ಏನಿದು ‘ಬಿಗ್ ಥಿಂಗ್ಸ್’ ಎಂದು ಮೊದಲ ಬಾರಿ ಕೇಳಿದಾಗ ನನ್ನ ಆಸ್ಟ್ರೇಲಿಯನ್ ಸ್ನೇಹಿತೆಯ ಗಂಡ ಬಲು ಸೊಗಸಾಗಿ ವಿವರಿಸಿದ್ದರು. ಒಂದೂರಿನ ಜನರು ಸೇರಿ ತಮಗೆ ಆಪ್ತವೆನಿಸಿದ ಹಣ್ಣು, ಆಹಾರ, ಪ್ರಾಣಿ, ಪಕ್ಷಿ, ಮರ ಇತ್ಯಾದಿಗಳಲ್ಲಿ ಒಂದನ್ನು ಆರಿಸಿಕೊಂಡು ಅದನ್ನು ದೊಡ್ಡ ಗಾತ್ರದ ಶಿಲ್ಪ ಕೃತಿಯಾಗೋ, ಲೋಹ ಕಲಾ ಕೃತಿಯಾಗಿಯೋ ನಿರ್ಮಿಸಿ ಹೆಮ್ಮೆಯಿಂದ ಆ ಪ್ರತಿಮೆಯನ್ನು ತಮ್ಮೂರಲ್ಲಿ ಸ್ಥಾಪಿಸುವುದು. ಕ್ರಮೇಣ ಅದಕ್ಕೆ ಪ್ರಚಾರ ಕೊಟ್ಟು ಅದನ್ನು ದೇಶದ ‘ಬಿಗ್ ಥಿಂಗ್ಸ್’ ಪಟ್ಟಿಗೆ ಸೇರುವಂತೆ ಮಾಡುವುದು. ಇದರಿಂದ ಆ ಊರಿಗೆ ಅದೇನೋ ವಿಶೇಷ ಗುರುತು ಸಿಕ್ಕಿದಂತಾಗುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

ಹೋದ ವಾರ ಕೆಲಸದ ನಿಮಿತ್ತ ರಾಣಿರಾಜ್ಯದ ಉತ್ತರ ದಿಕ್ಕಿನಲ್ಲಿ ಪಯಣಿಸಿದ್ದೆ. ಕ್ವೀನ್ಸ್‌ಲ್ಯಾಂಡ್ ರಾಜ್ಯದ ರಾಜಧಾನಿ ಬ್ರಿಸ್ಬೇನ್ ನಗರದಿಂದ ಸುಮಾರು ಮುನ್ನೂರು ಕಿಲೋಮೀಟರು ದೂರವಷ್ಟೇ ಇರುವ ಹೆರ್ವಿ ಬೇ ಎನ್ನುವ ಸಮುದ್ರತೀರದ ಪಟ್ಟಣವದು. ಅಲ್ಲಿ ಹಲವಾರು ಆಕರ್ಷಣೆಗಳಿದ್ದು, ಈಗಂತೂ ಪ್ರವಾಸಿಗರ ಸ್ವರ್ಗವಾಗಿದೆ. ಅಲ್ಲಿಗೆ ಹೋಗುವ ಜನರನ್ನು ಸೆಳೆಯುವುದು ಸಮೀಪದ ಫ್ರೇಸರ್ ಐಲ್ಯಾಂಡ್. ಸಮುದ್ರತೀರದಲ್ಲಿ ನಿಂತರೆ ನಮ್ಮ ಕಣ್ಣ ಅಳತೆಗೆ ಸಿಗುವ, ಪೂರ್ವದಿಕ್ಕಿನಲ್ಲಿ ಮೈಚಾಚಿರುವ ಫ್ರೇಸರ್ ಐಲ್ಯಾಂಡ್ ಜಗತ್ಪ್ರಸಿದ್ಧಿ ಪಡೆದಿದೆ. ಪ್ರತಿಯೊಬ್ಬ ಬ್ರಿಟಿಷ್ ಪ್ರವಾಸಿಗರ ‘ನೋಡಲೇಬೇಕಾದ ಸ್ಥಳ’ಗಳ ಪಟ್ಟಿಯಲ್ಲಿ ಇರುವ ಫ್ರೇಸರ್ ಐಲ್ಯಾಂಡ್ ಬಗ್ಗೆ ಮತ್ತೊಮ್ಮೆ ಬರೆಯುತ್ತೀನಿ. ನಾನು ಮತ್ತು ಸಹೋದ್ಯೋಗಿಯೊಬ್ಬರು ವಾಪಸ್ ಬ್ರಿಸ್ಬೇನಿಗೆ ಬರುವ ಹಾದಿಯಲ್ಲಿ ಕಾರಿಗೆ ಪೆಟ್ರೋಲ್ ತುಂಬಲು ಹಾಗೂ ಒಂದಷ್ಟು ಕಾಲಾಡಿಸುವ ಉದ್ದೇಶದಿಂದ ಸಹೋದ್ಯೋಗಿ ಸೂಚಿಸಿದ ಒಂದೆಡೆಗೆ ಬಂದೆವು. ಆಕೆಯ ಮುಖದಲ್ಲಿ ಅದೇನೋ ಸಂಭ್ರಮ. ಪ್ರಯಾಣಿಕರ ಅಲ್ಪಕಾಲದ ತಂಗುದಾಣವಷ್ಟೇ ಎಂದು ಸುಮ್ಮನಿದ್ದ ನನಗೆ ಆಕೆಯ ಸಂಭ್ರಮದ ವಾಸನೆ ಸಿಕ್ಕಿತು. ವಿಚಾರಿಸಿದಾಗ ಅವರು, ‘ಇಲ್ಲಿಯೇ ಬಿಗ್ ಮಟಿಲ್ಡಾ ಇದ್ದಾಳೆ, ನೋಡೋಣ ನಡೆಯಿರಿ,’ ಎಂದಾಗ ನಾನು ತಬ್ಬಿಬ್ಬಾದೆ.

ಆಸ್ಟ್ರೇಲಿಯಾದಲ್ಲಿ ರೋಡ್ ಟ್ರಿಪ್ ಎಂದು ನಾವು ಹೊರಟರೆ ಅದು ಸಾವಿರಾರು ಕಿಲೋಮೀಟರ್ ಪಯಣವಾಗುತ್ತದೆ. ಹೇಳಿಕೇಳಿ, ಇದೊಂದು ಖಂಡ-ದೇಶವಲ್ಲವೇ! ಹಾಗೆ ನೋಡಿದರೆ ನಮ್ಮ ರೋಡ್ ಟ್ರಿಪ್ ಪ್ರಯಾಣಕ್ಕೆ ದೇಶದ ಪೂರ್ವತೀರದ ಉದ್ದಗಲಗಳು, ಹೆದ್ದಾರಿಗಳು, ಪಟ್ಟಣ/ನಗರಗಳು ಮತ್ತು ಪ್ರವಾಸಿ ಸ್ಥಳಗಳು ಬಹಳ ಸೂಕ್ತ ಮತ್ತು ಸುಲಭವಾಗಿ ಕೈಗೆಟುಕುತ್ತವೆ. ಅಡಿಲೇಡ್ ಅಥವಾ ಮೆಲ್ಬೋರ್ನ್ ನಗರಗಳಿಂದ ಹೊರಟುಬಿಟ್ಟರೆ ಮುಂದಿನ ಎರಡು-ಮೂರು ಸಾವಿರ ಕಿಲೋಮೀಟರು ದೂರದ ಪಯಣವನ್ನು ಸುಲಲಿತವಾಗಿ ಮಾಡುತ್ತಾ ಉತ್ತರದ Cairns ಅಥವಾ ಡಾರ್ವಿನ್ ನಗರಗಳನ್ನು ಎರಡು/ಮೂರು ದಿನಗಳಲ್ಲಿಯೇ ತಲುಪಬಹುದು. ನಾನು ಹೇಳುತ್ತಿರುವುದು ಕಾರಿನ ಪ್ರಯಾಣ.

ಆಸ್ಟ್ರೇಲಿಯಾದಲ್ಲಿ ನನಗೆ ಈ ರೀತಿಯ ಹಲವಾರು ಸಣ್ಣಪ್ರಮಾಣದ ರೋಡ್ ಟ್ರಿಪ್‌ಗಳನ್ನು ಮಾಡುವ ಅವಕಾಶಗಳು ಸಿಕ್ಕಿರುವುದು ಒಂದು ರೀತಿಯಲ್ಲಿ ನನ್ನ ಭಾಗ್ಯವೇ ಹೌದು. ನಾನು ಮಾಡಿರುವ ದೊಡ್ಡ ರೋಡ್ ಟ್ರಿಪ್ ಎಂದರೆ ಕುಟುಂಬಸಮೇತ ಮೆಲ್ಬೋರ್ನ್ ನಗರದಿಂದ ಬ್ರಿಸ್ಬೇನಿಗೆ ಸುಮಾರು ಎರಡೂವರೆ ಸಾವಿರ ಕಿಲೋಮೀಟರ್ ದೂರದ ಪಯಣ. ಆಗಿನ ದಿನಗಳಲ್ಲಿ ನಾವು ನಮ್ಮ ಕಿರಿಮಗನ ಆರೋಗ್ಯದ ಕಾರಣವಾಗಿ ಮೆಲ್ಬೋರ್ನ್ ನಗರವನ್ನು ತ್ಯಜಿಸಿ ವೈದ್ಯರು ಸೂಚಿಸಿದ್ದಂತೆ ದೇಶದ ಉತ್ತರದಲ್ಲಿನ ಉಷ್ಣವಲಯಕ್ಕೆ ಬರಬೇಕಿತ್ತು. ಅವರು ಹೇಳಿದಂತೆ ಅವನು ವಿಮಾನ ಪ್ರಯಾಣ ಮಾಡುವಂತಿರಲಿಲ್ಲ. ಇದರ ಹಿನ್ನೆಲೆಯೇನೆಂದರೆ ಅದಕ್ಕೂ ಮೊದಲು ನಾವು ಮೂರು ವರ್ಷ ವಯಸ್ಸಿನ ಹಿರಿಮಗ ಮತ್ತು ಮೂರು ತಿಂಗಳ ಕಿರಿಮಗುವಿನ ಜೊತೆ ಭಾರತಕ್ಕೆ ಬಂದು ಅಲ್ಲಿಯೇ ನೆಲೆಸುವ ಉದ್ದೇಶದಿಂದ ವಾಸವಾಗಿ ಕೆಲ ತಿಂಗಳುಗಳನ್ನು ಕಳೆಯುವಷ್ಟರಲ್ಲಿ ಮಗುವಿನ ಆರೋಗ್ಯ ಕೆಡುತ್ತಾ ಬಂದು ಬಿಗಡಾಯಿಸಿತ್ತು. ಬೆಂಗಳೂರಿನ ಮಕ್ಕಳ ತಜ್ಞರ ಸಲಹೆಯ ಪ್ರಕಾರ ನಾವು ವಾಪಸ್ ಆಸ್ಟ್ರೇಲಿಯಾಕ್ಕೆ ಮರಳಿದರೂ ಮೊದಲೇ ಅನಾರೋಗ್ಯ ಪೀಡಿತನಾಗಿದ್ದ ಮಗುವಿಗೆ ಮೆಲ್ಬೋರ್ನ್ ನಗರದ ವಾತಾವರಣ ಸರಿಹೊಂದದೆ ನ್ಯುಮೋನಿಯಾ ರೋಗಕ್ಕೆ ತುತ್ತಾಗಿ ಅವನ ಪ್ರಾಣ ಉಳಿದಿದ್ದೇ ದೊಡ್ಡ ವಿಷಯವಾಗಿತ್ತು. ಮುಂದೆ ಬ್ರಿಸ್ಬೇನಿನಲ್ಲಿ ನೆಲೆಸಿದರೂ ಅವನು ಚೇತರಿಸಿಕೊಳ್ಳಲು ವರ್ಷಗಳೇ ಹಿಡಿದಿದ್ದವು.

ಇರಲಿ, ಮತ್ತೆ ಆಸ್ಟ್ರೇಲಿಯಾದ ‘ಬಿಗ್ ಥಿಂಗ್ಸ್’ ವಿಷಯಕ್ಕೆ ಬರುತ್ತೀನಿ. ಮೆಲ್ಬೋರ್ನ್ ನಗರದಿಂದ ಬ್ರಿಸ್ಬೇನ್ನಿಗೆ ಬರುವ ಪಯಣದಲ್ಲಿ ಸಿಗುವ Coffs Harbour ಊರಿನಲ್ಲಿ ಬಿಗ್ ಬನಾನಾ ಪ್ರತಿಮೆಯನ್ನು ನೋಡಿ ಅವನು ನಕ್ಕಿದ್ದ. ಆಗ ಎರಡನೇ ಬಾರಿ ನ್ಯುಮೋನಿಯಾಕ್ಕೆ ಸಿಲುಕಿ ಬಾಧೆ ಪಡುತ್ತಿದ್ದ ಅವನು ನಕ್ಕಿದ್ದನ್ನು ನೋಡಿ ನಾನು ಅತ್ತಿದ್ದೆ.

ಆಸ್ಟ್ರೇಲಿಯಾದಲ್ಲಿ ರೋಡ್ ಟ್ರಿಪ್ ಮಾಡುವವರಿಗೆ ಒಂದಲ್ಲಾ ಒಂದು ಕಡೆ ಯಾವುದಾದರೂ ‘ಬಿಗ್ ಥಿಂಗ್’ ಕಂಡೇಕಾಣುತ್ತದೆ. ಅಥವಾ ನಾವು ಹಾದುಹೋಗುವ ಊರುಗಳಲ್ಲಿನ ಜನರು ಅದರ ಬಗ್ಗೆ ಹೇಳಿಯೇ ಹೇಳುತ್ತಾರೆ. ಯಾಕೆಂದರೆ ‘ಬಿಗ್ ಥಿಂಗ್ಸ್’ ಆಕರ್ಷಣೆ ಬಲು ದೊಡ್ಡದು. ಬಿಗ್ ಥಿಂಗ್ಸ್ ಎನ್ನುವುದು ಸರ್ವೇಸಾಧಾರಣ ಆಡುಭಾಷೆ ಅನ್ನಿಸಬಹುದು. ಆದರೆ ಆಧುನಿಕ ಆಸ್ಟ್ರೇಲಿಯಾದಲ್ಲಿ ಆಡುಭಾಷೆಯ ಬಳಕೆಗೇ ಹೆಚ್ಚು ಪ್ರಾಶಸ್ತ್ಯವಿದೆ. ಸ್ವಲ್ಪ ಹೈ ಲೆವೆಲ್ ಪದಗಳನ್ನು ಉಪಯೋಗಿಸಿದರೆ ಜನರು ಮೂಗೆಳೆಯುತ್ತಾರೆ.

ಏನಿದು ‘ಬಿಗ್ ಥಿಂಗ್ಸ್’ ಎಂದು ಮೊದಲ ಬಾರಿ ಕೇಳಿದಾಗ ನನ್ನ ಆಸ್ಟ್ರೇಲಿಯನ್ ಸ್ನೇಹಿತೆಯ ಗಂಡ ಬಲು ಸೊಗಸಾಗಿ ವಿವರಿಸಿದ್ದರು. ಒಂದೂರಿನ ಜನರು ಸೇರಿ ತಮಗೆ ಆಪ್ತವೆನಿಸಿದ ಹಣ್ಣು, ಆಹಾರ, ಪ್ರಾಣಿ, ಪಕ್ಷಿ, ಮರ ಇತ್ಯಾದಿಗಳಲ್ಲಿ ಒಂದನ್ನು ಆರಿಸಿಕೊಂಡು ಅದನ್ನು ದೊಡ್ಡ ಗಾತ್ರದ ಶಿಲ್ಪ ಕೃತಿಯಾಗೋ, ಲೋಹ ಕಲಾ ಕೃತಿಯಾಗಿಯೋ ನಿರ್ಮಿಸಿ ಹೆಮ್ಮೆಯಿಂದ ಆ ಪ್ರತಿಮೆಯನ್ನು ತಮ್ಮೂರಲ್ಲಿ ಸ್ಥಾಪಿಸುವುದು. ಕ್ರಮೇಣ ಅದಕ್ಕೆ ಪ್ರಚಾರ ಕೊಟ್ಟು ಅದನ್ನು ದೇಶದ ‘ಬಿಗ್ ಥಿಂಗ್ಸ್’ ಪಟ್ಟಿಗೆ ಸೇರುವಂತೆ ಮಾಡುವುದು. ಇದರಿಂದ ಆ ಊರಿಗೆ ಅದೇನೋ ವಿಶೇಷ ಗುರುತು ಸಿಕ್ಕಿದಂತಾಗುತ್ತದೆ. ಆಸ್ಟ್ರೇಲಿಯಾಕ್ಕೆ ಬರುವ ಪ್ರವಾಸಿಗರಿಗೆ ಇದೊಂದು ದೊಡ್ಡ ಆಕರ್ಷಣೆಯಾಗಿ ಬಿಡುತ್ತದೆ. ಒಂದರ್ಥದಲ್ಲಿ ಹೇಳುವುದಾದರೆ ನಮ್ಮ ಭಾರತದಲ್ಲಿ ಹಲವೆಡೆ ದೊಡ್ಡ ಗಾತ್ರದಲ್ಲಿ ದೇವರುಗಳ, ಧಾರ್ಮಿಕ ಗುರುಗಳ, ರಾಜಕೀಯ ನಾಯಕರ ಪ್ರತಿಮೆಗಳಿಲ್ಲವೇ ಹಾಗೆ. ವ್ಯತ್ಯಾಸವೆಂದರೆ ಆಸ್ಟ್ರೇಲಿಯಾದ ‘ಬಿಗ್ ಥಿಂಗ್ಸ್’ ಗಳಲ್ಲಿ ಇರುವುದು ಅನಾನಸ್ ಹಣ್ಣು, ಬಾಳೆಹಣ್ಣು, ಆಪಲ್ ಹಣ್ಣು, ಸೀಗಡಿ, ಕಾಂಗರೂ, ಗಮ್ ಬೂಟ್, ಕೇನ್ ಟೋಡ್, ಗೂಳಿ, ಕ್ಯಾಸ್ಸೋವರಿ, ಗಲಾ ಹಕ್ಕಿ, ಮೊಸಳೆ, ಆಮೆ, ಪೆಂಗ್ವಿನ್, ಸ್ಟ್ರಾಬೆರಿ ಹಣ್ಣು ಇತ್ಯಾದಿ. ದೊಡ್ಡ ಆಲೂಗಡ್ಡೆ ಕೂಡ ಇದೆ! ಇವುಗಳಲ್ಲಿ ಕೆಲವನ್ನು ನಾನು ನೋಡಿದ್ದೀನಿ ಎನ್ನುವ ಗರಿಮೆ ನನ್ನದು!

(ಬಿಗ್ ಮಟಿಲ್ಡಾ)

ಮೊದಲ ವರ್ಷಗಳಲ್ಲಿ ಈ ಪಟ್ಟಿಯ ಕೆಲವನ್ನು ನೋಡುತ್ತಿದ್ದಾಗ ಇವುಗಳಲ್ಲಿ ಅದೇನು ಆಕರ್ಷಣೆಯಿದೆ ಎಂದೆನಿಸಿದ್ದಂತೂ ನಿಜ. ಆದರೆ ಕಾಲಕ್ರಮೇಣ ಇಂತಹುದ್ದೊಂದು ಪ್ರತಿಮೆಯೇ ಪರವೂರಿನ ಜನರನ್ನು ಸೆಳೆದು ಕರೆತರುತ್ತದೆ ಮತ್ತು ತಮ್ಮೂರಿನ ಪ್ರತಿಮೆಯ ಬಗ್ಗೆ ಜನರು ಅದೆಷ್ಟು ಕಾಳಜಿ ವಹಿಸಿ ಹೆಮ್ಮೆ ಪಡುತ್ತಾರೆ, ಅದರಲ್ಲೇ ಇರುವುದು ಅದರ ವಿಶೇಷ, ಎಂದೆನಿಸಿತ್ತು. ಈಗೀಗ ಸ್ಥಳೀಯ ಅಬೊರಿಜಿನಲ್ ಸಮುದಾಯಗಳು ಈ ಬಿಗ್ ಥಿಂಗ್ಸ್‌ಗಳ ಜೊತೆಗೆ ಆಯಾ ನೆಲದ ವೈಶಿಷ್ಟ್ಯಗಳನ್ನು ಕುರಿತು ಪ್ರಚಾರ ಮಾಡಬೇಕು ಎನ್ನುತ್ತಿದ್ದಾರೆ. ಉದಾಹರಣೆಗೆ, ರಾಣಿರಾಜ್ಯದ ವಿಶೇಷವಾದ ಬನ್ಯಾ ಮರ (bunya tree) ಮತ್ತು ಅದರ ಹಣ್ಣು/ಬೀಜಗಳು ಹೇಗೆ ಅನೇಕ ಸಾವಿರ ವರ್ಷಗಳಿಂದ ಅಬೊರಿಜಿನಲ್ ಜನರ ಆಹಾರವಾಗಿದೆ ಎನ್ನುವುದು. ಈ ಬನ್ಯಾ ಮರವು ಅಗಾಧ ಗಾತ್ರದಲ್ಲಿ ಬೆಳೆಯುವುದು ಬಲು ವಿಶೇಷ. ಹಿಂದೊಮ್ಮೆ ಎಲ್ಲೆಲ್ಲೂ ಕಾಣುತ್ತಿದ್ದ ಈ ಮರವು ಈಗ ಅಪರೂಪವಾಗಿರುವುದು ದುರ್ದೈವದ ಸಂಗತಿ.

ಈ ಮೊದಲೇ ಹೇಳಿದಂತೆ ಹೋದ ವಾರ ನಾನು ನೋಡಿದ್ದು Big Matilda – ದೊಡ್ಡದೊಂದು ಹೆಣ್ಣು ಕಾಂಗರೂವಿನ ಪ್ರತಿಮೆ. ಅವಳು ಬಲು ಮುದ್ದಾಗಿದ್ದಳು! ಅವಳ ಕಣ್ಣುಗಳ ಉದ್ದ ರೆಪ್ಪೆಗಳಂತೂ ಮನ ಸೆಳೆದು ನಗು ಉಕ್ಕಿಸಿತ್ತು. ನನಗಂತೂ ಬಿಗ್ ಮಟಿಲ್ಡಾ ತಕ್ಷಣಕ್ಕೇ ಇಷ್ಟವಾದಳು. ನಾವು ಫೋಟೋಗಳನ್ನು ತೆಗೆದುಕೊಳ್ಳುವಾಗ ಮಧ್ಯಾಹ್ನದ ಕಡು ಬಿಸಿಲು ಆದರೆ ನಿರ್ಮಲ ನೀಲಾಕಾಶ. ಅವಳನ್ನು ನೋಡಿದ ಸಂದರ್ಭಕ್ಕೆ ಇನ್ನಷ್ಟು ವಿಶೇಷ ಕಳೆ ಕಟ್ಟಿದ್ದು ಜೊತೆಗಿದ್ದ ನನ್ನ ಸಹೋದ್ಯೋಗಿ ಹೇಳಿದ ಕಥೆಗಳು. ಅವರ ಬಾಯಿಂದಲೇ, ಅನುಭವದಿಂದಲೇ ಕೇಳಿದ ಕಥೆಗಳಿಗೆ ಜೀವ ಬಂದಿತ್ತು. ಬರೋಬ್ಬರಿ ಹದಿಮೂರು ಮೀಟರ್ ಉದ್ದದ Big Matilda ಲೋಹ ಪ್ರತಿಮೆ ರೂಪದಲ್ಲಿ ತಯಾರಾಗಿದ್ದು ೧೯೮೨ರಲ್ಲಿ ನಡೆದ ಬ್ರಿಸ್ಬೇನ್ ಕಾಮನ್ವೆಲ್ತ್ ಗೇಮ್ಸ್ ಚಿಹ್ನೆಯೆಂದು. ಆಗ ಅವಳ ತೂಕ ಆರು ಟನ್! ಅವಳನ್ನು ದೊಡ್ಡ ಟ್ರಕ್ ಮೇಲೆ ಕೂರಿಸಿ ನಿಧಾನವಾಗಿ ಕ್ರೀಡಾಂಗಣಕ್ಕೆ ಕರೆತಂದಾಗ ಅವಳು ತನ್ನ ತಲೆಯನ್ನು ತಿರುಗಿಸುತ್ತಾ, ದೊಡ್ಡ ಕಂಗಳ ರೆಪ್ಪೆಗಳನ್ನು ಮಿಟುಕಿಸುತ್ತ ನಡೆದಳಂತೆ. ಜೊತೆಗೆ ಆಗಾಗ ತನ್ನ ಕಿವಿಗಳನ್ನೂ ಬಡಿಯುತ್ತಿದ್ದಳಂತೆ. ಅವಳ ಅಂದಚಂದಗಳನ್ನು ನೋಡುತ್ತಾ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತಂತೆ. ಆಗ ಇನ್ನೂ ಪುಟ್ಟ ಬಾಲಕಿಯಾಗಿದ್ದ ನನ್ನ ಸಹೋದ್ಯೋಗಿ ಟೀವಿ ಪರದೆಯ ಮೇಲೆ ಮಟಿಲ್ಡಾಳನ್ನು ನೋಡಿ ಚಪ್ಪಾಳೆ ತಟ್ಟಿ ಕುಣಿದಾಡಿದ್ದರಂತೆ. ಕಾರಣ – ಹೆಣ್ಣು ಕಾಂಗರೂ ಮಟಿಲ್ಡಾಳ ಹೊಟ್ಟೆ ಭಾಗದಲ್ಲಿ ಒಂದು ಬಾಗಿಲಿತ್ತು. ಹೊಟ್ಟೆಯೊಳಗೆ ಪುಟ್ಟ ಶಾಲಾ ಮಕ್ಕಳಿದ್ದು ಅವರು ಕೂಡ ಕಾಂಗರೂ ಪೋಷಾಕನ್ನು ಧರಿಸಿದ್ದರಂತೆ. ಮಟಿಲ್ಡಾ ಕ್ರೀಡಾಂಗಣದ ಮಧ್ಯಕ್ಕೆ ಬಂದಾಗ ಕಾಂಗರೂ ಮಕ್ಕಳು ಹೊಟ್ಟೆಯಿಂದ ಪಟಪಟನೆ ಹೊರಬಂದು ಕಾಂಗರೂ ನಡೆಯಂತೆ ಪುಟಪುಟನೆ ಸಂಗೀತಕ್ಕನುಗುಣವಾಗಿ ಚೆಂಗಾಡಿದರಂತೆ. ನನ್ನ ಸಹೋದ್ಯೋಗಿ ಆ ಕ್ಷಣದ ಅವರ ಆನಂದವನ್ನು ನನಗೆ ವಿವರಿಸುತ್ತಿದ್ದಾಗ ಅವರ ಮುಖ ಅದನ್ನು ಯಥಾವತ್ತಾಗಿ ಪ್ರತಿಫಲಿಸಿತ್ತು.

ನಂತರದ ವರ್ಷಗಳಲ್ಲಿ ಬಿಗ್ ಮಟಿಲ್ಡಾ ಪ್ರತಿಮೆಯನ್ನು ರೂಪಾಂತರಗೊಳಿಸಲಾಯ್ತು. ಮೊದಲಿಗೆ ಅವಳು ಹೆಸರಾಂತ ಪ್ರವಾಸಿ ಪ್ರದೇಶವಾದ ಗೋಲ್ಡ್ ಕೋಸ್ಟ್‌ನ ಒಂದು ವಾಟರ್ ಪಾರ್ಕ್‌ನಲ್ಲಿ ಸ್ಥಾಪನೆಗೊಂಡು ನಂತರ ರಾಣಿರಾಜ್ಯದ ಮತ್ತೊಂದೆಡೆಗೆ ಸ್ಥಳಾಂತರವಾಗಿ ಮಂಕಾಗಿದ್ದಳಂತೆ. ಇದೇಕೋ ಸರಿಯಿಲ್ಲವೆನಿಸಿ ಅವಳನ್ನು ಮತ್ತೆ ಸುಂದರವಾಗಿಸಿ, ಕಾಂಕ್ರೀಟ್ ಪ್ರತಿಮೆಯನ್ನಾಗಿಸಿ ಈಗಿರುವ Traveston ಎಂಬ ಊರಿನಲ್ಲಿ ಹಾದುಹೋಗುವ ಹೆದ್ದಾರಿಯ ಪಕ್ಕದ ಪೆಟ್ರೋಲ್ ಸ್ಟೇಷನ್‌ಗೆ ಹೊಂದಿಕೊಂಡಿರುವ ಪಾರ್ಕಿನಲ್ಲಿ ಸ್ಥಾಪಿಸಿದ್ದಾರೆ. ಕಾಂಕ್ರೀಟ್ ಪ್ರತಿಮೆಯಾದರೇನು, ಆಕೆಯ ಮುಖದ ನಗು ಜೀವಂತವಾಗಿದೆ. ನನ್ನ ಸಹೋದ್ಯೋಗಿ ಮತ್ತೊಂದು ವಿಶೇಷವನ್ನು ಹಂಚಿಕೊಂಡರು. ಈಕೆ ಒಬ್ಬ ಹಿಸ್ಟೊರಿಯನ್ – ಇತಿಹಾಸ ತಜ್ಞೆ. ಇನ್ನೇನು ಮುಗಿಯಲು ಬಂದಿರುವ ಅವರ ಪಿ ಎಚ್ ಡಿ ಅಧ್ಯಯನ/ಪ್ರಬಂಧದ ವಿಷಯ ಆಸ್ಟ್ರೇಲಿಯಾದ ಆಧುನಿಕ ಕ್ರೀಡೆಗಳ ಇತಿಹಾಸದ ಬಗ್ಗೆ. ತಮ್ಮ ಎರಡು ಪ್ರಯತ್ನಗಳ ನಂತರ ಈಕೆ ಸತತ ಮೂರನೇ ಪ್ರಯತ್ನದಲ್ಲಿ ಆಸ್ಟ್ರೇಲಿಯನ್ ನ್ಯಾಷನಲ್ ಹಿಸ್ಟರಿ ಮ್ಯೂಸಿಯಮ್ ಕೊಡುವ ಒಂದು ಸ್ಕಾಲರ್ ಶಿಪ್ ಸ್ಕೀಮಿನಲ್ಲಿ ವಿಜೇತರಾಗಿದ್ದಾರೆ. ಈ ವರ್ಷ ಅವರು ಆರು ವಾರಗಳ ಕಾಲ ದೇಶದ ರಾಜಧಾನಿ ಕ್ಯಾನ್ಬೆರ್ರಾದಲ್ಲಿ ಇದ್ದುಕೊಂಡು ಆಸ್ಟ್ರೇಲಿಯಾದಲ್ಲಿ ಇದುವರೆಗೂ ನಡೆಸಿರುವ ಎಲ್ಲಾ ಕಾಮನ್ವೆಲ್ತ್ ಕ್ರೀಡೆಗಳ ಚಿಹ್ನೆಗಳ (mascot) ಕುರಿತು ಕೂಲಂಕುಶವಾದ ಅಧ್ಯಯನ ಮಾಡಲಿದ್ದಾರೆ. ಈ ಮಹತ್ವದ ಸ್ಕಾಲರ್ ಶಿಪ್ ಪಡೆಯಲು ಸಲ್ಲಿಸಿದ್ದ ತಮ್ಮ ಅರ್ಜಿಯಲ್ಲಿ ಆಕೆ Big Matilda ಚಿಹ್ನೆಯ ಬಗ್ಗೆ ವಿಶೇಷ ಪ್ರಸ್ತಾಪ ಮಾಡಿದ್ದರಂತೆ.

ಸಹೋದ್ಯೋಗಿಯ ಸಾಧನೆಯನ್ನು ಕೇಳುತ್ತಾ ಎದುರಿಗೆ ಸುಂದರವಾದ ಮುಗುಳ್ನಗೆ ಚೆಲ್ಲುತ್ತಾ ನಿಂತಿದ್ದ ಅವರ ಕಥೆಯೊಳಗೆ ಕಥೆಯಾದ ಮಟಿಲ್ಡಾ ಕಾಂಗರೂವನ್ನು ನೋಡುತ್ತಿದ್ದಾಗ, ನಾನೂ ಕೂಡ ಅವಳ ಕಥೆಯಲ್ಲೊಂದು ಭಾಗವಾಗಿದ್ದಕ್ಕೆ ಖುಷಿಯಾಯ್ತು.