ನೆನಪುಗಳನ್ನು ಮಡಿಚಬೇಕಾಗಿತ್ತು

ನೆನಪುಗಳನ್ನು ಮಡಿಚಬೇಕಾಗಿತ್ತು
ಜಾತ್ರೆ ಮುಗಿದ ಮೇಲೆ
ಉರುಳಬೇಕಾಗಿತ್ತು ತೇರು
ದವನದ ಘಮಲಿನಲಿ

ನೆನಪುಗಳನ್ನು ಮಡಿಚಬೇಕಾಗಿತ್ತು
ಬೆಟ್ಟಕ್ಕೊ ಬಾಲ್ಯದ ಬಳ್ಳಿ ಅಪ್ಪಿಕೊಳ್ಳಬೇಕಾಗಿತ್ತು
ಸೀತಾಫಲ ದಿಕ್ಕು ತಪ್ಪಬಾರದಿತ್ತು
ದನಕಾಯ್ವ ಹುಡುಗನ ಕಳೆ ಕಳೆಗುಂದಬಾರದಿತ್ತು

ನೆನಪುಗಳನ್ನು ಮಡಿಚಬೇಕಾಗಿತ್ತು
ಬಳಿದುಕೊಂಡ ಪಡಿಯ ಸುಣ್ಣದಲಿ
ಅಂಗೈ ಹುಣ್ಣುಗಳು
ಪರಮಾತ್ಮನ ಧ್ಯಾನದಲ್ಲಿ
ಗರಿಕೆಗಳನ್ನ ತಾಕಬೇಕಿತ್ತು

ನೆನಪುಗಳನ್ನು ಮಡಿಚಬೇಕಾಗಿತ್ತು
ಅಕ್ಕ ತಂಗಿಯರ ಹೊಂಡದಾಚೆ ಬೈರಾಪುರ ಈಚೆ
ನಟ್ಟ ನಡುವೆ
ಮುದುಡಿಹ ಬೆಟ್ಟದಲ್ಲೂ
ಪರಮಾತ್ಮನ ಧ್ಯಾನದಲ್ಲಿ ನಂದಿ

ನೆನಪುಗಳನ್ನು ಮಡಿಚಬೇಕಾಗಿತ್ತು
ನೀರ್ಗಲ್ಲಿನ ಸ್ಪರ್ಶ
ಪಾಚಿಯ ಘರ್ಷ
ಮುಕ್ಕಳಿಸಬೇಕಿತ್ತು ಕಿಲ್ಲೆಯ ತೊಟ್ಟಿಲು

ಜಾತ್ರೆ ಮುಗಿದ ಮೇಲೆ
ಆತ್ಮದ ತೇರ ಎಳೆಯುವಾಗಲೇ
ಬೆಟ್ಟದ ಕನವರಿಕೆಗಳು ಮರುಕಳಿಸುವಾಗಲೇ
ದವನದ ಘಮಲು ತೀರುವಾಗಲೇ
ನೆನಪುಗಳನ್ನು ಮಡಿಚಬೇಕಾಗಿತ್ತು

ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌ ಭಾಷೆಯ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೂಫಿ ಸಾಹಿತ್ಯ ಇವರಿಗೆ ಅಚ್ಚುಮೆಚ್ಚು.
‘ಒಂಟಿ ಹೊಸ್ತಿಲು’, ‘ಅನಾಮಧೇಯ ಹೂ’, “ಹರವಿದಷ್ಟು ರೆಕ್ಕೆಗಳು” ಪ್ರಕಟಿತ ಕವನ ಸಂಕಲನಗಳು