ಒಂದು ಸ್ಥಳದಿಂದ ನಿರ್ಗತಿಕರಾಗಿ ಓಡಿಬಂದವರಿಗೆ ಅನ್ನ ಆಶ್ರಯ ನೀಡಿ ಬದುಕು ಕೊಟ್ಟವರ, ಬದುಕನ್ನೇ ಬುಡಮೇಲು ಮಾಡುವ ಕೆಲಸಗಾರರ ಚಿತ್ರಣ, ಅದಕ್ಕೆ ಕುಮ್ಮಕ್ಕು ನೀಡಿ ಜಮೀನನ್ನೆಲ್ಲ ತಮ್ಮ ವಶ ಮಾಡಿಕೊಳ್ಳುವ ಕೆಲಸಗಾರರ ದಬ್ಬಾಳಿಕೆ, ನಿಯತ್ತಿಗೆ ಹೊರತಾದ ಅವರ ಕಾರ್ಯಭಾರವೆಲ್ಲದರ ಚಿತ್ರಣ ಗಮನಿಸಿದರೆ, ದ್ರೋಹವೆಂಬುದು ಸಾರ್ವಕಾಲಿಕವಾದದ್ದು, ಮನುಷ್ಯನ ಕುಟಿಲತೆ, ನೀಚ ಪ್ರವೃತ್ತಿ ಸಾವಿರ ವರ್ಷ ಕಳೆದರೂ ಬದಲಾಗದಂತಹುದು ಎಂಬುದು ಕಠೋರ ಸತ್ಯವಾಗಿ ಮನಸ್ಸನ್ನು ಆವರಿಸುತ್ತದೆ.
ಶಶಿಧರ ಹಾಲಾಡಿ ಕಾದಂಬರಿ “ನದಿ ದಾಟಿ ಬಂದವರು” ಕುರಿತು ಬಿ.ಕೆ. ಮೀನಾಕ್ಷಿ ಬರಹ
ನದಿ ದಾಟಿ ಬಂದವರು ಎಂಬ ಶೀರ್ಷಿಕೆಯನ್ನು ಕೇಳಿದಾಕ್ಷಣ, ಈ ಕಾದಂಬರಿ ಒಂದು ಸಂಸ್ಕೃತಿಯಿಂದ ಇನ್ನೊಂದು ಸಂಸ್ಕೃತಿಗೆ ಸ್ಥಿತ್ಯಂತರಗೊಂಡವರದ್ದು ಎಂದುಕೊಂಡೆ. ಆದರೆ ಈ ಕಾದಂಬರಿ ವಸತಿಯ, ಅಶನದ, ವಸನದ ಹುಡುಕಾಟಕ್ಕಾಗಿ ಪರದಾಡಿದವರ ಕುರಿತು ರಚಿತವಾದದ್ದು.
ಶಶಿಧರ ಹಾಲಾಡಿಯವರ ಅಬ್ಬೆ ಮತ್ತು ಕಾಲಕೋಶ ಕಾದಂಬರಿಗಳಲ್ಲದೆ ಅವರ ಅಂಕಣ `ಶಶಾಂಕಣ’ ಕೂಡಾ ಅವರ ಪರಿಸರ ಕಾಳಜಿ, ಸಮಾಜಮುಖಿ ಚಿಂತನೆಗಳು, ಮನುಷ್ಯನ ಭಾವನೆಗಳ ಸಮ್ಮಿಳನಗಳು, ವ್ಯತಿರಿಕ್ತಗಳನ್ನು ಚಿತ್ರಿಸಿಕೊಂಡೇ ಬಂದಿವೆ. ಅಬ್ಬೆ ಕಾದಂಬರಿಯಲ್ಲಿ ಬಯಲು ಸೀಮೆ ಪ್ರದೇಶದ ತಲ್ಲಣಗಳು, ಎದುರಿಸಬೇಕಾದ ಸಮಸ್ಯೆಗಳನ್ನೊಳಗೊಂಡೇ ಕಾದಂಬರಿ ಮುಂದುವರೆದರೆ ಕಾಲಕೋಶ ಉತ್ತರ ಭಾರತದ ಜನಜೀವನವನ್ನು ಚಿತ್ರಿಸಿಕೊಂಡೇ ಹತ್ತು ಹಲವಾರು ದುರಂತಗಳನ್ನು ಓದುಗನ ಮುಂದೆ ತೆರೆದಿಡುತ್ತದೆ. ಅಂಕಣಗಳಲ್ಲೂ ಇವರಿಗೆ ಜೀವಿಗಳ ಮೇಲಿರುವ ಕುತೂಹಲ, ಅವುಗಳ ಜೀವನದ ಬಗೆಗಿನ ಅಚ್ಚರಿಯನ್ನೂ, ಪರಿಸರ ಕಾಳಜಿಯನ್ನು ಬಿಂಬಿಸುವ ಇವರ ಬರವಣಿಗೆಯ ಪರಿ, ನಿಜಕ್ಕೂ ತನ್ನಲ್ಲಿ ಎಲ್ಲವನ್ನೂ ಅಡಗಿಸಿಕೊಂಡೂ ಸದ್ದಿಲ್ಲದೆ ಹರಿವ ನದಿಯಂತೆ ಭಾಸವಾಗುತ್ತದೆ.

(ಶಶಿಧರ ಹಾಲಾಡಿ)
ನದಿ ದಾಟಿ ಬಂದವರು ಕಾದಂಬರಿಯಲ್ಲಿ ಕಾದಂಬರಿಯ ವಸ್ತು ಹುಟ್ಟುವುದೇ ಕರಾವಳಿಯ ಸೆರಗಿನ ಮಲೆನಾಡಿಗೆ ಸೇರಿದ ಪ್ರದೇಶದಲ್ಲಿ. ಅಲ್ಲಿಯ ಭಾಷೆಯ ಸೊಗಡನ್ನು ಸೊಗಸಾಗಿ ಬಳಸಿಕೊಂಡಿರುವುದಲ್ಲದೆ, ಸಾಮಾನ್ಯ ಓದುಗನಿಗೆ ಪರಿಚಯವಿಲ್ಲದ ಅನೇಕಾನೇಕ ಶಬ್ದಗಳು ಇಲ್ಲಿವೆ. ಈ ಪದದ ಅರ್ಥವೇನು ಎಂದು ತಿಳಿಯದೆ ಗಲಿಬಿಲಿಗೊಂಡು, ಹೀಗಿರಬಹುದೇನೋ ಎಂದು ಓದುಗ ತನಗೆ ತಾನೇ ಅರ್ಥ ಕಲ್ಪಿಸಿಕೊಂಡು ಕಾದಂಬರಿ ಓದಿ ಮುಗಿಸುವಷ್ಟರಲ್ಲಿ, ನಾವು ತಿಣುಕಾಡಿದ ಪದಗಳಿಗೆ ಆರ್ಥ ದಕ್ಕಿ ಬಿಡುತ್ತದೆ. ಹೇಗೆಂದರೆ, ಕೊನೆಯ ಪುಟದಲ್ಲಿ ಪದಗಳಿಗೆ ಅರ್ಥದ ಜೊತೆಗೆ ಟಿಪ್ಪಣಿ ಕೂಡಾ ಇದೆ! ಕೊನೆಯ ಪುಟ ಓದುವ ಕಾತುರ ಮೊದಲೆಲ್ಲ ನನಗಿತ್ತು. ಈಗೆಲ್ಲಿ ಓದಬೇಕಾಗಿ ಬರುವುದೋ ಎಂದು ಕೊನೆಪುಟವನ್ನು ತಿರುಗಿಸಿಯೂ ನೋಡಿರಲಿಲ್ಲ. ಕಾದಂಬರಿ ಮುಗಿದ ಮೇಲೆ ಬೇಸ್ತು ಬೀಳುವ ಸರದಿ ನನ್ನದಾಯಿತು.
ಕಡು ಬಡತನವನ್ನು ಎದುರಿಸಲಾಗದೆ, ಗೇಣಿಯ ಭತ್ತವನ್ನು ನೀಡಲಾಗದೆ ನದಿ ದಾಟಿ ಬಂದ ಒಂದು ಕುಟುಂಬ, ಮುಂದೆ ಅದರ ಭವಿಷ್ಯ ಹೇಗೆ ರೂಪುಗೊಳ್ಳುತ್ತದೆ ಎಂಬುದೇ ಇಲ್ಲಿಯ ಕಥಾನಕ. ಉಳುವವನೇ ಭೂಮಿಯ ಒಡೆಯನಾಗುವ ಪರ್ವ ಕಾಲದಲ್ಲಿ ಯಾರ್ಯಾರ ಬದುಕು ಹೇಗೆ ತಿರುವು ಪಡೆಯಿತು, ಅದರಿಂದ ಲಾಭ ಪಡೆದುಕೊಂಡವರು, ಭೂಮಿಯನ್ನು ತಮ್ಮದಾಗಿಸಿಕೊಳ್ಳುವ ಇರಾದೆಯಿಂದ, ಹಿನ್ನೆಲೆಯಲ್ಲಿ ಕುತಂತ್ರ ಮಾಡಿದವರೆಷ್ಟು ಜನ ಎಂಬುದನ್ನು ಅತ್ಯಂತ ಮಾರ್ಮಿಕವಾಗಿ ವಸ್ತುನಿಷ್ಠವಾಗಿ ನೀಡಿರುವ ಚಿತ್ರಣ ಮನ ಕಲಕುವಂತಿದೆ. ಒಂದು ಸ್ಥಳದಿಂದ ನಿರ್ಗತಿಕರಾಗಿ ಓಡಿಬಂದವರಿಗೆ ಅನ್ನ ಆಶ್ರಯ ನೀಡಿ ಬದುಕು ಕೊಟ್ಟವರ, ಬದುಕನ್ನೇ ಬುಡಮೇಲು ಮಾಡುವ ಕೆಲಸಗಾರರ ಚಿತ್ರಣ, ಅದಕ್ಕೆ ಕುಮ್ಮಕ್ಕು ನೀಡಿ ಜಮೀನನ್ನೆಲ್ಲ ತಮ್ಮ ವಶ ಮಾಡಿಕೊಳ್ಳುವ ಕೆಲಸಗಾರರ ದಬ್ಬಾಳಿಕೆ, ನಿಯತ್ತಿಗೆ ಹೊರತಾದ ಅವರ ಕಾರ್ಯಭಾರವೆಲ್ಲದರ ಚಿತ್ರಣ ಗಮನಿಸಿದರೆ, ದ್ರೋಹವೆಂಬುದು ಸಾರ್ವಕಾಲಿಕವಾದದ್ದು, ಮನುಷ್ಯನ ಕುಟಿಲತೆ, ನೀಚ ಪ್ರವೃತ್ತಿ ಸಾವಿರ ವರ್ಷ ಕಳೆದರೂ ಬದಲಾಗದಂತಹುದು ಎಂಬುದು ಕಠೋರ ಸತ್ಯವಾಗಿ ಮನಸ್ಸನ್ನು ಆವರಿಸುತ್ತದೆ.
ಕುಯಿರನಾಯಕನ, ವೆಂಕಣ್ಣಯ್ಯರ ಮತ್ತು ಗ್ರಾಮದ ಮುಖ್ಯಸ್ಥ ಬಲ್ಲಾಳರ ಕುಟುಂಬದ ನಡುವೆ ನಡೆಯುವ ಕತೆಯಲ್ಲಿ, ಕೃಷ್ಣಯ್ಯನ ರಸಿಕತೆ, ಹೆಂಗಸೆಂದರೆ ಅವಳು ಮನೆಯಲ್ಲಿ ದುಡಿಯಲಷ್ಟೇ ಅವಳ ಜೀವನವೆಂದು ಕಾಣುವ ಆತನ ದಬ್ಬಾಳಿಕೆ, ಸಂಕಪ್ಪ, ಸತ್ಯನಾರಾಯಣ ಹೀಗೆ ಕೆಲವು ಮುಖ್ಯ ಪಾತ್ರಗಳ ನಡುವೆ ಕತೆ ಮುಂದುವರೆಯುತ್ತದೆ.
ಮನೆಯ ಎಲ್ಲ ಜವಾಬ್ದಾರಿಗಳನ್ನು ಹೊತ್ತು ಮನೆಯನ್ನು ಪ್ರೀತಿಯಿಂದ ನಡೆಸಿಕೊಂಡು ಹೋಗುವ ಗಂಡನನ್ನು ಪಡೆದ ಸಾಕಮ್ಮ, ಶ್ರೀಮಂತ ಗಂಡನನ್ನು ಪಡೆದೂ ದಿನಗೂಲಿಗಳಂತೆ ಜೀವನ ಸಾಗಿಸುವ ಭಾಗೀರಥಿ, ಸಿದ್ಧನಾಯಕನ ಹೆಂಡತಿ ಗಟ್ಟಿಗಿತ್ತಿ ರೂಪ್ಲಿಬಾಯಿ, ಕುಯಿರನ ಹೆಂಡತಿ ಶೇಷೀಬಾಯಿ ಈ ಸ್ತ್ರೀ ಪಾತ್ರಗಳು ಕಾದಂಬರಿಯಲ್ಲಿ ಮುಖ್ಯವಾಹಿನಿಯಲ್ಲಿ ಬಂದರೂ, ಗಂಡನ ಸನ್ನಡತೆಯಲ್ಲಿ ಅವನ ನೆರಳಾಗಿ ಬರುವ ಸಾಕಮ್ಮನದೇ ಮುಖ್ಯಪಾತ್ರವಾಗುತ್ತದೆ. ಜೀವನದ ವೈರುಧ್ಯಗಳನ್ನು, ಬದುಕಿನ ಅಂತಿಮ ಘಟ್ಟದಲ್ಲೂ ಜೀವನ ಪ್ರೀತಿಯನ್ನು ಅದನ್ನು ಪರಿಭಾವಿಸುವ ರೀತಿಯನ್ನು ಕಾದಂಬರಿಕಾರರು ವೆಂಕಣ್ಣಯ್ಯನ ಮೂಲಕ ಕಟ್ಟಿಕೊಡುತ್ತಾರೆ.

ಮಹಾತ್ಮರ ಮೇಲಿನ ಉನ್ನತವಾದ ಪ್ರೀತಿ-ಭಕ್ತಿಯನ್ನು, ಅವರನ್ನು ನೋಡಲೇ ಬೇಕೆಂಬ ಉತ್ಕಟತೆಯನ್ನು, ಗಾಂಧಿಯವರ ಒಂದೇ ಒಂದು ಮಾತಿಗೆ ದೇಶಪ್ರೇಮಕ್ಕಾಗಿ ತಮ್ಮಲ್ಲಿದ್ದ ಧನಕನಕಗಳನ್ನು ದಾನ ಮಾಡಿಬಿಡುವ ಜನರನ್ನು ಅಚ್ಚರಿಯಿಂದ ನೋಡುವ ವೆಂಕಣ್ಣಯ್ಯನ ಮೂಲಕ ಅಂದಿನ ಗಾಂಧಿಯುಗ ಮತ್ತು ಗಾಂಧಿಯವರ ಮೇಲಿನ ಭಕ್ತಿ ಜನಕ್ಕೆ ಹೇಗಿತ್ತು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ, ಮಹಾತ್ಮರು ಕುಂದಾಪುರಕ್ಕೆ ಬಂದದ್ದನ್ನು ಹೇಳುತ್ತಲೇ ತಾವೂ ಕೂಡಾ ಸ್ವಾತಂತ್ರ್ಯದ ಕಡೆಗೆ ಮೊಗ ಮಾಡಿ ನಿಲ್ಲುವ, ಸ್ವಾತಂತ್ರ್ಯ ಬಂದ ಮೇಲೆ ಭಾರತ ಎಲ್ಲ ರೀತಿಯಲ್ಲೂ ಬದಲಾವಣೆಯಾಗಿ ಅಭಿವೃದ್ಧಿ ಹೊಂದುತ್ತದೆ ಎಂದು ಕನಸು ಕಾಣುವ ವೆಂಕಣ್ಣಯ್ಯನ ಮನೆಯಿಂದಲೇ ಇದಕ್ಕೆಲ್ಲ ಶ್ರೀಕಾರ ಹಾಕುವ ವಿಚಿತ್ರ ಪರಿಸ್ಥಿತಿಯೂ ಮತ್ತು ಸ್ವಾತಂತ್ರ್ಯದಿಂದಾಗಿ ಎಲ್ಲವನ್ನೂ ಕಳೆದುಕೊಳ್ಳುವುದನ್ನು ಓದಿಯೇ ಅನುಭವಿಸಬೇಕು.
ಗೇಣಿಗೆ ಜಮೀನನ್ನು ಪಡೆದು, ನಿಯತ್ತಿನ ನಾಯಿಯಂತೆ ದುಡಿಯುವ ಸಿದ್ಧನಾಯಕ, ಮುಂದೆ ತನಗೇ ತಿಳಿಯದಂತೆ ತನ್ನ ಬದುಕು ಬದಲಾಗುವ ಬಗೆಯನ್ನು ಕಂಡು ಅಚ್ಚರಿಗೊಳಗಾಗುವ ಪರಿ, ಅಂದಿನ ಸಾಮಾನ್ಯ ಜನರ ಜೀವನಕ್ಕೆ ಹಿಡಿದ ಕನ್ನಡಿಯಂತಿದೆ. ಇದೆಲ್ಲದರ ಪ್ರತಿನಿಧಿಯಂತೆ ಸಿದ್ಧನಾಯಕ ತೋರುತ್ತಾನೆ.
ಇಲ್ಲಿ ಕೆಲವು ಕಡೆ ಬರುವ ರೋಚಕ ಸನ್ನಿವೇಶಗಳನ್ನೂ ಕೂಡಾ ಸಮಚಿತ್ತದಿಂದ ಚಿತ್ರಿಸಿರುವುದು, ಪಾತ್ರದ ಹೊರಗೆ ನಿಂತು ಕಾದಂಬರಿಯನ್ನು ಕಟ್ಟಿಕೊಟ್ಟಿರುವುದು ಕಾದಂಬರಿಕಾರರ ಕೌಶಲ್ಯವೇ ಸರಿ. ವೈದ್ಯ ಭೀಮರಾಯರ ಮಾತುಗಳು ಮುದ ನೀಡುತ್ತವೆ. `ಬಸ್ಸು ರಸ್ತೆಗೆ ನಡೆಯಲಿಕ್ಕೆ ಆಗದಿದ್ದರೆ, ಕಂಬಳಿಯಲ್ಲಿ ಸುತ್ತಿ ಕೊಂಡು ಹೊತ್ತು ತನ್ನಿ’ ಇಂತಹ ಅನೇಕ ಮಾತುಗಳು ಹವ್ಯಕದಲ್ಲಿ ಕೇಳಲೇ ಚಂದವೆನಿಸುತ್ತದೆ.
ಕಪ್ಪು ಬಿಳಿ ಬಣ್ಣವೇ ಹೆಚ್ಚೆನಿಸಿದರೂ, ಕೆಲವೊಂದು ಬಣ್ಣಗಳು ಅಲ್ಲಲ್ಲಿ ಸೇರಿಕೊಂಡು ಸುಂದರ ನೇಯ್ಗೆಯಾಗಿದೆ ಈ ಕಾದಂಬರಿ. ಜೀವನ, ಜೀವನಪ್ರೀತಿ, ದುಡಿಮೆ, ಮೋಸ, ವಂಚನೆ, ದಬ್ಬಾಳಿಕೆಗಳ ನಡುವೆಯೂ ಸ್ವತಂತ್ರದ ಬದುಕನ್ನೇ ಕಟ್ಟಿಕೊಳ್ಳಬಯಸುವ ಜನರ ಮನಃಸ್ಥಿತಿಯ ಬಗ್ಗೆ ಮರುಕ ಉಂಟಾದರೂ, ಅವರ ಮುಗ್ಧತೆಗೆ ಮಾರು ಹೋಗುಂತಾಗುತ್ತದೆ.
ಶಶಿಧರ ಹಾಲಾಡಿಯವರು ತಮ್ಮ ಬರವಣಿಗೆಯಲ್ಲಿ ತಾವು ತೆಗೆದುಕೊಂಡ ಕಥಾವಸ್ತುವಿನ ಪರಿಸರ, ಹವಾಗುಣ, ಜನ, ಜನರ ನಡವಳಿಕೆಯನ್ನು ಕಥೆಯ ಜೊತೆಜೊತೆಗೇ ಹೆಣೆದುಕೊಂಡು ಹೋಗುತ್ತಾರೆ. (ಅಬ್ಬೆಯಲ್ಲೂ ಕೂಡಾ ಹೀಗೇ ಬಯಲು ಸೀಮೆಯನ್ನು ಹಿಡಿದಿಟ್ಟಿದ್ದು ನೆನಪಾಗುತ್ತದೆ.) ಹಾಗಾಗಿ ಓದುಗರು ಆ ಪರಿಸರಕ್ಕೆ ವಲಸೆಯೆದ್ದುಬಿಡುತ್ತಾರೆ.

ಕಾದಂಬರಿ ಎಲ್ಲಿಯೂ ಬೇಸರ ತರಿಸುವುದಿಲ್ಲ. ನಾನಂತೂ ಮಂಗಳೂರು ಭಾಷೆ ಅಂತಲೇ ಕರೆಯುವುದು. ಇದು ಹವ್ಯಕವೋ, ಕರಾವಳಿಯ ಭಾಷೆಯೋ, ಕುಂದಾಪುರದ್ದೋ ನನಗಂತೂ ಗೊತ್ತಿಲ್ಲ. ಓದಲಂತೂ ಆಪ್ಯಾಯಮಾನವಾಗಿದೆಯೆಂದು ಮಾತ್ರ ಹೇಳಬಲ್ಲೆ. ಸ್ವತಃ ಹಾಲಾಡಿಯವರೂ ಅದೇ ಭಾಷೆಯವರು. ಮುಖಪುಟ ಸ್ವಲ್ಪಹೊತ್ತು ಗಮನಿಸಿ ನೋಡಿ ಅರ್ಥೈಸಿಕೊಂಡರೆ ಕಥಾವಸ್ತುವಿಗೆ ಹೇಗೆ ಪೂರಕವೆಂಬುದು ಮನನವಾಗುತ್ತದೆ. ಪುಸ್ತಕದ ಕ್ವಾಲಿಟಿಯಂತೂ ಅದ್ಭುತವಾಗಿದೆ. ಎಲ್ಲ ಶುಭಗಳೂ ಅವರಿಗೊದಗಿ ಬರಲಿ.
(ಕೃತಿ: ನದಿ ದಾಟಿ ಬಂದವರು (ಕಾದಂಬರಿ), ಲೇಖಕರು: ಶಶಿಧರ ಹಾಲಾಡಿ, ಪ್ರಕಾಶನ: ಅಂಕಿತ ಪುಸ್ತಕ, ಬೆಲೆ: 250/- )

ಬಿ.ಕೆ. ಮೀನಾಕ್ಷಿ ಪ್ರಸ್ತುತ ಮೈಸೂರಿನಲ್ಲಿ ವಾಸಿ. ಕತೆ, ಕವನ, ಪ್ರಬಂಧ, ಲೇಖನ, ಪುಸ್ತಕ ವಿಮರ್ಶೆ, ಮಕ್ಕಳ ಕತೆಗಳನ್ನು ಬರೆಯುವುದು ಇವರ ಹವ್ಯಾಸ. ನಾಡಿನ ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಇದುವರೆಗೂ ಹದಿನಾರು ಪುಸ್ತಕಗಳು ಪ್ರಕಟವಾಗಿದ್ದು, ಮೂರು ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಕೆಲವು ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಪ್ರಶಸ್ತಿಗಳೂ ಸಂದಿವೆ. ಅಕ್ಕಮಹಾದೇವಿ ಪ್ರಶಸ್ತಿ, ಭೂಮಿಗಿರಿ ನಾರಣಪ್ಪ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳು ಲಭ್ಯವಾಗಿವೆ.

