ಇಷ್ಟೆಲ್ಲಾ ಐತ್ಯನು’ ಅಂತ ಕೇಳಿದೆ.

ಕಟ್ಟಿಮೇಲೆ ಕುಂತಿದ್ದ ಅಪ್ಪ ‘ಯವ್ವಾSS ಇಷ್ಟSS ಅಲ್ಲಂಗೆ ಇನ್ನ‌ ಬ್ಯಾರೆ ಬ್ಯಾರೆ ಕತಿಗಳದಾವ ಜಾತ್ರಿ ಸುತ್ತ’

‘ಹೌದನಪಾ…. ಹಂಗಾರ ಒಂದು ಕತಿ ಹೇಳ್ ನಂಗೆ!’ ಅಂದೆ.

ಅಪ್ಪ ನಗುತ್ತಾ ‘ಹೇಳತ್ನು ಕೇಳಂಗಾರ…

ಒಂದೂರಾಗ ಇಬ್ರು ಗಂಡ ಹೆಂಡ್ತಿ ಇದ್ರಂತ, ಇಬ್ರೂ ಬ್ಯಾರೆ ಬ್ಯಾರೆ ಜಾತಿಗೆ ಸೇರಿದಾರಾಗಿರ್ತಾರ. ಆದ್ರ, ಆ ಹೆಣ್ಮಗಳಿಗೆ ಗಂಡ ಬ್ಯಾರೆ ಜಾತಿಯವ ಅನ್ನೊದೆ ಗೊತ್ತಿರಲ್ಲ. ಆಕಿ ಬಡಿಗೇರಾಕಿ ಆಗಿರ್ತಾಳಂತ. ಅವಳ ಗಂಡ ಚಪ್ಪಲಿ ಹೊಲಿಯೊ ಕೆಲಸ ಮಾಡ್ತಿರ್ತಾನಂತ ಆಕಿಗೆ ಗೊತ್ತಾಗಲಾರದಂಗ, ಹಂಗ ಅವರ ಬದುಕೆಲ್ಲ ಸುಖವಾಗೆ ನಡಿತಿರತ್ತ, ಒಂದು ಮಗನೂ ಹುಟ್ಟಿರುತ್ತ, ಅವನು ದಿನಾ ಊರಿಂದ ಸ್ವಲ್ಪ ದೂರ ಹೋಗಿ  ಹೆಂಡ್ತಿಗೆ ಗೊತ್ತಾಗಲಾರದಂಗ ಚಪ್ಪಲಿ ಹೊಲಿಯೊ ಕೆಲಸ ಮಾಡಿ ಬರ್ತಿರ್ತಾನ. ಹಿಂಗ ಒಂದಿನ ಆತನ ಮಗ ಅಪ್ಪ ಎಲ್ಲಿಗ್ ಹೊಕ್ಕಾನ ದಿನಾ ಅಂತ ಯೋಚಿಸಿ ಯೋಚಿಸಿ, ಒಂದಿನ ಅವರಪ್ಪ ಚಪ್ಪಲಿ ಹೊಲಿಯೊ ಜಾಗಕ್ಕ ಬರ್ತಾನ. ಮಗ ಬಂದಿದ್ದು ನೋಡಿ ಗಾಬರಿಯಾದ ಅಪ್ಪ ಗಡಿಬಿಡಿಯಿಂದ ಮಗನನ್ನ ‘ಹೇಯ್, ನೀ ಇಲ್ಲಿಗ್ಯಾಕ್ ಬಂದಿ ಮನಿ ಕಡೆ ನಡಿ’ ಅಂತ ಬೈದಾಗ ಇಳಿಮೊಕ ಹಾಕಿದವನೆ ಮನೆಗೆ ವಾಪಾಸ್ ಬರ್ತಾನೆ. ಆದ್ರೆ ಬರುವಾಗ ಜೇಬಲ್ಲಿ ಚಪ್ಪಲಿ ಹೋಲಿಯಾಕ ಬಳಸ್ತಿದ್ದ ಸಾಮಾನು ತಗೊಂಡು ಬಂದಿರ್ತಾನೆ, ಆ ಸಾಮಾನು ಅವರವ್ವನ ಕಣ್ಣಿಗೆ ಬಿದ್ದು ಇದ್ಯಾರ್ದು ಅಂತ ಕೇಳಿದಾಗ ‘ಅಪ್ಪ ಕೆಲಸ ಮಾಡುವಲ್ಲಿತ್ತು’ ಅನ್ನೊದನ್ನ ಕೇಳಿ ಅವಳಿಗೆ ತಾನು ಮದುವ್ಯಾಗಿದ್ದು ಕೆಳ ಜಾತಿಯಾತನ್ನ ಅಂತ ಕೋಪಗೊಂಡು ದುರ್ಗಿ ಅವತಾರ ತಾಳಿ, ಅವನ ರುಂಡ ಕಿತ್ತಿ, ಅವನ ಕಾಲನ್ನ ಬಾಯೊಳಗಿಟ್ಟು ಸಂಹಾರ ಮಾಡಿ ಶಾಪ ಕೊಡ್ತಾಳ, ನೀನು ಪ್ರತಿ ಜನ್ಮದಾಗೂ ಕೋಣ ಆಗಿ ಹುಟ್ಟು, ನನ್ನ ಮುಂದೆ ನಿನ್ನ ಸಂಹಾರ ಆಗ್ಲಿ ಅಂತ. ಅವಾಗಿಂದಾನೂ ದುರ್ಗಾದೇವಿ ಮುಂದ ಬ್ಯಾಟಿ ಬುಳತಾವ’

ಅಪ್ಪ ಹೇಳಿದ ಈ ಕತೆ ಕೇಳಿ ಈ ಜಾತಿ ಅನ್ನೊ ಕೋಣಾನ ಹೆಂಗ್ ಕಾಲು ಮುರದು ಮಾತಾಡಾಕ ಬರಲಾರದಂಗ ಮುಂದಿಟ್ಟಾರಲಾ ಅನ್ನಿಸಿ ಒಂದು ಕ್ಷಣ ಈ‌ ಜಾತಿ‌ಗಳ ಆಳ ಎಷ್ಟೈತಿ ಅಲಾ ಅಂತನ್ನಿಸಿ

‘ಯಪಾ ಹಂಗಾರ ಎಲ್ಲಾರೂ ಮನುಷ್ಯಾರ ಅಲಾ, ಜಾತಿ ಯಾಕ್ ಬೇಕು?!’

ಅಪ್ಪ ಇನ್ನಷ್ಟು ವಿಸ್ತರಿಸಿ ‘ನೋಡವಾSS ಇವೆಲ್ಲ ಹಿಂದಿನ ಕಾಲದ ಕತಿಗಳದಾವ, ಮತ್ಯ ಇದೊಂದಾ ಕತಿ ಅಲ್ಲ ಬೇರೆ ಬೇರೆ ಕತಿಗಳನ್ನ ಆ ಕಾಲಕ್ಕ ತಕ್ಕಂಗ ಕಟ್ಟಿರತಾರ, ಹಿಂದಿನ ಕಾಲದಾಗ ಜಾತಿ ನಂಬಿಕಿ ಆಳವಾಗಿದ್ವು, ಆದ್ರೀಗ ಇವನ್ನೆಲ್ಲ ಯಾರೂ ನಂಬಂಗಿಲ್ಲ ಪ್ರಶ್ನೆ ಮಾಡ್ತಾರ. ಆದ್ರ, ಈಗೀಗ ನಡೆಯೊ ಜಾತ್ರೆಗಳೆಲ್ಲ ಈ ಎಲ್ಲಾ ಕತಿಗಳನ್ನೂ ಮೀರಿ, ಊರಿಗೆ ಒಳ್ಳೆದಾಗ್ಲಿ ಮಳಿ ಬೆಳಿ ಬರೊಹಂಗ ಆಗ್ಲಿ ಅನ್ನೊದಷ್ಟ!’

ಆ ಕತಿಯೊಳಾಗಿದ್ದ ಆಕಿ ಮತ್ತೆ ಅವಳ ಮುಂದೆ ಸತ್ತಿರುವ ಕೋಣದ ತಲೆ ಮತ್ತದರ ಬಾಯೊಳಗಿಟ್ಟಿದ್ದ ಕಾಲಿನ ಚಿತ್ರ, ಒಂದು ಕ್ಷಣ ಎದಿ ಜಲ್ ಅನ್ನಂಗ ಮಾಡಿದ್ವು, ಮಾತು ಬರದಂಗ ದೇವಿಯ ಮುಂದಿದ್ದ ಕೋಣ ರಪ್ಪನೆ ಯೋಚನೆಯೊಳಗ ಅದ್ಯಾವುದೋ ಬಂಧನದಿಂದ ಬಿಡಿಸಿಗೊಂತ ಬಯಲಿನೊಳಗ ದೂಳೆಬ್ಬಿಸಿಗೊಂತ ಓಡ್ತಿದ್ದಂಗ ಅದರ ಹಿಂದ ಜನಗಳೆಲ್ಲಾ ಓಡಿದಂಗ ಚಿತ್ರ ಹಾದು ಹೋಗ್ತಾ ಆ ಚಿತ್ರದೊಳಗೆ ಮುಳುಗಿ ಅದನ್ನೆ ಯೋಚಿಸ್ತಿರುವಾಗ, ಊರೊಳಾಗ ದೇವಿ ಮೆರವಣಿಗೆ ಬಂದಿತ್ತು, ನೋಡೊಕಂತ ಹೋದಾಗ ಹಳೆ ಗೆಳತ್ಯಾರೆಲ್ಲ ಸಿಕ್ಕಿದ್ದು, ಮನಿಯೊಳಾಗ ಕೆಲಸ ಮಾಡಿ ಅಲ್ಲೆ ಇರ್ತಿದ್ದ ಹೆಣ್ಮಕ್ಕಳು ಜಾತ್ರಿ ನೆಪದಾಗ ಹೊರಾಗ ಬಂದು ಒಬ್ರನ್ನೊಬ್ರು ಖುಷಿಯಿಂದ ಮಾತಾಡಿಸ್ತಾ ನಿಂತಿದ್ದು, ಊರಿನ ಹಾದಿಯೊಳಾಗ ಜಾತಿ ಜನಾಂಗ ಎಲ್ಲಾ ಮರತು ಎಲ್ಲಾರೂ ಒಟ್ಟಾಗಿ ಸೇರಿ ಒಂದೆ ಮನ್ಯಾರೇನೊ ಅನ್ನುವಂಗ ಜಾತ್ರಿ ಕೆಲಸಾನ ಎಲ್ಲಾರೂ ಸೇರಿ ಹಂಚಿಗ್ಯಂಡು ಮಾಡಿದ್ದು ನೋಡಿ, ಎಲ್ಲಾರೂ ಒಟ್ಟಿಗೆ ಸೇರಾಕ ನಾವೆಲ್ಲಾರೂ ಒಂದSS ಅನ್ನೊದು ಮನದಟ್ಟು ಮಾಡಿಕ್ಯಳಾಕ ಜಾತ್ರಿ ಒಂದು ನೆಪ, ಈ ನೆಪಗಳೊಳಾಗ ಜಾತಿಗಳೆಲ್ಲ ನಾವು ಒಂದSS ಅಂತ ಕೂಡಿ ಜಾತ್ರಿ ಮಾಡ್ತಾವ ಆದ್ರ ಗರ್ಭಗುಡಿಯೊಳಗಿನ ದುರ್ಗಮ್ಮ ಆಕಿ ಮುಂದ ಬಾಯೊಳಗೆ ಮುರಿದ ಕಾಲಿಟ್ಟುಕೊಂಡ ಕೋಣ, ಪ್ರತಿ ಜಾತ್ರಿಯೊಳಾಗ ಎದುರು ಬದುರಾಗ್ತಿರ್ತಾವ!

About The Author

ಸುವರ್ಣ ಚೆಳ್ಳೂರು

ಸುವರ್ಣ ಚೆಳ್ಳೂರು  ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಚಳ್ಳೂರಿನವರು. ಈಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಂಶೋಧನಾ ವಿದ್ಯಾರ್ಥಿ. ಕಲೆ ಸಾಹಿತ್ಯ ಫೋಟೊಗ್ರಫಿ ಮುಖ್ಯ ಆಸಕ್ತಿಗಳು. ಇವರ 'ಕಂಬದ ಹಕ್ಕಿ' ಕಥೆಗೆ  'ಸಂಗಾತ ಕಥಾ ಪುರಸ್ಕಾರ ' (2021), 'ಕನಕಾಂಬರ' ಕಥೆಗೆ ಧಾರವಾಡದ ವಿದ್ಯಾವರ್ಧಕ ಸಂಘದಿಂದ 'ಶ್ರೀಮತಿ ಶಾಂತಾದೇವಿ ಕಣವಿ ಕಥಾ ಪುರಸ್ಕಾರ' ದೊರಕಿದೆ (2022). 'ಕನಕಾಂಬರ' ಹಾಗೂ ‘ಮಾರ್ನಾಮಿ’ ಸಣ್ಣ ಕಥೆಗಳು ToTo Funds the Arts' India ಅವರು ಕೊಡುವ ಕನ್ನಡ ಸೃಜನಶೀಲ ಬರವಣಿಗೆ (Kannada Creative writing) ವಿಭಾಗದಲ್ಲಿ 2023 ಮತ್ತು 2025 ರಲ್ಲಿ ಅಂತಿಮ ಹಂತಕ್ಕೆ (Short List) ಆಯ್ಕೆ ಆಗಿದೆ. ಇವರ ಬರಹಗಳು ಕೆಲವು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

2 Comments

  1. Beerappa kalasad

    👏👍

    Reply
  2. ಸಿದ್ದಣ್ಣ ಗದಗ, ಬೈಲಹೊಂಗಲ.

    ನಮ್ಮ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ನಡೆಯುವ ದುರ್ಗಾದೇವಿ ಜಾತ್ರೆಯ ವರ್ಣನೆ ತುಂಬಾ ಸೊಗಸಾಗಿ ಮೂಡಿಬಂದಿದೆ.ಜಾತ್ರೆಯ ಮಹಿಮೆ ಅದರ ಉದ್ದೇಶ ಅದನ್ನು ಕಾರ್ಯಗೊಳಿಸುವ ರೀತಿ, ಜನರ ಪಾಲ್ಗೊಳ್ಳುವಿಕೆ ತುಂಬಾ ಸರಳವಾಗಿ ಮತ್ತು ಸುಂದರವಾಗಿ ನಮ್ಮ ಆಡು ಭಾಷೆಯಲ್ಲಿ ನಿರೂಪಿಸಿದ್ದೀರಿ.ಸ್ವಾಗತ ಅಂತ ಬರೆದ ಬ್ಯಾನರುಗಳಲ್ಲಿ ದುರ್ಗಮ್ಮನ ಫೋಟೋಗಳಿಗಿಂತ ಹುಡುಗರ ಫೋಟೋ ದೊಡ್ಡದಾಗಿದ್ದನ್ನು ನೋಡಿ ಇದು ಯಾರ ಜಾತ್ರೆ ಅಂದುಕೊಂಡಿದ್ದನ್ನು ಓದಿ ನಮಗೂ ಕೂಡ ನಗು ಬಂದಿತು. ಒಟ್ಟಾರೆ ಜಾತ್ರೆಯ ಈ ಸನ್ನಿವೇಶ ನಮ್ಮ ಕಣ್ಣಮುಂದೆ ಹಾದುಹೋಯಿತು. ನಮಗೆ ಓದಿನ ಖುಷಿ ಕೊಟ್ಟ ಬರಹ

    Reply

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ