ಹಾಗೆ ಆಚೆ ಬಂದ ಹೊಸತರಲ್ಲಿ ಅವರನ್ನ ಸೆಲೆಬ್ರೆಟಿಗಳಂತೆಯೇ ಟ್ರೀಟ್ ಮಾಡುವ ಅದೇ ಚಾನಲ್ ಗಳು ಮುಂದಿನ ಸೀಜನ್ ಅಷ್ಟರಲ್ಲಿ ಅವರ ಕೈಬಿಡಲು ತುದಿಗಾಲಲ್ಲಿ ನಿಂತಿರುತ್ತಾರೆ. ನಾವು ಸಿನಿಮಾ ಹಾಡುಗಾರರೇ ಅನ್ನುವ ದೊಡ್ಡ ಭ್ರಮೆಗಳೊಂದಿಗೆ ಆಚೆ ಬಂದವರು ಯಾವ ಅವಕಾಶಗಳೂ ಇಲ್ಲದೇ ಬಸವಳಿಯುವುದೇ ಹೆಚ್ಚು. ಇವ್ಯಾವುದರ ಗೊಡವೆಯೇ ಬೇಡ ಅಂದುಕೊಂಡು ಮೆಟ್ಟಿಲು ಏರುವವರನ್ನ ಸುತ್ತ ಇರುವವರು, ತನ್ನ ಪಾಡಿಗೆ ಹೊರಟಿದ್ದ ಹಾವೊಂದನ್ನು ದೊಣ್ಣೆಯಿಂದ ಹೊಡೆದು ಗಾಯಗೊಳಿಸುವ ಹಾಗೆ, ಹಾಡು, ನೃತ್ಯ, ನಟನೆ ಬರದೋರೆಲ್ಲಾ ಟಿವಿ ಪರದೆ ಮೇಲೆ ಬಂದರೂ ನೀನು ಮಾತ್ರ ಬರಲೇ ಇಲ್ಲಾ ಅನ್ನುವ ಹಾಗೆ ಮಾತುಗಳಿಂದ, ಬರೀ ಕಣ್ಣಿನ ನೋಟಗಳಿಂದಲೇ ತೀವ್ರ ನೋವನ್ನ ಉಂಟುಮಾಡಿಬಿಡ್ತಾರೆ.
ಕೃಷ್ಣ ದೇವಾಂಗಮಠ ಅಂಕಣ

 

ಈ ಕ್ಷಣ ಲೇಖನ ಬರೆಯಲು ಕುಳಿತ ನನ್ನ ಮುಂದೆ ಹಲವು ಕಾರಣಗಳಿವೆ. ಒಂದೊಂದು ಕಾರಣಗಳೂ ತಮ್ಮೊಳಗೆ ನೋವಿನ ಕಥೆಗಳನ್ನೆ ಹೆಚ್ಚು ತುಂಬಿಕೊಂಡು ಇನ್ನೇನು ಇಲ್ಲವೇ ಆಗಿಬಿಡುವಂಥ ಸ್ಥಿತಿಗಳಲ್ಲಿ ನಿಂತಿವೆ. ಎಲ್ಲೋ ಅಪರೂಪಕ್ಕೆ ನಗು ಇಟ್ಟುಕೊಂಡೆ ಅಳು ನುಂಗುವ ಮನಸ್ಥಿತಿಗಳೂ ಈ ಮುಂಚೆ ನನ್ನ ಜೊತೆ ಮಾತಾಗಿವೆ. ಈ ಸಂವಾದ ಏರ್ಪಟ್ಟ ವ್ಯಕ್ತಿಗಳೆಲ್ಲಾ ತಾವು ಏನಾದರೊಂದನ್ನು ಸಾಧಿಸಿ ತೋರಿಸಬೇಕು ಅನ್ನುವ ಹಂತದವು. ಸಾಧಿಸಬೇಕು ಅನ್ನುವುದು ತುಸು ಕಷ್ಟ ಮತ್ತು ಅವಮಾನಗಳನ್ನಷ್ಟೇ ನೀಡಬಹುದೇನೋ ಆದರೆ ತೋರಿಸಬೇಕು ಅನ್ನುವುದಿದೆಯಲ್ಲಾ ಇದು ಬದುಕನ್ನೆ ನರಕವಾಗಿಸಿಬಿಡಬಹುದಾದ ಕಪ್ಪು ಕುಳಿಯಂಥದು. ಆಸೆ, ಕನಸು, ಇರುವಿಕೆ, ಎಲ್ಲವನ್ನೂ ಅಲ್ಲದೆಯೇ ಮನುಷ್ಯನ ಜೀವಂತಿಕೆಯನ್ನೇ ನುಂಗಿ ಹಾಕಿಬಿಡಬಹುದಾದ ಅಪಾಯವಿರುವ ಹೆಬ್ಬಾವು.

ಆಗಸವೇ ಸಿಕ್ಕಂತಾಗಿ ಉಳಿವ ಖಾಲಿ ಅಂಗೈ ಮನಸ್ಸನ್ನು ಎಷ್ಟರ ಮಟ್ಟಿಗೆ ಘಾಸಿಗೊಳಿಸಿತೆಂದು ಯೋಚಿಸಲೂ ಭಯವಾಗುತ್ತದೆ ಅಲ್ಲವೆ. ನಮ್ಮದಲ್ಲದ್ದು, ಅದರ ಕುರಿತು ಯಾವ ಯೋಚನೆಯೂ ಇಲ್ಲದ್ದು, ಭೂಮಿ ಊಳುವಾಗ ಸಿಕ್ಕ ಬಂಗಾರದ ನಿಧಿ ನೋಡನೋಡುತ್ತಿದ್ದಂತೆ ಕಣ್ಣೆದುರು ಬೂದಿಯಾಗಿ ಹೋದರೆ ಆಗುವ ನೋವಿದೆಯಲ್ಲಾ ಅದು ಒಂದು ರೀತಿಯಾದರೆ, ಒಂದರ ಕುರಿತು ಹುಚ್ಚು ಕನಸುಗಳನ್ನಿಟ್ಟುಕೊಂಡು, ಶ್ರಮ ಹಾಕಿ ಅದಕ್ಕಾಗಿ ಪಡಬಾರದ ಪಾಡುಪಟ್ಟು ನನಸಿನ ಹಾದಿ ತುಳಿಯುತ್ತಿರುವಾಗ ನಿದ್ದೆಯಿಂದ ಎಚ್ಚರಾಗಿಬಿಡುವ, ತಾನು ನಡೆಯುತ್ತಿರುವ ಹಾದಿಯ ಬಗೆಗೆ ತಾನೇ ಭಯಭೀತನಾಗುವ, ನಿಂತ ನೆಲವೇ ಭ್ರಮೆ ಎನ್ನಿಸಿಬಿಟ್ಟರೆ ಆ ಕ್ಷಣ ನಮ್ಮ ಸ್ಥಿತಿ ಹೇಗಾಗಬೇಡ. ಈ ಬಗೆಯ ತಲ್ಲಣಗಳನ್ನು ಬದುಕುತ್ತಿರುವ ಇಂದಿನ ನನ್ನ ಗೆಳೆಯರ ಮೌನಕ್ಕೆ ನಾನು ಮಾತಾಗಬೇಕಾಗಿ ಈ ಲೇಖನ ಬರೆಸಿಕೊಳ್ಳುತ್ತಿದೆ.

ಕೆಲವು ತಿಂಗಳುಗಳ ಹಿಂದೆಯಷ್ಟೇ ಒಂದು ಮಾತುಕತೆಯಾಯಿತು. ಬೇರೆ ಯಾರೋ ಅಲ್ಲ ಖಾಸು ನನ್ನ ಹಳೇ ಗೆಳೆಯ. ಬಹಳ ಕಾಲದ ನಂತರ ನನಗೆ ಸಿಕ್ಕಿದ್ದ. ನಗುತ್ತಲೇ ಮಾತನಾಡುತ್ತಿದ್ದ ಆಸಾಮಿ ಇದ್ದಕ್ಕಿದ್ದಂತೆ ಅಳಲು ಶುರುವಿಟ್ಟುಕೊಂಡ. ನಾನೂ ವಿಚಾರಿಸಿದೆ. ಮಾತುಗಳು ಅವನನ್ನು ಸಮಾಧಾನಿಸಲಾರವು ಅಂತ ತಿಳಿದೂ ಕೂಡ ಸಾಧ್ಯವಾದಷ್ಟು ಸಮಾಧಾನ ಪಡಿಸಿದೆ. ಅದೇನೋ ನನ್ನಲ್ಲಿ ಬಹಳಷ್ಟು ಜನಕ್ಕೆ ನಂಬಿಕೆ. ಯಾರಲ್ಲೂ ಹೇಳಿಕೊಳ್ಳಲಾಗದ್ದನ್ನು ನನ್ನ ಬಳಿ ಸರಾಗವಾಗಿ ಹೇಳಿಕೊಳ್ಳುತ್ತಾರೆ. ಗೆಳೆಯರು ಯಾವಾಗಲೂ ಸಿಕ್ಕುವ ದೈವಗಳೇ ಅಲ್ಲವೇ. ಕೆಲವರು ಹೇಳುವ ಪ್ರಕಾರ ನಾನು ಬದುಕನ್ನು ಜಟಿಲ ಮಾಡಿಕೊಳ್ಳದೆ ಇರುವ ಬಗೆ ಅವರಿಗೆ ಇಷ್ಟವಂತೆ. ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳದವನಂತೆ ಕಾಣುವ ನಾನು ಒಳಗೊಳಗೆ ಎಲ್ಲದರ ಕುರಿತೂ ಅತಿಯಾಗಿ ಯೋಚಿಸಿ ತಲೆನೋವು ಅನುಭವಿಸುವವ. ಅಂತರ್ಮುಖಿ ಅಂದುಕೊಳ್ಳಬಹುದೇ ಗೊತ್ತಿಲ್ಲ.

ಒಂದು ಸಿನಿಮಾಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದ ನಾವು ಶೂಟಿಂಗ್ ಶುರುವಾದ ಮೊದಲ ದಿನದಿಂದಲೇ ಗೆಳೆಯರಾದವರು. ಯಾವಾಗಲೂ ಕಿವಿಗೆ ಹೆಡ್ ಫೋನ್ ಹಾಕಿರುತ್ತಿದ್ದ ಅವನಿಗೆ ಹಾಡು ಕೇಳೋದು ಒಂದು ಚಟವಿರಬಹುದು ಅಂತಾ ಸುಮ್ಮನಾಗಿದ್ದೆ. ಆದರೆ ಆಗಾಗ ಗುನುಗುತ್ತಿದ್ದದ್ದನ್ನಾ ಕೇಳಿ ಒಮ್ಮೆ ಹಾಡು ಅಂತ ಹಿಡಿದು ಕೂರಿಸಿದ್ದೂ ಆಯ್ತು. ಅವನಿಗೆ ಹಾಡು ಅಂದರೆ ಎಷ್ಟು ಇಷ್ಟವೋ ಹಾಡುವುದು ಅಂದರೂ ಅಷ್ಟೇ ಇಷ್ಟ ಅಂತಾ ತಿಳಿದದ್ದಾಯ್ತು. ಅಂದಿನಿಂದ ಶೂಟಿಂಗಿನ ಕೊನೆ ದಿನದವರೆಗೂ ಆತ ನಮ್ಮ ಜೊತೆ ಬಹಳ ಹಾಡುಗಳನ್ನಾ ಹಾಡಿದ್ದಾ, ಹಾಡಿಸಿದ್ದಾ, ಖುಷಿಯೂ ಪಟ್ಟಿದ್ದ. ನಮ್ಮ ಡೈರೆಕ್ಟರ್ ಸಾಹೇಬರು ಮುಂದಿನ ಸಿನಿಮಾಗೆ ನಿಂಗೊಂದು ಹಾಡು ಹಾಡಲಿಕ್ಕೆ ಚಾನ್ಸ್ ಕೊಡಿಸತೀನಿ ಅಂತಲೂ ಹೇಳಿದ್ದರು. ಅಷ್ಟೇ ಅದಾದ ನಂತರ ಈಗಲೇ ಅವನು ನನಗೆ ಸಿಕ್ಕಿದ್ದು. ಈ ವರೆಗೂ ತನ್ನದೇ ಸ್ವಂತ ಖರ್ಚಿನಲ್ಲಿ ಆಲ್ಬಮ್ ಸೀಡಿಯೊಂದನ್ನು ತಂದು ಕೈ ಸುಟ್ಟುಕೊಂಡಿದ್ದರ ಹೊರತು ಏನೂ ನಡೆದಿಲ್ಲಾ.

ಇವನು ಬೆಂಗಳೂರಿಗೆ ಬಂದ ಉದ್ದೇಶ ಒಂದು ಸೀರಿಯಲ್ಲಿನಲ್ಲಿ ಸೆಟ್ ಡಿಪಾರ್ಟ್ ಮೆಂಟಿನಲ್ಲಿ ಕೆಲಸ ಮಾಡುವುದಕ್ಕೋಸ್ಕರವಾಗಿ ಅಷ್ಟೇ. ಈಗ ಸಿನಿಮಾದಲ್ಲಿ ಸೆಟ್ ಕೆಲಸ ಮಾಡುತ್ತಿದ್ದಾನೆ. ಅದ್ಯಾವಾಗ ನಿನಗೆ ಹಾಡುಗಾರ ಆಗಬೇಕು ಅನ್ನಿಸಿದ್ದು ಅಂತ ಕೇಳಿದರೆ ಟಿವಿಗಳಲ್ಲಿ ಬರುವ ಹಾಡಿನ ಕಾರ್ಯಕ್ರಮಗಳ ಸಹವಾಸದಿಂದ ಅಂದ. ಒಂದು ರೀತಿ ಖುಷಿ ಆಯಿತು. ನಂತರ ಸ್ವಲ್ಪೇ ಹೊತ್ತಿನಲ್ಲಿ ಆತನಿಗೆ ನನಗೆ ಗೊತ್ತಿರುವ ಅಸಲಿ ಸತ್ಯಗಳನ್ನೂ ಹೇಳಿ ಟ್ರೈ ಮಾಡು ಒಳ್ಳೇದಾಗಲಿ ಅಂದಿದ್ದೆ. ಯಾಕೆ ಎಲ್ಲರೂ ಈ ಮೀಡಿಯಾಗಳಿಂದ ಇಷ್ಟು ಪ್ರಮಾಣದ ಆಕರ್ಷಕರು. ಎಲ್ಲರಿಗೂ ತಮ್ಮದೇ ಆದ ಕಾರಣಗಳಿವೆ ಅನ್ನುವುದು ಸತ್ಯ. ಈ ಹುಡುಗ ಎಂದೂ ಸಂಗೀತ ಕಲಿಯಬೇಕು, ಅದರ ಕುರಿತು ತಿಳಿಯಬೇಕು ಅಂದವನೇ ಅಲ್ಲ. ನೇರ ಸ್ಟೇಜಿನ ಮೇಲೆ ರಾರಾಜಿಸುವ ಕನಸು ಆತನಿಗಿತ್ತು. ಹಾಡು ನಿಜಕ್ಕೂ ಇಷ್ಟವಾದರೆ ಸಂಗೀತ ಕಲಿ ಅಂದೆ, ಉತ್ತರವಿಲ್ಲಾ. ಜನಪದ ಇಷ್ಟವಾ ಅಂದೆ, ಇಲ್ಲಾ ಅಂದ. ಇನ್ನೂ ಏನೇನೋ ಆತನ ಬಯಕೆಗೆ ಆಸರೆಯಾಗಬಲ್ಲ ವಿಷಯಗಳನ್ನ ಆತನ ಎದುರು ತೆರೆದಿಟ್ಟೆ. ಆತ ನಿರಾಕರಿಸಿದ. ಇದು ಬುದ್ಧ ಹೇಳುವ ನಿರಾಕರಣೆಯಾಗಿದ್ದರೆ ಎಷ್ಟು ಒಳ್ಳೆಯದಿತ್ತು ಎನ್ನಿಸಿದ್ದು ಸುಳ್ಳಲ್ಲ.

ಯಾವ ಎತ್ತರದ ಕುರಿತು ಕನಸುಗಳನ್ನು ಕಾಣುವುದು? ಇವರ ಊಹೆಯ ಎತ್ತರ ಎಷ್ಟು ಚಿಕ್ಕದು? ಆಯ್ಕೆಗಳಲ್ಲೇ ಎಡವಿ ಇವರು ಎಲ್ಲಿಗೆ ಸೇರಬಯಸುತ್ತಾರೆ? ಸ್ಕೈ ಇಸ್ ದಿ ಲಿಮಿಟ್ ಅಂತಲಾ. ಸರಿ ಇದನ್ನು ಒಪ್ಪೋಣ ಆದರೆ ಅದನ್ನು ಮುಟ್ಟಲು ಬೇಕಾದ ಸಿದ್ಧತೆಗಳನ್ನು ಗಾಳಿಗೆ ತೂರಿ ನಿಂತುಬಿಟ್ಟರೆ ಹೇಗೆ ಸ್ವಾಮಿ. ಹೂಜಿಗೆ ಚಿಕ್ಕ ಚಿಕ್ಕ ಕಲ್ಲುಗಳನ್ನ ತುಂಬಿ ನೀರು ಕುಡಿಯುತ್ತಿದ್ದ ಕಾಗೆಗಿದ್ದ ಜಾಣ್ಮೆ , ಪೈಪ್ ಮುಖಾಂತರ ಸಲೀಸಾಗಿ ಎಳೆವ ಆಧುನಿಕ ಕಾಗೆಗಳಿಗೆ ಇಲ್ಲವಾಗಿರುವುದು ಪರಮಸತ್ಯ. TRP ಗಾಗಿ ಏನು ಮಾಡಲೂ ಸಿದ್ಧವಿರುವ ಚಾನೆಲ್ ಗಳು, ಇವರ ನಿಜವಾದ ಐಡೆಂಟಿಟಿಗಳನ್ನೇ ಇಲ್ಲವಾಗಿಸಿಬಿಡುತ್ತಾರಲ್ಲಾ. ದೊಡ್ಡವರ ವಿಷಯ ಬಿಡಿ. ಇಲ್ಲಿಂದ ಮಕ್ಕಳ ಎದೆಗೆ ನುಗ್ಗುವ ಸಿನಿಕತನ ಅವರನ್ನು ತಂದು ನಿಲ್ಲಿಸಬಹುದಾದ ಅಂಚಿನ ಕುರಿತು ಗಮನ ಹರಿಸಿ, ಒಂದು ಕ್ಷಣ ನಿಜವಾದ ಮನುಷ್ಯರಿಗೆ ಮೈ ಝುಮ್ ಎನ್ನಿಸದೇ ಇರದು.

ಟಿವಿ ಚಾನಲ್ ಗಳಿಗೆ ಜನಪದ ಅನ್ನುವುದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಹಾಗೆ. ಅದನ್ನು ಬಳಸಿಕೊಂಡು ಹಳ್ಳಿಯ ಜನರನ್ನೇನೋ ಆಕರ್ಷಿಸಿ ತಲುಪಿಬಿಡುತ್ತಾರೆ. ನಾವೂ ಅಷ್ಟೇ ಬಿಡಿ ನಿಜವಾದ ಜನಪದವನ್ನು ಪರಿಚಯಿಸುವ ಕನ್ನಡದ ಚಂದನವನ್ನು ಮರೆತೇ ಬಿಟ್ಟಿದ್ದೀವಿ. ಪ್ರಮಾಣಿಸಿ ನೋಡುವುದು ನಮ್ಮ ಜಾಯಮಾನಕ್ಕೆ ಅಂಟಿಕೊಂಡೇ ಇಲ್ಲ.

ಈ ಜನಪ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಅನ್ನುವವರದ್ದು ಒಂದು ಗೋಳಾದರೆ, ಭಾಗವಹಿಸಿ ಬಂದವರದ್ದು ಇನ್ನೊಂದು ಗೋಳು. ಇವೆರಡರ ಮಧ್ಯೆ ಇವುಗಳ ಸಹವಾಸವೇ ಬೇಡ ಅಂದುಕೊಂಡು ತಮ್ಮ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕುವವರದ್ದು ಇನ್ನೊಂಥರ ಪಾಡು. ಭಾಗವಹಿಸಬೇಕು ಅನ್ನುವ ಮುಕ್ಕಾಲು ಜನ ಶ್ರಮಹೀನರು, ಕಾಲು ಭಾಗ ಮಾತ್ರ ಶ್ರಮವಂತರು. ಇಲ್ಲಿ ಶ್ರಮ ಅನ್ನೊದಕ್ಕಿಂತ ಲಕ್ ಅನ್ನೋದೆ ಕೈ ಹಿಡಿಯೋದು ಜಾಸ್ತಿ. ಹೀಗಾಗಿ ನಾನೇನೇ ಹೇಳಿದರೂ ಅದು ಬಂಡೆಯ ಮೇಲೆ ನೀರು ಹುಯ್ದ ಹಾಗೆಯೇ. ಹೀಗೆ ಆಯ್ಕೆಯಾದ ಅದೃಷ್ಟವಂತರು ಸ್ಟೇಜುಗಳ ಮೇಲೆ ಹಾಡಿ ಜನಪ್ರೀಯರಾಗುವುದಕ್ಕಿಂತಲೂ ತಮ್ಮ ಉಡುಗೆ, ಕೇಶವಿನ್ಯಾಸ, ಹಾಸ್ಯ ಚಟಾಕಿ, ಬಂಡಲ ಬಡಾಯಿಗಳಿಂದಲೇ ಆಗಿಬಿಡುವುದು ಜಾಸ್ತಿ. ಹಾಗೂ ಹೀಗೂ ತೂರಿ ಬಂದ ನಾಲ್ಕಾರು ಒಳ್ಳೆಯ ಪ್ರತಿಭೆಗಳೂ ಬೇಗ ಮಂಕಾಗಿ ಅಲ್ಲಿಂದ ಆಚೆಗೆ ಬಂದು ಬಿಡುತ್ತವೆ.

ಹೂಜಿಗೆ ಚಿಕ್ಕ ಚಿಕ್ಕ ಕಲ್ಲುಗಳನ್ನ ತುಂಬಿ ನೀರು ಕುಡಿಯುತ್ತಿದ್ದ ಕಾಗೆಗಿದ್ದ ಜಾಣ್ಮೆ , ಪೈಪ್ ಮುಖಾಂತರ ಸಲೀಸಾಗಿ ಎಳೆವ ಆಧುನಿಕ ಕಾಗೆಗಳಿಗೆ ಇಲ್ಲವಾಗಿರುವುದು ಪರಮಸತ್ಯ. TRP ಗಾಗಿ ಏನು ಮಾಡಲೂ ಸಿದ್ಧವಿರುವ ಚಾನೆಲ್ ಗಳು, ಇವರ ನಿಜವಾದ ಐಡೆಂಟಿಟಿಗಳನ್ನೇ ಇಲ್ಲವಾಗಿಸಿಬಿಡುತ್ತಾರಲ್ಲಾ.

ಇನ್ನು ಸೆಂಟಿಮೆಂಟಿನ ವಿಚಾರದಲ್ಲಿ ಧಾರಾವಾಹಿಗಳೇ ಎಷ್ಟೋ ಪರವಾಗಿಲ್ಲಾ ಎನ್ನಿಸಿದ್ದಿದೆ. ಇದು ನನ್ನೊಬ್ಬನ ಅಭಿಪ್ರಾಯ ಮಾತ್ರವಲ್ಲಾ. ನನ್ನ ಜೊತೆ ಸಂವಾದಗೊಂಡ ಮನಸ್ಸುಗಳ ಮಾತುಗಳೂ ಹೌದು. ಅಂತೂ ಗೆದ್ದೋ, ಭಾಗವಹಿಸಿಯೋ ಆಚೆ ಬಂದವರು ಕ್ರಮೇಣ ಪ್ರಪಂಚದ ವಿಶಾಲತೆಗೆ ಬೆಚ್ಚಿಬಿಡುತ್ತಾರೆ. ಹಾಗೆ ಆಚೆ ಬಂದ ಹೊಸತರಲ್ಲಿ ಅವರನ್ನ ಸೆಲೆಬ್ರೆಟಿಗಳಂತೆಯೇ ಟ್ರೀಟ್ ಮಾಡುವ ಅದೇ ಚಾನಲ್ ಗಳು ಮುಂದಿನ ಸೀಜನ್ ಅಷ್ಟರಲ್ಲಿ ಅವರ ಕೈಬಿಡಲು ತುದಿಗಾಲಲ್ಲಿ ನಿಂತಿರುತ್ತಾರೆ. ತಮಗೆ ಉಪಯೋಗ ಆಗುತ್ತಾರೆ ಅಂದ ಪಕ್ಷದಲ್ಲಿ ಮತ್ತೆ ಅವರನ್ನಾ ಆಗೊಮ್ಮೆ ಈಗೊಮ್ಮೆ ಸ್ಜೇಜ್ ಹತ್ತಿಸುವುದು ಅವರ ವಾಡಿಕೆ. ಇನ್ನು ನಾವು ಸಿನಿಮಾ ಹಾಡುಗಾರರೇ ಅನ್ನುವ ದೊಡ್ಡ ಭ್ರಮೆಗಳೊಂದಿಗೆ ಆಚೆ ಬಂದವರು ಯಾವ ಅವಕಾಶಗಳೂ ಇಲ್ಲದೇ ಬಸವಳಿಯುವುದೇ ಹೆಚ್ಚು. ಇವ್ಯಾವುದರ ಗೊಡವೆಯೇ ಬೇಡ ಅಂದುಕೊಂಡು ಮೆಟ್ಟಿಲು ಏರುವವರನ್ನ ಸುತ್ತ ಇರುವವರು, ತನ್ನ ಪಾಡಿಗೆ ಹೊರಟಿದ್ದ ಹಾವೊಂದನ್ನು ದೊಣ್ಣೆಯಿಂದ ಹೊಡೆದು ಗಾಯಗೊಳಿಸುವ ಹಾಗೆ, ಹಾಡು, ನೃತ್ಯ, ನಟನೆ ಬರದೋರೆಲ್ಲಾ ಟಿವಿ ಪರದೆ ಮೇಲೆ ಬಂದರೂ ನೀನು ಮಾತ್ರ ಬರಲೇ ಇಲ್ಲಾ ಅನ್ನುವ ಹಾಗೆ ಮಾತುಗಳಿಂದ, ಬರೀ ಕಣ್ಣಿನ ನೋಟಗಳಿಂದಲೇ ತೀವ್ರ ನೋವನ್ನ ಉಂಟುಮಾಡಿಬಿಡ್ತಾರೆ.

ನಿಮಗೆ ನನ್ನ ಇನ್ನೊಬ್ಬ ಗೆಳೆಯನ ವಿಷಯ ಹೇಳಲೇ ಬೇಕು. ನಾನು ಆಗಲೇ ಹೇಳಿದ ವ್ಯಕ್ತಿ ಪರಿಚಯಕ್ಕೆ ಸಂಪೂರ್ಣ ವಿರುದ್ಧವಾದ ವ್ಯಕ್ತಿತ್ವ ಇದು. ಈತ ಯಾವುದರ ಗೋಜಲೂ ಬೇಡ ಅನ್ನುತ್ತಾ ತನ್ನ ಮಾರ್ಗವನ್ನ ತಾನೇ ಸೃಷ್ಟಿಸಿಕೊಳ್ಳುತ್ತಿರುವ ಹುಡುಗ. ಚಿಕ್ಕ ವಯಸ್ಸಿನಿಂದ ತನ್ನ ಹಣವನ್ನು ತಾನೇ ಸಂಪಾದಿಸಿಕೊಂಡು ಸ್ವ ಆಸಕ್ತಿಯಿಂದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಮುಗಿಸಿಕೊಂಡು ಈಗ ಸೀನಿಯರ್ ಕಲಿಯುತ್ತಿದ್ದಾನೆ. ಅವನ ದಿನದ ಚಟುವಟಿಕೆ ತುಂಬಾ ಲವಲವಿಕೆಯದು. ಬೆಳೆಗ್ಗೆ ಬೇಗ ಎದ್ದವನೇ ಹಾರ್ಮೋನಿಯಮ್ ಅಥವಾ ಶೃತಿ ಪೆಟ್ಟಿಗೆ ಸಹಾಯದಿಂದ ರಾಗಗಳನ್ನ ಅಭ್ಯಸಿಸುವ ಇವನು, ಈಗ ತನ್ನ ದುಡಿಮೆಯಾಗಿ ಸಂಗೀತವನ್ನೆ ನೆಚ್ಚಿಕೊಂಡು ಎರಡು ಮೂರು ಕಡೆಗಳಲ್ಲಿ ತರಗತಿಗಳನ್ನು ನಡೆಸಿಕೊಡ್ತಾನೆ. ಜೊತೆಗೆ ಕೆಲವು ಮನೆಗಳಿಗೇ ಹೋಗಿ ಪಾಠ ಮಾಡ್ತಾನೆ. ಇವನ ಉತ್ಸಾಹ ಎಂಥದ್ದೆಂದರೆ ಕಡಿಮೆ ಸಂಬಳವಾದರೂ ಸರಿ ಸಂಪೂರ್ಣವಾಗಿ ನನ್ನ ಬದುಕು ಸಂಗೀತಮಯವಾಗೇ ಇರಬೇಕು ಅಂತ ಬಯಸುತ್ತಾ ಅದಕ್ಕೆ ಬೇಕಾದ ವಾತಾವರಣ ಸೃಷ್ಟಿಸಿಕೊಳ್ಳಲು ಹೆಣಗುವ ಜಾಣ.

ಇಂಥಹವನನ್ನೂ ಯಾವುದೋ ಒಂದು ರೀತಿಯಲ್ಲಿ ಒತ್ತಡಕ್ಕೆ ನೂಕುತ್ತೇವೆ ನಾವು. ಉತ್ಕಟವಾದ ಆಸಕ್ತಿ ಇರುವ ಇಂಥವರೂ ಈ ಕಾರ್ಯಕ್ರಮಗಳ ಹಾವಳಿಗಳಿಗೆ ಸಿಕ್ಕಿ ನಲುಗುತ್ತಿದ್ದಾರೆ. ಇಂಥ ಅದೆಷ್ಟೋ ಆಸಕ್ತರ ಒಳ ಸಂಕಟಗಳ ಮುಖಗಳು, ಕೇಳುವ ನಮಗೆ ಇಷ್ಟೆನಾ ಅಂತ ಅನ್ನಿಸಿದರೂ ಆ ಸ್ಥಾನದಲ್ಲಿ ನಿಂತಾಗ ಅವುಗಳ ತೀವ್ರತೆ ನಮಗೆ ಅರ್ಥವಾಗಲು ಸಾಧ್ಯವಿದೆ. ಜೀವನವನ್ನೇ ಅದರಲ್ಲಿ ಕಟ್ಟಿಕೊಳ್ಳಲು ನಿಂತವರು ಜಾಹಿರಾತಿನ ಕಾಲದಲ್ಲಿ ಬಿರುಗಾಳಿಗೆ ಸಿಕ್ಕ ಕೋಗಿಲೆಗಳಾಗಿದ್ದಾರೆ.

ನಾನು ಆಗಿನಿಂದ ಹೇಳುತ್ತಾ ಬಂದ ಎರಡೂ ವ್ಯಕ್ತಿತ್ವವೂ ಉದಾಹರಣೆಗಳು ಮಾತ್ರ. ಇಂಥವರು ನಮ್ಮ ಸುತ್ತ ಹಲವರಿದ್ದಾರೆ. ಮತ್ತು ನಾನು ಹಾಡಿನ ಕಾರ್ಯಕ್ರಮಗಳ ಬಗ್ಗೆಯೇ ಹೆಚ್ಚು ಒತ್ತು ಕೊಟ್ಟು ಮಾತನಾಡಲು ಇರುವ ಕಾರಣವೆಂದರೆ ಮಾಧ್ಯಮಗಳಲ್ಲಿ ಮತ್ತು ಸಮಾಜದಲ್ಲಿ ಹಾಡುಗಾರರಿಗೆ ಸಿಗುತ್ತಿರುವಷ್ಟು ಮಾನ್ಯತೆ ನೃತ್ಯಗಾರರಿಗೆ ಮತ್ತು ಡ್ರಾಮಾ ಮಕ್ಕಳಿಗೆ ಸಿಗದೇ ಇರುವುದು. ಎಲ್ಲವೂ ಅಲ್ಲೇ ನಡೆಯುತ್ತವಾದರೂ ಎಲ್ಲದಕ್ಕೂ ಒಂದೊಂದು ನ್ಯಾಯ ತೆರೆಮರೆಯಲ್ಲಿ ಚಾಲ್ತಿ ಇದೆ. ಇದು ಯಾರ ತಪ್ಪು ಅನ್ನುವುದು ನನಗಂತೂ ಬಿಡಿಸಲಾಗದ ಕಗ್ಗಂಟು. ಯಾಕೆಂದರೆ ಅದರ ಹೊಣೆಯನ್ನು ಯಾವುದೋ ಒಂದರ ಮೇಲೆ ಹಾಕಲು ನಾನು ತಯಾರಿಲ್ಲ.

ಹಳೇ ನೀರು ಹೋಗಿ, ಹೊಸ ನೀರು ಬರಬೇಕು ಆದರೆ ಇಂದು ಹಳೇ ನೀರು ಇದೆ ಹೊಸ ನೀರು ಇದೆ. ಆದರೆ ಎರಡಕ್ಕೂ ಸರಿಯಾದ ನೆಲೆಗಳಿಲ್ಲ. ನಾನು ಹೇಳಿದ ಅಷ್ಟೂ ವಿಷಯ ಇಷ್ಟಕ್ಕೆ ಸೀಮೀತವಲ್ಲಾ ಅದು ಸಾಹಿತ್ಯಕ್ಕೂ ಸೇರಿ ಹಲವು ಸೃಜನಶೀಲ ಕ್ಷೇತ್ರಗಳ ಸಮಸ್ಯೆಗಳಿಗೂ ಸಂಬಂಧಿಸಿದೆ.

ಮುಂಚೆ ಮಕ್ಕಳು ಶಾಲೆಯಿಂದ ಬಂದು ಆಡಿಕೊಳ್ಳುತ್ತಿದ್ದರು ನಂತರದಲ್ಲಿ ಶಾಲಾ ಪಠ್ಯದ ಕ್ಲಾಸುಗಳಿಗೆ ಸೇರಿಕೊಂಡರು. ಈಗ ನಿಲ್ಲದೇ ಓಡುತ್ತಿರುವ ವೇಗದ ದಿನಗಳಲ್ಲಿ ಮಕ್ಕಳನ್ನು ಸಂಗೀತ, ನೃತ್ಯ ಎಲ್ಲಾ ಕಲಿಯುವ ಒತ್ತಡಕ್ಕೆ ತಳ್ಳಿದ್ದೇವೆ. ಹೀಗೆ ಕಲಿಕೆ ಪ್ರಾರಂಭವಾಗುವ ಮೊದಲೇ ಅವರಿಗೆ ತುಂಬುವ ವಿಷಯ, ‘ನೀನು ಆ ಟಿವಿಯ ಸ್ಟೇಜಿನ ಮೇಲೆ ಹಾಡಬೇಕು’. ಕಲಿಕೆ ಆರಂಭವಾದ ಕೆಲವೇ ದಿನಗಳಲ್ಲಿ ಆ ಮಗು ಅಲ್ಲಿರಬೇಕು.ಇದರಿಂದ ಅವರ ಬದುಕಿನಲ್ಲಿ ಮುಂದೆ ಆಗಬಹುದಾದ ಮಾನಸಿಕ ಬದಲಾವಣೆಗಳ ಕುರಿತು ಮತ್ತೆ ಮತ್ತೆ ಯೋಚಿಸಬೇಕಿದೆ.

ಯಾವುದು ಹಿಂದಿನ ದಿನಮಾನಗಳಲ್ಲಿ ಒತ್ತಡವನ್ನು ಕಡಿಮೆ ಮಾಡುತ್ತಿದ್ದವೋ ಅಂತಹ ಸೃಜನ ಕಲೆಗಳು ಇಂದು ಒತ್ತಡವನ್ನುಂಟು ಮಾಡುವ ಹಂತಕ್ಕೆ ಅವನ್ನು ನಾವೇ ತಂದು ನಿಲ್ಲಿಸಿದ್ದೇವೆ. ಇಂಥಹ ಸಂಕಟಗಳನ್ನು ಭರಿಸಲಾಗದೇ ಪ್ರಾಣ ಕಳೆದುಕೊಂಡ ಜೀವಗಳ ಸಲುವಾಗಿ ನೋವಿದೆ. ಹಾಗಾಗಲು ಕಾರಣವಾದ ನಮ್ಮ ಮೇಲೂ ಕೂಡ ಸಿಟ್ಟಿದೆ. ಮಾಧ್ಯಮಗಳಲ್ಲಿ ಕಾಣಿಸಿಕೊಂಡರೆ ಮಾತ್ರವೇ ಹಿರಿಮೆ ದಕ್ಕುತ್ತದೆ ಎನ್ನುವ ತಿಕ್ಕಲು ತನವನ್ನು ಇನ್ನಾದರೂ ಇಲ್ಲವಾಗಿಸಬೇಕು. ಇಂಥ ಸ್ಥಿತಿಯಲ್ಲಿ ತಾನಸೇನನ ಪ್ರಸಂಗವನ್ನು ನಾವು ಮೇಲಿಂದ ಮೇಲೆ ಮನನ ಮಾಡಿಕೊಳ್ಳಲೇಬೇಕಾದ ಜರೂರಿದೆ ಎಂದೇ ಅನ್ನಿಸುತ್ತದೆ.