ವಿಶಿಷ್ಟ ಶೈಲಿಯ ಕಥೆಗಳನ್ನು ಬರೆಯುತ್ತಿದ್ದ ಸಾಹಿತಿ ಎಂ.ವ್ಯಾಸ ಅವರು ಕಾಸರಗೋಡು ಜಿಲ್ಲೆಯವರು. ಕಥೆ, ಕವನ ಮತ್ತು ಕಾದಂಬರಿ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿ ಮಾಡಿದ ವ್ಯಾಸ ಅವರು ವೈಚಾರಿಕ ಲೇಖನಗಳನ್ನೂ ಬರೆದಿದ್ದಾರೆ. ತಮ್ಮ ಸಾಹಿತ್ಯ ಕೃತಿಗಳ ಕುರಿತು ಪ್ರಚಾರ ಮಾಡುವುದು, ಅವಕಾಶಗಳ ಬೆನ್ನುಬಿದ್ದು ‘ಕೀರ್ತಿಶನಿ’ಯ ಸ್ನೇಹ ಮಾಡುವುದನ್ನು ಅವರು ಎಂದೂ ಇಷ್ಟಪಡುತ್ತಿರಲಿಲ್ಲ.  ಆದರೆ ಸಾರಸ್ವತ ಲೋಕದಲ್ಲಿ ಅವರು ಸೃಷ್ಟಿಸಿದ ಕಥಾಲೋಕವನ್ನು ಬಹುದೊಡ್ಡ ಸಂಖ್ಯೆಯ ಓದುಗರು ಮೆಚ್ಚಿದ್ದಾರೆ. 2008ರ ಜುಲೈ 23ರಂದು ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಬರಹಗಳನ್ನು ನೆನಪಿಸಿಕೊಳ್ಳುತ್ತ,  ಕ್ಷಿತಿಜ್‌ ಬೀದರ್‌ ಬರೆದ ಬರಹ ಇಲ್ಲಿದೆ. 

 

ಕಥೆಗಾರ ಎಂ.ವ್ಯಾಸರು ತಮ್ಮ ಸಾಹಿತ್ಯದ ಮೂಲಕ ಮನಸ್ಸಿನ ಭಿನ್ನ ಆಯಾಮಗಳ ಲೋಕವನ್ನೇ ತೆರೆದಿಟ್ಟವರು.ಕನ್ನಡದ ಕಥಾಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿದವರು ಎಂದೇ ಅವರನ್ನು ಎಲ್ಲರೂ ಗುರುತಿಸುತ್ತಾರೆ.

ನಾನು ಬಿಎಸ್ಸಿ ಯಲ್ಲಿರುವಾಗ(೧೯೭೮) ತುಷಾರದಲ್ಲಿ ಪ್ರಕಟವಾಗುತ್ತಿದ್ದ ಅವರ ಕಥೆಗಳನ್ನು ತುಂಬಾ ಆಸಕ್ತಿಯಿಂದ ಓದುತ್ತಿದ್ದೆ. ಅವರ ಕಥೆಯ ನಾಯಕರು ನನ್ನ ಮಾನಸಿಕ ನೆಲೆಗೆ ತುಂಬಾ ಹತ್ತಿರದವರಾಗಿದ್ದರು. ಮಾರ್ಚ್ ೧೯೭೮ ರ ತುಷಾರದಲ್ಲಿ ಪ್ರಕಟವಾಗಿದ್ದ ಅವರ ಕಥೆ ‘ಕೂಪ’ ಓದಿ, ‘ಎಂ ವ್ಯಾಸರು ನಮ್ಮನ್ನು ಯಾವುದೋ ಕೂಪಕ್ಕೆ ತಳ್ಳುತ್ತಿರುವಂತೆ ಭಾಸವಾಯಿತು. ಹೊಸ ಥೀಸಿಸ್ ಸಾಧಿಸುವಂತೆ ಕಥಾ ಶೈಲಿ ಓಡಿದೆ.’ ಎಂದು ಪ್ರತಿಕ್ರಿಯಿಸಿದ್ದು ತುಷಾರದಲ್ಲಿ ಪ್ರಕಟವಾಗಿತ್ತು. ಅದು ನನ್ನ ಮೊದಲ ಅನಿಸಿಕೆಯಾಗಿತ್ತು. ಆಗ ಏನೂ ತಿಳಿಯದ ಒಣ ಪ್ರತಿಷ್ಠೆ…! ನಿಜವಾಗಿಯೂ ಅವರು ಥೀಸಿಸ್ ಸಾಧಿಸುವ ಕಥೆಗಾರರು ಎಂದು ಆಗ ತಿಳಿದಿರಲಿಲ್ಲ. ಓದುತ್ತ ಓದುತ್ತ, ಅವರ ನಿರೂಪಣಾ ಶೈಲಿಗೆ ಮರುಳಾಗಿ ಅವರ ಕಥಾ ಪರಿಧಿಗೆ ಸೇರಿಬಿಟ್ಟೆ. ಎಲ್ಲಿಯೇ ಅವರ ಕಥೆ ಪ್ರಕಟವಾಗಲಿ, ಸಂಪಾದಿಸಿ ಓದುವ ಸೆಳೆತ ಶುರುವಾಗಿತ್ತು. ನನ್ನಂಥ ಅನಾಥ ಪ್ರಜ್ಞೆಯ ತಬ್ಬಲಿ ಭಾವಕ್ಕೆ ಅವರು ಕಥಾ ವಸ್ತುವಿನ ಹೂರಣ ಒದಗಿಸುತ್ತಿದ್ದರು.

ಮನಸ್ಸುಗಳ ಹಠಾತ್ ಸ್ಫೋಟದ ಭಯ ಆವರಿಸಿ, ನೋವು ಅನುಭವಿಸುವ ಭ್ರಾಂತಿಯಲ್ಲಿ, ಕಥಾ ಪಾತ್ರಗಳಿಂದ ಖುಷಿ ಅನುಭವಿಸುತ್ತಿದ್ದೆ. ಸಾಂತ್ವನ ನೀಡುತ್ತಿರುವ ಅವ್ಯಕ್ತ ಭಾವ ಲಹರಿ…! ಗಲಿಬಿಲಿಗೊಂಡ ಯುವ ಮನಸ್ಸುಗಳ ಸರತಿಯಲ್ಲಿ ನಾನೂ ಅಗೋಚರವಾಗಿ ನಿಂತಿದ್ದೆ. ವ್ಯಾಸರು ನೀಡಿದ ಶಬ್ದಗಳ ಬೀಜ ಭಿಕ್ಷೆ ಅಷ್ಟಷ್ಟೇ ಮೊಳೆತು ಫಲ ನೀಡಿತ್ತು. ಅಜ್ಞಾತದಲ್ಲಿಯೇ ಅವರ ಶೈಲಿಯ ದಾಸನಾಗಿ, ಅದೇ ತಂತ್ರದಲ್ಲಿ ಒಂದೆರಡು ಕಥೆ ಕೂಡ ಬರೆದೆ.

ಸಣ್ಣ ಸಣ್ಣ ವಾಕ್ಯ… ಅಸಂಗತ ಸಂಭಾಷಣೆ… ಅರ್ಥಗರ್ಭಿತ ಭಾವಲಹರಿ… ಅವರ ಕಥೆಯ ವಿಶೇಷತೆಯಾಗಿತ್ತು. ಎರಡು ವಾಕ್ಯ ಓದುವುದರಲ್ಲಿಯೇ ತಳ ಶೋಧನೆಗೆ ಪ್ರೇರೇಪಿಸುವ ಅವರ ಶಬ್ದ ಶಕ್ತಿ ಅಗಾಧವಾಗಿತ್ತು. ಕಥೆಗಳಿಗೆ ಎರಡು ಅಕ್ಷರದ ಶೀರ್ಷಿಕೆ ನೀಡುವ ಪೂರ್ಣ ಪ್ರಜ್ಞೆಯಲ್ಲಿ, ಮನಸ್ಸಿನ ಗಲಿಬಿಲಿ ಚಿತ್ರಣವನ್ನು ವಿವಿಧ ಆಯಾಮದಲ್ಲಿ ಸಮರ್ಥವಾಗಿ ಸೆರೆ ಹಿಡಿಯುತ್ತಿದ್ದರು. ವಿಶಿಷ್ಟ ಶೈಲಿಯ ಕಥೆಗಾರರಾದ ಎಂ.ವ್ಯಾಸರು ಕಾಸರಗೋಡಿನ ಹಳ್ಳಿಯವರು.

೧೯೮೩ ಸಾಲಿನ ತುಷಾರ ಕಥೆಗಳ ವಾರ್ಷಿಕ ವಿಮರ್ಶೆಗೆ ಸಂಪಾದಕರು ಆಹ್ವಾನಿಸಿದಾಗ ಮೌಲ್ಯಮಾಪನದಲ್ಲಿ ಎಂ. ವ್ಯಾಸರ ‘ಚಿತೆ’ ಕಥೆಯೇ ಪ್ರಥಮ ಸ್ಥಾನ ಗಳಿಸಿತ್ತು. ವಿಮರ್ಶಿಸಿದ ನನಗೆ ಮೂರನೇ ಬಹುಮಾನ ಬಂದಿತ್ತು. ಅವರ ಕಥಾ ಸಂಕಲನಕ್ಕಾಗಿ ೨೦೦೨ ರಲ್ಲಿ ಪತ್ರ ಬರೆದಾಗ ಪ್ರತಿಗಳು ಇಲ್ಲವೆಂದು ಉತ್ತರಿಸಿದವರು ವರ್ಷದ ನಂತರ ಮರೆಯದೆ ‘ಕೃತ’ ಕಥಾ ಸಂಕಲನವನ್ನು ಕಳುಹಿಸಿಕೊಟ್ಟಿದ್ದು ಕಂಡು ನನಗೆ ಅಚ್ಚರಿ…!

ಸಾವಿನ ಬಗ್ಗೆ ಬರೆಯುತ್ತಿದ್ದ ವ್ಯಾಸರು ಸಾವನ್ನಪ್ಪಿಕೊಂಡು(೨೩-೭-೨೦೦೮) ಇನ್ನಿಲ್ಲವಾದರು. ಈ ವಿಶಿಷ್ಟ ಕಥೆಗಾರರಿಗೆ ಸಂದ ಮನ್ನಣೆ ಪ್ರಶಸ್ತಿಗಳು ಬಹಳ ಕಮ್ಮಿ. ಅವರ ಮರಣಾ ನಂತರ ಶಿವಮೊಗ್ಗದ ಕರ್ನಾಟಕ ಸಂಘವು ‘ಅಸ್ತ್ರ’ ಕಥಾ ಸಂಕಲನಕ್ಕೆ ಯು.ಆರ್. ಅನಂತಮೂರ್ತಿ ಪ್ರಶಸ್ತಿ ನೀಡಿತ್ತು. ಅವರು ಪ್ರಶಸ್ತಿಯ ಹಂಗು ತ್ಯಜಿಸಿ ಮುಂದೆ ಹೋಗಿದ್ದರು. ನನಗೆ ಬರೆದ ಒಂದು ಕಾರ್ಡಿನಲ್ಲಿ ಅವರು, ‘ಸಹ ಬರಹಗಾರರ ಪ್ರೀತಿ ವಿಶ್ವಾಸಗಳು ಈ ಎರಡು ಅಕ್ಷರವನ್ನು ಹಿಮಾಲಯದೆತ್ತರಕ್ಕೆ ಬೆಳೆಸಿವೆ, ಅಥವಾ ಅಂತಹ ಭ್ರಮೆ ಮೂಡಿಸಿದೆ.’ ಎಂದು ಹೇಳಿಕೊಂಡಿದ್ದರು.

  ಸಣ್ಣ ಸಣ್ಣ ವಾಕ್ಯ… ಅಸಂಗತ ಸಂಭಾಷಣೆ… ಅರ್ಥಗರ್ಭಿತ ಭಾವಲಹರಿ… ಅವರ ಕಥೆಯ ವಿಶೇಷತೆಯಾಗಿತ್ತು. ಎರಡು ವಾಕ್ಯ ಓದುವುದರಲ್ಲಿಯೇ ತಳ ಶೋಧನೆಗೆ ಪ್ರೇರೇಪಿಸುವ ಅವರ ಶಬ್ದ ಶಕ್ತಿ ಅಗಾಧವಾಗಿತ್ತು. ಕಥೆಗಳಿಗೆ ಎರಡು ಅಕ್ಷರದ ಶೀರ್ಷಿಕೆ ನೀಡುವ ಪೂರ್ಣ ಪ್ರಜ್ಞೆಯಲ್ಲಿ, ಮನಸ್ಸಿನ ಗಲಿಬಿಲಿ ಚಿತ್ರಣವನ್ನು ವಿವಿಧ ಆಯಾಮದಲ್ಲಿ ಸಮರ್ಥವಾಗಿ ಸೆರೆ ಹಿಡಿಯುತ್ತಿದ್ದರು.  

ಅವರು ಈಗ ಭೌತಿಕವಾಗಿ ಇಲ್ಲದಿದ್ದರೂ ಅವರು ಸೃಷ್ಟಿಸಿದ ದುರ್ಗಾಪುರ, ಹೊಸನಗರ ಮತ್ತು ಶಂಕರಿ ನದಿ ಮಾತ್ರ ಸದಾ ಅಮರವೇ..!

ಎಂ.ವ್ಯಾಸರು ತೀರಿಕೊಂಡಾಗ ಅವರ ವಯಸ್ಸು ೬೮ ಮಾತ್ರ…! ಎಷ್ಟೋ ಓದುಗರಿಗೆ ಎಂ.ವ್ಯಾಸರ ಹೆಸರಿನಲ್ಲಿರುವ ಎಂ. ಬಗ್ಗೆ ತಿಳಿದಿರುವುದಿಲ್ಲ. ಕಾಸರಗೋಡಿನ ‘ಮನ್ನಿಪಾಡಿ’ ಊರು ಕರ್ನಾಟಕಕ್ಕೆ ಸೇರಿದರು.  ಅತ್ತ ಕೇರಳಕ್ಕೆ ಸೇರಿದ ಊರಿನವರು ಎಂಬುದಾಗಿ ಕರ್ನಾಟಕದ ಆಡಳಿತ ಅವರನ್ನು ಮರೆತಿತೇನೋ. ಆದರೆ ಅವರ ಬರಹದ ಸತ್ವವು ಅಪ್ಪಟ ಕನ್ನಡದ ಸೊಗಡನ್ನು ಹೊಂದಿತ್ತು.  ಗಡಿನಾಡಿನ ಕನ್ನಡಿಗರ ಹೃದಯ ಸಂವೇದನೆ, ಭಾಷಾ ನೋವು, ಕಂಬನಿ ಅರ್ಥೈಸುವುದಾದರೂ ಹೇಗೆ…?

“ನಾನೀಗ ಸಾಯುತ್ತೇನೆ ಮಗಾ” ಎಂಬ ಪೂರ್ಣ ಪ್ರಜ್ಞೆಯ  ಮಾತುಗಳನ್ನು ಎಂ.ವ್ಯಾಸರು ಮಗನಿಗೆ ಹೇಳಿದ್ದರಂತೆ.  ಅವರ ಮಗ ತೇಜಸ್ವಿಗೆ ಹೇಗೆನಿಸಿರಬಹುದು…!? ದುಃಖತಪ್ತರಾದವರು ಸಾಮಾನ್ಯವಾಗಿ ಗಜಲ್ ಗಳಿಗೆ ಮೊರೆ ಹೋಗುವುದು ಸಹಜವೇ…’ ಜಾನೆ ಕ್ಯಾ ತೂನೇ ಕಹಿ, ಜಾನೇ ಕ್ಯಾ ಮೈನೇ ಸುನೀ…’ ಪ್ಯಾಸಾ ಚಿತ್ರದ ಗೀತಾದತ್ತಳ ಹಾಡು ವ್ಯಾಸರ ಅಚ್ಚುಮೆಚ್ಚು.

ಅವರನ್ನು ‘ವಿಕ್ಷಿಪ್ತ ಬರಹಗಾರರು’ ಎಂದು ತಪ್ಪಾಗಿ ಗುರುತಿಸುವವರೇ ಹೆಚ್ಚು. ಅಸಹಾಯಕ ಪರಿಸ್ಥಿತಿಯನ್ನು ಎದುರಿಸಿದ ಎಂ.ವ್ಯಾಸರಿಗೆ ಕಾರಿನ ವ್ಯಾಮೋಹ, ಸಿಗರೇಟ್ ನ ಪ್ರೀತಿ..’ ಮೇ ಜಿಂದಗೀ ಕೆ ಸಾತ್ ನಿಭಾತಾ ಚಲಾ ಗಯಾ, ಹರ್ ಫಿಕ್ರ್ ಕೊ ದುವೆ ಮೆ ಉಡಾತಾ ಚಲಾ ಗಯಾ… ಎಂದು ಹಾಡುತ್ತಾ ಎದ್ದು ನಡೆದುಬಿಟ್ಟರೇನೋ….?

‘ಪೂಜೆ’ ಕಥೆಯನ್ನು ಸಿನೆಮಾ ಮಾಡುವುದಾಗಿ ಹೇಳಿ ಪೂರ್ಣಗೊಳಿಸದೆ ಇರುವವರು, ಕಥೆಯ ಮೂಲ ಹಸ್ತಪ್ರತಿಯನ್ನು ಓದಲು ತೆಗೆದುಕೊಂಡವರು ಕಳೆದುಹಾಕುವುದು ಎಂಥ ನಿರಾಸೆ ಮೂಡಿಸುವ ಪ್ರಸಂಗಗಳಲ್ಲವೇ…?  ಆದರೆ  ಇಂಥವುಗಳನ್ನು ಮೊದಲೇ ಊಹಿಸುವ ಎಂ.ವ್ಯಾಸರು ಮನವನ್ನು ಹದಗೊಳಿಸಿ ಸ್ಥಿತಪ್ರಜ್ಞೆ ಸಾಧಿಸುವ ಸಂತನಂತಿದ್ದರು. ಮಂಗಳೂರು ಮತ್ತು ಕಣ್ಣೂರು ವಿಶ್ವವಿದ್ಯಾಲಯಗಳಲ್ಲಿ ಅವರ ‘ಕೃತ’ ಕಥಾಸಂಕಲನ ಪಠ್ಯವಾದಾಗ, ‘ಈ ಖುಷಿಗೆ ನಂಗೆ ಎಂತ ಮಾಡಬೇಕು ಅಂತ ಗೊತ್ತಾಗುವುದಿಲ್ಲ ಮಗಾ’ ಎಂದಿದ್ದರಂತೆ. ಇವರ ಕಾಲವಾದ ನಂತರ ಸಂಬಂಧಿ ವರದರಾಜ ಚಂದ್ರಗಿರಿ ಹಲವು ಪುಸ್ತಕ ಪ್ರಕಟಿಸಿ ಉಪಕರಿಸಿದ್ದಾರೆ.

”ನಾನು ಸತ್ತಾಗ ಯಾವ ಪುರೋಹಿತರನ್ನು ಕರೆಯದೆ, ಯಾವ ಧಾರ್ಮಿಕ ಕ್ರಿಯಾ ವಿಧಿಗಳನ್ನು ಮಾಡದೆ ನೀನು ಮತ್ತು ಗೋಪಾಲಕೃಷ್ಣ ತೇಜನಿಗೆ ಹೇಳಿ ನನ್ನ ಶವವನ್ನು ದಹನ ಮಾಡಿಸಬೇಕು.” ಎಂದಿದ್ದರಂತೆ. ಶ್ರಾದ್ಧ ಹಾಕಿಸುವುದು, ತರ್ಪಣ ಕೊಡುವುದು ಅರ್ಥವಿಲ್ಲದ್ದು ಎಂಬ ಮನೋಭಾವ ಎಂ.ವ್ಯಾಸರದು.

‘ಸ್ನಾನ’ ಕಾದಂಬರಿ ಬರೆದು ಮುಗಿಸಿದ ಮೇಲೆ, “ಸಂಸಾರಿಗೆ ಸನ್ಯಾಸಿಯಾಗುವುದು ಸುಲಭ ಆದರೆ ಸನ್ಯಾಸಿ ಮತ್ತೆ ಸಂಸಾರಿಯಾಗುವುದು ಕಷ್ಟ….” ಎಂದು ಹೇಳಿದ್ದರು. ಬಾಹುಬಲಿಗೆ ಬಟ್ಟೆ ಹೊದಿಸಿದ ಚಿತ್ರ ಗಮನಿಸಿ ‘ಸ್ನಾನ’ ಕಾದಂಬರಿ ಬರೆದೆ ಎಂದರಂತೆ. ಮಡಿ ಮೈಲಿಗೆಯಿಂದ ಮುಕ್ತಗೊಂಡ ‘ಸ್ನಾನ’ ಎಂದು ನಾನು ಕುಂಡಲಿನಿ ಅರ್ಥ ಕಲ್ಪಸಿ ನಾನು ಈ ಹಿಂದೆ ವಿಮರ್ಶೆ ಬರೆದಿದ್ದೆ. ಅವರು ಸಿದ್ಧಪಡಿಸಿದ ಮೊದಲ ಪತ್ರಿಕೆ ‘ಪತಂಗ’, ನಂತರದ್ದು ‘ಅಜಂತ’ ಪತ್ರಿಕೆ ಎನ್ನುವುದನ್ನೂ ಉಲ್ಲೇಖಿಸಿದ್ದಾರೆ.

ಮಗ ತೇಜಸ್ವಿಯನ್ನುದ್ದೇಶಿಸಿ ಬರೆದ ಕೊನೆಯ ಅಪೂರ್ಣ ಪತ್ರವನ್ನು ನೆನೆದು ಕಣ್ಣೀರಿಡುವ ಮಗನ ಸ್ಥಿತಿ ನೆನಪಾಗುತ್ತದೆ. ಅವರು ಅಪ್ಪನಿಗೆ ‘ಅಣ್ಣ’ ಎಂದು ಸಂಬೋಧಿಸುತ್ತಿದ್ದರು. ಆ ಪತ್ರದ ಕೊನೆಯಲ್ಲಿ, ‘ನಾನು ಏನೂ ಆಗದಿದ್ದುದರಿಂದ – ಅಥವಾ ನನಗೆ ಏನೂ ಆಗಬೇಕೆಂಬ ಆಸೆ ಇಲ್ಲದಿದ್ದುದರಿಂದ ನನ್ನ ಮಗ ನೀನೂ ಏನಾದರೂ ಆಗಬೇಕೆನ್ನುವ ಕನಸೂ ನನಗಿದ್ದಿರಲಿಲ್ಲ…’ ಎಂದು ಬರೆದಿದ್ದರು. ಎಂಥ ಅದ್ಭುತ ಮಾತುಗಳು. ಸಂತನ ಈ ಮಾತುಗಳಿಗೆ ನಾನೆಂದೋ ಕೊಚ್ಚಿಹೋಗಿದ್ದೆ…! ಈ ವಿರಕ್ತತೆ ಎಲ್ಲರಿಗೂ ಸಾಧ್ಯವಾಗುವುದಿಲ್ಲ.

ಜನಪ್ರಿಯತೆಯ ಗೀಳು,  ಪ್ರಚಾರ, ರಾಜಕೀಯ ಸ್ಪರ್ಧೆಯ ಹೊರಗಿದ್ದ ಎಂ.ವ್ಯಾಸರನ್ನು ನಾಡು ಆದರಿಸದಿದ್ದರೆ ಕ್ಷಮೆಯೇ ಇಲ್ಲ ಎಂದೆನಿಸುತ್ತದೆ ನನಗೆ. ಆದರೆ ಅವರ ಕಥೆಗಳ ಓದುಗ ವಲಯ ಬಹು ದೊಡ್ಡದಿದೆ.