ಸಿಡ್ನಿಯ ಮೊದಲ ಫೈನಲ್‌ನಲ್ಲಿ ತೆಂಡುಲ್ಕರ್ ಸೆಂಚುರಿ ಹೊಡೆದ. ಇಂಡಿಯ ಮ್ಯಾಚ್ ಗೆದ್ದು ಎದೆಯುಬ್ಬಿಸಿತು. ಮಾರನೇ ದಿನ ಆಸ್ಟ್ರೇಲಿಯಾದ ಮಾಧ್ಯಮಗಳು ಹರ್ಭಜನ್ ಕಂಕುಳು ಕೆರಕೊಂಡದ್ದನ್ನು ಅನುಮಾನಿಸಿ ದೊಡ್ಡ ಸುದ್ದಿ ಮಾಡಿದರು. ಎರಡನೇ ಫೈನಲ್ ಕೂಡ ಗೆದ್ದ ಇಂಡಿಯಾ ಏಕದಿನ ಸರಣಿಯನ್ನೇ ಗೆದ್ದು ಕುಣಿದಾಡಿತು. ಅದರ ಮಾರನೇ ದಿನ ಆಂಡ್ರೂ ಸೈಮಂಡ್ಸ್ ಓಡಿಬಂದ ಬೆತ್ತಲೆ ನೋಡುಗನನ್ನು ತಡೆದು ಉರುಳಿಸಿದ್ದು ದೊಡ್ಡ ಸುದ್ದಿ ಮಾಡಿದರು. ಅಂದ ಹಾಗೆ, ಇಂಡಿಯ ಗೆದ್ದಿತು ಎಂದು ಕಡೆಯ ಪ್ಯಾರಾದಲ್ಲಿ ಚಿಕ್ಕದಾಗಿ ಸೇರಿಸಿದರು. ಇದಕ್ಕೆಲ್ಲಾ ಸಿಟ್ಟಾಗುತ್ತೇವೆ, ಸೇಡು ತೀರಿಸುಕೊಂಡೆವೆಂದು ಒಳಗೊಳಗೇ ನಗುತ್ತೇವೆ. ಹರ್ಭಜನ್ ವಿಷಯದಲ್ಲಿ ಏನೆಲ್ಲಾ ಮಾಡಿ ಕಡೆಗೂ ಅವನ ಮಾನ ಉಳಿಸಿದ ಸಂಗತಿ ನೆನಪಾಗಿ ಆ ನಗುವಿಗೆ ಗೆದ್ದ ಕಳೆ ಸೇರಿಕೊಳ್ಳುತ್ತದೆ.

ಅದೆಲ್ಲಾ ಇರಲಿ. ಆದರೆ ಆಂಡ್ರೂ ಸೈಮಂಡ್ಸನಿಂದ ಗುದ್ದಿಸಿಕೊಂಡ ಬೆತ್ತಲೆಯವನ ಸಮಾಚಾರ ಒಂದೆರಡು ದಿನ ಮುಂದುವರೆಯಿತು. ಅವನು ಬ್ರಿಸ್ಬೆನ್ನಿನ ಕೋರ್ಟಲ್ಲಿ ಹಾಜರಾದ. ಗಂಟೆ ಆಡಿಸಿಕೊಂಡು ದೋಣುಕುಂಡಿಯಾಗಿ ಓಡಿದ್ದಕ್ಕೆ ಒಂದೂವರೆ ಸಾವಿರ ಡಾಲರ್‍ ದಂಡವಾಯಿತು. ಆದರೆ ಅವನ ಹೆಸರಿಗೆ ಯಾವುದೇ ಕನ್ವಿಕ್ಷನ್ ದಾಖಲಾಗಲಿಲ್ಲ.

ಹಿಂದೆಲ್ಲಾ ಸೆಂಚುರಿ ಹೊಡದಾಗ, ಪಂದ್ಯ ಮುಗಿದಾಗ ಜನ ಕ್ರೀಡಾಂಗಣಕ್ಕೆ ಲಗ್ಗೆ ಇಡುವುದು ನೋಡಿದ್ದೇವೆ. ತಮ್ಮ ನೆಚ್ಚಿನ ಆಟಗಾರರ ಬೆನ್ನು ತಟ್ಟುವುದು ನೋಡಿದ್ದೇವೆ. ಅವರೊಡನೆ ಪೆವಿಲಿಯನ್‌ವರೆಗೂ ಕುಣಿಯುತ್ತಾ ಹೋಗುವುದು ನೋಡಿದ್ದೇವೆ. ಆದರೀಗ ಕ್ರಿಕೆಟ್ ಅತ್ಯಂತ ಹಣದ ವಾಹಿವಾಟಿನ ಆಟವಾಗಿ ಬದಲಾದ ಮೇಲೆ ಅವೆಲ್ಲ ಇಲ್ಲ. ಎಲ್ಲವೂ ಕಟ್ಟುನಿಟ್ಟಾಗಿ, ಬಂದೋಬಸ್ತಿನಲ್ಲಿ ನೋಟಗರನ್ನು ದೂರದಲ್ಲೇ ಇಟ್ಟು ಆಟ ನಡೆಯುತ್ತದೆ. ಆಟಗಾರರನ್ನು ಹತ್ತಿರದಿಂದ ನೋಡಬೇಕನಿಸಿದವರು ಮನೆಯಲ್ಲಿ ಟೀವಿಯಲ್ಲಿ ಕ್ಲೋಸಪ್ ನೋಡಬೇಕಷ್ಟೆ. ನನಗಂತೂ ಮಕ್ಕಳನ್ನಾದರೂ ಕ್ರೀಡಾಂಗಣಕ್ಕೆ ಲಗ್ಗೆ ಇಡಲು ಬಿಡಬೇಕು ಎಂದು ಹಲವು ಸಲ ಅನಿಸಿದೆ. ಆ ಉತ್ಸಾಹ ಮತ್ತು ನೆನಪು ಅವರನ್ನು ತುಂಬಾ ದಿನ ಹುರಿದುಂಬಿಸಬಲ್ಲುದು ಎಂದ ಆಸೆ.

ಬಟ್ಟೆತೊಟ್ಟುಕೊಂಡೇ ಕೋರ್ಟಿನಿಂದ ಹೊರಬಂದು ಟೀವಿ ರೇಡಿಯೋಗೆ ವಿವರಿಸಿದ- “ಬಿಯರ್‍ ಕುಡಿದಿದ್ದೆ. ಗೆಳೆಯರ ಶರತ್ತೊಂದಕ್ಕೆ ಮಾರುತ್ತರ ಕೊಡಬೇಕಾಗಿತ್ತು. ನಾನು ಅದನ್ನು ಮಾಡಲೇಬೇಕಾಗಿತ್ತು. ನೀವು ಒಂದೇ ಸಲ ಬದುಕುವುದು” ಎಂದು ಹೇಳಿ ಹೊರಟುಬಿಟ್ಟ. ರೇಡಿಯೋ ಹಾಗು ಟೀವಿಯವರು ಅವನನ್ನು ಬೆನ್ನಟ್ಟಿ ಮಾತಾಡಿಸಿದರು. ಅವನ ಬದುಕಿನ, ಯೋಚನೆಯ ವಿವರಗಳಲ್ಲಿ ಏನಾದರೂ ರೋಚಕವಾದ್ದು ಇದೆಯೇ ಎಂದು ತಡಕಾಡಿದರು. ಆ ತಡಕಾಟದ ಪರಿಣಾಮವಾಗಿ ಟೀವಿ ಒಂದಕ್ಕೆ ಸಂದರ್ಶನ ಕೊಟ್ಟು ಏಳೂವರೆ ಸಾವಿರ ಡಾಲರ್‌ಗಳನ್ನು ಪಡೆದ. ಕೂಡಿ ಕಳೆದು ಅವನಿಗೆ ಆರು ಸಾವಿರ ಲಾಭವೇ ಆಯಿತು. ಕನ್ವಿಕ್ಷನ್ ಏನಾದರೂ ದಾಖಲು ಮಾಡಿದ್ದರೆ ಅವನು ಸಂದರ್ಶನ ಕೊಟ್ಟು ದುಡ್ಡು ಪಡೆಯುವುದು ಕಾನೂನು ಬಾಹಿರವಾಗುತ್ತಿತ್ತು. ಈಗ ಹಾಗಿಲ್ಲ. ಅವನು ನಗುತ್ತಲೇ ಇದ್ದ. ಎಲ್ಲಿಯೂ ನಾಚಿಕೆ ಹಾಗು ಮಾನದ ಬಗ್ಗೆ ಪ್ರಶ್ನೆಯಾಗಲಿ ಚರ್ಚೆಯಾಗಲಿ ನಡೆದಂತೆ ಕಾಣಲಿಲ್ಲ. ಇಂಥವು ಪಾಶ್ಚಿಮಾತ್ಯರ ಹುಚ್ಚಾಟ ಎಂದು ತಳ್ಳಿಹಾಕುವ ಮೊದಲು, ಕನಸು ಮನಸ್ಸಿನಲ್ಲೂ ಅವನಂತೆ ಮಾಡಲಾರದವರೇ ಇಲ್ಲಿ ಹೆಚ್ಚು ಎಂಬುದೂ ನೆನಪಿಡಬೇಕು.

ಇನ್ನೊಂದು ಬಗೆಯಲ್ಲೂ ಇದನ್ನು ನೋಡಬಹುದು. ಆಟದ ಸುತ್ತುಮುತ್ತ ಬಂದೋಬಸ್ತು ಹಾಗು ಕಟ್ಟುನಿಟ್ಟು ಮಿತಿಮೀರಿದೆ. ಇದರಿಂದಾಗಿಯೇ ಬಟ್ಟೆ ಬಿಚ್ಚಿಕೊಂಡು ಓಡುವ ಸ್ಟ್ರೀಕರ್‍ ಪ್ರವೃತ್ತಿ ಹೆಚ್ಚುತ್ತಿದೆಯೆ ಎಂದೂ ಕೇಳಬಹುದು. ಮಾಡಕೂಡದೆಂದು ವಿಧಿಸಿದ್ದನ್ನು ಮಾಡುವುದು ನಮ್ಮೆಲ್ಲರ ಗುಣ. ಮಾನ-ಅವಮಾನ ಇವೆಲ್ಲವನ್ನು ಮೀರಿದ ಮಾತಿದು. ಮನುಷ್ಯನ ಮಾನದ ಮಿತಿ ಸದಾ ಪ್ರಶ್ನೆಗೊಳಗಾಗುತ್ತಿರುವ ಇಂದಿನ ಜಗತ್ತಿನಲ್ಲಿ ಬೆತ್ತಲೆ ಓಡುವುದನ್ನು ಹೇಗೆ ನೋಡುವುದು? ಬೆತ್ತಲೆ ಓಡಿದವನ ಮಾನ ನಿಜವಾಗಿಯೂ ಹೋಯಿತೆ? ಅಷ್ಟು ಸಣ್ಣ ವಿಷಯಕ್ಕೆ ಮಾನ ಹೋಗಬಹುದೆ? ವಿಕೃತವಾದ ಹಲವು ಬಗೆಯ ಕೋಟಲೆಯನ್ನು ಸುತ್ತಲವರಿಗೆ ಕೊಡುತ್ತಿರುವ ಮಂದಿ ನಮ್ಮ ನಡುವೆಯೇ ಇರುವಾಗ? ಅದೂ ಮಾನವಂತರಾಗಿಯೇ ಬದುಕುತ್ತಿರುವಾಗ? ಬೇರೆಯವರಿಗೆ ತೊಂದರೆ ಕೊಡದೆ ತನ್ನ ಸ್ವೇಚ್ಛೆಯನ್ನು ಬಳಸುವುದಕ್ಕೆ ಸದಾ ಅವಕಾಶವಿರುವುದು ಒಳ್ಳೆಯದೆ. ಸಂಪ್ರದಾಯವಾದೀ ಸಮಾಜಕ್ಕೂ ಈ ಮಾತು ಒಪ್ಪುತ್ತದೆ. ಮುಕ್ತ ಮನಸ್ಸನ್ನು ಹಾಗೂ ಸೃಜನಶೀಲ ಮನಸ್ಸನ್ನು ರೂಪಿಸುವುದಕ್ಕೆ ಇವು ಅಮೂಲ್ಯ ಸವಲತ್ತುಗಳು. ಕೆಲವೊಮ್ಮೆ ಅತಿರೇಕ ಅನಿಸಿದರೂ ಕೂಡ.