ನಾನು ಹಪಹಪಿಸುತ್ತಿದ್ದ ಊರು ನನಗೆ ನಿಧಾನಕ್ಕೆ ಹತ್ತಿರವಾಗತೊಡಗಿತು. ಮೊದಮೊದಲು ನನಗೆ ಇಲ್ಲಸಲ್ಲದ ಮರ್ಯಾದೆ ಕೊಟ್ಟು ಕಿರಿಕಿರಿ ಉಂಟು ಮಾಡುತ್ತಿದ್ದ ಸ್ನೇಹಿತರು ಮೊದಲಿನಂತೆ ಭಾಸ್ಕಳಬೈದು ಮಾತನಾಡಿಸುವಷ್ಟು ನನ್ನನ್ನು ಹತ್ತಿರ ಸೇರಿಸಿಕೊಂಡರು. ನಾನಂತೂ ಸಿಕ್ಕಿದ್ದೇ ಚಾನ್ಸು ಎಂದುಕೊಂಡು ಅವರು ಎಲ್ಲಿಗೇ ಕರೆದರೂ ಅವರ ಹಿಂದೆ ಹೋಗತೊಡಗಿದೆ. ಒಂದೇ ತಿಂಗಳಲ್ಲಿ ಅವರ ಚಾಷ್ಟಿತಾಣಗಳ ಖಾಯಂ ಅಭ್ಯರ್ಥಿಯಾಗಿಬಿಟ್ಟೆ. ಆಫೀಸು ಕೆಲಸಗಳನ್ನೆಲ್ಲಾ ರಾತ್ರಿಯೇ ಮುಗಿಸಿಬಿಟ್ಟಿರುತ್ತಿದ್ದೆನಾದ್ದರಿಂದ ಹಗಲೊತ್ತೆಲ್ಲಾ ನನ್ನದೇ ಆಗಿರುತ್ತಿತ್ತು. ಹಾಗಾಗಿ ಅವರು ಹೊಲವೆನ್ನಲಿ ಗುಡಿಯೆನ್ನಲಿ ಇಲ್ಲಾ ಯಾರದೋ ಮನೆಯ ಸಮಾರಂಭವೆನ್ನಲಿ ಇಲ್ಲವೆನ್ನದೆ ಅವರ ಹಿಂಬಾಲ ಹೋಗತೊಡಗಿದೆ.
ನರೇಟರ್‌ ಬರೆದ ಒಂದು ಲಹರಿ

 

ಹತ್ತು ವರ್ಷಗಳು. ಓದು, ನೌಕರಿ ಅಂತ ಹುಟ್ಟೂರಿನಿಂದ ದೂರ ಇದ್ದು ಇದ್ದು ತಲೆಕೆಟ್ಟು ಹೋಗಿತ್ತು. ಅದರಲ್ಲೂ ಅಪರಿಮಿತ ಸದ್ದು ಗದ್ದಲದ, ಎಂಥ ಕೆಂಪೇಗೌಡರ ಮರಿಮೊಮ್ಮಕ್ಕಳಿಗೂ ಒಂದು ಕ್ಷಣ ‘ಇಷ್ಟು ದೊಡ್ಡ ನಗರದಲ್ಲಿ ನಾನ್ಯಾರು? ಇಂಥ ಜನಸಂದಣಿಯಲ್ಲಿ ನನ್ನ ಪಾತ್ರವಾದರೂ ಏನು?’ ಎಂಬಂಥ ಮೂಲಭೂತ ಪ್ರಶ್ನೆಗಳನ್ನು ಹುಟ್ಟಿಸಿ ಕಾಡುವ, ಸಣ್ಣ ಸಣ್ಣ ಊರುಗಳಿಂದ ಬಂದವರಿಗೆ ನೂರೆಂಟು ದಿಗ್ಭ್ರಮೆಗಳನ್ನು ಎದುರಾಗಿಸಿ ಕಕ್ಕಾಬಿಕ್ಕಿಯಾಗಿಸುವ ಬೆಂಗಳೂರಿಗೆ ಬಂದು ಬಿದ್ದ ಮೇಲಂತೂ ‘ಯಾವಾಗ ಊರಿಗೆ ಹೋಗೀನೋ ಯಪ್ಪಾ’ ಅಂತ ಜೀವ ಚಡಪಡಿಸುತ್ತಿತ್ತು. ಆದರೆ ‘ಎರಡೇ ಎರಡು ವರ್ಷ’ ದುಡಿದು ದುಡ್ಡು ಮಾಡಿಕೊಂಡು ವಾಪಸ್ ಊರಿಗೆ ಹೋದರಾಯಿತು ಎಂದುಕೊಂಡು ಸೇರಿದ್ದ ನೌಕರಿ ನನ್ನಿಂದ ಊರನ್ನು ದಿನೇ ದಿನೆ ದೂರ ಎಳೆದು ಒಯ್ಯುತ್ತಿತ್ತೇ ಹೊರತು ವಾಪಸ್ ಊರು ಸೇರುವ ನನ್ನ ಕನಸಿಗೆ ಕಿಂಚಿತ್ತೂ ಭರವಸೆ ತುಂಬಲಿಲ್ಲ. ರಜೆ ಸಿಕ್ಕರೂ ಮೂರ್ನಾಲ್ಕು ದಿನಗಳಷ್ಟೆ. ಹೋಗಲು ಒಂದು ದಿನ. ವಾಪಸ್ ಬರಲು ಒಂದು ದಿನ. ನಡುವಿನೆರಡು ದಿನಗಳು ನಮ್ಮೂರಿನ ಕೆಂಪು ಬಸ್‌ ಪ್ರಯಾಣದ ದಕ್ಕಡಿಕಿಗಳು ಉಂಟು ಮಾಡಿರುತ್ತಿದ್ದ ತ್ರಾಸು ನೀಗಿಕೊಳ್ಳಲಿಕ್ಕೇ ಸಾಲುತ್ತಿರಲಿಲ್ಲ.

ಐದಾರು ವರ್ಷಗಳಿಂದಲಂತೂ ಊರಿಗೆ ಹೋಗಲು ರಜೆ ಸಿಕ್ಕುವುದೇ ದುಸ್ತರವಾಗಿತ್ತು. ಪರಿಸ್ಥಿತಿ ಹೀಗಿದ್ದರಿಂದ ಒಮ್ಮೆಯಾದರೂ ಸಂಪೂರ್ಣ ಒಂದು ತಿಂಗಳು ಊರಿನಲ್ಲಿ ಇದ್ದು ಬರಬೇಕು ಎಂದು ಕನಸು ಕಾಣುವಷ್ಟರಮಟ್ಟಿಗೆ ಬರಗೆಟ್ಟು ನಿಂತಿದ್ದೆ. ಹಾಗಾಗಿ ಕೋವಿಡ್ ಬಂದು ಎಲ್ಲರೂ ದಿಕ್ಕೆಟ್ಟು ನಿಂತಿದ್ದಾಗ ವರ್ಕ್ ಫ್ರಮ್‌ ಹೋಮ್ ನೆವದಲ್ಲಿ ಊರಿನಲ್ಲಿರುವ ಮಹದವಕಾಶ ಸಿಕ್ಕದ್ದೇ ಕಣ್ಣಿ ಬಿಚ್ಚಿದ ಕರುವಿನಂತೆ ಬೆಂಗಳೂರಿನಿಂದ ಪೆಂಟಿಕಿತ್ತಿದ್ದೆ.

ಊರಿಗೇನೋ ಬಂದು ಬಿದ್ದೆ ಆದರೆ ಅದಾಗಲೇ ನನಗೇ ಗೊತ್ತಾಗದಷ್ಟು ಮಟ್ಟಿಗೆ ನಗರದ ರಂಗು, ಗದ್ದಲ್ಲ, ಸ್ವಚ್ಛಂದಗಳಿಗೆಲ್ಲಾ ಹೊಂದಿಕೊಂಡಿದ್ದ ನನ್ನ ಅತ್ಯಾಧುನಿಕ ಮನಸಿಗೆ ಊರಿನ ಪರಿಸರ ತುಸು ಜಾಸ್ತಿಯೇ ಶಾಂತವೆನಿಸತೊಡಗಿತು. ತುಸು ಜಾಸ್ತಿಯೇ ಬಿಗಿಬಿಗಿ ಎನಿಸತೊಡಗಿತು. ಕೋವಿಡ್ ನ ಆತಂಕ ಬೇರೆ ಎಲ್ಲರ ಮುಖದಲ್ಲೂ ಎದ್ದೆದ್ದು ಕುಣಿಯುತ್ತಿತ್ತು. ಬಕಪಕ್ಷಿಯ ಹಾಗೆ ಕಾದಿದ್ದುಕೊಂಡು ಅವಕಾಶ ಸಿಕ್ಕದ್ದೇ ಊರಿಗೆ ಚೈನಿ ಹೊಡೆಯಲೆಂದು ಓಡಿ ಬಂದಿದ್ದ ನನಗೆ ಭಯಂಕರ ಭ್ರಮನಿರಸನವೇ ಆಯಿತು.

ಬೇಕಾಗಿಯೋ ಬೇಡವಾಗಿಯೋ ಒಟ್ಟಿನಲ್ಲಿ ಕಾಲದ ಓಟದಲ್ಲಿ ನನ್ನದೂ ಒಂದು ಓಟವೆಂದು ಎಲ್ಲರಂತೆ ಕಾಲಿಗೆ ಬೆಂಕಿ ಹಚ್ಚಿಕೊಂಡು ಓಡುತ್ತಿದ್ದವನಿಗೆ ಕೋವಿಡ್ ಒಂದು ಮೂಗುದಾಣ ಹಾಕಿ ಕಟ್ಟಿ ಕೂರಿಸಿತೆಂದೇ ಹೇಳಬೇಕು. ಬೆಳಗೆದ್ದು ದಡಬಡಿಸಿ ತಯಾರಾಗಿ ಜೋಭದ್ರಗೆಡಿ ಮುಖದಲ್ಲಿ ಮನೆಯಿಂದ ಹೊರಬೀಳಲು ಆಫೀಸ್ ಇಲ್ಲ, ತಿವಿದು ತಿಕ್ಕಾಡಿ ಬ್ಯಾಗು ಬಡಿಸಿ ಸಿಟ್ಟಿಗೆಬ್ಬಿಸುವ ಬಸ್ಸು ಮೆಟ್ರೋಗಳ ಪ್ರಯಾಣಿಕ ಪ್ರಭುಗಳಿಲ್ಲ, ಮುಂಜ್‌ ಮುಂಜಾನೆಯೇ ಬಂದು ಕುಕ್ಕರಿಸಿ ನಮ್ಮನ್ನು ಸ್ವಾಗತಿಸುವ ಬದ್ಧಬ್ರಕುಟಿ ಮ್ಯಾನೇಜರ್‌ ಇಲ್ಲ, ಎಲ್ಲರೂ ಸೇರಿ ಸಾಮೂಹಿಕವಾಗಿ ತಲೆಚಚ್ಚಿಕೊಳ್ಳುವ ಮೀಟಿಂಗ್‌ ಗಳಿಲ್ಲ, ಯಾವ ಕಡೆಯಿಂದ ನಗಬೇಕು ಎಂಬ ಸಂದಿಗ್ಧಕ್ಕೆ ತಳ್ಳುತ್ತಿದ್ದ ‘ಬಾಸ್‌ ಜೋಕ್‌’ಗಳಿಲ್ಲ, ತಲೆಸಿಡಿಯುತಿದೆ ಎಂದು ಪುಂಖಾನುಪುಂಖವಾಗಿ ಏರಿಸುತ್ತಿದ್ದ ಗ್ರೀನ್ ಟೀ ಬ್ಲಾಕ್‌ ಟೀ ಗಳ ಸಂಗಡವಿಲ್ಲ, ತಾನು ತಿಂಗಳು ಪೂರ್ತಿ ಹುರಿದು ಮುಕ್ಕಿದ ಆತ್ಮಗಳಿಗೆ ಶಾಂತಿ ಒದಗಿಸಲೆಂದೇ ಆಫೀಸು ತಿಂಗಳಿಗೊಮ್ಮೆ ಆಯೋಜಿಸುತ್ತಿದ್ದ ಪಾರ್ಟಿಗಳಿಲ್ಲ, ವೀಕೆಂಡಲ್ಲಿ ಮಾತ್ರ ಒದಗಿ ಕುಡಿದು ಟೈಟಾಗಿ ಗೋಳಾಡಿ ವಾಂತಿಮಾಡಿಕೊಳ್ಳುತ್ತಿದ್ದ ಆಪ್ತಮಿತ್ರರ ಕಾಟವಿಲ್ಲ… ಒಟ್ಟಿನಲ್ಲಿ ಒದ್ದಾಡುವುದೇ ಕರ್ಮವಾಗಿದ್ದ ಮನಸ್ಸು ದೇಹಗಳೆರಡಕ್ಕೂ ಸುಮ್ಮನಿರಲೇಬೇಕಾದ ಅನಿವಾರ್ಯತೆ ಬಂದಿದ್ದೇ ದಿಕ್ಕುತಪ್ಪಿದಂತಾಗಿತ್ತು.

ಅದೂ ಅಲ್ಲದೆ ಊರು ಬೇರೆ ಈ ಹತ್ತು ವರ್ಷಗಳಲ್ಲಿ ತುಂಬಾ ಬದಲಾಗಿಬಿಟ್ಟಿತ್ತು. ಮೊದಲೆಲ್ಲಾ ಎದುರಿಗೆ ಸಿಕ್ಕಾಗ ಫಕ್ಕನೆ ಗುರುತು ಹಿಡಿಯುತ್ತಿದ್ದ ಮುಖಗಳೆಲ್ಲಾ ನನ್ನನ್ನ ಯಾರೋ ಆಗಂತುಕನೆಂಬಂತೆ ಮಿಕಿಮಿಕಿ ನೋಡುವಷ್ಟರಮಟ್ಟಿಗೆ ಊರು ನನ್ನನ್ನು ಮರೆತು ಕುಂತಿತ್ತು. ಚಡ್ಡಿಜೇಬುಗಳ ತುಂಬ ಗೋಲಿ ತುಂಬಿಕೊಂಡು ಗುಳುಗುಳು ಮಾಡುತ್ತ ಓಡಾಡುತ್ತಿದ್ದ ಹುಡುಗರೆಲ್ಲಾ ಮದುವೆಯಾಗಿ ಮುಖದಲ್ಲಿ ಜವಾಬ್ದಾರಿಯ ಕಳೆ ಹೊತ್ತುಕೊಂಡು ಓಡಾಡುವಷ್ಟು ದೊಡ್ಡವರಾಗಿಬಿಟ್ಟಿದ್ದರು. ಜಗದ ಖಬರೇ ಇಲ್ಲದೆ ಲಂಗ ಹಾರಿಸುತ್ತ ಕುಂಟಲಿಪಿ ಆಡುವಾಗ ‘ಟುಪೋಂಟಿಗ್ಯೋ’ ಎಂದು ಕುಣಿಯುತ್ತಿದ್ದ ಹುಡುಗಿಯರು ಮಾತನಾಡಿಸಲಿಕ್ಕೆ ಹಿಂಜರಿಕೆಯಾಗುವಷ್ಟು ಕೈಗೆ ಬಂದಿದ್ದರು. ಇನ್ನು ಸಹಪಾಠಿ ಸ್ನೇಹಿತರು ತಮ್ಮ ಮಕ್ಕಳ ಸಿಂಬಳ ಒರೆಸುವುದರಲ್ಲಿ ಬಿಜಿಯಾಗಿಬಿಟ್ಟಿದ್ದರು ಮತ್ತು ಇನ್ನೂ ಮದುವೆಯಾಗದ ನನ್ನನ್ನ ‘ಆಡೋ ಹುಡುಗ’ನಂತೆ ನೋಡತೊಡಗಿದರು. ಹಿರಿಯರ ಪಾಲಿಗಂತೂ ನಾನು ಊರಿಗೆ ಬಂದ ಹೊಸ ಮಾಸ್ತರನಂತೆ ಕಾಣತೊಡಗಿದ್ದೆ.

ಬೆಂಗಳೂರಲ್ಲಿದ್ದಾಗ ಕನಸಲ್ಲೆಲ್ಲಾ ಬಂದು ಕಾಡುವಷ್ಟು ಹತ್ತಿರವಾಗಿ ತೋರುತ್ತಿದ್ದ ಊರೇ ಈಗ ಯಾಕಿಷ್ಟು ದೂರ ನಿಂತು ಮಾತನಾಡಿಸುತ್ತಿದೆ, ನಾನು ಆಗಾಗ ನೆನಪಿಸಿಕೊಂಡು ನಾಸ್ಟಾಲ್ಜಿಯಾದಲ್ಲಿ ತೇಲಾಡುವಂತೆ ಮಾಡುತ್ತಿದ್ದ ಪಾತ್ರಗಳೇ ಯಾಕಿಂದು ಈ ಮಟ್ಟಿಗೆ ನನ್ನ ಇಲ್‌ಟ್ರೀಟ್ ಮಾಡುತ್ತಿವೆ ಎಂದು ಕಂಗಾಲಾಗಿದ್ದೆ.

ಆದರೆ ಊರಿಗೆ ಬರುವ ಮುಂಚೆ ಮಾನಸಿಕವಾಗಿ ಸಿದ್ಧನಾಗಿಯೇ ಬಂದಿದ್ದೆ. ಊರಿನಲ್ಲಿರುವಷ್ಟು ಕಾಲ ಬೆಂಗಳೂರಿನಲ್ಲಿ ಇದ್ದೆ ಎನ್ನುವುದನ್ನೇ ಮರೆತು ಇರಬೇಕು ಎಂದು. ಅದೂ ಅಲ್ಲದೆ ಬಾಲ್ಯದಲ್ಲಿ ಕಂಡುಂಡದ್ದನ್ನೆಲ್ಲಾ ಪುನರ್‍ ಕಾಣುವ, ಹಳೆಯ ನವಿಲುಗರಿಯನ್ನು ಮತ್ತೆ ಮತ್ತೆ ಮೂಸಿನೋಡುವ ಖಯಾಲಿಯೋ ಇಲ್ಲಾ ಇನ್ಯಾವುದೋ ವಿಚಿತ್ರ ರೋಗವೋ ಗೊತ್ತಿಲ್ಲ. ಆದರೆ ಹೀಗೊಂದು ಅವಕಾಶಕ್ಕಾಗಿ ನಾನಂತೂ ಕಾಯುತ್ತಿದ್ದೆ. ಹಾಗಾಗಿ ಊರಿಗೆ ಬಂದದ್ದೇ ಜೀನ್ಸು, ನೈಟ್ ಪ್ಯಾಂಟು ಬರ್ಮುಡಾಗಳನ್ನೆಲ್ಲಾ ಮೂಟೆ ಕಟ್ಟಿ ಅಪ್ಪನ ಲುಂಗಿ ಏರಿಸಿಕೊಂಡೆ. ಆತನ ಪುರಾತನ ಸ್ಕೂಟರ್‌ ಏರಿ ಪಕ್ಕದ ಮಸಾರಿ ಊರುಗಳನ್ನೆಲ್ಲಾ ಸುತ್ತಾಡಬೇಕು ಎಂಬ ಆಸೆಯಿತ್ತಾದರೂ ಲಾಕ್ ಡೌನ್‌ ಇದ್ದದ್ದರಿಂದ ಮನೆಯಲ್ಲೇ ಕಾಲಕಳೆಯಬೇಕಾಗಿ ಬಂತು. ಆದರೆ ಲಾಕ್‌ ಡೌನ್ ಮುಗಿದ ನಂತರವೂ ಆಫೀಸು ‘ವರ್ಕ್‌ ಫ್ರಮ್ ಹೋಮ್‌’ಗೆ ಅವಕಾಶವಿತ್ತದ್ದರಿಂದ ಊರೊಳಗೊಂದಾಗಿ ಬೆರೆವ ನನ್ನ ಆಸೆಗೆ, ಊರೂರು ತಿರುಗುವ ನನ್ನ ತಲುಬಿಗೆ ಕಾಲ ಕೂಡಿ ಬಂತು. ಅದೂ ಅಲ್ಲದೆ ನಮ್ಮೂರು ಕರೊನಾ ವೈರಸ್ ಸುಟ್ಟುಹೋಗುವಷ್ಟು ಬಿಸಿಲಿನ ಸೀಮೆಯಾಗಿದ್ದರಿಂದ ಅಲ್ಲಿನ ಜನಕ್ಕೆ ಬಹುಬೇಗನೇ ಕರೊನಾದ ಭಯಭೀತಿಗಳು ಹೋಗಿಬಿಟ್ಟವು ಮತ್ತು ಜನರೆಲ್ಲಾ ಮಾಸ್ಕನ್ನು ಡ್ರೈವಿಂಗ್ ಲೈಸನ್ಸ್‌ ನಂತೆ ಜೇಬಲ್ಲಿಟ್ಟುಕೊಂಡು ಓಡಾಡತೊಡಗಿದರು.

ಸಹಪಾಠಿ ಸ್ನೇಹಿತರು ತಮ್ಮ ಮಕ್ಕಳ ಸಿಂಬಳ ಒರೆಸುವುದರಲ್ಲಿ ಬಿಜಿಯಾಗಿಬಿಟ್ಟಿದ್ದರು ಮತ್ತು ಇನ್ನೂ ಮದುವೆಯಾಗದ ನನ್ನನ್ನ ‘ಆಡೋ ಹುಡುಗ’ನಂತೆ ನೋಡತೊಡಗಿದರು.

ನಾನು ಹಪಹಪಿಸುತ್ತಿದ್ದ ಊರು ನನಗೆ ನಿಧಾನಕ್ಕೆ ಹತ್ತಿರವಾಗತೊಡಗಿತು. ಮೊದಮೊದಲು ನನಗೆ ಇಲ್ಲಸಲ್ಲದ ಮರ್ಯಾದೆ ಕೊಟ್ಟು ಕಿರಿಕಿರಿ ಉಂಟು ಮಾಡುತ್ತಿದ್ದ ಸ್ನೇಹಿತರು ಮೊದಲಿನಂತೆ ಭಾಸ್ಕಳಬೈದು ಮಾತನಾಡಿಸುವಷ್ಟು ನನ್ನನ್ನು ಹತ್ತಿರ ಸೇರಿಸಿಕೊಂಡರು. ನಾನಂತೂ ಸಿಕ್ಕಿದ್ದೇ ಚಾನ್ಸು ಎಂದುಕೊಂಡು ಅವರು ಎಲ್ಲಿಗೇ ಕರೆದರೂ ಅವರ ಹಿಂದೆ ಹೋಗತೊಡಗಿದೆ. ಒಂದೇ ತಿಂಗಳಲ್ಲಿ ಅವರ ಚಾಷ್ಟಿತಾಣಗಳ ಖಾಯಂ ಅಭ್ಯರ್ಥಿಯಾಗಿಬಿಟ್ಟೆ. ಆಫೀಸು ಕೆಲಸಗಳನ್ನೆಲ್ಲಾ ರಾತ್ರಿಯೇ ಮುಗಿಸಿಬಿಟ್ಟಿರುತ್ತಿದ್ದೆನಾದ್ದರಿಂದ ಹಗಲೊತ್ತೆಲ್ಲಾ ನನ್ನದೇ ಆಗಿರುತ್ತಿತ್ತು. ಹಾಗಾಗಿ ಅವರು ಹೊಲವೆನ್ನಲಿ ಗುಡಿಯೆನ್ನಲಿ ಇಲ್ಲಾ ಯಾರದೋ ಮನೆಯ ಸಮಾರಂಭವೆನ್ನಲಿ ಇಲ್ಲವೆನ್ನದೆ ಅವರ ಹಿಂಬಾಲ ಹೋಗತೊಡಗಿದೆ.

ಬರುಬರುತ್ತಲಂತೂ ಅವರಿಗೇ ಬ್ಯಾಸರ ಆಗುವಷ್ಟು ಗಂಟುಬೀಳತೊಡಗಿದೆ. ಹೇಗಿದ್ದರೂ ಮುಂದೊಂದು ದಿನ ಇಲ್ಲಿಂದ ಹೋಗುವವನೇ ಆಗಿದ್ದರಿಂದ ಅವರು ಎಷ್ಟು ಕಿಟಿಕಿಟಿ ಮಾಡಿಕೊಂಡರೂ ನನಗೆ ಕಿಂಚಿತ್ತೂ ತಾಗುತ್ತಿರಲಿಲ್ಲ. ಆದರೆ ಇಷ್ಟು ದಿನ ತಮ್ಮ ಮಗರಾಯ ಬೆಂಗಳೂರಿನಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ ಎಂದು ಕೊಚ್ಚಿಕೊಂಡು ಓಡಾಡಿದ್ದ ನಮ್ಮ ತೀರ್ಥರೂಪರಿಗೆ ನನ್ನ ಉರವಣಿಗೆಗಳು ತಲೆನೋವಾಗಿ ಪರಿಣಮಿಸತೊಡಗಿದವು. ಊರ ಹುಡುಗರೊಂದಿಗೆ ಕಲೆಬಿದ್ದು ಓಡಾಡೋದು ನೋಡಿ ‘ಇಂವ ಯಾವಾಗ ವಾಪಸ್ ಹೋಗ್ತಾನೋ’ ಎಂದು ಅವರು ದಿನಂಪ್ರತಿ ಆಶಿಸುವಷ್ಟರಮಟ್ಟಿಗೆ ನನ್ನ ಕೀರ್ತಿ ಪತಾಕೆಗಳು ಊರತುಂಬ ಹಾರಾಡತೊಡಗಿದವು.

ಲಾಕ್ಡೌನ್ ಮುಗಿದಮೇಲೂ ನಾನು ಊರಲ್ಲೇ ಇದ್ದದ್ದು ನೋಡಿ ಊರಜನರೆಲ್ಲಾ ‘ಇಂವಾ ಕೆಲಸ ಕಳ್ಕೊಂಡಾನ’ ಎಂಬ ತೀರ್ಮಾನಕ್ಕೆ ಬಂದು ಮಾತನಾಡತೊಡಗಿದರೆ ಎಂಥವರೂ ತಮ್ಮ ಕುಲಸುಪುತ್ರನ ಕುರಿತು ರೊಚ್ಚಿಗೇಳುವುದು ಸಾಮಾನ್ಯ.

ತಮಾಷೆ ಏನೆಂದರೆ ಊರು ಹತ್ತಿರವಾಗತೊಡಗಿದಾಗಲೇ ನಾನು ಊರಿನಿಂದ ಎಷ್ಟು ದೂರ ಹೋಗಿದ್ದೆ ಎಂದು ಅರ್ಥವಾಗತೊಡಗಿತು. ಎಷ್ಟೋ ಜನರನ್ನು ವಾಪಸ್ ನೋಡಿದಾಗಲೇ ನಾನಿವರೊಂದಿಗೆ ಒಂದು ಕಾಲದಲ್ಲಿ ಒಡನಾಡಿದ್ದೆ ಎಂದು ಹೊಳೆದ ಘಟನೆ ನಡೆದವು. ಊರಿನ ಬಗ್ಗೆ ನನಗೆಲ್ಲಾ ನೆನಪಿದೆ ಎಂದುಕೊಂಡಿದ್ದೆ. ಬೆಂಗಳೂರಿನಲ್ಲಿದ್ದಾಗ ಬಂದು ಕಾಡುತ್ತಿದ್ದ ಪಾತ್ರಗಳಷ್ಟೇ ನನ್ನ ಜೀವನದಲ್ಲಿ ಬಂದ ಪಾತ್ರಗಳು ಎಂದುಕೊಂಡಿದ್ದೆ. ಆದರೆ ಎಷ್ಟೋ ಜನರನ್ನು, ಎಷ್ಟೋ ಜಾಗಗಳನ್ನು ನಾನು ಈ ಹತ್ತುವರ್ಷಗಳಲ್ಲಿ ಒಂದೇ ಒಂದು ಸಲವೂ ನೆನಪಿಸಿಕೊಂಡಿರಲಿಲ್ಲ. ಕೆಲವರೊಂದಿಗೆ ಬಾಲ್ಯದಲ್ಲಿ ವರ್ಷಗಟ್ಟಲೆ ಆಡಿದ್ದರೂ ಅವರು ನೆನಪಾಗಿರಲಿಲ್ಲ. ಅಷ್ಟಕ್ಕೂ ಅವರ ಅಸ್ಥಿತ್ವವೇ ನನ್ನ ಸ್ಮೃತಿಪಟಲದಿಂದ ಮರೆಯಾಗಿಬಿಟ್ಟಿತ್ತು. ಆದರೆ ಅವರೆಲ್ಲಾ ಇದ್ದಕ್ಕಿದ್ದ ಹಾಗೆ ಧುತ್ತೆಂದು ಎದುರಾದಾಗ ನನಗಾದದ್ದು ಆಶ್ಚರ್ಯವೋ ವಿಷಾದವೋ ಹೇಳಬರುವುದಿಲ್ಲ. ಇನ್ನು ಕೆಲವರಂತೂ ನನಗೆ ಇನ್ನೊಮ್ಮೆ ನೆನಪಾಗುವಷ್ಟರೊಳಗೆ ತಮ್ಮ ಜೀವನದ ನಾಟಕವನ್ನು ಮುಗಿಸಿ ನಿರ್ಗಮಿಸಿಯೇ ಬಿಟ್ಟಿದ್ದರು. ಇಷ್ಟು ದಿನ ನೆನಪಿನಲ್ಲೂ ಸುಳಿಯದ ಅವರು ಈಗ ಯಾಕೆ ಕಾಡಿ ಕಿರಿಕಿರಿ ಮಾಡುತ್ತಾರೋ ತಿಳಿಯದು.

ನೆನಪಿನ ಮಾತು ಹಾಗಿರಲಿ. ವರ್ತಮಾನಕ್ಕೆ ಬರುವುದಾದರೆ ಊರು ದೂರದಲ್ಲಿದ್ದಾಗ ಕಾಣಿಸುವ ರೀತಿಯೇ ಬೇರೆ ಹತ್ತಿರಕ್ಕೆ ಬಂದಾಗ ಕಾಣುವ ಅದರ ಅವತಾರವೇ ಬೇರೆ. ನೆನಪುಗಳಲ್ಲಿ ಕಾಣಿಸುವಷ್ಟು ಚಂದವಾಗಿ ವಾಸ್ತವದಲ್ಲಿ ಅದು ಗೋಚರಿಸುವುದೇ ಇಲ್ಲ. ಹಾಗಾಗಿ ನೆನಪುಗಳಲ್ಲಿ ಕಲಸಿಹೋದ ಊರನ್ನು ಅಲ್ಲಿ ಮಾತ್ರ ಹುಡುಕಿ ವಾಪಸ್ ನೋಡಿಕೊಳ್ಳಬಹುದು ಹೊರತು ಮತ್ಯಾವ ಹೊರ ದಾರಿಗಳೂ ಇಲ್ಲ. ಊರು ಬೆಳೆದಂತೆ ನಾವೂ ಬೆಳೆದಿರುತ್ತೇವೆ. ಜಾಗಗಳು ಮೊದಲಿನಂತೆಯೇ ಇರಬಹುದು. ಆದರೆ ದೊಡ್ಡವರಾದಂತೆ ನಮ್ಮಲ್ಲಿ ಚಿಗಿತುಕೊಂಡ ಬುದ್ಧಿ, ಅನುಭವಗಳ ಕಸುರು ಕಡ್ಡಿ ಎಲ್ಲಾ ಸೇರಿ ವಂಡಾಗಿಹೋದ ಕಣ್ಣುಗಳು ಮೊದಲಿನಷ್ಟು ಸ್ವಚ್ಛ ಇರುವುದಿಲ್ಲ. ಹಾಗಾಗಿ ನಮ್ಮ ಅನುಭವಗಳ ದೆಸೆಯಿಂದ ನಾವು ನಮ್ಮೊಳಗೆ ತುಂಬಿಕೊಂಡ ಥರಥರದ ಬಣ್ಣ ಸುಣ್ಣ ಮಸಿ ಎಲ್ಲಾ ಕಲಸಿ ಊರು ಮತ್ಯಾವುದೋ ವಿಚಿತ್ರಾಕಾರದಲ್ಲಿ ಕಾಣತೊಡಗುತ್ತದೆ. ನಾವು ನೋಡಿದ ಜಾಗಗಳೇ ಅಪರಿಚಿತವಾಗಿ ಗೋಚರಿಸತೊಡಗುತ್ತವೆ. ಇಷ್ಟಾಗಿಯೂ ಊರು ಮೊದಲಿನಂತೆಯೇ ಕಾಣಬೇಕು ಎಂಬ ಹಠವಿದ್ದರೆ ನಾವು ಕೂಡ ವಾಪಸ್ಸು ಮೊದಲಿನಂತೆಯೇ ಆಗಬೇಕು. ಆದರೆ ಕಲಿತುಕೊಂಡಷ್ಟು ಸುಲಭವಲ್ಲ ಕಲಿತದ್ದನ್ನು ಮರೆಯುವುದು. ತುಂಬಿಕೊಂಡಷ್ಟು ಸರಳವಲ್ಲ ತುಂಬಿಕೊಂಡದ್ದನ್ನ ಉಗುಳಿ ಖಾಲಿಯಾಗುವುದು.

ಇನ್ನು ಬೆಂಗಳೂರಿನಿಂದ ಬರುವಾಗ ಹಳ್ಳಿ ಜೀವನದ ಕುರಿತು ತಲೆಯಲ್ಲಿ ನಾನು ಸಾಕಷ್ಟು ಮೂಢನಂಬಿಕೆಗಳನ್ನು ಇಟ್ಟುಕೊಂಡಿದ್ದೆ ಎನಿಸುತ್ತದೆ. ಬೆಂಗಳೂರಲ್ಲಿದ್ದಾಗ ಹಳ್ಳಿಗಳೆಲ್ಲಾ ದೇವಲೋಕದ ಉದ್ಯಾನವನಗಳಂತೆ ನಮ್ಮೆಲ್ಲಾ ಸಂಕಟಗಳಿಗೆ ಅಲ್ಲಿ ಉತ್ತರವಿದೆ ಎನ್ನುವಂತೆ ಭಾಸವಾಗುತ್ತದೆ. ನಗರಜೀವನದ ಫ್ರಸ್ಟ್ರೇಷನ್‌ ಗಳು ನಮ್ಮೊಳಗೆ ಹೀಗೆಲ್ಲಾ ಹಳ್ಳಿಗಳ ಕುರಿತು ಸಾಫ್ಟ್‌ ಕಾರ್ನರ್‍ ಬೆಳೆಸುತ್ತದೆ ಎನಿಸುತ್ತದೆ.

ಜಾಗತೀಕರಣದ ಚಪ್ಪಡಿಕಲ್ಲು ಇನ್ನೂ ಪೂರ್ತಿಯಾಗಿ ಬಿದ್ದಿಲ್ಲವಾದ್ದರಿಂದ ಹಳ್ಳಿಗಳು ತಕ್ಕಮಟ್ಟಿಗೆ ನೆಮ್ಮದಿಯಾಗಿ ಉಸಿರಾಡಬಹುದಾದ ತಾಣಗಳಾಗಿ ಉಳಿದುಕೊಂಡಿವೆ ಎನ್ನುವುದೇನೋ ನಿಜ. ಆದರೆ ಎಲ್ಲ ಕಡೆಯೂ ಹಿಡಿದಿರುವಂತೆ ಹಳ್ಳಿಗರಿಗೂ ಪ್ರೊಡಕ್ಟಿವಿಟಿ, ಪೈಪೋಟಿ, ಮಹಾತ್ವಾಕಾಂಕ್ಷೆ, ಸ್ವೆಚ್ಛೆಗಳ ಹುಚ್ಚು ನಿಧಾನಕ್ಕೆ ತಲೆಗೇರುತ್ತಿದೆ. ಹಾಗಾಗಿ ಹಳ್ಳಿ ಎನ್ನುವುದಾಗಲಿ ನಗರವೆನ್ನುವುದಾಗಲಿ ಮನಸ್ಥಿತಿಗಳಾಗಿ ಮಾತ್ರ ಉಳಿದುಕೊಳ್ಳುವ ದಿನಗಳು ದೂರವಿಲ್ಲವೆನಿಸುತ್ತದೆ. ಅಷ್ಟಕ್ಕೂ ‘ಅಂಗಾಲಿಗೆ ಕೆಂಡವನ್ನೆ ಕಟ್ಟಿಕೊಂಡ ಕಾಲು ಎಲ್ಲಿ ಹೋದರೇನು ಎಲ್ಲಿ ಬಂದರೇನು?’ ಎನ್ನುವ ಯೋಗರಾಜ ಭಟ್ಟರ ಹಾಡಿನ ಸಾಲಿನಂತೆ ನಮ್ಮ ಮನಸ್ಥಿತಿಗಳಲ್ಲೇ ಗದ್ದಲ ತುಂಬಿಕೊಂಡಿರುವಾಗ ಶಾಂತಿಯನ್ನಾಗಲಿ ನೆಮ್ಮದಿಯನ್ನಾಗಲಿ ಹೊರದಾರಿಗಳಲ್ಲಿ ಹುಡುಕಿ ಉಪಯೋಗವಿಲ್ಲವೆನಿಸುತ್ತದೆ.