ನೀನೆಂಬ ಉಷ್ಣತೆ…

ಹೂಗರೆದು ಬರಸೆಳೆದು
ಹೊಂಗಿರಣ ಕೊಡಿಸಿ..
ಮಳೆಬಿಲ್ಲ ಮುಡಿಗಿರಿಸಿ
ಹನಿ ಮುತ್ತ ಸುರಿಸಿ…
ನಕ್ಷತ್ರ ಪುಂಜಗಳ
ಕಿವಿಯೋಲೆ ತೊಡಿಸಿ
ಚಂದಮನ ಶೀತಲತೆ
ಬದಿಗಿಟ್ಟು ಸುಖಿಸಿ…

ನಲ್ಲೆ ನೀನೆಂಬ ಉಷ್ಣತೆಯ
ಸಮತೋಲನಕೆ ತರಲು
ನಾ ಪಟ್ಟ ಪಾಡುಗಳ
ಅಗಣಿತ ಗುಣಿತ ಹೆಣೆತ..
ಪ್ರಾಖಂಡ ಪಾಂಡಿತ್ಯ ಅತ್ಯಗತ್ಯ…
“ಯಾಕೋ ಪ್ರೀತಿಸುತಿಲ್ಲ
ನೀವು ನನ್ನ ” ಮತ್ತೆ
ಶುರುವಾದವು ನಿನ್ನ ರಗಳೆ..!

ಹಸಿಬಿಸಿಯ ಮಾತಿಗೆ
ಎನಿತು ಮುನಿಸು..?
ಉಪವಾಸ ವನವಾಸ
ಅನವರತ ತ್ರಾಸ…!!
ಸಂಸಾರ ಬಲು ಗಡುಸು
ಬ್ರಹ್ಮಚರ್ಯವೇ ಸೊಗಸು..!

ಆ ಮಾತು ಹೆಚ್ಚು
ಈ ಮಾತು ಕಡಿಮೆ..
ಅಳೆದೂ ಹೊಯ್ದು
ತಕ್ಕಡಿಯಲಿಟ್ಟ ಬದುಕು…
ಪದಬಳಕೆಯ ಗರಿಷ್ಠವನು ಹಿಡಿದು
ಹಾಗಂದಿರಿ ನೀವು ಹೀಗಂದಿರೆನುತ
ಸಲ್ಲದ ಮಾತುಗಳ
ಮೂದಲಿಸಿ ನುಡಿದು..!

ಅದರಲದೆಷ್ಟು ತೃಪ್ತಿ ನಿನಗೆ!?
ಕ್ಷಣಕೇರಿದ ಪಿತ್ತ ಮತ್ತೆ ಮಗುವ ಚಿತ್ತ..
ಮತ್ತೆ ಸೋಲುವವನು ನಾನೇ
ಆ ಮುಂಗುರುಳ ಮಾಯೆಗೆ
ಇನಿದನಿಯ ಮೋಹಕೆ..!!
ನೀ ಹೇಗಿದ್ದರೂ ಅದುವೆ ಚೆನ್ನ..
ನಾನಷ್ಟು ಪ್ರೀತಿಸುವೆ ನಿನ್ನ ಚಿನ್ನ…!!

ಅರ್ಚನಾ ಎಚ್ ಬೆಂಗಳೂರಿನವರು
ಕತೆ ಮತ್ತು ಕವನ ರಚನೆಯಲ್ಲಿ ಆಸಕ್ತಿ ಹೊಂದಿದ್ದಾರೆ
ದಸರಾ ಕಾವ್ಯ ಪುರಸ್ಕಾರ ಸೇರಿದಂತೆ ಹಲವು ಪುರಸ್ಕಾರಗಳು ಇವರ ರಚನೆಗಳಿಗೆ ಲಭಿಸಿವೆ