‘ಸಂಸ್ಕಾರ’ ಕಾದಂಬರಿಯ ಕರ್ತೃ ಯು ಆರ್ ಅನಂತಮೂರ್ತಿ ಚಿತ್ರಕಥೆಯಲ್ಲಿ ಮಾಡಿಕೊಂಡಿದ್ದ ಬದಲಾವಣೆಗಳ ಬಗ್ಗೆ ಹೇಳಿದ್ದ ಮಾತುಗಳನ್ನು ಗಮನಿಸಿದರೆ ‘ಸ್ವ-ಸೆನ್ಸಾರಿಕರಣ’ ಅಲ್ಲಿಯೂ ಸಹ ಕೆಲಸ ಮಾಡಿದ್ದನ್ನು ಗಮನಿಸಬಹುದು. ನಾರಣಪ್ಪನ ಸಂಸ್ಕಾರ ಕಾದಂಬರಿಯ ಅರ್ಧದಲ್ಲಿಯೇ ಒಬ್ಬ ಮುಸ್ಲಿಮ್ ವ್ಯಕ್ತಿಯಿಂದ ನಡೆದು ಹೋಗಿರುತ್ತದೆ. ಆದರೆ ಚಿತ್ರ ಅದರ ಬಗ್ಗೆ ಮೌನ ತಳೆಯುತ್ತದೆ. ಈ ‘ದಿವ್ಯಮೌನ’ ಪ್ರಾಣೇಶಾಚಾರ್ಯರ ತುಮುಲಕ್ಕೆ ಇನ್ನೊಂದು ಆಯಾಮ ನೀಡುವುದರ ಜೊತೆಗೆ ಹಾಗೇನಾದರೂ ಚಿತ್ರದಲ್ಲಿ ತೋರಿಸಿದ್ದಿದ್ದರೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯೇ ಇರುತ್ತಿರಲಿಲ್ಲ ಎನ್ನುವುದೂ ನಿಜ ತಾನೇ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹತ್ತನೆಯ ಬರಹ
‘ಸಂಸ್ಕಾರ’ ಕನ್ನಡದಲ್ಲಿ ಹೊಸ-ಅಲೆ ಸಿನಿಮಾವನ್ನು ಉದ್ಘಾಟಿಸಿದ್ದಷ್ಟೇ ಅಲ್ಲ, ಹೊಸ ರೀತಿಯ ಹಗರಣಗಳ ಪರಂಪರೆಗೂ ಸಹ ನಾಂದಿ ಹಾಡಿತು. ಆಗ ಸೆನ್ಸಾರ್ ಮಂಡಳಿ ಇದ್ದದ್ದು ಅಂದಿನ ಮದ್ರಾಸಿನಲ್ಲಿ. ಅಲ್ಲಲ್ಲಿ ಎದ್ದ ಗುಲ್ಲು ಸುದ್ದಿಯ ಪ್ರಕಾರ ಮಾಧ್ವ ಬ್ರಾಹ್ಮಣ ಸಮುದಾಯದ ಕೋಪಕ್ಕೆ ತುತ್ತಾಗಿದ್ದ ‘ಸಂಸ್ಕಾರ’ ಕಾದಂಬರಿಯನ್ನು ಆಧರಿಸಿ ಮಾಡಿದ ಚಿತ್ರದ ಪ್ರದರ್ಶನವನ್ನು ಆ ಸಮುದಾಯವನ್ನು ಮತ್ತಷ್ಟು ‘ನೋಯಿಸುವ’ ಧೈರ್ಯವಿಲ್ಲದೆ ಸೆನ್ಸಾರ್ ಮಂಡಳಿ ತಡೆ ಹಿಡಿದಿತ್ತು. ಅದನ್ನು ಮಂಡಳಿ ಅಧಿಕೃತವಾಗಿ ಪ್ರಕಟಿಸಿರಲಿಲ್ಲ.
ಆದರೆ ದೇಶದುದ್ದಕ್ಕೂ ಹಿಂದೆಂದೂ ಕಂಡಿಲ್ಲದ ಮಟ್ಟದಲ್ಲಿ ‘ಸಂಸ್ಕಾರ’ದ ವಿರುದ್ಧ ಪ್ರತಿಭಟನೆ ಮತ್ತು ಪ್ರದರ್ಶನಗಳು ನಡೆದವು. ಸದಭಿರುಚಿಯ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಲಿಲ್ಲ ಎಂದು ಹಿಂದೆ ಪ್ರತಿಭಟನೆ ನಡೆದದ್ದು ನಿಜ. ಉದಾಹರಣೆಗೆ ‘ನಾಂದಿ’ (1964). ಆದರೆ ಕನ್ನಡ ಸಮಾಜದ ಸಮುದಾಯವೊಂದು ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದಿದೆ, ತಮ್ಮ ಜಾತಿ ಅಸ್ಮಿತೆಗೆ ಆತಂಕವುಂಟಾಗಿದೆ ಎಂಬ ಕಾರಣವನ್ನು ಒಡ್ಡಿ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದ್ದು ಹೊಸ ರೀತಿಯೇ ಆಗಿತ್ತು.
‘ಸಂಸ್ಕಾರ’ (1970) ಚಿತ್ರದ ನಿರ್ದೇಶಕ ಗಿರೀಶ್ ಕಾರ್ನಾಡರು ತಮ್ಮ ಆತ್ಮಕಥನ ‘ಆಡಾಡತ ಆಯುಷ್ಯ’ ದಲ್ಲಿ ಅದರ ಬಗ್ಗೆ ಹೀಗೆ ಬರೆಯುತ್ತಾರೆ:
ಚಿತ್ರೀಕರಣ ಮುಗಿಸಿ ಮದ್ರಾಸಿಗೆ ಮರಳಿದ ಕೆಲ ತಿಂಗಳಲ್ಲೇ ನಾನು ಆರು ವಾರಕ್ಕಾಗಿ ನನ್ನ ಆಫೀಸಿನ ವತಿಯಿಂದ ಲಂಡನ್ನಿಗೆ ಹೋದೆ. ಮರಳಿ ಬಂದಾಗ ದಾರಿಗುಂಟ ಮುಂಬೈ ಆಫೀಸಿನಲ್ಲಿ ಕಿವಿಗೆ ಬಿದ್ದ ಮೊತ್ತ ಮೊದಲನೆಯ ಸುದ್ದಿ ಎಂದರೆ ಸೆನ್ಸಾರಿಗರು ‘ಸಂಸ್ಕಾರ’ದ ಮೇಲೆ ಪ್ರತಿಬಂಧ ಹಾಕಿದ್ದರು!

ನಾನು ಕೊಡಲೇ ಸೆನ್ಸಾರ್ ಬೋರ್ಡಿನ ಚೇರಮಮ್‌ಗೆ ಫೋನ್ ಮಾಡಿ ಪ್ರಶ್ನಿಸಿದೆ. ‘ಚಿತ್ರಪಟ ಬ್ರಾಹ್ಮಣ ವಿರೋಧಿಯಾಗಿದೆ ಎಂದು ಬೋರ್ಡು ಅಭಿಪ್ರಾಯಪಟ್ಟಿದೆ,’ ಎಂದು ಅವರು ಉತ್ತರವಿತ್ತರು.
ನಾನು ‘ಕಾದಂಬರಿ ಬರೆದವರು ಬ್ರಾಹ್ಮಣರು, ಪ್ರಕಟಿಸಿದವರು ಬ್ರಾಹ್ಮಣರು, ನಾನು ಬ್ರಾಹ್ಮಣ, ಕಲಾನಿರ್ದೇಶಕ — ಸಹ ನಿರ್ದೇಶಕರೂ ಬ್ರಾಹ್ಮಣರು, ಭಾಗವಹಿಸಿದವರಲ್ಲಿ ಹೆಚ್ಚು ಜನ ಬ್ರಾಹ್ಮಣರು, ಅಂದಾಗ ಚಿತ್ರ ಬ್ರಾಹ್ಮಣ ವಿರೋಧಿಯಾಗುವುದು ಹೇಗೆ ಸಾಧ್ಯ?’ ಎಂದು ಕೇಳಿದೆ.
‘ಅದು ನಮಗೆ ಗೊತ್ತಿರಲಿಲ್ಲ,’ ಎಂದರು.
‘ಹಾಗಾದರೆ ಸೆನ್ಸಾರ್ ಸರ್ಟಿಫಿಕೇಟು ಸಿಗುವ ಮೊದಲು ಚಿತ್ರನಿರ್ಮಾಣದಲ್ಲಿ ಭಾಗವಹಿಸಿದವರ ಜಾತಿಗಳೆಲ್ಲ ಗೊತ್ತಾಗಬೇಕೇನು?’ ಎಂದು ಕೇಳಿದೆ.
ಅವರು ನಕ್ಕರು. ನಾನು ಅಲ್ಲಿಗೆ ಸುಮ್ಮನಾಗಲಿಲ್ಲ.
‘ಈಗ ನಾನು ವಸ್ತುಸ್ಥಿತಿಯನ್ನು ಹೇಳಿದ್ದೇನೆ ಅಂದ ಮೇಲೆ ಗೊತ್ತಾಯಿತಲ್ಲ. ಈಗಲಾದರೂ ನಿಷೇಧ ಹಿಂತೆಗೆದುಕೊಳ್ಳಿರಿ,’ ಎಂದೆ.
‘ಈಗ ಇಡಿಯ ಫೈಲು ದಿಲ್ಲಿಯಲ್ಲಿ ಮಿನಿಸ್ಟ್ರಿಗೆ ಅಪೀಲು ಆಗಿ ಹೋಗಿದೆ. ಅವರೇ ನಿರ್ಧರಿಸಲಿ,’ ಎಂದು ಉತ್ತರ ಬಂತು. (ಪು. 245)
ನಿರ್ಮಾಪಕ-ನಿರ್ದೇಶಕ ಪಟ್ಟಾಭಿರಾಮ ರೆಡ್ಡಿಯವರು ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ವಾರ್ತಾ ಮತ್ತು ಪ್ರಚಾರ ಇಲಾಖೆಗೆ ಅಹವಾಲನ್ನು ಸಲ್ಲಿಸಿದ್ದರು. ದೇಶದುದ್ದಕ್ಕೂ ಬೌದ್ಧಿಕ ವಲಯಗಳಿಂದ ಅಂತಹ ಸೆನ್ಸಾರ್ಶಿಪ್ ವಿರೋಧಿಸಿ ಸಾರ್ವಜನಿಕ ಹೇಳಿಕೆಗಳು ಹೊರಬಂದವು. ಚಿತ್ರೀಕರಣ ಪ್ರಾರಂಭವಾಗುವ ಮುಂಚೆಯೇ ಶೃಂಗೇರಿ ಮಠದ ಸ್ವಾಮಿಗಳಿಂದ ಅನುಮತಿಯನ್ನು ಪಡೆಯಲಾಗಿತ್ತು ಎಂಬ ವಿಷಯವನ್ನು ಅಲ್ಲಿ ಸೇರಿಸಲಾಗಿತ್ತು.
ಪ್ರಾಂತೀಯ ಸೆನ್ಸಾರ್ ಬೋರ್ಡಿನ ನಿಲುವನ್ನು ಕೇಂದ್ರದ ಮಂಡಳಿಯು ಅನುಮೋದಿಸಿದ್ದರಿಂದ ಅಂತಿಮ ನಿರ್ಧಾರವನ್ನು ಕೇಂದ್ರ ಸರಕಾರಕ್ಕೆ ಬಿಡಲಾಗಿತ್ತು. ಕೇಂದ್ರದ ವಾರ್ತಾ ಮತ್ತು ಪ್ರಚಾರ ಮಂತ್ರಿ ಐ ಕೆ ಗುಜರಾಲ್ ಅವರ ಹತ್ತಿರ ಅಹವಾಲು ತಲುಪಿತು. ಚಿತ್ರವನ್ನು ದೆಹಲಿಯ ಶಿಷ್ಟ ಪ್ರೇಕ್ಷಕರ ಅವಗಾಹನೆಗೆ ಹಲವಾರು ಬಾರಿ ಪ್ರದರ್ಶಿಸಲಾಯಿತು.
ಪ್ರಾಂತೀಯ ಮಟ್ಟದಲ್ಲಿ ಮೈಸೂರಿನ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಪಟ್ಟಾಭಿಯವರ ಬೆಂಬಲಕ್ಕೆ ನಿಂತಿತು. ಕನ್ನಡ ಪ್ರಜ್ಞೆಯಲ್ಲಿ ಹೊಸ ದಿಕ್ಕನ್ನೇ ಮೂಡಿಸಿದ್ದ ಒಂದು ಕಾದಂಬರಿಯನ್ನು ಆಧರಿಸಿ ಮಾಡಿದ ಚಿತ್ರವನ್ನು ಬೋರ್ಡು ನಿಷೇಧಿಸುವುದು ತರವೆ? ಅದೂ ಯಾಕೆ ಎಂದು ಸರಿಯಾದ ಕಾರಣಗಳನ್ನೇ ನೀಡದೆ?

ಕನ್ನಡ ಚಲನಚಿತ್ರ ಇತಿಹಾಸಕಾರರ ಪ್ರಕಾರ ಮೈಸೂರಿನ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಮೊಟ್ಟ ಮೊದಲ ಬಾರಿಗೆ ಕೇಂದ್ರದ ಸೆನ್ಸಾರ್ ಮಂಡಳಿಯೊಂದಿಗೆ ಸಕ್ರಿಯವಾಗಿ ಸಂಧಾನವನ್ನು ನಡೆಸಿತ್ತು. ಕನ್ನಡ ಮಾಧ್ಯಮಗಳು ಇದರ ಬಗ್ಗೆ ಸಾಕಷ್ಟು ಬರೆದು ಇಂತಹ ವಿನಾಕಾರಣದ ನಿರ್ಧಾರವನ್ನು ಖಂಡಿಸಿದ್ದವು. ಹಲವಾರು ಸೆಮಿನಾರು ಮತ್ತು ಸಮ್ಮೇಳನಗಳಲ್ಲಿ ಇದನ್ನು ಚರ್ಚಿಸಲಾಯಿತು.
ಕೊನೆಗೆ ‘ಹಗರಣ’ ಪಾರ್ಲಿಮೆಂಟಿನ ಬಾಗಿಲನ್ನೂ ದಾಟಿ ಒಳಗೆ ಹೋಯಿತು.
ಐ ಕೆ ಗುಜರಾಲ್ ಅವರು ಪಾರ್ಲಿಮೆಂಟಿನಲ್ಲಿ ಈ ವಿಷಯವನ್ನು ಎತ್ತಿ ಮಾಧ್ವ ಯೂತ್ ಎಂಬ ಸಂಸ್ಥೆಯಿಂದ ಬಂದಿದ್ದ ನಿಷೇಧದ ಬೇಡಿಕೆಗೆ ಉತ್ತರವಾಗಿ ಸೆನ್ಸಾರ್ ಮಂಡಳಿ ಅದನ್ನು ನಿಷೇಧಿಸಿತ್ತು ಎನ್ನುವುದನ್ನು ಬಹಿರಂಗಪಡಿಸಿದರು. ಕೊನೆಗೂ ಎ ಸರ್ಟಿಫಿಕೇಟನ್ನು ಹೊತ್ತು ‘ಸಂಸ್ಕಾರ’ ಬಿಡುಗಡೆಯಾಗಿದ್ದು 1970ರ ಜನವರಿಯಲ್ಲಿ.
ಮಾಧ್ವ ಯೂತ್ ಸಂಸ್ಥೆ ಅಲ್ಲಿಗೆ ಸುಮ್ಮನಾಗಲಿಲ್ಲ. ಚಿತ್ರವನ್ನು ನಿಷೇಧಿಸಬೇಕೆಂದು ಸಾರ್ವಜನಿಕ ಆಗ್ರಹವನ್ನು ಮುಂದುವರೆಸಿತು. ಜುಲೈ 3, 1970ರಂದು ಬೆಂಗಳೂರಿನಲ್ಲಿ ನಡೆದ ಮೊದಲ ಪ್ರದರ್ಶನದಲ್ಲಿ ಐ ಕೆ ಗುಜರಾಲ್ ಅವರೇ ಖುದ್ದು ಹಾಜರಿದ್ದರು. ಎರಡು ಕಡೆ ಕತ್ತರಿ ಹಾಕಲಾಗಿತ್ತು. ‘ಶೂದ್ರಸ್ತ್ರೀ’ ಇದ್ದಲ್ಲಿ ‘ಶೂದ್ರ’ ಮತ್ತು ‘ಗೋಮಾಂಸ’ದಲ್ಲಿ ‘ಗೋ’ ಕಾಣೆಯಾಗಿದ್ದವು.
ಇಷ್ಟಾದರೂ ಪ್ರತಿಭಟನೆ, ಅದಕ್ಕುತ್ತರವಾಗಿ ಇನ್ನಷ್ಟು ಪ್ರತಿಭಟನೆಗಳು, ವಾದ-ವಿವಾದಗಳು ಮುಂದಿನ ಹಲವಾರು ತಿಂಗಳುಗಳ ಮಟ್ಟಿಗೆ ಮುಂದುವರಿದವು. ಬ್ರಾಹ್ಮಣರನ್ನು ಅವಮಾನಿಸಲೆಂದೇ ಈ ಚಿತ್ರವನ್ನು ಮಾಡಲಾಗಿದೆ ಎಂದು ಗುಲ್ಲೆಬ್ಬಿಸಲಾಯಿತು. ಚಿತ್ರದ ಶೀರ್ಷಿಕೆ ಫಲಕಗಳನ್ನು ತೋರಿಸುವಾಗ ಶೃಂಗೇರಿ ಶ್ರೀಗಳ ಆಶೀರ್ವಾದವನ್ನು ಪಡೆಯಲಾಗಿದೆ ಎಂಬುದು ಕಾಣಿಸಿಕೊಂಡಿತು. ಬೆಂಗಳೂರಿನ ಶಂಕರ ಮಠದ ಪ್ರಧಾನ ಉಸ್ತುವಾರಿ ಭಾಸ್ಕರ್ ರಾವ್ ಅದನ್ನು ಪ್ರತಿಭಟಿಸಿದಾಗ ಪಟ್ಟಾಭಿ ಮಧ್ಯ ಪ್ರವೇಶಿಸಿ ಶೃಂಗೇರಿ ಶ್ರೀಗಳು ಸಹಿ ಮಾಡಿದ್ದ ಪತ್ರ ಬೇಕಿದ್ದರೆ ತೋರಿಸುತ್ತೇನೆ ಎಂದು ಹೇಳಿಕೆ ಕೊಟ್ಟರು.
‘ಸಂಸ್ಕಾರ’ ಭರ್ಜರಿ ಯಶಸ್ಸನ್ನು ಕಂಡಿತು. ಹಲವಾರು ಹೊರದೇಶಗಳ ವಾಣಿಜ್ಯ ವಲಯಗಳಲ್ಲಿ ಮತ್ತು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ ಮೊತ್ತ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಇವತ್ತಿಗೂ ಇಷ್ಟರ ಮಟ್ಟಿಗೆ ಅಂತರಾಷ್ಟ್ರೀಯ ಯಶಸ್ಸನ್ನು ಕಂಡ ಚಿತ್ರ ಇನ್ನೊಂದಿಲ್ಲ ಎನ್ನುವುದು ಇತಿಹಾಸಕಾರರ ನಿಲುವು. ‘ಸಂಸ್ಕಾರ’ವನ್ನು ಇಷ್ಟರ ಮಟ್ಟಿಗೆ ಜನಪ್ರಿಯಗೊಳಿಸಿದ್ದು ಸೆನ್ಸಾರ್ ಮಂಡಳಿ ನಿಷೇಧ ಎಂಬ ಗಾಳಿಮಾತಿನ ನಿಲುವಿದೆ ನಿಜ. ಆದರೆ ಕಾರ್ನಾಡರ ಗ್ರಹಿಕೆಯೇ ಬೇರೆ.
ಅಷ್ಟರಲ್ಲಿ ನಿಷೇಧಿತ ಚಿತ್ರ ಕರ್ನಾಟಕದಲ್ಲೆಲ್ಲ ಕುತೂಹಲ ಕೆರಳಿಸಿತ್ತು. ಸೆನ್ಸಾರ್ ಮಂಡಳಿಯ ನಿಷೇಧದಿಂದಾಗಿ ‘ಸಂಸ್ಕಾರ’ ಕರ್ನಾಟಕದಲ್ಲಿ ಮನೆಮಾತಾಯಿತು. ಚಿತ್ರ ನಿರೀಕ್ಷೆಗೆ ಮೀರಿ ಯಶಸ್ವಿಯಾಯಿತು. ಆದರೆ ಈ ಯಶಸ್ಸಿಗೆ ಕೇವಲ ಆ ನಿಷೇಧವಾಗಲಿ, ಕಥಾಸಾಮಗ್ರಿಯ ನವ್ಯತೆಯಾಗಲಿ ಕಾರಣವಾಗಿರದೆ, ಚಿತ್ರದಲ್ಲಿದ್ದ ಚಂದ್ರಿ – ಪ್ರಾಣೇಶಾಚಾರ್ಯರ ಸಂಭೋಗದ ಉತ್ತೇಜಕ ಚಿತ್ರೀಕರಣ ಕೂಡ ಪ್ರೇಕ್ಷಕರನ್ನು ಹಿಂಡು ಹಿಂಡಾಗಿ ಆಕರ್ಷಿಸಿರಬೇಕು ಎಂಬ ಅಂದಾಜು ನನಗಿದೆ. ಅಲ್ಲಿಯವರೆಗೆ ಭಾರತೀಯ ಚಿತ್ರಗಳಲ್ಲೆಲ್ಲ ಸಮಾಗಮ ಸೂಚ್ಯವಾಗಿ ತೋರಿಸಲಾಗುತ್ತಿತ್ತು. ಕೂಟದಲ್ಲಿ ತೊಡಗಬಯಸುವ ಜೋಡಿ ಪರಸ್ಪರರನ್ನು ಸಮೀಪಿಸುತ್ತಿರುವಂತೆ, ಕ್ಯಾಮೆರಾ ನಾಚಿದಂತೆ ಇನ್ನೆಲ್ಲೋ ಕಣ್ಣು ಹೊರಳಿಸುತ್ತಿತ್ತು. ಆದರೆ ‘ಸಂಸ್ಕಾರ’ದಲ್ಲಿ ಆಲಿಂಗನದಿಂದ ಆರಂಭವಾಗುವ ಕ್ರಿಯೆ ಅಂಗಾಂಗಳ ಘರ್ಷಣೆ, ಹೊರಳಾಟ, ಮೈದಡವು, ಮರ್ದನಗಳನ್ನು ಅವಯವಗಳ close-up ಗಳಲ್ಲೇ ಹಿಡಿದು ನಾದುವ ಕೈ ಹಿಚುಕುತ್ತಿರುವುದು ಹೆಗಲಿನ ಮಾಂಸಖಂಡವೋ ನಿತಂಬದ ಗೋಲವೋ, ತಡಕಾಡುವ ಕೈ ಹುಚ್ಚುಹುಚ್ಚಾಗಿ ಅರಸುತ್ತಿರುವುದು ಕಂಕುಳದ ಸಂದಿಯನ್ನೋ ಗುಹ ಸೀಳನ್ನೋ ಎಂಬ ದಿಗ್ಭ್ರಮೆ ಹುಟ್ಟಿಸುವ ಹಾಗಿತ್ತು. ಇನ್ನು ಚಂದ್ರಿಯ ಕಥಾನಕಕ್ಕೆ ಇದೇ ಉತ್ಪ್ರೇಕ್ಷಾ ಕ್ಷಣವಿದ್ದುದರಿಂದ ತನ್ನ ಎಲ್ಲ ಉತ್ಕಟತೆಯನ್ನೂ ಭೋಗಾಸಕ್ತಿಯನ್ನೂ ತನ್ನ ಕಣ್ಣಲ್ಲಿ, ಉಸಿರಲ್ಲಿ, ನೇವರಿಕೆಯಲ್ಲಿ ಸುರಿದಳು. ಹೆಣ್ಣಿನ sexuality ಇಷ್ಟು ಉತ್ಥಾನವಾಗಿ ಭಾರತೀಯ ಚಿತ್ರಗಳಲ್ಲಿ ಮೊದಲು ಎಂದೂ ಚಿತ್ರಿತವಾಗಿರಲಿಲ್ಲ. ಅನಂತಮೂರ್ತಿಗೆ ಸಾಹಿತ್ಯ ಸೃಷ್ಟಿಯಲ್ಲಿ ಗುರುವಾಗಿದ್ದ ಡಿ ಎಚ್ ಲಾರೆನ್ಸ್ ಕಾದಂಬರಿಕಾರ ಈ ಚಿತ್ರೀಕರಣವನ್ನು ಖಂಡಿತವಾಗಿ ಮೆಚ್ಚಿಕೊಳ್ಳುತ್ತಿದ್ದ. ಆದರೆ ಟಾಮ್ ಗೆ ಮಾತ್ರ ಅಂದಿನ ಫ್ರೆಂಚ್- ಇಟಾಲಿಯನ್ ಚಿತ್ರಗಳ ಶೈಲಿ ಸ್ಫೂರ್ತಿ ನೀಡಿತ್ತು.…
ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಕಂಡಿತಷ್ಟೇ ಅಲ್ಲ, ಆ ವರ್ಷದ ಅತುತ್ತಮ ಚಿತ್ರ ಎಂದು ಸುವರ್ಣ ಕಮಲದ ರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ ಗೆದ್ದುಕೊಂಡಿತು.
ಸರಕಾರದಿಂದ ನಿಷೇಧಿತವಾದ ಚಿತ್ರಕ್ಕೆ ಅದೇ ಸರಕಾರದಿಂದ ಸ್ವರ್ಣ ಕಮಲ!
ನಮಗೆ ಅತ್ಯಂತ ಹರ್ಷವಾಗಲಿಕ್ಕೆ ಕಾರಣವೆಂದರೆ ರಾಷ್ಟ್ರೀಯ ಸ್ಪರ್ಧೆಯಲ್ಲಿ ‘ಸಂಸ್ಕಾರ’ ಸತ್ಯಜಿತ್ ರಾಯರ ‘ಪ್ರತಿದ್ವಂದಿ’ಯನ್ನು ಸೋಲಿಸಿತ್ತು. ನಾವು ನಮ್ಮ ಗುರುವಿಗೆ ಸಲ್ಲಿಸಿದ ಕಾಣಿಕೆಯಾಗಿತ್ತದು. (ಪು. 246-7)
ಚಲನಚಿತ್ರದಲ್ಲಿ ಸಮುದಾಯದ ಅಸ್ಮಿತೆಯ ಬಗ್ಗೆ ನಡೆದ ಈ ವಾದ-ವಿವಾದಕ್ಕೂ ಮುಂಚೆಯೇ ಅದನ್ನು ಊಹಿಸಬಲ್ಲ ಶಕ್ತಿಯಿದ್ದ ಪ್ರಾಜ್ಞರು self-censorship ಎಂಬ ಪ್ರಕ್ರಿಯೆಗೆ ಪಕ್ಕಾಗುವ ಅನಿವಾರ್ಯವಂತೂ ಇತ್ತು. ಉದಾಹರಣೆಗೆ ‘ಸಂಸ್ಕಾರ’ ಕಾದಂಬರಿಯ ಕರ್ತೃ ಯು ಆರ್ ಅನಂತಮೂರ್ತಿ ಚಿತ್ರಕಥೆಯಲ್ಲಿ ಮಾಡಿಕೊಂಡಿದ್ದ ಬದಲಾವಣೆಗಳ ಬಗ್ಗೆ ಹೇಳಿದ್ದ ಮಾತುಗಳನ್ನು ಗಮನಿಸಿದರೆ ‘ಸ್ವ-ಸೆನ್ಸಾರಿಕರಣ’ ಅಲ್ಲಿಯೂ ಸಹ ಕೆಲಸ ಮಾಡಿದ್ದನ್ನು ಗಮನಿಸಬಹುದು. ನಾರಣಪ್ಪನ ಸಂಸ್ಕಾರ ಕಾದಂಬರಿಯ ಅರ್ಧದಲ್ಲಿಯೇ ಒಬ್ಬ ಮುಸ್ಲಿಮ್ ವ್ಯಕ್ತಿಯಿಂದ ನಡೆದು ಹೋಗಿರುತ್ತದೆ. ಆದರೆ ಚಿತ್ರ ಅದರ ಬಗ್ಗೆ ಮೌನ ತಳೆಯುತ್ತದೆ. ಈ ‘ದಿವ್ಯಮೌನ’ ಪ್ರಾಣೇಶಾಚಾರ್ಯರ ತುಮುಲಕ್ಕೆ ಇನ್ನೊಂದು ಆಯಾಮ ನೀಡುವುದರ ಜೊತೆಗೆ ಹಾಗೇನಾದರೂ ಚಿತ್ರದಲ್ಲಿ ತೋರಿಸಿದ್ದಿದ್ದರೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯೇ ಇರುತ್ತಿರಲಿಲ್ಲ ಎನ್ನುವುದೂ ನಿಜ ತಾನೇ?
ಶೃಂಗೇರಿ ಮಠದ ಶ್ರೀಗಳಂತಹ ಧಾರ್ಮಿಕ ಅಧಿಕಾರ ಕೇಂದ್ರಗಳಿಂದ ಅನುಮತಿಯನ್ನು ಪಡೆಯಬೇಕಿದ್ದ ‘ಸಂಸ್ಕಾರ’ದ ನಿರ್ದೇಶಕ ಕಾರ್ನಾಡರು ಹೀಗೆ ಬರೆಯುತ್ತಾರೆ:
ಈಗ ಮಠದ ಬೆನ್ನು ಹತ್ತಿ ಹೊರಟೆವು. ಬೆಂಗಳೂರಲ್ಲಿ ಶಂಕರ ಮಠದಲ್ಲಿ ಶೃಂಗೇರಿಯ ಸ್ವಾಮಿಗಳು ತಂಗಿರುವುದು ಗೊತ್ತಾಗಿ ಅಲ್ಲಿಗೆ ಹೋದೆವು. ನಾನು ಸನಾತನ ಧರ್ಮಕ್ಕೆ ಅಹಿತಕರವೆನ್ನಿಸದ ರೀತಿಯಲ್ಲಿ ಕತೆಯಲ್ಲಿ ಸ್ವಲ್ಪ ತಿರುಚಿ ಸಾರಾಂಶ ಬರೆದು ತೆಗೆದೆ. ಕಾದಂಬರಿಯ ಕೊನೆಯಲ್ಲಿ ನಾರಾಣಪ್ಪನ ಮುಸಲ್ಮಾನ ಗೆಳೆಯರೇ ಇರುಳುಗತ್ತಲೆಯಲ್ಲಿ ಬಂದು, ಹೆಣವನ್ನು ಕದ್ದುಕೊಂಡು ಹೋಗಿ ಅದನ್ನು ಸುಟ್ಟುಬಿಡುತ್ತಾರೆ ಎಂಬ ಅಂಶ ಮಠಕ್ಕೆಂದೂ ಮಾನ್ಯವಾಗುವಂತಿರಲಿಲ್ಲವಾದ ಪ್ರಾಣೇಶಾಚಾರ್ಯರೇ ಅಗ್ರಹಾರಕ್ಕೆ ಮರಳಿ ನಾರಾಣಪ್ಪನ ಸಂಸ್ಕಾರ ಮಾಡುತ್ತಾರೆ ಎಂದು ಬದಲಾವಣೆ ಮಾಡಿ ಆ ಟಿಪ್ಪಣಿಯನ್ನು ಮಠದ ಪರಿಚಾರಕರೊಬ್ಬರಿಗೆ ಕೊಟ್ಟೆವು. ಅವರು ಅದನ್ನು ಓದಿದರಪ ಬಿಟ್ಟರೋ, ‘ಚೆನ್ನಾಗಿದೆ, ನೀವು ಚಿತ್ರೀಕರಣ ಮಾಡುವುದಕ್ಕೆ ನಮ್ಮಲ್ಲೇನೂ ಅಭ್ಯಂತರವಿಲ್ಲ. ಸುಂದರವಾದ ನಿಸರ್ಗ! ಬೇಕಾದ ಹಾಗೆ ಬಳಸಿಕೊಳ್ಳಿರಿ!’ ಎಂದರು. ಚಿತ್ರೀಕರಣಕ್ಕೆ ದಾರಿ ಮುಕ್ತವಾಯಿತು. (ಪು. 227)
ಹಾಗೆಯೇ ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿ ಆಧಾರಿತ ‘ಕಾಡು’ ಚಿತ್ರ ನಿರ್ದೇಶನದ ಸಮಯದಲ್ಲೂ ಸಹ ಹೀಗೇ ಆಯಿತು. ಕಾರ್ನಾಡರ ಮಾತುಗಳಲ್ಲಿ ಹೀಗಿದೆ:
ಶ್ರೀಕೃಷ್ಣ ನನಗೆ ತಿಳಿಸಿ ಹೇಳಿದ ಪ್ರಕಾರ ಅವನ ಕಾದಂಬರಿಯಲ್ಲಿ ಬರುವ ಎರಡು ಹಳ್ಳಿಗಳಲ್ಲಿ ‘ಕೊಪ್ಪಳು’ ಒಕ್ಕಲಿಗರ ಹಳ್ಳಿಯಾದರೆ, ‘ಹೊಸೂರು’ ವೀರಶೈವರ ಹಳ್ಳಿ. ಹೀಗೆ ಈ ಎರಡು ಹಳ್ಳಿಗರ ತಾಕಲಾಟಕ್ಕೆ ಜಾತಿ ಹಗೆಯ ಹಿನ್ನೆಲೆಯಿತ್ತು. … ಒಕ್ಕಲಿಗ ಚಂದ್ರೇಗೌಡ ಲಿಂಗಾಯತ ಹೆಣ್ಣಾದ ಬಸಕ್ಕನನ್ನು ಇಟ್ಟುಕೊಂಡಿದ್ದಾನೆ. ಒಕ್ಕಲಿಗ ಗೌಡತಿಯ ಮೇಲೆ ಬಲಾತ್ಕಾರ ಮಾಡುವ ಶಿವಲಿಂಗ ಲಿಂಗಾಯತ. ಮೇವಿಗೆ ಬೆಂಕಿ ಹಚ್ಚುವ ಕಿಡಿಗೇಡಿತನ ಮಾಡುವವರು ಹೊಸೂರವರು. ಅವರೇ ಓಕುಳಿಯ ಹೊತ್ತಿಗೆ ಜಗಳ ಆರಂಭಿಸುತ್ತಾರೆ. ಅಂತೂ ಕಾದಂಬರಿಯಲ್ಲಿ ಕಾಣಿಸುವ ಜಾತಿ ವಿವರಗಳನ್ನು ಹಾಗೆಯೇ ಚಲನಚಿತ್ರಕ್ಕೆ ಒಯ್ದಿದ್ದರೆ ಗಲಭೆಯಾಗುವುದರಲ್ಲಿ ಸಂದೇಹವಿರಲಿಲ್ಲ.
ಆದ್ದರಿಂದಲೇ ನಾನು ‘ಈ ಜಾತಿಗಳ ಗದ್ದಲವೇ ಬೇಡ. ಎರಡೂ ಒಕ್ಕಲಿಗರ ಹಳ್ಳಿಗಳು ಎಂದೇ ಚಿತ್ರಿಸೋಣ’ ಎಂದಾಗ ಶ್ರೀಕೃಷ್ಣನಿಗೆ ನನ್ನ ವಾದವೇ ಅರ್ಥವಾಗಲಿಲ್ಲ. ‘ಹಾಗೇಕೆ?’ ಎಂದು ತಿಳಿಯದೆ ಕೇಳಿದ. ಆದರೆ ಒಂದು ಗುಂಪು ತಾವು ತಪ್ಪು ಅರ್ಥ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದರೆ ಯೇನಕೇನ ಪ್ರಕಾರೇಣ ತಪ್ಪು ಅರ್ಥ ಹಚ್ಚಬಲ್ಲರು ಎಂಬುದರ ಅನುಭವ ನನಗಿತ್ತು. ಅವನಿಗೆ ಶೀಘ್ರದಲ್ಲೇ ಬಂತು. (ಪು. 278-79)
ಹೀಗೆ ‘ಸಮುದಾಯ ಭಾವನೆಗಳಿಗೆ ಧಕ್ಕೆ’ ಆಗುವ ನಿದರ್ಶನಗಳು ಚಲನಚಿತ್ರ ಲೋಕದಲ್ಲಿ ಮಾತ್ರವಲ್ಲದೆ ಇತರ ವಲಯಗಳಿಗೂ ಹಬ್ಬಿತ್ತು.

‘ಕರಾವಳಿ’ (1977) ಕಾದಂಬರಿಯ ಉದಾಹರಣೆಯನ್ನು ಗಮನಿಸಬಹುದು. ಪಶ್ಚಿಮ ಕರಾವಳಿಯ ಮೀನುಗಾರ ಸಮುದಾಯದ ಸುತ್ತ ಹೆಣೆಯಲ್ಪಟ್ಟ ಈ ಕೃತಿ ಕನ್ನಡ ದೈನಿಕವೊಂದರಲ್ಲಿ ಧಾರಾವಾಹಿಯಾಗಿ ಹರಿದು ಬರುತ್ತಿತ್ತು. ವಾರದೊಳಗೆ ತಮ್ಮ ಸಮುದಾಯದ ಮರ್ಯಾದೆಗೆ ಧಕ್ಕೆಯಾಗಿದೆ ಎಂಬ ಅಭ್ಯಂತರ ಕೇಳಿ ಬಂದಿದ್ದರಿಂದ ಪ್ರಕಟಣೆ ನಿಂತು ಹೋಯಿತು. ಕಾದಂಬರಿಕಾರ ವಿಶುಕುಮಾರ್ ಅವರಿಗೆ ಇನ್ನಿಲ್ಲದ ಆಶ್ಚರ್ಯ. ಕೋಮು ಸಾಮರಸ್ಯವನ್ನು ಕೇಂದ್ರವಾಗುಳ್ಳ ತಮ್ಮ ಕೃತಿ ಕೋಮು ಸಾಮರಸ್ಯವನ್ನು ಹದಗೆಡಿಸಬಲ್ಲದು ಎಂಬ ವಿವಾದ ಎದ್ದಿದ್ದಾದರೂ ಹೇಗೆ?
ಆದರೂ ಕಾದಂಬರಿಯಾಗಿ ಪ್ರಕಟವಾದಾಗ ಅದಕ್ಕೆ ಸಿಕ್ಕ ಪ್ರೋತ್ಸಾಹ, ಮನ್ನಣೆಗಳಿಂದ ಉತ್ತೇಜಿತರಾದ ವಿಶುಕುಮಾರ್ ಅದನ್ನು ಚಲನಚಿತ್ರವಾಗಿಸಲು ನಿರ್ಧರಿಸಿದರು. ಆದರೆ ಮೊಗವೀರ ಸಮುದಾಯದಿಂದ ಏನೇನೋ ಅಡೆತಡೆಗಳು ಬಂದು ವಿಶುಕುಮಾರ್ ಚಿತ್ರೀಕರಣ ನಡೆಸಲು ಪೊಲೀಸರ ಸಹಾಯವನ್ನು ತೆಗೆದುಕೊಳ್ಳಬೇಕಾಯಿತು.
ಕನ್ನಡ ಗುಂಪುಗಳು ‘ಕರಾವಳಿ’ಯ ನಾಯಕ ಮುಸಲ್ಮಾನನಾಗಿರಬಾರದು, ಬದಲಿಗೆ ಹಿಂದೂ ಆಗಿರಬೇಕು ಎನ್ನುವ ಒತ್ತಡವನ್ನು ತಂದಾಗ ವಿಶುಕುಮಾರ್ ಸುತರಾಂ ಒಪ್ಪಲಿಲ್ಲ. ಸೆನ್ಸಾರ್ ಬೋರ್ಡಿನ ಕಡೆಯಿಂದ ತೊಂದರೆ ಇದ್ದರೂ ಸಹ ಚಲನಚಿತ್ರ ಪತ್ರಿಕೆಗಳು ವಿಶುಕುಮಾರ್ ಅವರ ಚಿತ್ರವನ್ನು ಹೊಗಳಿ ಬರೆದದ್ದು ಸಮಸ್ಯೆಗೆ ಒಂದು ಪರಿಹಾರವನ್ನು ಕಾಣುವವಂತಾಗಿ ಚಿತ್ರ ಕೊನೆಗೂ ಬಿಡುಗಡೆಯಾಯಿತು.
ಹೀಗೆ ಹೊಸ ಸಿನಿಮಾ ವಿವಾದ, ಪ್ರತಿರೋಧಗಳ ಸರಣಿಯನ್ನು ‘ಸಂಸ್ಕಾರ’ ದ ಮೂಲಕ ಉದ್ಘಾಟಿಸಿದ ಮೇಲೆ ಅದು ‘ವಂಶವೃಕ್ಷ’ (1972), ‘ಸಂಕಲ್ಪ’ (1973), ಮತ್ತು ‘ತಬ್ಬಲಿಯು ನೀನಾದೆ ಮಗನೇ’ (1977) ತನಕವೂ ಮುಂದುವರೆದಿತ್ತು.
ಈ ವಿವಾದ-ಪ್ರತಿರೋಧಗಳ ತಳದಲ್ಲಿ ಇದ್ದ ವಾದವೆಂದರೆ ತಾವು ‘ಕ್ರಿಟಿಕಲ್ ಇನ್ಸೈಡರ್’ ಎಂದು ಹೇಳಿಕೊಳ್ಳುವ ಈ ಬ್ರಾಹ್ಮಣ ನಿರ್ದೇಶಕರು ಬರಿಯ ಬ್ರಾಹ್ಮಣ-ವಿರೋಧಿ ಚಿತ್ರಗಳನ್ನೇ ಮಾಡುತ್ತಿದ್ದಾರೆ ಎನ್ನುವುದು. ಅವು ಯಶಸ್ಸನ್ನೂ ಕಂಡು ಅಲ್ಪಸಂಖ್ಯಾತ ಬ್ರಾಹ್ಮಣರನ್ನು ಸಾಮಾಜಿಕವಾಗಿ ಇನ್ನಷ್ಟು ದುರ್ಬಲ ಸ್ಥಿತಿಗೆ ತಳ್ಳಿ ರಾಜಕೀಯವಾಗಿ ಆ ಸಮುದಾಯದ ಬಲವನ್ನು ಕುಂದಿಸುವ ಹುನ್ನಾರ ನಡೆದಿರುವುದರಿಂದ ತಾವು ಅತ್ಯಂತ ಆತಂಕಕ್ಕೆ ಒಳಗಾಗಿದ್ದೇವೆ ಎನ್ನುವುದು.

ಇದೆಲ್ಲದರ ಪರಿಣಾಮ? ಒಟ್ಟಾರೆಯಾಗಿ ಸಿನಿಮಾ ನಿರ್ಮಿಸುವ ಮತ್ತು ನಿರ್ದೇಶಿಸುವ ಮಂದಿ ತಮ್ಮ ಸಿನಿಮಾಗಳಲ್ಲಿ ಯಾವುದೇ ಜಾತಿ, ಭಾಷೆ, ಪ್ರದೇಶ, ಸಂಸ್ಕೃತಿ ಮತ್ತು ವೃತ್ತಿಗಳನ್ನು ಸೂಚಿಸುವ ಅಥವಾ ಉಲ್ಲೇಖಿಸುವುದರ ವಿರುದ್ಧ ಅತಿಯಾದ ನಿಗಾ ವಹಿಸಿ ತಮ್ಮನ್ನು ತಾವು ಒಂದು ರೀತಿಯ ಸ್ವ-ಸೆನ್ಸಾರೀಕರಣಕ್ಕೆ ಗುರಿಪಡಿಸಿಕೊಂಡರು!
(ಲೇಖಕಿಯ ಮುಂಬರುವ ‘ರಾಷ್ಟ್ರ-ಜೆಂಡರ್: ಕನ್ನಡ ಸಿನಿಮಾದ 1930-70ರ ದಶಕಗಳಲ್ಲಿ’ ಕೃತಿಯಿಂದ ಆಯ್ದ ಭಾಗ)
ಆಕರ
-
ಗಿರೀಶ ಕಾರ್ನಾಡ: ಆಡಾಡತ ಆಯುಷ್ಯ: ಆತ್ಮಕತೆಗಳು, ಧಾರವಾಡ: ಮನೋಹರ ಗ್ರಂಥ ಮಾಲಾ, 2011.
-
ವಿಜಯಾ ಮತ್ತು ಇತರರು, (ಸಂ) ಕನ್ನಡ ಚಲನಚಿತ್ರ ಇತಿಹಾಸ (ಎರಡು ಸಂಪುಟಗಳು) ಹಂಪಿ: ಕನ್ನಡ ವಿಶ್ವವಿದ್ಯಾಲಯ, 2001.

ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ, ಲೇಖಕಿ, ಮತ್ತು ಭಾಷಾಂತರಕಾರ್ತಿ. ವೈದೇಹಿ (An Afternoon with Shakuntala and Other Stories) ಮತ್ತು ಅಗ್ರಹಾರ ಕೃಷ್ಣಮೂರ್ತಿಯವರ ಕೃತಿಗಳು (Love and Water Flow Together) [(ಕುವೆಂಪು ಭಾಷಾಭಾರತಿ ಪ್ರಶಸ್ತಿ (2023) ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಅನುವಾದಿತ ಪುಸ್ತಕ ಪ್ರಶಸ್ತಿ (2023)] ಇಂಗ್ಲೀಷಿಗೆ ಅನುವಾದಿಸಲ್ಪಟ್ಟ ಕೃತಿಗಳು. ‘ಹೇಳುತೇನೆ ಕೇಳು: ಮಹಿಳೆಯರ ಆತ್ಮಕಥೆಗಳು’; ‘ಕಥೆ ಹೇಳುವೆ’; ‘ಬರ್ತಿಯಾ?… ಎಷ್ಟು?…: ಭಾರತೀಯ ಸೂಳೆಲೋಕದ ಕಥೆಗಳು’; ನಯನತಾರ ಸೆಹಗಲ್ ಅವರ ‘ಚಿಟ್ಟೆಗಳ ಪಾಡು’ ಇತ್ಯಾದಿ ಅವರ ಕನ್ನಡ ಭಾಷಾಂತರ ಕೃತಿಗಳು. ರೂಮಿಕಾವ್ಯದ ಭಾಷಾಂತರ ಕೃತಿ ‘ದಿವ್ಯದಲ್ಲಿ ಹಿಸ್ಸೆಯಿಲ್ಲ: ಕಡುಪ್ರೇಮಿಯ ಎದೆಯ ಹಾಡು’ ಬಿಡುಗಡೆಗೆ ಸಿದ್ಧವಿದೆ.
