ಸಿಡಿಲು ಬಡಿದವಳ ಹಾಗೆ ಕ್ಯಾತರೀನ ಸುಮ್ಮನೆ ನಿಂತಳು. ಪೀಟರ್ ಪೆಟ್ರೊವಿಚ್ ಅದು ಹೇಗೆ ಉಪ್ಪಿನ ಋಣ ಮರೆಯಬಲ್ಲ ಅನ್ನುವುದು ಅರ್ಥವೇ ಆಗಲಿಲ್ಲ ಅವಳಿಗೆ. ನಮ್ಮಪ್ಪನ ಉಪ್ಪಿನ ಋಣ ಅವನಮೇಲಿದೆ ಎಂದು ಒಮ್ಮೆ ಕಲ್ಪನೆ ಮಾಡಿಕೊಂಡ ನಂತರ ಆ ಕಲ್ಪನೆಯನ್ನೇ ಅವಳು ನಿಷ್ಠೆಯಿಂದ ನಂಬಿಕೊಂಡಿದ್ದಳು. ಪೀಟರ್ ಪೆಟ್ರೊವಿಚ್‌ನ ಮಾತಿನ ದನಿಯೂ ಆಘಾತ ತಂದಿತ್ತು. ತೀರ ವ್ಯಾವಹಾರಿಕವಾದ, ನಿರ್ಭಾವವಾದ, ಭಯಹುಟ್ಟಿಸುವಂಥ ತಿರಸ್ಕಾರ ಅವನ ದನಿಯಲ್ಲಿತ್ತು.
ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

 

‘ಪೀಟರ್ ಪೆಟ್ರೊವಿಚ್!’ ಎಂದು ಉದ್ಗಾರ ಮಾಡಿದಳು. ‘ಕೊನೆಯ ಪಕ್ಷ ನೀವಾದರೂ ನಮ್ಮನ್ನ ಕಾಪಾಡಿ! ಈ ಪೆದ್ದ ಹೆಂಗಸಿಗೆ ಹೇಳಿ, ಕಷ್ಟದಲ್ಲಿರುವ ಮರ್ಯಾದಸ್ಥ ಮಹಿಳೆಯನ್ನ ನಡೆಸಿಕೊಳ್ಳುವುದು ಹೀಗಲ್ಲ ಅನ್ನಿ. ನಾನು ಕೋರ್ಟಿಗೆ ಹೋಗಿ ಕೇಸು ಹಾಕುತ್ತೇನೆ, ಗೌರ್ನರ್ ಹತ್ತಿರ ಹೋಗತೇನೆ. ಬಂದು ಉತ್ತರ ಹೇಳಬೇಕು ಇವಳು. ನಮ್ಮಪ್ಪನ ಉಪ್ಪಿನ ಋಣ ನಿಮ್ಮ ಮೇಲಿದೆ. ದಯವಿಟ್ಟು ಈ ಅನಾಥರನ್ನ ಕಾಪಾಡಿ,’ ಅಂದಳು.

‘ಕ್ಷಮಿಸಿ, ತಾಯಿ… ದಯವಿಟ್ಟು ಕ್ಷಮಿಸಿ… ನಿಮಗೇ ಗೊತ್ತಿದೆ, ನಿಮ್ಮ ತಂದೆಯವರನ್ನು ಕಾಣುವ ಭಾಗ್ಯ ನನ್ನ ಪಾಲಿಗೆ ಬರಲೇ ಇಲ್ಲ… ದಯವಿಟ್ಟು ಕ್ಷಮಿಸಿ ತಾಯಿ!’ (ಯಾರೋ ಜೋರಾಗಿ ನಕ್ಕರು.) ಅಮಾಲಿಯಾ ಅವರಿಗೂ ನಿಮಗೂ ಇರುವ ಕೊನೆಯ ಇಲ್ಲದ ಜಗಳಕ್ಕೆ ಸೇರಿಕೊಳ್ಳುವ ಆಸೆ ನನಗಿಲ್ಲ. ಬೇರೆಯದೇ ಕೆಲಸದ ಮೇಲೆ ಬಂದಿದೇನೆ. ತಕ್ಷಣವೇ ನಿಮ್ಮ ಮಲಮಗಳು, ಸೋಫ್ಯಾ… ಸೋಫ್ಯಾ ಇವಾನೋವ್ನಾ… ಅಲ್ಲವಾ…? ಅವಳ ಜೊತೆ ಮಾತಾಡಬೇಕು… ದಯವಿಟ್ಟು ದಾರಿ ಬಿಡಿ, ತಾಯಿ.’

ಕ್ಯಾತರೀನಳನ್ನು ದಾಟಿಕೊಂಡು ಸೋನ್ಯಾ ಇದ್ದ ಎದುರು ಮೂಲೆಗೆ ನಡೆದ ಪೀಟರ್ ಪೆಟ್ರೊವಿಚ್.

ಸಿಡಿಲು ಬಡಿದವಳ ಹಾಗೆ ಕ್ಯಾತರೀನ ಸುಮ್ಮನೆ ನಿಂತಳು. ಪೀಟರ್ ಪೆಟ್ರೊವಿಚ್ ಅದು ಹೇಗೆ ಉಪ್ಪಿನ ಋಣ ಮರೆಯಬಲ್ಲ ಅನ್ನುವುದು ಅರ್ಥವೇ ಆಗಲಿಲ್ಲ ಅವಳಿಗೆ. ನಮ್ಮಪ್ಪನ ಉಪ್ಪಿನ ಋಣ ಅವನಮೇಲಿದೆ ಎಂದು ಒಮ್ಮೆ ಕಲ್ಪನೆ ಮಾಡಿಕೊಂಡ ನಂತರ ಆ ಕಲ್ಪನೆಯನ್ನೇ ಅವಳು ನಿಷ್ಠೆಯಿಂದ ನಂಬಿಕೊಂಡಿದ್ದಳು. ಪೀಟರ್ ಪೆಟ್ರೊವಿಚ್‌ನ ಮಾತಿನ ದನಿಯೂ ಆಘಾತ ತಂದಿತ್ತು. ತೀರ ವ್ಯಾವಹಾರಿಕವಾದ, ನಿರ್ಭಾವವಾದ, ಭಯಹುಟ್ಟಿಸುವಂಥ ತಿರಸ್ಕಾರ ಅವನ ದನಿಯಲ್ಲಿತ್ತು. ಅವನು ಕಂಡ ತಕ್ಷಣ ಎಲ್ಲರೂ ಸದ್ದಿಲ್ಲದವರಾಗಿದ್ದರು. ಈ ‘ವ್ಯವಹಾರಸ್ಥ ಗಂಭೀರ ಮನುಷ್ಯ’ ಅಲ್ಲಿದ್ದ ಎಲ್ಲರಿಗಿಂತ ಬೇರೆಯಾಗಿದ್ದು ಗುಂಪಿಗೆ ಹೊಂದದವನಾಗಿದ್ದ, ಅಲ್ಲದೆ ಅವನು ಯಾವುದೋ ಮುಖ್ಯವಾದ ಕೆಲಸಕ್ಕೆ ಬಂದಿರಬೇಕು, ಅಸಾಮಾನ್ಯವಾಧ ಯಾವುದೋ ಕಾರಣ ಅವನನ್ನು ಇಂಥ ಜನರ ಮಧ್ಯೆ ಬರುವ ಹಾಗೆ ಮಾಡಿರಬೇಕು, ಅಂದಮೇಲೆ, ಖಂಡಿತ ಏನೋ ನಡೆಯುತ್ತದೆ ಅಂದುಕೊಂಡರು. ಸೋನ್ಯಾಳ ಹತ್ತಿರ ನಿಂತಿದ್ದ ರಾಸ್ಕೋಲ್ನಿಕೋವ್ ಪಕ್ಕಕ್ಕೆ ಸರಿದು ಪೀಟರ್ ಪೆಟ್ರೊವಿಚ್ ಮುಂದೆ ಹೋಗಲು ಜಾಗ ಮಾಡಿಕೊಟ್ಟ. ಪೀಟರ್ ಪೆಟ್ರೊವಿಚ್ ಅವನನ್ನು ಗಮನಿಸಲೇ ಇಲ್ಲ ಅನ್ನುವ ಹಾಗಿತ್ತು. ಒಂದು ನಿಮಿಷದ ನಂತರ ಸೆಮ್ಯೊನೊವಿಚ್ ಕೂಡ ಹೊಸ್ತಿಲ ಹತ್ತಿರ ಕಾಣಿಸಿಕೊಂಡ. ಅವನು ರೂಮಿನೊಳಕ್ಕೆ ಬರಲಿಲ್ಲ, ಆದರೂ ಕುತೂಹಲ ತೋರುತ್ತ ಬಾಗಿಲಲ್ಲೇ ನಿಂತ. ಹುಷಾರಾಗಿ ಎಲ್ಲ ಮಾತೂ ಕೇಳಿಸಿಕೊಂಡ. ಏನು ನಡೆಯುತ್ತಿದೆ ಅನ್ನುವುದು ಬಹಳ ಹೊತ್ತು ಅವನಿಗೆ ಅರ್ಥವೇ ಆಗಲಿಲ್ಲ ಅನಿಸುತ್ತಿತ್ತು.

‘ಮಧ್ಯದಲ್ಲಿ ಬಂದು ತೊಂದರೆ ಕೊಡುತ್ತಿರುವುದಕ್ಕೆ ಕ್ಷಮಿಸಿ. ವಿಚಾರ ಮುಖ್ಯವಾದದ್ದು, ಅದಕ್ಕೇ ಬಂದೆ,’ ಪೀಟರ್ ಪೆಟ್ರೊವಿಚ್ ಯಾರನ್ನೂ ಉದ್ದೇಶಿಸದೆ ಎಲ್ಲರಿಗೂ ಅನ್ನುವ ಹಾಗೆ ಮಾತಾಡಿದ. ‘ಸಾರ್ವಜನಿಕರು ಇಲ್ಲಿರುವುದು ಒಳ್ಳೆಯದೇ ಆಯಿತು. ಅಮಾಲಿಯಾ ಇವಾನೋವ್ನಾ, ನೀವು ಈ ಕಟ್ಟಡದ ಯಜಮಾನಿ. ನಾನು ಸೋಫ್ಯಾ ಇವಾನೋವ್ನಾ ಜೊತೆಯಲ್ಲಿ ಇನ್ನು ಮುಂದೆ ಆಡಲಿರುವ ಮಾತನ್ನು ದಯವಿಟ್ಟು ಗಮನವಿಟ್ಟು ಕೇಳಿಸಿಕೊಳ್ಳಬೇಕೆಂದು ಕೋರುತ್ತೇನೆ,’ ಎಂದ. ನೇರವಾಗಿ ಸೋನ್ಯಾಳನ್ನು ನೋಡಿದ. ಸೋನ್ಯಾ ಆಗಲೇ ತೀರ ಆಶ್ಚರ್ಯಗೊಂಡಿದ್ದಳು, ಮೊದಲೇ ಹೆದರಿದ್ದಳು. ‘ಸೋಫ್ಯಾ ಇವಾನೋವ್ನಾ, ಒಂದು ನೂರು ರೂಬಲ್ ಬೆಲೆ ಬಾಳುವ ಬ್ಯಾಂಕು ನೋಟು ಗೆಳೆಯ ಸೆಮ್ಯೊನೊವಿಚ್ ಅವರ ಕೋಣೆಯಲ್ಲಿರುವ ನನ್ನ ಮೇಜಿನ ಮೇಲಿಂದ ನಾಪತ್ತೆಯಾಗಿದೆ. ಅದೂ ನೀನು ಅಲ್ಲಿಗೆ ಬಂದು ಹೋದ ತಕ್ಷಣ. ಆ ನೋಟು ಎಲ್ಲಿದೆ ಅನ್ನುವುದು ನಿನಗೇನಾದರೂ ತಿಳಿದಿದ್ದರೆ ಈ ಎಲ್ಲ ಸಾಕ್ಷಿಗಳ ಎದುರು ವಾಗ್ದಾನ ಮಾಡುತ್ತೇನೆ ನಾನು, ಈ ವಿಚಾರ ಇಲ್ಲಿಗೇ ಮುಗಿದು ಹೋಗುತ್ತದೆ. ನೀನು ಹೇಳದಿದ್ದರೆ ಪರಿಣಾಮ ಗಂಭೀರವಾಗುತ್ತದೆ… ಹೇಗೇ ಆಗಲಿ, ಆಗುವುದಕ್ಕೆಲ್ಲ ನೀನೇ ಕಾರಣರಾಗುತ್ತೀಯೆ.’

ಇಡೀ ರೂಮಿನ ಮೇಲೆ ಮೌನ ಕವಿಯಿತು. ಅಳುತಿದ್ದ ಮಕ್ಕಳೂ ಸುಮ್ಮನಾದರು. ಸೋನ್ಯಾ ಹೆಣದ ಹಾಗೆ ಬಿಳಿಚಿಕೊಂಡು ಪೀಟರ್ ಪೆಟ್ರೊವಿಚ್‌ನನ್ನು ನೋಡುತ್ತ ನಿಂತಿದ್ದಳು. ಉತ್ತರ ಕೊಡುವುದಕ್ಕೇ ಆಗಲಿಲ್ಲ. ಅವಳಿಗೆ ಏನೂ ಅರ್ಥವಾದ ಹಾಗೆ ಕಾಣಲಿಲ್ಲ. ಕೆಲವು ಕ್ಷಣ ಕಳೆದವು.

‘ಸರಿ, ಏನು ಹೇಳುತ್ತೀ?’ ಅವಳನ್ನೇ ದಿಟ್ಟಿಸುತ್ತ ಪೀಟರ್ ಪೆಟ್ರೊವಿಚ್ ಕೇಳಿದ.

‘ನನಗ್ಗೊತ್ತಿಲ್ಲ… ನನಗೇನೂ ಗೊತ್ತಿಲ್ಲ…’ ಕೊನೆಗೂ ಸೋನ್ಯಾ ದುರ್ಬಲವಾದ ದನಿಯಲ್ಲಿ ಹೇಳಿದಳು.

‘ಇಲ್ಲಾ? ಗೊತ್ತಿಲ್ಲಾ?’ ಪೀಟರ್ ಪೆಟ್ರೊವಿಚ್ ಕೇಳಿದ. ಕೆಲವು ಕ್ಷಣ ಸುಮ್ಮನೆ ನಿಂತ. ‘ಯೋಚನೆ ಮಾಡಿ ನೋಡು, ಅವಳನ್ನು ದಂಡಿಸುವ ದನಿಯಲ್ಲಿ ಹೇಳಿದ. ‘ಯೋಚನೆ ಮಾಡು, ಇನ್ನೂ ಸಮಯ ಕೊಡತೇನೆ ಬೇಕಾದರೆ. ದಯವಿಟ್ಟು ಅರ್ಥ ಮಾಡಿಕೊ, ನನಗೆ ಖಚಿತವಾಗಿ ಗೊತ್ತಿರದಿದ್ದರೆ ಇಲ್ಲಿಗೆ ಬಂದು ನಿನ್ನ ಮೇಲೆ ಆಪಾದನೆ ಮಾಡುತ್ತಿರಲಿಲ್ಲ. ಹೀಗೆ ಸಾರ್ವಜನಿಕವಾಗಿ ಆಪಾದನೆ ಮಾಡುವುದು ಬಹಳ ಜವಾಬ್ದಾರಿಯ ಕೆಲಸ. ನನ್ನ ಮಾತು ಸುಳ್ಳಾಗಿದ್ದರೆ, ತಪ್ಪು ತಿಳಿವಳಿಕೆಯಾಗಿದ್ದರೆ ನಾನು ತಪ್ಪಿತಸ್ಥ ಆಗತೇನೆ. ಇವತ್ತು ಬೆಳಗ್ಗೆ ನಾನು ನನ್ನ ಯಾವದೋ ಕೆಲಸಗಳ ಸಲುವಾಗಿ ಶೇ ಐದರ ಕೆಲವು ಬಾಂಡುಗಳನ್ನು ಮುರಿಸಿ ನಗದು ತಂದೆ. ಮೂರು ಸಾವಿರ ರೂಬಲ್‍ ಹಣ ಇತ್ತು. ಇದಕ್ಕೆ ಸಂಬಂಧಪಟ್ಟ ವಿವರಗಳು ನನ್ನ ಪರ್ಸಿನಲ್ಲಿವೆ. ಮನೆಗೆ ಬಂದಮೇಲೆ—ಇಗೋ ಸೆಮ್ಯೊನೊವಿಚ್ ಅದಕ್ಕೆ ಸಾಕ್ಷಿ—ದುಡ್ಡು ಎಣಿಸುವುದಕ್ಕೆ ಶುರು ಮಾಡಿದೆ. ಎರಡು ಸಾವಿರದ ಮುನ್ನೂರು ರೂಬಲ್ ಎಣಿಸಿದ್ದೆ. ಅದನ್ನು ನನ್ನ ಪರ್ಸಿನಲ್ಲಿಟ್ಟು ಪರ್ಸನ್ನು ನನ್ನ ಕೋಟಿನ ಜೇಬಿನಲ್ಲಿಟ್ಟೆ. ಸುಮಾರು ಐನೂರು ರೂಬಲ್‌ಗಳಷ್ಟು ನೋಟು ಇನ್ನೂ ಮೇಜಿನ ಮೇಲೇ ಇದ್ದವು. ಅವುಗಳಲ್ಲಿ ನೂರು ರೂಬಲ್‌ಗಳ ಮೂರು ನೋಟೂ ಇದ್ದವು. ಆ ಹೊತ್ತಿಗೆ ನೀನು ಬಂದೆ (ನಾನು ಕರೆಸಿದೆ)—ನೀನು ಅಲ್ಲಿರುವಷ್ಟೂ ಹೊತ್ತು ಮುಜುಗರಪಡುತಿದ್ದೆ. ಯಾಕೋ ಏನೋ ಹೊರಡುವ ಆತುರ ತೋರಿಸುತಿದ್ದೆ.

ನಮ್ಮ ಮಾತು ಇನ್ನೂ ಮುಗಿದಿರದಿದ್ದರೂ ಮೂರು ಸಲ ಎದ್ದು ಹೊರಟೆ. ಇದಕ್ಕೆಲ್ಲ ಸೆಮ್ಯೊನೊವಿಚ್ ಸಾಕ್ಷಿಯಾಗಿದಾರೆ. ಸೆಮ್ಯೊನೊವಿಚ್‌ರನ್ನು ಕಳಿಸಿ ನಿನ್ನನ್ನು ಕರೆಸಿದ್ದು ನಾನೇ ಅನ್ನುವುದನ್ನು ಒಪ್ಪುತ್ತೀಯ ಎಂದು ಭಾವಿಸಿದೇನೆ. ನಿಮ್ಮ ಅನಾಥ ಮಕ್ಕಳ, ಬಂಧು ಕ್ಯಾತರೀನ ಅವರ (ಅವರು ಏರ್ಪಾಡು ಮಾಡಿದ್ದ ಊಟಕ್ಕೆ ಬದಲು ಸಾಧ್ಯವಾಗಲಿಲ್ಲ) ಅಸಹಾಯ ಸ್ಥಿತಿಯನ್ನು ಕುರಿತು ಚರ್ಚೆ ಮಾಡುವುದಕ್ಕೆ ನಿನ್ನನ್ನು ಕರೆಸಿದ್ದೆ. ಅವರಿಗಾಗಿ ಚಂದಾ ಎತ್ತುವುದೋ, ಲಾಟರಿ ನಡೆಸುವುದೋ ಇಂಥದೇನಾದರೂ ಮಾಡಿದರೆ ಎಷ್ಟು ಉಪಯೋಗವಾಗತದೆ ಎಂದು ಹೇಳಿದೆ. ನೀನು ನನಗೆ ಥ್ಯಾಂಕ್ಸ್ ಹೇಳಿ ಕಣ್ಣೀರಿಟ್ಟೆ (ಇದನ್ನೆಲ್ಲ ನಡೆದ ಹಾಗೇ ಯಾಕೆ ಹೇಳುತಿದ್ದೇನೆಂದರೆ… ಮೊದಲನೆಯದಾಗಿ, ನಿನಗೆ ನೆನಪು ಬರಲಿ ಎಂದು, ಎರಡನೆಯದಾಗಿ, ಯಾವ ಸಣ್ಣ ವಿವರವೂ ನನ್ನ ಮನಸಿನಿಂದ ಅಳಿಸಿ ಹೋಗಿಲ್ಲ ಎಂದು ತೋರಿಸುವುದಕ್ಕೆ.) ಆಮೇಲೆ ಟೇಬಲ್ಲಿನ ಮೇಲಿದ್ದ ನೋಟುಗಳಲ್ಲಿ ಹತ್ತು ರೂಬಲ್‌ನ ನೋಟನ್ನು ಎತ್ತಿ ನಿನ್ನ ಕೈಗೆ ಕೊಟ್ಟೆ, ನಿನ್ನ ಬಂಧು ಮಲತಾಯಿಯಯ ಸಲುವಾಗಿ ನನ್ನ ಮೊದಲ ದೇಣಿಗೆ ಎಂದು ಹೇಳಿದೆ. ಸೆಮ್ಯೊನೊವಿಚ್ ಇದನ್ನೆಲ್ಲ ನೋಡಿದಾನೆ. ಆಮೇಲೆ ನಿನ್ನ ಜೊತೆಯಲ್ಲಿ ಬಾಗಿಲವರೆಗೂ ಬಂದೆ. ನೀನು ಇನ್ನೂ ಮುಜುಗರ ಪಡುತ್ತಲೇ ಇದ್ದೆ. ಆಮೇಲೆ ಸೆಮ್ಯೊನೊವಿಚ್‍ ಜೊತೆಯಲ್ಲಿದ್ದು, ಅವನ ಜೊತೆ ನಾನು ಇನ್ನೊಂದು ಹತ್ತು ನಿಮಿಷ ಮಾತನಾಡಿದೆ.

ಸೆಮ್ಯೊನೊವಿಚ್ ಹೋದ, ನಾನು ಮತ್ತೆ ದುಡ್ಡು ಎಣಿಸಿ ಎತ್ತಿಡುವುದಕ್ಕೆ ಟೇಬಲ್ಲಿನ ಹತ್ತಿರ ಹೋಗಿದೆ. ಆಶ್ಚರ್ಯವೆಂದರೆ ನೂರು ರೂಬಲ್ ನೋಟು ಕಾಣೆಯಾಗಿದ್ದವು. ನೀನೇ ಯೋಚನೆ ಮಾಡಿ ನೋಡು. ಸೆಮ್ಯೊನೊವಿಚ್‌ರನ್ನು ಸಂಶಯಪಡುವ ಕಾರಣವೇ ಇಲ್ಲ. ಅಂಥ ಯೋಚನೆ ಬಂದರೂ ನಾಚಿಕೆಯಾಗತ್ತೆ. ಎಣಿಸುವುದರಲ್ಲಿ ತಪ್ಪು ಮಾಡಿದ್ದೆನಾ ಅಂದರೆ ಅದೂ ಇಲ್ಲ. ಯಾಕೆಂದರೆ ನೀನು ಬರುವುದಕ್ಕೆ ಸ್ವಲ್ಪ ಮೊದಲು ಎಣಿಸಿಟ್ಟಿದ್ದೆ. ನಿನ್ನ ಮುಜುಗರ, ಹೊರಡಲು ನೀನು ತೋರಿದ ಆತುರ, ಒಂದೆರೆಡು ಸಾರಿ ಟೇಬಲ್ಲಿನ ಮೇಲೆ ನೀನು ಕೈ ಇಟ್ಟದ್ದು, ನಿನ್ನ ಬಡತನ ಮತ್ತೆ ಅದರ ಜೊತೆಗೆ ಬರುವ ಕೆಲವು ಅಭ್ಯಾಸಗಳು ಇವನ್ನೆಲ್ಲ ನೋಡಿದರೆ, ಬಲವಂತವಾಗಿಯಾದರೂ, ನನ್ನಿಚ್ಛೆಗೆ ವಿರುದ್ಧವಾಗಿಯೂ ನಿನ್ನನ್ನೇ ಅನುಮಾನಿಸಬೇಕಾಗಿದೆ. ಇದು ಕ್ರೂರವಾದ ಅನುಮಾನ, ನಿಜ ಆದರೆ ಸಮರ್ಥನೀಯವಾದದ್ದು! ಮತ್ತೆ ಹೇಳತಾ ಇದೇನೆ, ಈ ವಿಷಯ ನನಗೆ ಖಚಿತವಾಗಿದ್ದರೂ ಹೀಗೆ ಅಪಾದನೆ ಮಾಡುವುದು ನನಗೇ ರಿಸ್ಕು ಅಂತಲೂ ಗೊತ್ತು ಆದರೆ, ಯಾಕೆ ಆಪಾದನೆ ಮಾಡತಾ ಇದೇನೆ ಅಂದರೆ ಒಂದೇ ಕಾರಣಕ್ಕೆ, ಅದು ನಿನ್ನ ಕೃತಘ್ನತೆ! ನೋಡು, ಕಂಗಾಲಾಗಿರುವ ನಿನ್ನ ಬಡ ಬಂಧುಗಳಿಗೆ ನೆರವಾಗುವುದಕ್ಕೆಂದು ನಿನ್ನನ್ನು ಕರೆಸಿದೆ, ಸಾಕಷ್ಟು ದೊಡ್ಡ ಮೊತ್ತವೇ ಆದ ಹತ್ತು ರೂಬಲ್‍ ದುಡ್ಡು ನನ್ನ ಕಾಣಿಕೆ ಎಂದು ಕೊಟ್ಟೆ. ನೀನೇನು ಮಾಡಿದೆ? ಅಲ್ಲೇ ಆ ಕ್ಷಣದಲ್ಲೇ ಇಂಥ ಕೆಲಸ ಮಾಡಿ ನನ್ನ ಉಪಕಾರ ತೀರಿಸಿದೆ! ಇಲ್ಲ, ಇದು ಸರಿಯಲ್ಲ. ನಿನಗೆ ಪಾಠ ಕಲಿಸಲೇಬೇಕು. ಇನ್ನೊಂದು ಸಾರಿ ಯೋಚನೆ ಮಾಡಿ ನೋಡು. ನಿಮ್ಮ ಸ್ನೇಹಿತನಾಗಿ (ಈ ಕ್ಷಣದಲ್ಲಿ ನನಗಿಂತ ಒಳ್ಳೆಯ ಸ್ನೇಹಿತ ನಿಮಗಿರಲು ಸಾಧ್ಯವಿಲ್ಲ) ಎಚ್ಚರವಿರಲಿ, ಇಲ್ಲದಿದ್ದರೆ ನಾನು ಕರುಣೆ ಇಲ್ಲದವನಾಗಬೇಕಾಗುತ್ತದೆ! ಏನನ್ನುತ್ತೀ?’

‘ನಾನು ಏನೂ ತಗೊಳ್ಳಲಿಲ್ಲ,’ ಸೋನ್ಯಾ ಭಯದಲ್ಲಿ ಪಿಸುಗುಟ್ಟಿದಳು. ‘ನೀವು ಹತ್ತು ರೂಬಲ್ ಕೊಟ್ಟಿರಿ—ತಗೊಳ್ಳಿ.’ ಸೋನ್ಯಾ ಕರ್ಚೀಫನ್ನು ತೆಗೆದು, ಅದಕ್ಕೆ ಹಾಕಿದ್ದ ಗಂಟು ಬಿಚ್ಚಿ ಹತ್ತು ರೂಬಲ್ ನೋಟನ್ನು ತೆಗೆದು ಪೀಟರ್ ಪೆಟ್ರೊವಿಚ್‌ಗೆ ಕೊಟ್ಟಳು.

‘ಹಾಗಾದರೇ ನೂರು ರೂಬಲ್ ತಗೊಂಡಿದ್ದು ನೀನೇ ಅನ್ನೋದನ್ನ ಒಪ್ಪಲ್ಲಾ?’ ಅವನು ನೋಟನ್ನು ತೆಗೆದುಕೊಳ್ಳದೆ ಅವಳನ್ನು ನಿಂದಿಸುವ ಒತ್ತಾಯಿಸುವ ದನಿಯಲ್ಲಿ ಕೇಳಿದ.

ಸೋನ್ಯಾ ಸುತ್ತಲೂ ನೋಡಿದಳು. ಎಲ್ಲರೂ ಅವಳನ್ನೇ ದಿಟ್ಟಿಸುತ್ತಿದ್ದರು. ಅವರ ನೋಟದಲ್ಲಿ ಭಯಂಕರವಾದ ಕಠಿಣವಾದ ಅಣಕಿಸುವ, ದ್ವೇಷದ ಭಾವಗಳು ಇದ್ದವು. ರಾಸ್ಕೋಲ್ನಿಕೋವ್‌ನನ್ನು ನೋಡಿದಳು. ಗೋಡೆಯ ಹತ್ತಿರ ನಿಂತಿದ್ದ. ಕೈ ಕಟ್ಟಿಕೊಂಡು ಉರಿಯುವ ಕಣ್ಣಲ್ಲಿ ಅವಳನ್ನು ನೋಡುತ್ತಿದ್ದ.

‘ಅಯ್ಯೋ, ದೇವರೇ!’ ಅಂದಳು ಸೋನ್ಯಾ.

‘ಅಮಾಲಿಯಾ ಇವಾನೋವ್ನಾ, ಪೋಲಿಸಿನವರಿಗೆ ತಿಳಿಸಬೇಕು. ದಯವಿಟ್ಟು ವಾಚ್‌ಮ್ಯಾನ್‌ನನ್ನು ಕರೆಯಿರಿ,’ ನಯವಾದ, ಮೃದುವಾದ ದನಿಯಲ್ಲಿ ಮಾತಾಡಿದ ಪೀಟರ್ ಪೆಟ್ರೊವಿಚ್.

‘ದೇವರೇ, ದೇವರೇ! ಅವಳು ಖಳ್ಳತನ ಮಾಡತಾಳೆ ಅಂಥ ಗೊತ್ತಿತ್ತು!’ ಅಂದಳು ಅಮಾಲಿಯ ಇವಾನೋವ್ನ.

‘ಗೊತ್ತಿತ್ತ ನಿಮಗೆ! ಹಾಗಾದರೆ ಇಂಥ ಅನುಮಾನ ಮೊದಲೂ ಬಂದಿತ್ತು ನಿಮಗೆ! ಅಮಾಲಿಯ ಇವಾನೋವ್ನಾ, ದಯವಿಟ್ಟು ನೀವು ಈಗ ಆಡಿದ ಮಾತು ನೆನಪಿರಲಿ. ಹೇಗಿದ್ದರೂ ನೀವು ಹೇಳಿದ ಮಾತಿಗೆ ಇಲ್ಲಿ ಸಾಕ್ಷಿ ಇದ್ದಾರೆ,’ ಅಂದ ಪೀಟರ್ ಪೆಟ್ರೊವಿಚ್.
ಇದ್ದಕಿದ್ದ ಹಾಗೆ ಸುತ್ತಲೂ ಗುಜುಗುಜು ಮಾತು ಹುಟ್ಟಿತು. ಎಲ್ಲರೂ ಅತ್ತಿತ್ತ ಸರಿದಾಡಿದರು.

‘ಏನೂ!’ ಕ್ಯಾತರೀನ ತಟ್ಟನೆ ಚೀರಿದಳು. ಅವಳಿಗೀಗ ಎಚ್ಚರ ಮೂಡಿತ್ತು. ತನ್ನಿಂದ ತಾನೇ ಬಿಡಿಸಿಕೊಂಡವಳ ಹಾಗೆ ಪೀಟರ್ ಪೆಟ್ರೊವಿಚ್‌ನ ಮೇಲೆ ಏರಿ ಹೋದಳು. ‘ಏನು! ಅವಳು ಕದ್ದಳು ಅನ್ನತೀಯಾ? ಸೋನ್ಯಾ ಕದ್ದಳಾ? ನೀವೆಲ್ಲ ರಾಸ್ಕಲ್‌ಗಳು!’ ಸೋನ್ಯಾ ಇದ್ದಲ್ಲಿಗೆ ಧಾವಿಸಿ ಹೋಗಿ ಇಕ್ಕಳದಷ್ಟು ಬಿಗಿಯಾಗಿ ಅಪ್ಪಿಕೊಂಡಳು. ಕ್ಯಾತರೀನಳ ಕೈ ನಡುಗುತ್ತಿತ್ತು.

‘ಅವನು ಕೊಟ್ಟ ದುಡ್ಡು ಯಾಕೆ ತಗೊಂಡೆ ಸೋನ್ಯಾ! ಪೆದ್ದೀ! ಕೊಡು ಇಲ್ಲಿ! ಹತ್ತು ರೂಬಲ್ ಕೊಡು!’

ಸೋನ್ಯಾ ಕೈಯಿಂದ ನೋಟು ಕಿತ್ತುಕೊಂಡು, ಮುದುರಿ ಮುದ್ದೆ ಮಾಡಿ, ಒಂದು ಹೆಜ್ಜೆ ಹಿಂದೆ ಸರಿದು, ಅದನ್ನು ಪೀಟರ್ ಪೆಟ್ರೋವಿಚ್‌ನ ಮುಖದ ಮೇಲೆ ಬೀಸಿ ಎಸೆದಳು. ಮುದುರಿದ ನೋಟಿನ ಉಂಡೆ ಅವನ ಕಣ್ಣಿಗೆ ಬಡಿದು ಕೆಳಕ್ಕೆ ಬಿತ್ತು. ಪೀಟರ್ ಪೆಟ್ರೊವಿಚ್ ಕೋಪಗೊಂಡ.

‘ಹಿಡಿದುಕೊಳ್ಳಿ ಈ ಹುಚ್ಚೀನಾ!’ ಕಿರುಚಿದ.

ಅಷ್ಟು ಹೊತ್ತಿಗೆ ಬಾಗಿಲಲ್ಲಿದ್ದ ಸೆಮ್ಯೊನೊವಿಚ್‌ನ ಜೊತೆಗೆ ಇನ್ನಷ್ಟು ಮುಖಗಳು ಸೇರಿಕೊಂಡವು. ಕ್ಯಾತರೀನ ಇಟ್ಟುಕೊಂಡಿದ್ದ ಊಟಕ್ಕೆ ಬಾರದಿದ್ದ ತಾಯಿ-ಮಗಳ ಮುಖಗಳೂ ಇದ್ದವು.

‘ಏನೂ? ಹುಚ್ಚೀ? ಹುಚ್ಚೀನ ನಾನು? ಪೆದ್ದಾ!’ ಕ್ಯಾತರೀನ ಚೀರಿದಳು. ‘ನೀನು ಪೆದ್ದ, ಕುತಂತ್ರಿ, ದುಷ್ಟ! ಸೋನ್ಯಾ, ಸೋನ್ಯಾ ಅವನ ದುಡ್ಡು ತಗೊಳ್ಳತಾಳಾ? ಸೋನ್ಯಾ ಕಳ್ಳೀನಾ? ಅವಳ ಹತ್ತಿರ ಇರೋ ದುಡ್ಡು ನಿನಗೆ ಕೊಡೋಂಥಾವಳು ಕಣೋ ಪೆದ್ದಾ!’ ಹಿಸ್ಟೀರಿಯಕ್ಕೆ ಒಳಗಾದವಳ ಹಾಗೆ ಚೀರಾಡಿದಳು. ‘ಇಂಥಾ ಪೆದ್ದನ್ನ ಎಲ್ಲಾದರೂ ನೋಡಿದ್ದೀರಾ?’ ಪೀಟರ್ ಪೆಟ್ರೊವಿಚ್‌ನತ್ತ ಬೆರಳು ತೋರುತ್ತ ಎಲ್ಲ ದಿಕ್ಕಿಗೂ ನೋಡಿದಳು. ಮನೆಯ ಓನರನ್ನು ಗಮನಿಸಿ, ‘ಏನು! ನೀನೂ ಸೇರಿಕೊಂಡಿದೀಯಾ ಇದರಲ್ಲಿ?! ಅವಳು ಖಳ್ಳತನ ಮಾಡೋದು ನೋಡಿದ್ದೇ ಅಂತೀಯಾ, ನಾಯಿ ಬ್ರೆಡ್ ಕದಿಯುವವಳು ನೀನು? ಆಯ್ಕೊಂಡು ತಿನ್ನುವ ಕೋಳಿ ನೀನು! ಥೂ ನಿನ್ನ…! ಸೋನ್ಯಾ ಈ ರೂಮು ಬಿಟ್ಟು ಆಚೆ ಹೋಗೇ ಇಲ್ಲ. ಏಯ್ ದುಷ್ಟಾ, ನಿನ್ನ ಜೊತೆ ಮಾತಾಡಿ ನೇರ ಇಲ್ಲಿಗೇ ಬಂದಿದಾಳೆ. ಬಂದವಳೇ ರೋಡಿಯಾನ್ ರೊಮೊನೊವಿಚ್ ಪಕ್ಕದಲ್ಲೇ ಕೂತಿದಾಳೆ. ಅವಳೆಲ್ಲೂ ಹೋಗಿಲ್ಲ ಅಂದ ಮೇಲೆ ದುಡ್ಡು ಅವಳ ಹತ್ತಿರ ತಾನೇ ಇರಬೇಕು! ಹುಡುಕಿ, ಬನ್ನಿ, ಹುಡುಕಿ! ಅವಳ ಹತ್ತಿರ ಸಿಗದೇ ಏನಾದರೂ ಹೋದರೆ, ನಿಮ್ಮನ್ನ ಯಾರನ್ನೂ ಬಿಡಲ್ಲ! ಚಕ್ರವರ್ತಿಗಳವರ ತನಕ ದೂರು ತಗೊಂಡು ಹೋಗತೇನೆ! ಇವತ್ತೇ ದೊರೆಗಳ ಕಾಲಿನ ಮೇಲೆ ಬಿದ್ದು ನಿಮ್ಮೆಲ್ಲಾರ ಮೇಲೂ ದೂರು ಕೊಡತೇನೆ! ನಾನು ಅನಾಥೆ! ನನ್ನ ಒಳಕ್ಕೆ ಬಿಡತಾರೆ! ನನ್ನ ಬಿಡಲ್ಲ ಅಂದುಕೊಂಡಿದೀರಾ? ಸುಳ್ಳು! ಹೋಗೇ ಹೋಗತೇನೆ! ನಾನು ಅಂಜುಬುರುಕಿ ಅಂದುಕೊಂಡಿದೀರಾ? ನನ್ನ ಧೈರ್ಯ ನಿಮಗೆ ಗೊತ್ತಿಲ್ಲ! ನಿಮ್ಮನ್ನ ಬಿಡಲ್ಲ! ಹುಡುಕಿ, ಬನ್ನಿ ಹುಡುಕಿ!’

ಕ್ಯಾತರೀನ ಆವೇಶದಲ್ಲಿ ಪೀಟರ್ ಪೆಟ್ರೊವಿಚ್‌ನನ್ನು ಸೋನ್ಯಾ ಹತ್ತಿರಕ್ಕೆ ಎಳಕೊಂಡು ಬಂದಳು.

‘ನಾನು ಸಿದ್ಧ… ಸಮಾಧಾನ ಮಾಡಿಕೊಳ್ಳಿ… ನೀವು ಸಮಾಧಾನ ಮಾಡಿಕೊಳ್ಳಿ… ನಿಮಗೆ ಎಷ್ಟು ಧೈರ್ಯ ಅನ್ನುವುದು ಗೊತ್ತಾಗತ ಇದೆ…’ ಪೀಟರ್ ಪೆಟ್ರೊವಿಚ್ ಗೊಣಗಿದ. ‘…ಆದರೆ ನೋಡಿ, ಪೋಲೀಸಿನವರು ಇರಬೇಕು. ಇಲ್ಲದೇ ಇದ್ದರೂ ಪರವಾಗಿಲ್ಲ, ಇಲ್ಲಿ ಎಷ್ಟೊಂದು ಸಾಕ್ಷಿಗಳಿದ್ದಾರೆ… ಹುಡುಕುವುದಕ್ಕೆ ಸಿದ್ಧ… ನಾನು ಗಂಡಸಾಗಿ ಮುಜುಗರ ಆಗತ್ತೆ… ಅಮಾಲಿಯ ಇವಾನೊವ್ನಾ ಸಹಾಯ ಮಾಡಿದರೆ ಆಗಬಹುದು… ಆದರೂ ಕಳ್ಳ ಮಾಲು ಹುಡುಕುವ ಕ್ರಮ ಇದಲ್ಲ….’

‘ಯಾರನ್ನ ಬೇಕಾದರೂ ಕರಿ! ಯಾರು ಬೇಕಾದರೂ ಹುಡುಕಿ ನೋಡಲಿ!’ ಎಂದು ಚೀರಿದ ಕ್ಯಾತರೀನ ‘ಸೋನ್ಯಾ ನಿನ್ನ ಜೇಬು ತೋರಿಸು ಅವರಿಗೆ! ನೋಡಿ, ನೋಡಿ! ನೋಡೋ ರಾಕ್ಷಸಾ! ಈ ಜೇಬು ಖಾಲಿ. ಇದರಲ್ಲಿ ಕರ್ಚೀಫು ಇತ್ತು. ಜೇಬು ಖಾಲಿ, ನೋಡಿದೆಯಾ? ಇಗೋ ಇನ್ನೊಂದು ಜೇಬು, ನೋಡಿದೆಯ?’

ಕ್ಯಾತರೀನ ಜೇಬನ್ನು ಒಳಗಿನಿಂದ ಎಳೆದೆಳೆದು ತೋರಿಸುತ್ತಿದ್ದಾಗ ಸೋನ್ಯಾಳ ಬಲಗಡೆಯ ಎರಡನೆಯ ಜೇಬಿನಿಂದ ಹಾಳೆಯ ತುಂಡು ಹಾರಿ ಗಾಳಿಯಲ್ಲಿ ತೇಲಿ ಪೀಟರ್ ಪೆಟ್ರೊವಿಚ್‌ನ ಕಾಲ ಬಳಿ ಬಿತ್ತು. ಎಲ್ಲರೂ ಅದನ್ನು ನೋಡಿದರು. ಕೆಲವರು ಹ್ಞಾ ಎಂದರು. ಪೀಟರ್ ಪೆಟ್ರೊವಿಚ್ ಬಗ್ಗಿ, ಎರಡು ಬೆರಳಿನಲ್ಲಿ ಅದನ್ನು ನೆಲದ ಮೇಲಿಂದ ಎತ್ತಿಕೊಂಡು, ಎಲ್ಲರಿಗೂ ತೋರಿಸಿದ. ಬಿಡಿಸಿ ತೋರಿಸಿದ. ನೂರು ರೂಬಲ್ ನೋಟು ಅದು. ಎಂಟು ಮಡಿಕೆ ಮಡಿಸಿತ್ತು. ಪೀಟರ್ ಸುತ್ತಲೂ ಇದ್ದವರಿಗೆಲ್ಲ ತೋರಿಸಿದ.

‘ಕಳ್ಳಿ! ತೊಲಗು ಇಲ್ಲಿಂದ ಮನೆ ಬಿಟ್ಟು! ಪೋಲೀಸ್, ಪೋಲೀಸ್! ಇಂಥವರನ್ನ ಸೈಬೀರಿಯಕ್ಕೆ ಓಡಿಸಬೇಕು!’ ಅಮಾಲಿಯ ಕೂಗಾಡಿದಳು.

ಎಲ್ಲ ದಿಕ್ಕಿನಿಂದ ಉದ್ಗಾರಗಳು ಕೇಳಿಸಿದವು. ರಾಸ್ಕೋಲ್ನಿಕೋವ್ ಸುಮ್ಮನಿದ್ದ. ಅವನ ನೋಟ ಸೋನ್ಯಾಳ ಮೇಲೇ ಇತ್ತು. ಆಗಾಗ ಪೀಟರ್ ಪೆಟ್ರೊವಿಚ್‌ನನ್ನು ನೋಡುತ್ತಿದ್ದ. ಪ್ರಜ್ಞೆಯೇ ಇಲ್ಲದವಳ ಹಾಗಿದ್ದಳು ಸೋನ್ಯಾ. ಆಶ್ಚರ್ಯ ಕೂಡ ಆಗಿರಲಿಲ್ಲ ಅವಳಿಗೆ. ಇದ್ದಕಿದ್ದ ಹಾಗೆ ಅವಳ ಮುಖ ಕೆಂಪಾಯಿತು. ಚಿಟ್ಟನೆ ಚೀರಿ ಮುಖ ಮುಚ್ಚಿಕೊಂಡಳು.

‘ಇಲ್ಲಾ, ನಾನಲ್ಲಾ! ನಾನು ತಗೊಳ್ಳಲಿಲ್ಲಾ! ನನಗೇನೂ ಗೊತ್ತಿಲ್ಲಾ!’ ಹೃದಯ ಸೀಳುವ ದನಿಯಲ್ಲಿ ಚೀರಿ ಕ್ಯಾತರೀನ ಇದ್ದಲ್ಲಿಗೆ ಧಾವಿಸಿದಳು. ಆಕೆ ಸೋನ್ಯಾಳನ್ನು ಬಲವಾಗಿ ಅಪ್ಪಿಕೊಂಡಳು—ಎಲ್ಲರಿಂದಲೂ ಅವಳನ್ನು ಕಾಪಾಡಿ ಎದೆಯಲ್ಲಿ ಬಚ್ಚಿಟ್ಟುಕೊಳ್ಳುವವಳ ಹಾಗೆ.

‘ಸೋನ್ಯಾ, ಸೋನ್ಯಾ ಅವರ ಮಾತು ನಂಬಬೇಡ! ನೋಡು, ನಾನೂ ಅವರ ಮಾತು ನಂಬಲ್ಲ! ಎಂಥ ಸಾಕ್ಷಿ ಇದ್ದರೂ ನಂಬಲ್ಲ,’ ಅನ್ನುತ್ತ ತೋಳಿನಲ್ಲಿ ಮಗುವನ್ನು ತೂಗುವ ಹಾಗೆ ಸೋನ್ಯಾಳನ್ನು ಮುದ್ದು ಮಾಡುತ್ತ ಅವಳ ಕೆನ್ನೆಗೆ ಲೆಕ್ಕವಿರದಷ್ಟು ಮುತ್ತು ಕೊಟ್ಟಳು. ಅವಳ ಕೈ ಹಿಡಿದು ಮುತ್ತಿನಲ್ಲೇ ಮುಳುಗಿಸಿಬಿಟ್ಟಳು. ‘ನೀನು ಕದೀತೀಯಾ ಅನ್ನೋ ಹಾಗೆ ಆಡತಾರಲ್ಲ! ಎಂಥ ಪೆದ್ದ ಜನ! ಅಯ್ಯೋ, ದೇವರೇ! ಪೆದ್ದರು ನೀವೆಲ್ಲ ಪೆದ್ದರು!’ ಎಲ್ಲರಿಗೂ ಅನ್ನುವ ಹಾಗೆ ಹೇಳಿದಳು. ‘ಸೋನ್ಯಾ ಮನಸ್ಸು ಎಂಥದ್ದು ನಿಮಗಿನ್ನೂ ಗೊತ್ತಿಲ್ಲ. ಎಂಥಾ ಹುಡುಗೀ! ಏನೂ ತಗೊಳ್ಳೋಳಲ್ಲ ಅವಳು! ನಿಮಗೆ ತೀರ ಬೇಕೇ ಬೇಕಾಗಿದ್ದರೆ ಅವಳ ಹತ್ತಿರ ಇರುವ ಕೊನೆಯ ಡ್ರೆಸ್ಸನ್ನೂ ಕೇಳಿದವರಿಗೆ ಬಿಚ್ಚಿಕೊಟ್ಟಾಳು, ಬರಿಗಾಲಲ್ಲೇ ಹೋದಾಳು, ಅಂಥಾ ಸ್ವಭಾವ ಅವಳದ್ದು. ನನ್ನ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ ಅಂತ ಹಳದಿ ಪಾಸ್ ತೆಗೆದುಕೊಂಡಳು. ನಮಗೋಸ್ಕರ ತನ್ನನ್ನೇ ಮಾರಿಕೊಂಡಳು! ಅಯ್ಯೋ… ನನ್ನ ಗಂಡನೇ! ನೋಡಿದೆಯಾ? ನೋಡಿದೆಯಾ? ನಿನ್ನ ನೆನಪಿಗೆ ಅಂತ ಊಟ ಹಾಕಿಸಿದರೆ ಏನಾಯಿತು ನೋಡಿದೆಯಾ? ಕಾಪಾಡು ದೇವರೇ! ಯಾಕೆ ಎಲ್ಲ ಸುಮ್ಮನೆ ನಿಂತಿದೀರಿ? ರೋಡಿಯಾನ್ ರಮೊನೊವಿಚ್! ನೀನು ಯಾಕೆ ಅವಳ ಪರವಾಗಿ ಮಾತಾಡತಾ ಇಲ್ಲ? ನೀನೂ ಈ ಮಾತು ನಂಬತೀಯಾ? ನೀವು ಯಾರೂ ಅವಳ ಕಾಲಿನ ಕಿರುಬೆರಳಿಗೂ ಸಮ ಅಲ್ಲ, ನೀವು ಯಾರೂ! ದೇವರೇ ಕಾಪಾಡಬೇಕು!’

ಗಂಡನನ್ನು ಕಳೆದುಕೊಂಡ, ಬಡವಳಾದ, ಕ್ಷಯರೋಗ ಪೀಡಿತಳಾದ ಕ್ಯಾತರೀನ ಇವನೋವ್ನಳ ಗೋಳಾಟ ಜನರ ಮನಸಿನ ಮೇಲೆ ಪ್ರಬಲವಾದ ಪರಿಣಾಮ ಬೀರಿತು. ನೋವಿನಿಂದ ಹಿಂಡಿಕೊಂಡಿದ್ದ ಕ್ಷಯಪೀಡಿತ ಸುಕ್ಕು ಗಟ್ಟಿದ ಮುಖದಲ್ಲಿ, ರಕ್ತ ಜಿನುಗುತ್ತಿರುವ ಬತ್ತಿದ ತುಟಿಗಳಲ್ಲಿ, ಗೊಗ್ಗರು ಅಳುದನಿಯಲ್ಲಿ, ಮಗುವಿನ ಹಾಗೆ ಇದ್ದ ಅವಳ ಬಿಕ್ಕಳಿಕೆಯಲ್ಲಿ, ಮಗುವಿನಂಥ ಮುಗ್ಧ ನಂಬಿಕೆಯಲ್ಲಿ ದೇವರೇ ಕಾಪಾಡು ಎಂದು ಕೋರಿದ್ದರಲ್ಲಿ ಎಷ್ಟೊಂದು ದುಃಖ, ಎಷ್ಟೊಂದು ವೇದನೆ ಇತ್ತೆಂದರೆ ಈ ನತದೃಷ್ಟಳ ಬಗ್ಗೆ ಎಲ್ಲರ ಮನಸೂ ಮರುಗಿತ್ತು. ಕೊನೆಗೂ ಪೀಟರ್ ಪೆಟ್ರೊವಿಚ್ ತನ್ನ ಕರುಣೆಯನ್ನು ತೋರಿಸಿದ.

‘ತಾಯೀ! ತಾಯೀ!’ ಪ್ರಭಾವ ಬೀರುವ ದನಿಯಲ್ಲಿ ಉದ್ಗಾರ ಮಾಡಿದ. ‘ಈ ಸಂಗತಿ ನಿಮಗೆ ಸಂಬಂಧಪಟ್ಟಿದ್ದು ಅಲ್ಲವೇ ಅಲ್ಲ. ಕಳ್ಳತನಕ್ಕೆ ನೀವು ಸಹಾಯಮಾಡಿದಿರಿ ಅಂತಲೂ ಯಾರೂ ಅನ್ನುತ್ತಿಲ್ಲ. ನೀವಾಗಿಯೇ ಅವಳ ಜೇಬುಗಳನ್ನು ತೆರೆದು ತೋರಿಸಿರುವಾಗ ನೀವು ಮುಗ್ಧರು ಎಂದು ಎಂಥವರಿಗೂ ತಿಳಿಯುತ್ತದೆ. ನಾನು ಕರುಣೆ ತೋರಿಸುವುದಕ್ಕೆ ಸಿದ್ಧ. ಸೋನ್ಯಾ ಹೀಗೆ ಮಾಡುವುದಕ್ಕೆ ಬಡತನವೇ ಕಾರಣವಾಗಿದ್ದರೆ ಖಂಡಿತ ಕರುಣೆ ತೋರುತ್ತೇನೆ. ಆದರೆ ಸೋನ್ಯಾ ನೀವು ಯಾಕೆ ತಪ್ಪು ಒಪ್ಪಿಕೊಳ್ಳುತ್ತಿಲ್ಲ? ಅಪಮಾನದ ಭಯವೇ? ಇದೇ ಮೊದಲ ಸಾರಿ ಮಾಡಿದ್ದಾ? ದಿಕ್ಕು ತೋಚಲಿಲ್ಲವಾ? ಅರ್ಥ ಆಗತ್ತೆ, ಅರ್ಥ ಆಗತ್ತೆ… ಆದರೂ ಇಂಥಾ ಬುದ್ಧಿ ನಿಮಗೆ ಯಾಕೆ ಬಂತೋ! ಸನ್ಮಾನ್ಯರೇ!’ ಅಲ್ಲಿದ್ದ ಎಲ್ಲರನ್ನೂ ಉದ್ದೇಶಿಸಿ ಹೇಳಿದ, ‘ಸನ್ಮಾನ್ಯರೇ! ನನಗೆ ಏನೆಲ್ಲ ಅವಮಾನವಾಗಿದ್ದರೂ ಕರುಣೆಯಿಂದ, ಸಹಾನುಭೂತಿಯಿಂದ ಈಕೆಯನ್ನು ಕ್ಷಮಿಸಲು ಈಗಲೂ ನಾನು ಸಿದ್ಧ. ನೋಡೀಮ್ಮಾ ಇವತ್ತು ನಿಮಗೆ ಆಗಿರುವ ನಾಚಿಕೆ ನಿಮ್ಮ ಮುಂದಿನ ದಿನಗಳಿಗೆ ಪಾಠವಾಗಿರಲಿ,’ ಅನ್ನುತ್ತ ಸೋನ್ಯಾಳತ್ತ ತಿರುಗಿ, ‘ಮಿಕ್ಕಿದ್ದು ಹೋಗಲಿ, ಇಷ್ಟಾಯಿತಲ್ಲ, ಮುಗಿಯಿತು.’ ಪೀಟರ್ ಪೆಟ್ರೊವಿಚ್ ಓರೆಗಣ್ಣಿನಲ್ಲಿ ರಾಸ್ಕೋಲ್ನಿಕೋವ್‌ನನ್ನು ನೋಡಿದ. ಇಬ್ಬರ ನೋಟಗಳೂ ಕಲೆತವು. ರಾಸ್ಕೋಲ್ನಿಕೋವ್ ನೋಟದಲ್ಲೇ ಅವನನ್ನು ಬೂದಿ ಮಾಡುವ ಹಾಗೆ ನೋಡುತ್ತಿದ್ದ. ಕ್ಯಾತರೀನ ಏನೂ ಕೇಳಿಸಿಕೊಳ್ಳುತ್ತಲೂ ಇರಲಿಲ್ಲ. ಹುಚ್ಚಿಯ ಹಾಗೆ ಸೋನ್ಯಾಳನ್ನು ಅಪ್ಪಿಕೊಂಡು ಮುತ್ತಿಡುತ್ತಿದ್ದಳು. ಮಕ್ಕಳು ಸೋನ್ಯಾಳ ಸುತ್ತಲೂ ನಿಂತು ತಮ್ಮ ಪುಟ್ಟ ಕೈಗಳಲ್ಲಿ ಅವಳನ್ನು ಅಪ್ಪಿಕೊಂಡಿದ್ದರು. ಪೊಲೆಚ್ಕಾಗೆ ಇದೆಲ್ಲ ಏನಾಗುತ್ತಿದೆ ಎಂದು ಸರಿಯಾಗಿ ಅರ್ಥವಾಗದಿದ್ದರೂ ಕಣ್ಣೀರಲ್ಲಿ ಮುಳುಗಿದ್ದಳು, ಅತ್ತು ಊದಿದ್ದ ತನ್ನ ಪುಟ್ಟ ಮುದ್ದು ಮುಖವನ್ನು ಸೋನ್ಯಾಳ ಭುಜದ ಮೇಲಿರಿಸಿ ಬಿಕ್ಕಳಿಕೆ ಬರುವುದನ್ನು ಅದುಮಿಟ್ಟುಕೊಳ್ಳಲು ಪ್ರಯತ್ನಪಡುತ್ತಿದ್ದಳು.

‘ಎಂಥಾ ದುಷ್ಟತನ!’ ಬಾಗಿಲ ಹತ್ತಿರದಿಂದ ಜೋರು ದನಿಯೊಂದು ಕೇಳಿಸಿತು.

ಪೀಟರ್ ಪೆಟ್ರೊವಿಚ್ ತಟ್ಟನೆ ಅತ್ತ ತಿರುಗಿದ.

‘ಎಂಥ ದುಷ್ಟತನ!’ ಸೆಮ್ಯೊನೊವಿಚ್ ಅವನ ಕಣ್ಣಲ್ಲೆ ಕಣ್ಣಿಟ್ಟು ಮತ್ತೆ ಹೇಳಿದ.

ಪೀಟರ್ ಪೆಟ್ರೊವಿಚ್ ಬೆಚ್ಚಿದಂತಿತ್ತು. ಎಲ್ಲರೂ ಅದನ್ನು ಗಮನಿಸಿದರು (ಆನಂತರದಲ್ಲಿ ನೆನಪು ಮಾಡಿಕೊಂಡರು). ಸೆಮ್ಯೊನೊವಿಚ್ ರೂಮಿನೊಳಕ್ಕೆ ಕಾಲಿಟ್ಟ.

‘ನನ್ನನ್ನ ಸಾಕ್ಷಿ ಅಂತ ಹೇಳೋದಕ್ಕೆ ನಿನಗೆಷ್ಟು ಧೈರ್ಯ?’ ಪೀಟರ್ ಪೆಟ್ರೊವಿಚ್‌ನ ಹತ್ತಿರಕ್ಕೆ ಹೋಗುತ್ತ ಕೇಳಿದ.

‘ಏನಿದು, ಸೆಮ್ಯೊನೊವಿಚ್? ಏನು ಹೇಳತಾ ಇದೀಯ?’ ಪೀಟರ್ ಪೆಟ್ರೊವಿಚ್ ಗೊಣಗಿದ.

‘ನೀನು ಸುಳ್ಳ, ಚಾಡಿಕೋರ… ಅನ್ನತಾ ಇದೇನೆ!’ ಸೆಮ್ಯೊನೊವಿಚ್ ಸಿಟ್ಟಿನಿಂದ ಹೇಳಿದ. ಸರಿಯಾಗಿ ನೋಡಲಾಗದ ಸಮೀಪ ದೃಷ್ಟಿಯ ಕಣ್ಣಲ್ಲಿ ಅವನನ್ನೇ ದಿಟ್ಟಿಸುತ್ತಿದ್ದ. ಅವನಿಗೆ ಭಯಂಕರ ಸಿಟ್ಟು ಬಂದಿತ್ತು. ರಾಸ್ಕೋಲ್ನಿಕೋವ್ ಅವನ ಮೇಲೇ ದೃಷ್ಟಿ ನೆಟ್ಟು ಅವನ ಒಂದೊಂದು ಮಾತನ್ನೂ ಕೇಳಿಸಿಕೊಳ್ಳುತ್ತ ಪ್ರತಿ ಮಾತನ್ನೂ ತೂಗಿ ನೋಡುತ್ತ ನಿಂತಿದ್ದ. ಮತ್ತೆ ಇನ್ನೊಂದು ಮೌನ. ಪೀಟರ್ ಪೆಟ್ರೊವಿಚ್ ದಿಕ್ಕು ತೋಚದವನ ಹಾಗೆ ಆಗಿದ್ದ, ಅದರಲ್ಲೂ ಮೊದಲ ಕೆಲವು ಕ್ಷಣ.

‘ನನ್ನ ಮೇಲೆ ಆಪಾದನೆ…’ ಮಾತು ಶುರು ಮಾಡುತಿದ್ದ ಹಾಗೇ ತೊದಲಿದ. ‘ಏನ್, ಏನಾಗಿದೆ ನಿನಗೆ? ತಲೆ ತಲೆ ಸರಿ ಇಲ್ಲವಾ?’

‘ನನ್ನ ತಲೆ ಸರಿ ಇದೆ. ಕೆಟ್ಟಿರೋದು ನಿನ್ನದು… ನೀನು ಮೋಸಗಾರ! ಎಂಥಾ ದುಷ್ಟತನ ನಿನ್ನದು! ಕೇಳಿಸಿಕೊಳ್ಳತಾ ಇದ್ದೆ, ನಾನು ಕೇಳಿಸಿಕೊಳ್ಳತಾನೇ ಇದ್ದೆ, ಅರ್ಥಮಾಡಿಕೊಳ್ಳಬೇಕು ಅಂತ. ಒಪ್ಪಿಕೊಳ್ಳತೇನೆ, ಈಗಲೂ ಕೂಡ ನೀನು ಯಾಕೆ ಹೀಗೆಲ್ಲ ಮಾಡತ ಇದ್ದೀಯ, ಲಾಜಿಕ್ ಏನು ತಿಳೀತಿಲ್ಲ. ಯಾಕೆ ಹೀಗೆ ಮಾಡಿದೆಯೋ, ಅರ್ಥವಾಗತಾ ಇಲ್ಲ.’

‘ಅರೆ! ನಾನೇನು ಮಾಡಿದೀನಿ? ಈ ನಾನ್ಸೆನ್ಸ್ ಮಾತಾಡೋದು, ಒಗಟಿನ ಥರ ಮಾತಾಡುವುದು ನಿಲ್ಲಿಸತೀಯಾ? ಅಥವ ಕುಡಿದಿದ್ದೀಯೋ ಹೇಗೆ?’

‘ಕುಡಿದಿದ್ದರೆ ನೀನು ಕುಡಿದಿರಬೇಕು, ಥೂ ನೀಚ. ನಾನಲ್ಲ. ನಾನು ವೋಡ್ಕಾನ ಮುಟ್ಟೋದು ಕೂಡ ಇಲ್ಲ. ಅದು ನನ್ನ ಸಿದ್ಧಾಂತಕ್ಕೆ ವಿರೋಧವಾದದ್ದು! ಇವನೇ, ಸ್ವತಃ ಇವನೇ ಇವನ ಕೈಯಿಂದಲೇ ಆ ನೂರು ರೂಬಲ್ ನೋಟನ್ನ ಸೋನ್ಯಾ ಅವರಿಗೆ ಕೊಟ್ಟ—ನಾನು ನೋಡಿದೆ, ನಾನು ಅದಕ್ಕೆ ಸಾಕ್ಷಿ. ಪ್ರಮಾಣ ಮಾಡಿ ಹೇಳತೇನೆ. ಇವನೇ ಅದನ್ನ ಮಾಡಿದ್ದು!’ ಸೆಮ್ಯೊನೊವಿಚ್ ಎಲ್ಲರನ್ನೂ ಉದ್ದೇಶಿಸಿ ಹೇಳಿದ.

‘ನಿನ್ನ ತಲೆ ಪೂರಾ ಕೆಟ್ಟಿದೆಯಾ? ಹಂದಿ ಥರ ಗುರುಗುರು ಅನ್ನಬೇಡ. ಅವಳೇ ಸ್ವತಃ, ನಿನ್ನ ಕಣ್ಣೆದುರಿಗೇನೇ ಅವಳೇ ಇಲ್ಲಿ ಎಲ್ಲರೆದುರಿಗೇ ಹೇಳಿದಾಳೆ, ನಾನು ಅವಳಿಗೆ ಹತ್ತು ರೂಬಲ್ ಮಾತ್ರ ಕೊಟ್ಟೆ ಅಂತ. ಹಾಗಿದ್ದರೆ ನಾನು ಅವಳಿಗೆ ನೂರು ರೂಬಲ್ ಕೊಡುವುದಕ್ಕೆ ಹೇಗೆ ಸಾಧ್ಯ?’ ಪೀಟರ್ ಪೆಟ್ರೊವಿಚ್ ಘಟ್ಟಿಸಿ ಕೇಳಿದ.

‘ನಾನು ನೋಡಿದೆ! ನಾನು ನೋಡಿದೆ!’ ಸೆಮ್ಯೊನೊವಿಚ್ ಮತ್ತೆ ಒತ್ತಿ ಹೇಳಿದ. ‘ನನ್ನ ನಂಬಿಕೆಗಳಿಗೆ ವಿರುದ್ಧವಾಗಿದ್ದರೂ ನಾನು ಎಂಥಾ ಪ್ರಮಾಣ ಬೇಕಾದರೂ ಮಾಡತೇನೆ, ನಡಿ ಕೋರ್ಟಿಗೆ. ಯಾಕೆಂದರೆ ಅವಳಿಗೆ ಗೊತ್ತಾಗದ ಹಾಗೆ ಆ ನೋಟನ್ನ ಅವಳ ಜೇಬಿಗೆ ಸೇರಿಸಿದ್ದು ನಾನು ನೋಡಿದೇನೆ! ಆದರೆ ನಾನೋ! ಪೆದ್ದನ ಹಾಗೆ ನಿನ್ನನ್ನ ಮಹಾದಾನಿ ಅಂದುಕೊಂಡಿದ್ದೆ! ಬಾಗಿಲ ಹತ್ತಿರ, ಅವಳಿಗೆ ಗುಡ್‌ಬೈ ಹೇಳುವಾಗ, ನೀನು ಅವಳ ಕೈ ಕುಲುಕುತ್ತಿದ್ದೆ, ನಿನ್ನ ಇನ್ನೊಂದು ಕೈಯಿಂದ ಪೇಪರ್ ತುಂಡನ್ನ ಅವಳಿಗೆ ತಿಳಿಯದ ಹಾಗೆ ಕೋಟಿನ ಜೇಬಿಗೆ ಹಾಕಿದೆ. ನೋಡಿದೆ, ನಾನೇ ನೋಡಿದೆ!’
ಪೀಟರ್ ಪೆಟ್ರೊವಿಚ್ ಮುಖ ಬಿಳಿಚಿತು.

‘ಬರೀ ಸುಳ್ಳು!’ ಧೈರ್ಯವಾಗಿ ಹೇಳಿದ. ‘ಕಿಟಕಿ ಹತ್ತಿರ ನಿಂತಿದ್ದ ನಿನಗೆ ಪೇಪರ್ ತುಂಡು ಕಂಡಿದ್ದು ಹೇಗೆ? ದೂರದ್ದು ನಿನಗೆ ಸರಿಯಾಗಿ ಕಾಣಲ್ಲ. ಕಲ್ಪನೆ ಮಾಡಿಕೊಂಡಿದೀಯ ಅಷ್ಟೆ. ಏನೇನೋ ಹೇಳತಾ ಇದೀಯ!’

‘ಇಲ್ಲ, ಕಲ್ಪನೆ ಅಲ್ಲ! ಎಲ್ಲಾ ನೋಡಿದೆ, ದೂರ ನಿಂತಿದ್ದರೂ ಎಲ್ಲಾನೂ ನೋಡಿದೆ, ಯಾವುದು ಪೇಪರ್ ತುಂಡು ಯಾವುದು ರೂಬಲ್ ನೋಟು ಅಂತ ಕಿಟಕಿ ಹತ್ತಿರ ನಿಂತವರಿಗೆ ಸರಿಯಾಗಿ ಕಾಣಲ್ಲ, ನಿಜ ನಿನ್ನ ಮಾತು. ಆದರೆ, ಈ ವಿಚಾರದಲ್ಲಿ ಮಾತ್ರ ನೀನು ಅವಳ ಜೇಬಿಗೆ ಹಾಕಿದ್ದು ನೂರು ರೂಬಲ್ ನೋಟು ಅನ್ನೋದು ನನಗೆ ಗ್ಯಾರಂಟಿ ಗೊತ್ತು. ಯಾಕೆ ಅಂದರೆ ಸೋನ್ಯಾಗೆ ನೀನು ಹತ್ತು ರೂಬಲ್ ನೋಟು ಕೊಟ್ಟಿದ್ದು ನಾನು ನೋಡಿದೆ. ಹಾಗೆ ಕೊಡುವಾಗ ನೀನು ಟೇಬಲ್ ಮೇಲಿಂದ ನೂರು ರೂಬಲ್ ನೋಟು ಕೂಡ ಎತ್ತಿಕೊಂಡೆ (ರೂಮಿನಲ್ಲಿ ಅಡ್ಡಾಡುತ್ತ ಆಗ ನಾನು ನಿನ್ನ ಹತ್ತಿರಕ್ಕೇ ಬಂದಿದ್ದೆ. ನನ್ನ ತಲೆಗೆ ಆಗ ಏನೋ ಬಂತು, ಹಾಗಾಗಿ ನಿನ್ನ ಕೈಯಲ್ಲಿ ನೂರರ ನೋಟು ಇದ್ದಿದ್ದನ್ನ ನಾನು ಮರೆಯಲಿಲ್ಲ. ಸ್ವಲ್ಪ ಹೊತ್ತು ಅದನ್ನ ಮರೆತೆ. ಆದರೆ ನೀನು ಮೇಲಕ್ಕೆ ಏಳತಾ ಬಲಗೈಯಲ್ಲಿದ್ದ ನೋಟನ್ನ ಎಡಗೈಗೆ ಬದಲಾಯಿಸತಾ ಅದು ಇನ್ನೇನು ಬಿದ್ದುಬಿಡತಿತ್ತು. ಆಗ ಮತ್ತೆ ನೆನಪು ಮಾಡಿಕೊಂಡೆ. ಯಾಕೆ ಅಂದರೆ ನೀನು ನಿಜವಾಗಲೂ ಮಹಾ ದಾನಿ, ನನಗೂ ತಿಳಿಯದ ಹಾಗೆ ಅವಳಿಗೆ ಸಹಾಯ ಮಾಡಬೇಕು ಅಂದುಕೊಂಡಿದ್ದೀಯ ಅನಿಸಿತು. ಆಶ್ಚರ್ಯ ಪಡುತ್ತ ಗಮನವಿಟ್ಟು ನೋಡಿದೆ. ಹಾಗಾಗಿ ನೀನು ಅದನ್ನ ಅವಳ ಕೋಟಿನ ಜೇಬಿಗೆ ಹೇಗೆ ಹಾಕಿದೆ ಅನ್ನುವುದು ಕಣ್ಣಿಗೆ ಬಿತ್ತು. ಈ ವಿಚಾರ ಪ್ರಮಾಣ ಮಾಡಿ ಹೇಳುವುದಕ್ಕೆ ಸಿದ್ಧ!’

ಸೆಮ್ಯೊನೊವಿಚ್ ಉಸಿರೆಳೆದುಕೊಂಡ. ಎಲ್ಲ ದಿಕ್ಕಿನಿಂದ ಗಜಿಬಿಜಿ, ಉದ್ಗಾರ ಕೇಳಿಸಿದವು. ಬಹಳ ಮಟ್ಟಿಗೆ ಆಶ್ಚರ್ಯವೇ ಇದ್ದರೂ ಕೆಲವು ಸದ್ದು, ಕೆಲವು ಮಾತು ಭಯ ಹುಟ್ಟಿಸುವ ಹಾಗಿದ್ದವು. ಎಲ್ಲರೂ ಪೀಟರ್ ಪೆಟ್ರೊವಿಚ್‌ನತ್ತ ಮುಂದೊತ್ತಿ ಬಂದರು. ಕ್ಯಾತರೀನ ಸೆಮ್ಯೊನೊವಿಚ್‌ನ ಹತ್ತಿರಕ್ಕೆ ಓಡಿದಳು. ‘ಆಂದ್ರೆ ಸೆಮ್ಯೊನೊವಿಚ್! ನಿನ್ನ ತಪ್ಪು ತಿಳಿದಿದ್ದೆ! ನೀನು ಕಾಪಾಡಿಬಿಟ್ಟೆ ಅವಳನ್ನ! ಅವಳ ಪರವಾಗಿ ನಿಂತವನು ನೀನೊಬ್ಬನೇ! ಪಾಪ, ದಿಕ್ಕಿಲ್ಲದವಳು. ದೇವರೇ ನಿನ್ನ ಕಳಿಸಿದಾನೆ! ನನ್ನಪ್ಪಾ!’

ಕ್ಯಾತರೀನ ತಾನೇನು ಮಾಡುತ್ತಿದ್ದೇನೆ ಅನ್ನುವ ಅರಿವೇ ಇಲ್ಲದೆ ಅವನ ಮುಂದೆ ಮೊಳಕಾಲೂರಿ ಪಾದ ಮುಟ್ಟಿದಳು.

‘ಹುಚ್ಚು, ಹುಚ್ಚು ಹಿಡಿದಿದೆ, ಬಾಯಿಗೆ ಬಂದಿದ್ದು ಹೇಳತಾ ಇದೀಯ,’ ಪೀಟರ್ ಪೆಟ್ರೊವಿಚ್ ಆಕ್ರೋಶದಿಂದ ಕೂಗಾಡಿದ. ‘ಮರೆತೆ, ನೆನಪು ಮಾಡಿಕೊಂಡೆ, ಮರೆತೆ, ನೆನಪು ಮಾಡಿಕೊಂಡೆ—ಏನಿದೆಲ್ಲ ಹುಚ್ಚುತನ? ನಾನು ನೋಟನ್ನ ಬೇಕು ಅಂತಲೇ ಅವಳ ಜೇಬಿಗೆ ಹಾಕಿದೆನಾ? ಯಾಕೆ? ಯಾವ ಉದ್ದೇಶಕ್ಕೆ? ಈ ಹೆಂಗಸಿಗೂ ನನಗೂ ಏನು ಸಂಬಂಧ ಇದೆ…’

‘ಯಾಕೆ? ಅದು ನನಗೆ ಅರ್ಥ ಆಗಿಲ್ಲ. ನಾನು ಹೇಳಿದ್ದು ಮಾತ್ರ ಸತ್ಯ, ವಾಸ್ತವ ಸಂಗತಿ. ಇದುವರೆಗೂ ನಿನ್ನ ಬಗ್ಗೆ ತಪ್ಪು ತಿಳಿದಿದ್ದೆ. ನೋಡಿದರೆ ಅಸಹ್ಯ ಆಗತ್ತೆ ನಿನ್ನ. ಕ್ರಿಮಿನಲ್ ನೀನು. ನಿನ್ನನ್ನ ಬಾಯಿ ತುಂಬ ಹೊಗಳಿ ನಿನ್ನ ಕೈ ಕುಲುಕುತ್ತಿರುವಾಗ ಆ ಕ್ಷಣದಲ್ಲಿ ನನ್ನ ತಲೆಗೊಂದು ಪ್ರಶ್ನೆ ಬಂದಿತ್ತು. ಅವಳ ಜೇಬಿಗೆ ನೋಟನ್ನು ಯಾಕೆ ಗುಟ್ಟಾಗಿ ಹಾಕಿದೆ? ಯಾಕೆ ಈ ಗುಟ್ಟು? ನನಗೆ ಗೊತ್ತಾಗಬಾರದು ಅಂತಲೋ? ಯಾಕೆ ಅಂದರೆ ದಾನ ಧರ್ಮ ಇಂಥವುಗಳಿಂದ ಏನೂ ಆಗಲ್ಲ ಅನ್ನುವ ನನ್ನ ಸಿದ್ಧಾಂತಕ್ಕೆ ಹೊಂದುವುದಿಲ್ಲ, ನಾನು ಒಪ್ಪುವುದಿಲ್ಲ ಅಂತ ಗುಟ್ಟಾಗಿ ದುಡ್ಡು ಕೊಟ್ಟೆಯಾ? ಅಷ್ಟು ಹಣ ನನ್ನ ಕಣ್ಣೆದುರು ಕೊಡುವುದಕ್ಕೆ ನಾಚಿಕೆಪಟ್ಟುಕೊಂಡೆಯಾ? ಅಥವಾ ಅವಳು ಜೇಬಿಗೆ ಕೈ ಇಟ್ಟಾಗ ನೂರು ರೂಬಲ್ ಸಿಕ್ಕಿ ಆಶ್ಚರ್ಯಪಡಲಿ ಅಂತಲಾ? (ಕೆಲವು ದಾನಿಗಳು ಹೀಗೆ ಮಾಡಿ ಪ್ರಚಾರ ಪಡೆಯುತ್ತಾರೆ, ನನಗೆ ಗೊತ್ತು.) ಆಮೇಲೆ ಅನ್ನಿಸಿತು, ನೀನು ಅವಳನ್ನ ಪರೀಕ್ಷೆ ಮಾಡುವುದಕ್ಕೆ ಹೀಗೆ ಮಾಡಿದೆಯಾ? ಅವಳಿಗೆ ನೋಟು ಸಿಕ್ಕಾಗ ವಾಪಸ್ಸು ಬಂದು ನಿನಗೆ ಥ್ಯಾಂಕ್ಸ್ ಹೇಳುತ್ತಾಳೆ ಅಂತಲಾ? ಅಥವಾ ಎಡಗೈ ಕೊಟ್ಟದ್ದೋ ಬಲಗೈ ಕೊಟ್ಟದ್ದೋ ಇನ್ನೊಂದು ಕೈಗೆ ಗೊತ್ತಾಗಬಾರದು ಅಂತೇನೋ ಹೇಳತಾರಲ್ಲ, ಹಾಗೆ ಅವಳು ಕೃತ್ಜಜ್ಞತೆ ಹೇಳಿ ಇತ್ಯಾದಿ ಎಲ್ಲ ಬೇಡ ಅಂದುಕೊಂಡೆಯಾ?… ಹೀಗೆ ಏನೇನೋ ಯೋಚನೆ ಬಂದವು. ಆಮೇಲೆ ಯೋಚನೆ ಮಾಡಣ ಅಂತ ಸುಮ್ಮನಾದೆ. ಆದರೂ ನೀನು ಮಾಡಿದ್ದು ನನಗೆ ಗೊತ್ತಾಗಿದೆ ಅಂತ ಹೇಳಬೇಕು ಅನಿಸ್ತು. ಅಲ್ಲದೆ ಸೋನ್ಯಾಗೆ ಜೇಬಿನಲ್ಲಿ ದುಡ್ಡು ಇದೆ ಅನ್ನುವುದು ಗೊತ್ತಾಗುವುದಕ್ಕೆ ಮೊದಲೇ ಅದು ಕಳೆದು ಹೋಗಬಹುದು ಅನ್ನಿಸಿ ಅವಳಿಗೂ ಹೇಳಬೇಕು ಅನ್ನಿಸಿ ಇಲ್ಲಿಗೆ ಬಂದೆ. ಅವಳನ್ನ ಪಕ್ಕಕ್ಕೆ ಕರೆದು ನಿನ್ನ ಜೇಬಿನಲ್ಲಿ ನೂರು ರೂಬಲ್ ಇದೆ ಅಂತ ಹೇಳಬೇಕು ಅಂದುಕೊಂಡೆ. ಇಲ್ಲಿಗೆ ಬರುವುದಕ್ಕೆ ಮೊದಲು ಕೋಬ್ಯಲ್ಯಾವತ್ನಿಕೋವ್ ಹೆಂಗಸರನ್ನು ಕಂಡು ಜನರಲ್ ಕನ್‌ಕ್ಲೂಶನ್ ಟು ದಿ ಪಾಸಿಟಿವ್ ಮೆಥಡ್ ಪುಸ್ತಕ ಕೊಟ್ಟು ಪೈಡೆರಿ ಬರೆದ ಲೇಖನದ ವಿಚಾರ, ಜೊತೆಗೆ ವ್ಯಾಗ್ನರ್ ಕೂಡ ಅದೇ ವಿಚಾರ ಹೇಳತಾನೆ, ಅದನ್ನೆಲ್ಲ ಹೇಳಣ ಅಂತ ಹೋಗಿದ್ದೆ. ಇಲ್ಲಿಗೆ ಬಂದಾಗ ಈ ನಾಟಕ ಕಣ್ಣಿಗೆ ಬಿತ್ತು. ನೀನು ಅವಳ ಜೇಬಿಗೆ ನೂರು ರೂಬಲ್ ನೋಟು ಹಾಕುವುದನ್ನ ನೋಡದೆ ಇದ್ದಿದ್ದರೆ ಇದೆಲ್ಲ ವಿಚಾರ, ಇದೆಲ್ಲ ವಾದಗಳು ನನ್ನ ತಲೆಗೆ ಹೇಗೆ ಬರುತ್ತಿದ್ದವು?’

ಕ್ಯಾತರೀನ ತಟ್ಟನೆ ಚೀರಿದಳು. ಅವಳಿಗೀಗ ಎಚ್ಚರ ಮೂಡಿತ್ತು. ತನ್ನಿಂದ ತಾನೇ ಬಿಡಿಸಿಕೊಂಡವಳ ಹಾಗೆ ಪೀಟರ್ ಪೆಟ್ರೊವಿಚ್‌ನ ಮೇಲೆ ಏರಿ ಹೋದಳು. ‘ಏನು! ಅವಳು ಕದ್ದಳು ಅನ್ನತೀಯಾ? ಸೋನ್ಯಾ ಕದ್ದಳಾ? ನೀವೆಲ್ಲ ರಾಸ್ಕಲ್‌ಗಳು!’ 

ಸೆಮ್ಯೊನೊವಿಚ್ ಮಾತು ಮುಗಿಸಿದಾಗ ತೀರ ದಣಿದಿದ್ದ, ಮುಖವೆಲ್ಲ ಬೆವೆತಿತ್ತು. ರಶಿಯನ್ ಭಾಷೆಯಲ್ಲಿ (ಅವನಿಗೆ ಬರುತ್ತಿದ್ದದ್ದು ಅದೊಂದೇ ಭಾಷೆಯಾದರೂ) ಮನಸಿನಲ್ಲಿರುವುದನ್ನು ಸರಿಯಾಗಿ ಹೇಳುವುದಕ್ಕೆ ಕಷ್ಟವಾಗುತ್ತಿತ್ತು, ದಣಿದುಹೋಗುತ್ತಿದ್ದ, ಮೊದಲಿದ್ದುದಕ್ಕಿಂತ ಸೊರಗಿದ ಹಾಗೆ ಕಾಣುತ್ತಿದ್ದ. ಆದರೂ ಅವನ ಮಾತಿನಲ್ಲಿದ್ದ ವಿಶ್ವಾಸ, ತೀವ್ರವಾದ ಭಾವಗಳ ಕಾರಣದಿಂದ ಎಲ್ಲರೂ ಅವನನ್ನು ನಂಬಿದಂತೆ ತೋರುತ್ತಿತ್ತು. ಕೆಲಸ ಕೆಡುತ್ತಿದೆ ಅನಿಸಿತು ಪೀಟರ್ ಪೆಟ್ರೊವಿಚ್‌ಗೆ.

‘ನಿನ್ನ ತಲೆಗೆ ಏನೇನೋ ಪೆದ್ದು ಪ್ರಶ್ನೆ ಬಂದರೆ ನಾನೇನು ಮಾಡಲಿ? ಅವೆಲ್ಲ ಪುರಾವೆ ಆಗಲ್ಲ! ನಿನ್ನ ಕನಸಿನಲ್ಲಿ ಹೀಗೆಲ್ಲ ಬಡಬಡ ಮಾತಾಡಿರಬಹುದು, ಅಷ್ಟೇ. ನೀನು ಸುಳ್ಳು ಹೇಳತಾ ಇದೀಯ, ನನ್ನ ಹೆಸರಿಗೆ ಮಸಿ ಬಳೀತ ಇದೀಯ! ನಿನಗೆ ನನ್ನ ಮೇಲೆ ಎಂಥಾದ್ದೋ ಸಿಟ್ಟಿದೆ. ನಾನು ನಿನ್ನ ಮುಕ್ತ ಚಿಂತನೆ, ದೇವರಿಲ್ಲದ ಸಮಾಜದ ಚಿಂತನೆ ಇಂಥವನ್ನೆಲ್ಲ ಒಪ್ಪಿಕೊಳ್ಳಲಿಲ್ಲ ಅಂತ ಸಿಟ್ಟು. ಅಲ್ಲವಾ?’

ಹೀಗೆ ಹೇಳಿ ನುಣುಚಿಕೊಳ್ಳುವ ಪ್ರಯತ್ನ ವಿಫಲವಾಯಿತು. ಬದಲಾಗಿ ಸುತ್ತಲೂ ಇದ್ದವರು ಗೊಣಗಾಡುವುದಕ್ಕೆ ಶುರು ಮಾಡಿದರು.

‘ಈಗ ಆ ದಾರಿ ಹಿಡಿದೆಯಾ! ಸುಳ್ಳು! ಪೋಲೀಸರನ್ನ ಕರೆಸು, ನಾನು ಪ್ರಮಾಣ ಮಾಡಿ ಸಾಕ್ಷಿ ಹೇಳತೇನೆ! ಇಂಥ ಕೆಟ್ಟ ಕೆಲಸ ಯಾಕೆ ಮಾಡಿದೆ, ಅದು ಮಾತ್ರ ಅರ್ಥ ಆಗಲಿಲ್ಲ. ದುಷ್ಟ ಕ್ರಿಮಿ ನೀನು!’

‘ಯಾಕೆ ಹೀಗೆ ಮಾಡಿದ ಅಂತ ನಾನು ಹೇಳತೇನೆ, ಅಗತ್ಯವಾದರೆ ನಾನೂ ಪ್ರಮಾಣ ಮಾಡಿ ಸಾಕ್ಷಿ ಹೇಳತೇನೆ!’ ರಾಸ್ಕೋಲ್ನಿಕೋವ್ ಕೊನೆಗೂ ಮುಂದೆ ಬರುತ್ತ ದೃಢವಾದ ಧ್ವನಿಯಲ್ಲಿ ಹೇಳಿದ.

ದೃಢವಾಗಿದ್ದ, ಶಾಂತವಾಗಿದ್ದ. ಅವನಿಗೆ ಎಲ್ಲಾ ಗೊತ್ತಿದೆ ಎಂದು ಒಂದೇ ನೋಟಕ್ಕೆ ಜನಕ್ಕೆ ತಿಳಿಯಿತು. ನಾಟಕದ ಮುಕ್ತಾಯ ಹತ್ತಿರದಲ್ಲಿದೆ ಅನ್ನಿಸಿತು.

‘ನನಗೆ ಎಲ್ಲಾ ಸ್ಪಷ್ಟವಾಗಿ ತಿಳಿಯಿತು,’ ರಾಸ್ಕೋಲ್ನಿಕೋವ್ ನೇರವಾಗಿ ಸೆಮ್ಯೊನೊವಿಚ್‌ಗೆ ಹೇಳಿದ. ‘ಈ ನಾಟಕ ಶುರುವಾದಾಗಲೇ ಇದರಲ್ಲಿ ಏನೋ ಮೋಸ ಇದೆ ಅನ್ನಿಸಿತು. ನನಗೆ ಮಾತ್ರ ಗೊತ್ತಿರುವ ಕೆಲವು ಸಂಗತಿಗಳ ಕಾರಣದಿಂದ, ಹಾಗನ್ನಿಸಿತು. ಆ ಸಂಗತಿ ಏನೆಂದು ಸದ್ಯದಲ್ಲೇ ಎಲ್ಲರಿಗೂ ಹೇಳತೇನೆ. ಈ ನಾಟಕದ ತಿರುಳು ಅದೇನೇ! ಆಂದ್ರೆ ಸೆಮ್ಯೊನೊವಿಚ್, ನಿನ್ನ ಅಮೂಲ್ಯವಾದ ಪುರಾವೆಯಿಂದ ನನಗೆ ಕೊನೆಗೂ ಎಲ್ಲಾ ಸ್ಪಷ್ಟವಾಗಿ ಗೊತ್ತಾಯಿತು. ಎಲ್ಲರೂ ದಯವಿಟ್ಟು ಹುಷಾರಾಗಿ ಕೇಳಿಸಿಕೊಳ್ಳಿ. ಈ ಸಭ್ಯಸ್ಥ (ಪೀಟರ್ ಪೆಟ್ರೋವಿಚ್‌ನನ್ನು ತೋರಿಸುತ್ತ ಹೇಳಿದ) ಇತ್ತೀಚೆಗೆ ಒಬ್ಬ ಹುಡುಗಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ. ಆ ಹುಡುಗಿ ನನ್ನ ತಂಗಿ, ಅವದೋತ್ಯ ರೊಮನೋವ್ನಾ ರಾಸ್ಕೋಲ್ನಿಕೋವ್. ಎರಡು ದಿನದ ಹಿಂದೆ ಪೀಟರ್ಸ್‌ಬರ್ಗ್‌ಗೆ ಬಂದ. ನನ್ನ ಭೇಟಿಮಾಡಿದ. ನಿನ್ನೆ ನಮ್ಮ ಮೊದಲ ಭೇಟಿಯಲ್ಲೇ ಜಗಳ ಆಡಿದ. ಅವನನ್ನ ಮನೆಯಿಂದಾಚೆಗೆ ಕಳಿಸಿದೆ. ಇದು ನಡೆದದ್ದಕ್ಕೆ ಇಬ್ಬರು ಸಾಕ್ಷಿಗಳಿದ್ದಾರೆ. ಈ ಮನುಷ್ಯ ಸಿಕ್ಕಾಪಟ್ಟೆ ಸಿಟ್ಟುಮಾಡಿಕೊಂಡ. ಅವನು ಈ ಬಿಲ್ಡಿಂಗಿನಲ್ಲಿ ನಿನ್ನ ರೂಮಿನಲ್ಲಿದಾನೆ ಅನ್ನುವುದು ಮೊನ್ನೆಯವರೆಗೂ ನನಗೆ ಗೊತ್ತಿರಲಿಲ್ಲ ಸೆಮ್ಯೋನೊವಿಚ್. ನಾವು ಜಗಳ ಆಡಿದ ದಿನವೇ, ಅಂದರೆ ಮೊನ್ನೆ, ನನ್ನ ಗೆಳೆಯ ದಿವಂಗತ ಮಾರ್ಮೆಲಡೋವ್‌ನ ಹೆಂಡತಿ ಕ್ಯಾತರೀನ ಇವಾನೋವ್ನಾ ಅವರಿಗೆ ಅಂತ್ಯ ಸಂಸ್ಕಾರದ ಖರ್ಚಿಗೆಂದು ನಾನು ಸ್ವಲ್ಪ ದುಡ್ಡು ಕೊಟ್ಟಿದ್ದಕ್ಕೆ ಅವನೂ ಸಾಕ್ಷಿಯಾಗಿದ್ದ. ತಕ್ಷಣವೇ ನಮ್ಮ ತಾಯಿಗೆ ಕಾಗದ ಬರೆದ. ಅದರಲ್ಲಿ ನಾನು ನನ್ನ ಹತ್ತಿರ ಇದ್ದ ಎಲ್ಲಾ ದುಡ್ಡನ್ನೂ ಕ್ಯಾತರೀನಾ ಇವಾನೋವ್ನಾಗೆ ಅಲ್ಲ, ಸೋನ್ಯಾ ಸೆಮ್ಯೊನೋವ್ನಾ ಅವರಿಗೆ ಕೊಟ್ಟಿದ್ದೇನೆ ಅಂತ ಬರೆದದ್ದೇ ಅಲ್ಲದೆ ಸೋನ್ಯಾ ಬಗ್ಗೆ, ಅವರ ಸ್ವಭಾವದ ಬಗ್ಗೆ ಕೆಟ್ಟ ಮಾತು ಬರೆದಿದ್ದ. ದಯವಿಟ್ಟು ಅರ್ಥಮಾಡಿಕೊಳ್ಳಿ. ನಮ್ಮ ತಾಯಿ, ತಂಗಿಯರಿಗೂ ನನಗೂ ಜಗಳ ಮನಸ್ತಾಪ ತಂದಿಡುವುದು ಇವನ ಉದ್ದೇಶ. ನನಗೆ ಸಹಾಯವಾಗಲೆಂದು ಅವರು ಕೊಟ್ಟಿದ್ದ ದುಡ್ಡನ್ನೆಲ್ಲ ದುಂದುಮಾಡುತ್ತಿದ್ದೇನೆ ಅದೂ ಕೆಟ್ಟ ಚಪಲಗಳಿಗೆ ಎಂದು ಅವರಿಗೆ ಅನಿಸಬೇಕು, ಹಾಗೆ ಬರೆದಿದ್ದ. ನಿನ್ನೆ ಸಾಯಂಕಾಲ, ನಮ್ಮ ತಾಯಿ, ತಂಗಿಯರ ಎದುರಿಗೇ, ಇವನನ್ನೂ ಕೂರಿಸಿಕೊಂಡು, ಸತ್ಯ ಏನು ಅನ್ನುವುದು ಹೇಳಿದೆ, ದುಡ್ಡು ಕೊಟ್ಟದ್ದು ಅಂತ್ಯ ಸಂಸ್ಕಾರದ ಖರ್ಚಿಗೆ, ಅದೂ ಕ್ಯಾತರೀನ ಇವಾನೋವ್ನಾ ಅವರಿಗೇ ಹೊರತು ಸೋನ್ಯಾ ಅವರಿಗಲ್ಲ ಎಂದು ಮನದಟ್ಟು ಮಾಡಿದೆ. ಅಲ್ಲದೆ ಸೋನ್ಯಾ ಅವರನ್ನು ನಾನು ನೋಡಿದ್ದು ನಿನ್ನೆ ಮಾತ್ರ, ಅವರ ಪರಿಚಯವೇ ನನಗಿರಲಿಲ್ಲ ಅವರನ್ನು ಕಂಡೂ ಇರಲಿಲ್ಲ ಅಂತಲೂ ಹೇಳಿದೆ. ಪೀಟರ್ ಪೆಟ್ರೊವಿಚ್‌ಗೆ ಎಷ್ಟೇ ಒಳ್ಳೆಯ ಗುಣಗಳಿರಬಹುದು, ಆದರೂ ಅವನ ಕೆಟ್ಟ ಮಾತುಗಳಿಗೆ ಗುರಿಯಾಗಿರುವ ಸೋನ್ಯಾ ಇದ್ದಾರಲ್ಲಾ ಅವರ ಕಿರುಬೆರಳಿಗೂ ಸಮನಲ್ಲ ಅಂತಲೂ ಅಂದೆ. ‘ಹಾಗಾದರೆ ಸೋನ್ಯಾನ ನಿನ್ನ ತಂಗಿಯ ಪಕ್ಕ ಸರಿಸಮವಾಗಿ ಕೂರಿಸುತ್ತೀಯಾ?’ ಅಂತ ಅವನು ಕೇಳಿದ ಪ್ರಶ್ನೆಗೆ, ‘ನಾನು ನಿನ್ನೆಯೇ ಆ ಕೆಲಸ ಮಾಡಿದ್ದೇನೆ,’ ಅಂದೆ. ಅವನ ಚಾಡಿ ಮಾತಿನಿಂದ ನನಗೂ ನಮ್ಮ ಮನೆಯವರಿಗೂ ಮನಸ್ತಾಪ ಹುಟ್ಟಲಿಲ್ಲವೆಂದು ಅವನಿಗೆ ಕೋಪ ಬಂತು. ಕ್ಷಮೆಯೇ ಇರದಂಥ ಕೆಟ್ಟ ಮಾತುಗಳನ್ನು ಆಡಿದ. ಕೊನೆಗೆ ನನ್ನ ತಂಗಿಯ ಜೊತೆಗೆ ಆಗಿದ್ದ ಅವನ ನಿಶ್ಚಿತಾರ್ಥ ಮುರಿದು ಬಿತ್ತು. ಅವನನ್ನ ಮನೆಯಿಂದ ಹೊರದಬ್ಬಿದೆವು. ಇದೆಲ್ಲ ನಡೆದದ್ದು ನಿನ್ನೆ ಸಾಯಂಕಾಲ. ಈಗ ಸ್ವಲ್ಪ ಗಮನವಿಟ್ಟು ಕೇಳಿ. ಸೋನ್ಯಾ ಕಳ್ಳಿ ಅಂತ ಈಗ ಇವನು ಸಾಧಿಸುವುದಕ್ಕೆ ಸಾಧ್ಯವಾದರೆ ಆಗ, ಮೊದಲನೆಯದಾಗಿ, ತನಗಿದ್ದ ಅನುಮಾನಗಳು ಸರಿ ಅಂತ ನನ್ನ ತಾಯಿಯನ್ನೂ ತಂಗಿಯನ್ನೂ ಒಪ್ಪಿಸುವುದಕ್ಕೆ ಸಾಧ್ಯವಾಗತ್ತೆ. ನನ್ನ ತಂಗಿಯನ್ನೂ ಸೋನ್ಯಾ ಅವರನ್ನೂ ಸರಿಸಮವಾಗಿ ಕಂಡದ್ದಕ್ಕೆ ಅವನು ಸಿಟ್ಟು ಮಾಡಿಕೊಂಡದ್ದು ಸರಿ ಅಂತಾಗತ್ತೆ. ನನ್ನ ಮೇಲೆ ಆಪಾದನೆಗಳ ದಾಳಿ ಮಾಡುತ್ತ ಅವನು ನನ್ನ ತಂಗಿಯ ಅಂದರೆ ಅವನ ಭಾವೀ ಪತ್ನಿಯ ಗೌರವ ಕಾಪಾಡಲು ಪ್ರಯತ್ನಪಡುತ್ತಿದ್ದ ಅಂತಾಗತ್ತೆ. ಅಂದರೆ ನನಗೂ ಮನೆಯ ಜನರಿಗೂ ಮಸಸ್ತಾಪ ಹುಟ್ಟಿಸಿ ಜಗಳ ಎಬ್ಬಿಸಲು ಅವಕಾಶ ಸಿಗುತ್ತದೆ, ನಮ್ಮಮ್ಮನ, ತಂಗಿಯ ವಿಶ್ವಾಸ ಮತ್ತೆ ಸಂಪಾದಿಸುವುದಕ್ಕೆ ಆಗುತ್ತದೆ. ಸೋನ್ಯಾ ಅವರ ಗೌರವ, ಸಂತೋಷಗಳು ನನ್ನ ಪಾಲಿಗೆ ಮುಖ್ಯ ಅಂತ ಕಲ್ಪನೆ ಮಾಡಿಕೊಂಡಿದಾನೆ. ಅದಕ್ಕೇ ಹೀಗೆ ಲೆಕ್ಕ ಹಾಕಿ ಆಟ ಕಟ್ಟಿದಾನೆ! ಹೀಗಲ್ಲದೆ ಇವನ ವರ್ತನೆಗೆ ಬೇರೆ ಕಾರಣವೇ ಇಲ್ಲ!’

ಅವನ ಮಾತನ್ನು ಗಮನವಿಟ್ಟು ಕೇಳುತ್ತಿದ್ದ ಜನ ಮಧ್ಯೆ ಮಧ್ಯೆ ಎತ್ತುತ್ತಿದ್ದ ಉದ್ಗಾರಗಳ ನಡುವೆ ರಾಸ್ಕೋಲ್ನಿಕೋವ್ ಹೀಗೆ ಮಾತು ಮುಗಿಸಿದ. ಮೊನಚಾಗಿ, ಸ್ಪಷ್ಟವಾಗಿ, ಖಚಿತವಾಗಿ, ಗೊಂದಲವಿಲ್ಲದೆ ದೃಢವಾಗಿ ಮಾತಾಡಿದ. ಅವನ ಮಾತಿನ ದನಿ, ದನಿಯಲ್ಲಿದ್ದ ವಿಶ್ವಾಸ ಎಲ್ಲರ ಮೇಲೂ ಅಸಾಮಾನ್ಯ ಪರಿಣಾಮ ಬೀರಿತ್ತು.

‘ನಿಜ, ಈ ಮಾತು ನಿಜ!’ ಸೆಮ್ಯೊನೊವಿಚ್ ಸಂತೋಷದ ದನಿಯಲ್ಲಿ ಹೇಳಿದ. ‘ಇದು ಖಂಡಿತ ನಿಜ. ಯಾಕೆ ಅಂದರೆ ಸೋನ್ಯಾ ನಮ್ಮ ರೂಮಿಗೆ ಬಂದ ತಕ್ಷಣ ನೀನು, ರಾಸ್ಕೋಲ್ನಿಕೋವ್, ಬಂದಿದ್ದೀಯಾ ಅಂತ ನನ್ನ ಕಿಟಕಿಯ ಹತ್ತಿರ ಕರೆದು ಪಿಸು ಮಾತಿನಲ್ಲಿ ಕೇಳಿದ. ಅಂದರೆ ನೀನು ಬಂದಿದ್ದೀಯ ಅನ್ನುವುದನ್ನು ಅವನು ಗ್ಯಾರಂಟಿ ಮಾಡಿಕೊಳ್ಳಬೇಕಾಗಿತ್ತು! ನಿಜ, ನೀನು ಹೇಳಿದ್ದು ನಿಜ!’

ಪೀಟರ್ ಪೆಟ್ರೊವಿಚ್ ಸುಮ್ಮನಿದ್ದ. ತಿರಸ್ಕಾರದ ನಗು ನಕ್ಕ. ಮುಖ ಮಾತ್ರ ಬಣ್ಣಗೆಟ್ಟಿತ್ತು. ಹೇಗೆ ಇದರಿಂದ ನುಣುಚಿಕೊಳ್ಳಲಿ ಎಂದು ಯೋಚನೆ ಮಾಡುತ್ತಿದ್ದ ಹಾಗಿತ್ತು. ಎಲ್ಲವನ್ನೂ ಹಾಗೇ ಬಿಟ್ಟು ಸುಮ್ಮನೆ ಹೊರಟು ಹೋಗುವುದಕ್ಕಾಗಿದ್ದಿದ್ದರೆ ಬಹಳ ಸಂತೋಷವಾಗುತ್ತಿತ್ತು. ಈ ಗಳಿಗೆಯಲ್ಲಿ ಹಾಗೆ ಮಾಡುವುದು ಅಸಾಧ್ಯವಾಗಿತ್ತು. ಹಾಗೆ ಅವನು ಹೋಗಿದ್ದಿದ್ದರೆ ಅವನ ಮೇಲೆ ಬಂದ ಆಪಾದನೆಗಳೆಲ್ಲವೂ ನಿಜ, ಅವನು ಸೋನ್ಯಾಳನ್ನು ಸಿಕ್ಕಿಸಿ ಹಾಕುವುದಕ್ಕೆ ಪ್ರಯತ್ನಪಟ್ಟಿದ್ದ ಅನ್ನುವುದು ಸಾಬೀತಾಗುತ್ತಿತ್ತು. ಅಲ್ಲದೆ ತಕ್ಕಮಟ್ಟಿಗೆ ಕುಡಿದಿದ್ದ ಸಾರ್ವಜನಿಕರು ಬಹಳ ಉದ್ರೇಕಗೊಂಡಿದ್ದರು. ಸಪ್ಲೈ ಆಫೀಸರನಿಗೆ ಏನೂ ಅರ್ಥವಾಗಿರದಿದ್ದರೂ ಮಿಕ್ಕ ಎಲ್ಲರಿಗಿಂತ ಜೋರಾಗಿ ಕೂಗಾಡುತ್ತಿದ್ದ. ಪೀಟರ್ ಪೆಟ್ರೊವಿಚ್‌ಗೆ ಪಾಠ ಕಲಿಸಬೇಕು ಅನ್ನುತ್ತಿದ್ದ. ಕುಡಿಯದೆ ಇದ್ದವರೂ ಅಲ್ಲಿದ್ದರು. ಬೇರೆ ಮನೆಗಳ ಜನ ಬಂದು ಬಾಗಿಲ ಹತ್ತಿರ ಸೇರಿದ್ದರು. ಪೋಲೆಂಡಿನ ಮೂವರು ಗಿಡ್ಡರು ತಮ್ಮ ಭಾಷೆಯಲ್ಲಿ ‘ಇವನು ದುಷ್ಟ,’ ಎಂದು ಚೀರುತ್ತಿದ್ದರು, ತಮ್ಮ ಭಾಷೆಯಲ್ಲಿ ಬೈಯುತ್ತಿದ್ದರು. ಸೋನ್ಯಾ ಗಮನವಿಟ್ಟು ಕೇಳುತ್ತ ದಣಿದಿದ್ದಳು. ಆಗ ತಾನೇ ಮೂರ್ಛೆಯಿಂದ ಎದ್ದ ಹಾಗೆ, ಏನೂ ಅರ್ಥವಾಗದಿದ್ದವಳ ಹಾಗೆ ಕಾಣುತ್ತಿದ್ದಳು. ರಾಸ್ಕೋಲ್ನಿಕೋವ್ ಮಾತ್ರವೇ ನನ್ನ ರಕ್ಷಕ ಅನ್ನುವ ಹಾಗೆ ಅವಳ ದೃಷ್ಟಿ ಅವನ ಮೇಲೇ ನೆಟ್ಟಿತ್ತು.

ಕ್ಯಾತರೀನ ಬಹಳ ಕಷ್ಟಪಟ್ಟು ಗೊರಗೊರ ಉಸಿರಾಡುತ್ತ ತ್ರಾಣ ಕಳೆದುಕೊಂಡಿದ್ದಳು. ಏನೇನೂ ಅರ್ಥವಾಗದೆ ಆ ಎಂದು ಬಾಯಿಬಿಟ್ಟು ನಿಂತಿದ್ದ ಅಮಾಲಿಯ ಅತ್ಯಂತ ಪೆಕರಳ ಹಾಗೆ ಕಾಣುತ್ತಿದ್ದಳು. ಪೀಟರ್ ಪೆಟ್ರೊವಿಚ್ ಅದು ಹೇಗೋ ಸಿಕ್ಕಿಬಿದ್ದ ಅಂತ ಮಾತ್ರ ಅವಳಿಗೆ ಗೊತ್ತಾಗಿತ್ತು. ರಾಸ್ಕೋಲ್ನಿಕೋವ್ ಮತ್ತೆ ಮಾತಾಡಲು ಶುರುಮಾಡಿದ. ಆದರೆ ಎಲ್ಲರೂ ಕೂಗಾಡುತ್ತ ಪೀಟರ್ ಪೆಟ್ರೊವಿಚ್‌ನನ್ನು ಮುತ್ತಿಕೊಂಡಿದ್ದರು. ಅವನಿಗೆ ಶಾಪ ಹಾಕುತ್ತ, ಬೈಯುತ್ತ, ಹೆದರಿಸುತ್ತಿದ್ದರು. ಪೀಟರ್ ಪೆಟ್ರೊವಿಚ್ ಹೇಡಿಯ ಹಾಗೆ ಓಡಿ ಹೋಗಲಿಲ್ಲ. ಸೋನ್ಯಾಳ ಮೇಲೆ ಹೊರಿಸಿದ ಆಪಾದನೆ ಪೂರಾ ಬಿದ್ದು ಹೋಗಿ ನೆಲ ಕಚ್ಚಿತು ಎಂದು ಅರ್ಥವಾಗಿತ್ತು. ಹಾಗಾಗಿ ಉದ್ಧಟತನ ತೋರಿಸಿದ.

‘ಕ್ಷಮಿಸಿ, ಕ್ಷಮಿಸಿ. ದಾರಿ ಬಿಡಿ. ಹೀಗೆ ಮೇಲೆ ಬೀಳಬೇಡಿ!’ ಅನ್ನುತ್ತ ಜನರ ಮಧ್ಯೆ ದಾರಿ ಮಾಡಿಕೊಂಡು ಸಾಗಿದ. ‘ಹೀಗೆಲ್ಲ ಧಮಕಿ ಹಾಕಬಾರದು, ಆಮೇಲೆ ನೀವೇ ಉತ್ತರ ಹೇಳಬೇಕಾಗತ್ತೆ. ಹೊಡೆಯುವುದು ಮೈ ಮೇಲೆ ಬೀಳುವುದು ಇವೆಲ್ಲ ಕ್ರಿಮಿನಲ್ ಕೇಸು ಆಗತ್ತೆ. ಕಳ್ಳಿ ಯಾರು ಅಂತ ಗೊತ್ತಾಗಿದೆ, ನಾನು ಅವಳನ್ನ ಬಿಡಲ್ಲ. ಕೋರ್ಟು ಕುರುಡಲ್ಲ, ಕುಡಿದೂ ಇರಲ್ಲ. ಇಬ್ಬರು ನಾಸ್ತಿಕರು, ತಂಟೆಕೋರರು, ವಿಚಾರವಾದಿಗಳು ತಮ್ಮ ಸ್ವಂತ ಸೇಡಿನ ಕಾರಣಕ್ಕೆ ನನ್ನಮೇಲೆ ಆಪಾದನೆ ಮಾಡಿದ್ದಾರೆ. ಇದನ್ನ ಮೂರ್ಖರ ಹಾಗೆ ಅವರೇ ಒಪ್ಪಿಕೊಂಡಿದಾರೆ. ಬಿಡಿ, ನಾನು ಹೋಗಬೇಕು!’

‘ತೊಲಗು, ನಿನ್ನ ವಾಸನೆ ಕೂಡ ಇರಬಾರದು ನನ್ನ ರೂಮಿನಲ್ಲಿ. ನಿನ್ನ ನನ್ನ ಸಂಬಂಧ ಮುಗೀತು.! ನಿನ್ನಂಥಾವನಿಗೆ ಥಿಯರಿ, ತತ್ವ ಹೇಳಿಕೊಡುವುದಕ್ಕೆ ಹದಿನೈದು ದಿನ ದಂಡ ಮಾಡಿಕೊಂಡೆ…!’ ಅಂದ ಸೆಮ್ಯೊನೊವಿಚ್.

‘ಇವತ್ತು ಖಾಲಿ ಮಾಡತೇನೆ ಅಂತ ಹೇಳಿದ್ದೆನಲ್ಲಾ. ನನ್ನ ಇಲ್ಲೇ ಇರಿಸಿಕೊಳ್ಳೋದಕ್ಕೆ ಪ್ರಯತ್ನಪಟ್ಟವನು ನೀನೇನೇ ಸೆಮ್ಯೊನೊವಿಚ್. ಹೇಳತೇನೆ ಕೇಳು, ನೀನು ಪೆದ್ದ, ನಿನ್ನ ತಲೆ, ನಿನ್ನ ಕಣ್ಣು ರಿಪೇರಿ ಮಾಡಿಸಿಕೋ. ದಾರಿ ಬಿಡೀ, ದಾರಿ ಬಿಡೀ!’

ಅವನು ದಾರಿ ಮಾಡಿಕೊಂಡು ಹೊರಟ. ಅಂಥವನನ್ನು ಬರೀ ಬೈದು ಬಿಟ್ಟುಬಿಡುವುದಕ್ಕೆ ಸಪ್ಲೈ ಆಫೀಸರನ ಮನಸ್ಸು ಒಪ್ಪಲಿಲ್ಲ. ಮೇಜಿನ ಮೇಲಿದ್ದ ಲೋಟವನ್ನೆತ್ತಿಕೊಂಡು ಪೀಟರ್ ಪೆಟ್ರೊವಿಚ್‌ನ ಮೇಲೆ ಬೀಸಿ ಎಸೆದ. ಎಸೆಯುವಾಗ ಜೋಲಿ ತಪ್ಪಿ ಕೆಳಗೆ ಬಿದ್ದ. ಅವನು ಎಸೆದ ಲೋಟ ಅಮಾಲಿಯಳಿಗೆ ಬಡಿಯಿತು. ಪೀಟರ್ ಪೆಟ್ರೊವಿಚ್ ತನ್ನ ಕೋಣೆಗೆ ಹೋದ. ಇನ್ನರ್ಧ ಗಂಟೆಯಲ್ಲಿ ಸುಳಿವೇ ಇರದ ಹಾಗೆ ಮಾಯವಾದ. ಸಾಧು ಸ್ವಭಾವದವಳಾದ ಸೋನ್ಯಾಗೆ ಯಾರು ಬೇಕಾದರೂ ನನ್ನನ್ನು ನಾಶಮಾಡಬಹುದು, ಯಾರು ಬೇಕಾದರೂ ಸುಲಭವಾಗಿ ನನಗೆ ಅವಮಾನ ಮಾಡಬಹುದು ಅನ್ನುವುದು ಮೊದಲೇ ತಿಳಿದಿತ್ತು. ಹಾಗಿದ್ದರೂ ತಾನು ಜಾಗರೂಕವಾಗಿದ್ದರೆ ಎಲ್ಲರ ಜೊತೆಗೂ ವಿಧೇಯಳಾಗಿ, ವಿನೀತಳಾಗಿ ನಡೆದುಕೊಂಡರೆ ಅನಾಹುತವಾಗದ ಹಾಗೆ ನೋಡಿಕೊಳ್ಳಬಹುದು ಅಂದುಕೊಂಡಿದ್ದಳು. ಹಾಗಂದುಕೊಂಡದ್ದು ಬರಿಯ ಭ್ರಮೆ ಅನ್ನುವುದು ಈಗ ತಿಳಿದು ಸಹಿಸಲಾಗದ ಆಘಾತವಾಗಿತ್ತು.

ಅವಳಿಗೆ ಎಲ್ಲವನ್ನೂ, ಈಗ ಆದ ಅಪಮಾನವನ್ನೂ, ಗೊಣಗದೆ ತಾಳ್ಮೆಯಿಂದ ಸಹಿಸುವ ಶಕ್ತಿಯೇನೋ ಇತ್ತು. ಆದರೆ ಆಘಾತವಾದ ಗಳಿಗೆ ಅವಳ ಅಳವಿಗೆ ಮೀರಿತ್ತು. ಅವಳ ತಪ್ಪಿಲ್ಲ ಎಂದು ಸಾಬೀತಾಗಿ ಅವಳೇ ಗೆದ್ದಿದ್ದರೂ, ಎಲ್ಲವೂ ಸ್ಪಷ್ಟವಾಗಿ ಅರ್ಥವಾದಾಗ ಮೊದಲ ಕ್ಷಣದಲ್ಲಿ ಹುಟ್ಟಿದ ಭಯ ದಿಗ್ಭ್ರಮೆಗಳು ತೊಲಗಿದ್ದರೂ ಅಸಹಾಯಕತೆ, ವೇದನೆಗಳು ಅವಳ ಮನಸನ್ನು ಹಿಂಡಿದ್ದವು. ಹಿಸ್ಟೀರಿಯ ಬಂದಂತಾಗಿ, ಸಹಿಸುವ ಶಕ್ತಿ ಇಲ್ಲ ಅನ್ನಿಸಿ ಅಲ್ಲಿಂದ ಹೊರಟು ತನ್ನ ಮನೆಗೆ ಓಡಿ ಹೋದಳು. ಪೀಟರ್ ಪೆಟ್ರೊವಿಚ್ ಹೊರಟು ಹೋದ ಮರುಕ್ಷಣವೇ ಅವಳೂ ಓಡಿ ಹೋಗಿದ್ದಳು. ಅಮಾಲಿಯ ಇವಾನೋವ್ನಾಳಿಗೆ ಲೋಟ ಬಂದು ಬಡಿದಾಗ ಅಲ್ಲಿದ್ದವರೆಲ್ಲ ನಕ್ಕಾಗ ತಾನು ಹರಕೆಯ ಕುರಿಯಾದೆ ಅನ್ನಿಸಿ ತಾಳಲಾಗದಷ್ಟು ಸಿಟ್ಟು ಬಂದು ಇದಕ್ಕೆಲ್ಲ ಕ್ಯಾತರೀನ ಕಾರಣಳೆಂದು ಹುಚ್ಚಿಯ ಹಾಗೆ ಕೂಗಾಡಿದಳು.

‘ಖಾಲೀ ಮಾಡು ಮನೇನ! ಹೀಗಲೇ! ನಡೀ!ʼ ಅನ್ನುತ್ತ ಕ್ಯಾತರೀನಳ ವಸ್ತುಗಳು ಯಾವುವು ಕೈಗೆ ಸಿಕ್ಕವೋ ಅವನ್ನೆಲ್ಲ ಎತ್ತೆತ್ತಿ ಬಿಸಾಕಿದಳು. ಸತ್ತು ಹೋಗಿದಾಳೆ ಅನಿಸುತ್ತಿದ್ದ, ಆದರೆ ಮೂರ್ಛೆ ಹೋಗಿದ್ದ , ಉಸಿರಾಡಲೂ ತ್ರಾಣವಿಲ್ಲದೆ ಬಿದ್ದುಕೊಂಡಿದ್ದ ಕ್ಯಾತರೀನ ಹಾಸಿಗೆಯಿಂದ ತಟ್ಟನೆದ್ದಳು (ಸುಸ್ತಾಗಿ ಹಾಗೇ ಒರಗಿದ್ದಳು ಅವಳು). ಅಮಾಲಿಯಳ ಮೇಲೇರಿ ಹೋದಳು. ಅದು ಅಸಮಾನರ ಹೋರಾಟ. ಕ್ಯಾತರೀನಳನ್ನು ಹಕ್ಕಿಯ ಗರಿಯೋ ಅನ್ನುವ ಹಾಗೆ ಪಕ್ಕಕ್ಕೆ ದಬ್ಬಿಬಿಟ್ಟಳು ಅಮಾಲಿಯ.

‘ಏನು, ದೇವರ ಮೇಲೆ ಭಯ ಭಕ್ತಿ ಇಲ್ಲದ ಪೋಕರಿ ಬಂದು ಗಲಾಟೆ ಮಾಡಿ ಅವಮಾನ ಮಾಡಿ ಹೋಗಿದ್ದು ಸಾಲದು ಅಂತ ನನ್ನ ಗಂಡನ ಕಾರ್ಯದ ದಿನ, ನಮ್ಮ ಮನೆ ಊಟ ಮಾಡಿ, ಉಪ್ಪಿನ ಋಣ ಕೂಡ ಇಲ್ಲದವಳ ಹಾಗೆ ಬೀದಿಗೆ ದಬ್ಬತಾ ಇದಾಳಲ್ಲಾ! ದಿಕ್ಕಿಲ್ಲದ ಮಕ್ಕಳನ್ನ ಕಟ್ಟಿಕೊಂಡು ಎಲ್ಲಿ ಹೋಗಲೀ?’ ಬಡ ಹೆಂಗಸು ಗೋಳಾಡಿದಳು. ಬಿಕ್ಕಳಿಸಿದಳು, ಏದುಸಿರು ಬಂದು ಸಂಕಟಪಟ್ಟಳು.

‘ದೇವರೇ. ಈ ಲೋಕದಲ್ಲಿ ಸತ್ಯ, ನ್ಯಾಯ ಅನ್ನೋದೇ ಇಲ್ಲವಾ?’ ಚೀರಿದಳು. ಅವಳ ಕಣ್ಣು ಕೆಂಪಾಗಿ ಉರಿಯುತ್ತಿತ್ತು. ಪೋಲೆಚ್ಕಾ, ಮಕ್ಕಳ ಜೊತೆ ಇರು. ನಾನು ಇಗೋ ಈಗ ಬಂದೆ. ಕಾಯತಾ ಇರು ನನಗೆ. ಬೀದಿಯಲ್ಲಿದ್ದರೂ ಪರವಾಗಿಲ್ಲ! ಈ ಲೋಕದಲ್ಲಿ ಸತ್ಯ ಇದೆಯೋ ಇಲ್ಲವೋ ನೋಡೇ ಬಿಡತೀನಿ!’

ಕ್ಯಾತರೀನ ಹಸಿರು ಶಾಲನ್ನು ತಲೆಯ ಮೇಲೆ ಹಾಕಿಕೊಂಡು (ಅದೇ ಶಾಲಿನ ಬಗ್ಗೆ ಮಾರ್ಮೆಲಡೋವ್ ತನ್ನ ಕತೆಯಲ್ಲಿ ಹೇಳಿದ್ದು) ಕುಡುಕ ಜನರ ಮಧ್ಯೆ ಜಾಗ ಮಾಡಿಕೊಳ್ಳುತ್ತ ಕಿರುಚುತ್ತ, ಅಳುತ್ತ ಹೊರಕ್ಕೆ ಓಡಿದಳು. ಎಲ್ಲಾದರೂ ಸರಿ, ಏನಾದರೂ ಸರಿ ನ‍್ಯಾಯವನ್ನು ಆಗಲೇ ಆ ಕ್ಷಣವೇ ಪಡೆಯಲೇಬೇಕು ಅನ್ನುವ ಅಸ್ಪಷ್ಟ ಉದ್ದೇಶ ಅವಳದ್ದು. ಬೆದರಿದ ಪೋಲೆಚ್ಕಾ ಮಕ್ಕಳ ಜೊತೆಯಲ್ಲಿ ಮೂಲೆಯಲ್ಲಿ ಅಡಗಿ ಕೂತಳು, ಅಲ್ಲಿದ್ದ ಪೆಟ್ಟಿಗೆಯ ಮೇಲೆ. ನಡುಗುತ್ತಿದ್ದ ಇಬ್ಬರು ಮಕ್ಕಳನ್ನು ತಬ್ಬಿಕೊಂಡು, ತಾನೂ ನಡುಗುತ್ತ ಅಮ್ಮ ಬರುತ್ತಾಳೆಂದು ಕಾಯುತ್ತ ಕೂತಳು. ಅಮಾಲಿಯ ಚೀರಾಡುತ್ತ, ಗೋಳಾಡುತ್ತ ರೂಮಿನಲ್ಲೆಲ್ಲ ಸುತ್ತಾಡುತ್ತ ಕೈಗೆ ಸಿಕ್ಕಿದ್ದನ್ನೆಲ್ಲ ಆಕ್ರೋಶದಿಂದ ನೆಲಕ್ಕೆ ಎಸೆಯುತ್ತಿದ್ದಳು. ಮಿಕ್ಕ ಬಾಡಿಗೆದಾರರು ಕಾರಣವಾಗಲೀ ತರ್ಕವಾಗಲೀ ಇಲ್ಲದೆ ತಮ್ಮ ತಮ್ಮಲ್ಲೆ ಜಗಳವಾಡುತ್ತಿದ್ದರು. ಇದೀಗ ನಡೆದ ಘಟನೆಯ ಬಗ್ಗೆ ಕೆಲವರು ಬಾಯಿಗೆ ಬಂದದ್ದು ಹೇಳಿದರು, ಕೆಲವರು ಆಣೆ ಹಾಕಿ ಪ್ರಮಾಣ ಮಾಡಿದರು, ಇನ್ನೂ ಕೆಲವರು ಹಾಡು ಹೇಳುವುದಕ್ಕೆ ಶುರು ಮಾಡಿದರು.