“ಕಡೇ ನಾಲ್ಕು ಸಾಲು ಸಂಕಲನದ ಮೂಲಕ ಉಮಾ ಮಾತಾಡುತ್ತಿರುವುದು ಏನು? ನನಗೆ ತೋರುವಂತೆ ಬದುಕಿನ ಬಗ್ಗೆ, ಪರಸ್ಪರ ಅರಿವಿನ ಬಗ್ಗೆ, ಮಾನವನಾಗಿ ಸಹ ಮಾನವರ ಬಗ್ಗೆ ಇರುವ ನಮ್ಮ ಕರ್ತವ್ಯದ ಬಗ್ಗೆ, ತನ್ನದೆ ಬದುಕಿನ ಸಣ್ಣ ಸಣ್ಣ ಸಂಗತಿಗಳ ಬಗ್ಗೆ…. ಹೀಗೆ ಪಟ್ಟಿ ಮಾಡಬಹುದು. ಆದರೆ ನನ್ನ ಉತ್ಸಾಹವಿರುವುದು ಒಳ್ಳೆಯ ಕವಿತೆ ಬರೆಯಬೇಕೆಂಬ ಅವರ ಆಸ್ಥೆಯಲ್ಲಿ. ಇದಕ್ಕೆ ಕಾರಣವೂ ಇದೆ. ಉಮಾ ಅವರ ಕಾವ್ಯಲೋಕ ವಿಸ್ತಾರವಾದುದಲ್ಲ. ಅದು ಕಂಡ ಲೋಕ ಮತ್ತು ಅನುಭವ ಲೋಕಗಳ ನಡುವೆ ಸಂಚರಿಸುತ್ತದೆ. ಸಂಚಾರ ಪ್ರಾಮಾಣಿಕವಾಗಿದೆ. ಅದರಲ್ಲಿ ಪ್ರಣಾಳಿಕೆಗಳಿಲ್ಲ, ಸೋಗಿಲ್ಲ. ಆದ್ದರಿಂದ ಅವನ್ನು ಓದುವುದು ಸಂತೋಷಕರವಾಗಿದೆ”
ಉಮಾ ಮುಕುಂದ ಕವಿತಾ ಸಂಕಲನದ ಕುರಿತು ಆರ್. ವಿಜಯರಾಘವನ್

 

ಡಾ. ಎಲ್. ಬಸವರಾಜು ತಮಗೆ ೮೦ ವರ್ಷಗಳಾದ ಬಳಿಕ ಠಾಣಾಂತರ ಮತ್ತು ಜಾಲಾರಿ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿ ಕಾವ್ಯಾಸಕ್ತರಲ್ಲಿ ಅಚ್ಚರಿಯನ್ನು ಮೂಡಿಸಿದ್ದರು. ತಮಗೆ ಐವತ್ತು ವರ್ಷ ವಯಸ್ಸಾದ ಬಳಿಕ ಮೊದಲ ಕವನಸಂಕಲನ ಪ್ರಕಟಿಸುವ ಕವಿಗಳ ಬಗ್ಗೆ ಸಾಮಾನ್ಯ ಕುತೂಹಲವೊಂದಿರುತ್ತದೆ. ಈವರೆಗಿನ ಬದುಕು ಕಾವ್ಯ ನಿರ್ಮಿತಿಯ ಕುರಿತು ಇವರಲ್ಲಿ ಮಾಡಿಕೊಂಡಿದ್ದ ಕೆಲಸವೇನು ಎನ್ನುವುದು ಒಂದು. ಲೇಖಕರನೇಕರು ತಮ್ಮ ತಾರುಣ್ಯದಲ್ಲಿಯೇ ಕವಿತೆ ಬರೆಯುವ ವ್ಯವಸಾಯದಲ್ಲಿ ತೊಡಗಿಕೊಳ್ಳುತ್ತಾರೆ. ಲೋಕಲ್ ಕವಿಗೋಷ್ಠಿಗಳಲ್ಲಿ ಬೇಗನೇ ಅವಕಾಶ ದೊರೆಯುವುದರಿಂದಲೂ, ಫೇಸ್ಬುಕ್, ಬ್ಲಾಗ್ ಗಳಂಥ ಆನ್ ಲೈನ್ ಅವಕಾಶಗಳು ಅನೇಕವಿರುವುದರಿಂದ ಲೈಕುಗಳು ದೊರೆಯುವುದರಿಂದಲೂ ಬೇಗನೆ ಹಣ್ಣಾಗಿ ಉದುರಿ ಹೋಗುತ್ತಾರೆ. ಆದರೆ ಕೆಲವರು ಫೇಸ್ಬುಕ್, ಬ್ಲಾಗ್ ಗಳಂಥ ಆನ್ ಲೈನ್ ಅವಕಾಶಗಳನ್ನು ಸಹ ಗಂಭೀರವಾಗಿಯೇ ತೆಗೆದುಕೊಂಡು ಬರೆಯುತ್ತ ಹೋಗುತ್ತಾರೆ. ಅಂತಹ ಲೇಖಕ, ಲೇಖಕಿಯರನೇಕ ಮಂದಿ ಕನ್ನಡ ಕಾವ್ಯವನ್ನು ಜನರತ್ತ ಒಯ್ಯುವ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಒಬ್ಬರು ಕಡೇ ನಾಲ್ಕು ಸಾಲು ಎಂಬ ಹೆಸರಿನ ಮೊದಲ ಕವನ ಸಂಕಲನವನ್ನು ಈಗ ಪ್ರಕಟಿಸಿರುವ ಉಮಾ ಮುಕುಂದ ಅವರು.

ಈ ಫೇಸ್ ಬುಕ್ ಕವಿತೆಗಳ ಕುರಿತು ಒಂದು ಮಾತಿದೆ: ಸ್ಕ್ರೋಲ್ ಮಾಡಿ ಮುನ್ನಡೆಯುವುದರೊಳಗೆ ಮುಖಕ್ಕೆ ರಾಚದಿದ್ದರೆ (ಬಿಸುಪಿರಬಹುದು, ಘಾಟಿರಬಹುದು, ಕೊಂಕಿರಬಹುದು, ವ್ಯಾಕ್ಕಿರಬಹುದು? ಏನೂ ಇರಬಹುದು!) ಸಾಯುವುದು ಬಿಡಿ? ಅಡ್ರಸ್ ಇಲ್ಲದೇ ಹೋಗುವ ಅಪಾಯ ಇರುವ ಕವಿತೆಗಳೇ ಫೇಸ್ ಬುಕ್ ಕವಿತೆಗಳು. ಹೀಗೊಂದು ಡೆಫನಿಶನ್ ಕೊಡುವವರು ರಾಜಾರಾಂ ತಲ್ಲೂರು. ಇಷ್ಟು ಹೇಳಿ ಉಮಾ ಕವಿತೆಗಳ ಬಗ್ಗೆ ಅವರು ತಮ್ಮ ಅಭಿಪ್ರಾಯ ಬದಲಿಸಿ ರಾಚುವ ಯಾವುದೇ ಗುಣ ಇಲ್ಲದಿದ್ದರೂ ತನ್ನ ಡಿಟೇಲಿಂಗ್ ನಲ್ಲಿ, ಡಿಟೇಲಿಂಗ್ ನ ಗಟ್ಟಿತನದಲ್ಲಿ ಕಾಡಬಲ್ಲ, ಸರಳ ಚಿತ್ರಣಗಳಾಗಿದ್ದೂ ಮರು ಓದು-ಮೆಲುಕು ಬೇಡುವ ಕವನಗಳು ಎಂದು ಮೆಚ್ಚುತ್ತಾರೆ. ಈ ಮಾತಿನಲ್ಲಿನ ಡೀಟೇಲಿಂಗ್ ಕುರಿತು ಮುಂದೆ ವಿವರಿಸಲಾಗಿದೆ.

(ಉಮಾ ಮುಕುಂದ)

ಉಮಾ ಅವರ ಕವಿತೆಗಳನ್ನು ನಾನು ಅವರು ಫೇಸ್ ಬುಕ್ನಲ್ಲಿ, ಅವಧಿ, ಕೆಂಡಸಂಪಿಗೆಗಳಲ್ಲಿ ಓದಿ ಸುಖಿಸಿ ಎಲ್ಲಿಂದ ಬಂದರಪ್ಪಾ ಈಕೆ ಎಂದು ಅಚ್ಚರಿಗೊಂಡಿದ್ದೆ. ಬಳಿಕ ಅವರ ಬಳಗದಲ್ಲಿ ಲೇಖಕ/ಕಲಾವಿದರ ಸಂಖ್ಯೆ ಸಾಕಷ್ಟು ದೊಡ್ಡದಾಗಿಯೇ ಇದೆ ಅನ್ನುವುದು, ಎಚ್ಚೆಸ್ವಿಯಂಥವರ ಗರಡಿಯಲ್ಲಿ ಕೆಲವು ಕಾವ್ಯ ವರಸೆಗಳನ್ನು ಕಲಿತರೆಂದು ತಿಳಿಯಿತು. ಈ ಬಗೆಯ ಗಂಭೀರ ಕಾವ್ಯವನ್ನು ಬರೆಯಲು ಅವರ ಮನೋಭೂಮಿಕೆ ಬಹಳ ಕಾಲದಿಂದಲೂ ಸಿದ್ಧವಾಗುತ್ತಿತ್ತು ಎಂಬುದು ಅರಿವಿಗೆ ಬಂತು.

ತಮ್ಮ ಕಾವ್ಯೋದ್ಯಮದ ಬಗ್ಗೆ ಉಮಾ ಬರೆಯುತ್ತಾರೆ: ಸುಮಾರು ಎರಡು ವರ್ಷದ ಹಿಂದೆ ನಾನೊಂದು ವಿಚಿತ್ರ ಭಾವ, ಸ್ಥಿತಿಯಲ್ಲಿದ್ದೆ. ಅದೇಕೋ ಅಲ್ಲಿಯವರೆಗೂ ನನ್ನನ್ನು ಅಷ್ಟಾಗಿ ಬಾಧಿಸದ ಅಸ್ಮಿತೆಯ ಸಮಸ್ಯೆ ತೀವ್ರವಾಗಿ ಕಾಡತೊಡಗಿತ್ತು. ನಿರ್ವಾತದ ಅಂಥ ಸ್ಥಿತಿಯಿಂದ ಹೊರಬರುವ ಅನಿವಾರ್ಯತೆಯೇ ನನ್ನನ್ನು ಕಾವ್ಯಲೋಕಕ್ಕೆ ದೂಡಿರಬಹುದೆಂದು ನನ್ನ ಅನಿಸಿಕೆ. ಕವಿತೆಯನ್ನು ಎಸೆನ್ಷಿಯಲಿ ಅನ್ ಆಟಿಟ್ಯೂಡ್, ಎ ಸೆನ್ಸಿಬಿಲಿಟಿ ಎಂದು ಉಮಾ ಭಾವಿಸಿದ್ದಾರೆ. ಬದುಕಿನ ಅನುಭವಗಳನ್ನು ಆಧರಿಸಿ ಕಾವ್ಯ ರಚಿಸುವೆನೆನ್ನುವ ಕವಿ ತನ್ನದೇ ಕಾವ್ಯ ಮೀಮಾಂಸೆಗೆ ತೊಡಗುವುದು ಹೀಗೆ:

ಎದೆಗಪ್ಪಿ ಜೇನುಣಿಸುವ ತಾಯಿ
ಕುಸುಮಪಾದವ ನೇವರಿಸುತ್ತಾ
ಅಂಗಾಲ ಕಚಗುಳಿಸುವಾಗ
ಕೂಸು ಚಣ ದಿಟ್ಟಿಸಿ, ತುಟಿ ಸಡಿಲಿಸಿ
ಹಾಲು ತುಳುಕಿಸಿ ನಕ್ಕು ಮತ್ತೆ
ಮೊಲೆಗೆ ತುಟಿಯುವ ಹೊತ್ತಲ್ಲಿ
ಕವಿತೆ ಹುಟ್ಟಿತು

ಈ ಸ್ವಕಾವ್ಯ ಮೀಮಾಂಸೆಗೆ ಉಮಾ ತಮ್ಮ ಮೊದಲ ಕವಿತೆಯಲ್ಲೇ ತೊಡಗಿದ್ದಾರೆ. ಇದು ದಾಂಪತ್ಯದ ಮೀಮಾಂಸೆ. ತಮ್ಮ ದಾಂಪತ್ಯದ ಸರಸ ಸಲ್ಲಾಪಕ್ಕೆ, ಉಕ್ಕಿ ಹರಿಯುವ ಪ್ರೀತಿಗೆ, ಸಿಟ್ಟು ಸೆಡವಿಗೆ, ದುಃಖ ದುಮ್ಮಾನಕ್ಕೆ ಸಾಕ್ಷಿಯಾಗುವ ಹಿತ್ತಲುಗಳು ಹೊರಗೆ ತೋರುವ ಮುಖಗಳಲ್ಲ. ಮನಸ್ಸಿನ ಹಿತ್ತಲಲ್ಲಿ ಬೆಳೆದ, ಸೇರಿಕೊಂಡ ಕಸ ಕೊಳೆ ತೆಗೆವ ಪರಿ ಉಂಟಲ್ಲ, ಅದು ಕೊಳೆ ತೊಳೆದ ಬಳಿಕ ಉಳಿವ ಬಹಳ ಮನೋಲ್ಲಾಸಕಾರಿ ಚಟುವಟಿಕೆ. ಅದನ್ನು ಉಮಾ ಮಂಡಿಸುವುದು ಹೀಗೆ:

ಒಂದು ಬದಿಯಿಂದ ಅವನು
ಇನ್ನೊಂದು ಬದಿಯಿಂದ ನಾನು
ಹೆಬ್ಬೆರಳು ತೋರುಬೆರಳಿಂದ
ಕಳೆ ತೆಗೆಯಲು ಶುರುಮಾಡುತ್ತೇವೆ
ಸಂದುಗೊಂದಿನದನ್ನು ಬಲವಾಗಿ
ಕೆಲವನ್ನು ಮೆದುವಾಗಿ ನಿಧನಿಧಾನ
ಒಂದೊಂದೇ ಒಂದೊಂದೇ
ಕಿತ್ತೊಗೆದಂತೆ
ನಾವಿಬ್ಬರೂ ಹತ್ತಿರ
ಹತ್ತಿರವಾಗುತ್ತಾ
ನಮ್ಮಿಬ್ಬರ ಕೈಬೆರಳು
ತಂತಾನೆ ಬೆಸೆದುಕೊಳ್ಳುತ್ತವೆ
ಅಂಗೈಯ ಬಿಸುಪು ಮತ್ತೆ
ಎದೆಯನ್ನು ಬೆಚ್ಚಗಾಗಿಸುತ್ತದೆ.

ಈ ಮಾದರಿಯ ಕವಿತೆ ಕನ್ನಡದಲ್ಲಿ ಮರುಹುಟ್ಟು ಪಡೆಯುತ್ತಿದೆ. ಮೇಲಿನ ಕವಿತೆಯ ಬಗ್ಗೆ ವೈದೇಹಿ ಬರೆಯುತ್ತಾರೆ: ಬಾಹ್ಯದಲ್ಲಿ ಒಂದೇ ಭಾವಜೀವ ಎಂದು ಕಾಣುವ ದಾಂಪತ್ಯ ಒಳಗಿಂದ ಬಗೆಬಗೆಯಲ್ಲಿ ಮುಖಾಮುಖಿಯಾಗುತ್ತ, ಅಲ್ಲಲ್ಲೇ ಏಳುವ ಉರಿಗಾಳಿಯನ್ನು ಸಹಿಸಿ ಶಮನಿಸುತ್ತ ಪ್ರೀತಿಯ ಅಂತರ್ದೀಪ ಆರದಂತೆ ಕಾಪಾಡಿಕೊಂಡು ಬರುವ ದೃಢನಡೆಯ ಚಿತ್ರಣ. ಇದಕ್ಕೆ ಹಲವಾರು ಉದಾಹರಣೆಗಳು ಈ ಸಂಕಲನದಲ್ಲಿ ಇವೆ. ಮೊದಲ ಪದ್ಯದಲ್ಲೇ ಇದು ರೂಪಕಾತ್ಮಕವಾಗಿ ಆಳದ ಸಣ್ಣನೆಯ ಗುನುಗಿನಂತೆ ಆದರೆ ಸಶಕ್ತವಾಗಿ ಹೇಗೆ ಕಾಣಿಸುತ್ತಿದೆ. ಬರೆಯುತ್ತ ಕೂತ ಲೇಖಕಿಯ ಮನೆ ಬಾಗಿಲ ಕರೆಗಂಟೆಯ ಸದ್ದು. ಎದ್ದರೆ ಸೆಲೆ ಬತ್ತಿ ಹೋಗುವುದೇನೋ ಎನಿಸಿ

ಕಥೆ ಮುಗಿಯಲು ಇನ್ನು ನಾಲ್ಕೇ ಸಾಲು.
ಮುಗಿಸಿಯೇ ತೆರೆದು ಬಾಗಿಲು
ನೋಡಿದರೆ ಬಂದವರು ತಿರುಗಿ
ನಡೆದಾಯ್ತು- ಎಂದುಕೊಂಡು ಬರೆದು ಮುಗಿಸಿ ಹೋದರೆ ಬಂದವರು ಹೋಗಿ ಆಗಿದೆ. ಒಳಗೆ ಬಂದು ನೋಡಿದರೆ ಹಾಳೆಯಿಂದ ಕತೆಯ ಕಡೆಯ ನಾಲ್ಕೂ ಸಾಲು ಮಾಯವಾಗಿದೆ. ಈ ಕವಿತೆ ಏನು ಮಾತಾಡುತ್ತಿದೆ? ಒಂದೆಡೆ ಕಲೆ, ಮತ್ತೊಂದೆಡೆ ಬದುಕು. ಕಡೆಗೂ ಗೆಲ್ಲುವುದು ಬದುಕು. ಬೆಲೆ ಕೊಡಬೇಕಿರುವುದು ಬದುಕಿಗೇ. ಕಲೆ ಏನಿದ್ದರೂ ಖಾಸಗಿ; ಸಾರ್ವಜನಿಕ ವ್ಯವಹಾರವಲ್ಲ. ಮೊದಲ ಕವಿತೆಯ ಮುಕ್ತಾಯಕ್ಕೂ ಇದಕ್ಕೂ ಸಾಮ್ಯತೆಯಿದೆ. ಎರಡರಲ್ಲೂ ಕಡೆಗೆ ದೊರೆಯುವುದು ಬದುಕಿಗೆ ಅಗತ್ಯವಾದ ತಿಳುವಳಿಕೆ.

ಇದರ ಜೊತೆಗೆ ಬದುಕಿಗೊಂದು ಸ್ವಂತಿಕೆಯಿದೆ. ಮನಸ್ಸಿಗೆ ಅದರದೇ ರುಚಿ ಇದೆ. ಬದಲಾಯಿಸುವುದೆಂದರೆ ಕವಿತೆಯಲ್ಲಿ ಕೊನೆಗೂ ಸಂಸ್ಕಾರಗೊಂಡ ಮನಸ್ಸಿನ ರುಚಿಯೇ ಗೆಲ್ಲುವುದನ್ನು ಗಮನಿಸಬಹುದು. ತನ್ನಂತೆಯೇ ಇರುವ ಕವಿಗೆ ಮೊದಲು ಕಾಣುವ ಹೊರಜಗತ್ತಿನ ಎಲ್ಲ ವ್ಯಾಪಾರವೂ ಭಿನ್ನವೆನ್ನಿಸುವುದಿಲ್ಲ. ಆದರೆ ಸಿಗರೇಟು ಸೇದುತ್ತ ಮೊಬೈಲಿನಲ್ಲಿ ಮಗ್ನ ಹೆಣ್ಣು ತನ್ನನ್ನು ಒಂದು ಭೂತದ ಆವಾಹನೆಯಾದಂತೆ ಮೊದಲ ಬಾರಿಗೆ ಪಕ್ಕದ ಕಾಫಿ ಕೆಫೆಗೆ ನುಗ್ಗಿ ಕಪುಚಿನೋಗೆ ಆರ್ಡರ್ ಮಾಡಲು ಪ್ರಚೋದಿಸುತ್ತದೆ. ನವೀನ ಯುಗದ ಆಕರ್ಷಣೆಯನ್ನು ಗೆಲ್ಲುವುದು ಸಂಸ್ಕಾರ:

ಎರಡೇ ನಿಮಿಷಕ್ಕೆ ಮತ್ತೆ
ಕರೆದು ನನ್ನ ನೆಚ್ಚಿನ
ಫಿಲ್ಟರ್ ಕಾಫಿಗೆ ಆರ್ಡರ್
ಬದಲಾಯಿಸುತ್ತೇನೆ.

‘ಸೊಪ್ಪಿನವಳು’ ಕವಿತೆಯಲ್ಲಿ ಕವಿಯನ್ನು ಸೊಪ್ಪಿನ ಕಂತೆ ಯೋಚನೆಗೆ ಹಚ್ಚಿದ್ದು ಬಹಳ ಕ್ರೂರ ರೂಪಕದಂತಿದೆ. ಒಳಗೆ ಬಂದು ಬಾಗಿಲು ಹಾಕಿದರೆ/ನಗೆಯ ಘಮಲು ಹೊದ್ದ ಸೊಪ್ಪಿಗೆ/ ದಟ್ಟ ನೋವಿನ ವಾಸನೆ. ಇಲ್ಲಿನ ನೋವಿನ ವಾಸನೆಯ ಹಿಂದೆ ಆಕೆಗೆ ಹೇಳಿಕೊಳ್ಳಲಾಗದ, ಅನುದಿನದ ಬದುಕಲ್ಲಿ ಹಾಸುಹೊಕ್ಕಾದ ಗಂಡು ದಯಪಾಲಿಸುವ ಹಿಂಸೆಯಿದೆ. ಅದನ್ನು ಹೆಣ್ಣು ಸಹಿಸುವುದು ಏನದು ಗಾಯ? ಕೇಳಿದ್ದಕ್ಕೆ ಕೆಂಪು ತುಟಿಯರಳಿಸಿ, ಸುಮ್ಮನೆ ನಕ್ಕು, ಸೊಪ್ಪಿನ ಕಟ್ಟು ಮಡಿಲಲಿಟ್ಟು, ಕೊಟ್ಟ ಕಾಸು ಪಡೆದು, ಪ್ರಶ್ನೆಗಳ ಹಾಗೆಯೇ ಉಳಿಸಿ, ನಡೆದೇ ಬಿಟ್ಟಳು ಬುಟ್ಟಿ ಹೊತ್ತು. ಈ ಸಣ್ಣ ವಿವರಗಳನ್ನು ದಾಖಲಿಸುವುದರಲ್ಲಿ ಉಮಾ ಅವರಿಗೆ ಬಲು ದೊಡ್ಡ ಆಕರ್ಷಣೆ.

ಉಮಾ ಅವರ ಕಾಳಜಿಗಳಲ್ಲೊಂದು ತರತಮರಹಿತ ಸಮಾಜದ ಪರಿಕಲ್ಪನೆ. ಕ್ರಿಸ್ ಮಸ್ ಸಮಯದಲ್ಲಿ ಮಕ್ಕಳು ಆಚರಿಸುವ ಗೋದಲಿಯ ಆಚರಣೆ ಕೊನೆಯಾಗುವುದು ಕತ್ತಲಾಗುವಾಗ ತಾಯಂದಿರ ಕೂಗಿನಿಂದ. ಯಾವ ಯಾವುದೋ ಧರ್ಮದ ಮಕ್ಕಳವು. ಕರೆ ಕೇಳಿ ಬಿಟ್ಟೋಡಿವೆ ಎಲ್ಲ ಹಾಗೆ ಹಾಗೆ../ ಗುಡಿಸ ಬೇಕೆನಿಸುವುದಿಲ್ಲ/ ತಾಯಿಗೆ ಏಕೆ? ಬದುಕು ಹಾಗೆಯೇ ಕಟ್ಟಿಕೊಳ್ಳಲು. ಆಕೆಯ ಆಶಯ ಇರಲಿ ಇಳೆಯೆಲ್ಲ ಹೀಗೆ ಹೀಗೆ.. ಎಂದು.

‘ಸೊಪ್ಪಿನವಳು’ ಕವಿತೆಯಲ್ಲಿ ಒಂದು ಬಗೆಯ ಕ್ರೌರ್ಯವಿದ್ದರೆ ಪುಟ್ಟಕ್ಕನ ಬದುಕಿನಲ್ಲಿ ಮತ್ತೊಂದು ಬಗೆಯ ಕ್ರೌರ್ಯವಿದೆ. ಅದು ಗಂಡ ಬಿಟ್ಟುಹೋದ ಮೂವತ್ತರ ಕಪ್ಪು ಚೆಲುವೆ ಹೆಣ್ಣು ತನ್ನ ಎರಡು ಮಕ್ಕಳಿಗಾಗಿ ಬದುಕುವವಳು. ಬಿಟ್ಟು ಹೋದ ಗಂಡನ ಬಗ್ಗೆ ಕೆಟ್ಟ ಮಾತಾಡದೆ, ಎಂಟು ಮನೆ ಕೆಲಸಮಾಡಿ, ಕೊಟ್ಟ ತಿನಿಸ ಕಟ್ಟಿಕೊಂಡು ಮುಚ್ಚಟೆಯಾಗಿ ಬದುಕುವವಳು. ಓಲೆ ಹಾಕಿಕೊಂಡು ಓಡಾಡುವಾಸೆ ಅವಳಿಗೆ. ಸೇಟು ಹತ್ತಿರ ಚೀಟಿಹಾಕಿ ಓಲೆ ಕೊಂಡು ಒಂದು ಘಳಿಗೆ ತೊಟ್ಟು ಮಗಳ ಮದುವೆಗೆ ಎತ್ತಿಡುವ ಹೆಣ್ಣು ಸ್ವಯಂ ಹೆಣ್ಣಾದ ಕವಿಗೇ ಅಚ್ಚರಿ ತರುವಂತಹ ಜೀವನೋತ್ಸಾಹ ಪ್ರಕಟಿಸುತ್ತಾಳೆ. ಇಲ್ಲಿಯೂ ಪುಟ್ಟ ಕತೆಯೊಂದನ್ನು ಉಮಾ ನಿರ್ವಹಿಸುತ್ತಾರೆ.

‘ವಾಸನೆ’ ಕವಿತೆಯ ನಿರ್ವಹಣೆ ಕುತೂಹಲಕಾರಿ. ಇಲ್ಲಿ ಹೆಣ್ಣಿನ ಬದುಕನ್ನು ವಿವಿಧ ವಾಸನೆಗಳ ಮೂಲಕ ಪ್ರತೀಕಾರಾತ್ಮಕವಾಗಿ ನಿರೂಪಿಸಲಾಗಿದೆ. ವಾಸನೆ ವರವಾಗಿ ಶಾಪವಾಗಿ ಕೊನೆಗಿನ್ನೊಂದು ವಾಸನೆಯನ್ನುಳಿಸಿ ಹೋಗುವ ಬಗೆ ಬಹಳ ಸುಂದರವಾಗಿದೆ. ಇಲ್ಲೂ ನಿರೂಪಣೆ ವಿವರಣಾತ್ಮಕವೇ ಆದರೂ ಹರಳಿನಂತಿದೆ. ಇಂಥಲ್ಲೆಲ್ಲ ಸಾಮಾನ್ಯ ಕಥನಕವನಗಳಿಗಿಂತ ತುಸು ಭಿನ್ನವಾದ ಕಥನದ ಮಾದರಿಯೊಂದು ತೆರೆದುಕೊಳ್ಳುತ್ತದೆ.

ಬಗೆ ಬಗೆವ ವಾಸನೆ
ಪೊರೆದಿದೆ ವರವಾಗಿ
ಸುಡುತಿದೆ ಶಾಪವಾಗಿ
ಮಾಗಿ
ಹದಗೊಂಡ ಬದುಕು
ಉಳಿಸಿ ಹೋಗುವುದು
ನನ್ನದೇ ವಾಸನೆ
ಸಾವಿನಾಚೆಗೂ

ಉಮಾ ಕಾವ್ಯದ ಈ ವಿವರಣಾತ್ಮಕತೆಯ ಬಗ್ಗೆ ವೈದೇಹಿಯವರೂ ಗಮನಿಸಿದ್ದಾರೆ. ಬೆನ್ನುಡಿಯಲ್ಲಿನ ಅವರ ಮಾತುಗಳು ಹೀಗಿವೆ. “ಇದರಲ್ಲಿನ ವಾಸ್ತವ ಮತ್ತು ತಪ್ತತೆಯಲ್ಲಿ ಅದ್ದಿದ ದನಿ ಓದುವಾಗ ಸ್ವಗತದ ಪಿಸುಬಿಸಿಯಲ್ಲಿ ಕತೆಯೊಂದು ಕವನದಲ್ಲಿ ಸಂಗೋಪಿಸಿದಂತೆಯೂ ಆಗಿ ಮನದಲ್ಲಿ ಇಳಿದು ಬಿಡುತ್ತದೆ. ನಿನ್ನ ಕೆಲವು ಕವನಗಳಲ್ಲಿ ಹೀಗೆ ಕತೆಯಾಗ ಹೊರಟು ಕವನವಾಗಿ ಬೆಳೆದ ಪದ್ಯಗಳಿವೆ. ಗಮನಿಸಿದೆಯ? ‘ಅಮ್ಮ’, ‘ಅತಿಥಿ’, ‘ಕಳೆದು ಹೋದವಳು’, ‘ಕಡೇ ನಾಲ್ಕು ಸಾಲು’ ಮುಂತಾದವು ಇದಕ್ಕೊಂದು ಉದಾಹರಣೆ. ಇದನ್ನು ಯಾಕೆ ಹೇಳಿದೆ ಎಂದರೆ, ನಿನ್ನಲ್ಲಿ ಕತೆಗಾತಿಯ ಎಲ್ಲ ಗುಣಗಳೂ ಇವೆ ಎಂದು ಹೇಳಲು. ಕವನದಲ್ಲೇ ಎಲ್ಲವನ್ನೂ ಹೇಳಲು ಸಾಧ್ಯವಾಗದಾಗ ಕತೆಯಲ್ಲಿ ಸಾಧ್ಯವೇ ನೋಡು.”

ಎಲ್ಲ ಕವಿಗಳೂ ಸದಾ ಕಾಲ ಕಾಯುತ್ತಲೇ ಇರುತ್ತಾರೆ; ‘ಸದಾ ಕುಡಿದಿರು’ ಎಂಬ ಬಾದಿಲೇರನ ಮಾತಿನಂತೆ. ಇಂಥ ಕಾಯುವಿಕೆ ಉಮಾ ಅವರಿಗೆ ಹೊಸತಲ್ಲ. ಒಂದು ಸಂಕಲನ ತರುವುದಕ್ಕೇ ಇಷ್ಟು ಕಾದವರು ಅವರು. ಆದರೆ ಒಮ್ಮೆ ಬಂದವರು ಮನದಿಚ್ಛೆ ತಣಿಯುವವರೆಗೆ ಇರಬೇಕು. ಹೀಗೆ ಬಂದು ಹಾಗೆ ಹೋಗಬಾರದು. ಕೆಲವೊಮ್ಮೆ ಬರುವಿಕೆಯೇ ಒಂದು ಭ್ರಮೆಯಾಗುವುದೂ ಉಂಟು. ಬರದವರ ಜೊತೆಗೂ ಕವಿ ಮಾತನಾಡುತ್ತಾರೆ. ಒನ್ ವೇ ಅದು. ಮಾತಾಡುತ್ತಿಲ್ಲ ಯಾಕೆ? ಮಾತು ಕೇಳಿಸುತ್ತಿಲ್ಲವೆ? ನಿಜಕ್ಕೂ ಇದು ರಸೋದ್ಭವಕ್ಕೆ ಸಂಬಂಧಿಸಿದ್ದು. ಈ ಭಾವ ಮತ್ತು ನಿರೂಪಣೆ ನರಸಿಂಹಸ್ವಾಮಿಯವರ ಕಾವ್ಯದಲ್ಲಿ ಹೆಚ್ಚು ಕಂಡುಬಂದಿದೆ. ಇದನ್ನು ಗಮನಿಸಿ ಎಚ್ಚೆಸ್ಸಾರ್ ಬರೆಯುತ್ತಾರೆ: ದಿನನಿತ್ಯದ ಬದುಕಿನಲ್ಲಿಯೇ ಮೂಡಿ ಮುಳುಗುವ ತಂಪು, ಬಿಸುಪುಗಳನ್ನು, ಬಯಕೆ-ಭ್ರಮನಿರಸನಗಳನ್ನು ಅನುಭವಿಸುವ ಹಂಚಿಕೊಳ್ಳುವ ಹಂಬಲ ಇವರದು. ಆ ನಿಟ್ಟಿನಲ್ಲಿ ಇವರ ಕವಿತೆ ನರಸಿಂಹಸ್ವಾಮಿಯವರ ಒಂದು ಬಗೆಯ ಕವಿತೆಗಳನ್ನು ನೆನಪಿಗೆ ತರುತ್ತದೆ. ತಮ್ಮ ಸರಳತೆಯಲ್ಲಿ ಮತ್ತು ನಮ್ಮ-ನಿಮ್ಮಂಥ ‘ಸಾಮಾನ್ಯ’ರ ಬದುಕಿನ ಬಗ್ಗೆ ಇರುವ ತೀವ್ರವಾದ ಆಸಕ್ತಿಯಲ್ಲಿ. ಅಂಥ ಕಿರುಹಣತೆ ಬೆಳಕಿನಲ್ಲೇ ತಾತ್ವಿಕತೆಯೊಂದು ಸಹಜವಾಗಿಯೇ ಮೂಡಿಬರುತ್ತದೆ. ಅದು ‘ಗೃಹಸ್ಥಧರ್ಮದ ಗಂಧ’ ತೇಯ್ದು ಸುವಾಸನೆ ಹರಡಿಕೊಳ್ಳುವ ಬಗೆ.” ಆದರೆ ಈ ಮಾತಿನಲ್ಲಿ ಅಡಗಿದ ಮಿತಿಯ ಪ್ರಶ್ನೆಯನ್ನು ಉಮಾ ಅವರ ಕಾವ್ಯ ಮೀರುವುದನ್ನು ಇಲ್ಲೇ ಕಾಣಲಾಗಿದೆ. ಇದ್ದರೂ ಕಾವ್ಯಶಿಲ್ಪದ ವಿಚಾರ ಕೆಲವು ಕವಿತೆಗಳಲ್ಲಿ ಪ್ರಶ್ನೆಯನ್ನು ಉಳಿಸುತ್ತದೆ. ಇದು ಉಮಾ ಅವರ ಎಲ್ಲ ಸೂಕ್ಷ್ಮ ಓದುಗರ ಗಮನಕ್ಕೂ ಬರುವಂಥದೇ ಆಗಿದೆ.

ಅರಿವಿಗೆ, ಅಭಿವ್ಯಕ್ತಿಗೆ ಸಂಬಂಧಿಸಿದಂತೆ ತಮ್ಮ ಕಾವ್ಯಶಿಲ್ಪವನ್ನು ಬದಲಿಸುವ ಬಗ್ಗೆ ಮತ್ತು ಅದರ ಪರಿಣಾಮದ ಬಗ್ಗೆ ಉಮಾ ಅವರಿಗೆ ತೀವ್ರ ಕಾಳಜಿಯಿಲ್ಲ. ಅವರು ಆ ನಂತರ ಮುಂತಾದ ಕವಿತೆಗಳಲ್ಲಿ ನವೋದಯದ ಮಾದರಿಯ ಕಟ್ಟಡವನ್ನು ಕಟ್ಟುತ್ತಾರೆ. ಕಾಫಿ ಗೀಫಿ ಕವಿತೆಯೂ ಈ ಬಗೆಯದೇ. ಮದುವೆಗಿನ್ನೂ ತಿಂಗಳು ಕಾಯಬೇಕು/ ಭೇಟಿ ಮಾಡಲು ನಮಗೆ ನೆಪ ಬೇಕು ಎಂಬ ಸಾಲಿನಲ್ಲಿ ಆ ವಿವಾಹಪೂರ್ವದ ಮೈಬೆಚ್ಚಗಾಗಿಸುವ ಅನುಭವ ಇಂದಿಗೂ ಮುಂದುವರಿದಿರುವ ಸಂತೋಷದ ವಿವರಣೆಯಿದೆ. ಅರೆಕೊರೆಯ ನಡುವೆಯೇ ಅರಳಿದ ಸುಖೀದಾಂಪತ್ಯವೆಂಬುದು ಇವರ ಸ್ವಂತ ಬದುಕಿನಿಂದ ರೂಪುಗೊಳ್ಳುವ ಕವಿತೆಗಳ ಅವಿಭಾಜ್ಯ ಬಂಧವಾಗಿದೆ. ಆದರದು ಇಬ್ಬರೂ ತಾವೊಂದಾಗಿ, ತಾವು ತಾವೇ ಆಗಿ ಇರುವ ಬಗೆ: ಅದೇ ನಾನು ಅದೇ ಅವನು/ಅನುದಿನದ ಸಾಂಗತ್ಯ /ಬೇರೆ ಬೇರೆ ಬೇರೆ.

ಒಂದು ಭಿನ್ನ ಅನುಭವ ಕೊಡುವ ಕವಿತೆ ‘ಅವನು- ನಾನು’. ಇದೊಂದು ಪಾಪಪ್ರಜ್ಞೆಯಿಂದ ಕಾಡುವ ವ್ಯಕ್ತಿಯೊಬ್ಬನ ಮನಸ್ಸು. ರಸ್ತೆಯಲ್ಲೊಬ್ಬ ವ್ಯಕ್ತಿ ಬಿದ್ದಿದ್ದಾನೆ. ಅವನ ಬಗ್ಗೆ ತುಸು ಚಿಂತಿಸಿದರೂ ಕವಿತೆಯ ನಾಯಕ ತನ್ನ ಪಾಡಿಗೆ ತಾನು ಅಲ್ಲಿಂದ ಹೊರಟುಬಿಡುತ್ತಾನೆ. ಆದರೆ ಅವನನ್ನು ಪಾಪಪ್ರಜ್ಞೆ ಕಾಡತೊಡಗುತ್ತದೆ.(ಪುಲ್ಲಿಂಗ ಬಳಕೆ ಉದ್ದೇಶಪೂರ್ವಕ)

ಥಟ್ಟನೆ ತಿರುಗಿ ನಿಂತಲ್ಲಿಗೆ ಧಡಧಡನೆ ಬಂದು ನೋಡುತ್ತೇನೆ
ಟ್ರಾಫಿಕ್ ಜಾಮು! ಮಾಸಿದ ಬಟ್ಟೆಯ ಯಾವನೋ ಪೋರ
ಬಿದ್ದವನ ಚೀಲ ಪಕ್ಕಕ್ಕಿಟ್ಟು ಮತ್ತವನ ಕಾಲನ್ನು ಇತ್ತ ಕಡೆಗಿಟ್ಟು
ರೈಟ್ ಎಂದು ಲಾರಿ ಏರಿ ಹೊರಟು ಬಿಡುತ್ತಾನೆ

ಇಲ್ಲಿಗೇ ಕವನ ಮುಗಿದಿದೆ. ಆದರೆ ಆಕೆಯಲ್ಲಿ ಅದು ಬೆಳೆಯುತ್ತಿದೆ: ವಾಹನಗಳು ನಿರಾಳ ಚಲಿಸುತ್ತಿವೆ/ಆದರೆ ನಾನು? ಕೊನೆಯ ಭಾಗವಿಲ್ಲದೆಯೂ ಕವಿತೆ ಉಳಿಯುತ್ತಿತ್ತು. ಆದರೆ ಆ ನಿರ್ಲಿಪ್ತತೆ ಇನ್ನೂ ಕವಿಗೆ ಸಾಧ್ಯವಾಗಿಲ್ಲ.

ವಿಶಿಷ್ಟ ಅನುಭವ ಕೊಡುವ ಕವಿತೆ ರೀಫಿಲ್, ಮತ್ತು ಮಹಿಳೆಯೊಬ್ಬಳ ಅತಂತ್ರವನ್ನು ಸುಂದರವಾಗಿ ಮುಡಿಯಬಾರದ ಪಾರಿಜಾತದ ಮಾಲೆಯ ಪ್ರತಿಮೆಯ ಮೂಲಕ ನಿರೂಪಿಸಿದ ಪಾರಿಜಾತ ಕವಿತೆಯೂ ಹೀಗೇ ಚಿತ್ರಕಾವ್ಯಗಳು.

ಸಾಮಾನ್ಯವಾಗಿ ಚಲಿಸುವ ಸಾಲುಗಳು ಕೊನೆಗೆ ಪಡೆದುಕೊಳ್ಳುವ ತಿರುವಿನಿಂದಾಗಿ ಇಡೀ ಕವಿತೆಯನ್ನು ಹೊಸ ಬೆಳಕಲ್ಲಿ ನಿಲ್ಲಿಸುತ್ತವೆ. ಶೀರ್ಷಿಕೆಯ ಕವಿತೆಯಲ್ಲಿ ‘ನಾಪತ್ತೆಯಾದ ಕಡೇ ನಾಲ್ಕು ಸಾಲನ್ನು ಬರೆದುಬಿಟಿದ್ದರೆ ಕವಿತೆಯಲ್ಲಿನ ಕತೆ ಬಹುಶಃ ಪೂರ್ಣಗೊಳ್ಳುತ್ತಿರಲಿಲ್ಲ ಎನಿಸುತ್ತದೆ. ಅಪೂರ್ಣತೆಯೇ ಕವಿತೆಯ ಶಕ್ತಿ. ಅನೇಕ ಸಲ ಕವಿಗಳಿಗೆ ಓದುಗರ ಗ್ರಹಿಕೆಯ ಶಕ್ತಿಯ ಬಗ್ಗೆ ಅನುಮಾನ. ಈ ಅನುಮಾನವೇ ಅನೇಕ ಸಲ ಕವಿತೆಯನ್ನು ವಾಚ್ಯದತ್ತ ತಳ್ಳಿಬಿಡುತ್ತದೆ. ಸೊಪ್ಪು ಮಾರುವವಳು, ಅಡುಗೆ ಮನೆ ಜಗತ್ತು, ಕಳೆದು ಹೋದ ಗೆಳತಿ, ದಾರಿ, ಪಾದ ಕಾರಣ, ಪುಟ್ಟಕ್ಕನ ಓಲೆ, ವಾಸನೆ, ಹಿತ್ತಲು? ಈ ಕವಿತೆಗಳ ಜಗತ್ತು ನಮಗೆ ಬಹಳ ಪರಿಚಿತವಾದುದು. ಆದುದರಿದಲೇ ಬಹಳ ಅಪ್ಯಾಯಮಾನ ಎನಿಸುತ್ತವೆ. ಹೀಗೆ ಪರಿಚಿತವಾದುದರ ಮೂಲಕವೇ ಅಪರಿಚಿತವಾದುದರತ್ತ ಕೊಂಡೊಯ್ಯುವ ‘ಕಡೇ ನಾಲ್ಕು ಸಾಲು’ಗಳಿಗೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಆಳ ಹರಹುಗಳು ಸಿದ್ಧಿಸಲಿ ಎಂದಿದ್ದಾರೆ ಗಿರಿಜಾ ಶಾಸ್ತ್ರಿ. (ಅವರ ಪತ್ರದ ಸಂಗ್ರಹ)

ಒಟ್ಟಾರೆ ಕಡೇ ನಾಲ್ಕು ಸಾಲು ಸಂಕಲನದ ಮೂಲಕ ಉಮಾ ಮತಾಡುತ್ತಿರುವುದು ಏನು? ನನಗೆ ತೋರುವಂತೆ ಬದುಕಿನ ಬಗ್ಗೆ, ಪರಸ್ಪರ ಅರಿವಿನ ಬಗ್ಗೆ, ಮಾನವನಾಗಿ ಸಹ ಮಾನವರ ಬಗ್ಗೆ ಇರುವ ನಮ್ಮ ಕರ್ತವ್ಯದ ಬಗ್ಗೆ, ತನ್ನದೆ ಬದುಕಿನ ಸಣ್ಣ ಸಣ್ಣ ಸಂಗತಿಗಳ ಬಗ್ಗೆ…. ಹೀಗೆ ಪಟ್ಟಿ ಮಾಡಬಹುದು. ಆದರೆ ನನ್ನ ಉತ್ಸಾಹವಿರುವುದು ಒಳ್ಳೆಯ ಕವಿತೆ ಬರೆಯಬೇಕೆಂಬ ಅವರ ಆಸ್ಥೆಯಲ್ಲಿ. ಇದಕ್ಕೆ ಕಾರಣವೂ ಇದೆ. ಉಮಾ ಅವರ ಕಾವ್ಯಲೋಕ ವಿಸ್ತಾರವಾದುದಲ್ಲ. ಅದು ಕಂಡ ಲೋಕ ಮತ್ತು ಅನುಭವ ಲೋಕಗಳ ನಡುವೆ ಸಂಚರಿಸುತ್ತದೆ. ಸಂಚಾರ ಪ್ರಾಮಾಣಿಕವಾಗಿದೆ. ಅದರಲ್ಲಿ ಪ್ರಣಾಳಿಕೆಗಳಿಲ್ಲ, ಸೋಗಿಲ್ಲ. ಆದ್ದರಿಂದ ಅವನ್ನು ಓದುವುದು ಸಂತೋಷಕರವಾಗಿದೆ. ಎಚ್ಚೆಸ್ಸಾರ್ ಹೇಳುತ್ತಾರೆ: ‘ನಿಜಕ್ಕೂ ನಾನು ಮಾವಿನ ಮರದಲ್ಲಿ ಬಾಳೆಯ ಹಣ್ಣುಗಳನ್ನು ಕೇಳುತ್ತಿಲ್ಲ. ಬದಲಾಗಿ ಇವರು ತಮ್ಮ ಕವಿತೆಯ ಪರಿಧಿಯನ್ನು ಹಿಗ್ಗಿಸಿಕೊಳ್ಳುವ ಬಗೆಗಳನ್ನು ಕುರಿತು ಗಟ್ಟಿಯಾಗಿ ಆಲೋಚನೆ ಮಾಡುತ್ತಿದ್ದೇನೆ. ಕೇವಲ ಎರಡು-ಮೂರು ವರ್ಷಗಳ ಹಿಂದೆ ಒಂದು ಕವಿತೆಯನ್ನೂ ಬರೆಯದ ಉಮಾ ಈಗ ಇಷ್ಟೊಂದು ಇಷ್ಟು ಚೆಂದದ ಕವಿತೆಗಳನ್ನು ಬರೆದಿದ್ದಾರೆ. ಇನ್ನೆರಡು ವರ್ಷಗಳ ನಂತರ ಇನ್ನಷ್ಟು ಹರಹಿನ ಇನ್ನಷ್ಟು ಆಯಾಮಗಳ ಕವಿತೆಗಳನ್ನು ಅವರು ಬರೆಯುವರೆಂಬ ನಂಬಿಕೆ ನನಗಿದೆ. ಕೊನೆಗೂ ಕವಿತೆಯ ವೀಣೆಗೆ ಹಲವು ತಂತಿಗಳಿವೆ. ನನ್ನ ಪ್ರೀತಿಯ ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಕೊನೆಕೊನೆಯ ಕವಿತೆಗಳನ್ನು ನೆನಪಿಗೆ ತರುವಂತೆ ಬರೆಯುವ ಕವಿ, ಇವರು ಇನ್ನೂ ಅನೇಕ ಅದೃಶ್ಯಲೋಕದ, ಅನೂಹ್ಯರೂಪದ, ಅನಂತಕಾಲದ ಕವಿತೆಗಳನ್ನು ಕಂಡುಕೊಳ್ಳಲಿ ಎನ್ನುವುದು ನನ್ನ ಹಂಬಲ, ಹಾರೈಕೆ. ಎಂದು. ಸಹಕವಿಯಾಗಿ ನನ್ನ ಅಭೀಪ್ಸೆಯೂ ಅದೇ ಆಗಿದೆ.

ನೀನು ಬರೆಯುವವಳು, ಸಂಶಯವೇ ಬೇಡ. ದಾರಿ ಕಂಡಾಯಿತು. ಇನ್ನು ಸವೆಸುವುದೊಂದೇ. ನಿನಗೇ ನಿನ್ನದೇ ಒಂದು ಮನಸ್ಸಿದೆ, ಹೊರಗೆ ಸುಮ್ಮನೆ ನೋಡುತ್ತ ಕೇಳುತ್ತ ಇದ್ದಂತೆಯೇ ಆಂತರ್ಯದಲ್ಲಿ ಗ್ರಹಿಸುತ್ತ ಬೆಳೆಯುವ ಕವಿಯೊಬ್ಬಳು ನಿನ್ನಲ್ಲಿದ್ದಾಳೆ. ಮರೆಯದಿರು” ಎಂಬ ವೈದೇಹಿಯವರ ಮಾತನ್ನೇ ನಾನೂ ಹೇಳುತ್ತ ಉಮಾ ಮುಕುಂದ ಅವರಿಗೆ ಶುಭ ಹಾರೈಸುತ್ತೇನೆ.