ಇದು ಕೇವಲ ನನ್ನ ಆಲೋಚನೆಯಾದರೆ ಮಾತ್ರ ಸಾಕೆ. ಆ ಬದಿಯಲ್ಲೂ ನನ್ನ ಜೊತೆಯ ಬಾಂಧವ್ಯ ಘನತೆಯದೆಂದು ಅನಿಸಬೇಕಲ್ಲ, ನಂಬಿಕೆ ಬರಬೇಕಲ್ಲ ಎಂಬ ವಿಷಯ ಮಾರ್ದನಿಸುವಾಗ ಇದೆಲ್ಲಾ ಆಗದ ವಿಷಯ, ಗೊಂದಲ, ಸಿಕ್ಕು, ವಿಪರೀತ ಚಿಂತನೆಗಳಲ್ಲಿ ಮುಳುಗಿಹೋಗಿದ್ದಿದೆ. ಒಟ್ಟಿನಲ್ಲಿ ಈ ಅಭಿಪ್ರಾಯದ ವೈಪರೀತ್ಯ ಜಾಲದ ಮಧ್ಯೆ ಸಿಲುಕಿ ಕೊನೆಗೊಮ್ಮೆ ಏನೂ ಬೇಡವೆನಿಸಿ ತೆಪ್ಪಗಾಗುವುದು ಸೂಕ್ತವೇನೊ. ಬುದ್ಧಿ ಹಾಗೂ ಸ್ವಾಭಿಮಾನದ ಮಾತನ್ನು ನೆನಪಿಸಿಕೊಳ್ಳುತ್ತಾ ಶರಣಾಗತಿಯ ಮಾತು, ವ್ಯಕ್ತಪಡಿಸುವಿಕೆ ಅಸಹಜವೆಂದುಕೊಳ್ಳುವುದೂ ಅದೇ ವೇಳೆಗೆ ಪ್ರೇಮ, ಸ್ನೇಹವೇ ಬದುಕಿನ ಆತ್ಯಂತಿಕ ಉದ್ದೇಶ, ಅದಿಲ್ಲದೆ ಬದುಕು ಬರಡಾದೀತು ಅಂತಲೂ ಅನಿಸುವುದಿದೆ.
“ದಡ ಸೇರದ ದೋಣಿ” ಸರಣಿಯಲ್ಲಿ ಬಿ.ಎ. ಮಮತಾ ಅರಸೀಕೆರೆ ಬರಹ
ನಾನು ಬಹಳ ಸಲ ಯೋಚಿಸಿದ್ದಿದೆ. ಭಾವುಕತೆಯೆಂಬುದು ನಮ್ಮ ತಲೆಮಾರಿಗೆ ಆವರಿಸಿಕೊಂಡ ಪರಿ ಯಾವುದು? ಎಲ್ಲಿಂದ, ಹೇಗೆ? ಯಾಕೆ? ಅಂತೆಲ್ಲಾ. ಹಾಗಂತ ನಮ್ಮ ತಲೆಮಾರಿನವರೆಲ್ಲ ಭಾವುಕರು ಎಂಬುದಾಗಿ ಹೇಳ್ತಿಲ್ಲ. ಆದರೆ ಭಾವನೆಯ ಮಡಿಲಲ್ಲಂತೂ ಬೆಳೆದವರು ನಾವು. ಅದರಲ್ಲು ನನಗೆ ಅತಿಯಾದ ಭಾವುಕತೆ ಆವರಿಸಿದ್ದು ಯಾಕೆಂದು ಯೋಚಿಸಿದಾಗ ನಿಧಾನವಾಗಿ ಅರ್ಥವಾಗಿದ್ದು ಕೆಲವು ಸಂಗತಿಗಳು. ನಾನು ನೋಡಿದ್ದ ಸಿನೆಮಾಗಳು, ಓದಿದ ಅತಿಯಾದ ಸಂವೇದನೆಯ ಕೌಟುಂಬಿಕ ಹಿನ್ನೆಲೆ ಕುರಿತ ಪುಸ್ತಕಗಳು ಹೀಗೆ. ವೈಚಾರಿಕ ಅರಿವಿನ ಕುರಿತ ಓದು ಹಾಗೂ ಒಡನಾಟ ಇದ್ದಿದ್ದರೆ ಪೂರಕವಾಗಿ ಚೆನ್ನಾಗಿರುತ್ತಿತ್ತೇನೊ ಅಂತ ಬಹಳ ಸಲ ಆಲೋಚಿಸಿದ್ದಿದೆ.
ನಾವು ನೋಡಿದ ಸಿನೆಮಾಗಳಲ್ಲಿ ಒಂದೊ ಭಕ್ತಿಪ್ರದಾನ, ಕೌಟುಂಬಿಕ ಹಿನ್ನೆಲೆ, ಅತಿಯಾದ ಅಂಟಿಕೊಳ್ಳುವಿಕೆ, ಕಣ್ಣೀರು ಹರಿಸುವಿಕೆ, ಒಂದು ಸಂದರ್ಭವನ್ನು ತೀರಾ ಶೋಚನೀಯವಾಗಿ ತೋರಿಸುವುದು, ತೀವ್ರವಾಗಿ ಯೋಚಿಸುವ ಅದನ್ನೇ ಫೋಕಸ್ ಮಾಡುವ ದೃಶ್ಯಗಳು ಇವೆಲ್ಲ ಮನೋಮಯ ಕೋಶದ ಮೇಲೆ ಬಹಳಷ್ಟು ಪರಿಣಾಮ ಬೀರಿತ್ತು. ಅದೇ ರೀತಿ ಓದಲು ದಕ್ಕಿದ ಪುಸ್ತಕಗಳೂ ಕೂಡ ಇದೇ ಸೂಕ್ಷ್ಮ, ಭಾವನಾತ್ಮಕ, ಕೆಲವೊಮ್ಮೆ ಅತಿರೇಕದ ಸನ್ನಿವೇಶಗಳದ್ದು. ಎರಡೂ ಬಗೆಯ ದಕ್ಕುವಿಕೆ ಆವರಿಸುವಿಕೆ ಹೀಗೆ ಆದರೆ ನಾವು ನೋಡುವ ನೋಟಗಳೂ ಕೂಡ ಇನ್ನು ಹೇಗಿದ್ದಾವು?
ಇಷ್ಟೆಲ್ಲ ಮಾತು ಯಾಕಂದ್ರೆ ಇವೇ ಭಾವಾತಿರೇಕ ಚಿತ್ತವೃತ್ತಿ ಬದುಕಿನ ಮೇಲೂ ಬೇರೆ ಬೇರೆ ಫಲಿತಾಂಶಗಳನ್ನು ನೀಡಿದ್ದು. ಮನೆಯಲ್ಲಿ, ಶಾಲೆಯಲ್ಲಿ, ಕಾಲೇಜಿನಲ್ಲಿ, ನಂತರದ ದಿನಗಳಲ್ಲಿ, ಸ್ನೇಹಿತರೊಂದಿಗೆ, ಸಂಬಂಧಿಕರೊಂದಿಗೆ, ಒಡನಾಡಿದ ಬಾಂಧವ್ಯಗಳೊಂದಿಗೆ ಕೆಲವೊಮ್ಮೆ ವರ್ತಿಸುವ, ಆಲೋಚಿಸುವ ರೀತಿಯೇ ಬೇರೆಯಾಗಿಬಿಡುತ್ತಿತ್ತು. ಒಂದು ಸನ್ನಿವೇಶವನ್ನು, ಸಂದರ್ಭವನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ವೈಚಾರಿಕ ಚಿಂತನೆಯನ್ನೆ ಮಸುಕು ಮಾಡಿಬಿಟ್ಟಿತ್ತು.
ಹಾಗಾದಾಗ ಅರ್ಧಕ್ಕೆ ನಿಂತ ಸ್ನೇಹ, ಪ್ರೇಮ, ಬಾಂಧವ್ಯಗಳು ಹೆಚ್ಚಾದಷ್ಟು ನರಳಿದ್ದು ಹೆಚ್ಚು. ಚಡಪಡಿಸಿದ್ದು ಹೆಚ್ಚು. ಹಾಗೆ ಚಡಪಡಿಕೆ ಅತಿಯಾಗಿ ಅದೇ ಭವಿಷ್ಯದ ಬದುಕನ್ನು ಕದಡಿದ್ದೂ ಹೆಚ್ಚು. ನಿರ್ಣಯ ತೆಗೆದುಕೊಳ್ಳಲಾರದೆ ಗೊಂದಲ, ಗಡಿಬಿಡಿಯಲ್ಲಿ ಸಮಯ ಹಾರಿಹೋಗಿದ್ದೂ ಜಾಸ್ತಿಯೆ. ಒಬ್ಬರೊಂದಿಗಿನ ಬಾಂಧವ್ಯವನ್ನು ಹೇಗೆ ನಿರ್ಧರಿಸುವುದು ಅಂತಲೂ ತಿಳಿಯದೆ ಭಾವಾವೇಶದ ದೌರ್ಬಲ್ಯ ಅಂತರಂಗ, ಬಹಿರಂಗವನ್ನು ಸದಾ ತೊಳಲಾಟದಲ್ಲಿಟ್ಟಿದ್ದೂ ಹೌದು. ಭಾವುಕತನ ಪೆದ್ದುತನಕ್ಕೂ ಹಾದಿಯಾದೀತು ಅಂತ ತಿಳಿದದ್ದು ಸ್ವಲ್ಪ ತಡವಾಗಿಯೆ. ಇವತ್ತಿಗೂ ಹೇಳಬೇಕಾದ್ದನ್ನು ಅದರಲ್ಲೂ ನವಿರಾದ ಮನಸ್ಸಿನ ಮಾತನ್ನು ಹೇಳಲಾಗದೆ, ತಡಬಡಾಯಿಸಿ ನಿಲ್ಲುವುದೆ ಕರ್ಮವಾಗಿದೆ. ಹೇಳಿಬಿಡಬೇಕೆಂಬ ಸಾವಿರ ಸಲದ ಅಲೆಗಳನ್ನು ಈ ಮನಸ್ಸು ಅದೆಷ್ಟು ಹಿಡಿದಿಟ್ಟುಕೊಂಡಿದೆಯೊ ತಿಳಿಯದು. ಸದಾ ಏರಿಳಿತ. ಇನ್ನೇನು ಬದುಕಿನ ಮುಕ್ಕಾಲು ಭಾಗ ಪೂರೈಸಿದೆ. ಇನ್ನೂ ಪಿಸುಗುಡದಿದ್ದರೆ ಮತ್ತಿನ್ಯಾವಾಗ ಅಂದುಕೊಂಡದ್ದಿದೆ. ಆಯಸ್ಸೇನೊ ಅರ್ಧಕ್ಕೂ ಹೆಚ್ಚು ಮುಗಿದಿರಬಹುದು, ಮನಸಿನ ಯುವತನ, ಪ್ರೇಮಭಾವ, ನವಿರುತನ ಇನ್ನೂ ಮುಕ್ಕಾಲು ಭಾಗ ಉಳಿದಿದೆಯಲ್ಲ ಅನಿಸುವುದಿದೆ. ಹಾಗೇನಾದರೂ ಪ್ರೇಮತನವನ್ನು ತೋಡಿಕೊಂಡುಬಿಟ್ಟರೆ ಅದೆಲ್ಲಿ ಸ್ನೇಹಕ್ಕೆ ಧಕ್ಕೆಯಾಗುವುದೋ, ಬಾಂಧವ್ಯ ಕಡಿತವಾಗುವುದೋ ಎಂಬ ದುರ್ಬಲ ಆಲೋಚನೆ ಕೂಡ ಕಾಡುತ್ತದೆ. ಇವತ್ತಿನ ಯುವ ವರ್ಗ ತಮ್ಮೆಲ್ಲ ಆಲೋಚನೆಗಳನ್ನು ಯಾವುದೆ ಎಗ್ಗಿಲ್ಲದೆ ತೋಡಿಕೊಳ್ಳುವಾಗ, ನಿರ್ಣಯಗಳನ್ನು ತತ್ ಕ್ಷಣ ಯಥಾವತ್ತು ಜಾರಿಮಾಡುವಾಗ ಮೆಚ್ಚುಗೆಯಿಂದ ನೋಡುವಂತಾಗುತ್ತದೆ.
ಯುವ ವಯಸ್ಸಿನಲ್ಲಿ ಹೀಗೊಂದು ಪ್ರೇಮಕ್ಕೆ ಸಿಲುಕಿ ಒದ್ದಾಡಿದ್ದು ಇವತ್ತಿಗೂ ಮಾಸದ ನೆನಪು. ನಿರಂತರ ಧ್ಯಾನ. ಸ್ನೇಹ, ಬಾಂಧವ್ಯಗಳು ಅಷ್ಟೇನೂ ಕಾಡಲಿಲ್ಲ. ಹೇಳಲು ಕೇಳಲು ಅರ್ಧದಾರಿಯಲ್ಲೇನೂ ನಿಲ್ಲಲಿಲ್ಲ. ಒಂದೊ ತನ್ನಷ್ಟಕ್ಕೆ ಯಾವುದೇ ಸಂವೇದನೆಯಿಲ್ಲದೆ ಮುಗಿದಿದೆ, ಕೆಲವು ಆಪ್ತತೆಯೊಂದಿಗೆ ಮುಂದುವರೆದೂ ಇವೆ. ಆದರೆ ಪ್ರೇಮವನ್ನು ಮಾತ್ರ ಕನಿಷ್ಠ ಪಕ್ಷ ಕಣ್ಣಿನಲ್ಲೂ ಗೋಚರವಾಗದಂತೆ ತಡೆಹಿಡಿದ ಜಾಣ್ಮೆ ನನ್ನದು. ಜಾಣ್ಮೆಯನ್ನು ಬದುಕಿಗೆ ಬೇಕಾದ ಗುರಿಗಳೊಂದಿಗೆ ವ್ಯಕ್ತಪಡಿಸುವುದರಲ್ಲಿ ತೋರಿಸಿದ್ದರೆ ಏನಾದರೂ ಆಗಬಹುದಿತ್ತೇನೊ. ಪ್ರಳಯವೇ ಆಗಿಬಿಡುತ್ತೇನೊ ಎಂಬ ಹೆದರಿಕೆಯೊಂದಿಗೆ ದಿನಗಳೆದಿದ್ದು ಬದುಕಿನ ಚೋದ್ಯ. ಆಗಿನ ನಮ್ಮ ಸುತ್ತಲಿನ ವಾತಾವರಣವೂ ಹಾಗೇ ಇತ್ತು ಅನ್ನಿ. ಪ್ರೇಮ, ಪ್ರಣಯಗಳೆಲ್ಲ ನಿರ್ಬಂಧಿತ. ಆ ಬಗ್ಗೆ ಮಾತನಾಡುವುದೂ ಅಪರಾಧ. ಮಡಿವಂತಿಕೆಯ ದಿನಗಳು.

ಅಂಥದೇ ದಿನಗಳಲ್ಲಿ ಚಿಗುರು ಪ್ರೀತಿಯೊಂದು ಮೊಗ್ಗಾಗಿ ನಂತರದ ದಿನಗಳಲ್ಲಿ ಆ ಅಪೂರ್ವ ವ್ಯಕ್ತಿತ್ವಕ್ಕೆ ಮಾರುಹೋಗಿದ್ದು ಇವತ್ತಿಗೂ ಆ ಅಪೂರ್ವತೆಯನ್ನು ಮತ್ತೆಲ್ಲೂ ಕಾಣದಂತೆ ಮಂಪರು ಆವರಿಸಿಕೊಂಡದ್ದು ವೈರುಧ್ಯವೊ, ವಿಷಾದವೋ, ಬದುಕಿನ ತಿರುವೊ ಏನೂ ಅರಿಯದ ಸ್ಥಿತಿ. ಕಾದು ನಿಲ್ಲುತ್ತಿದ್ದುದು, ಮಾತನಾಡಿಸಿದರೆ ಪುಳಕ, ಕಂಡರೆ ರೋಮಾಂಚನ, ಒಡನಾಟವೇನಾದರೂ ಸಿಕ್ಕಿಬಿಟ್ಟರೆ ಒದ್ದಾಟ, ಏನು ಹೇಳುವುದು? ಹೇಗೆ ಯಾವತ್ತು ಯಾವ ಬಗೆಯಲ್ಲಿ ಹೇಳುವುದು? ತೋಚದೇ ಅಯೋಮಯ. ಹಾಗೇನಾದರೂ ಒದರಲು ಹೋಗಿ ಅವರಿಗೆ ಇಷ್ಟವಾಗದೆ ಗಲಾಟೆಯಾಗಿಬಿಟ್ಟರೆ, ಏನಾದರೂ ಅಂದುಬಿಟ್ಟರೆ, ಗದರಿಬಿಟ್ಟರೆ, ಒಂಥರಾ ನೋಡಿಬಿಟ್ಟರೆ, ಅವಹೇಳನ ಮಾಡಿಬಿಟ್ಟರೆ, ತಿರಸ್ಕರಿಸಿಬಿಟ್ಟರೆ, ಹುಳುವಂತೆ ಕಂಡರೆ, ಅಪರಾಧವಾಗಿಬಿಟ್ಟರೆ, ಹರಡಿಬಿಟ್ಟರೆ, ರಾಡಿಯೆಬ್ಬಿಸಿದರೆ? ಕತೆಯೇನು, ಗತಿಯೇನು, ಪರಿಣಾಮವೇನು, ಫಲಿತಾಂಶವೇನು, ಛೇ! ರೆ…. ಗಳಲ್ಲೇ ಮುಗಿದು ಹೋದ ಕಾತುರದ ಆತುರದ ಜೀವಂತಿಕೆ ನಂತರದ ದಿನಗಳಲ್ಲಿ ತೊಳಲಾಡಿಸಿದ್ದೇ ಅಧಿಕ.
ದೂರವಾದಾಗ, ಕೈ ತಪ್ಪಿಹೋದಾಗ ಹೇಳಿದ್ದರೆ ಚೆನ್ನಿತ್ತೇನೋ ಅಂತಲೂ, ಹೇಳಿಬಿಟ್ಟು ತಿರಸ್ಕರಿಸಿದರೆ ಗೌರವಕ್ಕೆ ಧಕ್ಕೆಯೇನೊ ಅಂತಲೂ ಕಾಡಿಕೊಂದ ದಿನಗಳವು. ಹೇಳಲು ತೊಡಕಾಗಿದ್ದಾದರೂ ಏನು? ವಿದ್ಯೆ? ಉದ್ಯೋಗ? ಅಂತಸ್ತು? ಮನೋಭಾವ? ಯಾವುದು? ಇವತ್ತು ತಿರುಗಿ ನೋಡಿದಾಗ ಇವೆಲ್ಲವೂ ಕಾರಣ ಅನಿಸತೊಡಗಿದರೆ ಎಷ್ಟು ಸಿಲ್ಲಿಯೆನ್ನುವ ಭಾವ. ಆದರೆ ಅಂದು ಒದ್ದಾಡಿದ್ದೆಷ್ಟು, ಮುಂದಿನ ಬದುಕಿನ ಬಗ್ಗೆ ಯೋಚಿಸಿದ್ದೆಷ್ಟು, ತಡಕಾಡಿದ್ದೆಷ್ಟು, ಜೀವನವನ್ನು ಎಲ್ಲೆಲ್ಲಿಗೋ ಕೊಂಡೊಯ್ದ ಅಭದ್ರತಾ ಮಾದರಿಯನ್ನು ಕಂಡದ್ದೆಷ್ಟು. ಹೇಳಿದ್ದರೆ ಬದುಕು ಬದಲಾಗುತ್ತಿತ್ತಾ? ಗೊತ್ತಿಲ್ಲ. ಹೇಳದಿದ್ದರೂ ಬದಲಾಗಿಯೇ ಇದೆಯಲ್ಲ! ಎತ್ತೆತ್ತಲೋ ಹಂಚಿಹೋಗಿ. ಅಥವಾ ಇದೇ ನಿಜದ ಜೀವನವಾ?
“ಪ್ರೇಮವೆನ್ನುವುದು ಕೂಡಿದ ಕೂಡಲೆ ಕ್ಷಯಿಸುವ ಸಂಗತಿ. ಕೂಡಿದರೂ ಕಾಡುವ ಪಾತ್ರವಾಗುವುದು ಎಲ್ಲಾ ಗಂಡು ಹೆಣ್ಣುಗಳ ಕನಸು. ಹಲವರಿಗೆ ಆ ಕನಸು ಕನಸಾಗಿಯೇ ಉಳಿಯುತ್ತದೆ.’’ ಹೀಗೆ ಸ್ನೇಹಿತರೊಬ್ಬರು ಚಂದವಾಗಿ ಹೇಳಿದ್ದರು. ಏನೇನೋ ಹೇಳಿಬಿಡಬೇಕು, ಏನಾದರಾಗಲಿ ಅಂದುಕೊಂಡಾಗಲೆಲ್ಲ ಮಾತೆ ಬಾರದೆ ನಿಂತುಬಿಡುವಾಗ, ಯಾವ ವಿವೇಕ(ಅವಿವೇಕ?) ತಡೆಯುತ್ತಿದೆ ಅನಿಸಿದಾಗ ಸ್ಪಷ್ಟತೆ ಸಿಕ್ಕಿದ್ದು ಹೀಗೆ. ಎಲ್ಲೆಲ್ಲೋ ಕಳೆದುಹೋಗಲು, ಯಾರ್ಯಾರೊಂದಿಗೊ ಬೆರೆಯಲು ಇಷ್ಟವಿಲ್ಲ. ಸಂಬಂಧವೊ, ಬಾಂಧವ್ಯವೊ, ಕೊನೆಗೆ ಕೂಡಲೂ ಔನತ್ಯದ ಸಾಂಗತ್ಯವೇ ಬೇಕು ಅಂತೆಲ್ಲಾ ಯೋಚಿಸಿದ್ದಿದೆ. ಇದೇ ಕ್ಲಿಷ್ಟತೆಯ ಕ್ಲೀಷೆ ಕೊಂಡಿ ಬೆಸೆಯಲು ಅಡ್ಡಿ. ಖಂಡಿತವಾಗಲೂ ನನಗೆ ಪ್ರೇಮದ ಚೆಲುವು, ಗಾಂಭೀರ್ಯ, ನವಿರುತನವನ್ನು ಕೊನೆವರೆಗೂ ಉಳಿಸಿಕೊಂಡೆ ಕಾಪಿಡುತ್ತೇನೆ ಎಂಬ ಖಚಿತ ನಂಬಿಕೆಯಿದೆ.
ಇದು ಕೇವಲ ನನ್ನ ಆಲೋಚನೆಯಾದರೆ ಮಾತ್ರ ಸಾಕೆ. ಆ ಬದಿಯಲ್ಲೂ ನನ್ನ ಜೊತೆಯ ಬಾಂಧವ್ಯ ಘನತೆಯದೆಂದು ಅನಿಸಬೇಕಲ್ಲ, ನಂಬಿಕೆ ಬರಬೇಕಲ್ಲ ಎಂಬ ವಿಷಯ ಮಾರ್ದನಿಸುವಾಗ ಇದೆಲ್ಲಾ ಆಗದ ವಿಷಯ, ಗೊಂದಲ, ಸಿಕ್ಕು, ವಿಪರೀತ ಚಿಂತನೆಗಳಲ್ಲಿ ಮುಳುಗಿಹೋಗಿದ್ದಿದೆ. ಒಟ್ಟಿನಲ್ಲಿ ಈ ಅಭಿಪ್ರಾಯದ ವೈಪರೀತ್ಯ ಜಾಲದ ಮಧ್ಯೆ ಸಿಲುಕಿ ಕೊನೆಗೊಮ್ಮೆ ಏನೂ ಬೇಡವೆನಿಸಿ ತೆಪ್ಪಗಾಗುವುದು ಸೂಕ್ತವೇನೊ. ಬುದ್ಧಿ ಹಾಗೂ ಸ್ವಾಭಿಮಾನದ ಮಾತನ್ನು ನೆನಪಿಸಿಕೊಳ್ಳುತ್ತಾ ಶರಣಾಗತಿಯ ಮಾತು, ವ್ಯಕ್ತಪಡಿಸುವಿಕೆ ಅಸಹಜವೆಂದುಕೊಳ್ಳುವುದೂ ಅದೇ ವೇಳೆಗೆ ಪ್ರೇಮ, ಸ್ನೇಹವೇ ಬದುಕಿನ ಆತ್ಯಂತಿಕ ಉದ್ದೇಶ, ಅದಿಲ್ಲದೆ ಬದುಕು ಬರಡಾದೀತು ಅಂತಲೂ ಅನಿಸುವುದಿದೆ.

ಸಾಕಷ್ಟು ಹೇಳುವುದಿದೆ. ಹಂಚಿಕೊಳ್ಳಿ ಅಂತಲೇ ಕೆಂಡಸಂಪಿಗೆ ಪೂರ್ಣ ಮುಕ್ತ ಹಾದಿಯನ್ನು ತೆರೆದಿದೆ. ಆದರೂ ಮುಕ್ತವಾಗಿ ಹೇಳಲು ಆಗದು ಯಾಕೆ? ಬಾಂಧವ್ಯವೆನ್ನುವುದು ಒಂದು ಮಾರ್ಗದ ಹಾದಿಯಲ್ಲ. ಆ ಬದಿಯಿಂದಲೂ ಯೋಚಿಸಬೇಕಾಗುತ್ತದೆ. ಅಲ್ಲಿಂದಲೂ ಸಮಾನಾಂತರ ಸ್ಪಂದನೆ ಅಗತ್ಯ. ಇಲ್ಲವಾದರೆ ಅದು ಒಂದು ಭಾಗದ ಪ್ರೇಮಪಯಣ ಮಾತ್ರ. ಇಲ್ಲಿ ಎರಡು ಸಮಾನಾಂತರ ರೇಖೆಗಳಿವೆ. ಕೂಡಿದರೆ ಝಿಗ್ ಜಾಗ್ ಸಾಲಿನಂತೆ ಅಂದವಾಗುತ್ತದೆ. ಇಲ್ಲವಾದರೆ ಸಮಾನಾಂತರವಾಗಿಯೆ ಉಳಿದು ಕೊನೆವರೆಗೂ ಹಾಗೇ ಉಳಿಯುವ ಹಣೆಬರಹ. ಹೇಳದೇ ಉಳಿಯುವುದು ಕೆಲವೊಮ್ಮೆ ತೀರಾ ಅತ್ಯಗತ್ಯವೂ ಆಗಬಹುದು. ಆ ಭಾವಪರವಶತೆಯನ್ನು ಹಾಗ್ಹಾಗೆ ಮುದ್ದಾಗಿ ಕಾಪಿಡಬಹುದು. ಕೊನೆಗೂ ಹಂಚಿಕೊಳ್ಳುವುದು ಕೆಲವಷ್ಟಾದರೂ ಬಾಕಿಯುಳಿವುದು. ಹೇಳದೇ ಉಳಿವ ಭಾವಕ್ಕೇ ಬೆಲೆ ಜಾಸ್ತಿಯೆನೊ!

ಬಿ.ಎ. ಮಮತಾ ಅರಸೀಕೆರೆ ಅವರು ಮೂಲತಃ ಹಾಸನ ಜಿಲ್ಲೆಯವರು. ಸಂತೆ ಸರಕು (ಕವನ ಸಂಕಲನ) ಮತ್ತು ಕಾಲಡಿಯ ಮಣ್ಣು (ಅನುವಾದಿತ ಕೃತಿ) ಇವರ ಪ್ರಕಟಿತ ಕೃತಿಗಳು.

