ಅಪ್ಪನ ಕೆಮ್ಮುಗಳಲ್ಲಿ ಎರಡು ವಿಧಗಳಿದ್ದವು. ಒಂದು ಬೀಡಿ ದಮ್ಮಿನ ಕೆಮ್ಮು, ಇನ್ನೊಂದು ಎಚ್ಚರಿಕೆಯ ಕರಗಂಟೆಯ ಒಣಕೆಮ್ಮು. ಎರಡನೆಯ ಕೆಮ್ಮು ಒಂಥರ ನಮ್ಮಪ್ಪನ ಸಿಗ್ನಲ್ಲು ಕೂಡ ಆಗಿತ್ತು. ನಮಗೆಲ್ಲಾ ಆ ಕೆಮ್ಮಿನ ಧ್ವನಿಯ ಹಿಂದಿರುವ ಭಾಷೆ, ಭಾವಗಳು ತಕ್ಷಣಕ್ಕೆ ಗೊತ್ತಾಗಿ ಬಿಡುತ್ತಿದ್ದವು. ಅಪ್ಪ ಸಿಟ್ಟಿನಲ್ಲಿ ಇದ್ದಾರಾ? ಇಲ್ಲ ಒಳ್ಳೇ ಮೂಡ್ನಲ್ಲಿ ಬರ್ತಿದ್ದಾರಾ? ಎನ್ನುವುದು ತಿಳಿಯುತ್ತಿತ್ತು. ಜೊತೆಗೆ `ನಾನು ಬರುತ್ತಿದ್ದೇನೆ ಹೋಶಿಯಾರ್’ ಎಂಬ ಬೋಪರಾಕ್ ಕೂಡ ಆ ಕೆಮ್ಮಿನ ದನಿಯಲ್ಲಿ ಅಡಕವಾಗಿರುತ್ತಿತ್ತು. –ಕಲೀಮ್‌ಉಲ್ಲಾ ಬರೆದ “ಬಾಡೂಟದ ಮಹಿಮೆ” ಪ್ರಬಂಧ ಸಂಕಲನದ ಒಂದು ಪ್ರಬಂಧ ನಿಮ್ಮ ಓದಿಗೆ

ಮನೆಯಲ್ಲಿ ಅಪ್ಪ ತೀರಾ ಬೆಳ್ಳಂಬೆಳಗ್ಗೆಯೇ ಏಳುತ್ತಿದ್ದರು. ಅದು ಅವರ ಅಭ್ಯಾಸ. ಅಪ್ಪ ಎದ್ದ ಮೇಲೆ ಮನೆಯಲ್ಲಿ ಮಲಗಿದ ಯಾರ ತಲೆಯೂ ಕಾಣುವಂತಿಲ್ಲ. ಕಂಡರೆ ರೋಷ, ಆವೇಶ, ಗುಡುಗು ಸಿಡಿಲು. ಮನೆಯ ಬಹಳಷ್ಟು ಜನ ಏಳುತ್ತಿದ್ದದ್ದೇ ಅಪ್ಪನ ಬೈಗುಳ ಬಿದ್ದ ಮೇಲೆ. ನಾನಂತೂ ಯಾವತ್ತೂ ಖಾಯಮ್ಮಾಗಿ ಕೊನೆಯ ಗಿರಾಕಿ. ಅಪ್ಪನ ಸುಪ್ರಭಾತ ಜತೆಗೆ ಬೋಣಿಗೆ ಹೊಡೆತಗಳು ಬಿದ್ದ ಮೇಲೆಯೇ ನಿದ್ದೆಯಿಂದ ಈಚೆಗೆ ಬರುತ್ತಿದ್ದೆ. ಅಪ್ಪ ಎದ್ದು ಮನೆ ಹೊರಗೆ ಒಳಗೆ ಬುಸುಬುಸು ಎಂದು ಓಡಾಡುತ್ತಿದ್ದರು. ಮನೆ ಯಜಮಾನನಾದ ನನ್ನ ಆಣತಿಗೆ ವಿರುದ್ಧವಾದ ಕೆಲಸಗಳಿಲ್ಲಿ ನಡೆಯುತ್ತಿವೆ ಎಂಬ ಅಸಮಾಧಾನ. ಕಾಕಾ ಹೊಟೇಲ್ಲಿನ ಎರಡೆರಡು ಸುತ್ತಿನ ಟೀ ಕೂಡ ಇಷ್ಟರಲ್ಲೇ ಆಗಿರುತ್ತಿತ್ತು. ಅಪ್ಪನ ಗೆಳೆಯರು ಅವರಂತೆಯೇ ಬೇಗ ಎದ್ದು ಆ ಹೊಟೇಲಿನ ಸುತ್ತ ಜಮಾಯಿಸುವ ಕುಳಗಳು. ಅಲ್ಲಿ ಕೂತು ಶಕ್ತಿ ಬಿಟ್ಟು ನಾಲ್ಕಾರು ಗಣೇಶ ಬೀಡಿಗಳನ್ನು ಸೆಳೆಯುವುದು; ಕೇಳಿದವರಿಗೆ ಬೆಂಕಿ ಪೊಟ್ಟಣ ಸಮೇತ ಗಣೇಶಬೀಡಿ ಕಟ್ಟು ಅವರ ಕಾಲ ಬಳಿ ಹೋಗಿ ಬೀಳುವಂತೆ ಗುರಿಯಿಟ್ಟು ಒಗೆಯುವುದು ಎಲ್ಲವೂ ದೊಡ್ಡಸ್ತಿಕೆ ಮತ್ತು ಸಭಾ ಮರ್ಯಾದೆ.

ಕಾಕಾ ಹೊಟೇಲಿನ ಸುತ್ತ ತಮ್ಮ ಪಿತಾಚಾರ್ಯರ ಕಾಣಲು ಅಮ್ಮಂದಿರ ಮೂಲಕ ದೂಡಲ್ಪಟ್ಟ ದೂತರಂತೆ ನಾವುಗಳು ಅಲ್ಲಿ ನೆರೆಯುತ್ತಿದ್ದೆವು. ಎಲ್ಲಾ ನನ್ನ ಓರಗೆಯವರೇನೆ. ಎಲ್ಲರೂ ದುಡ್ಡು ವಸೀಲಿಗೆ ಬಂದವರು. ರೇಷನ್ನಿನ ಪಟ್ಟಿ ಒಪ್ಪಿಸಲು ಬಂದವರು. `ಅಬ್ಬಾ ಅಮ್ಮಿ ಬುಲಾರೀಂ ಆನಾ ಕತೆ’ ಎಂದು ಕೂಗಿ ಬೈಸಿಕೊಳ್ಳುವವರೇನೆ. ಅಲ್ಲಿ ಕಲೆತ ಅಪ್ಪಂದಿರಿಗೆ ಇವೆಲ್ಲವೂ ಮಾಮೂಲು. ಮಕ್ಕಳ ರೂಪದ ಶನಿಗಳಾಗಿ ಕಾಡುವ ಇವುಗಳ ಓಡಿಸಲು ಅವರೆಲ್ಲ ಬಲ್ಲರು. ಕಂಬರ್ಗಂಟ್, ಪೇಪರಮೆಂಟ್, ಗಿಣಿ ಮೂತಿ ಬಿಸ್ಕತ್, ಬೋಟಿ, ಇಲ್ಲ ಕೊನೆಗೆ ಬಟಾಣಿ ಪುಟಾಣಿಗಾದರೂ ಬಿಡಿಗಾಸು ಬೀಸಿ ಒಗೆಯಬಲ್ಲರು. ಅವರ ಸಚಿವಸಂಪುಟದ ಸಭೆಯ ನಡುವೆ ಕಂಯ್ಯೋ… ಕೊಂಯ್ಯೋ… ಎಂದು ಕೈಯೊಡ್ಡಿದ ಮಕ್ಕಳ ದೊಡ್ಡ ಪಟಾಲಮ್ಮೇ ಅಲ್ಲಿ ಇರುತ್ತಿತ್ತು.

(ಕಲೀಮ್‌ಉಲ್ಲಾ)

ನಿರಂತರವಾಗಿ ಕವ್ವಕವ್ವ ಎಂದು ಕಿರಿಚಾಡಿ ಬಿಗಿಸಿಕೊಳ್ಳುವ ಜಾಗಕ್ಕೆ ನಾನೂ ಚಿಕ್ಕವ್ವನ ಬಲವಂತಕ್ಕೆ ಎದ್ದು ಹೋಗಬೇಕು. ನನಗಿದು ಇಷ್ಟವಿಲ್ಲದ ಕೆಲಸ. ನಿದ್ದೆ ಮಂಪರಲ್ಲಿ ಕಣ್ಣುಜ್ಜಿಕೊಂಡು ಹೋಗಿ ಏನೋ ಕೇಳುವ ಜಾಗದಲ್ಲಿ ಮತ್ತೇನೋ ಕೇಳಿದ್ದೂ ಇದೆ. ಈ ಯಪರತಪರಕ್ಕೆ ಅಪ್ಪನ ಸಿಟ್ಟು ದ್ವಿಗುಣಸಂಧಿಯಾಗಿ ನೆತ್ತಿಗೆ ತಾಗಿದ್ದಿದೆ. `ಎಂಥಾ ದಡ್ಡ ಸೂ…ಹುಟ್ಟಿದ, ನಾಲ್ಕು ಜನದ ಮುಂದೆ ನನ್ನ ಮರ್ಯಾದಿ ತೆಗೀತಾನೆ ನೋಡ್ರಿ’ ಎಂದು ಪ್ರಶಂಸೆ ಮಾಡಿದ್ದೂ ಇದೆ.

ಎಲ್ಲರೆದುರು ಕಾಡಿದೆನೆಂದು ಅಪ್ಪ ತಲೆಗೆ ಬಿರ್ರನೆ ಬಾರಿಸಿದರು. ಸುತ್ತಿಗೆ ಮಾದರಿಯ ಆ ಹೊಡೆತ ಮೆದುಳನ್ನು ಅಲ್ಲಾಡಿಸಿ ನೀರು ಮಾಡಿತು. ತಲೆ ಜೀಮ್ ಎಂದು ಅದುರಿ ಕ್ಷಣಹೊತ್ತು ಕಣ್ಣೇ ಮಂಜಾಯಿತು. ಅಪ್ಪ ಕುಲುಮೆ ಕೆಲಸ ಮಾಡುತ್ತಿದ್ದ ಗಟ್ಟಿಗ. ಈ ಕಾರಣ ಅವನ ಕೈಗಳು ಗಟ್ಟೆಬಿದ್ದು ಅವು ಕಬ್ಬಿಣದಷ್ಟೇ ಸೆಡುವಾಗಿದ್ದವು. ಆ ಕೈ ಪೆಟ್ಟೆಂದರೆ ಅದು ಸಾಕ್ಷಾತ್ ಕಬ್ಬಿಣದ ರಾಡಿನ ಬಲವೇ ಆಗಿರುತ್ತಿತ್ತು. ತಂತಮ್ಮ ಅಪ್ಪಂದಿರ ಬಳಿ ಬರುವಾಗ ಖುಷಿಯಾಗಿ ನಲಿದು ಬರುತ್ತಿದ್ದ ಕೆಲ ಮರಿದೇವತೆಗಳು ಮನೆಗೆ ಹೋಗುವಾಗ ಸರಿಯಾದ ಹೊಡೆತ ತಿಂದು ದಾರಿಯಲ್ಲಿ ಅಬ್ಬಬ್ಬೋ ಎಂದು ಗೋಳಾಡುತ್ತಿದ್ದವು. ಗೊಣ್ಣೆ, ಕಣ್ಣೀರು, ಎರಡನ್ನೂ ಸಮನಾಗಿ ಕೆನ್ನೆ ಮೇಲೆ ತಿಕ್ಕಿಕೊಂಡು ಬಿಸಿಲಿಗೆ ಹೊಳೆಯುತ್ತಾ ತೆರಳುತ್ತಿದ್ದವು.

ಅಪ್ಪ ಕಾಕಾ ಕಟ್ಟೆ ಬಿಟ್ಟು ಗಂಟಲ ಕಫವ ರಿಪೇರಿ ಮಾಡಿಕೊಂಡು ರಸ್ತೆ ಬದಿ ಕ್ಯಾಕರಿಸಿ ತುಪ್ಪಿಕೊಳ್ಳುತ್ತಾ ಮನೆಗೆ ಬರುತ್ತಿದ್ದರು. ಅವರಿಗೆ ಅಸ್ತಮಾ ಕೂಡ ಇತ್ತು. ಹೀಗಾಗಿ ಅಗತ್ಯಕ್ಕಿಂತ ಜಾಸ್ತೀನೆ ಕೆಮ್ಮುತಿದ್ದರು. ಈ ಕೆಮ್ಮುಗಳಲ್ಲಿ ಎರಡು ವಿಧಗಳಿದ್ದವು. ಒಂದು ಬೀಡಿ ದಮ್ಮಿನ ಕೆಮ್ಮು, ಇನ್ನೊಂದು ಎಚ್ಚರಿಕೆಯ ಕರಗಂಟೆಯ ಒಣಕೆಮ್ಮು. ಎರಡನೆಯ ಕೆಮ್ಮು ಒಂಥರ ನಮ್ಮಪ್ಪನ ಸಿಗ್ನಲ್ಲು ಕೂಡ ಆಗಿತ್ತು. ನಮಗೆಲ್ಲಾ ಆ ಕೆಮ್ಮಿನ ಧ್ವನಿಯ ಹಿಂದಿರುವ ಭಾಷೆ, ಭಾವಗಳು ತಕ್ಷಣಕ್ಕೆ ಗೊತ್ತಾಗಿ ಬಿಡುತ್ತಿದ್ದವು. ಅಪ್ಪ ಸಿಟ್ಟಿನಲ್ಲಿ ಇದ್ದಾರಾ? ಇಲ್ಲ ಒಳ್ಳೇ ಮೂಡ್ನಲ್ಲಿ ಬರ್ತಿದ್ದಾರಾ? ಎನ್ನುವುದು ತಿಳಿಯುತ್ತಿತ್ತು. ಜೊತೆಗೆ `ನಾನು ಬರುತ್ತಿದ್ದೇನೆ ಹೋಶಿಯಾರ್’ ಎಂಬ ಬೋಪರಾಕ್ ಕೂಡ ಆ ಕೆಮ್ಮಿನ ದನಿಯಲ್ಲಿ ಅಡಕವಾಗಿರುತ್ತಿತ್ತು. ಕೆಮ್ಮಿನ ಸದ್ದಿನ ಸಂಕೇತಗಳೆಲ್ಲಾ ಟೆಲಿಗ್ರಾಂ ಸಂದೇಶಗಳಿದ್ದಂತೆ.

ಅಪ್ಪ ಮನೆ ತಲುಪಿದ ಮೇಲೂ, ಇನ್ನೂ ಹಾಸಿಗೆ ಮೇಲೆ ಯಾರಾದರೂ ಧಟ್ಟ (ಕೌದಿ) ಸುತ್ತಿಕೊಂಡು ಬಿದ್ದಿದ್ದರೆ, ಅವರ ಕತೆ ಮುಗೀತು ಅಂತಾನೆ ಅರ್ಥ. ಬೈಗುಳಗಳ ಜತೆಗೆ ಬಂದವರೇ ಮಲಗಿದವರ ತಲೆದಿಂಬಿಗೊಮ್ಮೆ ಝಾಡಿಸಿ ಕಾಲಿನಿಂದ ಒದೆಯುತ್ತಿದ್ದರು ಅವರ ಬೈಗುಳಗಳ ನಾದ ನಾವು ಹಾಸಿಗೆಯಿಂದ ಎದ್ದು ತೊಲಗಿದ ಮೇಲೂ ಮುಂದುವರೆಯುತ್ತಿದ್ದವು. ಈಗ ಆ ಥರ ಬೈದು ಏಳಿಸುವವರು ಯಾರೂ ಇಲ್ಲವಲ್ಲ ಅಂತ ಬೇಜಾರಾಗುತ್ತೆ.

ನಮಗಂತೂ ಬೆಳಕು ಯಾಕಾದರೂ ಹರಿಯಿತೋ ಎಂಬ ಸಿಟ್ಟು. ಈಗಷ್ಟೇ ಬಿದ್ದುಕೊಂಡಿದ್ದೇವಲ್ಲ! ಅಷ್ಟು ಬೇಗ ಬೆಳಕಾಯಿತೇ? ರಾತ್ರಿ ಇಷ್ಟು ಬೇಗ ಹೇಗೆ ಕಳೆಯಿತು ಎಂಬುದೂ ತಿಳಿಯದಾಗುತ್ತಿತ್ತು. ಬಣ್ಣದ ಕನಸುಗಳು ಪೂರ್ತಿಯಾಗುವ ಮೊದಲೇ ಈ ದೊಡ್ಡವರು ಸುಖನಿದ್ರೆಗೆ ಅಡ್ಡಿ ಮಾಡುವುದು ಸರಿಯೇ? `ಥೂ! ಹಾಳಾದವರು’ ಎಂದು ಗೊಣಗಿಕೊಂಡೇ ಆಕಳಿಸಿ, ತೂಕಡಿಸಿ, ಏಳುತ್ತಿದ್ದೆವು. ಎದ್ದು, ಅದೇ ನಿದ್ದೆಗಣ್ಣಲ್ಲೇ ಸೂಸೂ ಚೆಲ್ಲಲು ಮನೆಯ ಹಿಂದಿನ ಬೇಲಿ ಹತ್ತಿರ ಹೋಗಬೇಕಿತ್ತು. ಆ ಕ್ಷಣಕ್ಕೂ ನನ್ನ ನಿದ್ದೆ ಇನ್ನೂ ಎಷ್ಟು ಬಾಕಿ ಉಳಿದಿರುತ್ತಿತ್ತೆಂದರೆ ಅದಕ್ಕೆ ಉದಾಹರಣೆ ಇಲ್ಲಿದೆ.

ನಿರಂತರವಾಗಿ ಕವ್ವಕವ್ವ ಎಂದು ಕಿರಿಚಾಡಿ ಬಿಗಿಸಿಕೊಳ್ಳುವ ಜಾಗಕ್ಕೆ ನಾನೂ ಚಿಕ್ಕವ್ವನ ಬಲವಂತಕ್ಕೆ ಎದ್ದು ಹೋಗಬೇಕು. ನನಗಿದು ಇಷ್ಟವಿಲ್ಲದ ಕೆಲಸ. ನಿದ್ದೆ ಮಂಪರಲ್ಲಿ ಕಣ್ಣುಜ್ಜಿಕೊಂಡು ಹೋಗಿ ಏನೋ ಕೇಳುವ ಜಾಗದಲ್ಲಿ ಮತ್ತೇನೋ ಕೇಳಿದ್ದೂ ಇದೆ.

ಒಮ್ಮೆ ಮೂತ್ರ ವಿಸರ್ಜನೆ ಮುಗಿಸಿದ ಮೇಲೂ ಆ ಸ್ಥಳದಿಂದ ನಾನು ಮೇಲೆದ್ದಿರಲಿಲ್ಲ. ವಿಸರ್ಜನಾ ಭಂಗಿಯಲ್ಲೇ ಕೂತು ನಿದ್ದೆಯನ್ನು ಮುಂದುವರೆಸಿದ್ದೆ. ಅಷ್ಟೊಂದು ನಿದ್ದೆ ಬಾಕಿ ಉಳಿದಿತ್ತು! ಆಗ ಅಪ್ಪ `ಲೋ ಅವನು ಯಾಕೋ ಇನ್ನೂ ಬರಲಿಲ್ಲ ನೋಡೋ’ ಎಂದು ಅಣ್ಣನನ್ನು ಕಳಿಸಿದ್ದರು. ನಾನೂ ಅಲ್ಲೇ ತೂಕಡಿಸುತ್ತಾ ಯಮನಿದ್ದೆ ಬಾರಿಸುತ್ತಿದ್ದೆ. ಪಾಪ ಅಣ್ಣನಿಗೆ ಏನನ್ನಿಸಿತೋ ಏನೋ, ಹೊಡೆಯದೆ ಪ್ರೀತಿಯಿಂದ ಕೈ ಹಿಡಿದು ಕರೆದುಕೊಂಡು ಬಂದಿದ್ದ. ಇವೆಲ್ಲಾ ಅವನಿಗೆ ಈಗ ನೆನಪಿದೆಯೋ? ಗೊತ್ತಿಲ್ಲ. ಅಪ್ಪ ಮಾತ್ರ ಮುಖಕ್ಕೆ ನೀರು ಎರಚಿ ತಲೆ ಮೇಲೆ ನಾಲ್ಕು ತಟ್ಟಿದ್ದರು.

ನಿದ್ದೆಯಲ್ಲಿದ್ದವರನ್ನು ಅಣ್ಣ ಮೊದಲಿಂದ ಏಳಿಸುವ ಗೋಜಿಗೆ ಹೋಗಿದ್ದು ಕಡಿಮೇನೆ. ನಿದ್ದೆ ಅವರವರ ವೈಯಕ್ತಿಕ ವಿಷಯ. ಅವರವರ ಸುಖ. ಅದನ್ನು ಕೆಡಿಸಬಾರದು ಎಂಬುದು ಅವನ ನಿಲುವು ಇರಬಹುದು. ಆದರೆ, ನಮ್ಮಪ್ಪ ಮಾತ್ರ ಇದಕ್ಕೆ ತದ್ವಿರುದ್ಧ. ಅವರಿಗೆ ಮಲಗಿದವರ ಕಂಡರಾಗದು. ಸೋಂಬೇರಿಗಳ ಏಳಿಸುವುದು ಎಂದರೆ ಅಪ್ಪನಿಗೆ ಬಲು ಸಂತೋಷದ ಕೆಲಸ. ಪ್ರಾಯಶಃ ಎಲ್ಲರ ಮನೆಯಲ್ಲೂ ನಮ್ಮಪ್ಪನಂತೆ ನಿದ್ದೆಗೆ ಕ್ಯಾತೆ ತೆಗೆಯುವವರು ಇದ್ದೇ ಇರುತ್ತಾರೇನೋ?

ಇನ್ನೊಬ್ಬರ ಬೆಳಗಿನ ಸವಿನಿದ್ದೆಗೆ ಅಡ್ಡಿಯಾಗುತ್ತಿದ್ದ ಅಪ್ಪ ತಾವು ಮಾತ್ರ ಪ್ರಪಂಚ ಪ್ರಳಯವಾದರೂ ಸರಿ ದಿನಾ ಮಧ್ಯಾಹ್ನ ಒಂದು ಸಣ್ಣನಿದ್ದೆ ತೆಗೀತಿದ್ದರು. ಆ ಸಮಯದಲ್ಲಿ ನಾವೇನಾದರೂ, ಗಲಾಟೆ ಗಿಲಾಟೆ ಮಾಡಿದೆವೋ, ಅವರ ನಿದ್ದೆ ಅರ್ಧಂಬರ್ಧವಾಯಿತೋ? ಮುಗೀತು ಕತೆ. ಕೆಂಗಣ್ಣಿನಲ್ಲಿ ಎದ್ದು ಬಂದು ಸಿಕ್ಕಾಪಟ್ಟೆ ಗ್ರಹಚಾರ ಬಿಡಿಸುತ್ತಿದ್ದರು.

ಇನ್ನು ಗೊರಕೆ ವಿಷಯಕ್ಕೆ ಬಂದರೆ ನಾವೇ ಪುಣ್ಯವಂತರು. ನಮ್ಮ ಅಕ್ಕಪಕ್ಕ ಮಲಗೋರನ್ನು ಆ ದೇವರೂ ಕಾಪಾಡಲಾರನೇನೋ? ಇದೂ ನಮ್ಮಪ್ಪ ನಮಗೆ ಕೊಟ್ಟ ದಿವ್ಯ ವರದಾನ. ನಮ್ಮದೆಲ್ಲಾ ಹುಲಿ ಸಿಂಹಗಳ ನಾದನಿದ್ದೆ. ಸಾಂಸ್ಕೃತಿಕ ಸ್ಪರ್ಧೆಗೆ ತಯಾರಿ ನಡೆಸುವವರಂತೆ ಜಿದ್ದಿಗೆ ಬಿದ್ದು ನಾನಾ ರಾಗಗಳಲ್ಲಿ ಧ್ವನಿಗಳ ಹೊರಡಿಸುತ್ತೇವಂತೆ! ಈ ವಿಷಯ ನಮಗಂತೂ ಕೊಂಚವೂ ತಿಳಿಯದು. ಜನ ಹೇಳುತ್ತಾರೆಂದು ಒಪ್ಪಿದ್ದೇವೆ ಅಷ್ಟೆ. ಅದರಲ್ಲಿ ಹಿಂದೂಸ್ತಾನಿ, ಕರ್ನಾಟಕ, ಸುಗಮ ಸಂಗೀತ, ಕೆಲವೊಮ್ಮೆ ಖವ್ವಾಲಿ ಕೂಡ ನಡೆಯುವುದು ಉಂಟಂತೆ! ಎಲ್ಲಾ ಅಂತೆ ಕಂತೆ! ಹೀಗೀಗಂತ ನಮ್ಮ ಪಕ್ಕ ಮಲಗಿದ ಶೋತೃಗಣ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಿದೆ. ಕೆಲವರು ನಮ್ಮ ಜೊತೆ ಸ್ಪರ್ಧೆಗಿಳಿದು ಜಯಶೀಲರಾದ ಉದಾಹಾರಣೆಗಳೂ ಇವೆ. ಯಾರು ಏನೇ ಹೇಳಿದರೂ ನಾವು ಸಂಗೀತ ವಿಶಾರದರೆಂದು ಒಪ್ಪಲು ತಯಾರಿಲ್ಲ. ಯಾಕೆಂದರೆ ಯಾವತ್ತೂ, ನಮ್ಮ ಸಂಗೀತವನ್ನು ನಾವೇ ಆಲಿಸಿಯೇ ಇಲ್ಲವಲ್ಲ. ಹೇಗೆ ನಂಬುವುದು? ನನ್ನ ಗೆಳೆಯ ಅಸ್ಲಂ ಹಾಗೂ ನೂರ್ ಒಮ್ಮೆ ಮೊಬೈಲ್‍ನಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಿ ತೋರಿಸಿದ್ದನ್ನೇ ನಾನು ಒಪ್ಪಿಕೊಳ್ಳಲಿಲ್ಲ. ಇದೆಲ್ಲಾ ಮೋಸ ನಮ್ಮ ಮೇಲೆ ಆಗದವರು ಮಾಡಿರುವ ಪಿತೂರಿ ಎಂದು ತಳ್ಳಿ ಹಾಕಿದ್ದೇನೆ. ಏನೇ ಹೇಳಿ, ಸುಖ ನಿದ್ದೆಯಷ್ಟೇ ನಮಗೆ ಗೊತ್ತಿರೋದು. ಉಳಿದಿದ್ದೆಲ್ಲಾ ಅನುಭವಿಸಿದವರ ಕರ್ಮ.

ಅಪ್ಪನ ಪ್ರೀತಿ, ಪ್ರೇಮ, ಸಿಟ್ಟು, ಎಲ್ಲದರಲ್ಲೂ ಒಂದಿಷ್ಟು ಬೈಗುಳಗಳು ಮಿನಿಮಂ ಇದ್ದೇ ಇರುತ್ತಿತ್ತು. ಈ ಬೈಗುಳಗಳಿಗೆ ನಾವೆಲ್ಲಾ ಎಷ್ಟು ಹೊಂದಿಕೊಂಡಿದ್ದೇವೆಂದರೆ ಅಪ್ಪ ಯಾವತ್ತಾದರೂ ಒಂದು ದಿನ ಬೈಯದೆ ಮಾತಾಡಿಸಿದರೆ, ನಮಗೆ ಏನೋ ಕಳೆದುಕೊಂಡ ಶೂನ್ಯ ಭಾವನೆ ಆವರಿಸುತ್ತಿತ್ತು. ಅಪ್ಪನ ಪ್ರೀತಿ ಕಮ್ಮಿಯಾಯಿತಲ್ಲ! ಎಂದು ಮನಸ್ಸು ಖಿನ್ನವಾಗುತ್ತಿತ್ತು. ಅಪ್ಪ ಬಹಳ ಮರ್ಯಾದೆ ಕೊಟ್ಟು, ಒಂದೂ ಬೈಗುಳವಿಲ್ಲದೆ, ಅದೂ ಬಹುವಚನ ಉಪಯೋಗಿಸಿ ನಮ್ಮ ಮಾತಾಡಿಸುತ್ತಿದ್ದಾರೆ ಎಂದರೆ ಅಷ್ಟೇ ಕತೆ. ಆವತ್ತು ಏನೋ ಗ್ರಹಚಾರ ಅಟಕಾಯಿಸಿಕೊಂಡಿದೆ ಎಂದೇ ಅರ್ಥ. ಇನ್ನು ಅಲ್ಪ ಸ್ವಲ್ಪ ಹೊತ್ತಿನಲ್ಲಿ ಹೊಡೆತ ಬೀಳೋದು ಖಚಿತ ಅನ್ನೋ ಮುನ್ನುಡಿಯ ಸಂಕೇತ.

ಅಣ್ಣ ಸಣ್ಣವಿದ್ದಾಗ ಸ್ಕೂಲಿಗೆ ಹೋಗಲು ಎಲ್ಲಾ ಮಕ್ಕಳಂತೆ ಬಲು ತಕರಾರು ಮಾಡುತ್ತಿದ್ದನಂತೆ. ಅಮ್ಮ ಇವನಿಗೆ ರೆಡಿ ಮಾಡಿ ನಮ್ಮೂರಿನ ವಡ್ಡರಹಟ್ಟಿ ಸ್ಕೂಲಿಗೆ ಓಡಿಸುವಷ್ಟರಲ್ಲಿ ಸಾಕುಸಾಕಾಗುತ್ತಿತ್ತಂತೆ. ಅವನಿಗೆ ಸ್ನಾನ ಮಾಡಿಸಿ, ಬಟ್ಟೆ ಹಾಕಿ, ತಲೆಗೆ ಎಣ್ಣೆ ಸವರಿ, ಕ್ರಾಪು ಎಳೆದು, ಹೋಗೋ ಎಂದಾಗ `ಅಮ್ಮ ಪಾಖಾನಾ’ ಎಂದು ಸುಮ್ಮನೇ ಹೊಟ್ಟೆ ಹಿಡಿದುಕೊಂಡು ನುಲಿಯುತ್ತಿದ್ದನಂತೆ. ಇದು ಶಾಲೆಗೆ ಚಕ್ಕರ್ ಹಾಕುವ ಆತ ಅನುಸರಿಸುತ್ತಿದ್ದ ತಂತ್ರದ ಒಂದು ಭಾಗವಾಗಿತ್ತು. ಅಮ್ಮ ನಿಜವೆಂದು ನಂಬಿ ಟಾಯ್ಲೆಟಿಗೆ ಕೂರಿಸಿದರೆ ಅಲ್ಲಿ ಯಾವ ಪ್ರಗತಿಯೂ ಇರುತ್ತಿರಲಿಲ್ಲ. `ಆಯಿತೇನೋ ಆಯಿತೇನೋ’ ಎಂದು ನೂರು ಸಲ ಕೇಳಿದರೂ `ಬರ್ತಾ ಅದೆ’ ಎಂಬ ಸುಳ್ಳು ಆಶ್ವಾಸನೆ. ಮಗ ಶಾಲೆ ತಪ್ಪಿಕೊಳ್ಳುವ ನಾಟಕವಿದು ಎಂದು ಅಮ್ಮನ ಒಳಮನಸ್ಸಿಗೂ ಗೊತ್ತು. ಆದರೆ ಅಮ್ಮನೋ ಹಟದಲ್ಲಿ ಯೋಗ ಮಾಡಿದಾಕೆ. ಕೊನೆಗೆ ಒದ್ದು ಶಾಲೆಯ ತನಕ ಹೋಗಿ ಬಿಟ್ಟು ಬರುತ್ತಿದ್ದರಂತೆ. ಮಕ್ಕಳಿಗೆ ಕಲಿಸಲೇಬೇಕು ಎನ್ನುವ ವಿಷಯದಲ್ಲಿ ಅಮ್ಮನ ಕಾಳಜಿ, ಮತ್ತು ನಿಷ್ಠೆ ಅಪ್ಪನಿಗಿಂತ ನಾಲ್ಕು ಹೆಜ್ಜೆ ಮುಂದಿತ್ತು. ಅಮ್ಮ ತೀರಿಕೊಂಡ ನಂತರ ನಮ್ಮ ಓದಿನ ವಿಷಯದಲ್ಲಿ ಅಪ್ಪನ ಕಾಳಜಿ ಅಮ್ಮನಷ್ಟೇ ಜಾಸ್ತಿಯಾಯಿತು. ಅಪ್ಪ ಅಮ್ಮನಾಗಿ ಬದಲಾದ ಕಥೆಯಿದು.

ಕ್ಲಾಸಿಗೆ ಹೋಗುವ ವಿಷಯದಲ್ಲಿ ನಾನೂ ಅಷ್ಟೇ ಮೊಂಡುತನ ಮಾಡಿದವನು. ಶಾಲೆಯ ಹೊಸ್ತಿಲನ್ನು ನನ್ನ ಪಾಲಿನ ಹೊಡೆತಗಳನ್ನು ಸೇವಿಸದೆ ಯಾವತ್ತೂ ತುಳಿದವನೇ ಅಲ್ಲ. ನಾನು ಶಾಲೆಗೆ ಸೇರುವ ಹೊತ್ತಿಗೆ ಅಮ್ಮ ಹೋಗಿಬಿಟ್ಟಿದ್ದರು. ಹೀಗಾಗಿ, ಅಪ್ಪನೇ ತನ್ನೆಲ್ಲಾ ಸಿಟ್ಟು ಸೆಡವು ಖರ್ಚು ಮಾಡಿ ದೂಡಬೇಕಿತ್ತು. ಹೇಳಿ ಕೇಳಿ ಮೊದಲೇ ಅವರು ಹೈಬಿಪಿ ಮನುಷ್ಯ. ತಾಳ್ಮೆ ಅನ್ನೋದನ್ನು ದೇವರು ಅವರಿಗೆ ಕೊಟ್ಟೇ ಇರಲಿಲ್ಲ. ದಾರಿಯಲ್ಲಿ ಸಿಕ್ಕುವ ಎಲ್ಲಾ ಜಾತಿಯ ಮರದ ರೆಂಬೆ ಕೊಂಬೆಗಳನ್ನೆಲ್ಲಾ ಮುರಿಮುರಿದು ಸುಕೋಮಲ ಕುಂಡೆಗಳ ಮೇಲೆ ಅಕ್ಷರಗಳು ಮೂಡುವಂತೆ ಬಾರಿಸಿಕೊಂಡೇ ದರದರ ಎಳೆದುಕೊಂಡು ಹೋಗುತ್ತಿದ್ದರು. ಆ ಹೊಡೆತಗಳ ಲೆಕ್ಕ ಹಾಕಿಯೇ ನಾನು ಗಣಿತ ಕಲಿತಿರಬೇಕು. ಹೀಗೆ ಕಲಿಸುವ ಅಪ್ಪಂದಿರು ಈಗ ಇದ್ದಾರೋ! ಇಲ್ಲವೋ? ಗೊತ್ತಿಲ್ಲ.

ಅಪ್ಪ ನನ್ನನ್ನು ಶಾಲೆ ತಲುಪಿಸಿದ ಮೇಲೂ ಅಲ್ಲಿರುವ ಮೇಷ್ಟ್ರುಗಳನ್ನು ಕರೆದು ಗುಡ್ಡೆ ಹಾಕಿಕೊಂಡು `ನೀವು ನಾಲ್ಕು ಬಾರ್ಸಿ ಸ್ವಾಮಿ’ ಎಂದು ಅವರಿಗೂ ಅವಕಾಶ ಕೊಡುತ್ತಿದ್ದರು. ಆ ಮೇಷ್ಟ್ರುಗಳಂತೂ ಇದೇ ಸದವಕಾಶಕ್ಕೆ ಕಾಯುತ್ತಿದ್ದವರು. ಅವರವರ ಹೆಂಡತಿ ಮಕ್ಕಳ ಮೇಲಿನ ಸಿಟ್ಟು, ಹೆಡ್ಮೇಷ್ಟ್ರು, ಸ್ಕೂಲ್ ಇನ್ಸ್‌ಪೆಕ್ಟರ್ ಮೇಲಿನ ಸಿಟ್ಟು, ನಮ್ಮ ಮೇಲಿನ ಹಳೇ ಸೇಡು, ಎಲ್ಲವನ್ನೂ ಆಗಲೇ ಜ್ಞಾಪಿಸಿಕೊಂಡು, ಚಚ್ಚಿ ಬಿಸಾಕುತ್ತಿದ್ದರು. ನಮಗೆ ಬಾರಿಸಿದ ಮೇಲೆ ಅವರಿಗೆ ಏನೋ ಒಂಥರದ ಸಂತೃಪ್ತಿ. ಮೇಷ್ಟ್ರು ಹೊಡೆವ ವೈಖರಿಗೆ ಅಪ್ಪ ತುಂಬಾ ಖುಷಿಯಾಗುತ್ತಿದ್ದರು. ಮಗ ಇನ್ನೂ ಕಲಿಯುತ್ತಾನೆ; ಹೊಡೆಯುವ ಗುರುಗಳಷ್ಟೇ ತನ್ನ ಮಗನ ಕಲಿಕೆಯ ಸಂಪೂರ್ಣ ಜವಾಬ್ದಾರಿ ಹೊರಬಲ್ಲ ದಕ್ಷರು ಎಂಬುದು ಅವನ ನಂಬಿಕೆ. ಜಾಸ್ತಿ ಹೊಡೆಯೋರು, ಬೈಯ್ಯೋರು, ಜಾಸ್ತಿ ಕಲಿಸ್ತಾರೆ ಅನ್ನೋ ಹಳೇ ಥಿಯರಿ ಇದು. ಹೊಡೆತಗಳೂ ಪಾಠದ ಒಂದು ಭಾಗ ಎಂದು ಭಾವಿಸಿದ್ದ ಮುಗ್ಧ ಜನರವರು.

ನಮ್ಮದು ಕೆಂಪು ಹಂಚಿನ ಸಣ್ಣ ಬಾಡಿಗೆ ಮನೆ. ಅಡಿಗೆ ಮನೆ ಬಿಟ್ಟರೆ ಹಾಲ್ ಮಾತ್ರ ಇತ್ತು. ಮನೆಯಲ್ಲಿ ಓದಿಕೊಳ್ಳಲು ಅಣ್ಣನಿಗೆ ಆಗ್ತಾನೇ ಇರಲಿಲ್ಲ. ಹೀಗಾಗಿ, ಆ ಮನೆಗೇ ಒಂದು ಪುಟ್ಟ ಅಟ್ಟ ಮಾಡಿಕೊಂಡು ಅದಕ್ಕೇ ಪುಟಾಣಿ ಏಣಿ ಏರಿಸಿಕೊಂಡು ಆತ ತನ್ನ ರೀಡಿಂಗ್ ರೂಮ್ ಪ್ರತಿಷ್ಠಾಪಿಸಿಕೊಂಡಿದ್ದ. ಆ ಜಾಗ ಆತ ಓದಿ ಮಲಗುವಷ್ಟಿತ್ತು. ಅಣ್ಣ ತಾಮ್ರದಿಂದ ತಯಾರಿಸಿದ ಸೀಮೆಎಣ್ಣೆ ದೀಪದಲ್ಲಿ ನಾವೆಲ್ಲಾ ಮಲಗಿದ ಮೇಲೆ ನಿರಾತಂಕವಾಗಿ ಓದುತ್ತಿದ್ದ. ಹಗಲೊತ್ತು ಅವನು ಓದಲು ಸಾಧ್ಯವೇ ಇಲ್ಲದಷ್ಟು ಗಲಾಟೆ ಜಗಳ ನಮ್ಮಿಂದ ದಿನಾ ನಡೀತಾನೆ ಇತ್ತು.
ನಮ್ಮ ಗಲಾಟೆಯಿಂದ ಆತನಿಗೂ ಸಾಕಾಗಿ ಹೋಗಿತ್ತು. ಅದು ಆತನ ಪರೀಕ್ಷೆ ಸಮಯ ಕೂಡ ಹೌದು. ಅಷ್ಟರಲ್ಲಿ ಅವನ ಪುಣ್ಯಕ್ಕೆ ನಮ್ಮ ಮನೆ ಮುಂದಿನ ಮಾವಿನ ತೋಟವನ್ನು ಕಡಿದು ಅಲ್ಲಿ ವ್ಯವಸಾಯೋತ್ಪನ ಮಾರುಕಟ್ಟೆ ಯಾರ್ಡ್ ಪ್ರಾರಂಭಿಸಿದರು. ಮೊದಲ ಸಲ ನಾವು ಎಂದೂ ನೋಡಿರದ ಆರ್.ಸಿ.ಸಿ. ಮಳಿಗೆಗಳನ್ನು ಅಲ್ಲಿ ಕಟ್ಟಿದರು. ಅಲ್ಲೀಗಂಟ ಗುಡಿಸಲು ಬಿಟ್ಟರೆ, ಕೆಂಪು ಕರಿಹಂಚಿನ ಮನೆ ಮಾತ್ರ ನೋಡಿದ್ದ ನಮಗೆ ಆ ಸಿಮೆಂಟಿನ ಮಂಡಿ ಮಳಿಗೆಗಳು ಸಾಕ್ಷಾತ್ ಅರಮನೆಗಳಂತೆ ಕಂಡವು. ನಮ್ಮೂರಿನಲ್ಲಿ ಗುರುವಾರ ಸಂಜೆ ಶುರುವಾಗಿ ಶುಕ್ರವಾರ ಮಧ್ಯಾಹ್ನಕ್ಕೆ ಮುಗಿಯುವ ಸಂತೆ ಬಿಟ್ಟರೆ ಉಳಿದಂತೆ ಅಲ್ಲಿನ ಜಗಲಿಗಳು ಸದಾ ಲಾಟರಿ ಹೊಡೆಯುತ್ತಿದ್ದವು. ಪುಕ್ಸಟ್ಟೆ ನಿದ್ದೆ ಬಾರಿಸುವ ಸೋಮಾರಿಗಳು, ದುಡ್ಡು ಕಟ್ಟಿ ಚೌಕಾಬಾರ ಆಡುವವರು, ಇಸ್ಪೀಟು ಆಡುವ ಕೆಲ ಜುಗಾರಿ ಜನಗಳು ಮಾತ್ರ ಬಿಡುವು ಮಾಡಿಕೊಂಡು ಅಲ್ಲಿಗೆ ಬರುತ್ತಿದ್ದರು. ಅಣ್ಣ ಒಂಬತ್ತು ಎಂದು ದೊಡ್ಡದಾಗಿ ಬರೆದಿದ್ದ ನಂಬರಿನ ಮಳಿಗೆ ಕಟ್ಟೆಯ ಒಂದು ಮೂಲೆ ಹಿಡಿದು ಓದುತ್ತಾ ಕೂರುತ್ತಿದ್ದ.

ಅಣ್ಣನಿಗೆ ಮೊದಲಿನಿಂದಲೂ ಗಿಡ ಮರಗಳೆಂದರೆ ಪ್ರಾಣ. ತೋಟಗಾರಿಕೆ ಅವನ ಪ್ರೀತಿಯ ಹವ್ಯಾಸ. ಕೆಂಪು ಹೊಲದ ಮಣ್ಣು, ಕೊಟ್ಟಿಗೆ ಗೊಬ್ಬರ, ಒಣಗಿದ ಎಲೆಗಳ ಕಾಂಪೋಸ್ಟ್ ಎಂದರೆ ಬಂಗಾರದ ನಿಧಿ ಕಂಡಷ್ಟೇ ಸಂತೋಷ. ಅಪ್ಪ ಗೇರಮರಡಿ ಎಂಬ ಹಳ್ಳಿಯಲ್ಲಿ ಮಾಡಿದ್ದ ತೋಟ ಹಾಗೂ ಹೊಲಗಳಲ್ಲಿ ರಜಾ ಸಮಯ ಬಂದರೆ ಇವನೇ ಬೇಸಾಯವನ್ನು ಮಾಡುತ್ತಿದ್ದ. ಬಹಳಷ್ಟು ವರ್ಷಗಳ ಕಾಲ ಅಪ್ಪ ಹಾಗೂ ನಮ್ಮ ಎರಡನೇ ತಾಯಿ ಅಲ್ಲಿ ವಾಸವಾಗಿದ್ದರು. ವಾಸಕ್ಕೆಂದು ಅಪ್ಪ ಅಲ್ಲೊಂದು ಗುಡಿಸಲನ್ನು ನಿರ್ಮಿಸಿದ್ದರು. ಆ ಕಗ್ಗಾಡಿನ ಹಳ್ಳಿಯ ಬದುಕಿನ ಎಂಟ್ಹತ್ತು ವರ್ಷಗಳ ಅಮೂಲ್ಯ ನೆನಪುಗಳು ನನ್ನ ಹಾಗೂ ಅಣ್ಣನ ಪ್ರಜ್ಞೆಯ ಅತಿ ಮುಖ್ಯ ಭಾಗಗಳಾಗಿ ಉಳಿದು ಹೋಗಿವೆ.

ಶಿವಮೊಗ್ಗದಲ್ಲಿ ನಾವಿದ್ದ ಬಾಡಿಗೆ ಮನೆ ಮುಂದೆ ನಾಲ್ಕು ಹೊಂಗೆ ಗಿಡ ಸಾಕುವಾಗಲೂ ಅಣ್ಣ ಪಟ್ಟ ಪಾಡು ಅಷ್ಟಿಷ್ಟಲ್ಲ. ನಮ್ಮ ಮನೆ ಹತ್ತಿರದ ತಿಪ್ಪೆಗುಂಡಿಗಳನ್ನು ಅಲೆದಾಡಿ ಸಗಣಿ ಗೊಬ್ಬರ ಹುಡುಕಿ ತಂದು ಬೀದಿ ಗಿಡಗಳಿಗೆ ಸುರಿಯುತ್ತಿದ್ದೆವು. ಬೆಳಗಾದರೆ ಅಣ್ಣ ಎದ್ದು ಮಾಡುತ್ತಿದ್ದ ಮೊದಲ ಕೆಲಸ ಗಿಡಗಳ ವೀಕ್ಷಣೆಯಾಗಿತ್ತು. ತಾನು ಕುಂಡಗಳಲ್ಲಿ ಸಾಕಿದ ಎಲ್ಲಾ ಗಿಡಗಳ ಮೈ ಸವರುವುದು, ಅವುಗಳ ಬೇರಿನ ಮಣ್ಣು ಬಗೆದು ಸಡಿಲಗೊಳಿಸಿ ಎಲೆಎಲೆಗಳನ್ನೂ ಚೆಕ್ ಮಾಡುವುದು ಅವನಿಗೆ ಬಲು ಪ್ರಿಯವಾದ ಕೆಲಸ. ಅದರಲ್ಲೂ ಕ್ರೋಟಾನ್ ಗಿಡಗಳೆಂದರೆ ಪಂಚಪ್ರಾಣ. ಆ ಗಿಡಗಳ ಬಣ್ಣಬಣ್ಣದ ಎಲೆಗಳ ಮೋಹಕತೆಗೆ ಆತ ಮಾರು ಹೋಗಿದ್ದ. ಆ ಗಿಡ ಎಲ್ಲಿ ಕಂಡರೂ ಅದರ ಒಂದು ರೆಂಬೆಯನ್ನು ಸಾಕಿದವರ ಬಳಿ ಕೇಳಿ ಪಡೆಯುತ್ತಿದ್ದ. ಕೆಲ ಜಿಪುಣರು ಎಷ್ಟು ಬೇಡಿದರೂ ಕೊಡ್ತಾನೇ ಇರಲಿಲ್ಲ. ಆಗ ನನ್ನ ಹತ್ತಿರ `ಆ ಮನೆ ಹತ್ರ ಒಂದು ಒಳ್ಳೆ ಕಲರಫುಲ್ ಕ್ರೋಟಾನ್ ಇದೆ. ಕೇಳಿದರೆ ಯಾಕೋ ಅವರು ಕೊಡ್ತಾ ಇಲ್ಲ. ಹೆಂಗಾದರೂ ಮಾಡಿ ತರ್ತೀಯಾʼ ಅನ್ನೋನು. `ಹೆಂಗಾದರೂ ಅಂದ್ರೆ ಹೆಂಗೆ? ಅದೇ ಕಳ್ತನ ತಾನೇ? ಓಹೋ ಆಯ್ತೆಂದು’ ನಾನು ಸಂತಸದಿಂದ ಒಪ್ಪಿ ಮಾಡಿರುವ ರೆಂಬೆ ಕೊಂಬೆಗಳ ಕಳ್ಳತನಗಳಿಗೆ ಲೆಕ್ಕವೇ ಇಲ್ಲ. ನನ್ನ ನಂತರ ಈ ಕೆಲಸದ ಚಾರ್ಜನ್ನು ನಮ್ಮತ್ತಿಗೆ ವಹಿಸಿಕೊಂಡರು. ಅಣ್ಣ ಒಂದೊಮ್ಮೆ ಓದದೆ ಹೋಗಿದ್ದರೆ ಒಳ್ಳೆಯ ರೈತನೇ ಆಗಿರುತ್ತಿದ್ದ.

ಅಣ್ಣ ತನ್ನ ಓದಿನ ಖರ್ಚಿಗೆ, ಪುಸ್ತಕ ಖರೀದಿಗೆ ಬೇಕಾಗುವ ಹೆಚ್ಚುವರಿ ದುಡ್ಡಿಗಾಗಿ ಒಂದಿಷ್ಟು ದುಡಿಮೆ ಮಾಡುತ್ತಿದ್ದ. ಅಪ್ಪನಿಗೆ ಕೈ ಜೋಡಿಸಿ ಕುಲುಮೆ ಕೆಲಸವನ್ನೂ ಮಾಡುತ್ತಿದ್ದ. ಅವನ ಈ ರೀತಿಯ ಶ್ರಮ ಜೀವನದ ವಿಧಾನವನ್ನು ನಾನು ಈಗಲೂ ಇಷ್ಟಪಡುತ್ತೇನೆ ಮತ್ತು ಗೌರವಿಸುತ್ತೇನೆ. ಅವನಷ್ಟು ಅಲ್ಲದಿದ್ದರೂ ಅವನ ಅರ್ಧದಷ್ಟು ಕಷ್ಟವನ್ನ, ನಾನು ಓದುವಾಗ ಅನುಭವಿಸಿದ್ದೇನೆ. ಓದುತ್ತಾ ರಜೆಯಲ್ಲಿ ಹತ್ತಿ ಬಿಡಿಸುವ ಕೂಲಿ ಕೆಲಸಕ್ಕೆ, ಫ್ಯಾಕ್ಟರಿ ಕೆಲಸಕ್ಕೆ, ಕುಲುಮೆ ಕೆಲಸಕ್ಕೆ ಹೋಗಿದ್ದರಿಂದಲೇ ನಾವು ನಾಲ್ಕು ಅಕ್ಷರ ಕಲಿಯಲು ಸಾಧ್ಯವಾಯಿತು ಎಂಬ ನಂಬಿಕೆ ನನ್ನದು.

ತಾವು ಓದುವಾಗಲೇ ಒಂದಿಷ್ಟು ದುಡಿಯುವ, ಹೆತ್ತವರ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊರುವ ಕೆಲ ವಿದ್ಯಾರ್ಥಿಗಳನ್ನು ಕಂಡಾಗ ಅವರ ಬಗ್ಗೆ ನನ್ನಲ್ಲಿ ವಿಶೇಷವಾದ ಕೃತಜ್ಞತಾಭಾವ ಈಗಲೂ ಮೈದುಂಬಿ ಬರುತ್ತದೆ. ಕಷ್ಟಗಳನ್ನು ಎದುರಿಸಿ ಓದುವ, ಆ ಕಷ್ಟದ ಕಲ್ಲುಗಳನ್ನೇ ತಮ್ಮ ಜೀವನದ ಯಶಸ್ಸಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳುವ ನೂರಾರು ವಿದ್ಯಾರ್ಥಿಗಳನ್ನು ನಾನು ದಿನನಿತ್ಯ ನನ್ನ ಕಾಲೇಜಿನಲ್ಲೇ ನೋಡುತ್ತಿದ್ದೇನೆ. ಕಾಲಿಗೆ ಚಪ್ಪಲಿ ಇಲ್ಲದ, ಬೆಳಗಿನ ತಿಂಡಿ ತಿನ್ನದ, ಫೀಜು ಕಟ್ಟಲೂ ಪರದಾಡುವ, ಒಂದು ಪುಸ್ತಕ, ಒಂದು ಪೆನ್ನು, ಒಂದು ಬ್ಯಾಗಿಗಾಗಿ ಹಂಬಲಿಸುವ ನೂರಾರು ಮಕ್ಕಳಿದ್ದಾರೆ. ಅವರ ಹಿಂದೆ ಆಸರೆಯಾಗಿ ನಿಲ್ಲಲು ಸದಾ ಹಂಬಲಿಸುತ್ತೇನೆ.

ಅಣ್ಣನೂ ಪಿಯುಸಿ ಓದುವ ಕಾಲಕ್ಕೆ ದುಡಿಮೆಗೆ ಬೇಕಾದ ಒಂದು ಮಾರ್ಗವನ್ನು ಮನೆ ಮುಂದೆಯೇ ಹುಡುಕಿಕೊಂಡ. ಮೊದಮೊದಲು ಆತ ಅಪ್ಪನ ಕುಲುಮೆಗೆ ಬೇಕಾದ ಬೆರಣಿಯನ್ನು ತಾನೇ ಕಷ್ಟಬಿದ್ದು ತಯಾರಿಸಿ ಕೊಡುತ್ತಿದ್ದ. ಅದು ಅಷ್ಟೊಂದು ಫಾಯಿದೆಯ ಉದ್ಯಮವಾಗಲಿಲ್ಲ. ಏಕೆಂದರೆ ಅಣ್ಣನ ಹತ್ತಿರ ಬೆರಣಿ ಖರೀದಿಸುವ ಎಲ್ಲರೂ ಸಾಲದ ಗಿರಾಕಿಗಳೆ. ಮೇಲಾಗಿ ಅವನಿಲ್ಲದಾಗ ನಾವೊಂದಿಷ್ಟು ಕದ್ದು ಮಾರಿಕೊಳ್ಳುತ್ತಿದ್ದೆವು. ಹೀಗಾಗಿ, ಮೊದಲ ಬಿಸಿನೆಸ್ಸಿನಲ್ಲೇ ಅವನು ಭಾರಿ ಲಾಸ್ ಅನುಭವಿಸಿದ.

ಇದಾದ ನಂತರ, ಮನೆ ಮುಂದೆ ಸಾಕಷ್ಟು ಖಾಲಿ ಜಾಗ ಬಿದ್ದಿದ್ದು ಅವನ ಗಮನಕ್ಕೆ ಬಂತು. ಅದು ನಮಗೆ ಮನೆ ಬಾಡಿಗೆಗೆ ಕೊಟ್ಟಿದ್ದ ಜಯಣ್ಣ ಹಾಗೂ ಲಕ್ಷ್ಮಮ್ಮ ಎಂಬುವವವರಿಗೆ ಸೇರಿದ ಮಂಡಕ್ಕಿ ಭಟ್ಟಿಯ ಪಾಳು ಜಾಗ. ಅದರಲ್ಲಿ ಲಕ್ಷ್ಮಮ್ಮ ಅನ್ನೋರಂತೂ ದೇವತೆಯಷ್ಟು ಒಳ್ಳೆಯವರು. ನಮ್ಮ ತಾಯಿಯ ಬೆಸ್ಟ್ ಫ್ರೆಂಡ್. ಅವರ ಮಂಡಕ್ಕಿ ತಯಾರಿಸುವ ಭಟ್ಟಿ ನಮ್ಮ ಮನೆ ಸಾಲಿನಲ್ಲೇ ಇತ್ತು. ಮಂಡಕ್ಕಿ ತಯಾರಿಸಲು ಬೇಕಾದ ಭತ್ತ ಹಾಗೂ ಉಪ್ಪು ಸವರಿದ ಅಕ್ಕಿ ಒಣಗಿಸಲು, ಆ ಜಾಗವನ್ನು ಬಳಸುತ್ತಿದ್ದರು. ಇಷ್ಟು ಬಳಸಿದ ನಂತರವೂ ಕಾರೆಮುಳ್ಳು, ಲಂಟಾನದ ಪೊದೆ ಬೆಳೆದಿದ್ದ ಒಂದಿಷ್ಟು ಖರಾಬ್ ಜಾಗ ನಮ್ಮ ಮನೆ ಮುಂದೆ ಪಾಳಾಗಿಯೇ ಬಿದ್ದಿತ್ತು. ಅಲ್ಲಿ ನಾನಾ ಬಗೆಯ ಹುತ್ತಗಳು, ಹಲವು ವಿಧದ ಹಾವುಗಳು ವಾಸವಾಗಿದ್ದವು. ನಮ್ಮ ಆಟದ ಮೈದಾನ ಅದೇ ಆಗಿತ್ತು. ನಾಗರ ಪಂಚಮಿಯ ದಿನ ಊರಿನ ಎಲ್ಲಾ ಜನ ಅಲ್ಲಿಗೆ ಬಂದು ಎಲ್ಲಾ ಹುತ್ತಗಳನ್ನು ಕಷ್ಟಬಿದ್ದು ತಲಾಶ್ ಮಾಡಿ ಗಿಡಗಂಟಿಗಳ ಸವರಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು.

ನಾನು ಮತ್ತು ನಮ್ಮ ಹುಡುಗರ ಗ್ಯಾಂಗು, ಹೀಗೆ ಪೂಜೆ ಸಲ್ಲಿಸಲು ಬರುವ ಜನರಿಗೆ ಹುತ್ತಗಳನ್ನು ಹುಡುಕುವಲ್ಲಿ ಸಹಾಯ ಮಾಡಿ ಪೂಜೆ ಮುಗಿಸುವ ತನಕ ಕಾದು ಅನೇಕ ಪ್ರಸಾದಗಳನ್ನು ಹೊಟ್ಟೆಗೆ ಇಳಿಸಿಕೊಂಡೇ ಅಲ್ಲಿಂದ ಕಾಲು ಕೀಳುತ್ತಿದ್ದೆವು. ಕೋಸಂಬರಿ, ತೆಂಗಿನ ಚೂರುಗಳು, ಬಾಳೆ ಹಣ್ಣು, ಎಳ್ಳಿನ ತಮಟೆ, ಎಲ್ಲಾ ಸಿಗುತ್ತಿದ್ದವು. ಅಣ್ಣ ಅಲ್ಲೇ ಸ್ವಲ್ಪ ಜಾಗ ಹುಡುಕಿಕೊಂಡ. ಅವನೊಳಗಿನ ರೈತನಿಗೆ ಅಲ್ಲಿ ಕೆಲಸ ಸಿಕ್ಕಿತು. ಮೊದಲು ನೆಲವನ್ನು ಬಗೆದು ಹದಗೊಳಿಸಿದ. ಸುತ್ತ ಮುಳ್ಳುತಂತಿಯ ಬೇಲಿ ಮಾಡಿಕೊಂಡ. ದೂರದ ಬಾವಿಯಿಂದ ನೀರು ಸೇದಿ ತಂದು ಸುರಿದ. ನೋಡನೋಡುತ್ತಿದ್ದಂತೆಯೇ ಅಲ್ಲೊಂದು ಸುಂದರ ತರಕಾರಿ ತೋಟ ನಿರ್ಮಿಸಿಕೊಂಡ. ಆಲೂಗೆಡ್ಡೆ, ಮೂಲಂಗಿ, ಬದನೆ, ಟೊಮಾಟೊ, ಕೋಸು, ಬೆಂಡೆ, ಹೀರೆ ಬಳ್ಳಿ ಜತೆಗೆ ತರಹೇವಾರಿ ಸೊಪ್ಪು, ಕೊತ್ತಂಬರಿ ಸೊಪ್ಪು ಬೆಳೆಯತೊಡಗಿದ. ನಾವು ತರಕಾರಿ ಹಾಗೂ ಸೊಪ್ಪಿನ ಗಿಡಗಳನ್ನು ಬೆಳವಣಿಗೆ ಹಂತದಲ್ಲಿ ಅದೂ ಹೊಲಗಳಲ್ಲಿ ನೋಡೇ ಇರಲಿಲ್ಲ. ಸಂತೆಯಲ್ಲಿ ರೈತರು ತಂದು ಮಾರುವುದಷ್ಟೇ ನಮಗೆ ಗೊತ್ತಿತ್ತು. ಅಲ್ಲೀತನಕ ತರಕಾರಿ, ಅಕ್ಕಿ, ಸೊಪ್ಪು, ಬೇಳೆ ಕಾಳುಗಳನ್ನೆಲ್ಲಾ ತೆಂಗಿನ ಮರದ ತುದಿಯಿಂದ ಕಿತ್ತು ತರುತ್ತಾರೆ ಎಂದೇ ನಾನು ಭಾವಿಸಿದ್ದೆನು. ಅಣ್ಣ ಸಂತೆಯಿಂದ ಹಕ್ಕಿ ಮೊಟ್ಟೆಗಳ ರೀತಿಯ ಬಣ್ಣದ ಬಣ್ಣದ ಬೀಜಗಳನ್ನು ಸಂಗ್ರಹಿಸಿ ತಂದು ತೋಟದಲ್ಲಿ ಹಾಕಿದ ಮೇಲೆ ತರಕಾರಿ ಗಿಡಗಳನ್ನು ಬೆಳೆಯುವ ರೀತಿ ಗೊತ್ತಾಗಿದ್ದು.

ಇವನು ಬೆಳೆಯುತ್ತಿದ್ದ ತರಕಾರಿ ಕೊಳ್ಳಲು ನಮ್ಮ ಬೀದಿಯ ಜನರಷ್ಟೇ ಅಲ್ಲದೆ ಹೊರಗಿನ ಜನರೂ ಗಿರಾಕಿಗಳಾಗಿ ಬರುತ್ತಿದ್ದರು. ನಮ್ಮ ಮನೆಯವರು ಮಾಡುತ್ತಿದ್ದ ಖರೀದಿಗೆ ಲೆಕ್ಕವಾಗಲಿ, ಜಮಾ ಆಗಲಿ ಒಂದೂ ಇರುತ್ತಿರಲಿಲ್ಲ. ಅಲ್ಲದೆ, ನಮಗ್ಯಾರಿಗೂ ಆ ತೋಟದೊಳಗೆ ಎಂಟ್ರಿ ಇರಲಿಲ್ಲ. ಉಳಿದವರಿಗದು ಸಂಪೂರ್ಣ ನಿಷೇಧಿತ ಪ್ರದೇಶ. ಅಣ್ಣ ಕಾಲೇಜಿಗೆ ಹೋದ ಹೊತ್ತಿನಲ್ಲಿ ಮಾತ್ರ ನಮಗೆ ಹಬ್ಬವೋ ಹಬ್ಬ. ಆಗ, ನಾವು ನಮ್ಮ ಶಕ್ತಿ ಮೀರಿ ಕಳ್ಳತನ ಮಾಡುತ್ತಿದ್ದವು. ಹಸಿಹಸಿ ತರಕಾರಿಗಳನ್ನೇ ಬಹಳ ಸಂತೋಷದಿಂದ ಅಗಿದುಜಗಿದು ತಿನ್ನುತ್ತಿದ್ದೆವು. ಹಾಗೇ ಕೆಲವೊಮ್ಮೆ ಅಣ್ಣ ಕಾಲೇಜಿಗೆ ಹೋದ ಸಮಯದಲ್ಲಿ ವ್ಯಾಪಾರಕ್ಕೆಂದು ಬರುವ ಪುಡಿ ಗಿರಾಕಿಗಳಿಗೆ ನಾವೇ ತರಕಾರಿ ಕದ್ದು ತಂದು ಬಾಯಿಗೆ ಬಂದ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದೆವು. ಅವನು ನಮ್ಮಂಥ ಕಿರಾತಕ ಕಳ್ಳರು ಎಲ್ಲೆಲ್ಲೂ ನುಸುಳದಂತೆ ಬೇಲಿಯನ್ನು ಸಖತ್ತಾಗಿ ಟೈಟ್ ಮಾಡಿ ಹೆಣೆದಿದ್ದರೂ ನಾವು ದಿನಾ ಒಂದು ಹೊಸ ದಾರಿಯನ್ನು ತಲಾಶ್ ಮಾಡಿಕೊಳ್ಳುತ್ತಿದ್ದೆವು. ಅಣ್ಣ ಅದಕ್ಕೊಂದು ಎತ್ತರದ ಗೇಟ್ ಸಹ ಮಾಡಿಟ್ಟಿದ್ದ.

ಅಣ್ಣ ಕಾಲೇಜಿಗೆ ಹೋದ ಹೊತ್ತಿನಲ್ಲಿ ಮಾತ್ರ ನಮಗೆ ಹಬ್ಬವೋ ಹಬ್ಬ. ಆಗ, ನಾವು ನಮ್ಮ ಶಕ್ತಿ ಮೀರಿ ಕಳ್ಳತನ ಮಾಡುತ್ತಿದ್ದವು. ಹಸಿಹಸಿ ತರಕಾರಿಗಳನ್ನೇ ಬಹಳ ಸಂತೋಷದಿಂದ ಅಗಿದುಜಗಿದು ತಿನ್ನುತ್ತಿದ್ದೆವು. ಹಾಗೇ ಕೆಲವೊಮ್ಮೆ ಅಣ್ಣ ಕಾಲೇಜಿಗೆ ಹೋದ ಸಮಯದಲ್ಲಿ ವ್ಯಾಪಾರಕ್ಕೆಂದು ಬರುವ ಪುಡಿ ಗಿರಾಕಿಗಳಿಗೆ ನಾವೇ ತರಕಾರಿ ಕದ್ದು ತಂದು ಬಾಯಿಗೆ ಬಂದ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದೆವು.

ಆ ತೋಟದ ನಡುವೆಯೇ ಬಿದಿರಿನ ಗಳ ಹಾಗೂ ಗೂಟಗಳನ್ನೂ ತಂದು ಅಣ್ಣ ಒಂದು ಪುಟಾಣಿ ಮಹಡಿ ಮನೆಯನ್ನು ನಿರ್ಮಿಸಿಕೊಂಡ. ಅದರ ಮೇಲಿನ ಛಾವಣಿಗೆ ತೆಂಗಿನ ಗರಿ ಬಿಗಿದು, ಭದ್ರ ಮಾಡಿಕೊಂಡ. ಜೋಳದ ಹೊಲ, ಸೂರ್ಯಕಾಂತಿಯ ಹೊಲ ಕಾಯುವವರು ಕಟ್ಟಿಕೊಳ್ಳುವ ರೀತಿಯ ನೆಲ ಬಿಟ್ಟು ಮೇಲಕ್ಕೆದ್ದು ನಿಂತ ಕಮಾನಿನ ಮನೆ ಆದಾಗಿತ್ತು. ಅಲ್ಲಿ ಅವನು ಓದಲ ಒಬ್ಬನೇ ಕೂತಿರುತ್ತಿದ್ದ. ನಾವು ಅವನಿಗೆ ಬೇಜಾರಾಗಲ್ವ ಎಂದು ಮಾತಾಡಿಕೊಳ್ಳುತ್ತಿದ್ದೆವು. ಆ ತರಕಾರಿ ತೋಟದ ಸರಹದ್ದಿನ ಈಚೆಗೇ ನಿಂತು `ಊಟಕ್ಕೆ ಕರೀತಿದ್ದಾರೆ ಬರಬೇಕಂತೆ ಬಾ ಅಣ್ಣ’ ಎಂದು ಕೂಗಿ ಕರೆಯತ್ತಿದ್ದೆವು. ಒಳಗೆ ಹೋಗುವ ಮಾತಂತೂ ಇಲ್ಲವೇ ಇಲ್ಲ. ಆ ತೋಟದ ನಡುವೆಯೇ ಅಣ್ಣ ನೆರಳಿಗೆಂದು ಒಂದು ಮರ ನೆಟ್ಟಿದ್ದ. ನಮ್ಮೂರಿನ ರೈಲ್ವೆ ಸ್ಟೇಷನ್ನಿನ ಬಳಿ ಇರುವ ದೊಡ್ಡ ಜಾತಿಯ ವಿದೇಶಿ ಮರಗಳ ಬುಡದಲ್ಲಿ ಬೀಜವಾಗಿ ಬಿದ್ದು, ಚಿಗುರೊಡೆದು ಸಸಿಯಾಗಿ, ನಿಲ್ಲಲ್ಲೂ ತ್ರಾಣವಿಲ್ಲದ, ನೀರಿಗಾಗಿ ಹಪಹಪಿಸಿ ಸಾಯಲು ಸಿದ್ಧವಾಗಿದ್ದ ಅನಾಥ ಗಿಡವನ್ನು ಹುಡುಕಿ ತಂದು ಹಾಕಿದ್ದ. ಅದೋ ಯಮಘಾತಕ! ತರಕಾರಿ ತೋಟಕ್ಕೆಂದು ಸುರಿದ ನೀರು, ಗೊಬ್ಬರಗಳನ್ನೆಲ್ಲಾ ತಿಂದು ತೇಗಿ ಹೆಮ್ಮರವಾಗಿ ಬೆಳೆದು ಹೋಯಿತು. ಅದರ ಪಕ್ಕ ಕಂಪನಿಗೆ ಇರಲೆಂಬಂತೆ ಅಣ್ಣ ಗಾಳಿ ಮರವೊಂದನ್ನೂ ತಂದು ನೆಟ್ಟಿದ. ಅವು ಹೊಸದಾಗಿ ಮದುವೆಯಾದ ಗಂಡು ಹೆಣ್ಣುಗಳಂತೆ ಆ ಪಾಳು ಜಾಗದಲ್ಲಿ ಎದ್ದು ನಿಂತವು. ಅಣ್ಣ ಎಂ.ಎ. ಓದಲು ಮೈಸೂರಿಗೆ ಹೋದ ಮೇಲೆ ಅವನ ಕನಸಿನ ತೋಟ ಒಣಗಿ ಹೋಯಿತು. ನಮ್ಮ ಮನೆಯಲ್ಲಿ ಅವನಷ್ಟು ಜವಾಬ್ದಾರಿಯನ್ನು ಗಿಡ ಮರಗಳ ವಿಷಯದಲ್ಲಿ ತೆಗೆದುಕೊಳ್ಳುವವರು ಯಾರೂ ಇರಲಿಲ್ಲ. ಹೀಗಾಗಿ, ಆ ಬೇಲಿಯ ದಬ್ಬೆಗಳು, ಮರದ ತುಂಡುಗಳೆಲ್ಲಾ ಅಡಿಗೆ ಒಲೆ ಸೇರಿ ಉರಿದು ಖಾಲಿಯಾದವು. ಆ ಎರಡು ಮರಗಳು ಮಾತ್ರ ಅಲ್ಲಿ ಉಳಿದವು.

ನಾವು ಆ ಮರದ ಬಳಿಯ ಮಂಡಕ್ಕಿ ಭಟ್ಟಿಯ ಮನೆಗಳನ್ನು ಬಿಟ್ಟು ಬಂದು ಇಲ್ಲಿಗೆ ಬರೋಬ್ಬರಿ ಮೂವತ್ತು ವರ್ಷವಾಗಿದೆ. ಅಲ್ಲಿನ ನಮ್ಮ ಬಾಲ್ಯದ ನೆನಪನ್ನು ಹೊತ್ತ ಕೆಸರಿನ ಗೋಡೆಯ ಮನೆಗಳೆಲ್ಲಾ ನೆಲ ಕಚ್ಚಿವೆ. ನಾನು ಆ ಮನೆ ಬಿಡುವಾಗ ಏಣಿ ಹಿಡಿದು ಹತ್ತಿ `ಸಂಪತ್ತಿಗೆ ಸವಾಲ್’ ಎಂದು ದುಂಡಗೆ ಕೊರೆದು ಬರೆದಿದ್ದ ಅಕ್ಷರಗಳು ಮತ್ತದರ ಗೋಡೆ ಮಾತ್ರ ಒಂದಿಷ್ಟು ಜೀವ ಹಿಡಿದು ನಿಂತಿವೆ. ಅಣ್ಣ ಸೇದುತ್ತಿದ್ದ ನೀರಿನ ಬಾವಿ ಮುಚ್ಚಿ ಹೋಗಿದೆ. ಬಾವಿ ಎದುರಿಗಿದ್ದ ಹಲಸಿನ ಮರ ಮುರಿದು ಬಿದ್ದಿದೆ. ಮೈತುಂಬ ಕಂಬಳಿ ಹುಳಗಳನ್ನು ಸಾಕಿ ನೂರಾರು ಪಾತರಗಿತ್ತಿಯರ ಹೆರಿಗೆ ಮಾಡಿಸುತ್ತಿದ್ದ ನುಗ್ಗೆ ಮರ ಕಾಣೆಯಾಗಿದೆ. ಮನೆ ಮುಂದೆ ಹರಿಯುತ್ತಿದ್ದ ಚಿಕ್ಕೆರೆಯ ಹಳ್ಳ ಬತ್ತಿ ಹೋಗಿ ಅದೀಗ ಊರ ಚರಂಡಿಯಾಗಿದೆ.

ಆದರೆ, ಅಣ್ಣ ನೆಟ್ಟ ಆ ಹೆಸರಿಲ್ಲದ ಮರ ಮಾತ್ರ ಇನ್ನೂ ಈಗಲೂ ಹಾಗೇ ಇದೆ. ಅದರ ಆನೆ ಗಾತ್ರದ ಒಂದು ಮಗ್ಗುಲಿನ ರೆಂಬೆಗಳನ್ನು ಯಾರೋ ಕಡಿದು ಸಾಗಿಸಿದ್ದಾರೆ. ಅದಕ್ಕೆ ಅಣ್ಣನ ಪರಿಚಯ ಸುತಾರಾಂ ಇಲ್ಲ. ಇತ್ತೀಚೆಗೆ ನಾನೂ ಅಣ್ಣನೂ ಹಳೆಯ ನೆನಪು ಕಾಡಿ ಅಲ್ಲಿಗೆ ಹೋಗಿದ್ದೆವು. ಮರವನ್ನು ಹತ್ತಿರದಿಂದ ನೋಡಿ ಮುಟ್ಟಿ ಮಾತಾಡಿಸಲು ಅಣ್ಣ ಹೋಗಿ ನಿಂತ. ಆಗ, ದೂರದಿಂದ ಯಾರೋ ಗಾಬರಿಯಿಂದ ಕೂಗಿಕೊಂಡರು!

ಕೂಗಿದವರಿಗೆ ನಾವು ಪೂರಾ ಅಪರಿಚಿತರು. ಅವರು ದಾರಿ ತಪ್ಪಿ ಬಂದ ಹೊಸಬರು ಅಂದುಕೊಂಡರು. ನಿಜವಾಗಿ ಹೇಳೋದಾದ್ರೆ ಅಲ್ಲಿ ಅವರೇ ನಮಗೆ ಹೊಸಬರು. ಆದರೆ ಕಾಲ ಅಲ್ಲಿ ನಮ್ಮ ಹೆಸರುಗಳನ್ನ ಅಳಿಸಿ ಹಾಕಿದೆ. `ಅದು ದೇವರ ಮರ ಹತ್ರ ಹೋಗ್ಬೇಡಿ ಕಂಡ್ರಿ’ ಎಂದು ಎಚ್ಚರಿಕೆಯಾಗಿ ಕೂಗಿಕೊಂಡರು. ನಾವಿಬ್ಬರೂ ನಮ್ಮ ಸಲಿಗೆಯಲ್ಲಿ ಮತ್ತಷ್ಟೂ ಮರದ ಹತ್ತಿರ ಹೋಗಿ ನಿಂತೆವು. ಅದು ಈಗ ಯಾವುದೋ ಮಾರಮ್ಮನ ದೇವರ ಗುಡಿಯಾಗಿತ್ತು. ಅಲ್ಲಿ ದೇವತೆ ನೆಲೆಸಿದ್ದಾಳೆ. ಆ ಮರಕ್ಕೆ ನಡೆದುಕೊಂಡವರಿಗೆ ಒಳ್ಳೆದಾಗಿದೆ ಎಂದರು ಅಲ್ಲಿದ್ದವರು. `ಭಾರಿ ಒಳ್ಳೆ ಶಕ್ತಿ ಇರೋ ಮರ ಸ್ವಾಮಿ; ಈ ಮಾರಮ್ಮ ರಾತ್ರೋ ರಾತ್ರಿ ಸೃಷ್ಟಿ ಮಾಡಿ ನಿಲ್ಸಿರೋ ಮರ. ಒಂದ್ಸಲ ಸಿಡಿಲು ಹೊಡೆದು ಅರ್ಧ ಮರ ಬಿದ್ದು ಮತ್ತೆ ಚಿಗತ್ಕೊಂಡದೆ’ ಅಂತೆಲ್ಲಾ ಅಲ್ಲಿನ ಜನ ಹೇಳಿದರು.

`ಈ ಮರ ನೆಟ್ಟಿದ್ದು ಯಾರು ಅಂತ ನಿಮಗೇನಾದರೂ ಗೊತ್ತಾ?’ ಅಂತ ನಾನು ಅಲ್ಲಿದ್ದವರಿಗೆ ಸುಮ್ಮನೆ ಕೇಳಿದೆ. ಅಣ್ಣ ಬೇಡ ಸುಮ್ಮನಿರು ಎಂದು ಕಣ್ಣಲ್ಲಿ ಸನ್ನೆ ಮಾಡಿದ. ಆ ಪ್ರಶ್ನೆ ವಿಚಿತ್ರವೂ, ಅನಪೇಕ್ಷಿತವೂ, ಆಗಿದ್ದರಿಂದ ಅವರು `ಯಾವೋ ತಲೆಹರಟೆ ನನ್ಮಕ್ಕಳು. ಬೇಕಾಬಿಟ್ಟಿ ತಿಂದು ಜಾಸ್ತಿಯಾಗಿ ಇಲ್ಲಿ ಬಂದು ಚೇಷ್ಟೆ ಮಾಡ್ತ ಇದ್ದಾವೆ. ದೇವರ ಮರನ ಯಾರು ನೆಟ್ಟಿದ್ದು ಅಂತಾರಲ್ಲ! ಯಾವೋ ಅಂಡಲೆಯೋ ತಿಕಲರು’ ಎಂದುಕೊಂಡರೋ ಏನೋ? ಅಲ್ಲೇ ಅಧಂಬರ್ಧ ಕಾವಿ ಧರಿಸಿ ಕೂತಿದ್ದ ಯಜಮಾನರೊಬ್ಬರು `ನಮಗೆ ಗೊತ್ತಿಲ್ಲ ಕಂಡ್ರಿ. ಯಾರು ನೆಟ್ಟಿದ್ದೋ? ಯಾವ ಕಾಲದ್ದೋ? ಯಾವನಿಗೊತ್ತು. ನಾವು ಇಲ್ಲಿಗೆ ಬಂದು ಇಪ್ಪತ್ತು ವರ್ಷ ಆತು. ಯಾರು ನೆಟ್ಟರೇನು ಮರ ಅಲ್ಲವೇನ್ರಿ? ನಿಮ್ಮದು ಯಾವ ಊರು ಅಂತ ಗೊತ್ತಾಗಲಿಲ್ಲ. ಇಲ್ಲಿಗೆ ಯಾಕೆ ಬಂದ್ರಿ? ಯಾಕೆ ಏನೇನೋ ಕೇಳ್ತಾ ಇದ್ದೀರಾ? ಇಲ್ಲಿ ಸೈಟು ಗೀಟು ಇದ್ದಾವ ಅಂತ ಭಾಳ ಜನ ಬರ್ತಾರೆ. ನಿಮಿಗೆ ಬೇಕಾದ್ರೆ ಮೀನು ಶಿಕಾರಿ ಮುನಿಯನಿಗೆ ಕೇಳ್ರಿ’ ಎಂದು ಹೇಳಿದರು.

ನಾವಿಬ್ಬರೂ ಏನೂ ಮಾತಾಡದೆ ಮೌನವಾಗಿ ಅಲ್ಲೇ ನಿಂತಿದ್ದೆವು. ಅಣ್ಣ ತೊಟ್ಟಿಲಲ್ಲಿ ಮಲಗಿಸಿದ ಕಂದನ ಕೈಕಾಲುಗಳನ್ನು ಹೆತ್ತವ್ವ ಪ್ರೀತಿಯಿಂದ ಸವರಿ ನೋಡಿ ಸುಖ ಗಳಿಸಿದಂತೆ, ಆ ಮರದ ಒರಟು ಮೈಯನ್ನು ಕೋಮಲವಾಗಿ ಸಂತೈಸುತ್ತಾ, ಭಾವಪರವಶನಾದವನಂತೆ ನಗುಮುಖದಲ್ಲಿ ನಿಂತಿದ್ದ. ಅವನಿಗೇನು ನೆನಪಾಯಿತೋ ಗೊತ್ತಿಲ್ಲ. `ಕತ್ತಲಾಗುತ್ತಿದೆ ಅಣ್ಣ ಹೋಗೋಣವಾ?’ ಎಂದೆ. ಅವನು ಕೇಳಿಯೂ ಕೇಳದಂತೆ ಇನ್ನೂ ನಿಂತೇ ಇದ್ದ.

(ಕೃತಿ: ಬಾಡೂಟದ ಮಹಿಮೆ (ಪ್ರಬಂಧಗಳು), ಲೇಖಕರು: ಕಲೀಮ್‌ಉಲ್ಲಾ, ಪ್ರಕಾಶಕರು: ಅಹರ್ನಿಶಿ ಪ್ರಕಾಶನ, ಬೆಲೆ: 140/-)