Advertisement
“ಆಕಿ” ಅಂದ್ರ ಅಕ್ಷರ ಕಲಿಸಿದಾಕಿ: ಸುವರ್ಣ ಚೆಳ್ಳೂರು ಸರಣಿ

“ಆಕಿ” ಅಂದ್ರ ಅಕ್ಷರ ಕಲಿಸಿದಾಕಿ: ಸುವರ್ಣ ಚೆಳ್ಳೂರು ಸರಣಿ

ಫುಲೆ ಶಾಲೆಯಲ್ಲಿ  ಕಲಿತಂತಹ ಹೆಣ್ಣು ಮಕ್ಕಳು ವೈಚಾರಿಕವಾಗಿ ಚಿಂತನೆ ಮಾಡುವಷ್ಟು ಬೆಳೆದು ಬರಹಗಾರರಾದ್ರು, ಅದ್ರಲ್ಲಿ ಭಾರತದ ಮೊಟ್ಟ ಮೊದಲ ಸ್ತ್ರೀವಾದಿ ಲೇಖಕಿ ತಾರಾಬಾಯಿ ಶಿಂಧೆ ಅವರು ಸಾವಿತ್ರಿಬಾಯಿ ಫುಲೆ ಅವರ ಶಿಷ್ಯೆ ಆಗಿದ್ರು, ಈ ರೀತಿಯಾಗಿ ಅದೆಷ್ಟೋ ವಿರೋಧಗಳ ನಡುವೆ ತಮ್ಮ ಸಮಾಜ ಸುಧಾರಣೆಯನ್ನ ಮುಂದುವರಿಸಿದರು. ಈ ಪಾಠದಿಂದ ಗೊತ್ತಾಗೋದೇನಂದ್ರೆ ಶಿಕ್ಷಣಕ್ಕೆ ಯಾವ ಜಾತಿಯ ಹಂಗೂ ಇಲ್ಲ, ಕಲಿಯುವ ಮನಸ್ಸಿದ್ರೆ ಎಂಥವರೂ ಕಲಿತು ಸಾಧನೆ ಮಾಡಬಹುದು’ ಅಂತ ಹೇಳುವಷ್ಟರಲ್ಲಿ ಬೆಲ್ ಆಗಿ ಊಟಕ್ ಬಿಟ್ಟಿತ್ತು, ಮೇಡಂ ಕೂಡ ಆಫಿಸ್ ರೂಮ್ ಕಡೆ ಹೆಜ್ಜೆ ಹಾಕಿದ್ರು.
ಸುವರ್ಣ
ಚೆಳ್ಳೂರು ಬರೆಯುವ “ಆಕಿ” ಸರಣಿಯಲ್ಲಿ ಮೂರನೆಯ ಬರಹ

ಈ ನೀಲಿ ಸಾಲಿ ಅಂಗಿ ಹಾಕಿ, ಕ್ಲಾಸಿನೊಳಾಗ ಲೀಡರ್ ಆಗಿ, ಹತ್ತಕ್ಕತ್ತು ಮಾರ್ಕ್ಸ್ ತಗೊಂಡಾಗ, ಅಡಗಿ ಮನಿಯೊಳಾಗ ನನ್ನ ಪಾಠ ಕೇಳ್ತಿದ್ದ ಒಲಿ, ಉದಗೊಳವಿ, ಕಂಬ, ಕಿಡಕಿ, ಗಂಗಾಳ, ಕಸಬಾರಿಗಿ, ಬೂದಿ, ವಿಜ್ಜಮ್ಮಕ್ಕ, ಇವೆಲ್ಲಾನೂ ನಾ ಒಳ್ಳೆ ಮಾರ್ಕ್ಸ್ ತಗದಿದ್ದಕ್ಕ ಖುಷಿ ಪಡ್ಬೊದಲಾ ಅಂತ ನೆನೆಸಿಕೊಂಡು ಒಳಗೊಳಗೆ ಖುಷಿಯಾಗೋದು. ಹಾಗೆ ಸಾಲಿಯೊಳಾಗ ಪ್ರೇಯರ್ ನೀನಾ ಮಾಡಿಸ್ಬೇಕು ಇನ್ಮೆಲಿಂದ ಅಂತ ಸರ್ ಹೇಳಿದಾಗ ಮತ್ತಷ್ಟು ಹಿಗ್ಗಿದ್ದೆ. ಹೀಗೆ ಪ್ರೇಯರ್ ಮಾಡಿಸುವಾಗ

“ಭಾರತೀಯರಾದ ನಾವೆಲ್ಲರೂ ಸಮಾನರು” ಅಂತ ಒತ್ತಿ ಒತ್ತಿ ಹೇಳಸ್ತಿದ್ರು, ಆಗೆಲ್ಲಾ ಮತ್ತದೆ ಪ್ರಶ್ನೆ ಸುಳದಾಡೋದು

ಈ ಎಲ್ಲಾ ಸಮಾನರೊಳಾಗ “ಆಕಿ” ನೂ ಇರಬಹುದಾ? ಅಂತ!

ಹಿಂಗ ಆಕಿ ಅನ್ನೊ ಜೇನುಹುಳ ಗುಂಯ್ ಗುಟ್ಟೋದು ನಿಲ್ಲದ ಅಕಿನ ಬೆನ್ನತ್ತಿ ಗೊತ್ತಿಲ್ದನ ನಾ ಅಕಿನ ಅಲ್ಲಿಲ್ಲಿ ಹುಡುಕೋದು ನಡಿತಿತ್ತು. ಪ್ರೇಯರ್ ಎಲ್ಲಾ ಮುಗದ್ ಮ್ಯಾಗ ನಾನು ಗಂಗಾ ಯಾವಾಗ್ಲೂ ಕ್ಲಾಸಿನೊಳಾಗ ಫಸ್ಟ್ ಲೈನಿಗೆ ಕುಂದ್ರಬೊಕು ಅಂತ ಓಡ್ಯ ಹೋಗಿ ಬ್ಯಾಗಿಡ್ತಿದ್ವಿ, ಸಾಲ್ಯಾಗ ಕೆಳಾssಗ ನೆಲದ ಮ್ಯಾಗ ಕುಂದ್ರತಿದ್ವಿ, ಕಪ್ಪು ಸಬಾದಿ ಬಂಡಿ ಚಚ್ಚೌಕದ ನಡಕ ಬ್ಯಾಗಿಟ್ಟು ಕುಂತಾಗ ಅದೊಂಥರಾ ಖುಷಿ ಅನ್ಸೊದು.  ನಮಗ್ ಪಾಠ ಮಾಡ್ತಿದ್ದ ಸರಸ್ವತಿ ಟೀಚರ್, ಬಂದಾಗೊಮ್ಮಿ ಮುಖ ನೋಡಿ ನಕ್ಕು, ಕಂಡಾಗೆಲ್ಲ ಪ್ರೀತಿಯಿಂದ

‘ನೋಡ್ರಿ ನೀವ್ ಹುಡಗ್ಯಾರೆಲ್ಲ ಬರೀ ಮನ್ಯಾಗ ಮುಸುರಿ ತಿಕ್ಕಿದ್ಯ, ಹೊಲದಾಗ ಕಸಾ ತಗ್ಯಾಕ ಹೋಗಿದ್ಯ, ಅವ್ವ ಹೊಲಕ್ಕ್ ಹೋಗ್ಯಾಳ ನಾ ಮನ್ಯಾಗ ತಮ್ಮ ತಂಗಿನ ನೋಡಿಕ್ಯಬೊಕು, ಅಡಗಿ ಮಾಡಬೊಕು ಅಂತ್ಹೆಳಿ ಸಾಲಿಗೆ ಬರಾದು ಬಿಡಬೇಡ್ರಿ, ಹುಡುಗ್ಯಾರಾಗಿ ನೀವ್ ಮೊದ್ಲು ಸಾಲಿ ಕಲಿಬೊಕು,’ ಅಂತ ಯಾವಾಗಲೂ  ಹೇಳೊರು. ಅವರು ಹಂಗೆಲ್ಲಾ ಹೇಳುವಾಗ ಸಾಲಿ ಕಲಿಬೊಕು ಅನ್ನೊ ಉತ್ಸಾಹ ಇನ್ನೂ ಹೆಚ್ಚಾಗೊದು.

ಅವತ್ತೊಂದಿನ ಸರಸ್ವತಿ ಟೀಚರ್ ಕ್ಲಾಸಿಗೆ ಬಂದದ್ದೆ ಬೋರ್ಡಿನ ಮ್ಯಾಗ ದಪ್ಪ ಅಕ್ಷರದೊಳಗ ‘ಸಾವಿತ್ರಿಬಾಯಿ ಫುಲೆ’ ಅಂತ ಬರದಾಗ, ಮೇಡಂ ಯಾರದೊ ಹೆಸ್ರು ಬರದಾರಲ ‘ಯಾರ್ ಆಕಿ’ ಅಂತ ಮತ್ತೆ ತಲಿ ಕೆಡಿಸಿಕೊಂಡಾಗ ಪಾಠ ಶುರು ಮಾಡಿದ್ರು.

‘ಮಕ್ಕಳಾ…

ಇವತ್ತು ನಾನು ನಿಮಗೆಲ್ಲಾ ಮೂರನೇ ಲೆಸನ್ ‘ಸಾವಿತ್ರಿಬಾಯಿ ಫುಲೆ’ ಕಲಸ್ತಿನಿ,

ನೋಡಿ ಮಕ್ಕ್ಳಾ..!

ಹೀಗೆ ಒಂದೂವರೆ ಶತಮಾನಗಳ ಹಿಂದೆ ಆಗಿನ್ನೂ ಸ್ವಾತಂತ್ರ್ಯ ಚಳವಳಿ ರೂಪಗೊಳ್ತಿದ್ದ ಕಾಲ ಅದು; ಗಾಂಧಿ, ಅಂಬೇಡ್ಕರ್ ಅಂತಹ ದೂರದೃಷ್ಟಿಯ ಜನನಾಯಕರು ಹುಟ್ಟಿರಲಿಲ್ಲ. ಆಳುವವರ ನಿರಂತರ ಬದಲಾವಣೆಯಿಂದ ಸಮಾಜ ತನ್ನ ಸ್ವವಿಮರ್ಶೆಯನ್ನ ಮರೆತಿದ್ದಂತಹ ಕಾಲ. ಬಂಗಾಳ ಮತ್ತೆ ಭಾರತದ ಇನ್ನಿತರ ಭಾಗಗಳಲ್ಲಿ ಸಮಾಜ ಸುಧಾರಕರು ಇಂಗ್ಲಿಷ್ ಶಿಕ್ಷಣ ಪಡೆದು ಆಗಷ್ಟೇ ಭಾರತದ ಸಾಮಾಜಿಕ ಅನಿಷ್ಟಗಳ ಬಗ್ಗೆ ಮಾತನಾಡತೊಡಗಿದ್ದರು. ಅನಿಷ್ಟ ಪದ್ಧತಿಗಳು ಅಂದ್ರ ಬಾಲ್ಯವಿವಾಹ, ಸತಿ ಪದ್ಧತಿ. ಮತ್ತ ಆ ಕಾಲದಾಗ ಸಾಲಿ ಕಲಿಯೊಕೆ ತಾವಷ್ಟೆ ಅರ್ಹರು ಅನ್ಕೊಂಡಿದ್ದ ಜಾತಿಗಳ ಹೊರತು ಮತ್ಯಾರಿಗೂ ಕಲಿಯೊಕೆ ಅವಕಾಶಾನೆ ಇರಲಿಲ್ಲ, ಸಮಾಜದ ಕೆಲವೊಂದು ವರ್ಗಗಳಿಗೆ ಮಾತ್ರ ಶಿಕ್ಷಣ ಮೀಸಲಾಗಿತ್ತು. ಇನ್ನೂ ಮಹಿಳೆಯರ ಶಿಕ್ಷಣದ ಬಗ್ಗೆ ಮಾತಾಡೊ ಹಾಗಿರಲಿಲ್ಲ ಅವರಿಗೆ ಅದರ ಅವಕಾಶಗಳೇ ಇರಲಿಲ್ಲ.

ಹೆಣ್ಣು ಅಕ್ಷರ ಕಲಿತ್ರೆ ಎಲ್ಲಾರಿಗೂ ಪತ್ರ ಬರಿತಾಳೆ, ಆಗ ಅವಳ ಗಂಡ ತಿನ್ನೊ ಅಗುಳು ಹುಳ ಆಗಿ ಅವನು ಖಾಯಿಲೆ ಬಿದ್ದು ಸತ್ತೊಗ್ತಾನೆ ಅನ್ನೊ ನಂಬಿಕೆ ಇತ್ತು, ಈ ತರದ ಅಂಧ‌ ನಂಬಿಕೆಗಳಿಂದಾನೆ ಹುಡುಗಿಯರಿಗೆ ಶಿಕ್ಷಣ ಕೊಡಿಸೊಕೆ ಕಳಿಸ್ತಾ ಇರಲಿಲ್ಲ, ಚಿಕ್ಕ ವಯಸ್ಸಲ್ಲಿ ಮದುವೆ ಮಾಡ್ತಾ ಇದ್ರು’.

ಮೇಡಂ ಈ ಚಿಕ್ಕ ವಯಸ್ಸಲ್ಲಿ ಮದುವೆ ಮಾಡ್ತಾರೆ ಅಂದ ತಕ್ಷಣ ನಾ ಗೌರಿ ಕಡೆ ತಿರುಗಿದೆ, ಅವಳ ಕೊಳ್ಳಾಗ ತಾಳಿ ಇತ್ತು ಅಂದ್ರ ಆಕಿದೂ ಹಿಂಗ ಬಾಲ್ಯ ವಿವಾಹ ಆಗಿರಬೊಕು ಅನ್ಕೊಂಡೆ, ಗೌರಿ ಅದೇನೊ ಮುಜುಗರಗೊಂಡಂಗ ತಾಳಿನ ಕೊಳ್ಳಪಟ್ಟಿ ಹಿಂದ ಅಡಗಿಸಿ ಕುಂತ್ಲು. ಮೇಡಂ ಪಾಠ ಮುಂದುವರೆಸಿ

‘ಮಕ್ಳಾ… ಹಿಂಗ ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಮದುವೆ ಆಗಿ ತನ್ನ ಬಾಲ್ಯದ ಮುಗ್ಧತೆಯಲ್ಲಿ ಜಗತ್ತನ್ನ ನೋಡುವ ಹೊತ್ತಿಗೆ ಯಾರದೊ ಹೆಂಡತಿಯಾಗಿ, ಸೊಸೆಯಾಗಿ, ಕೊನೆಗೆ ಅವ್ವ ಆಗಿರ್ತಿದ್ಲು. ಅವಳ ಬಾಲ್ಯ ಎಲ್ಲಾನೂ ಕುಟುಂಬ ನಿರ್ವಹಣೆಗೆ ನಡುವೆ ಅದರ ಜವಾಬ್ದಾರಿಗಳಲ್ಲೆ ಕಳದು ಹೋಗ್ತಿತ್ತು. ಹೆಣ್ಣು ಮಕ್ಕಳು ಯಾವತ್ತೂ ಪ್ರಶ್ನೆ ಮಾಡಬಾರದಂತೆ, ಹೊರುವ, ಹೆರುವ, ಪೊರೆಯುವ ಕೆಲಸಗಳಿಗೆ ಅವಳನ್ನ ಸೀಮಿತ ಮಾಡ್ತಿದ್ರು, ಇನ್ನೂ ದಲಿತರು, ಶೂದ್ರ ಮಹಿಳೆಯರಿಗೆ ಶಿಕ್ಷಣ ಅನ್ನೋದು ಕನಸಿನ ಮಾತಾಗಿತ್ತು.

ಹೀಗಿರುವಾಗ ಮಹಾರಾಷ್ಟ್ರದ ಹಳ್ಳಿಯಲ್ಲಿ ಹುಟ್ಟಿದ ಸಾವಿತ್ರಿಬಾಯಿ ಫುಲೆ, ಒಂಬತ್ತನೇ ವಯಸ್ಸಿಗೆ ಮದುವೆ ಆಗಿ ಗಂಡನ ಮನೆ ಸೇರಿರುತ್ತಾರೆ. ಆದ್ರೆ ಅವರು ಮದುವೆ ಆಗಿದ್ದ‌ ವರ ಜ್ಯೋತಿ ಬಾ ಫುಲೆ ಅವರು ಸಾಮಾನ್ಯನಾಗಿರಲಿಲ್ಲ, ಯಾಕಂದ್ರೆ ಆಗಿನ ಕಾಲದಲ್ಲಿ ಅವರು ಇಂಗ್ಲಿಷ್ ಶಿಕ್ಷಣ ಪಡೆದು, ಶಿಕ್ಷಣದ ಮಹತ್ವ ತಿಳಿದವರಾಗಿದ್ರು. ಸಾವಿತ್ರಿ ಚಿಕ್ಕ ವಯಸ್ಸಿಗೆ ಮದುವೆ ಆಗಿದ್ರಿಂದ ಅವಳಿಗೆ ಜ್ಯೋತಿ ಬಾ ಫುಲೆ ಅವರೆ ಮೊದಲ‌ ಶಿಕ್ಷಕರಾಗಿದ್ರು. ಹೆಣ್ಣುಮಕ್ಕಳ ಶಿಕ್ಷಣದ ಮಹತ್ವ ತಿಳಿದ‌ ಅವರು ಮಹಿಳೆಯರಿಗಾಗಿಯೇ ಶಾಲೆ ತೆರೆದರು, ಅದೆಷ್ಟು ಹುಡುಕಿದರೂ ಶಿಕ್ಷಕಿಯರೇ ಸಿಗದಿದ್ದರಿಂದ ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಕಿ ಆಗಿ ಒಂಭತ್ತು ವಿದ್ಯಾರ್ಥಿಗಳೊಂದಿಗೆ ಶಾಲೆ ತೆಗಿತಾರೆ. ಆದ್ರೆ ಶಾಲೆಗೆ ಜಾಗ ಕೊಡೊ ವಿಚಾರದೊಳಗ ಯಾರೂ ಮುಂದೆ ಬರದೆ ಇದ್ದಿದ್ದರಿಂದ ಶಾಲೆ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಬದಲಾಗ್ತಿತ್ತು.

ಆದ್ರೆ ಸಾವಿತ್ರಿಬಾಯಿ ಫುಲೆ ಅವರಿಗೆ ತಮ್ಮ ಕೆಲಸದಲ್ಲಿ ನಂಬಿಕೆ ಇತ್ತು, ದಾರಿಯಲ್ಲಿ ತೂರಿ ಬರುತ್ತಿದ್ದ ಕಲ್ಲು ಮಣ್ಣು ಸಗಣಿಗಳ ದಾಳಿಗೆ ಎದೆಗುಂದದೆ ಪಾಠ ಮಾಡಿ ಬರುತ್ತಿದ್ದರು, ಅದೆಷ್ಟೋ ಬೆದರಿಕೆಗಳಿಗೆ ಹೆದರದೇ ಹೆಣ್ಣು ಮಕ್ಕಳಿಗೆ ಪಾಠ ಮಾಡುತ್ತಿದ್ದು. ಇದರ ಫಲವಾಗಿ ಫುಲೆ ಶಾಲೆಯಲ್ಲಿ  ಕಲಿತಂತಹ ಹೆಣ್ಣು ಮಕ್ಕಳು ವೈಚಾರಿಕವಾಗಿ ಚಿಂತನೆ ಮಾಡುವಷ್ಟು ಬೆಳೆದು ಬರಹಗಾರರಾದ್ರು, ಅದ್ರಲ್ಲಿ ಭಾರತದ ಮೊಟ್ಟ ಮೊದಲ ಸ್ತ್ರೀವಾದಿ ಲೇಖಕಿ ತಾರಾಬಾಯಿ ಶಿಂಧೆ ಅವರು ಸಾವಿತ್ರಿಬಾಯಿ ಫುಲೆ ಅವರ ಶಿಷ್ಯೆ ಆಗಿದ್ರು, ಈ ರೀತಿಯಾಗಿ ಅದೆಷ್ಟೋ ವಿರೋಧಗಳ ನಡುವೆ ತಮ್ಮ ಸಮಾಜ ಸುಧಾರಣೆಯನ್ನ ಮುಂದುವರಿಸಿದರು. ಈ ಪಾಠದಿಂದ ಗೊತ್ತಾಗೋದೇನಂದ್ರೆ ಶಿಕ್ಷಣಕ್ಕೆ ಯಾವ ಜಾತಿಯ ಹಂಗೂ ಇಲ್ಲ, ಕಲಿಯುವ ಮನಸ್ಸಿದ್ರೆ ಎಂಥವರೂ ಕಲಿತು ಸಾಧನೆ ಮಾಡಬಹುದು’ ಅಂತ ಹೇಳುವಷ್ಟರಲ್ಲಿ ಬೆಲ್ ಆಗಿ ಊಟಕ್ ಬಿಟ್ಟಿತ್ತು, ಮೇಡಂ ಕೂಡ ಆಫಿಸ್ ರೂಮ್ ಕಡೆ ಹೆಜ್ಜೆ ಹಾಕಿದ್ರು.

ಅವರು ಪಾಠ ಮಾಡಿ ಹೋದ್ಮ್ಯಾಲೇ ‘ಆಕಿ’ ಅನ್ನೊ ಹುಳದ ಸದ್ದು ಇನ್ನಷ್ಟು ಜೋರಾಯ್ತು. ಆ ಬುಕ್ಕನ್ನ ತಗದು ಸಾವಿತ್ರಿಬಾಯಿ ಫುಲೆ ಅವರ ಫೋಟೋ ದಿಟ್ಟಿಸಿ ನೋಡ್ತಾ ಕುಂತಾಗ, ನಮ್ಮವ್ವನಂಗ ತಲಿತುಂಬ ಸೀರಿ ಸುತ್ತಿಗ್ಯಂಡು, ಹಣಿ ನಡುಕ ದೊಡ್ಡ ಟಿಕ್ಕಳಿ ಇಟ್ಟುಕೊಂಡು ನಮ್ಮಲ್ಲೆ ಇರೊ ಯಾರೊ ಹೆಣ್ಮಗಳಿರಬೇಕು ಅನ್ನಂಗ ಕಾಣ್ತಿದ್ರು. ಮೇಡಂ ಪಾಠ ಮಾಡುವಾಗ ಹೇಳಿದ ಜಾತಿ, ಹೆಣ್ಣುಮಕ್ಕಳ ಶಿಕ್ಷಣ, ಬಾಲ್ಯ ವಿವಾಹ, ನಾಕ್ ಗೋಡಿಯೊಳಾಗ ಸಿಕ್ಕಾಕೊಳ್ಳೊ ಅವರ ಬದುಕು, ನಮ್ಮೂರಾಗಿರ ಹೆಣ್ಮಕ್ಕಳ ಚಿತ್ರಗಳನ್ನ ಹಾದು ಹೋಗಂಗ ಮಾಡಿತು. ಗೌರಿ ಕೊಳ್ಳಾಗಿನ ತಾಳಿ, ನಾ ಆ ಊರಿನ ಗುಡಿಗೋದಾಗೆಲ್ಲ ‘ನೀವು ಒಳಾಕ್ ಬರಂಗಿಲ್ಲ, ಕಾಯಿ ಒಡಸಾದಿದ್ರ ಅಲ್ಲೆ ಕಟ್ಟಿ ಮ್ಯಾಗಿಡ್ರಿ’ ಅಂತ ಪೂಜಾರಿ ಮುಖ ಹಿಂಡಿ ಮಾತಾಡೊದು, ಅದೆಷ್ಟು ಕಲತ್ರು ನೀವ್ ಲಾಸ್ಟ್ ಗಂಡನ್ ಮನಿಗೆ, ಹುಡುಗ್ಯಾರು ಜಾಸ್ತಿ ಮಾತಾಡಬಾರದು, ಹೆಣ್ಮಕ್ಕಳು ಅಂದ್ರ ನಯ ನಾಜೂಕಾಗಿ ನಡಕಾಬೊಕು, ಹೊಲದಾಗೂ ದುಡಿಬೊಕು, ಮನಿ ದಗದಾಗೂ ಮಾಡಬೊಕು, ರೊಟ್ಟಿನೂ ತಟ್ಟಬೊಕು, ಹೊಲದಾಗ ಮೈ ಬಗ್ಗಿಸಿ ಕಳೆ ಕಿತ್ತಾಕ ಕಸುವಿರಬೊಕು ಅನ್ನೊ ಧ್ವನಿಗಳೆಲ್ಲ ತಲಿ ತುಂಬಾ ಸುಳಿ ಸುತ್ತಿದಂಗ ಸುತ್ತಾಕತಿದ್ವು, ಪಾಠದೊಳಾಗಿರಾದೆಲ್ಲಾ ನಮ್ಮೂರು ನಮ್ಮ ಬದುಕಿನ್ಯಾಗಿನ್ನು ಐತಲಾ ಅಂತ ಆಶ್ಚರ್ಯ ಆಯ್ತು. ಅಷ್ಟರೊಳಾಗ ಆಫಿಸ್ ರೂಮ್ ನಿಂದ ಹೊರಾಗ್ ಬಂದ ಸರ್ ‘ಅಲಮ್ಮಾ… ಒಂದಷ್ಟು ಹುಡುಗ್ಯಾರ್ನ ಕರಕಂಬಾ ಊಟಕ್ಕಿಡಬೊಕು’ ಅಂದಾಗ ನಾನು ಗೌರಿ ಆಫಿಸ್‌ಗೆ ಹೋದ್ವಿ. ಅಲ್ಲಿದ್ದ ಸರಸ್ವತಿ ಟೀಚರ್ ನಮ್ಮನ್ನ ನೋಡಿ ಮುಗುಳ್ನಕ್ಕ್ರು. ಆ ಆಫೀಸ್ ಗೋಡಿಮೇಲೆ ಬರದಿದ್ದ ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಅನ್ನೊ ಗಾದೆಯ ಮೇಲಿನ ಬಣ್ಣ ಮಾಸಿಹೋಗಿತ್ತು!

About The Author

ಸುವರ್ಣ ಚೆಳ್ಳೂರು

ಸುವರ್ಣ ಚೆಳ್ಳೂರು  ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಚಳ್ಳೂರಿನವರು. ಈಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಂಶೋಧನಾ ವಿದ್ಯಾರ್ಥಿ. ಕಲೆ ಸಾಹಿತ್ಯ ಫೋಟೊಗ್ರಫಿ ಮುಖ್ಯ ಆಸಕ್ತಿಗಳು. ಇವರ 'ಕಂಬದ ಹಕ್ಕಿ' ಕಥೆಗೆ  'ಸಂಗಾತ ಕಥಾ ಪುರಸ್ಕಾರ ' (2021), 'ಕನಕಾಂಬರ' ಕಥೆಗೆ ಧಾರವಾಡದ ವಿದ್ಯಾವರ್ಧಕ ಸಂಘದಿಂದ 'ಶ್ರೀಮತಿ ಶಾಂತಾದೇವಿ ಕಣವಿ ಕಥಾ ಪುರಸ್ಕಾರ' ದೊರಕಿದೆ (2022). 'ಕನಕಾಂಬರ' ಹಾಗೂ ‘ಮಾರ್ನಾಮಿ’ ಸಣ್ಣ ಕಥೆಗಳು ToTo Funds the Arts' India ಅವರು ಕೊಡುವ ಕನ್ನಡ ಸೃಜನಶೀಲ ಬರವಣಿಗೆ (Kannada Creative writing) ವಿಭಾಗದಲ್ಲಿ 2023 ಮತ್ತು 2025 ರಲ್ಲಿ ಅಂತಿಮ ಹಂತಕ್ಕೆ (Short List) ಆಯ್ಕೆ ಆಗಿದೆ. ಇವರ ಬರಹಗಳು ಕೆಲವು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

1 Comment

  1. ಎಸ್. ಪಿ. ಗದಗ

    “ಪಾಠದೊಳಾಗಿರಾದೆಲ್ಲಾ ನಮ್ಮೂರು ನಮ್ಮ ಬದುಕಿನ್ಯಾಗಿನ್ನು ಐತಲಾ ಅಂತ ಆಶ್ಚರ್ಯ ಆಯ್ತು.”ಎನ್ನುವ ಮಾತುಗಳು ಮೆಚ್ಚುಗೆಯಾಯ್ತು. ಓದಿನ ಖುಷಿ ಕೊಟ್ಟ ಲೇಖನ.🙏🙏

    Reply

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ