ನನ್ನ ಪ್ರಕ್ರಿಯೆಯ ಸ್ವರೂಪ ತುಂಬಾ ಸರಳವಾಗಿದೆ, ಆದರೆ ಕಾವ್ಯ ನಿರ್ಮಿತಿಯ ಒತ್ತಾಯ ಬದಲಾಗುತ್ತದೆ. ಇದು ಸಾಮಾನ್ಯವಾಗಿ ಒಂದು ಸಾಲು ಅಥವಾ ಒಂದು ಕಾವ್ಯಚಿತ್ರದೊಂದಿಗೆ ಪ್ರಾರಂಭವಾಗುತ್ತದೆ. ಇತರ ಸಮಯಗಳಲ್ಲಿ ಖಾಲಿ ಪುಟದ ಸುತ್ತ ಪರಿಭ್ರಮಿಸುತ್ತಾ ಇಡೀ ಒಂದು ದಿನವನ್ನು ಕಳೆಯುವ ಅವಶ್ಯಕತೆಯಿದೆ. ಇದು ಪದಗಳು ಮತ್ತು ಭಾವನೆಗಳನ್ನು ನನ್ನ ಮಿದುಳಿನಲ್ಲಿ ಆವರ್ತನದಲ್ಲಿ ಸುತ್ತುವಂತೆ ಮಾಡುತ್ತದೆ. ಇತರ ಸಮಯಗಳಲ್ಲಿ ವಿಮಾನದ ಟಿಕೆಟ್ ನ ಹಿಂದೆ ಅಥವಾ ರೆಸ್ಟೋರೆಂಟ್ ನಲ್ಲಿರುವಾಗ ಕೈ ಒರೆಸುವ ಕಾಗದದ ಮೇಲೆ ನಾನು ಪದ್ಯದ ತುಣುಕನ್ನು ಬರೆದುಕೊಳ್ಳಬಹುದು. ಕವಿತೆಗಳನ್ನು ರಚಿಸುವ ಪ್ರಕ್ರಿಯೆಯು ನನಗೆ ನಿರುದ್ದೇಶಿತವಾಗಿರುತ್ತದೆ ಹಾಗೂ ಅದೊಂದು ಕನಸು.
ಕವಿ ಅರುಂಧತಿ ಸುಬ್ರಮಣ್ಯಂ ಕುರಿತು ಆರ್.ವಿಜಯರಾಘವನ್ ಲೇಖನ

 

ಅರುಂಧತಿ ಸುಬ್ರಮಣ್ಯಂ ಇಂಗ್ಲಿಷ್ ಭಾಷೆಯಲ್ಲಿ ಬರೆಯುತ್ತಾರೆ. ಅವರ ಹನ್ನೊಂದು ಕಾವ್ಯ ಮತ್ತು ಗದ್ಯ ಕೃತಿಗಳು ಪ್ರಕಟವಾಗಿವೆ. ಅವರ ಕೃತಿಗಳನ್ನು ವ್ಯಾಪಕವಾಗಿ ಭಾಷಾಂತರಿಸಲಾಗಿದೆ. ಅವರ ಕವನ ಸಂಪುಟ, ವೆನ್ ಗಾಡ್ ಈಸ್ ಎ ಟ್ರಾವೆಲರ್ (2014) The Poetry Book Societyಯ ಸೀಸನ್ ಚಾಯ್ಸ್ ಆಗಿದ್ದು, ಟಿ.ಎಸ್. ಎಲಿಯಟ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗಿತ್ತು.

ಅರುಂಧತಿ ಐದು ಕವನ ಸಂಕಲನಗಳ ಲೇಖಕಿ. ತೀರಾ ಇತ್ತೀಚೆಗೆ ಬಂದವು ‘ಲವ್ ವಿಥೌಟ್ ಎ ಸ್ಟೋರಿ (ವೆಸ್ಟ್ ಲ್ಯಾಂಡ್, ನವದೆಹಲಿ, 2019), ವೆನ್ ಗಾಡ್ ಈಸ್ ಎ ಟ್ರಾವೆಲರ್ (ಹಾರ್ಪರ್ ಕಾಲಿನ್ಸ್ ಇಂಡಿಯಾ, ನವದೆಹಲಿ, 2014 ಮತ್ತು ಬ್ಲಡಾಕ್ಸ್ ಬುಕ್ಸ್, ನ್ಯೂಕ್ಯಾಸಲ್, 2014). ಗದ್ಯ ಬರಹಗಾರರಾಗಿ, ಅವರ ಪುಸ್ತಕಗಳಲ್ಲಿ ದಿ ಬುಕ್ ಆಫ್ ಬುದ್ಧ, ಕಾಂಟೆಂಪೊರರಿ ಮಿಸ್ಟಿಕ್ಸ್, ಸದ್ಗುರು: ಮೋರ್ ದ್ಯಾನ್ ಎ ಲೈಫ್ ಮತ್ತು ಇತ್ತೀಚೆಗೆ, ಆದಿಯೋಗಿ: ದಿ ಸೋರ್ಸ್ ಆಫ್ ಯೋಗ (ಸದ್ಗುರು ಜೊತೆ ಸಹ-ಲೇಖಕರು) ಸಂಪಾದಕರಾಗಿ, ಅವರ ಇತ್ತೀಚಿನ ಪುಸ್ತಕವೆಂದರೆ ಭಕ್ತಿ ಕಾವ್ಯದ ಪೆಂಗ್ವಿನ್ ಸಂಕಲನ, ಈಟಿಂಗ್ ಗಾಡ್.
ಇನಾಗ್ಯುರಲ್ ಖುಷ್ವಂತ್ ಸಿಂಗ್ ಪ್ರಶಸ್ತಿ, ಕಾವ್ಯಕ್ಕಾಗಿ ರಾಜಾ ಪ್ರಶಸ್ತಿ, ಸಾಹಿತ್ಯಕ್ಕಾಗಿ ದಿಝೀ ಮಹಿಳಾ ಪ್ರಶಸ್ತಿ, ಇಟಲಿಯ ಅಂತರರಾಷ್ಟ್ರೀಯ ಪಿಯೆರೊ ಬಿಗೊಂಗಿಯಾರಿ ಪ್ರಶಸ್ತಿ, ಮಿಸ್ಟಿಕ್ ಕಳಿಂಗ ಪ್ರಶಸ್ತಿ, ಚಾರ್ಲ್ಸ್ ವ್ಯಾಲೇಸ್, ವಿಸಿಟಿಂಗ್ ಆರ್ಟ್ಸ್ ಮತ್ತು ಹೋಮಿ ಭಾಭಾ ಫೆಲೋಶಿಪ್, ಇನ್ನೂ ಹಲವು ಅವರನ್ನು ಅರಸಿ ಬಂದಿವೆ. ಅವರು ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಬಗ್ಗೆಯೂ ವ್ಯಾಪಕವಾಗಿ ಬರೆದಿದ್ದಾರೆ.

ಅರುಂಧತಿ ಸುಬ್ರಮಣ್ಯಂ ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ನಲ್ಲಿ ಹೆಡ್ ಆಫ್ ಡ್ಯಾನ್ಸ್ ಮತ್ತು ಚೌರಾಹಾ (ಇಂಟರ್-ಆರ್ಟ್ಸ್ ಫೋರಂ) ಆಗಿ ಕೆಲಸ ಮಾಡಿದ್ದಾರೆ ಮತ್ತು ಪೊಯೆಟ್ರಿ ಇಂಟರ್ನ್ಯಾಷನಲ್ ವೆಬ್ ನ ಇಂಡಿಯಾ ಡೊಮೇನ್ ಸಂಪಾದಕರಾಗಿದ್ದಾರೆ. ಅವರು ತಮ್ಮ ಕಾವ್ಯಲೋಕದ ಪ್ರಯಾಣದ ಬಗ್ಗೆ, ಕಾವ್ಯ ಪ್ರಕ್ರಿಯೆಯ ಬಗ್ಗೆ ಇಲ್ಲಿ ಮಾತನಾಡಿದ್ದಾರೆ. ಇದರಲ್ಲಿ ಭಕ್ತಿ ಪಂಥದ ಸಂತಕವಿಗಳು ಮತ್ತು ಅವರ ಕಾವ್ಯದ ಬಗ್ಗೆ ತಮ್ಮ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.

ಭಾರತ ಉಪಖಂಡದಲ್ಲಿ ಬದುಕುತ್ತಿರುವನಾವು ಈನೆಲದಆಧ್ಯಾತ್ಮಿಕ ಸಾಹಿತ್ಯದ ನಂಬಲಾಗದ ಪರಂಪರೆಗೆ ಉತ್ತರಾಧಿಕಾರಿ ಎಂದು ಆಕೆ ಭಾವಿಸುತ್ತಾರೆ. ಈ ಸಾಹಿತ್ಯ Passionate, Peofound, Provocative – ಭಾವೋನ್ಮತ್ತ, ಗಂಭೀರ, ಉತ್ಪ್ರೇರಕ ಎನ್ನುವ ಅರುಂಧತಿ ಅದನ್ನು ನಿರ್ಲಕ್ಷಿಸುವುದು, ಕಡೆಗಣಿಸುವುದು ಅಥವಾ ತುಚ್ಛೀಕರಿಸುವುದು ದೊಡ್ಡದುರಂತ ಎನ್ನುತ್ತಾರೆ.

ಇಂದು ಸಾಧನೆಯನ್ನು ಬೆಂಬಲಿಸುವ ಆಧ್ಯಾತ್ಮಿಕ ಪರಿಸರ ವ್ಯವಸ್ಥೆಯ ಅನುಪಸ್ಥಿತಿಯಿದೆ. ಆಧ್ಯಾತ್ಮಿಕ ಹಾದಿಯಲ್ಲಿರುವ ಸ್ತ್ರೀ ಪುರುಷರ ಬದುಕಿಗೆ ಈ ಪರಿಸ್ಥಿತಿ ಹೆಚ್ಚು ಹೆಚ್ಚು ಸವಾಲನ್ನು ಒಡ್ಡುತ್ತದೆ.

ಅತ್ಯುತ್ತಮ ಭಕ್ತಿ ಕವನಗಳು ದೇಹವನ್ನು ಆಧ್ಯಾತ್ಮಿಕ ಪ್ರಯಾಣಕ್ಕೆ ಒದಗುವ ಅದ್ಭುತ ಸಾಧನವೆಂದು ಒಪ್ಪಿಕೊಳ್ಳುತ್ತವೆ. ಜನಬಾಯಿ ಅವರ ಒಂದು ಕವಿತೆಯ ಆಯ್ದ ಭಾಗ ಹೀಗಿದೆ:

ನಾನು ದೇವರನ್ನು ತಿನ್ನುತ್ತೇನೆ
ನಾನು ದೇವರನ್ನು ಕುಡಿಯುತ್ತೇನೆ
ನಾನು ದೇವರ
ಮೇಲೆ ಮಲಗುತ್ತೇನೆ

ಮತ್ತೊಂದು, ತೆಲುಗು ಕವಿ ಕ್ಷೇತ್ರಯ್ಯನವರದು. ಇದು ಹೆಣ್ಣಿನ ಮಾತುಗಳಲ್ಲಿವೆ.

ಈಗ ನಾನು ನಿಮ್ಮೆಲ್ಲರನ್ನೂ ಒಬ್ಬೊರನ್ನಾಗಿ ಹಿಡಿದುಕೊಂಡಿದ್ದೇನೆ.
ನಿಮ್ಮನ್ನು ನಾನು ಈ ಮನೆಯಲ್ಲಿ ಸೆರೆಯಾಳುಗಳಾಗಿ ಹಿಡಿದರೆ,
ನಿಮ್ಮನ್ನು ಬಿಡುಗಡೆ ಮಾಡಲು ಯಾರು ಇದ್ದಾರೆ? …
ಈಗ ನಾನು ನಿಮ್ಮನ್ನು ಹಿಡಿದಿದ್ದೇನೆ.
ನಿಮ್ಮನ್ನು ನಾನು ನನ್ನ ಹಾಸಿಗೆಗೆ ಕಟ್ಟಿಹಾಕಿದರೆ,
ನಿಮ್ಮನ್ನು ಬಿಡುಗಡೆ ಮಾಡಲು ಯಾರು ಇದ್ದಾರೆ?

“ಈ ಬಗೆಯಲ್ಲಿ ದೈವದೊಂದಿಗೆ ಮಾತನಾಡುವ ಇನ್ನೂ ಹಲವು ಧ್ವನಿಗಳಿವೆ. ಇದು ಭಕ್ತಿ ಸಂಪ್ರದಾಯಗಳ ಸಾಮೂಹಿಕ ಹಾಗೂ ವಿಶಿಷ್ಟ ಲಕ್ಷಣಗಳಾದ ಅವಿಧೇಯತೆ, ಐಂದ್ರಿಯತೆ ಮತ್ತು ಆಪ್ತತೆಗಳು ಬೆರೆತ ಭಾವ ಎಂದು ಕವಿ ಮತ್ತು ಅನ್ವೇಷಕಿ ಅರುಂಧತಿ ಸುಬ್ರಮಣ್ಯಂ ವೈಲ್ಡ್ ವಿಮೆನ್ ಎಂಬ ಪರಿಕಲ್ಪನೆಯ ಕುರಿತು ಮಾತನಾಡುತ್ತ ಹೇಳಿದ್ದರು.

ಮುಂಬೈನ ನ್ಯಾಷನಲ್ ಸೆಂಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ (ಎನ್ಸಿಪಿಎ) ಯಲ್ಲಿ ನಡೆದ ಕಾರ್ಯಕ್ರಮ ಅದು. ಸುಬ್ರಮಣ್ಯಂ ಅವರಿಂದ ಕ್ಯುರೇಟ್ ಆದ ಅವರದೇ ಪರಿಕಲ್ಪನೆಯಾದ ‘ವೈಲ್ಡ್ ವುಮೆನ್’ ಕಾರ್ಯಕ್ರಮ ಉಪಖಂಡದ ಮಹಿಳಾ ಮಿಸ್ಟಿಕ್ ಗಳು ಮತ್ತು ಕವಿಗಳ ಪರಂಪರೆಯನ್ನು ಸಂಭ್ರಮಿಸುವ ಕಾವ್ಯ ಮತ್ತು ಪ್ರದರ್ಶನದ ಸಂಯೋಜನೆಯಾಗಿತ್ತು.

ಕ್ರಿ.ಶ. 6 ನೇ ಶತಮಾನದಲ್ಲಿ ಪ್ರಾರಂಭವಾದ ಮತ್ತು 18 ನೇ ಶತಮಾನದವರೆಗೆ ವ್ಯಾಪಿಸಿದ ಭಕ್ತಿ ಚಳವಳಿ ಅನೇಕ ವಿಧಗಳಲ್ಲಿ ಲಿಂಗ, ವರ್ಗ ಮತ್ತು ಜಾತಿಯ ಸ್ವರೂಪದ ಅಡೆತಡೆಗಳನ್ನು ಮುರಿಯಿತು. ಅದೇ ಸಮಯದಲ್ಲಿ ಇದು ಆಧ್ಯಾತ್ಮಿಕತೆಯ ಗ್ರಹಿಕೆಗೆ ಸಂಬಂಧಿಸಿದ ಸಿದ್ಧಮಾದರಿಗಳನ್ನು ಚೂರುಚೂರು ಮಾಡಿತು; ಸಾಂಪ್ರದಾಯಿಕತೆ ಮತ್ತು ಪೂಜೆಯ ಕಠಿಣ ಆಚರಣಾ ಪದ್ಧತಿಗಳನ್ನು ಪಂಥದಕವಿ-ಸಂತರು ಖಂಡಿಸಿದರು ಮತ್ತು ಭಕ್ತ ಮತ್ತು ದೈವದ ನಡುವೆ ಹೆಚ್ಚು ವೈಯಕ್ತಿಕವೂ ಅನೌಪಚಾರಿಕವೂ ಆದ ಸಂಪರ್ಕವನ್ನು ಸ್ಥಾಪಿಸಿದರು.

ಕರ್ನಾಟಕದ ಬಸವಣ್ಣ ಮತ್ತು ಅಕ್ಕಮಹಾದೇವಿಯಿಂದ ಆರಂಭಿಸಿ ಮಹಾರಾಷ್ಟ್ರದ ಜನಾಬಾಯಿ ಮತ್ತು ತುಕಾರಾಂನಿಂದ ಉತ್ತರ ಭಾರತದ ಕಬೀರ್, ತುಳಸಿದಾಸ್ ಮತ್ತು ಮೀರಾಬಾಯಿ ಮತ್ತು ಪಶ್ಚಿಮ ಬಂಗಾಳದ ಚೈತನ್ಯ ಮಹಾಪ್ರಭು ಮತ್ತು ಶಾರದಾ ದೇವಿ – ಈ ಅತೀಂದ್ರಿಯ – ಮಿಸ್ಟಿಕ್ ಗಳು ಹಾಗೂ ಕವಿಗಳು ಸಾಮಾಜಿಕ ಶ್ರೇಣೀಕರಣವನ್ನು ಪ್ರಶ್ನಿಸಿದರು ಮತ್ತು ಮೋಕ್ಷವನ್ನು ಹುಡುಕುವಲ್ಲಿ ಶ್ರೇಣೀಕರಣದಲ್ಲಿ ಕೆಳಗಿದ್ದವರ ಮೇಲೆ ಹೇರಿದ್ದ ‘ನಿಯಮಗಳನ್ನು’ ಪ್ರಶ್ನಿಸಿದರು. ಮೂಲಭೂತವಾಗಿ, ಭಕ್ತಿ ಚಳುವಳಿ ಮುಂಚೂಣಿಗೆ ಬರಲು ಮತ್ತು ಸಂಪ್ರದಾಯಗಳನ್ನು ಖಂಡಿಸಲು ಧ್ವನಿಗಳಿಗೆ, ಅದರಲ್ಲೂ ಮುಖ್ಯವಾಗಿ ಮಾರ್ಜಿನಲ್ ಎಂದು ಪರಿಗಣಿತರಾದ ಕಟ್ಟಕಡೆಯ ಧ್ವನಿಗಳಿಗೆ ಪ್ರಚೋದನೆಯನ್ನು ನೀಡಿತು. ಆದ್ದರಿಂದ, ಶೂದ್ರನಾಗಿ ಜನಿಸಿದ ತುಕಾರಾಂರ ನುಡಿ ತಮ್ಮ ಜಾತಿ ಅಥವಾ ವರ್ಗವನ್ನು ಮೀರಿ ಜನರೊಂದಿಗೆ ದೊಡ್ಡ ಪ್ರಮಾಣದಲ್ಲಿ ಅನುರಣಿಸಿತು. ಮೀರಾಬಾಯಿ ತನ್ನ ರಾಜಮನೆತನದ ವಂಶಾವಳಿ ಮತ್ತು ಸಂಬಂಧವನ್ನು ತ್ಯಜಿಸಿ ದೈವಿಕತೆಯನ್ನು ಹುಡುಕಿಕೊಂಡು ಹೋದರು. ನರಸಿಂಹ ಮೆಹ್ತಾ ತನ್ನ ದೇವರೊಂದಿಗೆ ತಾನು ಗೋಪಿ ಎಂದು ಮಾತನಾಡಬಲ್ಲವನಾದನು, ಅವನು ಲಿಂಗ ಸಂಬಂಧಿತ ಸಾಮಾಜಿಕ ಸಂರಚನೆ ಮತ್ತು ದೇವತಾಶಾಸ್ತ್ರದ ಅನುಶ್ರೇಣೀಕರಣವನ್ನು ಅದೇ ಸಮಯದಲ್ಲಿ ಮೀರಬಲ್ಲವನಾಗುತ್ತಾನೆ. – ಇದು ಅರುಂಧತಿಯವರ ಮಾತು.

ಈ ದೃಷ್ಟಿಯುಳ್ಳ ಅರುಂಧತಿ The First Postಗೆ ನೀಡಿದ ಸಂದರ್ಶನದಲ್ಲಿ ತಮ್ಮ ಕಾವ್ಯವನ್ನು, ಭಕ್ತಿ ಕಾವ್ಯವನ್ನು ಕುರಿತ ತಮ್ಮ ನಿಲುವುಗಳನ್ನು ಕುರಿತು ಹೇಳುವ ಮಾತುಗಳು ಹೀಗಿವೆ:

ಸ್ವತಃ ಕವಿಯಾಗಿ, ಕಾವ್ಯವು ಅದರ ಸೃಷ್ಟಿ, ಸಂದರ್ಭೋಚಿತತೆ ಮತ್ತು ಗ್ರಹಿಕೆಯ ವಿಷಯದಲ್ಲಿ ಏನನ್ನು ಒಳಗೊಳ್ಳುತ್ತದೆ ಎಂದು ನೀವು ಭಾವಿಸುತ್ತೀರಿ? ನಿಮ್ಮ ಪ್ರಕ್ರಿಯೆಯ ಸ್ವರೂಪವೇನು?

ನನ್ನ ಪ್ರಕ್ರಿಯೆಯ ಸ್ವರೂಪ ತುಂಬಾ ಸರಳವಾಗಿದೆ, ಆದರೆ ಕಾವ್ಯ ನಿರ್ಮಿತಿಯ ಒತ್ತಾಯ ಬದಲಾಗುತ್ತದೆ. ಇದು ಸಾಮಾನ್ಯವಾಗಿ ಒಂದು ಸಾಲು ಅಥವಾ ಒಂದು ಕಾವ್ಯಚಿತ್ರದೊಂದಿಗೆ ಪ್ರಾರಂಭವಾಗುತ್ತದೆ. ಇತರ ಸಮಯಗಳಲ್ಲಿ ಖಾಲಿ ಪುಟದ ಸುತ್ತ ಪರಿಭ್ರಮಿಸುತ್ತಾ ಇಡೀ ಒಂದು ದಿನವನ್ನು ಕಳೆಯುವ ಅವಶ್ಯಕತೆಯಿದೆ. ಇದು ಪದಗಳು ಮತ್ತು ಭಾವನೆಗಳನ್ನು ನನ್ನ ಮಿದುಳಿನಲ್ಲಿ ಆವರ್ತನದಲ್ಲಿ ಸುತ್ತುವಂತೆ ಮಾಡುತ್ತದೆ. ಇತರ ಸಮಯಗಳಲ್ಲಿ ವಿಮಾನದ ಟಿಕೆಟ್ ನ ಹಿಂದೆ ಅಥವಾ ರೆಸ್ಟೋರೆಂಟ್ ನಲ್ಲಿರುವಾಗ ಕೈ ಒರೆಸುವ ಕಾಗದದ ಮೇಲೆ ನಾನು ಪದ್ಯದ ತುಣುಕನ್ನು ಬರೆದುಕೊಳ್ಳಬಹುದು. ಕವಿತೆಗಳನ್ನು ರಚಿಸುವ ಪ್ರಕ್ರಿಯೆಯು ನನಗೆ ನಿರುದ್ದೇಶಿತವಾಗಿರುತ್ತದೆ ಹಾಗೂ ಅದೊಂದು ಕನಸು. ಅದು ಬರವಣಿಗೆಯ ಮತ್ತು ಕಾಯುವಿಕೆಯ ಸಮ್ಮೇಲನವಾಗಿದೆ. ಕವನಗಳಿಗೆ ಬೇಕಾದ ಸಮಯ ತೆಗೆದುಕೊಂಡು ತಾವೇ ತಮ್ಮ ಆಕಾರ ಮತ್ತು ಸ್ವರೂಪವನ್ನು ಕಲ್ಪಿಸಿಕೊಳ್ಳಲು ನಾನು ಅನುಮತಿಸುತ್ತೇನೆ.

ಭಾರತದ ಪ್ರಾಚೀನ ಇತಿಹಾಸವು ಗೀತಾತ್ಮಕ ಲಾವಣಿಗಳು ಮತ್ತು ಕವಿತೆಗಳಿಂದ ತುಂಬಿದೆ. ಅದೂ ವಿವಿಧ ಭಾಷೆಗಳು ಮತ್ತು ಉಪಭಾಷೆಗಳಲ್ಲಿ ಹರಡಿಕೊಂಡಿವೆ. ಆ ದಿನಗಳ ಮತ್ತು ಈಗಣ ಕಾವ್ಯದ ನಿರ್ಮಾಣ ಕುಶಲತೆ ಮತ್ತು ಕಾವ್ಯ ವಸ್ತು ವಿಷಯಗಳಲ್ಲಿ ಗಮನಾರ್ಹ ವ್ಯತ್ಯಾಸವಿದೆಯೇ?

ಇದು ಉತ್ತರಿಸಲು ಕಷ್ಟಕರವಾದ ಪ್ರಶ್ನೆ. ಮುಖ್ಯವಾಗಿ ನಾವು ಉಪಖಂಡದ ಬಗ್ಗೆ ಮಾತನಾಡುತ್ತಿರುವುದರಿಂದ ಭಾಷೆಗಳು, ಸಂದರ್ಭಗಳು, ಪ್ರದೇಶಗಳು – ಅಲ್ಲಿ ಕಾವ್ಯ ಪ್ರಕಟವಾಗುವ ರೂಪಗಳು ಮತ್ತು ಶೈಲಿಗಳು ದಿಗ್ಭ್ರಮೆಗೊಳಿಸುವಷ್ಟು ವೈವಿಧ್ಯಮಯವಾಗಿವೆ ಹಾಗೂ ಪ್ರತಿಯೊಂದೂ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಅಂತಹ ಸಂಕೀರ್ಣ ದೃಶ್ಯದ ಕ್ಯಾನ್ವಾಸಿನಲ್ಲಿ ‘ಆಗ’ ಮತ್ತು ‘ಈಗ’ ಕುರಿತು ಯಾವುದೇ ಕಾಮೆಂಟ್ ಮಾಡಿದರೂ ಅದು ಸುಳ್ಳಾಗಲಿದೆ.

ನಾನು ಇಂಗ್ಲಿಷ್ ನಲ್ಲಿ ಬರೆಯುವ ಸಮಕಾಲೀನ ಭಾರತೀಯ ಕವಿ. ನನಗೆ ನಿರ್ವಹಿಸಲು ಇರುವ ಆಸಕ್ತಿದಾಯಕ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂದರ್ಭವನ್ನು ನಾನು ಪರಿಗಣಿಸುತ್ತೇನೆ. ಈ ವಿಚಾರಕ್ಕೆ ಬಂದರೆ ಉಪಖಂಡದ ಅಸಂಖ್ಯಾತ ಕವಿಗಳಿಗೆ ನಾನು ಕೃತಜ್ಞಳಾಗಿದ್ದೇನೆ – ನಮ್ಮಾಳ್ವಾರ್ ರವರಿಂದ ಅನ್ನಮಾಚಾರ್ಯರವರೆಗೆ, ಜನಾಬಾಯಿಯಿಂದ ಅಭಿರಾಮಿ ಭಟ್ಟರವರೆಗೆ. ಅದೇ ಸಮಯದಲ್ಲಿ ಪ್ರಪಂಚದಾದ್ಯಂತ ಕವಿಗಳು ಮಾಡಿರುವ ಕೆಲಸಗಳಿಗೆ ನನಗೆ ಪ್ರವೇಶ ದೊರೆತಿದ್ದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಅಂತರರಾಷ್ಟ್ರೀಯ ಕಾವ್ಯವನ್ನು ಇಂಗ್ಲಿಷ್ ಮತ್ತು ಇಂಗ್ಲಿಷ್ ಅನುವಾದದಲ್ಲಿ ಓದುವ ಮೂಲಕ ಅದು ಸಾಧ್ಯವಾಗಿದೆ.

ಇಂದು ಕವಿಯಾಗಿರುವುದು ಅದ್ಭುತ ಸಂಗತಿ. ಏಕೆಂದರೆ ಹಿಂದೆಂದಿಗಿಂತಲೂ ಪ್ರಪಂಚದಾದ್ಯಂತದ – ಪ್ಯಾನ್ ಗ್ಲೋಬಲ್ ಕಾವ್ಯಕ್ಕೆ ಮುಕ್ತ ಪ್ರವೇಶವಿದೆ – ಈ ಆನ್ಲೈನ್ ಬ್ರಹ್ಮಾಂಡಕ್ಕೆ ಧನ್ಯವಾದಗಳು. ಈ ಪರಿಸ್ಥಿತಿ ಸಂಕೀರ್ಣ ಪರಂಪರೆಯನ್ನು ಹಲವು ದಿಕ್ಕುಗಳಿಂದ ಪ್ರವೇಶಿಸಲು ಅನುಮತಿ ದೊರಕಿಸುತ್ತದೆ. ನಾನು ಇವತ್ತು ಕೀಟ್ಸ್, ಬಾಶೋ, ಎ.ಕೆ. ರಾಮಾನುಜನ್ ಮತ್ತು ತುಕಾರಾಂ ಅವರನ್ನು ಒಂದೇ ಬಾರಿಗೆ ಪ್ರೀತಿಸಬಹುದು. ಅಂತೆಯೇ ಡೆನ್ನಿಸ್ ನೂರ್ಕ್ಸೆ ಯಿಂದ ಜಾನ್ ಬರ್ನ್ಸೈಡ್, ಅಗಿ ಮಿಶೋಲ್ ಮತ್ತು ಇಮಾನ್ ಮರ್ಸಲ್ ರವರೆಗಿನ ಸಮಕಾಲೀನ ಧ್ವನಿಗಳಿಗೆ ಪ್ರವೇಶವನ್ನು ಪಡೆಯಬಹುದು. ಈ ವೈವಿಧ್ಯಮಯ ಹಂದರ ಯಾರೊಬ್ಬರ ಕಾವ್ಯವನ್ನು ಹಲವು ಬಗೆಯ ಸೂಕ್ಷ್ಮಗಳನ್ನೊಳಗೊಳ್ಳುವ ರೀತಿಯಲ್ಲಿ ರೂಪಿಸುತ್ತದೆ.

ಇಂಗ್ಲಿಷ್ ನಲ್ಲಿ ಬರುವ ಅನುವಾದಗಳು ಅಥವಾ ಕವಿತೆಗಳಿಗಿಂತ ಪ್ರಾದೇಶಿಕ ಭಾಷೆಗಳಲ್ಲಿ ಕವಿತೆಗಳನ್ನು ಓದುವಾಗ ಭಾವಗೀತಾತ್ಮಕ ಗುಣಮಟ್ಟ ಮತ್ತು ಅಭಿವ್ಯಕ್ತಿ ಲಯ ಹೆಚ್ಚು ಸಾವಯವವಾಗಿರುತ್ತದೆ ಎಂದು ನೀವು ಭಾವಿಸುತ್ತೀರಾ?

ಒಬ್ಬರು ಬಳಸುವ ಭಾಷೆಯ ಬಗ್ಗೆ ದುಃಖಿಸುತ್ತಾ ಕೂಡಲು ಜೀವನವು ತುಂಬಾ ಚಿಕ್ಕದಾಗಿದೆ ಎಂದು ನಾನು ಭಾವಿಸುತ್ತೇನೆ. ನಮ್ಮೆಲ್ಲ ಕನಸುಗಳನ್ನು ಭಾಷಾಂತರಿಸಲು ಯಾವುದೇ ಭಾಷೆಯೂ ಉತ್ತಮ ಮಾಧ್ಯಮವಾಗಿಲ್ಲ. ಹಾಗೆಯೇ ಯಾವುದೇ ಭಾಷೆಯೂ ಬಳಸಲು ಬಾರದ ಶೋಚನೀಯ ಪರಿಸ್ಥಿತಿಯಲ್ಲಿಲ್ಲ. ಭಾಷೆಗಳನ್ನು ಕುರಿತ ಚರ್ಚೆಗಳನ್ನು ಒತ್ತಟ್ಟಿಗೆ ಇಡಲು ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ. ಈಗ ಅತ್ಯಂತ ವಿಸ್ಮಯಕಾರಿಯಾದ ಒಂದೇ ಒಂದು ಭಾಷೆಯ ಬಗ್ಗೆ ಮಾತನಾಡುವ ಸಮಯ: ಅದು ಕಾವ್ಯದ ಭಾಷೆ. ಭಾರತದ ಒಳಗೆ ಅಥವಾ ಪ್ರಪಂಚದಾದ್ಯಂತ ಪ್ರಯಾಣಿಸಿದಾಗಲೆಲ್ಲಾ ಕವಿಗಳು ಯಾವಾಗಲೂ ಪರಸ್ಪರ ಒಂದು ಭಾವಸಂಬಂಧವನ್ನು ಹೊಂದಿರುತ್ತಾರೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ನಾವೆಲ್ಲರೂ ಉತ್ಸಾಹದಿಂದ, ದಣಿವಿನಿಂದ, ಬಳಲಿಕೆಯಿಂದ, ಬೆಚ್ಚಿಬೀಳುತ್ತ, ವಿನಮ್ರತೆಯಿಂದ ನಮ್ಮ ನಮ್ಮ ಭಾಷೆಗಳಲ್ಲಿ ವಿನ್ಯಾಸಗಳನ್ನು ರೂಪಿಸುತ್ತಾ ಗಂಟೆಗಳ ಕಾಲ ಕಳೆಯುವುದು ಈ ಭಾವಸಂಬಂಧಿ ಕವಿಗಳ ಭಾವನೆಯ ಆಳದಲ್ಲಿದೆ.

ಕವಿತೆಗಳನ್ನು ಬರೆಯುವುದರ ಜೊತೆಗೆ, ನೀವು ಕವನ ವಾಚನ ಮತ್ತು ಪ್ರದರ್ಶನವನ್ನು ಸಹ ಮಾಡುತ್ತೀರಿ. ಆಡು ಮಾತು ಅದರ ಲಿಖಿತ ಸ್ವರೂಪಕ್ಕಿಂತ ಭಿನ್ನವಾಗಿದೆಯೇ? ಕವಿ ಯಾವಾಗಲೂ ತನ್ನಸೃಷ್ಟಿಯನ್ನು ಜೋರಾಗಿ ಪಠಿಸಲಾಗುವುದು ಎಂದು ತಿಳಿದುಕೊಂಡು ಬರೆಯುತ್ತಾರೆಯೇ?

ಹೌದು, ನಾನು ಕವಿತೆಯನ್ನು ಗಟ್ಟಿಯಾಗಿ ಓದುವದನ್ನು ಆನಂದಿಸುತ್ತೇನೆ. ಇದು ಕವಿತೆಯನ್ನು ರಚಿಸುವ ನನ್ನ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದೆ. ಬರೆಯುವಾಗ, ಒಂದು ಕವಿತೆಯು ಪುಟದಲ್ಲಿ ಮೂಡುತ್ತಾ ನನ್ನ ನಾಲಿಗೆಯಲ್ಲಿ ನುಡಿಯುತ್ತಾ ಇರುವಾಗ ಮಾತ್ರ ನಾನು ಅದನ್ನು ನಂಬುತ್ತೇನೆ. ಕವಿತೆಯನ್ನು ಜೋರಾಗಿ ಓದುವ ಕ್ರಿಯೆಯನ್ನು ನಾನು ನಿಜವಾಗಿಯೂ ಆನಂದಿಸುತ್ತೇನೆ. ನಾನು ಅದನ್ನು ಪರ್ಫಾರ್ಮೆನ್ಸ್ – ಪ್ರದರ್ಶನ – ಆಗಿ ನೋಡುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ ಪುಸ್ತಕದಿಂದ ಧ್ವನಿಗೆ ಪಯಣಿಸುವ ಕವಿತೆಯ ಯಾನ ನನಗೆ ಜೀವನದ ಸಂತೋಷದಾಯಕ ವಿಸ್ತರಣೆಯಂತೆ. ಬಿಡಿಸಿದ ಪುಟದಲ್ಲಿ ಕವಿತೆಯನ್ನು ಓದುವ ತೀರಾ ಅಂತರಂಗಿಕ ಅನುಭವವನ್ನು ನಾನು ಪ್ರೀತಿಸುತ್ತೇನೆ. ಆದರೆ ನಾನು ತುಂಬಾ ಪ್ರೀತಿಸುವ ವಾಚನದ ಆಯಾಮಕ್ಕೆ ಜೀವಂತಿಕೆ, ಸೌಂದರ್ಯ ಮತ್ತು ತುರ್ತು -immediacy ಇದೆ.

ಎನ್ ಸಿ ಪಿ ಎ ಯ ಈವೆಂಟ್ ವೈಲ್ಡ್ ವುಮೆನ್ ಪರಿಕಲ್ಪನೆಗೆ ಪ್ರೇರಣೆ ಯಾವುದು?

ಮಿಸ್ಟಿಕಲ್ ಸಾಹಿತ್ಯಕ್ಕೆ ಸ್ತ್ರೀ ಧ್ವನಿಯೊಂದಿಗೆ ಆಳವಾದ ಮೋಹವಿದೆ. ನಾನು ಭಕ್ತಿ ಕಾವ್ಯದ ಪೆಂಗ್ವಿನ್ ಸಂಕಲನ ಈಟಿಂಗ್ ಗಾಡ್ ಅನ್ನು ಸಂಕಲಿಸುವಾಗ ಇದು ನನ್ನಲ್ಲಿ ಬೆಳೆಯಲು ಪ್ರಾರಂಭಿಸಿತು. ಮಹಿಳೆಯರು ಆಧ್ಯಾತ್ಮಿಕತೆಯ ಹಾದಿಯಲ್ಲಿ ಹೇಗೆ ನಡೆಯುತ್ತಾರೆ ಎಂಬ ವಿಷಯದ ಬಗ್ಗೆ ನನಗೆ ಆಸಕ್ತಿ ಬೆಳೆಯಿತು. ಪುರುಷ ಮಿಸ್ಟಿಕ್ ಕವಿ ಸ್ತ್ರೀ ಧ್ವನಿಯನ್ನು ಅಳವಡಿಸಿಕೊಂಡಾಗ ಅವನಿಗೆ ದೊರಕುವ ಸ್ವಾತಂತ್ರ್ಯದ ಬಗ್ಗೆಯೂ ನಾನು ಆಸಕ್ತಿ ಬೆಳೆಸಿಕೊಂಡೆ.

ಈ ಉಪಖಂಡದಲ್ಲಿ ನಾವು ಆಧ್ಯಾತ್ಮಿಕ ಸಾಹಿತ್ಯದ ಬಲು ದೊಡ್ಡ ಪರಂಪರೆಗೆ ಉತ್ತರಾಧಿಕಾರಿಗಳು. ಈ ಸಾಹಿತ್ಯ passionate, profound, provocative – ಭಾವೋನ್ಮತ್ತ, ಗಂಭೀರ, ಉತ್ಪ್ರೇರಕವಾಗಿದೆ. ಅದನ್ನು ನಿರ್ಲಕ್ಷಿಸುವುದು, ಕಡೆಗಣಿಸುವುದು ಅಥವಾ ತುಚ್ಛೀಕರಿಸುವುದು ದೊಡ್ಡ ದುರಂತ. ಇಂದು ಸಾಧನೆಯನ್ನು ಬೆಂಬಲಿಸುವ ಆಧ್ಯಾತ್ಮಿಕ ಪರಿಸರ ವ್ಯವಸ್ಥೆಯ ಅನುಪಸ್ಥಿತಿಯಿದೆ. ಆಧ್ಯಾತ್ಮಿಕತೆಯ ಹಾದಿಯಲ್ಲಿರುವ ಸ್ತ್ರೀ ಪುರುಷರ ಬದುಕಿಗೆ ಈ ಪರಿಸ್ಥಿತಿ ಹೆಚ್ಚು ಹೆಚ್ಚು ಕಠಿಣವಾದ ಸವಾಲನ್ನು ಒಡ್ಡುತ್ತದೆ.

ಸಾಮಾನ್ಯವಾಗಿ ಗದ್ಯಕ್ಕೆ ಹೋಲಿಸಿದರೆ ಕಾವ್ಯವನ್ನು ಶಕ್ತಿಯುತವಾದ ಅಭಿವ್ಯಕ್ತಿ ಮಾಧ್ಯಮವಾಗಿ ಪರಿಗಣಿಸಲಾಗುತ್ತದೆ. ಭಾರತದಲ್ಲಿನ ಮತ್ತು ಪ್ರಪಂಚದಾದ್ಯಂತದ ಮಹಿಳಾ ಕವಿಗಳು ತಮ್ಮ ಕಾವ್ಯಗಳನ್ನು ಜನ ಓದುತ್ತಾರೆ ಮತ್ತು ಆಲಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಹೆಣಗಾಡಬೇಕಾಯಿತು ಎಂದು ನೀವು ಭಾವಿಸುತ್ತೀರಾ?

ಕಾವ್ಯವು ಕೆಲವು ವಿಧಗಳಲ್ಲಿ ಗದ್ಯಕ್ಕಿಂತ ಹೆಚ್ಚು ದುರ್ಬಲ ಸ್ವರೂಪವಾಗಿದೆ ಅಂದರೆ ವಲ್ನರಬಲ್. ಅದು ತುಂಬಾ ಸಾಂದ್ರವಾಗಿದೆ ಅಥವಾ ಹರಳುಗಟ್ಟಿದೆ. ಅದು ಚಿಂತನೆಯಲ್ಲಿ ಮಹೋನ್ನತ-ಉತ್ತುಂಗಕ್ಕೇರಿದೆ – ಅದರ ಆಕಾಂಕ್ಷೆಯಲ್ಲಿ ಅದು ಕೋಮಲವಾಗಿರುತ್ತದೆ – ಬಹುಶಃ ಇದಾವುದರಿಂದಲೂ ಬಿಡುಗಡೆಯಿಲ್ಲ, ತಪ್ಪಿಸಿಕೊಳ್ಳುವಂತಿಲ್ಲ. ಅದಕ್ಕಾಗಿಯೇ ಸಂಸ್ಕೃತಿಗಳಾದ್ಯಂತ ಬಲು ವಿಸ್ತಾರವಾದ ಪ್ರೀತಿ-ಪ್ರೇಮ ಕಾವ್ಯ ಮತ್ತು ಆಧ್ಯಾತ್ಮಿಕ ಕಾವ್ಯದ ಪರಂಪರೆಯನ್ನು ನಾವು ಹೊಂದಿದ್ದೇವೆ. ಪ್ರಪಂಚದಾದ್ಯಂತದ ಅತೀಂದ್ರಿಯ ಕವಿಗಳು ತಮ್ಮನ್ನು ತಾವು ಅಭಿವ್ಯಕ್ತಪಡಿಸಲು ಕಾವ್ಯದತ್ತ ಮುಖ ಮಾಡಿರುವುದರಲ್ಲಿ ಆಶ್ಚರ್ಯವೇನಿಲ್ಲ. ಜೀವನದ ಅತ್ಯಂತ ತೀವ್ರವಾದ ಅಥವಾ ಅತ್ಯಂತ ಸೀಮಿತ ಸಂದರ್ಭಗಳಲ್ಲಿ ನಾವು ಸಹಜವಾಗಿಯೇ ಗದ್ಯಕ್ಕಿಂತ ಹೆಚ್ಚಾಗಿ ಕಾವ್ಯದತ್ತ ಓಲುತ್ತೇವೆ.
ಇದರರ್ಥ ಮಹಿಳಾ ಮಿಸ್ಟಿಕ್ ಗಳಿಗೆ ಇದರ ನಿಮಿತ್ತ ಕಷ್ಟಕಾಲ ಒದಗಿದೆಯೇ?

ಬಹುಶಃ ನಿಜವಿದ್ದೀತು. ನಿರ್ಬಂಧವಿರದ ಸ್ತ್ರೀ ಧ್ವನಿ ಯಾವಾಗಲೂ ಅನುಮಾನ ಮತ್ತು ಖಂಡನೆಯ ವಿಷಯವಾಗಿದೆ. ನಿಸ್ಸಂಶಯವಾಗಿ ಈ ಧ್ವನಿಗಳನ್ನು ಪಳಗಿಸಲಾಗಿದೆ, ಕ್ಷುಲ್ಲಕಗೊಳಿಸಲಾಗಿದೆ, ಅರ್ಥಾಂತರಗೊಳಿಸಲಾಗಿದೆ, ಹಲವಾರು ರೀತಿಯಲ್ಲಿ ಶೋಧಿಸಲಾಗಿದೆ. ಆದರೆ ಅವರನ್ನು ಬದಿಗೊತ್ತಿರುವುದು ಕೇವಲ ಸಾಂಪ್ರದಾಯಿಕತೆಯಲ್ಲ; ಬರಡು ಬಿದ್ದ, ಧರ್ಮನಿರಸನಗೊಳಿಸಿದ ವಿಶ್ವದೃಷ್ಟಿಯ ಸಮಕಾಲೀನ ಜಗತ್ತು ಅಭ್ಯಾಸಬಲದಿಂದ ಅವರನ್ನು ಕಡೆಗಣಿಸುತ್ತದೆ.

ಪ್ರಾಸಂಗಿಕವಾಗಿ ಈ ಹಬ್ಬ – ಕಾರ್ನಿವಲ್ [ವೈಲ್ಡ್ ವುಮೆನ್] ಮಹಿಳೆಯಾಗಿರುವ ಕಷ್ಟಗಳ ಬಗ್ಗೆ ಅಲ್ಲ, ಈ ಮಿಸ್ಟಿಕ್ ಗಳು ಖಂಡಿತವಾಗಿಯೂ ತಮ್ಮ ಮುಂದಿನ ಸವಾಲುಗಳ ಜೊತೆ ಸೆಣಸಿದ್ದಾರೆ. ಇದು ಆ ಸಂಭ್ರಮದ ಆಚರಣೆ ಮಾತ್ರವಲ್ಲ, ಸೊಲ್ಲುಗಳನ್ನು ಕೇಳಲು ಕೊಟ್ಟ ಆಹ್ವಾನವೂ ಆಗಿದೆ. ಇದು ಉತ್ತೇಜಕ, ಸಂತೋಷದಾಯಕ, ಸ್ಫೋಟಕವಾಗಿ ಮುಕ್ತವಾದ ಧ್ವನಿಗಳನ್ನು ಕೇಳುವುದಾಗಿದೆ.

ಭಕ್ತಿ ಕಾವ್ಯದ ದೃಷ್ಟಿಯಿಂದ ಪುರುಷ ಕವಿಗಳ ಹಾಗೂ ಮಹಿಳಾ ಕವಿಗಳ ಕೃತಿಗಳ ನಡುವಿನ ಪ್ರಮುಖ ವ್ಯತ್ಯಾಸಗಳು ಯಾವುವು? ಭಕ್ತಿ ಯುಗದ ಪುರುಷ ಕವಿಗಳ ಮತ್ತು ಮಹಿಳಾ ಕವಿಗಳ ನಡುವೆ ಆಧ್ಯಾತ್ಮಿಕ ಪಯಣ ಮತ್ತು ಆಧ್ಯಾತ್ಮಿಕತೆಯ ಅರ್ಥ ಹೇಗೆ ಬದಲಾಗುತ್ತದೆ?

ಈ ಪ್ರಶ್ನೆಯು ಸುದೀರ್ಘ ಪ್ರತಿಕ್ರಿಯೆಗೆ ಅರ್ಹವಾಗಿದೆ. ಇದ್ದರೂ, ನಾನು ಇಷ್ಟನ್ನು ಮಾತ್ರ ಹೇಳುತ್ತೇನೆ: ಇಂದು ಮಹಿಳೆಯರು ನಗರಗಳ ಬೀದಿಯಲ್ಲಿ ಪುರುಷರಿಗಿಂತ ಭಿನ್ನವಾಗಿ ನಡೆಯುತ್ತಿದ್ದಾರೆ. ಅವರು ಆಧ್ಯಾತ್ಮಿಕತೆಯ ಹಾದಿಯನ್ನು ವಿಭಿನ್ನವಾಗಿ ನಡೆದಿರುವುದರಲ್ಲಿ ಆಶ್ಚರ್ಯವೇನಿದೆ? ಈ ವ್ಯತ್ಯಾಸಗಳು ಪ್ರಲಾಪದ, ಶೋಕದ ಕಾವ್ಯವಾಗಿ ರೂಪಾಂತರಗೊಳ್ಳುವುದಿಲ್ಲ. ಆದರೆ ಇದು ಶೃಂಗಾರದ, ಸಂತೋಷದ, ಉತ್ಕಟತೆಯ, ಸ್ವಾತಂತ್ರ್ಯದ ಒಂದು ನಿರ್ದಿಷ್ಟ ಅನುರಣನವನ್ನು ಹೊಂದಿರುವ ಕಾವ್ಯವಾಗಿ ರೂಪಾಂತರಗೊಳ್ಳುತ್ತದೆ.

ವ್ಯತ್ಯಾಸಗಳಿವೆ, ನಿಜ. ಆದರೆ ಅವುಗಳನ್ನು ನಾನು ಆಳವಿಲ್ಲದ ಸೈದ್ಧಾಂತಿಕ ಸೀಮೆಗಳಲ್ಲಿ ತುರುಕಲು ತೊಡಗಲಾರೆ. ಉದಾಹರಣೆಗೆ, ಮಹಿಳೆಯರ ಮಿಸ್ಟಿಕಲ್ ಕಾವ್ಯವು ಅದರ ಪುರುಷ ಪ್ರತಿರೂಪಕ್ಕಿಂತ ಶ್ರೇಷ್ಠವಾಗಿದೆ ಎಂದು ನಾನು ಸೂಚಿಸುತ್ತಿಲ್ಲ. ಈ ಮಹಿಳೆಯರನ್ನು ಕಾವ್ಯದಲ್ಲಿ, ಹಾಡಿನಲ್ಲಿ, ಸಂಭಾಷಣೆಯಲ್ಲಿ ಕೇಳುವುದರಿಂದ ಅವರ ಧ್ವನಿಯಲ್ಲಿನ ಕಂಪನದ ವಿಶಿಷ್ಟತೆಯ ಕುರಿತ ನಮ್ಮ ತಿಳುವಳಿಕೆಯು ಉತ್ತಮಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಕೆಲವು ಗಮನಾರ್ಹ ವ್ಯಕ್ತಿಗಳ ಧ್ವನಿಗಳನ್ನು ಕೇಳುವ ಬಗ್ಗೆ, ಕೇವಲ ಒಂದು ವರ್ಗಕ್ಕೆ ಸೇರಿದ ಧ್ವನಿಯನ್ನ ಮಾತ್ರವಲ್ಲ.

ಈ ಕಾರ್ಯಕ್ರಮದಲ್ಲಿ ನಿಮ್ಮ ಸೆಶನ್- He’s My Slave: The Body and the Beyond- ‘ಭಕ್ತಿ ಕಾವ್ಯದಲ್ಲಿ ಸ್ತ್ರೀ ದೇಹದ ಪಾತ್ರವನ್ನು ಪ್ರತಿಬಿಂಬಿಸುತ್ತದೆ. ನೀವು ಇದರ ಮೇಲೆ ಸ್ವಲ್ಪ ಬೆಳಕು ಚೆಲ್ಲಬಹುದೇ?

ಈ ಅನೇಕ ಕವಿತೆಗಳಲ್ಲಿನ ಒರಟು ಭಾವನಾತ್ಮಕ ಪ್ರಭಾವ, ನಾಚಿಕೆಯಿರದ ಕಾಮುಕತೆ, ಕಾಯ ಸಂಭ್ರಮ, ವ್ಯಕ್ತತೆಯ ಸಂತೋಷ, ಸ್ವಯಂ-ಅನ್ವೇಷಣೆಯ ಸ್ವಾತಂತ್ರ್ಯದಿಂದ ನಾನು ಬೆಚ್ಚಿಬಿದ್ದಿದ್ದೇನೆ. ಸ್ಫೂರ್ತಿಯನ್ನೂ ಪಡೆದಿದ್ದೇನೆ. ಜನಪ್ರಿಯ ಗ್ರಹಿಕೆಯಲ್ಲಿ ಈ ಯಾವುದೇ ಗುಣಲಕ್ಷಣಗಳು ‘ಆಧ್ಯಾತ್ಮಿಕ’ ಕಾವ್ಯದೊಂದಿಗೆ ಸಂಬಂಧ ಹೊಂದಿಲ್ಲ. ಅಲ್ಲದೆ ನನ್ನ ಗಮನವು ಮಹಿಳೆಯರ ಧ್ವನಿಯ ಮೇಲೆ ಮಾತ್ರ ಇರುವುದಿಲ್ಲ. ಸ್ತ್ರೀ ಧ್ವನಿಯನ್ನು ಅಳವಡಿಸಿಕೊಳ್ಳುವ ಪುರುಷ ಧ್ವನಿಗಳು ಮತ್ತು ಕವಿಗಳಿಗೆ ಅವಕಾಶ ನೀಡುವ ಸ್ವಾತಂತ್ರ್ಯದ ಬಗ್ಗೆಯೂ ನನಗೆ ಆಸಕ್ತಿ ಇದೆ.

ಆಧ್ಯಾತ್ಮಿಕತೆ ಮತ್ತು ಲೈಂಗಿಕತೆಗಳು ಹೇಗೆ ಪರಸ್ಪರ ಅಂತರ್ಸಂಬಂಧ ಹೊಂದಿವೆ? ಆಧ್ಯಾತ್ಮಿಕ ವ್ಯಕ್ತಿ, ಅನ್ವೇಷಕ, ಕಾವ್ಯ ಬರೆಯುವಲ್ಲಿ ತೊಡಗಿದಾಗ ಅದು ಯಾವುದಾದರೂ ಪಾತ್ರ ವಹಿಸುತ್ತದೆಯೇ?

ಆಧ್ಯಾತ್ಮಿಕತೆಯು ಅಸಂಘಟಿತ ಬೌದ್ಧಿಕ ಪ್ರಯೋಗದ ಬಗ್ಗೆ ಹೇಳುವುದಲ್ಲ ಎಂದು ಈ ಮಿಸ್ಟಿಕಲ್ ಧ್ವನಿಗಳು ನಮಗೆ ನೆನಪಿಸುತ್ತವೆ. ಇದು ನಮ್ಮೆಲ್ಲರನ್ನೂ ಒಳಗೊಂಡಿರುತ್ತದೆ, ಎಲ್ಲವನ್ನೂ – ದೇಹ, ಮನಸ್ಸು, ಹೃದಯ – ಇನ್ನಷ್ಟು. ಇದು ಖಂಡಿತವಾಗಿಯೂ ನಮ್ಮ ಹಸಿವು ಪ್ರವೃತ್ತಿಗಳ ರೂಪಾಂತರವನ್ನು ಒಳಗೊಂಡಿರುತ್ತದೆ, ಆದರೆ ದೇಹದ ಅಂಗೀಕಾರವಿಲ್ಲದೆ ರೂಪಾಂತರ ಹೇಗೆ ಸಾಧ್ಯ? ಅತ್ಯುತ್ತಮವಾದ ಭಕ್ತಿ ಕವನಗಳು ದೇಹವನ್ನು ಅದ್ಭುತ ಸಾಧನವೆಂದು ಒಪ್ಪಿಕೊಳ್ಳುತ್ತವೆ – ಇದು ಆಧ್ಯಾತ್ಮಿಕ ಪ್ರಯಾಣಕ್ಕೆ ಆಧಾರಭೂತವಾದುದು.

ನಾನು ಇವತ್ತು ಕೀಟ್ಸ್, ಬಾಶೋ, ಎ.ಕೆ. ರಾಮಾನುಜನ್ ಮತ್ತು ತುಕಾರಾಂ ಅವರನ್ನು ಒಂದೇ ಬಾರಿಗೆ ಪ್ರೀತಿಸಬಹುದು. ಅಂತೆಯೇ ಡೆನ್ನಿಸ್ ನೂರ್ಕ್ಸೆ ಯಿಂದ ಜಾನ್ ಬರ್ನ್ಸೈಡ್, ಅಗಿ ಮಿಶೋಲ್ ಮತ್ತು ಇಮಾನ್ ಮರ್ಸಲ್ ರವರೆಗಿನ ಸಮಕಾಲೀನ ಧ್ವನಿಗಳಿಗೆ ಪ್ರವೇಶವನ್ನು ಪಡೆಯಬಹುದು. ಈ ವೈವಿಧ್ಯಮಯ ಹಂದರ ಯಾರೊಬ್ಬರ ಕಾವ್ಯವನ್ನು ಹಲವು ಬಗೆಯ ಸೂಕ್ಷ್ಮಗಳನ್ನೊಳಗೊಳ್ಳುವ ರೀತಿಯಲ್ಲಿ ರೂಪಿಸುತ್ತದೆ.

ಸಾಮಾನ್ಯ ಚಿಂತನೆಯ ಪ್ರಕ್ರಿಯೆಗಳ ಮೂಲಕವೇ ಮಹಿಳಾ ಕವಿಗಳನ್ನು ಜಗತ್ತು ಹೆಚ್ಚು ಹೆಚ್ಚು ಒಪ್ಪಿಕೊಳ್ಳುತ್ತಿದೆಯೇ? ಮೀರಾಬಾಯಿಯಿಂದ ಇಂದಿನವರೆಗೆ – ಏನು ಬದಲಾಗಿದೆ, ಏನು ಆಗಿಲ್ಲ ಮತ್ತು ಏನು ಆಗಬೇಕಿದೆ?

ಸವಾಲುಗಳು ಇದ್ದೇ ಇರುತ್ತವೆ ಎಂದು ನಾನು ಭಾವಿಸುತ್ತೇನೆ. ಆದರೆ ಅವು ವಿಭಿನ್ನವಾಗಿವೆ. ನಾನು ಸಮಕಾಲೀನ ಮಹಿಳಾ ಮಿಸ್ಟಿಕ್ ಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ. ಅದರಿಂದ ಏನು ಹೊರಹೊಮ್ಮುತ್ತದೆ ಮತ್ತು ಅದು ಎಲ್ಲಿಗೆ ಒಯ್ಯುತ್ತದೆ ಎಂಬುದನ್ನು ಮುಂದೆ ನೋಡೋಣ.

ನಾನು ಇದನ್ನು ಸಹ ಹೇಳುತ್ತೇನೆ: ನಾವು ಆಧ್ಯಾತ್ಮಿಕ ಗಮನವನ್ನು ಹಳತಾದದೆಂದು, ಅಪ್ರಸ್ತುತವೆಂದು ನೋಡುವ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಅದಕ್ಕಾಗಿಯೇ ನಾವು ನಮ್ಮ ಹಿಂದಿನ ಮಿಸ್ಟಿಕ್ ಗಳನ್ನು ಹಲ್ಲಿಲ್ಲದ ಸಂತರನ್ನಾಗಿ, ಕ್ಯಾಲೆಂಡರ್ ಕಲೆ, ಅಲಂಕಾರಿಕ ವಿಚಿತ್ರ ವಸ್ತುಗಳಾಗಿ ಪರಿವರ್ತಿಸಿದ್ದೇವೆ. ಇಂದು ಬೆಂಬಲವಿರುವ –ಸಪೋರ್ಟಿವ್ – ಆಧ್ಯಾತ್ಮಿಕ ಪರಿಸರದ ಅನುಪಸ್ಥಿತಿಯು ಆಧ್ಯಾತ್ಮಿಕತೆಯ ಹಾದಿಯಲ್ಲಿರುವ ಮಹಿಳೆಯರಿಗೆ ಮತ್ತು ಪುರುಷರಿಗೆ ಬದುಕನ್ನು ಹೆಚ್ಚು ಸವಾಲಿನದಾಗಿ ಮಾಡುತ್ತದೆ. ಆದರೂ ಇದು ವೈಯಕ್ತಿಕ ಸ್ವಾತಂತ್ರ್ಯಗಳನ್ನು ಹಿಂದೆಂದಿಗಿಂತಲೂ ಹೆಚ್ಚು ಮೌಲ್ಯಯುತವಾಗಿಸುವ ಹಾಗೂ ಸಂರಕ್ಷಿಸುವ ಜಗತ್ತು. ಇದು ಅದರ ಸವಾಲುಗಳನ್ನು ನಮ್ಮ ಮುಂದೊಡ್ಡಬಹುದು, ಆದರೆ ಇದಕ್ಕೆ ನಾವು ಕೃತಜ್ಞರಾಗಿರಬೇಕು ಎಂದು ನಾನು ನಂಬುತ್ತೇನೆ.

ಇಂದಿನ ಭಕ್ತಿ ಕಾವ್ಯವನ್ನು ಹಿಂದಿನ ಕಾಲದ ಭಕ್ತಿಕಾವ್ಯಕ್ಕಿಂತ ಭಿನ್ನವಾಗಿ ಹೇಗೆ ಕಾಣಬಹುದು? ಹಿಂದಿನ ಕಾಲಕ್ಕೆ ಹೋಲಿಸಿದರೆ 21 ನೇ ಶತಮಾನದಲ್ಲಿ ಭಕ್ತಿ ಎಂದರೇನು?

ನನ್ನ ಸಂಕಲನ, Eating God ಉಪಖಂಡದಾದ್ಯಂತ ವಿವಿಧ ಪ್ರಾದೇಶಿಕ ಮತ್ತು ಸ್ಥಳೀಯ ಭಾಷೆಗಳಲ್ಲಿ ಸ್ಫೋಟಗೊಂಡ ಭಕ್ತಿ ಚಳವಳಿಗಳ ವರ್ಗೀಕರಣವನ್ನು, ಜಾತಿ, ವರ್ಗ, ಲಿಂಗ ಮತ್ತು ಪಂಥಗಳ ಆಧಾರದ ಮೇಲೆ ನಡೆದದ್ದನ್ನು ಹಲವಾರು ರೀತಿಯಲ್ಲಿ ಪ್ರಶ್ನಿಸಿತು. ಚಳವಳಿ ದೇಶದಾದ್ಯಂತ ವಿವಿಧ ಐತಿಹಾಸಿಕ ಕ್ಷಣಗಳಲ್ಲಿ ಸಂಭವಿಸಿತು. ಆದರೆ ಪ್ರಾಯೋಗಿಕವಾಗಿ, ಭಕ್ತಿ ಕಾಲದಷ್ಟು ಹಳೆಯದು. ಆದ್ದರಿಂದ, ಚಳವಳಿ ಮತ್ತು ಅನುಭವದ ನಡುವೆ ಒಂದು ವ್ಯತ್ಯಾಸವಿದೆ. ಹಿಂದಿನದು ಐತಿಹಾಸಿಕ; ಎರಡನೆಯದು ಸಾರ್ವತ್ರಿಕವಾಗಿದೆ.

ಸಂಕಲನವನ್ನು ಸಿದ್ಧಪಡಿಸುವಾಗ ನಾನು ಇಂದಿನ ಧ್ವನಿಗಳನ್ನು ಸೇರಿಸಬೇಕೆ ಎಂದು ಸಹ ಯೋಚಿಸಿದ್ದೇನೆ. ಭಕ್ತಿ ಖಂಡಿತವಾಗಿಯೂ ಇಂದು ಅಸ್ತಿತ್ವದಲ್ಲಿರುವುದರಿಂದ ಅದು ಬೇಕೆನ್ನಿಸಿದೆ. ಇದು ಯಾವಾಗಲೂ ಇರುವುದೇ. ಆದರೆ ಇದಕ್ಕೆ ಇನ್ನೊಂದು ಬಗೆಯ ಪುಸ್ತಕವೇ ಆಗಬೇಕು ಎಂದು ನಾನು ನಿರ್ಧರಿಸಿದೆ. ಗಮನವನ್ನು ಬೇರೆಡೆಗೆ ಹರಿಸುವ ಬಗ್ಗೆ ನನ್ನ ಯೋಚನೆ ಇತ್ತು.

ಒಬ್ಬ ಕವಿ ತನ್ನನ್ನು ತಾನು ‘ಭಕ್ತಿ ಕವಿ’ ಎಂದು ಭಾವಿಸುವುದು ಕೆಟ್ಟ ಆಲೋಚನೆ ಎಂದು ಹೇಳಿದ್ದರು. ನಾನು ಅದನ್ನು ಅರ್ಥಮಾಡಿಕೊಂಡೆ. ಅದು ನನಗೂ ಕಷ್ಟವೇ. ಒಬ್ಬರಿಗೆ ಹಣೆಪಟ್ಟಿಯೊಂದು ಒಂದು ರೀತಿಯ ಕ್ಲಬ್ ಸದಸ್ಯತ್ವವನ್ನು ಸ್ಥಾಪಿಸುವ ಅಪಾಯವನ್ನುಂಟುಮಾಡುತ್ತದೆ. ಇನ್ನೊಬ್ಬರಿಗೆ, ಇಂದು ಬಳಸಲಾಗುವ ‘ಆಧ್ಯಾತ್ಮಿಕ’ ಪದ ಒಂದು ಬಗೆಯ ಜಿಂಗೊಯಿಸ್ಟಿಕ್ ಮತ್ತು ಸ್ವಯಂ-ವೈಭವೀಕರಣದ ವಿಧಾನ. ಆದ್ದರಿಂದ, ಒಬ್ಬರು ಭಕ್ತಿ ಕವಿಯಾಗಲು ಪ್ರಯತ್ನಿಸುವುದಿಲ್ಲ. ಅದು ಸೊಕ್ಕಿನಿಂದ ಕೂಡಿರುತ್ತದೆ. ಹೊಲಸು.

ಇನ್ನೂ ಒಂದು ವಿಷಯ, ಕವಿಯಾಗುವುದು ಹೆಚ್ಚು ಹೆಚ್ಚು ನೀವೇ ಆಗುವುದರ ಬಗ್ಗೆ, ಬೇರೊಬ್ಬರಾಗುವ ಬಗ್ಗೆ ಅಲ್ಲ. ನೀವು ಆಧ್ಯಾತ್ಮಿಕ ಪ್ರಯಾಣದಲ್ಲಿದ್ದರೆ, ಆಧ್ಯಾತ್ಮಿಕತೆಯೊಂದಿಗೆ ನಿಮ್ಮ ಆಳವಾದ ಸಂಬಂಧವನ್ನು ಕೆಡಿದುಕೊಳ್ಳುವುದು ಅಸಂಬದ್ಧವಾಗಿದೆ. ಒಂದೇ ಒಂದು ಪ್ರಶ್ನೆಯೆಂದರೆ ನಿಮ್ಮ ಆಧ್ಯಾತ್ಮಿಕ ಒಲವು ಕಾವ್ಯಕ್ಕೆ ಅನುವಾದಗೊಳ್ಳುತ್ತದೆಯೇ ಇಲ್ಲವೇ? ಎನ್ನುವುದು. ಕವಿಯಾಗಿ ನೀವು ನೋಡುವಾಗ, ಬದುಕುತ್ತಿರುವಾಗ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಮಾತನಾಡಲು ನೀವು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಲೇ ಇರಬೇಕು.

ಹಾಗೆ ಬದುಕುತ್ತಿರುವಾಗಲೇ.

***

ದಿ ಹಿಂದೂ ಪತ್ರಿಕೆಯಲ್ಲಿ ಬಂದ ಅರುಂಧತಿ ಅವರ ಲವ್ ವಿಥೌಟ್ ಎ ಸ್ಟೋರಿ ಪುಸ್ತಕ ವಿಮರ್ಶೆಯ ಸಂಗ್ರಹ ರೂಪ

ಭಾರತದಲ್ಲಿ ಬರೆಯಲಾಗುತ್ತಿರುವ ಇಂಗ್ಲಿಷ್ ಕಾವ್ಯವು ಇನ್ನೂ ಪರ್ಸನಲ್ ಕಲ್ಟ್ ಸ್ವರೂಪದಲ್ಲೇ ಇದೆ. ಅದರ ಮೌಲ್ಯಮಾಪನವು ಕವಿಯ ಇತರ ಕ್ಷೇತ್ರಗಳಲ್ಲಿನ ಸಾಧನೆಗಳಿಂದಲೇ ಹೆಚ್ಚಾಗಿ ನಿರ್ಧರಿಸಲ್ಪಡುತ್ತದೆ. ಕಾವ್ಯವನ್ನು ಸಾಮಾನ್ಯವಾಗಿ ಆನುಷಂಗಿಕ – ಆಡ್ ಆನ್ ಸಾಧನೆಯೆಂದು ನೋಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅರುಂಧತಿ ಸುಬ್ರಮಣ್ಯಂ ಅವರ ಹೊಸ ಸಂಗ್ರಹದಲ್ಲಿರುವ ಕವನಗಳು ತಮ್ಮೊಂದಿಗೇ ಖಚಿತವಾಗಿ ಮಾತನಾಡುತ್ತವೆ. ಕವಿ ಯೂನಿಸ್ ಡಿ ಸೋಜಾ ಅವರ – ಕವಿಯನ್ನು ವೈಯಕ್ತಿಕವಾಗಿ ಎದುರಿಸುವ ಬದಲು “ಕವಿತೆಗಳಲ್ಲಿ ಭೇಟಿಯಾಗುವುದು ಉತ್ತಮ” ಎಂಬ ಸಾಲಿನ ಬಗ್ಗೆ ಆಲೋಚಿಸುತ್ತಾರೆ.

ಅರುಂಧತಿ ಸಂಕ್ಷಿಪ್ತವಾಗಿ ಹೇಳುತ್ತಾರೆ: “ಈಗ ನಾನು ವಿಸಿಟಿಂಗ್ ಕಾರ್ಡ್ಗಳನ್ನು ವಿನಿಮಯ ಮಾಡಿಕೊಳ್ಳುವ ಕವಿಗಳನ್ನು ಭೇಟಿಯಾಗುತ್ತೇನೆ /ಕವಿಗಳು ದಂತವೈದ್ಯರಿಗೆ ಉತ್ತಮ ಸ್ನೇಹಿತರಾಗಿದ್ದಾರೆ/ ಕತ್ತಲನ್ನು ಸಂಪೂರ್ಣವಾಗಿ ಡಿಯೋಡರೈಸ್ ಮಾಡಲಾಗಿದೆ.”

ಪ್ರಸಿದ್ಧ ತಮಿಳು ಕವಿ ಅವ್ವೆಯಾರ್ ಅವರಿಗೆ ಸಮರ್ಪಿಸಲಾಗಿರುವ ‘ದಿ ಫೈನ್ ಆರ್ಟ್ ಆಫ್ ಏಜಿಂಗ್’ ಎಂಬ ಏಳು ವಿಭಾಗಗಳ ಸುದೀರ್ಘ ಕವಿತೆ ಈ ಸಂಗ್ರಹದ ಕೇಂದ್ರಬಿಂದುವಾಗಿದೆ. ಇಲ್ಲಿನ ಹಲವಾರು ಸ್ಮರಣೀಯ ಸಾಲುಗಳಲ್ಲಿ ಒಂದು: “ದ್ರೌಪದಿ, ಪ್ರತಿಯೊಬ್ಬರೂ ಹಣ್ಣಿನ ಸಿಪ್ಪೆ ಸುಲಿಯಲು ಬಯಸುತ್ತಾರೆ.” ಇಲ್ಲಿ ಯಾವುದೇ ಕಟ್ಟುನಿಟ್ಟಿನ ಸ್ತ್ರೀವಾದವಿಲ್ಲ, ಬದಲಿಗೆ ಒಂದು ಗಮನಾರ್ಹ ಹೇಳಿಕೆಯಿದೆ. “ನೂಲುಕಟ್ಟಿನ/ಎಲ್ಲಾ ಎಳೆಗಳು ಬಿಚ್ಚಿಕೊಳ್ಳುತ್ತಿವೆ / ಉತ್ಸಾಹದಿಂದ ” ಎಂಬಲ್ಲಿ ಹೆಚ್ಚು ನಿಶಿತವಾದ ರೂಪಕವಿದೆ. ‘ದೇವತೆ II’ ಕವಿತೆಯಲ್ಲಿ: “ಅವಳ ಸುಡುವ ಮಳೆಕಾಡಿನಲ್ಲಿ / ಮೌನವು ಅದೆಷ್ಟು ಜೀವಂತವಾಗಿದೆ / ನೀವು ಅದನ್ನು ಕೇಳಬಹುದು / ಕೇಳಿಸಿಕೊಳ್ಳುತ್ತ.” ಇದು ತೀವ್ರ ಭಾವಾಭಿವ್ಯಕ್ತಿಯ ಮಾತು.

ಮೂಲಭೂತವಾಗಿ ಭಾವಗೀತೆಯ ಕವಿಯಾಗಿದ್ದರೂ, ಅರುಂಧತಿ ಅವರ ಪ್ರತೀಕಗಳು ಸ್ಪಷ್ಟತೆಯ ಆಯಾಮಗಳನ್ನು ಹೊಂದಿವೆ, “ಗೀತಾತ್ಮಕಗೊಂಡ ವಿಭ್ರಮೆ / ಒಂದು ಬಗೆಯ ಪ್ರಾರ್ಥನೆ” ಎಂದು ಅವರು ಹೇಳುವಾಗ ಆಕೆ ಕಠಿಣ ಪರಿಶ್ರಮದ ಕುಶಲಕರ್ಮಿ. ಆದರೆ ಅತ್ಯುತ್ತಮ ಕಾವ್ಯದಲ್ಲಿ ಆಗುವಂತೆ, ಆ ಕಠಿಣತೆ ಮತ್ತು ಪರಿಶ್ರಮ ಕಾವ್ಯದಲ್ಲಿ ಕಂಡುಬರುವುದಿಲ್ಲ. ತನ್ನ ತಾಯಿಯ ಕುರಿತ ನೆನಪಿನಲ್ಲಿ, ಅವರು ಹೀಗೆ ಬರೆಯುತ್ತಾರೆ: “… ಕೀಹೋಲ್ ಗಳು ಸದಾ ಕಾಲ / ಬಾಗಿಲುಗಳಿಗಿಂತ ಹೆಚ್ಚಿನದನ್ನು ತೋರುತ್ತವೆ. / ಗೋಡೆಯಲ್ಲಿ ಒಂದು ಸಣ್ಣ ಬಿರುಕು /ಅಷ್ಟೇ ನಿಮಗೆ ಬೇಕಿರುವುದು / ಸಮಾನಾಂತರ ವಿಶ್ವವೊಂದರ ಒಳಕ್ಕೆ ಮುಗ್ಗರಿಸಿ ಬೀಳಲು”.

ಇಂತಹ ಸಶಕ್ತ ಸಾಲುಗಳು ಪುಸ್ತಕದುದ್ದ ಕಾಣಸಿಗುತ್ತವೆ, ಇದು ಆಧ್ಯಾತ್ಮಿಕ ಮತ್ತು ಭೌತಿಕ ವಿಚಾರಗಳ ಸಮರ್ಪಕ ಬೆಸುಗೆಯಾಗಿದೆ. ಪರ್ವತಗಳಲ್ಲಿನ ಸನ್ಯಾಸಿಯ ಕುರಿತು ಅವರು ಬರೆಯುತ್ತಾರೆ: “ನಾನು ದೇವಾಲಯವನ್ನು ಸ್ವಚ್ಛಗೊಳಿಸುತ್ತೇನೆ / ಅದು ನನ್ನನ್ನು ಸ್ವಚ್ಛಗೊಳಿಸುತ್ತದೆ”.

ಕವಿತೆಗಳು ಬಹುತೇಕ ಮಹೋನ್ನತವೂ ಸೊಗಸಾಗಿಯೂ ಇರುತ್ತವೆ. ಆಕೆ ಅದೇ ಕಾಲದಲ್ಲಿ ಬಿಗುವಿನ ಕಾವ್ಯವನ್ನೂ ಸಹ ಬರೆಯುತ್ತಾರೆ. ‘ಸಂಕ್ಷಿಪ್ತವಾಗಿ’ ಎಂಬ ಸಮರ್ಪಕ ಶೀರ್ಷಿಕೆಯ ಕವಿತೆಯಲ್ಲಿ ಒಂದು ಉಲ್ಲೇಖವಿದೆ: “… ನಿಮ್ಮ ಜೀವನದುದ್ದಕ್ಕೂ ನೀವು ಏನೂ ಮಾಡಲಿಲ್ಲ / ಗಾಜಿನ ಮೇಲೆ ಗಾಢ ಉದ್ರಿಕ್ತ ವಿನ್ಯಾಸಗಳನ್ನು ಮಾಡಿದ್ದು ಹೊರತು / ನೀವು ಇನ್ನೂ ಇದ್ದೀರಿ / ಹೊರಗೆ”.

ಅರುಂಧತಿ ಅವರ ಕವಿತೆಗಳು

ವಸ್ತ್ರ

ಕೆಲದಿನ ನಿಮ್ಮ ವಾರ್ಡ್ ರೋಬಿನಲ್ಲಿನ
ಯಾವುದೂ ಸಮಾಧಾನ ಕೊಡುವುದಿಲ್ಲ
ಬಿಸಿಗೆ ಹುಚ್ಚೆದ್ದ ಇಕಟ್ ಗಳಲ್ಲ, ತೆಳುವರ್ಣ ಸೆಕ್ಯುಲರ್ ಛಾಯೆಗಳಲ್ಲ
ಪರರದಂತೆ ನನ್ನದೆನ್ನುವ ಯಾವ ಋತುಮಾನವೂ ಇಲ್ಲ

ಬರೀ ಕಾಯುತ್ತಿ ನೀನು,
ಸರತಿಗಳಲ್ಲಿ, ಈ ಬರ ನೀಗಲು

ನಿನಗೆ ತಿಳಿದಿದೆ ಹೃದಯದ ವಂಚಕತನ
ಹಾಗೂ ದೌರ್ಬಲ್ಯಗಳ ಕುರಿತು ತಿಳಿಯಬೇಕಿರುವುದೆಲ್ಲವೂ
ಅದರ ನೇಯ್ಗೆಯ ವಿನ್ಯಾಸಗಳು,
ಅದರ ಸ್ಥಿತಿಸ್ಥಾಪಕ ಭ್ರಮೆಗಳು
ಅದರ ಪಾಲಿಕಾಟ್
ಅದರ ಬಳಕೆಯ ಸಮೆದ ಹರಿದ ಸ್ಥಿತಿಯ
ಬಹುದೇವರಾರಾಧನೆಯ ಬಗ್ಗೆ
ಇನ್ನು ತಿಳಿಯಲು ಏನೂ ಇಲ್ಲ ಎಂದು

ಆದರೂ ಕಾಯುತ್ತೀಯ
ನೀನು ಬಲ್ಲೆ, ಅಂಥದೊಂದು ಮತ್ತೆ ಘಟಿಸಿದರೆ
ಆ ವಸ್ತ್ರದ ಪರಪರ ಸದ್ದು
ಹೇಗೂ ಬಳಸಬಹುದಾದ ಸೂರ್ಯ ಮಾಡಿದ
ಅಚ್ಚು ಮುದ್ರಣ
ಅದು ತಾನು ಅತಿಯಾಗಿ ಭಾವಿಸಿಕೊಂಡಿದೆ
ಎಲ್ಲ ಎದೆಕುಟ್ಟುವ ಪ್ರಶ್ನೆಗಳಿಗೆ
ಎಂದೆಂದಿಗೂ ಕೊನೆ ಹಾಡಿಬಿಡಲು

ಆದರೆ ಚಳಿಗಾಲ ಬಂದಾಗ
ಅವೆಲ್ಲ ಪ್ರತಿಸಲವೂ ಮರಗುಟ್ಟುತ್ತವೆ.

ಹಾಗಾಗಿ ನೀನು ಮರಳುತ್ತೀಯ
ಒಲ್ಲದ ಮನದಿಂದ

ಆ ಹರಹನ್ನು ಅದರ ಹೊಲಿಗೆಯ
ಅಂಚನು ಹಿಡಿದು
ಹಿಂಡುವ ಮಾಂಸಖಂಡದ
ಪ್ರತಿರೋಧದ ನಡುವೆಯೂ

ಆ ವಿಶ್ವದ ಅತಿ ಪ್ರಾಚೀನ ವಸ್ತ್ರದ
ಆಳ ಆಳಕ್ಕೆ ಆ ಕಣ್ಣು ಕತ್ತಲು ಹಿಡಿಸುವ
ವಿಸ್ತಾರವಾಗುತ್ತ ಹೋಗುವ ಹೃದಯದ
ಯೋಗ್ಯತಾಶಾಹಿತ್ವವನ್ನು
ಅಗೆಯುವುದಕ್ಕೆ

(ಇಕಾಟ್: ನೇಯ್ಗೆಗೆ ಮೊದಲೇ ಬಣ್ಣ ಹಾಕಿದ ಬಟ್ಟೆ)

ಮುಂಬಯಿಯ ಲೋಕಲ್ ಟ್ರೇನ್

ಮುಂಬಯಿಯ ಲೋಕಲ್ ಟ್ರೇನಿನ
ಹೆಂಗಸರ ಕಂಪಾರ್ಟ್ಮೆಂಟಿನಲ್ಲಿ
ನಾವು ಯಾವ ಖಾಸಗೀ ದೈವಿಕ
ಪ್ರದರ್ಶನವನ್ನೂ ಬಯಸುವುದಿಲ್ಲ
ಬಿಡದೆ ಅಸಿಟಲೀನ್ ನ ಜ್ವಾಲೆ ನೆಕ್ಕುವ
ಲೋಹದಂತೆ ನಾವು ಬೆಸೆದುಕೊಂಡಿದ್ದೇವೆ
ಕನಸುಗಳು, ವಿಪತ್ತುಗಳು
ಕ್ರಿಮಿಗಳು, ಭವಿಷ್ಯಗಳು
ಮಾಂಸ, ಆರ್ಗಂಜಾ ಸೀರೆಗಳು
ಬಣ್ಣಗಳು, ಅಂಡಾಶಯಗಳು
ಸಾವಿರ ಕೈಗಳ ಲಕ್ಷಗಟ್ಟಲೆ ನಾಲಗೆಗಳ
ಹಲವು ಗಂಡಂದಿರ ಕಾಳಿ
ಗಾಲಿಗಳ ಮೇಲೆ

ಕೆಳಗಿಳಿದಾಗ ನಾನು
ಕ್ಯಾರಟ್ ಚೂರುಗಳನ್ನೋ
ಅಥವಾ ಪ್ರಣಯಿಯನ್ನೋ
ಆಯ್ದುಕೊಳ್ಳಬಹುದು
ನಾನು ಎರಡನೆಯದನ್ನು
ಮುಂದೂಡುತ್ತೇನೆ

ಎಲ್ಲಿ ಬರೆಹ ಮುಗಿಯುವುದೋ ಅಲ್ಲಿ

ಅವನ ಶರಟು ಟ್ಯಾಂಗರೀನ್ ಬಣ್ಣ
ಆಕಾಶ ನೀಲಿ ಮಣ್ಣಿನ ಮಡಕೆ
ಸೂರ್ಯನ ಬೆಳಕು ಡ್ಯಾಫೋಡಿಲ್ ಗಳು

ಇಲ್ಲಿ ಅಸೂಯೆಯೂ ಚೆನ್ನಾಗಿ ಬೆಳಗುತ್ತದೆ
ಹುರಿದ ಹಸಿರು ಬ್ರಕೋಲಿಗಿಂತ

ಹಗಲಹೊತ್ತಿನ ಈ ದೇಶದಲ್ಲಿ
ಕಾಲುವೆಗಳು ಮಾತಾಡುತ್ತವೆ
ಅಸಂದಿಗ್ಧ ಮಾತುಗಳು

ನಾವು ನಮ್ಮ ಭುಜಗಳ ಮೇಲೆ ನೋಡಿಕೊಳ್ಳುತ್ತೇವೆ
ವೆನಿಸ್ನ ಗುರುತೇನಾದರೂ ಉಳಿದಿದೆಯೇ ಎಂಬಂತೆ

ಎಲ್ಲ ಭಾಷೆಗಳೂ ಇಲ್ಲಿ ಪ್ರಾಮಾಣಿಕವಾಗಿವೆ
ಯಾವುದೂ ಇರಬೇಕಾದಷ್ಟಲ್ಲ

ಮನೆಯಲ್ಲವನು ಮಾತನಾಡುವುದು
ಈವರೆಗೂ ಅವನು ಬರೆಯದ ಭಾಷೆಯಲ್ಲಿ
ಯಾವಾಗಲೂ, ಅವನಮ್ಮ ಸತ್ತಾಗಲೂ ಬರೆಯದ ಭಾಷೆ

ಮನಸ್ಸಿನ ಇಂಕಿಗೆ ಹಲವು ಉಪನದಿಗಳು ಇರುವಾಗಲೂ
ಆ ಸ್ಥಳದಲ್ಲಿ ಬದುಕುವುದು ಏನೆಂದು ನನಗೆ ಗೊತ್ತು
ಆ ಉಪನದಿಗಳು ಎಲ್ಲ ಹಾಡುಗಳೂ ಒಂದಿಷ್ಟು
ಸುಳ್ಳೆಂದು ತೋರಲು ಸಾಕಾಗುವಷ್ಟು ಕಳಿತಿವೆ

ಅದೇನೂ ವಿಚಾರವಲ್ಲ
ಅವನು ನನ್ನ ತುಟಿಗಳನ್ನು ಓದುವನೋ
ಅಥವಾ ನಾನು ಅವನ ಸಣ್ಣಕ್ಷರದ
ಮ್ಯಾಂಡರಿನ್ ಅನ್ನು ಓದುವೆನೋ
ಏಕೆಂದರೆ ಅದು ಈಗಲೂ ಪ್ರಸ್ತುತವಿದೆ

ಹಳೆಯ ಕನಸು –
ಒಂದು ಜಾಹಿರಾತು
ಹೆಣ್ಣು ಮತ್ತು ಗಂಡು
ಇರುಳಿನಲ್ಲಿ, ಆಗಸದ ಅಡಿಗೆ
ಮತ್ತೆ ಒಂದು ಕ್ಷಣ ಅವರಿಬ್ಬರ ನಡುವೆ
ಒಂಟಿ ಸೂರ್ಯ.