ಕೆನೆಯಾಗಿರುವವಳ ಕಾಣುತ್ತಾ..

ಈಕೆ
ಕೆನೆ ಪದರವಾಗಿ ಹರವಿಕೊಂಡು
ಹಾಲನ್ನು ಆವರಿಸಿ ಮುಚ್ಚಿಬಿಟ್ಟಿದ್ದೇನೆನ್ನುತ್ತಿರುವ ಮುಗ್ಧೆ.
ಬರೀ ಕೆನೆ ಎಂದು ಕಾಣಲಾರದ ಕಣ್ಣಿಗೆ
ಹಾಲಿನ ಸಾರವೇ ತಾನಾಗಿ ತೇಲುತ್ತಿದ್ದೇನೆ
ಎನ್ನುವುದನೂ ತಿಳಿಯದ
ಹಾಲು ಮನಸ್ಸು.

ಈ ಹಾಲಿಗೊಂದು ಕನವರಿಕೆ ಇದೆ.
ಮೊದಲು ಕಾವು
ಕಾವಾಗಿ ತಿಳಿಯದೆ ಬೇಗ ಆರುತ್ತಿದ್ದಾಗ
ಕೆನೆಯಾಗಿ ಈಸು ಬಿದ್ದು ತೇಲುತ್ತಿದ್ದ ಕಾಲ ಮುಗಿದು
ಲೋಕಾರೂಢಿಯ ನಂಟಿಗೆ
ಹೆಪ್ಪಾಗಿ ಮೊಸರಾದವಳು ಈಕೆ.
ನಂತರ ಮಂಥನ.
ಯಾರು ದೇವರಾದರೊ ರಕ್ಕಸರಾದರೊ..
ಮುಂದಕ್ಕೆ
ಅಮೃತ ಉಕ್ಕಲಾರದು ಎನುವ ಖಾತರಿಯಲ್ಲೇ
ಹಾಲಾಹಲವೂ ಬೇಡ ಎಂದಿರಬೇಕು ಇವಳು.

ಮೊಸರಾಗಿ ಕದಡಿಹೋದ
ಮನಸ್ಸನ್ನ ತನ್ನ ಧೀಶಕ್ತಿಯಿಂದ
ಹಿಮ್ಮುಖದ ಪ್ರಕ್ರಿಯೆಗೆ ಒಗ್ಗಿಸಿ
ಮತ್ತೆ ಹಾಲಾದವಳು.
ಹಿಂದಿನ ಮಥನದ ನೆನಪನ್ನು
ಕೆನೆಯ ಹೊದಿಕೆಯಡಿ
ಅಡಗಿಸಿಡುತಿರುವವಳು.

ಒಳಗೆ ಮಥನದ ಅಲೆಗಳು ನಿಂತಿಲ್ಲ.
ಹೊರಗೆ ಈಕೆ
ಸಕಲೆಂಟು ಕೆಲಸಗಳಲಿ
ಮುಳುಗಿ ಒದ್ದೆಯಾದರೂ
ಮೇಲಷ್ಟೇ ತೇವ
ಒಳಗೆ ಕಾವು.

ಕಾವನ್ನು ನಗುವಿನಲ್ಲಿ
ಅಡಗಿಸಲು ಎಣಿಸುತ್ತಾಳೆ
ಕಣ್ಣಿನಲಿ ಹೊಳಪು ಕಾಣಿಸಲು
ತುಡಿಯುತ್ತಾಳೆ..
ಏನಾದರೊಂದು ಕೃತಿ ರೂಪಕ್ಕೆ ತರುವಾಗ ಮಾತ್ರ
ಇವಳ ಮನಸಿನ ಸಾರ
ಕೆನೆಯಾಗಿ ತೇಲುತ್ತದೆ.

ಅದು ಪದವಾಗುತ್ತದೆ, ಸಾಲಾಗುತ್ತದೆ
ಒಂದು ಚಿತ್ರವಾಗುತ್ತ ಪ್ರಶ್ನೆಯಾಗುತ್ತದೆ.
ಪ್ರಶ್ನೆಗಳು ತಂತಾನೇ ಜೋಡಿಸಿಕೊಂಡು
ಕಲ್ಲುಗಳಾಗಿ ಕೋಟೆಯಾಗುತ್ತವೆ.
ಕೋಟೆಯೊಳಗೆ ಆಡಳಿತ
ನಡೆಸುತ್ತೇನೆನ್ನುವಾಗ ಮಾತ್ರ
ಮನಸಿನ ಪ್ರತಿರೂಪ ಮತ್ತೆ
ಕೆನೆಯ ರೂಪದಲಿ ಕಾಣುತ್ತದೆ.

ಹಾಲು
ಬೆಳ್ಳಗೆ ಬೆಳಕು ಹಾಯಿಸಿದಂತೆ ಮಾತಾಡಿ
ತಾನು ಮೊಸರಾಗಿ ಕದಡಿದ ಕಥೆ
ಹೇಳುವವರೆಗೂ
ತೇಲುತ್ತಿರುವುದು ಕೆನೆ ಮಾತ್ರ
ಅಂತ ನಟಿಸುತ್ತ ನಗುತ್ತ
ಇರಬೇಕು ನಾನು..
ಇದು ಸೋಜಿಗ ಹಾಗೇ ಒಂದು ಆಟ…